ಸ್ಯಾಂಕಿಯ ಇನ್ನೊಂದು ಮೂಲೆಗೆ ತಲುಪುವ ಹೊತ್ತಿಗೆ ನೀರಿನಲ್ಲಿರುವ ತುಂಡು ಮರದ ಮೇಲೆ ಈ ನೀರುಕಾಗೆಗಳದು ಸನ್ ಬೇದಿಂಗ್ ನಡೆಯುತ್ತಿರುತ್ತದೆ. ಎರಡೂ ರೆಕ್ಕೆಗಳನ್ನು ಇಷ್ಟಗಲಕ್ಕೆ ಬಿಡಿಸಿಕೊಂಡು ತಿರುಗುವ ಟೇಬಲ್ ಫ್ಯಾನಿನಂತೇ ಸೂರ್ಯನ ಮುಂದೆ ಮೈಯೊಣಗಿಸಿಕೊಂಡು ನಿಂತಿರುತ್ತದೆ. ಇಲ್ಲಿರುವ ಮರಗಳ ಮೇಲಿನ ಸಂಸಾರದ ಕತೆಯೂ ವಿಶಿಷ್ಟವೇ. ಗೂಬೆಗಳ, ಮಿಂಚುಳ್ಳಿಗಳ ಸಂಸಾರ ಬೆಳೆಯುವುದನ್ನು ಕಂಡಿದ್ದೇವೆ. ಒಂದೇ ಒಂದು ಸಾರಿ ಅಚ್ಚ ಹಳದಿ ಬಣ್ಣದ ಗೋಲ್ಡನ್ ಓರಿಯಲ್ ನೋಡಿದ ಧನ್ಯತೆ ನಮ್ಮದು.
ಬೆಂಗಳೂರಿನ ಸುಪ್ರಸಿದ್ಧ ಸ್ಯಾಂಕಿ ಕೆರೆಯ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ

ನೀರಿನ ಮೂಲಗಳು, ಮನುಷ್ಯನ ದಾಹ ಇಂಗಿಸುತ್ತಲೇ ಸಂಸ್ಕೃತಿಯ ಕುರುಹೂ ಆಗಿರುವುದು ಸತ್ಯ. ನದಿ, ಕೆರೆಕೊಳ, ಬಾವಿಗಳು ನಮ್ಮ ಬದುಕಿನ ಭಾಗವಾಗುವುದು ನಾಗರಿಕತೆಯ ಆರಂಭದಿಂದಲೂ ನಡೆದಿದೆ. `ಕೆರೆಯಂ ಕಟ್ಟಿಸು ಬಾವಿಯುಂ ತೋಡಿಸು’ ಎಂದೆನ್ನುತ್ತಲೇ ಎದೆಹಾಲು ಕುಡಿಸಿ ಮಕ್ಕಳನ್ನು ಬೆಳೆಸಿದ ಪರಂಪರೆ ನಮ್ಮದು. ಬೆಂಗಳೂರು ಅಂತೂ ಕೆರೆಗಳನ್ನು ಜೀವನಾಡಿಯಾಗಿರಿಸಿಕೊಂಡ ನಗರ. ಇಂತಿಪ್ಪ ಬೆಂಗಳೂರಿನ ಹೃದಯಭಾಗದಲ್ಲಿರುವ ಸ್ಯಾಂಕಿ ಟ್ಯಾಂಕ್ ಎಂಬ ಹೆಸರುಳ್ಳ ಕೆರೆ, ಪರಂಪರೆ ಮತ್ತು ಆಧುನಿಕತೆ ಎರಡಕ್ಕೂ ಸಮಾನವಾಗಿ ತೆರೆದುಕೊಂಡಿರುವ ಜಲಮೂಲವಾಗಿದೆ.
ಸ್ಯಾಂಕಿಯೊಂದಿಗೆ  ಒಂದೂವರೆ ದಶಕಕ್ಕೂ ಹೆಚ್ಚು ಕಾಲದ ನಂಟು ನನ್ನದು. ಉತ್ತರ ಬೆಂಗಳೂರಿಗೆ ಬಂದು ನೆಲೆಯಾದ ಮೇಲೆ ನಾನು (ನಾವು) ಕಂಡುಕೊಂಡ ಅತ್ಯಂತ ಚೇತೋಹಾರಿಯಾದ ವಿಷಯವೆಂದರೆ ಸ್ಯಾಂಕಿ ಕೆರೆದಂಡೆ ಮೇಲಿನ ವಾಕಿಂಗ್. ಒಮ್ಮೊಮ್ಮೆ ನಮ್ಮ ಕೆಲವು ಹಟಗಳು ಒಳ್ಳೆಯ ಫಲಿತಾಂಶ ತರುತ್ತವೆ ಎನ್ನುವುದಕ್ಕೇ ಈ ಸ್ಯಾಂಕಿಯ ವಾಕಿಂಗ್ ನಿರ್ಧಾರವೇ ಸಾಕ್ಷಿ. ಈ ಸ್ಯಾಂಕಿ ಕೆರೆಯ ನಡುವೆ ಸುಮಾರು ವರ್ಷಗಳ ಹಿಂದೆ ಒಂದು ಸುಂದರ ನಡುಗಡ್ಡೆಯಿತ್ತು. ವಾರಾಂತ್ಯದ ಮನರಂಜನೆಗಾಗಿ ಬೋಟಿಂಗ್ ವ್ಯವಸ್ಥೆಯೂ ಇತ್ತು. ಮಗಳು ಸಣ್ಣವಳಿದ್ದಾಗ ಅವಳನ್ನು ಕರೆದುಕೊಂಡು ಹೋಗಿದ್ದ ನೆನಪಿನ್ನೂ ಹಸಿರಾಗಿದೆ.  ಆರಂಭದಲ್ಲಿ `ವಾಕಿಂಗ್ ಮಾಡಲು ಅಷ್ಟು ದೂರ ಹೋಗಬೇಕೆ? ಇಲ್ಲೇ ಯಾವುದಾದರೂ ಪಾರ್ಕಿಗೆ ಸುತ್ತು ಹೊಡಿ’ ಎಂದು ಟಿಪಿಕಲ್ ಗಂಡನ ಡೈಲಾಗ್ ಹೊಡೆದ ನನ್ನವರನ್ನು ಒತ್ತಾಯಿಸಿ `ಹೇಗೂ ಮಗಳನ್ನು ಕಾಲೇಜಿಗೆ ಡ್ರಾಪ್ ಮಾಡಲು ಹೋಗ್ತಿವಲ್ವ, ಅಲ್ಲಿಂದ ಚೂರೇ ಚೂರು ದೂರ ಮಾರ್ರೇ’ ಎಂದು ಪೂಸಿ ಹೊಡೆದು ಕರೆದುಕೊಂಡು ಹೋಗಿದ್ದು ನೆನಪಿದೆ. ತಕೊಳ್ಳಿ, ಸ್ಯಾಂಕಿಯ ಮುಕ್ತತೆ, ತಂಗಾಳಿ ಸೋಕಿತೋ ಏನೋ! ನಿತ್ಯವೂ ಪಿರಿಪಿರಿ ಮಾಡದೇ ಹೊರಡಲಾರಂಭಿಸಿದ್ದೂ ಒಂದು ಸಣ್ಣ ಕಥೆಗಾಗುವ ವಸ್ತುವೇ! ಈಗ ಇಲ್ಲಿಗೆ ಒಮ್ಮೊಮ್ಮೆ ಎರಡು ಬಾರಿ ಬರುವುದೂ ಇದೆ ಅಂದರೆ ಎಂಥ ಮೋಹ ಮೂಡಿಸಿದೆ ಈ ಸ್ಯಾಂಕಿ.
 ಹದಿನೈದು ವರ್ಷಗಳ ಹಿಂದೆ ಈ ದಂಡೆಯ ಮೇಲೆ ವಾಕಿಂಗ್ ಆರಂಭಿಸಿದಾಗ ಇದರ ಸ್ವರೂಪ ಹಳೆಯದೇ ಆದರೂ ಆಪ್ತವಾಗಿತ್ತು. ಹಳೆಯ ಬೆಂಗಳೂರಿನ ಸೌಂದರ್ಯದ ಕುರುಹು ಉಳಿಸಿಕೊಂಡ ಧೀಮಂತಿಕೆ ಇತ್ತು. ಇಂಗ್ಲೀಷಿನ `ಯೂ’ ಆಕಾರದ ದಂಡೆಯನ್ನು ಹೊಂದಿರುವ ಈ ಕೆರೆ ತ್ರಿಗುಣಾತ್ಮಕ ಹೂವಿನಂತೇ ಕಾಣೋದಿದೆ. ತ್ರಿಗುಣಾತ್ಮಕ ಬೆಳಿಗ್ಗೆ ಅಚ್ಚ ಬಿಳಿಯ ಬಣ್ಣದಲ್ಲಿ ಅರಳಿದರೆ ಮಧ್ಯಾಹ್ನಕ್ಕಾಗುವಷ್ಟರಲ್ಲಿ ನಸು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಸಂಜೆಯಾಗುವಷ್ಟರಲ್ಲಿ ಕಡು ಗುಲಾಬಿ ಬಣ್ಣ ಹೊತ್ತು ಬಾಡುವಂತೆ, ಈ ಸ್ಯಾಂಕಿ ಬೆಳ್ಬೆಳಿಗ್ಗೆ ಒಂದು ರೀತಿಯಲ್ಲಿ ನಿರ್ಮಲ, ಶುಭ್ರ ಪಾರಿಜಾತದಂತೆ ಉಲ್ಲಾಸದ ಹೂನಗೆ ಬೀರುವಂತೆ ಕಂಡರೆ, ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲು ಕಾಯಿಸಲು ವಿದೇಶಿಯರು ಗೋವಾ ಬೀಚಿನಲ್ಲಿ ಮುಕ್ತವಾಗಿ ಮರಳರಾಶಿಯ ಮೇಲೆ ಬಿದ್ದುಕೊಂಡ ರೀತಿಯಲ್ಲಿ ಮೌನವಾಗಿ ಬಿದ್ದಿರುತ್ತದೆ. ಮತ್ತೆ ಸಂಜೆಯಾಗುವ ಹೊತ್ತಿನಲ್ಲಿ ಇದರ ಮೋಹಕತೆ ಓಹ್!  ಘಮ ಬೀರುವ ದುಂಡುಮಲ್ಲಿಗೆಯಂತೆ ಮೋಹಕವಾಗಿ ಅರಳಿ ಸೆಳೆದು ಬಿಡುತ್ತದೆ.
ಇನ್ನು ಇಲ್ಲಿಯ ಸೂರ್ಯೋದಯ ಮತ್ತು ಸೂರ್ಯಾಸ್ತದ ಸೊಬಗು ಕಂಡೇ ತೀರಬೇಕು. ಆಗುಂಬೆಯೊ ಯಾವುದೋ ಬೆಟ್ಟದ ನೆತ್ತಿಗೆ ಹೋಗಬೇಕಿಲ್ಲ. ಇಲ್ಲೇ ಇದೆ ಗಂಗಾತೀರ! ಇಲ್ಲೇ ಇದೆ ಹಿಮಗಿರಿ ಪಾರ! ಇದೊಂಥರ  ಸೂರ್ಯನ ಮತ್ತು ಭೂಮಿಯ ಅಥವಾ ಸ್ಯಾಂಕಿ ನೀರಿನರಸಿಯ ಪ್ರಣಯದಂತೇ ಭಾಸವಾಗುತ್ತದೆ. ಸೂರ್ಯ ಮೂಡುವಾಗ ಸ್ಯಾಂಕಿ ನೀರಿನ ಅಲೆಗಳ ಓಲಾಟ ಕಾತರದಿಂದ ಕಾಯುವ ನಲ್ಲೆಯ ಸೌಮ್ಯ ನೋಟದಂತೇ ಕಾಣುವುದಿದೆ. ನೀರಿನ ಅಲೆಗಳು ಅಭಿಸಾರಿಕೆಯಂತೆ ಮೆಲ್ಲ ಮೆಲ್ಲನೆ ದಡದತ್ತ ಚಲಿಸುವ ಸೊಬಗನ್ನು ನಿಂತು ಸವಿಯಬೇಕು. ಚಾಮರದಿಂದ ಹಗುರವಾಗಿ ಬೀಸಿದಾಗ ಬರುವ ತಂಗಾಳಿಯಂತೆ ಇಲ್ಲಿ ಗಾಳಿಯೂ ಈ ಬೆಳಗಿನ ಸೂರ್ಯ ಮತ್ತು ಸ್ಯಾಂಕಿ ನೀರಿನರಸಿಯ ಆ ದಿನದ ಸಮಾಗಮಕ್ಕೆ ಸಾಕ್ಷಿಯಾಗುತ್ತಿರುತ್ತದೆ. ದಟ್ಟ ಬಿಸಿಲಿನ ದಿನಗಳಲ್ಲಿಯೂ ಒಂದು ಜೋರು ಮಳೆ ಬಂದ ಮರುದಿನ ಸ್ಯಾಂಕಿಯ ವಾಕಿಂಗ್ ಸ್ವರ್ಗೀಯ! ತಂಪಾದ ಗಾಳಿ ಮೈಸೋಕುವ ಆ ಕ್ಷಣಗಳಂತೂ ರೋಮಾಂಚನ ಮೂಡಿಸುತ್ತದೆ. ಎಷ್ಟೋ ಬಾರಿ ಮುಜುಗರ ಪಡದೇ ಟೈಟಾನಿಕ್ ಪೋಸಿನಲ್ಲಿ ಕೈ ಅಗಲಿಸಿಕೊಂಡು ನಿಲ್ಲಬೇಕೆನಿಸುತ್ತದೆ. ಆದರೆ ಹಿಂದಿನಿಂದ ತಬ್ಬಿಕೊಳ್ಳಲು ಆ ಸುಂದರಾಂಗ ಲಿಯೋನಾರ್ಡೊ ಡಿ ಕಾಪ್ರಿಯೋನನ್ನು ಎಲ್ಲಿಂದ ತರಲಿ!!

 ಸಂಜೆಯಂತೂ ಅದೊಂದು ವರ್ಣವೈಭವವೇ ಅಲ್ಲಿ ಕಾಣಿಸಿಕೊಳ್ಳುವುದಿದೆ. ದಿನಮಣಿ ನೀರಿನರಸಿಯನ್ನು ಬಿಟ್ಟು ಹೋಗುವ ಮೊದಲು ಒಂದು ಸುದೀರ್ಘ, ಉಸಿರು ಕಟ್ಟಿಸುವಂಥ ಅಪ್ಪುಗೆ ಮತ್ತು ಆದ್ರವಾಗಿ ಚುಂಬಿಸಿ ಹೋಗುವಂತೇ ಕೆರೆಯ ನೀರಿನಲ್ಲೆಲ್ಲ ಕೆಂಪು ಕೆಂಪು. ಆಕಾಶವೂ ಬೇರೆಯವರ ಪ್ರಣಯ ನೋಡಿ ಕೆಂಪಾದಂತೇ ಓಕುಳಿಯಾಡಿದಂತಿರುತ್ತದೆ. ಒಮ್ಮೊಮ್ಮೆ ಆಕಾಶದ ತುಂಬ ಅಚ್ಚ ಬಿಳಿ ಹತ್ತಿಯ ಅರಳೆ ಉದುರಿಸಿದಂತಿದ್ದರೆ ಇನ್ನೊಂದು ದಿನ ಅದ್ಯಾವ ಚಿತ್ರಕಾರ ಬಣ್ಣ ಎರಚಿ ಹೋದನೋ ಎನ್ನುವಂತೆ, ಆಗಸದ ತುಂಬ ನವವರ್ಣಗಳು. ನೀಲಿಯ ಹತ್ತಾರು ಭಿನ್ನ ಭಿನ್ನ ಬಣ್ಣಗಳ ಕ್ಯಾನ್ವಾಸ್ ಅದು. ನಿತ್ಯವೂ ಇಲ್ಲಿ ಸಾವಿರಾರು ಜನ ತಂತಮ್ಮ ಮೊಬೈಲುಗಳಲ್ಲಿ, ಕೆಲವರು ಡಿಎಸ್‌ಎಲ್ಲಾರ್ ಕ್ಯಾಮೆರಾಗಳಲ್ಲಿ ಆ ವರ್ಣಮಯ ಪ್ರಾಕೃತಿಕ ಕಲಾಕೃತಿಯನ್ನು ಸೆರೆ ಹಿಡಿದುಕೊಂಡು ಧನ್ಯರಾಗುವುದು ಸಾಮಾನ್ಯವಾದ ನೋಟವಾಗಿದೆ. ಈ ದೃಶ್ಯ ಇಲ್ಲಿ `ನಿಚ್ಚಂ ಪೊಸತು’.

ಪ್ರವೇಶ ದ್ವಾರದಿಂದ ಒಳಬಂದು ಎಡಕ್ಕೆ ತಿರುಗಿದರೆ ಮೊದಲು ಅಲ್ಲಿ ಮೇಲುಕೋಟೆಯ ಕಲ್ಯಾಣಿಯನ್ನು ನೆನಪಿಗೆ ತರುವಂತಹ ಸುಂದರವಾದ ಹಳೆಯ ಪಾವಟಿಗೆಗಳ ಕಲ್ಯಾಣಿಯಿತ್ತು. ಕಲ್ಯಾಣಿಯ ಮೆಟ್ಟಿಲು ತುಂಬ ಜನರೂ ಕೂತುಕೊಂಡು ವಿರಮಿಸುವುದಿತ್ತು. ಮಕ್ಕಳೂ ಆಡುವುದಿತ್ತು. ಆಟ ಆಡುವಾಗ ನೀರಿಗೆ ಕಾಲು ಜಾರಿ ಬೀಳದಂತೆ ಹೆತ್ತವರೂ ಮುತುವರ್ಜಿ ವಹಿಸುವ ನೋಟವೂ ಕಾಣ ಸಿಗುತ್ತಿತ್ತು. ಈಗ ಅದೊಂದು ನೆನಪು ಅಷ್ಟೇ. ಸ್ಯಾಂಕಿಯ ಮಡಿಲು ಆಧುನೀಕರಣಗೊಂಡಿದೆ.
ಸ್ಯಾಂಕಿಯಲ್ಲಿ ಹಕ್ಕಿ ಸಾಮ್ರಾಜ್ಯವೂ ಇದೆ. ಸುಮಾರು ಹತ್ತು ಹನ್ನೆರಡು ಪ್ರಭೇದದ ಹಕ್ಕಿಗಳು ಮತ್ತು ಚಳಿಗಾಲ, ಬೇಸಿಗೆಯಲ್ಲಿ ವಲಸೆ ಹಕ್ಕಿಗಳೂ ಕಾಣಿಸಿಕೊಳ್ಳುವುದಿದೆ. ಈ ಕಲ್ಯಾಣಿಯ ನೀರಿನಲ್ಲಿರುವ ಪುಟ್ಟ ಮೀನುಗಳನ್ನು ಗಬಕ್ಕನೇ ಹಿಡಿಯಲು ಪಾಂಡ್ ಹೆರಾನುಗಳು(ಕೊಳದ ಬಕ) ಧ್ಯಾನ ಮಾಡುತ್ತಾ ಕೂರುತ್ತವೆ. ನೀರಿನಲ್ಲಿ ಈ ಹಕ್ಕಿಗಳು ಆಹಾರಕ್ಕಾಗಿ ಧ್ಯಾನ ಮಾಡಿದ ಸೋಗು ಹಾಕಿದರೆ ದಂಡೆಯ ಮೇಲೆ ಧ್ಯಾನಸ್ಥ ಜನರನ್ನೂ ಕಾಣಬಹುದು. ಎರಡೂ ಧ್ಯಾನವೇ! ಒಂದು ಹಸಿವಿಗಾಗಿ ಇನ್ನೊಂದು ಮನದ  ಆರೋಗ್ಯಕ್ಕಾಗಿ. ಕಲ್ಯಾಣಿಯ ಮುಂದೆ ಎರಡು ಅಶ್ವತ್ಥ ವೃಕ್ಷಗಳು. ಈ ಅಶ್ವತ್ಥ ವೃಕ್ಷಗಳಿಗೆ ಉಪನಯನ ಆಗಿದೆಯೋ ಇಲ್ಲವೋ ಗೊತ್ತಿಲ್ಲ! ಆದರೆ ಅಲ್ಲಿಗೆ ಬರುವ ಸಾವಿರಾರು ವಾಕರ್ಸ್‌ಳಲ್ಲಿ ನೂರಾರು ಮಂದಿ ಅದಕ್ಕೊಂದಷ್ಟು ಪ್ರದಕ್ಷಿಣೆ ಹೊಡೆದೇ ಮುಂದಕ್ಕೋಗುವುದೂ ಸಂಪ್ರದಾಯ.
ಕಲ್ಯಾಣಿಯ ಆಚೆ ಬದಿಯಲ್ಲಿ ಬೆಳಗಿನ ಹೊತ್ತಿನಲ್ಲಿ ಯಾವುದೋ ಜೈನ ಸಭಾದವರು ರಾಶಿ ರಾಶಿ ಗೋಣಿಯಲ್ಲಿ ಧಾನ್ಯ ತಂದು ಪಾರಿವಾಳಗಳಿಗೆ ಸುರಿಯುವ ದೃಶ್ಯವೂ ಕಾಣುತ್ತದೆ. ಅದೆಲ್ಲಿರುತ್ತವೋ ಒಂದೇ ಸಾರಿಗೆ ಪಟಪಟನೆ ರೆಕ್ಕೆ ಬಡಿಯುತ್ತಾ ಪಾರಿವಾಳಗಳ ದಂಡು ಪ್ರತ್ಯಕ್ಷವಾಗುತ್ತಿತ್ತು. ಕುತ್ತಿಗೆಯನ್ನು ನದೀಂ ಧಿಂತನ ಎಂದು ತಿರುಗಿಸುತ್ತಾ ನರ್ತನ ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಮತ್ತೆ ವಾಕ್ ಮಾಡುವವರು ಹತ್ತಿರ ಹೋದಂತೇ ಒಂದೇ ಸಾರಿ ಏರೋಪ್ಲೇನ್ ಮೇಲಕ್ಕೇರುವಂತೆ ರೆಕ್ಕೆ ಬಡಿದುಕೊಂಡು ಜೊತೆಯಲ್ಲಿ ಹಾರುತ್ತಿದ್ದವು. ಸ್ಯಾಂಕಿಯ ಒಂದು ಬದಿಯಲ್ಲಿರುವ ಮರಗಳ ಮೇಲೆ ಈ ಪಾರಿವಾಳಗಳದು ಕಮ್ಯುನಿಟಿ ಲೀವಿಂಗ್. ಇನ್ನೊಂದು ಬದಿಯ ಮೂಲೆಯ ಮರಗಳ ಮೇಲೆ ಮನುಷ್ಯನ ತಿರಸ್ಕಾರ ಪಡೆದ ಬಾವಲಿಗಳು ಸಮೂಹ ಜೀವನ ನಡೆಸುತ್ತವೆ.
ಈ ಕೆರೆ ಮಾನವ ನಿರ್ಮಿತ ಸರೋವರವಂತೆ. ಸರೋವರ ಎನ್ನುವಷ್ಟು ಇದು ಶುಭ್ರವಾದ ತಿಳಿ ನೀರಿನ ಮೂಲವಲ್ಲ. ಸರೋವರ ಎಂದೊಡನೇ ಅಚ್ಛೊದ ಸರೋವರದ ವಿವರ ಪಾಠದಲ್ಲಿ ಓದಿದ ನೆನಪು ಬರುವ ಕಾರಣ ಇದು ಕೆರೆ ಅಷ್ಟೇ. 1882ರಲ್ಲಿ ಕರ್ನಲ್ ರಿಚರ್ಡ್ ಸ್ಯಾಂಕಿ ಎನ್ನುವವ‌ ಇದನ್ನು ನಿರ್ಮಿಸಿದ್ದು ಎನ್ನುವ ವಿವರಗಳೆಲ್ಲ ಧಾರಾಳವಾಗಿ ಸಿಗುತ್ತವೆ. ಇದರ ಮತ್ತೊಂದು ಮೂಲೆಯಲ್ಲಿ ಶ್ರೀಗಂಧದ ಡಿಪೋ ಇರುವ ಕಾರಣ ಇದನ್ನು ಗಂಧದಕೋಟಿಕೆರೆ ಎಂದೂ ಕರೆಯುತ್ತಿದ್ದರಂತೆ. ಆದರೆ ಇದು ಇಂದು ಸ್ಯಾಂಕಿ ಎಂದೇ ಜನಜನಿತ. ಇದು ಅಂದು ನಗರದ ನೀರಿನ ಅಗತ್ಯಕ್ಕಾಗಿ ನಿರ್ಮಿಸಿದ ಕೆರೆ.  ಈಗ ಸ್ಯಾಂಕಿಯ ನೀರು ಕುಡಿಯಲು ಯೋಗ್ಯವಾಗಿ ಉಳಿಸಿಕೊಂಡಿಲ್ಲ. ನಗರದ ನೀರಿನ ಅಗತ್ಯ ಬೇರೆ ಮೂಲಗಳಿಂದ ಪೂರೈಕೆಯಾಗುತ್ತಿರುವ ಕಾರಣ ಇದು ಈಗ ಬೆಂಗಳೂರು ನಗರದ ಸೌಂದರ್ಯದ ಕುರುಹಾಗಿ, ಉದ್ಯಾನವನದ ಭಾಗವಾಗಿ, ಒಳ್ಳೆಯ ವಾಕಿಂಗಿಗೆ ಸ್ಥಳವಾಗಿ ಮುಖ್ಯವಾಗಿ ನಗರದ ಉಸಿರು ಕಟ್ಟಿಸುವ ವಾತಾವರಣದಿಂದ ಬಿಡುಗಡೆ ಪಡೆಯಲು ಬಂದು ಕೂರುವ ನೆಮ್ಮದಿ ನೀಡುವ ತಾಣವಾಗಿದೆ.
ಈ ಕೆರೆಯ ಅಷ್ಟು ವಿಸ್ತೀರ್ಣದಲ್ಲಿ, ನೀರಿನೊಳಗಿನ, ಮರಗಿಡಗಳ ಮೇಲಿನ ಮತ್ತು ದಂಡೆಯ ಮೇಲಿನ ಹೀಗೆ ಮೂರು ಪರ್ಯಾಯ ಪ್ರಪಂಚಗಳು ಇರುವಂತಿದೆ. ನೀರಿನೊಳಗಿನ ಮೀನು, ಆಮೆಗಳ, ನೀರುಹಕ್ಕಿಗಳ ಪ್ರಪಂಚ ಮತ್ತು ಮರದ ಮೇಲಿನ ಹತ್ತಾರು ಪ್ರಭೇದದ ಹಕ್ಕಿಗಳ ಪ್ರಪಂಚ ತಮ್ಮ ಲವಲವಿಕೆಯ ಇರುವಿಕೆಯಿಂದ ದಂಡೆಯ ಮೇಲೆ ಇರುವ ಮನುಷ್ಯರ ಪ್ರಪಂಚವನ್ನು ಸಂತೈಸುವಂತೆ ಕಾಣುತ್ತದೆ. ದಂಡೆಯ ಮೇಲೆ ವಾಕ್ ಮಾಡುವಾಗ ನಮ್ಮೊಂದಿಗೆ ಸ್ಪರ್ಧೆಗೆ ಇಳಿವಂತೆ ಒಮ್ಮೊಮ್ಮೆ ನೀರುಕಾಗೆಗಳು ಜೊತೆಯಲ್ಲೇ ಬರುತ್ತವೇನೋ ಎನ್ನುವಂತೇ ನೀರಿನೊಳಕ್ಕೆ ಮುಳುಗೇಳುತ್ತಾ ಸಾಥ್ ನೀಡುವುದಿದೆ. ಅಷ್ಟು ದೂರದವರೆಗೆ ತೇಲುತ್ತಿದ್ದ ನೀರುಕಾಗೆ ಕ್ಷಣದಲ್ಲಿ ಒಮ್ಮೆ ಮುಳುಗಿ ಒಂದಷ್ಟು ದೂರದಲ್ಲಿ ನೀರಿನಿಂದೆದ್ದು `ನೋಡು ನಾನಿಲ್ಲಿದ್ದೇನೆ’ ಎಂದು ಗೇಲಿ ಮಾಡುವಂತೆ ನೋಡಿ, ತಲೆಯಲ್ಲಿ ಯಾವುದೋ ಯೋಚನೆಯಿಟ್ಟುಕೊಂಡು ನಡೆಯುವವರ ಮುಖದಲ್ಲಿ ನಗು ಮೂಡಿಸುತ್ತದೆ.

(ಫೋಟೋಗಳು: ಶಿವಸುಬ್ರಹ್ಮಣ್ಯ)

ಈ ಸ್ಯಾಂಕಿ ಬೆಳ್ಬೆಳಿಗ್ಗೆ ಒಂದು ರೀತಿಯಲ್ಲಿ ನಿರ್ಮಲ, ಶುಭ್ರ ಪಾರಿಜಾತದಂತೆ ಉಲ್ಲಾಸದ ಹೂನಗೆ ಬೀರುವಂತೆ ಕಂಡರೆ, ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲು ಕಾಯಿಸಲು ವಿದೇಶಿಯರು ಗೋವಾ ಬೀಚಿನಲ್ಲಿ ಮುಕ್ತವಾಗಿ ಮರಳರಾಶಿಯ ಮೇಲೆ ಬಿದ್ದುಕೊಂಡ ರೀತಿಯಲ್ಲಿ ಮೌನವಾಗಿ ಬಿದ್ದಿರುತ್ತದೆ. ಮತ್ತೆ ಸಂಜೆಯಾಗುವ ಹೊತ್ತಿನಲ್ಲಿ ಇದರ ಮೋಹಕತೆ ಓಹ್!  ಘಮ ಬೀರುವ ದುಂಡುಮಲ್ಲಿಗೆಯಂತೆ ಮೋಹಕವಾಗಿ ಅರಳಿ ಸೆಳೆದು ಬಿಡುತ್ತದೆ.

ಸ್ಯಾಂಕಿಯ ಇನ್ನೊಂದು ಮೂಲೆಗೆ ತಲುಪುವ ಹೊತ್ತಿಗೆ ನೀರಿನಲ್ಲಿರುವ ತುಂಡು ಮರದ ಮೇಲೆ ಈ ನೀರುಕಾಗೆಗಳದು ಸನ್ ಬೇದಿಂಗ್ ನಡೆಯುತ್ತಿರುತ್ತದೆ. ಎರಡೂ ರೆಕ್ಕೆಗಳನ್ನು ಇಷ್ಟಗಲಕ್ಕೆ ಬಿಡಿಸಿಕೊಂಡು ತಿರುಗುವ ಟೇಬಲ್ ಫ್ಯಾನಿನಂತೇ ಸೂರ್ಯನ ಮುಂದೆ ಮೈಯೊಣಗಿಸಿಕೊಂಡು ನಿಂತಿರುತ್ತದೆ. ಇಲ್ಲಿರುವ ಮರಗಳ ಮೇಲಿನ ಸಂಸಾರದ ಕತೆಯೂ ವಿಶಿಷ್ಟವೇ. ಗೂಬೆಗಳ, ಮಿಂಚುಳ್ಳಿಗಳ ಸಂಸಾರ ಬೆಳೆಯುವುದನ್ನು ಕಂಡಿದ್ದೇವೆ. ಒಂದೇ ಒಂದು ಸಾರಿ ಅಚ್ಚ ಹಳದಿ ಬಣ್ಣದ ಗೋಲ್ಡನ್ ಓರಿಯಲ್ ನೋಡಿದ ಧನ್ಯತೆ ನಮ್ಮದು. ಒಂದು ಬದಿಯಲ್ಲಿ ಬಾವಲಿಗಳದ್ದು ಸಾಮ್ರಾಜ್ಯ ಸ್ಥಾಪನೆಯಾಗಿ ಸಂಜೆಯಾಗುವ ಹೊತ್ತಿಗೆ ಸಾವಿರಾರು ಸೈನಿಕರು ಹೊರಟಂತೆ, ಆಕಾಶದ ತುಂಬ ಇವರದೇ ಸಂಚಾರ. ಹದ್ದು, ಗಿಳಿಗಳು, ಕುಟುರು ಹಕ್ಕಿಗಳ ಪುಟ್ಟ ಸಂಸಾರಗಳೂ ಇಲ್ಲಿವೆ.

ಸ್ಯಾಂಕಿಯಲ್ಲಿ ಕಾಗೆಗಳದೂ ಭಾರಿ ಕಾರುಬಾರು ನಡೆಯುತ್ತದೆ. ಕೆರೆ ಮತ್ತು ದಂಡೆಯ ನಡುವೆ ಇರುವ ಕಬ್ಬಿಣದ ಜಾಲರಿ ಇವುಗಳ ನಿಲುಗಡೆಯ ಸ್ಥಳ. ಒಮ್ಮೊಮ್ಮೆ ಸಂಸಾರ ಸಮೇತ ಅಲ್ಲಿದ್ದು ವಾಕ್ ಹೋಗುವವರನ್ನು `ಮುಟ್ಟುತ್ತೀನಿ ನೋಡು ಈಗ’ ಎಂದು ಆಗಾಗ  ಹೆದರಿಸುವಂತೇ ಹತ್ತಿರದಿಂದ ಹಾರಿ ಹೋಗುವುದೂ ಇದೆ.  ಎಷ್ಟೇ ಆಧುನಿಕತೆ, ವಿದ್ಯಾಭ್ಯಾಸವಿದ್ದರೂ ಪ್ರತಿಯೊಬ್ಬರ ಮನದೊಳಗೆ ಕಾಗೆ ಮುಟ್ಟಿದರೆ ಅದೇನೊ ಅಶುಭ ಎನ್ನುವ ಭಾವ ಬಲಿತು ಹೋಗಿದೆ. ದಂಡೆಯಲ್ಲಿ ಕಟ್ಟಿರುವ ಸಿಮೆಂಟಿನ ಗೋಡೆಯಲ್ಲಿರುವ ಪುಟ್ಟ ಪುಟ್ಟ ಹುಳಗಳನ್ನು ಹಿಡಿಯಲು ಬೆಳಗಿನ ಹೊತ್ತಿನಲ್ಲಿ ಈ ಶನಿದೇವರ ವಾಹನ ಭಾರಿ ಬಿಝಿಯಾಗಿರುತ್ತದೆ. ದಂಡೆಯ ಮೇಲೆ ಮುನುಷ್ಯರೂ ಭಾರಿ ಧಾವಂತದಲ್ಲಿ ವಾಕ್ ಮಾಡುತ್ತಿರುವಾಗ ಆಕ್ಸಿಡೆಂಟ್ ಆಗುವುದು ಸಹಜವಲ್ಲವೇ! ಹಾಗೇ ಆಯಿತು. ನನ್ನ ಪಾಡಿಗೆ ಜಯದೇವನ ಅಷ್ಟಪದಿ ಕೇಳುತ್ತಾ ವಾಕಿನಲ್ಲಿ ಮುಳುಗಿ ಹೋಗಿ `ಮಾಧವೇ……’ ಎಂದು ಕೃಷ್ಣನೇ ನನ್ನನ್ನು ಕರೆಯುತ್ತಿದ್ದಾನೆ ಎಂದುಕೊಳ್ಳುತ್ತಾ ನಡೆಯುತ್ತಿದ್ದವಳ ತಲೆಗೆ ಯಾರೋ ಮೊಟಕಿದಂತಾಯ್ತು. ಗಂಡ ಇಂಥ ಅವಿವೇಕಿಯಲ್ಲ, ಅಕಸ್ಮಾತ್ ಮಾಡಿದರೂ ವಾಪಾಸು ನಾನೂ ಮೊಟಕುವವಳೇ ಎನ್ನುವ ಅರಿವಿರುವ ಕಾರಣ ಇಂಥ ಅಪಾಯಕಾರಿ ಕೆಲಸಕ್ಕೆ ಕೈಹಾಕಲಾರರು ಎಂದು ಗೊತ್ತಿದ್ದ ಕಾರಣ ಹಿಂದೆ ತಿರುಗಿ ನೋಡಿದರೆ ಹಿಂದಿನಿಂದ ವಾಕ್ ಮಾಡಿಕೊಂಡು ಬರುತ್ತಿದ್ದ ದಂಪತಿಯೊಂದು ನನ್ನನ್ನು ನೋಡಿ `ಅಯ್ಯೊ ಪಾಪ’ ಎನ್ನುವಂತೆ ಮುಖ ಮಾಡಿ ನೋಡುತ್ತಿದ್ದರು. ಹೆಂಡತಿ ಅಂತೂ ಗಾಬರಿಯಿಂದ ಅಲ್ಲೆ ಕ್ಷಣದಲ್ಲಿ ಹಾರಿದ ಕಾಗೆಯೊಂದನ್ನು ತೋರಿ ಲೊಚಗುಟ್ಟಿದಳು. ಮನಸ್ಸಿನೊಳಗೆ ಪುಕುಪುಕು ಎಂದೆನಿಸಿದರೂ ಅದೇನೂ ದೊಡ್ಡ ವಿಷಯವಲ್ಲ ಎನ್ನುವಂತೇ ನಕ್ಕು ವಾಕ್ ಮುಂದುವರೆಸಿದೆ. ಸಂಜೆ ಹೊತ್ತಿಗೆ ಆಪ್ತರೊಬ್ಬರ ಸಾವಿನ ಸುದ್ದಿ ಸಿಕ್ಕಿದ್ದು ಕಾಕತಾಳೀಯವೇ!

ದಾನ, ಧರ್ಮ, ಭಕ್ತಿ, ಧಾರ್ಮಿಕ ಆಚರಣೆ, ಯೋಗ, ರಾಜಕೀಯ, ಮಾಟ ಮಂತ್ರ, ಪ್ರೇಮ, ಸಂಜೆ ವಾಕಿನಲ್ಲಾದರೆ ಸ್ವಲ್ಪ ರೊಮ್ಯಾನ್ಸ್ ಹೀಗೆ ಮನುಷ್ಯನ ಹಲವು ಭಾವನೆಗಳಿಗೆ ಸ್ಯಾಂಕಿ ನಿಜಕ್ಕೂ ಭೂಮಿಕೆಯಾಗಿದೆ. ಯೋಗ ಮಾಡುವವರ ಧ್ಯಾನ ಮಾಡುವವರು ಕಾಣುವಂತೇ ರಾಜಕೀಯದ ಗಾಳಿಯೂ ಬೀಸುವುದಿದೆ. ಮಾಟವೋ ಮಂತ್ರವೋ, ಆಗಾಗ ಲಿಂಬೆಹಣ್ಣು, ಕುಂಕುಮ ನಡೆಯುವ ದಂಡೆಯಲ್ಲಿ ಕಾಣುವುದುಂಟು. ಎಲ್ಲ ಧರ್ಮಕ್ಕೆ ಸಂಬಂಧಿಸಿದ ತಾಯಿತಗಳೂ ಆಯಾ ಧರ್ಮದ ಸಂಕೇತದ ಬಣ್ಣದ ಬಟ್ಟೆಯಲ್ಲಿ, ಆಯಾ ಧರ್ಮದ ಭಾಷೆಯಲ್ಲಿ ಬರೆದ ತಗಡಿನ ತುಂಡುಗಳು ಕಾಲಿಗೆ ಸಿಕ್ಕುವುದೂ ಉಂಟು. ಕಲ್ಯಾಣಿಯಲ್ಲಿ ಉತ್ತರ ಭಾರತದವರ ಛತ್ ಪೂಜೆಯನ್ನು ಸ್ಯಾಂಕಿ ನೋಡಿದ್ದರೆ ಗಣೇಶ ಹಬ್ಬ ಮುಗಿದೊಡನೇ ಈ ಕಲ್ಯಾಣಿಯ ಮಡಿಲ ತುಂಬ ನೂರೊಂದು ಗಣಪತಿಗಳು. ಗಣಪತಿ ಬಿಡುವ ನೋಟದಲ್ಲೂ ವಿಧವಿಧವಾದ ನೋಟಗಳು. ಹಿರಿಯರು ಬೇಗಬೇಗನೇ ಅವನನ್ನು ನೀರಿಗೆ ವಿಸರ್ಜನೆ ಮಾಡಿ ಜವಾಬ್ದಾರಿ ಕಳಚಿಕೊಳ್ಳುವ ಆತುರದಲ್ಲಿದ್ದರೆ ಒಂದು ಸಾರಿ ಪುಟ್ಟ ಮಗುವೊಂದು ಅತ್ತುಕೊಂಡು ಗಣಪತಿಯನ್ನು ಬಿಡಲಾರದೇ ತಬ್ಬಿಕೊಂಡ ದೃಶ್ಯ ಇನ್ನೂ ನೆನಪಿದೆ. ದೇವರ ಕಡೆಗೆ ಅದೆಷ್ಟು ಭಿನ್ನ ಭಿನ್ನ ಕಾಣ್ಕೆಗಳು.
ಈ ಸ್ಯಾಂಕಿ, ಪೂಜೆ ಅಷ್ಟೇ ನೋಡಿಲ್ಲ. ತಿಥಿಯ ಊಟವನ್ನೂ ಮಾಡುತ್ತದೆ. ಸ್ಯಾಂಕಿಯ ಒಂದು ಬದಿ ಪೂಜಿಸಿಕೊಂಡರೆ ಇನ್ನೊಂದು ಬದಿಯಲ್ಲಿ ಆಗಾಗ ಜನರು ಅನ್ನದ ಪಿಂಡ ನೀರಿಗೆ ವಿಸರ್ಜಿಸುವುದನ್ನು ಕಾಣಬಹುದು. ಜಲಚರಗಳಿಗೆ ಆಹಾರ ನೀಡುವ ಆಚರಣೆ ನಮ್ಮ ಧಾರ್ಮಿಕ ವಿಧಿಗಳಲ್ಲಿ ಇರುವುದನ್ನು ನೋಡಿದ್ದೇವೆ. ಬೆಂಗಳೂರಿನಂಥ ನಗರದಲ್ಲಿ ಇಂತಹ ನೀರಿನ ಮೂಲ ಇನ್ನೆಲ್ಲಿ ಸಿಗಲು ಸಾಧ್ಯ? ಜಲಮೂಲಗಳು, ಕೆರೆ, ನದಿಯೊಂದು ಹೇಗೆ ಮನುಷ್ಯನನ್ನು ಪಾಲಿಸುತ್ತದೆ, ಅವನ ಅಗತ್ಯಗಳಿಗೆ ಒದಗುತ್ತದೆ ಎನ್ನುವುದಕ್ಕೆ ಇದಲ್ಲವೇ ಸಾಕ್ಷಿ.
ಇಲ್ಲಿ ವಾಕಿಂಗ್ ಮಾಡುವ ಜನರ ಉಡುಪೂ ಒಂದು ಗಮನಾರ್ಹ ಅಥವಾ ಮಾತಿಗೆ ಸಿಗುವ ವಿಷಯವೇ! ಇಲ್ಲಿ ಅತ್ಯಂತ ಆಧುನಿಕ ಎನಿಸುವ ವಾಕಿಂಗ್ ಉಡುಪುಗಳಿಂದ ಹಿಡಿದು ಅಪ್ಪಟ ಭಾರತೀಯ ಎನಿಸುವ ಸೀರೆಯನ್ನು ಉಟ್ಟುಕೊಂಡು ವಾಕ್ ಮಾಡುವವರೂ ಕಣ್ಣಿಗೆ ಬೀಳುತ್ತಾರೆ. ಈ ಸ್ಯಾಂಕಿಯ ಅತ್ಯಂತ ಖುಷಿ ಕೊಡುವ ವಿಷಯ ಅಂದರೆ ಇದೇ. ಇಲ್ಲಿ ಯಾರೂ ಯಾರನ್ನೂ ಹೀಗೆ ಎಂದು ತೀರ್ಮಾನಿಸುವ ಆಸಕ್ತಿ ತೋರದವರು, ನೆಟ್ಟ ನೋಟದಿಂದ ಕೆಕ್ಕರಿಸಿ ನೋಡುವ ವ್ಯವಧಾನ ಇಲ್ಲದವರು. ಒಂದು ಮುಕ್ತ ಮನಸ್ಥಿತಿ ಇಲ್ಲಿ ನಿಜಕ್ಕೂ ಕಾಣಬಹುದು. ಬಡಾವಣೆಗಳ ಪಾರ್ಕುಗಳಲ್ಲಿ ವಾಕ್ ಮಾಡುವಾಗ ಸಿಗದೇ ಇರುವ ಮುಕ್ತತೆ ಈ ಸ್ಯಾಂಕಿ ನೀಡುತ್ತದೆ ಎಂದರೆ `ಇದು ಸುದ್ದಿಯೇ’ ತಾನೇ!. ಅತ್ಯಂತ ಆಧುನಿಕ (ಅತ್ಯಂತ ಕಡಿಮೆ ಬಟ್ಟೆ ಹಾಕಿರುವ ಕ್ಷಮಿಸಿ, ಬಟ್ಟೆ ಅವರವರ ಆಯ್ಕೆಯೇ ಆಗಿದ್ದರೂ) ಹೆಣ್ಣುಮಕ್ಕಳೆಡೆಗೆ ಸಾಮಾನ್ಯವಾಗಿ ಕಣ್ಣು ಹರಿಯುವುದು ಕಣ್ಣಿನ ತಪ್ಪಾದರೂ ಸ್ಯಾಂಕಿಯಲ್ಲಿ ಇದು ಅರಿವಿಗೆ ಬರುವುದಿಲ್ಲ. ಸ್ಯಾಂಕಿ ಎನ್ನುವುದು ಇಂಗ್ಲೀಷ್ ಹೆಸರಾದ ಕಾರಣ ಲಂಡನ್ ಗಾಳಿ ಬೀಸಿರಬಹುದೇ! ಹೀಗೂ ಒಂದು ಸಂಶಯವಿದೆ. ವಾಕಿಂಗ್‌ಗೆ ಬರುವ ಸಾವಿರಾರು ಜನರಲ್ಲಿ ಕೆಲ ಜನರು ಸೆಳೆಯುವುದುಂಟು. ಒಬ್ಬರು ಅತ್ಯಂತ ಸುಂದರವಾಗಿ ನಿತ್ಯವೂ ರೇಷ್ಮೆ ಸೀರೆಯಂಥ ಸೀರೆಯುಟ್ಟು ಮೈಕೈ ತುಂಬ ಆಭರಣ ತೊಟ್ಟ ಹಿರಿಯ ಮಹಿಳೆ ಮತ್ತೊಬ್ಬರು ಹೆಚ್ಚು ಕಡಿಮೆ ಅಷ್ಟೇ ವಯಸ್ಸಿನ ಆದರೆ ಸಂಪೂರ್ಣ ಆಧುನಿಕ ಉಡುಪಿನಲ್ಲಿ ಅಂದರೆ ಷಾರ್ಟ್ಸ್‌ ಹಾಕಿಕೊಂಡು ವಾಕ್ ಮಾಡುವ ಮಹಿಳೆ. ನಿಧಾನಕ್ಕೆ ಹೆಜ್ಜೆ ಇಡಲೂ ಯೋಚಿಸುವವರಂತೆ ವಾಕ್ ಮಾಡುವವರಿಂದ ಹಿಡಿದು ಮೈಯೆಲ್ಲ ಅದುರಿಸಿಕೊಂಡು ವಾಕ್ ಮಾಡುವವರ ತನಕ ವಿಧವಿಧ ಜನರು! ಇವರನ್ನೆಲ್ಲ ನೋಡಿಕೊಂಡು ಹೀಗೆ, `ಇದೇ ಇದೇ ದಾಲ್ ಲೇಕ್’ ಎಂದು ಸಂಭ್ರಮ ಪಟ್ಟುಕೊಂಡು ಯೋಚಿಸುತ್ತಾ ವಾಕ್ ಮಾಡುತ್ತಿದ್ದರೆ ಆಗಾಗ ಸಿನಿಮಾ ತಾರೆಯರು ಸಿಗುವುದುಂಟು. ಕವಿ ಎಚ್. ಎಸ್. ಶಿವಪ್ರಕಾಶ್ ದರ್ಶನವೂ ಆಗಿದ್ದುಂಟು. ಪ್ರಕಾಶ್ ಪಡುಕೋಣೆಯಂಥ ಚೆಂದನೆಯ ಕ್ರೀಡಾಪಟುವಿನ ದರ್ಶನ ಆಗಾಗ ಆಗುತ್ತಲೇ ಇರುತ್ತದೆ. ಉತ್ತರ ಬೆಂಗಳೂರು ಹೆಬ್ಬಾಳ ಕೆರೆ, ನಾಗಾವರ ಕೆರೆಗಳನ್ನು ನೋಡಿದ್ದರೂ ಸ್ಯಾಂಕಿಯ ರಮ್ಯತೆ ಅವುಗಳಲ್ಲಿ ಸಿಕ್ಕಿಲ್ಲ ಅಥವಾ ಕಂಡಿಲ್ಲ! ಇದು ಉತ್ತರ ಬೆಂಗಳೂರಿಗರ ಕಾಶಿಯಂತೆ ಕಾಣಲು ಹತ್ತಾರು ಕಾರಣಗಳು. ಹೀಗೆ ಇಷ್ಟೆಲ್ಲ ರೀತಿಗಳಲ್ಲಿ ನಮ್ಮನ್ನು ಲಾಲಿಸುವ, ಪೊರೆಯುವ ಸ್ಯಾಂಕಿ ಎನ್ನುವ ಈ ಮಾಯಾಂಗನೆ ಆಗಾಗ ನಾನು ಜೀವವನ್ನು ಸೆಳೆದುಕೊಳ್ಳಬಲ್ಲೆ ಎಂದೂ ನಿರೂಪಿಸುತ್ತಾಳೆ. ಅನೇಕ ಆತ್ಮಹತ್ಯೆಗಳನ್ನು ಸಹ ಸ್ಯಾಂಕಿ ನೋಡಿಬಿಟ್ಟಿದೆ.
ಅವಳ ನೀರು ಕುಡಿದು ಜೀವ ಉಳಿಸಿಕೊಳ್ಳುವ ಅವಳ ದಂಡೆಯ ಹೂಗಿಡ ಮರಗಳ ಜೊತೆಗೆ, ಮೀನು ಆಮೆಗಳಿಗೆ ಜೀವದಾಯಿನಿ ಆಗಿದ್ದಂತೇ ತನ್ನ ಬಳಿ ನೋವಿನಿಂದ, ಬದುಕು ಬೇಡವಾಗಿ ಬಂದವರನ್ನು ತೆಕ್ಕೆಗೆ ಸೆಳೆದುಕೊಂಡಿದ್ದೂ ಇದೆ. ಸ್ಯಾಂಕಿ ಎನ್ನುವ ಈ ಕೆರೆ ಬರಿ ಕೆರೆಯಲ್ಲ, ವೈವಿಧ್ಯತೆಯ ಸಂಗಮವಿದು. ಇಲ್ಲಿ ಜಂಟಿಯಾಗಿ ಬಂದು ನಲಿದು ಹೋಗುವವರಿದ್ದಾರೆ. ಒಂಟಿಯಾಗಿ ಕೂತು ಸೂರ್ಯಾಸ್ತದ ಜೊತೆಗೆ ನೋವನ್ನ ಕಡಿಮೆ ಮಾಡಿಕೊಳ್ಳಲು ಬಂದು ಗಂಟೆಗಟ್ಟಲೆ ಕೂತು ಹೋಗುವವರೂ ಇದ್ದಾರೆ. ಎಷ್ಟೊಂದು ನಿಟ್ಟುಸಿರುಗಳನ್ನು ಸ್ಯಾಂಕಿ ಕೇಳಿರಬಹುದೆನೋ! ಸ್ಯಾಂಕಿ ನೀಡುವ ಖುಷಿ, ನೆಮ್ಮದಿಯಿಂದ ಅವಳ ಅಭಿಮಾನಿಗಳಾದವರು ಸಾವಿರಾರು ಜನರು. ಸ್ಯಾಂಕಿಯ ದಂಡೆಯ ಮೇಲೆ ವಸತಿ ಸಮುಚ್ಛಯ ಕಟ್ಟುವ ದುರಾಲೋಚನೆಗೆ ಇಲ್ಲಿ ನಿತ್ಯ ವಾಕಿಂಗ್ ಮಾಡುವ ಜನರು ಕಟುವಾದ ಪ್ರತಿಭಟನೆ ತೋರಿ ಆ ಬಿಲ್ಡರುಗಳಿಗೆ ದುಃಸ್ವಪ್ನದಾಯಿಗಳಾಗಿದ್ದೂ ಇದೆ. ಬಹುಶಃ ಸ್ಯಾಂಕಿ ಕೊಡುವ ನೆಮ್ಮದಿಗೆ ಹೀಗೆ ಕೃತಜ್ಞತೆ ತೋರದೇ ಹೋದರೆ ಪ್ರಕೃತಿ ಮುನಿದಾಳು ಎನ್ನುವ ವಿವೇಕ ಜಾಗೃತವಾಗಿದ್ದು ನೋಡಿದಾಗ ಸಣ್ಣ ಸಂತಸವೂ ಮೂಡುತ್ತದೆ.

ಸ್ಯಾಂಕಿ ಗಂಡೊ ಹೆಣ್ಣೊ ಅನ್ನುವ ಹುಚ್ಚು ಪ್ರಶ್ನೆಗೆ (ನನ್ನ ಪತಿಯ ಪ್ರಕಾರ ನನಗೆ ಮೂಡುವ ಹೆಚ್ಚಿನ ಪ್ರಶ್ನೆಗಳು ಹುಚ್ಚುತನವೇ!) ಯಾವ ತಜ್ಞರ ನೆರವಿಲ್ಲದೇ ಉತ್ತರ ಕಂಡು ಕೊಂಡಿರುವೆ. ಸ್ಯಾಂಕಿ, ಅಪ್ಪಟ ಹೆಣ್ಣು. ಅದರಲ್ಲೂ ನೂರಕ್ಕೆ ನೂರು ಪ್ರತಿಶತ ಹೆಣ್ಣು. ಅವಳ ದಂಡೆಯ ಮೇಲೆ ಇರುವ ಪ್ರಪಂಚದ ಎಲ್ಲ ನಡೆನುಡಿಯ ಅತಿರೇಕಗಳನ್ನು ಅವಳು ಹಾಗೇ ಮೌನವಾಗಿದ್ದುಕೊಂಡು ಸಹಿಸಿದ್ದಾಳೆ, ಕೊಟ್ಟ ಅನ್ನ ತಿಂದಿದ್ದಾಳೆ, ಬಿಸಾಡಿದ ಕಸವನ್ನೂ ಬುಡದಲ್ಲಿ ಇಟ್ಟುಕೊಂಡಿದ್ದಾಳೆ. ಬಾಯಿಮುಚ್ಚಿಕೊಂಡು  ಕೇಳಿಸಿಕೊಂಡಿದ್ದಾಳೆ. ಇವಳ ಗರ್ಭದಲ್ಲಿ ನಿಜಕ್ಕೂ ಸಾವಿರದೊಂದು ಕತೆಗಳಿವೆ. ಒಮ್ಮೊಮ್ಮೆ ಹುಣ್ಣಿಮೆಯ ರಾತ್ರೆಯಲ್ಲಿ ಚಂದಿರನ ಬೆಳಕಿನಲ್ಲಿ ಹೀಗೆ ಈ ಸ್ಯಾಂಕಿಯ ಅಧಿದೇವತೆಯೇನಾದರೂ ಸಂಚಾರಕ್ಕೆಂದು ಹೊರಟು ಅಲ್ಲಿರುವ ಪುಟ್ಟ ಗಝಿಬೊದ ಕಲ್ಲು ಬೆಂಚಿನ ಮೇಲೆ ಮೊಣಕಾಲಿನ ಮೇಲೆ ಕೈಯೂರಿ ಕೂತು ಸಾವಿರದ ಕತೆಯ ಗಂಟು ಬಿಚ್ಚುತ್ತಾಳೋ ಏನೋ ಎನ್ನುವ ರಕ್ಕಸ ಕುತೂಹಲವಿದೆ ನನಗೆ.

ಮಳೆಗಾಲದಲ್ಲಿ ಗರ್ಭದ ತುಂಬ ನೀರು ತುಂಬಿಸಿಕೊಂಡು ಅವಳಲ್ಲಿ ಮೂಡುವ ಅಲೆಗಳು ದಂಡೆಗೆ ಬಂದು ಛಳ್ ಛಳ್ ಎಂದು ಅಪ್ಪಳಿಸುವಾಗ ಸಮುದ್ರದ ಭಾವವನ್ನು ಮೂಡಿಸುವುದೂ ಇದೆ. ಜೊತೆಯಲ್ಲಿ ನೀರಿಗೆ ತೀರಾ ಹತ್ತಿರವಿರುವ ಜಾಗಿಂಗ್ ಟ್ರ್ಯಾಕಿನಿಂದ ನಿಂತು ಕಣ್ಣು ಹಾಯಿಸಿದಾಗ ನೀರರಾಶಿ ದಿಗಿಲು ಹುಟ್ಟಿಸುವುದೂ ಇದೆ. ಮತ್ತದೇ ಸ್ಯಾಂಕಿ ಉರಿಬೇಸಿಗೆ ಕಾಲದಲ್ಲಿ ಒಣಗಿ ಅದರೊಳಗಿರುವ ಎಂದೊ ಎಸೆದಿದ್ದ ದೊಡ್ಡ ದೊಡ್ಡ ಕಲ್ಲುಗಳು, ಕಬ್ಬಿಣದ ಸರಳುಗಳೂ ಕಾಣುವಾಗ ಸೋತು ಶರಶಯ್ಯೆಗೆ ಒರಗಿದ ಮೈಯ್ಯೆಲ್ಲ ಗಾಯವಾಗಿರುವ ಭೀಷ್ಮನ ನೆನಪನ್ನೂ ಮೂಡಿಸುವುದು. ಈ ಮನುಷ್ಯನಿಗೆ ಎಷ್ಟೆಲ್ಲ ನೀಡಿದೆ, ಏನೆಲ್ಲ ಮಾಡಿದೆ ಆದರೂ ನನ್ನ ಉಳಿಸಿಕೊಳ್ಳುವ ಮಾನವೀಯತೆ ಮನುಷ್ಯನಿಗೆ ಇಲ್ಲವೆಂದು ಕೊರಗುವಂತೇ ಸ್ಯಾಂಕಿ ಕಾಣುತ್ತದೆ. ಎಷ್ಟೆಂದರೂ ಮನುಷ್ಯನಿಗೆ ಪಡೆದಷ್ಟೇ ಗೊತ್ತು. ಪ್ರಕೃತಿಗೆ ಒದಗುವುದಷ್ಟೇ ಗೊತ್ತು.