ಒಂದು ಸಾರಿ ಅವರ ಮನೆಗೆ ಹಬ್ಬಕ್ಕೆಂದು ಹೋದಾಗ ಹಠಮಾಡಿ ಎರಡು ಪಾರಿವಾಳವನ್ನು ತಂದೆ. ನಮ್ಮ ಮನೆಯ ಹೊರಭಾಗದಲ್ಲಿ ನಾಲ್ಕು ಗೋಡೆಯನ್ನಷ್ಟೆ ಕಟ್ಟಿ ಬಚ್ಚಲು ಮನೆ ಎಂದು ಕರೆಸಿಕೊಳ್ಳುತ್ತಿದ್ದ ಬಚ್ಚಲು ಮನೆಯ ಮೂಲೆಯಲ್ಲಿ ಕಲ್ಲುಗಳಿಂದಲೆ ಗೂಡೊಂದನ್ನು ಕಟ್ಟಿ ಅದರಲ್ಲಿ ಎರಡು ಪಕ್ಷಿಗಳನ್ನು ಬಿಟ್ಟು ಸಾಕವುದೆಂದು ತೀರ್ಮಾನಿಸಿದೆ. ಆದರೆ ಅವು ಗುಂಪಿನಲ್ಲಿ ವಾಸವಾಗಿದ್ದರಿಂದ ಒಂದು ವಾರದಲ್ಲೆ ಒಂದು ಪಕ್ಷಿ ಸತ್ತೆಹೋಯಿತು. ಆಗ ನಮಗೆ ಇದ್ಯಾವುದು ತಿಳಿಯುತ್ತಿರಲಿಲ್ಲ. ಇಂದು ಯೋಚಿಸಿದರೆ ಅವುಗಳಿಗೂ ಭಾವನೆ ಇದ್ದಿರಬೇಕು ಅನಿಸುತ್ತದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹತ್ತೊಂಭತ್ತನೆಯ ಕಂತು

ಸಾಮಾನ್ಯವಾಗಿ ಬಾಲ್ಯದಲ್ಲಿ ಪ್ರಾಣಿಗಳನ್ನು ಪಕ್ಷಿಗಳನ್ನು ಸಾಕುವುದೆಂದರೆ ಎಂತಹವರಿಗೂ ಪ್ರೀತಿಪಾತ್ರವಾದ ಕೆಲಸವೆ. ಬಾಲ್ಯದ ಬದುಕಿನಂತೆ ಸಾಗುವ ಪ್ರಾಣಿಗಳ ಬದುಕು ಅದಕ್ಕೆ ಕಾರಣವಿರಬಹುದು. ಬಾಲ್ಯದ ಬದುಕು ವ್ಯವಹಾರವಾಗಿರುವುದಿಲ್ಲ. ಅಲ್ಲಿ ಯಾವ ಕಲ್ಮಶವೂ ಇರುವುದಿಲ್ಲ. ಕೇವಲ ಪ್ರಾಣಿಗಳ ಬದುಕಿನ ಒಡನಾಟ ಅಪ್ಯಾಯತೆಯನ್ನು ಜೀವನಪ್ರೀತಿಯನ್ನು ಉಂಟುಮಾಡುತ್ತದೆ. ಅದೇ ಕಾರಣಕ್ಕೆ ಮಕ್ಕಳು ಯಾವಾಗಲೂ ಪಕ್ಷಿಗಳನ್ನು, ಪ್ರಾಣಿಗಳನ್ನು, ಸಾಕುವುದರಲ್ಲಿ ಹೆಚ್ಚು ಖುಷಿಯನ್ನು ಕಾಣುತ್ತಾರೆ. ನನ್ನ ಬಾಲ್ಯವೂ ಇದರಿಂದ ಹೊರತಾಗಿಲ್ಲ.

ನಾನಾಗ ಆರನೆಯ ತರಗತಿ ಇರಬಹುದು. ನನಗೆ ಮೊದಲಿನಿಂದಲೂ ಪ್ರಾಣಿಗಳನ್ನು ಸಾಕುವುದೆಂದರೆ ಇಷ್ಟದ ಕೆಲಸ. ನಮ್ಮ ಮನೆ ಹಳೆಯ ಕಾಲದ ಮನೆ ಮಣ್ಣಿನ ಹೆಂಟೆಗಳಿಂದ ಅದನ್ನು ಕಟ್ಟಲಾಗಿತ್ತು. ಹೊರಭಾಗಕ್ಕೆ ಕಲ್ಲಿನ ಒಂದೊರಸೆಯ ಗೋಡೆಕಟ್ಟಿ ಅದಕ್ಕೆ ಹೊರಬ ಮಣ್ಣನ್ನು ಮೆತ್ತಿ ಕಲ್ಲಿನ ಗೋಡೆ ಕಾಣದಂತೆ ಮಾಡಲಾಗಿತ್ತು. ಅದಕ್ಕೆ ಸಗಣಿ ಬಳಿಯುತ್ತಿದ್ದರು. ಅದು ಮಳೆಗೆ ಬೀಳದಿರಲಿ ಎಂದು ಸಣ್ಣ ಪುಟ್ಟ ಕಡ್ಡಿಗಳನ್ನು ತಂದು ಸಾಲಾಗಿ ಜೋಡಿಸಿ ಅದರ ಮೇಲೆ ಬೇವಿನ ಸೊಪ್ಪನ್ನು ಹೊದಿಸಿ ಅದರ ಮೇಲೆ ಕಲ್ಲಿನ ಒಂದೊರಸೆ ಇಟ್ಟು ಮಣ್ಣನ್ನು ಮೆತ್ತಿ ಗೋಡೆಯ ಹೊರಭಾಗಕ್ಕೆ ಎರಡಡಿಯಷ್ಟು ಮುಂದಕ್ಕೆ ಚಾಚಿಕೊಂಡಿರುವಂತೆ ಮಾಡಿರುತ್ತಿದ್ದರು. ಮಳೆ ಹನಿಗಳು ಸಾಮಾನ್ಯವಾಗಿ ಅದರ ಮೇಲೆ ಬೀಳುತ್ತಿದ್ದವು. ಗೋಡೆಯ ಹೊರಭಾಗ ಅಷ್ಟಾಗಿ ನೆನೆಯುತ್ತಿರಲಿಲ್ಲ ಆದರೂ ಪ್ರತಿ ವರ್ಷ ಅದನ್ನು ಮೆತ್ತಿ ಹೊಸದಾಗಿ ಸಗಣಿ ಬಳಿದು ಪ್ರತಿ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು.

ಅದನ್ನೆಲ್ಲಾ ಅಮ್ಮನೆ ಮಾಡಬೇಕಾಗಿತ್ತು. ಅದಕ್ಕಾಗಿ ಹರಸಾಹಸ ಪಡುತ್ತಿದ್ದಳು. ಇದರಿಂದ ನಾವು ಯಾವಾಗ ಪಾರಾಗುತ್ತೇವೊ ಎಂಬ ಉದ್ಗಾರ ಅಮ್ಮನ ಬಾಯಿಂದ ಕೇಳುತ್ತಿದ್ದೆವು. ಅದೆಲ್ಲ ಅಮ್ಮನಿಗೆ ನೋವಾದರೂ ಎಲ್ಲಾ ಸರಿಯಾದ ಆಕೆಯ ಮುಖದಲ್ಲಿ ಕಾಣುತ್ತಿದ್ದ ಸಂತಸದ ನಗು ಮನೆ ಸುಂದರವಾಯಿತಲ್ಲ ಎಂಬುದನ್ನು ಸೂಚಿಸುತ್ತಿತ್ತು. ಅದಕ್ಕಾಗಿ ಆ ಗೋಡೆಗೆ ಮಳೆ ಹೊಡೆದರೆ ಅಮ್ಮ ಕೋಪಗೊಳ್ಳುತ್ತಿದ್ದಳು. ಗದರುತ್ತಿದ್ದಳು. ಹೀಗಿರುವಾಗಲೆ ನಮ್ಮ ಮನೆಗೆ ಬರುತ್ತಿದ್ದ ನಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಪಾರಿವಾಳವನ್ನು ಸಾಕುವುದಕ್ಕಾಗಿಯೆ ಒಂದು ಚಿಕ್ಕ ಮನೆಯನ್ನು ಕಟ್ಟಿರುವುದನ್ನು ನಾನು ಅವರ ಮನೆಗೆ ಹೋದಾಗ ನೋಡಿದ್ದೆ. ನನಗೂ ಆ ಪಾರಿವಾಳವನ್ನು ನೋಡಿ ನಾನೂ ಪಾರಿವಾಳವೊಂದನ್ನು ಸಾಕಬೇಕು ಅನ್ನಿಸಿತು. ಅವರ ಮನೆಯಲ್ಲಿ ನೂರಾರು ಪಾರಿವಾಳಗಳಿದ್ದವು. ಅವರ ಮನೆಗೆ ಹೋದಾಗ ನಾನು ಅವುಗಳಿಗೆ ಕಾಳುಗಳನ್ನು ಹಾಕುವುದಕ್ಕೆ ಹೋಗುತ್ತಿದ್ದೆ. ಅವು ನನ್ನ ಮೇಲೆಯೆ ಬಂದು ಕುಳಿತುಕೊಳ್ಳುತ್ತಿದ್ದವು. ನನಗೆ ಆಗ ಆಗುತ್ತಿದ್ದ ಸಂತೋಷಕ್ಕೆ ಪಾರವೆ ಇರುತ್ತಿರಲಿಲ್ಲ. ಅವುಗಳು ಗಂಟಲಲ್ಲೆ ಕೂಗುವುದನ್ನು ಕೇಳುವುದಕ್ಕೆ ಒಂದು ಆನಂದ. ಅವೆಲ್ಲ ಒಟ್ಟಿಗೆ ಬಂದು ಕಾಳು ತಿನ್ನುತ್ತಿದ್ದವು. ಪಕ್ಷಿಗಳಲ್ಲಿ ಈ ಒಗ್ಗಟ್ಟು ಕಲಿಸಿದವರ್ಯಾರು ಎಂದು ಒಮ್ಮೊಮ್ಮೆ ಅನಿಸುತ್ತಿತ್ತು. ನಾನು ಸಾಕಲೇಬೇಕೆಂಬ ಆಸೆ ಜಾಸ್ತಿಯಾಯಿತು. ಆದರೆ ಮನೆಯಲ್ಲಿ ಹೇಳುವುದು ಹೇಗೆ. ಮನೆಯಲ್ಲಿ ಅಂತಹ ಗೂಡು ಕಟ್ಟುವುದಕ್ಕೆ ನಮಗೆ ಯಾವ ಅನುಕೂಲವು ಇರಲಿಲ್ಲ. ನಮ್ಮದು ಜಂತಿಮನೆ. ಆದರೂ ಸಾಕುವ ಆಸೆ ಇತ್ತು.

ಒಂದು ಸಾರಿ ಅವರ ಮನೆಗೆ ಹಬ್ಬಕ್ಕೆಂದು ಹೋದಾಗ ಹಠಮಾಡಿ ಎರಡು ಪಾರಿವಾಳವನ್ನು ತಂದೆ. ನಮ್ಮ ಮನೆಯ ಹೊರಭಾಗದಲ್ಲಿ ನಾಲ್ಕು ಗೋಡೆಯನ್ನಷ್ಟೆ ಕಟ್ಟಿ ಬಚ್ಚಲು ಮನೆ ಎಂದು ಕರೆಸಿಕೊಳ್ಳುತ್ತಿದ್ದ ಬಚ್ಚಲು ಮನೆಯ ಮೂಲೆಯಲ್ಲಿ ಕಲ್ಲುಗಳಿಂದಲೆ ಗೂಡೊಂದನ್ನು ಕಟ್ಟಿ ಅದರಲ್ಲಿ ಎರಡು ಪಕ್ಷಿಗಳನ್ನು ಬಿಟ್ಟು ಸಾಕವುದೆಂದು ತೀರ್ಮಾನಿಸಿದೆ. ಆದರೆ ಅವು ಗುಂಪಿನಲ್ಲಿ ವಾಸವಾಗಿದ್ದರಿಂದ ಒಂದು ವಾರದಲ್ಲೆ ಒಂದು ಪಕ್ಷಿ ಸತ್ತೆಹೋಯಿತು. ಆಗ ನಮಗೆ ಇದ್ಯಾವುದು ತಿಳಿಯುತ್ತಿರಲಿಲ್ಲ. ಇಂದು ಯೋಚಿಸಿದರೆ ಅವುಗಳಿಗೂ ಭಾವನೆ ಇದ್ದಿರಬೇಕು ಅನಿಸುತ್ತದೆ. ಉಳಿದ ಒಂದು ಪಕ್ಷಿಯನ್ನು ಬೆಕ್ಕೊಂದು ಹಿಡಿದು ತಿಂದು ಬಿಟ್ಟಿತು. ಮೊದಲ ಪ್ರಯತ್ನವೆ ಹೀಗಾಯಿತಲ್ಲ ಎಂದು ಬಹಳ ನಿರಾಸೆಯಾಯಿತು. ಆದರೂ ನಾನು ಹಠ ಬಿಡಲಿಲ್ಲ. ಅತ್ತು ಕರೆದು ಗೋಳಾಡಿ ಮತ್ತೆ ಎರಡು ಜೋಡಿ ಪಾರಿವಾಳಗಳನ್ನು ತಂದೆನು.

ಅವುಗಳನ್ನು ಕೆಳಗೆ ಗೂಡು ಕಟ್ಟಬಾರದೆಂದು ಮನೆಯ ಹೊರಭಾಗದ ಗೋಡೆಗೆ ಎರಡು ದೊಡ್ಡ ಮಳೆಗಳನ್ನು ಹೊಡೆದು ಸೀಬೆಹಣ್ಣುಗಳನ್ನು ತರುತ್ತಿದ್ದ ಜಾಕಾಯಿ ಪೆಟ್ಟಿಗೆ (ತೆಳು ಹಲಗೆಗಳಿಂದ ಮಾಡಿದ ಪೆಟ್ಟಿಗೆ) ಗಳನ್ನು ಅಂಗಡಿಯವನಿಗೆ ಒಂದಿಷ್ಟು ಹಣ ಕೊಟ್ಟು ತಂದು ಮಳೆಗಳ ಮೇಲೆ ಕಟ್ಟಿಗೆಯ ತುಂಡುಗಳನ್ನು ಬಿಗಿಯಾಗಿ ಕಟ್ಟಿ ಅದರ ಮೇಲೆ ಪೆಟ್ಟಿಗೆಗಳನ್ನು ಇಟ್ಟು ಪಾರಿವಾಳಗಳನ್ನು ಅದರೊಳಗೆ ಬಿಟ್ಟೆವು. ಈಗ ಅವು ಸುರಕ್ಷಿತವಾಗಿವೆ ಎಂದುಕೊಂಡೆವು. ಹೀಗೆ ಮೂರ್ನಾಲ್ಕು ತಿಂಗಳು ಕಳೆದವು. ಅದು ಒಂದು ರೀತಿ ಪ್ರತಿಷ್ಠೆಯ ವಿಚಾರವೂ ಆಗಿತ್ತು. ಯಾಕೆಂದರೆ ನಮ್ಮ ಊರಿನಲ್ಲಿ ಪಾರಿವಾಳ ಯಾರು ಸಾಕಿರಲಿಲ್ಲ. ಅದರ ಕತೆಯನ್ನು ಮೂರ್ನಾಲ್ಕು ತಿಂಗಳು ಗೆಳೆಯರಲ್ಲಿ ಹೇಳಿ ಖುಷಿಪಟ್ಟಿದ್ದೇ ಪಟ್ಟಿದ್ದು. ಆದರೆ ಅದು ಬಹಳ ದಿನ ಉಳಿಯಲಿಲ್ಲ. ಅದರ ತ್ಯಾಜ್ಯ ರಾತ್ರಿಹೊತ್ತು ಬಹಳ ಕೆಟ್ಟ ವಾಸನೆ ಬರುತ್ತಿತ್ತು. ಅಲ್ಲದೆ ಹೊರಬಾಗಿಲ ಪಕ್ಕದಲ್ಲೆ ಇದ್ದುದರಿಂದ ಗೋಡೆಯಪಕ್ಕ ಯಾರಾದರೂ ಕುಳಿತಿದ್ದರೆ ಒಮ್ಮೊಮ್ಮೆ ಗಲೀಜು ಬಿದ್ದು ಬಿಡುತ್ತಿತ್ತು. ಇದರಿಂದ ಅಪ್ಪ ಬೈಯುತ್ತಿದ್ದ. ಅದಲ್ಲದೆ ಮನೆಯ ಮುಂಭಾಗದಲ್ಲಿ ಅವು ಇರಬಾರದು. ಇದರಿಂದ ಮನೆಗೆ ಕೆಟ್ಟದ್ದಾಗುತ್ತದೆ ಎಂದು ಅಪ್ಪನಿಗೆ ತಲೆಗೆ ತುಂಬಿದ್ದರು. ಅಲ್ಲಿಯವರೆಗೂ ನಮಗೇನು ಕೆಟ್ಟದ್ದು ಆಗಿರಲಿಲ್ಲ. ಅವಿಲ್ಲದೆಯೂ ನಮಗೆ ಕಷ್ಟ ಬಂದಿದೆ. ಅವಾಗೆಲ್ಲಾ ಯಾವುದರಿಂದ ನಮಗೆ ಕಷ್ಟ ಬಂದಿತೆಂದು ಹೇಳುವವರಿರಲಿಲ್ಲ. ತನ್ನ ಸಂಕಟಗಳಿಗೆ ಮಾತು ಬಾರದ ಪ್ರಾಣಿ ಪಕ್ಷಿಗಳನ್ನು ಹೊಣೆಮಾಡುವ ಮಾನವನ ಈ ಗುಣಕ್ಕೆ ಧಿಕ್ಕಾರವಿರಲಿ. ಅಂತೂ ಮೂರ್ನಾಲ್ಕು ತಿಂಗಳಲ್ಲಿ ಪಾರಿವಾಳ ಸಾಕುವ ಆಸೆಯೂ ಮುಗಿದು ಹೋಗಿತ್ತು

ಅಮ್ಮ ಅಕ್ಕಂದಿರಿಗೆ ಕಿವಿಗೆ ಒಂದು ಜೊತೆ ರಿಂಗನ್ನಾದರೂ ಮಾಡಿಸೋಣ. ಊರಿನ ಹೆಣ್ಣು ಮಕ್ಕಳೆಲ್ಲಾ ಬಂಗಾರದ ಒಡವೆಗಳನ್ನು ಇಟ್ಟುಕೊಂಡಿದ್ದಾರೆ. ನಮ್ಮ ಮಕ್ಕಳಿಗೆ ಇಷ್ಟಾದರೂ ಬೇಡವೆ ಎಂಬ ಆಸೆ. ತಾನು ಕೂಲಿ ಮಾಡಿದ್ದರಲ್ಲಿಯೆ ಅಷ್ಟಿಷ್ಟು ಹಣವನ್ನು ಬಚ್ಚಿಟ್ಟು ಒಂದು ಕುರಿ ತಂದಿದ್ದಳು. ಆಗ ನೂರೊ ಇನ್ನೂರೊ ಇರಬೇಕು ಅಷ್ಟೇ. ನಮ್ಮ ಪರಿಚಯದ ಸಂಬಂಧಿಕನೊಬ್ಬ ಕುರಿ ವ್ಯಾಪಾರ ಮಾಡುತ್ತಿದ್ದ. ಅವನಿಗೆ ಕೂಡಿಟ್ಟ ಹಣ ಕೊಟ್ಟು ಒಂದು ಕುರಿ ತಂದಿದ್ದರು. ಅದನ್ನು ಸಾಕುವುದು ನನಗಂತು ಬಹಳ ಖುಷಿಯ ಸಂಗತಿ. ಬೆಳಿಗ್ಗೆ ಅದಕ್ಕೆಂದೇ ಒಂದಿಷ್ಟು ಹುಲ್ಲನ್ನು ಕಿತ್ತು ತರುವುದು, ಸಾಯಂಕಾಲ ಶಾಲೆ ಮುಗಿದ ತಕ್ಷಣ ಮೇಯಿಸುವುದಕ್ಕೆ ಹೋಗುತ್ತಿದ್ದೆ. ಅದಕ್ಕೆ ನಾನು ತಿನ್ನುವ ಆಹಾರವನ್ನು ಕೊಡುತ್ತಿದ್ದೆ. ಕಡ್ಲೆಕಾಯಿಯನ್ನು ತಿನ್ನುವಾಗ ನಾನು ಅರ್ಧತಿಂದರೆ ಅದಕ್ಕರ್ಧ ಶನಿವಾರ ಭಾನುವಾರ ಬಂತೆಂದರೆ ಅದಕ್ಕೆ ಹಬ್ಬ ನನಗೂ ಹಬ್ಬವೆ. ಒಳ್ಳೆಯ ಮೇವಿರುವ ಜಾಗಕ್ಕೆ ಹೊಡಕೊಂಡು ಹೋಗಿ ಮೇಯಿಸಿಕೊಂಡು ಬರುತ್ತಿದ್ದೆವು. ಇದೆ ಸಮಯಕ್ಕೆ ನಮ್ಮಸಂಬಂಧಿಕರೊಬ್ಬರು ಅವರೊಂದು ಕುರಿ ತಂದರು. ಬಹಳಷ್ಟು ಸಾರಿ ಒಂದೆ ಕಡೆ ಅದನ್ನು ಮೇಯಿಸುತ್ತಿದ್ದೆವು. ಅದಕ್ಕೆ ಎಷ್ಟು ಹೊಂದಿಕೊಂಡಿದ್ದೆ ಅಂದರೆ ನನ್ನ ಧ್ವನಿ ಕೇಳಿದರೆ ಸಾಕು ಅದು ಖುಷಿಯಿಂದ ಅರಚುತ್ತಿತ್ತು. ಹತ್ತಿರ ಹೋದರೆ ಮೂಸುವುದು ತನ್ನ ಮೈ ಉಜ್ಜುವುದು ಹೀಗೆ ಮಾಡುತ್ತಿತ್ತು. ಐದಾರು ತಿಂಗಳಲ್ಲೇ ಅದು ಪೊಗದಸ್ತಾಗಿ ಬೆಳೆದಿತ್ತು. ಅಮ್ಮ ಅದನ್ನು ನೋಡಿದಾಗಲೆಲ್ಲಾ ಎಷ್ಟು ಚೆನ್ನಾಗಿ ಸಾಕಿದೆ. ಇದರಿಂದ ನಿಮ್ಮಕ್ಕಂದಿರ ಕಿವಿಗೆ ರಿಂಗ್ ಕೊಡಿಸುವುದಾಗಿ ಹೇಳುತ್ತಿದ್ದಳು. ನನಗೂ ಒಳಗೊಳಗೆ ಹೆಮ್ಮೆ ನನ್ನಿಂದಾಗಿ ಅಕ್ಕಂದಿರು ಖುಷಿಯಾಗುತ್ತಾರಲ್ಲ ಎಂದುಕೊಳ್ಳುತ್ತಿದ್ದೆ.

ನನಗೆ ಹುಷಾರಿಲ್ಲದಾಗ ಅಮ್ಮನೆ ಅದನ್ನು ಮೇಯಿಸಿಕೊಂಡು ಬರುತ್ತಿದ್ದಳು. ಅವತ್ತು ನಾನು ಹೋಗಲಾಗಲಿಲ್ಲ ಅಮ್ಮನೂ ಹೋಗಲಾಗಲಿಲ್ಲ. ಅದಕ್ಕಾಗಿ ನಮ್ಮ ಸಂಬಂಧಿಯ ಕುರಿ ಜೊತೆಗೆ ಇವತ್ತೊಂದಿನ ಮೇಯಿಸಿಕೊಂಡು ಬನ್ನಿ ಎಂದು ಅವರ ಜೊತೆಯಲ್ಲಿ ಕಳುಹಿಸಿದ್ದರು. ಆ ದಿನ ಅವೆರಡು ಒಂದಕ್ಕೊಂದು ಕೊಂಬಿನಿಂದ ಗುದ್ದಿಕೊಂಡು ನನ್ನ ಕುರಿಯ ಒಂದುಕೊಂಬು ಮುರಿದೆ ಹೋಗಿತ್ತು. ಅದನ್ನು ನೋಡಿ ನನಗಂತೂ ಬಹಳ ಸಂಕಟವಾಗಿತ್ತು. ಅದಾದ ಮೇಲೆ ಒಂದೆರಡು ದಿನ ಅದು ಏನನ್ನೂ ತಿನ್ನಲಿಲ್ಲ ಅದಕ್ಕೂ ಬಹಳ ನೋವಾಗಿತ್ತು ಅನಿಸುತ್ತದೆ. ಅದನ್ನೆ ನೆಪವಾಗಿಟ್ಟುಕೊಂಡು ಒಂದಿಷ್ಟು ಕಡಿಮೆ ಬೆಲೆಗೆ ದಲ್ಲಾಳಿಗಳು ಕೇಳಿದರು. ನಾನಿಲ್ಲದ ಸಮಯದಲ್ಲಿ ಅದನ್ನು ಅಪ್ಪ ಮಾರಿಯೆ ಬಿಟ್ಟಿದ್ದ. ಶಾಲೆಯಿಂದ ಮನೆಗೆ ಬಂದಾಗ ದುಃಖಿಸಿದ್ದೆ. ಯಾವುದೆ ಪ್ರಾಣಿಯಾದರೂ ಸಾಕುವಾಗಿನ ಖುಷಿ ಅವು ಮರೆಯಾದಾಗ ಆಗುವ ಸಂಕಟ ಪ್ರತಿಯೊಬ್ಬರನ್ನು ಕಾಡುತ್ತದೆ. ಅಪ್ಪ ಕಷ್ಟಕ್ಕೆ ಮಾರಿದ್ದ. ಅದರಿಂದ ಅಮ್ಮ ಅಕ್ಕಂದಿರಿಗೆ ಕೊಡಿಸಬೇಕೆಂದಿದ್ದ ಬಂಗಾರದ ಕಿವಿಯ ರಿಂಗ್‌ನ ಕನಸು ಕನಸಾಗಿಯೇ ಉಳಿಯಿತು. ಸಾಕಿದ ಕುರಿ ಯಾವ ಕಟುಕನ ಕೈಯಲ್ಲಿ ಸತ್ತಿತೊ.. ಯಾರ ತಟ್ಟೆಯಲ್ಲಿ ಅದರ ತುಣುಕುಗಳು ಬಿದ್ದವೋ. ಬದುಕೆಂದರೆ ಹೀಗೆಯೆ.. ಪ್ರತಿ ಜೀವಿಯು ಅದರದರ ಪಾಡಿನಂತೆ ಸಾಗುತ್ತಿರಬೇಕು. ಇದರಿಂದ ಮನುಷ್ಯನು ಹೊರತಾಗಿಲ್ಲ….

(ಮುಂದುವರಿಯುವುದು…)