ಅಡುಗೆಮನೆಯಿಂದ ತರಕಾರಿ ಸಿಪ್ಪೆ ಅದೂ ಇದು ಎಸೆಯಲು ಚಿಕ್ಕ ಗುಂಡಿಯನ್ನು ಅಜ್ಜಿ ಮಾಡಿದ್ದಳು. ಆದರೆ ಮನದ ಕಸವನ್ನು ತಾನೇ ಹೊತ್ತು ತಿರುಗುತ್ತಿದ್ದಳು. ಹಿತ್ತಿಲ ನಡುವೆ ಅರಳುತ್ತಿದ್ದ ಗಂಟೆಹೂವಿನ ಗಿಡದತ್ತವೇ ಅಜ್ಜಿ ಹೆಚ್ಚು ಹೊತ್ತು ಕಳೆದಿದ್ದು. ಅದಾಗಲೇ ಅವಳಿಗೆ ಮರೆವು ಆವರಿಸಿತ್ತು, ಪಾರ್ಶ್ವವಾಯು ಪೀಡಿತಳಾಗಿ ಸ್ವಾದೀನ ಕಳೆದುಕೊಂಡಿದ್ದ ಬಲಗೈ ಬಳೆಕಳಚಿಕೊಂಡು, ಫಳಫಳನೆ ಹೊಳೆಯುತ್ತಿದ್ದ ಓಲೆಗಳನ್ನು ಕಳಚಿದ ಕಿವಿಗಳು ದೊಡ್ಡ ತೂತಿನೊಂದಿಗೆ ಬಿಕೋ ಅನ್ನಿಸುತ್ತಿದ್ದವು. ಎಡಗೈಯಲ್ಲಿ ಮಾಡಿಗೆ ಕಟ್ಟಿಇಳಿ ಬಿಟ್ಟ ಹಗ್ಗವನಿಡಿದು ಜಗ್ಗುತ್ತಿದ್ದ ಯಾವತ್ತೂ ಕನ್ನಡಕವನ್ನೇ ತೆಗೆದಿರದ ಆ ಮುಖ ನನ್ನಜ್ಜಿಯದಲ್ಲ. ಅವಳೇಕೆ ಹೀಗಾಗಲು ಸಾಧ್ಯ? ಎನ್ನುವ ಪ್ರಶ್ನೆ ಬಹಳವಾಗಿ ಕಾಡಿದ್ದಿದೆ.
ಸುಮಾವೀಣಾ ಬರೆಯುವ “ನುಡಿನಲಿವು” ಅಂಕಣದಲ್ಲಿ ಹೊಸ ಬರಹ
ಮನೆಗಿಂತಲೂ ಹಿತ್ತಿಲಿಗೆ ಪ್ರಾಶಸ್ತ್ಯ ಕೊಡುತ್ತಿದ್ದವರು ನಮ್ಮ ಪೂರ್ವಿಕರು. ಪೂಜೆಗೆ ಬೇಕಾಗುವ ಹೂಗಳಿಂದ ಹಿಡಿದು ಅಡುಗೆಗೆ ತರಕಾರಿ, ಒಗ್ಗರಣೆಗೆ ಕರಿಬೇವು, ಔಷಧಿಗೆ ಕಹಿಬೇವಿನವರೆಗೆ ಹಿತ್ತಿಲಲ್ಲಿ ಇರುತ್ತಿದ್ದವು. ನನ್ನಜ್ಜಿ ಮನೆ ಹಿತ್ತಿಲಂತೂ ನನಗೆ ಸಿಂಗಾರಗೊಂಡ ಉದ್ಯಾನವೂ ಉಪವನವೂ ಆಗಿತ್ತು. ಹಿತ್ತಿಲಿನ ಆ ಘಮವೇ ವಿಶೇಷ ಅನುಭೂತಿ ತರಿಸುತ್ತಿತ್ತು. ಅಜ್ಜಿಯ ಹಿತ್ತಿಲಿನ ಸುತ್ತ ತಂತಿಬೇಲಿ ಇರಲಿಲ್ಲ. ಎಡಭಾಗಕ್ಕೆ ಮಣ್ಣಿನಗೋಡೆ ಬಲಭಾಗಕ್ಕೆ ಪಕ್ಕದ ಮನೆ ಕಾಂಪೌಂಡ್’ ಪೂರ್ವಕ್ಕೆ ಮುಂಬಾಗಿಲು ಪಶ್ಚಿಮಕ್ಕೆ ಬೇರೆಯವರ ಹಿತ್ತಲ ಬೇಲಿ. ಅಜ್ಜಿಮನೆಯ ಹಿತ್ತಿಲೆಂದು ಮತ್ತೆ ಮತ್ತೆ ಬರೆದರೆ ಬಹುಶಃ ತಪ್ಪಾಗುತ್ತದೆಯೇನೋ? ಉದ್ಯಾನವೂ ಉಪವನವೂ ಆಗಿತ್ತು ಎನ್ನಬೇಕು!
ಯಾವಾಗಲಾದರೊಮ್ಮೆ ಬರುತ್ತಿದ್ದ ಮಂಗ ಮರವೇರಿ ಸರ್ರನೆ ಇಳಿದು ಮುಂದಿನ ಹಿತ್ತಲಿನೆಡೆ ಹೋಗುವಾಗ ಏನಾದರೂ ಹಿಡಿದೇ ಹೋಗುತ್ತಿತ್ತು. ಅಳಿಲಂತೂ ಸರಸರ ಇಳಿ- ಹತ್ತು ಕಾಯಕದಲ್ಲಿದ್ದರೆ ಗೋಧಿನಾಗರ ಆಗಾಗ ದರ್ಶನವಿತ್ತು ಹೋದರೆ ಕೆಲವೊಮ್ಮೆ ಬುಸುಗುಟ್ಟಿ ಪಕ್ಕದ ಹಿತ್ತಿಲಿಗೆ ಹೋಗುತ್ತಿತ್ತು. ಬಾವಲಿಗಳು ಹಿತ್ತಲಿನ ಕೊನೆಯ ಮರದಕೊನೆಯಲ್ಲಿ ನೇತಾಡುತ್ತಿದ್ದವು, ಕಾಗೆ ಗುಬ್ಬಚ್ಚಿಗಳಿಗೆ ಲೆಕ್ಕವಿಲ್ಲ ಬಿಡಿ. ಗಿಳಿ- ಪಾರಿವಾಳವೂ ಹಾಜರಿ ಹಾಕಿ ಹೋಗುತ್ತಿದ್ದವು, ನಿತ್ಯವೂ ಅಜ್ಜಿಯ ಕೈರುಚಿ ತಿಂದು ಅಭ್ಯಾಸವಾಗಿದ್ದ ಬೀದಿನಾಯಿಗಳು ಕುಯ್ಗುಡುತ್ತಿದ್ದವು. ಮೂರ್ನಾಲ್ಕು ಬೆಕ್ಕುಗಳು ವಾರಾನ್ನದವರಂತೆ ಇದ್ದು ಹೋಗುತ್ತಿದ್ದವು. ಹಿತ್ತಿಲಿನ ವಾಸಕ್ಕೆ ಎರೆಹುಳು, ಬಸವನಹುಳು. ಝರಿ, ಕಪ್ಪೆ, ಹೆಗ್ಗಣ, ಚೇಳು, ಓತಿಕ್ಯಾತ, ಕಂಬಲಿಹುಳುಗಳು, ಚಿಟ್ಟೆಗಳು, ಜೀರುಂಡೆಗಳು ನಲಿದು ಒಲಿದು ಬರುತ್ತಿದ್ದವೇನೋ ಅನ್ನುವಷ್ಟಟರಮಟ್ಟಿಗೆ ಅವುಗಳ ಉಪಸ್ಥಿತಿ ಯಾವಾಗಲೂ ಇರುತ್ತಿತ್ತು.
ಹಿತ್ತಿಲ ಬಳಿ ಸುಳಿದರಂತೂ ಒಮ್ಮೆಲೆ ಎಲ್ಲಾ ತರಕಾರಿ ಹಣ್ಣು ಹೂಗಳ ಪರಿಮಳ ಬರುತ್ತಿತ್ತು. ಅದದೆ ಗಿಡಗಳ ಬಳಿ ಹೋದಾಗ ಅದದರದೇ ಪರಿಮಳ ನಿಜ!
ಹಿತ್ತಿಲಲ್ಲಿ ಮೊದಲು ಚಕ್ಕೋತ ಮರ, ನಿಂಬೆ ಗಿಡ. ಎಳೆ ಹೀಚಿನ ನಿಂಬೆ ಎಲೆಯ ಪರಿಮಳ ಹಿತವಾಗುತ್ತಿತ್ತು. ಅದನ್ನು ಹಿಂದಕ್ಕೆ ಬಿಟ್ಟರೆ, ಮರ್ಲೆ, ಮಲ್ಲಿಗೆ, ಕಾಕಡ ಹೂವಿನ ಗಿಡಗಳು. ಕಾಕಡವಂತೂ ಎಷ್ಟೋ ವರ್ಷದ್ದು ದೊಡ್ಡ ಚೆಂಡಿನ ಆಕಾರದಲ್ಲಿ ಕುಳ್ಳಗೆ ಕುಪ್ಪಳಿಸಿದೆಯೇನೋ ಅನ್ನಿಸುತ್ತಿತ್ತು. ಹೂ ಕೊಯ್ಯಲು ಬಗ್ಗಿದರೆ ಆ ಗಿಡದ ಮೇಲೆಯೇ ಅರ್ಧ ಶರೀರ ಬೀಳುತ್ತಿತ್ತು. “ಅದರ ಮೇಲೆ ಮಲಗಿ ಮುರಿದು ಹಾಕಿ! ನಿಮಗೇನು ಅಗಬೇಕು? ಎನ್ನುತ್ತಾ ಶುರುಮಾಡುವ ನಮ್ಮ ರ್ಯಾಂಬೋ ಅಜ್ಜಿಯ ಮಾತುಗಳನ್ನು ಕೇಳಿ ಗಾಬರಿಯಾಗಿ ಅಲ್ಲಿಯೇ ನಿಂಬೆ ಗಿಡಕ್ಕೆ ಒರಗಿ ಮುಳ್ಳುಗಳಿಂದ ಚುಚ್ಚಿಸಿಕೊಂಡು ನಂದಿಬಟ್ಟಲು ಗಿಡ ಹಿಡಿದು ಆಯತಪ್ಪಿ ಮುರಿದು ಹಾಗೆ ಕಾಣದಂತೆ ಅದರ ಕೊಂಬೆಯನ್ನು ಒರಗಿಸುತ್ತಿದ್ದ ನೆನಪು ಇನ್ನೂ ಈಗ ಚುಚ್ಚಿದ ಮುಳ್ಳಿಂದ ಒಸರುವ ರಕ್ತದಂತೆ ಫ್ರೆಶ್ ಆಗಿದೆ. ಕಾಕಡ ಗಿಡದ ಪಕ್ಕ ಹಳೆಕಾಲದ ನೀರಿನ ತೊಟ್ಟಿ ದಿನವು ತೊಳೆದು ಶುದ್ಧ ನೀರನ್ನು ತುಂಬಿಸಿದರೂ ಅಡಿ ಒಡೆದ ಕುಂಭದಂತೆ ನೀರೆಲ್ಲಾ ಸೋರುತ್ತಿತ್ತು. ಸೋರುವಿಕೆ ನಿಲ್ಲಲು ಹಾಕಿದ್ದ ಟಾರು….. ಬಳಿದ ಸಿಮೆಂಟ್ ತಿಳಿ ಮಾತ್ರ ಪದರು ಪದರಾಗಿ ಕಾಣಿಸುತ್ತಿತ್ತು.
ತೊಟ್ಟಿಯ ಎಡಭಾಗಕ್ಕೆ ಎರಡು ಚಪ್ಪಡಿ ಕಲ್ಲು ಅದರ ಸುತ್ತಲೂ ಮೈಸೂರು ಕೊತ್ತಂಬರಿ ಸೊಪ್ಪಿನ ಗಿಡ ಯಾವಾಗಲೂ ಹಚ್ಚಹಸಿರಾಗಿ ಇರುತ್ತಿತ್ತು. ಮುಂದೆ ಪಾತ್ರೆ ಬಟ್ಟೆ ತೊಳೆದ ನೀರು ಹೋಗಲು ಇರುವ ಕಿಂಡಿ ಅಲ್ಲಿಯೇ ತೊಂಡೆಬಳ್ಳಿ ಅದಕ್ಕೆ ಕನೆಕ್ಟ್ ಆಗುವ ಬಚ್ಚಲನೀರು ಹೋಗುವ ಪೈಪು…. ಹಿತ್ತಲ ಬಾಗಿಲ ಎದಿರು ಸುಂದರ ತುಳಸಿಕಟ್ಟೆ. ಮಣ್ಣಿನಸಾರಣೆ, ಸುಣ್ಣ ಬಳಿದು, ಸೆಗಣಿ ಸಾರಿಸಿ ರಂಗೋಲಿ ಹಾಕಿ ಅದಕ್ಕೆ ಇಟ್ಟ ಕಾಕಡಹೂ ಗಾಳಿಗೆ ತುಸು ಮುಂದೆ ಹೋಗಿ… ಹೋಗಿ ನಂತರ ಬಲುದೂರಕ್ಕೆ ಹೋದಂತಿದ್ದ ಹಾಗೆ ನೆನಪುಗಳು ಈಗ ದೂರ ಸರಿದಿವೆ. ಪೊದೆಯಂತಿದ್ದ ನರ್ವೀಸ ದಾಟಿಮುಂದೆ ಹೋದರೆ ಚಿಕ್ಕ ಎಲೆಯ ಕರಿಬೇವಿನ ಮರ ಆ ಮರಕ್ಕೆ ಹೊಂದಿಕೊಂಡಂತೆ ಕಾಯಾಗಿ ಹಣ್ಣಾಗಿ ತೂಗುವ ಸೀಮೆಬದನೆಕಾಯಿಬಳ್ಳಿ, ಚಪ್ಪರದವರೆಕಾಯಿಬಳ್ಳಿ ಹಿತ್ತಲ ಮೂಲೆಯಲ್ಲಿ ಬಾಳೆ ಮರವಾಗಿ ಮತ್ತದರ ಬುಡದಲ್ಲೇ ಗಿಡವಾಗಿ ಮರವಾಗುವ ಬಯಕೆಯನ್ನು ತೋರಿಸುತ್ತಿವೆಯೇನೋ ಎಂದನಿಸುತ್ತಿತ್ತು. ಇನ್ನೊಂದು ಮೂಲೆಯಲ್ಲಿ ಉಪ್ಪಿನಕಾಯಿಗೆ ಮಾತ್ರ ಬರುತ್ತಿ ಮಾವಿನಕಾಯಿಮರ ಅಲ್ಲಲ್ಲಿ ಎತ್ತರಕ್ಕೆ ಬೆಳದ ಕಳ್ಳಿ ಅದಿಲ್ಲದೆಡೆ, ಕಾಗೆಸೊಪ್ಪು, ಕಸ್ಕ್ಯೂಟ ಬಳ್ಳಿ, ಕವಟೆಕಾಯಿ ಬೇಲಿಯನ್ನು ಅಪ್ಪಿಕೊಂಡಿದ್ದವು.

ಈಚೆ ಬದಿ ಬಂದರೆ ಕಬ್ಬು ಮತ್ತೆ ಲೆಫ್ಟ್ ಟರ್ನ್ ತೆಗೆದುಕೊಂಡರೆ ದೊಡ್ಲಿಹುಳಿ ಮರ ಪಕ್ಕದಲ್ಲಿ ದಾಳಿಂಬೆ, ಸಪೋಟ, ಪಪ್ಪಾಯಿ ಗಿಡಗಳು, ದೊಡ್ಡಪತ್ರೆ, ಪನ್ನೀರು ಪತ್ರೆ, ಮರುಗ, ಧವನ, ಕನಕಾಂಬರ ಗಿಡಗಳು ನಂತರದಲ್ಲಿ ಎತ್ತರದ ಕ್ರೋಟಾನ್ ಗಿಡಗಳ ನಡುವೆ ಸಿಗುತ್ತಿದ್ದ ಹಕ್ಕಿಗಳಿಲ್ಲದ ಹಕ್ಕಿ ಗೂಡು. ಮುಂದೆ ಹೆಣ್ಮಕ್ಕಳಲ್ಲಿ “ನನಗ್ಬೇಕು! ನನಗ್ಬೇಕು!” ಎಂದು ಕುಸ್ತಿ ಮಾಡಿಸುತ್ತಿದ್ದ ಚೆಂಗುಲಾಬಿ ಗಿಡಗಳು… ಬದನೆ, ಮೆಣಸಿನಕಾಯಿ, ನಿತ್ಯಪುಷ್ಟ, ಸಮುದ್ರ ಹಸಿರಿನ ಬಣ್ಣದ ಕನಕಾಂಬರ, ಕಾಮಕಸ್ತೂರಿ ಸೀಸನ್ ಬಂದಾಗ ಏಳುತ್ತಿದ್ದ ಬೆಟ್ಟದಾವರೆ ಗಿಡಗಳು ಮೊದಲಾದವೂ ಹಿತ್ತಿಲ್ಲ ತುಂಬೆಲ್ಲಾ ಖಾಲಿ ಇದ್ದ ಜಾಗವನ್ನು ಭರ್ತಿ ಮಾಡಿದ್ದವು. ಅಲ್ಲಲ್ಲಿ ಬಿಸಿಲು ಬೀಳುವ ಜಾಗವೆಲ್ಲ ಒಣಹಾಕಿದ ತರಕಾರಿಬೀಜಗಳಿಂದ ಅಜ್ಜಿ ಉಪವನ ತುಂಬಿಕೊಂಡಿತ್ತು. ಆದರೀಗ ಅವೆಲ್ಲಾ ನೆನಪುಗಳಷ್ಟೇ!
ಮನೆಯ ಮಾಡಿನಡಿ ರಿಪೇರಿ ಭಾಗ್ಯಕ್ಕೆ ಅಂಗಲಾಚುತ್ತಿದ್ದ ಹರಿದ ಚಪ್ಪಲ್ಗಳು, ಪೇರಿಸಿಟ್ಟ ನಾಡುಹೆಂಚುಗಳು, ತಗಡಿನ ಡಬ್ಬಗಳು, ಮುರಿದ ಪೈಪುಗಳು, ತಳಂಕಡ ಬಣ್ಣದಡಬ್ಬಿಗಳು, ಹಳೆಯವಾದರೂ ಸಾಲಾಗಿ ಜೋಡಣೆಗೊಂಡು ಮುಕ್ತಿಗಾಗಿ ಹಾತಿರೆಯುತ್ತಿವೆಯೇನೋ ಅನ್ನಿಸುತ್ತಿತ್ತು. ಗುಜರಿಯನ್ನು ಕೊಟ್ಟು ಮನೆಯನ್ನು ಶುದ್ಧ ಮಾಡಿಕೊಳ್ಳುವಂತೆ ಮನದ ಕಸವನ್ನು ಯಾರಾದರು ಕೊಂಡುಕೊಳ್ಳುವವರು ಇರಬಾರದಿತ್ತೆ? ಎನ್ನುವ ಸಾರ್ವಕಾಲಿಕ ಪ್ರಶ್ನೆ ಬಹಳವಾಗಿ ಕಾಡುತ್ತದೆ. ಕೆಲವು ವಸ್ತುಗಳನ್ನು ಗುಜರಿಯವರೂ ನಿರಾಕರಿಸುವಂತೆ ಕೆಲವು ನೋವುಗಳು ಕಾರಣವಿಲ್ಲದೆ ಪರಿಹಾರವಿಲ್ಲದೆ ಕುಟುಕುತ್ತಲೇ ಇರುತ್ತವೆ. ನಿರಾಕರಿಸಿದ, ಗುಜರಿಯಲ್ಲದ ತ್ಯಾಜ್ಯವನ್ನು ನಾವೇ ಸುಡುವಂತೆ ನಮ್ಮ ಅನಗತ್ಯ ನೋವುಗಳನ್ನು ನಾವೇ ಸುಡಬೇಕು!
ಅಡುಗೆಮನೆಯಿಂದ ತರಕಾರಿ ಸಿಪ್ಪೆ ಅದೂ ಇದು ಎಸೆಯಲು ಚಿಕ್ಕ ಗುಂಡಿಯನ್ನು ಅಜ್ಜಿ ಮಾಡಿದ್ದಳು. ಆದರೆ ಮನದ ಕಸವನ್ನು ತಾನೇ ಹೊತ್ತು ತಿರುಗುತ್ತಿದ್ದಳು. ಹಿತ್ತಿಲ ನಡುವೆ ಅರಳುತ್ತಿದ್ದ ಗಂಟೆಹೂವಿನ ಗಿಡದತ್ತವೇ ಅಜ್ಜಿ ಹೆಚ್ಚು ಹೊತ್ತು ಕಳೆದಿದ್ದು. ಅದಾಗಲೇ ಅವಳಿಗೆ ಮರೆವು ಆವರಿಸಿತ್ತು, ಪಾರ್ಶ್ವವಾಯು ಪೀಡಿತಳಾಗಿ ಸ್ವಾದೀನ ಕಳೆದುಕೊಂಡಿದ್ದ ಬಲಗೈ ಬಳೆಕಳಚಿಕೊಂಡು, ಫಳಫಳನೆ ಹೊಳೆಯುತ್ತಿದ್ದ ಓಲೆಗಳನ್ನು ಕಳಚಿದ ಕಿವಿಗಳು ದೊಡ್ಡ ತೂತಿನೊಂದಿಗೆ ಬಿಕೋ ಅನ್ನಿಸುತ್ತಿದ್ದವು. ಎಡಗೈಯಲ್ಲಿ ಮಾಡಿಗೆ ಕಟ್ಟಿಇಳಿ ಬಿಟ್ಟ ಹಗ್ಗವನಿಡಿದು ಜಗ್ಗುತ್ತಿದ್ದ ಯಾವತ್ತೂ ಕನ್ನಡಕವನ್ನೇ ತೆಗೆದಿರದ ಆ ಮುಖ ನನ್ನಜ್ಜಿಯದಲ್ಲ. ಅವಳೇಕೆ ಹೀಗಾಗಲು ಸಾಧ್ಯ? ಎನ್ನುವ ಪ್ರಶ್ನೆ ಬಹಳವಾಗಿ ಕಾಡಿದ್ದಿದೆ.

ನೆನಪುಗಳ ಒಡತಿ ಅಜ್ಜಿ ಊರಿಗೆ ಹೊರಟ ಮಕ್ಕಳು -ಮೊಮ್ಮಕ್ಕಳಿಗೆ ತನ್ನ ಉಪವನದ ಎಲ್ಲಾ ಹಣ್ಣು –ಕಾಯಿ- ಹೂಗಳನ್ನು ಸರದಿಯಂತೆ ಕೊಯ್ದು ಪ್ಯಾಕ್ ಮಾಡುತ್ತಿದ್ದಳು. ಈಗಿಲ್ಲ ಆಕೆಯ ಉದ್ಯಾನವನ, ಉಪವನ ಯಾವುದೂ……. ಎಲ್ಲಾ ಕಾಂಕ್ರೀಟ್ ಬಳಿದುಕೊಂಡು ಸ್ತಬ್ಧವಾಗಿವೆ! ನಮ್ಮ ಮನೋಪ್ರಪಂಚದಲ್ಲಿ ನೆನಪಿನ ಹೂಗಳು ಅರಳಿವೆ; ಆದರೆ ಮುಟ್ಟಲಾಗುತ್ತಿಲ್ಲ. ಮರದೆಲ್ಲಾ ಕಾಯಿಗಳು ಹಣ್ಣುಗಳಾಗಿವೆ; ಆದರೆ ಪರಿಮಳ ಅನುಭವಿಸಲಾಗುತ್ತಿಲ್ಲ.. ಏನ್ ಮಾಡೋದು? ಅಜ್ಜಿ ನೆನಪಾಗ್ತಾಳೇ! ತುಂಬಾ ಹೇಳಿಕೊಳ್ಳುವುದಿದೆ! ಕೇಳಿಸಿಕೊಳ್ತಾಳ! ಉಪವನದ ಒಡತಿ.

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

