“ನೀವು ಸಂಡೇ ಬರ್ತೀವಿ ಅಂತ ಹೇಳಿದ್ದೀರಿ. ಯಾವ ಸಮಯ ಬರ್ತೀರಿ? ಅಂತ ಗೊತ್ತಾಗಲಿಲ್ಲ. ಸಮಯ ಗೊತ್ತಾದರೆ ನಾನು ಅವರಿಗೆ ಫೋನ್‌ ಮಾಡಿ ತಿಳಸ್ತೀನಿ. ಅವರೂ ತಯಾರಿ ಮಾಡ್ಕೋಬೇಕಲ್ಲ? ಹಂಗೇ ದಿಢೀರ ಅಂತ ಅವರ ಮನೆಗೆ ಹೋದರೆ ಸರಿ ಇರೋದಿಲ್ಲ? ಒಬ್ಬರೇ ಬರ್ತೀರಾ ಇಲ್ಲ ಮನೆಯವರಿಗೂ ಕರೆದುಕೊಂಡ ಬರ್ತೀರಾ? ಬೈಕ್ ಮೇಲೆ ಬರ್ತೀರಾ ಇಲ್ಲವೇ ಕಾರ ತೊಗೊಂಡು ಬರ್ತೀರಾ?” ಅಂತ ಬಿಟ್ಟು ಬಿಡದೆ ಪ್ರಶ್ನಿಸಿದ. ರಾಜೇಂದ್ರನಿಗೆ ಮತ್ತೆ ದಿಗಿಲು ಮೂಡಿತು “ಎಲ್ಲಿಗೆ ಬರೋದು?” ಅಂತ ತೀಕ್ಷ್ಣವಾಗಿ ಪ್ರಶ್ನಿಸಿದ.
ಶರಣಗೌಡ ಬಿ ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

ರಾಜೇಂದ್ರ ಒಬ್ಬ ಸರಕಾರಿ ನೌಕರ. ಶಿಸ್ತು ಸಮಯಪಾಲನೆಗೆ ಹೆಸರಾದವನು. ಆತನಿಗೆ ಮುಂಜಾನೆ ಡ್ಯೂಟೀಗಿ ಹೋಗಲು ಸ್ವಲ್ಪ ತಡವಾದರೂ ಮನಸ್ಸಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಯಾವತ್ತಾದರು ತಡವಾದರೆ ಒಂದೇ ಸವನೆ ಗೊಣಗುತ್ತಾ ನಿಮ್ಮಿಂದಲೇ ನನಗೆ ತಡಾ ಆಯಿತು ಅಂತ ಮನೆಯವರ ಮೇಲೆಯೇ ಸಿಡಿಮಿಡಿಗೊಳ್ಳುತಿದ್ದ. ಅವನ ಶಿಸ್ತು ಸಮಯ ಪಾಲನೆ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ. ಇನ್ನೂ ಕಛೇರಿ ತೆರೆಯುವ ಐದು ನಿಮಿಷ ಮುಂಚಿತವಾಗೇ ಹಾಜರಿರುತಿದ್ದ. ರಾಜೇಂದ್ರನ ಸಮಯ ಪ್ರಜ್ಞೆ ನೋಡಿ ಕಛೇರಿಯವರು ಕೂಡ ಆಗಾಗ ತಾರೀಫ ಮಾಡುತ್ತಿದ್ದರು. ರಾಜೇಂದ್ರನಂತೆ ಎಲ್ಲರೂ ಸಮಯ ಪ್ರಜ್ಞೆ ಬೆಳೆಸಿಕೊಳ್ಳಿ ಅಂತ ಕಛೇರಿ ಅಧಿಕಾರಿ ತಮ್ಮ ಸಿಬ್ಬಂದಿಗಳಿಗೆ ಸಲಹೆ ಕೊಡುತ್ತಿದ್ದರು.

ರಾಜೇಂದ್ರನಿಗೆ ಕಛೇರಿಯಲ್ಲಿ ಅಷ್ಟೇ ಅಲ್ಲದೆ ಊರು ಕೇರಿ ಜನ ಕೂಡ ತಾರೀಫ ಮಾಡುತ್ತಿದ್ದರು. ಇಂಥಹ ವ್ಯಕ್ತಿ ಊರಲ್ಲಿ ಯಾರೂ ಇಲ್ಲ ಅಂತ ಹೇಳುತಿದ್ದರು.

ರಾಜೇಂದ್ರನ ಕುಟುಂಬ ಚಿಕ್ಕ ಚೊಕ್ಕ ಕುಟುಂಬ. ತಂದೆ ತಾಯಿ ಹೆಂಡತಿ ಮಗನೊಂದಿಗೆ ಉಂಡುಟ್ಟು ಯಾವುದೇ ಕೊರತೆ
ಇಲ್ಲದಂತೆ ಸುಖಿ ಜೀವನ ನಡೆಸುತ್ತಿದ್ದ. ಕೈತುಂಬ ವೇತನದ ಜೊತೆಗೆ ಹೊಲ ಗದ್ದೆಯಿಂದಲೂ ಆದಾಯ ಬರುತಿತ್ತು. ಓದು ಮುಗಿಸಿದ ಕೆಲವೇ ವರ್ಷಗಳಲ್ಲಿ ನೌಕರೀ ಕೂಡ ದೊರಕಿತು ಮಗನಿಗೆ ನೌಕರಿ ಸಿಕ್ಕಿದ್ದು ತಂದೆ ತಾಯಿಗೂ ಖುಷಿಯಾಯಿತು. ಸಧ್ಯ ರಾಜೇಂದ್ರನಿಗೆ ಮದುವೆ ಮಾಡಬೇಕು; ಹೇಗೂ ನೌಕರಿಯೂ ಸಿಕ್ಕಿದೆ ಅಂತ ಶಂಕರೆಪ್ಪ ಯೋಚಿಸಿ ಬೇರೆ ಬೇರೆ ಕಡೆ ಮಗನಿಗೆ ಕನ್ಯಾ ತೋರಿಸಿದ. ಆದರೆ ಯಾವದೂ ಇಷ್ಟವಾಗಲಿಲ್ಲ. ಊರಿನ ಗಣ್ಯ ವ್ಯಕ್ತಿಯಾದ ದೊಡ್ಡಮನಿ ದೇವರಾಯನಿಗೆ ಈ ವಿಷಯ ಗೊತ್ತಾಗಿ ನನ್ನ ಮಗಳಿಗೆ ರಾಜೇಂದ್ರನಿಗೆ ಕೊಟ್ಟು ಮದುವೆ ಮಾಡಿದರೆ ಹೇಗಾಗುತ್ತದೆ? ಆತ ಒಳ್ಳೆ ಸ್ವಭಾವದ ಹುಡುಗ. ನನಗೂ ಒಬ್ಬಳೇ ಮಗಳು, ಅವರು ನಮ್ಮ ಅಂತಸ್ತಿಗೆ ಸರಿ ಸಾಟಿ ಇಲ್ಲದಿದ್ದರು ಪರವಾಗಿಲ್ಲ ಹುಡುಗ ಸರಿಯಾಗಿದ್ದಾನೆ ಅಂತ ಯೋಚಿಸಿ ಒಂದಿನ ಮುದ್ದಾಮ ಅವರ ಮನೆಗೆ ಬಂದು ನೆಂಟಸ್ಥನದ ಬಗ್ಗೆ ವಿಚಾರಿಸಿದ. ದೊಡ್ಡ ಮನೆತನದ ಸಂಬಂಧ; ತಿರಸ್ಕಾರ ಮಾಡೋದು ಬೇಡ ಅಂತ ಶಂಕರೆಪ್ಪ ಯೋಚಿಸಿ ಮಗನ ಒಪ್ಪಿಗೆ ಕೇಳಿದಾಗ ಆತನೂ ಧೂಸರಾ ಮಾತಾಡದೆ ತಲೆಯಾಡಿಸಿದ.

ಒಂದಿನ ಊರಿನ ಶಿವನ ದೇವಾಲಯದಲ್ಲಿ ದೇವರಾಯ ಇವರ ಮದುವೆಯನ್ನ ಅದ್ಧೂರಿಯಾಗಿ ಮಾಡಿ ಮುಗಿಸಿದ. ಊರ ಜನ ಅಕ್ಷತೆ ಹಾಕಿ ವಧು-ವರರನ್ನು ಹರಿಸಿದರು. ಇದ್ದೂರಿನ ನೆಂಟಸ್ಥನದಿಂದ ರಾಜೇಂದ್ರನಿಗೂ ಅನುಕೂಲವೇ ಆಯಿತು. ಮಾವನ ಕಡೆಯಿಂದ ಎಲ್ಲ ರೀತಿಯ ಸಹಾಯ ಸಹಕಾರ ದೊರೆಯತೊಡಗಿತು.

ಪ್ರಭಾವತಿಯ ಜೊತೆ ಮದುವೆಯಾದ ನಂತರ ರಾಜೇಂದ್ರನ ಖುಷಿಯೂ ಇಮ್ಮಡಿಯಾಯಿತು. ಮೊದಲಿಗಿಂತ ಹೆಚ್ಚು ಸ್ಪೂರ್ತಿಯಿಂದ ಕೆಲಸ ಮಾಡತೊಡಗಿದ. ಪ್ರಭಾವತಿ ಕೂಡ ಗಂಡನಿಗೆ ತಕ್ಕ ಹೆಂಡತಿಯಾಗಿ ಮನೆಗೆ ತಕ್ಕ ಸೊಸೆಯಾಗಿ ಎಲ್ಲರಿಗು ಪ್ರೀತಿ ಕಾಳಜಿ ತೋರುತಿದ್ದಳು. ಮದುವೆಯಾದ ಮರು ವರ್ಷವೇ ಮಗು ಕೂಡ ಹುಟ್ಟಿತು. ಆಗ ಮನೆ ಮಂದಿಯೇ ಖುಷಿಯಲ್ಲಿ ತೇಲಾಡಿದರು.

ಅವತ್ತು ರಾಜೇಂದ್ರ ಎಂದಿನಂತೆ ಬೇಗ ಎದ್ದು ಸ್ನಾನ ಮುಗಿಸಿ ಡ್ಯೂಟೀಗಿ ತಯ್ಯಾರಾದ. ಗೋಡೆಗೆ ತೂಗು ಹಾಕಿದ ಗಡಿಯಾರದ ಕಡೆ ಸಹಜ ಗಮನ ಹರಿಸಿದಾಗ ಸಮಯ ಒಂಭತ್ತಾಗಿದ್ದು ಕಂಡು ಬಂದಿತು. ಡ್ಯೂಟೀಗಿ ಹೋಗಲು ಇನ್ನೂ ಸ್ವಲ್ಪ ಸಮಯವಿದೆ ಅವಸರವೇನಿಲ್ಲ ಅಂತ ಭಾವಿಸಿ ಪೇಪರ ಮೇಲೆ ಕಣ್ಣಾಡಿಸಿ ಪ್ರಮುಖ ಸುದ್ದಿ ನೋಡತೊಡಗಿದ. ಪ್ರಭಾವತಿ ಇವನಿಗೆ ಬಿಸಿ ಬಿಸಿ ಉಪಹಾರ ತಂದು ಕೊಟ್ಟಳು. ರಾಜೇಂದ್ರ ಮುಗುಳ್ನಗು ಬೀರುತ್ತಾ ಉಪಹಾರ ಸೇವಿಸತೊಡಗಿದ. ಕೈಯಲ್ಲಿನ ವಾಚು ನೆನಪಿಗೆ ಬಂದು ಅರೇ ನಿನ್ನೆ ರಾತ್ರಿ ಮಲಗುವಾಗ ವಾಚ್ ಬೆಡ್ ರೂಮ ಟೇಬಲ್ ಮೇಲಿಟ್ಟಿದ್ದೇನೆ ಅಂತ ಯೋಚಿಸಿ ವಾಚ್ ತೆಗೆದುಕೊಂಡು ಬರಲು ಮಗನಿಗೆ ಸೂಚಿಸಿದ. ಅದರಲ್ಲಿ ಸಮಯ ನೋಡಿದಾಗ ಒಂಬತ್ತು ಹದಿನೈದಾಗಿದ್ದು ಗೊತ್ತಾಯಿತು. ಗೋಡೆ ಗಡಿಯಾರ ಯಾಕೋ ಹದಿನೈದು ನಿಮಿಷ ಕಡಿಮೆ ತೋರಿಸ್ತಿದೆ ಈ ಎರಡರಲ್ಲಿ ಯಾವದು ಹಿಂದು ಮುಂದಾಗಿದೆ? ಅಂತ ಗೊಂದಲ ಮೂಡಿತು.

“ಅಪ್ಪ ಸಮಯ ಒಂಭತ್ತು ಹದಿನೈದಾಗಿದೆ.” ಅಂತ ಪ್ರಸನ್ನ ತನ್ನ ಕೈಯಲ್ಲಿನ ವಾಚು ಪರೀಕ್ಷಿಸಿ ಹೇಳಿದಾಗ “ಹೌದಾ ಅಂದರೆ ಗೋಡೇ ಗಡಿಯಾರದ್ದೇ ಏನೋ ದೋಷವಿದೆ. ಬಹುಶಃ ಶೆಲ್ ವೀಕ್ ಆಗಿರಬೇಕು. ಹೋದ ವರ್ಷ ಹಾಕಿದ್ದೆ…” ಅಂತ ಅದನ್ನು ಸರಿಪಡಿಸಲು ಹೇಳಿದ.

ಅಷ್ಟರಲ್ಲಿ ಚಾರ್ಜಿಗಿಟ್ಟ ಮೊಬೈಲ್ ಕೂಡ ರಿಂಗಾಯಿತು. ಫೋನ್ ರಿಂಗಾಗ್ತಿದೆ ಅಂತ ಉಪಹಾರ ತಿನ್ನೋದು ಬಿಟ್ಟು ಮೇಲೇಳುವಾಗ ನಾನು ನೋಡ್ತೀನಿ ನೀವು ನಾಷ್ಟಾ ಮಾಡಿ ಅಂತ ಪ್ರಭಾವತಿ ಒಳಹೋಗಿ ಬಂದ ಕರೆ ರಿಸೀವ್‌ ಮಾಡಿದಳು. ಮರು ಕ್ಷಣ ಕರೆ ಕಟ್ ಮಾಡಿ ಸಿಟ್ಟಿನಿಂದ ಮುಖ ಕೆಂಪಗೆ ಮಾಡಿಕೊಂಡು ಮೋಬೈಲ್‌ ತಂದು ಗಂಡನ ಕೈಗಿಟ್ಟಳು. ಅವಳ ಮುಖದಲ್ಲಿ ವಿಪರೀತ ಕೋಪ ತಾಪ ಕಂಡು ಬಂದಿತು. ಹೆಂಡತಿಯ ಮುಖ ನೋಡಿ ರಾಜೇಂದ್ರನಿಗೆ ಯಾವದೂ ತೋಚದೆ ಗಾಬರಿಯಾದ.

ಯಾಕೆ ಏನಾಯಿತು? ಯಾರದು ಫೋನ್ ಅಂತ ಪ್ರಶ್ನಿಸಿದ. ಪ್ರಭಾವತಿ ಯಾವುದೇ ಉತ್ತರ ಕೊಡದೆ ಮುಖ ತಿರುವಿಕೊಂಡು ಬಿರಬಿರನೇ ಹಾಗೇ ಒಳ ಹೋದಳು.

ಇವಳಿಗ್ಯಾಕೆ ಕೋಪ ಬಂದಿದೆ? ವಿಷಯ ಏನಿರಬೇಕು? ಸಧ್ಯ ವಿಚಾರಿಸುತ್ತಾ ಕುಳಿತರೆ ಡ್ಯೂಟೀಗಿ ಹೋಗಲು ತಡಾ ಆಗ್ತದೆ.
ಸಾಯಂಕಾಲ ಡ್ಯೂಟಿ ಮುಗಿಸಿ ವಾಪಸ್ ಬಂದ ಮೇಲೆ ಸಮಾಧಾನದಿಂದ ಕೇಳಿ ವಿಷಯ ತಿಳಿಯಬೇಕು ಅಂತ ಯೋಚಿಸಿ ಊಟದ ಡಬ್ಬಿ ಬ್ಯಾಗಿಗೆ ಹಾಕಿಕೊಂಡು ಹೊರ ಬಂದ.

“ಇವತ್ತು ಡ್ಯೂಟಿಗಿ ಹೊರಡಲು ಹದಿನೈದು ನಿಮಿಷ ತಡವಾಯಿತು. ಗೋಡೆ ಗಡಿಯಾರ ಸರಿಯಾದ ಸಮಯ ತೋರಿಸಿದ್ದರೆ ಹೀಗಾಗುತ್ತಿರಲಿಲ್ಲ ನಾನೆಂದೂ ಡ್ಯೂಟೀಗಿ ತಡವಾಗಿ ಹೋದವನಲ್ಲ, ದಾರಿಯಲ್ಲಿ ಬೈಕಿನ ವೇಗ ಹೆಚ್ಚಿಸಿಕೊಂಡು ಸರಿಯಾದ ಸಮಯ ಹಾಜರಾಗಬೇಕು..” ಅಂತ ಬೈಕ್‌ ಚಾಲೂ ಮಾಡಿದ. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಜೇಬಿನಲ್ಲಿದ್ದ ಮೊಬೈಲ ಮತ್ತೆ ರಿಂಗಾಯಿತು. ಇದು ಈಗಲೇ ರಿಂಗಾಗ್ತಿದೆಯಲ್ಲ. ಮೊದಲೇ ಸಮಯ ಆಗಿದೆ ಅಂತ ಬೇಸರದಿಂದ ಮೊಬೈಲ ಹೊರ ತೆಗೆದು ನೋಡಿದ. ಅದು ಯಾವದೋ ಹೊಸ ನಂಬರ ಆಗಿದ್ದು ಗೊತ್ತಾಯಿತು. ಇದ್ಯಾವ ನಂಬರ್? ಒಮ್ಮೆಯೂ ಬಂದಿಲ್ಲ.. ನನ್ನ ಮೋಬೈಲಿನಲ್ಲಿ ಸೇವ್ ಕೂಡ ಇಲ್ಲ, ಸೇವ್ ಇದ್ದಿದ್ದರೆ ಯಾರದು ಅಂತ ಗೊತ್ತಾಗ್ತಿತ್ತು. ಯಾವದೋ ದಾರಿ ತಪ್ಪಿ ಬಂದ ಕಾಲ್ ಇರಬೇಕು, ಸಧ್ಯ ರಿಸೀವ್ ಮಾಡೋದೇ ಬೇಡ. ಮತ್ತೆ ತಡಾ ಆಗ್ತದೆ ಅಂತ ಅದನ್ನು ಹಾಗೆ ಜೇಬಿಗಿಳಿಸಿದ.

ಬೈಕ್ ಮುಂದೆ ಸಾಗಿತು. ಸ್ವಲ್ಪ ದೂರ ಹೋದಾಗ ಮೊಬೈಲ್‌ ಮತ್ತೆ ರಿಂಗಾಯಿತು. ಯಾಕೋ ಇದು ಪದೇ ಪದೇ ಬರ್ತಿದೆ. ರಿಸೀವ್‌ ಮಾಡದಿದ್ದರೆ ಇದರ ಕಿರಿಕಿರಿ ತಪ್ಪೋದಿಲ್ಲ ಹೇಗೂ ತಡಾ ಆಗಿದೆ ಅಂತ ರಿಸೀವ್‌ ಮಾಡಿ “ಹಲೋ.. ಯಾರು ಮಾತಾಡೋದು?” ಅಂತ ಪ್ರಶ್ನಿಸಿದ.

“ಅಲ್ಲ ಸರ್ ಯಾರು ಅಂತ ಕೇಳ್ತೀರಲ್ಲ? ಆಗಿನಿಂದಲೇ ಕಾಲ್ ಮಾಡ್ತಿದ್ದೀನಿ. ಎಷ್ಟು ಸಲ ಕಾಲ್ ಮಾಡೋದು? ಅಗತ್ಯ ನಿಮಗಿದೆಯೋ ನಮಗಿದೆಯೊ? ನಾನು ಯಾರಿಗೂ ಇಷ್ಟೊಂದು ಕಾಲ್ ಮಾಡೋದೇ ಇಲ್ಲ ಅವರೇ ನನಗೆ ಪದೇ ಪದೇ ಕಾಲ್ ಮಾಡ್ತಾರೆ ಅಂತ ಬೇಸರದಿಂದ ಹೇಳಿದ.

ಆತನ ಮಾತು ರಾಜೇಂದ್ರನಿಗೆ ಆಶ್ಚರ್ಯದ ಜೊತೆ ಗಾಬರಿಯೂ ಆಯಿತು. ಕಾಲ್ ಯಾರದೇ ಆಗಿರಲಿ. ಮೊದಲು ವಿಷಯ ತಿಳಿಯಬೇಕು ಅಂತ “ಏನು ವಿಷಯ ಹೇಳಿ?” ಅಂತ ರಾಜೇಂದ್ರ ಪ್ರಶ್ನಿಸಿದ.

“ನೀವು ಸಂಡೇ ಬರ್ತೀವಿ ಅಂತ ಹೇಳಿದ್ದೀರಿ. ಯಾವ ಸಮಯ ಬರ್ತೀರಿ? ಅಂತ ಗೊತ್ತಾಗಲಿಲ್ಲ. ಸಮಯ ಗೊತ್ತಾದರೆ ನಾನು ಅವರಿಗೆ ಫೋನ್‌ ಮಾಡಿ ತಿಳಸ್ತೀನಿ. ಅವರೂ ತಯಾರಿ ಮಾಡ್ಕೋಬೇಕಲ್ಲ? ಹಂಗೇ ದಿಢೀರ ಅಂತ ಅವರ ಮನೆಗೆ ಹೋದರೆ ಸರಿ ಇರೋದಿಲ್ಲ? ಒಬ್ಬರೇ ಬರ್ತೀರಾ ಇಲ್ಲ ಮನೆಯವರಿಗೂ ಕರೆದುಕೊಂಡ ಬರ್ತೀರಾ? ಬೈಕ್ ಮೇಲೆ ಬರ್ತೀರಾ ಇಲ್ಲವೇ ಕಾರ ತೊಗೊಂಡು ಬರ್ತೀರಾ?” ಅಂತ ಬಿಟ್ಟು ಬಿಡದೆ ಪ್ರಶ್ನಿಸಿದ.

ರಾಜೇಂದ್ರನಿಗೆ ಮತ್ತೆ ದಿಗಿಲು ಮೂಡಿತು “ಎಲ್ಲಿಗೆ ಬರೋದು?” ಅಂತ ತೀಕ್ಷ್ಣವಾಗಿ ಪ್ರಶ್ನಿಸಿದ.

“ಹ್ಯಾಂಗ ಕೇಳ್ತೀರಲ್ಲ ಸರ್ ಕನ್ಯಾ ನೋಡಲು, ಮತ್ತೆಲ್ಲಿಗೆ? ಹೋದ ವಾರ ನೀವೇ ಹೇಳಿದ್ದಿರಲ್ಲ. ನೆನಪು ಹೋಯಿತಾ?” ಅಂತ ಮರು ಪ್ರಶ್ನಿಸಿದ.

“ಯಾವ ಕನ್ಯೇ ಮಾರಾಯರೇ? ನೀವು ಯಾರ ಜೊತೆ ಮಾತಾಡ್ತಿದ್ದೀರಿ? ಒಮ್ಮೆ ಮೊಬೈಲ್‌ ನಂಬರ್ ಸರಿಯಾಗಿ ಪರೀಕ್ಷೆ ಮಾಡಿ ಮಾತಾಡಿ ಸುಮ್ಮನೆ ಏನೇನೋ ಹೇಳಬೇಡಿ” ಅಂತ ರಾಜೇಂದ್ರ ಸ್ವಲ್ಪ ಜೋರು ಧನಿಯಲ್ಲಿ ಹೇಳಿದ.

ರಾಜೇಂದ್ರನ ಧನಿ ಅತನಿಗೆ ಗೊತ್ತಾಗಿ “ಕ್ಷಮಿಸಿ ಸರ್ ನಾನು ಬೇರೆಯವರಿಗೆ ಫೋನ್‌ ಮಾಡಲು ಹೋಗಿ ಏನೋ ಮಿಸ್ ಆಗಿ ನಿಮಗೆ ಬಂದಿದೆ..” ಅಂತ ತಕ್ಷಣ ಆತ ಕರೆ ಕಟ್ ಮಾಡಿದ. ಫೋನ್‌ ಕರೆ ರಾಜೇಂದ್ರನಿಗೆ ನಗೆಗಡಲಲ್ಲಿ ಮುಳುಗಿಸಿತು ಅದನ್ನು ನೆನಪಿಸಿಕೊಳ್ಳುತ್ತಲೇ ಕಛೇರಿ ತಲುಪಿದ.

“ಯಾಕೆ ಸರ್ ದಿನಾ ಎಲ್ಲರಿಗಿಂತ ಬೇಗ ಬರೋರು ಇವತ್ತು ಯಾಕೆ ತಡಾ ಮಾಡಿದ್ರಿ ಅಂತ ಕಛೇರಿಯಲ್ಲಿ ಎಲ್ಲರೂ ಪ್ರಶ್ನಿಸಿದರು. ರಾಜೇಂದ್ರ ನಡೆದ ಹಕೀಕತ ಬಿಚ್ಚಿಟ್ಟು ಮುಗುಳ್ನಗು ಬೀರಿದ. ಇವನ ಮಾತಿಗೆ ಅವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟರು. ಇಡೀ ದಿನ ರಾಜೇಂದ್ರನಿಗೆ ಅದೇ ವಿಷಯ ಪದೇ ಪದೇ ನೆನಪಿಗೆ ಬಂದು ಕಾಡಿತು. ಮನೆಗೆ ಹೋದ ಕೂಡಲೇ ಮೊದಲು ಈ ವಿಷಯ ಹೆಂಡತಿಗೆ ಹೇಳಬೇಕು ಅವಳೂ ಆಶ್ಚರ್ಯ ಪಡುತ್ತಾಳೆ ಅಂತ ಯೋಚಿಸಿದ.

ರಾಜೇಂದ್ರ ಡ್ಯೂಟಿ ಮುಗಿಸಿ ಸಾಯಂಕಾಲ ಮನೆಗೆ ಬಂದಾಗ ಮನೆಯಲ್ಲಿ ಪ್ರಭಾವತಿ ಕಾಣಲಿಲ್ಲ. ಎಲ್ಲಿಗೆ ಹೋಗಿರಬಹುದು? ನನಗೆ ಹೇಳದೇ ಕೇಳದೇ ಒಂದಿನಾನೂ ಎಲ್ಲಿಗೂ ಹೋಗೋದಿಲ್ಲ, ಹೋಗೋದಿದ್ದರೆ ಫೋನ್‌ ಮಾಡೇ ಹೋಗ್ತಿದ್ದಳು ಅಂತ ಕುರ್ಚಿಯ ಮೇಲೆ ಕುಳಿತು ಶೂನ್ಯ ದಿಟ್ಟಿಸಿ ಯೋಚಿಸಿದ.

“ಪ್ರಭಾವತಿ ನಿನ್ನ ಮೇಲೆ ಸಿಟ್ಟು ಮಾಡಿಕೊಂಡು ತವರು ಮನೆಗೆ ಹೊರಟು ಹೋದಳು. ಕನ್ಯಾ ನೋಡಲು ಯಾವಾಗ ಬರ್ತೀರಿ ಅಂತ ನಿನ್ನ ಮೋಬೈಲಿಗೆ ಮುಂಜಾನೆ ಯಾರೋ ಫೋನ್ ಮಾಡಿದ್ದರಂತೆ ಹೌದಾ? ನೀನ್ಯಾಕೆ ಬೇರೆ ಮದುವೆ ಆಗ್ತಿ? ನಿನಗೇನು ತಲೆಗಿಲೆ ಕೆಟ್ಟಿದೆಯಾ? ಮುತ್ತಿನಂತ ಮಗ ಬಂಗಾರದಂಥ ಹೆಂಡತಿ ಇರುವಾಗ ಇಂತಥ ನಿರ್ಧಾರ ಯಾಕೆ?” ಅಂತ ಅಪ್ಪ ಒಳಗಿನಿಂದ ಬಂದು ಸಿಟ್ಟಿನಿಂದ ಪ್ರಶ್ನಿಸಿದ. ಪ್ರಭಾವತಿಯಂತಹ ಸೊಸೆ ಸಿಕ್ಕಿದ್ದು ನಮ್ಮ ಪುಣ್ಯ. ಹತ್ತೂರು ತಿರುಗಿದರೂ ಇಂಥಹ ಸಂಬಂಧ ಸಿಕ್ಕಿರಲಿಲ್ಲ. ಈ ನಿರ್ಧಾರ ತೆಗೆದುಕೊಳ್ಳಲು ನಿನಗ ಮನಸ್ಸಾದರು ಹ್ಯಾಂಗ ಬಂತು ಅಂತ ಅಮ್ಮ ಕೂಡ ಸಿಟ್ಟಿನಿಂದ ಪ್ರಶ್ನಿಸಿದಳು.

ಅವರ ಮಾತು ಕೇಳಿ ರಾಜೇಂದ್ರನ ತಲೆಯ ಮೇಲೆ ಆಕಾಶವೇ ಬಿದ್ದಂತಾಯಿತು. ಮುಂಜಾನೆ ದಾರಿ ತಪ್ಪಿ ಬಂದ ಫೋನ್‌ ಕರೆ ಇಷ್ಟೆಲ್ಲ ಅನಾಹುತ ಮಾಡಿದ್ದು ಅರಿವಾಯಿತು. ಸತ್ಯ ಹೇಳುವ ಮುಂಚೆಯೇ ಎಲ್ಲವೂ ಉಲ್ಟಾ ಆಗಿದೆ ಹೇಗಾದರು ಮಾಡಿ ಪ್ರಭಾವತಿಗೆ ಸಮಾಧಾನ ಹೇಳಿ ವಾಪಸ್ ಕರೆದುಕೊಂಡ ಬರಬೇಕು ಅಂತ ರಾಜೇಂದ್ರ ನಿಟ್ಟುಸಿರುಬಿಟ್ಟು, ಮೆಲ್ಲನೆ ಮಾವನ ಮನೆ ಕಡೆ ಹೆಜ್ಜೆಹಾಕಿದ!!