“ಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿ/ಪ್ರತಿಯೊಬ್ಬರೂ ಒಂಟಿ!’ ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ.
ಸುಮಿತ್‌ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಆನಂದ ವಿ. ಪಾಟೀಲ ಬರಹ

“ಬೊಗಸೆ ತುಂಬಾ ಮಲ್ಲಿಗೆಯನ್ನಲ್ಲ
ಮದ್ದುಗುಂಡುಗಳನ್ನೇ
ಗರ್ಭಧರಿಸಿ ತಿರುಗುತಿದೆ”
ಅಂತಹ ಪ್ರತಿಮೆಗಳನ್ನಿರಿಸುತ್ತ ಇಲ್ಲಿನ ಕಾವ್ಯ ತನ್ನೊಳಗಿನಿಂದ ತೆರೆದುಕೊಳ್ಳುವುದನ್ನೇ ವಿಶೇಷವಾಗುಳ್ಳದು, ಸುತ್ತಲಿನ ಪರಿಸರಕ್ಕಾಗಿ ಚಾಚಿಕೊಳ್ಳುವುದು ನಿಧಾನ ಜೊತೆಗೂಡಿದಂತಿದೆ.

‘ಈಗ
ಪ್ರತಿ ದಿನವೂ
ಉರಿಸಬೇಕು ಕಾರಿರುಳು’
ಅನ್ನುವಂಥ ತಹತಹಿಕೆಯ ಮಾತು ಇಲ್ಲಿನ ಒಂದು ಬಗೆಯ ಕುದಿತಕ್ಕೆ ಸಾಕ್ಷಿಯೂ ಆಗಿದೆ ಅನಿಸುತ್ತದೆ.

“ಹಾಡಿನೊಳಗಣ ಅಗ್ನಿತಂಪು
ಹಿಮದ ಕಿಡಿಗಳನು ಕರಗಿಸುವಂತೆ
ಇನ್ನೊಂದು ಮತ್ತೊಂದು ಹಾಡಿಗೆ
ಅನುದಿನದ ಹೊಸ ಬೆಳಕು ಕತ್ತಲೆಯನೆ ಕೊಲ್ಲುವುದು” ಎನ್ನುತ್ತ ಒಂದು ತಣ್ಣನೆಯ ಭರವಸೆಯನ್ನು ಇಟ್ಟುಕೊಂಡು ಇಲ್ಲಿನ ರಚನೆ ಹಾಡಾಗ ಬಯಸುತ್ತದೆ.

(ಸುಮಿತ್‌ ಮೇತ್ರಿ)

‘ಮತ್ತೆ ಮತ್ತೆ ನಿರೀಕ್ಷೆ ಹುಟ್ಟಿಸುವ ಮಳೆಯ ಸದ್ದಿನಂತೆ ದೂರದಲ್ಲೆಲ್ಲೋ ಕರಗಿ ಕಪ್ಪುಮೋಡದ ಆಲಾಪದಂತೆ’ ಸೋಲು ಪ್ರತಿ ಸಲವಿರುವಾಗಲೂ ಕಾಯುವ, ಭರವಸೆಗೊಳ್ಳುವ ದನಿ ಕೇಳುತ್ತದೆ.

‘ಮುಖ ಕೊಂದು
ಮುಖ ಹುಡುಕುವ ಹಾದಿಯಲ್ಲಿ
ಇಲ್ಲ… ಇಲ್ಲ… ಇಲ್ಲ…
ನನ್ನದೆ ಮುಖದ ಹೊರತು ನನಗೇನು ಬೇಕಿಲ್ಲ’
ಎನ್ನುವ ಹಟವೂ ಬೆರೆಯುತ್ತದೆ. ಒಂದಿಗೇ
‘ಇಲ್ಲಿ
ಈ ಕಿರುತರುಣನೊಬ್ಬ
ತನ್ನದೇ ಮುಖದ ಹುಡುಕಾಟದಲ್ಲಿ
ಅಲೆಯುತ್ತಿದ್ದಾನೆ ಮುಖ ಕೊಂದು; ಮುಖ ಹುಡುಕುವ ಹಾದಿಬೀದಿಯಲ್ಲಿ’ ಎನ್ನುವ ದಿಗಿಲಾಗಿರುವ ವಾಸ್ತು ಸಂಗತಿಯೂ ಕಾಣುತ್ತದೆ.

‘ಆತ್ಮಭಾವದ ಆಚೆ ಜೀವಭಾವದ ಈಚೆ’ ಎನ್ನುವ ರಚನೆ ಕೆಲವೆಲ್ಲ ಚರ್ವಿತ ಚರ್ವಣಗಳನ್ನ ಮುಂದಿರುಸತ್ತಲೇ ಸಾಗುತ್ತದಾದರೂ
“ನನ್ನಂಥ ಹಾದಿಹೋಕರ ಭರವಸೆಗೆ
ಹೃದ್ಗತವನು ಬೈಲಿಗಿಟ್ಟೆ
ಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿ
ಪ್ರತಿಯೊಬ್ಬರೂ ಒಂಟಿ!’
ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ.

“ಆದರೆ,
ಒಂದು ತಿಳಿದುಕೊ ಪ್ರಿಯ ಪಾರ್ಟನರ್
ಎದೆಗೆ ಒದೆಯುವ ಕೂಸಿಗೆ
ತಾಯಿ ಎಂದೂ ಹಾಲುಣಿಸುವುದನು ನಿಲ್ಲಿಸುವುದಿಲ್ಲ”
ಎನ್ನುವ ಗಟ್ಟಿ ಅನಿಸುವ ಅನುಭವದ ಮಾತುಗಳೇ ಇಲ್ಲಿ ಹೆಚ್ಚು ಹೆಚ್ಚೆ ಸೆಳೆದದ್ದು ನನ್ನನ್ನು. (ಇಲ್ಲೆ ಕೆಲವೆಲ್ಲ ಗಜಲ್ ಮಾದರಿಗಳನ್ನ ಇರಿಸಿಕೊಂಡಂತೆಯೇ ಕಂಡುವು ನನಗೆ ಅದಲೆಲ ಕ್ಲೀಷೆಯಾಗಿ ಕಂಡು ಸುಮ್ಮನಾಗಿರುವೆ)

“ಧ್ಯಾನಕ್ಕೆ ಗುಹೆಬೇಕಿಲ್ಲ” ಮತ್ತೆ ಕವಿಯ ಖಾಸಾ ದನಿಯಾಗಿ ಕಾಣುತ್ತಲೂ ಇಡಿಕಿರದ ಇಮೇಜುಗಳಿಂದ ಮೂರ್ತ ಅಮೂರ್ತಗೊಳಿಸಿ ಚೆಂದಗೊಳಿಸುವ ಕೆಲಸವೇ ಆಗಿಬಿಟ್ಟಿದೆಯಾ ಅನ್ನಿಸಿತು. ಕವಿತೆ ಅಂದರೆ ಇಮೇಜ್ ಕಟ್ಟುವುದೇ ಕೆಲಸವೇ?
“ಗಾಯಗಳಿಗೆ ಸಾಕ್ಷಿ ಹೇಳುವ
ಪಾದದ ಪಡಿಯಚ್ಚಿನ ಹೆಜ್ಜೆ ಗುರುತುಗಳು
ಧ್ಯಾನಕ್ಕೆ ಗುಹೆ ಬೇಕಿಲ್ಲ
ಕಟ್ಟಕಡೆಯ ಪ್ರಜೆಗೆ ತಲುಪದ ಜನತೆಯ ಕಣ್ಮಣಿಯೇ
ಆಕ್ರಂದನದ ಮೊರೆ ಕೇಳು…
ಹಸಿವಾಗದಿರಲೆಂದು ದಯಾಮಯಿ ಭಗವಂತನಲ್ಲಿ ಮೊರೆಯಿಟ್ಟೆ
ಒಲೆಯ ಧ್ಯಾನಸ್ತ ಕೆಂಡದ ಕಿಡಿ
ಬದುಕಿನ ಬಿದಾಯಿ ಕೊಡುವ ಘಳಿಗೆ
ಸುಳ್ಳು ಸತ್ಯವಾಗುವ ಸತ್ಯ ಸುಳ್ಳಾಗುವ
ಪ್ರತ್ಯಕ್ಷ ಕಂಡರೂ ತನ್ನನ್ನೇ ತಾನು ನೋಡುವ
ಖತಾಯತಿ ಕೇಳುವ ಕಾಲ”
ಈ ಬಗೆಯ ಮಾತುಗಳು ಬಲು ದೊಡ್ಡವೇ ಅನ್ನಿಸಿತು, ಗೊತ್ತಿಲ್ಲ

“ಈ ಲೋಕದ ಕಣ್ಣೀಗ
ಹೊಸ ಕುದುರೆಗಳ ಮೇಲೆ
ಸಾರಿ, ಗೆಲುವ ಕುದುರೆ ಮೆಲೆ
*
ನೆನಪಿರಲಿ
ಈಗ ಎಲ್ಲಾ ದಾರಿಗಳೂ
ಪುನಃ ಅಲ್ಲೇ ಬಂದು ಸೇರುತ್ತವೆ
ಮನುಷ್ಯ ಮುಕ್ತತೆ ಏನೋ ಬಯಸುತ್ತಾನೆ
ಆದರೆ ಯಾವತ್ತೂ ಹಾಗೆ ಬದುಕುವುದಿಲ್ಲ ಮತ್ತು ಬದುಕಲು ಬಿಡುವುದಿಲ್ಲ”

ಇಲ್ಲಿ ಪ್ರತಿ ಸಲವೂ ವ್ಯಕ್ತಿಯ ಒಳದನಿಯ ಕಡೆಗೆ ಕಿವಿಯಾಗುವ, ಮನುಷ್ಯನ ಒಳಗನ್ನ ಕೆದಕುವ ನುಡಿಗಳೇ ಕೇಳುತ್ತವೆ. ಅನೇಕ ಸಲ ಫಿಲಾಸಫಿಯಾಗಿ ಬಿಡುವ ಧಾವಂತವೂ ಕಂಡುಬಿಡುತ್ತದೆ.

“ಕವಿತೆಗಾಗಿ
ಕರುಳಕುಡಿ ಒಂದಾಗಿ ಜಿಬುಕುವ
ತಾಯ ಮೊಲೆಯಂತೆ”
ಕಾಯುವುದು ಇಲ್ಲಿನ ಒಟ್ಟು ಹಂಬಲ. ಅವರವರಿಗೆ ಒಂದೊಂದು ಹಂಬಲ ಅನಿಸಿತು. ಬೇಂದ್ರೆ ಎಷ್ಟೇ ದೊಡ್ಡ ಕವಿ ಎನಿಸಿದರೂ ನನಗೆ ಎಷ್ಟೋ ಸಲ ಶಬ್ಧ ವ್ಯಾಮೋಹಿ, ಕವಿತಾ ವ್ಯಸನಿಯೂ ಆಗಿ ಕಂಡುದಿದ್ದೇ ಇದೆ. ಏನೂ ಮಾಡಲಾಗದು.

“ಆಖಾಡಕ್ಕೆ ಇಳಿದ ಮೇಲೆ
ಒಂದು ಕೈ ನೋಡಿದ ಮೇಲೆ
ಆಟದ ನಶೆ ತಲೆ ಏರಿದ ಮೇಲೆ
ಆಟವೇ ಆ ಡಿ ಸು ತ್ತ ದೆ. . .”
ಎನ್ನುವಂಥ ಬಹು ವಿಸ್ತಾರದ ಮಾತುಗಳು ಇಲ್ಲಿ ಇದ್ದಕಿದ್ದಂತೆ ಕಂಡು ಬಿಡುತ್ತವೆ.

“ಉಗುಳು ನುಂಗುತ್ತಿದ್ದೇನೆ
ಅಂತ್ಯ ಇರುವುದು ದೇವರ ಹೆಸರಿನಲ್ಲೋ
ಇಲ್ಲ,
ಸಾವಿನ ಹೆಸರಿನಲ್ಲೋ
*
ಈ ಲೋಕದಲ್ಲಿ
ಎಲ್ಲ ಭಾವನೆಗಳು ಸಾಪೇಕ್ಷ
*
ಬಾ . . .
ಸೈರಣೆಯಿಂದಲೇ
ನಮ್ಮನಮ್ಮ ಪಾಲಿನ
ಏಕಾಂತದ ನೋವುಗಳನು ಹಂಚಿಕೊಳ್ಳೋಣ”
ಎನ್ನುವ ಮಾತುಗಳು ಗುಚ್ಛವಾಗಿ ಸಂಕಲನದ ತುಂಬ ಅನುರಣಿಸಿವೆ ಅನಿಸಿತು. ಇಲ್ಲಿನ ರಚನೆಗಳು ಅನೇಕ ಸಲ ಬಹುದೊಡ್ಡದನ್ನು ತೆಕ್ಕೆಗೆ ಎಳೆದುಕೊಳ್ಳಲು ಹಂಬಲಿಸತೊಡಗುತ್ತವೆ. ಅದು ಭೃಮಾತ್ಮಕವೆ ಅಂತ ಅನಿಸಿಯೂ ಬಿಡುತ್ತದೆ.

(ಕೃತಿ: ಈ ಕಣ್ಣುಗಳಿಗೆ ಸದಾ ನೀರಡಿಕೆ (ಕವನ ಸಂಕಲನ), ಲೇಖಕರು: ಸುಮಿತ್‌ ಮೇತ್ರಿ, ಪ್ರಕಾಶಕರು: ಸುಗಮ ಪುಸ್ತಕ, ಹಲಸಂಗಿ (9980845630), ಬೆಲೆ: 125/-)