ಇವಾ ಹಿಂಗ್ಯಾಕ ಇದ್ದಾನ? ನನ್ನ ನೋಡಿದ್ರ ನಗೋದಿಲ್ಲಾ ಮಾತಾಡೊದಿಲ್ಲಾ? ಅವ್ವನೂ ಯಾವಾಗ್ಲೂ ಹಿಂಗs ಇರತಾಳ…. ಬ್ಯಾಂಕಿನಿಂದ ಬಂದಾಕಿನs ಮಲಗಿ ಬಿಡತಾಳ…. ನಾ ಯಾರ ಕೂಡ ಮಾತಾಡಬೇಕು?…. ಮುಂಜಾನಿಂದ ಊಟಿಲ್ಲಾ…. ಹಂಗs ಕೂತಾಳ; ಅಪ್ಪಾ ತಾ ಮಾತ್ರ ಹೊರಗ ಊಟಾ ಮಾಡಿ ಬರತಾನ, ಆಕೀಗೆ ಊಟಾ ಮಾಡು ಅಂತ ಸುದ್ದಾ ಹೇಳೋದಿಲ್ಲಾ…. ಛೇ ಎಂಥಾ ಅಪ್ಪಾ ಇವಾ….? 
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ “ನಾ ಯಾಕ ಹುಟ್ಟಿದೆನೋ…… ?” ನಿಮ್ಮ ಓದಿಗೆ

ರಾತ್ರಿ ಬೆಳತನಕ ಗುಡುಗು-ಸಿಡಿಲಿನ ಅಬ್ಬರದ ಮಳೆ…. ಕ್ಷಣವೂ ನಿಲ್ಲದ ಮಳೆ…. ಬೆಳಗಾದರೂ ಆಕಾಶದಲ್ಲಿ ಕವಿದ ಕಪ್ಪು ಮೋಡಗಳು ಬೆಳಕು ನೆಲಕ್ಕಿಳಿಯಲಿಕ್ಕೆ ದಾರಿ ಮಾಡಕೊಡಲಿಲ್ಲ. ನೋವಿನ ಕ್ಷಣಗಳನ್ನು ನೆನೆದು ಉದುರುವ ಕಣ್ಣೀರಿನಂತೆ ಗಿಡ-ಮರಗಳಿಂದ ಆಗೀಗ ಉದುರುವ ಪಟ-ಪಟ ಮಳೆನೀರಿನ ಸದ್ದು.
ರಾತ್ರಿ ಇಡಿ ಜಗಳಾಟ, ಕೂಗಾಟ, ಚೀರಾಟಗಳ ನಂತರ ಬೆಳಗಾದರೂ ಅಳುತ್ತ ಕೂತೇ ಇದ್ದಳು ಆಶಾ. ಕಣ್ಣು ಬಾತು ಗಜ್ಜುಗದಂತಾಗಿದ್ದವು. ಕ್ಷೀಣ ಸ್ವರದಲ್ಲಿ ಮಗಳನ್ನು ಎಬ್ಬಿಸುತ್ತ –
“ರಚನಾ, ರಚನಾ ಏಳು, ಸಾಲಿಗೆ ಹೋಗಬೇಕಲ್ಲಾ ? ಏಳು ಹೊತ್ತಾತು…. ಏಳು ಮಗಾ” ಎಂದಳು.
ರಚನಾ ಕಣ್ಣು ತೆರೆದಾಗ ತಾಯಿಯ ಊದಿಕೊಂಡ ಮುಖ, ಕೆಂಪಾದ ಕಣ್ಣು ನೋಡಿ ಗಾಬರಿಗೊಂಡು ತನ್ನ ಎರಡೂ ಕೈಗಳನ್ನು ತಾಯಿಯ ಕೊರಳ ಸುತ್ತ ಸುತ್ತಿ ನೊಂದ ಧ್ವನಿಯಲ್ಲಿ-
“ಅವ್ವಾ ನಿನ್ನ ಮಾರಿ ಹಿಂಗ್ಯಾಕ ಆಗೇದ? ನಾನು ನಿನ್ನ ಹತ್ತರs ಇರತೇನಿ, ಸಾಲೀಗೆ ಹೋಗೋದಿಲ್ಲ…. ನಿನ್ನೆ ನೀವು ಎಷ್ಟು ಹೊತ್ತು  ಜಗಳಾಡತಿದ್ರಿ ಅಲ್ಲಾ? ನೀವು ಹಗಲೆಲ್ಲಾ ಹಿಂಗ್ಯಾಕ ಜಗಳಾಡತೀರಿ? ನನಗ ನಿದ್ದಿ ಬರೂದಿಲ್ಲಾ, ಅಳೂ ಬರತದ…. ಊ…. ಊ….” ಎಂದು ಅಳಲಾರಂಭಿಸಿದ ಮಗಳನ್ನು ಹತ್ತಿರ ಕರೆದು ರಮಿಸುತ್ತ..
“ಅದನ್ನೆಲ್ಲಾ ಯಾಕ ಮನಸ್ಸಿಗೆ ಹಚ್ಚಿಕೋತಿ? ದೊಡ್ಡವರ ವಿಷಯದೊಳಗ ತಲೀ ಹಾಕಬಾರದು….”
ಈ ಅವ್ವಗ, ಈ ಅಪ್ಪಗ ಹ್ಯಾಂಗ ತಿಳಿಸಿ ಹೇಳಬೇಕು? ಇವರು ಜಗಳಾಡಿದರ ನನ್ನ ಕಿವಿಗೆ ಕೇಳಿಸ್ತದ, ಕಣ್ಣಿಗೆ ಕಾಣಿಸ್ತದ…. ಹೊಟ್ಯಾಗ ಸಂಕಟ ಆಗತದ ಅಂತ? ಇವರಿಬ್ಬರೂ ಹೀಂಗ ಮಾಡಿದರ ನನಗೆ ಎಷ್ಟು ತ್ರಾಸು ಆಗತದ ಅಂತ ಇವರಿಗೆ ತಿಳಿಯೂದ ಇಲ್ಲಾ…. ನಾ ಇವರಿಬ್ಬರ ನಡುವ ಇದ್ದದ್ದು ಇವರಿಗೆ ನೆನಪs ಆಗೊದಿಲ್ಲಾ…. ಎಂದೆಲ್ಲಾ ಮನದೊಳಗೆ ನೊಂದು ಅಂದುಕೊಂಡಳು.
*****
ರಚನಾಳ ತಂದೆ ಆನಂದ ಎಂದಿನಂತೆ ತಡವಾಗಿಯೇ ಮನೆಗೆ ಬಂದ, ದಿನವೂ ಸಂಜೆ ಅಪ್ಪನ ಬರುವಿಗಾಗಿ ರಚನಾ ಕಾಯುತ್ತಲೇ ಇರುತ್ತಿದ್ದಳು. ಅಪ್ಪ ಬೇಗ ಬಂದಾನು…. ತನ್ನೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡ್ಯಾನು…. ‘ಕುರಿಮರಿ ಬೇಕೇನ್ರಿ ಕುರಿಮರಿ’…. ಎಂದು ಬೆನ್ನ ಮೇಲೆ ಹೊತ್ತುಕೊಂಡು ತಿರಗ್ಯಾನು…. ಅಪ್ಪ-ಅವ್ವ  ಇಬ್ಬರೂ ನಗು-ನಗುತ್ತ ಕೂತುಕೊಂಡು ತನಗೆ ಕತೆ ಹೇಳ್ಯಾರು…. ಎಂದೆಲ್ಲ ಬಯಸುತ್ತಲೇ ಅವಳ ಬಾಲ್ಯದ ಸಂಜೆಗಳು ಮುಳುಗಿ ಹೋಗುತ್ತಿದ್ದವು.
ಮುಂಬಾಗಿಲಿನಲ್ಲಿ ಕಾಲಿಡುತ್ತಿದ್ದ ಅಪ್ಪನನ್ನು ಕಂಡು “ಅಪ್ಪಾ-ಅಪ್ಪಾ” ಅಂತ ಕಾಲಿಗೆ ತೆಕ್ಕೆ ಹಾಕಿದಳು. ಆನಂದನ ಮಾರಿ ಕುಂಬಳಕಾಯಿಯಂತಾಗಿತ್ತು. ಮಗಳ ಕಣ್ಣಲ್ಲಿ ಚಿಮ್ಮುವ ಪ್ರೀತಿಯ ಕಾರಂಜಿಯನ್ನು ಅವ ಗಮನಿಸಲಿಲ್ಲ. ಆಕೆಯನ್ನು ಬದಿಗೆ ಸರಿಸಿ ಮುಂದೆ ಹೊರಟವನನ್ನು ನಿಲ್ಲಿಸಿ-
“ಅಪ್ಪಾ ನೀನು ನನ್ನ ನೋಡಲಿಲ್ಲಾ ?’
“ಏನ ಬೇಕ ಹೇಳು”
“ನೀನು ನನ್ನ ಕೂಡ ಕೂಡ್ರುದಿಲ್ಲಾ, ಆಟಾ ಆಡುದಿಲ್ಲಾ, ಕಥಿ ಹೇಳೋದಿಲ್ಲಾ…. ನನಗ ನಿನ್ನ ಕೂಡ ಭಾಳ ಮಾತಾಡಬೇಕೂ ಅಂತ ಅನಸ್ತದ….”
“ನನಗ ಕೆಲಸ ಇರತದ, ನಿನ್ನ ಗೆಳತ್ಯಾರ ಕೂಡ ನೀ ಆಟಾ ಆಡಲ್ಲಾ? ಮಾತಾಡಲ್ಲಾ ?”
“ನನ್ನ ಗೆಳತ್ಯಾರ ಕೂಡ ನಾ ಯಾವಾಗಲೂ ಮಾತಾಡತೇನಿ, ಆಟಾ ಆಡೇ ಆಡತೇನಿ…. ಆದರ ನಿನ್ನ  ಕೂಡ ನಾ ಯಾವಾಗ ಆಡಬೇಕು ?”
“ರಚನಾ ! ಸರಿ, ನಡಿ ನೀ ಆ ಕಡೆ…. ನನಗ ಭಾಳ ದಣಿವ ಆಗ್ಯೇದ, ನಾ ಮಲಗಬೇಕು…. ನನ್ನ ಊಟಾ ಆಗೇದ, ನೀನೂ ಊಟಾ ಮಾಡಿ ಮಲಗಹೋಗು….” ಎಂದು ಅನ್ನುತ್ತ ಕೋಣಿ ಸೇರಿಕೊಂಡು ಬಾಗಿಲು ಹಾಕಿಕೊಂಡ.
ಇವಾ ಹಿಂಗ್ಯಾಕ ಇದ್ದಾನ? ನನ್ನ ನೋಡಿದ್ರ ನಗೋದಿಲ್ಲಾ ಮಾತಾಡೊದಿಲ್ಲಾ? ಅವ್ವನೂ ಯಾವಾಗ್ಲೂ ಹಿಂಗs ಇರತಾಳ…. ಬ್ಯಾಂಕಿನಿಂದ ಬಂದಾಕಿನs ಮಲಗಿ ಬಿಡತಾಳ…. ನಾ ಯಾರ ಕೂಡ ಮಾತಾಡಬೇಕು?…. ಮುಂಜಾನಿಂದ ಊಟಿಲ್ಲಾ…. ಹಂಗs ಕೂತಾಳ; ಅಪ್ಪಾ ತಾ ಮಾತ್ರ ಹೊರಗ ಊಟಾ ಮಾಡಿ ಬರತಾನ, ಆಕೀಗೆ ಊಟಾ ಮಾಡು ಅಂತ ಸುದ್ದಾ ಹೇಳೋದಿಲ್ಲಾ…. ಛೇ ಎಂಥಾ ಅಪ್ಪಾ ಇವಾ….?
ಅಡಗೀ ಮನೆಯತ್ತ ನಡೆಯುತ್ತ – “ಅವ್ವಾ, ಅಪ್ಪಾ ನಿನ್ನ ಕೂಡ, ಮತ್ತ ನನ್ನ ಕೂಡ ಹಿಂಗ್ಯಾಕ ಮಾಡತಾನ? ನಾವಿಬ್ಬರೂ ಅವಗ ಸೇರೋದಿಲ್ಲೇನು?…. ಆದ್ರ ನನಗ ನೀವಿಬ್ರೂ ಭಾಳ ಸೇರತೀರಿ” – ನಿದ್ರೆ ಬಂದು ಆಕಳಿಸುತ್ತ “ಊಂ…. ನನಗ ಭಾಳ ಬ್ಯಾಸರಾಗೇದ, ಒಂದು ಕಥಿ ಹೇಳು, ಊಂ…. ಊಂ…. ಮದ್ಲ ನನಗ ಒಂದು ಮುದ್ದು ಕೊಡು….” ಅವ್ವನನ್ನು ತನ್ನ ಎರಡೂ ಕೈಯಿಂದ ತೆಕ್ಕೆ ಹಾಕಿ ನಿಂತಳು.
“ರಚೂ, ಸರಿ ನೋಡೋಣು…. ನಿಮ್ಮಪ್ಪಾ ಹೊರಗ ಉಂಡು ಆರಾಮ ಮಾಡತಾರ…. ನಾವಿಲ್ಲೆ ಜೀವಂತ ಇದ್ದೇವಿ ಅಂತ ಖಬರ ಇರೊದಿಲ್ಲಾ…. ಸರಿಯವ್ವಾ ಸ್ವಲ್ಪು, ನಿನಗ ಊಟಕ್ಕ ಹಾಕತೇನಿ…. ನಡಿ ಊಟಾ ಮಾಡು….” ಎಂದು ರಮಿಸುತ್ತ ಡೈನಿಂಗ್ ಟೇಬಲ್ಲಿನ ಎದುರಿಗೆ ಅವಳನ್ನು ಕುಳ್ಳಿರಿಸಿದಳು.
ಇವರಿಬ್ಬರೂ ಯಾವಾಗಲೂ ಹೀಗೆ. ಆದರೆ ನಾನೇನು ಮಾಡಬೇಕು ?…. ಇವರಿಗೆ ನನ್ನ ಬಗ್ಗೆ ಕಾಳಜೀ ಇರೊದಿಲ್ಲಾ ಎಂದು ಒಳಗೊಳಗೆ ತಳಮಳಗೊಂಡು, ಮುಖ ಉಬ್ಬಿಸಿಕೊಂಡು ಕುಳಿತಳು ರಚನಾ.
ಆರು ವರ್ಷದ ರಚನಾಳಿಗೆ ತಂದೆ-ತಾಯಿಗಳೊಳಗಿನ ಬಿರುಕು…. ಅದರ ಕಾರಣ…. ಏನೊಂದೂ ತಿಳಿಯದೆ, ಅವರ ಮೌನ ನಿರಾಸಕ್ತಿಗಳ ಅರ್ಥ ತಿಳಿಯದಿದ್ದರೂ ಮನೆಯ ಆಶಾಂತಿ, ನೀರವ ಅವಳ ಮನಸ್ಸನ್ನು ಘಾಸಿಗೊಳಿಸಿದ್ದವು…. ಇವರೇಕೆ ಉಳಿದ ತಂದೆ-ತಾಯಿಗಳಂತೆ ಇಲ್ಲ? ತಮ್ಮ ಮನೆ ತೋಟದ ಮೂಲೆಯಲ್ಲಿ ಮೂರು ಪುಟ್ಟ ಮರಿಗಳ ಜೊತೆ ಚಿನ್ನಾಟ ಆಡುವ ತಾನು ಸಾಕಿದ ನಾಯಿ ಪಪ್ಪಿಯ ಬಗ್ಗೆ ಅವಳಿಗೆ ತುಂಬಾ ಪ್ರೀತಿ. ದಿನವಿಡಿ ತಾಯಿಯನ್ನು ಹಿಂಬಾಲಿಸುವ ಮರಿಗಳು, ಅವುಗಳನ್ನು ಹತ್ತಿರ ಇಟ್ಟುಕೊಂಡು ಹಾಲುಣಿಸುವುದು, ಮೈ ನೆಕ್ಕುತ್ತ ಪ್ರೀತಿಸುವ ಪಪ್ಪಿ ನಾಯಿಯ ಮೈಮೇಲೆ ತಾನು ಕೈಯಾಡಿಸಿ ತನ್ನ ಪ್ರಶಂಸೆ ತಿಳಿಸುತ್ತಿದ್ದಳು. ರಾತ್ರಿ ತಾಯಿಯ ಕಾಲುಗಳಡಿಯಲ್ಲಿ ಸಂರಕ್ಷಣೆ  ಪಡೆದು ಮಲಗಿದ ಮರಿಗಳನ್ನು ಕಂಡು ತಾನೇಕೆ ಪಪ್ಪಿ ನಾಯಿಯ ಮರಿಯಾಗಲಿಲ್ಲ? ಎಂದುಕೊಳ್ಳುತ್ತ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದ್ದಳು.
*****
ಎಂಟು ದಿನಗಳ ನಂತರ ಮನೆಯಲ್ಲಿ ಮತ್ತೆ ಜಗಳ…. ಅಳುವ ದೃಶ್ಯ, ಈ ಸಲದ ಜಗಳ ಬಹಳ ಅನರ್ಥದ್ದಾಗಿತ್ತು…. ಆಶಾ ತನ್ನ ಬಟ್ಟೆ-ಬರೆ ಕಟ್ಟಿಕೊಂಡು, ಮಗಳನ್ನು ಕರೆದುಕೊಂಡು ಬಾಡಿಗೆಯ ಒಂದು ಚಿಕ್ಕ ಔಟ್‌ಹೌಸಿನಲ್ಲಿ ಮನೆ ಮಾಡಿ ಜೀವನ ಪ್ರಾರಂಭಿಸಿದಳು. ಬ್ಯಾಂಕ್ ಉದ್ಯೋಗಿಯಾದ್ದರಿಂದ ಆರ್ಥಿಕ ಭದ್ರತೆ ಇದ್ದರೂ…. ನಡೆದ ಘಟನೆಯಿಂದಾಗಿ ತುಂಬಾ ಜರ್ಜರಿತಳಾಗಿದ್ದಳು. ತಂದೆಯಿಂದ ದೂರವಾದ ರಚನಾಳಿಗೆ ಏನೊಂದೂ ಅರ್ಥವಾಗದಿದ್ದರೂ, ನೊಂದುಕೊಂಡು ತಾಯಿಗೆ ಕಾಣದಂತೆ ಅವಿತು ಕೂತು ‘ಅಪ್ಪಾ’ ಅನ್ನುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
ದಿನವೂ ಸಂಜೆ ತನ್ನ ಓರಿಗೆಯ ಗೆಳೆಯ, ಗೆಳತಿಯರನ್ನು ಶಾಲೆಯಿಂದ ಕರೆದೊಯ್ಯಲು ಬರುವ ಡ್ಯಾಡಿಗಳನ್ನು ಗೇಟಿನ ಸರಳುಗಳ ಮಧ್ಯೆ ತಲೆ ಸಿಕ್ಕಿಸಿ ನೋಡುತ್ತ ನಿಲ್ಲುತ್ತಿದ್ದಳು. ತಮ್ಮ ಮಕ್ಕಳು ಹತ್ತಿರ ಬಂದಾಗ, ಎತ್ತಿ ಅವರು ಮುದ್ದಿಸುವದನ್ನು ನೋಡಿ ಸಂತೋಷದಲ್ಲಿ ಮೈಮರೆಯುತ್ತಿದ್ದಳು. ಎಂದಾದರೊಂದು ದಿನ ತನ್ನ ಅಪ್ಪನೂ ಹೀಗೆ ಬರಬಹುದು ಎಂಬ ಭ್ರಮೆಯಲ್ಲಿ ಒಬ್ಬಳೇ ನಡೆಯುತ್ತ ಮನೆ ಸೇರುತ್ತಿದ್ದಳು.
*****
ಅಂದು ದಿನದಂತೆ ಶಾಲೆ ಬಿಟ್ಟು ತಂದೆ-ಮಕ್ಕಳ ಸಮಾಗಮದ ಅಪರೂಪದ ದೃಶ್ಯ ಸವಿದು, ಶಾಲೆಯ ಪುಸ್ತಕದ ಗಂಟು ಹೊತ್ತುಕೊಂಡು, ಕಾಲಲ್ಲಿ ಸಿಕ್ಕ ಒಂದು ಕಲ್ಲನ್ನು ಚಿಮ್ಮುತ್ತ ಆಟವಾಡುತ್ತ ಮನೆಗೆ ಹೊರಟಿದ್ದಳು.
‘ರಚನಾ’ ಎಂಬ ಕೂಗಿಗೆ ತಕ್ಷಣ ನಿಂತು ಸುತ್ತಲೂ ನೋಡಿದಳು. ಎಷ್ಟೋ ದಿನ ಕಳೆದುಹೋದ ಆ ಧ್ವನಿ ಅವಳ ಎದೆಯಲ್ಲಿ, ಗಂಟಲಲ್ಲಿ ನೋವನ್ನು ತುಂಬತೊಡಗಿತು…. ದೂರದಲ್ಲಿ ಅಪ್ಪ ಕಾಣಿಸಿದೊಡನೆ ಚಿಗುರೆ ಮರಿಯಂತೆ ಚಂಗನೆ ಹಾರಿ ಕ್ಷಣದಲ್ಲಿ ತೋಳಲ್ಲಿ ಕುಳಿತು ಎರಡೂ ಕೆನ್ನೆ ತುಂಬ ಮುತ್ತಿಟ್ಟಳು. ತನ್ನ ಕೈಗಳನ್ನು ಕೊರಳಿಗೆ ಸುತ್ತುತ್ತ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.
“ರಚೂ…. ರಚನಾ ಯಾಕ? ಯಾಕ ಅಳತಿ?”
“ನೀ ನನ್ನ ಮರೆತುಬಿಟ್ಟಿ ಅಪ್ಪಾ!…. ನೀ ಇಷ್ಟ ದಿನ ಯಾಕ ಬರಲಿಲ್ಲಾ?”
ಆನಂದನ ಮುಖವು ಪ್ರೀತಿ, ಖೇದ, ಅಸಹಾಯಕ ಭಾವಗಳ ಸಂದಿಗ್ಧತೆ ಮೂಡಿಸಿಕೊಂಡಿತ್ತು. ಎಲ್ಲ ಮರೆಸುವಂತೆ ತಂದ ಪ್ಯಾಕೇಟ್ ತೋರಿಸುತ್ತ – “ಇಲ್ಲೆ ನೋಡು ನಿನಗ ನಾಲ್ಕು ಡ್ರೆಸ್ಸು ತಂದೇನಿ! ನೋಡಿಲ್ಲೆ, ಇಷ್ಟೆಲ್ಲಾ ಮಿಠಾಯಿ! ಬಿಸ್ಕೀಟು!! ಇದರಾಗ ನಿನಗ ಆಟಾ ಆಡೊ ಹಗ್ಗಾ, ಕೋಲು ಅವ ಆಂ…. ನನ್ನ ನೋಡಿಲ್ಲೆ…. ತೊಗೊ ಕರಚೀಫು ಕಣ್ಣ ಒರಸಿಗೋ” ಎಂದು ಮಗಳನ್ನು ರಮಿಸಲಾರಂಭಿಸಿದ.
“ಅಪ್ಪಾ ನೀನೀಗ ಹೇಳಬೇಕು…. ನಮ್ಮಿಬ್ಬರನ್ನು ನೀ ಬಿಟ್ಟು ಯಾಕ ದೂರಿದ್ದಿ? ನಿನಗ ನಮ್ಮ ನೆನಪು ಆಗೊದಿಲ್ಲೇನು? ನೀನು ಅವ್ವಗ ಹೋಡಿಯೋದು ನನಗೆ ಸೇರೊದಿಲ್ಲಾ…. ನಮ್ಮ ಮನ್ಯಾಗ ಹಿಂಗೆಲ್ಲಾ ಯಾಕ ಆಗತದ ಅಪ್ಪಾ?…. ನನ್ನ ಗೆಳತ್ಯಾರ ಅವ್ವಾ-ಅಪ್ಪಾ ಎಲ್ಲಾರೂ ಒಂದು ಮನ್ಯಾಗ ಇರತಾರಲ್ಲಾ?….”
ಮಗಳ ಇಂಥ ಒಂದೊಂದು ಪ್ರಶ್ನೆ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿ ಕ್ರಾಸ್ ಕ್ವೆಶ್ಚನ್ನ  ಮಾಡಿದಂತಿತ್ತು…. ಅವನಲ್ಲಿ ಉತ್ತರಗಳಿರಲಿಲ್ಲ…. ತಪ್ಪಿತಸ್ಥ ಭಾವದೊಂದಿಗೆ ಅಮಾಯಕ ಮಗುವನ್ನು ರಮಿಸಲಾರಂಭಿಸಿದ.
“ಇಲ್ಲೆ ನೋಡು, ನಾಳೆ ನಾ ಮತ್ತ ಭೇಟ್ಟಿ ಆಗತೇನಿ ಆತಿಲ್ಲೋ” ಎನ್ನುತ್ತ ಮಗಳನ್ನು ಕೆಳಗಿಳಿಸಿ ಆ ಈ ಮಾತುಗಳನ್ನಾಡಿಸುತ್ತ ಅವಳ ಪ್ರಶ್ನೆಗಳನ್ನು ಮರೆಸಲು ಯತ್ನಿಸಿದ.
“ನೀ ಈಗ ಹೋಗಬ್ಯಾಡಾ, ನನ್ನ ಹತ್ತಿರ ಇರು” ಎಂದು ಆಜ್ಞೆ ಮಾಡಿದ ಮಗಳ ಹತ್ತಿರ ಕೆಲಸಮಯ ಕಳೆದು, “ನಾಳೆ ಖರೇನ ಬರತೇನಿ, ಪ್ರಾಮೀಸ್” ಎಂದು ಕೈ ಚಾಚಿದ.
“ನಾಳೆ ಬರತೇನಿ ಅಂದ್ರ ಮಾತ್ರ ನಿನ್ನ ಬಿಡತೇನಿ ಇಲ್ಲದಿದ್ರ ನಾ ನಿನ್ನ ಮನೀಗೆ ಬರತೇನಿ ನೋಡು ಮತ್ತ”
ಅವಳಾಡಿದ “ನಿನ್ನ ಮನಿ” ಅವನನ್ನು ದಿಗಿಲುಗೊಳಿಸಿತ್ತು. ಕೆಂಡ ತುಳಿದವನಂತೆ ಒಳಗೊಳಗೆ ನೊಂದುಕೊಳ್ಳುತ್ತ, ಮಗಳಿಂದ ಬಿಡುಗಡೆ ಹೊಂದಿ ಕತ್ತಲಲ್ಲಿ ಹೆಜ್ಜೆ ಹಾಕಿದ.
****
ಅಪ್ಪನ ಭೇಟಿಯ ಆ ಸಂಜೆ ರಚನಾಳ ಬಾಲ್ಯದ ಅಪೂರ್ವ ಸಂಜೆಯಾಗಿತ್ತು. ತನ್ನ ಮನೆ ತೋಟದ ಗಿಡ-ಮರ, ಬಳ್ಳಿ ಅಷ್ಟೇ ಅಲ್ಲ, ಬಾಡಿಗೆ ಮನೆಯ ನಾಯಿ ‘ಬಂಟ’ನಿಗೂ ತನ್ನ ಹೊಸ ಅಂಗಿ, ಮಿಠಾಯಿ ತೋರಿಸಿದಳು. ಟೆರೇಸ್ ಮೇಲೇರಿ ಹಾರಿದಳು…. ಕುಣಿದಳು…. ಮುಳುಗುವ ಸೂರ್ಯನಲ್ಲಿ ಅಪ್ಪನ ಮುಖದ ಬಿಂಬ ಕಂಡು “ಅಪ್ಪಾ, ಮತ್ತೆ ನಾಳೆ ಬಾ” ಎನ್ನುತ್ತ ಕೈ ಬೀಸಿದಳು.
  

 ದಿನವಿಡಿ ತಾಯಿಯನ್ನು ಹಿಂಬಾಲಿಸುವ ಮರಿಗಳು, ಅವುಗಳನ್ನು ಹತ್ತಿರ ಇಟ್ಟುಕೊಂಡು ಹಾಲುಣಿಸುವುದು, ಮೈ ನೆಕ್ಕುತ್ತ ಪ್ರೀತಿಸುವ ಪಪ್ಪಿ ನಾಯಿಯ ಮೈಮೇಲೆ ತಾನು ಕೈಯಾಡಿಸಿ ತನ್ನ ಪ್ರಶಂಸೆ ತಿಳಿಸುತ್ತಿದ್ದಳು. ರಾತ್ರಿ ತಾಯಿಯ ಕಾಲುಗಳಡಿಯಲ್ಲಿ ಸಂರಕ್ಷಣೆ  ಪಡೆದು ಮಲಗಿದ ಮರಿಗಳನ್ನು ಕಂಡು ತಾನೇಕೆ ಪಪ್ಪಿ ನಾಯಿಯ ಮರಿಯಾಗಲಿಲ್ಲ? ಎಂದುಕೊಳ್ಳುತ್ತ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದ್ದಳು.

“ಇವನ್ನೆಲ್ಲಾ ಯಾಕ ಇಸಗೊಂಡಿ? ಇನ್ನೊಮ್ಮೆ ಹಿಂಗ ಇಸಗೊಂಡರೆ ನಾ ಮೈಹುಳಿ ಹೊಡಿತೀನಿ…. ನೋಡ ಮತ್ತ?” ಅವ್ವನ ಕಣ್ಣು ಕೆಂಪಾಗಿದ್ದವು.
ಈ ಅವ್ವಗ ಏನ ಗೊತ್ತು ಅಪ್ಪನ ಪ್ರೀತಿ ಹ್ಯಾಂಗ ಇರತದ ಅಂತ? ಇಕೀಗೆ ಅಪ್ಪನ ಮ್ಯಾಲೆ ಸಿಟ್ಟು ಇದ್ದರ ನಾ ಏನ ಮಾಡಬೇಕು? ದೊಡ್ಡವರ ಮನಸ್ಸು ಹಿಂಗ್ಯಾಕ ಇರತದೊ! ನನ್ನಂಥವರ ಮನಸ್ಸು ಇವರಿಗೆ ಅರ್ಥವಾಗುವುದೇ ಇಲ್ಲ, ನಾ ಅಪ್ಪನ್ನ ಬಿಟ್ಟು ಹ್ಯಾಂಗಿರಲಿ?….  ಎಂದು ತನ್ನ ಹಾಸಿಗೆಯಲ್ಲಿ  ಬಿದ್ದುಕೊಂಡು ಒಳಗೊಳಗೆ ಬಿಕ್ಕುತ್ತ ಸಣ್ಣಗೆ ಅಳತೊಡಗಿದಳು.
ಅಂದು ರಾತ್ರಿ ಅಪರೂಪದ ಕನಸು ಕಂಡಳು – ಅವಳ ಬೆನ್ನಿಗೆ ಬಣ್ಣ ಬಣ್ಣದ ರೇಶಿಮೆಯ ರೆಕ್ಕೆ ಹುಟ್ಟಿಕೊಂಡವು. ಗುಡ್ಡ, ನದಿ, ಸಮುದ್ರಗಳ ಮೇಲೆ ಹಾರುತ್ತ ಒಂದು ಸಮುದ್ರದ ದಂಡೆಯಲ್ಲಿ ಬಂದಿಳಿದಳು. ಆ ವಿಶಾಲ ಪ್ರಪಂಚದಲ್ಲಿ ತಾನು ಏಕಾಕಿಯಾಗಿ – “ಅವ್ವಾ.. ಅಪ್ಪಾ ನಾ ಇಲ್ಲೆ ಬಂದೀನಿ” ಎಂದು ಗಟ್ಟಿಯಾಗಿ ಕೂಗಿಕೊಂಡಳು. ದೂರದಲ್ಲಿ ರಭಸದಿಂದ ಬಂಗಾರದ ದೋಣಿಯಲ್ಲಿ ಅಪ್ಪ-ಅವ್ವ ಜೊತೆಯಲ್ಲಿ ಕುಳಿತು ಹುಟ್ಟು ಹಾಕುತ್ತ ಹತ್ತಿರ ಬಂದರು. ಮಗಳನ್ನು ತಮ್ಮ ದೋಣಿಯಲ್ಲಿ ಕುಳ್ಳಿರಿಸಿಕೊಂಡು ಇಬ್ಬರೂ ಗಲ್ಲಕ್ಕೆ ಮುದ್ದುಕೊಟ್ಟರು. ಇಬ್ಬರ ತೋಳುಗಳನ್ನು ಭದ್ರವಾಗಿ ಹಿಡಿದುಕೊಂಡಳು.
“ನೀವಿಬ್ಬರೂ ನನ್ನ ಬಿಟ್ಟು ಎಲ್ಯೂ ಹೋಗಬ್ಯಾಡ್ರಿ” ಎಂದು ಭಾವಪೂರ್ಣವಾಗಿ ಮೃದುವಾಗಿ ಅಂದಳು.
ಆಶಾ ಮಗಳನ್ನು ಎಚ್ಚರಿಸಿದಳು. “ಏನಿದು? ಕನಸು ಬಿದ್ದಿತ್ತೇನು? ಹಂಗ್ಯಾಕ ಬಡಬಡಸಲಿಕ್ಕೆ ಹತ್ತಿ?”
“ಅವ್ವಾ, ಇವತ್ತ ಅಪ್ಪ ನನ್ನ ಭೇಟ್ಟಿ ಆಗಲಿಕ್ಕೆ ಬರತಾನ ಅಂತ ಹೇಳ್ಯಾನ” ಹರ್ಷದ ನವಿಲು ಅವಳ ಮುಖದಲ್ಲಿ ಕುಣೀತಿತ್ತು.
“ಆತು ದಾರಿ ನೋಡು…. ನಿಮ್ಮಪ್ಪಾ ಬರತಾರ ನಿನ್ನ ನೆನಪು ಮಾಡಿಕೊಂಡು!” ವ್ಯಂಗ್ಯದ ಮಾತಿನ ಮೊನೆ ರಚನಾಳ ಎಳೆ ಮನದಲ್ಲಿ ಚುಚ್ಚಿತು.
ಪಿಟ್ಟೆನ್ನದೆ ಅವ್ವನ ಮುಖ ದುರುಗುಟ್ಟಿ ನೋಡುತ್ತ ಎದ್ದು ಬಚ್ಚಲಕ್ಕೆ ಹೋದಳು.
ಸಂಜೆ ಶಾಲೆ ಬಿಟ್ಟ ನಂತರ ಒಂದು ತಾಸು ನಿಂತರೂ ಬರದ ತಂದೆಯನ್ನು ಮನದಲ್ಲೇ ಶಪಿಸುತ್ತ, ಸಿಟ್ಟಾಗಿ ಕಾಲು ಅಪ್ಪಳಿಸುತ್ತ ಮನೆಗೆ ಮರಳಿದಳು. ಮರುದಿನ ಅಪ್ಪನ ಹತ್ತಿರ ಹೋಗುವುದಾಗಿ ಹಟ ಹಿಡಿದು ತಾಯಿಯನ್ನು ಒಪ್ಪಿಸಿಕೊಂಡೇ ಮಲಗಿದಳು.
ಮಾರನೆ ದಿನ ರವಿವಾರವಾದ್ದರಿಂದ ನಿಧಾನವಾಗಿ ಊಟ, ಕೆಲಸ ತೀರಿಸಿಕೊಂಡು ಆಶಾ ಮಗಳ ಹಟಕ್ಕೆ ಮಣಿದು ನಾಲ್ಕು ದಿನಗಳಿಗಾಗಿ ಬಟ್ಟೆ-ಬರೆ, ಪುಸ್ತಕ ಪ್ಯಾಕ್ ಮಾಡಿ ಆಟೋದಲ್ಲಿ ಆ ಮನೆ ಹತ್ತಿರ ಕರೆದೊಯ್ಯುತ್ತ – “ರಚನಾ, ನಿನಗ ಇಲ್ಲಿ ಸುಖಾ ಆಗೊದಿಲ್ಲ ಮಗಳ, ಯಾಕರೆ ಹಟಾ ಮಾಡತಿ, ನಿನ್ನ ಕಳಸೂ ಮನಸ್ಸಿಲ್ಲಾ, ಮನಿಗೆ ಹೋಗೋ ಬಾ ನನ್ನ ಕೂಸ” ಎಂದು ದೈನ್ಯದಿಂದ ಬೇಡಿಕೊಂಡಳು.
“ಅವ್ವಾ, ಹಿಂಗ್ಯಾಕ ಅಂತೀ? ಅಪ್ಪನ ಹತ್ತಿರ ಒಂದೆರಡ ದಿನಾ ಇದ್ದುಮತ್ತ ಬಂದಬಿಡತೀನಲ್ಲಾ!” ಅನ್ನುತ್ತ ಕೆಳಗಿಳಿದು ಗೇಟು ತೆರೆದು ಒಳಹೊಕ್ಕ ಮಗಳನ್ನು ಕಣ್ಣು ಪಿಳುಕಿಸದೆ ನೋಡುತ್ತ “ಎಂಥ ಆಘಾತ ಕಾಯ್ದದೊ, ದೇವರೆ ನೀನೇ ನನ್ನ ಮಗಳನ್ನು ಕಾಯಬೇಕು” ಎನ್ನುತ್ತ ಕಣ್ತುಂಬ ನೀರು ತಂದು ಆಟೋದಲ್ಲಿ ಕುಸಿದಳು. ಆಟೋ ಚಲಿಸಿತು.
ಈ ವಿಶಾಲವಾದ ಮನೆಯಲ್ಲಿ ತಾನು ಮತ್ತ ತನ್ನ ಅಪ್ಪ ಇಬ್ಬರೆ; ಅವ್ವ ಇದ್ದಿದ್ದರೆ ಎಷ್ಟು ಛಲೋ ಆಗುತ್ತಿತ್ತು! ಎನ್ನುತ್ತ ತಾನು ತಂದೆಯ ಸಂಪೂರ್ಣ ಪ್ರೀತಿಯ ಹಕ್ಕುದಾರಳು ಎಂಬ ಜಂಭದಿಂದ ಬಾಗಿಲು ತಟ್ಟಿದಳು…. ಎರಡು-ಮೂರು ಸಲ ತಟ್ಟಿದರೂ ಪ್ರತಿಕ್ರಿಯೆ ಬರದಾದಾಗ –
“ಅಪ್ಪಾ ನಾ ರಚನಾ ಬಂದೇನಿ, ಬಾಗಲಾ ತಗಿ”
ಒಳಗೆ ಏನೇನೋ ಪಿಸುಮಾತು, ಅಪ್ಪ ಯಾರ ಕೂಡ ಮಾತನಾಡುತ್ತಿರಬಹುದು ಎಂದು  ಊಹಿಸುತ್ತಿರುವಾಗ ಬಾಗಿಲು ತೆರೆಯಿತು.
“ಅಪ್ಪಾ” ಎಂದು ಕೂಗುತ್ತ ಮಮತೆಯಿಂದ ಚಿಮ್ಮಿದ ಅವಳ ಕಣ್ಣೆವೆಗಳಲ್ಲಿ ವಜ್ರಗಳಂಥ ಕಣ್ಣ-ಹನಿ ಹೊಳೆಯತೊಡಗಿದವು. ಆದರೆ ಅಪ್ಪನ ಮುಖದಲ್ಲಿ ಸಂತೋಷವಿರಲಿಲ್ಲ ಎಂದು ತಿಳಿದ ಅವಳ ಉತ್ಸಾಹ ಉಡುಗಿ ಹೋಯ್ತು.
“ರಚನಾ ಏನು ಹಿಂಗ ಒಮ್ಮಿಂದೊಮ್ಮೆಲೆ?”
“ನೀ ಬರಲಿಲ್ಲಾ, ನಾ ಹೇಳಿದ್ದಿಲ್ಲಾ – ನೀ ಬರದಿದ್ದರ ನಾ ಬರತೇನಿ ಅಂತ? ಅದಕ್ಕ ನಾನ ಬಂದೆ…. ನಿನ್ನೆ ಒಂದು ತಾಸು ಬಿಸಲಾಗ ನಿನ್ನ ಕಾಯಕೋತ ನಿಂತಿದ್ದೆ”
“ಓ ಹೌದಲ್ಲಾ! ನಾ ಮರತಬಿಟ್ಟೆ…. ಕೆಲಸಂತೂ ಭಾಳ ಇತ್ತು”
“ನನ್ನ ನೋಡಿ ಇರೂದೂ ಒಂದು ಕೆಲಸ ಅಲ್ಲೇನಪ್ಪಾ?” ರಚನಾಳ ಈ ಪ್ರಬುದ್ಧ ಪ್ರಶ್ನೆ ಎದೆ ಗುಂಡಿಗೆಗೆ ಬಿಟ್ಟ ಬಾಣದಂತಿತ್ತು.
ರಚನಾಳ ಹೆಚ್ಚಿನ ಪ್ರಶ್ನೆಗಳಿಗೆ ಅವಕಾಶ ಕೊಡದೆ “ತಾ ನಿನ್ನ ಚೀಲಾ” ಅಂತ ಕೈಚಾಚಿದ ಕೈಗಳಿಗೆ ತಾನೇ ನುಗ್ಗಿ ಅಪ್ಪಿಕೊಂಡಳು. ಬಳಿಕ ಒಂದು ಕ್ಷಣವೂ ಕೆಳಗೆ ಕೂಡ್ರದೆ ಅಪ್ಪನ ತೊಡೆಯ ಸಿಂಹಾಸನವನ್ನು ಆಕ್ರಮಿಸಿದಳು. ತಾಸುಗಟ್ಟಲೆ ಕ್ಷಣವೂ ನಿಲ್ಲದ ಮಾತಿನ ಸುರುಳಿ ಬಿಚ್ಚುತ್ತಲೇ ಇತ್ತು.
ಒಂದು ವರ್ಷದ ಹಿಂದೆ ಬಿಟ್ಟು ಹೋದ ಮನೆಯ ಮೂಲೆ-ಮೂಲೆಯ ಜೊತೆ ಮಾತನಾಡಿದಳು. ಕೋಣೆಯಿಂದ ಕೋಣೆಗೆ ನರ್ತಿಸುತ್ತ ಕೊನೆಗೆ ಅಪ್ಪ-ಅವ್ವನ ಬೆಡ್‌ರೂಮಿನಲ್ಲಿ ಹೋದ ಅವಳ ಹೆಜ್ಜೆ ಗಕ್ಕನೆ ನಿಂತವು. ಬೆನ್ನಲ್ಲಿ ಯಾರೋ ಚೂರಿ ಚುಚ್ಚಿದಂತೆ ಅನಿರೀಕ್ಷಿತ ಆಘಾತ ಅಲ್ಲಿ ಕಾಯ್ದು ಕುಳಿತಿತ್ತು. ಅಪ್ಪನ ಹಾಸಿಗೆಯಲ್ಲಿ ಒಬ್ಬ ಹೆಣ್ಣು ಮಗಳು ಮಲಗಿದ್ದನ್ನು ನೋಡಿ, ಒಂದು ಕ್ಷಣ ನಿಲ್ಲದೆ ಶರವೇಗದಿಂದ ಓಡಿ ಬಂದು ಗಾಬರಿಯಿಂದ ಬೆರಳು ಮಾಡಿ ತೋರಿಸುತ್ತ-
“ಯಾರೋ ಅವ್ವನ ರೂಮಿನೊಳಗಿದ್ದಾರ”
“ಅವರ…. ಅವರು ನಿನ್ನ ಅಂಟಿ”
“ಛೇ, ನನಗ ಯಾವ ಅಂಟೀ ಕಂಟೀ ಇಲ್ಲಾ…. ಅವರು ಇಲ್ಯಾಕ ಮಲಗ್ಯಾರ?”
ನಿರುತ್ತರವಾದ ಆನಂದ ಮಗಳನ್ನೆತ್ತಿಕೊಂಡು ಮನೆ ಮುಂದಿನ ತೋಟಕ್ಕೆ ನಡೆದ. ತನ್ನ ಪ್ರಶ್ನೆಯನ್ನು ಅಪ್ಪ ಅಲಕ್ಷಿಸಿದ ಎಂದು ಅವಳ ಕಣ್ಣಲ್ಲಿ ನೀರು ತುಂಬಿ ಬಂತು, ಒಳಗೆ ಘಾಸಿಗೊಂಡಳು.
ರಾತ್ರಿ ಆಂಟಿ ನೀಡಿದ ಊಟ ಮಾಡದೆ, ಹಾಲು ಕುಡಿದು “ಅಪ್ಪಾ ನೀ ನನ್ನ ಹತ್ತಿರ ಮಲಗಬೇಕು” ಎಂದು ಪಟ್ಟುಹಿಡಿದು ಅಪ್ಪನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಳು. ನಿದ್ರೆ ಬಂದಾಗ ಅಪ್ಪನನ್ನು ಅವಚಿಗೊಂಡು ಕಾಲು ಹೇರಿ ಮಲಗಿದಳು.
ಎಚ್ಚರವಾದಾಗ ಇನ್ನೂ ಚುಮು ಚುಮು ಬೆಳಕು. ಆಕಾಶವು ಕತ್ತಲಲ್ಲಿ ಯಾರನ್ನೊ ಕಳೆದುಕೊಂಡು ಎದೆಬಿರಿದು ಅಳುವಂತೆ ಧೋ-ಧೋ ಎಂದು ಸುರಿಯುವ ಮಳೆ! ಅಪ್ಪ ಮಗ್ಗಲಲ್ಲಿರಲಿಲ್ಲ…. ಕತ್ತಲಲ್ಲಿ ಗಾಬರಿಗೊಂಡು ಅಪ್ಪನ ಕೋಣೆಗೆ ಹೋದರೆ ಅಲ್ಲಿ ಆ ಹೆಂಗಸು ಮತ್ತು ಅಪ್ಪ. ಒಳಗೆ ಹೆಜ್ಜೆ ಇಡದೆ, ಬೆನ್ನು ಮಾಡಿ “ಅಪ್ಪಾ” ಎಂದು ಚೀರಿಕೊಂಡು ಬಿಕ್ಕಿಸಿ ಅಳಲಾರಂಭಿಸಿದಳು. ರಚನಾಳ ಮನಸ್ಸು ಸ್ಪಿರಿಟ್‌ನಂತೆ ಧಗಧಗ ಉರಿಯತೊಡಗಿತು. ಅವ್ವನ ಸ್ಥಳದಲ್ಲಿ ಮಲಗಿದ ಆ ಹೆಂಗಸಿನ ಜೊತೆ ಮಲಗಿದ ಅಪ್ಪನ ಬಗೆಗಿನ ಪ್ರೀತಿ-ವಿಶ್ವಾಸ ಅವಳ ಎದೆಯಲ್ಲಿ ಸುಟ್ಟು ಭಸ್ಮವಾಯಿತು. ಎರಡೂ ಕೈಯಿಂದ ಅಪ್ಪನನ್ನು ಗುದ್ದಿದಳು. ಅಪ್ಪನ ಹೃದಯದಲ್ಲಿ ತನಗೆ ಸ್ಥಾನವಿಲ್ಲ ಎಂದು ನೊಂದು, ಸುರಿವ ಮಳೆಯಲ್ಲಿ ತೋಯಿಸಿಕೊಳ್ಳುತ್ತ ನಿಂತಳು. “ಅವ್ವಾ, ಇನ್ನು ನಾನು ಈ ಅಪ್ಪನ ಹತ್ತಿರ ಇರೋದಿಲ್ಲಾ…. ಅಪ್ಪಾ ಭಾಳ ಕೆಟ್ಟವನು” ಎಂದು ನೆಲಕ್ಕೆ ಕೂತು ರಾಡಿಯಲ್ಲಿ ಕಾಲು ತಿಕ್ಕುತ್ತ ಮಣ್ಣಲ್ಲಿ ಉರುಳಾಡಿದಳು; ಸಂಕಟದಿಂದ ಗೋಳಾಡಿದಳು. ಆನಂದ ಮಗಳನ್ನು ಮಳೆಯಿಂದ ತಪ್ಪಿಸಲು ಎಷ್ಟು ಎಳೆದರೂ ಜಾರಿ ಕೈ ಕೊಸರಿಕೊಂಡು ಮತ್ತೆ ನೆನೆಯುತ್ತ ನಿಂತಳು. ಸಿಟ್ಟಿನಿಂದ ಆತ ಏನನ್ನೂ ಮಾಡದೆ ಎಷ್ಟೋ ಹೊತ್ತು ಸುಮ್ಮನೆ ನಿಂತು ಹಟಮಾರಿತನದ ಪರಿ ನೋಡುತ್ತಿದ್ದ.
“ನನಗೆ ಈ ಅಪ್ಪ ಬೇಡ, ನನಗೆ ಯಾರೂ ಬೇಡ” ಎಂದು ತೊದಲುತ್ತ ಮಳೆಯಲ್ಲಿ ಕಣ್ಣು ಮುಚ್ಚಿ ಕುಳಿತ ಮಗಳನ್ನು ನೋಡಿ ಆನಂದ ಸಿಟ್ಟಿನಿಂದ ಎರಡು ಪೆಟ್ಟು ಹಾಕಿ ಮೇಲೆತ್ತಿಕೊಳ್ಳುತ್ತ-
“ಇದೇನ ಅವತಾರ ಮಾಡಿಕೊಂಡಿ?ನಿನ್ನೆ ಬಂದೀ ಬಂದೀ ಬರೆ ಹಟಮಾರಿತನ, ಯಾಕ ಇಷ್ಟ ನನ್ನ ಕಾಡತಿ?” ಅಂತ ಎತ್ತಿಕೊಳ್ಳಲು ಹೋದಾಗ –
“ನೀ ಹೋಗು, ನೀ ನನ್ನ ಅಪ್ಪ ಅಲ್ಲಾ…. ನೀನು ಅಂಟಿ ಕಡೆ ಹೋಗು, ನನಗ ಯಾರೂ ಅಪ್ಪ ಇಲ್ಲಾ…. ಆ ಆಂಟಿ ಇದ್ರ ನಾ ಇಲ್ಲಿ ಇರೋದಿಲ್ಲಾ, ನನ್ನ…. ನನ್ನ ಮನೀಗೆ ಕಳಿಸು, ಇನ್ನ ನಿನ್ನ ಹತ್ರ ಎಂದೂ ಬರೋದಿಲ್ಲಾ…. ನೀ ನನಗ ಹೊಡೀತಿ…. ನೀನು ಕೆಟ್ಟ ಅಪ್ಪಾ…. ನೀ ನನಗ ಬ್ಯಾಡ ಹೋಗು, ಹೋಗು” ಎಂದು ಕೈ ಕೊಸರಿಕೊಳ್ಳಲು ಹೋದಾಗ ಕೈ ಬೆಂಕಿಯಾಗಿತ್ತು.
“ನೋಡಿಲ್ಲೆ ಜ್ವರಾ ಬಂದಾವ, ಹಿಂಗ್ಯಾಕ ಹುಚ್ಚರಾಂಗ ಮಾಡತಿ?”

“ನೀ ನನ್ನ ಮುಟ್ಟಬ್ಯಾಡ…. ನೀ ನನ್ನ ಹೊಡದಿ ಯಾಕ? ನೀನು ಆಂಟಿ ಹತ್ರ ಇರೋದು ನನಗ ಸೇರೋದಿಲ್ಲಾ, ಅಕಿ ಯಾರು, ಅಕಿ ಯಾಕಿಲ್ಲಿದ್ದಾಳ? ಹೇಳು…. ಹೇಳ ಮದ್ಲ!” ಎಂದು ಮಳೆಯಲ್ಲಿ ನಿಂತು ರಂಪಾಟ ನಡೆಸಿದಳು, ಎಳೆದು ತರುವಾಗ ಜ್ವರದ ಮಗಳಿಗೆ ಮತ್ತೆ ಪೆಟ್ಟು ಹಾಕಿದ. ರಚೂ ಒಮ್ಮೆಲೆ ಚೀರಿಕೊಂಡು, ಮನೆ ಬಿಟ್ಟು ಓಡಿ ಗೇಟು ತೆರೆದು ಮಳೆಯಲ್ಲೇ ಮನೆಯತ್ತ ಓಡತೊಡಗಿದಳು. ಆನಂದ ಬೆನ್ನುಹತ್ತಿದ. ಅವಳ ಇಚ್ಛೆಯಂತೆ ತಾಯಿಯ ಮನೆಗೆ ತಂದಾಗ ಮೂರ್ಛಾವಸ್ಥೆಯಲ್ಲಿತ್ತು ಮಗು.

ಊರಿನ ಮೂರು ಜನ ಪರಿಣಿತ ಡಾಕ್ಟರರು ಮಗುವನ್ನು ಬದುಕಿಸಿಕೊಳ್ಳಲು ಕೈಮೀರಿ ಪ್ರಯತ್ನಿಸಿದರು. ರಚನಾಳಿಗೆ ತೀವ್ರ ನ್ಯೂಮೋನಿಯಾ ಆಗಿ ಎದೆ ಕಫದಿಂದ ತುಂಬಿಕೊಂಡು ಜ್ವರ ನೆತ್ತಿಗೇರಿತ್ತು. ತನ್ನ ಅಳಿದುಳಿದ ಧ್ವನಿಯಲ್ಲಿ “ಅವ್ವಾ…. ಅಪ್ಪಾ ನನ್ನ ಹೊಡೆದ…. ನೀವಿಬ್ಬರೂ ನನ್ಯಾಕ ಇಲ್ಲೆ ಕರಕೊಂಡ ಬಂದ್ರಿ? ನಾ ಯಾಕರೆ ಹುಟ್ಟಿದೆನೋ ಅವ್ವಾ?…. ನಾ ಯಾಕೆ ಹುಟ್ಟಿದೆ….?….? ಎಂದು ಅವ್ವನನ್ನು ಹಿಡಿದ ಪುಟ್ಟ ಕೈ ಕೆಲಸಮಯ ಬಿಗಿಯಾಗಿ ಹಿಡಿದುಕೊಂಡಿತ್ತು…. ಬಿಗಿತ ಸಡಿಲಾದಾಗ ಪುಟ್ಟ ಕೈಗಳಲ್ಲಿಯ ಮುಷ್ಟಿ ಆಸೆಗಳು ಗಾಳಿಯಲ್ಲಿ ಚದುರಿ ಹೋದವು.
(ತರಂಗ ಸಾಪ್ತಾಹಿಕ ನವೆಂಬರ್ 1996)

*****

(ಮಾಲತಿ ಪಟ್ಟಣಶೆಟ್ಟಿ)

“ನಾ ಯಾಕ ಹುಟ್ಟಿದೆನೋ” ಕತೆಯಲ್ಲಿ ಒಂದು ಕುಟುಂಬದಲ್ಲಿಯ ಆರು ವರ್ಷದ ಮುಗ್ಧ ಮಗಳು ರಚನಾನ ಸಾವಿಗೆ ಕಾರಣ ಆ ಕುಟುಂಬದಲ್ಲಿಯ ಅವಳ ತಂದೆಯ ಹೊರಗಿನ ಸಂಬಂಧ. ಇದರಿಂದಾಗಿ ಹಾಳಾದ ಪತಿ-ಪತ್ನಿ-ಮಗಳ ಸಂಬಂಧಕ್ಕೆ ನಿಷ್ಕಾರಣವಾಗಿ ಬಲಿಯಾದ ರಚನಾಳ ದುರಂತದ ಚಿತ್ರಣ ಈ ಕತೆಯಲ್ಲಿದೆ.
ಆಧುನಿಕ ಭಾರತದಲ್ಲಿ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನಗಳ ಆಗಮನದಿಂದ ಬದುಕು ಸುಲಭವಾದರೂ ಕೌಟುಂಬಿಕ ಸಂಬಂಧಗಳು ಹಾಳಾಗಿವೆ. ಕೂಡು ಕುಟುಂಬಗಳು ಒಡೆದಿವೆ. ಸೋದರ ಸಂಬಂಧಗಳು ಅಳಿದಿವೆ. ಇದಕ್ಕಿಂತ ದುರದೃಷ್ಟಕರ ಸಂಗತಿಯೆಂದರೆ ಗಂಡ-ಹೆಂಡತಿ-ಮಕ್ಕಳ ಸಂಬಂಧಗಳು ಭಗ್ನಗೊಂಡಿವೆ. ದೇಶದ ಸುಖ, ಶಾಂತಿ, ಪ್ರಗತಿಯ ಮಾನದಂಡವೆಂದರೆ ಆ ದೇಶದ ತಳಪಾಯದ ಘಟಕವಾದ ಕುಟುಂಬದಲ್ಲಿಯ ಸುಖ-ಶಾಂತಿ ಮತ್ತು ಪ್ರಗತಿ. ಕುಟುಂಬದಲ್ಲಿ ಇವು ಇಲ್ಲದಾದಾಗ ಇಡೀ ಸಮಾಜವೇ ಅಶಾಂತಿಯಿಂದ ನರಳುತ್ತದೆ. ಪರಂಪರಾಗತವಾಗಿ ನಡೆದು ಬಂದ ಭಾರತೀಯ ಸಂಸ್ಕೃತಿಯ ನೀತಿ ಸಂಹಿತೆಯಲ್ಲಿ ಕುಟುಂಬಗಳು ಭದ್ರವಾಗಿರಬೇಕಾದರೆ ಅದರಲ್ಲಿಯ ಎಲ್ಲ ಸದಸ್ಯರು ನಿಷ್ಠೆಯುಳ್ಳವರಾಗಿರಬೇಕು ಮತ್ತು ಕುಟುಂಬದ ಸುಖ-ಶಾಂತಿಯನ್ನು ಮೂಡಿಸುವವರಾಗಿರಬೇಕು. ಇಂಥ ಕುಟುಂಬ ನೀತಿಯ ಅಗತ್ಯತೆಯನ್ನು ಎತ್ತಿ ತೋರಿಸುವುದೇ ನನ್ನ ಕಥೆಯ ಮೂಲ ಉದ್ದೇಶ.
ಆಶಾ ಒಬ್ಬ ಬ್ಯಾಂಕ್ ಉದ್ಯೋಗಿ. ರಚನಾಳ ಅಪ್ಪನು ಇನ್ನೊಂದು ಆಫೀಸಿನಲ್ಲಿ ಕೆಲಸದಲ್ಲಿದ್ದಾನೆ. ಆಫೀಸಿನಲ್ಲಿದ್ದ ಒಬ್ಬ ಮಹಿಳೆಯೊಂದಿಗೆ ಇವನು ಸಂಬಂಧ ಇಟ್ಟುಕೊಂಡು ಅವಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುತ್ತಾನೆ. ಹಾಜರಿ ಹಾಕುವವರಂತೆ ಮನೆಗೆ ರಾತ್ರಿ 9-00 ಗಂಟೆಗೆ ಬಂದು ಯಾರೊಂದಿಗೂ ಮಾತನಾಡದೆ, ಊಟವನ್ನು ಮಾಡದೇ ತನ್ನ ಕೋಣೆಯನ್ನು ಸೇರಿಕೊಳ್ಳುತ್ತಿರುತ್ತಾನೆ. ಹೀಗೆ ಮನೆಯಲ್ಲಿಯ ಸಂಬಂಧಗಳು ಇಲ್ಲವಾಗಿ ಅಲ್ಲಿ ಕೇವಲ ಮೌನ, ವಿಷಾದಗಳೇ ತುಂಬಿಕೊಳ್ಳುತ್ತವೆ. ಮುಗ್ಧ ಬಾಲೆ ರಚನಾಳಿಗೆ ತಂದೆಯ ಎರಡನೆಯ ಸಂಬಂಧದಿಂದಾಗಿ ತಮ್ಮ ಕುಟುಂಬವು ಹಾಳಾಗಿದೆ ಎಂಬುದು ಅರ್ಥವಾಗದ ಸಂಗತಿ. ಮನೆ ಎರಡಾಗಿ ತಂದೆಯು ತನ್ನ ಉಪಪತ್ನಿಯೊಂದಿಗೆ ಬೇರೆ ಇರುವುದನ್ನು ಪ್ರತ್ಯಕ್ಷ ಕಂಡು ಅಲ್ಲಿ ತನಗೆ ಸ್ಥಾನವಿಲ್ಲ, ಪ್ರೀತಿಯಿಲ್ಲ ಎಂದು ತಿಳಿದಾಗ ಆಕೆ ಆಘಾತಕ್ಕೊಳಗಾಗುತ್ತಾಳೆ. ಅದೇ ರಾತ್ರಿ ಸುರಿಯುತ್ತಿರುವ ಮಳೆಯಲ್ಲಿ ಓಡುತ್ತ ತಾಯಿಯ ಮನೆಯನ್ನು ಸೇರಿಕೊಳ್ಳುತ್ತಾಳೆ. ಸಂಪೂರ್ಣವಾಗಿ ತೊಯ್ದ ಅವಳ ದೇಹದಲ್ಲಿ ಗರಿಷ್ಟ ಪ್ರಮಾಣದ ಜ್ವರ ಏರಿ ನಿಮೋನಿಯಾ ಆಗುತ್ತದೆ. ಇದು ಅಪಾಯಕಾರಿಯಾಗಿ ಪರಿಣಮಿಸಿ ಕೊನೆಗೆ ಮಗುವಿನ ಸಾವಿನಲ್ಲಿ ಕಥೆಯು ಅಂತ್ಯಗೊಳ್ಳುತ್ತದೆ. ಹೀಗೆ ಈ ಕುಟುಂಬ ಸಂಬಂಧದ ಒಂದೇ ಒಂದು ಕುಡಿ ಕಮರಿದಾಗ ಅದು ಸಂಪೂರ್ಣ ಒಡೆದು ಹೋಗುತ್ತದೆ.
“ನಾ ಯಾಕ ಹುಟ್ಟಿದೆನೋ” ಕಥೆಯಲ್ಲಿಯ ರಚನಾಳ ಈ ಉದ್ಗಾರವು, ಮತ್ತು ಈ ಪ್ರಶ್ನೆಯು ಆಧುನಿಕ ಭಾರತದಲ್ಲಿಯ ಸಾಮಾಜಿಕ ಅಧಃಪತನವನ್ನು ಮತ್ತು ಕುಟುಂಬದ ಪವಿತ್ರ ಸಂಬಂಧಗಳ ಹತ್ಯೆಯನ್ನು ಸೂಚಿಸುತ್ತದೆ. ಈ ದುರಂತಗಳನ್ನೇ ತೋರಿಸುತ್ತ ಸಮಾಜವನ್ನು ಜಾಗರಿಸುವ ಕಳಕಳಿಯು ಕಥೆಯ ಕೇಂದ್ರ ಯೋಚನೆಯಾಗಿರುತ್ತದೆ.