ವಿಜ್ಞಾನದ ಮಹತ್ವ-ರುಚಿ ಇರುವುದು ಪ್ರಕೃತಿಯ ರಂಗಮಂಟಪದ ತೆರೆಗಳನ್ನು ಒಂದೊಂದಾಗಿ ಮೇಲೆತ್ತುತ್ತಾ ಮೂಲ ನಾಟಕವನ್ನು ತೋರಿಸಲೆತ್ನಿಸುವ ಅದರ ಪ್ರಯತ್ನದಲ್ಲಿ. ಈ ಪ್ರಯತ್ನ ಮುಂದುವರೆದಂತೆ, ಒಂದೊಂದೇ ತೆರೆ ಕಳಚಿದಂತೆ, ಅನುಭವದಿಂದಷ್ಟೇ ಪಡೆದ-ಪಡೆವ ಜ್ಞಾನಗಳ ಗಡಿ ದಾಟುತ್ತಿರುವಂತೆ, ಈ ಪ್ರಯತ್ನದಲ್ಲಿ ಸದಾ ನಮ್ಮೊಂದಿಗೆ ಇರುವವಾದರೂ ಯಾವುವು? ಇಂದ್ರಿಯಗಳ ಅನುಭವಕ್ಕೆ ದೊರಕದ ಅಮೂರ್ತಗಳನ್ನು ತಮ್ಮ ನಿಯಮಗಳ ಮೂಲಕ, ವಿವಿಧ ಮಾಪನಗಳ ಮೂಲಕ ಕಟ್ಟಿಹಾಕಿ ಮತ್ತೊಂದು ತೆರೆಯನ್ನು ಮೇಲೆತ್ತುವ ಗಣಿತ ಮತ್ತು ವೈಜ್ಞಾನಿಕ ಉಪಕರಣಗಳು ಮಾತ್ರವೇ? ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ

ಸೃಷ್ಟಿಯ ಗುಹ್ಯಾತಿಗುಹ್ಯ ರಹಸ್ಯಗಳನ್ನು ವ್ಯಾಖ್ಯಾನಿಸಲು ಐನ್‌ಸ್ಟೈನ್‌ನ ರಿಲೆಟಿವಿಟಿ ಸಿದ್ಧಾಂತಕ್ಕಿಂತ ಸೂಕ್ತವಾದ ವೈಜ್ಞಾನಿಕ ಸಿದ್ಧಾಂತ ಬೇರೊಂದಿಲ್ಲ. ಐನ್‌ಸ್ಟೈನ್ ಅದನ್ನು ಪ್ರಕಟಿಸಿದ ಒಂದು ಶತಮಾನದ ನಂತರವೂ, ಇಂದೂ ಸಹ, ಆ ಸಿದ್ಧಾಂತ ಎಷ್ಟೋ ಮಹತ್ತರ ವಿಷಯಗಳನ್ನು ಅರ್ಥೈಸಿಕೊಳ್ಳಲು ನಮಗೆ ಸಹಾಯ ಮಾಡುತ್ತಲೇ ಇದೆ. ಉದಾಹರಣೆಗೆ, ಖಗೋಳ ಶಾಸ್ತ್ರಜ್ಞರು ‘S2’ ಎಂಬ ನಕ್ಷತ್ರವನ್ನು ಕಳೆದ ಮೂರು ದಶಕಗಳಿಂದ ಗಮನಿಸುತ್ತಿದ್ದಾರೆ. ಅದು, ನಮ್ಮ “ಹಾಲುಹಾದಿ” ಅಥವಾ “ಮಿಲ್ಕಿ ವೇ” ಎಂದು ಕರೆಸಿಕೊಳ್ಳುವ ಗೆಲಾಕ್ಸಿಯ ಕೇಂದ್ರದಲ್ಲಿರುವ ಕೃಷ್ಣರಂಧ್ರದ ಸುತ್ತಾ ಸುತ್ತುತ್ತದೆ. ಕಳೆದ ವರ್ಷ ಆ ನಕ್ಷತ್ರ, ಆ ಕೃಷ್ಣರಂಧ್ರದ ಸಮೀಪ – ಎಂದರೆ ಎರಡು ಸಾವಿರ ಕೋಟಿ ಕಿ.ಮೀ. ಹತ್ತಿರ ಬಂದಿತ್ತು. ಆಗ ಅದರ ಪಥ ಸಂಚಲನದಲ್ಲಿ ಕೊಂಚ ಬದಲಾವಣೆಯಾಯಿತು. ಈ ಬದಲಾವಣೆಗೆ ಕಾರಣ ಹುಡುಕಿದ ವಿಜ್ಞಾನಿಗಳಿಗೆ, ಐನ್‌ಸ್ಟೈನ್‌ನ ರಿಲೆಟಿವಿಟಿ ಸಿದ್ಧಾಂತ ಉತ್ತರ ದೊರಕಿಸಿತು. (ವಿವರಗಳಿಗೆ ಈ ಲಿಂಕ್ ಇಲ್ಲಿದೆ: )

(ಆಲ್ಬರ್ಟ್ ಐನ್‌ಸ್ಟೈನ್)

ಐನ್‌ಸ್ಟೈನ್‌ನ ಈ ಸಿದ್ಧಾಂತ ಸರಿಯೆಂದು ಮತ್ತೆ-ಮತ್ತೆ ಸಾಬೀತಾಗುತ್ತಲೇ ಇದೆ. “ಚಿನ್ನಕ್ಕೆ ಹೊಂಬಣ್ಣವೇಕಿದೆ?”, “ಲೋಹವಾಗಿರುವ ಪಾದರಸ ದ್ರವ ರೂಪ ಹೊಂದಿರುವುದಾದರೂ ಹೇಗೆ?” ಇಂತಹ ಎಷ್ಟೋ ಪ್ರಶ್ನೆಗಳಿಗೆ ರಿಲೆಟಿವಿಟಿ ಉತ್ತರ ಒದಗಿಸುತ್ತಲೇ ಬಂದಿದೆ. ಎಲೆಕ್ಟ್ರೋ-ಮ್ಯಾಗ್ನೆಟಿಸಂನಿಂದ ಹಿಡಿದು ನಮ್ಮ ಮೊಬೈಲ್‌ಗಳಲ್ಲಿ ಇರುವ ಜಿ.ಪಿ.ಎಸ್.ವರೆಗೆ ಎಷ್ಟೋ ತಂತ್ರಜ್ಞಾನದ ಹಿಂದೆ ಕೆಲಸಮಾಡುತ್ತಿರುವುದು ಈ ವಿಜ್ಞಾನವೇ. ಅದರ ಗಣಿತದ ಖಚಿತತೆಯ ಕುರಿತಂತೂ ಸದ್ಯಕ್ಕೆ ಎರಡು ಮಾತಿಲ್ಲ.

ಇಷ್ಟೆಲ್ಲಾ ಇದ್ದರೂ, ಐನ್‌ಸ್ಟೈನ್‌ನ ಗಣಿತ-ವಿಜ್ಞಾನಗಳು ಎಷ್ಟೇ ಸತ್ಯವಿದ್ದರೂ, ಮಾನವರು ಕಾಲವನ್ನು ಅನುಭವಿಸುವ ವಿಚಾರದಲ್ಲಿ, ಅವನು ಹಾದಿ ತಪ್ಪಿರಬಹುದೇ?! ಸೃಷ್ಟಿಯ ಸತ್ಯಗಳನ್ನು ಅರ್ಥೈಸಿಕೊಳ್ಳಲು ನೆರವು ನೀಡುವ ಐನ್‌ಸ್ಟೈನ್‌ನ ರಿಲೆಟಿವಿಟಿಯ ಗಣಿತ, “ಅರ್ಥವಿದ್ದರಷ್ಟೆ ಸಾಕೆ? ಮಾತು ಅರ್ಥ ಎಲ್ಲ ವ್ಯರ್ಥ” ಎಂದೆನ್ನುವ ಮಾನವತೆಯ ಮಹತ್ತರ ಸತ್ಯವನ್ನು ಅರ್ಥೈಸುವಲ್ಲಿ ಸೋತಿದೆಯೇ? (“ಅರ್ಥದ ಗೀಳು ಬಿಡು” ಎಂದೆಚ್ಚರಿಸುವ ಕವನವನ್ನೇ ವಿಜ್ಞಾನದ ಸಿದ್ಧಾಂತವೊಂದರ ಸೋಲು-ಗೆಲವುಗಳನ್ನು ಅರ್ಥೈಸಲು ಬಳಸುವುದು ಎಷ್ಟರ ಮಟ್ಟಿಗೆ ಅರ್ಥಪೂರ್ಣ?! ಮತ್ತೆ ಅರ್ಥ?)

*****

ವಿಜ್ಞಾನ ನಮಗೆ ರುಚಿಸುವುದೇತಕ್ಕೆ? ಅದರ ಮಹತ್ವ ಇರುವುದಾದರೂ ಎಲ್ಲಿ?
ಇಂತಹ ಪ್ರಶ್ನೆಗಳಿಗೆ, “ವಿಜ್ಞಾನದಿಂದ ದೊರಕುವ ತಂತ್ರಜ್ಞಾನ” ಎಂಬ ಸುಲಭ ಉತ್ತರ, ಮೊದಲ ನೋಟಕ್ಕೆ ಸರಿ ಎನ್ನಿಸಬಹುದಾದರೂ, ವಾಸ್ತವದಲ್ಲಿ, ವಿಜ್ಞಾನದ ಮಹತ್ವ-ರುಚಿ ಇರುವುದು ಪ್ರಕೃತಿಯ ರಂಗಮಂಟಪದ ತೆರೆಗಳನ್ನು ಒಂದೊಂದಾಗಿ ಮೇಲೆತ್ತೆತ್ತಾ ಮೂಲ ನಾಟಕವನ್ನು ತೋರಿಸಲೆತ್ನಿಸುವ ಅದರ ಪ್ರಯತ್ನದಲ್ಲಿ.
ಈ ಪ್ರಯತ್ನ ಮುಂದುವರೆದಂತೆ, ಒಂದೊಂದೇ ತೆರೆ ಕಳಚಿದಂತೆ, ಅನುಭವದಿಂದಷ್ಟೇ ಪಡೆದ-ಪಡೆವ ಜ್ಞಾನಗಳ ಗಡಿ ದಾಟುತ್ತಿರುವಂತೆ, ಈ ಪ್ರಯತ್ನದಲ್ಲಿ ಸದಾ ನಮ್ಮೊಂದಿಗೆ ಇರುವವಾದರೂ ಯಾವುವು? ಇಂದ್ರಿಯದ ಅನುಭವಕ್ಕೆ ದೊರಕದ ಅಮೂರ್ತಗಳನ್ನು ತಮ್ಮ ನಿಯಮಗಳ ಮೂಲಕ, ವಿವಿಧ ಮಾಪನಗಳ ಮೂಲಕ ಕಟ್ಟಿಹಾಕಿ ಮತ್ತೊಂದು ತೆರೆಯನ್ನು ಮೇಲೆತ್ತುವ ಗಣಿತ ಮತ್ತು ವೈಜ್ಞಾನಿಕ ಉಪಕರಣಗಳು ಮಾತ್ರವೇ?

ವಿಜ್ಞಾನಿಯಾದ ಐನ್‌ಸ್ಟೈನ್‌ಗೆ ಈ ಪ್ರಶ್ನೆಗಳು ಅಷ್ಟೊಂದು ಮಹತ್ವದ್ದೆನಿಸುವುದಿಲ್ಲ. ಆದರೆ, ತತ್ವಶಾಸ್ತ್ರಜ್ಞನಾದ ಬೆರ್ಗ್‌ಸನ್ ಇದನ್ನು ತನ್ನ ಅಧ್ಯಯನದ ಗುರಿಯಾಗಿಸಿಕೊಳ್ಳುತ್ತಾನೆ. ಐನ್‌ಸ್ಟೈನ್‌ನ ಗಣಿತ, ಮತ್ತು, ಆ ಗಣಿತದ ಸತ್ಯವನ್ನು ನಿರೂಪಿಸಿದ ಎಡ್ಡಿಂಗ್ಟನ್‌ನ ವೈಜ್ಞಾನಿಕ ಅಧ್ಯಯನಗಳನ್ನು ಸಂಪೂರ್ಣವಾಗಿ ಒಪ್ಪುವ ಬೆರ್ಗ್‌ಸನ್, ರಿಲೆಟಿವಿಟಿ ಸಿದ್ಧಾಂತ ಸರಿ ಇರುವುದು ನಿಜವಾದರೂ, ಅದು ಮಹತ್ವದ ವಿಷಯವೊಂದನ್ನು ಕಡೆಗಣಿಸುತ್ತದೆ ಎನ್ನುತ್ತಾನೆ. ಬೆರ್ಗ್‌ಸನ್ ಪ್ರಕಾರ, ಪ್ರಕೃತಿಯು ನಮ್ಮ ಮುಂದಿರುಸುವ ತೆರೆಗಳನ್ನು ಮೇಲೆತ್ತುವಲ್ಲಿ ನಮ್ಮ ಜೊತೆಗಿರುವುದು ಕೇವಲ ಗಣಿತ ಮತ್ತು ವೈಜ್ಞಾನಿಕ ಸಲಕರಣೆಗಳಷ್ಟೇ ಅಲ್ಲ; ತಾತ್ವಿಕ ಅಥವಾ ಆಧ್ಯಾತ್ಮಿಕ ಸಿದ್ಧಾಂತಗಳೂ ಸಹ. (Metaphyics).

(ಬೆರ್ಗ್‌ಸನ್)

ಬೆರ್ಗ್‌ಸನ್ ದೃಷ್ಟಿಯಲ್ಲಿ, ಕಾಲಕ್ಕೆ ಗಡಿಯಾರ ಮತ್ತು ಗಣಿತಗಳನ್ನು ಮೀರಿದ ಆಯಾಮವೊಂದಿದೆ. ರಿಲೆಟಿವಿಟಿಯ “ಟೈಮ್”ಗೂ ನಮ್ಮ ಜೀವನಾನುಭವದ “ಕಾಲ”ಕ್ಕೂ ಇರುವ ಕಂದಕವನ್ನು ವಿಜ್ಞಾನಿಗಳು ಕೇವಲ ಒಂದು ಮಾಯೆಯೆಂದು (Illusion) ಎಂದು ಪರಿಗಣಿಸಿದರೆ, ತತ್ವ- ಅಧ್ಯಾತ್ಮಗಳ ಮೂಲಭೂತ ಸ್ವರೂಪವನ್ನು ಬಿಟ್ಟುಕೊಡಲೊಪ್ಪದ ಬೆರ್ಗ್‌ಸನ್ ನಮ್ಮ ಅನುಭವಕ್ಕೆ ದೊರಕುವ ಕಾಲದ ಅಸಲೀತನದ ಮುಂದೆ ರಿಲೆಟಿವಿಟಿಯ “ಟೈಮ್”, ಕೇವಲ ಗಡಿಯಾರಗಳ ಚಲನೆಯಷ್ಟೇ ಎನ್ನುತ್ತಾನೆ.

*****

ಬೆರ್ಗ್‌ಸನ್ ಅತ್ಯಂತ ಮಹತ್ವದ್ದದೆಂದು ಪರಿಗಣಿಸುವ, ಆದರೆ, (ಬೆರ್ಗ್‌ಸನ್ ಹೇಳುವಂತೆ) ಐನ್‌ಸ್ಟೈನ್ ಅಷ್ಟಾಗಿ ಗಮನ ಹರಿಸದ ಆ “ತತ್ವ”ವಾದರೂ ಯಾವುದು?

ವಿಜ್ಞಾನಿಯಾದ ಐನ್‌ಸ್ಟೈನ್‌ಗೆ ಈ ಪ್ರಶ್ನೆಗಳು ಅಷ್ಟೊಂದು ಮಹತ್ವದ್ದೆನಿಸುವುದಿಲ್ಲ. ಆದರೆ, ತತ್ವಶಾಸ್ತ್ರಜ್ಞನಾದ ಬೆರ್ಗ್‌ಸನ್ ಇದನ್ನು ತನ್ನ ಅಧ್ಯಯನದ ಗುರಿಯಾಗಿಸಿಕೊಳ್ಳುತ್ತಾನೆ.

ರಿಲೆಟಿವಿಟಿ ಸಿದ್ಧಾಂತದಲ್ಲಿ, ಸ್ಪೇಸ್ ಮತ್ತು ಟೈಮ್‌ಗಳಿಗೆ ತಮ್ಮದೇ ಆದ ಒಂದು ಇರವು ಇಲ್ಲ; ಇರುವುದು ಸ್ಪೇಸ್-ಟೈಮ್ ಎಂಬ ಒಂದು ಅಸ್ತಿತ್ವ ಮಾತ್ರ. ಈ ಅಸ್ತಿತ್ವದಲ್ಲಿ, ಇಲ್ಲಿಯವರೆಗೆ ಆಗಿ ಹೋದ ಎಲ್ಲ ಘಟನೆಗಳೂ ಅಡಕವಾಗಿವೆ; ಅವೆಷ್ಟೇ ಸಣ್ಣದಿರಲಿ ಅಥವಾ ದೊಡ್ಡದಿರಲಿ. ಅಷ್ಟೇ ಅಲ್ಲ, ಈ ಕ್ಷಣದಲ್ಲಿ ನಡೆಯುತ್ತಿರುವ ಮತ್ತು ಭವಿಷ್ಯದಲ್ಲಿ ನಡೆಯಲಿರುವ ಪ್ರತಿ ಘಟನೆಗಳೂ ಈ ಅಸ್ತಿತ್ವದ ಬಿಂದುಗಳಷ್ಟೇ. ಅದೋ ಅಲ್ಲಿದೆ ಸಾಮ್ರಾಟ ಅಶೋಕನ ಜನನ. ಇಲ್ಲಿ ನೋಡಿ, ಲಕ್ಮೀಶ ಕವಿ ಜೈಮಿನಿ ಭಾರತದ ಸೃಷ್ಟಿಯಲ್ಲಿ ತೊಡಗಿದ್ದಾನೆ. ಅಯ್ಯೋ! ಗನ್ ಹಿಡಿದ ಗೋಡ್ಸೆ ಗಾಂಧಿಯೆಡೆಗೆ ಧಾವಿಸುತ್ತಿದ್ದಾನೆ. ಅರೆ! ಮುಂದೊಂದು ದಿನ ಇಡ್ಲಿ ತಿನ್ನುವಾಗ ನಿಮ್ಮ ಬಿಳಿ ವಸ್ತ್ರದ ಮೇಲೆ ಸಾಂಬಾರ್ ಬೀಳುವ ದೃಶ್ಯವೂ ಇಲ್ಲಿದೆಯಲ್ಲಾ?! ಅಷ್ಟೇಕೇ?! ನಮ್ಮೆಲ್ಲರ ಸಾವೂ ಸಹ ಈ ಅಸ್ತಿತ್ವದಲ್ಲಿ ಈಗಾಗಲೇ ಅಡಕಗೊಂಡಿವೆ. ಇದು ಒಂದು ರೀತಿಯಲ್ಲಿ ಸಕಲ ಲೋಕವನ್ನೂ (Space) ಒಂದೇ ಕಾಲಕ್ಕೆ ಆವರಿಸುವ ವಾಮನ ರೂಪವೂ, ಅದೇ ಸಮಯದಲ್ಲಿ “ಕಾಲೋsಸ್ಮಿ ಲೋಕಕ್ಷಯಕೃತ್” ಎಂದೆನ್ನುವ ಭಗವದ್ಗೀತೆಯ ವಿಶ್ವರೂಪ ದರ್ಶನದ ಕೃಷ್ಣನ ಕಾಲಪುರುಷನ (Time) ರೂಪವೂ ಆಗಿದೆ.

ಸ್ಪೇಸ್-ಟೈಮ್‌ನ ಈ ರೂಪವನ್ನು ಭೌತಶಾಸ್ತ್ರದಲ್ಲಿ “Chrono-geometrical Structure of Special and General Relativity” ಎಂದೆನ್ನುತ್ತಾರೆ. ಮೂರು ಸ್ಪೇಸ್ ಆಯಾಮಗಳು ಮತ್ತು ಒಂದು ಟೈಮ್ ಆಯಾಮ ಉಳ್ಳ ಈ 4-D ರೂಪವನ್ನು “ಬ್ಲಾಕ್ ಯೂನಿವರ್ಸ್” ಎನ್ನುವ ವಾಡಿಕೆಯೂ ಇದೆ. ಆಗಿ ಹೋಗಿರುವುದು, ಆಗುತ್ತಿರುವುದು, ಆಗ ಬೇಕಿರುವುದು – ಎಲ್ಲವೂ ಈಗಾಗಲೇ ರಿಲೆಟಿವಿಟಿಯ ಈ ರೂಪದಲ್ಲಿ ಅಡಕಗೊಂಡಿರುವುದಾದರೇ ನಮ್ಮ ಜೀವನಕ್ಕೆ ಅರ್ಥವೇ ಇಲ್ಲವೇ? ನಮ್ಮೆಲ್ಲಾ ಭಾವಗಳೂ ಪೂರ್ವ ನಿರ್ಧರಿತವೇ ಆಗಿದ್ದರೆ, ಆದರ್ಶ-ಮೆಚ್ಚುಗೆ-ಶಿಕ್ಷೆ ಇತ್ಯಾದಿಗಳು ಮೌಲ್ಯರಹಿತವೇ? ಕಾಲ ನಿಜಕ್ಕೂ ಕೆಲಸ ಮಾಡುವುದು ಹೀಗೆಯೇ? ಗಣಿತದ ತಳಹದಿಯ ಮೇಲೆ ನಿರ್ಮಿತವಾದ ಫಿಸಿಕ್ಸ್ ಸಿದ್ಧಾಂತವೊಂದು ಎಷ್ಟು ಬೇಗ “ಜೀವನದ ಅರ್ಥ, ಆದರ್ಶ” ಇತ್ಯಾದಿಗಳ ಕುರಿತು ಚರ್ಚಿಸುವ ಮೆಟಾಫಿಸಿಕ್ಸ್ ಸಿದ್ಧಾಂತವಾಗಿ ಬದಲಾಯಿತಲ್ಲವೇ?!

ಬೆರ್ಗ್‌ಸನ್ ಪ್ರಕಾರ, ಪ್ರಕೃತಿಯ ರಹಸ್ಯಗಳನ್ನು ಹೊರಗೆಳೆಯುವ ವೈಜ್ಞಾನಿಕ ಪ್ರಯತ್ನಗಳಲ್ಲಿ ಗಣಿತದ ಜೊತೆ-ಜೊತೆಗೇ ಇಂತಹ ಮೆಟಾಫಿಸಿಕ್ಸ್ ಸೇರಿರುವುದರಿಂದ, ತಾತ್ವಿಕ-ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಿದ್ಧಾಂತಗಳು – ಅವೆಷ್ಟೇ ವೈಜ್ಞಾನಿಕ ಮತ್ತು ಗಣಿತದ ಖಚಿತತೆ ಹೊಂದಿದ್ದರೂ – ಅಪೂರ್ಣವೇ.

*****

ಐನ್‌ಸ್ಟೈನ್-ಬೆರ್ಗ್‌ಸನ್ ಇವರಿಬ್ಬರಲ್ಲಿ ಯಾರು ಸರಿ?

ಇದಕ್ಕೆ ಉತ್ತರಿಸುವುದು ಕಷ್ಟ. ಭಗವದ್ಗೀತೆಯಲ್ಲಿ ಕೃಷ್ಣನು ತನ್ನ ಅನಾದಿಯೂ-ಅನಂತವೂ ಆದ ಸ್ವರೂಪವನ್ನು ತೋರಿಸಿದಾಗ, ಅರ್ಜುನನು ಹೆದರಿ, “ನಿನ್ನ ಈ ರೂಪದಿಂದ ನಾನು ರೋಮಾಂಚಿತನಾಗಿದ್ದರೂ, ನನ್ನ ಮನಸ್ಸು ಭಯಗೊಂಡಿದೆ. ನಿನ್ನ ಎಂದಿನ ಪ್ರಸನ್ನ ಸ್ವರೂಪವನ್ನು ತೋರಿಸುವಂತವನಾಗು” ಎನ್ನುತ್ತಾನೆ.

“ಅದೃಷ್ಟಪೂರ್ವಂ ಹೃಷಿತೋsಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ ।
ತದೇವ ಮೇ ದರ್ಶಯ ದೇವರೂಪಂ ಪ್ರಸೀದ ದೇವೇಶ ಜಗನ್ನಿವಾಸ”

*****

ಐನ್‌ಸ್ಟೈನ್‌ನ ಸುಂದರವೂ-ಭೀಭತ್ಸವೂ ಆದ ಸ್ಪೇಸ್-ಟೈಮ್ ರೂಪಕ್ಕೆ, ಬೆರ್ಗ್‌ಸನ್‌ನ ಆಕ್ಷೇಪಣೆ, ಕೃಷ್ಣ ತೋರಿದ ಸತ್ಯದ ಭೀಕರತೆಗೆ ಬೆರಗಾಗಿಯೂ ಭಯಭೀತನಾದ ಅರ್ಜುನನ ಹೇಳಿಕೆಯಂತೆ ಇರಬಹುದೇ?

ಸತ್ಯವನ್ನು ತಿಳಿಯಲೆತ್ನಿಸುವ ನಾವೆಲ್ಲರೂ ಅರ್ಜುನರೇ ಆದ್ದರಿಂದ, ರಿಲೆಟಿವಿಟಿಯಲ್ಲಿ ನಮ್ಮ ಜೈವಿಕ ಅನುಭವಕ್ಕೆ ಸುಲಭವಾಗಿ ದಕ್ಕುವ “ಪ್ರಸನ್ನ ರೂಪ”ವಾದ ಕಾಲವನ್ನು ಹುಡುಕುವ ಬೆರ್ಗ್‌ಸನ್‌ನ ಯತ್ನ ಸರಿಯೇ ಇರಬಹುದಲ್ಲವೇ?

(ಇಲ್ಲಿ ಕೃಷ್ಣಾರ್ಜುನರ ಉಲ್ಲೇಖ, ಭಗವದ್ಗೀತೆಯಲ್ಲಿ ವೈಜ್ಞಾನಿಕ ಸಿದ್ಧಾಂತವೊಂದು ಅಡಗಿದೆ ಎಂಬ ಭಾವದಲ್ಲಿ ಅಲ್ಲ. ಇತ್ತೀಚಿನ ವರ್ಷಗಳಲ್ಲಿ, ವೇದ-ಉಪನಿಷದ್-ಪುರಾಣ-ಗೀತೆಗಳಿಗೆ ವೈಜ್ಞಾನಿಕತೆಯ ಲೇಪವನ್ನು ಕೊಡುವ ಪ್ರವೃತ್ತಿ ಹೆಚ್ಚುತ್ತಿದೆ. ನನ್ನ ದೃಷ್ಟಿಯಲ್ಲಿ, ಇಂತಹ ಯತ್ನಗಳು ಧಾರ್ಮಿಕ ಗ್ರಂಥಗಳಿಗೂ ಮತ್ತು ವಿಜ್ಞಾನಕ್ಕೂ ಒಮ್ಮೆಗೇ ಎಸಗುವ ಅನ್ಯಾಯ-ಅವಮಾನಗಳು)

*****

ಸೃಷ್ಟಿ ಅದೆಷ್ಟೇ ವಿಶಾಲವಾಗಿದ್ದರೂ, ಅದರ ಕೇಂದ್ರದಲ್ಲಿರುವುದು “ನಾನು” ಎಂಬ ಭಾವವೇ. ಈ ಸೃಷ್ಟಿ ಮತ್ತು ಅದರ ಕೇಂದ್ರದಲ್ಲಿರುವ ಮಾನವತೆಯ ರಹಸ್ಯಗಳನ್ನು ಅರ್ಥೈಸಿಕೊಳ್ಳಲು ವಿಜ್ಞಾನವೊಂದೇ ದಾರಿಯೇ? ಧಾರ್ಮಿಕತೆ- ಅಧ್ಯಾತ್ಮ-ಕಲೆ-ಸಾಹಿತ್ಯ-ಸಂಗೀತಗಳೂ ದಾರಿಗಳನ್ನೊದಗಿಸಬಹುದೇ?

ವಿಶ್ವದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಸಾವು-ನೋವುಗಳಿಗೆ ಕಾರಣವಾದ ಎರಡನೆಯ ಮಹಾಯುದ್ಧದ ಕರಾಳತೆಯ ನಡುವೆಯೇ, ಇಂಗ್ಲಿಷ್ ಕವಿ ಟಿ.ಎಸ್.ಎಲಿಯಟ್ ಜೀವನಕ್ಕೆ ಅರ್ಥವನ್ನು ಹುಡುಕವ ಪ್ರಯತ್ನ ಮಾಡುತ್ತಾನೆ. ಆ ಪ್ರಯತ್ನದ ಫಲವೇ ಅವನ “Four Quartets” ಕೃತಿ.

ಎಲಿಯಟ್, ಕಾಲವನ್ನು ಜೀವನದ ಸಮಸ್ಯೆಯೆಂದೇ ಭಾವಿಸುತ್ತಾನೆ. ಅವನ ಗುರಿ ಕಾಲಾತೀತತೆ. ನೆನಪುಗಳ ಮೂಲಕ ಕಾಲವನ್ನು ಮೀರಬಹುದಾದ್ದರಿಂದ ಸ್ಮರಣೆಯೇ ಕಾಲಾತೀತತೆಗೆ ದಾರಿ. ಆದರೆ ಗತಕಾಲವಿಲ್ಲದೆ ನೆನಪಿರದು. ಕಾಲಾತೀತತೆಗೂ ಕಾಲವೇ ಮೂಲ ದ್ರವ್ಯ. ಕಾಲದ ಈ ಗುಣವನ್ನು ಸೂಚಿಸಲು, ಅವನ ಈ Four Quartets ಕಾವ್ಯದಲ್ಲಿ ಕೊನೆಗಳು ಮೊದಲಾಗುತ್ತವೆ. ಮತ್ತು ಕೆಲವೊಂದು ಸಾಲುಗಳು ಮತ್ತೆ-ಮತ್ತೆ ರಿಪೀಟ್ ಆಗುತ್ತವೆ.

ಈ ಕಾವ್ಯದ ಮೊದಲ ಸಾಲುಗಳಂತೂ, ಐನ್‌ಸ್ಟೈನ್‌ನ “ಸ್ಪೇಸ್-ಟೈಮ್”ನ ಟೈಮ್ ಅನ್ನೇ ವ್ಯಾಖ್ಯಾನಿಸುತ್ತವೆ:

(ಟಿ.ಎಸ್.ಎಲಿಯಟ್)

Time present and time past
Are both perhaps present in time future
And time future contained in time past.

ಎನ್ನುತ್ತಾ ಇನ್ನೂ ಮುಂದುವರೆಯುತ್ತದೆ.
(ಈ ಕಾವ್ಯದ ಪೂರ್ಣ ಪಾಠಕ್ಕಾಗಿ ಈ ಲಿಂಕ್ ಇಲ್ಲಿದೆ:

ಎಲಿಯಟ್‌ನ ಕಾವ್ಯಕ್ಕೆ ಜಿ.ಪಿ.ಎಸ್. ತಂತ್ರಜ್ಞಾನದ ಸಾಧ್ಯತೆ ಇಲ್ಲದಿರಬಹುದು. ಆದರೆ, ಅದೂ ಸಹ ಸೃಷ್ಟಿಯ ತೆರೆಗಳನ್ನು ಸರಿಸುವ ಪ್ರಯತ್ನವೇ ಅಲ್ಲವೇ?

ಕಾಲದ ಬಗೆಗೆ ಅಪಾರವಾಗಿ ತಲೆ-ಕೆಡಿಸಿಕೊಂಡವನು ಅರ್ಜೆಂಟಿನಾದ ಲೇಖಕ ಹೋರ್ಹೆ ಲೂಯಿ ಬೋರ್ಹೆ. ಅವನು “A New Refutation of Time” ಎಂಬ ಪ್ರಬಂಧವನ್ನೇ ಬರೆದಿದ್ದಾನೆ. ಇಲ್ಲಿ “ನ್ಯೂ” ಎಂಬ ಪದವನ್ನು ಗಮನಿಸಿ. ಕಾಲವೇ ಮಿಥ್ಯವಾದರೇ “ಹೊಸದು” ಎಂಬುದಕ್ಕೆ ಅರ್ಥವಾದರೂ ಏನು?! ಕಾಲವನ್ನು ನಿರಾಕರಿಸುವಲ್ಲಿ ಎದುರಾಗುವ ವಿರೋಧಾಭಾಸವನ್ನು ಬೋರ್ಹೆ ಪ್ರಬಂಧದ ಶೀರ್ಷಿಕೆಯಲ್ಲೇ ಸೂಚಿಸುತ್ತಾನೆ.

ಬೋರ್ಹೆಯ “ದ ಗಾರ್ಡನ್ ಆಫ್ ಫೋರ್ಕಿಂಗ್ ಪಾತ್ಸ್” ಎಂಬ ಸಣ್ಣ ಕತೆಯಂತೂ, ಹಲವು ದಶಕಗಳಿಂದ ಕಾಲದ ಕುರಿತು ಕುತೂಹಲವುಳ್ಳವರ ವಿಸ್ಮಯಕ್ಕೆ ಕಾರಣವಾಗಿದೆ. ಈ ಕತೆಯಲ್ಲಿ ವರ್ತಮಾನದ ಪ್ರತಿಕ್ಷಣವೂ ವಿಭಜನೆಯಾಗುತ್ತಾ, ಕಾಲ ಒಂದು ಬಲೆ ಅಥವಾ ಅಂಬರವಾಗುತ್ತಾ ಹೋಗುತ್ತದೆ. ಈ ಬಲೆಯಲ್ಲಿ ಆಗಬಹುದಾದ ಸಾಧ್ಯತೆಗಳೆಲ್ಲಾ ಅಡಕವಾಗಿವೆ. ಈ ಅಂಬರದ ಬಹುಪಾಲು ಎಳೆಗಳಲ್ಲಿ ನಾವಿಬ್ಬರೂ ಇಲ್ಲ. ಕೆಲವಾರು ಎಳೆಗಳಲ್ಲಿ ನೀವಿದ್ದೀರಿ, ನಾನಿಲ್ಲ. ಇನ್ನೂ ಕೆಲವಾರು ಎಳೆಗಳಲ್ಲಿ ನಾನಿದ್ದೀನಿ, ನೀವಿಲ್ಲ. ಕೆಲವು ಎಳೆಗಳಲ್ಲಿ ಮಾತ್ರ, ನೀವೂ-ನಾನೂ ಇಬ್ಬರೂ ಇದ್ದೇವೆ.

(ಹೋರ್ಹೆ ಲೂಯಿ ಬೋರ್ಹೆ)

ಆಧುನಿಕ ಕ್ವಾಂಟಂ ಫಿಸಿಕ್ಸ್‌ನ ಪಿತಾಮಹರಲ್ಲಿ ಒಬ್ಬನೆನಿಸಿದ ಆಸ್ಟ್ರಿಯನ್ ವಿಜ್ಞಾನಿ ಎರ್ವಿನ್ ಷ್ರೋಡಿಂಗರ್ ತನ್ನ ಭೌತಶಾಸ್ತ್ರದ ಸಮೀಕರಣಗಳ ಮೂಲಕ ಪ್ಯಾರಲಲ್ ಯೂನಿವರ್ಸ್‌ಗಳು ಇರುವ ಸಾಧ್ಯತೆಯನ್ನು ತೋರಿಸಿಕೊಟ್ಟ. ಇದನ್ನು ಮಲ್ಟಿವರ್ಸ್ ಸಿದ್ಧಾಂತ ಎನ್ನುತ್ತಾರೆ. ಸಾಧ್ಯವಿರುವ ಎಲ್ಲಾ ಯೂನಿವರ್ಸ್‌ಗಳನ್ನು ಒಳಗೊಂಡಿರುವ ಈ ಮಲ್ಟಿವರ್ಸ್‌ನ ಕೆಲವು ಯೂನಿವರ್ಸ್‌ಗಳಲ್ಲಿ ಮಾತ್ರ ನಾವಿಬ್ಬರೂ ಇದ್ದೇವೆ. ಇದು, ಬೋರ್ಹೆಯ ‘ಗಾರ್ಡನ್ ಆಫ್ ಫೋರ್ಕಿಂಗ್ ಪಾತ್ಸ್‌’ಗಿಂತ ಅಷ್ಟೇನೂ ಬೇರೆಯಲ್ಲ. ಆದರೆ, ಬೋರ್ಹೆ ಈ ಕತೆ ಬರೆದದ್ದು ೧೯೪೧ರಲ್ಲಿ. ಷ್ರೋಡಿಂಗರ್ ತನ್ನ ಸಿದ್ಧಾಂತವನ್ನು ಮಂಡಿಸುವ ಒಂದು ದಶಕಕ್ಕೂ ಮೊದಲು! ಹಾಗಿದ್ದರೆ, ಬೋರ್ಹೆಯ ಕಥನ “ವಿಜ್ಞಾನ”ವೇ? ಖಂಡಿತಾ ಅಲ್ಲ.

ಸೃಷ್ಟಿಯ ವಿಸ್ಮಯಗಳನ್ನು ಅರಿತುಕೊಳ್ಳಲು ವಿಜ್ಞಾನಕ್ಕಿಂತ ಉತ್ತಮ ಸಾಧನ ಬೇರೊಂದಿಲ್ಲ. ಈ ವಿಸ್ಮಯಗಳನ್ನು ನೋಡುವಾಗ, ಅವುಗಳನ್ನು ಅರಿತುಕೊಳ್ಳುವಾಗ, ಗಣಿತ, ವೈಜ್ಞಾನಿಕ ಸಾಧನಗಳು ಕನ್ನಡಕಗಳಂತೆ ಕೆಲಸ ಮಾಡುತ್ತವೆ. ಆದರೆ, ಅವು ತೋರುವುದು ಬಾಹ್ಯನೋಟ. ಈ ನೋಟ ಸಾರ್ವತ್ರಿಕ. ಸಿದ್ಧತೆ ಮಾಡಿಕೊಂಡು ಬರುವವರೆಲ್ಲರಿಗೂ ಕಾಣುವಂತಹುದು. ಆದರೆ, ಬಾಹ್ಯನೋಟ ನೋಡುವ ಪ್ರತಿಯೊಬ್ಬರಿಗೂ ಒಳನೋಟವೊಂದೂ ಇದ್ದೇ ಇರುತ್ತದೆ. ಈ “ಒಳನೋಟ”, ಅಂತರಂಗದ ವಿಚಾರ; ನಮ್ಮ ಜೀವನಾನುಭವ, ಆದರ್ಶಗಳಂತಹ “ನಮ್ಮತನ”ದ ಮೇಲೆ ನಿಂತಿರುವಂತಹುದು. ಇನ್ನೊಬ್ಬರ ಒಳನೋಟ ಕೆಲವೊಮ್ಮೆ ನಮಗೆ ಹೊಸ ಹೊಳಹುಗಳನ್ನು ನೀಡಬಲ್ಲವಾದರೂ, ಅದು “ವಿಜ್ಞಾನ”ವೆಂದೆನಿಸುವುದಿಲ್ಲ. ಐನ್‌ಸ್ಟೈನ್-ಬೆರ್ಗ್‌ಸನ್‌ರ ಚರ್ಚೆಯ ಆಳದಲ್ಲಿರುವುದು ಈ ಬಾಹ್ಯ ಮತ್ತು ಒಳ ನೋಟಗಳ ವಿಷಯವೇ.

ಸೃಷ್ಟಿಯ ರಹಸ್ಯಗಳನ್ನು ಹೊರಗೆಳೆಯುವ ಐನ್‌ಸ್ಟೈನ್‌-ಷ್ರೋಡಿಂಗರ್‌ಗಳ ಯತ್ನ ವಿಜ್ಞಾನ-ಗಣಿತದ ಮೂಲಕ ನಡೆದರೆ, ಸಾಹಿತ್ಯ-ಪದಗಳ ಮೂಲಕ ನಡೆಯುವ ಎಲಿಯಟ್‌-ಬೋರ್ಹೆಯಂತಹ ಸಾಹಿತಿಗಳ ಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ?  ಪದಗಳ ಮೂಲಕ ಕಾಲದಂತಹ ವಿಸ್ಮಯವನ್ನು ಸೆರೆಹಿಡಿಯುವುದರ ನಿರರ್ಥಕತೆಯನ್ನು ಸೂಚಿಸುತ್ತಲೇ ಸಾರ್ಥಕತೆ ಪಡೆಯುವ ಎಲಿಯಟ್‌ನ ಅದೇ Four Quartets ಕಾವ್ಯದ ಈ ಸಾಲುಗಳನ್ನು ಗಮನಿಸಿ:

And all is always now. Words strain,
Crack and sometimes break, under the burden,
Under the tension, slip, slide, perish,
Will not stay still.

ಕುವೆಂಪು ಹೇಳುವಂತೆ ‘ಅರ್ಥ ವ್ಯರ್ಥವೆಂದು ತಿಳಿ’ ಅಲ್ಲವೇ.