ಸಾವಿರಾರು ವರುಷಗಳ ಹಿಂದೆ ಈ ಕತೆಗಳನ್ನೇ ನಿಜವೆಂದು ಧೃಡವಾಗಿ ನಂಬಿರುವ ಜನರನ್ನು ಏನೆನ್ನಬೇಕು? ಆ ನಂಬಿಕೆಯನ್ನೇ ಗಾಳವಾಗಿಸಿ ಜನರನ್ನು ಮರಳು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿಯಾದರೂ ಏನು? ಕಳೆದ ಒಂದು ದಶಕದಿಂದ ನಮ್ಮ ದೇಶವೂ ಈ ದಾರಿಯಲ್ಲಿ ನಿಧಾನವಾಗಿ ಸಾಗುತ್ತಿದೆ ಎಂಬ ಗುಮಾನಿ ಹುಟ್ಟುತ್ತಿದೆ. ನಾನು ಈ ಲೇಖನ ಬರೆಯುತ್ತಿರುವ ದಿನಗಳಲ್ಲೇ ಭಾರತದ ಸುಪ್ರೀಂ ಕೋರ್ಟಿನಲ್ಲಿ ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೇ? ಅಥವಾ ಇಲ್ಲವೇ ಎಂಬ ವಿಚಾರಣೆ ನಡೆಯುತ್ತಿತ್ತು. ಅಲ್ಲಿ ದೇವಸ್ಥಾನದ ಪರವಾಗಿ ವಾದ ಮಾಡುತ್ತಿದ್ದ ವಕೀಲರು ಇದೇ ನಂಬಿಕೆಯನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದರು.
ಪ್ರೊ. ಪುಟ್ಟರಾಜು ಪಿ. ಬರಹ, ನಿಮ್ಮ ಓದಿಗೆ
ಕೆಲವು ದಿನಗಳ ಹಿಂದೆ ಬಿಡುವಿನ ವೇಳೆಯಲ್ಲಿ ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಸಂಧಾನ ಪ್ರಕ್ರಿಯೆ ವಿಫಲವಾದ ಕಾರಣಗಳ ಕುರಿತು ರಾ ಜತಾಂತ್ರಿಕರು ನಡೆಸುತ್ತಿದ್ದ ಚರ್ಚೆಯನ್ನು ಯೂಟ್ಯೂಬ್ನಲ್ಲಿ ವೀಕ್ಷಿಸುತ್ತಿದ್ದೆ. ಆ ಚರ್ಚೆ ಅತ್ಯಂತ ಗಂಭೀರ ಹಾಗೂ ವಿಶ್ಲೇಷಣಾತ್ಮಕ ಸ್ವರೂಪದ್ದಾಗಿತ್ತು. ಚರ್ಚೆ ಮುಗಿದ ತಕ್ಷಣ ಯೂಟ್ಯೂಬ್ನ ಪರದೆಯಲ್ಲಿ ಮತ್ತೊಂದು ಪಾಡ್ಕಾಸ್ಟ್ ಶಿಫಾರಸಾಗಿ ಕಾಣಿಸಿಕೊಂಡಿತು. ಅದರ ಶೀರ್ಷಿಕೆ ಹೀಗಿತ್ತು. ‘ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಇಂದಿನ ಸಂಘರ್ಷವು ಕೇವಲ ಸಮಕಾಲೀನ ರಾಜಕೀಯ ಬೆಳವಣಿಗೆಗಳ ಫಲವಲ್ಲ; ಸಾವಿರಾರು ವರುಷಗಳ ಹಿಂದೆ ನಡೆದ ವಿದ್ಯಮಾನಗಳು ಈ ಯುದ್ಧಕ್ಕೆ ಕಾರಣವಾಗಿವೆ ಮತ್ತು ಆ ಹಿನ್ನೆಲೆಯಲ್ಲೇ ಯುದ್ಧಕ್ಕೆ ಪರಿಹಾರವನ್ನು ಹುಡುಕಬೇಕಿದೆ’. ವಿಷಯ ವಿನ್ಯಾಸ ಮತ್ತು ವಿವರಣೆಯ ಶೈಲಿ ಕೇಳುಗರನ್ನು ಸುಲಭವಾಗಿ ಆಕರ್ಷಿಸುವಂತಿತ್ತು.
ಆ ಪಾಡ್ ಕಾಸ್ಟ್ನಲ್ಲಿ ಹೇಳಿದ್ದು…. ಯಹೂದಿ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳ ಪರಂಪರೆಯಲ್ಲಿ ಪಿತಾಮಹನಾಗಿ ಪರಿಗಣಿಸಲ್ಪಡುವ ಅಬ್ರಹಾಂ (Abraham) ಮೂಲತಃ ಬ್ಯಾಬಿಲೋನಿಯಾದ ಉರ್ (Ur) ಪ್ರದೇಶದವನಾಗಿದ್ದನು. ಈ ಪ್ರದೇಶವು ಇಂದಿನ ದಕ್ಷಿಣ ಇರಾಕ್ನಲ್ಲಿದೆ. ಧಾರ್ಮಿಕ ಪರಂಪರೆಯ ಪ್ರಕಾರ, ಅಬ್ರಹಾಂ ಅತ್ಯಂತ ದೈವಭಕ್ತನಾಗಿದ್ದು, ಅವನಿಗೆ ಒಂದು ದಿನ ದೈವಜ್ಞೆಯಾಗುತ್ತದೆ. ಆ ದೈವಜ್ಞೆ ಹೀಗಿದೆ… “ಅಬ್ರಾಹಂ ತನ್ನ ಕುಟುಂಬ ಮತ್ತು ಬಳಗದೊಂದಿಗೆ ಉರ್ ಪ್ರದೇಶವನ್ನು ತೊರೆದು ಪಶ್ಚಿಮ ದಿಕ್ಕಿನತ್ತ ಪ್ರಯಾಣಿಸಿ, ದೇವರು ವಾಗ್ದಾನ ಮಾಡಿದ ಭೂಮಿಯಾದ “ಪ್ರಾಮಿಸ್ಡ್ ಲ್ಯಾಂಡ್” (Promised Land) ಅಥವಾ “ಪವಿತ್ರ ಭೂಮಿ” (Holy Land) ಯಲ್ಲಿ ನೆಲೆಸಬೇಕು ಹಾಗೂ ಅಲ್ಲಿ ತನ್ನ ಸಂತತಿಯನ್ನು ವಿಸ್ತರಿಸಿ ಒಂದು ಸಮುದಾಯ ಅಥವಾ ರಾಜ್ಯದ ಸ್ಥಾಪನೆಗೆ ಕಾರಣನಾಗಬೇಕು”. ಈ ದೈವಿಕ ನಿರ್ದೇಶನದ ಅನ್ವಯ, ಅಬ್ರಹಾಂ ತನ್ನ ಕುಟುಂಬ ಸಮೇತ ಉರ್ ಪ್ರದೇಶವನ್ನು ತೊರೆದು ಕೆನಾನ್ (Canaan) ಪ್ರದೇಶಕ್ಕೆ ವಲಸೆ ಹೋದನು. ಈ ಕೆನಾನ್ ಪ್ರದೇಶವು ಇಂದಿನ ಇಸ್ರೇಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗಿವೆ.
ಸಂತಾನವಿಲ್ಲದ ಅಬ್ರಹಾಂ ತನ್ನ ಬಳಗವನ್ನು ಹೆಚ್ಚಿಸುವುದು ಹೇಗೆಂಬ ಚಿಂತೆಯಲ್ಲಿರುತ್ತಾನೆ. ದೇವರಿಂದ ವಾಗ್ದಾನಗೊಂಡ ಜನಾಂಗದ ಸ್ಥಾಪನೆ ಹೇಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಅವನ ಮನಸ್ಸನ್ನು ಕಾಡುತ್ತಿತ್ತು. ಅವನ ಪತ್ನಿಯಾದ ಸಾರಾ (Sarah) ದೀರ್ಘಕಾಲ ಸಂತಾನಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಆದಾಗ್ಯೂ, ಅವಳ ಪ್ರಾರ್ಥನೆಗಳಿಗೆ ತಕ್ಷಣ ಫಲ ದೊರಕದೆ, ಅವಳು ನಿಧಾನವಾಗಿ ನಿರಾಶೆ ಮತ್ತು ಅನುಮಾನಗಳಿಗೆ ಒಳಗಾಗುತ್ತಾಳೆ. ಆದರೆ ಅಬ್ರಹಾಂ ದೇವರ ಮೇಲಿನ ತನ್ನ ನಂಬಿಕೆಯನ್ನು ಕಳೆದುಕೊಳ್ಳದೆ, ಸಂತಾನಪ್ರಾಪ್ತಿಗಾಗಿ ನಿರಂತರವಾಗಿ ಪ್ರಾರ್ಥನೆ ಮತ್ತು ಭಕ್ತಿಭಾವದಲ್ಲಿ ನಿರತರಾಗಿದ್ದನು. ಇದೇ ಸಂದರ್ಭದಲ್ಲಿ ಅವನಿಗೆ ಮತ್ತೊಮ್ಮೆ ದೈವಿಕ ಸಂದೇಶ ಲಭಿಸುತ್ತದೆ. ಆ ದೈವವಾಣಿಯಲ್ಲಿ, ದೇವರು ಅಬ್ರಹಾಂಗೆ ಸಂತಾನ ಭಾಗ್ಯ ದೊರೆಯುವುದಾಗಿ ಹಾಗೂ ಅವನಿಗೆ ಒಬ್ಬ ಮಗುವನ್ನು ಕರುಣಿಸುವುದಾಗಿ ಭರವಸೆ ನೀಡುತ್ತಾನೆ.
ತನಗೆ ಅರವತ್ತು ವರ್ಷಗಳಾಗಿರುವುದರಿಂದ, ಮಕ್ಕಳಾಗುವ ಸಂಭವವೇ ಇಲ್ಲವೆಂದು ತಿಳಿದ ಸಾರಾ ಅಬ್ರಹಾಂನಿಗೆ ತಮ್ಮ ಮನೆಯಲ್ಲೇ ಇದ್ದ ಈಜಿಪ್ಟ್ ಮೂಲದ ಸೇವಕಿ ಹೆಗರ್ ಎಂಬುವಳ ಜೊತೆ ಕೂಡಿ ಮಗುವನ್ನು ಪಡೆ ಎಂದು ಸಲಹೆ ನೀಡುತ್ತಾಳೆ. ಈ ಸಲಹೆಗೆ ಒಪ್ಪಿದ ಅಬ್ರಹಾಂ, ಹೆಗರ್ ಮೂಲಕ ಒಬ್ಬ ಗಂಡು ಮಗುವಿನ ತಂದೆಯಾದನು. ಆ ಮಗುವಿಗೆ ಇಷ್ಮೇಲ್ (Ishmael) ಎಂದು ಹೆಸರು ಇಡಲಾಯಿತು. ಅಬ್ರಹಾಂಗೆ ಬಹುಕಾಲದ ನಂತರ ಸಂತಾನಪ್ರಾಪ್ತಿಯಾದ್ದರಿಂದ, ಈ ಘಟನೆ ಇಡೀ ಕುಟುಂಬ ಮತ್ತು ಬಳಗದಲ್ಲಿ ಸಂತೋಷದ ವಾತಾವರಣವನ್ನು ನಿರ್ಮಿಸಿತು. ಇಷ್ಮೇಲ್ ಎಲ್ಲರ ಪ್ರೀತಿಪಾತ್ರನಾಗಿ ಬೆಳೆದನು.
ಆದಾಗ್ಯೂ, ಹಲವು ವರ್ಷಗಳ ನಂತರ ಸಂತಾನಹೀನಳೆಂದು ಪರಿಗಣಿಸಲ್ಪಟ್ಟಿದ್ದ ಸಾರಾ ಕೂಡ ಒಬ್ಬ ಗಂಡು ಮಗುವಿಗೆ ಜನ್ಮ ನೀಡಿದಳು. ಈ ಘಟನೆಯನ್ನು ಅಬ್ರಹಾಂ ದೇವರ ಅನುಗ್ರಹ ಮತ್ತು ವಾಗ್ದಾನದ ಫಲವೆಂದುಕೊಂಡನು. ಆ ಮಗುವಿಗೆ ಐಸಾಕ್ (Isaac) ಎಂದು ಹೆಸರಿಸಲಾಯಿತು. ನಂತರ ಅಬ್ರಹಾಂ ತನ್ನ ಪತ್ನಿ ಸಾರಾಗೆ ಜನಿಸಿದ ಐಸಾಕ್ನನ್ನೇ ತನ್ನ ಅಧಿಕೃತ ಉತ್ತರಾಧಿಕಾರಿಯೆಂದು ಘೋಷಿಸಿದನು. ಈ ನಿರ್ಧಾರವು ಕುಟುಂಬದ ಒಳಾಂಗಣದಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು. ವಿಶೇಷವಾಗಿ ಸಾರಾ ಮತ್ತು ಹೆಗರ್ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗಿ, ಅದು ಸವತಿ ಮತ್ಸರದ ರೂಪ ತಾಳಿತು. ಒಂದು ಸಂದರ್ಭದಲ್ಲಿ ಸಾರಾ, ಹೆಗರ್ ಮತ್ತು ಅವಳ ಮಗ ಇಷ್ಮೇಲ್ ಕುಟುಂಬವನ್ನು ತೊರೆದು ದೂರ ಹೋಗಬೇಕೆಂದು ಆಜ್ಞಾಪಿಸುತ್ತಾಳೆ. ಈ ಪರಿಸ್ಥಿತಿಯಲ್ಲಿ ಅಬ್ರಹಾಂ ಅಸಹಾಯಕ ಸ್ಥಿತಿಗೆ ಒಳಗಾದರೂ, ಹೆಗರ್ ಮತ್ತು ಇಷ್ಮೇಲ್ ಅವರನ್ನು ಪೂರ್ವದ ದಿಕ್ಕಿನತ್ತ ತೆರಳಿ ತಮ್ಮದೇ ಸಮುದಾಯವನ್ನು ನಿರ್ಮಿಸಿಕೊಳ್ಳುವಂತೆ ಆಶೀರ್ವದಿಸಿ ಕಳುಹಿಸುತ್ತಾನೆ. ಹೀಗೆ ಪೂರ್ವದ ಕಡೆ ಹೋದ ಇಷ್ಮೇಲ್ ಮುಂದೆ ಅರಬ್ ಬುಡಕಟ್ಟು ಸಮುದಾಯಗಳ ನಾಯಕನಾಗುತ್ತಾನೆ.
ಕೆನಾನ್ ಪ್ರದೇಶದಲ್ಲಿ ತಂದೆಯಾದ ಅಬ್ರಹಾಂನೊಂದಿಗೆ ಉಳಿದಿದ್ದ ಐಸಾಕ್ (Isaac), ಅಬ್ರಹಾಂನ ಮರಣಾನಂತರ ಅಲ್ಲಿನ ಸಮುದಾಯ ಮತ್ತು ಬುಡಕಟ್ಟುಗಳ ನಾಯಕತ್ವವನ್ನು ವಹಿಸಿಕೊಳ್ಳುತ್ತಾನೆ. ಐಸಾಕ್ನ ನಂತರ ಅವನ ಮಗ ಜೇಕಬ್ (Jacob) ನಾಯಕತ್ವದ ಸ್ಥಾನವನ್ನು ಅಲಂಕರಿಸಿದನು. ಜೇಕಬ್ ಒಮ್ಮೆ ದೈವದ ಜೊತೆಗಿನ ಹೋರಾಟದಲ್ಲಿ ಜಯ ಸಾಧಿಸಿ “ಇಸ್ರೇಲ್” (Israel) “ಇಸ್ರೇಲ್” ಎಂದು ಬಿರುದಾಂಕಿತನಾಗುತ್ತಾನೆ. “ಇಸ್ರೇಲ್” ಪದದ ಅರ್ಥ “ದೈವದೊಂದಿಗೆ ಹೋರಾಡಿದವ” ಅಥವಾ “ದೈವದ ಕೃಪೆಯಿಂದ ಜಯಶಾಲಿಯಾದವ” ಎಂದು. ಬಳಿಕ ಜೇಕಬ್ನ ಸಂತತಿಯನ್ನು “ಇಸ್ರೇಲರು” (Israelites) ಎಂದು ಕರೆಯಲಾಯಿತು.
ಜೇಕಬ್ಗೆ ಹನ್ನೆರಡು ಪುತ್ರರು. ನಂತರದ ಪರಂಪರೆಯಲ್ಲಿ, ಈ ಹನ್ನೆರಡು ಪುತ್ರರು ಇಸ್ರೇಲಿನ ಹನ್ನೆರಡು ಪಂಗಡಗಳ (Twelve Tribes of Israel) ಮೂಲ ನಾಯಕರಾಗಿ ಗುರುತಿಸಲ್ಪಟ್ಟರು. ಇವರು “ವಾಗ್ದಾನಗೊಂಡ ಭೂಮಿ” ಅಥವಾ “ಪವಿತ್ರ ಭೂಮಿ”ಯಾದ ಕೆನಾನ್ ಪ್ರದೇಶದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿದರು. ಈ ರೀತಿಯಾಗಿ, ಅಬ್ರಹಾಂನ ಇಬ್ಬರು ಪುತ್ರರಾದ ಇಷ್ಮೇಲ್ ಮತ್ತು ಐಸಾಕ್, ಕ್ರಮವಾಗಿ ಎರಡು ವಿಭಿನ್ನ ಧಾರ್ಮಿಕ-ಸಾಂಸ್ಕೃತಿಕ ಸಮುದಾಯಗಳ ಮೂಲಪುರುಷರಾಗಿ ಪರಿಗಣಿಸಲ್ಪಟ್ಟರು. ಪರಂಪಾರಿಕಾ ಇಸ್ಲಾಮಿಕ್ ಹಾಗೂ ಅರಬ್ ವಂಶಾವಳಿಗಳ ಪ್ರಕಾರ, ಇಷ್ಮೇಲ್ ಅರಬ್ ಬುಡಕಟ್ಟು ಸಮುದಾಯಗಳ ಪೂರ್ವಜನೆಂದು ಗುರುತಿಸಲ್ಪಟ್ಟಿದ್ದಾನೆ. ಅದೇ ವೇಳೆ, ಯಹೂದಿ ಪರಂಪರೆಯಲ್ಲಿ ಐಸಾಕ್ ಮತ್ತು ಅವನ ಸಂತತಿ ಇಸ್ರೇಲರ ಮೂಲವಂಶವೆಂದು ಪರಿಗಣಿಸಲಾಗಿದೆ. ಇದು ಇಂದಿನ ಅರಬ್–ಇಸ್ರೇಲ್ ವೈಷಮ್ಯದ ಮೊದಲ ಕಿಡಿ ಎನ್ನಬಹುದು.
ಈ ಕಥೆಯನ್ನು ನಾನು ಹಲವು ಬಾರಿ ಕೇಳಿದ್ದೂ ಹಾಗೂ ಓದಿದ್ದೂ ಇದ್ದರೂ, ಇತ್ತೀಚಿನ ಪಾಡ್ಕಾಸ್ಟ್ನ್ನು ಆಲಿಸಿದ ನಂತರ ಅದರ ಐತಿಹಾಸಿಕ ಮತ್ತು ಧಾರ್ಮಿಕ ಸತ್ಯಾಸತ್ಯತೆಗಳನ್ನು ಪರಿಶೀಲಿಸುವ ಉದ್ದೇಶದಿಂದ ವಿಷಯವನ್ನು ಆಳವಾಗಿ ಅಧ್ಯಯನ ಮಾಡುವ ಅವಕಾಶ ದೊರಕಿತು. ಆ ಪರಿಶೀಲನೆಯ ವೇಳೆ ಗಮನಕ್ಕೆ ಬಂದ ಸಂಗತಿಯೇನೆಂದರೆ, ಪಾಡ್ಕಾಸ್ಟ್ನಲ್ಲಿ ನಿರೂಪಿಸಲಾದ ಬಹುತೇಕ ವಿಷಯಗಳು ಬೈಬಲ್ನ “ಬುಕ್ ಆಫ್ ಜೆನೆಸಿಸ್” (Book of Genesis) ಹಾಗೂ “ಓಲ್ಡ್ ಟೆಸ್ಟಮೆಂಟ್” (Old Testament) ಅಥವಾ ಹೀಬ್ರೂ ಬೈಬಲ್ನಲ್ಲಿ ಕಾಣಿಸಿಕೊಳ್ಳುವ ಕಥನಗಳನ್ನು ಆಧರಿಸಿವೆ. ಪಾಡ್ಕಾಸ್ಟ್ನ ನಿರೂಪಕರು ಮತ್ತು ಸ್ಕ್ರಿಪ್ಟ್ ಬರೆದವರು ಧಾರ್ಮಿಕ ಗ್ರಂಥಗಳಲ್ಲಿನ ಅಧ್ಯಾಯಗಳು ಮತ್ತು ವಚನಗಳ ಉಲ್ಲೇಖಗಳನ್ನು ಬಳಸಿ, ವಿಷಯವನ್ನು ಶ್ರೋತೃಗಳಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಧಾರ್ಮಿಕ ಕಥನಗಳನ್ನು ಆಧರಿಸಿದ ಅನೇಕ ಪಾಡ್ಕಾಸ್ಟ್ಗಳು, ಉಪನ್ಯಾಸಗಳು ಹಾಗೂ ಡಿಜಿಟಲ್ ವಿಷಯಗಳು ಇಂದಿನ ಮಾಧ್ಯಮ ಜಗತ್ತಿನಲ್ಲಿ ಸುಲಭವಾಗಿ ಲಭ್ಯವಾಗುತ್ತವೆ. ವಿವಿಧ ವಿದ್ವಾಂಸರು ಮತ್ತು ವ್ಯಾಖ್ಯಾನಕಾರರು ಈ ಕಥೆಗಳನ್ನು ತಮ್ಮದೇ ಆದ ಧಾರ್ಮಿಕ, ಸಾಂಸ್ಕೃತಿಕ ಅಥವಾ ರಾಜಕೀಯ ದೃಷ್ಟಿಕೋಣಗಳಿಂದ ವಿಶ್ಲೇಷಿಸಿದ್ದು, ಕೆಲವು ಸಂದರ್ಭಗಳಲ್ಲಿ ಉಪಕಥೆಗಳು ಮತ್ತು ಜನಪ್ರಿಯ ನಿರೂಪಣೆಗಳನ್ನೂ ಸೇರಿಸಿದ್ದಾರೆ. ಇದರೊಂದಿಗೆ, ದೃಶ್ಯಮಾಧ್ಯಮಗಳು—ವಿಶೇಷವಾಗಿ ಅನಿಮೇಷನ್ಗಳು, ಚಿತ್ರಣಗಳು ಮತ್ತು ಚಲನಚಿತ್ರಗಳು—ಈ ಕಥನಗಳನ್ನು ಹೆಚ್ಚು ಭಾವನಾತ್ಮಕ ಮತ್ತು ಆಕರ್ಷಕ ರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸಿವೆ. ಇಂತಹ ಮರುನಿರೂಪಣೆಗಳು ಧಾರ್ಮಿಕ ಗುರುತು ಮತ್ತು ಸ್ಮೃತಿಗಳನ್ನು ಬಲಪಡಿಸುವ ಕಾರ್ಯವನ್ನೂ ಮಾಡುವಲ್ಲಿ ಯಶಸ್ವಿಯಾಗಿ, ಅರಬ್ – ಇಸ್ರೇಲ್ ಗಳ ವೈಷಮ್ಯವನ್ನು ಹೆಚ್ಚಿಸುವಂತೆ ಮಾಡುತ್ತಿವೆ. ಈ ವೈಷಮ್ಯದಲ್ಲಿ ಒಂದು ಮಾದರಿ (pattern) ಕಾಣುತ್ತಿದೆ. ಆ ಮಾದರಿ ಅರಬ್ ಇಸ್ರೇಲಿಗಳನ್ನು ಒಂದಾಗಲು ಬಿಡದೇ, ಎಲ್ಲಾ ಕಾಲದಲ್ಲೂ ಹಗೆತನ ಸಾಧಿಸುವ ಪ್ರಕ್ರಿಯೆಯಾಗಿ, “ನಾವು” ಮತ್ತು “ಅವರು” ಎಂಬ ವಿಭಜನೆಯ ಮನೋಭಾವವನ್ನು ಬಲಪಡಿಸುವ ಅಸ್ತ್ರವಾಗಿ ವಿವಿಧ ಕಾಲಘಟ್ಟಗಳಲ್ಲಿ ಮರುಕಳಿಸುತ್ತಿರುವುದನ್ನು ಗಮನಿಸಬಹುದು. ಇದರ ಪರಿಣಾಮವಾಗಿ, ಪರಸ್ಪರ ವಿರೋಧ ಮತ್ತು ಹಗೆತನಗಳು ಸಾಮಾಜಿಕ ಹಾಗೂ ರಾಜಕೀಯ ವಲಯಗಳಲ್ಲಿ ನಿರಂತರವಾಗಿ ಪುನರುತ್ಪಾದನೆಯಾಗುತ್ತಿವೆ.
ಈಗ ಈ ಕಥನಗಳಲ್ಲಿ ಪುನರಾವರ್ತಿತವಾಗಿ ಕಾಣಿಸಿಕೊಳ್ಳುವ ಕೆಲವು ನಿರ್ದಿಷ್ಟ ಮಾದರಿಗಳನ್ನು (patterns) ನೋಡೊಣ. ಧಾರ್ಮಿಕ ಗ್ರಂಥಗಳ ಮೂಲಕ ರೂಪುಗೊಂಡಿರುವ ಇವುಗಳನ್ನು ಕೇವಲ ಧಾರ್ಮಿಕ ಕಥೆಗಳೆಂದು ಮಾತ್ರವಲ್ಲದೆ, ಸಮುದಾಯಗಳ ಐತಿಹಾಸಿಕ ಸ್ಮೃತಿ ಮತ್ತು ಗುರುತು ನಿರ್ಮಾಣದ ಭಾಗವೆಂದೂ ಪರಿಗಣಿಸಬಹುದು.
ಮಾದರಿ ಒಂದು – ದೈವವಾಣಿ ಮತ್ತು ದೈವಿಕ ನಿಯತಿ
ಅಬ್ರಹಾಂನ ಜೀವನದ ಪ್ರಮುಖ ತಿರುವುಗಳೆಲ್ಲವೂ ದೈವವಾಣಿಗಳ ಮೂಲಕ ನಿರ್ಧರಿಸಲ್ಪಟ್ಟಂತೆ ಕಥನ ರೂಪುಗೊಂಡಿದೆ. ಉರ್ ಪ್ರದೇಶವನ್ನು ತೊರೆದು ಕೆನಾನ್ಗೆ ತೆರಳುವ ನಿರ್ದೇಶನವಾಗಲಿ, ಸಾರಾಳಿಗೆ ಸಂತಾನ ಭಾಗ್ಯ ದೊರೆಯುವುದಾಗಿ ನೀಡಲಾದ ಭರವಸೆಯಾಗಲಿ, ಅಥವಾ ಐಸಾಕ್ನ ಬಲಿಯ ಘಟನೆಯಲ್ಲಿ ಕೊನೆಯ ಕ್ಷಣದಲ್ಲಿ ದೈವಿಕ ಹಸ್ತಕ್ಷೇಪವಾಗಲಿ—ಎಲ್ಲವೂ ದೇವರ ಇಚ್ಛೆ ಮತ್ತು ದೈವಾನುಗ್ರಹದಿಂದ ನಡೆಯುತ್ತಿವೆ ಎಂಬ ಸಂದೇಶವನ್ನು ಒತ್ತಿ ಹೇಳುತ್ತವೆ. ಇದರ ಮೂಲಕ “ದೇವರು ತನ್ನ ಭಕ್ತರನ್ನು ಪರೀಕ್ಷಿಸುತ್ತಾನೆ; ಆದರೆ ಅಂತಿಮವಾಗಿ ತನ್ನ ವಾಗ್ದಾನವನ್ನು ನೆರವೇರಿಸುತ್ತಾನೆ” ಎಂಬ ಧಾರ್ಮಿಕ ತತ್ತ್ವವನ್ನು ಬಲಪಡಿಸಲಾಗಿದೆ. ಇದಕ್ಕೆ ಉದಾಹರಣೆ ಸಾರಾಳಿಗೆ ತೊಂಬತ್ತು ವರ್ಷ ಹಾಗೂ ಅಬ್ರಹಾಂಗೆ ನೂರು ವರ್ಷವಾಗಿದ್ದಾಗ ಐಸಾಕ್ ಜನಿಸಿದನೆಂಬ ಕಥನ ಈ ದೈವಿಕ ಅಸಾಧ್ಯತೆಯ ಕಲ್ಪನೆಯನ್ನು ಮತ್ತಷ್ಟು ಗಾಢಗೊಳಿಸುತ್ತದೆ.
ಮಾದರಿ ಎರಡು – ಭೌಗೋಳಿಕ ಸ್ಥಳಾಂತರ ಮತ್ತು ‘ವಾಗ್ದಾನಗೊಂಡ ಭೂಮಿ’(Promised Land) ಯ ಕಲ್ಪನೆ
ಅಬ್ರಹಾಂನ ಮೂಲ ನೆಲೆ ಉರ್ ಪ್ರದೇಶವಾಗಿದ್ದು, ಅದು ಇಂದಿನ ದಕ್ಷಿಣ ಇರಾಕ್ನೊಂದಿಗೆ ಗುರುತಿಸಲ್ಪಡುತ್ತದೆ. ಇರಾಕ್ ಇಂದು ಅರಬ್ಬರ ನಾಡು. ಧಾರ್ಮಿಕ ಕಥನದಲ್ಲಿ, ದೈವದ ನಿರ್ದೇಶನದಂತೆ ಅಬ್ರಹಾಂ “ವಾಗ್ದಾನಗೊಂಡ ಭೂಮಿ”ಯಾದ ಕೆನಾನ್ ಪ್ರದೇಶಕ್ಕೆ ವಲಸೆ ಹೋಗುತ್ತಾನೆ. ಆ ಭೂಭಾಗ ಇಂದಿನ ಇಸ್ರೇಲ್. ಈ ರೀತಿಯ ನಿರೂಪಣೆ ಒಂದು ನಿರ್ದಿಷ್ಟ ಭೂಭಾಗವನ್ನು ದೈವಿಕವಾಗಿ ಆಯ್ಕೆಯಾದ ಸ್ಥಳವೆಂದು ಚಿತ್ರಿಸುತ್ತದೆ.

ಮಾದರಿ ಮೂರು – ಇಷ್ಮೇಲ್ ಮತ್ತು ಐಸಾಕ್ ನಡುವಿನ ಪ್ರತೀಕಾತ್ಮಕ ವಿಭಜನೆ
ಈಜಿಪ್ಟ್ ಮೂಲದ ಸೇವಕಿ ಹೆಗರ್ ಮೂಲಕ ಜನಿಸಿದ ಇಷ್ಮೇಲ್ ಮತ್ತು ಸಾರಾ ಮೂಲಕ ಜನಿಸಿದ ಐಸಾಕ್ ನಡುವೆ ಆರಂಭದಿಂದಲೇ ವಿಭಿನ್ನ ಸ್ಥಾನಮಾನ ನಿರ್ಮಿಸಲ್ಪಟ್ಟಿದೆ. ಧಾರ್ಮಿಕ ಕಥನಗಳಲ್ಲಿ, ದೇವರ ವಾಗ್ದಾನದ ಸಂತಾನವಾಗಿ ಐಸಾಕ್ಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಇದರಿಂದ ಇಷ್ಮೇಲ್ ಮತ್ತು ಐಸಾಕ್ಗಳ ವಂಶಪಾರಂಪರ್ಯಗಳ ನಡುವೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯತ್ಯಾಸದ ಕಲ್ಪನೆ ರೂಪುಗೊಂಡಿವೆ.
ಮಾದರಿ ನಾಲ್ಕು – ಎರಡು ವಿಭಿನ್ನ ಸಮುದಾಯಗಳ ಮೂಲವಂಶ ಕಥನ
ಧಾರ್ಮಿಕ ಪರಂಪರೆಯ ಪ್ರಕಾರ, ಇಷ್ಮೇಲ್ ಅರಬ್ ಸಮುದಾಯಗಳ ಪೂರ್ವಜನೆಂದು, ಐಸಾಕ್ ಇಸ್ರೇಲರ ಮೂಲಪುರುಷನೆಂದು ಪರಿಗಣಿಸಲ್ಪಟ್ಟಿದ್ದಾನೆ. ಈ ರೀತಿಯ ವಂಶವಾಹಕ ಕಥನಗಳು ನಂತರದ ಕಾಲದಲ್ಲಿ ಸಮುದಾಯಗಳ ಐತಿಹಾಸಿಕ ಗುರುತಿನ ಭಾಗವಾಗಿ ರೂಪತಾಳಿದೆ.
ಮಾದರಿ ಐದು – ಸಹೋದರತ್ವ ಮತ್ತು ಸಂಘರ್ಷದ ಕಲ್ಪನೆ
ಇಷ್ಮೇಲ್ ಮತ್ತು ಐಸಾಕ್ ಒಂದೇ ತಂದೆಯ ಮಕ್ಕಳು ಎಂಬುದರೊಂದಿಗೆ, ಅವರ ಸಂತತಿಗಳ ನಡುವೆ ಭಿನ್ನತೆ ಮತ್ತು ಸ್ಪರ್ಧೆಯ ಕಥನವನ್ನೂ ರೂಪಿಸಲಾಗಿದೆ. ಈ ಕಥನ ಮಾದರಿ, ನಂತರದ ಅರಬ್–ಇಸ್ರೇಲ್ ಸಂಬಂಧಗಳನ್ನು “ಸಹೋದರ ಸಮುದಾಯಗಳ ನಡುವಿನ ದೀರ್ಘಕಾಲದ ವೈಷಮ್ಯ” ಎಂಬ ಪ್ರತೀಕಾತ್ಮಕ ರೂಪದಲ್ಲಿ ಅರ್ಥೈಸಲು ಬಳಸಲ್ಪಟ್ಟಿದೆ.
ಮಾದರಿ ಆರು – ಹನ್ನೆರಡು ಪಂಗಡಗಳು ಮತ್ತು ‘ಪವಿತ್ರ ಭೂಮಿ’
ಜೇಕಬ್ನ ಹನ್ನೆರಡು ಪುತ್ರರು ಇಸ್ರೇಲಿನ ಹನ್ನೆರಡು ಪಂಗಡಗಳ ನಾಯಕರಾದರೆಂದು ಪರಿಗಣಿಸಲಾಗುತ್ತದೆ. ಈ ಕಥನದ ಮೂಲಕ “ವಾಗ್ದಾನಗೊಂಡ ಭೂಮಿ”ಯ ಮೇಲಿನ ಇಸ್ರೇಲರ ಧಾರ್ಮಿಕ-ಐತಿಹಾಸಿಕ ಹಕ್ಕಿನ ಕಲ್ಪನೆ ರೂಪುಗೊಳ್ಳುತ್ತದೆ. ಆದರೆ ಇಂದು ಪವಿತ್ರ ಭೂಮಿಯಲ್ಲಿರುವ ದೇಶಗಳೆಲ್ಲ ಮುಸ್ಲಿಂ ರಾಷ್ಟ್ರಗಳು, ಇಸ್ರೇಲನ್ನು ಬಿಟ್ಟು.
ಮಾದರಿ ಏಳು – ಈಜಿಪ್ಟ್ ಮತ್ತು ಅರಬ್ ಪರಂಪರೆಯ ಸಂಬಂಧ
ಹೆಗರ್ ಈಜಿಪ್ಟಿನ ಮೂಲದವಳಾಗಿದ್ದು, ಇಷ್ಮೇಲ್ ಕೂಡ ನಂತರದಲ್ಲಿ ಈಜಿಪ್ಟಿನ ಮಹಿಳೆಯನ್ನು ವಿವಾಹವಾಗುತ್ತಾನೆ ಎಂಬ ಉಲ್ಲೇಖಗಳು, ಇಸ್ರೇಲ್ ಮತ್ತು ಈಜಿಪ್ಟಿನ ನಡುವಿನ ಸಂಬಂಧ ಇಂದಿನ ಧಾರ್ಮಿಕ ಗುರುತಿನೊಂದಿಗೆ ಜೋಡಣೆಯಾಗಿದೆ. ಈಜಿಪ್ಟ್ ಇಂದು ಮುಸ್ಲಿಂ ರಾಷ್ಟ್ರ.
ಈ ರೀತಿಯ ಧಾರ್ಮಿಕ ಕಥನಗಳ ನಿರೂಪಣೆಯನ್ನು ಗಮನಿಸಿದಾಗ, ಅರಬ್ ಮತ್ತು ಇಸ್ರೇಲಿ ಸಮುದಾಯಗಳ ನಡುವಿನ ವೈಷಮ್ಯವು ಬಹುಕಾಲದಿಂದಲೂ ಅನಿವಾರ್ಯ ಮತ್ತು ಐತಿಹಾಸಿಕವಾಗಿ ಪೂರ್ವನಿರ್ಧರಿತವೆಂಬ ಭಾವನೆಯನ್ನು ನಿರ್ಮಿಸುವ ರೀತಿಯಲ್ಲಿ ಕಥೆಗಳು ರೂಪುಗೊಂಡಿವೆ. ವಿಶೇಷವಾಗಿ ಅಬ್ರಹಾಂನ ಸಂತತಿಗೆ ದೇವರು ನೀಡಿದ “ವಾಗ್ದಾನಗೊಂಡ ಭೂಮಿ” ಎಂಬ ನಂಬಿಕೆ, ಇಸ್ರೇಲ್ ಭೂಪ್ರದೇಶದ ಮೇಲಿನ ಹಕ್ಕಿನ ಪ್ರಶ್ನೆಯಲ್ಲಿ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶವಾಗಿ ಕಾರ್ಯನಿರ್ವಹಿಸಿದೆ. ಹಾಗೆ “ವಾಗ್ದಾನಗೊಂಡ ಭೂಮಿ”ಯ ಕಲ್ಪನೆ, ಆ ಭೂಭಾಗದ ಮೇಲೆ ದೈವಿಕ ಹಕ್ಕು ಮತ್ತು ಧಾರ್ಮಿಕ ಮಾನ್ಯತೆಯ ಭಾವನೆಯನ್ನು ಬಲಪಡಿಸುತ್ತದೆ. ಮತ್ತೊಂದೆಡೆ, ಪ್ಯಾಲೆಸ್ಟೀನಿಯರು ತಮ್ಮ ಐತಿಹಾಸಿಕ ವಾಸಸ್ಥಳ ಮತ್ತು ರಾಜಕೀಯ ಹಕ್ಕುಗಳ ಆಧಾರದ ಮೇಲೆ ಅದೇ ಭೂಮಿಯ ಮೇಲೆ ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಾರೆ. ಈ ವಿಷಯದಲ್ಲಿ ವಿಶ್ವಸಂಸ್ಥೆ (United Nations) ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಭೂವಿಭಜನೆ, ಎರಡು ರಾಷ್ಟ್ರಗಳ ಪರಿಹಾರ (Two-State Solution) ಮತ್ತು ಶಾಂತಿ ಮಾತುಕತೆಗಳ ಪರವಾಗಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದರೂ, ಧಾರ್ಮಿಕ ನಂಬಿಕೆಗಳು ರಾಷ್ಟ್ರೀಯತೆ ಮತ್ತು ಐತಿಹಾಸಿಕ ಸ್ಮೃತಿಗಳು ಸಂಘರ್ಷವನ್ನು ಸಂಕೀರ್ಣಗೊಳಿಸುತ್ತಲೇ ಬಂದಿವೆ.
ಈಗ ನಮ್ಮ ಮುಖ್ಯ ಪ್ರಶ್ನೆಗೆ ಬರೋಣ. ಈ ಕತೆಗಳನ್ನು ನಂಬಬೇಕೇ? ಅವರವರ ನಂಬಿಕೆ ಅವರದೂ ಎನ್ನುವಂತಿಲ್ಲ. ಏಕೆಂದರೆ ಬಹು ಜನರ ನಂಬಿಕೆ ನಿಜವೆನಿಸುತ್ತದೆ. ಓಲ್ಡ್ ಟೆಸ್ಟಮೆಂಟ್ ಅಥವಾ ಹೀಬ್ರೂ ಬೈಬಲ್ ನನ್ನು ಬರೆದಿದ್ದು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ, ಹೀಬ್ರೂ ಭಾಷೆಯಲ್ಲಿ. ಅಂದರೆ ಹೀಬ್ರೂ ಭಾಷಾ ಪಂಡಿತನೇ ತನ್ನ ಕಲ್ಪನೆ, ಊಹೆ, ಮತ್ತು ಭಾವನೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಹಿಗ್ಗಿಸಿ ಬರೆದಿದ್ದಾನೆ ಎಂದಾಯಿತು. ಅದು ಸಹಜವೆ. ಅಬ್ರಹಾಂ, ಸಾರಾ ಮತ್ತು ಹೆಗರ್, ಇಷ್ಮೇಲ್, ಐಸಾಕ್ ಮತ್ತು ಜೇಕಬ್ ನಿಜವಾದ ವ್ಯಕ್ತಿಗಳೇ ಅಥವಾ ಕಾಲ್ಪನಿಕವೋ ಗೊತ್ತಿಲ್ಲ. ನಿಜವೆಂದೇ ನಂಬಿದವರಿಗೆ ನಿಜವಾಗಿಯೂ, ಇಲ್ಲ ಎಂದವರಿಗೆ ಇಲ್ಲವಾಗಿಯೂ ಗೋಚರಿಸುತ್ತದೆ. ಆದರೆ ಅಲ್ಲಿ ಸೂಚಿತ ಭೌಗೋಳಿಕ ಪ್ರದೇಶಗಳೆಲ್ಲವೂ ನಮ್ಮ ಕಣ್ಮುಂದೆ ಇಂದು ಬೆಂಕಿ ಹೊತ್ತಿ ಉರಿಯುತ್ತಿರುವ ದೇಶಗಳಾಗಿವೆ. ಉದಾಹರಣೆಗೆ ಅಬ್ರಹಾಂ ಉರ್ (Ur) ಪ್ರದೇಶವನ್ನು (ಇಂದಿನ ದಕ್ಷಿಣ ಇರಾಕ್) ಬಿಟ್ಟು ಪಶ್ಚಿಮಕ್ಕೆ ಸಂಚರಿಸಿ ನೆಲೆಯೂರಿದ ಭೂಮಿ ದೈವ ‘ವಾಗ್ದಾನ ಮಾಡಿದ ಭೂಮಿ’ (Promised Land) ಅಥವಾ ‘ಪವಿತ್ರ ಭೂಮಿ’ (Holy Land) ಕೆನನ್. (Canaan) ಅದು ಇಂದಿನ ಇಸ್ರೇಲ್ ಇರುವ ಪ್ರದೇಶದಷ್ಟೇ ಅಲ್ಲದೆ, ಪ್ಯಾಲೆಸ್ಟೈನ್, ಜೋರ್ಡಾನ್, ಸಿರಿಯಾ, ಲೆಬನಾನ್, ಗಾಝಾ, ವೆಸ್ಟ್ ಬ್ಯಾಂಕ್ ಪ್ರದೇಶಗಳನ್ನು ಒಳಗೊಳ್ಳುತ್ತದೆ. ಅಂದರೆ ಓಲ್ಡ್ ಟೆಸ್ಟಮೆಂಟ್ನಲ್ಲಿ ನಮೂದಿಸಲಾಗಿರುವ ‘ಪವಿತ್ರ ಭೂಮಿ’ (Promised Land) ಇಂದಿನ ಇಸ್ರೇಲ್ ಮತ್ತು ಅದರ ಸುತ್ತಲಿರುವ ಪ್ರದೇಶಗಳು ಎಂದು ಭೌಗೋಳಿಕವಾಗಿ ದೃಢವಾಯಿತು. ಈ ಪ್ರದೇಶಗಳನ್ನೇ ಇಂದು ಮಧ್ಯಪ್ರಾಚ್ಯ (Middle East) ಎಂದು ಕರೆಯಲಾಗಿದೆ. ಇತಿಹಾಸಕಾರರು ಓಲ್ಡ್ ಟೆಸ್ಟಮೆಂಟ್ ನಲ್ಲಿ ನಮೂದಿಸಲಾಗಿರುವ ಘಟನೆಗಳನ್ನು ಐತಿಹಾಸಿಕ ಎಂದು ಒಪ್ಪಿಲ್ಲ. ಬದಲಾಗಿ ಬಿಬ್ಲಿಕಲ್ ಕತೆಗಳೆಂದೇ (Biblical Stories) ಕರೆದಿದ್ದಾರೆ. ಆದರೆ ಇತಿಹಾಸಕಾರರ ಮಾತುಗಳನ್ನು ಕೇಳುವವರಾರು?
ಇಂದು ಶೇಕಡಾ ಎಂಬತ್ತಕ್ಕೂ ಹೆಚ್ಚು ಇಸ್ರೇಲಿಗಳು ಇದನ್ನು ನಂಬಿದ್ದಾರೆ. ಆ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಭಾಷಣಗಳಲ್ಲೆಲ್ಲಾ ಓಲ್ಡ್ ಟೆಸ್ಟಮೆಂಟ್ನಲ್ಲಿ ನಮೂದಿಸಲಾಗಿರುವ ಕೆನನ್ ಪ್ರದೇಶ (ಪವಿತ್ರ ಭೂಮಿ) ಗಳಾದ ಪ್ಯಾಲೆಸ್ಟೈನ್, ಜೋರ್ಡಾನ್, ಸಿರಿಯಾ, ಲೆಬನಾನ್, ಗಾಝಾ, ವೆಸ್ಟ್ ಬ್ಯಾಂಕ್ ಪ್ರದೇಶಗಳನ್ನು ‘ಗ್ರೇಟರ್ ಇಸ್ರೇಲ್’ ಎಂದು ಘೋಷಿಸಿಕೊಂಡಿದ್ದಾರೆ ಮತ್ತು ಪವಿತ್ರ ಭೂಮಿಯ ಮೇಲೆ ಇಸ್ರೇಲಿಗರಲ್ಲದೆ ಬೇರೆಯವರಾರಿಗೂ ಹಕ್ಕಿಲ್ಲವೆಂದೂ ತಮ್ಮ ಹಕ್ಕನ್ನು ಮಂಡಿಸಿದ್ದಾರೆ ಮತ್ತು ಪವಿತ್ರ ಭೂಮಿಯನ್ನು ಪಡೆಯಲು ತಮ್ಮ ಪ್ರಾಣ ಕೊಡಲೂ ಸಿದ್ಧರಾಗಿ ಎಂದು ಕರೆ ನೀಡಿದ್ದಾರೆ. ಇಲ್ಲದಿದ್ದರೆ ಅಮೇರಿಕ ಇರಾನ್ ದೇಶದ ಮೇಲೆ ಯುದ್ಧ ಸಾರಿದಾಗ, ಇಸ್ರೇಲ್ ಏಕೆ ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ? ಕಳೆದ ಒಂದು ವರ್ಷದಿಂದ ಪ್ಯಾಲೆಸ್ಟೈನ್ ಗಾಝಾ ಪ್ರದೇಶ ಮೇಲೆ ಬಾಂಬುಗಳ ಮಳೆಯನ್ನೇ ಸುರಿಸಿ ಆ ಪ್ರದೇಶವನ್ನೇ ಇಲ್ಲವಾಗಿಸಿರುವ ಇಸ್ರೇಲಿ ಸೈನಿಕರ ಉದ್ದೇಶವೇನು? ಪ್ಯಾಲೆಸ್ಟೈನ್ಗೆ ಸೇರಿದ ವೆಸ್ಟ್ ಬ್ಯಾಂಕ್ ಪ್ರದೇಶಕ್ಕೆ ಇಸ್ರೇಲಿಗಳು ತಮ್ಮ ಸರ್ಕಾರದ ಸಹಕಾರದಿಂದ ಅಕ್ರಮವಾಗಿ ನುಸುಳಿ ನೆಲೆಗೊಳ್ಳುತ್ತಿರುವುದು ಏಕೆ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಬೆಂಜಮಿನ್ ನೆತನ್ಯಾಹು ತಲೆಯೊಳಗಿದೆ. ಅದೇ ‘ಗ್ರೇಟರ್ ಇಸ್ರೇಲ್’ ನನ್ನು ಸಾಕಾರಗೊಳಿಸುವುದು. ಆದರೆ ಆ ಪ್ರದೇಶಗಳಲ್ಲಿರುವ ಇಸ್ರೇಲಿಗಳಲ್ಲದವರು ಎಲ್ಲಿ ಹೋಗುವುದು? ಈ ಪ್ರಶ್ನೆಗೆ ಉತ್ತರವಿಲ್ಲ!!! ಕಾರಣ ಹೋಗಲು ಬೇರೆ ಜಾಗಗಳು ಇಲ್ಲದಿರುವುದು.
ಓಲ್ಡ್ ಟೆಸ್ಟಮೆಂಟ್ ಅಥವಾ ಹೀಬ್ರೂ ಬೈಬಲ್ನಂತಹ ಧಾರ್ಮಿಕ ಗ್ರಂಥಗಳನ್ನು ಕೇವಲ “ತಪ್ಪು” ಅಥವಾ “ಸುಳ್ಳು” ಎಂದು ತಳ್ಳಿಹಾಕುವುದು ಸಮಂಜಸವಾಗುವುದಿಲ್ಲ. ಏಕೆಂದರೆ ಪ್ರಪಂಚದ ಬಹುತೇಕ ಪ್ರಾಚೀನ ನಾಗರಿಕತೆಗಳ ಸಾಹಿತ್ಯ ಮತ್ತು ಪುರಾಣಗಳಲ್ಲಿ ದೈವಿಕ ಹಸ್ತಕ್ಷೇಪ, ಅದ್ಭುತ ಘಟನೆಗಳು, ವೀರಗಾಥೆಗಳು ಹಾಗೂ ಅತಿರಂಜಿತ ಕಥನಗಳು ಸಾಮಾನ್ಯ ಲಕ್ಷಣಗಳಾಗಿವೆ. ಭಾರತೀಯ ಪುರಾಣ ಸಾಹಿತ್ಯ, ಗ್ರೀಕ್ ಮಹಾಕಾವ್ಯಗಳು, ರೋಮನ್ ಪೌರಾಣಿಕ ಕಥೆಗಳು ಮತ್ತು ಮೆಸೊಪೊಟೇಮಿಯನ್ ಪರಂಪರೆಗಳಲ್ಲಿಯೂ ಇದೇ ರೀತಿಯ ಕಲ್ಪನಾತ್ಮಕ ಹಾಗೂ ಧಾರ್ಮಿಕ ನಿರೂಪಣೆಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತವೆ. ಆದರೆ, ಇಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆಯೇನೆಂದರೆ—ಇಂತಹ ಪುರಾತನ ಧಾರ್ಮಿಕ ಕಥನಗಳನ್ನು ಆಧುನಿಕ ಕಾಲಘಟ್ಟದಲ್ಲಿ ನೇರವಾಗಿ ರಾಜಕೀಯ ಮತ್ತು ರಾಷ್ಟ್ರರಾಜ್ಯದ ನೀತಿಗಳ ಆಧಾರವಾಗಿ ಬಳಸಬಹುದೇ ಎಂಬುದು. ಸಮಕಾಲೀನ ರಾಜಕೀಯ ವ್ಯವಸ್ಥೆಗಳು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಕಾನೂನು, ಮಾನವ ಹಕ್ಕುಗಳು, ಭೌಗೋಳಿಕ ಗಡಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ನಿಂತಿರಬೇಕೆಂದು ನಿರೀಕ್ಷಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಸಾವಿರಾರು ವರ್ಷಗಳ ಹಿಂದೆ ರಚಿತವಾದ ಧಾರ್ಮಿಕ ಕಥನಗಳು ಇಂದಿನ ಭೂಪ್ರದೇಶ, ರಾಷ್ಟ್ರತ್ವ ಅಥವಾ ವಿದೇಶಾಂಗ ನೀತಿಗಳಿಗೆ ನ್ಯಾಯೀಕರಣದ ಸಾಧನಗಳಾಗುವುದು ಎಷ್ಟು ಸರಿ? ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು, (Benjamin Netanyahu) ಕೆಲವು ರಾಜಕೀಯ ನಾಯಕರು ಮತ್ತು ಧಾರ್ಮಿಕ-ರಾಷ್ಟ್ರೀಯ ಗುಂಪುಗಳು, ಬೈಬಲ್ನ ಕಥನಗಳನ್ನು ಇಸ್ರೇಲ್ನ ಭೌಗೋಳಿಕ ಹಕ್ಕಿನ ನೈತಿಕ ಆಧಾರವೆಂದು ವ್ಯಾಖ್ಯಾನಿಸಿ, ತಮ್ಮ ವಿದೇಶಾಂಗ ನೀತಿಯ ಕಾರ್ಯಸೂಚಿಯಲ್ಲಿ ಅಳವಡಿಸಿಕೊಂಡಿರುವುದು ಗಾಬರಿ ಹುಟ್ಟಿಸುತ್ತಿರುವ ವಿಷಯವಾಗಿದೆ.
ಪುರಾಣ ಪುಣ್ಯ ಕತೆಗಳನ್ನು ಹೊಂದಿರುವ ಇತರೇ ದೇಶಗಳಲ್ಲಿ ಇಂದು ಏನಾಗುತ್ತಿದೆ ನೋಡೋಣ. ಪ್ರಾಚೀನ ಗ್ರೀಕ್ ನಾಗರಿಕತೆ ವಿಶ್ವದ ಅತ್ಯಂತ ಸಮೃದ್ಧ ಪೌರಾಣಿಕ ಪರಂಪರೆಗಳಲ್ಲೊಂದೆಂದು ಪರಿಗಣಿಸಲಾಗಿದೆ. ದೇವತೆಗಳು, ವೀರರು ಮತ್ತು ಅತೀಂದ್ರಿಯ ಘಟನೆಗಳ ಕುರಿತಾದ ಅನೇಕ ಕಥನಗಳು ಗ್ರೀಕ್ ಸಾಹಿತ್ಯ ಮತ್ತು ಸಂಸ್ಕೃತಿಯ ಭಾಗವಾಗಿವೆ. ಆದರೆ ಇಂದು ಗ್ರೀಕರು ತಮ್ಮ ಪುರಾಣಗಳಲ್ಲಿರುವ ಕತೆಗಳನ್ನು ಕೇಳಿ ಮರೆಯುತ್ತಾರೆ ಅಥವಾ ಅಲ್ಲಿಗೆ ಬರುವ ಪ್ರವಾಸಿಗರಿಗೆ ಹೇಳಿ ಸುಮ್ಮನಾಗುತ್ತಾರೆ. ಪುರಾಣಗಳಲ್ಲಿ ಬರೆದಿರುವ ರೋಚಕ ವಿದ್ಯಮಾನಗಳನ್ನು ನೆನೆದು ಸಂಭ್ರವಿಸುವಷ್ಟೂ ಚೈತನ್ಯವಿಲ್ಲ ಗ್ರೀಕರಲ್ಲಿ. ಏಕೆಂದರೆ ಅವರ ವರ್ತಮಾನದ ಆರ್ಥಿಕ ಸ್ಥಿತಿ ಅಸ್ತಿತ್ವದ ಬಿಕ್ಕಟ್ಟಿನಲ್ಲಿದೆ. (existential crisis) ಇನ್ನು ರೋಮನರು. (ಇಂದಿನ ಇಟಲಿ) ನಮಗೇಕೆ ಪುರಾಣ ಎಂದು ಸುಮ್ಮನಿದ್ದಾರೆ. ಅದಕ್ಕೂ ಕಾರಣವಿದೆ. ಕ್ರಿಸ್ತ ಧರ್ಮ ಪಾಲಕರಾದ ಇಟಲಿಯನ್ನರು ವ್ಯಾಟಿಕನ್ ಚರ್ಚ್ಗೆ ಬದ್ಧರಾಗಿದ್ದಾರೆ. ವ್ಯಾಟಿಕನ್ ಚರ್ಚ್ ನಂಬುವುದು ನಿವ್ ಟೆಸ್ಟಮೆಂಟ್ (New Testament) ಓಲ್ಡ್ ಟೆಸ್ಟಮೆಂಟ್ ಕಡೆಗೆ ಅವರ ಗಮನ ಅಷ್ಟಕಷ್ಟೆ. ಹಾಗಾಗಿ ಈ ಎರಡು ದೇಶಗಳಲ್ಲಿ ಪುರಾಣ ಪುಣ್ಯ ಕತೆಗಳ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಯುದ್ಧಗಳಾಗಿಲ್ಲ. ಚೈನಾದ ವಿಷಯವೇ ಬೇರೆ. ಆ ದೇಶ ಕೂಡ ಪ್ರಾಚೀನ ನಾಗರೀಕತೆಯನ್ನು ಹೊಂದಿದೆ. ಅಲ್ಲೂ ಪುರಾಣ ಪುಣ್ಯ ಕತೆಗಳಿವೆ. ಆದರೆ ಚೈನಾ ಕಮ್ಯೂನಿಸ್ಟ್ ದೇಶವಾದ ಮೇಲೆ, ಮಾವೋತ್ಶೇತುಂಗಾ ನಡೆಸಿದ ‘ಸಾಂಸ್ಕೃತಿಕ ಕ್ರಾಂತಿ’ ಆ ದೇಶದಲ್ಲಿ ದೇವರುಗಳ ಜೊತೆಗೆ ಲಕ್ಷಾಂತರ ಜನರನ್ನೂ ಬಲಿ ತೆಗೆದುಕೊಂಡಿತು. ಈ ಅವಧಿಯಲ್ಲಿ ದೇವಾಲಯಗಳು, ಧಾರ್ಮಿಕ ಸಂಕೇತಗಳು ಮತ್ತು ಪುರಾತನ ಸಂಪ್ರದಾಯಗಳು ತೀವ್ರ ವಿರೋಧಕ್ಕೆ ಒಳಗಾದವು. ಅದರ ಪರಿಣಾಮವಾಗಿ, ಧಾರ್ಮಿಕ ಪೌರಾಣಿಕತೆಗಳು ಸಾರ್ವಜನಿಕ ರಾಜಕೀಯ ಜೀವನದಿಂದ ಬಹುಮಟ್ಟಿಗೆ ದೂರ ಸರಿದವು. ಇಂದು ಚೈನಾದಲ್ಲಿ ದೇವರು, ಪುರಾಣ ಪುಣ್ಯ ಕತೆಗಳು ಜನಮಾನಸದಿಂದ ದೂರವೇ. ನಮ್ಮ ದೇಶದಲ್ಲಿ ಇತ್ತೀಚಿನ ದಶಕಗಳಲ್ಲಿ ಪುರಾಣ, ಇತಿಹಾಸ ಮತ್ತು ಧಾರ್ಮಿಕ ಸಂಕೇತಗಳ ಪುನರ್ನಿರ್ಮಾಣ ಮತ್ತು ಪುನರ್ವ್ಯಾಖ್ಯಾನದ ಪ್ರಕ್ರಿಯೆಗಳು ಹೆಚ್ಚು ಗಮನ ಸೆಳೆಯುತ್ತಿವೆ. ಪುರಾಣಪಾತ್ರಗಳ ಕುರಿತ ಹೊಸ ವ್ಯಾಖ್ಯಾನಗಳು, ಸ್ಮಾರಕಗಳ ನಿರ್ಮಾಣ, ಪ್ರತಿಮೆ ಸ್ಥಾಪನೆ, ದೇವಸ್ಥಾನ ಪುನರ್ನಿರ್ಮಾಣ ಮತ್ತು ಐತಿಹಾಸಿಕ-ಧಾರ್ಮಿಕ ಗುರುತುಗಳ ರಾಜಕೀಯ ಬಳಕೆ ಮುಂತಾದ ಬೆಳವಣಿಗೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಇದು ಭಾರತೀಯ ಸಮಾಜದಲ್ಲಿ ಸ್ಥಿತ್ಯಂತರಕ್ಕೆ ಕಾರಣವಾಗಿದೆ. ‘ಗ್ರೇಟರ್ ಇಂಡಿಯಾ’ದ ಕೂಗು ಕೇಳಿಬರುತ್ತಿದೆ.
ವಿಜ್ಞಾನ ಇದರ ಬಗ್ಗೆ ಏನು ಹೇಳುತ್ತದೆ? ಓಲ್ಡ್ ಟೆಸ್ಟಮೆಂಟ್ನಲ್ಲಿರುವ ಆಡಂ ಮತ್ತು ಈವ್ ಕತೆಯನ್ನು ನಂಬಿದ ಹಾಗೆ ಬಹುತೇಕ ಜನರು ಡಾರ್ವಿನ್ನನ ಮಾನವ ವಿಕಾಸ ಸಿದ್ಧಾಂತವನ್ನು ಒಪ್ಪಲು ತಯಾರಿಲ್ಲ. ಕಾರಣ ಸರಳ. ವಿಜ್ಞಾನ ಸತ್ಯ ಹೇಳಿದರೆ, ಕತೆಗಳು ಜನರನ್ನು ರೋಮಾಂಚನಗೊಳಿಸುತ್ತವೆ. ಜನರು ಭಾವಾತೀರೇಕವನ್ನೇ ಇಚ್ಚಿಸುತ್ತಾರೆ. ಸತ್ಯ ಕಹಿ. ಇದರ ಪ್ರತಿಫಲವೇ ಇಂದು ಪ್ರಪಂಚದ ಎಲ್ಲಾ ಮಾಧ್ಯಮಗಳಲ್ಲಿ ಕತೆಗಳು ವಿಜೃಂಬಿಸುತ್ತಿರುವುದು ಇತಿಹಾಸಾತ್ಮಕವಾಗಿ ನೋಡಿದರೆ, ಯುರೋಪಿನ ಪುನರುಜ್ಜೀವನ (Renaissance) ಮತ್ತು ಜ್ಞಾನೋದಯ (Enlightenment) ಚಳವಳಿಗಳು ಮಾನವತಾವಾದ (Humanism), ತರ್ಕ ಮತ್ತು ವೈಜ್ಞಾನಿಕ ಚಿಂತನೆಗೆ ಮಹತ್ವ ನೀಡಿದವು. ಈ ಅವಧಿಯಲ್ಲಿ, ಮಾನವನ ಬೌದ್ಧಿಕ ಸಾಮರ್ಥ್ಯ, ವೈಜ್ಞಾನಿಕ ಪರಿಶೀಲನೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಕಲ್ಪನೆಗಳು ಹೆಚ್ಚು ಬಲಗೊಂಡವು. ಈ ಬೌದ್ಧಿಕ ಪರಿವರ್ತನೆಯಲ್ಲಿ Jean-Jacques Rousseau ಪ್ರಮುಖ ಪಾತ್ರವಹಿಸಿದರು. ಅವರ ಪ್ರಸಿದ್ಧ ಕೃತಿ The Social Contract ನಲ್ಲಿ, “ರಾಜನು ದೇವರ ಪ್ರತಿನಿಧಿ” ಎಂಬ ಪರಂಪಾರಿಕಾ ಕಲ್ಪನೆಯನ್ನು ಪ್ರಶ್ನಿಸಲಾಯಿತು. ರೂಸೋನ ಅಭಿಪ್ರಾಯದಂತೆ, ಸರ್ಕಾರವು ಆಳುವವರು ಮತ್ತು ಆಳಲ್ಪಡುವವರ ನಡುವಿನ ಒಂದು ಸಾಮಾಜಿಕ ಒಪ್ಪಂದ (social contract) ಆಗಿದ್ದು, ಆಡಳಿತಗಾರನು ತನ್ನ ಕರ್ತವ್ಯ ಮತ್ತು ನೈತಿಕತೆಯನ್ನು ಮೀರಿ ನಡೆದುಕೊಂಡರೆ ಜನರಿಗೆ ಅವನನ್ನು ಬದಲಾಯಿಸುವ ಹಕ್ಕು ಇದೆ. ಈ ಚಿಂತನೆಗಳು ನಂತರ ಫ್ರೆಂಚ್ ಕ್ರಾಂತಿಯಂತಹ ರಾಜಕೀಯ ಪರಿವರ್ತನೆಗಳಿಗೆ ಬೌದ್ಧಿಕ ನೆಲೆ ಒದಗಿಸಿವೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಸಂಸ್ಥೆಗಳ, ವಿಶೇಷವಾಗಿ ಚರ್ಚ್ನ, ರಾಜಕೀಯ ಪ್ರಭಾವವು ಕೆಲ ಮಟ್ಟಿಗೆ ಕಡಿಮೆಯಾದರೂ, ದೇವರು ಮತ್ತು ಧರ್ಮದ ಕಲ್ಪನೆಗಳು ಸಮಾಜದಿಂದ ಸಂಪೂರ್ಣವಾಗಿ ಅಳಿದುಹೋಗಲಿಲ್ಲ.
ಓಲ್ಡ್ ಟೆಸ್ಟಮೆಂಟ್ ಅಥವಾ ಹೀಬ್ರೂ ಬೈಬಲ್ನ ಪ್ರಾರಂಭಿಕ ಭಾಗಗಳ ರಚನೆ ಕ್ರಿ.ಪೂ. ಸುಮಾರು 1400 ರಿಂದ 400 ರ ಅವಧಿಯೊಳಗೆ ನಡೆದಿರಬಹುದು ಎಂದು ಅನೇಕ ಬೈಬಲ್ ಅಧ್ಯಯನಕಾರರು ಮತ್ತು ಇತಿಹಾಸಕಾರರು ಅಂದಾಜಿಸಿದ್ದಾರೆ. ಈ ಅವಧಿಯಲ್ಲೇ ಈಜಿಪ್ಟ್, ಮೆಸೊಪೊಟೇಮಿಯಾ ಹಾಗೂ ಭಾರತೀಯ ಉಪಖಂಡಗಳಲ್ಲಿ ಪ್ರಾಚೀನ ನಾಗರಿಕತೆಗಳು ಸಂಘಟಿತ ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳೊಂದಿಗೆ ಬೆಳವಣಿಗೆಯ ಉನ್ನತ ಹಂತಗಳನ್ನು ತಲುಪಿದ್ದವು. ಇದಕ್ಕೆ ವಿರುದ್ಧವಾಗಿ, ಅರೇಬಿಯಾ ಪ್ರದೇಶದ ಬಹುಭಾಗವು ಮರಳುಗಾಡು ಪರಿಸರವನ್ನು ಹೊಂದಿದ್ದು, ಅಲ್ಲಿ ವಿವಿಧ ಬುಡಕಟ್ಟು ಸಮುದಾಯಗಳು ಪ್ರತ್ಯೇಕ ಗುಂಪುಗಳಾಗಿ ವಾಸಿಸುತ್ತಿದ್ದವು. ಆ ಬುಡಕಟ್ಟು ಜನಾಂಗಗಳನ್ನು ಒಂದುಗೂಡಿಸಲು ಒಂದು ಕತೆಯ ಅವಶ್ಯಕತೆ ಇತ್ತು ಹಾಗೆ ಒಬ್ಬ ನಾಯಕನೂ ಕೂಡಾ. ಓಲ್ಡ್ ಟೆಸ್ಟಮೆಂಟ್ ಬರೆದವರು ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಜನರಿಗೆ ಕತೆಗಳನ್ನು ಹೇಳಿದ್ದಿರಬಹುದು ಕೂಡ. ಅಬ್ರಹಾಂನಂತಹ ಪಿತಾಮಹರ ಕಥೆಗಳು ವಿವಿಧ ಬುಡಕಟ್ಟುಗಳನ್ನು ಒಂದೇ ವಂಶಪಾರಂಪರ್ಯದ ಅಡಿಯಲ್ಲಿ ಕಲ್ಪಿಸಿಕೊಳ್ಳಲು ಸಹಾಯಕವಾಗಿದ್ದಿರಲೂಬಹುದೂ.
ಆದರೆ ಅರಬ್ ಸಮುದಾಯಗಳ ರಾಜಕೀಯ ಮತ್ತು ಧಾರ್ಮಿಕ ಏಕೀಕರಣವು ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಕ್ರಿ.ಶ. 7ನೇ ಶತಮಾನದಲ್ಲಿ ಪ್ರಾಫೆಟ್ ಮುಹಮ್ಮದ್ (Prophet Muhammad) ಇಸ್ಲಾಂ ಧರ್ಮವನ್ನು ಪ್ರತಿಪಾದಿಸಿದ ನಂತರವೆ. ಇದು ಅರಬ್ ಬುಡಕಟ್ಟುಗಳನ್ನು ಒಂದು ಸಾಮೂಹಿಕ ಧಾರ್ಮಿಕ ಮತ್ತು ರಾಜಕೀಯ ಚೌಕಟ್ಟಿನೊಳಗೆ ಸಂಘಟಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಮಹತ್ವದ ತಿರುವಾಗಿದ್ದು, ಧರ್ಮ, ರಾಜಕೀಯ ಮತ್ತು ಸಮುದಾಯ ಗುರುತುಗಳ ನಡುವಿನ ಸಂಬಂಧವನ್ನು ಹೊಸ ರೂಪದಲ್ಲಿ ನಿರ್ವಚಿಸಿತು. ಇಸ್ಲಾಂನ ಉದಯದೊಂದಿಗೆ ಅರೇಬಿಯಾ ಪ್ರದೇಶವು ಕೇವಲ ಬುಡಕಟ್ಟುಗಳ ಸಮೂಹವಾಗಿರದೆ, ವಿಶಾಲ ಧಾರ್ಮಿಕ-ರಾಜಕೀಯ ನಾಗರಿಕತೆಯ ಕೇಂದ್ರವಾಗಿ ರೂಪುಗೊಂಡಿತು. ನಂತರದ ಶತಮಾನಗಳಲ್ಲಿ ಇದೇ ಪ್ರಕ್ರಿಯೆ ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಏಷ್ಯಾದ ಹಲವಾರು ಭಾಗಗಳ ಇತಿಹಾಸವನ್ನು ಆಳವಾಗಿ ಪ್ರಭಾವಿತಗೊಳಿಸಿತು.
ಮುಹಮ್ಮದ್ ಕಾಲವಾದ ನಂತರ, ಅವರ ಹಿಂಬಾಲಕರು ಇಸ್ಲಾಂ ಧರ್ಮವನ್ನು ಅರೇಬಿಯಾ ಉಪಖಂಡದ ವಿವಿಧ ಭಾಗಗಳಿಗೆ ಯುದ್ಧಗಳ ಮೂಲಕ ವ್ಯಾಪಕವಾಗಿ ಹರಡುವಲ್ಲಿ ಯಶಸ್ವಿಯಾದರು. ಈ ಪ್ರಕ್ರಿಯೆಯೊಂದಿಗೆ, ಇಸ್ಲಾಮಿಕ್ ಧಾರ್ಮಿಕ ಪರಂಪರೆಯ ಪ್ರಮುಖ ಗ್ರಂಥವಾದ ಕುರಾನ್ (Quran) ಸಂಗ್ರಹ ಮತ್ತು ಸಂಕಲನಗೊಂಡಿತು. ಕುರಾನ್ ಕ್ಲಾಸಿಕಲ್ ಅರೇಬಿಕ್ ಭಾಷೆಯಲ್ಲಿ ರೂಪುಗೊಂಡಿದ್ದು, ಅದರ ಧಾರ್ಮಿಕ ಕಥನಗಳಲ್ಲಿ ಯಹೂದಿ ಮತ್ತು ಕ್ರೈಸ್ತ ಪರಂಪರೆಗಳೊಂದಿಗೆ ಕೆಲವು ಸಾಮ್ಯತೆಗಳೂ ಕಾಣಿಸಿಕೊಳ್ಳುತ್ತವೆ. ಕುರಾನ್ನಲ್ಲಿ Abraham ಅವರನ್ನು “ಇಬ್ರಾಹಿಂ” (Ibrahim) ಎಂಬ ಹೆಸರಿನಲ್ಲಿ ಉಲ್ಲೇಖಿಸಲಾಗುತ್ತದೆ. ಭಾಷಾ ಮತ್ತು ಉಚ್ಚಾರಣಾ ವ್ಯತ್ಯಾಸಗಳಿಂದ ಹೆಸರಿನ ರೂಪಾಂತರ ಸಂಭವಿಸಿರುವುದು ಸಾಮಾನ್ಯ ಭಾಷಾಶಾಸ್ತ್ರೀಯ ಪ್ರಕ್ರಿಯೆಯಾಗಿದೆ. ಇದೇ ರೀತಿಯಲ್ಲಿ, Ishmael ಎಂಬ ಹೆಸರು ಅರೇಬಿಕ್ ಪರಂಪರೆಯಲ್ಲಿ “ಇಸ್ಮಾಯಿಲ್” (Ismail) ಎಂಬ ರೂಪ ಪಡೆದುಕೊಂಡಿದೆ. ಇಸ್ಲಾಮಿಕ್ ಪರಂಪರೆಯಲ್ಲಿ, ಇಬ್ರಾಹಿಂ ಮತ್ತು ಅವರ ವಂಶಸ್ಥರನ್ನು ಪ್ರಮುಖ ಪ್ರವಾದಿಗಳಾಗಿ ಗೌರವಿಸಲಾಗುತ್ತದೆ. ವಿಶೇಷವಾಗಿ ಇಬ್ರಾಹಿಂ ಮತ್ತು ಇಸ್ಮಾಯಿಲ್ ಅವರು ಸೇರಿ ಕಾಬಾ (Kaaba) ಅನ್ನು ನಿರ್ಮಿಸಿದರು ಎಂಬ ನಂಬಿಕೆ ಮುಸ್ಲಿಂ ಧಾರ್ಮಿಕ ಪರಂಪರೆಯಲ್ಲಿ ಕೇಂದ್ರಸ್ಥಾನ ಹೊಂದಿದೆ. ಈ ಕಥನವು ಇಸ್ಲಾಂ ಧರ್ಮವನ್ನು ಅಬ್ರಹಾಮಿಕ್ ಪರಂಪರೆಯ ಮುಂದುವರಿಕೆಯಾಗಿ ಸ್ಥಾಪಿಸುವ ಪ್ರಯತ್ನದ ಭಾಗವಾಗಿತ್ತು. ಮುಂದಿನ ಶತಮಾನಗಳಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ವಿಸ್ತರಣೆಯೊಂದಿಗೆ ಧಾರ್ಮಿಕ ಸಂಘರ್ಷಗಳು ಹೆಚ್ಚಾಗಿದವು. ಅರಬ್–ಇಸ್ರೇಲ್ ವೈಷಮ್ಯದ ಇತಿಹಾಸವನ್ನು ವಿಶ್ಲೇಷಿಸುವಾಗಲೂ ಇದೇ ಅಂಶ ಗಮನಾರ್ಹವಾಗಿದೆ.
ಹಾಗೆ ನೋಡಿದರೆ ಓಲ್ಡ್ ಟೆಸ್ಟಮೆಂಟ್ ನಲ್ಲಿ ಇರಾನಿನ ಬಗ್ಗೆ ಅಷ್ಟೇನೂ ಹೆಚ್ಚು ಉಲ್ಲೇಖಿಸಿಲ್ಲ. ಇಂದಿನ ಇರಾನ್ (Iran) ಪ್ರದೇಶವು ಇತಿಹಾಸದಲ್ಲಿ “ಪರ್ಷಿಯಾ” (Persia) ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು. ಪ್ರಾಚೀನ ಪರ್ಷಿಯನ್ ನಾಗರಿಕತೆ, ಈಜಿಪ್ಟ್ ಮತ್ತು ಮೆಸೊಪೊಟೇಮಿಯಾದಂತಹ ಸಮಕಾಲೀನ ನಾಗರಿಕತೆಗಳಿಗೆ ಸಮಾನವಾಗಿ ಅಭಿವೃದ್ಧಿ ಹೊಂದಿದ ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿತ್ತು. ಪರ್ಷಿಯಾ ತನ್ನದೇ ಆದ ಭಾಷಾ ಪರಂಪರೆ, ಆಡಳಿತ ವ್ಯವಸ್ಥೆ ಮತ್ತು ಧಾರ್ಮಿಕ ನಂಬಿಕೆಗಳನ್ನು, ವಿಶೇಷವಾಗಿ ಜೋರಸ್ಟ್ರಿಯನ್ ಧರ್ಮವನ್ನು (Zoroastrianism) ಪರ್ಷಿಯನ್ ಸಾಮ್ರಾಜ್ಯದ ಪ್ರಮುಖ ಧಾರ್ಮಿಕ ಪರಂಪರೆಯಾಗಿ ಬೆಳೆಸಿತ್ತು. ಆದರೆ 7ನೇ ಶತಮಾನದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ವಿಸ್ತರಣೆಯೊಂದಿಗೆ ಪರ್ಷಿಯಾ ಮುಸ್ಲಿಂ ಆಳ್ವಿಕೆಯ ಅಧೀನಕ್ಕೆ ಬಂತು. ನಂತರದ ಶತಮಾನಗಳಲ್ಲಿ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿವರ್ತನೆಗಳ ಪರಿಣಾಮವಾಗಿ, ಇಸ್ಲಾಂ ಆ ದೇಶದ ಪ್ರಮುಖ ಧರ್ಮವಾಗಿ ರೂಪುಗೊಂಡಿತು.
ಇರಾನಿನ ಆಧುನಿಕ ಇತಿಹಾಸದಲ್ಲಿ 1979ರ ಇಸ್ಲಾಮಿಕ್ ಕ್ರಾಂತಿ (Islamic Revolution) ಒಂದು ಮಹತ್ವದ ತಿರುವಾಗಿತ್ತು. ಈ ಕ್ರಾಂತಿಯ ನಂತರ ಅಯತೊಲ್ಲಾ ಕೊಮೇನಿ (Ayatollah Ruhollah Khomeini) ಅವರ ನೇತೃತ್ವದಲ್ಲಿ ಇರಾನ್ ಒಂದು ಇಸ್ಲಾಮಿಕ್ ಗಣರಾಜ್ಯವಾಗಿ ಪುನರ್ವ್ಯವಸ್ಥಿತಗೊಂಡಿತು. ಧಾರ್ಮಿಕ ನಾಯಕತ್ವ ಮತ್ತು ರಾಜ್ಯ ವ್ಯವಸ್ಥೆಯ ಸಂಯೋಜನೆಯ ಮೂಲಕ ಇರಾನ್ ತನ್ನ ರಾಜಕೀಯ ಗುರುತನ್ನು ಮರುನಿರ್ಮಿಸಿತು. ನಂತರದ ಅವಧಿಯಲ್ಲಿ, ಕೈಗಾರಿಕಾ ಬೆಳವಣಿಗೆ, ತೈಲ ಮತ್ತು ಅನಿಲ ಸಂಪನ್ಮೂಲಗಳ ಆರ್ಥಿಕ ಬಳಕೆ, ಅಣುಶಕ್ತಿ ಕಾರ್ಯಕ್ರಮ ಮತ್ತು ಪ್ರಾದೇಶಿಕ ರಾಜತಾಂತ್ರಿಕ ಸಂಬಂಧಗಳ ಮೂಲಕ ಇರಾನ್ ಮಧ್ಯಪ್ರಾಚ್ಯದಲ್ಲಿ ದೊಡ್ಡಣ್ಣನ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತಿದೆ. ಇದೇ ಸಂದರ್ಭದಲ್ಲಿ, ಇಸ್ರೇಲ್ ಮತ್ತು ಇರಾನ್ ನಡುವಿನ ರಾಜಕೀಯ ಮತ್ತು ಭದ್ರತಾ ವೈಷಮ್ಯಗಳು ಗಾಢವಾಗುತ್ತ ಬಂದಿವೆ. ಇಸ್ರೇಲ್ ಮತ್ತು ಅದರ ಪಾಶ್ಚಾತ್ಯ ಮಿತ್ರ ರಾಷ್ಟ್ರಗಳು, ವಿಶೇಷವಾಗಿ ಅಮೇರಿಕಾ, ಇರಾನ್ ಬೆಂಬಲಿತ ಸಂಘಟನೆಗಳು ಮಧ್ಯಪ್ರಾಚ್ಯದ ಪ್ರಾದೇಶಿಕ ಭದ್ರತೆಗೆ ಸವಾಲು ಒಡ್ಡುತ್ತಿವೆ ಎಂದು ವಾದಿಸುತ್ತವೆ. ಇನ್ನೊಂದೆಡೆ, ಇರಾನ್ ತನ್ನನ್ನು ಪ್ಯಾಲೆಸ್ಟೀನ್ ಪ್ರಶ್ನೆ ಸೇರಿದಂತೆ ಕೆಲವು ಪ್ರಾದೇಶಿಕ ರಾಜಕೀಯ ಹೋರಾಟಗಳಿಗೆ ಬೆಂಬಲ ನೀಡುವ ರಾಷ್ಟ್ರವೆಂದು ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ ಗಾಝಾ, ಲೆಬನಾನ್ ಮತ್ತು ಸಿರಿಯಾ ಪ್ರದೇಶಗಳಲ್ಲಿನ ರಾಜಕೀಯ-ಸೈನಿಕ ಗುಂಪುಗಳಿಗೆ ಇರಾನ್ ಬೆಂಬಲ ನೀಡುತ್ತಿದೆ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ಇದರ ಜೊತೆಗೆ ಕೆಲವು ಇಸ್ರೇಲಿ ನಾಯಕರು ಇರಾನ್ ಅನ್ನು ಇಸ್ರೇಲ್ನ ಭದ್ರತೆಗೆ ದೊಡ್ಡ ಬೆದರಿಕೆಯೆಂದು ವರ್ಣಿಸಿದ್ದಾರೆ. ಈ ಉದ್ವಿಗ್ನತೆಯ ಭಾಗವಾಗಿ, ಅಮೇರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನಿನ ಮೇಲೆ ಯುದ್ಧ ಘೋಷಿಸಿದಾಗ, “ಇದು ನನ್ನ ನಲವತ್ತು ವರ್ಷಗಳ ಕನಸು” ಎಂಬ ಬೆಂಜಮಿನ್ ನೆತನ್ಯಾಹು ಹೇಳಿಕೆ ಇರಾನ್ – ಇಸ್ರೇಲ್ ಮಧ್ಯದ ವೈಷಮ್ಯದ ತೀವ್ರತೆಯನ್ನು ಪ್ರತಿಬಿಂಬಿಸುತ್ತಿದೆ. ‘ಗ್ರೇಟರ್ ಇಸ್ರೇಲ್’ ಪಡೆಯುವ ಪ್ರಯತ್ನದಲ್ಲಿ ಯಾರೇ ಅಡ್ಡ ಬಂದರೂ ಸದೆ ಬಡಿಯುವ ಯುದ್ಧೋಸ್ಥಃ ಇಸ್ರೇಲಿನ ರಾಜಕೀಯ ನಾಯಕರುಗಳಲ್ಲಿದೆ.
ಇನ್ನು ಪಾಡ್ ಕಾಸ್ಟ್ ವಿಷಯಕ್ಕೆ ಬರೋಣ. ‘ಸಾವಿರಾರು ವರುಷಗಳ ಹಿಂದೆ ನಡೆದ ವಿದ್ಯಮಾನಗಳು ಈ ಯುದ್ಧಕ್ಕೆ ಕಾರಣವಾಗಿವೆ ಮತ್ತು ಆ ಹಿನ್ನೆಲೆಯಲ್ಲೇ ಯುದ್ಧಕ್ಕೆ ಪರಿಹಾರವನ್ನು ಹುಡುಕಬೇಕಿದೆ’ ಎಂಬುದು ಮೇಲ್ನೋಟಕ್ಕೆ ನಿಜವೆನಿಸಿದರೂ, ಅದು ಸಾಧ್ಯವಾಗದ ಮಾತು. ನಾಲ್ಕು ಸಾವಿರ ವರ್ಷಗಳ ಹಿಂದೆ ಅಬ್ರಾಹಂ ಮತ್ತು ಆತನ ವಂಶಸ್ಥರು ಆಳಿದ ಪವಿತ್ರ ಭೂಮಿ (Promised Land) ನಮ್ಮದೇ ಎನ್ನುವ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಲ್ಲಾ, ಅಬ್ರಾಹಂ ಮತ್ತು ಅವನ ವಂಶಸ್ಥರು ನಮ್ಮವರೇ, ನಮ್ಮ ಧರ್ಮ ಗ್ರಂಥ ಅದನ್ನು ಗುರುತಿಸಿದೆ. ಆ ನೆಲವನ್ನು ಮುಸ್ಲಿಂ ದೊರೆಗಳು ಆಳಿದ್ದಾರೆ. ಆದ್ದರಿಂದ ಇಂದು ಆ ಪ್ರದೇಶ ನಮಗೇ ಸೇರಬೇಕೆನ್ನುವ ಅರಬ್ ಜನರು. ಈ ವಿಷಯದ ಸಂಬಂಧ ಹಲವಾರು ಯುದ್ಧಗಳಾಗಿವೆ, ಇತ್ತೀಚಿನ ಯುದ್ಧವೂ ಸೇರಿ. ಇದಕ್ಕೆ ಕೊನೆ ಇಲ್ಲ. ಕಾರಣ ಇದು ನಂಬಿಕೆಯ ಪ್ರಶ್ನೆ. ಇದೇ ವಿಚಾರವನ್ನು ಜನರಿಗೆ ಪದೇ ಪದೇ ಹೇಳುವ ನಾಯಕರೂ, ಧಾರ್ಮಿಕ ಮುಖಂಡರೂ ಹಾಗೂ ಮಾಧ್ಯಮಗಳೂ ಅದು ಜನಮಾನಸದಿಂದ ಅಳಿಸಿದ ಹಾಗೆ ನೋಡಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ನಂಬಿಕೆಯೇ ಅವರಿಗೆ ಉರುಳಾಗಿದೆ. ಪುರಾಣ ಪುಣ್ಯ ಕತೆಗಳನ್ನು ನಂಬಿ ಕೆಟ್ಟಿದ್ದಾರೆ. ಈ ಕತೆಗಳು ಒಳಿತನ್ನೂ ಮಾಡಿದ್ದಿರಬಹುದು ಆದರೆ ಅದು ಕಡಿಮೆ. ಈ ನಂಬಿಕೆಗಳನ್ನು ಬದಲಾಯಿಸಲು ದೇವರೇ ಭೂಮಿಗೆ ಬರಬೇಕೆನೋ (ದೇವರು ಇದ್ದರೆ!?)
ಸಾವಿರಾರು ವರುಷಗಳ ಹಿಂದೆ ಈ ಕತೆಗಳನ್ನೇ ನಿಜವೆಂದು ಧೃಡವಾಗಿ ನಂಬಿರುವ ಜನರನ್ನು ಏನೆನ್ನಬೇಕು? ಆ ನಂಬಿಕೆಯನ್ನೇ ಗಾಳವಾಗಿಸಿ ಜನರನ್ನು ಮರಳು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿಯಾದರೂ ಏನು? ಕಳೆದ ಒಂದು ದಶಕದಿಂದ ನಮ್ಮ ದೇಶವೂ ಈ ದಾರಿಯಲ್ಲಿ ನಿಧಾನವಾಗಿ ಸಾಗುತ್ತಿದೆ ಎಂಬ ಗುಮಾನಿ ಹುಟ್ಟುತ್ತಿದೆ. ನಾನು ಈ ಲೇಖನ ಬರೆಯುತ್ತಿರುವ ದಿನಗಳಲ್ಲೇ ಭಾರತದ ಸುಪ್ರೀಂ ಕೋರ್ಟಿನಲ್ಲಿ ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೇ? ಅಥವಾ ಇಲ್ಲವೇ ಎಂಬ ವಿಚಾರಣೆ ನಡೆಯುತ್ತಿತ್ತು. ಅಲ್ಲಿ ದೇವಸ್ಥಾನದ ಪರವಾಗಿ ವಾದ ಮಾಡುತ್ತಿದ್ದ ವಕೀಲರು ಇದೇ ನಂಬಿಕೆಯನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದರು. “ದೇವರಾದ ಅಯ್ಯಪ್ಪ ಒಬ್ಬ ಬ್ರಹ್ಮಚಾರಿ ಆದ ಕಾರಣ ಹತ್ತರಿಂದ ಅರವತ್ತು ವರುಷಗಳ ಮಹಿಳೆ ಯರಿಗೆ ಪ್ರವೇಶ ನಿಷಿದ್ಧ…..” ಇತ್ಯಾದಿ ಇತ್ಯಾದಿ. “ಇದು ಬಹು ಜನರ ನಂಬಿಕೆಯಾಗಿರುವುದರಿಂದ ನ್ಯಾಯಾಲಯದ ಮಧ್ಯಪ್ರವೇಶ ಅಪೇಕ್ಷಣೆಯವಲ್ಲ”. ಎಂದು ನ್ಯಾಯಾಲಯಕ್ಕೆ ಮನದಟ್ಟು ಮಾಡಲೂ ಪ್ರಯತ್ನಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಬಹುಜನರ ನಂಬಿಕೆ ಎಂಬ ನ್ಯಾಯಾಲಯದ ತೀರ್ಪಿನ ಮೂಲಕ ಒಂದು ದೇವಸ್ಥಾನವನ್ನೂ ಕಟ್ಟಾಯಿತು. ಹೀಗೆ ಎಲ್ಲಾ ಕಡೆ ನಂಬಿಕೆಯನ್ನೇ ಮುಂದಿಟ್ಟರೆ ಪ್ರಪಂಚದಲ್ಲಿ ಅಲ್ಲೊಲ ಕಲ್ಲೋಲವಾದೀತು.
ಇದೇ ಸಂದರ್ಭದಲ್ಲಿ, ದೈವವಾಣಿಯನ್ನು ಕಡೆಗಣಿಸುವಂತಿಲ್ಲ. ಪ್ರಪಂಚದಾದ್ಯಂತ ದೈವವಾಣಿಗಳು ಕೇಳುವವರಿಗೆ ಕೇಳಿಸುತ್ತಲಿರುತ್ತವೆ ಮತ್ತು ದೈವಿಕ ನಿರ್ದೇಶನದ ಕಲ್ಪನೆ ಮಾನವ ಸಮಾಜದಲ್ಲಿ ಅಪಾರ ಪ್ರಭಾವವನ್ನು ಹಾಗೂ ಲಾಭವನ್ನೂ ಹೊಂದಿದೆ ಎಂಬುದನ್ನು ಗಮನಿಸಬಹುದು. ದೈವವಾಣಿಗೆ ಸಂಬಂಧಿಸಿದಂತೆ ಇತ್ತೀಚಿಗೆ ಚಿತ್ರಿಸಿದ್ದ ಕನ್ನಡ ಚಲನಚಿತ್ರ ಕೋಟಿಗಟ್ಟಲೆ ಹಣಗಳಿಸಿತು. ಅಂದರೆ ಪ್ರಪಂಚದಾದ್ಯಂತ ಬಹುಸಂಖ್ಯಾತ ಜನರು ದೈವ ಮತ್ತು ದೈವವಾಣಿಯನ್ನು ನಂಬಿದ್ದಾರೆನ್ನಬಹುದು. ಒಟ್ಟಾರೆ, ಪುರಾಣ ಮತ್ತು ಧಾರ್ಮಿಕ ಕಥನಗಳು ಕೇವಲ ಭೂತಕಾಲದ ಸಾಹಿತ್ಯಕ ಪರಂಪರೆಗಳಲ್ಲ; ಅವು ಸಮಕಾಲೀನ ರಾಷ್ಟ್ರದ ಅಸ್ತಿತ್ವ, ಸಾಂಸ್ಕೃತಿಕ ಗುರುತುಗಳು ಮತ್ತು ರಾಜಕೀಯ ಚಿಂತನೆಗಳನ್ನು ರೂಪಿಸುವ ಪ್ರಭಾವಶಾಲಿ ಸಾಧನಗಳಾಗಿಯೂ ಕಾರ್ಯನಿರ್ವಹಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ.

ಈ ಯುದ್ಧ ತಕ್ಷಣಕ್ಕೆ ಕೊನೆಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೊನೆಯಾಗಲು ರಾಜಕಾರಣಿಗಳು ಬಿಡುವುದಿಲ್ಲ. ಯುದ್ಧಗಳಿಂದ ಲಾಭಗಳಿಸುವ ರಾಷ್ಟ್ರಗಳಿಗೂ ಯುದ್ಧ ಬೇಕಿದೆ. ಅಥವಾ ಜನರ ಮನಸ್ಸನ್ನು ವಿಷಯಾಂತರಿಸಲು ಕೆಲವಮ್ಮೆ ನಾಯಕರು ಯುದ್ಧದ ಮೊರೆಹೋಗುತ್ತಾರೆ. ಇಂದು ಜಾಗತಿಕ ಆರ್ಥಿಕತೆ ನಮ್ಮನ್ನಾಳುತ್ತಿದೆ. ಪ್ರಪಂಚದ ಯಾವುದೇ ಭಾಗದಲ್ಲಿ ಯುದ್ಧವಾದರೂ ಅದು ನಮ್ಮ ಮೇಲೆ ಪರಿಣಾಮ ಬೀರುತ್ತಿದೆ. ಇಸ್ರೇಲ್–ಇರಾನ್ ಸಂಘರ್ಷವನ್ನು ಕೇವಲ ಧಾರ್ಮಿಕ ಭಿನ್ನಾಭಿಪ್ರಾಯಗಳ ಫಲವೆಂದು ಮಾತ್ರ ಅರ್ಥೈಸಲು ಸಾಧ್ಯವಿಲ್ಲ. ಅಣುಶಕ್ತಿ ರಾಜಕೀಯ, ಪ್ರಾದೇಶಿಕ ಪ್ರಭಾವ, ತೈಲ ಆರ್ಥಿಕತೆ, ಸೈನಿಕ ಒಕ್ಕೂಟಗಳು ಮತ್ತು ಜಾಗತಿಕ ಶಕ್ತಿಸಮತೋಲನಗಳಂತಹ ಅಂಶಗಳು ಈ ಸಂಘರ್ಷದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅರಬ್–ಇಸ್ರೇಲ್ ವೈಷಮ್ಯದ ಇತಿಹಾಸವನ್ನು ವಿಶ್ಲೇಷಿಸುವಾಗಲೂ ಇದೇ ಅಂಶ ಗಮನಾರ್ಹವಾಗಿದೆ. ಅದರೂ ಕೆಲವೇ ಕೆಲವು ವ್ಯಕ್ತಿಗಳ ಸುತ್ತ ಹೆಣೆಯಲಾದ ಧಾರ್ಮಿಕ ಕಥನಗಳು ಈ ಸಂಘರ್ಷದ ಸಾಂಸ್ಕೃತಿಕ ಹಿನ್ನೆಲೆಯನ್ನು ರೂಪಿಸಿ, ವೈಜ್ಞಾನಿಕ ವಿವರಣೆಗಳನ್ನು ಹಿಂದೆ ತಳ್ಳಿ, ಭಾವನಾತ್ಮಕ ಮತ್ತು ರೋಚಕತೆಯನ್ನು ಜನಪ್ರಿಯಗೊಳಿಸಿ, ಆಧುನಿಕ ಕಾಲದ ರಾಜಕೀಯ ಸಂಘರ್ಷಕ್ಕೆ ಮುಖ್ಯ ಕಾರಣವಾಗುತ್ತಿವೆ.

ಪ್ರೊ. ಪುಟ್ಟರಾಜು ಪಿ. ಇತಿಹಾಸದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು ಬೆಂಗಳೂರಿನ ಬಿ ಎಂ ಎಸ್ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರು ಭೂದೃಶ್ಯ ಮತ್ತು ಭಾವಚಿತ್ರ ಛಾಯಾಗ್ರಹಣದಲ್ಲಿ ಸಹ ಪರಿಣತಿ ಹೊಂದಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

