ಹವ್ಯಾಸಿ ತಾಳಮದ್ದಲೆ ವಾದಕರಾಗಿ ಪ್ರಸಿದ್ಧರಾಗಿದ್ದ ಗಿರೀಶ್‌ ಪರಂಗೋಡು ಎರಡು ದಿನಗಳ ಹಿಂದಷ್ಟೇ ನಿಧನ ಹೊಂದಿದರು. ಅವರೊಂದಿಗಿನ ಒಡನಾಟದ ಕುರಿತು ಅವರ ಆಪ್ತ ಸ್ನೇಹಿತರಾದ ಗಣೇಶ್ ಭಟ್ ಬಾಯಾರು ಬರಹ…

 

ನನ್ನ ನಿಡುಗಾಲದ ಒಡನಾಡಿ ಬೆಂಗಳೂರಿನ ಕೋಣನಕುಂಟೆ ಶ್ರೀನಿಧಿ ಬಡಾವಣೆಯ ಆತ್ಮೀಯ ಸ್ನೇಹಿತ ಗಿರೀಶ್ ಪರಂಗೋಡು (ಅರಿತಲ) ತೀರಿಕೊಂಡಿದ್ದಾರೆ. 51 ರ ಹರೆಯದ ಗಿರೀಶ್‌, ಇದೇ 28ರ ಭಾನುವಾರ ಪತ್ನಿ ಹಾಗೂ ಆತ್ಮೀಯ ಸ್ನೇಹಿತರೊಂದಿಗೆ ಗೋವಾ ಪ್ರವಾಸದಲ್ಲಿದ್ದರು. ಅದೇ ದಿನ ವಸತಿಗೃಹದಲ್ಲಿ ಮಧ್ಯಾಹ್ನದ ವಿಶ್ರಾಂತಿಯನ್ನು ಪಡೆಯುತ್ತಿದ್ದ ಸಮಯ ಹೃದಯಾಘಾತಕ್ಕೆ ಬಲಿಯಾಗಿ ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ.

ಗಿರೀಶ್ ಅರಿತಲ ಅವರು ಥ್ಯಾಲೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು, ತಂದೆ ಸುಬ್ರಹ್ಮಣ್ಯ ಪರಂಗೋಡು (84) ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಹವ್ಯಾಸೀ ತಾಳಮದ್ದಳೆ ಅರ್ಥಧಾರಿಗಳು. ತಾಯಿ ಲಲಿತಾರವರು ಕಳೆದ ವರ್ಷವಷ್ಟೇ ನಿಧನರಾಗಿದ್ದು, ಧರ್ಮಪತ್ನಿ ಡಾ.ಕೀರ್ತಿ ಬದಿಯಡ್ಕ ಅವರು ಸಿಲಿಕಾನ್ ಸಿಟಿ ಕಾಲೇಜಿನ ಪ್ರಾಂಶುಪಾಲೆಯಾದರೆ ಪುತ್ರ ನಮನ್ ಕಶ್ಯಪ್ ಐ.ಟಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಇವರಿಗೆ ಇಬ್ಬರು ಸಹೋದರಿಯರೂ ಇದ್ದಾರೆ.

51 ವಸಂತಗಳನ್ನು ಕಂಡ ಗಿರೀಶಣ್ಣ, ಬದುಕಿನಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ಯಾವತ್ತೂ ಗರ್ವವನ್ನಾಗಲೀ ದೊಡ್ಡಸ್ಥಿಕೆಯನ್ನಾಗಲೀ ಯಾರಲ್ಲೂ ತೋರಿದವರಲ್ಲ ಸದಾ ನಗುಮುಖದ ಸ್ನೇಹಜೀವಿ ಎಂದೂ ಯಾರಲ್ಲೂ ಕೋಪವನ್ನೋ ಮುನಿಸನ್ನೋ ಖಂಡಿತಾ ತೋರಿದವರಲ್ಲ. ಅಪ್ಪಟ ದೈವಭಕ್ತರೂ ಆಗಿದ್ದ ಗಿರೀಶ್ ಅಷ್ಟೇ ವಿನಯವಂತರು.

ಮೃತರ ಕಳೇಬರವನ್ನು ಗೋವಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಸೋಮವಾರ 10:30ಗೆ ತರಲಾಯಿತು. ಸುಮಾರು ಮೂರು ಗಂಟೆಯ ವೇಳೆ ಬನಶಂಕರಿ ಚಿತಾಗಾರದಲ್ಲಿ ಸಕಲ ವಿಧಿ ವಿಧಾನಗಳನ್ನು ಮಾಡಿ ದೇಹಕ್ಕೆ ಅಗ್ನಿಸ್ಪರ್ಶವನ್ನು ಮಾಡಿ ಅವರನ್ನು ಬೀಳ್ಕೊಡಲಾಯಿತು.

ಗಿರೀಶ್ ಸದಾ ತಾವಾಯಿತು ತಮ್ಮ ಕೆಲಸವಾಯಿತು ಮನೆಯಾಯಿತು ಎನ್ನದೇ ತಮ್ಮನ್ನು ತಾವು ಸಾಮಾಜಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದವರು. ಕೆಲಸದ ಜೊತೆಗೇ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಹವ್ಯಾಸಿ ಮದ್ದಳೆವಾದಕರಾಗಿ ಪ್ರಸಿದ್ಧಿಯನ್ನು ಪಡೆದವರಲ್ಲದೆ ಕೋಣನಕುಂಟೆ ಪರಿಸರದಲ್ಲಿ ಶ್ರೀರಾಮ ಯಕ್ಷಕಲಾ ಸಂಘ ಎಂಬ ಸಂಸ್ಥೆಯ ಸ್ಥಾಪನೆಗೆ ಕಾರಣವಾಗಿ ಆ ಸಂಸ್ಥೆಯ ಕಾರ್ಯದರ್ಶಿಯಾಗಿ ಹತ್ತು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದರು. ಇಂಥ ಒಡನಾಡಿಗೆ ನನ್ನ ಅಂತಿಮ ಆತ್ಮೀಯ ನಮನಗಳು..