”ಬರೆದದ್ದನ್ನು ನಂಗೂ ತೋರಿಸಿ ವಿವರಿಸುತ್ತಾ ಇದ್ದರು. ಚಿಕ್ಕ ಚಿಕ್ಕ ಚೀಟಿಗಳಲ್ಲಿ ಬರೆದಿಟ್ಟ ಅದೆಷ್ಟೋ ಸಾಲುಗಳು ಇನ್ನೂ ಅಲ್ಲಿ ಇಲ್ಲಿ ಇವೆ. ಈಗಲೂ ನಾವೇ ಮನಗೆ ಸಾಮಾನು ಸರಂಜಾಮು ತರೋದು. ಮೈಸೂರಿನಲ್ಲಿ ಇದ್ದಾಗಲಂತೂ ಇಂಡಿಯನ್ ಕಾಫಿ ಬಾರ್ ನಲ್ಲಿ ಇವ್ರ ಸ್ನೇಹಿತರ ಮೀಟಿಂಗ್ ನಡೀತಿದ್ದವು. ಅಲ್ಲೇ ಪದ್ಯಗಳನ್ನು ಓದೋದು, ಚರ್ಚೆ ಮಾಡೋದು ಇವೆಲ್ಲ ನಡೀತಿದ್ದವಂತೆ. ನಾನು ಮನೆಗೆ ಬೇಕಾದ ಸಾಮಾನಿನ ಪಟ್ಟಿ ಮಾಡಿ ಕೊಟ್ಟಿರುತ್ತಿದ್ದೆ. ಅದನ್ನು ಕೋಟಿನ ಜೋಬಿನಲ್ಲಿ ಇಟ್ಟುಕೊಂಡಿರೋರು”
ಬಿ.ಎಸ್.ವೆಂಕಟಲಕ್ಷ್ಮಿ ಸಂಪಾದಿಸಿದ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಪುಸ್ತಕದ ಒಂದು ಅಧ್ಯಾಯ.
ಮನೆಯ ಮುಂಭಾಗದಲ್ಲಿನ ನಾಮಫಲಕದಲ್ಲಿ ಗೋಪಾಲಕೃಷ್ಣ ಅಡಿಗರದ್ದಕ್ಕಿಂತಲೂ ದಪ್ಪಕ್ಷರಗಳಲ್ಲಿ ಬರೆದಿರುವ ಹೆಸರು – ‘ಲಲಿತಾ’. ಮಡದಿಯ ಹೆಸರನ್ನೇ ಮನೆಗೂ ಇಡಬೇಕೆಂಬ ಬಯಕೆಯಾಗಿತ್ತು ಅಡಿಗರಿಗೆ. ತಾವಿನ್ನೂ ಹನ್ನೆರಡರ ಕನ್ಯೆಯಾಗಿದ್ದಾಗಲೇ ತಮ್ಮ ಕೈಹಿಡಿದು ಬದುಕಿನ ಕೊನೆಯುಸಿರು ಇರುವವರೆಗೂ ತಮ್ಮನ್ನು ತುಂಬಾ ಅಕ್ಕರೆಯಿಂದ ನಡೆಸಿಕೊಂಡ ಪತಿ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರ ನೆನಪು ಮಾತ್ರವೇ ಲಲಿತಾ ಅವರಿಗೆ ಈಗ ಬಾಳ ಸಂಜೀವಿನಿ. ಹೊರಗಿನವರ ದೃಷ್ಟಿಗೆ ಗೋಚರವಾಗುವುದು ಗೋಡೆಯ ಮೇಲೆ ರಾರಾಜಿಸುತ್ತಿರುವ ಗೋಪಾಲಕೃಷ್ಣ ಅಡಿಗರ ದೊಡ್ಡ ಭಾವಚಿತ್ರ ಮಾತ್ರವಾದರೂ ಲಲಿತಾ ಅವರ ಮನದಲ್ಲಿ ಸ್ಥಾಯಿಯಾಗಿ ನಿಂತಿರುವುದು ತಾವು ಪತಿಯೊಂದಿಗೆ ಕಳೆದ ಹಲವಾರು ವರ್ಷಗಳಲ್ಲಿ ಜತೆಯಾಗಿ ಕಂಡ ಕನಸುಗಳು. ಒಟ್ಟಿಗೆ ನಿಭಾಯಿಸಿದ ಕಷ್ಟ ಕಾರ್ಪಣ್ಯಗಳು, ಸವಿದಂಥ ಸಿಹಿ ಸನ್ನಿವೇಶಗಳು. ಶೋಕೇಸ್ ನಲ್ಲಿಟ್ಟ ‘ಪಂಪ ಸಾಹಿತ್ಯ ಪ್ರಶಸ್ತಿ’ಯತ್ತ ನೋಡಿ ಲಲಿತಾ ನೋವು ತುಂಬಿದ ದನಿಯಲ್ಲಿ ಹೇಳುತ್ತಾರೆ: ‘ಇದನ್ನು ಅವರಿದ್ದಾಗಲೇ ಕೊಟ್ಟಿದ್ದರೆ ಅವರಿಗೆ ತುಂಬಾ ಸಂತೋಷವಾಗುತ್ತಿತ್ತೇನೋ… ನಾನದನ್ನು ಕರ್ತವ್ಯ ಎನ್ನುವಂತೆ ಅವರ ಪರವಾಗಿ ಸ್ವೀಕರಿಸಿದೆ.’
ಕಬೀರ್ ಸಮ್ಮಾನ್, ವರ್ಧಮಾನ ಪ್ರಶಸ್ತಿ, ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ನ್ಯೂಯಾರ್ಕ್ ಕನ್ನಡ ಕೂಟ, ಹ್ಯೂಸ್ಟನ್ ಕನ್ನಡ ವೃಂದ ಇವರೆಲ್ಲ ನೀಡಿದ ಗೌರವ ಫಲಕಗಳು, ಇವೆಲ್ಲವನ್ನು ಸ್ವತಃ ತಾವೇ ಸ್ವೀಕರಿಸಿದ್ದರು. ಅಡಿಗರಿಗೆ ಅವರ ‘ಸುವರ್ಣ ಪುತ್ಥಳಿ’ ಕವನ ಸಂಕಲನಕ್ಕೆ ಪಂಪ ಸಾಹಿತ್ಯ ಪ್ರಶಸ್ತಿಯ ರೂಪದಲ್ಲಿ ಮರಣೋತ್ತರವಾಗಿ ದೊರೆತ ಉತ್ಕೃಷ್ಟ ಗೌರವ. ಲಲಿತಾ ಅವರಿಗೆ ಪತಿಯ ಬಗೆಗಿನ ಸಂಗತಿಗಳು ಮತ್ತೆ ಗರಿಗೆದರಿಕೊಳ್ಳುತ್ತಿರುವ ಸಂದರ್ಭ. ‘ಎಂಥ ಕಷ್ಟಗಳು ಬಂದರೂ ಹೇಗೋ ನಿವಾರಿಸಿಕೊಳ್ಳೋ ಛಾತಿ ಅವರಿಗಿತ್ತು. ಭಂಡ ಧೈರ್ಯ, ಅನ್ಯಾಯನ ಅವರಿಗೆಂದೂ ತಡೆದುಕೊಳ್ಳೋಕೆ ಆಗ್ತಿರಲಿಲ್ಲ. ತಲೆ ಬಾಗಿಸುತ್ತ ಇದ್ದದ್ದು ಸತ್ಯಕ್ಕೆ ಮಾತ್ರ’ ಲಲಿತಾ ಅಗಲಿದ ಪತಿಯ ಸ್ವಭಾವವನ್ನು ಹೇಳತೊಡಗಿದಾಗ ಅಡಿಗರ ‘ಗುರಿ’ ಕವನದ ಸಾಲುಗಳು ನನಗೆ ನೆನಪಾಗುತ್ತವೆ:
‘ಗಾಳಿ ಬಂದೆಡೆ ತಿರುಗುವಾ ಹೇಡಿತನವು,
ದಾಳಿ ಬಂದೊಡನೆ ಶರಣೆಂಬ ಹೆಣ್ತನವು,
ಬೇಡ! ಹಿಡಿದೊಳ್ದಾರಿಯೊಳು ಕೊನೆಯವರೆಗೆ
ದೂಡು ಬಾಳ್ವೆಯನು ಪೌರುಷದ ಹೊನಲೊಳಗೆ!’
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹತ್ತಿರದ ಕಟ್ಟೇತೋಟ ಎಂಬ ಸ್ಥಳಕ್ಕೆ ಸೇರಿದ್ದ ಕೆ.ಎಸ್. ಸೂರ್ಯನಾರಾಯಣರಾವ್ ಹಾಗೂ ಲಕ್ಷ್ಮೀದೇವಮ್ಮನವರ ಆರು ಹೆಣ್ಣು ಮಕ್ಕಳ ಪೈಕಿ ಮೊದಲನೆಯರಾಗಿ ಹುಟ್ಟಿದವರು ಲಲಿತಾ (ಇವರಿಗೆ ಇಬ್ಬರು ಸೋದರರು) ತಂದೆ ಸ್ವಸ್ಥಳವನ್ನು ಬಿಟ್ಟು ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸದಲ್ಲಿದ್ದುಕೊಂಡೇ ಎಸ್.ಎಸ್.ಎಲ್.ಸಿ. ಮುಗಿಸಿದರು. ಲಲಿತಾ ಹೇಳುತ್ತಾರೆ ‘ನಾನು ಮೈಸೂರಿನ ನನ್ನಜ್ಜಿ ಮನೆಯಲ್ಲಿದ್ದಾಗ ಅಡಿಗರು ಇಂಟರ್ಮೀಡಿಯಟ್ ಓದ್ತಿದ್ದರು. ನನ್ನ ಚಿಕ್ಕಮ್ಮ, ಸೋದರಮಾವನಿಗೆ ಸಂಸ್ಕೃತ ಹೇಳಿಕೊಡಲು ಮನೆಗೆ ಬರ್ತಿದ್ದರು. ಅಲ್ಲೇ ಊಟ ಮಾಡ್ಕೊಂಡೂ ಹೋಗ್ತಿದ್ದರು. ಆಗಿನ್ನೂ ತುಂಬಾ ಪುಟ್ಟ ಹುಡುಗಿಯಾಗಿದ್ದ ನಂಗೆ ಅದೇನೋ ಕುತೂಹಲ. ಅಲ್ಲೇ ಕೂತಿರ್ತಿದ್ದೆ. ನಂಗೂ ಕೆಲವು ಅಕ್ಷರಗಳನ್ನು ಬರೆದುಕೊಟ್ಟು ತಿದ್ದಲು ಹೇಳುತ್ತಿದ್ದರು. ಅಡಿಗರು ನನ್ನ ಬಂಧುಗಳೇನಾಗಿರಲಿಲ್ಲ. ಅವರ ಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರಿ (ತಂದೆ: ಎಂ. ರಾಮಪ್ಪ ಅಡಿಗ; ತಾಯಿ: ಗೌರಮ್ಮ) ಅವರದ್ದು ಅವಿಭಕ್ತ ಕುಟುಂಬ. ಮನೆತನದ ವೃತ್ತಿ ಪೌರೋಹಿತ್ಯವಾಗಿದ್ದರೂ ಬದುಕಿಗೆ ಮುಖ್ಯ ಆಸರೆ ಬೇಸಾಯವಾಗಿತ್ತಂತೆ. ಅಗೆಯೋದು, ಕೆತ್ತೋದು, ಕುಳಿ ತೋಡುವುದು, ತೆಂಗಿನಕಾಯಿ ಸುಲಿಯೋದು, ತೆಂಗಿನಮರಗಳನ್ನು ಹತ್ತಿ ಕಾಯಿ ಕಿತ್ತೋದು, ದರೆಯೆತ್ತೋದು, ಗದ್ದೆಯಂಚನ್ನು ಸರಿಪಡಿಸೋದು, ಉತ್ತ ನೆಲವನ್ನು ಮಟ್ಟಗೊಳಿಸೋದು, ಮೇಟಿ ಸುತ್ತೋ ದನ ಕರುಗಳನ್ನು ನೋಡ್ಕೋಳೋದು ಇಂಥ ಕೆಲಸಗಳನ್ನೆಲ್ಲ ಇವರು ಚಿಕ್ಕಂದಿನಲ್ಲಿ ಮಾಡಿದ್ದವರು. ಇವರ ಅಜ್ಜಿಯ ತಮ್ಮ ಹಿರಿಯಣ್ಣ ಹೆಬ್ಬಾರರು ಇವ್ರಿಗೆ ಚಿಕ್ಕಂದಿನಲ್ಲೇ ಸಂಸ್ಕೃತ ಪಾಠ ಹೇಳಿಕೊಡುತ್ತಿದ್ದರಂತೆ. ಬೈಂದೂರು ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದಾಗಲೇ ವಿವೇಕಾನಂದರ ಗ್ರಂಥಗಳನ್ನು ಓದಿಕೊಂಡದ್ದಲ್ಲದೆ ಗಾಂಧೀಜಿಯ ಪ್ರಭಾವಕ್ಕೆ ಸಿಲುಕಿ ಆದರ್ಶವಾದ ಬೆಳೆಸಿಕೊಂಡೆ ಅಂತ ಹೇಳ್ತಿದ್ದರು. ಜತೆಗೆ ಕಲೆ ಹಾಗೂ ಸಾಹಿತ್ಯದ ಪ್ರಭಾವವೂ ಆಗಿತ್ತಂತೆ. ಯಕ್ಷಗಾನ ನೋಡೋಕ್ಕೆ ಮೈಲಿಗಟ್ಟಲೆ ನಡೀತಾ ಹೋಗುತ್ತಿದ್ದುದು, ತಾವೇ ಪ್ರಸಂಗಗಳಲ್ಲಿ ಪಾತ್ರ ವಹಿಸೋದು, ಮನೇಲಿ ನಡೀತಿದ್ದ ಪದ್ಯವಾಚನಗಳಲ್ಲಿ ಪಾಲ್ಗೊಳ್ಳೋದು ಇವೆಲ್ಲ ಇತ್ತಂತೆ. ವೇದ, ಸಂಸ್ಕೃತ ಜ್ಯೋತಿಷ್ಯ ಇವುಗಳಲ್ಲಿ ಅಡಿಗರು ಪಾರಂಗತರಾಗಿರಬೇಕು ಅಂತ ಇವರ ಹಿರಿಯರ ಹಂಬಲವಾಗಿದ್ದರೂ ಅವನ್ನೆಲ್ಲ ಬಿಟ್ಟು ತಮಗಿನ್ನೂ 18 ವರ್ಷ ವಯಸ್ಸು ಆಗಿದ್ದಾಗಲೇ ಮೈಸೂರಿಗೆ ಓದೋಕ್ಕೆ ಬಂದಿದ್ದರು.
‘ನನ್ನ ತಂದೆ ಅಷ್ಟು ಹೊತ್ತಿಗೆ ಭದ್ರಾವತಿ ಪೇಪರ್ ಮಿಲ್ಸ್ ನಲ್ಲಿ ಉದ್ಯೋಗದಲ್ಲಿದ್ದರು. ನಂಗೂ ಅಡಿಗರಿಗೂ ವಯಸ್ಸಿನಲ್ಲಿ 12 ವರ್ಷಗಳಷ್ಟು ಅಂತರವಿದ್ದರೂ ಅವ್ರಿಗೆ ಬಿ.ಎ. ಆನರ್ಸ್ ಆಗ್ತಿದ್ದ ಹಾಗೇ ನನ್ನ ಅಜ್ಜಿಗೆ ನನ್ನನ್ನು ಇವರಿಗೇ ಮದುವೆ ಮಾಡಿಕೊಡಬೇಕು, ಹುಡುಗ ಬುದ್ಧಿವಂತ ಅನ್ನಿಸಿತು. ಆಗ ನಂಗಿನ್ನೂ 12 ವರ್ಷ. ಭದ್ರಾವತೀಲಿ ಮದುವೆಯಾಯಿತು. ಮೈಸೂರಿನಲ್ಲಿ ರೂಂ ಮಾಡಿಕೊಂಡಿದ್ದ ಅಡಿಗರು ನಂಗೆ 16 ವರ್ಷ ಆಗೋವರೆಗೂ ಸಂಸಾರ ಶುರು ಮಾಡೋದು ಬೇಡ ಅಂದಿದ್ದರಿಂದ ಅಜ್ಜಿ ಮನೇಲೇ ಇದ್ದೆ. ಇವರು ಶಾರದಾವಿಲಾಸ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿ ಕ್ವಾರ್ಟಸ್ ಸಿಕ್ಕಿದ ಮೇಲೆ ಅಲ್ಲಿಗೆ ಹೋದೆ. ಎಸ್.ಎಸ್.ಎಲ್.ಸಿ. ಪೂರೈಸಿದ್ದ ನಾನು ವಿದ್ಯಾಭ್ಯಾಸ ಮುಂದುವರಿಸಬಹುದಾಗಿತ್ತೇನೋ. ಆದರೆ ಇವರು ಪಾಠ ಹೇಳುತ್ತಿದ್ದ ಕಾಲೇಜಿಗೇ ಸೇರೋಕ್ಕೆ ನಂಗೆ ಸಂಕೋಚವಾಯಿತು. ಸಂಸಾರ ಶುರುವಾದ ನಂತರವೂ ಇವರ ಸಂಪಾದನೆಯಿಂದಲೇ ನಿರ್ವಹಣೆ ನಾನು ಮನೆಗೆಲಸ ಮಾಡೋದು ಅಷ್ಟೆ. ಮಿಕ್ಕೆಲ್ಲ ಜವಾಬ್ದಾರಿಗಳನ್ನೂ ನೋಡಿಕೊಳ್ಳುತ್ತಿದ್ದವರು ಇವರೇ ಸರಿ. 5-6 ವರ್ಷಗಳಾದ ಮೇಲೆ ಒಂದೂವರೆ ಎರಡು ವರ್ಷಗಳಿಗೆ ಒಂದರಂತೆ ಐದು ಮಕ್ಕಳಾದವು. ಮೈಸೂರಿನಲ್ಲೇ ಮೊದಲನೆಯವಳು ವಿದ್ಯಾ ಹುಟ್ಟಿದ್ದು. ಅವಳು ಹುಟ್ಟಿದಾಗ ಇವರು ತುಂಬಾ ಸಂಭ್ರಮಪಟ್ಟರು. ಆಮೇಲೆ ನಂದಿನಿ, ಅವಳ ಬೆನ್ನಿಗೆ ಇಬ್ಬರು ಗಂಡು ಮಕ್ಕಳು- ಜಯಂತ್ ಹಾಗೂ ಪ್ರದ್ಯುಮ್ನ. ಕೊನೆಯವಳು ಅಂಜನಾ. (ಈಗ ಹೆಣ್ಣು ಮಕ್ಕಳಲ್ಲಿ ಇಬ್ಬರು ಅಮೆರಿಕದಲ್ಲಿ; ಚಿಕ್ಕವಳು ಸೌದಿಯಲ್ಲಿ, ಹಿರೇ ಮಗ ಭೂಮಿಕಾಣಿ ನೋಡಿಕೊಂಡಿದ್ದು, ಕಿರಿ ಮಗ ಡಾ. ಪ್ರದ್ಯುಮ್ನ ವೈದ್ಯಕೀಯ ವೃತ್ತಿ ನಡೆಸುತ್ತಿದ್ದಾರೆ, ಮೊದಲ ಸೊಸೆ ಗೃಹಿಣಿ, ಎರಡನೆಯ ಸೊಸೆ ವೈದ್ಯೆ. ಅಡಿಗ ದಂಪತಿಗಳಿಗೆ ಒಟ್ಟು ಒಂಬತ್ತು ಮೊಮ್ಮಕ್ಕಳು). ಅಡಿಗರು ಮೈಸೂರಿನಲ್ಲಿ ನೆಲೆಸಿದಾಗ ಘಟ್ಟದಕಡೆಯಿಂದ ಬಂದ ಜನರ ಬಳಕೆಯೇ ಇಲ್ಲಿಯವರಿಗೆ ಇರಲಿಲ್ಲ. ಆ ಕಡೆಯ ಹೆಸರುಗಳೇ ಇವರಿಗೆಲ್ಲ ಹೊಸದು. ಅಡಿಗರು ಬಂದ ಹೊಸದರಲ್ಲಿ ಇವರ ಗೆಳೆಯರು ಇವರ ಹೆಸರನ್ನು ಲೇವಡಿ ಮಾಡಿ ‘ಅಡಿಗೆ, ಅಡಿಗೆ’ ಅಂತ ಕೂಗ್ತಿದ್ದರಂತೆ. ಹೀಗಾಗಿ ಇವರು ಮಕ್ಕಳಿಗೆ ‘ಸರ್ ನೇಮ್’ ಇಡಲೇಬಾರದು ಅಂತ ನಿಶ್ಚಯ ಮಾಡ್ಕೊಂಡುಬಿಟ್ಟರು. ಆಮೇಲೆ ಅಂದ್ಕೋತಿದ್ರು, ಇಡಬಹುದಾಗಿತ್ತು ಅಂತ.
ಇವರ ಸ್ವಭಾವ ಮೊದಲೇ ಹೇಳಿದೆನಲ್ಲ, ತಾವು ಕೆಲಸಮಾಡುತ್ತಿದ್ದ ವಾತಾವರಣ ಸರಿ ಬರದಿದ್ದರೆ ಅದನ್ನು ಸಹಿಸಿಕೊಳ್ಳೋಕೆ ಆಗ್ತಿರಲಿಲ್ಲ. ಮೈಸೂರಿನಿಂದ ಉದ್ಯೋಗದ ಸಲುವಾಗಿ ಕುಮಟಾಕ್ಕೆ ಹೊರಟರು. ಅನಂತರ ಸಾಗರ, ಉಡುಪಿ, ಬೆಂಗಳೂರು; ನ್ಯಾಷನಲ್ ಬುಕ್ ಟ್ರಸ್ಟ್ ನ ಡೆಪ್ಯೂಟಿ ಡೈರೆಕ್ಟರಾಗಿ ದೆಹಲಿಗೂ ಹೋದರು. ಆಮೇಲೆ ಸಿಮ್ಲಾದಲ್ಲಿ ಉದ್ಯೋಗ. ನಿವೃತ್ತಿಯಾಗೋ ಹೊತ್ತಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಯಿತು. ಈ ಮಧ್ಯೆ ಚುನಾವಣೆಗೆ ಬೇರೆ ಎರಡು ಸಲಿ ನಿಂತಿದ್ದಾಗಿತ್ತಲ್ಲ. ಉಡುಪಿಯಲ್ಲಿದ್ದಾಗ ಕಾಲೇಜಿನವರು ಮೊದಲು ರಜೆ ಹಾಕಿ ಚುನಾವಣೆಗೆ ನಿಲ್ಲಿ. ಗೆಲ್ಲದಿದ್ದರೆ ವಾಪಸ್ಸು ಬನ್ನಿ ಅಂದಿದ್ದರು. ಆಮೇಲೆ ಅದ್ಯಾಕೋ ರಾಜೀನಾಮೆ ನೀಡಲೇಬೇಕು ಅಂತ ಒತ್ತಾಯಿಸಿದರು. ಕೆಂಗಲ್ ಹನುಮಂತಯ್ಯ ಅವರ ವಿರುದ್ಧ ನಿಂತಾಗ ಇವರಿಗೆ ಮತಗಳು ಕಮ್ಮಿ ಬಿದ್ದವು. ಸೋತರು. ಎರಡನೇ ಸಲಿ ಬೆಂಗಳೂರಿನಲ್ಲಿದ್ದಾಗ ಜನಸಂಘದವರು ತಮ್ಮ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿ ಅಂತ ಒತ್ತಾಯ ಮಾಡಿದರು. ಆಗ ಇವರ ಆರೋಗ್ಯಾನೂ ಅಷ್ಟೇನೂ ಸರಿಯಿರಲಿಲ್ಲ. ನಾನು ಹೇಳಿದ್ದೇ ಮತ್ತೆ ಎಲೆಕ್ಷನ್ಗೆ ನಿಲ್ಲೋದು ಬೇಡ ಅಂತ. ಜನಸಂಘದ ಜನ ಇವರ ಹತ್ರ ಮಾತಾಡೋಕ್ಕೆ ರಾತ್ರಿ 11-12 ಗಂಟೆಗೆ ಬಂದಿದ್ದರು. ಸ್ವಲ್ಪ ದಾಕ್ಷಿಣ್ಯ ಸ್ವಭಾವ. ಒಪ್ಪಿಕೊಂಡೇ ಬಿಟ್ಟರು. ‘ಯಾಕೆ ಹೀಗೆ ಮಾಡಿದ್ರೀ’ ಅಂತ ನಾನು ಕೇಳಿದ್ದಕ್ಕೆ ‘ನಿಂತ್ಕೊಳಲೇಬೇಕು ಅಂತ ಒತ್ತಾಯ ಮಾಡಿದರು. ಮನೇಲಿ ಇಷ್ಟ ಪಡೋಲ್ಲ ಅಂತ ಅದೆಷ್ಟೋ ಹೇಳಿದೆ. ಅವರು ತುಂಬಾ ಬಲವಂತ ಮಾಡಿ ಒಪ್ಪಿಸೇಬಿಟ್ಟರು’ ಅಂದ್ರು. ಇವರಿಗೇನೂ ಆ ಪಕ್ಷದಿಂದಲೇ ನಿಂತ್ಕೋಬೇಕು ಅಂತಿರಲಿಲ್ಲ. ಅವರು ಬಂದು ಕೇಳಿದರು ಅಷ್ಟೆ. ಈಗಲೂ ಜನ ಆಡ್ಕೋತ್ತಾರೆ ಇವರು ಜನಸಂಘದ ಪರವಾಗಿ ಇದ್ದವರು ಅಂತ. ಆದರೆ ಅವೆಲ್ಲ ಸುಳ್ಳು. ಇವರಿಗೆ ಯಾವುದೇ ಪಾರ್ಟಿ ಅನ್ನೋದೇ ಇರಲಿಲ್ಲ. ಅವರಿಗೆ ಅಂಥ ಆಲೋಚನೆ ಬರ್ತಿರಲೇ ಇಲ್ಲ. ಆದರೆ ಎಲಕ್ಷನ್ ಗೆ ಅಂತ ಸಾಲಸೋಲ ಮಾಡಲಿಲ್ಲ. ಒಬ್ಬರ ಹತ್ರ ಹೋಗಿ ಕೇಳೋದು ಇವರಿಗಾಗುತ್ತಿರಲಿಲ್ಲ. ಏನೋ ಎಲೆಕ್ಟ್ ಆದರೆ ಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯ ಕೊಡ್ತೀನಿ ಅಂತಿದ್ರು. ಎಲೆಕ್ಷನ್ ಗೆ ನಿಲ್ಲುವಾಗ ಯಾವ ಸ್ನೇಹಿತರ ಅಭಿಪ್ರಾಯಾನೂ ಕೇಳ್ತಿರಲಿಲ್ಲ. ಎರಡನೇ ಬಾರಿಯೂ ಸೋತರು. ಆದರೆ ಧೃತಿಗೆಡಲಿಲ್ಲ. ‘ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲಲೇಬೇಕಲ್ಲ’ ಅಂತಂದು ನಿರಾಳವಾದರು.
ಇವರ ಅಜ್ಜಿಯ ತಮ್ಮ ಹಿರಿಯಣ್ಣ ಹೆಬ್ಬಾರರು ಇವ್ರಿಗೆ ಚಿಕ್ಕಂದಿನಲ್ಲೇ ಸಂಸ್ಕೃತ ಪಾಠ ಹೇಳಿಕೊಡುತ್ತಿದ್ದರಂತೆ. ಬೈಂದೂರು ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದಾಗಲೇ ವಿವೇಕಾನಂದರ ಗ್ರಂಥಗಳನ್ನು ಓದಿಕೊಂಡದ್ದಲ್ಲದೆ ಗಾಂಧೀಜಿಯ ಪ್ರಭಾವಕ್ಕೆ ಸಿಲುಕಿ ಆದರ್ಶವಾದ ಬೆಳೆಸಿಕೊಂಡೆ ಅಂತ ಹೇಳ್ತಿದ್ದರು. ಜತೆಗೆ ಕಲೆ ಹಾಗೂ ಸಾಹಿತ್ಯದ ಪ್ರಭಾವವೂ ಆಗಿತ್ತಂತೆ. ಯಕ್ಷಗಾನ ನೋಡೋಕ್ಕೆ ಮೈಲಿಗಟ್ಟಲೆ ನಡೀತಾ ಹೋಗುತ್ತಿದ್ದುದು, ತಾವೇ ಪ್ರಸಂಗಗಳಲ್ಲಿ ಪಾತ್ರ ವಹಿಸೋದು, ಮನೇಲಿ ನಡೀತಿದ್ದ ಪದ್ಯವಾಚನಗಳಲ್ಲಿ ಪಾಲ್ಗೊಳ್ಳೋದು ಇವೆಲ್ಲ ಇತ್ತಂತೆ.
‘ಆಮೇಲೆ ಬರೆಯೋದಂತೂ ಇದ್ದೇ ಇತ್ತಲ್ಲ. ಇವರ ತಂದೆ, ಸೋದರತ್ತೆ, ಅಜ್ಜಿ, ಚಿಕ್ಕಪ್ಪ ಎಲ್ರೂ ಪದ್ಯ ರಚನೆ ಮಾಡ್ತಿದ್ದರಂತೆ. ಅಷ್ಟೇ ಅಲ್ಲ, ಇವರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನು, ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನು ಬರೆಯುತ್ತಿದ್ದರಂತೆ. ಇವರ ಅಜ್ಜಿಯ ತಮ್ಮ ಹಿರಿಯಣ್ಣ ಹೆಬ್ಬಾರರು ಎರಡು ಮೂರು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಲ್ಲದೆ ಯಕ್ಷಗಾನ ಕಲೆಯ ಹಾಡುಗಾರಿಕೆ, ಮೃದಂಗ ವಾದನ ಇವುಗಳಲ್ಲೂ ಪಳಗಿದ್ದರಂತೆ. ಹೀಗಾಗಿ ಬರವಣಿಗೆ ಇವರಲ್ಲಿ ರಕ್ತಗತವಾಗಿತ್ತು. ಕುಂದಾಪುರದಲ್ಲಿ ಹೈಸ್ಕೂಲು ವಿದ್ಯಾರ್ಥಿ ಆಗಿದ್ದಾಗ ಹದಿಮೂರನೇ ವಯಸ್ಸಿನಲ್ಲೇ ಕನ್ನಡದಲ್ಲಿ ಪದ್ಯ ಬರೆಯಲು ಪ್ರಾರಂಭಿಸಿ, ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿಗಳಲ್ಲಿ ಪದ್ಯಗಳನ್ನು ರಚಿಸುತ್ತಿದ್ದರಂತೆ. ಆಗ ಸ್ವಧರ್ಮ, ಜಯಕರ್ನಾಟಕ, ಸುಬೋಧ ಮಾಸಪತ್ರಿಕೆಗಳಲ್ಲಿ ಬರೆಯುತ್ತಿದ್ದ ಹೊಸ ಪದ್ಯಗಳನ್ನು ಕಡೆಂಗೋಡ್ಲು ಶಂಕರ ಭಟ್ಟರ ಹಾಗೂ ಮಾಸ್ತಿಯವರ ಪುಸ್ತಕಗಳನ್ನು ಆಸೆಯಿಂದ ಓದಿಕೊಳ್ಳುತ್ತಿದ್ದರಂತೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇದ್ದಾಗಲಂತೂ ತುಂಬಾ ಬರೆಯೋಕೆ ಶುರು ಮಾಡಿದ್ದರು. ‘ಭಾವತರಂಗ’ ಬರೆದದ್ದು ಅಲ್ಲಿದ್ದಾಗಲೇ ಅಂತಿದ್ದರು. ಬಿ.ಎಚ್. ಶ್ರೀಧರ, ಟಿ.ಎಸ್. ಸಂಜೀವರಾವ್, ಎಚ್.ವೈ. ಶಾರದಾಪ್ರಸಾದ್, ಎಂ. ಶಂಕರ್, ಕೆ. ನರಸಿಂಹಮೂರ್ತಿ ಇವರೆಲ್ಲ ತಮಗೆ ತುಂಬಾ ಪ್ರೋತ್ಸಾಹ ಕೊಟ್ಟರು ಅಂತ ಹೇಳುತ್ತಾ ಇದ್ದುದುಂಟು. ಅಷ್ಟು ಹೊತ್ತಿಗಾಗಲೇ ಕೆಲವು ಬಹುಮಾನಗಳೂ ಬಂದಿದ್ದವು. ಇವರಿಗೆ ಮೂವತ್ತೆರಡು ವರ್ಷಗಳು ಆಗುವುದರ ಒಳಗಾಗಿಯೇ ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ ಇವೆಲ್ಲ ಪ್ರಕಟವಾಗಿಬಿಟ್ಟಿದ್ದವು.
ಈಗಲೂ ನಂಗೆ ಇವರ ಜ್ಞಾಪಕಶಕ್ತಿ ನೆನೆಸಿಕೊಂಡಾಗ ಆಶ್ಚರ್ಯವಾಗುತ್ತೆ. ಭಾಷಾಂತರ ಮಾಡಬೇಕಾದಾಗ ಅಥವಾ ಪತ್ರಿಕೆಗಳವರು ಕೇಳಿದಾಗ ಸರಿಯಾಗಿ ಕೂತು ಬರೆಯೋದೇ ಹೊರತು ಮಿಕ್ಕಾಗಲೆಲ್ಲ ಬರವಣಿಗೆ ಸಮಯದಲ್ಲಿ ಯಾವ ಆರ್ಭಟವೂ ಇಲ್ಲ. ಮನೇಲಿ ಗದ್ದಲ ಇರಬಾರದು. ಯಾರೂ ಮಾತನಾಡಿಸಬಾರದು ಅಂತೇನಿಲ್ಲ. ಗಂಡು ಮಕ್ಕಳು ಚೇಷ್ಟೆ ಮಾಡಿದಾಗ ಒಮ್ಮೊಮ್ಮೆ ನಾಲ್ಕು ಏಟು ಕೊಡೋರು ಕೂಡ. ಆದರೆ ಬರೆಯುವಾಗ ನಿಶ್ಯಬ್ದವೇ ಇರಬೇಕು ಅಂತೇನಿಲ್ಲ. ‘ನನಗೆ ವಸ್ತು ಒಂದು ಹೊಳೆದಿದೆ. ಈಗಲೇ ಬರೀಬೇಕು’ ಅಂತ ಹೇಳಿದವರೇ ಅಲ್ಲ. ಒಂದೊಂದು ಸಲಿ ಬೆಳಿಗ್ಗೆ 4 ಗಂಟೆಗೇ ಎದ್ದು ತಾವೇ ಟೀ ಮಾಡ್ಕೊಂಡು ಬರೀತಾ ಕೂತಿರುತ್ತಿದ್ದರು. ಕಾಫಿ ಮಾಡ್ಕೋಳೋದು ಕಷ್ಟ ಅಂತ ಅವರ ಭಾವನೆ. ಟೀ ಮಾಡೋದು ಸುಲಭ ಅಂತಿದ್ದರು. ಕವನಕ್ಕೆ ಯಾವುದೋ ವಸ್ತು ಹೊಳೆದಾಗ ಒಂದು ಕಡೆ ಗುರ್ತು ಹಾಕಿ ಇಡೋರು. ಅದನ್ನೇ ಮುಂದುವರಿಸಬೇಕು ಅಂತೇನಿಲ್ಲ. ಅದನ್ನು ಅಲ್ಲಿಗೇ ಬಿಟ್ಟು ಮತ್ತೊಂದು ಹಾಳೆಯಲ್ಲಿ ಮತ್ಯಾವುದೋ ವಿಷಯದ ಎರಡು ಸಾಲುಗಳನ್ನು ಬರೆದಿಟ್ಟಿರೋರು. ಯಾವಾಗಲೋ ಮನಸ್ಸಿಗೆ ಬಂದಾಗ ಅವನ್ನು ಬರೆಯೋರು. ಮಧ್ಯೆ ಮಧ್ಯೆ ಮಕ್ಕಳ ಜತೆ ಆಟ ಆಡೋದು, ಅವರನ್ನು ಹೊರಗೆ ಕರ್ಕೊಂಡು ಹೋಗೋದು. ಮೈಸೂರಿನಲ್ಲಿದ್ದಾಗಲಂತೂ ಟ್ಯೂಷನ್ ಗಳನ್ನು ಬೇರೆ ಇಟ್ಕೊಂಡಿದ್ರು. ಬರೆದದ್ದನ್ನು ನಂಗೂ ತೋರಿಸಿ ವಿವರಿಸುತ್ತಾ ಇದ್ದರು. ಚಿಕ್ಕ ಚಿಕ್ಕ ಚೀಟಿಗಳಲ್ಲಿ ಬರೆದಿಟ್ಟ ಅದೆಷ್ಟೋ ಸಾಲುಗಳು ಇನ್ನೂ ಅಲ್ಲಿ ಇಲ್ಲಿ ಇವೆ. ಈಗಲೂ ನಾವೇ ಮನಗೆ ಸಾಮಾನು ಸರಂಜಾಮು ತರೋದು. ಮೈಸೂರಿನಲ್ಲಿ ಇದ್ದಾಗಲಂತೂ ಇಂಡಿಯನ್ ಕಾಫಿ ಬಾರ್ ನಲ್ಲಿ ಇವ್ರ ಸ್ನೇಹಿತರ ಮೀಟಿಂಗ್ ನಡೀತಿದ್ದವು. ಅಲ್ಲೇ ಪದ್ಯಗಳನ್ನು ಓದೋದು, ಚರ್ಚೆ ಮಾಡೋದು ಇವೆಲ್ಲ ನಡೀತಿದ್ದವಂತೆ. ನಾನು ಮನೆಗೆ ಬೇಕಾದ ಸಾಮಾನಿನ ಪಟ್ಟಿ ಮಾಡಿ ಕೊಟ್ಟಿರುತ್ತಿದ್ದೆ. ಅದನ್ನು ಕೋಟಿನ ಜೋಬಿನಲ್ಲಿ ಇಟ್ಟುಕೊಂಡಿರೋರು. ಯಾವಾಗಲೂ ಇವರು ಕೋಟು ಹಾಕೋದು ಸಾಮಾನ್ಯವಾಗಿತ್ತಲ್ಲ. ಅದೇನೋ ತಮ್ಮ ಊರಿಂದ ಮೈಸೂರಿಗೆ ಬಂದ ಹೊಸದರಲ್ಲಿ ಪಂಚೆ ಉಟ್ಕೋತಿದ್ರಂತೆ. ಆಮೇಲೆ ಬೇಸಿಗೆ, ಚಳಿಗಾಲ ಏನೇ ಇದ್ರೂ ಕೋಟು ಧರಿಸೋದನ್ನು ಬಿಡಲೇ ಇಲ್ಲ. ‘ಯಾವಾಗ್ಲೂ ಕೋಟು ಯಾಕ್ರೀ’ ಅಂದ್ರೆ ‘ಹೆಂಗಸರಿಗೇ ಸೆಖೆಗಿಖೆ ಎಲ್ಲಾ… ನಮಗೆ ಇದೇ ಸರಿ’ ಅಂತಿದ್ರು. ಸ್ನೇಹಿತರ ಜತೆ ಹರಟೆ ಹೊಡೆದು ಮನೆಗೆ ಬರುವ ದಾರಿಯಲ್ಲಿ ದಿನಸಿ, ತರಕಾರಿ ಹಿಡ್ಕೊಂಡು ಬರೋರು, ತಪ್ಪದೇನೇ. ಯಾವುದಾದರೂ ಒಂದು ಅಂಗಡಿ ಹಿಡಿದುಬಿಟ್ಟರು ಅಂದರೆ ಅಲ್ಲಿಗೇ ಹೋಗೋದು, ಅವನು ಮೋಸ ಮಾಡಿದರೂ ಕೂಡ. ನಾನೇನಾದ್ರೂ ಮಾತಾಡೋಕ್ಕೆ ಹೋದರೆ, ‘ಇಷ್ಟು ವರ್ಷಗಳಿಂದ ತಗೋತಾ ಇದೀನಿ ಅವನ ಮೇಲೆ ನಂಬಿಕೆ ಇಟ್ಕೋಬೇಕು’ ಅಂತ ಸಮಜಾಯಿಷಿ.
ಬೆಂಗಳೂರಿಗೆ ಬಂತ ಮೇಲಂತೂ ಒಬ್ಬ ಕಾಕನ ಅಂಗಡೀನ ಪಟ್ಟಾಗಿ ಹಿಡಿದುಕೊಂಡಿದ್ದರು. ಗಾಂಧಿ ಬಜಾರ್ ನಲ್ಲಿ ಸುಮತೀಂದ್ರ ನಾಡಿಗರ ಪುಸ್ತಕದ ಅಂಗಡಿಗೆ ಹೋಗಿ ಕೂತಿರುತ್ತಿದ್ದರಲ್ಲ… ಅಲ್ಲಿ ಗೊತ್ತುಮಾಡಿಕೊಂಡಿದ್ದ ಒಂದು ದಿನಸಿ ಅಂಗಡಿಲೇ ಹಲವಾರು ವರ್ಷಗಳು ಖರೀದಿ ನಡೀತಿತ್ತು. ಇವರಿಗೆ ಸ್ನೇಹಿತರ ದೊಡ್ಡ ಗುಂಪೇ ಇತ್ತು. ಮೈಸೂರಿನಲ್ಲಿ ಮನೆ ಮಾಡಿದ್ದಾಗ ಬೇಂದ್ರೆ, ಪು.ತಿ.ನ. ಬಂದು ಊಟ ಮಾಡ್ಕೊಂಡು ಹೋಗ್ತಿದ್ದರು. ರಾಮಚಂದ್ರ ಶರ್ಮ ವಿದೇಶದಲ್ಲಿದ್ದಾಗ ಇಲ್ಲಿಗೆ ಬಂದಾಗಲೆಲ್ಲ ಮನೆಗೆ ಬರೋರು. ಸಾಮಾನ್ಯವಾಗಿ ದೊಡ್ಡ ಹೆಸರಿನವರೆಲ್ಲಾ ಬರುತ್ತಿದ್ದರು. ಇವರು ಮಾತ್ರ ತಾವಾಗಿಯೇ ಎಂದೂ ಹೇಳಿ ಮಾಡಿಸಿಕೊಂಡು ತಿಂದವರಲ್ಲ. ಮೊದಮೊದಲು ಬೋಂಡದಂಥ ಕರಿದ ತಿಂಡಿ, ಜಾಮೂನು ಇವೆಲ್ಲ ತಿನ್ನೋರಪ್ಪ. ಆದರೆ ಮೊದಲಿನಿಂದಲೂ ಹೊಟ್ಟೆ ಅಪ್ಸೆಟ್ ಆಗ್ತಾ ಇದ್ದದ್ದೇ ಜಾಸ್ತಿ. ಅಲ್ಲದೆ ಸಿಗರೇಟ್ ದುರಭ್ಯಾಸ ಬೇರೆ ಇತ್ತಲ್ಲ. ವಿದ್ಯಾರ್ಥಿಯಾಗಿದ್ದಾಗಲೇ ಅಭ್ಯಾಸವಾಗಿತ್ತಂತೆ. ನಾನು ಎಷ್ಟೋ ಸಲ ಪ್ಯಾಕ್ ಮುಚ್ಚಿಡುತ್ತಿದ್ದೆ. ಆದರೇನು ಮತ್ತೊಂದು ತರ್ತಿದ್ದರು. ಅವರು ಹಾಗೂ ನನ್ನ ದೊಡ್ಡ ಅಳಿಯ ‘ಇನ್ನು ಮುಂದೆ ಸಿಗರೇಟು ಬಿಟ್ಟೇ ಬಿಡ್ತೀವಿ’ ಅಂತ ಎಲ್ಲರೆದುರೂ ಹೇಳಿಕೊಂಡದ್ದು ಅದೆಷ್ಟು ಸಲವೋ. ಆದರೇನು, ಇಬ್ಬರೂ ಮತ್ತೊಬ್ಬರಿಗೆ ಕಾಣದಂತೆ ಕದ್ದು ಸೇದೋರು. ದಿನವೂ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೊರಟಾಗ ಸಿಗರೇಟು ಕೊಂಡು ಬರುವುದು ಇವರ ಪದ್ಧತಿಯಾಗಿತ್ತು.
ಈಗಲೂ ನಂಗೆ ಇವರ ಜ್ಞಾಪಕಶಕ್ತಿ ನೆನೆಸಿಕೊಂಡಾಗ ಆಶ್ಚರ್ಯವಾಗುತ್ತೆ. ಭಾಷಾಂತರ ಮಾಡಬೇಕಾದಾಗ ಅಥವಾ ಪತ್ರಿಕೆಗಳವರು ಕೇಳಿದಾಗ ಸರಿಯಾಗಿ ಕೂತು ಬರೆಯೋದೇ ಹೊರತು ಮಿಕ್ಕಾಗಲೆಲ್ಲ ಬರವಣಿಗೆ ಸಮಯದಲ್ಲಿ ಯಾವ ಆರ್ಭಟವೂ ಇಲ್ಲ. ಮನೇಲಿ ಗದ್ದಲ ಇರಬಾರದು. ಯಾರೂ ಮಾತನಾಡಿಸಬಾರದು ಅಂತೇನಿಲ್ಲ. ಗಂಡು ಮಕ್ಕಳು ಚೇಷ್ಟೆ ಮಾಡಿದಾಗ ಒಮ್ಮೊಮ್ಮೆ ನಾಲ್ಕು ಏಟು ಕೊಡೋರು ಕೂಡ. ಆದರೆ ಬರೆಯುವಾಗ ನಿಶ್ಯಬ್ದವೇ ಇರಬೇಕು ಅಂತೇನಿಲ್ಲ. ‘ನನಗೆ ವಸ್ತು ಒಂದು ಹೊಳೆದಿದೆ. ಈಗಲೇ ಬರೀಬೇಕು’ ಅಂತ ಹೇಳಿದವರೇ ಅಲ್ಲ.
ಇಲ್ಲಿ ನೋಡಿ, ಗೋಡೆ ಮೇಲೆ ನೇತು ಹಾಕಿದ್ದೀವಲ್ಲ ಈ ಚಿತ್ರ, ಇದು ಅಡಿಗ ಸಿಗರೇಟಿನಿಂದ ಹೊರಟ ಹೊಗೆ ಯಾವ ಆಕಾರವನ್ನು ತಾಳುತ್ತಿತ್ತು ಅಂತ ಒಬ್ಬರು ಕಲಾವಿದರು ತೈಲವರ್ಣದಲ್ಲಿ ಪೇಂಟ್ ಮಾಡಿಕೊಟ್ಟಿದ್ದಾರೆ! ಸಾಯೋಕೆ 10-12 ವರ್ಷಗಳಿಗೆ ಮುಂಚೆ ಬೆಳಿಗ್ಗೆ ಸಿಗರೇಟಿಗೆ ಅಂತ ಹೊರಟಾಗ ಅವರ ಮಾಮೂಲಿ ಅಂಗಡಿ ಸಾಮಾನ್ಯವಾಗಿ ತೆಗೆದಿರುತ್ತಲೇ ಇರಲಿಲ್ಲ. ಅದೇನು ಬೇಜಾರಾಯಿತೋ, ನಾನೇನು ಬಲವಂತಾನೂ ಮಾಡಲಿಲ್ಲ. ತಟಕ್ಕನೆ ಸಿಗರೇಟು ಬಿಟ್ಟುಬಿಟ್ಟರು. ಮನಸ್ಸಿಗೆ ಏನೇ ಹಿಂಸೆಯಾದರೂ ಸಣ್ಣ ಪುಟ್ಟ ಘಟನೆಗಳಿಂದ ಹೆಚ್ಚು ತಲೆ ಕೆಡಿಸಿಕೊಂಡವರಲ್ಲ. ಮನೆಯವರನ್ನು ಗದರಿಸಿಕೊಂಡವರಲ್ಲ. ಮದುವೆಗಳೇ ಇರಲಿ, ಮನೆ ಕಟ್ಟುವಾಗಲಾಗಲಿ ಹೆಚ್ಚು ಗೊಂದಲ ಮಾಡಿಕೊಳ್ಳಲಿಲ್ಲ. ಅವು ಸುಸೂತ್ರವಾಗಿಯೂ ನಡೆದವು. ಹೆಣ್ಣು ಮಕ್ಕಳಿಗೆ ನೋಡಿದ ಮೊದಲ ಗಂಡಿನ ಜತೆಗೇ ವಿವಾಹ ನಿಷ್ಕರ್ಷೆಯಾಯಿತು. ಇವರಿಗೆ ವ್ಯವಹಾರ ತಿಳೀದು. ಆದ್ದರಿಂದ ಮದುವೆ ಏರ್ಪಾಟನ್ನೆಲ್ಲ ನಾವೇ ಮಾಡಿದೆವು. ಉಡುಪಿಯಿಂದ ಬೆಂಗಳೂರಿಗೆ 1971ರಲ್ಲಿ ಬಂದಾಗ ಜಯನಗರದಲ್ಲಿ ಬಾಡಿಗೆಮನೆ ಹಿಡಿದು, ಆಮೇಲೆ ನಾವೇ ಮನೆ ಕಟ್ಟಿಸಿದಾಗಲೂ ಅಷ್ಟೆ. ನಾವೇ ಮನೇನ ತುಂಬಾ ನೀಟ್ ಆಗಿಟ್ಟರೆ ತೋರಿಸಿಕೊಳ್ಳೋದು, ಹೊಗಳೋದು ಇವೆಲ್ಲ ಇಲ್ಲ. ಯಾವುದೂ ಸರಳವಾಗಿರಬೇಕು. ನಾನೊಬ್ಬಳೇ ಅಮೆರಿಕಾಗೆ ಹೋಗಿ ಬಂದಾಗಲೂ ಮನೆಯಲ್ಲಿ ತೊಂದರೆಯಾಯಿತು ಅಂತ ಆಕ್ಷೇಪಣೆ ಇಲ್ಲ. ಮತ್ತೊಮ್ಮೆ ತಾವೇ ನನ್ನ ಜತೆ ಬಂದಾಗಲೂ ಅಲ್ಲಿನ ವಾತಾವರಣದ ಬಗ್ಗೆ ಮುಜುಗರ ಪಟ್ಟು ಮನಸ್ಸಿಗೆ ಹಿಂಸೆ ಮಾಡಿಕೊಂಡವರಲ್ಲ. ಹಿಂದೆ ಎಷ್ಟೋ ಪ್ರಶಸ್ತಿಗಳು ತಪ್ಪಿಹೋದವು. ಹಾಗಾದಾಗಲೆಲ್ಲ ‘ಪ್ರಶಸ್ತಿ ಬಂದೇ ನಾವು ದೊಡ್ಡವರಾಗಬೇಕಾಗಿಲ್ಲ. ಎಲ್ಲರಿಗೂ ಹೇಳಿಕೊಂಡು ತಿರುಗೋ ಸ್ವಭಾವ ನನ್ನದಲ್ಲ. ಇಷ್ಟವಿರೋರು ನನ್ನ ಕವನಗಳನ್ನು ಹಾಡ್ತಾರೆ. ಓದೋರು ಓದಿ ಸಂತೋಷ ಪಡ್ತಾರೆ’ ಅನ್ನೋರು. ಆದರೆ ಸ್ವಲ್ಪ ಅನುಕೂಲವಾದಾಗ ಕಾರು ಇಡಬೇಕು ಅನ್ನೋ ಆಸೆ ಮಾತ್ರ ಇತ್ತು. ಪ್ರೀಮಿಯರ್ ಪದ್ಮಿನಿ ತಗೊಂಡರು. ಆದರೆ ಅದನ್ನೆಂದೂ ಡ್ರೈವ್ ಮಾಡಲಿಲ್ಲ. ಮೈಸೂರಿನಲ್ಲಿದ್ದಾಗಲೆಲ್ಲ ಟಾಂಗಾದಲ್ಲಿ ಓಡಾಡಿದ್ದಾಯಿತು. ಬೆಂಗಳೂರಿನಲ್ಲಿ ಆಟೋ, ಕಾರ್ ಇಟ್ಟ ಮೇಲೂ ಡ್ರೈವರ್ ಅಥವಾ ಮಗ ಅದನ್ನು ನಡೆಸಬೇಕು.
‘ಸಣ್ಣ ವಯಸ್ಸಿನಲ್ಲಿ ಹಳ್ಳಿಗಾಡಿನ ಮನೆಯಲ್ಲಿ ತುಂಬಾ ಸಾಕುಪ್ರಾಣಿಗಳು ಇದ್ದದ್ದರಿಂದಲೋ ಏನೋ ಬೆಂಗಳೂರಿಗೆ ಬಂದ ತಕ್ಷಣ ಬೆಕ್ಕು, ನಾಯಿಗಳನ್ನು ಸಾಕಿ ಅವನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡರು ಅಂದರೆ, ಮನೇಲಿದ್ದಾಗ ಸುಮಾರು ಹೊತ್ತು ಅವುಗಳ ಒಡನಾಟ. ನಾವು ಹಳೇ ಮನೆಯಿಂದ ಸ್ವಂತ ಮನೆಗೆ ಬಂದಾಗ ಬೆಕ್ಕುಗಳು ನಮ್ಮ ಜತೆ ಬರಲಿಲ್ಲ. ಇವರು ಅದನ್ನು ಹುಡುಕಿಕೊಂಡು ಹೊರಟರು. ಇವರು ಒಂದನ್ನಾದರೂ ಪತ್ತೆ ಮಾಡಿ ಕರ್ಕೊಂಡು ಬರೋವರೆಗೂ ಹಳೇ ಮನೆಗೆ ತಮ್ಮ ಯಾತ್ರೆ ತಪ್ಪಿಸಲಿಲ್ಲ. ಅದಕ್ಕೆ ‘ನರಸಿಂಗ’ ಅಂತ ಹೆಸರಿಟ್ಟರು. ಅದೂ ಇವರನ್ನು ಅಷ್ಟೇ ಪ್ರೀತಿ ಮಾಡೋದು. ತಮ್ಮ ಉಗುರಿನಿಂದ ಇವರಿಗೆಲ್ಲಿ ಗಾಯವಾಗುತ್ತೋ ಅನ್ನುವ ಹಾಗೆ ಉಗುರನ್ನು ಮುಚ್ಚಿಕೊಂಡು ಇವರ ಮುಖ ಸವರೋದು. ಅದಕ್ಕೆ ಒಂದೆರಡು ಸಲಿ ಕಾಯಿಲೆಯಾದಾಗ ಔಷಧಿ ಕುಡಿಸಿ ಮಗುವಿನಂತೆ ನೋಡ್ಕೊಂಡರು. ಆದರೆ ಆಮೇಲೆ ಅದೆಲ್ಲಿ ಹೋಯಿತೋ. ಮನೆಗೆ ವಾಪಸ್ಸು ಬರಲೇ ಇಲ್ಲ. ‘ಇವನೆಲ್ಲಿ ಹೋದ… ಬರಲೇ ಇಲ್ವಲ್ಲ. ಪಾಪ, ಎಲ್ಲಾದ್ರೂ ಸತ್ತುಹೋದನೋ…’ ಅಂತ ಇವರು ದಿನವೂ ಅದಕ್ಕಾಗಿ ಬಾಗಿಲು ಕಾದೂ ತುಂಬಾ ಸಂಕಟಪಟ್ಟರು. ನಾಯಿಗಳಿಗೂ ಅಷ್ಟೆ. ತಾವೇ ರಸ್ಕ್ ತಿನ್ನಿಸಬೇಕು. ಇವರ ಮುದ್ದಿನ ನಾಯಿ ‘ಪುಟ್ಟ’ ಇವರಿದ್ದಾಗಲೇ ಸತ್ತುಹೋಯಿತು. (ಅದರ ಮೇಲೆ ಪದ್ಯನೂ ಬರೆದಿದ್ದಾರೆ.) ಇವರೇ ಸಾಕಿದ್ದ ಇನ್ನೊಂದು ನಾಯಿ ‘ಚೆನ್ನಿ’ ಈಗ ಇಲ್ಲೇ ಇದೆ ನೋಡಿ. ಹುಷಾರಾಗಿರುವಷ್ಟು ದಿನವೂ ಎರಡು ಹೊತ್ತೂ ಅದನ್ನು ವಾಕಿಂಗ್ ಕರೆದುಕೊಂಡು ಹೋಗೋ ಕೆಲಸ ಇವರದ್ದೇ.
‘ಕೆಲವು ವಿಷಯಗಳಲ್ಲಿ ಇವರಿಗೆ ಆಸಕ್ತಿ ಇರ್ತಿರಲಿಲ್ಲ. ನಂಗೆ ಗೊತ್ತಿತ್ತು. ಆದರೆ ನಾನು ಬಲವಂತ ಮಾಡಿದಾಗ ಇಲ್ಲ ಅನ್ನಲಾರದೆ ನನಗಾಗಿ ಕೆಲವನ್ನು ಮಾಡುತ್ತಿದ್ದುದುಂಟು. ಮನೇಲಿ ದೇವರ ಕೋಣೆಯಿದೆ. ಗಣೇಶ, ಗೋಕಲಾಷ್ಟಮಿ ಇಂಥ ಹಬ್ಬದ ದಿನಗಳಂದು ಪೂಜೆ ಮಾಡಿ ಅಂತ ಬಲವಂತ ಮಾಡುತ್ತಿದ್ದೆ. ಇವರ ಮನೆತನದಲ್ಲಿ ಅನೇಕರು ಪಂಚಾಂಗ ಬರೆಯೋ ಪಂಡಿತರು. ಇವರಿಗೆ ಶ್ಲೋಕಗಳು, ಮಂತ್ರಗಳು ಎಲ್ಲಾ ಬಾಯಿಪಾಠವಾಗಿತ್ತು. ನನಗಾಗಿ ವಿಶೇಷ ದಿನಗಳಂದು ದೇವರ ವಿಗ್ರಹಗಳನ್ನು ತಾವೇ ತೊಳೆದು ಪೂಜೆ ಮಾಡುತ್ತಿದ್ದರು. ‘ಸಿಗರೇಟಿನಿಂದಾಗಿ ಲಿವರ್ ಪ್ರಾಬ್ಲಂ ಅಂತೂ ಮೊದಲಿಂದಲೂ ಇತ್ತು. 1986 ರಲ್ಲಿ ಅಮೆರಿಕಾದಲ್ಲಿ ನಡೆದ ಕವಿಗಳ ಸಮ್ಮೇಳನಕ್ಕೆ ಹೋಗಿ ಅಲ್ಲಿ ತುಂಬಾ ಕಡೆ ಓಡಾಡಿದರು. ಸುಮಾರು ಇಪ್ಪತ್ತು ವರ್ಷಗಳಿಂದ ರಕ್ತದ ಒತ್ತಡದ ತೊಂದರೆ ಬೇರೆ ಇತ್ತು.
ಅಮೆರಿಕಾ ಪ್ರವಾಸ ಮುಗಿಸಿ ಬಂದು ಒಂದು ತಿಂಗಳು ಆಗಿರಲಿಲ್ಲ. ಲಕ್ವಾ ಹೊಡೀತು ನೋಡಿ. ಅದೂ ಎಡ ಭಾಗಕ್ಕೆ. ತಕ್ಷಣ ನರ್ಸಿಂಗ್ ಹೋಂಗೆ ಸೇರಿಸಿದೆವು. ಆಗ ಮಾತ್ರ ಬಂದವರ ಮುಂದೆಲ್ಲ ಹೇಳಿಕೊಂಡು ತುಂಬಾ ಅಳುತ್ತಿದ್ದರು. ಮನೇಲಿ ಅಸಹಾಯಕರಾಗಿ ಕೂರಬೇಕಾದಾಗ ಅವರು ಪಟ್ಟ ದುಃಖ ಹೇಳಲೂ ಅಸಾಧ್ಯ. ಆದರೆ 2-3 ತಿಂಗಳುಗಳಲ್ಲಿ ತುಂಬಾನೇ ಚೇತರಿಸಿಕೊಂಡುಬಿಟ್ಟರು. ಕವನ ಸಂಕಲನವೂ ಹೊರಬಂತು. ಸಾಹಿತ್ಯ ಪರಿಷತ್ತಿನಲ್ಲಿ ಪುಸ್ತಕ ಬಿಡುಗಡೆ ಅದಾಗಲೂ ಅಲ್ಲಿಗೆ ಹೋಗಿದ್ದರು. ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರು. ಒಂದೈದಾರು ಕಾರ್ಯಕ್ರಮಗಳಲ್ಲೂ ಭಾಗವಹಿಸಿದರು. ಸ್ನಾನ ಮಾಡುವ ಮೊದಲು ತಾವೇ ಮೈಗೆಲ್ಲ ಎಣ್ಣೆ ತಿಕ್ಕಿಕೊಳ್ಳೋರು. ಅವರು ಗುಣವಾಗುತ್ತಿದ್ದ ರೀತಿ ಕಂಡು ನಂಗೇ ಆಶ್ಚರ್ಯವಾಗುತ್ತಿತ್ತು. ಒಂದು ಮಧ್ಯರಾತ್ರಿ, ಇವರಿದ್ದ ಕೋಣೆಯಲ್ಲೇ ಮಲಗಿದ್ದ ನಂಗೆ ಬಲಪಾರ್ಶ್ವದ ಸ್ವಾಧೀನ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸಿತು. ‘ಇದೇನ್ರೀ, ನಂಗೆ ಹಿಂಗಾಗ್ತಿದೆ’ ಅಂತ ಇವರನ್ನು ಎಬ್ಬಿಸಿದೆ. ನೋಡಿದರೆ ನಂಗೂ ಬಲಪಾರ್ಶ್ವದಲ್ಲಿ ಮೈಲ್ಡ್ ಆಗಿ ಪಾರ್ಶ್ವವಾಯು ಬಡಿದಿತ್ತು. ನನ್ನ ಸ್ಥಿತಿ ನೋಡಿ ಇವರಿಗೆ ಆದ ಗಾಬರಿ ಅಷ್ಟಿಷ್ಟಲ್ಲ. ಮಗ ಸೊಸೆ ಮಹಡಿ ಮೇಲೆ ಮಲಗಿದ್ದರು. ಇವರು ಪಾಪ, ಅವರನ್ನೆಬ್ಬಿಸಲು, ತಮ್ಮ ಆ ಸ್ಥಿತಿಯಲ್ಲೂ ಕೋಲೂರಿಕೊಂಡು ಮಹಡಿ ಹತ್ತಿ ಹೋಗಿದ್ದಾರೆ! ನನ್ನನ್ನ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದರೂ ಓಡಾಡಲಾರದ ನಾನು ಹಾಸಿಗೆ ಹಿಡಿದಿದ್ದಾಗ ಇವರು ಗೊಳೋ ಅಂತ ಅಳುತ್ತಿದ್ದರು. ‘ನನ್ನ ಬಲಗೈ ಹಾಗಿದ್ದೆ. ನಿಂಗೂ ಹೀಗಾಗಿ ಹೋಯಿತಲ್ಲ, ಏನು ಗತಿ’ ಅಂತ ಬಿಕ್ಕಿ ಬಿಕ್ಕಿ ರೋಧಿಸುತ್ತಿದ್ದರು. ನಾನು ಆಸ್ಪತ್ರೆಯಿಂದ ಮನೆಗೆ ಬಂದು 8-10 ದಿನಗಳಾಗಿರಬೇಕು ಅಷ್ಟೆ. ಇವರಿಗೆ ದಿನವೂ ಸಂಜೆ ಸಣ್ಣಗೆ ವೈರಲ್ ಫೀವರ್ ಬರೋಕ್ಕೆ ಶುರುವಾಯಿತು. ಸ್ವಲ್ಪ ಹಠ ಜಾಸ್ತಿ, ಫಿಸಿಯೋ ಥೆರಪಿನ ಸರಿಯಾಗಿ ಮಾಡಿಸಿಕೊಂಡಿದ್ದರೆ ಆಗ್ತಿತ್ತೋ ಏನೋ… ಮಾಡಿಸಿಕೊಳ್ಳಲೇ ಇಲ್ಲ. ರಾತ್ರಿ 9 ಗಂಟೆಯಾಗಿತ್ತು. ನನ್ನ ಬೇರೆ ರೂಮಿನಲ್ಲಿ ಮಲಗಿಸಿದ್ದರು. ಶ್ರೀನಿವಾಸರಾವ್, ನಾಡಿಗ್ ಎಲ್ಲರೂ ಬಂದುಹೋಗಿ ಕಾಲು ಗಂಟೆ ಕಳೆದಿರಬಹುದು. ಲಕ್ಷ್ಮೀನಾರಾಯಣ ಭಟ್ಟರ ಹೆಂಡತಿ, ಅವಳಣ್ಣ, ಮಗಳು ಎಲ್ಲರಿಗೂ ನಮ್ಮನ್ನು ನೋಡಬೇಕು ಅನಿಸಿತಂತೆ ಬಂದಿದ್ದರು. ಆಗ ತಾನೇ ಅವರು ಹೊರಟು ಇನ್ನೂ ಗೇಟ್ ಹತ್ತಿರ ಇದ್ದರು. ಇವರಿಗೆ ನೋವು ಶುರುವಾಗಿದೆ. ಬಲವಾಗಿ ಹಾರ್ಟ್ ಅಟ್ಯಾಕ್ ಆಯಿತು. ಡಾಕ್ಟರ್ ಬಂದರು, ನಾನಿದ್ದ ಕೋಣೆಗೆ ಮಗ ಬಂದು ಮೆಲ್ಲಗೆ ಹೇಳಿದ, ‘ಎಲ್ಲಾ ಮುಗಿದುಹೋಯಿತಮ್ಮಾ…’ ನಾನೀಗ ದೈಹಿಕವಾಗಿ ಮಾನಸಿಕವಾಗಿ ಚೇತರಿಸಿಕೋತಾ ಇದೀನಿ. ಅವರಿದ್ದಾಗಲೇ ಪ್ರಶಸ್ತಿ ಬಂದು ಅವರೇ ಅದನ್ನು ಸ್ವೀಕರಿಸಿದ್ದರೆ… ಆ ಸಂತೋಷವೇ ಬೇರೆಯಾಗಿರುತ್ತಿತ್ತು.
ಅಕ್ಟೋಬರ್ 1995
(ಪ್ರಕಾಶಕರು, ಅಹರ್ನಿಶಿ ಪ್ರಕಾಶನ, ಬೆಲೆ:300/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ