ಎದೆ ಬೀದಿಯ ಸಾಲುಗಳು….

ನಕ್ಷತ್ರಗಳ ತುಂಬು
ಸಂಸಾರದಲ್ಲಿ ಚಂದ್ರ
ಅನಾಥ ಮಗು

ಒಲವ ಕುಡಿಸಿದರು
ಹೃದಯದ ಬಿಕ್ಕಳಿಕೆ
ನಿಂತಿಲ್ಲ, ಬಹುಷಃ
ವಿರಹ ಕಾಡಿರಬೇಕು

ಈಗೀಗ ನಾನು
ಕವಿತೆಗಳೊಂದಿಗೆ ಜೀವಿಸುತ್ತಿದ್ದೇನೆ
ನೀನು ದುಃಖಿಸುವ ಅವಶ್ಯಕತೆಯಿಲ್ಲ

ನಿನ್ನ ನೆನಪುಗಳು ಹೂವಿನಷ್ಟು ಹಗುರವಿರಬಾರದಿತ್ತೆ
ಎದೆ ಭಾರವಾಗುವುದು
ತಪ್ಪುತ್ತಿತ್ತು

ನಿನ್ನ ಉಸಿರು ತಾಕಿದ ಗಾಳಿ ನನ್ನ ಮನೆ ಮುಂದೆ ಹಾದು ಹೋಗಲಿ
ಅದರ
ಸ್ವಾಗತಕ್ಕೆಂದೆ ನಾನು ಹೀಗೆ ಕಾದು ಕುಳಿತಿರುವೆ

ನಿನ್ನ ದಾರಿಗೆ ಬೆಳಕ ಚೆಲ್ಲಿದ್ದೇನೆ
ಈಗ
ಕತ್ತಲಿನ ಭಯವಿಲ್ಲ
ನನಗೆ

ನಿನ್ನ ನೆನಪಿನ
ಬೆಳಕಲಿ ಕಳೆದುಕೊಂಡ ಖುಷಿಯ
ಹುಡುಕುತ್ತಿದ್ದೇನೆ

ನೀನು
ಬಿಟ್ಟು ಹೋಗಿದ್ದು
ಎದೆ ತುಂಬ ನೋವು
ತುಟಿ ಮೇಲೆ ಮೌನ

ಎಷ್ಟು ತಾರೆಗಳು ಒಂದು ಮುಗಿಲಿಗೆ
ಅದೆಷ್ಟು ನೋವು ಒಮ್ಮೆ ಸೋತ ಪ್ರೀತಿಗೆ

ಗಾಳಿ ಬರೀ
ಬೀಸಿದರೆ ಪರವಾಗಿಲ್ಲ
ನಿನ್ನ ನೆನಪು
ಹೊತ್ತು ತರದಿದ್ದರೆ
ಸಾಕು

ಸಂಪೂರ್ಣ ಮರೆತು ಬಿಡಬೇಕು ಎಂದಾಗಲೆಲ್ಲ
ನೆನಪುಗಳು
ಎದೆ ಬೀದಿಗಿಳಿದು
ಪ್ರತಿಭಟನೆಗೆ ನಿಲ್ಲುತ್ತವೆ….

ಬಿದ್ದ ಹೂಗಳನ್ನು
ಆಯಬಲ್ಲೆ ನೀನು
ಒಡೆದು ಬಿದ್ದ ಹೃದಯದ
ಪಕಳೆಗಳ


ಚಳಿಗಾಲದ ಸಂಜೆ
ವಿರಹದ ‘ಕಿಡಿ’ಗಳು
ಧಗ್ಗನೆ ಹೊತ್ತಿಕೊಳ್ಳುತ್ತವೆ
ನಾನು
ಕವಿತೆ
ಬರೆದು ತಣ್ಣಗಾಗುತ್ತೇನೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು