ದೇವರನ್ನು ಇಟ್ಟಿದ್ದ ಗರ್ಭಗುಡಿಗೆ ದೀಪ ಇಲ್ಲ. ಗರ್ಭ ಗುಡಿಗೆ ದೀಪ ಹಾಕದೇ ಕತ್ತಲಲ್ಲಿ ದೇವರನ್ನು ಹುಡುಕುವ ಪ್ರಯೋಗ ನಮಗೆ ಬಹುಶಃ ಕೇರಳದ ಕೊಡುಗೆ ಇರಬೇಕು. ಅಲ್ಲಿನ ಪದ್ಮನಾಭ ದೇವರ ದೇವಸ್ಥಾನದಲ್ಲಿ ಲೈಟು ಇಲ್ಲ ಮತ್ತು ಎಷ್ಟೇ ರಶ್ಷು ಇದ್ದರೂ ಜನ ಕತ್ತಲಲ್ಲೇ ದೇವರನ್ನು ಹುಡುಕಬೇಕು. ಹೊರಗಿನ ಪ್ರಾಂಗಣದಲ್ಲಿ ನಿಂತು ದೇವರು ಅಲ್ಲಿದ್ದಾನೆ ಅಂತ ನೋಡಿದ್ದು ಅಷ್ಟೇ. ಮಸಕು ಮಸಕಾಗಿ ಒಂದು ಕಪ್ಪು ಪ್ರತಿಮೆಯ ಮುಖ ಕಂಡ ಹಾಗಾಯಿತು ಅಷ್ಟೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

೧೯ನೇ ಸಂಚಿಕೆಯಲ್ಲಿ ಮಾಗೋಡು ಫಾಲ್ಸ್‌ಗೆ ಹೋಗಿ ಗ್ರಹಣ ನೋಡಿದ ಸಂಗತಿ ಬರೆದಿದ್ದೆ. ಆಗಿನ ಗ್ರಹಣ ಹೇಗೆ ಇರುತ್ತಿತ್ತು ಅಂತ ಹೇಳುತ್ತಾ (ಗ್ರಹಣ ಸಮಯದಲ್ಲಿ) ಸದ್ಯದ ಪರಿಸ್ಥಿತಿ ತುಂಬಾ ಪ್ರಗತಿ ಸಾಧಿಸಿದೆ ಎನ್ನುವ ಅರ್ಥ ಬರುವ ಹಾಗೆ ನನ್ನ ಅನಿಸಿಕೆ ತಿಳಿಸಿದ್ದೆ. ಈ ಮಧ್ಯೆ ಮೊನ್ನೆ ಅಕ್ಟೋಬರ್ ಕೊನೆ ವಾರದಲ್ಲಿ ಚಂದ್ರ ಗ್ರಹಣ ಆಯ್ತು ನೋಡಿ, ಅವತ್ತಿನ ನನ್ನ ಅನುಭವ ಹಂಚಿಕೊಳ್ಳಬೇಕು.. ಅದೇ ಸಮಯದಲ್ಲಿ ದಸರಾ ಉತ್ಸವ ಮುಗಿದಿತ್ತು. ದಸರಾ ಸಮಯದಲ್ಲಿ ಮೈಸೂರಿಗೆ ಹೋದರೆ ಬರೀ ದೊಂಬಿ, ನೂಕಾಟ ಮತ್ತು ಗೊಂದಲ ಅಂತ ಅನುಭವದಿಂದ ತಿಳಿದಿದ್ದೆ. ದಸರಾ ಮುಗಿದ ನಂತರ ಮೈಸೂರಿಗೆ ಅಲ್ಲಿನ ದೀಪೋತ್ಸವ ನೋಡಲು ನೆಂಟರ ಸಂಗಡ ಹೋದೆ. ಸಾಲು ಸಾಲು ದೀಪ ಅರಮನೆ ನೋಡಿಯಾಯ್ತಾ. ಮಾರನೇ ದಿವಸ ಭೂ ವರಾಹ ಸ್ವಾಮಿ ದೇವರನ್ನು ನೋಡಲು ಕಲ್ಲಹಳ್ಳಿಗೆ ಹೋದೆವು. ಕನ್ನಂಬಾಡಿ ಹಿನ್ನೀರಿನ ಫಾಸಲೆಯಲ್ಲಿ ಈ ಕಲ್ಲಹಳ್ಳಿ ಇದೆ. ಇಲ್ಲಿ ಒಂದು ಭೂ ವರಾಹ ಸ್ವಾಮಿ ದೇವಸ್ಥಾನ ಇದೆ. ಹಳೆಯ ದೇವಸ್ಥಾನ ಐದಾರು ವರ್ಷದಿಂದ ಮರು ಹುಟ್ಟಿಗೆ ಯತ್ನಿಸುತ್ತಿದೆ. ದೊಡ್ಡ ದೊಡ್ಡ ತುಂಡರಿಸಿದ ಗ್ರಾನೈಟ್ ಕಲ್ಲುಗಳು ಮತ್ತು ಅವುಗಳನ್ನು ಯಂತ್ರದ ಮೂಲಕ ಸಿದ್ಧಮಾಡಬೇಕಾದ ಸ್ಥಳದ ಮಧ್ಯೆ ಅಲ್ಲಲ್ಲಿ ಜಾಗ ಮಾಡಿಕೊಂಡು ದೇವಸ್ಥಾನ ಸೇರಬೇಕು. ಎಲ್ಲವೂ ಸಜ್ಜಾದರೆ ಇನ್ನೊಂದು ಎರಡು ವರ್ಷದಲ್ಲಿ ಇಲ್ಲೊಂದು ದೊಡ್ಡ ದೇವಸ್ಥಾನ ಬರುವ ಸೂಚನೆ ಎದ್ದು ಕಾಣಿಸುತ್ತದೆ. ಪಕ್ಕದಲ್ಲೇ ಕಾವೇರಿ ಹರಿಯುತ್ತಾಳೆ. ಈಗ ಅಲ್ಲಿ ನೀರೇ ಇಲ್ಲದೇ ಬಯಲು ಬಯಲು ಮತ್ತು ಬರಡು ಜಾಗ. ಕಾವೇರಿ ತಮಿಳುನಾಡಿಗೆ ಹೋಗ್ತಾ ಇದೆ, ಇನ್ನು ನಮಗೆಲ್ಲಿ ನೀರು ಅಂತ ಅಲ್ಲಿನವರ ಪರಿತಾಪ.

ಕಾವೇರಿ ಹರಿಯುವ ಕಾಲುವೆ ಬರಿದಾಗಿ ಹಾಳು ಸುರಿಯುತ್ತಿದೆ ಮತ್ತು ಎಲ್ಲೆಲ್ಲೂ ಒಣಗಿದ ಬಿರುಕು ಬಿಟ್ಟ ನೆಲ. ದೂರದಲ್ಲಿ ಕಾಣಿಸುವ ತೆಂಗಿನ ಮರಗಳ ಮೆಲರ್ಧ ಭಾಗ ಒಣಗಿ ಹಳದಿ ಬಣ್ಣಕ್ಕೆ ತಿರುಗಿದೆ. ದೇವಸ್ಥಾನ ಬರುವ ಭಕ್ತರಿಗೆ ಎಂದೇ ಪಾನಿ ಪೂರಿ, ಕಡಲೆ ಪುರಿ, ಚಕ್ಲಿ ಕೋಡುಬಳೆ, ಸೌತೆಕಾಯಿ, ಬೋಂಡಾ, ಜೂಸ್ ಅಂಗಡಿಗಳು ತಲೆ ಎತ್ತಿವೆ. ದೇವಸ್ಥಾನಕ್ಕೆ ಇನ್ನೂ ಒಂದೆರೆಡು ಕಿಮೀ ಇರಬೇಕಾದರೆ ಜನ ಜಂಗುಳಿ. ಅಲ್ಲೋ ಒಂದೇ ರಷ್ಶು ಅಂದರೆ ರಶ್ಶು. ನೋಡಿದರೆ ಎಲ್ಲರೂ ಗ್ರಹಣದ ಸ್ನಾನ ಪೂಜೆ ಮುಗಿಸಿ ದೇವರನ್ನ ನೋಡಲು ಬಂದಿರೋರು! ಗಂಟೆಗಟ್ಟಲೆ ಕ್ಯೂ ನಿಂತು ದೇವರನ್ನ ನೋಡಿದೆವು ಅಂತ ಅಂದುಕೊಂಡು ಆಚೆ ಬಂದರೆ ಪ್ರಾಂಗಣದಲ್ಲಿ ಅದೇನೋ ಹೋಮ! ಅಲ್ಲಿ ಗ್ರಹಣದ ಶಾಂತಿ ಹೋಮ ಅಂತೆ. ದೇವರನ್ನು ನೋಡಿದೆವು ಅಂತ ಅಂದುಕೊಂಡು ಅಂದರೆ ನಿಜವಾಗಲೂ ಅಲ್ಲಿ ದೇವರ ಪ್ರತಿಮೆ ನೋಡಲು ಆಗಲಿಲ್ಲ, ರಷ್ಶು ಅಂದರೆ ರಷ್ಶು.

ದೇವರನ್ನು ಇಟ್ಟಿದ್ದ ಗರ್ಭಗುಡಿಗೆ ದೀಪ ಇಲ್ಲ. ಗರ್ಭ ಗುಡಿಗೆ ದೀಪ ಹಾಕದೇ ಕತ್ತಲಲ್ಲಿ ದೇವರನ್ನು ಹುಡುಕುವ ಪ್ರಯೋಗ ನಮಗೆ ಬಹುಶಃ ಕೇರಳದ ಕೊಡುಗೆ ಇರಬೇಕು. ಅಲ್ಲಿನ ಪದ್ಮನಾಭ ದೇವರ ದೇವಸ್ಥಾನದಲ್ಲಿ ಲೈಟು ಇಲ್ಲ ಮತ್ತು ಎಷ್ಟೇ ರಶ್ಷು ಇದ್ದರೂ ಜನ ಕತ್ತಲಲ್ಲೇ ದೇವರನ್ನು ಹುಡುಕಬೇಕು. ಹೊರಗಿನ ಪ್ರಾಂಗಣದಲ್ಲಿ ನಿಂತು ದೇವರು ಅಲ್ಲಿದ್ದಾನೆ ಅಂತ ನೋಡಿದ್ದು ಅಷ್ಟೇ. ಮಸಕು ಮಸಕಾಗಿ ಒಂದು ಕಪ್ಪು ಪ್ರತಿಮೆಯ ಮುಖ ಕಂಡ ಹಾಗಾಯಿತು ಅಷ್ಟೇ.

ಅದು ಅಂದರೆ ಕಲ್ಲಹಳ್ಳಿ ಮುಗಿಸಿ ಮತ್ತೊಂದು ದೇವಸ್ಥಾನಕ್ಕೆ ನಂಜನಗೂಡಿಗೆ ಮಾರನೇ ದಿವಸ ಹೋದರೆ ಅಲ್ಲೂ ಅದೇ ಸಂಭ್ರಮ, ಜನವೋ ಜನ, ನೂಕು ನುಗ್ಗಲು. ಮೂರು ಗಂಟೆ ಕ್ಯೂನಲ್ಲಿ ನಿಂತು ದೇವರ ಮುಂದೆ ಬಂದರೆ, ಅಲ್ಲೇ ನಿಂತು ಅಲ್ಲಿನ ವ್ಯವಸ್ಥೆ ನೋಡುತ್ತಿದ್ದ ಹೆಣ್ಣು, ಗಂಡು ಪೊಲೀಸು ಒಬ್ಬಬ್ಬರನ್ನೂ ಹಿಡಿದು ಎಳೆದು ಎಳೆದು ಆಚೆ ಬಿಸಾಕುತ್ತಿದ್ದರು. ಇನ್ನ ದೇವರನ್ನ ನೋಡೋದು ಎಲ್ಲಿ! ಅವತ್ತೂ ಸಹ ಗ್ರಹಣದ ಪ್ರಯುಕ್ತ ಜನ ಹೆಚ್ಚು ಮತ್ತು ಸುಮಾರು ಭಕ್ತರು ಶಾಂತಿ ಮಾಡಿಸಲು ಬಂದಿರುತ್ತಾರೆ ಎಂದು ಅಲ್ಲಿ ತೆಂಗಿನಕಾಯಿ ಮಾರುತ್ತಿದ್ದವರು ಹೇಳಿದರು.

ನಮ್ಮ ಈ ಪೀಳಿಗೆಯ ಹುಡುಗರು ಯೋಚನೆ ಮಾಡೋ ರೀತಿ ಬದಲಾಗಿಲ್ಲವಾ ಅನಿಸಿತು. ಹಲವಾರು ಟಿವಿ ಚಾನಲ್‌ಗಳು ಮತ್ತು ನಮ್ಮ ಶಾಸ್ತ್ರ ಪಾರಂಗತರು ಗ್ರಹಣದ ಸೈಡ್ ಎಫೆಕ್ಟ್ಸ್ ಮೇಲೆ ತಿಂಗಳಾನುಗಟ್ಟಲೆ ಪ್ರೋಗ್ರಾಂ ಮಾಡಿ ಮಾಡಿ ಮಾಡಿ ಬಿತ್ತರಿಸುತ್ತವೆ. ಗೂಗಲ್ ಮತ್ತು ಇತರ ಜ್ಞಾನವಾಹಿನಿಗಳು ಗ್ರಹಣ ಮುಂತಾದ ನೈಸರ್ಗಿಕ ಕ್ರಿಯೆಗಳನ್ನು ಕುರಿತು ಅದೆಷ್ಟೇ ಮಾಹಿತಿ ಕೊಟ್ಟರೂ ಅದರ ಪ್ರಭಾವ ಎಷ್ಟರ ಮಟ್ಟಿಗೆ ಆಗಿದೆ ಅಂತ ತಲೆಗೆ ಯೋಚನೆ ಬಂದಿತು. ಇದೇ ಯೋಚನೆಯಲ್ಲಿ ತಲೆ ತುಂಬಾ ಕಲಾಸಿಪಾಳ್ಯ ಮಾಡಿಕೊಂಡು ಸ್ನೇಹಿತರ ಮನೆ ಹೊಕ್ಕೆ. ಅಲ್ಲಿ ಅವರ ನಂಟರು ಮಾತನಾಡುತ್ತಾ ಕೂತಿದ್ದರು. ಅವರ ಪೈಕಿ ಯಾರಿಗೋ ಈ ಗ್ರಹಣ ಬಾರೀ ಕ್ರೂರವಂತೆ. ಅದಕ್ಕೆ ಯಾರೋ ದೇವಸ್ಥಾನದ ಇನ್ಫ್ಲುಯೆನ್ಸ್ ಇರುವ ಮನುಷ್ಯರ ಮೂಲಕ ಆನ್ ಲೈನ್ ಶಾಂತಿ ಮಾಡಿಸಿ ಆನ್ ಲೈನ್‌ನಲ್ಲಿ ನೆಂಟರಿಗೆ ಲಿಂಕ್ ಮಾಡಿ ಕೊಟ್ಟರಂತೆ! ಅಲ್ಲಿ ನಂಟರಿಗೆ ನೇರ ಪ್ರಸಾದ ರೂಪದ ಆಶೀರ್ವಾದ ದೊರೆಯಿತು. ಇವರು ಕಾಲೇಜಿನಲ್ಲಿ ಫಿಸಿಕ್ಸ್ ಪ್ರೊಫೆಸರು, ಮಗ ಕೆಮಿಸ್ಟ್ರಿ ಪಿಎಚ್ ಡಿ ಮಾಡಿ ಅಮೆರಿಕದಲ್ಲಿ ಉದ್ಯೋಗಸ್ಥ! ಇವರ ಕತೆ ಕೇಳುತ್ತಾ ಕೇಳುತ್ತಾ ಯಾಕೋ ಡಾ. ಎಚ್ಚೆನ್ ನೆನಪಾದರು. ಪಾಪ ಅವರು ಬದುಕಿಲ್ಲ, ಸತ್ತು ದೊಡ್ಡ ತಲೆನೋವು ತಪ್ಪಿಸಿಕೊಂಡರು! ಅಂದಹಾಗೆ ಈ ಫಾರಿನ್‌ನವರಿಗೆ ಮಾತ್ರ ಈ ಶಾಂತಿ ಎನ್ನುವ ಮೇನಿಯಾ ಇದೆಯಾ ಅಂದರೆ ಊಹೂಂ ಅದು ಈಗ ಸರ್ವವ್ಯಾಪಿ.

ಮೊದಮೊದಲು ಅಂದರೆ ಒಂದು ಐವತ್ತು ವರ್ಷ ಹಿಂದೆ ಗ್ರಹಣ ಶಾಂತಿಯನ್ನು ಮೇಲ್ವರ್ಗದ ಜನ ಮಾಡಿಸಿಕೊಳ್ಳೋದು ಗೊತ್ತಿತ್ತು. ದೇವಸ್ಥಾನಗಳಲ್ಲಿ ಅವರದೇ ದೊಡ್ಡ ಗುಂಪು ಇರುತ್ತಿತ್ತು ಮತ್ತು ಒಂದು ರೀತಿಯ ಸಂಭ್ರಮ ಎದ್ದು ಕಾಣುತ್ತಿತ್ತು. ಈಗ ಅದು ಎಲ್ಲಾ ವರ್ಗದ ಎಲ್ಲಾ ಸ್ತರದವರಲ್ಲೂ ತುಂಬಿಹೋಗಿದೆ. ದೇವಸ್ಥಾನಗಳ ಮುಂದೆ ಹೋದರೆ ಸಾಕು, ನಿಮಗೆ ಗ್ರಹಣದ ಎಫೆಕ್ಟ್‌ನಿಂದ ತಾಂಡಾ ಹೊಡೆದಿರುವ ಜನ ಕಾಣುತ್ತಾರೆ. ಅವರ ಮುಖದಲ್ಲಿ ಭಯ ಭೀತಿ ತುಂಬಿ ಪ್ರೇತ ಕಳೆ ಎದ್ದು ರಾಚುತ್ತಾ ಇರುತ್ತೆ. ಪಾಪ ಅನಿಸಿಬಿಡುತ್ತದೆ, ಅವರನ್ನ ನೋಡಿದ ಕೂಡಲೇ. ಮೊನ್ನೆ ಒಬ್ಬ ರಾಜಕಾರಣಿ ಒಬ್ಬರು ಗ್ರಹಣದ ಶಾಂತಿ ಮಾಡಿಸಿಕೊಂಡಿದ್ದು ಓದಿದ್ದೆ. ನನ್ನ ಸ್ನೇಹಿತನ ಬಂಧುಗಳು ಉತ್ತರ ಭಾರತಕ್ಕೆ ಪ್ರವಾಸ ಹೋಗಿದ್ದರು. ಆಗ ಒಂದು ಗ್ರಹಣ ಬಂದು ಬಿಟ್ಟಿತು. ಗ್ರಹಣ ಮುಗಿದ ನಂತರ ನಿಂತಿದ್ದ ರೈಲಿನ ಬೋಗಿ ಸೇರಿ ಅಲ್ಲಿ ಸ್ನಾನ ಜಪ ತಪ ಮುಗಿಸಿಕೊಂಡು ನಂತರ ಮುಂದಿನ ರೈಲು ಹತ್ತಿದರು. ಆಗಾಗ ಇದು ನೆನಪಿಗೆ ಬಂದು ಅವರ ಬಗ್ಗೆ ಸಂತೋಷ ಹುಟ್ಟುತ್ತೆ. ಎಂತಹ ಪರಿಸ್ಥಿತಿಯಲ್ಲೂ, ವಿಜ್ಞಾನ ಮುಂದುವರೆದ ಈ ದಿನಗಳಲ್ಲಿಯೂ ಸಹ ತಮ್ಮ ಆ ಕಾಲದ ಸೈನ್ಸ್ ಓದಿಗೆ ರಜಾ ಕೊಟ್ಟು ತಾವು ನಂಬಿದ ಆಚಾರ ವಿಚಾರ ಪಾಲಿಸುತ್ತಾರೆ ಎಂದು!

ಗ್ರಹಣದ ಸಮಯದಲ್ಲಿ ನದಿ ತೀರದಲ್ಲಿ ಕುಳಿತು ಜಪ ತಪ ಮಾಡಿ ಗ್ರಹಣ ಬಿಟ್ಟ ನಂತರ ತರ್ಪಣ ಕೊಡುವ ಆಸ್ತಿಕರೊಬ್ಬರು ನನಗೆ ತುಂಬಾ ಪರಿಚಯ. ಅವರನ್ನ ನೋಡಿದಾಗ ಅವರ ನಂಬಿಕೆ ಮತ್ತು ಅವರ ಪ್ರಾಮಾಣಿಕ ನಡವಳಿಕೆ ಬಗ್ಗೆ ಗೌರವ ಮತ್ತು ಅಭಿಮಾನ ಹುಟ್ಟುತ್ತೆ. ಸಮಸ್ಯೆಗಳನ್ನು ಸಾರ್ವತ್ರಿಕ ಮಾಡಿ ವಿಶ್ಲೇಷಿಸಿ ಮತ್ತು ಅದರಿಂದ ಆಗಬಹುದಾದ ಪರಿಣಾಮಗಳನ್ನು ವಿಶ್ಲೇಷಿಸಿ ಎಂದು ಲಾಜಿಕ್ ತರಗತಿಯಲ್ಲಿ ಪಾಠ ಹೇಳುತ್ತಾರೆ. ಗ್ರಹಣ ಕಾಲದ ಆಚರಣೆ ಮತ್ತು ಸಂಪ್ರದಾಯಗಳನ್ನು ಬಿಡಬೇಕು ಅವುಗಳಿಗೆ ವೈಜ್ಞಾನಿಕ ಬೇಸ್ ಇಲ್ಲ ಎನ್ನುವ ಒಂದು ವೈಜ್ಞಾನಿಕ ಬೇಸ್ ಇರುವವರ ವಾದವನ್ನು ಸಾರ್ವತ್ರಿಕ ಮಾಡಿ. ಇಡೀ ಪ್ರಪಂಚದ ಎಲ್ಲಾ ದೇಶಗಳವರೂ ಗ್ರಹಣ ಕಾಲದ ಆಚಾರ ಬಿಟ್ಟು ಬಿಡುತ್ತಾರೆ ಅಂದುಕೊಳ್ಳಿ. ಆಗ ಏನಾಗಬಹುದು? ಗ್ರಹಣ ಕಾಲದಲ್ಲಿ ಗ್ರಹಣ ಸಂಬಂಧಿ ಯಾವುದೋ ಕೆಲಸ ಕಾರ್ಯಗಳಿಗೆ ಹೊಂದಿಕೊಂಡಿದ್ದ ಸುಮಾರು ಜನಕ್ಕೆ ಈ ಹೊಸ ಸಮಯ ಕಳೆಯಲು ಆಗದು, ಮಾಡಲು ಕೆಲಸ ಇರಲ್ಲ. ಕೆಲಸ ಇಲ್ಲದ ಮನಸ್ಸು ಡೆವಿಲ್ಸ್ ವರ್ಕ್ ಶಾಪ್ ಅಂತೆ. ಏನುನೂ ತರಬೇತಿ ಇಲ್ಲದೇ ಬರುವ ಅಥವಾ ಮಾಡಬಹುದಾದ ಒಂದು ಕೆಲಸ ಇದೆ ಅಂದರೆ ಅದೇ ಕಳ್ಳತನ. ಆಗ ನಾಚುರಲ್ ಆಗಿ ಕೆಲಸ ಇಲ್ಲದವರು ಕಳ್ಳರು ಆಗಿ ಬಿಡ್ತಾರೆ. ಕಳ್ಳರಿಂದ ತುಂಬಿ ತುಳುಕುವ ಸಮಾಜಕ್ಕೆ ಹೋಲಿಸಿದರೆ ಈಗಿನ ಸಮಾಜ (ಎಲ್ಲರೂ ಕಳ್ಳರು ಅಲ್ಲ, ಹಾಗೇ ಎಲ್ಲರೂ ಸಂಭಾವಿತರೂ ಅಲ್ಲ. ಅಂದರೆ ಫಿಫ್ಟಿ ಫಿಫ್ಟಿ) ಬೆಸ್ಟ್ ತಾನೇ? ಅದರಿಂದ ಯಾವುದೇ ಬದಲಾವಣೆ ಇಲ್ಲದೇ ಪ್ರಪಂಚ ಹೀಗೆ ನಡೆಯಲಿ ಅಂತ ನನ್ನ ಕಾನೂನು ಪಂಡಿತ ಆಪ್ತ ಗೆಳೆಯ ಹೇಳುತ್ತಾನೆ ಮತ್ತು ಇದು ಸರಿ ಎಂದು ಎಷ್ಟೋ ಬಾರಿ ಅನಿಸಿದೆ..

ಸ್ಮಶಾನಗಳ ಬಗ್ಗೆ ಹೇಳಲು ಹೊರಟರೆ ಅದೇನೋ ತಿಳಿಯದು ಅದೆಷ್ಟೋ ಸಂಗತಿಗಳು ನಾನು ಮೊದಲು ನಾನು ಮೊದಲು ನಾನು ಮೊದಲು ಅಂತ ಓಡೋಡಿ ಬಂದು ಕ್ಯೂ ನಿಲ್ಲುತ್ತವೆ. ಅದರ ಬಗ್ಗೆ ಒಂದು ಪುಟ್ಟ statistics ನಿಮಗೆ ಕೊಡಬೇಕು. ಅರವತ್ತರ ದಶಕದಲ್ಲಿ ಇಡೀ ಬೆಂಗಳೂರಿಗೆ ಮೂರೋ ನಾಲ್ಕೋ ಸ್ಮಶಾನಗಳು ಇದ್ದವು. ಜನ ಸಂಖ್ಯೆ ಹೆಚ್ಚುತ್ತಾ ಬಂದ ಹಾಗೆ ಅದರ ಅವಶ್ಯಕತೆ ಹೆಚ್ಚಾಯಿತು. ಕಳೆದ ವರ್ಷದ ಒಂದು ವರದಿಯ ಪ್ರಕಾರ ಬೆಂಗಳೂರಿನಲ್ಲಿ ಕ್ರೆಮೇಟರಿಯುಂಗಳು 42, 58 ಸ್ಮಶಾನಗಳು ಅಂದರೆ ಬರಿಯಲ್ ಗ್ರೌಂಡ್ ಇವೆಯಂತೆ. ಪ್ರತಿವರ್ಷ ಸರಾಸರಿ 3೦,೦೦೦ ಮೃತ ದೇಹಗಳು ಈ ಕ್ರೆಮೇಟರಿಯಂಗಳು ಮತ್ತು ಸ್ಮಶಾನಗಳಲ್ಲಿ ಅಂತ್ಯ ಕಾಣುತ್ತವೆ. ಆದರೆ ಕೋವಿಡ್ ಸಮಯಗಳಲ್ಲಿ ಇದು ಎಲ್ಲರ ಅಂಕೆ ಮೀರಿ ಹೆಚ್ಚಿದ್ದು ಗೊತ್ತಿರಬಹುದು. ಹೆಣ ಸಾಗಿಸುವ ವಾಹನಗಳು ಮೈಲಿಗಟ್ಟಲೆ ಕ್ಯೂನಲ್ಲಿ ತಮ್ಮ ಸರದಿಗಾಗಿ ನಿಂತಿರುತ್ತಿದ್ದ ದೃಶ್ಯ ಆಗ ಸಾಮಾನ್ಯವಾಗಿತ್ತು. ರಾಜಕುಮಾರ್ ರಸ್ತೆಯಲ್ಲಿ ಶವ ಹೊತ್ತ ವಾಹನಗಳು ಉದ್ದ ಕ್ಯೂ ನಿಂತಿದ್ದವು ಆ ದಿನಗಳಲ್ಲಿ. ಇರುವ ಸ್ಮಶಾನಗಳು ಸಾಲದೇ ತಾತ್ಕಾಲಿಕ ಸ್ಮಶಾನಗಳನ್ನು ಸಹ ನಿರ್ಮಿಸಬೇಕಾಯಿತು. ಸಾಮೂಹಿಕ ಅಂತ್ಯಕ್ರಿಯೆಗಳು ನಡೆದವು. ಹಾಗೂ ಅಂದಿನ ಮಂತ್ರಿಯೊಬ್ಬರು ಅಗಲಿದ ಆತ್ಮಗಳಿಗೆ ಒಂದು ಸಾಮೂಹಿಕ ತಿಥಿಯನ್ನೂ ಮಾಡಿ ಆತ್ಮಗಳಿಗೆ ಸ್ವರ್ಗಾರೋಹಣ ಮಾಡಿದರು. ಕೋವಿಡ್ ಸಾವುಗಳು ಈಗಲೂ ಸಹ ಒಂದು ಭೀಭತ್ಸ ನೆನಪು. ಅದರ statitics ಕೊಟ್ಟು ನಿಮ್ಮ ಮನಸಿಗೆ ನೋವು ಕೊಡುವ ಉದ್ದೇಶ ಖಂಡಿತ ನನಗೆ ಇಲ್ಲ. ಒಟ್ಟಿನಲ್ಲಿ ಕೋವಿಡ್ ಇಡೀ ಮಾನವಕುಲಕ್ಕೆ ಒಂದು ಕೆಟ್ಟ ಸ್ವಪ್ನ.

ಒಂದು ಹೊಸಾ ಬಡಾವಣೆ ನಿರ್ಮಾಣ ಆಗುತ್ತಿದೆ. ಅಲ್ಲಿ ರಸ್ತೆಗಳು, ಪಾರ್ಕುಗಳು, ಆಸ್ಪತ್ರೆ, ಸ್ಕೂಲು ಕಾಲೇಜು ಮುಂತಾದ ಸಾರ್ವಜನಿಕ ಉಪಯೋಗದ ಸ್ಥಳಗಳನ್ನು ಗುರುತು ಮಾಡುತ್ತಾರೆ. ಸುಮಾರು ಸಲ ಈ ಕಾದಿರಿಸಿದ ಸ್ಥಳಗಳಿಗೆ CA ಸೈಟ್ ಅಂದು ಬಿಡುತ್ತಾರೆ. CA ಅಂದರೆ Civic Amenities ಅಂತ. ಬಡಾವಣೆ ಬೆಳೆದ ಹಾಗೆ ಈ CA ಗಳು ಪ್ರಭಾವಿಗಳ ಪಾಲು ಆಗುತ್ತೆ, ದೊಡ್ಡ ದೊಡ್ಡ ಸಂಸ್ಥೆಗಳು, ರಾಜಕಾರಣಿಗಳು ಹಣ ಚೆಲ್ಲಿ ಆಯಕಟ್ಟಿನ ದೊಡ್ಡ ದೊಡ್ಡ ನಿವೇಶನಗಳನ್ನು ನುಂಗಿ ಬಿಡುತ್ತಾರೆ. ಅಲ್ಲಿ ಪೆಟ್ರೋಲ್ ಬಂಕು, ವಾಣಿಜ್ಯ ಮಳಿಗೆ ಹುಟ್ಟುತ್ತವೆ. ಅಪರೂಪಕ್ಕೆ ಒಂದು ಖಾಸಗಿ ಕಾಲೇಜು, ಒಂದು ಖಾಸಗಿ ಸ್ಕೂಲು ಶುರು ಆಗುತ್ತೆ. ಆದರೆ ಎಲ್ಲವೂ ದುಬಾರಿ. ಶಾಲೆ ಕಾಲೇಜಿನಲ್ಲಿ, ವಾಣಿಜ್ಯ ಸಂಕೀರ್ಣದಲ್ಲಿ ಸ್ಥಳೀಯರಿಗೆ ಯಾವ ಆದ್ಯತೆಯೂ ಇರದು. ವಿಷಯ ಎಲ್ಲೆಲ್ಲೋ ರೌಂಡ್ ಹೊಡಿತಿದೆ ಅಲ್ಲವಾ. ಯಾವುದೇ ಹೊಸಾ ಬಡಾವಣೆ ನಿರ್ಮಾಣ ಆದರೂ ಅಲ್ಲಿ ಸ್ಮಶಾನಕ್ಕಾಗಿ ಯಾವುದೇ ಸ್ಥಳ ನಿಗದಿ ಇರಲ್ಲ. ಯಾವುದೋ ಒಂದು ದಿನ ಸುತ್ತಲಿನ ಯಾವುದೋ ಹಳ್ಳಿಯಲ್ಲಿ ನಿವಾಸಿಗಳ ಗಮನಕ್ಕೆ ಬಾರದ ಹಾಗೆ ಒಂದು ಕಟ್ಟಡ ಶುರು ಆಗುತ್ತೆ. ನಿವಾಸಿಗಳು ಯಾರೂ ಅದರ ಬಗ್ಗೆ ಅಷ್ಟು ಗಮನ ನೀಡರು. ಆಸಕ್ತಿ ತೋರಿಸಿದರೂ ಉತ್ತರ ಸಿಗದು. ಬಿಲ್ಡಿಂಗ್ ಮುಗಿದ ಮೇಲೆ ಅದು ಬರ್ನಿಂಗ್ ಯಾರ್ಡ್ ಮತ್ತು ಸ್ಮಶಾನ ಅಂತ ತಿಳಿಯುತ್ತೆ! ತಮ್ಮ ಮನೆ ಪಕ್ಕ ಸ್ಮಶಾನ ಯಾರಿಗೆ ಬೇಕು? ಇದು ಇಲ್ಲಿ ಬೇಡ ಅಂದರೆ ಅದಕ್ಕೆ ಊರಿನವರು ಸಪೋರ್ಟ್ ಮಾಡಿದರೂ ಹೊರಗಿನವರು ಸ್ಮಶಾನ ಬೇಕೇಬೇಕು, ಅದಿಲ್ಲ ಅಂದರೆ ಆಗುವ ತೊಂದರೆಗಳ ಬಗ್ಗೆ ದಿನಗಟ್ಟಲೆ ವಿವರಣೆ ನೀಡುತ್ತಾರೆ. ಆದರೆ ಅವರ ಬಡಾವಣೆಯಲ್ಲಿ ಮಾತ್ರ ಸ್ಮಶಾನ ಬೇಡ! ಹೀಗೆ ಒಂದು ಸ್ಮಶಾನ ಆರಂಭ ಆಗುತ್ತದೆ. ಕೆಲವು ಕಡೆ ಹತ್ತಿರದ ಹಳ್ಳಿ ಪಕ್ಕ ಒಂದು ಬಡಾವಣೆ ಶುರು ಆಗುತ್ತೆ. ಅಲ್ಲಿ ಜನ ಬಂದು ವಾಸ ಆರಂಭ ಆದ ನಂತರ ಹಳ್ಳಿಯವರ ಸ್ಮಶಾನಕ್ಕೆ ಲಗ್ಗೆ ಶುರು. ಏನೋ ಒಂದು ಐಸಾ ಪೈಸಾ ಮಾತುಕತೆ ನಡೆದು ಸ್ಮಶಾನ ಅಭಿವೃದ್ಧಿ ಕಾರ್ಯ ನಡೆಯುತ್ತೆ ಮತ್ತು ಅದರ ಉಪಯೋಗ ಸಹ. ನನ್ನ ಪರಿಮಿತ ಜ್ಞಾನದ ಮಿತಿಯಲ್ಲಿ ಯಾವುದೇ ಬಡಾವಣೆ ನಿರ್ಮಾಣ ಆದಾಗ ಹೆಣ ಹೂಳಲು ಸುಡಲು ಎಂದು ಯಾವ ಜಾಗವೂ ಮಾರ್ಕ್ ಆಗುವುದಿಲ್ಲ!

ಹಾಗಿದ್ದರೆ ಎಲ್ಲಿ ಅಂದರೆ ಅಲ್ಲಿ ಸ್ಮಶಾನ ನಿರ್ಮಿಸಬಹುದಾ? ಇಲ್ಲ ಹಾಗೆ ನಿರ್ಮಿಸಲು ಬಾರದು. ನಿವಾಸಿಗಳ ವಾಸಸ್ಥಾನ ಮಧ್ಯೆ ಇದು ಬಂದರೆ ಸರ್ಕಾರ ವಿರೋಧ ಎದುರಿಸಬೇಕು. ಅದರಿಂದ ಆದಷ್ಟೂ ವಾಸಸ್ಥಾನದಂದ ದೂರದ ಸ್ಥಳ ಆಯ್ಕೆ ಆಗುತ್ತೆ. ಸ್ಮಶಾನಗಳು ಮೊದಲು ಹೇಗೆ ಇರುತ್ತಿತ್ತು ಅಂದರೆ ಸತ್ಯ ಹರಿಶ್ಚಂದ್ರ ಸಿನಿಮಾ ಜ್ಞಾಪಿಸಿಕೊಳ್ಳಿ. ರಾಘವಾಂಕ ಬರೆದ ಕಾವ್ಯ ಸತ್ಯಹರಿಶ್ಚಂದ್ರ. ಇದು ಹನ್ನೆರಡನೇ ಶತಮಾನದ ಅಂತ್ಯದಲ್ಲಿ ಬರೆದ ಕಾವ್ಯ. ಅದರಲ್ಲಿ ಸ್ಮಶಾನ ಊರ ಹೊರಗಡೆ ಇದ್ದಂತೆ ಚಿತ್ರಣ ಆಗಿದೆ. ಅಂದರೆ ಆ ಕಾಲದಿಂದಲೂ ನಾಗರಿಕ ಸಮಾಜ ತನ್ನ ವಾಸಸ್ಥಾನ ಮಧ್ಯ ಸ್ಮಶಾನ ಇರಲು ಬಯಸುತ್ತಿರಲಿಲ್ಲ ಎನ್ನುವುದು ಸತ್ಯ. ಅದೇ ಮೈಂಡ್‌ಸೆಟ್ ಈಗಲೂ ಮುಂದುವರೆದಿದೆ ಅಷ್ಟೇ…!

ಹಿಂದಿನವರ ಚಿಂತನೆ ಆ ಕಾಲಕ್ಕೆ ಹೇಗಿತ್ತೋ, ಆದರೆ ಕೆಲವು ವಿಷಯಗಳಲ್ಲಿ ಅಂದಿನ ಚಿಂತನೆ ಈ ಕಾಲಕ್ಕೂ ಸಹ ಚಾಲ್ತಿಯಲ್ಲಿದೆ. ಹಿಂದೆ ಮೃತ ದೇಹದ ಸಂಸ್ಕಾರ ತೋಟದಲ್ಲಿ ಅಥವಾ ಹಿತ್ತಲು ದೊಡ್ಡದಿದ್ದರೆ ಅಲ್ಲೇ ಮಾಡುತ್ತಿದ್ದರು. ಹೊಸ ಕಾನೂನುಗಳು ಬಂದ ನಂತರ ಎಲ್ಲಿ ಅಂದರೆ ಅಲ್ಲಿ ಸಂಸ್ಕಾರ ಮಾಡುವಂತಿಲ್ಲ. ಕಳೆದ ವರ್ಷವೋ ಅದರ ಹಿಂದಿನ ವರ್ಷವೋ ಒಬ್ಬರು ಪ್ರಸಿದ್ಧರು ಅವರ ಪತ್ನಿಯ ಶವವನ್ನು ಮನೆಯ ಹಿಂದೆ ದಫನ್ ಮಾಡಲು ಹೊರಟಿದ್ದರು. ಅದಕ್ಕೆ ದೊಡ್ಡ ಪ್ರತಿರೋಧ ಬಂದಿತು.

೧೯೭೧ ರಲ್ಲಿ ಎಂದು ನೆನಪು. ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಹಿರಿಯ ಅಧಿಕಾರಿ ಒಬ್ಬರು ಮದ್ರಾಸಿನಲ್ಲಿ ಮೃತರಾದರು. ಅವರ ಕಳೇಬರ ಬೆಂಗಳೂರಿಗೆ ಬಂದು ಸೇರಿತು. ಸಂಸ್ಥೆಗೆ ಸೇರಿದ ಹತ್ತಿರದ ಹಳ್ಳಿಯಲ್ಲಿ ದೇಹ ಸುಡುವ ಏರ್ಪಾಟು ಆಯಿತು. ಅದಕ್ಕೆಂದೇ ಇದ್ದ ವಾಲಂಟೀರ್ಸ್ ಜವಾಬ್ದಾರಿ ಹೊತ್ತರು. ಸುಮಾರು ಸಂಸ್ಥೆಗಳಲ್ಲಿ ಮರಣ ಹೊಂದಿದವರ ಕುಟುಂಬಕ್ಕೆ ತಾತ್ಕಾಲಿಕ ನೆರವು ಒದಗಿಸಲು ಒಂದು ಸಮಿತಿ ಇರುತ್ತೆ ಮತ್ತು ಅದನ್ನು ಅಲ್ಲಿನ ನೌಕರರು ಮತ್ತು ಆಡಳಿತ ವರ್ಗ ನೋಡಿಕೊಳ್ಳುತ್ತದೆ. ವಾಲಂಟೀರ್ಸ್ ಚಿತೆ ತಯಾರಿಸಿ ಹೆಣಕ್ಕೆ ಬೆಂಕಿ ಕೊಟ್ಟರು. ಬೆಂಕಿ ಉರಿಯಲು ಶುರು. ವಾಲಂಟೀರ್ಸ್ ಮನೆ ಕಡೆ ಹೊರಟರು. ಸ್ವಲ್ಪ ಹೊತ್ತಿನಲ್ಲಿ ಜೋರು ಮಳೆ ಆರಂಭ ಆಯಿತು. ಮಳೆಗೆ ಬೆಂಕಿ ಆರಿತು. ಅರೆ ಸುಟ್ಟ ದೇಹ ಚಿತೆ ಮೇಲೆ. ಆ ಹಿರಿಯ ಅಧಿಕಾರಿ ನೆಂಟರ ಮನೆಗೆ ಹೊರಟಿದ್ದ. ಸ್ಮಶಾನದ ಪಕ್ಕದ ರಸ್ತೆ ಮೂಲಕವೇ ಹೋಗಬೇಕು. ಆತ ಈ ಅರ್ಧಂಬರ್ಧ ಸುಟ್ಟ ಕಳೇಬರ ನೋಡಿದ. ಸರಿ ಹೊತ್ತಿನಲ್ಲಿ ಸಂಸ್ಥೆಯ ಅತ್ಯಂತ ಹಿರಿ ಅಧಿಕಾರಿ ಮನೆಗೆ ಫೋನು ಹೋಯಿತು… ಹಿರಿ ಅಧಿಕಾರಿ ಮನೆಗೆ ರಾತ್ರಿ ಫೋನು ಹೋಯಿತು ಅಂದರೆ ಗೊತ್ತಲ್ಲಾ. ಇಡೀ ಸಂಸ್ಥೆಗೆ ಕೆಟ್ಟ ಹೆಸರು. ಇಡೀ ವ್ಯವಸ್ಥೆ ಸರಿ ರಾತ್ರಿಯಲ್ಲಿ ಭಾರೀ ಚುರುಕಾದವು. ಹಿರಿಕಿರಿ ಕಿರಿ ಅಧಿಕಾರಿಗಳು ಸೇರಿದರು ಮತ್ತು ಹೆಣವನ್ನು ಸರಿಯಾಗಿ ಸಾಂಗೋಪಾಂಗವಾಗಿ ಸುಡುವ ಕಾರ್ಯ ಮುಗಿಸಿ ಬೆಳಗಿನ ಜಾವ ಮನೆ ಸೇರಿದರು. ಯಾರಿಗೂ ಈ ವಿಷಯ ಗೊತ್ತಾಗದ ಹಾಗಿರಲಿ ದೇವರೇ ಅಂತ ಬೇಡಿಕೊಂಡರು. ಆದರೆ ಈ ವಿಷಯ ಮುಸುಕಿನಲ್ಲಿ ಬೆಳ್ಳುಳ್ಳಿ ಜಗಿದ ಹಾಗಾಗಿ ಟಾಮ್ ಟಾಮ್ ಆಯಿತು. ಟಾಮ್ ಟಾಮ್ ಆದಮೇಲೆ ಕೇಳಬೇಕೇ…? ಈ ವಿಷಯ ಸುಮಾರು ವರ್ಷ ಸಂಸ್ಥೆಯಲ್ಲಿ ಚರ್ವಿತ ಚರ್ವಣ ಚರ್ಚೆಯ ವಿಷಯ ಆಗಿತ್ತು!

ಅವರ ಪೈಕಿ ಯಾರಿಗೋ ಈ ಗ್ರಹಣ ಬಾರೀ ಕ್ರೂರವಂತೆ. ಅದಕ್ಕೆ ಯಾರೋ ದೇವಸ್ಥಾನದ ಇನ್ಫ್ಲುಯೆನ್ಸ್ ಇರುವ ಮನುಷ್ಯರ ಮೂಲಕ ಆನ್ ಲೈನ್ ಶಾಂತಿ ಮಾಡಿಸಿ ಆನ್ ಲೈನ್‌ನಲ್ಲಿ ನೆಂಟರಿಗೆ ಲಿಂಕ್ ಮಾಡಿ ಕೊಟ್ಟರಂತೆ! ಅಲ್ಲಿ ನಂಟರಿಗೆ ನೇರ ಪ್ರಸಾದ ರೂಪದ ಆಶೀರ್ವಾದ ದೊರೆಯಿತು. ಇವರು ಕಾಲೇಜಿನಲ್ಲಿ ಫಿಸಿಕ್ಸ್ ಪ್ರೊಫೆಸರು, ಮಗ ಕೆಮಿಸ್ಟ್ರಿ ಪಿಎಚ್ ಡಿ ಮಾಡಿ ಅಮೆರಿಕದಲ್ಲಿ ಉದ್ಯೋಗಸ್ಥ!

ನನ್ನ ಸ್ಮಶಾನದ ಮೊದಲ ಭೇಟಿ ಇನ್ನೂ ನನಗೆ ನೆನಪಿದೆ. ನನ್ನ ಸಹೋದ್ಯೋಗಿ ಗೆಳೆಯ ತೀರಿದ್ದ. ಬೇರೆ ಊರಿನ ವ್ಯಕ್ತಿ. ಅಲ್ಲೇ ಸಂಸ್ಕಾರ ಮುಗಿಸಿ ಅಂತ ಊರಿನಿಂದ ನೆಂಟರು ತಿಳಿಸಿದ್ದರು. ಶವದ ಸಂಗಡ ನಾನೂ ಸ್ಮಶಾನಕ್ಕೆ ಹೋದೆ. ಪೂರ್ತಿ ಕರ್ಮಗಳು ಮುಗಿಯೋವರೆಗೆ ಅಲ್ಲೇ ಇದ್ದೆ. ಮನೆಗೆ ಬಂದವನು ಮನೆ ಅವರ ಮುಂದೆ ಸ್ಮಶಾನಕ್ಕೆ ಹೋಗಿದ್ದು ತಿಳಿಸಿದೆ. ಮನೆಗೆ ಅಮ್ಮನ ಸೋದರಿಕೆ ಸಂಬಂಧದವರು ಬಂದಿದ್ದರು. ಅವರ ಇಮಿಡಿಯೆಟ್ ರಿಯಾಕ್ಷನ್ ಅಂದರೆ ನಿನಗೇನು ಕೇಡು ಬಂದಿತ್ತೋ…. ಅಂತ. ಕಣ್ಣು ಕಣ್ಣು ಬಿಟ್ಟೆ. ಒಳ್ಳೇ ಕೆಲಸ ಮಾಡಿಕೊಂಡು ಬಂದಿದ್ದೀನಿ. ಮನೇಲಿ ಬೆನ್ನು ತಟ್ಟುತ್ತಾರೆ ಅಂತ ಅಂದುಕೊಂಡಿದ್ದೆ. ತಂದೆ ತಾಯಿ ಇರೋರು ಸ್ಮಶಾನಕ್ಕೆ ಹೋಗ್ತಾರೇನೋ…. ಅದೇನು ಬೆಳೆಸಿದ್ದಿಯ ಹೀಗೆ… ಒಂದು ಚೂ ………ರೂ ಆಚಾರ ವಿಚಾರ ಇಲ್ಲದೇ…. ಅಂತ ಒಂದು ಗಂಟೆ ಮನೆಯವರಿಗೆ ಹಾಗೂ ನನಗೆ ಸಹಸ್ರ ನಾಮದ ಪೂಜೆ ಮಾಡಿದರು. ಪೂಜೆ ನಡುವೆ ಬೀದಿಯಲ್ಲಿ ನಿಲ್ಲಿಸಿ ಹತ್ತೋ ಹದಿನೈದೋ ಬಿಂದಿಗೆ ತಣ್ಣೀರು ತಲೆ ಮೇಲೆ ಸುರಿದ ನೆನಪು ಈಗಲೂ ಹಸಿರು. ಬಹುಶಃ ಈ ಕೋಲ್ಡ್ ವಾಟರ್ ಟ್ರೀಟ್ ಮೆಂಟ್ ಫಲ ಅಂತ ಕಾಣುತ್ತೆ ಮೊದಲ ಸ್ಮಶಾನ ಭೇಟಿ ತಲೆಯಲ್ಲಿ ಆಳವಾಗಿ ಹುದುಗಿದೆ.

ಹಾಗೆ ನೋಡಿದರೆ ನನಗೆ ಈ ಸ್ಮಶಾನಕ್ಕೆ ಭೇಟಿ ನೀಡಿದ ಪ್ರತಿಯೊಂದು ಪ್ರಸಂಗವೂ ಮರೆತಿಲ್ಲ. ಒಂದೊಂದು ಶವ ಅದರ ವಾರಸುದಾರ, ಯಾವ ಸ್ಮಶಾನ, ಅಲ್ಲಿಗೆ ಹೇಗೆ ಹೋಗಿದ್ದೆ? ಜತೆಲಿ ಯಾರು ಬಂದಿದ್ದರು… ಇಂತಹ ವಿವರಗಳು ಮರೆತಿಲ್ಲ! ಬಹುಶಃ ಇದೇ ಕಾರಣಕ್ಕೆ ಮಿಕ್ಕ ಎಷ್ಟೋ ಸಂಗತಿಗಳು ನೆನಪಿನಿಂದ ಸಂಪೂರ್ಣ ಜಾರಿಹೋಗಿರುವಾಗ ನನ್ನಾಕೆಯಿಂದ ಬಾಯಿ ತುಂಬ ಸಹಸ್ರಾರ್ಚನೆ ಆಗುತ್ತಿರುತ್ತದೆ. ತಲೆ ತುಂಬಾ ಬೇಡದೆ ಇರೋ ಕಸ ತುಂಬಿಕೊಂಡಿದ್ದಿಯಾ.. ಅಂತ. ಎಲ್ಲರ ಮನೆಲೂ ಇದೇ ಕತೆಯೋ ಏನೋ ನನಗೆ ತಿಳಿಯದು. ಬಹುಶಃ ಈ ಕಾರಣಕ್ಕೆ ಅವರಿಗೆ ಇಷ್ಟು ಅರ್ಚನೆ ಆಗುವ ಮಟ್ಟಕ್ಕೆ ಇರಲಾರದು. ಇದಕ್ಕೆ ಕಾರಣ ನನ್ನಷ್ಟು ಅಗಾಧವಾದ, ಆಳವಾದ, ವಿಸ್ತೃತವಾದ ಅನುಭವ ಅದರಲ್ಲೂ ಸ್ಮಶಾನದಲ್ಲಿ ಯಾರಿಗೂ ಇಲ್ಲ ಎಂದು ನನ್ನ ಖಚಿತ ಅಭಿಪ್ರಾಯ!

ಸಾವಿನ ಮನೆಗಳಲ್ಲಿ ಒಂದು ಹೊಸ ರೀತಿಯ ಆಚರಣೆ ಈಗೊಂದು ಹತ್ತು ಹದಿನೈದು ವರ್ಷದಿಂದ ಈಚೆಗೆ ಗಮನಿಸುತ್ತಾ ಇದ್ದೇನೆ. ಮೊದಮೊದಲು ಅಂದರೆ ಹದಿನೈದು ಇಪ್ಪತ್ತು ವರ್ಷ ಮೊದಲು ಯಾವುದೇ ಸಾವಿನ ಮನೆ ಹೊಕ್ಕರೂ ಮನೆಯವರ ಅಳು ರೋಧನ ಹಾಗೂ ಅಳುಮುಖ ಎದುರಾಗುತ್ತಿತ್ತು. ಕಾಲ ಕಳೆದ ಹಾಗೆ ಇದರಲ್ಲಿ ಸುಮಾರು ಬದಲಾವಣೆ ಗೋಚರವಾಗುತ್ತಿದೆ. ಟೇಪ್ ರೆಕಾರ್ಡರ್ ಬಂದ ನಂತರ ಸಾವಿನ ಮನೆಯಲ್ಲಿ ಒಂದೆಡೆ ಪಾರ್ಥಿವ ಶರೀರ ಇದ್ದರೆ ಅದರ ಹಿನ್ನೆಲೆಯಲ್ಲಿ ಗೀತೆಯ ರೆಕಾರ್ಡೆಡ್ ಪಠಣ ಇರುತ್ತೆ. ಸ್ಥಿತ ಪ್ರಜ್ಞಸ್ಯಕಾ ಭಾಷಾ…. ಮಧ್ಯೆ ಮಧ್ಯೆ ಸಂಜಯ ಉವಾಚ ಎನ್ನುವ ಶಬ್ದಗಳು ತುಂಬಾ ಆರ್ದ್ರ ಅನಿಸುವ ದನಿಯಲ್ಲಿ ಕೇಳುತ್ತದೆ. ಇದು ಹಿಂದೂಗಳ ಮನೆ ಆದರೆ ಮುಸ್ಲಿಮರಲ್ಲಿ ಕುರಾನ್, ಕ್ರಿಶ್ಚಿಯನ್ನರ ಮನೆಯಲ್ಲಿ ಬೈಬಲ್ ಪಠಣ. ತುಂಬಾ ದೊಡ್ಡ ರಾಜಕಾರಣಿ ಸತ್ತರೆ ರೇಡಿಯೋದಲ್ಲಿ ಮೂರು ದಿವಸವೋ ಅಥವಾ ವಾರವೋ ಬರೀ ಶೋಕ ಸೂಚಕ ವಾದ್ಯವಾದನ ಇರುತ್ತಿತ್ತು. ಶಹನಾಯಿ ವಾದ್ಯದ ಅತಿ ದುಃಖದ ರಾಗಗಳು ಬಿತ್ತರಗೊಳ್ಳುತ್ತಿತ್ತು. ಬೇರೆ ಯಾವ ಕಾರ್ಯಕ್ರಮವೂ ಇಲ್ಲದೇ ಬರೆ ಗೋಳಿನ ಸಂಗೀತ ಕೇಳಬೇಕಾದರೆ ತಲೆ ಚಿಟ್ಟು ಹಿಡಿಯುತ್ತಿತ್ತು ಮತ್ತು ಸತ್ತವರ ಮೇಲೆ ಕೋಪ ಉಕ್ಕುತ್ತಿತ್ತು! ಅದು ಯಾವ ಭೂಪತಿಯ ತಲೆಯೋ ಗೋಳು ಸಂಗೀತ ಹಾಕುವುದು ಅನಿಸುತ್ತಿತ್ತು. ಸಿಕ್ಕಿದರೆ ತೋರಣ ಕಟ್ಟಬೇಕು ಅನ್ನುವ ಸಿಟ್ಟು ಸಹ. ರೇಡಿಯೋ ಕೇಳುವವರು ಕಡಿಮೆ ಆದಹಾಗೆ ಈಗ ಅಂದಿನ ಗೋಳಿನ ಸಂಗೀತ ಈಗಲೂ ಇದೆಯೋ ಇಲ್ಲವೋ ಎಂದು ಯೋಚಿಸಿದ್ದೇನೆ. ಈಗ ನೀವು ಗೋಳು ಕೇಳಬೇಕು ನೋಡಬೇಕು ಅನ್ನುವಹಾಗಿದ್ದರೆ ತುಂಬಾ ಸುಲಭ ಉಪಾಯ ಅಂದರೆ ಯಾವುದಾದರೂ ಕನ್ನಡ ಚಾನಲ್ ಹಾಕಿ, ಸಾಕು…! ಮಿಕ್ಕಂತೆ ಕೆಲವು ಸಂಪ್ರದಾಯಗಳು ಅಂದರೆ ಬಾಡಿಗೆ ಅಳುಗಾರರು, ಶವ ಸಾಗಾಣಿಕೆ ವಾಹನ ಇವು ಮುಂದುವರೆದಿದೆ. ಆದರೆ ನಾಲ್ಕು ಜನ ಹೊತ್ತು ಸಾಗುವ ಯಾತ್ರೆ ಈಗ ನಿಂತೇ ಹೋಗಿದೆ. ಈಗೊಂದು ಇಪ್ಪತ್ತು ವರ್ಷದಿಂದ ನಾನು ಇದನ್ನು ಅಂದರೆನಾಲ್ಕು ಜನ ಹೊತ್ತು ಸಾಗುವ ಶವಯಾತ್ರೆಯನ್ನು ಬೆಂಗಳೂರಿನಲ್ಲಿ ನೋಡಿಲ್ಲ.

ಇನ್ನು ಕೆಲವು ಸ್ಮಶಾನಗಳ ಬಗ್ಗೆ ನಿಮಗೆ ಹೇಳಲೇ ಬೇಕು. ಐವತ್ತು ವರ್ಷದಲ್ಲಿ ಆಗಿರುವ ಬದಲಾವಣೆ ನಮ್ಮ ಒಳಿತಿಗಾಗಿ ಆಳುವವರು ಮಾಡಿರುವುದು! ಸ್ಮಶಾನಗಳಲ್ಲಿ ಸೌಂದರ್ಯ ಎಂಬುದು ಹುಡುಕಬೇಕಾದ ಸರಕೇ ಎಂಬ ಪ್ರಶ್ನೆ ನನಗೆ ಲಾಗಾಯ್ತಿನಿಂದ ಕಾಡಿದೆ. ಜಗತ್ತೇ ನಶ್ವರ ಎಂದು ಸತ್ತವರನ್ನು ಸಾಗ ಹಾಕಲು ಬಂದವರು ಸೌಂದರ್ಯದ ಕಡೆ ಗಮನ ಕೊಡುತ್ತಾರೆಯೆ…. ಯಾಕೆ ಈ ಜಿಜ್ಞಾಸೆ ಅಂದರೆ ನಾನು ಮೊಟ್ಟ ಮೊದಲ ಬಾರಿಗೆ ಸ್ಮಶಾನಕ್ಕೆ ಹೋಗಿದ್ದ ನೆನಪು ಬರುತ್ತೆ. ಆಗ ಎಲ್ಲೆಂದರಲ್ಲಿ ಕಸ, ಬಾಡಿದ ಹೂವಿನ ರಾಶಿ, ಶವ ಬದುಕಿದ್ದಾಗ ಉಪಯೋಗಿಸಿದ್ದ ಹಾಸಿಗೆ ದಿಂಬು ಕಂಬಳಿ….. ಹೀಗೆ ರಾಶಿ ರಾಶಿ ಪುಟ್ಟ ಪರ್ವತ ನೋಡಿದ್ದೆ. ಜತೆಗೆ ಚಾಪೆಗಳು, ಜಮಾಖಾನೆಗಳು ಸಹ ಬಿದ್ದಿರುತ್ತಿದ್ದವು, ಅನಾಥವಾಗಿ. ನೋಡಿದ ಕೂಡಲೇ ಅಸಹ್ಯ ಹುಟ್ಟಿ ಓಡಬೇಕು ಅನಿಸೋದು. ಹೀಗೆ ಅನಿಸಿದ ನಂತರ ಸ್ಮಶಾನಗಳನ್ನು ಕೊಂಚ ನೋಡುವ ಹಾಗೆ ಅಂದರೆ customer friendly ಯಾಕೆ ಮಾಡಬಾರದು ಅನಿಸಿತ್ತು. ಕೆಲವು ಸ್ನೇಹಿತರ ಮುಂದೆ ಈ ವಿಷಯ ಪ್ರಸ್ತಾಪ ಮಾಡಿದ ಕೂಡಲೇ ಅವರಿಗೇ ಸಾವು ಬಂದಿದೆ ಅಂತ ಹೆದರಿ ದೂರ ಓಡಿದರು. ವಾಚಕರ ವಾಣಿಗೆ ಪತ್ರ ಬರೆದೆ, ಅದು ಕಸದ ಬುಟ್ಟಿ ಸೇರಿತು!

ಪಾಪ ಹತ್ತಿರದವರನ್ನು ಕಳೆದುಕೊಂಡು ದುಃಖದಲ್ಲಿ ಜನ ಇಲ್ಲಿಗೆ ಬಂದಿರತಾರೆ, ಅವರ ಮನಸ್ಸು ಪ್ರಫುಲ್ಲ ಆಗಬೇಕು ಹಾಗೆ ಸ್ಮಶಾನದ ಪರಿಸರ ಇರಬೇಕು ಅನ್ನುವ ನನ್ನ ಯೋಜನೆ ಸಿಕ್ಕ ಸಿಕ್ಕವರಿಗೆ ಹಂಚಿದೆ. ಅದೇನು ಆಶ್ಚರ್ಯ ಅಂತೀರಿ ಎಂಟನೇ ಸಲವೋ ಹತ್ತನೇ ಸಲವೊ ಸ್ಮಶಾನಕ್ಕೆ ಹೋಗಿದ್ದಾಗ ಎಲ್ಲಿಗೆ ಬಂದೆ ಅನಿಸಿಬಿಡ್ತು. ಹೂವಿನ ಗಿಡ ಇದೆ, ಹಾಸಿಗೆ ದಿಂಬು ಇದ್ದ ಜಾಗ ಬಣ್ಣ ಹೊಡೆಸಿಕೊಂಡು ನಳನಳ ಅಂತಿದೆ. ಗೋಡೆಗಳಿಗೆ ಸುಣ್ಣ ಬಣ್ಣ ಆಗಿದೆ. ಇದು ನಮ್ಮ ಸ್ಮಶಾನ ಇದನ್ನು ಸುಂದರವಾಗಿ ಇಡೋಣ ಎನ್ನುವ ಬೋರ್ಡ್ ಸಹ ಇದೆ. ಒಂದು ಕಾಲ ಭೈರವನ ಪ್ರತಿಮೆ ಬೇರೆ ಇದೆ… ಸಂತೋಷ ಪಡಲು ಇನ್ನೇನು ಬೇಕು. ಸರಿ ಸುಮಾರು ಸ್ಮಶಾನಗಳು ಈಗ ಈ ಸ್ಟಾಂಡರ್ಡ್ ಕಾಪಾಡಿಕೊಂಡು ಬಂದಿದೆ. ಕಳೆದ ತಿಂಗಳು ಒಂದು ಸ್ಮಶಾನಕ್ಕೆ ಭೇಟಿ ಕೊಡುವ ಸಂದರ್ಭ ಬಂದಿತು. ಅಲ್ಲಿನ ಕ್ಲೆನ್ಲಿನೆಸ್ ನೋಡಿದ ನನ್ನ ಚಿಕ್ಕವಯಸ್ಸಿನ ಬಂಧು ಹತ್ತಿರ ಬಂದರು. ಪಾಪ ಏನೋ ದುಃಖ ತೋಡಿಕೊಳ್ಳಲು ಬಂದ, ಅವನನ್ನು ಎದೆಗೆ ಆನಿಸಿಕೊಂಡು ಸಮಾಧಾನ ಪಡಿಸಬೇಕು ಅಂತ ತಲೆಯಲ್ಲಿ ಪದ ಜೋಡಣೆ ನಡೆಸಿದ್ದೆ.

ಹತ್ತಿರ ಬಂದ ಬಂಧು ಗೋಪಿ ಒಂದು ವಿಲ್ ಮಾಡಬೇಕು ಅಂದ. ಅವನ ಮುಖ ನೋಡಿದೆ. ತುಂಬಾ ಸೀರಿಯಸ್ ಆಗಿದ್ದಾನೆ ಅನಿಸಿತು. ಅದೇನು ಅಂಥ ಅರ್ಜೆಂಟು..? ಅಂದೆ.

ಈಗ ಅನಿಸಿತು, ಅದಕ್ಕೇ ಹೇಳಿಬಿಡುವುದು ಅಂತ ಬಂದೆ… ಅಂದ. ಸರಿ ಹೇಳುವಂಥಹವನಾಗು… ಅಂದೆ. ನಿಮಗೆ ಹೇಗೋ ತಿಳಿಯದು. ಎದುರು ಹೆಣ ಇರಬೇಕಾದರೆ ನನಗೆ ಸಹಜವಾಗಿ ಈ ರೀತಿಯ ಮಾತುಗಳು ಬರುತ್ತವೆ. ಬಂಧು ಮಾತು ಮುಂದುವರೆಸಿದ..

ನಾನು ಸತ್ತಮೇಲೆ ನನ್ನ ಕರ್ಮಗಳು ಇದೇ ಸ್ಮಶಾನದಲ್ಲಿ ಆಗಬೇಕು… ಅಂದ! ಅಯ್ಯೋ ಅದಕ್ಕಿನ್ನೂ ಮೂವತ್ತು, ನಲವತ್ತು ವರ್ಷ ಕಾಯಬೇಕು. ಅಷ್ಟರಲ್ಲಿ ಅದೇನೇನು ಆಗಿರತ್ತೋ. ಈಗಲೇ ಅರ್ಜೆಂಟ್ ಆಗಿ ಅದಕ್ಕೆ ದುಡ್ಡು ಸುರಿಬೇಡ… ಅಂತ ಅಡ್ವೈಸಿಸಿದೆ..!

ಹೆಬ್ಬಾಳ, ವಿಲ್ಸನ್ ಗಾರ್ಡನ್, ಬನಶಂಕರಿ, ಕಲ್ಲಪಲ್ಲಿ ಮೊದಲಾದ ಸ್ಮಶಾನಗಳಿಗೆ ಹೋಲಿಸಿದರೆ ನಮ್ಮ ಚಾಮರಾಜ ಪೇಟೆಯ ಸ್ಮಶಾನದಲ್ಲಿ ಸೊಬಗು ಕಡಿಮೆ ಎಂದು ನನ್ನ ಅನಿಸಿಕೆ. ಮರಣಾನಂತರದ ಕರ್ಮಗಳಿಗೆ ಅಲ್ಲಿನ ವ್ಯವಸ್ಥೆ ಸರಿಯಿಲ್ಲ ಎನ್ನುವುದು ಸಾರ್ವತ್ರಿಕ ಹೇಳಿಕೆ. ಯಾಕೋ ಇದು ಆಳುವವರ ಕಿವಿ ಮುಟ್ಟಿದ ಹಾಗೆ ಕಾಣೆ.

ಹೆಣ ಸುಟ್ಟ ನಂತರ ಅಸ್ತಿ ವಿಸರ್ಜನೆ ಒಂದು ದೊಡ್ಡ ಕೆಲಸ. ಒಂದೊಂದು ಪಂಗಡದಲ್ಲಿಯೂ ಅದಕ್ಕೆ ಹಲವು ರೂಲ್‌ಗಳು. ಇದರ ಬಗ್ಗೆ ಈಗ ಬೇಡಿ. ಯಾಕೋ ಸಾವು ಸ್ಮಶಾನ ಇವುಗಳ ಬಗ್ಗೆ ಬರೆಯಬೇಕು ಅಂದರೆ ಹೃದಯ ಭಾರವಾದ ಹಾಗೆ ಅನಿಸುತ್ತದೆ. ಸಾವು ಹೊಸಿಲಲ್ಲಿ ನಿಂತು ಕೈ ಬೀಸಿ ಕರೆಯುತ್ತಿದೆ ಅನಿಸಿಬಿಡುತ್ತದೆ! ಬಹುಶಃ ಆಪ್ತರನ್ನು ಕೊನೆಯ ಬಾರಿಗೆ ನೋಡಿದ ನೋವು ಹೃದಯದಲ್ಲಿ ಹುದುಗಿದ್ದು ಒದೆಯುತ್ತೆ ಅಂತ ಕಾಣುತ್ತೆ. ಯಾರಿಗೂ ಸ್ಮಶಾನಗಳಿಗೆ ಯಾವುದೇ ಕಾರಣಕ್ಕೂ ಭೇಟಿ ನೀಡಬೇಕಾದ ಸಂದರ್ಭಗಳು ಒಮ್ಮೆಯೂ ಬಾರದೇ ಇರಲಿ ಮತ್ತು ಇನ್ನೂ ಹೇಳಬೇಕು ಅಂದರೆ ಇಡೀ ಭೂ ಮಂಡಲದಿಂದಲೇ ಸಾವು ಅನ್ನುವುದು ಓಡಿ ಹೋಗಲಿ ಎನ್ನುವ ಬಾಲಿಶ ಅನಿಸಬಹುದಾದ ಹಾರೈಕೆ ಹಾರೈಸಬಹುದು…!

(ಮುಂದುವರೆಯುವುದು…)