ಈ ಪತ್ರವನ್ನು ಬರೆಯುತ್ತಿರುವಾಗ ಬಂದ ಸುದ್ದಿ ಪ್ರಕಾರ ಗೋಲ್ಡ್ ಕೋಸ್ಟ್ ಪ್ರದೇಶದಲ್ಲಿ ಕೋಲ್ಮಿಂಚಿನ ಭಾರಿ ಮಳೆ ಬಿದ್ದು ಮುಷ್ಟಿಗಾತ್ರದ ಆಲಿಕಲ್ಲು ಸುರಿದಿದೆ. ಭಾರಿಮಳೆ ಸೂಚನೆ ಸಿಕ್ಕಿದ ಕೂಡಲೇ ಹವಾಮಾನ ಸಿಬ್ಬಂದಿ ಅದನ್ನು ಸಾರ್ವಜನಿಕರಿಗೆ ತಿಳಿಸಿದರೂ ಅನೇಕರು ಮಳೆಗೆ ಸಿಲುಕಿ ಪರಿಸ್ಥಿತಿ ಏರುಪೇರಾಗಿದೆ. ಮುಖ್ಯವಾಗಿ ಶಾಲೆಗಳಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ಪೋಷಕರು ಮಳೆಯಲ್ಲಿ ಸಿಕ್ಕಿಕೊಂಡರೆ ಅತ್ತಕಡೆ ಆಲಿಕಲ್ಲು, ಉರುಳಿದ ಮರ-ಕೊಂಬೆಗಳಿಂದ ಒಂದಷ್ಟು ಹಾನಿಯಾಗಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಅಲ್ಲೊಂದು ಇಲ್ಲೊಂದು ದಿನ ಮಳೆ ಬಿದ್ದಮೇಲೂ ಬಿಸಿಲಿನ ಧಗೆ ರಾಣಿರಾಜ್ಯವನ್ನು ಸುಡುತ್ತಾ ಕಾಡುತ್ತಿದೆ. ನವೆಂಬರ್ ತಿಂಗಳಿನಲ್ಲೇ ದಿನದ ಉಷ್ಣಾಂಶ ೩೩ ಡಿಗ್ರಿಗೆ ಏರಿದೆ ಅಂದರೆ ಕಡುಬಿಸಿಲಿನ ಬೇಸಿಗೆ ಬರಲಿದೆ ಎಂದರ್ಥ. ಸೆಪ್ಟೆಂಬರ್ ತಿಂಗಳಲ್ಲೇ ಪೊದೆಬೆಂಕಿ ಬಗ್ಗೆ ಸರ್ಕಾರ ಎಚ್ಚರಿಸಿತ್ತು. ಈ ಬಾರಿಯ ಬೇಸಿಗೆಯಲ್ಲಿ ಹವಾಮಾನದಲ್ಲಿನ ಉಷ್ಣಾಂಶ, heatwaves ಮತ್ತೂ ಹೆಚ್ಚಲಿದೆ ಎಂದು ಖಚಿತಪಡಿಸಿ ರಾಜ್ಯಸರ್ಕಾರವು ರಾಣಿರಾಜ್ಯದಲ್ಲಿ ಅರವತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪೊದೆಬೆಂಕಿ ಉರಿಯುತ್ತಿದೆ, ಅಗ್ನಿಶಾಮಕ ಮತ್ತು ತುರ್ತುಸೇವೆ ಸಿಬ್ಬಂದಿ ದಳಗಳು ಎಡಬಿಡದೆ ಕಾರ್ಯನಿರತರಾಗಿದ್ದಾರೆಂದು ಹೇಳಿದೆ. ಪೊದೆಬೆಂಕಿ ಬರುವ ಸೂಚನೆ ಕೊಟ್ಟಕೂಡಲೆ ಜಾಗ ಖಾಲಿ ಮಾಡಿ ಹೊರಡಿ ಎಂದು ಘೋಷಿಸಿದೆ. ಈ ವಿಪರೀತ ಬಿಸಿಲು ಮತ್ತು ಧಗೆ ಪೂರ್ವತೀರದ ರಾಣಿರಾಜ್ಯ ಮತ್ತು ಆಸ್ಟ್ರೇಲಿಯಾದ ಪಶ್ಚಿಮತೀರದಲ್ಲಿರುವ ವೆಸ್ಟೆರ್ನ್ ಆಸ್ಟ್ರೇಲಿಯಾ ರಾಜ್ಯಗಳಲ್ಲಿ ಹೆಚ್ಚಿದೆ. ಉಳಿದ ನಾಲ್ಕು ರಾಜ್ಯಗಳಲ್ಲಿ ಜನರು ಸೊಗಸಾದ ಸೂರ್ಯನನ್ನು ಕೊಂಡಾಡುತ್ತಾ ‘ಆಹಾ ವಾಟ್ ಎ ಬ್ಯೂಟಿಫುಲ್ ಡೇ’ ಎನ್ನುತ್ತಿದ್ದಾರೆ. ಅವರ ಪುಣ್ಯಕ್ಕೆ ಅಲ್ಲಿ ವರುಣದೇವನ ಕೃಪಾಕಟಾಕ್ಷವೂ ಚೆನ್ನಾಗಿದ್ದು ಅವರನ್ನು ನೋಡಿ ಇಲ್ಲಿ ಬ್ರಿಸ್ಬೇನಿನಲ್ಲಿ ೩೩ ಡಿಗ್ರಿ ಬಿಸಿಲಿಗೆ ಕಂಗೆಟ್ಟ ನಾವು ಕರುಬುತ್ತಿದ್ದೀವಿ.

ಅಯ್ಯೋ ಬರೀ ೩೩ ಡಿಗ್ರಿ ತಾನೇ ಅದನ್ನು ಸಹಿಸಿಕೊಳ್ಳುವುದೇನು ಕಷ್ಟವಲ್ಲ, ಅನ್ನಬೇಡಿ. ಕಳೆದ ಕೆಲ ದಶಕಗಳಲ್ಲಿ ಮಾನವ ಚಟುವಟಿಕೆಗಳಿಂದ ದಕ್ಷಿಣಗೋಳದಲ್ಲಿರುವ ಆಸ್ಟ್ರೇಲಿಯಾದ ಆಕಾಶದಲ್ಲಿ ಓಝೋನ್ ಪದರ ತೆಳ್ಳಗಾಗಿದೆ. ಇದರ ಪರಿಣಾಮವೆಂದರೆ ದೇಶದಲ್ಲಿ UV (ವಿಕಿರಣ) ತೀಕ್ಷ್ಣತೆ ಬಲು ವಿಪರೀತ. ಇದರಿಂದ ಬರುವ ಚರ್ಮ ಕ್ಯಾನ್ಸರ್ ತಡೆಗಟ್ಟಲು ನಡೆಯುವ ಸಂಶೋಧನೆ ವಿಶ್ವದಾದ್ಯಂತ ಹೆಸರು ಪಡೆದಿದೆ. ಬಿಸಿಲು ಹೆಚ್ಚಿರುವ ಉಷ್ಣ ಪ್ರದೇಶಗಳಲ್ಲಿ ಅಂದರೆ ನಮ್ಮ ರಾಣಿರಾಜ್ಯದಲ್ಲಿ ೨೫ ಡಿಗ್ರಿ ಗಿಂತಲೂ ಬಿಸಿಲು ಹೆಚ್ಚಾಯಿತು ಎಂದರೆ ಚರ್ಮ ಸುಟ್ಟಿತು ಎನ್ನುವುದು ಖಾತ್ರಿ ವಿಷಯ. ಆದರೆ ಬಿಳಿಯ ಆಸ್ಟ್ರೇಲಿಯನ್ನರಿಗೆ ಇದು ಬಲು ಖುಷಿ ವಿಷಯ. ಒಂದಿಷ್ಟೂ ಖರ್ಚಿಲ್ಲದೆ ನೈಸರ್ಗಿಕವಾಗಿ Tanning ಆಗುತ್ತದೆ ಎಂದು ಕುಣಿದಾಡುತ್ತಾರೆ. ಪ್ರಕೃತಿದತ್ತ ಕೊಡುಗೆಯಾದ ಕಪ್ಪು ಬಣ್ಣದ ಚರ್ಮದ ಮೇಲೆ ಬಿಸಿಲಿನ ಸುಡುವಿಕೆಯ ಪ್ರಭಾವ ಕಾಣಿಸುವುದಿಲ್ಲ. ಪೇಚಾಟಕ್ಕೆ ಸಿಲುಕಿದವರು ಕಂದು ಬಣ್ಣದ ಚರ್ಮವಿರುವವರು. ಬೇಸಿಗೆಯಲ್ಲಿ ಇವರು ಕೆಲಗಂಟೆಗಳ ಕಾಲ ಮೈ ಬಿಸಿಲಿಗೊಡ್ಡಿಕೊಂಡರು ಎಂದರೆ ಭದ್ರಾವತಿ ಬಂಗಾರದ ಬಣ್ಣ ಕಟ್ಟಿಟ್ಟದ್ದು. ಬಿಸಿಲಿನಲ್ಲಿರುವ UV ಪರಿಣಾಮ ಮಾತ್ರ ಎಲ್ಲರಿಗೂ ಸಮಾನವಾಗಿ ಸಲ್ಲುತ್ತದೆ.

ಈ ಪತ್ರವನ್ನು ಬರೆಯುತ್ತಿರುವಾಗ ಬಂದ ಸುದ್ದಿ ಪ್ರಕಾರ ಗೋಲ್ಡ್ ಕೋಸ್ಟ್ ಪ್ರದೇಶದಲ್ಲಿ ಕೋಲ್ಮಿಂಚಿನ ಭಾರಿ ಮಳೆ ಬಿದ್ದು ಮುಷ್ಟಿಗಾತ್ರದ ಆಲಿಕಲ್ಲು ಸುರಿದಿದೆ. ಭಾರಿಮಳೆ ಸೂಚನೆ ಸಿಕ್ಕಿದ ಕೂಡಲೇ ಹವಾಮಾನ ಸಿಬ್ಬಂದಿ ಅದನ್ನು ಸಾರ್ವಜನಿಕರಿಗೆ ತಿಳಿಸಿದರೂ ಅನೇಕರು ಮಳೆಗೆ ಸಿಲುಕಿ ಪರಿಸ್ಥಿತಿ ಏರುಪೇರಾಗಿದೆ. ಮುಖ್ಯವಾಗಿ ಶಾಲೆಗಳಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ಪೋಷಕರು ಮಳೆಯಲ್ಲಿ ಸಿಕ್ಕಿಕೊಂಡರೆ ಅತ್ತಕಡೆ ಆಲಿಕಲ್ಲು, ಉರುಳಿದ ಮರ-ಕೊಂಬೆಗಳಿಂದ ಒಂದಷ್ಟು ಹಾನಿಯಾಗಿದೆ.

ಇವನ್ನೆಲ್ಲಾ ಹವಾಮಾನ ಬದಲಾವಣೆ ವೈಪರೀತ್ಯಗಳು ಎನ್ನೋಣವೇ? ಅನೇಕ ಅಧ್ಯಯನಗಳು ತೋರಿಸುತ್ತಿರುವ ಅಂಕಿಅಂಶಗಳ ಮತ್ತು ಸಾಮಾನ್ಯ ಜನರ ಅನುಭವಗಳ ಪ್ರಕಾರ ಆಸ್ಟ್ರೇಲಿಯಾದಲ್ಲಿ ಕಳೆದ ಆರೆಂಟು ವರ್ಷಗಳಲ್ಲಿ ಪೊದೆಬೆಂಕಿ ಮತ್ತು ಪ್ರವಾಹಗಳು (fire and floods) ಹೆಚ್ಚುತ್ತಿವೆ. ಇದರ ಜೊತೆಗೆ ಅಧಿಕ ಉಷ್ಣಾಂಶ, ಪದೇಪದೇ ಮರುಕಳಿಸುವ heatwaves, ತೊರೆನದಿಗಳು ಇಂಗುವುದು ಇಲ್ಲವೇ ಪ್ರವಾಹದಿಂದ ಉಕ್ಕಿ ಹರಿಯುವುದು ಇನ್ನೂ ಹೆಚ್ಚಲಿವೆ. ಪರಿಣಾಮಗಳಲ್ಲಿ ಸೇರಿರುವುದು ಕೇವಲ ಆಸ್ತಿಪಾಸ್ತಿ ಮತ್ತು ಜೀವಹಾನಿಯ ಮಾತಷ್ಟೇ ಅಲ್ಲ. ಮಾನಸಿಕ ಆರೋಗ್ಯದ ಮೇಲೆ ಆಗುವ ತೀವ್ರ ಪರಿಣಾಮ ಮತ್ತು ಮಕ್ಕಳ ಮನಸ್ಸಿನ ಮೇಲಾಗುವ ಹಾನಿಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.

Eco-anxiety ಅಥವಾ ಪರಿಸರ-ತಲ್ಲಣ ಎನ್ನುವುದು ಈಗ ದೊಡ್ಡ ವಿಷಯವಾಗಿದೆ. ಇದರ ಬಗ್ಗೆ ಶಾಲಾ ಮಕ್ಕಳಿಂದ ಹಿಡಿದು ವಿಜ್ಞಾನಿಗಳ ತನಕ ಮಾತನಾಡುತ್ತಿದ್ದಾರೆ. ಹವಾಮಾನ ಬದಲಾವಣೆಗಳಿಂದ ಉಂಟಾಗುವ ಪರಿಣಾಮಗಳಿಂದ ದೈಹಿಕ-ಮಾನಸಿಕ ರೋಗಗಳು ಹೆಚ್ಚಾಗಲಿವೆ ಪ್ರಕೃತಿಗೂ ಮನುಷ್ಯರಿಗೂ ಇರುವ ಸಂಬಂಧಕ್ಕೆ ಮತ್ತಷ್ಟು ಘಾತವಾಗಲಿದೆ ಮನುಷ್ಯರನ್ನೊಳಗೊಂಡಂತೆ ಇರುವ ಜೀವಜಾಲ ವ್ಯವಸ್ಥೆಯು ಏರುಪೇರಾಗಲಿದೆ, ಇದನ್ನು ಸರಿಪಡಿಸುವುದು ನಮ್ಮ ಕೈಯಲ್ಲಿದೆ, ಅದು ಈಗಲೇ ಆಗಬೇಕು, ನಾಳೆಯಲ್ಲ ಎಂದು ಪರಿಸರ ಕಾಳಜಿ ಇರುವವರು ಒತ್ತಿಒತ್ತಿ ಹೇಳುತ್ತಿದ್ದಾರೆ. ಆದರೆ ಬಲಿಷ್ಠ ದೇಶಗಳ ಸರಕಾರಗಳು ತಮ್ಮಲ್ಲಿನ ಗಣಿ-ಒಡೆಯರು, ಖನಿಜ ಸಂಪತ್ತಿನ ಒಡೆಯರು ಮತ್ತಿತರ ಲಾಭಕೋರ ವ್ಯಾಪಾರಿ ಸಂಸ್ಥೆಗಳಿಗೆ ತಲೆಬಾಗಿಸಿವೆ. ಅವರು ಹೇಳಿದ್ದೇ ವೇದವಾಕ್ಯವೆಂಬಂತೆ ಆಗಿದೆ.

ನಾನು ಪತ್ರವನ್ನು ಬರೆಯುತ್ತಿರುವ ಈ ಶುಕ್ರವಾರವಾರದಂದು ಆಸ್ಟ್ರೇಲಿಯಾ ಪೂರ್ತಿ ಶಾಲಾಮಕ್ಕಳು School Strike 4 Climate ಎಂದು ಘೋಷಿಸಿ ಬೀದಿಗಿಳಿದಿದ್ದರು. ತಮ್ಮ ದೇಶದ ಸರಕಾರವು ತಾನು ಕೊಟ್ಟ ಮಾತಿನಂತೆ ಪರಿಸರ-ಸ್ನೇಹಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿ ಶಾಲಾ ಮಕ್ಕಳು ಹನ್ನೊಂದನೇ ಬಾರಿ ಈ ರೀತಿ ಚಳವಳಿ ಪ್ರದರ್ಶನಕ್ಕೆ ಇಳಿದಿದ್ದರು. ಸ್ವೀಡನ್ ದೇಶದಲ್ಲಿ ಆರಂಭವಾದ ಈ School Strike 4 Climate ಆಸ್ಟ್ರೇಲಿಯಾದಲ್ಲಿ ಹೆಸರುವಾಸಿಯಾಗಿದೆ. ಹಿಂದೊಮ್ಮೆ ಆಸ್ಟ್ರೇಲಿಯಾ ದೇಶದ ರಾಜಧಾನಿ ಕ್ಯಾನ್ಬೆರ್ರಾದಲ್ಲಿ ಗ್ರೆಗೊರಿ ಆಂಡ್ರೂಸ್ ಎನ್ನುವ ರಾಜತಾಂತ್ರಿಕರೊಬ್ಬರು ಸಂಸತ್ತು ಭವನದ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸರಕಾರವು ನಾವೀಗ ಹವಾಮಾನ ತುರ್ತು ಪರಿಸ್ಥಿತಿ ಕಾಲದಲ್ಲಿದ್ದೀವಿ ಎಂದು ಘೋಷಿಸಿ ಪರಿಹಾರ ಕಾರ್ಯಗಳನ್ನು ಜಾರಿಗೆ ತರುವ ತನಕ ತಮ್ಮ ಉಪವಾಸವನ್ನು ನಿಲ್ಲಿಸುವುದಿಲ್ಲ ಎಂದಿದ್ದರೂ, ಅವರನ್ನು ಪ್ರಾತಿನಿಧಿಕವಾಗಿ ಬಂಧಿಸಿ ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದು ನಡೆದಿದ್ದು ಶುಕ್ರವಾರದಂದು. ಇದನ್ನುಸಂಕೇತವಾಗಿಟ್ಟುಕೊಂಡು ಶಾಲಾ ಮಕ್ಕಳು ಒಂದು ಪೂರ್ವ ನಿಯೋಜಿತ ಶುಕ್ರವಾರದಂದು ಶಾಲೆ ತೊರೆದು ತಾವು ಧರಿಸಿರುವ ಶಾಲಾ ಯೂನಿಫಾರ್ಮ್ ನಲ್ಲಿ ‘ಕ್ಲೈಮೇಟ್ ಆಕ್ಷನ್’ ಗಾಗಿ ಒತ್ತಾಯಿಸಿ ಚಳವಳಿ ಮಾಡುತ್ತಾ ಬೀದಿಗಿಳಿಯುತ್ತಾರೆ. ಅವರೊಡನೆ ಪೋಷಕರು, ಸ್ವಯಂಸೇವಾ ಸಂಸ್ಥೆಗಳು, ಬೆಂಬಲಿಗರು ಇರುತ್ತಾರೆ. ಪರಿಸರ-ಸ್ನೇಹಿ ಕೆಲಸಗಳು ನಡೆಯಬೇಕು. ಆರೋಗ್ಯಕರ ಭೂಮಿ ಮತ್ತು ಆರೋಗ್ಯದಿಂದಿರುವ ಜೀವಜಾಲದಲ್ಲಿರುವುದು ತಮ್ಮ ಇಂದಿನ ಹಕ್ಕು, ಸರಕಾರವು ತಮ್ಮ ಅಹವಾಲನ್ನು ಕೇಳಬೇಕು ಎಂದು ಹೇಳುತ್ತಾರೆ.

ಇವತ್ತು ಶುಕ್ರವಾರ ನಡೆದ ‘ಕ್ಲೈಮೇಟ್ ಆಕ್ಷನ್’ ಚಳವಳಿಯ ವಿಶೇಷವೆಂದರೆ ಕೆಲ ಶಾಲಾಮಕ್ಕಳು ‘sick note’ ಪ್ರದರ್ಶಿಸಿದ್ದರು. ದೇಶದ ಮೂವರು ವಿಜ್ಞಾನಿಗಳು ತಾವು ಶಾಲಾಮಕ್ಕಳ ಈ ಚಳವಳಿಯನ್ನು ಬೆಂಬಲಿಸುತ್ತೀವಿ. ಮಕ್ಕಳು sick day ರಜೆ ಕೇಳಿ ಅನಾರೋಗ್ಯಪೀಡಿತ ಭೂ ಗ್ರಹದ ಪರವಾಗಿ ಚಳವಳಿ ನಡೆಸುವುದಕ್ಕೆ ತಮ್ಮ ಬೆಂಬಲವಿದೆ, ಏಕೆಂದರೆ ಅನಾರೋಗ್ಯಪೀಡಿತ ಪರಿಸರದಿಂದ ಉಂಟಾಗುವ ಮಾನಸಿಕ ತಲ್ಲಣ, ಆತಂಕ, ಕ್ಷೋಭೆ ಮತ್ತು ಹತಾಶೆ ನಮ್ಮನ್ನು ಬಾಧಿಸುತ್ತಿದೆ, ಎಂದಿದ್ದರು. ಅವರ ಈ ಹೇಳಿಕೆಯನ್ನು ಮುದ್ರಿಸಿ, ಪ್ರತಿಗಳನ್ನು ಹಂಚುತ್ತಾ ಮಕ್ಕಳು ಚಳವಳಿ ನಡೆಸಿದರು. ತಮ್ಮ ಮುಖ್ಯ ತಲ್ಲಣವಾದ ಬರಲಿರುವ ಮತ್ತೊಂದು ಕಡುಬೇಸಿಗೆ ಮತ್ತು ನೈಸರ್ಗಿಕ ಅನಾಹುತಗಳ ಬಗ್ಗೆ ಕೆಲವರು ಮಾತನಾಡಿದರು. ಸರಕಾರವು ಕೊಟ್ಟ ಅನುಮತಿಗಳಿಂದ ಹೆಚ್ಚುತ್ತಿರುವ ಕಲ್ಲಿದ್ದಲು ಮತ್ತು ಅನಿಲ ಇಂಧನ ಉತ್ಪತ್ತಿ ಘಟಕಗಳು ಪರಿಸರದ ಉಷ್ಣಾಂಶವನ್ನು ಹೆಚ್ಚಿಸುತ್ತಿದೆ. ಬೇರೆ ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶವು ಪರಿಸರ-ಸ್ನೇಹಿ ಕಾನೂನುಗಳನ್ನು ಜಾರಿಗೆ ತರುವುದರಲ್ಲಿ ಹಿಂದೆ ಬಿದ್ದಿದೆ ಎಂದರು. ಯಥಾ ಪ್ರಕಾರ ಮಕ್ಕಳ ಈ ಚಳವಳಿಯನ್ನು ಶಿಕ್ಷಣ ಮಂತ್ರಿಗಳು ಟೀಕಿಸಿದ್ದಾರೆ.

ಭೂಮಿಯ ಆರೋಗ್ಯ ನಮ್ಮ ಆರೋಗ್ಯ ಎಂದು ಪರಿಸರಕ್ಕಾಗಿ ನಡೆದ ಶಾಲಾ ಮಕ್ಕಳ ಚಳವಳಿ ತೋರುವುದು ನಮ್ಮೆಲ್ಲರ ಆತಂಕವನ್ನು, ತಲ್ಲಣವನ್ನು. ಜೊತೆಗೆ ಬೆಚ್ಚಗಿರುವ ಆಶಾಭಾವನೆಯನ್ನು ಕೂಡ. ನಮ್ಮ ಮಕ್ಕಳು ಇಂದಿನ ಸಕ್ರಿಯ ಪ್ರಜೆಗಳು. ಇವತ್ತು ನಡೆಯುವ ಎಲ್ಲಾ ರೀತಿಯ ವ್ಯವಹಾರಗಳು ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ ಅವರನ್ನೂ ಒಳಗೊಂಡಿರುತ್ತದೆ. ಪರಿಣಾಮಗಳು ಅವರಿಗೂ ಸೇರಿದ್ದು, ಅವರನ್ನೂ ಬಾಧಿಸುತ್ತದೆ ಎನ್ನುವುದನ್ನು ದೊಡ್ಡವರು ಗಮನಿಸಬೇಕು. ಇಂದಿನ ಪರಿಸರದ ಆರೋಗ್ಯ ನಮ್ಮೆಲ್ಲರ ಆರೋಗ್ಯವೂ ಹೌದು.