“ಬ್ರುಂಡ್‌ಜಾಯಿಟೆ ಅವರ ಕಾವ್ಯದ ಪ್ರಮುಖ ಹಾಗೂ ಆಕರ್ಷಕ ಗುಣವೆಂದರೆ ಅವರು ಚಿತ್ರಿಸುವ ಪ್ರಪಂಚದ ಪ್ರಾಮಾಣಿಕತೆ ಮತ್ತು ಗೀತಾತ್ಮಕ ವಿಷಯದ ಸತ್ಯತೆ ಮತ್ತು ಶ್ರದ್ಧೆ. ಇಲ್ಲಿ ಮುಖವಾಡ ಧರಿಸುವ ಅಥವಾ ಅಲಂಕಾರಿಕ ಸರಸೋಕ್ತಿಗಳನ್ನು ಬಳಸುವ ಮತ್ತು ಅನಗತ್ಯವಾಗಿ ಚತುರರಾಗುವ ಯಾವುದೇ ಪ್ರಯತ್ನವಿಲ್ಲ. ಬ್ರುಂಡ್‌ಜಾಯಿಟೆ ಭಾಷೆ ಮತ್ತು ಇತರರ ಕೃತಿಗಳ ಉಲ್ಲೇಖಗಳೊಂದಿಗೆ ಶಬ್ದವಾಟವಾಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ರಾಮುನ್ ಬ್ರುಂಡ್‌ಜಾಯಿಟೆ-ಯವರ (Ramunė Brundzaitė) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ತಮ್ಮ ಕವಿತೆಗಳ ಬಗ್ಗೆ ಮಾತನಾಡುತ್ತಾ, ಸಂದರ್ಶನವೊಂದರಲ್ಲಿ ರಾಮುನ್ ಬ್ರುಂಡ್‌ಜಾಯಿಟೆ ಹೇಳುತ್ತಾರೆ: “ಬರವಣಿಗೆ ನನಗೊಂದು ‘ಥೆರಪಿ’ಯ ತರಹ, ಏಕೆಂದರೆ ಅದು ನನ್ನೊಳಗೆ ಏನು ಜರಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೆ. ಅನೇಕ ವಿಷಯಗಳು ಬಹಿರಂಗವಾಗುತ್ತವೆ; ನನ್ನ ಬಗ್ಗೆ ತಿಳಿದುಕೊಳ್ಳಲು ನನಗೆ ಸುಲಭವಾಗುತ್ತದೆ. ನನ್ನ ಬಳಿ ಯಾವುದೇ ಡೈರಿ ಇಲ್ಲ, ಅದರ ಬದಲಿಗೆ ನನ್ನ ಕವನಗಳಿವೆ. ಆದಾಗ್ಯೂ, ನಾನು ಎಲ್ಲಾ ಅನುಭವಗಳ ಬಗ್ಗೆ ಬರೆಯಲು ಸಾಧ್ಯವಿಲ್ಲ. ನನ್ನ ಕಾವ್ಯ ನೀರಸವಾಗಬಾರದೆಂದು ನನ್ನ ಬಯಕೆ. ಸೃಜನಾತ್ಮಕತೆಗೆ ದೂರತ್ವ ಮತ್ತು ಸಮಯ ಬೇಕು.” A true story of spring (ವಸಂತಮಾಸದಲ್ಲಿ ನಡೆದ ಒಂದು ಸತ್ಯ ಕತೆ) ಎಂಬ ಕವನದಲ್ಲಿ ಅವರು ತಮ್ಮ ಒಂದು ಖಾಸಗಿ ಅನುಭವವನ್ನು ಮೃದುವಾದ ಭಾಷೆಯಲ್ಲಿ ಹೆಚ್ಚು ತೆರೆದಿಡದೆ ವರ್ಣಿಸಿದ್ದಾರೆ:

– ತೊಂದರೆಯೇನೂ ಇಲ್ಲ, ನಾ ಹೇಳುವೆ,
ತೊಂದರೆಯೇನೂ ಇಲ್ಲ,
ಈ ವಸಂತಋತು ಹುಚ್ಚು ಹಸಿರಾಗಿದೆ,
ಎಷ್ಟು ನಳನಳಿಸುತ್ತಿದೆಯೆಂದರೆ ನನ್ನ ಗರ್ಭವೂ
ಗಿಡಗಳ, ಮೊಗ್ಗುಗಳ, ಮೊಳೆಯುತ್ತಿದೆ,
ಮರಗಳ ಹಾಗೆ.
ಆಪರೇಶನ್ ಕೋಣೆಯ ತಾರಾದೀಪ
ಎಷ್ಟು ಪ್ರಕಾಶಮಾನವಾಗಿದೆ.
ಪ್ರಜ್ಞೆಯ ಶೂನ್ಯದ ಕೆಸರಿನಲ್ಲಿ ಬೀಳುವ ಮುನ್ನ
ನನಗಿರುವುದು ಒಂದೇ ಒಂದು ಕೋರಿಕೆ —
ತಟ್ಟನೆ ನಾನು ಮತ್ತೆ ಗಾಳಿಯ ಉಸಿರಾಡಲು ತೊಡಗುವೆ,
ನಾನು ಕಣ್ಣು ತೆರೆಯುವ ಮುನ್ನ ಕಂಡ ಕೊನೆಯ ಬಿಂಬ:
ನಮ್ಮ ಮನೆಯ ತೋಟದಲ್ಲಿ ಹೂವರಳಿ ನಿಂತ ಬಾದಾಮಿ ಮರ.

ಲಿಥುವೇನಿಯಾದ ವಿಲ್ನಿಯಸ್‌ ನಗರದಲ್ಲಿ 1988-ರಲ್ಲಿ ಹುಟ್ಟಿದ ರಾಮುನ್ ಬ್ರುಂಡ್‌ಜಾಯಿಟೆ, ವಿಲ್ನಿಯಸ್ ವಿಶ್ವವಿದ್ಯಾಲಯದಿಂದ ಲಿಥುವೇನಿಯನ್ ಫಿಲಾಲಜಿ ಮತ್ತು ಇಟಾಲಿಯನ್ ಭಾಷೆಯಲ್ಲಿ ಸ್ನಾತಕ ಪದವಿಯನ್ನು ಹಾಗೂ Intermedial Literature Studies-ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 2013-ರಲ್ಲಿ ಲಿಥುವೇನಿಯನ್ ಅಸೋಸಿಯೇಶನ್ ಫಾರ್ ರೈಟರ್ಸ್ (Lithuanian Association for Writers) ನಡೆಸಿದ ‘ಮೊದಲ ಪುಸ್ತಕ’ದ ಸ್ಪರ್ಧೆಯಲ್ಲಿ Drugy, Mano Drauge (Butterfly, My Friend) ಹೆಸರಿನ ಅವರ ಮೊದಲ ಕವನ ಸಂಕಲನಕ್ಕೆ ಪ್ರಶಸ್ತಿ ದೊರಕಿತು. ಇದೇ ಸಂಕಲನಕ್ಕೆ Druskininkai Poetic Fall ಕಾವ್ಯೋತ್ಸವದಲ್ಲಿ Young Yotving’s ಪ್ರಶಸ್ತಿಯನ್ನು ನೀಡಲಾಯಿತು ಮತ್ತು ನಂತರ ಅವರು ವಿಲ್ನಿಯಸ್‌ ನಗರದ ಬಗ್ಗೆ ಬರೆದ ಕೃತಿಗಳಿಗಾಗಿ ವಿಲ್ನಿಯಸ್ ಮೇಯರ್ ಬಹುಮಾನವನ್ನು ಪಡೆದರು. ಲಿಥುವೇನಿಯಾ ದೇಶದ ಹೊಸ ತಲೆಮಾರಿನ ಕವಿಗಳಲ್ಲಿ ಒಂದು ಮುಖ್ಯ ಧ್ವನಿಯೆಂದು ಇವರನ್ನು ಗುರುತಿಸಲಾಗಿದೆ.

ತಮ್ಮ ಮೊದಲ ಸಂಕಲನದ ಬಗ್ಗೆ ಕವಿಯೇ ಹೀಗನ್ನುತ್ತಾರೆ: “ನಾನು ಒಂದು ಚಿಟ್ಟೆಯನ್ನು ನನ್ನ ಸ್ನೇಹಿತೆಯಂತೆ ಪಳಗಿಸಲು ಪ್ರಯತ್ನಿಸಿರುವೆ. ನನ್ನ ಈ ಇಡೀ ಸಂಕಲನ ಬಹುಶಃ ತಾತ್ಕಾಲಿಕತೆ, ಬದುಕು ಮತ್ತು ಸಾವಿನ ನಿರಂತರ ಚಕ್ರ ಹಾಗೂ ಜೀವನದ ವಿರೋಧಾಭಾಸಗಳನ್ನು ಪಳಗಿಸುವ ಪ್ರಯತ್ನವೆಂದು ಅನಿಸುತ್ತದೆ. ನಾನು ಕೊನೆಯ ಕವನದಲ್ಲಿ ಬರೆದಂತೆ,

ಚಿಟ್ಟೆ, ನನ್ನ ಸ್ನೇಹಿತೆ,
ನಮ್ಮ ದಿನ ನಿನ್ನ ದಿನಕ್ಕಿಂತ
ಸ್ವಲ್ಪ ಉದ್ದ ಹೆಚ್ಚು
ನಾವು ಹುಳುಗಳೊಂದಿಗೆ ಕೊನೆಯಾಗುತ್ತೇವೆ,
ನೀನು ಹುಳುಗಳಿಂದ ಹುಟ್ಟುವೆ,
ನೀನು ಹೂವಿನಂತೆ ಅರಳುತ್ತಿರುವೆ
ನಮಗಾದ ಲಜ್ಜೆಯೊಳಗಿಂದ

ಓದುಗರಲ್ಲಿ ಯಾವುದೇ ಘರ್ಷಣೆಗೆ ಕಾರಣವಾಗದೆ ಸಾಹಿತ್ಯ ಕ್ಷೇತ್ರದಲ್ಲಿ ಸಹಜವಾಗಿ ಸೇರಿಕೊಂಡ ಅವರ ಮೊದಲ ಸಂಕಲನದ ಲಯ ವಿಭಿನ್ನವಾಗಿದೆ. ಸಾಹಿತ್ಯ ವಿಮರ್ಶಕಿ ನೆರಿಂಗಾ ಬುತ್ನೊರಯೂಟೆ-ಯ (Neringa Butnoriūtė) ಪ್ರಕಾರ, “ಬ್ರುಂಡ್‌ಜಾಯಿಟೆ-ಯವರ ಚೊಚ್ಚಲ ಕವನ ಸಂಕಲನದಲ್ಲಿ ಅವರು ತಮ್ಮ ಧ್ವನಿಯಲ್ಲಿ ವಾಸ್ತವದ ಮೇಲೆ ಕೃತಕವಾಗಿ ಹೇರಿದ ಅರ್ಥಗಳ ಬೌದ್ಧಿಕ ಪದರದಿಂದ ಮುಕ್ತವಾದ ಕಾವ್ಯವನ್ನು ವ್ಯಕ್ತಪಡಿಸಿದ್ದಾರೆ. ಬಹುಶಃ ಇದೇ ಕಾರಣಕ್ಕಾಗಿ ವಿಸ್ಮಯಪಡುವ ಕವಿಯ ಪಾತ್ರದಿಂದ ವೀಕ್ಷಕಳಾಗಿರುವ ಕವಿಯ ಪಾತ್ರವನ್ನು ವಹಿಸಿದ ಕವಿಯ ಪ್ರಪಂಚದಿಂದ ಪುಷ್ಟಿ ನೀಡುವ ವಸ್ತುಗಳು ಆಕಸ್ಮಿಕವಾಗಿ ಬಹಿರಂಗವಾಗುತ್ತವೆ ಎಂದು ಅವರ ಕಾವ್ಯ ನಮಗೆ ನೆನಪಿಸುತ್ತದೆ.”

ಬ್ರುಂಡ್‌ಜಾಯಿಟೆ-ಗೆ ಅತಿ ಮುಖ್ಯವಾದ ಕಾವ್ಯ ವಿಷಯಗಳ ಬಗ್ಗೆ ಹೇಳುವುದಾದರೆ, ಅವರು ಹುಟ್ಟಿದ, ವಾಸವಾಗಿರುವ ವಿಲ್ನಿಯಸ್ ನಗರ ಮೊದಲು ನೆನಪಿಗೆ ಬರುತ್ತದೆ. ಈ ನಗರದಲ್ಲಿ ಅವರು ವಾಸವಾಗಿದ್ದಾರೆ, ಇತರ ಬರಹಗಾರರ ಅನುಭವಗಳನ್ನು ಇಲ್ಲಿದ್ದು ಓದುತ್ತಾರೆ ಮತ್ತು ತಮ್ಮ ಸಾಹಿತ್ಯಿಕ ಅಧ್ಯಯನದಲ್ಲಿ ಈ ನಗರದ ಕಾವ್ಯಾತ್ಮಕತೆಯನ್ನು ವಿಶ್ಲೇಷಿಸುತ್ತಾರೆ. ಬ್ರುಂಡ್‌ಜಾಯಿಟೆ ಓದಿಗಾಗಿ ಇಟಲಿಯಲ್ಲಿ ವಾಸವಾಗಿದ್ದರು ಹಾಗೂ ಅಲ್ಲಿಗೆ ಹೋಗುತ್ತಿರುತ್ತಾರೆ. ಇಟಾಲಿಯನ್ ಭಾಷೆಯ ವಿಷಯದಲ್ಲಿ ಸ್ನಾತಕ ಪದವಿಯನ್ನೂ ಪಡೆದಿದ್ದಾರೆ. ಇಟಲಿಯಲ್ಲಿ ವಾಸವಾಗಿದ್ದರಿಂದ ಇಟಾಲಿಯನ್ ನಗರಗಳೂ ಅವರಿಗೆ ಮುಖ್ಯವಾಗಿವೆ. ಅವರೇ ಹೇಳಿದಂತೆ ಲಿಥುವೇನಿಯಾದ ತನ್ನ ನಗರ ವಿಲ್ನಿಯಸ್-ನಲ್ಲಿರುವಾಗ ಇಟಲಿಯ ನೆನಪಾಗುತ್ತೆ, ಹಾಗೂ ಇಟಲಿಯಲ್ಲಿರುವಾಗ ವಿಲ್ನಿಯಸ್ ನಗರದ ನೆನಪಾಗುತ್ತೆ. ಇಟಲಿಯಲ್ಲಿದ್ದಾಗ ವಿಲ್ನಿಯಸ್ ನಗರವನ್ನು ನೆನಪಿಸಿಕೊಂಡ ಒಂದು ಕವನ ‘ವಿಸ್ಟೀರಿಯಾ’ ಇಲ್ಲಿ ಅನುವಾದವಾಗಿದೆ.

ಮೊದಲ ಕವನ ಸಂಕಲನದ ಪ್ರಕಟಣೆಯ ಒಂಬತ್ತು ವರ್ಷಗಳ ನಂತರ, ಬ್ರುಂಡ್‌ಜಾಯಿಟೆ-ಯವರ ಎರಡನೆಯ ಕವನ ಸಂಕಲನ Tuščių Butelių Draugija (The Society of Empty Bottles) 2022-ರಲ್ಲಿ ಪ್ರಕಟವಾಯಿತು. ಅವರ ಮೊದಲ ಸಂಕಲನವನ್ನು ಇಷ್ಟಪಟ್ಟ ಕಾವ್ಯಪ್ರಿಯರು ತುಂಬಾ ವರ್ಷದಿಂದ ಎದುರುನೋಡುತ್ತಿದ್ದ ಸಂಕಲನವಿದು. ಈ ಸಂಕಲನ ತಪ್ಪೊಪ್ಪಿಗೆಯ/ಪಾಪನಿವೇದನೆಯ ಕಾವ್ಯದ (confessional poetry) ಪ್ರಕಾರದ ಹತ್ತಿರಕ್ಕೆ ಬರುತ್ತೆ; ಹಾಗಿದ್ದೂ, ಅವರು ಸತ್ಯಾಂಶಗಳನ್ನು ಪರೋಕ್ಷವಾಗಿ ಉಲ್ಲೇಖಿಸುವುದು ಮತ್ತು ತನ್ನ ಸ್ವಂತ ಜೀವನದೊಂದಿಗೆ ಸಂಭವನೀಯ ಸಮಾನಾಂತರಗಳನ್ನು ಹೊಂದಿಸಲು ಯಾವುದೇ ಬಯಕೆಯನ್ನು ತೋರಿಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಕವಿಗೆ ತಾನು ಏನು ಬರೆಯುತ್ತಿದ್ದೇನೆಂದು ತಿಳಿದಿದೆ ಎಂದು ಓದುಗರು ಭಾವಿಸುತ್ತಾರೆ.

ವಿಮರ್ಶಕಿ ಲೀನಾ ಬುಯ್ವಿಡವಿಚಿಯೂಟೆಯ ಪ್ರಕಾರ (Lina Buividavičiūtė), “ಸಂಕಲನದ ಶೀರ್ಷಿಕೆಯಿಂದ ಗ್ರಹಿಸುವಂತೆ, The Society of Empty Bottles-ನಲ್ಲಿ ಕಾಣುವ ಹೆಣ್ಣಿನ ಮದ್ಯವ್ಯಸನ ಒಂದು ಮುಖ್ಯ ವಿಷಯವಾಗಿದೆ. ಈ ದೃಷ್ಟಿಕೋನವು ವಿಶೇಷವಾಗಿ ಮುಖ್ಯವಾಗಿದೆ ಏಕೆಂದರೆ ಇಲ್ಲಿಯವರೆಗೆ ಇದನ್ನು ಆಧುನಿಕ ಲಿಥುವೇನಿಯನ್ ಕಾವ್ಯದಲ್ಲಿ ಪ್ರಾಮಾಣಿಕವಾಗಿ ಮತ್ತು ನಿರ್ಣಾಯಕವಾಗಿ ಚರ್ಚಿಸಲಾಗಿಲ್ಲ. ಬ್ರುಂಡ್‌ಜಾಯಿಟೆ-ಯವರು ಪ್ರಜ್ಞಾಪೂರ್ವಕವಾಗಿ ತನ್ನ ಕಾವ್ಯವನ್ನು ಮದ್ಯಪಾನದ ಮೇಲೆ ಕೇಂದ್ರೀಕರಿಸುತ್ತಾ ಅದನ್ನು deromanticize ಮಾಡುತ್ತಾರೆ: ಒಬ್ಬ ವ್ಯಕ್ತಿಗೆ ಕುಡಿತವು ವ್ಯಕ್ತಿಗಳು, ವಾಸನೆಗಳು ಮತ್ತು ಚಿತ್ರಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುವ ಮೂಲಕ ಅತಿಭಾವುಕ ಸಂವೇದನೆಗಳನ್ನು ಪುನರುತ್ಥಾನಗೊಳಿಸಬಹುದಾದರೂ, ಈ ಎರಡು ಅಕ್ಷರಗಳು, AA (ಆಲ್ಕೊಹಾಲಿಕ್ಸ್ ಅನಾನಿಮಸ್), ಆ ಹೆಣ್ಣಿನ ಹೊಸ ಗುರುತನ್ನು ವಿವರಿಸುತ್ತದೆ. The Society of Empty Bottles-ನ ಮತ್ತೊಂದು ಮುಖ್ಯ ವಿಷಯವೆಂದರೆ ಮಾನಸಿಕ ಆರೋಗ್ಯ. ಬ್ರುಂಡ್‌ಜಾಯಿಟೆ-ಯವರ ಕಾವ್ಯವು ಮಾನಸಿಕ ಚಿಕಿತ್ಸೆ, ಸ್ನೇಹಿತರು ಮತ್ತು ಆತ್ಮಹತ್ಯೆ ಮಾಡಿಕೊಂಡ ಅಥವಾ ಅದರ ಬಗ್ಗೆ ಆಲೋಚಿಸುತ್ತಿರುವ ಪರಿಚಯಸ್ಥರು, ವಸಾರಾ ಸ್ಟ್ರೀಟ್ (Vasara Street – ಲಿಥುವೇನಿಯಾದ ಪ್ರಸಿದ್ಧ ಮನೋವೈದ್ಯಕೀಯ ಆಸ್ಪತ್ರೆಯಿರುವ ರಸ್ತೆ), ತನ್ನದೇ ದೇಹವನ್ನು ಒಪ್ಪಿಕೊಳ್ಳುವುದರಲ್ಲಿ ಒಬ್ಬ ವ್ಯಕ್ತಿ ಪಡುವ ಕಷ್ಟ – ಇಂತಹ ಹಲವು ಸಂಬಂಧಿತ ವಿಷಯಗಳನ್ನು ಉಲ್ಲೇಖಿಸುತ್ತದೆ.”

ಇದಲ್ಲದೆ, ಈ ಕವನಗಳಲ್ಲಿ ಕಾಣುವ ಹೆಣ್ಣಿನ ಅಭದ್ರತೆ, ಅಸ್ತಿತ್ವವಾದದ ಆತಂಕ, ಮತ್ತು ಮರಣ ಮತ್ತು ನಿರಂತರ ಬದಲಾವಣೆಯನ್ನು ಎದುರಿಸುವ ಬಗ್ಗೆ ಅಂತ್ಯವಿಲ್ಲದ ಆಲೋಚನೆಗಳ ಕುರಿತು ಬ್ರುಂಡ್‌ಜಾಯಿಟೆ-ಯವರು ಬರೆಯುತ್ತಾರೆ. ಉದಾಹರಣೆಗೆ, ‘29’ ಎಂಬ ಹೆಸರಿನ ಕವನ:

ನಾನು 39-ರಲ್ಲಿ ಏನು ಬರೆಯುತ್ತೇನೆ?
49-ರಲ್ಲಿ?
ನಾನು ಬರೆಯುತ್ತೇನೆಯೇ?
ಅಲ್ಲಿಯವರೆಗೆ ನಾನು ಬದುಕುತ್ತೇನೆಯೇ?
… ಒಂದು ವರ್ಷದಿಂದ ನಾನು ಕುಡಿಯುವುದ ಬಿಟ್ಟಿದ್ದೇನೆ
ಎಂದಿನಂತೆ ನಾನು ರೈಲುನಿಲ್ದಾಣಕ್ಕೆ ಅಥವಾ
ವಿಮಾನ ನಿಲ್ದಣಕ್ಕೆ ತಡವಾಗಿ ಬರುತ್ತೇನೆ
ಮತ್ತೆ ಪ್ರತಿದಿನ ನಾನು
ಒಂದು ಹೊಸ ರೈಲು ಅಥವಾ ವಿಮಾನ
ದುರಂತದ ಬಗ್ಗೆ ಕೇಳುತ್ತೇನೆ

ಇಲ್ಲಿ ಅನುವಾದವಾಗಿರುವ ‘ಖಾಲಿ ಬಾಟ್ಲಿಗಳ ಸೌಹಾರ್ದತೆ’ ಎಂಬ ಕವನದಲ್ಲಿ AA (ಆಲ್ಕೊಹಾಲಿಕ್ಸ್ ಅನಾನಿಮಸ್) ಸಂಘದ ಸಭೆಯಲ್ಲಿ ಕುಡಿಯದೆನೆ ಒಂದು ತಿಂಗಳು ಕಳೆದರೆ ಮೆಚ್ಚುಗೆಯ ರೂಪವಾಗಿ ಹಾಗೂ ಇದೇ ರೀತಿ ಮುಂದುವರೆಯಲಿ ಅಂತ ಪ್ರೋತ್ಸಾಹಿಸುವುದಕ್ಕಾಗಿ ಕೊಡುವ ಒಂದು ಪುಟ್ಟ ಮೆಡಲ್-ಗಾಗಿ ಪಡುವ ಆತಂಕವನ್ನು ವರ್ಣಿಸಿದ್ದಾರೆ.

ವಿಮರ್ಶಕಿ ಲೀನಾ ಬುಯ್ವಿಡವಿಚಿಯೂಟೆ (Lina Buividavičiūtė) ಬ್ರುಂಡ್‌ಜಾಯಿಟೆ-ಯವರ ಕಾವ್ಯದ ಬಗ್ಗೆ ಹೀಗೆ ಅಭಿಪ್ರಾಯಪಡುತ್ತಾರೆ: “ಬ್ರುಂಡ್‌ಜಾಯಿಟೆ ಅವರ ಕಾವ್ಯದ ಪ್ರಮುಖ ಹಾಗೂ ಆಕರ್ಷಕ ಗುಣವೆಂದರೆ ಅವರು ಚಿತ್ರಿಸುವ ಪ್ರಪಂಚದ ಪ್ರಾಮಾಣಿಕತೆ ಮತ್ತು ಗೀತಾತ್ಮಕ ವಿಷಯದ ಸತ್ಯತೆ ಮತ್ತು ಶ್ರದ್ಧೆ. ಇಲ್ಲಿ ಮುಖವಾಡ ಧರಿಸುವ ಅಥವಾ ಅಲಂಕಾರಿಕ ಸರಸೋಕ್ತಿಗಳನ್ನು ಬಳಸುವ ಮತ್ತು ಅನಗತ್ಯವಾಗಿ ಚತುರರಾಗುವ ಯಾವುದೇ ಪ್ರಯತ್ನವಿಲ್ಲ. ಬ್ರುಂಡ್‌ಜಾಯಿಟೆ ಭಾಷೆ ಮತ್ತು ಇತರರ ಕೃತಿಗಳ ಉಲ್ಲೇಖಗಳೊಂದಿಗೆ ಶಬ್ದವಾಟವಾಡುತ್ತಾರೆ, ನಿಜ. ಆದರೆ ಈ ಶಬ್ದಗಳ ಆಟವನ್ನು, ಅವರ ಸಂಕೀರ್ಣವಾದ, ವಿಲಕ್ಷಣವಾದ ಮತ್ತು ಆಘಾತಕಾರಿ ಅನುಭವಗಳಿಂದ ಹೊಮ್ಮಿದ ಶುದ್ಧ ಮತ್ತು ಸ್ಪಷ್ಟವಾದ ಭಾವನೆಗಳನ್ನು ಕಡೆಗಣಿಸದೆ ನಿಭಾಯಿಸುತ್ತಾರೆ.”

ಬ್ರುಂಡ್‌ಜಾಯಿಟೆ-ಯವರ ಕವನಗಳನ್ನು ಇಂಗ್ಲಿಷ್, ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್, ರಷ್ಯನ್, ಚೈನೀಸ್, ಸ್ಲೋವೇನಿಯನ್, ಲ್ಯಾಟ್ವಿಯನ್, ಪೋಲಿಷ್, ಹಂಗೇರಿಯನ್, ಹಾಗೂ ಟರ್ಕಿಶ್ ಭಾಷೆಗಳಿಗೆ ಅನುವಾದಿಸಲಾಗಿದೆ. ಇಟಾಲಿಯನ್ ಭಾಷೆ ಹಾಗೂ ಸಾಹಿತ್ಯದಲ್ಲಿ ಪರಿಣಿತರಾದ ಇವರು ಖ್ಯಾತ ಇಟಾಲಿಯನ್ ಕವಿಗಳಾದ ಉಂಬರ್ಟೊ ಸಬಾ, ವ್ಯಾಲೆರಿಯೊ ಮ್ಯಾಗ್ರೆಲ್ಲಿ, ವಾನ್ನಿ ಬಿಯಾಂಕೋನಿ, ಟಿಜಿಯಾನೊ ಫ್ರಾಟಸ್, ಕ್ಲೌಡಿಯೊ ಪೊಝಾನಿ, ಮತ್ತಿತರ ಕವಿಗಳ ಕವನಗಳಗಳನ್ನು ಲಿಥುವೇನಿಯನ್ ಭಾಷೆಗೆ ಅನುವಾದಿಸಿದ್ದಾರೆ.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ರಾಮುನ್ ಬ್ರುಂಡ್‌ಜಾಯಿಟೆ-ಯವರ ಏಳೂ ಕವನಗಳನ್ನು ರಿಮಾಸ್ ಉಜ಼್‌ಗಿರಿಸ್-ರವರು (Rimas Uzgiris) ಮೂಲ ಲಿಥುವೇನಿಯನ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.


ಸೂರ್ಯಕಾಂತಿ ಹೂವುಗಳು
ಮೂಲ: Sunflowers

ಅವನ ತುಟಿಗಳು
ಸುಲಿದ ಸೂರ್ಯಕಾಂತಿಹೂವಿನ ಬೀಜದ ನೆನಪು ತರಿಸುತ್ತದೆ
ಅವೆರಡರ ರುಚಿ ಒಂದೇ:
ಉಪ್ಪುಪ್ಪು, ಸ್ವಲ್ಪ ಕಹಿ
ಅವನ ತುಟಿಗಳು ಬೀಜದ ತೆರೆದ ಚಿಪ್ಪುಗಳಂತೆ

ನನ್ನ ನಾಲಿಗೆ ಅವನ ಕಿವಿಯ ಸವರುತ್ತಿರುವಾಗ
ನನಗೆ ವ್ಯಾನ್ ಗೋ-ನ ನೆನಪಾಗುತ್ತದೆ
ಏನಾಗುವುದು ಆಗ, ಏನಾಗಬಹುದು
ನಾನು ಕಚ್ಚಿಬಿಟ್ಟರೆ
ಎಂದು ಯೋಚಿಸುತ್ತೇನೆ –

ನನಗೆ ಅವನ ದೇಹವ ಮರಳಿಸಲು ಇಷ್ಟವಿಲ್ಲ
ನಾನು ಹಳದಿ ಹೂವುಗಳನ್ನು, ಕಪ್ಪು ಬೀಜಗಳನ್ನು
ಬಿಟ್ಟು ಹೋಗುವೆ

ಏನು ಮೊಳೆಯಬಹುದು
ಒಂದು ವೇಳೆ ನಾನು ಅವನ ತುಟಿಗಳನ್ನು
ಬೀಜಗಳ ಹಾಗೆ ಬಿತ್ತುವುದಾದರೆ?


ಕಣ್ಣಾಮುಚ್ಚಾಲೆ ಆಟ
ಮೂಲ: Hide and seek

ಈ ನಗರ ತುಂಬಾ ಚಿಕ್ಕದು ಅಡಗಿಕೊಳ್ಳುವುದಕ್ಕೆ:
ಹೇಗಾದರೂ ಸಿಕ್ಕೇ ಸಿಗುತ್ತಾರೆ ನಿನಗೆ
ನೀನು ಭೇಟಿಯಾಗಲೇ ಬೇಕೆನ್ನುವ ಎಲ್ಲರೂ
ನೀನು ಭೇಟಿಯಾಗಲು ಬಯಸದವರು ಕೂಡ …

ಹೆಚ್ಚಾಗಿ ಮಾಲ್‌ಗಳಲ್ಲಿ:
ಎಷ್ಟೊಂದು ಇದಾವೆ, ಅದೆಷ್ಟು ದೊಡ್ಡವು,
ಅಷ್ಟೇ ಅನಾಮಕ
ಆದರೂ ನೀನು ಸರ್ಫ಼್ ಡಬ್ಬಿಗಳ ಹಿಂದೆ ಅಡಗಿಕೊಳ್ಳುವೆ
(ನಿರ್ಮಲ ಆತ್ಮದ ಒಂದು ನವಿರಾದ ಸಂಕೇತದಂತೆ)

ಹಲವರು ಹೇಳುವರು ಎಲ್ಲರಿಗೂ ಕಾಣುವಂತೆ
ಅಡಗಿಕೊಳ್ಳುವುದೇ ಉತ್ತಮವೆಂದು
ಎಂದೇ, ನಾನು ಮೂರ್ತ ಪದಗಳ ಮತ್ತು
ವ್ಯಕ್ತ ಜನರ ಪಕ್ಕದಲ್ಲಿ ನಿಂತುಕೊಳ್ಳುವೆ –
ಅಲ್ಲಿ ನಾನು ನಿಮಗೆ ಸುಲಭವಾಗಿ ಸಿಗುತ್ತೇನೆ
ಅಲ್ಲಿ ನನಗೊಂದು ಹೆಸರಿದೆ, ಕುಲನಾಮವಿದೆ,
ನನ್ನ ಹೆಸರಿನ ಗುರುತಿನ ಕಾರ್ಡ್ ಇದೆ,
ನಿಗದಿತ ಮೌಲ್ಯವೊಂದಿದೆ
ಅಚ್ಚುಕಟ್ಟಾದ ಸಂಖ್ಯೆಗಳ ಪಟ್ಟಿಯಲ್ಲಿದ್ದಂತೆ,
ಪ್ಲಾಸ್ಟಿಕ್ ಕಪ್‌ನಲ್ಲಿ ಕಾಫಿ, ನಮ್ಮ ಸೋದರರೊಂದಿಗೆ
ಏಕಾಂತದಲ್ಲಿ ಹಂಚಿಕೊಳ್ಳುವ ಸಿಗರೇಟುಗಳು,
ಅವುಗಳನ್ನು ಒಬ್ಬರಿಂದೊಬ್ಬರಿಗೆ ಸುತ್ತಿಸುತ್ತಾ
ದಿಂಗಿಣಹಾಕಿದಂತೆ …

ಈ ನಗರ ತುಂಬಾ ಚಿಕ್ಕದು ಅಡಗಿಕೊಳ್ಳುವುದಕ್ಕೆ
ಬಹಳ ದೊಡ್ಡದು ಹುಡುಕಿಹಿಡಿಯುವುದಕ್ಕೆ


ಇನ್ನಷ್ಟು ಎತ್ತರಕ್ಕೆ
ಮೂಲ: Higher

ಮಮ್ಮಾ, ಏನು ನಡೆಯಿತು ಇಲ್ಲಿ?
ನಾ ಮತ್ತೆ ಮತ್ತೆ ಕೇಳುವೆ,
ಆಗಲೇ ನಾನು ದೊಡ್ಡವಳಾಗಿಬಿಟ್ಟಿದ್ದೇನೆ, ಎನ್ನುವಂತೆ.

ಈಗೆಲ್ಲ ನಾನು ಸ್ಟೂಲಿನ ಮೇಲೆ ಹತ್ತುವುದಿಲ್ಲ
ಅಲ್ಲಿ ಮೇಲಿರುವುದನ್ನು ಎಟುಕಲಿಕ್ಕಾಗಿ.

ಈಗ ನಾನು ಬೇರೆ ವಸ್ತುಗಳಿಗಾಗಿ ಎಟುಕುತ್ತೇನೆ,
ಉದಾಹರಣೆಗೆ, ಉನ್ನತ ಶಿಕ್ಷಣ –
ನನ್ನ ಅಮ್ಮ-ಅಪ್ಪನ ಮುಂದೆ ಸ್ವಲ್ಪ
ಹೆಮ್ಮೆಪಡಲಿಕ್ಕೆ ಏನಾದರು ಇರಲಿ ಅಂತ,
ನಮ್ಮ ನೆಂಟರಿಷ್ಟರು ನನ್ನ ಬಗ್ಗೆ ಸ್ವಲ್ಪ ಹೆಚ್ಚು
ಕ್ಷಮಾಶೀಲರಾಗುತ್ತಾರೆ ಅಂತ:
ಇವಳು, ಏನೇ ಅನ್ನಿ, ಉನ್ನತ ಪದವಿ ಪಡೆದವಳು.

ಮಮ್ಮಾ, ಏನು ನಡೆಯಿತು ಇಲ್ಲಿ?
ಸಣ್ಣವಳಿದ್ದಾಗಿನಿಂದಲೇ, ಅಮ್ಮ ಹೇಳಿದಳು,
ನಾನು ಗೀಳುಹಿಡಿದವಳಂತೆ,
ಮೇಲೆ ಏರುವಾಗ ಏನಾಗುತ್ತೆ ಎಂದು
ಸದಾ ತಿಳಿದುಕೊಳ್ಳುವ ಯತ್ನವಂತೆ.

ಈಗಲೂ ನಾನು ಮೊಣಕಾಲು ತರಚಿಕೊಳ್ಳುವೆ
ಅಲ್ಲದ ದಾರಿಯನ್ನು ಹಿಡಿದಾಗ,
ಮೈಯೆಲ್ಲಾ ಕಪ್ಪು ನೀಲಿ ಕಲೆಗಳ ಸಂಗ್ರಹಿಸುವೆ
ಸಣ್ಣ ಮಗುವಿನ ಹಾಗೆ,
ಕೈಯೆಲ್ಲಾ ಇಂಕು ಬಳಿದುಕೊಳ್ಳುವೆ.

ಈ ಹುಡುಗಿ ಯಾವಾಗಲೂ ಬರೀತಾನೆ ಇರ್ತಾಳೆ –
ಏನು ಮಾಡುವುದು ಹೇಳಿ ನಾವು?
ಅವಳ ಹತ್ತಿರ ಉನ್ನತ ಪದವಿ ಇದೆ
ನಮ್ಮ ನೆಂಟರಿಷ್ಟರ ಎದುರು
ನನ್ನ ಬಗ್ಗೆ ಹೆಮ್ಮೆಪಡಕೊಳ್ಳುವುದಕ್ಕೆ ಹೆಚ್ಚೇನು ಇಲ್ಲ
ನನ್ನ ಅಮ್ಮ-ಅಪ್ಪನ ಬಳಿ

ಮಮ್ಮಾ, ಏನು ನಡೆಯಿತು ಇಲ್ಲಿ?
ಯಾಕೋ ಗೊತ್ತಿಲ್ಲ, ನಾನು
ಒಬ್ಬ ಹುಡುಗನಂತಾಗಬೇಕಿತ್ತು ಅಂತ ಅಂದುಕೊಂಡಿದ್ದೆ,
ಒಬ್ಬ ಕ್ಷೌರಿಕನಲ್ಲ,
ಒಬ್ಬ ಅಂತರೀಕ್ಷಯಾನಿಯಂತೆ.

ಆಮೇಲೆ ಇವೆಲ್ಲಾ ಶುರುವಾಯಿತು: ಕಿವಿ-ರಿಂಗುಗಳು,
ಕಿಟಕಿಯೇರಿ ಒಳ-ಹೊರ ಹೋಗುವುದು,
ಮನೆಯಿಂದ ಹೊರಗಿರುವುದು, ದೋಸ್ತುಗಳು, ಬಿಯರ್ –
ನಾನು ಚಂದ್ರಲೋಕದಲ್ಲಿ ಕಾಲಿಟ್ಟಿದ್ದೇನೆ
ಅಂತ ಅನಿಸಿತು.

ಸ್ವಲ್ಪ ಕಾಲದ ನಂತರ: ಬೆಳದಿಂಗಳ ಬಗ್ಗೆ ಕವನಗಳು
ಹಾಗೂ ಆ ಒಂದು ಉದಾತ್ತ ಘಳಿಗೆಗಾಗಿ ಹುಡುಕಾಟ –
ನಮ್ಮ ಕಲ್ಪನಾವಿಹಾರಿ ಕವಿ, ಮಾಸೆರ್ನಿಸ್-ನ ಹಾಗೆ.

ಆದರೂ ನಾನು ಎಂದೂ
ಉಡ್ಡಾಣ ಕೌಶಲದ ಎತ್ತರವನ್ನು ಮುಟ್ಟಲಿಲ್ಲ

ಇದಾಗ್ಯೂ ಈಗಲೂ
ನನಗೆ ಎತ್ತರಗಳ ಭಯ
ಬಹಳವಿದೆ


ನಾಯಿಯ ಕೂಗು ಏರುವುದು ಆಕಾಶಕ್ಕೆ
ಮೂಲ: A dog’s voice to the heavens goes

ನನ್ನ ನಾಯಿ
ರಾತ್ರಿಯಲ್ಲಿ ಪ್ರಾರ್ಥಿಸುತ್ತೆ
ನಾಯಿ ದೇವರಿಗೆ,
ಹಗಲಿನಲ್ಲಿ ಬಾಲವನ್ನಾಡಿಸುತ್ತೆ,
ಆದರೆ ಅವನ ದುಃಖಿತ ಕಣ್ಣುಗಳು
ಅವನನ್ನು ಬಿಟ್ಟುಕೊಡುತ್ತದೆ –
ಅವನಿಗೆಲ್ಲಾ ಗೊತ್ತಿದೆ,
ಮತ್ತೆ ಆ ‘ಒಲ್ಡ್ ಯೆಲರ್’*-ನ ಸಾವಿನ ಬಗ್ಗೆ ಮಾತ್ರವಲ್ಲ,
ಮತ್ತೂ ಗೊತ್ತಿದೆ.
ನಾನು ಕನಸ ಕಾಣುವೆ, ನಾವು ಜತೆಜತೆಯಾಗಿ
ಹೇಗೆಲ್ಲಾ ನಾಯಿ ಚೇಷ್ಟೆಗಳನ್ನ ಆಡುವೆವೆಂದು,
ಆದರೆ ಅವನು ಬಹುಶಃ ನನ್ನ ಜತೆ ಕುಳಿತು
ಒಂದೆರಡು ಗ್ಲಾಸು ಬಿಯರ್ ಕುಡಿಯಲು ಇಷ್ಟಪಡಬಹುದೇನೊ
ಮತ್ತೆ ನಮ್ಮ ತಲೆ ಸುತ್ತಲಾರಂಭಿಸಿದಾಗ, ಹೇಳುವ ಅವನು: –
ಈ ನಾಯಿ ಬದುಕು ನನಗೆ ರೋಸಿಹೋಗಿದೆ,
ಈ ನನ್ನ ಕಪ್ಪು ತುಪ್ಪಳು, ಆ ನಾಯಿ ದೇವತೆ,
ಅದೂ ಬಹುಶಃ ಮಾನವನ ಕಲ್ಪನೆಯೆ ಇರಬೇಕು –
ಮಾನವರು ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತಾರೆ,
ಅವರನ್ನು ನಾವು ಹಠಹಿಡಿದು ನಿರ್ಲಕ್ಷಿಸುತ್ತೇವೆಂಬ
ಕಲ್ಪನೆಯೂ ಸಹ.

*‘ಒಲ್ಡ್ ಯೆಲರ್’ (Old Yeller) ಎಂಬುದು ಅದೇ ಹೆಸರಿನ 1956ರಲ್ಲಿ ಫ಼‌್ರೆಡ್ ಗಿಪ್ಸನ್ (Fred Gipson) ಎಂಬ ಅಮೇರಿಕನ್ ಲೇಖಕ ಬರೆದ ಕಾದಂಬರಿಯಲ್ಲಿ ಬರುವ ದೊಡ್ಡ ಗಾತ್ರದ ಕಪ್ಪು ಮೂತಿಯ ಹಳದಿ ಬಣ್ಣದ, ‘ಬ್ಲ್ಯಾಕ್ ಮೌತ್ ಕರ್’ (Black Mouth Cur) ಎಂಬ ಜಾತಿಯ ಬೇಟೆ ನಾಯಿ. 1957ರಲ್ಲಿ ಈ ಕಾದಂಬರಿಯನ್ನು ಆಧರಿಸಿ ಇದೇ ಹೆಸರಿನಲ್ಲಿ ಮಾಡಿದ ಚಲನಚಿತ್ರ ಬಹಳ ಯಶಸ್ಸು ಕಂಡಿತು. ಒಂದು ಮಕ್ಕಳ ಚಿತ್ರವಾಗಿ, ಒಬ್ಬ ಬೆಳೆಯುವ ಹುಡುಗ ಮತ್ತು ಅವನ ನಾಯಿಯ ನಡುವೆ ಇರುವ ಸಂಬಂಧ, ಪ್ರೀತಿಗಳ ಕತೆಯಾಗಿ ಅಮೇರಿಕದ ಜನತೆ ‘ಒಲ್ಡ್ ಯೆಲರ್’ ಚಿತ್ರವನ್ನು ಮೆಚ್ಚಿಕೊಂಡರು.

ಹಳದಿ ಬಣ್ಣದ ನಾಯಿಯಾದ್ದರಿಂದ, ಇದಕ್ಕೆ ‘yellow’ ಎಂದು ಹೆಸರಿಡುತ್ತಾನೆ ಆ ಹುಡುಗ, ಆದರೆ ‘ಯೆಲೊ’ ಪದ ಆ ಪ್ರಾಂತದವರ ಉಚ್ಛಾರಣೆಯಲ್ಲಿ ‘ಯೆಲರ್’ (yeller) ಎಂದು ಕೇಳಿಬರುತ್ತೆ; ಈ ನಾಯಿ ಬಹಳವೇ ಜೋರಾಗಿ ಬೊಗಳುತ್ತೆ, ಆದ್ದರಿಂದಲೂ ಕೂಡ ‘ಯೆಲರ್’ ಎಂಬ ಹೆಸರು ಸೂಕ್ತವಾಗಿದೆ. ಇಂಗ್ಲಿಷ್-ನಲ್ಲಿ ‘ಯೆಲ್’ (yell) ಅಂದರೆ ಬೊಬ್ಬೆ ಹೊಡೆಯುವುದೆಂದು ಅರ್ಥ.

ನಾಯಿಯನ್ನು ಇಟ್ಟುಕೊಳ್ಳುವುದಕ್ಕೆ ಅವನ ಮನೆಯವರೆಲ್ಲರ ವಿರೋಧವಿದ್ದರೂ, ಅವನು ನಾಯಿಯನ್ನು ಬಿಟ್ಟುಕೊಡುವುದಿಲ್ಲ. ಅದು ದೊಡ್ಡದಾಗಿ ಬೆಳೆದು ಕಾವಲುನಾಯಿಯಾಗಿ ಆ ರೈತನ ಮನೆಯವರಿಗೆ, ಅವನ ಕೆಲಸದಲ್ಲಿ ಸಹಾಯ ಮಾಡುತ್ತೆ. ಮನೆಯ ದನಗಳ ಮೇಲೆ ಒಂದು ದಿನ ತೋಳವೊಂದು ಹಲ್ಲೆ ಮಾಡಿದಾಗ, ಒಲ್ಡ್ ಯೆಲರ್ ಅದರೊಂದಿಗೆ ಸೆಣಸಾಡಿ ತೋಳವನ್ನು ಓಡಿಸುತ್ತೆ. ಆದರೆ, ಆ ಸೆಣಸಾಟದಲ್ಲಿ ತೋಳವು ಒಲ್ಡ್ ಯೆಲರ್-ನು ಕಚ್ಚಿಬಿಡುತ್ತೆ. ಅದರಿಂದ ಒಲ್ಡ್ ಯೆಲರ್-ಗೆ ರೇಬೀಸ್‌ ರೋಗ ಬಂದು ಒದ್ದಾಡುತ್ತೆ. ಅದರ ಕಷ್ಟ ನೋಡಲಾರದೆ, ಒಲ್ಡ್ ಯೆಲರ-ನ್ನು ಸಾಯಿಸಬೇಕಾಗಿ ಬರುತ್ತೆ. ಗುಂಡಿಟ್ಟು ಕೊಲ್ಲಲಾಗುತ್ತೆ. ಈ ಕವನದಲ್ಲಿ ಬರುವ ‘ಒಲ್ಡ್ ಯೆಲರ್’ನ ಸಾವಿನ ಉಲ್ಲೇಖ ಕವಿಯು ಈ ಕಾದಂಬರಿ/ಚಲನಚಿತ್ರದಿಂದ ತೆಗೆದುಕೊಂಡಿದ್ದಾರೆ. ಅಂದರೆ, ಲಿಥುವೇನಿಯಾದ ಸಮಕಾಲೀನ ಕವಿಯೊಬ್ಬಳು 1950-ರ ಅಮೇರಿಕನ್ ಚಲನಚಿತ್ರವೊಂದರ ಒಂದು ನಾಯಿಯ ಉಲ್ಲೇಖವನ್ನು ತನ್ನ ಕವನದಲ್ಲಿ ಸೇರಿಸಿರುವುದು ನನಗೆ ಬಹಳ ಸ್ವಾರಸ್ಯಕರ ಸಂಗತಿ ಎಂದನಿಸಿತು.


ವಸಂತಮಾಸದಲ್ಲಿ ನಡೆದ ಒಂದು ಸತ್ಯ ಕತೆ
ಮೂಲ: A true story of spring

-ತೊಂದರೆಯೇನೂ ಇಲ್ಲ, ನಾ ಹೇಳುವೆ,
ತೊಂದರೆಯೇನೂ ಇಲ್ಲ,
ಈ ವಸಂತಋತು ಹಚ್ಚು ಹಸಿರಾಗಿದೆ,
ಎಷ್ಟು ನಳನಳಿಸುತ್ತಿದೆಯೆಂದರೆ ನನ್ನ ಗರ್ಭವೂ
ಗಿಡಗಳ, ಮೊಗ್ಗುಗಳ, ಮೊಳೆಯುತ್ತಿದೆ,
ಮರಗಳ ಹಾಗೆ.
ಆಪರೇಶನ್ ಕೋಣೆಯ ತಾರಾದೀಪ
ಎಷ್ಟು ಪ್ರಕಾಶಮಾನವಾಗಿದೆ.
ಪ್ರಜ್ಞೆಯ ಶೂನ್ಯದ ಕೆಸರಿನಲ್ಲಿ ಬೀಳುವ ಮುನ್ನ
ನನಗಿರುವುದು ಒಂದೇ ಒಂದು ಕೋರಿಕೆ —
ತಟ್ಟನೆ ನಾನು ಮತ್ತೆ ಗಾಳಿಯ ಉಸಿರಾಡಲು ತೊಡಗುವೆ,
ನಾನು ಕಣ್ಣು ತೆರೆಯುವ ಮುನ್ನ ಕಂಡ ಕೊನೆಯ ಬಿಂಬ:
ನಮ್ಮ ಮನೆಯ ತೊಟದಲ್ಲಿ ಹೂವರಳಿ ನಿಂತ ಬಾದಾಮಿ ಮರ.

— ಹೇಗನಿಸುತಿದೆ ನಿಮಗೆ ಈಗ?
— ನಾನು ವಸಂತಋತುವಿನ ಬಗ್ಗೆ ಕನಸ ಕಂಡೆ, ನಾನು ಉತ್ತರಿಸುವೆ,
ಇನ್ನೂ ನಿದ್ರಾಜನಕಗಳ ಬಲೆಯಲ್ಲಿ ತೊಳಲಾಡುತ್ತಾ,
ಐವಿ ಬಳ್ಳಿಗಳಂತ ಬಸಿಯುವ ಟ್ಯೂಬುಗಳಿಂದ ಸುತ್ತಿಸಿಕೊಂಡಿರುವೆ,
ನನ್ನ ಆತ್ಮವು ಹನಿಹನಿಯಾಗಿ ನನ್ನ ದೇಹದೊಳಗೆ
ಐ.ವಿ. ಟ್ಯೂಬುಗಳಿಂದ ಮತ್ತೆ ತೊಟ್ಟಿಕ್ಕುತ್ತಿದೆ.
— ತೊಂದರೆಯೇನೂ ಇಲ್ಲ, ನಾ ಹೇಳುವೆ,
ತೊಂದರೆಯೇನೂ ಇಲ್ಲ,
ನನ್ನ ಕೆರೆದು ಹಾಕಿದ ಗರ್ಭದಲ್ಲಿ ಎಡೆಬಿಡದ ನೋವು ಅಷ್ಟೇ,
ಹೊರಗೆ ಇನ್ನೂ ಚುರುಕಾಗಿ ಜೀವ ಹರಡುತ್ತಿದೆ ಅಷ್ಟೇ,
ಮತ್ತೆ ಈಗ ಇನ್ನೂ ಗಟ್ಟಿಯಾಗಿ ಕೇಳಿಸುವ ಗಡಿಯಾರಗಳ
ಟಿಕ್ ಟಿಕ್ ಟಿಕ್ ಸದ್ದು


ವಿಸ್ಟೀರಿಯಾ1
ಮೂಲ: Wisteria

ನಮ್ಮ ಮೊದಲ ಕೆಲಸ ಹೆಸರಿಡುವುದು,
ಈ ನೇರಳೆ ಬಣ್ಣದ ಹೂವುಗಳನ್ನು
ಏನೆಂದು ಕರೆಯುತ್ತಾರೆಂದು
ಕಂಡುಹಿಡಿಯುವುದು

ಇವುಗಳಿಂದ ಹೆಣೆದ ಲತಾಮಂಟಪದಲ್ಲಿ
ಮೆಡಿಟರೇನಿಯನ್ ಸೂರ್ಯನಿಂದ
ರಕ್ಷಿತವಾಗದ ನೆರಳಿನಲ್ಲಿರುವ
ಒಂದು ಸಣ್ಣ ಕೆಫೆಯಲ್ಲಿ ಕೂರುವುದು

ಪುಟದ ಮೇಲೆ ಒಂದು ಕಪ್ ಇಡುವುದು
ಮತ್ತೆ ನನ್ನ ಪೆನ್ನು
ಕಾಫಿ ತುಳುಕುವುದು
ಹಳೆಯ ಸೈಕಲ್ಲಿನ್ನು
ಬೇಲಿಯ ಮೇಲೆ ಒರಗಿಸುವುದು
ಐವತ್ತು ಯೂರೋಗಳು

ನನಗೆ ಬಲು ಇಷ್ಟವಾದ ಜಾಗದಲ್ಲಿ
ರೋಮನ್-ರು ಹಾದಿ-ಹಾಸಿದ
‘ಸಾನ್ ಜಿಯಾಕೊಮೊ’ ಚೌಕದಲ್ಲಿ
ಕರಗುತ್ತಿರುವ ಜೆಲಾಟೋ2-ಗೆ
ನನ್ನ ನಾಲಿಗೆಯ ಮುಟ್ಟಿಸುವುದು

ಆದಿತ್ಯವಾರದ ದಿನಗಳು ಕೋಟೆ-ಬೆಟ್ಟವ ಏರುವುದು
ನನಗೆ ಕಾಣುವ ಪರ್ವತಗಳ ನೋಟವನ್ನು
ಇನ್ನೂ ಹರಿತಗೊಳಿಸುವುದಕ್ಕೆ,
ಕೆಳಗೆ ಮಂಜಿನಿಂದ ಕವಿದ ರಸ್ತೆಗಳನ್ನು ನೋಡುವೆ,
ಅಲ್ಲಿ ನನ್ನ ಊರನ್ನು ಕಲ್ಪಿಸಿಕೊಳ್ಳುವೆ
ನೂರಾರು ಮೈಲಿಗಳ ದೂರದಲ್ಲಿದೆ
ನೂರಾರು ವಾರಗಳ ನಂತರ
ಪೂರ್ವ-ಯೂರೋಪಿನ ಒಂದು ಥಂಡಿ-ಗಟ್ಟಿದ
ಸಭಾಂಗಣದಲ್ಲಿ ಕೂತು
ಡಾನ್ನುನ್‌ಜಿಯೋ3-ನ ಕವನಗಳನ್ನು ಓದುವಾಗ
ನನಗೆ ಈ ಹೂವುಗಳು ನೆನಪಾಗುವುದು

1. ಬಿಳಿ, ನೇರಳೆ, ನೀಲಿ, ಕಡುಗೆಂಪು, ಮೊದಲಾದ ಬಣ್ಣದ, ಜೋತಾಡುವ ದಂಡೆಯಾಕಾರದ ಹೂಗುಚ್ಛ ಬಿಡುವ, ಒಂದು ಜಾತಿಯ ಬಳ್ಳಿ ಯಾ ಈ ಬಳ್ಳಿಗಳ ಕುಲ.
2. ಇಟಲಿಯಲ್ಲಿ ಐಸ್‌ಕ್ರೀಮ್-ಗೆ ‘ಜೆಲಾಟೋ’ ಅನ್ನುತ್ತಾರೆ.
3. Gabriele D’Annunzio – ಗಾಬ್ರಿಯೆಲೆ ಡಾನ್ನುನ್‌ಜಿಯೋ (1863-1938) ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕಗಳು ಹಾಗೂ ಇಪ್ಪತನೆಯ ಶತಮಾನದ ಮೊದಲ ದಶಕಗಳಲ್ಲಿ ಬರೆಯುತ್ತಿದ್ದ ಪ್ರಖ್ಯಾತ ಇಟಾಲಿಯನ್ ಕವಿ, ನಾಟಕಕಾರ, ವಾಗ್ಮಿ, ಪತ್ರಕರ್ತ, ಮತ್ತು ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ರಾಯಲ್ ಇಟಾಲಿಯನ್ ಆರ್ಮಿ ಆಫಿಸರ್ ಆಗಿದ್ದರು. ಅವರು 1889 ರಿಂದ 1910 ರವರೆಗೆ ಇಟಾಲಿಯನ್ ಸಾಹಿತ್ಯದಲ್ಲಿ ಮತ್ತು ನಂತರ 1914 ರಿಂದ 1924 ರವರೆಗೆ ರಾಜಕೀಯ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಪಡೆದರು.


ಖಾಲಿ ಬಾಟ್ಲಿಗಳ ಸೌಹಾರ್ದತೆ
ಮೂಲ: The fellowship of empty bottles

ಬೀರುವಿನಲ್ಲಿ ಬಟ್ಟೆಗಳ ಮಧ್ಯೆ ಅಡಗಿಸಿಟ್ಟ
ಖಾಲಿ ಬಾಟ್ಲಿಗಳ ಖಣಖಣ
“ಎಲ್ಲಿ ಅಡಗಿಸಿಟ್ಟಿರುವೆ ನೀನು ಬಾಟ್ಲಿಗಳನ್ನು”
ಮಾರಿಯಸ್ ಕೇಳುತ್ತಾನೆ

ನನಗೆ ಆ ಸಣ್ಣ ಮೆಡಲ್ ಬೇಕು

ಎಷ್ಟೇ ಕಷ್ಟವಾದರೂ ಸರಿ –
ಒಂದು ತಿಂಗಳು –
ಮುವ್ವತ್ತು ಬೆಳದಿಂಗಳ ದಿನಗಳು
ಕುಡಿಯದೇನ
ಮತ್ತೆ ಅಲ್ಲಿ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ

ಅಲುಮಿನಿಯಮ್-ನ ಕಿಮ್ಮತ್ತು
ಪ್ಲಾಟಿನಮ್‌ಗಿಂತ ಹೆಚ್ಚು ಇಲ್ಲಿ