ಸೂರ್ಯನಿಗೋ ಯಾರು ಹುಟ್ಟಿದರೆಷ್ಟು? ಯಾರು ಸತ್ತರೆಷ್ಟು? ಅವನ ಕೆಲಸ ಅವನದ್ದೇ. ಬೆಳಗಿನ ಮೋಟಾರು ಗಾಡಿ ಬಂದು ಹೋದ ಸದ್ದಾಯಿತು. ಬಸವಣ್ಣನ ಅಣ್ಣನ ಮಗ ಮಲ್ಲೇಶ ಬಾಗಿಲಲ್ಲಿ ಬಂದು ನಿಂತಿದ್ದ. ನಿಧಾನಕ್ಕೆ ಬಸವಣ್ಣನ ಬಳಿಗೆ ಬಂದ. ಬೆನ್ನು ಸವರಿದ. ಅವರಿಬ್ಬರೆ ತಾನೆ ಗೋಪುವನ್ನು ಕೊನೆಯ ಬಾರಿಗೆ ನೋಡಿದವರು. ಕಾಣುತ್ತಿದ್ದಂತೇ ಕೈಜಾರಿ ಬಿದ್ದ ಗೋಪು ಅಪ್ಪಾ ಅಪ್ಪಯ್ಯಾ ಎಂದು ಕೂಗಿದ್ದೊಂದೇ ಗೊತ್ತು. ಬುಲ್ಡೋಸರ್‌ನೊಂದಿಗೆ ಊರ ಮಂದಿಯೆಲ್ಲಾ ಜಮಾಯಿಸಿದಾಗ ಬಾವಿಯೊಳಗೆ ಇಳಿಬಿಟ್ಟಿದ್ದ ಹಗ್ಗ ಮೂರು ತುಂಡಾಗಿ ಅಣಕಿಸುತ್ತಿತ್ತು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ಕತೆ “ಭೂಮಿಯೊಳಗಿದೆ ಬದುಕು” ನಿಮ್ಮ ಓದಿಗೆ

“ಲೇ ಬಸ್ಯಾ ಒಸಿ ಯೋಚ್ನೆ ಮಾಡು, ನಮ್ಮೆಲ್ರ ಬಾಳು ನಿನ್ ಕೈಯ್ಯಾಗ ಐತೆ’’ ಎಂದು ಹೇಳುವಷ್ಟು ಹೇಳಿದ ಮಂದಣ್ಣ ಉಳಿದವರೆಲ್ಲರನ್ನು ಎಬ್ಬಿಸಿ ಕರೆದೊಯ್ದ. ಯಮುನವ್ವ ಬೈಯದಿದ್ದರೆ ಅವರ‍್ಯಾರೂ ಹೊರಡುವಂತಿರಲಿಲ್ಲ. “ಅಯ್ಯಾ ಮೂದೇವಿಗಳಾ ಅವ್ನು ಈಗಷ್ಟೇ ಉಸಿರಾಡ್ತದಾನ. ಅವ್ನ ಬಿಟ್‌ಬಿಡ್ರೋ” ಎಂದವರು ಕೈ ಮುಗಿದ ಮೇಲೆಯೇ ಮಂದಣ್ಣ ಮಾತು ನಿಲ್ಲಿಸಿದ್ದು.

ಮನೆಯಲ್ಲಿ ಯಾರಿಗೂ ಒಂದು ತೊಟ್ಟು ನೀರೂ ಸರಿಯಾಗಿ ಇಳಿಯುವ ಸ್ಥಿತಿಯಿಲ್ಲ. ಅಂಥದ್ದರಲ್ಲಿ ಭೂಮಿ ಹಿಡ್ಕೊಂಡು ಏನ್ಮಾಡೋದಕ್ಕೆ ಸಾಧ್ಯ? ಹನ್ನೆರಡು ದಿನಗಳ ಸತತ ಪ್ರಯತ್ನದ ನಂತರವೂ ಗೋಪುವನ್ನು ಕೊಳವೆ ಬಾವಿಯಿಂದ ಮೇಲೆತ್ತಲಾಗಲಿಲ್ಲ. ಇದ್ದೊಬ್ಬ ಮಗ ಕಣ್ಣೆದುರೆ ಬಲಿಯಾದಾಗ ಹೆತ್ತ ಕರುಳಿನ ಸಂಕಟ ಮುಗಿಲು ಮುಟ್ಟಿತ್ತು.

‘ಠಪ್..’ ಎಂಬ ಸದ್ದಿನೊಡನೆ ಮನೆಯವರ ಎಲ್ಲರ ದೃಷ್ಠಿ ನೆಲಕ್ಕೆ ಬಿದ್ದು ಒಡೆದ ಫೋಟೋದತ್ತ ಹೊರಳಿತು. ಗೋಪುವಿನ ಪ್ರೀತಿಯ ಬೆಕ್ಕು ಅವನನ್ನೇ ನೆಲಕ್ಕುರುಳಿಸಿತ್ತು. ಮೂಲೆಯಲ್ಲಿ ಕುಳಿತು ಅದು ಹಿಡಿದ ಹಲ್ಲಿಯನ್ನು ಞರ ಞರ ಸದ್ದಿನೊಂದಿಗೆ ತಿನ್ನುತ್ತಿದ್ದರೆ ಬಸವಣ್ಣ ಆವೇಶದೊಂದಿಗೆ ಎದ್ದವನೇ ಆ ಬಿದ್ದ ಫೋಟೋವನ್ನು ಎತ್ತಿ ಎದಗೆ ಅಪ್ಪಿಕೊಂಡು ಜೋರಾಗಿ ಅಳುತ್ತಾ ಅಲ್ಲಿಯೇ ಕುಸಿದು ಬಿದ್ದ. ಅವನ ಹೆಂಡತಿ ಮಾತು ಅಳು ಎರಡನ್ನೂ ಮರೆತಿದ್ದಳು. ಮೊದಲಿನಿಂದಲೂ ಹಾಗೆಯೇ. ಯಾವಾಗಲೂ ಮಂಕಾಗಿ ಗೋಡೆಗೊರಗಿ ಕುಳಿತಿರುವಳು. ಈಗಲೂ ಹಾಗೆಯೇ. ಗೋಪುವಿನ ಅಕ್ಕಂದಿರಿಬ್ಬರೂ ಯಮುನವ್ವನ ಮಡಿಲಿಗೊರಗಿದ್ದರು. ಅಕ್ಕಪಕ್ಕದ ಮನೆಯವರಾದರೂ ಇದ್ದೇನು ಮಾಡಲಿಕ್ಕಿದೆ? ಇವನ ಮನೆಯಲ್ಲಿ ಒಲೆ ಉರಿಯುವದಿಲ್ಲ. ಅದಕ್ಕೆ ಅವರು ತಟ್ಟಿದ ರೊಟ್ಟಿ ಇಲ್ಲಿ ಬಂದು ಬಸವಣ್ಣನ ಸಂಸಾರವನ್ನು ಕಾಯುತಿತ್ತು. ಯಾರೂ ಏನೂ ಅನ್ನಲಿಲ್ಲ. ಯಾರನ್ನೂ ಯಾರೂ ಉಪಚರಿಸುವ ಸ್ಥಿತಿಯಲ್ಲಿಲ್ಲ. ಎಲ್ಲರೂ ಆಯಾ ಜಾಗದಲ್ಲಿಯೇ ಮೂಡಣದ ಸೂರ್ಯನನ್ನು ಕಾಯತೊಡಗಿದರು.

ಸೂರ್ಯನಿಗೋ ಯಾರು ಹುಟ್ಟಿದರೆಷ್ಟು? ಯಾರು ಸತ್ತರೆಷ್ಟು? ಅವನ ಕೆಲಸ ಅವನದ್ದೇ. ಬೆಳಗಿನ ಮೋಟಾರು ಗಾಡಿ ಬಂದು ಹೋದ ಸದ್ದಾಯಿತು. ಬಸವಣ್ಣನ ಅಣ್ಣನ ಮಗ ಮಲ್ಲೇಶ ಬಾಗಿಲಲ್ಲಿ ಬಂದು ನಿಂತಿದ್ದ. ನಿಧಾನಕ್ಕೆ ಬಸವಣ್ಣನ ಬಳಿಗೆ ಬಂದ. ಬೆನ್ನು ಸವರಿದ. ಅವರಿಬ್ಬರೆ ತಾನೆ ಗೋಪುವನ್ನು ಕೊನೆಯ ಬಾರಿಗೆ ನೋಡಿದವರು. ಕಾಣುತ್ತಿದ್ದಂತೇ ಕೈಜಾರಿ ಬಿದ್ದ ಗೋಪು ಅಪ್ಪಾ ಅಪ್ಪಯ್ಯಾ ಎಂದು ಕೂಗಿದ್ದೊಂದೇ ಗೊತ್ತು. ಬುಲ್ಡೋಸರ್‌ನೊಂದಿಗೆ ಊರ ಮಂದಿಯೆಲ್ಲಾ ಜಮಾಯಿಸಿದಾಗ ಬಾವಿಯೊಳಗೆ ಇಳಿಬಿಟ್ಟಿದ್ದ ಹಗ್ಗ ಮೂರು ತುಂಡಾಗಿ ಅಣಕಿಸುತ್ತಿತ್ತು. ಬಸವಣ್ಣ ಬಾವಿಯ ಬಾಯಿಗೆ ಕಿವಿಗೊಟ್ಟು ಏನಾದರೂ ಸದ್ದು ಕೇಳುವುದೋ ಎಂದು ಕಾಯುತ್ತಿದ್ದ. ಅಡಿಗಡಿಗೆ `ಅಯ್ಯೋ ನನ್ ಕೂಸಿನ ಬಾಯಾಗ ನಾನೇ ಮಣ್ ಹಾಕಿದ್ನಲ್ಲಪ್ಪಾ..’’ ಎನ್ನುತ್ತಾ ಎದೆ ಹೊಡೆದುಕೊಳ್ಳುತ್ತಿದ್ದ.

ಮಗ ಬದುಕಿ ಬರುತ್ತಾನೆಂದು ಜೀವಹಿಡಿದು ಕಾದದ್ದೇ ಬಂತು. ಭೂಮಿತಾಯೊಡಲ ಬಸಿರನ್ನೇ ಬಗೆದು ಗೋಪುವನ್ನು ಹೊರಗೆಳೆಯುವ ಕೆಲಸ ವ್ಯರ್ಥಪ್ರಯತ್ನವೆಂದು ತಿಳಿಯಲು ಹೆಚ್ಚು ದಿನಗಳು ಬೇಕಾಗಲಿಲ್ಲ. ಉರಿವ ಗಾಯಕ್ಕೆ ಉಪ್ಪು ಹಾಕುವಂತೆ ಈ ಮಾಧ್ಯಮದ ಜನಗಳು. ಹೆತ್ತೊಡಲು ಬೇಯುತ್ತಿರುವಾಗ ಇವರಿಗೆ ಅದರಲ್ಲಿ ಸುದ್ದಿ ಎಂಬ ಸಾಂಬಾರು ಕುದಿಸುವ ಚಿಂತೆ. ತಾವು ಮಾಡಿದ ನಳಪಾಕಕ್ಕೆ ತಮ್ಮತಮ್ಮೊಳಗೆ ಪ್ರಶಂಸೆಯ ಸುರಿಮಳೆ. ಹೊಲವೇ ಮನೆಯಾಯಿತು. ಕೆಲದಿನಗಳಲ್ಲಿ ಅದೇ ಬಸವಣ್ಣನ ಸಂಸಾರವನ್ನು ಮುಳುಗಿಸುವ ಹಳ್ಳವೂ ಆಯಿತು.

*****

`ಅವ್ವಾ ನಾ ಸಾಲಿಗೆ ಹೊಂಟೀನಿ. ಅಪ್ಪಯ್ಯನ್ ತಾವ ಯೋಳು. ಸಂಜೆ ಬತ್ತಾ ಹೊಸ ಬಟ್ಟೆ ತಗಂಬರುಕತ’ ಎನ್ನತ್ತಾ ಚೀಲ ಬಗಲಿಗೇರಿಸಿಕೊಂಡು ಗೋಪು ಎರಡು ಹೆಜ್ಜೆ ಹಾರುತ್ತಾ ಎರಡು ಹೆಜ್ಜೆ ಕುಣಿಯುತ್ತಾ ಹೋಗುತ್ತಿದ್ದರೆ ಅವನ ಅವ್ವ ಹಟ್ಟಿಯ ಬಾಗಿಲ ಬಳಿ ನಿಂತು ಅವನ ಹೆಜ್ಜೆಗುರುತುಗಳನ್ನು ಕಂಡು ನಗುತ್ತಿದ್ದಳು. ಇಷ್ಟು ಬೇಗ ಬೆಳೆದುಬಿಟ್ನಾ ಮಗ ಎನ್ನುತ್ತಾ ಅಚ್ಚರಿಪಡುವಳು. ಗೋಪುವಿಗೆ ಶಾಲೆ ಎಂದರೆ ಸರಿ. ಬೇರೆ ಯಾವುದೂ ಬೇಡ. ಅಲ್ಲಿನ ಮೇಷ್ಟ್ರು ಟೀಚರು ಹೇಳಿಕೊಟ್ಟುದದನೆಲ್ಲಾ ಸಂಜೆ ಹಟ್ಟಿಯೊಳಗೆ ಎಲ್ಲರೂ ಕಲಿಯುತ್ತಾರೆ. ಅವ್ವ, ಅಪ್ಪ, ಅಜ್ಜಿ ಎಲ್ಲರಿಗೂ ಬೇರೆ ಬೇರೆಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಾನೆ ಗೋಪು. ಕತ್ತಲಾಗುವವರೆಗೆ ಕೇರಿಯ ಹುಡುಗರೆಲ್ಲಾ ದಾರಿಯ ಧೂಳನ್ನು ಗಾಳಿಗೆ ತೂರುತ್ತಾರೆ. ದೇವರಿಗೆ ದೀಪ ಇಡುವ ಹೊತ್ತಿಗೆ ಮಾತ್ರ ಗೋಪು ಹಾಜರ್.

***

ಹೆಗಲಿಗೊರಗಿ ಮಲಗಿದ್ದ ಬಸವಣ್ಣನನ್ನು ಮಲ್ಲೇಶ ನಿಧಾನಕ್ಕೆ ಎಬ್ಬಿಸಿ ಕರೆತಂದು ಮಂಚದ ಮೇಲೆ ಕೂರಿಸಿದ. ಒಂದು ಲೋಟ ನೀರನ್ನು ಬಲವಂತಕ್ಕೆ ಎಂಬಂತೆ ಕುಡಿಸಿದ. `ಚಿಕ್ಕಪ್ಪಾ ನನ್ ಜೊತೆಗೆ ಗೋಪು ಶಾಲೆ ಹೆಡ್‌ಮಾಷ್ಟ್ರು ಬಂದಾರ. ನಿನ್ ತಾವ ಏನೋ ಮತಾಡ್ಬೇಕಂತ. ಮುಂದಕ್ಕೋಗಿರು ಬತ್ತೀನಿ ಅಂದ್ರು. ವಿಷ್ಯ ಎನೋ ಗೊತ್ತಾಯ್ಲಿಲ್ಲ ನೋಡು.’ ಹೇಳಿ ಮುಗಿಸುವುದರೊಳಗೆ ಪಾದ್ರಿಗಳು ಬಾಗಿಲಲ್ಲಿ ನಿಂತಿದ್ದರು.

ಬಸವಣ್ಣ ಎದ್ದು ನಿಂತು ಕೈ ಮುಗಿದ. ಪಾದ್ರಿಗಳು ಬಂದು ಅವನ ಬಳಿ ಮಂಚದ ಮೇಲೆ ಕುಳಿತರು. ಕೂಡಲೇ ಬಸವಣ್ಣ ಅವರ ಕಾಲ ಬುಡದಲ್ಲಿ ಕೆಳಗೆ ಕುಳಿತ. `ಛೆ ಇದೇನು ಬಸವಣ್ಣಾ ಬಾ ಮೇಲೇನೆ ಕುಂತ್ಕ.’ ಎಂದು ಕೈ ಹಿಡಿದು ತನ್ನ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡರು. ಅವನಿನ್ನೂ ತಲೆ ಎತ್ತಿರಲಿಲ್ಲ. ಪಾದ್ರಿಗಳೇ ಮಾತಾಡಬೇಕಾಯಿತು.

`ನೋಡು ಬಸವಣ್ಣಾ, ನಿಂಗೆ ಸಮಾಧಾನ ಮಾಡುವ ಧೈರ್ಯ ನನ್ನಲ್ಲೇ ಇಲ್ಲ. ಆದರೆ ಒಂದು ಮಾತು ಹೇಳಬಲ್ಲೆ. ಗೋಪು ನಿನ್ನ ಮಗ ಮಾತ್ರ ಅಲ್ಲ. ಎಲ್ರಿಗು ಅವ ಅಂದ್ರೆ ಪ್ರಾಣ. ಅದಕ್ಕೆ ಅವ ನಂಜೊತೆಗೆ ಇದ್ದಾನ; ಇಲ್ಲೆ ಎಲ್ಲೋ ಆಡ್ಕೊಂಡಿದಾನ ಅನ್ನಿಸ್ತದ. ಹಾಂಗ ಅಂದ್ಕೋಬೇಕು ನಾವು. ಮಾತು ಸುಲಭ. ಬದುಕು ಕಷ್ಟ. ಮಗ ಹೀಗಾದ, ಜಮೀನು ಹಾಗಾಯ್ತು. ಹಾಗಂತ ಸುಮ್ನಿರೋದು ಸರಿಯೇನು? ಬಂಡಿ ಓಡ್ಲೇಬೇಕಲ್ಲಾ? ನೋಡು ನಾವೆಲ್ಲರು ನಿನ್ ಕಷ್ಟಾನ ನಮ್ ಕಷ್ಟ ಅಂತ ಅನ್ಕೊಂಡದಿವಿ. ಅದ್ಕೆ ನಮ್ ಶಾಲೆ ಮಕ್ಳು, ಟೀಚರು, ಮೇಷ್ಟ್ರುಗಳೆಲ್ಲಾ ಸೇರಿ ಒಂದಷ್ಟು ದುಡ್ಡು ಒಟ್ಟು ಮಾಡಿದಿವಿ. ಬೇಡಂತ ಹೇಳ್ದೆ ತಗೋಬೇಕು. ಗೋಪುವಿನ ಮೇಲಿನ ಪ್ರೀತಿಗಾಗಿ ನಾವ್ ಕೊಡ್ತಿರೋದು. ಬೇಡಾಂತ ಹೇಳ್ಬೇಡ. ತಗೋ. ಇದ್ರಲ್ಲಿ 36,072 ರೂಪಾಯಿ ಇದೆ. ತಗೊ’ ಎನ್ನುತ್ತಲೇ ಬಲವಂತವಾಗಿ ಎಂಬAತೆ ಬಸವಣ್ಣನ ಬೊಗಸೆಯೊಳಗೆ ತುರುಕಿಸಿದರು. ಅವನಿನ್ನೂ ತಲೆ ಎತ್ತಿರಲಿಲ್ಲ. ಎಚ್ಚರವಾಗಿಯೇ ಇದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಅವನ ಕಣ್ಣೀರ ಹನಿಯೊಂದು ಬೊಗಸೆಯ ಮೇಲೆ ಉದುರಿತು. ಪಾದ್ರಿಗಳು ಎದ್ದು ಹೊರಟರು.

*****

ಸಂಜೆ ಮನೆಗೆ ಬರುತ್ತಲೇ ಗೋಪು ಅಪ್ಪನನ್ನು ಹುಡುಕತೊಡಗಿದ. ಅಪ್ಪ ಅವ್ವ ಬಂದು ಎದುರು ನಿಂತರೂ ಕಣ್ಣು ಇನ್ನೇನನ್ನೋ ಹುಡುಕುತ್ತಿತ್ತು. ಯಮುನವ್ವ ಕೂತಲ್ಲೇ ನಗೆಯಾಡುತ್ತಿದ್ದರು. ಅವರಿಗೆ ಮೊಮ್ಮಗನನ್ನು ಹೆಚ್ಚು ಸತಾಯಿಸಲು ಇಷ್ಟವಿದ್ದಂತಿರಲಿಲ್ಲ. ಅಜ್ಜಿಯ ಕೈಯಲ್ಲಿ ಹೊಸಬಟ್ಟೆ ನೋಡಿದವನೇ ಒಂದೇ ಹೆಜ್ಜೆಗೆ ಹಾರಿ ಅವರ ಕೈಯ್ಯಿಂದ ಆ ಪ್ಯಾಕೇಟನ್ನು ಕಿತ್ತುಕೊಂಡು ಬಟ್ಟೆಯನ್ನು ಕಂಡು ಕಣ್ಣರಳಿಸಿದ. `ಐ.. ಇದು ಅದೇ ಅಂಗಿ.. ಆವತ್ತು ಸಂತೆಲಿ ಅಂಗಡಿಲಿತ್ತಲ್ಲಾ…!!!’ ಆ ದಿನ ಸಂತೆಯಿಂದ, ಆ ಅಂಗಿಯಿಂದ ಅವನನ್ನು ಬಿಡಿಸಿ ಮನೆಗೆ ಕರೆದುಕೊಂಡು ಬಂದದ್ದೊಂದು ಹರಸಾಹಸವಾಗಿತ್ತು. ಮಗ ಹುಟ್ಟಿದ ಹಬ್ಬಕ್ಕೆ ಕೇಳಿದ ಬಟ್ಟೆ ಕೊಡಿಸದಿದ್ದರೆ ಅವನನ್ನು ಅಪ್ಪಯ್ಯನೆಂದು ಯಾಕೆ ಕರೆಯುತ್ತಾರೆ?
ಹೊಸಬಟ್ಟೆಯೊಂದಿಗೆ ಕುಣಿದು ಕುಪ್ಪಳಿಸಿಕೊಂಡೇ ಹೋಗಿದ್ದ ಗೋಪು ಶಾಲೆಗೆ. ಸಂಜೆ ಬರುವ ಹೊತ್ತಿಗೆ ಮಾತ್ರ ಅದು ಹೊಸಬಟ್ಟೆಯಾಗಿ ಉಳಿದಿರಲಿಲ್ಲ. ಹುಟ್ಟಿದ ದಿನವಲ್ಲದಿದ್ದರೆ ಅವ್ವನ ಕೈಲಿ ಬೀಳುವ ಪೆಟ್ಟಿಗೆ ಅವನ ಚರ್ಮ ಜಾರತ್ತಿತ್ತು.

ವಾರ ಕಳೆದು ಬಂದ ಊರ ಜಾತ್ರೆಗೂ ಅದೇ ಅಂಗಿ. ಜಾತ್ರೆಯ ಧೂಳಿನ ಕಣವೆಲ್ಲಾ ಗೋಪುವಿನ ಅಂಗಿಯನ್ನು ತಬ್ಬಿಕೊಂಡಿತ್ತು. ಈ ಬಾರಿಯೂ ಗೋಪು ಪೆಟ್ಟಿನಿಂದ ತಪ್ಪಿಸಿಕೊಂಡ. ಮಲ್ಲೇಶನಿಂದಾಗಿ. ಜಾತ್ರೆಗೆಂದು ಬಂದ ಮಲ್ಲೇಶನನ್ನು ಒಂದು ವಾರ ಉಳಿದುಕೊಳ್ಳುವಂತೆ ಪೀಡಿಸಿದ ಗೋಪು. ಮಲ್ಲೇಶನಿಗೆ ಬೇರೆ ಉಪಾಯವಿಲ್ಲದಾಯ್ತು.

`ಅಣಾ..ಅಪ್ಪಯ್ಯ ಬೋರಿ ತೋಡಿಸ್ಯಾರಲ್ಲಾ? ನೋಡಿ ಬರೋಣು. ಬತ್ಯಾ??’

`ಗೋಪು ಅದು ಬೋರಿ ಅಲ್ಲ ಬರ‍್ವೆಲ್.. ಏನೋ ಸಾಲಿಗೊಗೋದು ನೀನು? ರ‍್ಯಾಗ ಮಾತಾಡಕೇ ಬರಾಕಿಲ್ಲ..’

`ಏ..ಏನೋ ಒಂದು. ನೀ ಈಗ ಬತ್ಯೋ ಇಲ್ಲೊ ಯೋಳ್’

ಎನ್ನುತ್ತಾ ಮುಖ ಉಪ್ ಅಂತ ಊದಿಸಿಕೊಂಡ ಗೋಪುನನ್ನು ಸಮಾಧಾನಿಸಬೇಕಾದರೆ ಅವನ ಅಪ್ಪಯ್ಯನೇ ಬರಬೇಕಾಯಿತು.

`ಹೋಗೋಣು ನಡಿ..’ಎಂದು ಬಸವಣ್ಣ ಅವನನ್ನು ಎಬ್ಬಿಸಿದ ಮೇಲೆಯೇ ಉಪ್ ಇದ್ದದ್ದು ಉಸ್ ಆಯಿತು. ಮಲ್ಲೇಶನ ಭುಜದ ಮೇಲೆ ಮಂಗನ ತರ ಕುಳಿತಿದ್ದ ಗೋಪು ದಾರಿಯುದ್ದಕ್ಕೂ ಏನೇನೋ ಕತೆ ಹೇಳುತ್ತಿದ್ದ. ಮಲ್ಲೇಶ ಕಾಟಾಚಾರಕ್ಕೆ ಹ್ಞೂಂ ಅನ್ನುತ್ತಿದ್ದರೆ ಬಸವಣ್ಣನಿಗೆ ನೀರೇ ಬರದ ಬರ‍್ವೆಲ್ ಬೆವರಿಳಿಸುತ್ತಿತ್ತು.

*****

`ಅವ್ವಾ ಪಟೇಲ್ರು ಬಂದಾರ. ಜೊತಿಗೆ ಖಾನ್ ಸಾಹೇಬ್ರೂ ಅದಾರ..’ ಎನ್ನುತ್ತಾ ಹೊರಗಿಂದ ಯಾರೋ ಕೂಗಿ ಹೇಳಿದ ಹಾಗಾಯ್ತ. ಬಸವಣ್ಣ ಹಟ್ಟಿಯಿಂದ ಹೊರ ಬಂದು ನಡು ಬಗ್ಗಿಸಿ ಇಬ್ಬರಿಗೂ ಕೈ ಮುಗಿದ. ಅಲ್ಲೇ ಇದ್ದ ಮಂಚದ ಮೇಲೆ ಕುಳಿತರು ಪಟೇಲ್ರು ಖಾನ್ ಸಾಹೇಬರೊಂದಿಗೆ.
`ಲೇ ಬಸ್ಯಾ ನಿನಗೊಬ್ನಿಗೇನ್ಲಾ ಕಷ್ಟ ನಷ್ಟ ಸಾವು ನೋವು ಎಲ್ಲಾ ಬಂದಿರೋದು? ನಿನ್ ಕಣ್ಮುಂದೆ ಇಲ್ವೇನ್ಲಾ ಪಟೇಲ್ರು ಗುಂಡು ಕಲ್ಲಿನಾಂಗೆ? ಕಳೆದ ಜಾತ್ರೆಗೆ ಅಲ್ವೇನ್ಲಾ ಅವ್ರ ದೊಡ್ ಮಗ ಗುಡಿ ಕೆರೆಲಿ ಈಜಾಕೋಗಿ ನಮ್ಮೆಲ್ರ ಕಣ್ಮುಂದೆ ಮುಳ್ಗಿದ್ದು? ರ‍್ತೋಯಿತೇನ್ಲಾ? ಕೈಗೆ ಬಂದ ಮಗನ್ನ ಕಳ್ಕೊಂಡೋರೇ ಧೈರ್ಯ ಮಾಡ್ಕಂಡೋರೆ. ನಿಂದೇನ್ಲಾ ಊರ್ ಬಿಡೋ ಮನಿ ಹಾಳ್ ಯೋಚ್ನಿ?? ಹಾ..ಏನಾಗಿದೆ ನಿಂಗೆ? ನಾವೆಲ್ಲಾ ಇಲ್ವರಾ?’’ ಎಂದು ಖಾನ್ ಸಾಹೇಬ್ರು ಧ್ವನಿ ಏರಿಸಿ ಮಾತಾಡುತ್ತಿದ್ದರೆ ಪಟೇಲರು ತಮ್ಮ ಜರಿತಾರಿ ಶಲ್ಯದಿಂದ ಕಣ್ಣಂಚಲ್ಲಿ ಜಾರುವ ಕಂಬನಿಯನ್ನೊತ್ತಿ ಹಿಡಿಯುತ್ತಿದ್ದರು.

ಸೂರ್ಯನಿಗೋ ಯಾರು ಹುಟ್ಟಿದರೆಷ್ಟು? ಯಾರು ಸತ್ತರೆಷ್ಟು? ಅವನ ಕೆಲಸ ಅವನದ್ದೇ. ಬೆಳಗಿನ ಮೋಟಾರು ಗಾಡಿ ಬಂದು ಹೋದ ಸದ್ದಾಯಿತು. ಬಸವಣ್ಣನ ಅಣ್ಣನ ಮಗ ಮಲ್ಲೇಶ ಬಾಗಿಲಲ್ಲಿ ಬಂದು ನಿಂತಿದ್ದ. ನಿಧಾನಕ್ಕೆ ಬಸವಣ್ಣನ ಬಳಿಗೆ ಬಂದ. ಬೆನ್ನು ಸವರಿದ. ಅವರಿಬ್ಬರೆ ತಾನೆ ಗೋಪುವನ್ನು ಕೊನೆಯ ಬಾರಿಗೆ ನೋಡಿದವರು. ಕಾಣುತ್ತಿದ್ದಂತೇ ಕೈಜಾರಿ ಬಿದ್ದ ಗೋಪು ಅಪ್ಪಾ ಅಪ್ಪಯ್ಯಾ ಎಂದು ಕೂಗಿದ್ದೊಂದೇ ಗೊತ್ತು.

ಬಸವಣ್ಣ ಏನೂ ಹೇಳಲಿಲ್ಲ. ಪಟೇಲ್ರು ತಮ್ಮ ಜೋಬಿನಿಂದ ಒಂದು ರಶೀದಿಯನ್ನು ಹೊರತೆಗೆದು.

`ಲೋ ಬಸ್ಯಾ, ಇಗೋ ಈ ರಶೀದಿನ ಜೋಪಾನ್ವಾಗಿ ಎತ್ತಿಡ್ಕ. ನಾವೆಲ್ರೂ ಸೇರಿ ಒಂದಷ್ಟು ರೊಕ್ಕ ಜಮಾ ಮಾಡಿ ನಿನ್ ಅಕೌಂಟಿನಾಗ ಮಡ್ಗಿದೀವಿ. ಆಮ್ಯಾಕೆ ರ‍್ಕಾರದ್ ಎನಾರ ಬಂತೇನ??’

`ಯಾರ್ ಕಂಡೋರ್ ಧನಿ?? ನಾ ಮನಿ ಬಿಟ್ ಎಲ್ಲೂ …’

`ಮತ್ ಹೊಟ್ಟಿಗೇನ್ ಮಣ್ ತಿಂತಿಯೇನ್? ಯಾರಾರ ಎಷ್ಟಂತ ಕೊಡ್ತಾರ? ಕಳ್ಕಂಡದ್ ಹ್ಯಾಂಗೂ ಬರಂಗಿಲ್ಲ. ಇದ್ದುದನ್ನೂ ಬ್ಯಾಡಂತಿಯೇನ ದಡ್ಡಾ?’ ಜಮೀನ್ ಮಾರಿ ಎಲ್ಲಿಗ್ ಹೊಂಟೆ? ಎಲ್ಲಾರ ಕೂಲಿನಾಲಿ ಮಾಡದೆ ಬಾಳಂಗಿಲ್ಲ ಅಂದ್ಮೇಗೆ ಎಲ್ಲಾದ್ರೇನು? ಮಗಿನ್ ನೆನ್ಪು ಇಲ್ಲೊಂದ್ ರೀತ್ಯಾಗ ಅಲ್ಲೊಂದು ರೀತ್ಯಾಗ ಕಾಡೂದಿಲ್ಲ ತಿಳ್ಕ’

“ ”

`ನೋಡು ನಾವ್ ಹೆಳ್ವಷ್ಟನ್ ಹೇಳ್ತು. ಇಲ್ಲಾರ ನಾವು ತಾವು ಅಂತ ಎಲ್ಲಾರು ಇದ್ದೊ.. ಹೋದಲ್ಲಿ ಎಲ್ಲಾರು ಹೊಸಬ್ರೇ..ಅಯ್ಯೋ ಮಗಿನ ಕಳ್ಕಂಡವ ಅಂತ ಯಾರೂ ರ‍್ದು ಕೂಳ್ ಹಾಕಂಗಿಲ್ಲ. ತಿಳ್ಕ. ಬನ್ನಿ ಪಟೇಲ್ರ. ಹೊರಡೋಣು.’ ಎನ್ನುತ್ತಾ ಖಾನ್ ಸಾಹೇಬ್ರು ಹಿಂದೆ ಕೈ ಕಟ್ಕೊಂಡು ಹೊರಟರು. ಪಟೇಲ್ರು ಅವರ ಹೆಜ್ಜೆಗೆ ಜೊತೆಯಾದರು.

*****

ಬರ‍್ವೆಲ್‌ನಲ್ಲಿ ನೀರು ಬರಲಿಲ್ಲ. ಸಾವಿರಗಟ್ಟಲೆ ದುಡ್ಡು ಕೊಳವೆಯಾಕಾರದಲ್ಲಿ ಭೂಮಿಯೊಳಗೆ ಕುಳಿತು ಅಣಕಿಸುವಂತಿತ್ತು.. `ಅಯ್ಯೋ ಶಿವ್ನೇ ಇದ್ರ ಮೇಲೇ ಏನೋ ಮುಚ್ಚಿ ಇಟ್ಟಿದ್ನಲ್ಲಪ್ಪಾ? ಯಾರು ತೆಗ್ದೋರು? ಯಾರಾರು ಹುಡುಗ್ರು ಕಾಲ್ ಜಾರಿದ್ರೆ?’ ಅನ್ನುತ್ತಾ ಭಯದಲ್ಲಿಯೇ ಓಡಿದ ಬಸವಣ್ಣ. ಮಲ್ಲೇಶನ ಹೆಗಲಿಂದ ಇಳಿದ ಗೋಪು ಅವನಿಗಿಂತಲೂ ವೇಗವಾಗಿ ಓಡಿ ಬಂದದ್ದು ತಿಳಿಯಲೇ ಇಲ್ಲ ಬಸವಣ್ಣನಿಗೆ. ಓಡುತ್ತಿದ್ದ ಗೋಪುವಿಗೆ ದಾರಿಯಲ್ಲಿ ತೂಕಡಿಸುತ್ತಿದ್ದ ಕಲ್ಲು ಕಾಣಲೇ ಇಲ್ಲ. `ಲೇ ಮಗ್ನೇ, ಗೋಪು ಓಡಬ್ಯಾಡ್ವೋ.. ನಿಲ್ಲೋ ‘ಎನ್ನುತ್ತಾ ಬಸವಣ್ಣನು ಪಂಚೆ ಎತ್ತಿ ಹಿಡಿಯುತ್ತಾ ಕೂಗುವುದಕ್ಕೂ ಗೋಪು ಕಲ್ಲು ಎಡವಿ ಬಾವಿಯೊಳಗೆ ಬೀಳುವುದಕ್ಕೂ ತಾಳೆಯಾಯಿತು. ಬಸವಣ್ಣ ಓಡಿದ ವೇಗಕ್ಕೆ ಹೆಗಲಲ್ಲಿದ್ದ ಬೈರಾಸು ಆಗಲೇ ಎಲ್ಲೋ ಗಾಳಿಯಲ್ಲಿ ಹಾರಿಹೋಗಿತ್ತು. ಮಗ ಬಿದ್ದೊಡನೆ ಬಸವಣ್ಣ ಬೈರಾಸು ಇಳಿಸಿ ಹಿಡಿಯಲು ಯೋಚಿಸಿದ್ದು ವ್ಯರ್ಥವಾಯಿತು. ತಂದಿಳಿಸಿದ ಹಗ್ಗವೂ ಮೂರು ತುಂಡಾಯಿತು..ಅಪ್ಪಾ ಅಪ್ಪಯ್ಯಾ ನಾನಿಲ್ಲಿದ್ದೆ.. ಎನ್ನುವ ಕೂಗು ಕ್ಷೀಣವಾಗುತ್ತಿತ್ತು. ಆಮೇಲಿನದ್ದು ಜಗಜ್ಜಾಹಿರಾದ ವಿಷಯ.

***

ದಿನಗಳಿಗೇನು? ಉರುಳಿಕೊಂಡೇ ಚಲಿಸುತ್ತವೆ. ಸಂಜೆಯ ಬಿಸಿಲಿನೊಂದಿಗೆ ಮಂದಣ್ಣ ಒಬ್ಬನೇ ಬಂದಿದ್ದ. ಮಂಚದ ಮೇಲೆ ಕುಳಿತು ತೂಕಡಿಸುತ್ತಿದ್ದ ಬಸವಣ್ಣನ ಪಕ್ಕದಲ್ಲಿಯೇ ಕುಳಿತು ಭುಜವನ್ನೊಮ್ಮೆ ಅದುಮಿದ.

`ಏನ್ ಯೋಚ್ನೆ ಮಾಡಿದ್ಯೋ ಬಸ್ಯಾ?? ನೀನ್ ಜಮೀನ್ ಮಾರಿದ್ರ ಅವರಿಗ್ ಮೂಗ್ ತರ‍್ಸೋಕ್ ನಾವೇ ಜಾಗ ಮಾಡ್ಕೊಟ್ಟಂಗಾತ್ತೋ. ಏನೋ ಕೈಗಾರಿಕಿ ಮಾಡ್ತಾರಂತ ಸುದ್ದಿ. ಒಬ್ರು ಯಾರಾರ ಜಮೀನ ಮಾರಿದ್ರ ಮತ್ತ ಕೇಳುದ ಬ್ಯಾಡ. ನಿಂಗ ಈ ಸಲ ಹೊಲಕ್ಕ ಹೋಗಾಕ ಆಗಾಕಿಲ್ಲಂದ್ರೆ ಬಿಡು. ನಾನೇ ಮುಂದೆ ನಿಂತು ಕಟಾವೆಲ್ಲ ಮಾಡಿಸ್ತಿನಂತೆ. ಭೂಮಿತಾಯಿನ ಮಾತ್ರ ಮಾರಂಗಿಲ್ಲ ನೀನು ನೋಡು.’

“ ”

`ಉಸ್ಸಪ್ಪಾ..’ ಎನ್ನುವ ದನಿ ಬಂದ ಕಡೆಗೆ ಇಬ್ಬರೂ ತಿರುಗಿದರು. ಬಸವಣ್ಣನ ಮೇಷ್ಟ್ರು ಮುದುಕ ಕಾಕಣ್ಣ ಬಂದು ಇನ್ನೊಂದು ಮಂಚದ ಮೇಲೆ ಕುಳಿತು ಸುಧಾರಿಸಿಕೊಳ್ಳತ್ತಿದ್ದರು. ಬಸವಣ್ಣ ಎದ್ದು ಒಮ್ಮೆಲೆ ಅವರ ಕಾಲ ಮೇಲೆ ದೊಪ್ಪೆಂದು ಬಿದ್ದು ಜೋರಾಗಿ ಅಳತೊಡಗಿದನು.

`ಇನ್ನಾ ಬತ್ತಿ ಹೋಗಿಲ್ಲೇನು ನಿನ್ ಕಣ್ಣೀರು? ದೇವ್ರು ಕಣ್ ಬಿಟ್ಟರ ಇನ್ನೂ ಒಂದು ಮಗಿನ ಪಡೀಬೋದು ಕಣ್ಲಾ.. ಅಲ್ದೇ ಹೋದ್ರ ಒಂದು ಅನಾಥ ಮಗಿನ ತಂದು ಮಡಿಕ್ಕೋಬೋದು. ಏಟೊಂದು ಕೂಸುಗಳು ಅಪ್ಪ ಅವ್ವ ಇಲ್ದೇನೆ ಬದುಕು ಮುಗಿಸ್ತಾವು? ಪ್ರಪಂಚದೊಳ್ಗ ನಂದೇ ದೊಡ್ ದುಃಖ ಅಂತ ಎಣಿಸಿದರ ಹಿಂಗಾ ಆಗೋದು.. ನಾನಿಲ್ವರಾ ಇನ್ನಾ ಬದುಕ್ಕೊಂಡು ..’

“ ”

ಕಾಕಾ ಮೇಷ್ಟ್ರು ಕತೆ ಯಾರಿಗೆ ಗೊತ್ತಿಲ್ಲ? ಈ ಊರಿನವರಲ್ಲದಿದ್ದರೂ ಈ ಊರಿನವರಾಗೇ ಬದುಕಿದವರು. 23ನೇ ವರ್ಷಕ್ಕೆ ಮೇಷ್ಟ್ರ ಕೆಲಸದ ಮೇಲೆ ಟ್ರಾನ್ಸ್ಫರ್ ಆಗಿ ಬಂದವರು ಈ ಊರಿನ ಚೆನ್ನೇಗೌಡ್ರ ಮಗಳನ್ನೇ ಮದುವೆಯಾಗಿ 4 ಎಕರೆ ಭೂಮಿಯನ್ನು ಕೊಂಡುಕೊAಡು ಕಲಿಕೆಗೂ ಸೈ ಗಳಿಕೆಗೂ ಸೈ ಅನ್ನಿಸಿಕೊಂಡವರು. ಒಬ್ಬನೇ ಮಗ ಸಂಗಮೇಶ ದೇಶ ಕಾಯೋ ಸೈನಿಕನಾದ. ಇಬ್ಬರು ಹೆಣ್ಣು ಮಕ್ಕಳಿಗೆ ಅನುಕೂಲಸ್ಥರನ್ನೇ ನೋಡಿ ಮದುವೆ ಮಾಡಿಕೊಟ್ಟವರು. ಆಸ್ತಿಯಲ್ಲಿ ಪಾಲು ಬೇಡವೆಂದ ಮಗ. ಆದರೂ ಒಂದು ಎಕರೆ ಜಮೀನು ಅವನಿಗಿಟ್ಟು ಉಳಿದುದನ್ನು ಹೆಣ್ಣು ಮಕ್ಕಳಿಗೆ ಹಂಚಿದರು. ಊರವರೆಲ್ಲಾ ಬೇಡವೆಂದರೂ ಬೇಗನೇ ನಿವೃತ್ತಿ ತಗೊಂಡು ಊರು ಬಿಟ್ಟು ಹೆಣ್ಮಕ್ಕಳ ಮನೆಗೆ ಹೋಗಿ ಉಳಿದುಕೊಂಡವರು. ಗೋಪು ತೀರಿಕೊಂಡಾಗ ಬಾರದಿದ್ದ ಮೇಷ್ಟ್ರು ಇಂದೇಕೆ ಇದ್ದಕ್ಕಿದ್ದಂತೆ ಇಲ್ಲಿ? ಎಂದು ಬಸವಣ್ಣನಿಗೂ ಆಶ್ರ‍್ಯವಾಗದಿರಲಿಲ್ಲ.

`ಲೇ ಬಸ್ಯಾ ಮಕ್ಳು ಮರಿ ಅಂತೆಲ್ಲಾ ತುಂಬಾ ಹಚ್ಕೊಬರ‍್ದು ಕಣ್ಲಾ.. ನೀವೆಲ್ಲಾ ಗಿಣಿಗ ಹೇಳ್ದಂಗೆ ಹೇಳಿದ್ರಿ.. ಊರು ಬಿಡಬ್ಯಾಡ್ರಿ ಅಂತ. ನಾ ಕೇಳ್ನಾ..? ಈಗ ಗೊತ್ತಾತು ಬಿಡು. ಅದು ಹಂಗೇ ಅಲ್ದಾ ಎಲ್ಲ ಕಳ್ಕಂಡ್ಮೇಲೇ ಬುದ್ದಿ ಬರೋದು ಮನ್ಶಂಗೆ.. ಲೋ ಬಸ್ಯಾ.. ಸಂಗಮೇಶ ಹೊಂಟೋದ ಕಣೋ..’’ ಎನ್ನುತ್ತಾ ಮುಖ ಮುಚ್ಚಿಕೊಂಡು ಗೋಳೋ ಅಂತ ಅಳತೊಡಗಿದರು..

`ಎಲೇ ಶಿವ್ನಾ… ಏನಂದ್ರೀ ಮೇಷ್ಟ್ರೇ??’ ಎನ್ನುತ್ತಾ ಎದ್ದು ಪಕ್ಕದಲ್ಲಿ ಕುಳಿತ ಬಸವಣ್ಣನನ್ನು ತಬ್ಬಿಕೊಂಡು ಜೋರಾಗಿಯೇ ಅತ್ತರು ಕಾಕಮೇಷ್ಟ್ರು . ಈಗ ಸಮಾಧಾನ ಮಾಡುವ ಸರದಿ ಬಸವಣ್ಣನದು.

`ಏನಾತು ಮೇಷ್ಟ್ರೆ, ಸಂಗಮೇಶಗೆ ಏನಾತು?’

`ಏನ್ ಯೋಳ್ಳಿ ಬಸ್ಯಾ? ನಿನ್ ಮಗ ಬಾವಿಗ ಬೀಳೊ ಎಲ್ಡು ದಿನ ಮುಂಚೆನೇ ನನ್ ಮಗ ತರ‍್ಕಂಡ ಸುದ್ದಿ ಬಂದಿತ್ತು. ಅದೇನೋ ಗಡಿನಾಗ ಆಕ್ರಮಣ ಮಾಡ್ತಿದ್ರಂತ.. ಇವ ಯರ‍್ನೋ ಉಳ್ಸೊಕೊಗಿ ಇವ್ನೇ ಬಲಿಯಾಗವ್ನೆ. ಅಯ್ಯೋ.. ಏನೂ ಉಳ್ದರ‍್ಲಿಲ್ಲ ಬಸ್ಯಾ. ಅಂಗೆ ಮುದ್ದೆ ಮಾಡಿ ಕಳ್ಸಿಕೊಟ್ಟಿದ್ರು. ಎಲ್ಲ ಮುಗಿತೋ ಬಸ್ಯಾ…’ ಮುದುಕನ ಕಣ್ಣೀರ ಬಿಸಿ ಬಸವಣ್ಣನ ಜೀವವನ್ನೇ ಕುದಿಸಿತು. ಸ್ವಲ್ಪ ಹೊತ್ತು ಅತ್ತು ತನಗೆ ತಾನೆ ಸಮಾಧಾನ ಮಾಡಿಕೊಂಡರು ಮೇಷ್ಟ್ರು.

`ಪ್ಯಾಟೆಗೆ ಹೋದ ಸ್ವಲ್ಪ ದಿನ ಎಲ್ಲವೂ ಚೆನ್ನಾಗಿತ್ತೋ ಬಸ್ಯಾ.. ಆಮ್ಯಾಕೆ ನಮ್ ಮಕ್ಳಾದ್ರೇನ್ಲಾ? ಹೊಂದಾಣಿಕೆ ಬೋ ಕಷ್ಟ. ನಮ್ಮೂರು ನಮ್ ಜನ, ನಮ್ ಭೂಮಿತಾಯಿ ಮಾತ್ರ ಸಾಯೋಗಂಟ ಜತಿಗಿತ್ತೊ. ಆಟೆಯಾ. ಮಗನ ಪಾಲಿನ್ ಭೂಮಿ ಮ್ಯಾಲ ಇಬ್ರು ಅಳಿಯಂದ್ರ ಕಣ್ಣೂ ಕಾಯ್ತಿತ್ತ. ಯಾವ್ದೇ ಕರ‍್ಣಕ್ಕೂ ಭೂಮಿ ಮಾರಂಗಿಲ್ಲ ಅಂತ ಗಲಾಟಿ ಮಾಡಿ ಎದ್ದು ಬಂದುಬಿಟ್ಟೊ ಕನ್ಲಾ. ಇವ್ಳೂ ನೊಂದ್ಕAಡವ್ಳೆ.. ಇಲ್ಲಾರ ಅವ್ರು ಇವ್ರು ಅಂತ ಯಾರಾರ ಬಂದು ಹೋಗೋರು. ಹಸು ಹಟ್ಟಿ ಅಂತ ಏನಾರ ಆತ್ತು. ಹ್ಯಾಂಗಾರು ಬಂಡಿ ಉರುಳೋಗೋದೇಯ.. ಕಾಲ ಕಳಿಯೋದೇಯ..ಬಸ್ಯಾ ಊರ್ ಬಿಡೋ ಯೋಚ್ನಿ ಮಾತ್ರ ಬಿಟ್ಬಿಡು ಮತ್ತ. ಮಂದಣ್ಣ ನೀನು ಮನಿ ಕಡೆ ಬತ್ತೀಯೋನೋ?’

`ಹ್ಞೂಂ ಮೇಷ್ಟ್ರೇ .. ಹೊರಡೋಣು ಬನ್ನಿ.. ಬತ್ತೀನೋ ಬಸ್ಯಾ.. ನಾಳೆ ನಿನ್ ಜಮೀನ್ ಕಟಾವು ಮಾಡಿಸ್ತೀನಿ. ನೀ ಊರ್ ಬಿಡೋ ಆಲೋಚನೆ ಬಿಟ್‌ಬಿಡೋದಾದ್ರ ಸಂಜಿಗೆ ಮನಿಗ್ ಬಾ..ಏನ?’

“ ”

ಬಸವಣ್ಣ ಎದ್ದು ನಿಂತು ಮೇಷ್ಟçನ್ನೇ ನೋಡುತ್ತಿದ್ದ. ದುಡಿಯೋ ಮಗನ್ನ ಯಾರೋ ದೂಡಿಕೊಂಡು ಹೋಗಿ ಬಲಿಕೊಟ್ಟ ಹಾಗಾಯ್ತು. ಛೆ ದೇವ್ರು ಯರ‍್ಯಾರಿಗೆ ಏನೆಲ್ಲಾ ಕಷ್ಟ ಬರೆದಿರತ್ತಾನೋ? ಅವನಿಗರಿವಿಲ್ಲದಂತೆಯೇ ಅವನ ಕಾಲುಗಳು ಹೊಲದ ಕಡೆಗೆ ಚಲಿಸಿದವು. ಮುಸ್ಸಂಜೆಯ ಕಿರಣಗಳ ಹೊಳಪು ತೆನೆಗಳ ಮೇಲೆ ಲಾಸ್ಯವಾಡುತ್ತಿದ್ದವು. ಬಸವಣ್ಣನ ಮನದಲ್ಲೇನೋ ಹದವಾದ ತಂಗಾಳಿ ಬೀಸಿದಂತಾಯ್ತು. ಗೋಪುವನ್ನು ಹುಡುಕತೊಡಗಿದನು.. ಜಾಗವಂತೂ ಗುರುತೇ ಸಿಗದಂತಾಗಿದೆ. ಬಸವಣ್ಣ ಎದೆಯ ಮೇಲೆ ಕೈಯಿಟ್ಟುಕೊಂಡನು. ಬೆರಳುಗಳು ಮುಷ್ಟಿಯಾದವು. `ಅಯ್ಯೋ ಯಾರೇನೇ ಯೋಳ್ಳಿ, ಇಲ್ಲಿದ್ರ ನನ್ ಮಗ ನಂಗೆ ದೆವ್ವದಂಗಾ ಕಾಡ್ತಾನ. ನನ್ ಕೈಲಿ ಆಗಕಿಲ್ಲ ಶಿವ್ನೇ.. ಆಗಾಕಿಲ್ಲ. ಅವ್ವಾ ಭೂಮಿತಾಯವ್ವ ನನ್ ಕ್ಷಮ್ಸಿ ಬಿಡು ನನ್ನವ್ವಾ..ನಾ ನಿನ್ ಮಾರಿ ಹೊಂಟೋಯ್ತೀನಿ…ಎಲ್ಲಾರ ಹಾಳಾಗೋಯ್ತೀನಿ…ಅಯ್ಯೋ ಶಿವ್ನೇ ನಾನೇನಪ್ಪಾ ಮಾಡ್ಲೀ…’ ಎನ್ನುತ್ತಾ ಅಲ್ಲೇ ಕುಸಿದು ಬಿದ್ದ ಬಸವಣ್ಣ. ಒಂದು ಹಿಡಿ ಮಣ್ಣನ್ನು ಬೊಗಸೆಯೊಳಗೆ ತೆಗೆದು ಗಾಳಿಗೆ ತೂರಿ ಬಿಟ್ಟ. ಸಂಜೆಗೆAಪಿಗೆ ಗಾಳಿಗಂಪು ಸೇರಿ ಅವನ ಮುಖ ಮೈಯ್ಯೆಲ್ಲಾ ರಾಡಿಯಾಯಿತು..ಇನ್ನೊಂದು ಬೊಗಸೆ ಮತ್ತೊಂದು ಮಗದೊಂದು..ಇನ್ನೂ ಮೊಗೆಯುತ್ತಿದ್ದನೋ ಏನೋ..ಕೈಗಳಿಗೆ ಏನೋ ಬಲವಾದ ವಸ್ತು ತಾಗಿ ನೋವಿನ ಅನುಭವವಾಯಿತು. ಕೊಳವೆಯ ಬಾಯಿ. ಬಸವಣ್ಣ ಮೈಮರೆತ. ಅಲ್ಲೇ ಬಾಗಿ ಬಾವಿಯ ಬಾಯಿಗೆ ಕಿವಿಗೊಟ್ಟು ಆಲಿಸತೊಡಗಿದ.

`ಅಪ್ಪಾ ಅಪ್ಪಯ್ಯಾ ನಾನಿಲ್ಲದ್ದೆ ಅಪ್ಪಯ್ಯಾ..ಇಲ್ನೋಡು…ಇಲ್ಲೇ ಇದೀನಿ ಅಪ್ಪಯ್ಯಾ..ನಂಗೇನೂ ಆಗಿಲ್ಲ ಅಪ್ಪಯ್ಯಾ…ಕೈಗೊಂದಷ್ಟು ಏಟಾಗಿದ್ದಷ್ಟೆ. ನೀ ಅಳ್ಬೇಡ ಅಪ್ಪಯ್ಯಾ… ಅಮ್ಯಾಕೆ ನನ್ ಬಿಟ್ಟ್ ನೀ ಎಲ್ಲೂ ಹೊಗಬ್ಯಾಡ. ಹೋಗಕಿಲ್ಲ ಅಲ್ದ ಅಪ್ಪಯ್ಯಾ..ಅವ್ವನ್ನ ಅಕ್ಕಂದ್ರನ್ನ ಅಜ್ಜಿನ ಚೆನ್ನಾಗ್ ನೋಡ್ಕ ಅಪ್ಪಯ್ಯಾ…’

`ಲೇ ಗೋಪು..ಗೋಪು…’

`ಅಪ್ಪಯ್ಯಾ ನಾನಿಲ್ಲೆ ಇದ್ದೀನಿ ಅಪ್ಪಯ್ಯಾ..’

ಕತ್ತಲು ಎತ್ತರವಾಗತೊಡಗಿತು. ಬಸವಣ್ಣ ಎದ್ದು ನಿಂತ. ಹೆಗಲಲ್ಲಿದ್ದ ಬೈರಾಸನ್ನೊಮ್ಮೆ ಗಟ್ಟಿಯಾಗಿ ಕೊಡವಿದ..ದೀರ್ಘ ಉಸಿರನ್ನೊಮ್ಮೆ ಎಳೆದುಕೊಂಡವನೇ ನೇರ ನಡೆತೊಡಗಿದ. ನೆರಳು ಹಿಂಬಾಲಿಸತೊಡಗಿತು. ಯಾರ ನೆರಳದು?

ಆ ದಾರಿಯಲ್ಲಿ ಯಾರು ಹೇಗೆ ಹೋದರು ತಲುಪುವುದು ಮಂದಣ್ಣನ ಮನೆಯನ್ನೇ.

ಪ್ರಜ್ಞಾ ಮಾರ್ಪಳ್ಳಿ
ಭೂಮಿ ಪ್ರೀತಿ ನನ್ನ ಅಜ್ಜಿಯ ಕೊಡುಗೆ.. ಬದುಕಿನುದ್ದಕ್ಕೂ ಭೂಮಿಯೊಂದಿಗೆ ಗೇಯುವ ರೈತರ ಬಗ್ಗೆ ಎಲ್ಲರಿಗಿಂತ ಹೆಚ್ಚು ಕಾಳಜಿ. ನಾಗರೀಕತೆಯ ನಾಗಾಲೋಟಕ್ಕೆ ಬೇರೆ ಬೇರೆ ಕಾರಣಗಳಿಂದಾಗಿ ಬಲಿಯಾಗುತ್ತಿರುವವನು ರೈತ. ಕೊಳವೆ ಬಾವಿಯ ದುರಂತ ಅದರಲ್ಲಿ ಒಂದು. ಅದರ ಸಂಕಟವನ್ನು ಅನುಭವಿಸಿ ಹೊರಹಾಕುವ ಪ್ರಯತ್ನವಷ್ಟೇ ಇದು. ರೈತನಷ್ಟೇ ಪ್ರೀತಿ ಅಭಿಮಾನ ಸೈನಿಕರ ಮೇಲೂ ಇರುವುದರಿಂದ ಕಳೆದುಕೊಳ್ಳುವವರ ನೋವಿನ ಭಾಗವಾಗಿ ಕತೆಯೊಳಗೆ ಮೇಷ್ಟ್ರು ಪ್ರಸ್ತಾಪವಾಗಿದ್ದಾರೆ. ನನ್ನೊಳಗಿನ ಸಂವೇದನೆಯನ್ನು ಓದುಗನಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎನ್ನುವ ಆತ್ಮತೃಪ್ತಿ ನನ್ನದು.