Advertisement
ಬೃಹದೀಶ್ವರ ದೇವಾಲಯದ ಬಗೆಹರಿಯದ ನಿಗೂಢಗಳು: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಬೃಹದೀಶ್ವರ ದೇವಾಲಯದ ಬಗೆಹರಿಯದ ನಿಗೂಢಗಳು: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಈ ಎರಡೂ ಮುಖಗಳು ಈ ದೇವಾಲಯಕ್ಕೊಂದು ವಿಕ್ಷಿಪ್ತ ನೋಟ ಒದಗಿಸುತ್ತದೆ. ಹಲವರ ಪ್ರಕಾರ ಇದು ಯುರೋಪಿನ ಮಾರ್ಕೊ ಪೋಲೋ ಮತ್ತು ಆತನ ಮಡದಿಯ ಚಿತ್ರ ಎನ್ನಲಾಗಿದೆ. 1600 ರ ಸುಮಾರಿಗೆ ಇದನ್ನು ಸೇರಿಸಲಾಗಿದೆ ಎನ್ನುತ್ತಾರೆ. ಮಾರ್ಕೊ ಪೋಲೋ ಇಟಲಿಯ ಪ್ರವಾಸಿಗ. ಎಲ್ಲಿಯ ಇಟಲಿ ಎಲ್ಲಿಯ ಭಾರತ. ಆತನ ಚಿತ್ರ ಸೇರಿಸುವ ಉದ್ದೇಶವಾದರೂ ಏನು? ಅದೂ ಒಬ್ಬ ವಿದೇಶಿ ಪ್ರವಾಸಿಗನನ್ನು ದೇವಾಲಯದ ಹೊರ ಭಿತ್ತಿಯಲ್ಲಿ ಬಿತ್ತರಿಸುವ ಉದ್ದೇಶವಾದರೂ ಏನು? ಎಲ್ಲವೂ ನಿಗೂಢ. ಎರಡೆರಡು ಬಾರಿ ಭೇಟಿಕೊಟ್ಟರೂ ಈ ನಿಗೂಢ ತಿಳಿಯಲಾಗಿಲ್ಲ! ಇನ್ನೊಮ್ಮೆ ಹೋಗಿ ಬರಬೇಕು.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಬೃಹದೀಶ್ವರ ದೇವಾಲಯದ ಕುರಿತ ಬರಹ ಇಲ್ಲಿದೆ

ಯಾವುದೇ ಸ್ಥಳವನ್ನು ನಮ್ಮೊಳಗೆ ಎಳೆದೊಯ್ದು ಕಟೆದು ನಿಲ್ಲಿಸಲು ಕಷ್ಟವಾಗುವುದು ನಮ್ಮ ಅಹಂನಿಂದ. ನಾನೆಲ್ಲಾ ನೋಡಿದೀನಿ ಎಂಬ ತಿಳಿವಳಿಕೆಯೇ ನಮ್ಮನ್ನು ಒಂದು ಹೊಸ ಜಗತ್ತೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ಎಷ್ಟೇ ಬಾರಿ ನೋಡಿದರೂ ಒಂದೇ. ಕೇವಲ ತೋರಿಕೆಯ ನೋಟವಾಗದೆ ವಿಸ್ತೃತ ವಿವರಗಳೊಳಗೆ ಕಳೆದುಹೋಗಬೇಕು. ಹೊಸ ನೋಟ ದಕ್ಕಿಸಿಕೊಳ್ಳಬೇಕು. ಹೊಸ ಬೆರಗು ಹುಟ್ಟುವಂತೆ ವಿವರ ಕಲೆ ಹಾಕಬೇಕು.

ಮನಸ್ಸಿಗ್ಯಾವುದು ದೂರ ಯಾವುದು ಸನಿಹ? ಸಮಯ ಯಂತ್ರದಲ್ಲಿ ಕುಳಿತು ನಮ್ಮದೇ ಕಲ್ಪನಾಲೋಕದಲ್ಲಿ ವಿವರಿಸೋಣ. ತಿಂಗಳಿಂದ ಗುಡ್ಡ ಬೆಟ್ಟಗಳಲ್ಲಿ ಅಂಡಲೆದ ನಿಮಗೊಂದಿಷ್ಟು ಸಾಂತ್ವಾನ ಬಯಸಿ ಈ ಲೇಖನ ಬರೆಯುತ್ತಿದ್ದೇನೆ. ಬನ್ನಿ ಭರತಖಂಡದ ಅನನ್ಯ ಅಧ್ಯಾಯದೊಳಗೆ ಹೋಗಿ ಬರೋಣ.

ಬೆರಗಿನ ಬೃಹದೀಶ್ವರ

ಇಲ್ಲಿನ ಬೃಹದೀಶ್ವರ ದೇವಾಲಯ ಸುಮಾರು 1000 ವರ್ಷಗಳ ಹಿಂದೆ ನಿರ್ಮಾಣವಾದ ಬೃಹತ್ ರಚನೆ ಅಂದಿನ ಬುರ್ಜ್‌ ಖಲೀಫಾ! ಈ ದೇವಾಲಯಕೆ ಬಳಕೆಯಾದ ಒಟ್ಟು ಕಲ್ಲುಗಳ ಸಂಖ್ಯೆ ಸುಮಾರು 66,000 ಟನ್! ದೇವಾಲಯದ 100 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲೂ ಈ ಕಲ್ಲುಗಳಿಲ್ಲ!! ಕಾಲವನ್ನು ಗಣನೆಗೆ ತೆಗೆದುಕೊಂಡರೆ ಇಷ್ಟೊಂದು ಪ್ರಮಾಣದ ಕಲ್ಲುಗಳ ಸಾಗಣೆಯೇ ಒಂದು ಸವಾಲು!

ಸುಮಾರು 70 ಕಿ.ಮೀ ದೂರದ ಪುದುಕೋಟೆಯಿಂದ ಕಲ್ಲುಗಳನ್ನು ತರಿಸಿಕೊಂಡು ರೂಪಕೊಟ್ಟು ಆರು ವರ್ಷಗಳಲ್ಲೇ ಕಟ್ಟಿ ಮುಗಿಸುವುದು ಒಂದು ಪವಾಡವೇ ಸರಿ. ಇಂತಹ ದೇವಾಲಯವನ್ನು ಬಿಚ್ಚಿ ಮತ್ತೆ ಕಟ್ಟಲೇ ನಮಗೆ ಕನಿಷ್ಠ ಇಪ್ಪತ್ತು ವರ್ಷವಾದರೂ ಬೇಕು. ಅಂತಹದರಲ್ಲಿ ಕಲ್ಲು ಸಾಗಿಸಿ, ಚಂದವಾಗಿ ಕೆತ್ತಿ ಕಡೆದು ನಿಲ್ಲಿಸಿದ್ದಾರೆ! ಅದೂ ೭೦ ಕಿ.ಮೀ ದೂರದಿಂದ. ನಮ್ಮ ಚಿತ್ತ ಭಿತ್ತಿಯಲ್ಲಿ ಅರಳುವ ಅಚ್ಚರಿ ಎಂದರೆ ಇಷ್ಟೊಂದು ಕಲ್ಲುಗಳನ್ನು ಅಂದು ಸಾಗಿಸಿದ್ದು ಹೇಗೆ? ಇವನ್ನು ಸಾಗಿಸಲು 12,000 ಆನೆಗಳನ್ನು ಬಳಸಲಾಗಿದೆ ಎನ್ನಲಾಗುತ್ತದೆ!! ಇಷ್ಟೊಂದು ಆನೆಗಳಿರಬೇಕಾದರೆ ಆ ರಾಜನ ರಾಜ್ಯ ವಿಸ್ತಾರ ಎಷ್ಟಿರಬೇಕೆಂದು ಮನಸ್ಸಿನಲ್ಲೇ ಊಹಿಸಿ.

ವಿನ್ಯಾಸ ವಿಚಿತ್ರ

ಸಂಪೂರ್ಣ ದೇವಾಲಯ ಉದ್ದ ಅಗಲ ಅಳತೆ ಮಾಡಿದರೆ ಅದರೊಳಗೆ ಎರಡು ಸಮಾನ ಚೌಕಗಳು ಸಿಗುತ್ತವೆ. ಎರಡನೆಯ ಚೌಕದ ನಡು ಬಿಂದುವಿಗೆ ಶಿವನನ್ನು ಕೂರಿಸಿದರೆ ಮೊದಲ ಚೌಕದ ನಡುಬಿಂದುವಿಗೆ ಬೃಹತ್ ನಂದಿ! ನಂದಿಯ ತೂಕವೇ ಬರೋಬ್ಬರಿ 25 ಟನ್! ಅಂದರೆ 25000 ಕೆ.ಜಿ!

ಇಲ್ಲಿನ ವಿಮಾನ ಎಂದರೆ ಗೋಪುರಕ್ಕೆ ದೃಷ್ಟಿ ಹಾಯಿಸಿದರೆ ಇದರ ಎತ್ತರವೇ ಸುಮಾರು 216 ಅಡಿ. ಇಷ್ಟು ಬೃಹತ್ ವಿಮಾನ ಬೇರೊಂದಿಲ್ಲ. ತಮಿಳುನಾಡಿನ ಹೆಚ್ಚಿನ ಸ್ವಾಗತ ಗೋಪುರ ಎತ್ತರದಲ್ಲಿದ್ದು ಮುಖ್ಯಗೋಪುರದ ಎತ್ತರ ಕಡಿಮೆ. ಆದರೆ ಇಲ್ಲಿ ಮುಖ್ಯಗೋಪುರ ಬೃಹದಾಕಾರ ತಾಳಿದುದು ಅಚ್ಚರಿ. ಚೋಳ ನಿರ್ಮಾಣಗಳಲ್ಲೇ ಇದು ವಿಶಿಷ್ಟ.

ತಮಿಳುನಾಡಿನ ಬೇರೆ ದೇವಾಲಯಗಳಲ್ಲಿರುವಂತೆ ಇಲ್ಲಿನ ದೇವಾಲಯಕ್ಕೆ ವಿಮಾನವಿಲ್ಲ. ಈ ದೇವಾಲಯದ ಮುಖ್ಯ ವಿಮಾನ ಒಳಗಿನಿಂದ ಖಾಲಿಯಾಗಿರುವಂತೆ ನಿರ್ಮಿಸಲಾಗಿದೆ! ಇಲ್ಲಿನ ಕಲ್ಲುಗಳನ್ನು ಯಾವುದೇ ಸಿಮೆಂಟ್ ರೀತಿಯ ವಸ್ತುಗಳಿಂದ ಜೋಡಿಸದೇ ಇಂಟರ್ ಲಾಕ್ ವ್ಯವಸ್ಥೆಯ ಮೂಲಕ ಒಂದಕ್ಕೊಂದು ಜೋಡಿಸಲಾಗಿದೆ. ಮೇಲಿನ ತುದಿಯು 80 ಟನ್ ತೂಗುತ್ತದೆ; ಅಂದರೆ ಸುಮಾರು 80,000 ಕೆಜಿ! ಯಾವುದೇ ಕ್ರೇನುಗಳಿಲ್ಲದ ಕಾಲದಲ್ಲಿ ಅಷ್ಟೊಂದು ಎತ್ತರಕ್ಕೆ ಏರಿಸಿ ಕೂರಿಸಿದ್ದಾದರೂ ಹೇಗೆ? ಉಳಿದ ಮುಖ್ಯ ಭಾಗಗಳಿಗೆ ಮುಕ್ಕಾಗದಂತೆ ಇದನ್ನು ಜೋಡಿಸಲಾಗಿದೆ. ಅದರ ಸುತ್ತಲಿನ ಕೆತ್ತನೆಗೆ ಕಣ್ಣು ಹಾಯಿಸಿದರೆ ಎಲ್ಲೂ ಸಣ್ಣ ಮುಕ್ಕು ಕಾಣಿಸದು ಎಂತಹ ಅದ್ಭುತ ಇಂಜಿನಿಯರಿಂಗ್ ಜ್ಞಾನ! ಯಾವುದೇ ಕಲ್ಲಿನ ಭಾಗವೂ ಹಾಳಾಗದಂತೆ ಜೋಡಿಸಿದ್ದಾರೆ.

ಗರ್ಭಗುಡಿಯ ದ್ವಾರಕ್ಕಿಂತಲೂ ದೊಡ್ಡ ಲಿಂಗವನ್ನು ಜೋಡಿಸಲಾಗಿದೆ! ಗರ್ಭಗೃಹದೊಳಗೆ ಕೊನೆಯಲ್ಲಿ ಲಿಂಗವನ್ನು ಜೋಡಿಸಲಾಗುತ್ತದೆ. ಆದರೆ ಇಲ್ಲಿ ಲಿಂಗವೇ 12 ಅಡಿ ಎತ್ತರವಿರುವುದರಿಂದ ಯಾವ ರೀತಿಯಲ್ಲಿ ಕೂರಿಸಲಾಗಿದೆ ಎಂಬುದೇ ವಿಚಿತ್ರ! ಬೃಹತ್ ಪೀಠದ ಮೇಲೆ ಕೂರಿಸಲಾದ ಲಿಂಗವ ನೋಡುವುದೇ ಒಂದು ಆಹ್ಲಾದ! ದೇವಾಲಯದ ಏಕ ಪ್ರವೇಶ ದ್ವಾರ ನಂದಿ ಮತ್ತು ಶಿವ ಏಕ ರೇಖೆಯಲ್ಲಿದ್ದಾರೆ ಎಂಬುದೇ ವಿಚಿತ್ರ. ಬೇರೆ ದೇವಾಲಯಗಳಿಗೆ ಇದ್ದಂತೆ ಎಲ್ಲಾ ಕಡೆಯಿಂದಲೂ ಇಲ್ಲಿ ಪ್ರವೇಶವಿಲ್ಲ.

ಉತ್ತರದ ಮನುಷ್ಯ

ದೇವಾಲಯಕ್ಕೆ ಒಂದು ಸುತ್ತು ಬಂದರೆ ಉತ್ತರದಿಕ್ಕಿನಲ್ಲಿ ಕಂಡು ಬರುವ ಇಬ್ಬರು ವಿದೇಶಿಯರು ಗಮನ ಸೆಳೆಯುತ್ತಾರೆ!

ಭಾರತದ ತಮಿಳುನಾಡಿನಿಂದ ಇಂಡೋನೇಶಿಯಾ, ಮಾಲ್ಡೀವ್ಸ್, ಲಕ್ಷದ್ವೀಪದವರೆಗೆ ಹಬ್ಬಿ ಹರಡಿದ ಈತನ ವ್ಯಾಪಾರ ವಿದೇಶದಲ್ಲೂ ಹಲವು ಬೃಹತ್ ನಿರ್ಮಿತಿಗಳಿಗೆ ಅಡಿಗಲ್ಲು ಹಾಕಿಕೊಟ್ಟಿತ್ತು. ಇಂತಹುದೇ ಹಲವು ದೇವಾಲಯ 10ನೆಯ ಶತಮಾನದಲ್ಲಿ ಈಗಿನ ಇಂಡೋನೇಶಿಯ, ಕಾಂಬೋಡಿಯ, ಮಲಯ, ಬಾಲಿ ದ್ವೀಪಗಳಲ್ಲಿ ನಿರ್ಮಾಣಗೊಳ್ಳಲು ಈ ರಾಜರ ಪ್ರೇರಣೆ, ಸಹಾಯವೂ ಕಾರಣ! ಆದರೆ ಇವರಾರನ್ನೂ ಹೋಲದೆ ಯಾವುದೋ ಯುರೋಪಿನ ಪ್ರವಾಸಿಯಂತಿರುವ ಒಬ್ಬನನ್ನು ಉತ್ತರದ ಕಡೆಯ ಗೋಪುರದಲ್ಲಿ ಕೆತ್ತಲಾಗಿದೆ. ಜೊತೆಗೆ ಇನ್ನೊಂದು ಹೆಣ್ಣಿನ ಮುಖವನ್ನೂ ಕೆತ್ತಲಾಗಿದೆ.

ಮಲಯ, ಇಂಡೋನೇಶಿಯಾ, ಜಾವಾ ದ್ವೀಪಗಳಲ್ಲಿ ಹಿಂದೂ ಸಂಸ್ಕೃತಿ ಹರಡಿತ್ತು ಜೊತೆಗೆ ರಾಜ ರಾಜ ಚೋಳನ ಪ್ರಭಾವವಿತ್ತು. ಅಲ್ಲಿನ ಹೆಚ್ಚಿನ ಎಲ್ಲಾ ದೇವಾಲಯಗಳು ದ್ರಾವಿಡ ಶೈಲಿಯನ್ನು ಹೋಲುತ್ತವೆ.

ಈ ಎರಡೂ ಮುಖಗಳು ಈ ದೇವಾಲಯಕ್ಕೊಂದು ವಿಕ್ಷಿಪ್ತ ನೋಟ ಒದಗಿಸುತ್ತದೆ. ಹಲವರ ಪ್ರಕಾರ ಇದು ಯುರೋಪಿನ ಮಾರ್ಕೊ ಪೋಲೋ ಮತ್ತು ಆತನ ಮಡದಿಯ ಚಿತ್ರ ಎನ್ನಲಾಗಿದೆ. 1600 ರ ಸುಮಾರಿಗೆ ಇದನ್ನು ಸೇರಿಸಲಾಗಿದೆ ಎನ್ನುತ್ತಾರೆ. ಮಾರ್ಕೊ ಪೋಲೋ ಇಟಲಿಯ ಪ್ರವಾಸಿಗ. ಎಲ್ಲಿಯ ಇಟಲಿ ಎಲ್ಲಿಯ ಭಾರತ. ಆತನ ಚಿತ್ರ ಸೇರಿಸುವ ಉದ್ದೇಶವಾದರೂ ಏನು? ಅದೂ ಒಬ್ಬ ವಿದೇಶಿ ಪ್ರವಾಸಿಗನನ್ನು ದೇವಾಲಯದ ಹೊರ ಭಿತ್ತಿಯಲ್ಲಿ ಬಿತ್ತರಿಸುವ ಉದ್ದೇಶವಾದರೂ ಏನು? ಎಲ್ಲವೂ ನಿಗೂಢ. ಎರಡೆರಡು ಬಾರಿ ಭೇಟಿಕೊಟ್ಟರೂ ಈ ನಿಗೂಢ ತಿಳಿಯಲಾಗಿಲ್ಲ! ಇನ್ನೊಮ್ಮೆ ಹೋಗಿ ಬರಬೇಕು.

ವಿಚಿತ್ರ ವಿಮಾನ ನಿರ್ಮಿತಿ

1003ನೆಯ ಇಸವಿಯಲ್ಲಿ ಇಂತಹ ಬೃಹತ್ ವಿಮಾನವೊಂದನ್ನು ಸಾಕಾರಗೊಳಿಸಿದ್ದು ಅದ್ಭುತ. ಇದರ 216 ಅಡಿ ಎಂತವರನ್ನೂ ದಂಗು ಬಡಿಸುತ್ತೆ. ಕೆಲವು ಗೈಡ್‌ಗಳ ಪ್ರಕಾರ 6ಕಿ.ಮೀ ಉದ್ದದ ಮಣ್ಣಿನ ರಾಶಿ ನಿರ್ಮಿಸಿ ನಿಧ ನಿಧಾನಕೆ ಇಂಟರ್‌ಲಾಕ್‌ಗಳನ್ನು ಜೋಡಿಸುತ್ತಾ ಮೇಲಿನವರೆಗೂ ನಿರ್ಮಿಸಲಾಗಿದೆ ಎನ್ನುತ್ತಾರೆ. ಏನೇ ಆದರೂ ಅಂದಿನ ಅವರ ಇಂಜಿನಿಯರಿಂಗ್ ತಂತ್ರಗಾರಿಕೆಗೆ ತಲೆಬಾಗಲೇಬೇಕು. ಪ್ರತೀ ಕಲ್ಲಿನ ಹೊರ ಭಿತ್ತಿಯಲ್ಲಿ ಕೆತ್ತಲ್ಪಟ್ಟ ಕೆತ್ತನೆ ಎಂತವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ!

ಜೈನಿಸಂ, ಬುದ್ಧಿಸಂ ನಂತರ ಆಚರಣೆಗೆ ಬಂದ ಶೈವ ಪಂಥವು ಪ್ರಧಾನವಾಗುತ್ತಾ ಬಂದು ಇಂತಹ ಅದ್ಭುತ ಶಿವನ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಒಂದು ಧರ್ಮವು ಇನ್ನೊಂದನ್ನು ಹಿಂದೆ ಹಾಕುತ್ತಾ ಕಾಲನ ಈ ನಿರ್ದಯ ಪ್ರಕ್ರಿಯೆಗೆ ಮೂಕ ವಿಸ್ಮಯನಾಗಿದ್ದೇನೆ. ಕರ್ನಾಟಕದಲ್ಲೂ ಜೈನ ಸಂಪ್ರದಾಯದ ದೇವಾಲಯಗಳು ಶಿವಾಲಯಗಳಾದುದಕ್ಕೆ ಹೂಲಿಯ ಪಂಚಲಿಂಗೇಶ್ವರ ಸನ್ನಿಧಿ ಸಾಕ್ಷಿಯ ನುಡಿಯುತ್ತದೆ. ಭಾರತದ ಉದ್ದಗಲಕ್ಕೂ ಕಾಲನ ಜೊತೆಗೆ ಬದಲಾದ ಸಮುದಾಯಗಳ ಗುಪ್ತ ಕತೆಯನ್ನು ಈ ದೇವಾಲಯಗಳು ನಮಗೆ ಅರಹುತ್ತವೆ.

ಮಾರ್ಕೊ ಪೋಲೋ ಒಂದು ಅಡಿ ಟಿಪ್ಪಣಿ

ತನ್ನ ಹದಿನೇಳನೆಯ ವಯಸ್ಸಿನಲ್ಲಿ ವೆನಿಸ್ ತೊರೆದು ಎತ್ತರದ ಪರ್ವತಗಳ ಹತ್ತಿ, ಮರುಭೂಮಿ ಹಾದು ಮಂಗೋಲಿಯ ಸೇರುತ್ತಾನೆ. ಅಲ್ಲಿನ ಭಾಷೆ ಕಲಿತು ಕುಬ್ಲೈ ಖಾನ್‌ನ ಆಸ್ಥಾನ ಸೇರಿ ಆತನ ವಿದೇಶಾಂಗ ಸಚಿವನಂತೆ ಕೆಲಸ ಮಾಡುತ್ತಾನೆ. ರೇಷ್ಮೆ ದಾರಿಯಲ್ಲಿ ಪಯಣಿಸಿ ಭಾರತಕ್ಕೂ ಬರುತ್ತಾನೆ. ಪಶ್ಚಿಮಕ್ಕೆ ಪೂರ್ವದ ಪೂರ್ಣ ಒಳಸುಳಿಗಳನ್ನು ತಿಳಿಸಿ ಹೇಳುತ್ತಾ ಇಲ್ಲಿನ ಸಂಪತ್ತಿನ ಕುರಿತೂ ವಿವರಿಸುತ್ತಾನೆ. ಈತನ ಪುಸ್ತಕವೇ ಕ್ರಿಸ್ಟೋಫರ್ ಕೊಲಂಬಸ್‌ನ ಪ್ರಯಾಣಕ್ಕೊಂದು ಪ್ರೇರಣ. ಆತನ ಹಡಗಿನಲ್ಲಿ ಈ ಪುಸ್ತಕವನ್ನು ಕೊಂಡೊಯ್ಯುತ್ತಿದ್ದ ಎನ್ನುತ್ತದೆ ಇತಿಹಾಸ. ಈತನ 24 ವರ್ಷಗಳ ಪಯಣದ ಕತೆಯನ್ನು ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಪಶ್ಚಿಮದ ಸಾಧನೆಗೆ ಪೂರ್ವದ ಅದರಲ್ಲೂ ಭಾರತದ ಕೊಡುಗೆ ಅಪಾರ ಎಂಬುದು ನನ್ನ ನಂಬಿಕೆ ವಿಶ್ವಾಸ.

ಅದು ಮಾರ್ಕೊ ಪೋಲೋನ ಮೂರ್ತಿ ಎನ್ನಲು ಇತಿಹಾಸದ ಅನೇಕ ಬಗ್ಗಡಗಳನ್ನು ಬಗೆಯಬೇಕು. ಸ್ಥಳೀಯ ಮಾಹಿತಿಯನ್ನು ಕೆದಕಬೇಕು.

ಈ ಎಲ್ಲಾ ನಿರ್ಮಿತಿಗಳ ಹೊರತಾಗಿಯೂ ದೇವಾಲಯದ ಹೊರಸುತ್ತಿನಲ್ಲಿ ಬೃಹತ್ ಗೋಡೆ ಮತ್ತು ಕಂದಕ ನಿರ್ಮಿಸಿದ್ದಾರೆ. ಇದನ್ನು ನಾಯಕ್ ಸಾಮ್ರಾಟ್‌ರು ನಿರ್ಮಿಸಿದ್ದು ಎನ್ನಲಾಗಿದೆ. ಇವೆಲ್ಲವು ಇದು ಕೋಟೆಯ ಒಂದು ಭಾಗವಾಗಿತ್ತು ಎಂಬುದು ಇಂದಿನ ಊಹೆಯೋ ನಿಜವೊ ತಿಳಿಯಬೇಕು.

ದೇವಾಲಯದ ಭಿತ್ತಿಯಲ್ಲಿ ಶಿವನ 108 ಅವತಾರ ಕೆತ್ತಲಾಗಿದೆ. ಬಲು ಅಪರೂಪವಾಗಿ ಶಿವನ ಈ 108 ಅವತಾರಗಳು ಕಾಣಸಿಗುತ್ತವೆ. ತಮಿಳುನಾಡಿನ ದೇವಾಲಯವಲ್ಲದೆ ಬೇರೆಲ್ಲೂ ನೋಡಿದ್ದಿಲ್ಲ. ಇದರ ಜೊತೆಗೆ ದೇವಾಲಯದ ಹಿಂದಿರುವ ಶಿವನೇ ಶ್ರೇಷ್ಠ ಎಂಬಂತೆ ಭಿತ್ತರಿಸುವ ರಚನೆ ನಿಮ್ಮನ್ನು ಅಚ್ಚರಿಗೆ ನೂಕುತ್ತದೆ. ತಮಿಳುನಾಡಿನ ಉದ್ದಕ್ಕೂ ದೇವಾಲಯ ಭಿತ್ತಿಯಲ್ಲಿರುವ ಈ ರಚನೆಗಳು ವಿಚಿತ್ರವಾದದೊಂದು ಶಿವನ ಕುರಿತಾದ ಊಹಾತೀತ ಕಲ್ಪನೆಯನ್ನು ನೀಡುತ್ತದೆ. ವಿಷ್ಣು ಮತ್ತು ಬ್ರಹ್ಮನಿಗಿಂತ ಕಾಲನೇ ಶ್ರೇಷ್ಠ ಕಾಲತೀತ ಕಲ್ಪನೆಯನ್ನು ನೋಡುಗರ ಮನದಲ್ಲಿ ಮೂಡಿಸುತ್ತದೆ.

ನಂದಿಯ ನವಿರು ಕತೆಗಳು

ದೇವಾಲಯದ ಮೊದಲ ಚೌಕದ ನಡು ಬಿಂದುವಿಗೆ ಸರಿಯಾಗಿ ನಿರ್ಮಿಸಲಾದ ಮಂಟಪ ಮತ್ತು ನಂದಿ ಸುಮಾರು 25 ಟನ್ ತೂಗುತ್ತದೆ!

ಸಾಮಾನ್ಯವಾಗಿ ನಂದಿಯ ದೃಷ್ಟಿ ಮುಖ್ಯ ದೇವತೆಯ ಮೇಲಿರುವುದಿಲ್ಲ. ಆದರೆ ಈ ದೇವಾಲಯದ ನಂದಿಯ ದೃಷ್ಟಿ ಮುಖ್ಯ ಲಿಂಗದ ಮೇಲಿದೆ! ದೇವಾಲಯ ನಿರ್ಮಿಸುವಾಗಿನ ನಂದಿಯು ಮಂಟಪದಿಂದ ಬೆಳೆಯುತ್ತಾ ಮಂಟಪದ ಹೊರ ಚಾಚಲು ಪ್ರಾರಂಭವಾದ ನಂತರ ಹೊಸ ದೊಡ್ಡ ನಂದಿಯನ್ನು ದೇವಾಲಯದಲ್ಲಿ ನಿರ್ಮಿಸಿ ಪ್ರತಿಷ್ಠಾಪಿಸಲಾಯಿತು. ಬಹಳ ದೂರದಿಂದ ಈ ಕಲ್ಲುಗಳನ್ನು ಇಲ್ಲಿಗೆ ಸಾಗಿಸಿ ನಿರ್ಮಿಸಿರುವುದು ಒಂದು ದೊಡ್ಡಕತೆ. ಇದಲ್ಲದೆ ಹತ್ತು ಹಲವು ಜನಪದೀಯ ಕತೆ ನಂದಿ ಬಾಲದಂತೆ ಬೆಳೆಯುತ್ತಲೇ ಇದೆ. ನಂದಿಯ ಬಾಲದ ಬುಡದಲ್ಲಿ ಕಪ್ಪೆಯೊಂದು ಬೆಳೆಯುತ್ತಿತ್ತು. ಅದನ್ನು ಹೊರತೆಗೆದು ಕೆರೆಯೊಂದಕ್ಕೆ ಬಿಡಲಾಯಿತು ಎಂಬುದು ಜನಪದೀಯ ಮತ್ತೊಂದು ಕತೆ!

ಬರೆಯುತ್ತಾ ಹೋದಂತೆ ಬೃಹದೀಶ್ವರನ ಬಗೆಹರಿಯದ ಅನೇಕ ನಿಗೂಢಗಳು ಸಾವಿರ ವರ್ಷವನ್ನು ದಾಟಿ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತಲಿದೆ.

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ