Advertisement
ಇಂದಿನ ಮಂದಿಯ ಬಿಂಬದ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ಇಂದಿನ ಮಂದಿಯ ಬಿಂಬದ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ವಿಲಿಯಮ್ಸ್ ಪ್ರಕಾರ ಟೆಲಿವಿಷನ್ ಕೇವಲ ಒಂದು ತಾಂತ್ರಿಕತೆಯಲ್ಲ, ಅದು ಒಂದು ಸಾಂಸ್ಕೃತಿಕ ರೂಪವೂ ಹೌದು. ಅದರಲ್ಲಿ ಜಾಹೀರಾತುಗಳು ಧಾರಾವಾಹಿಗಳ ನಡುವೆ ‘ಅಕಸ್ಮಾತ್ತಾಗಿ’ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಅವೇ ಧಾರಾವಾಹಿಗಳನ್ನು ರೂಪಿಸುವ ಶಕ್ತಿಗಳು. ಪ್ರಾಯೋಜಕರು ತಮಗೆ ಬೇಕಾದ ನೋಡುಗರನ್ನು ಅದರ ಮೂಲಕ ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಆ ಪೂರಕತೆಯನ್ನು ಅರ್ಥಮಾಡಿಕೊಳ್ಳುವುದು ತುಂಬ ಮುಖ್ಯ. ಅಲ್ಲಿ ಈ ಒಂದರ  ದೃಶ್ಯಗುಣ ಮತ್ತು ದನಿಗುಣ ಆ ಇನ್ನೊಂದಕ್ಕೆ ಕುಮ್ಮಕ್ಕು ನೀಡುತ್ತಿರುತ್ತದೆ.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೇಳನೆಯ ಬರಹ

ಮೈಸೂರು ನಗರದಲ್ಲಿ ಐದು ರಸ್ತೆಗಳು ಕೂಡುವ ಹೀಗೊಂದು ಪ್ರಮುಖ ವೃತ್ತ. ವರ್ಷಗಳಿಂದ ಅಲ್ಲಿ ಮರದೆತ್ತರಕ್ಕೆ ಕಾವಿ ತೊಟ್ಟ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿ ಸಮುದ್ರತೀರದ ತಮ್ಮ ಸುಪ್ರಸಿದ್ಧ ಭಂಗಿಯಲ್ಲಿ ನಿಂತಿರುವುದು ಮೈಸೂರಿಗರಿಗಷ್ಟೇ ಅಲ್ಲ, ಪ್ರವಾಸ ಬಂದವರು ಹೋಗಿಯೇ ತೀರುವ ಕೃಷ್ಣರಾಜಸಾಗರ ಅಣೆಕಟ್ಟಿನ ರಸ್ತೆ ಸಹ ಈ ವೃತ್ತಕ್ಕೆ ಬಂದು ಸೇರುವುದರಿಂದ ಹೊರಗಿನವರಿಗೂ ಈ ಧೀಮಂತ ನಿಲುವು ಪರಿಚಿತ.

ಈಗ ನಗರಪಾಲಿಕೆಯ ಕೃಪೆಯಿಂದ ವಿವೇಕಾನಂದರು ಸುಮಾರು ಅರ್ಧದಷ್ಟು ಮರೆಯಾಗಿ ಮುಂದೆ  ಕರೀನಾ ಕಪೂರ್ ಮತ್ತು ಮಲಬಾರ್ ಗೋಲ್ಡ್ ಅಲ್ಲಿ ಮಿಂಚುತ್ತಿವೆ. ವಿವೇಕಾನಂದರ ಎದೆಯ ಭಾಗದಲ್ಲಿರಬೇಕಾದ್ದು ಪರಮಹಂಸರು. ನಿರ್ಭಯದಿಂದಿರಿ ಎಂದು ಗುಡುಗಿದ್ದ ಸಿಡಿಲ ಮರಿಯ ತ್ಯಾಗ, ಧೈರ್ಯ, ವೈರಾಗ್ಯಗಳನ್ನು ಹಿಂದಕ್ಕೆ ತಳ್ಳಿ  ಅಲ್ಲಿ ಅಕ್ಷರಶಃ ಕಾಮಿನಿ, ಕಾಂಚನಗಳು ಹಲ್ಲು ಕಿರಿಯುತ್ತಿವೆ.

ನಗರ ಎನ್ನುವುದು ನಾಗರಿಕ ಸಂಸ್ಕೃತಿಯ ಒಂದು ಭಾಗ. ಪ್ರತಿಯೊಂದು ನಗರಕ್ಕೆ ಅದರದ್ದೇ ಆದ ಚರಿತ್ರೆ ಇದೆ, ಸಂಸ್ಕೃತಿ ಇದೆ. ಅದನ್ನು ಕಾಪಾಡುವುದು ನಮ್ಮಂತಹ ಸಾಮಾನ್ಯರ ತೆರಿಗೆ ಹಣದಿಂದ ಕಾರ್ಯ ನಿರ್ವಹಿಸುವ ನಗರಪಾಲಿಕೆಯ ಕರ್ತವ್ಯವಾಗಬೇಕು ಎಂದು ನಿರೀಕ್ಷಿಸುವುದು ತಪ್ಪೇ? ಈ ಬಿಂಬ-ಘೋರದ ರಾಜಕೀಯವಾದರೂ ಏನು? ಸಾಂಸ್ಕೃತಿಕ ನೆನಪು, ಪರಂಪರೆ, ಇತಿಹಾಸಗಳನ್ನು ಹಿಂದೆ ತಳ್ಳಿ ಮುನ್ನೆಲೆಗೆ ಬಂದು ನಿಂತು ಎಗ್ಗಿಲ್ಲದೆ ಮೆರೆಯುತ್ತಿರುವ ಮಾರುಕಟ್ಟೆ ಶಕ್ತಿಗೆ ಇದೊಂದು ಸಂಕೇತವೆ? ಅಥವಾ ಕಾವಿ ತ್ಯಜಿಸಿರುವ ಕಾಮಿನಿ ಕಾಂಚನಗಳನ್ನು ಅವರ ಎದೆಯ ಮೇಲೆಯೇ ಹೊರಿಸಿ ಮೆರೆಸುವ ಈ ಬಿಂಬ ಇಂದಿನ ಸಾಂಸ್ಕೃತಿಕ ವ್ಯಂಗ್ಯದ ಪರಮಾವಧಿಯೆ? ನಗರಪಾಲಿಕೆಗೆ ಸಾಮಾಜಿಕ ಪ್ರಜ್ಞೆಯ ಹಂಗೇ ಇಲ್ಲವೇ?

ಸ್ವಾಮಿ ವಿವೇಕಾನಂದ ಕಾವಿ ತೊಟ್ಟ ಮಾತ್ರಕ್ಕೆ ಹಿಮಾಲಯಕ್ಕೆ ಓಡಿ ಹೋದವರಲ್ಲ. ಸಾಮಾನ್ಯ ಮಂದಿಯ  ಸಂತೆಯಲ್ಲಿ ನಿಂತು ಅವರಿಗೆ ಬೆಳಕಾಗಿ ನಿಲ್ಲಲು ಬದುಕನ್ನು ತೇಯ್ದವರು. ಹಲವು ರಸ್ತೆಗಳು ಕೂಡುವ ಈ ವೃತ್ತದಲ್ಲಿ ಯಾವ ಕಡೆಯಿಂದ ನೋಡಿದರೂ ಸಹ ನಗರಪಾಲಿಕೆ ಈ ರೀತಿಯಲ್ಲಿ ಕೊಳ್ಳುಬಾಕತನಕ್ಕೆ  ಕೊಟ್ಟಿರುವ ಒತ್ತಾಸೆ ಮತ್ತು ಮೈಸೂರಿನ ಒಂದು ಸಾಂಸ್ಕೃತಿಕ ಪ್ರತಿಮೆಗೆ ಸಂದಿರುವ ಅವಮಾನವನ್ನು ಮೈಸೂರಿಗರು ಖಂಡಿತವಾಗಿ ಒಪ್ಪಲಾರರು. ಮೈಸೂರನ್ನು ಪರಂಪರಶೀಲ ನಗರ (ಹೆರಿಟೇಜ್ ಸಿಟಿ)  ಎಂದು ಕರೆಯುತ್ತಾ ಅತ್ತ ಕೃಷ್ಣರಾಜಸಾಗರಕ್ಕೆ ಬಾಗಿನ ಅರ್ಪಿಸಲು, ಇತ್ತ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟಿಸಲು ಎಲ್ಲ ಮುಖ್ಯಮಂತ್ರಿಗಳೂ ಮುಗಿ ಬೀಳುತ್ತಾರೆ. ಇತ್ತ ಈ ಪ್ರಧಾನ ವೃತ್ತದಲ್ಲಿ ಕಣ್ಣಿಗೆ ರಾಚುವ ದೃಶ್ಯ ಹಾದರವನ್ನು ಲೆಕ್ಕಿಸದೆ ಅದೇ ರಸ್ತೆಗಳಲ್ಲಿ ದಿನನಿತ್ಯ  ಸಾವಿರಾರು ವಾಹನಗಳು ಸಾಗುತ್ತವೆ.

ಮೇರಾ ಮೈಸೂರು ಮಹಾನ್!

ಕೆಲವೇ ಅಡಿಗಳ ದೂರದಲ್ಲಿ  ಇರುವ ಶ್ರೀರಾಮಕೃಷ್ಣಾಶ್ರಮ  ಅಸಹಾಯಕತೆಯಲ್ಲಿ ಮೌನವಾಗಿದೆ. ಅವರು ರಸ್ತೆಗಿಳಿದು ಪ್ರತಿಭಟಿಸುವ ಮಂದಿಯಲ್ಲ. ಕರೀನಾ-ಮಲಬಾರಿಗೆ ಸಗಣಿ ಎರಚಿ ತಮ್ಮ ಅಸಂತೋಷವನ್ನು ವ್ಯಕ್ತಪಡಿಸುವ ಸಂಸ್ಕೃತಿಯವರಲ್ಲ. ರಥ-ಯಾತ್ರೆ ಮಾಡಿ ಕಟೌಟ್ ಪ್ರತಿಷ್ಠಾಪಿಸುವ ಪರಂಪರೆ ಅವರದ್ದಲ್ಲ.

ಅಂದ ಹಾಗೆ ಮೈಸೂರು ನಗರದಲ್ಲಿ ಅರಮನೆಗಿಂತ ಎತ್ತರದ ಯಾವ ಕಟ್ಟಡಕ್ಕೂ ಮುಂಚೆ ಅನುಮತಿ ಇರಲಿಲ್ಲ. ಹಾಗಾಗಿಯೇ ನಾನು ವಾಸವಿರುವ ಅಪಾರ್ಟ್ಮೆಂಟಿಗೆ ಕೇವಲ ಏಳು ಅಂತಸ್ತುಗಳಿಗೆ ಅನುಮತಿ ಸಿಕ್ಕಿತ್ತು. ಈಗ ಪಕ್ಕದಲ್ಲೇ ತಲೆ ಎತ್ತುತ್ತಿರುವ ಬಹುಮಹಡಿ ವಸತಿ ಕಟ್ಟಡಕ್ಕೆ ಹದಿನಾಲ್ಕು ಅಂತಸ್ತುಗಳಿಗೆ ನಗರಪಾಲಿಕೆ ಅಸ್ತು ಎಂದಿದೆಯಂತೆ!

ನಾಗರಿಕತೆ ಆತ್ಮಹತ್ಯೆಯತ್ತ ಸಾಗುತ್ತಿದೆ ಎಂಬ ಮಾತು ಸುಳ್ಳೆ?

*****

ಸ್ವಲ್ಪ ದಿನದ ಹಿಂದೆ ಸ್ನೇಹಿತರ ಜೊತೆ ಹೋಟೆಲಿಗೆ ಹೋಗಿದ್ದೆ. ಹೊಟ್ಟೆಯಲ್ಲಿ ರಣ ಹಸಿವು. ತಟ್ಟೆ ಬಂದ ತಕ್ಷಣ ಕೈ ಹಾಕಿದರೆ, ‘ಅಯ್ಯೋ! ಸ್ಟಾಪ್! ಸ್ಟಾಪ್!’ ಎಂದದ್ದು ಕೇಳಿ ಬೆಚ್ಚಿಬಿದ್ದಿದ್ದೆ. ಇವರು ತಿನ್ನುವ ಮುನ್ನ ಪ್ರಾರ್ಥನೆ ಮಾಡುವ ಮಂದಿಯೋ ಏನೋ ಎಂದು ನನ್ನ ಅನಾಗರಿಕ ಹರಿಬರಿಯ ಬಗ್ಗೆ  ಮುಜುಗರಪಟ್ಟುಕೊಳ್ಳುತ್ತಿದ್ದ ಕ್ಷಣದಲ್ಲಿ ಅವರು ತಿನ್ನಬೇಕಾದ್ದು, ತಿನ್ನುವವರದ್ದು ಇತ್ಯಾದಿ ಒಂದರ ಮೇಲೊಂದು ಪಟ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದದ್ದು ಕಣ್ಣಿಗೆ ಬಿದ್ದಿತ್ತು. ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,’ ಎಂದು ನೆನಪಿಸಿಕೊಳ್ಳದಿದ್ದರೂ ಪರವಾಗಿಲ್ಲ, ಪಟ ಕ್ಲಿಕ್ಕಿಸಿ ಸಾಮಾಜಿಕ ಜಾಲದೊಳಗೆ ಜಾರಿಸಲು ಮರೆಯದಿರಿ!

ದೃಶ್ಯಕ್ಕೆ ಸಹಜವಾಗಿಯೇ ಒಂದು ಬಗೆಯ ಅಶ್ಲೀಲ ಗುಣವಿರುತ್ತದೆ. ಆದ್ದರಿಂದಲೇ ಅದಕ್ಕೆ  ಪ್ರತಿಯೊಬ್ಬರ ಕಣ್ಣನ್ನು ಸೆಳೆದು ಮೈಮರೆಸಬಲ್ಲ ಶಕ್ತಿಯಿದೆ ಎಂದ ಫ್ರೆಡೆರಿಕ್ ಜೇಮಿಸನ್ನನ ಮಾತು ಕೇಳಿ ಬೆಚ್ಚಿಬೀಳಬೇಕಾಗೇನೂ ಇಲ್ಲ. ಯಾಕೆಂದರೆ ಯಾವ ಬಿಂಬವೂ (ದೃಶ್ಯವೂ) ಮುಗ್ಧವಲ್ಲ. ಅದಕ್ಕೆ ಅದರದ್ದೇ ಆದ ರಾಜಕೀಯವಿದೆ. ಯಾರು ಯಾವುದನ್ನು ಯಾವ ರೂಪದಲ್ಲಿ ಹೊಸೆದು ನಿಲ್ಲಿಸಿರುತ್ತಾರೆ ಎಂಬ ಪ್ರಶ್ನೆ ಅಪ್ರಸ್ತುತವೇನೂ ಅಲ್ಲ. ಉದಾಹರಣೆಗೆ ಕರುಣೆ ತುಂಬಿದ ಮೊಗದ ಸೀತಾರಾಮ ಅತ್ತಿತ್ತ ಸೀತೆ, ಲಕ್ಷ್ಮಣ, ಹನುಮಂತರಿಲ್ಲದೆ ಒಂಟಿ ಶ್ರೀರಾಮನಾಗಿದ್ದು ಯಾರಿಂದ? ಬಿಲ್ಲುಬಾಣ ಬಂದಿದ್ದು ಎಲ್ಲಿಂದ? ಮುಖದಲ್ಲಿ ಯಾಕೆ ಈ ರೋಷ? ಈ ರೂಪಾಂತರದ ಹಿನ್ನೆಲೆಯಲ್ಲಿ ಯಾವ ರೀತಿಯ ದ್ವೇಷರಾಜಕೀಯ ಕೆಲಸ ಮಾಡಿದೆ?

ಗೈ ದೆಬೋರ್ದ್ ಎಂಬ ಚಿಂತಕ ಗಮನಿಸುವಂತೆ ಆಧುನಿಕ ಬದುಕು ತನ್ನನ್ನು ತಾನು ಒಂದು ದೃಶ್ಯಗಳ ಸರಮಾಲೆಯಾಗಿ ತೋರ್ಪಡಿಸಿಕೊಳ್ಳುತ್ತದೆ. ಹಿಂದೆ ನೇರವಾಗಿ ಬಾಳಿದ್ದು, ಬದುಕಿದ್ದು, ಅನುಭವಿಸಿದ್ದು ಎಲ್ಲವೂ ಈಗ ದೃಶ್ಯವಾಗಿ ಮಾರ್ಪಟ್ಟಿದೆ. ಅದಕ್ಕೆ ಮಂದಿಗೆ ಸೆಲ್ಫಿ ಎಂಬ ಮಹಾ ಗೀಳು!

‘ಬಿಂಬದ ರಾಜಕೀಯ’ (ಬಿಂಬನ) ದ ಬಗೆಗಿನ ಕಾಳಜಿ ಕಾಸರವಳ್ಳಿಯವರ ‘ದ್ವೀಪ’ ಚಿತ್ರದಲ್ಲಿ ಒಂದು ಕಡೆ ವ್ಯಕ್ತವಾಗಿದೆ. ಅದರಲ್ಲಿ ಕೃಷ್ಣ ಎಂಬ ಯುವಕ ಅಣೆಕಟ್ಟಿನ ದೆಸೆಯಿಂದ ದ್ವೀಪವೊಂದರಲ್ಲಿ ಮುಳುಗಡೆಯ ಭೀತಿಯಲ್ಲಿ ಬದುಕುತ್ತಿದ್ದ ಸಂಸಾರದ ಸಹಾಯಕ್ಕೆಂದು ನಗರದಿಂದ ಬಂದಿರುತ್ತಾನೆ. ಅವನ ಕೈಯಲ್ಲಿ ಒಂದು ಕ್ಯಾಮೆರಾ ಸಹ ಇರುತ್ತದೆ.

ಒಂದು ‘ಸಖತ್ತಾದ’ ಬಿಂಬವನ್ನು ಕ್ಲಿಕ್ಕಿಸಲು ಹುಡುಕಾಡುತ್ತಿದ್ದಾಗ ಮನೆಯ ಬಾಗಿಲಲ್ಲಿ ಕೂತು ಊಟ ಮಾಡುತ್ತಿರುವ ದುಗ್ಗಜ್ಜ ಅವನ ಕಣ್ಣಿಗೆ ಬೀಳುತ್ತಾನೆ. ‘ಅಜ್ಜಯ್ಯ, ಓ ಅಜ್ಜಯ್ಯಾ, ನಿಮ್ಮದೊಂದು ಫೋಟೋ ತೆಗೀಲಾ?’ ಎಂದು ಕೇಳಿದಾಗ ಮುದುಕ ಉತ್ಸಾಹದಿಂದ ಸಮ್ಮತಿಸಿ ಊಟದ ತಟ್ಟೆಯನ್ನು ಕೆಳಗಿಟ್ಟು ಪೋಸ್ ಕೊಟ್ಟರೆ ಕೃಷ್ಣ ಅದನ್ನು ಕೈಯಲ್ಲೇ ಹಿಡಿದುಕೊಳ್ಳಲು ಹೇಳಿ ‘ಏನೋ ಸರಿಯಾಗ್ತಿಲ್ಲ’ ಎಂದುಕೊಳ್ಳುತ್ತಾ ಅತ್ತಿತ್ತ ನೋಡಿ ಒಳಗೆ ಹೋಗಿ ಒಂದು ನುಜ್ಜುಗುಜ್ಜಾದ ತಟ್ಟೆಯನ್ನು ತಂದುಕೊಟ್ಟು, ಮರದ ಕೆಳಗೆ ಕೂರಿಸಿ, ‘ಬಾಯಿಗೆ ಹಾಕಿಕೊಳ್ಳಬೇಡಿ, ತಿಂದಂಗೆ ಮಾಡಿ, ಅಷ್ಟೇ’ ಜೊತೆಗೆ ಅತ್ತ ನೋಡಿ, ಇತ್ತ ನೋಡಿ, ನಗಬೇಡಿ, ಅಳು ಮುಖ ಮಾಡ್ಕಳಿ, ಆಕಾಶ ನೋಡಿ, ಎಂದೆಲ್ಲಾ ತಾಕೀತು ಮಾಡುತ್ತಾ, ‘ತಿನ್ಬೇಡಿ, ಅದ್ನೆ ನೋಡ್ತಾ ಇರಿ, ಹಸ್ಕಂಡಂಗೆ,’ ಎಂದು ಅಜ್ಜಯ್ಯನನ್ನು ಒಂದು ತಕ್ಕ ಬಿಂಬವಾಗಿ ಮಾಡಲು ಹೆಣಗುತ್ತಾನೆ.

ಇದನ್ನೆಲ್ಲಾ  ಅಸಹನೆಯಿಂದ ಗಮನಿಸುತ್ತಿದ್ದ  ದುಗ್ಗಜ್ಜಯ್ಯನ ಮಗ ಗಣಪಯ್ಯ  ‘ಎಂತ್ ಮಾಡ್ತಿಯೋ?’ ಎಂದು ಗದರಿಸಿದಾಗ ‘ಫೋಟೋ ತೆಗೆದು ಪೇಪರಿಗೆ ಹಾಕಿಸನ, ಪರಿಹಾರ ಸಿಗುತ್ತೆ,  ಹಿಂಗೆ ಒಂದು ಕುಟುಂಬ ತಿನ್ನಕ್ಕಿಲ್ದೆ ಕಷ್ಟಪಡ್ತಾ ಇದೆ ಅಂತ ಗೊತ್ತಾಗ್ಲಿ. ಸರಕಾರ ಏನ್ ಮಾಡ್ತಿದೆ ಅಂತ ನಾಲಕ್ ಜನಕ್ಕೆ ಗೊತ್ತಾದ್ರೆ ಅಯ್ಯೋ ಪಾಪ ಅಂತ ಕನಿಕರಪಡ್ತಾರೆ,’ ಎಂದೆಲ್ಲ ಹೇಳಿ ಅವನಿಂದ ಬೈಸಿಕೊಳ್ಳುತ್ತಾನೆ.

*****

ಇಮೇಜ್ ಮೇಕಿಂಗ್ ಎಂಬ ರಾಜಕೀಯದ ಒಳಸುಳಿಗಳನ್ನು ಅನ್ವೇಷಿಸಲು ಕಾಸರವಳ್ಳಿಯವರು ಕೊನೆಗೆ ತಮ್ಮ ‘ಕೂರ್ಮಾವತಾರ’ (2011) ಚಿತ್ರದಲ್ಲಿ  ಗಾಂಧಿಯ ಬದುಕನ್ನೇ ಆರಿಸಿಕೊಂಡಿದ್ದಾರೆ.

ಟಿವಿಯನ್ನು ನಾವು ಬದುಕಿರುವ ಇಂದಿನ ಡಿಜಿಟಲ್ ಕಾಲದ ಲಾಂಛನವಾಗಿ ಗುರುತಿಸಬಹುದು. ಮಾನವಶಾಸ್ತ್ರಜ್ಞ ಬೌಮನ್ ಪ್ರಕಾರ ಡಿಜಿಟಲ್ ಬಿಂಬ ಎನ್ನುವುದು ಸುತ್ತಮುತ್ತಲಿನ ಸಮಾಜವನ್ನಷ್ಟೇ ಅಲ್ಲ,  ನಮ್ಮ ಮನೆಯೊಳಗಿನ ಸಂಬಂಧಗಳನ್ನು ಸಹ ನಾವು ಹೇಗೆ ನೋಡಬೇಕು, ಹೇಗೆ ಅರ್ಥ ಮಾಡಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮ ಸುಪ್ತಪ್ರಜ್ಞೆಯನ್ನೇ ಹೊಕ್ಕು ಕೂತಿವೆ. ಬದುಕು ಒಂದು ಬಿಂಬಗಳ ಸರಣಿಯಾಗಿ ಹೋಗಿದೆ.

ಕುಂವೀ ಅವರ ‘ಕೂರ್ಮಾವತಾರ’ ಸಣ್ಣ ಕಥೆಯ ಪ್ರಧಾನ ಪಾತ್ರ ಆನಂದ ರಾವ್ ಒಬ್ಬ ನಿವೃತ್ತ ಗುಮಾಸ್ತ. ಸದ್ಯಕ್ಕೆ ಆಗಾಗ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕಾಸರವಳ್ಳಿಯವರ ‘ಕೂರ್ಮಾವತಾರ’ ದ ಆನಂದ ರಾವ್ ಕಡತಗಳ ಜೊತೆ ಗುದ್ದಾಡುತ್ತ ಇನ್ನೂ ಸೇವೆಯಲ್ಲಿರುವ ವ್ಯಕ್ತಿ.   ಟಿವಿ ಧಾರಾವಾಹಿಯಲ್ಲಿ ಗಾಂಧಿ ಪಾತ್ರವನ್ನು ಅಭಿನಯಿಸಬೇಕಿದ್ದ ಯಾರದೋ ಬದಲಿಗೆ ಗಾಂಧಿಯ ತರಹ ಕಾಣಿಸುತ್ತಾರೆ ಎಂಬ ಒಂದೇ ಒಂದು ಕಾರಣಕ್ಕೆ ದಾಕ್ಷಿಣ್ಯಕ್ಕೆ ಒಳಗಾಗಿ ಒಪ್ಪಿಕೊಂಡಿರುವ ಆನಂದ ರಾಯರು ಒಬ್ಬ ಕೆಟ್ಟ ನಟ. ಜಿನ್ನಾ ಅವರ ದೇಶ ವಿಭಜನೆ ಪ್ರಸ್ತಾಪದ ದೃಶ್ಯದಲ್ಲಿ ಅವರ  ಮಂಕು ಮುಖದಿಂದ ಭಾವನೆಗಳನ್ನು ಹೊಮ್ಮಿಸುವ ಪ್ರಯತ್ನದಲ್ಲಿ ಟಿವಿ ಧಾರಾವಾಹಿ ನಿರ್ದೇಶಕ ಸೋತು ತಾಳ್ಮೆಗೆಟ್ಟು ಜಯುಗೆ ಎಚ್ಚರ ನೀಡುತ್ತಾನೆ. ‘ನಿಮ್ಮ ತಂದೆಗೆ ಆಕ್ಟಿಂಗ್ ಬರಲ್ಲ. ಅವರು ಸ್ಕ್ರೀನ್ ಮೇಲೆ ಬಂದಾಗೆಲ್ಲ ನಮ್ಮ ಟಿ ಆರ್ ಪಿ ಡ್ರಾಪ್ ಆಗತ್ತೆ.’ ನಾಲ್ಕು ದಿನ ಟೈಮ್ ಕೊಟ್ಟರೆ ಆಕ್ಟಿಂಗ್ ಕಲಿತುಕೊಳ್ಳುತ್ತಾರೆ ಎಂದು ಕೇಳಿಕೊಳ್ಳುವ ಜಯುಗೆ, ‘ನಾವು ಸೀರಿಯಲ್ ಮಾಡ್ತಿರೋದು ಆಕ್ಟಿಂಗ್ ಕಲಿಸಕ್ಕಲ್ಲ, ನಮ್ಮ ಹೊಟ್ಟೆ ಪಾಡಿಗೆ’ ಎಂಬ ಉತ್ತರ ಸಿಗುತ್ತದೆ.

ಪ್ರಾಯೋಜಕರಿಗೆ ಮನ ಒಲಿಸಿರೆಂದು ಜಯು ಪ್ರಾರ್ಥಿಸಿಕೊಂಡಾಗ, ‘ಅವರೆಲ್ಲ ಮಲ್ಟಿನ್ಯಾಷನಲ್ ಕಂಪೆನಿಗಳು ಕಣ್ರೀ, ನಾನಲ್ಲ, ಪ್ರೈಮ್ ಮಿನಿಸ್ಟರ್ ಬಂದು ಹೇಳಿದ್ರೂ ಕೇಳಲ್ಲ,’ ಎಂದು ಹಾಸ್ಯ ಮಾಡುವ ನಿರ್ದೇಶಕ ಎರಡು ವಾರಗಳ ಮಟ್ಟಿಗೆ ಕಾಯುವ ಔದಾರ್ಯವನ್ನೂ ಸಹ ತೋರಿಸುತ್ತಾನೆ.

ಇದು ರೇಟಿಂಗ್ ಕಾಲ, ಮಲ್ಟಿನ್ಯಾಶನಲ್ಲುಗಳ ಕಾಲ, ಗಾಂಧಿಯಂಥಾ ಗಾಂಧಿಯೂ ಅದಕ್ಕೆ ಒಗ್ಗಿಕೊಳ್ಳಬೇಕು. ವೀಕ್ಷಕರಿಗೆ ಅರ್ಥವಾಗುವಂತೆ ಗಾಂಧಿ ಮೂಡದಿದ್ದರೆ ವ್ಯರ್ಥವೇ. ಗಾಂಧಿಯಾಗಿ ಅಭಿನಯಿಸುವ ಪ್ರಯತ್ನದಲ್ಲಿ ರಾಯರು ಯಶಸ್ವಿಯಾದರೊ ಬಿಟ್ಟರೋ, ಒಟ್ಟಿನಲ್ಲಿ ಹೋದಲ್ಲೆಲ್ಲಾ ಜನರಿಂದ ಗುರುತಿಸಲ್ಪಡುವುದು ಮಾತ್ರ ಅವರಿಗೆ ಪ್ರಿಯವಾಗಿತ್ತು. ಅವರ ಹಿಂದಿನ ಕನ್ನಡಕದ ಬದಲು ಗಾಂಧಿ ಕನ್ನಡಕ ಬಂದಿದ್ದು ಖಾದಿ ಕುರ್ತಾಗಳನ್ನೇ ಧರಿಸಲು ಆರಂಭಿಸಿದ್ದರು.

ಶಾಲೆಯ ಹತ್ತಿರದಲ್ಲೇ ತನ್ನ ತಂಬಾಕು ಅಂಗಡಿಯನ್ನು ತೆರೆಯಲು ಪರವಾನಗಿ ಪಡೆಯಲು ಬಂದ ಸುರೇಶ ಕಾರ್ಪೊರೇಷನ್ ಅಧಿಕಾರಿಯನ್ನು ಬ್ಲಾಕ್ಮೇಲ್ ಮಾಡುತ್ತಾನೆ: ಹೊರಗೆ ಗಾಂಧಿ ಪಾತ್ರಧಾರಿ ಕೂತಿದಾರೆ. ಲೈಸೆನ್ಸ್ ಕೊಡದಿದ್ದರೆ ಇಲ್ಲೇ ಧರಣಿ ಕೂರ್ತಾರಂತೆ.’ ಆತ ಬಿಟ್ಟು ಹೋದ ಹಣ್ಣು ಮಿಠಾಯಿ ಬ್ಯಾಗಿನಲ್ಲಿ ಐನೂರರ ನೋಟೂ ಇರುತ್ತದೆ. ಮಗ ಜಯು ಖುಷಿಯಿಂದ ಅದನ್ನು ಜೇಬಿಗೆ ಸೇರಿಸುತ್ತಾನೆ.

ರಾಯರ ಆಫೀಸಿನ ಮೇಲಧಿಕಾರಿಗೆ ಕಾರ್ಪೋರೇಷನ್ ಕಚೇರಿಯಲ್ಲಿ ನಡೆದ ನಾಟಕದ ವರದಿ ತಲುಪಿದಾಗ ಎಚ್ಚರಿಕೆ ನೀಡುತ್ತಾರೆ: ‘ನೀವು ಗವರ್ಮೆಂಟ್ ಎಂಪ್ಲಾಯಿ. ಸರ್ಕಾರದ ವಿರುದ್ಧ ಧರಣಿ, ಮುಷ್ಕರ ಅಂತೆಲ್ಲಾ ಮಾಡಿದ್ರೆ, it attracts disciplinary action.… ನಾನೊಂದು ಅಡ್ವೈಸ್ ಕೊಡಲಾ ರಾಯರೆ? ನೀವು ಗಾಂಧಿ ಪಾರ್ಟ್ ಮಾಡಿ. ಆದ್ರೆ ಗಾಂಧಿ ತರಾ ಚಳುವಳಿ ಗಿಳುವಳಿ ಮಾಡಿದ್ರೆ ನಿಮಗೆ ತೊಂದ್ರೆ ಆಗುತ್ತೆ.’

ಪಾತ್ರ ಮತ್ತು ಪಾತ್ರಧಾರಿಗಳೆಲ್ಲ ತಮ್ಮನ್ನು ಮೀರಿದ ಬಿಂಬವೆಂಬ ಸೆರೆಮನೆಯಲ್ಲಿ ಸಿಕ್ಕಿಬಿದ್ದಿರುವ ಸೂಚನೆಗಳು ಹೆಚ್ಚು ಹೆಚ್ಚು ಬಲವನ್ನು ಪಡೆದುಕೊಳ್ಳುತ್ತಾ ಹೋಗುತ್ತವೆ. ‘ನಮ್ಮ ಬಡಾವಣೆನಲ್ಲಿ ನೀರೇ ಬರ್ತಾ ಇಲ್ಲ. ರಸ್ತೆಗಳೆಲ್ಲ ಕಿತ್ತು ಹೋಗಿವೆ. ಯಾರಿಗೆ ಎಷ್ಟೇ ಕಂಪ್ಲೇಟ್ ಕೊಟ್ರೂ ಕೇಳೋರೇ ಗತಿಯಿಲ್ಲ. ಅದಕ್ಕೆ ನೀವೆ ನಮ್ಮನ್ನ ಲೀಡ್ ಮಾಡ್ಬೇಕು’ ಎಂದು ಮಂದಿ ಅವರನ್ನು ಕೇಳಿಕೊಳ್ಳುವಾಗ ಲಂಚಕೋರ ಮಗನೇ ನಿರ್ಮಿಸಿದ ಖೆಡ್ಡಾದಲ್ಲಿ ತಾನು ಬೀಳುತ್ತಿರುವ ಸೂಚನೆ ರಾಯರಿಗೆ ಸಿಗುತ್ತದೆ.

ಅಷ್ಟೇ ಅಲ್ಲ, ಅದೇ ಮಗ ಟಿವಿ ಜಾಹೀರಾತಿಗೆ ಸಹ ಒಪ್ಪಿಕೊಂಡು ಹಣ ಪಡೆದಿರುತ್ತಾನೆ ಎನ್ನುವ ಸತ್ಯವೂ ಸಹ ಬಯಲಾಗುತ್ತದೆ. ಹರಾಜಾಗಿರುವುದು ನಿಜವಾಗಿ ಯಾರು ಎಂಬ ಪ್ರಶ್ನೆ ನೋಡುಗಳ ಮನಸ್ಸಿನಲ್ಲಿ ಏಳಲಾರಂಭಿಸುತ್ತದೆ. ಧಾರಾವಾಹಿಯ ನಡುವೆಯೇ ಈಗ ಗಾಂಧಿ ಜಾಹೀರಾತಿನಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ. ಮಾರುಕಟ್ಟೆ-ನಿಯಂತ್ರಿತ  ರಾಷ್ಟ್ರವೀಗ ರಾಷ್ಟ್ರಪಿತನನ್ನು ಸಹ ಮಾರಲು ಸಿದ್ಧವಾಗಿದೆ!

ಜಾಹೀರಾತಿನಲ್ಲಿ ಗಂಡನ ಬಿಳಿಯ ಶರ್ಟನ್ನು ತಿಕ್ಕಿ ತೊಳೆಯುತ್ತಿರುವ ಮಧ್ಯಮವರ್ಗದ ಒಬ್ಬ ಗೃಹಿಣಿ ‘ಈ ಕೊಳೆ ತೆಗೆಯೋ ಸೋಪಿನ ಪುಡಿನೇ ಇಲ್ವೇ!’ ಎಂದು ಸೋತು ಉದ್ಗರಿಸಿದಾಗ ಗಾಂಧಿ ದೇವರಂತೆ ಅವತರಿಸಿ ‘ಇದೆ!’ ಎಂದು ಹೇಳುತ್ತಾರೆ. ‘ಬಿಳುಪು’ ಹೆಸರಿನ ಸೋಪಿನ ಪುಡಿ ಪಕ್ಕದಲ್ಲಿ ಮೂಡುತ್ತದೆ. ಅದರಲ್ಲಿ ತೊಳೆದ ಶರ್ಟು ಬಿಳಿಬಿಳಿಯಾಗಿ ಫಳ್ಳನೆ ಹೊಳೆಯುವಾಗ ಗೃಹಿಣಿಯ ಮುಖವೂ ಅರಳುತ್ತದೆ. ನಂತರ ಗಾಂಧಿ-ಗೃಹಿಣಿ ಒಟ್ಟಾಗಿ ನಿಂತು ನಗು ಬೀರುತ್ತಾರೆ.

ಅಂದರೆ ಗಾಂಧಿ ಒಬ್ಬ ಕಷ್ಟವಿದ್ದಾಗ ಅವತರಿಸಿ ಪಾರು ಮಾಡುವ ‘ದೇವರು’! ನಿಮ್ಮ ತಲೆಯೊಳಗನ್ನೂ ಸಹ ತೊಳೆದು ಬಿಳಿಯಾಗಿ ಹೊಳೆಯುವಂತೆ ಮಾಡಬಲ್ಲ ಶಕ್ತಿ ಇರುವವರು! ಕಥಾನಕ ಮತ್ತು ಜಾಹೀರಾತುಗಳು ಒಂದಕ್ಕೊಂದು ಪೂರಕವಾಗಿ ಬಿಂಬ-ಪ್ರತಿಬಿಂಬಗಳಾಗಿ ಕಲಸಿ ಹೋಗುವ ಪ್ರಕ್ರಿಯೆ ಇದು.

ರೇಮಂಡ್ ವಿಲಿಯಮ್ಸ್ ಎಂಬ ಸುಪ್ರಸಿದ್ಧ ಸಮಾಜಶಾಸ್ತ್ರಜ್ಞ ತನ್ನ Television: Technology and Cultural Form ಕೃತಿಯಲ್ಲಿ ಒಂದು ಕಥೆಯ ನಡುವೆ ಕಾಣಿಸಿಕೊಳ್ಳುವ ಜಾಹೀರಾತುಗಳು ಪೂರಕವೇನೋ ಎಂಬಂತೆ ತೋರುತ್ತವೆ, ಆದರೆ ಸತ್ಯ ಏನೆಂದರೆ ಇಲ್ಲಿ ಜಾಹೀರಾತೇ ಪ್ರಧಾನ, ಕಥೆ ಕೇವಲ ಒಂದು ಸೈಡ್ ಕಿಕ್ ಎಂಬ ಅಂಶದತ್ತ ನಮ್ಮ ಗಮನವನ್ನು ಸೆಳೆಯುತ್ತಾನೆ. ಇಡೀ ಪ್ರಕ್ರಿಯೆಯ ಚಾಲಕ ಶಕ್ತಿ ಆ ಜಾಹೀರಾತೆ  ಆಗಿರುತ್ತದೆ  ಎನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ತಿಳಿಯುವ ಅಂಶ.

ವಿಲಿಯಮ್ಸ್ ಪ್ರಕಾರ ಟೆಲಿವಿಷನ್ ಕೇವಲ ಒಂದು ತಾಂತ್ರಿಕತೆಯಲ್ಲ, ಅದು ಒಂದು ಸಾಂಸ್ಕೃತಿಕ ರೂಪವೂ ಹೌದು. ಅದರಲ್ಲಿ ಜಾಹೀರಾತುಗಳು ಧಾರಾವಾಹಿಗಳ ನಡುವೆ ‘ಅಕಸ್ಮಾತ್ತಾಗಿ’ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಅವೇ ಧಾರಾವಾಹಿಗಳನ್ನು ರೂಪಿಸುವ ಶಕ್ತಿಗಳು. ಪ್ರಾಯೋಜಕರು ತಮಗೆ ಬೇಕಾದ ನೋಡುಗರನ್ನು ಅದರ ಮೂಲಕ ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಆ ಪೂರಕತೆಯನ್ನು ಅರ್ಥಮಾಡಿಕೊಳ್ಳುವುದು ತುಂಬ ಮುಖ್ಯ. ಅಲ್ಲಿ ಈ ಒಂದರ  ದೃಶ್ಯಗುಣ ಮತ್ತು ದನಿಗುಣ ಆ ಇನ್ನೊಂದಕ್ಕೆ ಕುಮ್ಮಕ್ಕು ನೀಡುತ್ತಿರುತ್ತದೆ.

ವಿವೇಕಾನಂದ, ಗಾಂಧಿಯಂಥವರು ಈಗ ವ್ಯವಸ್ಥೆಯ ಮತ್ತು ಆಧುನಿಕ ಮಾರುಕಟ್ಟೆಯ ಒತ್ತೆಯಾಳುಗಳು!

*****

ಬೌದ್ಧಿಕ ಋಣ
  1. Frederic Jameson, Signatures of the Visible, New York: Routledge, 1992.
  2. Guy Debord La Société du spectacle. Paris: Buchet-Chastel, 1967. The Society of the Spectacle. Trans. Donald Nicholson-Smith. New York: Zone, 1995.
  3. Zygmunt Bauman, Intimations of Modernity, London: Routledge, 1992.
  4. Raymond Williams, Television: Technology and Cultural Form, Oxford: Oxford University Press, 1974.

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ