ಎಲ್ಲವನ್ನು ತೊರೆದು ಬಂದ ವ್ಯಕ್ತಿಗೆ ಹುಟ್ಟಿದ ಊರನ್ನು, ಶಿಕ್ಷಕನೊಬ್ಬನಿಗೆ ಬಿಟ್ಟು ಬಂದ ಶಾಲೆಯನ್ನು ಮರು ಭೇಟಿಯಾಗುವ ಕ್ಷಣಗಳು ಬಹಳಷ್ಟು ಸಂದರ್ಭದಲ್ಲಿ ಖುಷಿ ನೀಡುವ ಸಂಗತಿಯಾಗಿರುವುದಿಲ್ಲ. ಮೇಯಳಗನ್ ಚಿತ್ರದ ನಾಯಕನಿಗೂ ಅದೇ ಹೆದರಿಕೆ. ಬದಲಾದ ಸಂದರ್ಭ ಬದಲಾದ ಪರಿಸ್ಥಿತಿ ಅಲ್ಲಿನ ಜನ ಗುರುತಿಸುತ್ತಾರೋ ಇಲ್ಲವೋ? ಎಂಬುದು ನನ್ನನ್ನು ಕಾಡಿದ್ದಿದೆ. ಅಲ್ಲಿನ ಘಟನೆಗಳು, ಊರಿನ, ಗೆಳೆಯರ ಸ್ಥಿತಿ ಮನಸ್ಸಿಗೆ ಅಹಿತವನ್ನು ಇಲ್ಲವೇ ವಿಷಾದದ ಪರಿಸ್ಥಿತಿಗೆ ದೂಡಿದರೆ ಹೀಗೆ ಏನೇನೋ ಯೋಚನೆ ಬರುವುದುಂಟು.
ತಮಿಳಿನ “ಮೇಯಳಗನ್” ಚಲನಚಿತ್ರದ ಕುರಿತು ಗೊರೂರು ಶಿವೇಶ್ ಬರಹ
“ಮೇಯಳಗನ್” ಒಂದು ತಿಂಗಳ ಹಿಂದೆ ಥಿಯೇಟರ್‌ನಲ್ಲಿ ಬಿಡುಗಡೆಯಾದಾಗ ಅಷ್ಟಾಗಿ ಸದ್ದು ಮಾಡದಿದ್ದರೂ ಈಗ ನೆಟ್‌ಫ್ಲಿಕ್ಸ್ ಓ ಟಿ ಟಿ ಯಲ್ಲಿ ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ಚಿತ್ರವಾಗಿದೆ. ಬಹಳಷ್ಟು ಜನ ಚಿತ್ರದ ಭಾವನಾತ್ಮಕ ದೃಶ್ಯಗಳ ಕುರಿತು ಮಾತನಾಡಿದ್ದಾರೆ.ಇನ್ನು ಕೆಲವರಿಗೆ ಚಿತ್ರದ ಅತಿಯಾದ ಮೆಲೋಡ್ರಾಮ ಇಷ್ಟವಾಗಿಲ್ಲ. ಮೂಲ ತಮಿಳು ಚಿತ್ರದ ಅವತರಣಿಕೆ ಕನ್ನಡದಲ್ಲಿ ಲಭ್ಯವಿದೆ.
ಇಂದು ಬಹಳಷ್ಟು ಜನ ತಮ್ಮ ಊರುಗಳನ್ನು ಬಿಟ್ಟು ನಗರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಒಂದೊಂದು ಕಾರಣ. ಬಹಳಷ್ಟು ಜನ ಊರಿನ ಜೊತೆ ಬಂಧುಗಳ ಜೊತೆ ಸೌಹಾರ್ದತೆ ಕಾಪಾಡಿಕೊಂಡಿದ್ದರೆ ಇನ್ನು ಕೆಲವರಿಗೆ ಊರಿಗೆ ಹೋಗುವುದೆಂದರೆ ಬೇಸರದ ವಿಷಯ. ಇದಕ್ಕೆ ಕಾರಣ ಬೇರೆ ಬೇರೆ ಇದ್ದರೂ ಬಹಳಷ್ಟು ಸಂದರ್ಭದಲ್ಲಿ ಆಸ್ತಿ, ಮನೆ, ಜಮೀನು ಇವುಗಳ ಹಂಚಿಕೆಯಲ್ಲಾದ ದೋಷ ಇಲ್ಲವೇ ಅವರು ಅಂದುಕೊಳ್ಳುವಂತೆ ಅನ್ಯಾಯ…
ಮೇಯಳಗನ್ ಚಿತ್ರದ ಘಟನೆಯ ಆರಂಭವಾಗುವುದು 1996ರಲ್ಲಿ. ಚಿತ್ರದ ನಿರ್ದೇಶಕ ಪ್ರೇಮ್ ಕುಮಾರ್‌ಗೆ ಯಶಸ್ಸನ್ನು ತಂದುಕೊಟ್ಟ ಅವರ ಮೊದಲ ಚಿತ್ರ 96 ಆಗಿರುವುದು ಇದಕ್ಕೆ ಒಂದು ಕಾರಣ ಆಗಿರಬಹುದು.
ಆಸ್ತಿ ಹಂಚಿಕೆಯ ಸಂದರ್ಭದಲ್ಲಿ ದೇವಸ್ಥಾನ ನಗರಿ ತಂಜಾವೂರಿನ ದೊಡ್ಡ ಮನೆ ಚಿಕ್ಕಪ್ಪ ದೊಡ್ಡಪ್ಪನವರ ಪಾಲಾಗುತ್ತದೆ. ಓದಿನಲ್ಲಿ ಅಷ್ಟು ಚುರುಕಾಗಿಲ್ಲದ ಆದರೆ ಊರಿನ ಜೊತೆ ಆತ್ಮೀಯ ಒಡನಾಟ ಹೊಂದಿದ್ದ ನಾಯಕನಿಗೆ ಊರು ಬಿಡಲು ಬೇಸರ, ದುಃಖ.
ಅನಿವಾರ್ಯವಾಗಿ ಊರು ಬಿಟ್ಟ ನಂತರ ಊರಿನ ಜೊತೆ ಸಂಪೂರ್ಣ ಸಂಪರ್ಕ ಕಡಿತವಾಗಿ 22 ವರ್ಷಗಳು ಮುಗಿದಿದೆ. ಶಿಕ್ಷಕರಾಗಿದ್ದ ತಂದೆ ನಿವೃತ್ತರಾಗಿ ಮನೆ ಪಾಠ ಮಾಡಿಕೊಂಡಿದ್ದರೆ ನಾಯಕ ಕ್ರಿಕೆಟ್ ಟ್ರೈನರ್. ಇಂತಹ ಸಂದರ್ಭದಲ್ಲಿ ಊರಿನಲ್ಲಿ ಆತನನ್ನು ಅಪಾರವಾಗಿ ಹಚ್ಚಿಕೊಂಡಿದ್ದ ಸೋದರ ಸಂಬಂಧಿ ಒಬ್ಬಳ ಮದುವೆಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ. ಸಂಬಂಧಿಗಳು ನೆಪ ಮಾತ್ರಕ್ಕೆ ಕರೆದಿದ್ದರು ಮದುವೆಯ ಹೆಣ್ಣು ಮಾತ್ರ ಬರಲೇಬೇಕೆಂದು ಒತ್ತಾಯಿಸಿದ್ದಾಳೆ. ಕೊನೆಗೂ ತಂದೆಯ ಮತ್ತು ಹೆಂಡತಿಯ ಮಾತಿಗೆ ಕಟ್ಟು ಬಿದ್ದು ಊರಿಗೆ ಹೋಗಲು ನಿರ್ಧರಿಸುತ್ತಾನೆ.
ಹುಟ್ಟಿ ಬೆಳೆದ ತಂಜಾವೂರಿಗೆ ಮೊದಲು ಹೋಗಿ ನಂತರ ನೀಡಮಂಗಲಮ್‌ನಲ್ಲಿ ನಡೆಯುವ ಆರತಕ್ಷತೆಯನ್ನು ಮುಗಿಸಿ ರಾತ್ರಿ ಬಸ್ಸಿಗೆ ನಗರಕ್ಕೆ ಹಿಂದಿರುವ ಯೋಚನೆ. 22 ವರ್ಷಗಳು ಕಳೆದ ನಂತರ ಊರಿಗೆ ಹೋಗಿ ಭಾವನಾತ್ಮಕ ಕ್ಷಣಗಳನ್ನು ಕಳೆದು ನಂತರ ನೀಡಮಂಗಲಂಗೆ ಹೊರಡುತ್ತಾನೆ. ಬಸ್ಸಿನಲ್ಲಿ ಪಕ್ಕದ ಪಯಣಿಗನಿಗೆ, ಕಂಡಕ್ಟರ್‌ಗೆ ಆ ಊರು ಬಂದಾಗ ತಿಳಿಸಲು ಪದೇ ಪದೇ ಕೋರುತ್ತಾನೆ. ಹೊಸ ಸ್ಥಳಕ್ಕೆ ಹೋಗುವಾಗ ಎಲ್ಲರಿಗೂ ಆಗುವ ಅನುಭವ ನೈಜವಾಗಿ ಮೂಡಿ ಬಂದಿದೆ. ಆ ಕಂಡಕ್ಟರ್ ಆದರೂ ತಂದೆಯ ಹಳೆಯ ಶಿಷ್ಯ. ಆತನಿಂದ ತಂದೆಯ ಗುಣಗಾನವಾದರೂ ಈತನಿಗೆ ಕೇಳುವ ಮನಸ್ಸಿಲ್ಲ. ಆರತಕ್ಷತೆ ಮುಗಿಸಿ ಬೇಗ ಹಿಂತಿರುಗುವ ಕಡೆ ಅವನ ಯೋಚನೆ.
ಅಂತೂ ಮದುವೆ ಮನೆ ಸೇರುತ್ತಾನೆ, ಕಡೆಯ ಸಾಲಿನಲ್ಲಿ ಕೂರುತ್ತಾನೆ. ಹತ್ತಿರದ ಸಂಬಂಧಿಗಳು ಒಬ್ಬೊಬ್ಬರಾಗಿ ಮಾತನಾಡಿಸುತ್ತಾರೆ. ಹಿಂದೆ ಈತ ಮದುವೆ ಪ್ರಸ್ತಾಪ ಮಾಡಿದ್ದ ಹುಡುಗಿ ಬಂದು ತನ್ನ ನೋವನ್ನು ಹಂಚಿಕೊಂಡು ಹೋಗುತ್ತಾಳೆ. ಆಸ್ತಿಯನ್ನು ಪಡೆದುಕೊಂಡ ಸಂಬಂಧಿಗಳು ಅಲ್ಲಿ ಓಡಾಡುತ್ತ ನಾಯಕನಲ್ಲಿ ಒತ್ತಡ ದುಗುಡ ಮೂಡಿಸುವಾಗ “ಯಾವಾಗ ಬಂದಿರಿ ಬಾವ” ಎನ್ನುತ್ತಾ ಆತ ಭೇಟಿಯಾಗುತ್ತಾನೆ. ನೋಡಿದೊಡನೆ ತನ್ನ ಮೇಲೆ ತುಂಬಾ ಹತ್ತಿರದ ಬಂಧುವಂತೆ ಅಪಾರ ಪ್ರೀತಿ, ವಿಪರೀತ ಕಾಳಜಿ ವಹಿಸಿ ಮದುವೆಯ ಮನೆ ಸುತ್ತ ಓಡಾಡಿಸಿ ಜೊತೆಯಾಗುವ ಆತ ನಾಯಕನಿಗೆ ಪರಿಚಯವಿಲ್ಲ. ನೆನಪಿಸಿಕೊಳ್ಳಲು ಪ್ರಯತ್ನಿಸಿದರು ಜ್ಞಾಪಕವಾಗುತ್ತಿಲ್ಲ. ಉಳಿದ ಪರಿಚಯದ ಸಂಬಂಧಿಗಳೊಡನೆ ಆತನ ಬಗ್ಗೆ ಕೇಳಲು ಯತ್ನಿಸಿದರು ಸಂದರ್ಭ ಸಹಕರಿಸುವುದಿಲ್ಲ. ಅವನು ಯಾರು? ಅವನಿಗೆ ಯಾಕೆ ಇವನ ಬಗ್ಗೆ ಅಷ್ಟೊಂದು ಪ್ರೀತಿ? ನಾಯಕನಿಗೆ ಆತನ ಪರಿಚಯವಿಲ್ಲದಿದ್ದರೂ ಯಾಕೆ ಅಷ್ಟೊಂದು ಕಾಳಜಿ ವಹಿಸುತ್ತಿದ್ದಾನೆ. ಇದು ಚಿತ್ರದ ಕ್ಲೈಮ್ಯಾಕ್ಸ್. ನಡುವೆ ಆರತಕ್ಷತೆಯ ಸಂದರ್ಭ, ಮತ್ತು ಆನಂತರ ನಡೆಯುವ ಘಟನೆಗಳು ಚಿತ್ರವನ್ನು ಮುನ್ನಡೆಸುತ್ತದೆ.
ಅರವಿಂದ್ ಸ್ವಾಮಿ ಮತ್ತು ಶಿವ ಕಾರ್ತಿಕೇಯನ್ ನಡುವೆ ಸಾಗುವ ಸಿನಿಮಾದಲ್ಲಿ ದೃಶ್ಯಗಳಿಗಿಂತ ಸಂಭಾಷಣೆಗೆ ಹೆಚ್ಚಿನ ಮಹತ್ವ. ಜೊತೆಗೆ ನಾಸ್ಜಲಿಕ್ ಮೂಡ್ ಸೃಷ್ಟಿಸುವ ಹಳೆಯ ಹಾಡುಗಳ ಸಾಲುಗಳು ಭಾವ ತೀವ್ರತೆಯನ್ನು ಹೆಚ್ಚಿಸುತ್ತವೆ.
ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ ಬೆಳೆಯುತ್ತಾ ಬೆಳೆಯುತ್ತ ದಾಯಾದಿ. ಇದು ಮಹಾಭಾರತದ ಕಾಲದಿಂದಲೂ ಬಂದ ಇಂದಿಗೂ ಮುಂದುವರಿಯುತ್ತಿರುವ ಸಮಸ್ಯೆ. ಈ ದಾಯಾದಿ ಮತ್ಸರ ಆಸ್ತಿಯ ಪಾಲು ಹಂಚಿಕೆಗೆ ಹೆಣ್ಣು ಮಕ್ಕಳು ಸೇರಿಕೊಂಡ ನಂತರ ಅದು ಈಗ ಅವರಿಗೂ ವಿಸ್ತರಿಸಿ, ನಗರ ಮತ್ತು ಹಳ್ಳಿಯ ಸಕಲ ಆಸ್ತಿ ವ್ಯಾಜ್ಯಗಳು ಇಂದು ಕೋರ್ಟಿನಲ್ಲೇ ತೀರ್ಮಾನವಾಗಬೇಕಾದ ಪರಿಸ್ಥಿತಿಯನ್ನು ತಂದಿಟ್ಟಿದೆ. ಇದರಿಂದ ಸಂಬಂಧಗಳ ಬಂಧಗಳು ಸಡಿಲವಾಗುತ್ತಿವೆ. ಈ ವೈಷಮ್ಯ “ಸತ್ತರೂ ಅವನನ್ನು ಕರೆಯಬಾರದು” ಎನ್ನುವ ಹಂತಕ್ಕೆ ವ್ಯಾಪಿಸಿದೆ. ಕ್ಷಮೆ ಇದಕ್ಕೊಂದು ಪರಿಹಾರವಾದರೂ ಅದು ಅಷ್ಟು ಸುಲಭಕ್ಕೆ ದಕ್ಕುವ ಗುಣವಲ್ಲ. ಕ್ಷಮೆಯ ಮಹತ್ವವನ್ನು ಚಿತ್ರ ಮನದಟ್ಟು ಮಾಡುತ್ತದೆ. ಎಂದೊ ಯಾರಿಗೊ ತೋರಿದ ಮಮತೆ ವಾತ್ಸಲ್ಯ ಮತ್ತಾವುದೋ ರೂಪದಲ್ಲಿ ಹಿಂತಿರುಗಿ ಬರುವುದನ್ನು ಚಿತ್ರದುದ್ದಕ್ಕೂ ಕಾಣಬಹುದು.
ಇರಲಿ. ಒಂದು ಕೃತಿ ಅಥವಾ ಚಿತ್ರ ಇಷ್ಟವಾಗುವುದು ಅದರಲ್ಲಿನ ದೃಶ್ಯಗಳು ನಮ್ಮ ನೆನಪುಗಳೊಂದಿಗೆ ಸಾಮ್ಯತೆ ಸಾಧಿಸುವುದರಿಂದ. ಎಲ್ಲವನ್ನು ತೊರೆದು ಬಂದ ವ್ಯಕ್ತಿಗೆ ಹುಟ್ಟಿದ ಊರನ್ನು, ಶಿಕ್ಷಕನೊಬ್ಬನಿಗೆ ಬಿಟ್ಟು ಬಂದ ಶಾಲೆಯನ್ನು ಮರು ಭೇಟಿಯಾಗುವ ಕ್ಷಣಗಳು ಬಹಳಷ್ಟು ಸಂದರ್ಭದಲ್ಲಿ ಖುಷಿ ನೀಡುವ ಸಂಗತಿಯಾಗಿರುವುದಿಲ್ಲ. ಮೇಯಳಗನ್ ಚಿತ್ರದ ನಾಯಕನಿಗೂ ಅದೇ ಹೆದರಿಕೆ. ಬದಲಾದ ಸಂದರ್ಭ ಬದಲಾದ ಪರಿಸ್ಥಿತಿ ಅಲ್ಲಿನ ಜನ ಗುರುತಿಸುತ್ತಾರೋ ಇಲ್ಲವೋ? ಎಂಬುದು ನನ್ನನ್ನು ಕಾಡಿದ್ದಿದೆ. ಅಲ್ಲಿನ ಘಟನೆಗಳು, ಊರಿನ, ಗೆಳೆಯರ ಸ್ಥಿತಿ ಮನಸ್ಸಿಗೆ ಅಹಿತವನ್ನು ಇಲ್ಲವೇ ವಿಷಾದದ ಪರಿಸ್ಥಿತಿಗೆ ದೂಡಿದರೆ ಹೀಗೆ ಏನೇನೋ ಯೋಚನೆ ಬರುವುದುಂಟು. ಇಂಥ ದುಗುಡ ಕಾಡಿದಾಗ ಹತ್ತು ವರ್ಷಗಳ ಹಿಂದೆ ಬರೆದ ಕವಿತೆ ಇದು.
ಊರುಗೋಲಿಲ್ಲದವರು
ಊರಜಾತ್ರೆಗೆಂದು
ಬಂದು ಬಸ್ಸಿಳಿದೊಡನೆ
ಎದುರಿಗೆ ರಾಚುವ
‘ಭಾವಪೂರ್ಣ ಶ್ರದ್ದಾಂಜಲಿ”
ಮತ್ತೆ ಹುಟ್ಟಿ ಬಾ ಗೆಳೆಯ’
ಪ್ಲೆಕ್ಸಿನಲ್ಲಿ ಮುಖಗಳನ್ನು ಕಂಡೊಡನೆ
ಮನಮಿಡುಕಿ ನೆನಪುಗಳ ತಡಕುತ್ತದೆ.
ಜೊತೆಗೆ ಕ್ರಿಕೆಟ್ ಆಡಿದವನ ವಿಕೆಟ್
ಈಗ ಬಿದ್ದಿದೆ.
ನಿಟ್ಟುಸಿರಿಟ್ಟು ಮುಂದೆ ಸಾಗಿದರೆ
ಹೆಗಲ ಮೇಲೆ ಕೈ ಹಾಕಿ ನಡೆದ ಮತ್ತೊಬ್ಬ ಗೆಳೆಯ
ಬಾಗಿಲ ಓರೆ ಮಾಡುತ್ತಾನೆ.
ಹಿಂದೊಮ್ಮೆ ಅವನ ತಡೆದು ನಿಲ್ಲಿಸಿ
ಹಳೆಯ ನೆನಪುಗಳ ಕೆದಕಿದಾಗ ಹೇಳಿದ್ದ,
‘ನಿಂಗೇನಪ್ಪ ಊರುಬಿಟ್ಟೆ,
ನಮ್ಮ ಜೀವನವಿಲ್ಲಿ ಮೂರಾಬಟ್ಟೆ’
ನಿಜ, ಲಕ್ಷ ಎಕರೆಗೆ ನೀರುಣಿಸಿದ ಅಣೆಕಟ್ಟು
ದೀಪದ ಕೆಳಗೆ ಕತ್ತಲುಳಿಸಿದೆ.
ಇಲ್ಲಿರಲಾರದೆ, ಅಲ್ಲಿಗೆ ಹೋಗಲಾರದೆ
ಮುಳುಗಡೆಯ ಹಣ, ನೆಲದ ನಿರೀಕ್ಷೆಯಲಿ
ಸೋನೆಮಳೆ, ಶೀತಗಾಳಿ, ಜಿನುಗುವ ನೆಲ
ಹಳೆಯ ಮನೆಯಲ್ಲಿಯೇ
ಕೊಳೆಯುತ್ತಿರುವವರಿಗೆ
ಭರವಸೆಯೆಂಬುದು
ಬಾಗಿಲಾಚೆಯ ಬೆಳಕು.
ಊರು ಬಿಟ್ಟ ನನಗೆ
ಅಕ್ಕಪಕ್ಕದವರೆ
ಅಪರಿಚಿತರಾಗಿ
ಊರುಗೋಲುಗಳಿಲ್ಲದೆ ಬದುಕುತಿರುವುದ ಹೇಳುವುದಾದರೂ ಹೇಗೆ?
ಕಾಲದ ಕುಡುಗೋಲು
ಊರೊಳಗಿರುವವರ ಬೇರನ್ನು
ನಮ್ಮಂಥವರ ಕೊಂಬೆಗಳನ್ನು ಸವರಿ ಮೋಟಾಗಿಸಿರುವುದನ್ನುತಿಳಿಸುವುದಾದರೂ ಹೇಗೆ? ಮಾದರಿಗ್ರಾಮವಾಗಿ
ಸುತ್ತಳ್ಳಿಗೆ ದೀಪವಾಗಿದ್ದ ಊರು,
ಇಂದು ದ್ವೀಪವಾಗಿ ಪಳೆಯುಳಿಕೆಯಾಗಿರುವುದನ್ನು
ಪಡಿ ಮೂಡಿಸುವುದಾದರೂ ಹೇಗೆ?
ಬಾಗಿಲೊಳಗಿನ ಅವನು
ಬಾಗಿಲಾಚೆಯ ನಾನು
ಹೊರಬರಲಾರದೆ
ಒಳಹೋಗಲಾರದೆ
ನಿಂತಲ್ಲಿಯೆ ನಿಂತಿದ್ದೇವೆ.
ಗೊರೂರು ಶಿವೇಶ್, ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಎಂಟು ಕೃತಿಗಳು, ನಾಲ್ಕು ಲಲಿತ ಪ್ರಬಂಧಗಳ ಸಂಕಲನ, ಎರಡು ಹಾಸ್ಯ ಲೇಖನಗಳ ಸಂಗ್ರಹ ಹಾಗೂ ಎರಡು ಚಿಂತನ ಬರಹ ಪ್ರಟಕವಾಗಿವೆ. ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಡಿಕೇರಿ ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಆಡಳಿತದಿಂದ ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುರಸ್ಕಾರ ದೊರೆತಿವೆ.
ಚಿತ್ರದ ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ ಚಿತ್ರವನ್ನು ನೋಡುವ ಆಸೆ ಹೆಚ್ಚಿಸಿದೆ.ಧನ್ಯವಾದಗಳು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್