ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯಲ್ಲಿ ಎಸ್ತರ್ ಅವರು ತಮ್ಮ ಬದುಕಿನ ಏಳುಬೀಳುಗಳನ್ನು ಬಹಳ ನಿರ್ಲಿಪ್ತವಾಗಿ ಬರೆದಿದ್ದಾರೆ. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಪುಸ್ತಕದಲ್ಲಿ ‘ತಾವು ಕೂಡ ಎಲ್ಲರಂತೆ ಒಬ್ಬ ಗೃಹಿಣಿ’ ಎಂದು ಹೇಳಿಕಂಡರೂ, ಅವರು ಸಾಮಾಜಿಕವಾಗಿಯೂ ಅನೇಕ ಸವಾಲುಗಳನ್ನು ಎದುರಿಸಿದವರು. ಸಾಂಸಾರಿಕವಾಗಿಯೂ ಸಂದಿಗ್ಧ ಸನ್ನಿವೇಶಗಳನ್ನು ದಾಟಿ ಬಂದವರು. ನವಿರು ನಿರೂಪಣೆಯಲ್ಲಿ ಮೂಡಿ ಬಂದ ಈ ಕೃತಿಯ ಕೆಲವು ಪುಟಗಳು ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿವೆ. ಮೊದಲ ಅಧ್ಯಾಯ ಇಲ್ಲಿದೆ.
ಬಾಲ್ಯದಲ್ಲಿ ಹೇಳಿಕೊಳ್ಳುವಂಥ ಗಾಢ ನೆನಪುಗಳೇನಿವೆ ಎಂದು ನಾನು ಕೆಲವೊಮ್ಮೆ ಯೋಚಿಸಿದ್ದಿದೆ. ತಾರುಣ್ಯದ ತೆಕ್ಕೆಗೆ ಬಂದು ಅನಂತಮೂರ್ತಿ ಮೇಷ್ಟç ಸ್ನೇಹ ಸಂಪರ್ಕಕ್ಕೆ ಬರುವವರೆಗೂ ನಾನೊಬ್ಬಾಕೆ ಮುಗ್ಧ ಹುಡುಗಿ. ಯಾವ ಇಂಟೆಲೆಕ್ಚುವಲ್ ಪ್ರಭಾವಳಿಯೂ ಇರದ ದಿನಗಳವು. ಎಲ್ಲ ಕಿಶೋರಿಯರಂತೆ ನಾನೂ ಕನಸುಗಳನ್ನು ಕಾಣುತ್ತಿರಬಹುದು, ನನ್ನದು ಕೂಡ ಎಲ್ಲರದೂ ಆಗಿರಬಹುದಾದಂಥ ಅನುಭವಗಳು. ಇರಲಿ.
ನಾನು ಹುಟ್ಟಿದ್ದು , ಒಂದೆರಡು ತರಗತಿ ಓದಿದ್ದು ಬೆಂಗಳೂರಿನಲ್ಲಿ ಎಂದೆನಲ್ಲ. ಲಾಲ್ಬಾಗ್ ಗೇಟ್ ಹತ್ತಿರ ತಾಯಿನಾಡು ಪ್ರೆಸ್ ಅಂತ ಒಂದಿತ್ತು. ಅದರ ಸಮೀಪದ ಕನ್ನಡ ಶಾಲೆಯಲ್ಲಿ ಒಂದನೇ ಕ್ಲಾಸ್ನ ಬೆಂಚಿನಲ್ಲಿ ಕೂತಿದ್ದು ಚೆನ್ನಾಗಿ ನೆನಪಿದೆ. ಎರಡನೇ ಕ್ಲಾಸ್ಗೆ ಬೇರೆಯೇ ಶಾಲೆ. ಸೈಂಟ್ ತೆರೆಸಾ ಕಾನ್ವೆಂಟ್ ಅಂತ. ಅದೇ ವರ್ಷ ನಮ್ಮ ದೇಶ ಬ್ರಿಟಿಷರಿಂದ ಬಿಡುಗಡೆಯಾದದ್ದು. ಸ್ವಾತಂತ್ರ್ಯ, ಬ್ರಿಟಿಷರು, ಕಾನ್ವೆಂಟ್, ಇಂಗ್ಲಿಷ್ ಎಂದೆಲ್ಲ ಯೋಚಿಸುವ ಹರೆಯವಲ್ಲ ಅದು. ನಾನು ಕಲಿಯುವುದರಲ್ಲೇನೋ ಜಾಣೆಯಾಗಿದ್ದೆ. ಆದರೆ, ಈಗಲೂ ನೆನಪಿರುವುದು ತಾಳಿಕೊಳ್ಳಲಾರದ ನನ್ನ ಹಸಿವು! ಅಪ್ಪ-ಅಮ್ಮ ಇಬ್ಬರೂ ದುಡಿಯೋಕೆ ಹೋಗೋರು. ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿ ಕಳುಹಿಸುತ್ತಿದ್ದರು. ಪಾಠದ ಮಧ್ಯೆ ನನಗೆ ಬುತ್ತಿಯ ನೆನಪಾಗಿ ಹಸಿವಾಗುತ್ತಿತ್ತು. ಟೀಚರ್ ಪಾಠ ಆರಂಭಿಸುತ್ತಿರುವಂತೆ ಕೊನೆಯ ಬೆಂಚಿನಲ್ಲಿ ಕುಳಿತು ಬುತ್ತಿ ತೆರೆದು ಊಟ ಪೂರೈಸಿಬಿಡುತ್ತಿದ್ದೆ. ಅದೊಂದು ಮುಗ್ಧ ನೆನಪು ಬಿಟ್ಟರೆ ಮೇಷ್ಟ್ರ ಹೆಸರುಗಳು, ಓದಿದ ಪಾಠ ಇವು ಯಾವುದೂ ಮನಸ್ಸಿಗೆ ಬರುತ್ತಿಲ್ಲ.
ತಂದೆಯವರಿಗೆ ವರ್ಗವಾದುದರಿಂದ ಮುಂದೆ ನಮ್ಮ ಸಂಸಾರ ಹಾಸನದತ್ತ ತೆರಳಿತಷ್ಟೆ. ಅಲ್ಲಿ ಸೈಂಟ್ ಫಿಲೋಮಿನಾ ಕಾನ್ವೆಂಟ್ ಸೇರಿ ಏಳನೇ ತರಗತಿಯವರೆಗೆ ಓದಿದೆ. ಅದೊಂದು ಅಪ್ಪಟ ಕನ್ನಡ ಮೀಡಿಯಂ ಶಾಲೆ. ಕಾನ್ವೆಂಟ್ನವರಿಗಿದ್ದ ಕನ್ನಡ ಪ್ರೀತಿಯ ಬಗ್ಗೆ ನನ್ನ ಮನಸ್ಸು ಈಗ ಯೋಚಿಸುತ್ತಿದೆ. ನನ್ನ ಅಕ್ಕ ಅಲ್ಲಿಯೇ ಹೈಸ್ಕೂಲು ಮುಂದುವರಿಸಿದ್ದಳು. ಆದರೆ, ಅಪ್ಪ-ಅಮ್ಮ ನನ್ನನ್ನು ಡಾಕ್ಟರು ಮಾಡಬೇಕೆಂದು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿದರು. ಅದು ಗರ್ನ್ಮೆಂಟ್ ಗರ್ಲ್ಸ್ ಸ್ಕೂಲ್! ಬಹುಶಃ ಸರಕಾರವೇ ನಡೆಸುತ್ತಿದ್ದ ಇಂಗ್ಲಿಷ್ ಶಾಲೆ.
ಹೈಸ್ಕೂಲು ದಿನಗಳಲ್ಲಿ ನಾನು ಮುಗ್ಧೆಯೇ. ಆದರೂ ಸಂಗೀತ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಗಿಟ್ಟಿಸುವಷ್ಟು ಚುರುಕಾಗಿದ್ದೆ. ಆಗ ನನಗೆ ಪ್ರಿಯರಾದ ಕನ್ನಡ ಟೀಚರ್ ಒಬ್ಬರಿದ್ದರು. ರಂಗನಾಯಕಮ್ಮ ಎಂದು ಅವರ ಹೆಸರು. ಮತ್ತೊಬ್ಬರು ವಿಜ್ಞಾನದ ಟೀಚರ್ ಕೂಡ ತುಂಬ ಇಷ್ಟವಾಗಿದ್ದರು. ಅವರ ಹೆಸರು ಈಗ ನೆನಪಿಲ್ಲ. ಮುಖ್ಯೋಪಾಧ್ಯಾಯಿನಿಯ ಹೆಸರು ಮಾತ್ರ ಸ್ಪಷ್ಟವಾಗಿ ಗೊತ್ತಿದೆ. ಪಿಚ್ಮುತ್ತು ಅಂತ. ಆಗ ಅವರು ಸಹೃದಯ ಮಹಿಳೆಯಾಗಿ ಜನಪ್ರೀತಿ ಗಳಿಸಿದ್ದರು. ಅವರು ಮದುವೆಯಾಗಿರಲಿಲ್ಲವೆಂಬ ಕಾರಣಕ್ಕೆ ಹುಡುಗಿಯರಾದ ನಮಗೆ ಅವರ ಬಗ್ಗೆ ಒಂದು ರೀತಿಯ ಕುತೂಹಲ. ನಾನು ಎಸ್ಎಸ್ಎಲ್ಸಿಯಲ್ಲಿ ಎಲ್ಲ ಪಾಠಗಳಲ್ಲಿ ತೊಂಬತ್ತಕ್ಕಿಂತಲೂ ಅಧಿಕ ಅಂಕ ಗಳಿಸಿ ಉತ್ತೀರ್ಣಳಾದೆ. ಗಣಿತದಲ್ಲಿ ನೂರಕ್ಕೆ ತೊಂಬತ್ತೇಳು ಬಂದಿತ್ತು. ಪಿಚ್ಮುತ್ತು ಟೀಚರ್ ನನ್ನನ್ನು ಕರೆದು ತುಂಬ ಪ್ರಶಂಸಿಸಿದರು. ನನಗೆ ಪಿಯುಸಿಗೆ ಸುಲಭದಲ್ಲಿ ಸೀಟು ಸಿಕ್ಕಿತು ಮತ್ತು ಸ್ಕಾಲರ್ಶಿಪ್ ಕೂಡಾ ಸಿಕ್ಕಿತು. ನನ್ನ ಹೆತ್ತವರಿಗೆ, ನನಗೆ ಡಾಕ್ಟರ್ಳಾಗಬೇಕೆಂಬ ಆಸೆಯಿತ್ತು ತಾನೆ, ಹಾಗಾಗಿ, ನಾನು ಪಿಸಿಎಂ (ವಿಜ್ಞಾನ)ವನ್ನು ಆಯ್ದುಕೊಂಡೆ.
ಆಗ ಪಿಯುಸಿ ಒಂದೇ ವರ್ಷ ಇತ್ತು. (ಆಮೇಲೆ ಅದು ಎರಡು ವರ್ಷಗಳ ಕೋರ್ಸ್ ಆಯಿತು). ಒಂದು ವರ್ಷದ ಪಿಯುಸಿಯಲ್ಲಿ ಕನ್ನಡ ಪಾಠವನ್ನು ಆಸ್ಥೆಯಿಂದ ಕಲಿಸಿದ ಮೇಷ್ಟ್ರು ತಿಪ್ಪೇರುದ್ರಸ್ವಾಮಿ ಅಂತ. ಅವರು ಹಿರಿಯ ಸಾಹಿತಿ ಎಚ್. ಎಂ. ಚೆನ್ನಯ್ಯ ಅವರ ಸಂಬಂಧಿಕರಿರಬೇಕು. ಕಾವ್ಯವನ್ನೂ ಗದ್ಯವನ್ನೂ ಎಷ್ಟೊಂದು ಚೆನ್ನಾಗಿ ವಿವರಿಸುತ್ತಿದ್ದರು. ಮೊದಲ ಬಾರಿಗೆ ಸಾಹಿತ್ಯ ಓದುವ ಒಲವು ಮೂಡಲಾರಂಭಿಸಿದ್ದು ಅವರ ತರಗತಿಯಲ್ಲಿ.
ಇತಿಹಾಸ ಮೇಷ್ಟ್ರು ಶ್ರೀನಿವಾಸಯ್ಯ, ಕನ್ನಡ ಕಲಿಸುವ ಶಿವಬಸವಣ್ಣ ಮತ್ತೊಂದೆಡೆ ಬಾಡಿಗೆ ಮನೆ ಮಾಡಿಕೊಂಡಿದ್ದರು. ಇವರೆಲ್ಲ ಸಂಜೆಯ ಬಿಡುವಿನ ಸಮಯದಲ್ಲಿ ಕೊಠಡಿಯ ಹೊರಗಿನ ವೆರಾಂಡದಲ್ಲಿ ಇಸ್ಪೀಟು ಆಡುತ್ತಿದ್ದ ಚಿತ್ರ ಇನ್ನೂ ನನ್ನ ಮನಸ್ಸಿನಲ್ಲಿದೆ. ನಾವ್ಯಾರಾದರೂ ಸ್ಟೂಡೆಂಟ್ಗಳು ಹೋದರೆ ಎದ್ದು ಒಳಗೆ ಹೋಗುತ್ತಿದ್ದರು.
ಅವರ ಜೊತೆಗೆ ಅನಂತಮೂರ್ತಿ ಮೇಷ್ಟ್ರು ಕೂಡ ಇರುತ್ತಿದ್ದರು.
ಅದೊಂದು ದಿನ ಪಿಯುಸಿ ಕ್ಲಾಸ್ನಲ್ಲಿ ಒಂದು ಪೀರಿಯಡ್ನಿಂದ ಮತ್ತೊಂದಕ್ಕೆ ದಾಟುವ ಬಿಡುವು. ಮೇಷ್ಟ್ರು ತರಗತಿಯಿಂದ ಹೊರಹೋದ ಕೂಡಲೇ ಆರಂಭವಾಗುವ ಗುಲ್ಲು ಮತ್ತೆ ನಿಲ್ಲುವುದು ಮತ್ತೊಬ್ಬ ಮೇಷ್ಟ್ರ ಆಗಮನದ ಬಳಿಕ. ದುಂಡಗಿನ ಮುಖ, ಕುರುಚಲು ಗಡ್ಡ , ಆತ್ಮವಿಶ್ವಾಸದೊಂದಿಗಿನ ಗಾಂಭೀರ್ಯದ ಅವರು ಕ್ಲಾಸ್ನೊಳಗೆ ಅಡಿಯಿಟ್ಟದ್ದೇ ನಾವೆಲ್ಲ ಮೌನಿಗಳಾದೆವು. ನೀಟಾಗಿ ಡ್ರೆಸ್ ಮಾಡ್ಕೊಂಡು, ಸೂಟು ಹಾಕ್ಕೊಂಡು ಬಂದಿದ್ದ ಅವರು ತಮ್ಮನ್ನು ತಾವು `ಅನಂತಮೂರ್ತಿ’ ಎಂದು ಪರಿಚಯಿಸಿಕೊಂಡರು. ನನ್ನ ಗೆಳತಿ ಉಷಾ ನನ್ನನ್ನು ಮೊಣಕೈಯಿಂದ ತಿವಿದು, `ಇಂಗ್ಲಿಸ್ ಸರ್ ಎಷ್ಟು ಹ್ಯಾಂಡ್ಸಮ್ ಆಗಿದಾರೆ ನೋಡೆ!’ ಎಂದಿದ್ದಳು. ನಾನು ಸುಮ್ಮನೆ ನಕ್ಕಿದ್ದೆ.
ಆಗಷ್ಟೇ ೧೦ನೇ ತರಗತಿ ಓದಿ ಬಂದವರಲ್ಲವೆ ನಾವು. ನಮಗೆ ಅನಂತಮೂರ್ತಿಯವರ ಹೊಸಬಗೆಯ ಪಾಠಕ್ರಮ ಕುತೂಹಲಕರವಾಗಿತ್ತು. ಒಮ್ಮೆ ವಿಲಿಯಂ ಬ್ಲೇಕ್ನ ಪದ್ಯವನ್ನು ಅವರು ವಿವರಿಸುತ್ತಿದ್ದರು-
Tiger Tiger burning bright
In the forests of the night
ಅವರು ಪದ್ಯವನ್ನು ಬರೆಯುತ್ತಿದ್ದ ಬಗೆಯನ್ನು ನಾವೆಲ್ಲ ಮಂತ್ರಮುಗ್ಧರಾಗಿ ನೋಡುತ್ತಿದ್ದೆವು. ಫ್ಲ್ಯಾಟ್ಫಾರಂ ಮೇಲೆ ಅತ್ತಿತ್ತ ಓಡಾಡುತ್ತ, ಪ್ರತಿಯೊಬ್ಬನ ಮುಖವನ್ನು ದಿಟ್ಟಿಸಿ ನೋಡುತ್ತ ಎಲ್ಲರಿಗೂ ಮನದಟ್ಟಾಗುವಂತೆ ಪಾಠ ಮಾಡೋರು. ಮತ್ತೊಮ್ಮೆ ವಿಲಿಯಂ ಷೇಕ್ಸ್ ಪಿಯರ್ ನ ಟೆಂಪೆಸ್ಟ್ ನಾಟಕವನ್ನು ವಿವರಿಸಿದ ರೀತಿ ನನಗೀಗಲೂ ಚೆನ್ನಾಗಿ ನೆನಪಿದೆ.
ವಿಲಿಯಂ ವರ್ಡ್ಸ್ವರ್ತ್ ಅವರಿಗೆ ಪ್ರಿಯನಾದ ಕವಿ. ಅವನ
I wandered lonely as a cloud
That floats on high o’er vales and hills
ಎಷ್ಟೊಂದು ಭಾವಪೂರ್ಣವಾಗಿ ವಿವರಿಸುತ್ತಿದ್ದರು.
And then my heart with pleasure fills
And dances with the daffodills
ಎಂದು ಮುಕ್ತಾಯವಾಗುತ್ತದೆ ಈ ಪದ್ಯ. ಮುಂದೊಮ್ಮೆ ನಾವು ಇಂಗ್ಲೆಂಡ್ಗೆ ಹೋದಾಗ daffodills ಅನ್ನು ತೋರಿಸಿ, `ನಾನವತ್ತು ಪಾಠ ಮಾಡಿದ್ದು ನೆನಪಿದೆಯಾ?’ ಎಂದು ಹೇಳಿ ಕಾಲೇಜು ದಿನವನ್ನು ನೆನಪಿಸಿದ್ದರು.
ಈಗಲೂ ನೆನಪಿರುವುದು ತಾಳಿಕೊಳ್ಳಲಾರದ ನನ್ನ ಹಸಿವು! ಅಪ್ಪ-ಅಮ್ಮ ಇಬ್ಬರೂ ದುಡಿಯೋಕೆ ಹೋಗೋರು. ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿ ಕಳುಹಿಸುತ್ತಿದ್ದರು. ಪಾಠದ ಮಧ್ಯೆ ನನಗೆ ಬುತ್ತಿಯ ನೆನಪಾಗಿ ಹಸಿವಾಗುತ್ತಿತ್ತು. ಟೀಚರ್ ಪಾಠ ಆರಂಭಿಸುತ್ತಿರುವಂತೆ ಕೊನೆಯ ಬೆಂಚಿನಲ್ಲಿ ಕುಳಿತು ಬುತ್ತಿ ತೆರೆದು ಊಟ ಪೂರೈಸಿಬಿಡುತ್ತಿದ್ದೆ.
ಅವರ ಪಾಠ ಕೇಳುತ್ತ ಕೇಳುತ್ತ ನನಗರಿವಿಲ್ಲದಂತೆಯೇ ಅವರತ್ತ ಆಕರ್ಷಿಸಲ್ಪಟ್ಟಿದ್ದೆ.
ನಿಜವಾಗಿ ಹೇಳಬೇಕೆಂದರೆ, ನನ್ನ ಮನೆ, ನಾನು ಬೆಳೆದ ಪರಿಸರ ಎಲ್ಲದರ ಪ್ರಭಾವದಿಂದ ಅಮಾಯಕ ಹುಡುಗಿಯಾಗಿ ಬೆಳೆಯುತ್ತಿದ್ದೆ. ನಮ್ಮ ಮನೆಯಲ್ಲಿ ಎಲ್ಲರೂ ಅವರವರ ಕೆಲಸದಲ್ಲಿ ತೊಡಗಿರುವುದರಿಂದ ಅಲ್ಲಿ ನನ್ನ ಭಾವನೆಯನ್ನು ತೋಡಿಕೊಳ್ಳಲು ಅವಕಾಶವಿರಲಿಲ್ಲ. ನಾನು, ನನ್ನ ಅಕ್ಕ ಎಂಥ ಸಂಪ್ರದಾಯಸ್ಥ ವಾತಾವರಣದಲ್ಲಿ ಬೆಳೆಯುತ್ತಿದ್ದೆವೆಂದರೆ ನಮಗೆ ಗರ್ಲ್ ಫ್ರೆಂಡ್ , ಬಾಯ್ಫ್ರೆಂಡ್ಗಳ ಕಲ್ಪನೆಯೂ ಇರಲಿಲ್ಲ. ಕಾಲೇಜಿನಲ್ಲಿಯೂ ನನಗೆ ಬಹಳ ಆಪ್ತರು ಯಾರೂ ಇರಲಿಲ್ಲ. ಇಂಥ ಸನ್ನಿವೇಶದಲ್ಲಿ ಅನಂತಮೂರ್ತಿಯವರಲ್ಲಿ ಏಕೆ ಒಲವು ಮೂಡಿತು ಎಂಬುದರ ಬಗ್ಗೆ ನನ್ನಲ್ಲಿ ಉತ್ತರವಿರಲಿಲ್ಲ. ಅವರ ಸುಂದರವಾದ ನಿಲುವು ಮಾತ್ರವಲ್ಲ , ಪ್ರಗತಿಪರವಾದ ವಿಚಾರಪ್ರಜ್ಞೆ ನನ್ನ ಅಂತರಂಗವನ್ನು ತಟ್ಟಿರಬೇಕು!
ಹೊಸದಾಗಿ ಬಂದಿದ್ದ ಅನಂತಮೂರ್ತಿ ಮೇಷ್ಟ್ರಿಗೆ ತಾನು ಹೇಗೆ ಪಾಠ ಮಾಡುತ್ತೇನೆ, ತನ್ನನ್ನು ವಿದ್ಯಾರ್ಥಿಗಳು ಹೇಗೆ ಭಾವಿಸುತ್ತಾರೆ ಎಂದು ತಿಳಿದುಕೊಳ್ಳುವ ತವಕ. `ನನ್ನ ಪಾಠ ಬೋಧನ ಕ್ರಮವನ್ನು ವಿಮರ್ಶಿಸಿ ಒಂದು ಟಿಪ್ಪಣಿ ಬರೆಯಿರಿ’ ಎಂದೊಮ್ಮೆ ಹೇಳಿದರು. ಆಗ ನಾನು ಅವರ ಬೋಧನೆಯ ವೈಖರಿಯನ್ನು , ಹಾವಭಾವವನ್ನು ವಿಮರ್ಶಿಸಿ ಮೆಚ್ಚುಗೆ ಮಾತುಗಳೊಂದಿಗೆ ವಿವರವಾಗಿ ಬರೆದಿದ್ದೆ. ಎಲ್ಲರ ಬರಹಗಳು ಓದಿದ್ದ ಬಳಿಕ ನನ್ನ ಪತ್ರವನ್ನು ವಿಶೇಷವಾಗಿ ಗಮನಿಸಿ ಅನಂತಮೂರ್ತಿ, `ಯಾರು ಬರೆದದ್ದು, ಇದು?’ ಎಂದು ಕೇಳಿದರು. ನಾನು ಕೈ ಎತ್ತಿದೆ. `ಚೆನ್ನಾಗಿದೆ’ ಎಂದು ನನ್ನತ್ತ ನೋಡಿ ನಕ್ಕರು.
ಕೆಲವೊಮ್ಮೆ ಟ್ಯೂಶನ್ ಕಾರಣದಿಂದ ಇನ್ನು ಕೆಲವೊಮ್ಮೆ ಕಾರಣವೇ ಇಲ್ಲದೆ ಅವರನ್ನು ಭೇಟಿಯಾಗಲು ನನ್ನ ಮನಸ್ಸು ತವಕಿಸುತ್ತಿತ್ತು. ನಾನು ಅವರಿಗೆ ಪತ್ರ ಬರೆಯುವುದು, ಅವರು ನನಗೆ ಉತ್ತರಿಸುವುದು ಆರಂಭವಾಯಿತು.
ಜೊತೆಯಾಗಿರುತ್ತಿದ್ದ ಮೇಷ್ಟ್ರಿಗೆ ಮದುವೆಯಾದ ಬಳಿಕ ಅನಂತಮೂರ್ತಿ ತಮ್ಮ ವಾಸ್ತವ್ಯವನ್ನು ಬೇರೆ ಬಾಡಿಗೆಮನೆಗೆ ಬದಲಾಯಿಸಿದರು. ಆ ಜಾಗದ ಹೆಸರೇನೋ ವಿ.ವಿ. ಪುರಂ ಅಂತ ನೆನಪು. ಅಲ್ಲಿ ಅವರ ತಮ್ಮ ವೆಂಕಟೇಶಮೂರ್ತಿಯೂ ಇದ್ದರು. ವೆಂಕಟೇಶಮೂರ್ತಿ ಎಂದಾಗ ನಿಮಗೆ ಅನಂತಮೂರ್ತಿಯ ಪ್ರೀತಿ, ಮೃತ್ಯು ಮತ್ತು ಭಯ ಎಂಬ ಕಾದಂಬರಿ ನೆನಪಾಗಬಹುದು. ಅದರಲ್ಲಿದ್ದದ್ದೂ ಇದೇ ವೆಂಕಟೇಶಮೂರ್ತಿ. ಅವರಿಗೆ ಅಡುಗೆ ಮಾಡಿಕೊಡಲು ಅವರ ಚಿಕ್ಕಿ ಅಂದರೆ ಅಜ್ಜಿಯ ತಂಗಿ ಊರಿನಿಂದ ಬಂದಿದ್ದರು. ತುಂಬ ಮಡಿವಂತ ಹೆಂಗಸು ಆಕೆ. ಅಡುಗೆ ಮನೆ, ತನ್ನ ಕೊಠಡಿ ಬಿಟ್ಟರೆ ಬೇರೆ ಕಡೆ ಸುಳಿಯುವುದು ಕಡಿಮೆ. ನಾನು ಟ್ಯೂಶನ್ ನೆಪದಿಂದ ಅನಂತಮೂರ್ತಿಯ ಬಳಿಗೆ ಹೋಗುತ್ತಿದ್ದೆ. ಆಕೆಗೆ ನನ್ನ ಬಗ್ಗೆ ಅಷ್ಟೊಂದು ಒಲವು ಇದ್ದಂತಿರಲಿಲ್ಲ. ನಮ್ಮ ಕೊಠಡಿಯ ಹೊರಗೆ ಮರೆಯಲ್ಲಿ ನಿಂತು ನಾವೇನು ಮಾತನಾಡುತ್ತಿದ್ದೇವೆಂದು ಕುತೂಹಲದಿಂದ ಗಮನಿಸುತ್ತಿದ್ದರು. ನಾನು ಹೊರಗೆ ಬಂದಾಗ ಮೆಲ್ಲಗೆ ಸರಿದು ಹೋಗುತ್ತಿದ್ದರು. ಆ ಒಂಟಿ ಮನಸಿನ ತವಕತಲ್ಲಣದ ಬಗ್ಗೆ ನಾನೇನೂ ಬೇಸರಿಸಲಿಲ್ಲ. ವೆಂಕಟೇಶಮೂರ್ತಿ ನನ್ನನ್ನು ಬಹಳ ಪ್ರೀತಿ, ಗೌರವಗಳಿಂದ ನಡೆಸಿಕೊಳ್ಳುತ್ತಿದ್ದರು.
ಟಿ.ಜಿ. ರಾಘವ, ಕೆ. ಸದಾಶಿವರಂಥ ಕತೆಗಾರರು, ಹಾಸನದಲ್ಲಿಯೇ ಇದ್ದ ವಿಶ್ವೇಶ್ವರ ಅನ್ನೋ ಗೆಳೆಯರು, ಯುವ ಬರಹಗಾರರು ಅನಂತಮೂರ್ತಿಯವರನ್ನು ಭೇಟಿಯಾಗಲು ಬರುತ್ತಿದ್ದರು. ಅವರ ಸಂಭಾಷಣೆಯನ್ನು ನಾನು ನಿಕಟವಾಗಿ ಗಮನಿಸುತ್ತಿದ್ದೆ.
ನನ್ನ ಅಮ್ಮ ಹಾಸನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಟೈಲರಿಂಗ್ ಕಲಿಸೋದಕ್ಕೆ ಹೋಗುತ್ತಿದ್ದರು. ಅಲ್ಲಿ ಅನಂತಮೂರ್ತಿಯವರ ತಮ್ಮ ವೆಂಕಟೇಶಮೂರ್ತಿ ಇಂಜಿನಿಯರಿಂಗ್ ಕಲಿಯುತ್ತಿದ್ದರು. ಹಾಗೊಮ್ಮೆ , ಅಮ್ಮನಿಗೆ ವೆಂಕಟೇಶ್ಮೂರ್ತಿ ಸಿಕ್ಕಿ , ಪರಸ್ಪರ ಪರಿಚಯವಾಗಿ, ನನ್ನ ಮತ್ತು ಅನಂತಮೂರ್ತಿಯ ಸ್ನೇಹ ಸಂಬಂಧದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತ ಅಮ್ಮ ಬೈದೇಬಿಟ್ಟರಂತೆ. `ನಿಮ್ಮ ಅಣ್ಣನಲ್ಲಿ ನನ್ನ ಮಗಳ ಸ್ನೇಹ ಮಾಡದಿರುವಂತೆ ಹೇಳಿ’ ಎಂದು ತಾಕೀತು ಮಾಡಿದರಂತೆ. ವೆಂಕಟೇಶಮೂರ್ತಿ ಈ ಬಗ್ಗೆ ಏನೂ ಕಹಿ ಭಾವನೆ ವ್ಯಕ್ತಪಡಿಸಿರಲಿಲ್ಲ. ಒಮ್ಮೆ ಅನಂತಮೂರ್ತಿ ಈ ವಿಚಾರವನ್ನು ನನ್ನಲ್ಲಿ ಹೇಳಿ, `ಈ ಬಗ್ಗೆ ನಮಗೇನೂ ಬೇಜಾರಿಲ್ಲ ಬಿಡು. ನೀನೂ ತಪ್ಪಿತಸ್ಥ ಭಾವನೆಯಿಂದ ಇರೋದೇನೂ ಬೇಡ’ ಎಂದರು.
ಒಮ್ಮೆ ಅನಂತಮೂರ್ತಿಯವರ ಮನೆಗೆ ಹೋದಾಗ ಕೆಲವು ಮಂದಿ ಹುಡುಗರಿದ್ದರು. ಅವರೆಲ್ಲ ಅಲ್ಲಿಗೆ ವಾರಾನ್ನಕ್ಕೆ ಬಂದಿದ್ದರು. ಅನಂತಮೂರ್ತಿ ಕೆಲವು ಬಡಹುಡುಗರಿಗೆ ಊಟ ಹಾಕುತ್ತಿದ್ದರು. ತಮ್ಮ ಚಿಕ್ಕಮ್ಮನಲ್ಲಿ ಭೇದ ಭಾವವಿಲ್ಲದೆ ಎಲ್ಲರಿಗೂ ಒಂದೇ ರೀತಿ ಬಡಿಸುವಂತೆ ಕೂಡ ಹೇಳುತ್ತಿದ್ದರು. ಮಧ್ಯಾಹ್ನದ ಹೊತ್ತಿನಲ್ಲಿ ನಾನೇನಾದರೂ ಹೋದರೆ ನನಗೂ ಊಟದ ಆತಿಥ್ಯ ಸಿಗುತ್ತಿತ್ತು. ಅನಂತಮೂರ್ತಿಯವರ ಔದಾರ್ಯವನ್ನು ನಾನು ತುಂಬ ಮೆಚ್ಚಿಕೊಂಡಿದ್ದೆ.
(ಪುಸ್ತಕ: ನೆನಪು ಅನಂತ, ಲೇಖಕಿ: ಎಸ್ತರ್ ಅನಂತಮೂರ್ತಿ, ನಿರೂಪಣೆ: ಪೃಥ್ವೀರಾಜ ಕವತ್ತಾರು, ಪ್ರಕಾಶಕರು: ಅಕ್ಷರ ಪ್ರಕಾಶನ, ಬೆಲೆ : 150/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ