ಇಲ್ಲಿ ನಮಗರಿವಿಲ್ಲದಂತೆ ರಂಗ ಕ್ರಿಯೆಯೊಂದು ಜರಗುತ್ತಿರುವುದನ್ನು ನಾನು ಗಮನಿಸಿದೆ. ಪ್ರತಿಯೊಂದು ತಂಡ ಅವರ ಕ್ರಿಯಾವಿಧಿ ಆಚರಣೆಗಳನ್ನು ತೋರುವಾಗ, ಕಥನಗಳನ್ನು ಹೇಳುವಾಗ, ನೃತ್ಯ ಪ್ರದರ್ಶಿಸುವಾಗ ಉಳಿದ ತಂಡದವರು ಪ್ರೇಕ್ಷಕರಾಗಿರುತ್ತಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ನನಗೆ ಒಂದು ರೀತಿಯ ಕಳವಳ ಶುರುವಾಯಿತು. ಕಾಡಿನೊಳಗಿನ ಇವರ ಆಚರಣೆಯ, ಸಂಪ್ರದಾಯ, ಕ್ರಿಯಾವಿಧಿ, ನೃತ್ಯ ಸಂಭ್ರಮಗಳೆಲ್ಲವೂ ಹೊರಗೆ ನೋಡಲು ಕುತೂಹಲವೆನಿಸಿದರೂ ಶುಷ್ಕವೆನಿಸುತ್ತಿತ್ತು. ಸಂದರ್ಭಗಳಿಲ್ಲದೆ ವಾತಾವರಣವಿಲ್ಲದೆ ಭಾವನೆಗಳು ಅರಳುವುದಿಲ್ಲ. ಅನುಕರಿಸಿದರೂ ಅಣಕವೆಂಬಂತೆ ಕಾಣುತ್ತಿತ್ತು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

ಪ್ರಿಯ ಭೂಮಿ

ಫುಕುವೋಕಾನ ಸಹಜ ಕೃಷಿಯ ತೋಟದ ಬಗೆಗೆ ಮತ್ತು ರಂಗಭೂಮಿಯಲ್ಲಿ ನಾನು ಕಂಡುಕೊಳ್ಳ ಬಯಸಿದ ಸಹಜ ಕೃಷಿ ಪ್ರಕ್ರಿಯೆಯ ಬಗೆಗೆ ನಿನಗೆ ಇಲ್ಲಿ ಬರೆಯಬೇಕು ಅನ್ನಿಸುತ್ತಿದೆ.

ತೋಟ ಎಂದೊಡನೆ ಮೊದಲು ನಮಗರಿವಿಲ್ಲದಂತೆಯೇ ಒಂದು ನಿರ್ದಿಷ್ಟ ಆವರಣ ಗೋಚರಿಸುತ್ತದೆ. ಈ ನಿರ್ದಿಷ್ಟ ಆವರಣದಲ್ಲಿ ಕೆಲವು ಪ್ರಕ್ರಿಯೆಗಳಿಂದ ಉಂಟಾದ ಅಭಿವ್ಯಕ್ತಿ ಈ ತೋಟ. ಇಲ್ಲಿ ಬಿತ್ತುಕೊಂಡ ಬೀಜ, ಸಸಿ, ಗಿಡ ಮರ ಬಳ್ಳಿಗಳು, ಮರ ಹೆಮ್ಮರಗಳು, ಹುಳು ಹುಪ್ಪಟೆ ಕ್ರಿಮಿಕೀಟಗಳು, ಜೀವ ಜಂತುಗಳು ಇವುಗಳೊಳಗೆ ತಾನು ಬೆರೆತು, ಪ್ರಕೃತಿ ವಿಸ್ಮಯದ ಬೆಡಗುಗಳನ್ನು ಅರಿಯುತ್ತಾ ಸಹಜ ಕೃಷಿಯ ವಿಧಾನಗಳನ್ನು ಕಂಡುಕೊಳ್ಳುತ್ತಾ ಕೃಷಿಯ ಮೂಲಕವೇ ಜೀವನ ದರ್ಶನ ಮಾಡಿಸಿದವರು ಫುಕುವೋಕಾ. ನಿರ್ದಿಷ್ಟ ಆವರಣದೊಳಗೂ ಪ್ರಕೃತಿ ಸಹಜ ಪೂರ್ಣ ವಿಕಾಸದ ಸತ್ಯದರ್ಶನ ಮಾಡಿಸಲೆತ್ನಿಸಿದವರು.

ಮನುಕುಲವೆಂಬ ಆಗಾಧವಾದ ಈ ಸಮುದಾಯಗಳ ಪ್ರಕೃತಿಯಲ್ಲಿ ರಂಗಭೂಮಿಯೆಂಬುದೊಂದು ನಿರ್ದಿಷ್ಟ ಆವರಣದ ತೋಟವಾಗಿ ಗೋಚರಿಸುತ್ತದೆ. ಇಲ್ಲಿ ನಡೆವ ಸತ್ಯದ ಹುಟುಕಾಟದಲ್ಲಿ ಜಗತ್ತಿನಾದ್ಯಂತ ಅವರವರ ತೋಟಗಳಲ್ಲಿ ಸಮುದಾಯಗಳ ಪ್ರಕೃತಿಯು ತಮ್ಮ (ದೇಹ, ಧ್ವನಿ, ಭಾಷೆ, ಭಾವ, ಸ್ಮೃತಿ ಮುಂತಾಗಿ) ಎಲ್ಲಾ ಸಾಧ್ಯತೆಗಳನ್ನು ಶೋಧಿಸಿಕೊಳ್ಳುತ್ತಾ ನಡೆದಿವೆ. ಈ ಪ್ರಯೋಗ ಪ್ರಕ್ರಿಯೆಯಲ್ಲಿ ಹಲವಾರು ಅಭಿವ್ಯಕ್ತಿ ಮಾದರಿಗಳನ್ನು ನಾವು ಕಾಣುತ್ತಲೇ ಇದ್ದೇವೆ. ಆದ್ದರಿಂದಲೇ ಜಗತ್ತಿನಾದ್ಯಂತ ಅಸಂಖ್ಯ ರಂಗ ಕಲಾಪ್ರಕಾರಗಳು ಸೃಜಿಸಿಕೊಳ್ಳುತ್ತಲೇ ಇವೆ. ದೇಶ, ಕಾಲ, ನೆಲೆ ಹಿನ್ನೆಲೆಗಳಿಂದ ಉಂಟಾದ ಕಲಾ ಮಾರ್ಗಗಳು ಬೇರೆ ಬೇರೆಯಾದರೂ ಗಮ್ಯ ಒಂದೇ – ಸತ್ಯದರ್ಶನ.

ಈ ಹಂತದಲ್ಲಿ ಸಹಜಕೃಷಿ ಪ್ರಯೋಗಗಳಲ್ಲಿ ತೊಡಗಿಕೊಳ್ಳುವ ನನ್ನ ಮನಸ್ಥಿತಿಯ ಕೆಲವು ಉದಾಹರಣೆಗಳು ನೆನಪಾಗುತ್ತಿವೆ.

ಮಡಿಕೇರಿ ಬಳಿಯ ಕುಶಾಲನಗರದಲ್ಲಿ ಕಾಡಿನ ಅಂಚಿನಲ್ಲಿರುವ ಆದಿವಾಸಿ, ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ಮಾಡುವ, ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ಸ್ವಯಂ ಸೇವಾ ಸಂಸ್ಥೆಯೊಂದಿದೆ. ಈ ಸಂಸ್ಥೆಯ ಮುಖ್ಯಸ್ಥರು ರಾಯ್ ಡೇವಿಡ್ ಅಂತ. ಇವರು ಬೇರೆ ಬೇರೆ ದೇಶಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡುವ ಹಲವಾರು ಸಂಘ ಸಂಸ್ಥೆಗಳ ಸಂಪರ್ಕ ಹೊಂದಿದವರು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವವರು. ಸುಮಾರು ಹದಿನಾರು ವರ್ಷಗಳ ಹಿಂದೆ ಇವರು ಆದಿವಾಸಿ ಸಮುದಾಯಗಳ ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ ಸುಧಾರಣೆ ತರಲು ಬಯಸಿದ್ದರು. ಅವರಿಗೆಲ್ಲ ನಾಲ್ಕೈದು ದಿನದ ಕಾರ್ಯಾಗಾರವನ್ನು ನಡೆಸಿ ಅದಕ್ಕೊಂದು ಸರಿಯಾದ ಆಯಾಮ ಒದಗಿಸಿಕೊಡಬೇಕೆಂದು ನನ್ನನ್ನು ಕೋರಿದ್ದರು. ಹೀಗಾಗಿ ನಾಲ್ಕೈದು ದಿನ ಈ ಆದಿವಾಸಿ ಸಮುದಾಯಗಳೊಂದಿಗೆ ಬೆರೆಯುವ ಯೋಗ ನನ್ನದಾಯಿತು.

ಕಾಡು ಕುರುಬರು, ಜೇನು ಕುರುಬರು, ಮಲೆ ಕುಡಿಯರು, ಕುಣುಬಿಗಳು… ಹೀಗೆ ಇನ್ನೂ ಕೆಲವು ನಾನು ಹೆಸರೇ ಕೇಳಿರದ ಸಮುದಾಯಗಳು. ಆನೆ ಪಳಗಿಸುವ ಮಾವುತರು ಸೇರಿದಂತೆ ಕಾಡಿನ ಅಂಚಿನಲ್ಲಿರುವ ಎಲ್ಲ ಆದಿವಾಸಿ ಸಮುದಾಯದ ಪ್ರಮುಖರು ಯಡವನಾಡು ಎಂಬಲ್ಲಿನ ಒಂದು ಸಮುದಾಯ ಭವನದಲ್ಲಿ ನಡೆದ ಈ ಕಾರ್ಯಗಾರಕ್ಕೆ ಬಂದರು. ಇವರೊಂದಿಗೆ ಇವರ ಹಲವಾರು ರೀತಿಯ ವಾದ್ಯಗಳು, ವೇಷ ಪರಿಕರಗಳು ಇದ್ದವು. ಇವರಲ್ಲಿ ಕೆಲವರಂತೂ ತುಂಬಾ ಸಂಕೋಚ ಸ್ವಭಾವದವರು. ಕಾಡಿನ ಒಳಗೇ ಇದ್ದವರು. ಅಂಚಿನಲ್ಲಿದ್ದ ಕೆಲವರು ನಗರವಾಸಿಗಳ ಬಳಕೆಯಲ್ಲಿದ್ದವರು. ಇವರೊಂದಿಗೆ ಒಡನಾಡುವುದೇ ಒಂದು ವಿಸ್ಮಯ. ಈ ದಿನಗಳಲ್ಲಿ ಪ್ರತಿಯೊಂದು ಸಮುದಾಯದ ಹಿನ್ನೆಲೆ, ಅವರ ಆಚರಣೆಗಳು, ಕ್ರಿಯಾವಿಧಿಗಳು, ನೃತ್ಯ ಪ್ರಕಾರಗಳು, ಅವರ ಹಾಡಿಗಳು, ಅದರ ಆಕಾರಗಳು, ಹುಟ್ಟು-ಸಾವು, ನೋವು-ಸಂಭ್ರಮ, ಹಬ್ಬ-ಹರಿದಿನಗಳಲ್ಲಿ ಸಮುದಾಯದ ಸ್ಪಂದನೆಗಳು, ಜನಾಂಗಗಳ ಕಥನಗಳು, ಅವರ ಬಗೆಗಿನ ಐತಿಹ್ಯಗಳು, ಅವರು ವೈನ್ ಮಾಡುವ ವಿಧಾನ, ಆನೆ ಪಳಗಿಸುವ ಪರಿ, ಭೇಟೆಯ ವಿಧಾನಗಳು, ಹಕ್ಕುಗಳಿಗಾಗಿ ಅವರ ಹೋರಾಟಗಳು, ಅವರವರ ಸಾಂಸ್ಕೃತಿಕ ನಾಯಕರ ಕಥನಗಳು, ಎಲ್ಲವನ್ನು ವಿವರ ವಿವರವಾಗಿ ತಿಳಿಯುತ್ತಾ ಹೋದೆ.

(ಸತೀಶ್‌ ತಿಪಟೂರು)

ಇಲ್ಲಿ ನಮಗರಿವಿಲ್ಲದಂತೆ ರಂಗ ಕ್ರಿಯೆಯೊಂದು ಜರಗುತ್ತಿರುವುದನ್ನು ನಾನು ಗಮನಿಸಿದೆ. ಪ್ರತಿಯೊಂದು ತಂಡ ಅವರ ಕ್ರಿಯಾವಿಧಿ ಆಚರಣೆಗಳನ್ನು ತೋರುವಾಗ, ಕಥನಗಳನ್ನು ಹೇಳುವಾಗ, ನೃತ್ಯ ಪ್ರದರ್ಶಿಸುವಾಗ ಉಳಿದ ತಂಡದವರು ಪ್ರೇಕ್ಷಕರಾಗಿರುತ್ತಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ನನಗೆ ಒಂದು ರೀತಿಯ ಕಳವಳ ಶುರುವಾಯಿತು. ಕಾಡಿನೊಳಗಿನ ಇವರ ಆಚರಣೆಯ, ಸಂಪ್ರದಾಯ, ಕ್ರಿಯಾವಿಧಿ, ನೃತ್ಯ ಸಂಭ್ರಮಗಳೆಲ್ಲವೂ ಹೊರಗೆ ನೋಡಲು ಕುತೂಹಲವೆನಿಸಿದರೂ ಶುಷ್ಕವೆನಿಸುತ್ತಿತ್ತು. ಸಂದರ್ಭಗಳಿಲ್ಲದೆ ವಾತಾವರಣವಿಲ್ಲದೆ ಭಾವನೆಗಳು ಅರಳುವುದಿಲ್ಲ. ಅನುಕರಿಸಿದರೂ ಅಣಕವೆಂಬಂತೆ ಕಾಣುತ್ತಿತ್ತು. ಗಿಡದಲ್ಲಿ ಬಿಟ್ಟ ಹೂಗಳನ್ನು ಕಾಣಬಹುದು, ಆದರೆ ಕಾಣಲೆಂದು ಹೂಗಳನ್ನು ಅರಳಿಸಲಾಗದು. ಆದಿವಾಸಿಗಳ ಈ ಸಾಂಸ್ಕೃತಿಕ ಅಭಿವ್ಯಕ್ತಿಗಳೆಲ್ಲವೂ ಕಾಡಿನೊಳಗೆ ಹೆಣೆದುಕೊಂಡ ಬದುಕಿನೊಳಗೆ ವಿಕಾಸವಾದಂತದ್ದು. ಹಲವು ತಲೆಮಾರುಗಳ ಸ್ಮೃತಿಯ ಚಲನೆ ಸಾವಯವವಾಗಿ ಆಕಾರ ಪಡೆದಂತದ್ದು. ಕಾಡಿನೊಳಗಣ ಗಿಡಮರಬಳ್ಳಿ, ಪಶುಪಕ್ಷಿ, ಕ್ರಿಮಿಕೀಟ, ಪ್ರಾಣಿಗಳೊಂದಿಗಿನ ಜೈವಿಕ ಸಹಜ ಸಂಬಂಧದಿಂದ ಉಂಟಾದುದೇನೋ ಎನ್ನುವಷ್ಟು ಗಾಢವಾದುದು.

ಕೆಲವು ಆಚರಣೆಗಳಂತೂ ಈ ಸಮುದಾಯಗಳಿಗೆ ತುಂಬಾ ಖಾಸಗಿಯಾದುದು. ಇದು ಕಲಾಭಿವ್ಯಕ್ತಿ ಎನ್ನುವುದಕ್ಕಿಂತಲೂ ಕಾಡಿನ ಸಹಜ ವಿಕಾಸದಲ್ಲಿನ ಜೀವನ ಕ್ರಮ. ಹೀಗೆ ವಿಕಾಸವಾದ ಅಭಿವ್ಯಕ್ತಿಯಲ್ಲಿ ಕಲೆಯ ಅಂಶಗಳಿದ್ದರೂ ಅದು ಮನರಂಜನೆಯಾಗಲಿ, ರಂಗಾಭಿವ್ಯಕ್ತಿಯಾಗಲಿ ಆಗಲಾರದು. ಇವರ ಕಲಾಭಿವ್ಯಕ್ತಿಯ ನಿಸರ್ಗ ಸಹಜ ಸೌಂದರ್ಯವನ್ನು ಸಂದರ್ಭಾನುಸಾರ ಅವರವರ ಆವರಣದಲ್ಲಿ ಅವರೊಂದಿಗೆ ಬೆರೆತು ಕಂಡುಕೊಳ್ಳಬೇಕು ಎಂದೆನಿಸಿ ನನ್ನ ಅನಿಸಿಕೆಗಳನ್ನು ರಾಯ್ ಡೇವಿಡ್‌ರವರಲ್ಲಿ ಹಂಚಿಕೊಂಡೆ. ಅವರಿಗೆ ಕಲಿಸಲು ನನ್ನಲ್ಲಿ ಏನೂ ಇಲ್ಲ ಆದರೆ ಅವರಿಂದ ಕಲಿಯುವಂತದ್ದು ಬಹಳಷ್ಟಿದೆ ಎಂದೆ. ಇಂಥಹ ಕಾರ್ಯಾಗಾರಗಳಿಂದ ದೂರವಿದ್ದಷ್ಟೂ ಅವರ ಸಾಂಸ್ಕೃತಿಕ ಅಭಿವ್ಯಕ್ತಿಗಳೆಲ್ಲವೂ ಆರೋಗ್ಯಕರವಾಗಿಯೂ, ಆನಂದದಾಯಕವಾಗಿಯೂ ಇರುತ್ತದೆ ಎಂದು ಹೇಳಿ ಊರಿಗೆ ಮರಳಿದೆ.


ಇವರೊಂದಿಗೆ ಕಳೆದ ನಾಲ್ಕೈದು ದಿನಗಳಲ್ಲಿ ಸಾಧ್ಯವಾದಷ್ಟೂ ಅವರೊಂದಿಗೆ ಬೆರೆಯಲು ಪ್ರಯತ್ನಿಸಿದ್ದೆ. ಕಾಡಿನ ನಡುವಿನ ಅವರ ಹಾಡಿಗಳನ್ನೂ, ಆನೆ ಪಳಗಿಸುವ ಅವರ ಶಿಬಿರಗಳನ್ನೂ ನೋಡಿಬಂದೆ. ಆ ದಿನಗಳಲ್ಲಿ ನನ್ನೊಂದಿಗೆ ಓಡಾಡಿಕೊಂಡು ಇದನ್ನೆಲ್ಲ ತೋರಿಸುತ್ತಾ ಸುತ್ತಿದವರ ಹೆಸರು ‘ದೋಬಿ’ ಎಂದು. ಈ ನೆನಪುಗಳೆಲ್ಲವೂ ನನ್ನ ತೋಟದಲ್ಲಿ ಈಗಲೂ ಹಸಿರಾಗಿವೆ.