ಕತೆಗಳು ಹಿಂದಕ್ಕು ಮುಂದಕ್ಕು ಹೋಗುವ ಶೈಲಿ ಹಿಂದುಸ್ತಾನಿ ಸಂಗೀತದ ಯಾವುದೋ ಹೊಸ ರಾಗವೊಂದು ಹೊಮ್ಮಿದಂತೆ ಸಾಗುತ್ತದೆ. ಅದು ಕಾಲದ ಚಲನೆಯಾಗಿ ಓದುಗರನ್ನು ತನ್ನ ಜೊತೆ ಎಳೆದುಕೊಳ್ಳುತ್ತದೆ. ಕ್ಯಾಂಟರ್ ಬರಿ ಟೇಲ್ಸ್‌ನಲ್ಲಿ ಥಾಮಸ್ ಬಕೆಟ್‌ನ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಂಡ ಯಾತ್ರಿಕರು ಒಬ್ಬೊಬ್ಬರು ಒಂದೊಂದು ಬದುಕಿನ ಅನನ್ಯ ಅನುಭವದ ಕತೆಯನ್ನು ಹೇಳುವಂತೆ ಇಲ್ಲಿ ಸಿದ್ಧಾರ್ಥ ಮತ್ತು ಸೋಫಿಯಾ ತಮ್ಮ ಬದುಕಿನ ಜೊತೆ ತಮ್ಮ ಬದುಕನ್ನು ಮತ್ತು ಅದನ್ನು ಆವರಿಸಿರುವ ವ್ಯಕ್ತಿಗಳ ಕತೆಯನ್ನು ಹೇಳುತ್ತ ಹೋಗಿರುವ ಪರಿ ಚುಂಬಕ ಶಕ್ತಿಯಂತೆ ಸೆಳೆಯುತ್ತದೆ.
ಸತೀಶ್‌ ಚಪ್ಪರಿಕೆ ಅವರ “ಘಾಂದ್ರುಕ್”‌ ಕಾದಂಬರಿ ಕುರಿತು ಎಚ್.ಆರ್.‌ ರಮೇಶ್‌ ಬರಹ ನಿಮ್ಮ ಓದಿಗೆ

ಘಾಂದ್ರೂಕ್‌ನ ಕಥಾನಾಯಕ ಸಿದ್ಧಾರ್ಥ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಿ ಹೆಸರು ಹಣವನ್ನು ಗಳಿಸಿದರೂ, ತನ್ನದೇ ಕಾರ್ಪೋರೆಟ್ ಕಂಪನಿಯು ತನ್ನ ಕೈ ಮೀರಿ ಹೋದಾಗ ಜರ್ಜರಿತಗೊಳ್ಳುತ್ತಾನೆ. ಇದಲ್ಲದೆ ಅವನ ಖಾಸಗೀ ಜೀವನದಲ್ಲಿ ಆದಂತಹ ಕೆಲವು ಘಟನೆಗಳು ಅವನನ್ನು ಮತ್ತಷ್ಟು ಕುಗ್ಗಿಸುತ್ತವೆ. ಅಮ್ಮನಂತಹ ಅಪ್ಪನನ್ನು ಕಳೆದುಕೊಳ್ಳುತ್ತಾನೆ. ಮದುವೆ ಮುರಿದು ಬೀಳುತ್ತದೆ. ಇದು ಅವನನ್ನು ತುಂಬ ತೀವ್ರವಾದ ಭ್ರಮನಿರಸನನ್ನಾಗಿ ಮಾಡುತ್ತದೆ. ಇದರಿಂದಾಗಿ ಕ್ರಮೇಣ ಖಿನ್ನತೆಯು ಆವರಿಸಿಕೊಳ್ಳುತ್ತದೆ. ಕಂಪನಿಯನ್ನು ಕಟ್ಟಲು ಸಾಥ್ ಕೊಟ್ಟ ತನ್ನ ಖಾಸಗೀ ಸ್ನೇಹಿತರಿಗೂ ಹೇಳದೆ ಹಿಮಾಲಯದ ಕಡೆ ಮುಖ ಮಾಡುತ್ತಾನೆ. ಈ ಪ್ರಯಾಣದಲ್ಲಿ ಅಂದರೆ ಹಿಮಾಲಯದ ಸನ್ನಿಧಿಯಲ್ಲಿ ಅವನಿಗೆ ಸೋಫಿಯಾ ಎನ್ನುವ ಸೂಜಿಮಲ್ಲಿಗೆಯಂತಹ ಹೆಣ್ಣಿನ ಸ್ನೇಹ ಅವನ ಬದುಕಿನಲ್ಲಿ ಹೊಸ ಅಲೆಗಳನ್ನು ಏಳಿಸುತ್ತದೆ.

(ಸತೀಶ್‌ ಚಪ್ಪರಿಕೆ)

ಸಿದ್ದಾರ್ಥನಿಗೆ ಬದುಕಿನ ತೀವ್ರತೆ ಮತ್ತು ಸೌಂದರ್ಯ ಅರ್ಥ ಆಗಿದ್ದು ಸೋಫಿಯಾಳ ಸ್ನೇಹದಲ್ಲಿ ಮತ್ತು ಸಾನಿಧ್ಯದಲ್ಲಿ. ಕೊರೆವ ಹಿಮಾಲಯದ ಸನ್ನಿಧಿಯಲ್ಲಿ ಅವಳ ಬೆಚ್ಚನೆಯ ಸ್ಪರ್ಶದಲ್ಲಿ. ಅದು, ಅವಳಿಗೆ ಕಾಮವಲ್ಲ, ಪ್ರೇಮವಲ್ಲ, ಕಾಮವೂ ಹೌದು, ಪ್ರೇಮವೂ ಹೌದು. ಮತ್ತು ಅದರಾಚೆಯ ಅವ್ಯಕ್ತ ಅನುಭೂತಿಯೂ ಹೌದು. ಸೋಫಿಯಾಳಿಗೆ ಕಾಮ ಎನ್ನುವುದು ಆತ್ಮವಂಚಕ ಕರ್ಮಠರ ದೃಷ್ಟಿಯಲ್ಲಿನ ಅನೈತಿಕ ಕ್ರಿಯೆಯಲ್ಲ. ಅದು ಬದುಕಿನ ಆದಿಮವಾದದ್ದು. ಅಂದರೆ ಮೊದಲಲ್ಲ, ಮೂಲ. ಸೃಷ್ಟಿಯ ಸೌಂದರ್ಯದ ಸೆಲೆ. ಜೀವದ ನೆರಳು. ಅಂದರೆ ವೇರ್ ಲೈಫ್ ಈಸ್, ದೇರ್ ಇಟ್ ಈಸ್. ಕಾಮಕ್ಕೂ ಸೌಂದರ್ಯಕ್ಕೂ ಅಲೌಕಿಕವಾದ ಸಂಬಂಧ. ಸಮಾಜದ ಗ್ರಹೀತಗಳು, ಅದನ್ನೊಂದು ಮೈಲಿಗೆ ಎನ್ನುವ ಮಟ್ಟಕ್ಕೆ ಕೊಂಡೊಯ್ದು ಅರ್ಥೈಸುವಂತಹದ್ದಲ್ಲ. ಬಹುಷಃ ಕಾಮದ ಅರಿವಿನಲ್ಲಿಯೇ ಮನುಷ್ಯನ ಮುಕ್ತತೆ, ಸ್ವಚ್ಛಂದತೆ ಇವೆ ಅನ್ನಿಸುತ್ತೆ. ಯಾಕೆಂದರೆ ಅದೊಂದು ಅನುಭೂತಿಯ ಅನುಭವವನ್ನು ನೀಡುವಂತಹ ಸೌಂದರ್ಯ. ಅವಳದು ಅಷ್ಟರಮಟ್ಟಿಗೆ ಮುಕ್ತವಾದ ಮನಸ್ಸು. Very open-minded she is. ಅದಕ್ಕಾಗಿಯೇ ಅವಳು ತೀವ್ರವಾಗಿ ಅನುಭವಿಸುತ್ತಾಳೆ. ಅದು ಹೇಗೆ, ಲಿಂಗತಾರತಮ್ಯವಿಲ್ಲದೆ! ತರುಣಿ ಅರಬ್ ಕಾದಂಬರಿಕಾರ್ತಿಯ ಜೊತೆ ಅವಳು ಸಿರಿಯಾದಲ್ಲಿ ದೈಹಿಕವಾಗಿ ಸಮಾಗಮವಾಗುವುದರಲ್ಲಿ ಕಾಣಬಹುದು. ಅವರ ಕೂಡುವಿಕೆ ಕೇವಲ ಕಾಮವಾಗಿ ಕಾಣದು. ಮತ್ತೂ ಅವಳದು ಪಾಪಪ್ರಜ್ಞೆಯಿಲ್ಲದ ಕಾಮ. ಅಲ್ಲಿ ಮಡಿವಂತಿಕೆ, ವರ್ಜಿನಿಟಿಗಳಿಗೆ ಜಾಗವೇ ಇಲ್ಲ. ಆ ಕಾರಣದಿಂದಾಗಿಯೇ ಅವಳು ಸಮಾಜದ ಮತ್ತು ನಾಗರೀಕತೆಯ ಸೋಗಲಾಡಿತನಗಳನ್ನು ಮತ್ತು ಹಿಪಕ್ರಸಿಯನ್ನು ತೀವ್ರತೆರನಾಗಿ ಟೀಕಿಸುವುದು. ಅದನ್ನು ಅವಳು ಸಿದ್ಧಾರ್ಥನ ಜೊತೆ ಧರ್ಮದ ಬಗ್ಗೆ, ರಾಜಕೀಯದ ಬಗ್ಗೆ, ಕೌಟುಂಬಿಕ ಮೌಲ್ಯಗಳ ಬಗ್ಗೆ, ದೇವರ ಬಗ್ಗೆ ಚರ್ಚಿಸುವಂತಹ ಸಂದರ್ಭದಲ್ಲಿ ಕಾಣಬಹುದು. ಸೌಂದರ್ಯವೆನ್ನುವುದು ಡಿ.ಎಚ್. ಲಾರೆನ್ಸ್ ತನ್ನ ಒಂದು ಬರಹದಲ್ಲಿ ಹೇಳುವಂತೆ ತುಂಬ ನಿಗೂಢವಾದಂತಹದ್ದು. ಅದು ಅಷ್ಟು ಸುಲಭಕ್ಕೆ ಕಾಣುವುದಿಲ್ಲ, ಕಾಣಿಸಿಕೊಳ್ಳುವುದಿಲ್ಲ. ಅದಕ್ಕೆ ಎಲ್ಲ ಬಂಧಗಳನ್ನು ಮೀರಿದ ಸ್ವಚ್ಛಂದವಾದ ಮನಸ್ಸು ಬೇಕಾಗುತ್ತದೆ. ಬದುಕಿಗೆ ಅಷ್ಟರಮಟ್ಟಿಗೆ ತೆರೆದುಕೊಂಡಿದ್ದರೂ ಅವಳು ನಿಜವಾದ ಸೌಂದರ್ಯವನ್ನು ಕಾಣುವುದು ಸಿದ್ಧಾರ್ಥನಲ್ಲಿ. ಜಾನ್ ಡನ್ ಒಂದು ಕವಿತೆಯಲ್ಲಿ ಹೇಳುತ್ತಾನಲ್ಲ; ‘ನಾನು ಪ್ರತಿ ಹೆಣ್ಣಿನ ಸೌಂದರ್ಯದಲ್ಲಿ ಹಂಬಲಿಸಿದ್ದು ನಿನ್ನಲ್ಲಿರುವಂತಹ ಸೌಂದರ್ಯಕ್ಕಾಗಿ’ ಆ ಥರ ಅವಳು ಸಹ ಸಿದ್ಧಾರ್ಥನಂತಹ ಒಂದು ಸಾಂಗತ್ಯಕ್ಕಾಗಿ ಹಪಹಪಿಸಿರುವಳು. ಬದುಕಿನ ಸೌಂದರ್ಯ, ಆ ನಿಗೂಢವಾದ ಸೌಂದರ್ಯ, ಅದು ಪ್ರಕಟಗೊಂಡಾಗ ಹೊಮ್ಮುವ ಪ್ರಭೆಯಲ್ಲಿ ಬೆಳಗಬೇಕು, ಉರಿದು, ಬೂದಿಯಾಗದೆ. ಅವಳದು ಬದುಕಿನ ಸೌಂದರ್ಯದ ಬೆಳಗಿನಲ್ಲಿ ಮೀಯುವ ಬಯಕೆ. ಅವಳಿಕೆ ಕಾಮ ಮತ್ತು ಸೌಂದರ್ಯಗಳ ನಡುವೆ ಅಂತಹ ವ್ಯತ್ಯಾಸವಿಲ್ಲ. ಅದು ಹೇಗೆ ಅಂದರೆ ಬದುಕು ಮತ್ತು ಪ್ರಜ್ಞೆ ಒಂದರೊಳಗೊಂದು ಮಿಳಿತಗೊಂಡಿರುತ್ತಾವಲ್ಲ ಹಾಗೆ. ಮತ್ತು ಸೌಂದರ್ಯವೆಂದರೆ ಅದೇನು ಧುತ್ತನೆ ಸಿಗುವಂತಹದ್ದೂ ಅಲ್ಲ, ಅದೊಂದು ಕೊನೆಯಿರದ ಹುಡುಕಾಟ ಮತ್ತು ಅನುಭವ. ಅದನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಅದನ್ನೆ ಹೊರಗಡೆಯಿಂದ ನೋಡುತ್ತ ಇರಲು ಆಗುವುದಿಲ್ಲ. ಬದಲಿಗೆ ಅದರೊಟ್ಟಿಗೆ ಬೆರೆಯಬೇಕಾಗಿರುವಂತಹದ್ದು. ಸೋಫಿಯಾ ಬದುಕಿದ್ದೂ ಹಾಗೇ, ಅವಳಿಗೆ ಈಗ ಸಿದ್ಧಾರ್ಥನಲ್ಲಿ ಲೀನವಾಗಿ ಬದುಕಿನಲ್ಲಿ ಬೆಳಕನ್ನು, ಬೆಳಗನ್ನು ಕಾಣುವ ಪ್ರೀತಿಯ ಹಂಬಲ. ಅವಳು ಅವನನ್ನು ಬಯಸುವುದು ತುಂಬಾ ಭಾವುಕಳಾಗಿ ಅಲ್ಲ, ಮತ್ತು ಪಕ್ಕಾ ಪ್ರಾಕ್ಟಿಕಲ್ ಆಗಿಯೂ ಅಲ್ಲ. ಬದುಕಿನ ಸೆಳೆತ ಅವನಲ್ಲಿ ಕಾಣುವಂತೆ ಮಾಡಿದೆ. ಅವಳದು ತನ್ನ ಸ್ವಚ್ಚಂದ ಮನದ ಮಾತು. ಅವಳೇ ಹೇಳುವಂತೆ, (ಇದನ್ನು ಪತ್ರದಲ್ಲಿ ಬರೆದು ಇಟ್ಟು ಹೋಗಿರುತ್ತಾಳೆ, ಅದನ್ನು ಸಿದ್ಧಾರ್ಥ ನಂತರ ಓದುತ್ತಾನೆ) ನಿನ್ನೊಂದಿನಗಿನ ನನ್ನ ಸಂಬಂಧ ಪ್ರೇಮ-ಕಾಮ ಎಲ್ಲವನ್ನೂ ಮೀರಿದ್ದು ಸಿಧ್! ಅವಳದು ದಿವ್ಯ ಪ್ರೇಮದ ಯಾಚನೆ. ಆದರೆ ಅವನಿಗೆ ಇನ್ನೂ ಸ್ಪಷ್ಟತೆ ಇಲ್ಲ. ಯಾಕೆಂದರೆ ಅವನ ಮುಂದೆ ನಾಲಕ್ಕೂ ಆಯ್ಕೆಗಳಿದ್ದಾವೆ: (೧) ನಮೋ ಬುದ್ಧಕ್ಕೆ ಹೋಗಿ ಸೋಫಿಯಾಳ ಜೊತೆ ಬದುಕನ್ನು ಕಟ್ಟಿಕೊಳ್ಳುವುದು (೨) ತನ್ನ ಹುಟ್ಟೂರು ಹೊಸ್ಮನೆಗೆ ಹೋಗಿ ತನ್ನ ಸಂಬಂಧಿಕರ ಜೊತೆ, ಮತ್ತು ಇತ್ತೀಚಿಗೆ ಗೊತ್ತಾಗಿರುವ ತನ್ನ ಮಲ ತಾಯಿ, ತಂಗಿ ಜೊತೆ ಬಾಳುತ್ತ ಬದುಕಿನ ಸಾರ್ಥಕ ಕ್ಷಣಗಳನ್ನು ಕಳೆಯುವುದು, (೩) ತನ್ನ ಸ್ನೇಹಿತರ ಜೊತೆಯಲ್ಲಿ ಮತ್ತೆ ಹೊಸದಾದ ಕಂಪನಿಯನ್ನು ಸ್ಥಾಪಿಸಿ ಮತ್ತೆ ಹೊಸ ಬಗೆಯ ಸಾಹಸಕ್ಕೆ ಕೈ ಹಾಕುವುದು ಮತ್ತು (೪) ಅಂತರರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶವನ್ನು ಒಪ್ಪಿಕೊಳ್ಳುವುದು.

ಕಾದಂಬರಿಕಾರರು ಇದಕ್ಕೆ ಯಾವ ಸ್ಪಷ್ಟನೆಯನ್ನೂ ಕೊಡುವುದಿಲ್ಲ. ಇದು ಕಾದಂಬರಿಕಾರನ ಸೋಲು ಇರಬಹುದು. ಅಥವಾ ಸಿದ್ಧಾರ್ಥನ ಮನೋಸ್ಥಿತಿಯನ್ನು ತೋರಿಸುತ್ತಿರಬಹುದು. ಕಾದಂಬರಿಯು ಸಿದ್ಧಾರ್ಥನು ಧವಳಗಿರಿಯನ್ನು ನೋಡುವುದರ ಮೂಲಕ ಕೊನೆಯಾದರೂ ಓದುಗರಲ್ಲಿ ಮುಂದುವರೆಯುತ್ತದೆ. ಟಿ. ಎಸ್. ಎಲಿಯಟ್‌ನ ಒಂದು ಮಾತಿದೆ ನಾವು ಎಲ್ಲಿಂದ ಆರಂಭಮಾಡುತ್ತೇವೆಯೋ ಮತ್ತೆ ಅಲ್ಲಿಗೆ ಬಂದು ತಲುಪುತ್ತೇವೆ ಎನ್ನುವ ಅರ್ಥಬರುವಂತಹದ್ದು. ಸಿದ್ಧಾರ್ಥನ ಬದುಕೂ ಸಹ ಹಾಗೆ ಕಾಣುತ್ತದೆ. ಮತ್ತೂ ಅವನು ಯಾವ ನಿರ್ಧಾರವನ್ನಾದರೂ ತೆಗೆದುಕೊಳ್ಳಲಿ, ಆದರೆ ಅವನ ಮುಂದಿನ ಜೀವನ ಸೋಫಿಯಾಳಿಲ್ಲದೆ ಇರುವುದಿಲ್ಲ. ಯಾಕೆಂದರೆ ಅವರಿಬ್ಬರ ನಡುವೆ ನಿಜ ಪ್ರೀತಿ ಅಂಕುರಿಸಿದೆ. ಮತ್ತು ಇಬ್ಬರೂ ಸಹ ಅದನ್ನು ಜತನದಿಂದ ತಮ್ಮ ಹೃದಯದಲ್ಲಿ ಕಾಯ್ದಿಟ್ಟುಕೊಂಡು ಸಾಗುವರು. ಅವರ ನಡುವೆ ಅಂಕುರಿಸಿರುವ ಪ್ರೀತಿ ಸೆಟ್ಲ್ ಆಗುವಂತಹದ್ದಲ್ಲ, ಅದೊಂದು ನಿಲ್ಲದ ಪಯಣ. ಇಬ್ಬರೂ ತಮ್ಮ ಒಳಗನ್ನೂ ಬಿಚ್ಚಿಕೊಳ್ಳುತ್ತ ಮತ್ತಷ್ಟು ಹತ್ತಿರವಾಗುತ್ತ ಸಾಗುವುದು. ಪ್ರೀತಿಯ ಬೆಳಕಲ್ಲಿ ಅವರಿಬ್ಬರ ನಡುವೆ ಇನ್ನೂ ಕಾಣದ ಕಂದಕಗಳು, ಕಪ್ಪು ಕುಳಿಗಳು ಕಾಣಬೇಕಿದೆ. ಮತ್ತೂ ಇಬ್ಬರೂ ಪರಸ್ಪರ ತಮ್ಮ ನಡುವೆ ಇರುವ ಭಿನ್ನತೆಗಳನ್ನು ಇನ್ನೂ ಕಾಣುವುದು ಬೇಕಾದಷ್ಟಿದೆ. ಅದಕ್ಕೆ ಅವರು ರೆಡಿಯಾಗಿದ್ದಾರೆ ಕೂಡ. ಅವನು ಯಾವ ನಿರ್ಧಾರವನ್ನು ತೆಗೆದುಕೊಂಡರೂ ಸೋಫಿಯಾಳನ್ನು ಬಿಟ್ಟು ಇಮ್ಯಾಜಿನ್ ಮಾಡಲಾರ. ಅಥವಾ ತೀವ್ರತೆರನಾಗಿ ಘಟಿಸುತ್ತಿರುವ ಈ ಬದುಕಿನಲ್ಲಿ ಮತ್ತೆ ಯಾವ ಸುಳಿಗಳೂ ಅವರನ್ನು ಎಳೆದುಕೊಳ್ಳಬಹುದೋ. ಅದು ಊಹೆ. ಹೌದು. ಅವರು ಜೊತೆಗೆ ಹೋಗುವುರು ಎನ್ನುವುದೂ ಸಹ ಊಹೆಯೇ. ಕಾದಂಬರಿಗೆ ಸೋಫಿಯಾಳೇ ನ್ಯೂಕ್ಲಿಯಸ್ ಇದ್ದಂತೆ. ಆದರೆ ಅವಳ ಕುಟುಂಬದ ಹಿನ್ನಲೆಯನ್ನು ಕಾದಂಬರಿಕಾರರು ಯಾವ ಹಾಲಿವುಡ್ ಅಥವಾ ಬಾಲಿವುಡ್‌ಗಿಂತಲೂ ಮಿಗಿಲಾಗಿ ಸ್ವಲ್ಪ ಸೆನ್ಸೇಷನಲ್ ಅನ್ನುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಈ ಭಾಗಗಳು ಜನಪ್ರಿಯ ಕಾದಂಬರಿಗಳ ಶೈಲಿಯಂತೆ ಕಾಣುತ್ತವೆ. ಈ ಕಾದಂಬರಿಯ ಚೌಕಟ್ಟಿನಲ್ಲಿಯೇ ಯೋಚಿಸಿ, ಅದು ಅವಳ ನಿಜ ಬದುಕಿನ ನೈಜ ಚಿತ್ರಣ ಅಂತ ಅಂದುಕೊಂಡರೂ ನಿರೂಪಣೆಯಲ್ಲಿ ಅದು ನಾಟಕೀಯ ಮತ್ತು ಅಸಹಜವಾಗಿಯೇ ಕಾಣುತ್ತದೆ. ಹಾಗೆ ನೋಡಿದರೆ ಇಡೀ ಕತೆಗೆ ಸಿಕ್ಕಿರುವ ನಿರೂಪಣೆಯ ರಚನೆ ಈ ಕಡೆ ಪ್ರವಾಸಕಥನವೂ ಅಲ್ಲದ, ದಿನಚರಿಯ ಥರವೂ ಅಲ್ಲದ, ಸಂವಾದವೂ ಅಲ್ಲದ ಮತ್ತೂ ಎಲ್ಲವನ್ನು ಒಳಗೊಂಡು ಹೊಸ ಬಗೆಯ ನಿರೂಪಣೆಯಾಗಿ ಕಾದಂಬರಿಕಾರರು ಕಟ್ಟಲು ಹೊರಟಿದ್ದರೂ ಅದು ತನ್ನ ಸಾಫಲ್ಯತೆಯನ್ನು ಕಾಣದೇ ಇರುವುದನ್ನು ನಿಚ್ಚಳವಾಗಿ ಕಾಣಬಹುದು.

ಕಾದಂಬರಿಗೆ ಅನುಭವವೇ ಅಂದರೆ ವಸ್ತುವೇ ಅಂದರೆ ಕತೆಯೇ ಮುಖ್ಯವಾದರೂ ರಚನೆಯನ್ನು ನಿರ್ಲಕ್ಷಿಸುವುದಕ್ಕೆ ಆಗುವುದಿಲ್ಲ. ಕಾದಂಬರಿ ಪ್ರಕಾರದ ರಚನೆಯ ಬಗ್ಗೆಯೇ ಚರ್ಚೆಗಳಾಗಿರುವುದನ್ನು ಗಮನಿಸಬಹುದು. ಫಾಸ್ಟರ್‌ನಿಂದ ಹಿಡಿದು ಕುಂದೇರ ಮತ್ತು ಇತ್ತೀಚಿನ ಹರುಕಿ ಮುರಕಮಿ ತನಕ. ಲಂಕೇಶರು ಹೇಳುವಂತೆ ರಚನೆ ಎನ್ನುವುದು ಬಾಹ್ಯ ಹೊದಿಕೆ ಆಗಬಾರದು, ಅದು ಕತೆಯ ಜೊತೆಗೆಯೇ ಹೊಮ್ಮಬೇಕು. ಇದು ನಿಜ. ಯಾಕೆಂದರೆ ಕುಸುಮಬಾಲೆಯ ವಸ್ತುವನ್ನು ಮತ್ತು ಅದರ ರಚನೆಯನ್ನು ಬೇರ್ಪಡಿಸಲು ಸಾಧ್ಯವಾಗದು. ಡಬ್ಲ್ಯೂ.ಬಿ.ಯೇಟ್ಸ್ ಹೇಳುವಂತೆ ‘ನೃತ್ಯಗಾರ್ತಿಯನ್ನು ನೃತ್ಯದಿಂದ ಹೇಗೆ ಬೇರ್ಪಡಿಸಲು ಸಾಧ್ಯ?’ ಅದೇ ರೀತಿ. ಮಾರ‍್ಕ್ವೇಜ್‌ನ ಸಾಲಿಟ್ಯೂಡ್‌ಗು ಅನ್ವಯಿಸುತ್ತದೆ. ಈ ಕಾದಂಬರಿಯಲ್ಲೂ ಕತೆಯೂ ಹಿಂದಕ್ಕೆ ಸರಿಯುತ್ತ ಮುಂದಕ್ಕೆ ಜಿಗಿಯುತ್ತದೆ. ಆದರೆ ಅದು ಸಾವಯವ ಬಂಧವಾಗಿ ಕಾಣದೆ ನಿರೂಪಣೆ ತುಂಬ ಕಾನ್ಸಿಯಷ್ ಆಗುತ್ತೆ. ಮತ್ತೂ ಹಿಮಾಲಯದ ತಪ್ಪಲಿನಲ್ಲಿ ನಡೆಯುವ ಈ ಕಾದಂಬರಿಗೆ ಲೇಯರ್ಡ್ ಎನ್ನಬಹುದಾದ ಚಿತ್ರಣಗಳ ಒಳಗೆ ಪಾತ್ರಗಳನ್ನು ಇಟ್ಟು ತನ್ನಿಂದ ತಾನೇ ಸೈಕಾಲಜಿಕಲ್ಲಾಗಿ ಪಾತ್ರಗಳ ವ್ಯಕ್ತಿತ್ವಗಳು ಬಿಚ್ಚಿಕೊಳ್ಳುವಂತಹ ಸಾಧ್ಯತೆ ಇತ್ತು. ಆದರೆ ಕಾದಂಬರಿಕಾರರು ವಿವರಣೆಗಿಂತಲೂ ಹೆಚ್ಚಿನದಾಗಿ ವಿಶ್ಲೇಷಣಾತ್ಮಕವಾದ ಕಥನವನ್ನು ನಂಬಿಕೊಂಡಿರುವುದು ಇಡೀ ಕಾದಂಬರಿಯ ಉದ್ದಕ್ಕೂ ಕಾಣುತ್ತದೆ. ನಿಜ. ಪಾತ್ರಗಳ ಮುಖಾಮುಖಿಯಲ್ಲಿ ಆಸ್ಫೋಟಗೊಳ್ಳುವ ಸತ್ಯವನ್ನು ಕಾಣುವುದೇ ಒಂದು ಟ್ರಾನ್ಸೆಂಡೆಂಟಲ್ ಆದಂತಹ ಅನುಭವ.

ಮಾತು ಮತ್ತು ಕತೆಗಳೇ ಕಾದಂಬರಿಯ ಶಕ್ತಿ ಆಗಿ ಪರಿಣಮಿಸಿರುವುದನ್ನು ಗಮನಿಸದೇ ಇರಲು ಆಗದು. ಕತೆಗಳು ಹಿಂದಕ್ಕು ಮುಂದಕ್ಕು ಹೋಗುವ ಶೈಲಿ ಹಿಂದುಸ್ತಾನಿ ಸಂಗೀತದ ಯಾವುದೋ ಹೊಸ ರಾಗವೊಂದು ಹೊಮ್ಮಿದಂತೆ ಸಾಗುತ್ತದೆ. ಅದು ಕಾಲದ ಚಲನೆಯಾಗಿ ಓದುಗರನ್ನು ತನ್ನ ಜೊತೆ ಎಳೆದುಕೊಳ್ಳುತ್ತದೆ. ಕ್ಯಾಂಟರ್ ಬರಿ ಟೇಲ್ಸ್‌ನಲ್ಲಿ ಥಾಮಸ್ ಬಕೆಟ್‌ನ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಂಡ ಯಾತ್ರಿಕರು ಒಬ್ಬೊಬ್ಬರು ಒಂದೊಂದು ಬದುಕಿನ ಅನನ್ಯ ಅನುಭವದ ಕತೆಯನ್ನು ಹೇಳುವಂತೆ ಇಲ್ಲಿ ಸಿದ್ಧಾರ್ಥ ಮತ್ತು ಸೋಫಿಯಾ ತಮ್ಮ ಬದುಕಿನ ಜೊತೆ ತಮ್ಮ ಬದುಕನ್ನು ಮತ್ತು ಅದನ್ನು ಆವರಿಸಿರುವ ವ್ಯಕ್ತಿಗಳ ಕತೆಯನ್ನು ಹೇಳುತ್ತ ಹೋಗಿರುವ ಪರಿ ಚುಂಬಕ ಶಕ್ತಿಯಂತೆ ಸೆಳೆಯುತ್ತದೆ. ಅದಕ್ಕೆ ಬಳಕೆಯಾಗಿರುವ ಭಾಷೆಯೂ ಸಹ ಕಾರಣ.

ಸೌಂದರ್ಯವೆಂದರೆ ಅದೇನು ಧುತ್ತನೆ ಸಿಗುವಂತಹದ್ದೂ ಅಲ್ಲ, ಅದೊಂದು ಕೊನೆಯಿರದ ಹುಡುಕಾಟ ಮತ್ತು ಅನುಭವ. ಅದನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಅದನ್ನೆ ಹೊರಗಡೆಯಿಂದ ನೋಡುತ್ತ ಇರಲು ಆಗುವುದಿಲ್ಲ. ಬದಲಿಗೆ ಅದರೊಟ್ಟಿಗೆ ಬೆರೆಯಬೇಕಾಗಿರುವಂತಹದ್ದು. ಸೋಫಿಯಾ ಬದುಕಿದ್ದೂ ಹಾಗೇ, ಅವಳಿಗೆ ಈಗ ಸಿದ್ಧಾರ್ಥನಲ್ಲಿ ಲೀನವಾಗಿ ಬದುಕಿನಲ್ಲಿ ಬೆಳಕನ್ನು, ಬೆಳಗನ್ನು ಕಾಣುವ ಪ್ರೀತಿಯ ಹಂಬಲ.

ಡಿ.ಆರ್. ನಾಗರಾಜ್ ಅವರು ಅನಂತಮೂರ್ತಿಯವರು ಭವ ಕಾದಂಬರಿಯ ಕುರಿತು ಆಡಿದ್ದಂತಹ ಮಾತುಗಳನ್ನು ಈ ಕಾದಂಬರಿಗೆ ಅನ್ವಯಿಸಿ ಮುಖ್ಯವಾಗಿ ಸೋಫಿಯಾಳಿಗೆ ಅನ್ವಯಿಸಿ ಹೇಳುವುದಾದರೆ ಸೋಫಿಯಾ ಇಲ್ಲಿ ಜೀವನದಲ್ಲಿನ ಪೊಳ್ಳು ನೈತಿಕ ಮೌಲ್ಯಗಳನ್ನುತೀವ್ರವಾಗಿ ಟೀಕಿಸುತ್ತ ಬದುಕನ್ನು ಪ್ರೀತಿ ಮತ್ತು ವಿನಮ್ರತೆಗಳಿಂದ ತುಂಬಿಕೊಂಡಿರುವಂತೆ ಕಾಣಲು ಪ್ರಯತ್ನಪಡುತ್ತಾಳೆ. ಅವಳು ಧರ್ಮದ ಬಗ್ಗೆ ಮತ್ತು ಪ್ರಸ್ತುತ ಜಾಗತಿಕ ರಾಜಕೀಯ ಸಂದರ್ಭಗಳನ್ನು ಅರ್ಥೈಸುವ ಪರಿ ಓದುಗರಲ್ಲಿ ಬೆರಗನ್ನು ಹುಟ್ಟಿಸುತ್ತದೆ. ಮಧ್ಯ ಪ್ರಾಚ್ಯದ ಅಂತರ್ ಕಲಹದ ಪರಿಣಾಮವಾಗಿ ನಿರಾಶ್ರಿತರಾದವರಿಗೆ ಬದುಕನ್ನು ಕಟ್ಟಿಕೊಳ್ಳಲು ಸಹಾಯಮಾಡಲು ಶ್ರಮಿಸುತ್ತಿರುವ ವಿಶ್ವಸಂಸ್ಥೆಯ ಒಂದು ವಿಭಾಗದಲ್ಲಿ ಕೆಲಸಮಾಡುವ ಅವಳ ಬದುಕಿನ ಚಿತ್ರಣ ಒಂದು ಅದ್ಭುತ ಮಾನವೀಯ ಪತ್ರಿಕಾ ವರದಿಯಂತೆ ಕಾಣುತ್ತದೆಯೇ ಹೊರತು ಕಾದಂಬರಿಯ ಭಾಗವಾಗಿ ಉಳಿಯುವುದಿಲ್ಲ. ಅದು ಹೇಗೆ ಅಂದರೆ ಬಿ.ಬಿ.ಸಿ ಅಥವಾ ಅಲ್ಝಾಝೀರ ವಾಹಿನಿಗಳು ಬಿತ್ತರಿಸುವ ಮಧ್ಯಪ್ರಾಚ್ಯ ಯುದ್ಧದ ವರದಿಗಳಂತೆ ಕಾಣುತ್ತದೆ.

ಪಾತ್ರಗಳ ವ್ಯಕ್ತಿಗತ ಚಿತ್ರಣಗಳ ಕುರಿತು ಈ ಕಾದಂಬರಿ ಆಸ್ಥೆಯನ್ನು ತೋರಿಸಿದರೂ ನವ್ಯ ಕಾದಂಬರಿಗಳಲ್ಲಿ ಕಂಡುಬರುವಂತಹ ಅಸ್ತಿತ್ವವಾದದ ಹುಡುಕಾಟವೇನು ಇಲ್ಲ. ಮತ್ತೂ ಕಾಮದ ಚಿತ್ರಣಗಳಿದ್ದರೂ ಇದು ನವ್ಯಕಾದಂಬರಿ ಅಲ್ಲ. ಮತ್ತೂ ಪೋಸ್ಟ್ ಮಾರ್ಡನ್ ಕಾದಂಬರಿ ಎಂದು ಅನ್ನಿಸಿಕೊಳ್ಳುವುದಕ್ಕೆ ಇದರ ನಿರೂಪಣೆ ಬಹುಸ್ತರೀಯ ನೆಲೆಯಲ್ಲಿ ಸಾಗುವುದಿಲ್ಲ. ಮತ್ತು ಪೋಸ್ಟ್ ಟ್ರೂಥ್ ಕಾಲ ಘಟ್ಟದ ವಿಕ್ಷಿಪ್ತ ರಾಜಕೀಯ ಸನ್ನಿವೇಶವನ್ನು -ಆ ಥರದ ಒಂದು ಸಾಧ್ಯತೆ ಇತ್ತು, ಆದರೆ ಆಶ್ಚರ್ಯಕರ ರೀತಿಯಲ್ಲಿ ಅದು ಇಲ್ಲಿ ಮಾಯವಾಗಿದೆ-ಚಿತ್ರಿಸುವ ಸತ್ಯೋತ್ತರ ಕಾದಂಬರಿಯೂ ಅಲ್ಲ. ಆದರೂ ಇದು ಈ ಕಾಲದ ಕಾರ್ಪೊರೇಟ್ ಜಗತ್ತಿನ ಒಳ ರಾಜಕೀಯ ಮತ್ತು ಆ ಲೋಕದ ವಿಲಕ್ಷಣ ಎಕನಾಮಿಕ್ಸನ್ನು ಬಿಚ್ಚಿಡುವ ಕಾದಂಬರಿ ಆಗುವ ಸಾಧ್ಯತೆಯಿಂದ ವಂಚಿತವಾಗಿರುವುದನ್ನು ಗಮನಿಸಿದಾಗ ನಿರಾಸೆ ಆಗುತ್ತದೆ. ಈಗಲೂ ವಿವೇಕ ಶಾನಭಾಗರ ಹುಲಿ ಸವಾರಿ ಕಾರ್ಪೊರೇಟ್ ಒಳಸುಳಿಗಳನ್ನು ನಿರುದ್ವಿಗ್ನವಾಗಿ ಚಿತ್ರಿಸಿರುವ ಅತ್ಯುತ್ತಮ ಕಾದಂಬರಿಯಾಗಿದೆ. ಆದರೆ ಘಾಂದ್ರೂಕ್‌ಗೆ ಅದರದೇ ಆದಂತಹ ಸೆಳೆತ ಇದೆ. ಅದು ಸೋಫಿಯ ಪಾತ್ರದ ಸಲುವಾಗಿ. ಆದರೂ ಆ ಮೋಹಕ ಪಾತ್ರ ಕನ್ನಡ ಕಾದಂಬರಿಯಲ್ಲಿ ಚಿತ್ರಿತವಾಗಿರುವ ದಿಟ್ಟ ಹೆಣ್ಣುಗಳ ಪಾತ್ರಗಳ ಜೊತೆ ನಿಲ್ಲದೆ ಇರುವುದು ವಾಸ್ತವ. ಮತ್ತು, ಇದರ ನಿರೂಪಣಾ ಶೈಲಿಯನ್ನು ಗಂಭೀರವಾದ ಅಧ್ಯಯನಕ್ಕೆ ಒಳಪಡಿಸುವ ಅವಶ್ಯಕತೆ ಇದೆ. ಯಾಕೆಂದರೆ ಈ ಕಾದಂಬರಿಯನ್ನು ಕೇವಲ ‘ವಿಷಯಾ’ಧಾವಂತದ ದೃಷ್ಟಿಯಿಂದ ನೋಡಿದರೆ ಸಾಲದು, ಅದರ ರಚನೆ, ವಿನ್ಯಾಸಗಳನ್ನು ಗಂಭೀರವಾಗಿ ಸಂಕಥನ ಮಾಡಿದರೆ ಒಂದು ಉತ್ಕೃಷ್ಟ ಕಾದಂಬರಿಗೆ ಇರಬೇಕಾದಂತಹ ಸ್ಪ್ರಕ್ಚರಲ್ ಕಾಂಪ್ಲೆಕ್ಸಿಟಿಯ ಕೊರತೆ ಕಾಣುತ್ತದೆ. ಯಾಕೆಂದರೆ, ರಚನೆ ಮತ್ತು ವಸ್ತುವನ್ನು ನಿಭಾಯಿಸಿರುವ ನಿಟ್ಟಿನಲ್ಲಿ ಔನ್ನತ್ಯವನ್ನು ಪಡೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾದಂತೆ ಕಾಣುವುದಿಲ್ಲ.

ಘಾಂದ್ರುಕ್‌ ಎನ್ನುವ ಶೀರ್ಷಿಕೆ ಒಟ್ಟೂ ಕಾದಂಬರಿಯ ಸಂದರ್ಭದಲ್ಲಿ ರೂಪಕವಾಗಿ ಬರುವುದಿಲ್ಲ ಮತ್ತು ಅದು ತೀವ್ರವಾಗಿ ಕಾಡುವುದಿಲ್ಲ. ಸೋಫಿಯಾ ಮತ್ತವಳ ಹೈಕಿಂಗ್ ಮಾರ್ಗದರ್ಶಿ ಸೋನಮ್ ಅನ್ನಪೂರ್ಣ ಬೇಸ್ ಕಡೆ ತಮ್ಮ ಹೈಕಿಂಗ್ ಪಯಣವನ್ನು ಮುಂದುವರೆಸುತ್ತಾರೆ. ಸಿದ್ದಾರ್ಥ ಘಾಂದ್ರುಕ್‌ ಹಳ್ಳಿಯಲ್ಲಿಯೇ ಉಳಿಯುತ್ತಾನೆ. ಅವನಿಗೆ ಆ ನಾಲ್ಕರಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಾರದ ಗೊಂದಲಕ್ಕೆ ಸ್ಥಿತಿ. ಅದಕ್ಕೆ ಸೋಫಿಯ ‘ನಿನ್ನ ಮನಸ್ಸು ಈಗ ಗೊಂದಲದ ಗೂಡಾಗಿದೆಯೋ, ಹಾಗೆ ನನ್ನ ಮನಸ್ಸು ಕೊಡ ಕನಲಿದೆ, ನಾವಿಬ್ಬರೂ ನಮ್ಮದೇ ಹಾದಿಯಲ್ಲಿ ಒಂಟಿಯಾಗಿ ನಡೆದರೆ, ಸ್ವಯಂ ವಿಮರ್ಶೆ ಮಾಡಿಕೊಂಡರೆ ಮುಂದೆ ಯಾವ ದಾರಿಯಲ್ಲಿ ಹೆಜ್ಜೆ ಇಡಬಹುದು ಅನ್ನೋದು ಸ್ಪಷ್ಟವಾಗುತ್ತೆ. ನಾನು ತಾತ್ಕಾಲಿಕವಾಗಿ ಅನ್ನಪೂರ್ಣ ಬೇಸ್ ಕ್ಯಾಂಪ್‌ಗೆ ಹೋಗಿ ಬರುವೆ’ ಎಂದು ಹೇಳಿ ಹೊರಡುತ್ತಾಳೆ. ಸಿದ್ದಾರ್ಥ ಘಾಂದ್ರೂಕ್‌ನಲ್ಲಿ ಒಬ್ಬನೇ ಉಳಿದುಕೊಳ್ಳುತ್ತಾನೆ.

ತನ್ನೊಳಗಿನ ಬದುಕಿನ ನಿರ್ಧಾರಗಳ ಯುದ್ಧವನ್ನು, ತೊಯ್ದಾಟವನ್ನು ಇಟ್ಟುಕೊಂಡೇ ಘಾಂದ್ರುಕ್‌ ಹಳ್ಳಿಯಲ್ಲಿನ ಬೆಟ್ಟವೊಂದನ್ನು ಏರಿ ಏರಿ ಹೋಗುತ್ತಾನೆ. ಅನ್ನಪೂರ್ಣ, ಹಿಮ್ಚುಲಿ, ಗಂಗಾಪೂರ್ಣ, ಮಚಾಪುಚಾರ ಶಿವರಾಗ್ರ, ಅವುಗಳನ್ನೆಲ್ಲ ಮೀರಿಸಿ ಸ್ಪಷ್ಟವಾಗಿ, ಸ್ಥಿರವಾಗಿ ನಿಂತಿದ್ದ ಧವಳಗಿರಿ ಅವನನ್ನು ಹೆಚ್ಚು ಆವರಿಸಿಕೊಳ್ಳುತ್ತದೆ.

ಅಂದರೆ ಹಿಮಾಲಯ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿನ ಪುಟ್ಟ ಗ್ರಾಮ ಘಾಂದ್ರುಕ್‌ನಲ್ಲಿ ಕಥಾನಾಯಕ ಸಿದ್ದಾರ್ಥನ ಬದುಕಿಗೆ ಯಾವ ಹೊಸ ಅರ್ಥವನ್ನು ಮತ್ತು ಸ್ಪಷ್ಟತೆಯನ್ನು ಕೊಟ್ಟಿತು ಎನ್ನುವುದನ್ನು ಕಾದಂಬರಿಯು ಸ್ಪಷ್ಟವಾಗಿ ಹೇಳದೆ ಅದನ್ನು ಓದುಗರ ಊಹೆಗೆ ಬಿಡುತ್ತಾರೆ. ನಿಜ ಧವಳಗಿರಿಯ ದರ್ಶನ ಅವನಿಗೆ ಒಂದು ಬಗೆಯ ಅವ್ಯಕ್ತ ನೆಮ್ಮದಿಯನ್ನು ಕೊಟ್ಟಿತೆಂದು ಭಾವಿಸಿದರೂ, ಅವನ ಮುಂದಿನ ಬದುಕಿನ ಹೆಜ್ಜೆಗಳು ಯಾವ ಕಡೆ ಎನ್ನುವುದನ್ನು ತೋರಿಸಲು ಕಾದಂಬರಿಯ ಶೀರ್ಷಿಕೆ ಘಾಂದ್ರುಕ್‌ ಒಂದು ಮಹತ್ವದ ರೂಪಕವಾಗಿ ಮೂಡಿಬಂದಿದೆಯಾ ಎನ್ನುವುದು ಪ್ರಶ್ನೆ. ಮತ್ತು ಕೊನೆಯದಾಗಿ ತುಸು ರೊಮ್ಯಾಂಟಿಕ್ಕಾಗಿ ಹೇಳುವುದಾದರೆ: ಸೋಫಿಯಾಳಂತಹ ಸೂಜಿಮಲ್ಲಿಗೆ ಕಾದಂಬರಿಯಿಂದಾಚೆ ಜಿಗಿದು, ವಾಸ್ತವದಲ್ಲಿ, ಕಾಣುವಂತಿದ್ದರೆ…

(ಕೃತಿ: ಘಾಂದ್ರುಕ್‌ (ಕಾದಂಬರಿ), ಲೇಖಕರು: ಸತೀಶ್‌ ಚಪ್ಪರಿಕೆ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 495/-)