ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.

 

ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ. ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನೀರಿಂಗ್, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಮತ್ತು ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಗಳಲ್ಲಿ ಪದವಿಗಳನ್ನು ಪಡೆದಿದ್ದ ರಾಜಗೋಪಾಲರು ಅಲ್ಲೇ ಪ್ರಾದ್ಯಾಪಕರಾಗಿ ದುಡಿದಿದ್ದರು. ಬಹಳ ಒಳ್ಳೆಯ ಬರಹಗಾರರೂ ಆಗಿದ್ದ ರಾಜಗೋಪಾಲರು ಇತ್ತೀಚೆಗೆ ಎರಡು ಹೊಸ ಪುಸ್ತಕಗಳನ್ನು ಹೊರತಂದಿದ್ದರು.

‘ಸೃಷ್ಟಿ’ ಎನ್ನುವ ಅವರ ಪುಸ್ತಕ ಉತ್ತರ ಅಮೇರಿಕಾದ ಮೂಲ ಇಂಡಿಯನ್ನರ ಪುರಾಣಗಳು ಮತ್ತು ಜಾನಪದ ಕತೆಗಳ ಕುರಿತಾಗಿತ್ತು. ಈ ಪುಸ್ತಕದಲ್ಲಿ ಮೂಲನಿವಾಸಿಗಳ ಬಗ್ಗೆ ಅಮೇರಿಕನ್ನರು ತಾಳಿರುವ ತಿರಸ್ಕಾರ ಹಾಗೂ ತಪ್ಪು ತಿಳುವಳಿಕೆಗಳು ಮತ್ತು ಅಲ್ಲಿನ ಮೂಲನಿವಾಸಿಗಳು ಪರಿಸರ ಮತ್ತಿತರ ವಿಷಯಗಳಲ್ಲಿ ಎಷ್ಟು ಸುಸಂಸ್ಕೃತರಾಗಿದ್ದರು ಎಂಬುದನ್ನು ಬರೆದಿದ್ದರು. ಎರಡನೆ ಪುಸ್ತಕ, ‘ಹಲವು ಮಕ್ಕಳ ತಾಯಿ’ ಅವರ ತಾಯಿ ಶ್ರೀಮತಿ ಎಚ್.ವೈ. ಸರಸ್ವತಿಯವರನ್ನು ಕುರಿತಾಗಿತ್ತು. ಮಕ್ಕಳು ಮತ್ತು ಸ್ತ್ರೀಯರ ಅಭಿವೃದ್ಧಿಗಾಗಿ ತುಂಬಾ ಶ್ರಮಿಸಿದ ನಿಸ್ಸ್ವಾರ್ಥ ಸಮಾಜ ಸೇವಕಿ ಸರಸ್ವತಿಯವರು.

ಅಂದಹಾಗೆ ರಾಜಗೋಪಾಲರು ಹಿರಿಯ ಲೇಖಕ, ಪತ್ರಕರ್ತ ಹಾಗೂ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಶ್ರೀ ಎಚ್.ವೈ. ಶಾರದಾಪ್ರಸಾದರ ಕಿರಿಯ ಸಹೋದರ. ಇವರ ಇನ್ನೊಬ್ಬ ಅಣ್ಣ ಡಾ. ಎಚ್.ವೈ. ಮೋಹನರಾಂ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪ್ರಾಚಾರ್ಯರಾಗಿದ್ದವರು ಮತ್ತು ತಮ್ಮ ಶಾಸ್ತ್ರದಲ್ಲಿ ಅ೦ತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದವರು. ಅವರ ಎರಡನೆಯ ಅಣ್ಣ ಶ್ರೀ ನಾರಾಯಣ ದತ್ತರು ವಿಖ್ಯಾತ ಹಿಂದಿ ಪತ್ರಕರ್ತರು. ಮಡದಿ ವಿಮಲಾ ಜಾನಪದ ಗಾಯಕಿ ಮತ್ತು ಲೇಖಕಿ. ತುಂಬುಜೀವನವನ್ನು ಅರ್ಥಪೂರ್ಣವಾಗಿ ಬದುಕಿದ್ದ ರಾಜಗೋಪಾಲರು ಮಡದಿ ವಿಮಲಾ ಮತ್ತು ಮಕ್ಕಳನ್ನು ಅಗಲಿದ್ದಾರೆ. ಕೆಂಡಸಂಪಿಗೆ ಬಳಗದ ಹಿರಿಯ ಸದಸ್ಯರಾಗಿದ್ದ ರಾಜಗೋಪಾಲರಿಗೆ ನಮ್ಮೆಲ್ಲರ ಕಣ್ಣೀರು ಮತ್ತು ಕೃತಜ್ಞತೆಗಳು.

ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ. ಸಾವು ಎನ್ನುವುದು ಬಿಡುಗಡೆಯೂ ಆಗಬಲ್ಲದು ಎಂದು ಹೇಳುವ ಈ ಕಥೆ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಸಲ್ಲುವಂತಹದು.

ಹಿಂದೂಸ್ತಾನದ ಹಕ್ಕಿ

ದೇಶದೇಶ ಸುತ್ತುತ್ತಿದ್ದ ಆ ದೊಡ್ಡ ವರ್ತಕ ಹಿಂದೂಸ್ತಾನದಿಂದ ಒಂದು ಚೆಲುವಾದ ಹಕ್ಕಿಯನ್ನು ತಂದು ಅದನ್ನು ಒಂದು ಪಂಜರದಲ್ಲಿಟ್ಟು ಸಾಕುತ್ತಿದ್ದ. ತನ್ನ ವ್ಯಾಪಾರದ ಸಲುವಾಗಿ ಅವನು ಮತ್ತೆ ಒಂದು ಸಲ ಹಿಂದೂಸ್ತಾನಕ್ಕೆ ಹೋಗಬೇಕಾಯಿತು. ಆಗ ಅವನು ತನ್ನ ಪ್ರಿಯ ಹಕ್ಕಿಯ ಬಳಿ ಬಂದು ಕೇಳಿದ:
‘ನಾನು ಹಿಂದೂಸ್ತಾನಕ್ಕೆ ಹೋಗುತ್ತಿದ್ದೇನೆ, ಅಲ್ಲಿಂದ ನಿನಗೆ ಏನಾದರೂ ತರಬೇಕೆ?’
‘ನನಗೆ ಬೇಕಾದ್ದು ನನ್ನ ಸ್ವಾತಂತ್ರ್ಯ, ಇನ್ನೇನೂ ಬೇಕಾಗಿಲ್ಲ ಎಂದಿತು’ ಆ ಹಕ್ಕಿ.
ಆದರೆ ವರ್ತಕ ಈ ಮಾತಿಗೆ ಒಪ್ಪಲಿಲ್ಲ. ಆಗ ಆ ಹಕ್ಕಿ, ‘ಹಾಗಾದರೆ ಹಿಂದೂಸ್ತಾನದಲ್ಲಿ ಇಂಥ ಒಂದು ಕಾಡಿಗೆ ಹೋಗಿ ಅಲ್ಲಿ ಸ್ವತಂತ್ರವಾಗಿರುವ ನನ್ನ ಬಂಧುಗಳಿಗೆ ನಾನಿಲ್ಲಿ ಬಂಧನದಲ್ಲಿರುವುದನ್ನಾದರೂ ತಿಳಿಸು’ ಎಂದು ಕೇಳಿತು. ವರ್ತಕ ಒಪ್ಪಿಕೊಂಡ.

ಅದರಂತೆ, ತನ್ನ ಹಕ್ಕಿ ಹೇಳಿದ ಕಾಡಿಗೆ ಹೋಗಿ ಅಲ್ಲಿನ ಹಕ್ಕಿಗಳಿಗೆ ತನ್ನ ಹಕ್ಕಿ ಕಳಿಸಿದ ಸಂದೇಶ ತಿಳಿಸಿದ. ಕೂಡಲೆ ಅಲ್ಲೊಂದು ಹಕ್ಕಿ ಗಟ್ಟಿಮುಟ್ಟಾಗಿ ಹಾರಾಡಿಕೊಂಡಿದ್ದುದು ತಾನು ಕುಳಿತಿದ್ದ ಮರದ ರೆಂಬೆಯಿಂದ ತಟಕ್ಕನೆ ಸತ್ತಂತೆ ಕೆಳಕ್ಕೆ ಬಿತ್ತು. ಆಗ ವರ್ತಕ, ಅಯ್ಯೋ ಪಾಪ, ಆ ನನ್ನ ಹಕ್ಕಿಯ ಹತ್ತಿರದ ಬಂಧುವೇ ಇರಬೇಕು ಇದು, ನಾನು ಈ ಸುದ್ದಿ ಹೇಳಿ ಅದರ ಸಾವಿಗೆ ಕಾರಣನಾದೆನಲ್ಲ! ಎಂದು ವ್ಯಥೆಪಟ್ಟುಕೊಂಡ.

ಕೆಲವು ದಿನಗಳ ಮೇಲೆ, ವರ್ತಕ ತನ್ನ ಊರಿಗೆ ಹಿಂತಿರುಗಿದ. ಆಗ ಅವನ ಹಕ್ಕಿ ಕೇಳಿತು: ‘ಊರಿನಿಂದ ಏನಾದರೂ ಸಂತಸದ ಸುದ್ದಿ ತಂದಿರುವೆಯಾ?’ ಎಂದು. ವರ್ತಕ ಸ್ವಲ್ಪ ಅನುಮಾನಿಸಿ ಹೇಳಿದ: ‘ಇಲ್ಲ, ನಾನು ತಂದಿರುವುದು ಸಂತಸದ ಸುದ್ದಿ ಅಲ್ಲ… ಏನು ಮಾಡುವುದು! ನೀನು ಹೇಳಿದಂತೆಯೇ ನಾನು ಹೋಗಿ ನೀನಿಲ್ಲಿ ಪಂಜರದಲ್ಲಿರುವ ಸುದ್ದಿ ತಿಳಿಸಿದೆ. ಅದನ್ನು ಕೇಳಿ ಕೂಡಲೇ ನಿನ್ನ ಬಂಧು ಹಕ್ಕಿ ನನ್ನ ಕಾಲ ಬಳಿಯೇ ಸತ್ತು ಬಿದ್ದಿತು.’

ಈ ಮಾತು ಕೇಳಿದೊಡನೆ ವರ್ತಕನ ಹಕ್ಕಿಯೂ ಅದರಂತೆಯೇ ಪಂಜರದ ತಳಕ್ಕೆ ಉರುಳಿ ಬಿದ್ದಿತು. ಅಯ್ಯೋ ಪಾಪ, ತನ್ನ ಬಂಧುವಿನ ಸಾವಿನ ಸುದ್ದಿ ಕೇಳಿ ಇದೂ ಸತ್ತಿತು ಎಂದುಕೊಂಡ ವರ್ತಕ ದುಃಖದಿಂದ ಅದನ್ನು ಪಂಜರದಿಂದ ತೆಗೆದು ಕಿಟಕಿಯ ಗೂಡಿನಲ್ಲಿಟ್ಟ. ಕೂಡಲೆ ಹಕ್ಕಿ ಚುರುಕಿನಿಂದ ಮೇಲೆದ್ದು ಹೊರಕ್ಕೆ ಹಾರಿಹೋಗಿ ಹತ್ತಿರದ ಮರವೊಂದರ ಮೇಲೆ ಕುಳಿತುಕೊಂಡು ಹೇಳಿತು:

‘ಈಗ ತಿಳಿಯಿತೇ ನಿನಗೆ, ನೀನು ಸಂತಸದ ಸುದ್ದಿ ಅಲ್ಲ ಅಂದುಕೊಂಡಿದ್ದು ನನ್ನ ಮಟ್ಟಿಗೆ ಒಳ್ಳೆಯ ಸುದ್ದಿಯೇ ಆಯಿತು! ನಾನು ಹೇಗೆ ಬಂಧನದಿಂದ ಬಿಡಿಸಿಕೊಳ್ಳಬೇಕೆಂಬ ಸಲಹೆಯನ್ನು ನನ್ನನ್ನು ಸೆರೆಯಲ್ಲಿಟ್ಟುಕೊಂಡ ನಿನ್ನ ಮೂಲಕವೇ ತಿಳಿಸಿದರು ಅವರು…’

ಕಡೆಗೂ ಸ್ವತಂತ್ರವಾದ ಆ ಹಕ್ಕಿ ಬಹು ದೂರ ಹಾರಿಹೋಯಿತು.