ಪ್ರಾಚೀನ ಗ್ರೀಕ್ ತತ್ವಶಾಸ್ತ್ರಜ್ಞರಿಂದ ಹಿಡಿದು, ಧಾರ್ಮಿಕ ಗುರುಗಳೂ, ಮೇಧಾವಿಗಳೂ ಈ ಪ್ರಶ್ನೆಗೆ ತಮ್ಮದೇ ವಿಧಾನಗಳಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.  ಉದಾಹರಣೆಗೆ, ಬೈಬಲ್ ಆಧಾರದ ಮೇಲೆ, “ಆದಿ ಮಾನವ” ಆಡಂ ನ ವರೆಗಿನ ತಲೆಮಾರುಗಳ ಲೆಕ್ಕದಲ್ಲಿ, ನಮ್ಮ ಭೂಮಿಗೆ, ಕೇವಲ ಆರರಿಂದ ಹತ್ತು ಸಾವಿರ ವರ್ಷದ ಹರೆಯ. ಆದರೆ, ಹತ್ತೊಂಬತ್ತನೆಯ ಶತಮಾನದ ಖ್ಯಾತ ಭೌತಶಾಸ್ತ್ರಜ್ಞ ಲಾರ್ಡ್ ಕೆಲ್ವಿನ್ನನ ಲೆಕ್ಕಾಚಾರದ ಪ್ರಕಾರ, ಭೂಮಿಗೆ ಸುಮಾರು ಹತ್ತು ಕೋಟಿ ವರ್ಷ ವಯಸ್ಸು. ಕೆಲ್ವಿನ್ನನ ಲೆಕ್ಕಾಚಾರ, ಅವನ ಸಮಕಾಲೀನನಾಗಿದ್ದ, ಇನ್ನೊಬ್ಬ ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ನ ಎವೊಲ್ಯೂಷನ್ ಥಿಯರಿಗೆ ತಾಳೆ ಹೊಂದದಿದ್ದುದು ಬೇರೊಂದು ವಿಷಯ!
ಶೇಷಾದ್ರಿ ಗಂಜೂರು ಬರೆಯುವ ‘ವಿಜ್ಞಾನ ಸರಣಿ’ಯಲ್ಲಿ ಒಂದು ಬರಹ

 

ನಾನು, ಕೆಲ ವರ್ಷಗಳಿಂದ, ಕೃತಕ ಬುದ್ಧಿಮತ್ತೆಯ ಕುರಿತು ಸಂಶೋಧನೆ ನಡೆಸುತ್ತಿರುವ ರೀಸರ್ಚ್ ಸೈಂಟಿಸ್ಟ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಮ್ಮ ಕೆಲಸ, ಬಹುಮಟ್ಟಿಗೆ, ಇಂಗ್ಲೀಷ್ ಭಾಷೆಯ ನಾನಾ ಮಜಲುಗಳನ್ನು ಹಲವಾರು ರೀತಿಯಲ್ಲಿ ವಿಶ್ಲೇಷಿಸಿ, ವಿವಿಧ ರೀತಿಯ ಕೃತಕ ನ್ಯೂರಲ್ ನೆಟ್‌ಗಳನ್ನು ನಿರ್ಮಿಸಿ, ಅವುಗಳಿಗೆ ಕಾನೂನು, ಟ್ಯಾಕ್ಸ್ ಇತ್ಯಾದಿ ಸಂಕೀರ್ಣ ವಿಷಯಗಳನ್ನು “ಕಲಿಸುವ” ಯತ್ನಗಳೇ ಆಗಿರುತ್ತವೆ. ಕಾನೂನು, ಟ್ಯಾಕ್ಸ್ ಇತ್ಯಾದಿಗಳು, ನಾನು ಕೆಲಸ ಮಾಡುವ ಸಂಸ್ಥೆಯ ಬ್ಯುಸಿನೆಸ್‌ಗಳಿಗೆ ಸಂಬಂಧಿಸಿರುವ ವಿಷಯಗಳು. ನಮ್ಮ ಯತ್ನಗಳು, ಪ್ರಯೋಗಗಳು ಯಶ ಕಂಡಾಗ, ಅದರಿಂದ ನಮ್ಮ ಸಂಸ್ಥೆಗೆ ಆರ್ಥಿಕ ಲಾಭವಾಗುತ್ತದೆ. ಆದರೆ, ಹಲವೊಮ್ಮೆ, ಯಾವುದೇ ಹಣಕಾಸಿನ ಲಾಭ ಇರದಿದ್ದರೂ, ನಾವು ನಿರ್ಮಿಸುವ “ಕೃತಕ ನ್ಯೂರಲ್‌ನೆಟ್‌ಗಳಿಗೆ ವಿಲಿಯಂ ಶೇಕ್ಸ್‌ಪಿಯರ್ ತರಹ ಸಾನೆಟ್‌ಗಳನ್ನು ರಚಿಸಲು ಸಾಧ್ಯವೇ?” ಎಂಬಂತಹ ಪ್ರಶ್ನೆಗಳನ್ನು ಹಾಕಿಕೊಂಡು ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳಲು ಯತ್ನಿಸುತ್ತೇವೆ. ಹಾಗೆಯೇ, ಭಾರತೀಯ ವೇದಾಂತದ ವಿಷಯಗಳನ್ನು ಕಲಿಸಿ, ಅದರ ಆಧಾರದ ಮೇಲೆ, ನಮ್ಮ, ಆಳವೆನ್ನಿಸಬಹುದಾದ ಪ್ರಶ್ನೆಗಳಿಗೆ, ಈ ನ್ಯೂರಲ್ ನೆಟ್‌ಗಳು ಉತ್ತರಗಳನ್ನು ನೀಡಬಲ್ಲವೇ ಎಂಬಂತಹ ಪ್ರಯೋಗಗಳನ್ನು ಸ್ವತಃ ನಾನೇ ಮಾಡಿದ್ದೇನೆ. ಇದರಿಂದ “ಲಾಭ, ಉಪಯೋಗಗಳುಂಟೇ?” ಎಂದು ಎಷ್ಟೋ ಸಾರಿ, ಹಲವರು ಪ್ರಶ್ನಿಸಿದ್ದೂ ಇದೆ.

ಕುತೂಹಲ ತಣಿಸುವ ಯತ್ನಗಳ ಆನಂದಕ್ಕಿಂತ, ಲಾಭ, ಉಪಯೋಗಗಳು ಬೇಕೇ?!

*****

ಜರ್ಮನಿಯ ಕಾರ್ಲ್ ಬೆಂಜ್ 1885-86ರ ಹೊತ್ತಿಗೆ ಆಟೋಮೊಬೈಲ್ ತಯಾರಿಕೆಯನ್ನು ಪ್ರಾರಂಭಿಸಿದ್ದನಾದರೂ, ಅದು ಕೇವಲ ಕೆಲವೇ ಶ್ರೀಮಂತರ ಬೆಲೆ ಬಾಳುವ ಆಟಿಕೆಯಾಗಿತ್ತೇ ಹೊರತು, ಇಂದು ನಾವು ಸಾಮಾನ್ಯವೆಂದೆಣಿಸುವ ‘ಕಾರ್ʼ ಆಗಿರಲಿಲ್ಲ. ಅದನ್ನು ಬದಲಿಸಿದವನು, ಅಮೆರಿಕದ ಹೆನ್ರಿ ಫೋರ್ಡ್. ಅವನು, 1908ರಲ್ಲಿ ತನ್ನ ಕಾರ್ಖಾನೆಯಲ್ಲಿ “ಅಸೆಂಬ್ಲಿ ಲೈನ್” ಪದ್ಧತಿಯನ್ನು ಪ್ರಾರಂಭಿಸಿದ.

ಹೀಗೆ, ಅವನು ತಯಾರಿಸಿದ “ಮಾಡೆಲ್ ಟಿ” ಕಾರ್, ಬೆಂಜ಼್‌ನ ಕಾರಿನಂತೆ, ಕೇವಲ ಅತಿ ಶ್ರೀಮಂತರ ಆಟಿಗೆಯಾಗಿ ಉಳಿಯಲಿಲ್ಲ; ಅಂದಿನ ಮೇಲ್-ಮಧ್ಯಮವರ್ಗದವರಿಗೂ ಎಟುಕುವ ದರದಲ್ಲಿ ಅದು ದೊರಕುತ್ತಿತ್ತು. ಆದರೆ, ಅಂದಿನ ಕಾರುಗಳ ಎಂಜಿನ್ ಕಾರ್ಯದಕ್ಷತೆ (“efficiency”) ಹೆಚ್ಚು ಇರಲಿಲ್ಲ. ಜೊತೆಗೆ, ಆ ಕಾರುಗಳ ಕೆಲವೊಂದು ಬಿಡಿ ಭಾಗಗಳು ಬಹು ಬೇಗ ಕೆಟ್ಟು ನಿಲ್ಲುತ್ತಿದ್ದವು. ಹೀಗಾಗಿ, ಕಾರುಗಳ ಮಾರಾಟ ಹೆಚ್ಚಾದರೂ, ಅದೊಂದು Reliable ವಾಹನವಾಗಿ ಬಳಕೆಗೆ ಬರುವುದು ಕಷ್ಟವಾಯಿತು. ಎಂಜಿನ್ efficiency ಕಡಿಮೆ ಇದ್ದದ್ದರಿಂದ, ಕಾರನ್ನು ಹೆಚ್ಚು ದೂರ ಡ್ರೈವ್ ಮಾಡಲೂ ಸಾಧ್ಯವಿರಲಿಲ್ಲ. ಅಲ್ಲೋ-ಇಲ್ಲೋ ಎಲ್ಲೋ ಒಂದು ಪೆಟ್ರೋಲು ಬಂಕ್ ಇದ್ದ ಕಾಲ ಅದು.

ಎಂಜಿನ್ efficiency ಕಡಿಮೆ ಇರಲು, ಅಂದಿನ ಎಂಜಿನ್‌ಗಳ ವಿನ್ಯಾಸವೂ ಕಾರಣವಿದ್ದರೂ, ಅದರ ಮುಖ್ಯ ಕಾರಣ, ಆಗ ಲಭ್ಯವಿದ್ದ ಪೆಟ್ರೋಲಿನ ಕಡಿಮೆ ಆಕ್ಟೇನ್ ರೇಟಿಂಗ್. ಆಕ್ಟೇನ್ ರೇಟಿಂಗ್ ಹೆಚ್ಚಿದ್ದಷ್ಟೂ, (ಬಹು ಮಟ್ಟಿಗೆ) ಎಂಜಿನ್ ದಕ್ಷತೆ ಹೆಚ್ಚುತ್ತದೆ. ಆದರೆ, ಈ ಆಕ್ಟೇನ್ ರೇಟಿಂಗ್ ಹೆಚ್ಚಿಸುವುದಾದರೂ, ಹೇಗೆ?!

ಈ ಪ್ರಶ್ನೆಗೆ ಉತ್ತರ ನೀಡಿದವನು, ಥಾಮಸ್ ಮಿಡ್ಜ್‌ಲೀ ಎಂಬ ಹೆಸರಿನ ಒಬ್ಬ ಎಂಜಿನಿಯರ್. ಇವನು ಜೆನೆರಲ್ ಮೋಟಾರ್ಸ್ ಕಂಪೆನಿಯ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವನು. ಅವನು, ಪೆಟ್ರೋಲಿಗೆ ಏನೇನೋ ರಾಸಾಯನಿಕಗಳನ್ನು ಬೆರೆಸಿ, ಅದರಿಂದ ಎಂಜಿನ್ ಎಫಿಷಿಯೆನ್ಸಿ ಹೆಚ್ಚಿಸಬಹುದೇ ಎಂಬ ಪ್ರಯತ್ನಗಳನ್ನು ಮಾಡುತ್ತಿದ್ದ. 1921ರಲ್ಲಿ ಅವನ ಇಂತಹ ಒಂದು ಪ್ರಯತ್ನ ಯಶ ಕಂಡಿತು. ಟೆಟ್ರಾ ಇಥೈಲ್ ಲೆಡ್ ಎಂಬ ರಾಸಾಯನವನ್ನು ಪೆಟ್ರೋಲಿಗೆ ಕೊಂಚ ಪ್ರಮಾಣದಲ್ಲಿ ಸೇರಿಸಿದರೆ, ಎಂಜಿನ್ ಎಫಿಷಿಯೆನ್ಸಿ ಹೆಚ್ಚುವುದು ಪ್ರಯೋಗಗಳ ಮೂಲಕ ಅವನಿಗೆ ತಿಳಿಯಿತು. ಅಷ್ಟೇ ಅಲ್ಲ, ಹೀಗೆ, ಪೆಟ್ರೋಲಿಗೆ ಟೆಟ್ರಾ ಇಥೈಲ್ ಲೆಡ್ ಸೇರಿಸಿದಾಗ, ಅದಕ್ಕೆ ಮುನ್ನ, ಬಹು ಬೇಗ ಕೆಟ್ಟು ನಿಲ್ಲುತ್ತಿದ್ದ ಎಂಜಿನ್ನಿನ ಕೆಲವು ಭಾಗಗಳ ಬಾಳ್ವಿಕೆಯೂ ಹೆಚ್ಚಾಗುವ ವಿಷಯವೂ ಹೊರಬಂತು. ಸಹಜವಾಗಿಯೇ, ಈ ಸಂಶೋಧನೆಯಿಂದ, ಮಿಡ್ಜ್‌ಲೀಗೆ ಅಪಾರ ಮನ್ನಣೆ, ಹಣ ದೊರಕಿತು.

(ಥಾಮಸ್ ಮಿಡ್ಜ್‌ಲೀ)

ಮಿಡ್ಜ್‌ಲೀ ಸೃಷ್ಟಿಸಿದ ಈ ರಸಾಯನವನ್ನು ಪೆಟ್ರೋಲಿಗೆ ಬೆರೆಸಲಾರಂಭಿಸಿದವರಲ್ಲಿ ಮೊದಲಿಗರು, ಸ್ಟಾಂಡರ್ಡ್ ಆಯಿಲ್ ಕಂಪೆನಿ ಎಂಬ ಪೆಟ್ರೋಲ್ ಕಂಪೆನಿಯವರು. ಇಂದು ಆ ಕಂಪೆನಿ ಎಕ್ಸಾನ್ ಮೊಬಿಲ್ ಎಂಬ ಹೆಸರಿನಲ್ಲಿದೆ.

ಈ ಟೆಟ್ರಾ ಇಥೈಲ್ ಲೆಡ್ ರಸಾಯನವನ್ನು ತಯಾರಿಸುವುದು ಅಂತಹ ಕಷ್ಟದ ಕೆಲಸವೇನೂ ಅಲ್ಲ. ಜೊತೆಗೆ, ಖರ್ಚೂ ಕಡಿಮೆ. ಹೀಗಾಗಿ, ಮಿಡ್ಜ್‌ಲೀ ಯ ಈ ಸಂಶೋಧನೆ, ಇಡೀ ಜಗತ್ತಿಗೇ ಹಬ್ಬಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೆಲವೇ ವರ್ಷಗಳಲ್ಲಿ, ಪ್ರಪಂಚದ ಎಲ್ಲಾ ಪೆಟ್ರೋಲ್ ಉತ್ಪಾದಕರೂ, ಈ ಮಿಡ್ಜ್‌ಲೀ ರಸಾಯನವನ್ನು ಪೆಟ್ರೋಲಿಗೆ ಬೆರೆಸಲಾರಂಭಿಸಿದರು. ಕಾರುಗಳ ಬಳಕೆಯೂ ಹೆಚ್ಚಾಯಿತು. ಮೋಟಾರ್ ವಾಹನಗಳು Reliable Vehicles ಆದವು. ಅಲ್ಲಿಯವರೆಗೆ, ಕುದುರೆಗಳ ಲದ್ದಿಯಿಂದ ಹೊಲಸಾಗಿರುತ್ತಿದ್ದ, ಲಂಡನ್‌ನಂತಹ ಮಹಾ ನಗರಗಳ ರಸ್ತೆಗಳು ಸ್ವಚ್ಛವಾದವು. ಇಪ್ಪತ್ತನೆಯ ಶತಮಾನದ ದಿಕ್ಕೇ ಬದಲಾಯಿತು.

ಇಂದು ಥಾಮಸ್ ಮಿಡ್ಜ್‌ಲೀ ಹೆಸರು ಹೆಚ್ಚು ಜನರಿಗೆ ಗೊತ್ತಿಲ್ಲ. ಅವನೊಬ್ಬ ಮೇಧಾವಿ ವಿಜ್ಞಾನಿ ಇರಲಿ, ವೃತ್ತಿಯಿಂದ ವಿಜ್ಞಾನಿಯೇ ಅಲ್ಲ. ಅವನೊಬ್ಬ ಮೆಕ್ಯಾನಿಕಲ್ ಎಂಜಿನಿಯರ್. ಅಂದಿನ ಯುಗಕ್ಕೆ ಕಾಡುತ್ತಿದ್ದ ಮಹಾ ಸಮಸ್ಯೆಯೊಂದಕ್ಕೆ ಅಷ್ಟೇನೂ ಖರ್ಚಿಲ್ಲದ ಸುಲಭೋಪಾಯ ಕಂಡುಹಿಡಿದವನು, ಅಷ್ಟೇ.

*****

“ನಮ್ಮ ಭೂಮಿಯ ವಯಸ್ಸೆಷ್ಟು?”
ಪ್ರಾಚೀನ ಗ್ರೀಕ್ ತತ್ವಶಾಸ್ತ್ರಜ್ಞರಿಂದ ಹಿಡಿದು, ಧಾರ್ಮಿಕ ಗುರುಗಳೂ, ಮೇಧಾವಿಗಳೂ ಈ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನಿಸಿದ್ದಾರೆ – ತಮ್ಮದೇ ವಿಧಾನಗಳಲ್ಲಿ. ಉದಾಹರಣೆಗೆ, ಬೈಬಲ್ ಆಧಾರದ ಮೇಲೆ, “ಆದಿ ಮಾನವ” ಆಡಂ ನ ವರೆಗಿನ ತಲೆಮಾರುಗಳ ಲೆಕ್ಕದಲ್ಲಿ, ನಮ್ಮ ಭೂಮಿಗೆ, ಕೇವಲ ಆರರಿಂದ ಹತ್ತು ಸಾವಿರ ವರ್ಷದ ಹರೆಯ. ಆದರೆ, ಹತ್ತೊಂಬತ್ತನೆಯ ಶತಮಾನದ ಖ್ಯಾತ ಭೌತಶಾಸ್ತ್ರಜ್ಞ ಲಾರ್ಡ್ ಕೆಲ್ವಿನ್ನನ ಲೆಕ್ಕಾಚಾರದ ಪ್ರಕಾರ, ಭೂಮಿಗೆ ಸುಮಾರು ಹತ್ತು ಕೋಟಿ ವರ್ಷ ವಯಸ್ಸು. ಕೆಲ್ವಿನ್ನನ ಲೆಕ್ಕಾಚಾರ, ಅವನ ಸಮಕಾಲೀನನಾಗಿದ್ದ, ಇನ್ನೊಬ್ಬ ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ನ ಎವೊಲ್ಯೂಷನ್ ಥಿಯರಿಗೆ ತಾಳೆ ಹೊಂದದಿದ್ದುದು ಬೇರೊಂದು ವಿಷಯ!

ಈ ಪ್ರಶ್ನೆಗೆ, 1956ರಲ್ಲಿ, ವೈಜ್ಞಾನಿಕ ಪುರಾವೆಗಳೊಂದಿಗೆ, ಉತ್ತರವನ್ನು ನೀಡಿದವನು, ಅಮೆರಿಕದ ಕ್ಯಾಲ್‌ಟೆಕ್ ವಿಶ್ವವಿದ್ಯಾಲಯದ ಭೂಗರ್ಭಶಾಸ್ತ್ರಜ್ಞ ಕ್ಲೇರ್ ಪ್ಯಾಟೆರ್ಸನ್.

*****

1898ರಲ್ಲಿ, ಪೋಲಿಷ್-ಫ್ರೆಂಚ್ ವಿಜ್ಞಾನಿ ಮೇರೀ ಕ್ಯೂರಿ, ಯುರೇನಿಯಂ ತರಹದ ಭಾರೀ ಲೋಹಗಳು, ರೇಡಿಯೋ-ಆಕ್ಟಿವ್ ಡಿಕೇ (radioactive decay) ಪ್ರಕ್ರಿಯೆಯ ಮೂಲಕ ವಿಕೀರಣಗಳನ್ನು ಬೀರುತ್ತಾ ಕ್ಷಯವಾಗುವುದನ್ನು ತೋರಿಸಿಕೊಟ್ಟಿದ್ದಳು. 1904ರಲ್ಲಿ, ಇನ್ನೊಬ್ಬ ಮಹಾವಿಜ್ಞಾನಿ, ಅಣುಶಾಸ್ತ್ರಜ್ಞ ಅರ್ನೆಸ್ಟ್ ರುದರ್ಫರ್ಡ್, ಈ ಕ್ಷಯವಾಗುವ ವೇಗಕ್ಕೆ (rate of decaying) ಒಂದು ಲಯವಿರುವುದರಿಂದ, ಈ ಪ್ರಕ್ರಿಯೆಯನ್ನು, ಗಡಿಯಾರದಂತೆ ಉಪಯೋಗಿಸಬಹುದೆಂದು ತೋರಿಸಿಕೊಟ್ಟ. ಉದಾಹರಣೆಗೆ, ಇಂದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಕೋಬಾಲ್ಟ್-೬೦ ಎಂಬ ಲೋಹವನ್ನೇ ಗಮನಿಸೋಣ. ಅದಕ್ಕೆ ೫.೬ ವರ್ಷಗಳ “ಹಾಫ್-ಲೈಫ್” ಇದೆ. ಎಂದರೆ, ನಿಮ್ಮ ಬಳಿ, ಇಂದು ೧೦ ಗ್ರಾಮ್ ಕೋಬಾಲ್ಟ್-೬೦ ಇದ್ದರೆ, ೫.೬ವರ್ಷಗಳ ನಂತರ, ಆ ಲೋಹದ ಅರ್ಧದಷ್ಟು ಭಾಗ ಕ್ಷಯವಾಗಿ, ನಿಮ್ಮ ಬಳಿ ಕೇವಲ ೫ ಗ್ರಾಂ ಕೋಬಾಲ್ಟ್-೬೦ ಮಾತ್ರ ಉಳಿದಿರುತ್ತದೆ. ಹೀಗಾಗಿ, ನಿಮ್ಮ ಸಂಗ್ರಹದಲ್ಲಿರುವ ಕೋಬಾಲ್ಟ್-೬೦ನ್ನು ಗಡಿಯಾರದ ರೂಪದಲ್ಲಿ ಉಪಯೋಗಿಸಬಹುದು.

(ಜ಼ೆರ್ಕಾನ್ ಕಲ್ಲು)

ಜ಼ಿರ್ಕಾನ್ ಕಲ್ಲುಗಳು, ಭೂಮಿಯ ಮೇಲ್ಪದರಲ್ಲಿ ಹೇರಳವಾಗಿ ದೊರಕುತ್ತವೆ. ಈ ಕಲ್ಲುಗಳಲ್ಲಿ ಕೊಂಚ ಮಟ್ಟಿಗೆ ಯುರೇನಿಯಂ ಅಂಶ ಇರುತ್ತದೆ. ಈ ಯುರೇನಿಯಂ ಕಾಲ ಕ್ರಮೇಣ ಕ್ಷೀಣಿಸುತ್ತಾ, ಸೀಸ (ಲೆಡ್ – lead)ವಾಗಿ ಮಾರ್ಪಡುತ್ತದೆ. ಈ ಕಲ್ಲುಗಳಲ್ಲಿ, ಯುರೇನಿಯಂ ಪ್ರಮಾಣ ಎಷ್ಟಿದೆ, ಸೀಸದ ಪ್ರಮಾಣ ಎಷ್ಟಿದೆ ಎಂದು ತಿಳಿದುಕೊಂಡರೆ, ಆ ಕಲ್ಲಿನ ವಯಸ್ಸೆಷ್ಟು ಎಂದು ತಿಳಿಯಬಹುದು. ಪ್ಯಾಟರ್ಸನ್ ಮೊದಲಿಗೆ ಅದನ್ನೇ ಮಾಡಿದ.

ಭೂಮಿಯ ಸೃಷ್ಟಿಯ ಸಮಯದಲ್ಲಿಯೇ ಸೃಷ್ಟಿಯಾದ ಜ಼ೆರ್ಕಾನ್ ಕಲ್ಲುಗಳು ಸಿಕ್ಕರೆ, ಅವುಗಳ ವಯಸ್ಸಿನ ಆಧಾರದ ಮೇಲೆ, ಭೂಮಿಯ ಆಯಸ್ಸು ಎಷ್ಟೆಂದು ತಿಳಿಯಬಹುದು. ಆದರೆ, ಭೂಮಿ ಸೃಷ್ಟಿಯಾದ ಸಮಯದಲ್ಲಿಯೇ ಸೃಷ್ಟಿಯಾದ ಕಲ್ಲುಗಳು ಎಲ್ಲಿ ಸಿಗುತ್ತವೆ? ಇದಕ್ಕೆ ಉತ್ತರ: ಉಲ್ಕೆಗಳು (meteorites).

ಆಗಿಂದಾಗ್ಗೆ ಭೂಮಿಗೆ ಬಡಿಯುವ ಉಲ್ಕೆಗಳು, ನಮ್ಮ ಸೌರ ಮಂಡಲದ ಗ್ರಹಗಳು ಸೃಷ್ಟಿಯಾದ ಸಮಯದಲ್ಲಿಯೇ ಸೃಷ್ಟಿಯಾದಂತಹವು. ಅವುಗಳಲ್ಲಿನ ಯುರೇನಿಯಂ-ಸೀಸ ಪ್ರಮಾಣವನ್ನು ಪರಿಶೀಲಿಸಿದರೆ, ಆ ಉಲ್ಕೆಯ ಹಾಗೂ ನಮ್ಮ ಭೂಮಿಯ ವಯಸ್ಸನ್ನು ಅಂದಾಜಿಸಬಹುದು. ಅಮೆರಿಕದ ಅರಿಜ಼ೋನ ರಾಜ್ಯದ ಕಾನ್ಯನ್ ಡಯಾಬ್ಲೋ ಎಂಬಲ್ಲಿ ಸಿಕ್ಕ ಉಲ್ಕಾ ಶಿಲೆಯನ್ನು ಪರಿಶೀಲಿಸಿದಾಗ, ಪ್ಯಾಟರ್ಸನ್‌ಗೆ ಭೂಮಿಯ ವಯಸ್ಸು ಕೊನೆಗೂ ಗೊತ್ತಾಯಿತು. ಭೂಮಿಯ ವಯಸ್ಸು: ಸುಮಾರು ನಾನೂರೈವತ್ತು ಕೋಟಿ ವರ್ಷ!

ಹೀಗೆ, ಪೆಟ್ರೋಲಿಗೆ ಟೆಟ್ರಾ ಇಥೈಲ್ ಲೆಡ್ ಸೇರಿಸಿದಾಗ, ಅದಕ್ಕೆ ಮುನ್ನ, ಬಹು ಬೇಗ ಕೆಟ್ಟು ನಿಲ್ಲುತ್ತಿದ್ದ ಎಂಜಿನ್ನಿನ ಕೆಲವು ಭಾಗಗಳ ಬಾಳ್ವಿಕೆಯೂ ಹೆಚ್ಚಾಗುವ ವಿಷಯವೂ ಹೊರಬಂತು. ಸಹಜವಾಗಿಯೇ, ಈ ಸಂಶೋಧನೆಯಿಂದ, ಮಿಡ್ಜ್‌ಲೀಗೆ ಅಪಾರ ಮನ್ನಣೆ, ಹಣ ದೊರಕಿತು.

ಪ್ಯಾಟರ್ಸನ್‌ನ ಈ ಶೋಧನೆ, ಅಷ್ಟೇನೂ ಸುಲಭವಾಗಿರಲಿಲ್ಲ. ಜ಼ೆರ್ಕಾನ್ ಕಲ್ಲುಗಳಲ್ಲಿ ಇರುವ ಯುರೇನಿಯಂ ಮತ್ತು ಸೀಸದ ಪ್ರಮಾಣಗಳನ್ನು ಅವನು ಅತ್ಯಂತ ಜಾಗರೂಕತೆಯಿಂದ ಅಳೆಯ ಬೇಕಿತ್ತು. ಆಗ, ಅವನಿಗೆ ಮುಖ್ಯವಾಗಿ ಕಾಡಿದ್ದು, ಎಲ್ಲೆಂದರಲ್ಲಿ ಕಾಣಬರುತ್ತಿದ್ದ ಸೀಸ. ಅವನ ಪ್ರಯೋಗಾಲಯ, ಅದರಲ್ಲಿದ್ದ ಮೇಜು, ಆ ಮೇಜಿನ ಮೇಲಿದ್ದ ವೈಜ್ಞಾನಿಕ ಉಪಕರಣಗಳು, ಹೀಗೆ ಪ್ರತಿಯೊಂದರ ಮೇಲೂ ಸೀಸವೇ ಸೀಸ! ಹೊರಗಿನ ಸೀಸ, ಅವನ ಕಲ್ಲಿನ ಸೀಸದ ಲೆಕ್ಕಾಚಾರವನ್ನು ತಪ್ಪಿಸುತ್ತಿತ್ತು. ಕೊನೆಗೆ ಅವನು, ತನ್ನ ಪ್ರಯೋಗ ಶಾಲೆಯನ್ನು ಸೀಸ, ಧೂಳು, ಮತ್ತಿತರೆ ಅಶುದ್ಧತೆಗಳಿಂದ ಮುಕ್ತಮಾಡಿಸುವ ವಿಧಾನವನ್ನು ಕಂಡುಕೊಳ್ಳಬೇಕಾಯಿತು. ಈಗ ಹಲವಾರು ವೈಜ್ಞಾನಿಕ ಸಂಶೋಧನೆಗಳಲ್ಲಿ ಸಾಮಾನ್ಯವಾಗಿರುವ “ಕ್ಲೀನ್ ರೂಮ್” ಪರಿಕಲ್ಪನೆಯನ್ನು ಮೊಟ್ಟಮೊದಲಿಗೆ ಕಾರ್ಯಗತ ಮಾಡಿದವನು ಪ್ಯಾಟರ್ಸನ್.

ಇಂದು, ಕ್ಲೇರ್ ಪ್ಯಾಟರ್ಸನ್ ಹೆಸರು ಸಹ ಬಹು ಮಟ್ಟಿಗೆ ಯಾರಿಗೂ ಗೊತ್ತಿಲ್ಲ. ಥಾಮಸ್ ಮಿಡ್ಜ್‌ಲೀಯ ಶೋಧನೆ, ಇಪ್ಪತ್ತನೆಯ ಶತಮಾನದ ಬದುಕನ್ನೇ ಬದಲಿಸಿತು. ಆದರೆ, ಭೂಮಿಯ ವಯಸ್ಸು ತಿಳಿದುಕೊಂಡು ನಾವು ಮಾಡುವುದಾದರೂ ಏನಿದೆ?

*****

ಮನುಷ್ಯರೂ ಸೇರಿದಂತೆ ಜೀವಿಗಳು ಬಹುಮಟ್ಟಿಗೆ ಕಾರ್ಬನ್, ಹೈಡ್ರೋಜೆನ್ ಮತ್ತು ಆಕ್ಸಿಜೆನ್‌ನಿಂದ ನಿರ್ಮಿತವಾಗಿದ್ದರೂ, ನಮ್ಮ ದೇಹಗಳಿಗೆ ಕೊಂಚ ಮಟ್ಟಿಗೆ ಲೋಹವೂ ಬೇಕು. ಉದಾಹರಣೆಗೆ, ರಕ್ತದಲ್ಲಿ ಕಬ್ಬಿಣದ ಅಂಶ ಇರಬೇಕು, ಆಕ್ಸಿಜೆನ್ ಕೊಂಡೊಯ್ಯಲು. ಪೊಟಾಸಿಯಂ ಕಡಿಮೆಯಾದರೆ, ರಕ್ತದೊತ್ತಡದಲ್ಲಿ ಏರಿಳಿತವಾಗುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ ಸವೆಯಬಹುದು, ಮಿದುಳು ಸಹ ಸರಿಯಾಗಿ ಕೆಲಸ ಮಾಡುವುದಿಲ್ಲ.

ಸೀಸ (lead) ಮಹಾ ವಿಷಕಾರಿ ಲೋಹ. ಅದು ನಮ್ಮ ದೇಹ ಸೇರಿತೆಂದರೆ, ನಮಗೆ ಅಗತ್ಯವಿರುವ ಇತರೆ ಲೋಹಗಳನ್ನು ಹೊರತಳ್ಳಿ ಅವುಗಳ ಜಾಗವನ್ನು ತಾನು ಆಕ್ರಮಿಸಿಕೊಳ್ಳುತ್ತದೆ. ಜೊತೆಗೆ, ಅದು ಅಷ್ಟೊಂದು ಸುಲಭವಾಗಿ ದೇಹದಿಂದ ಹೊರ ಹೋಗುವುದೂ ಇಲ್ಲ. ಇದು, ಒಂದಲ್ಲ, ಹಲವಾರು ಬೇನೆಗಳಿಗೆ ಕಾರಣವಾಗುತ್ತದೆ. ಎಷ್ಟೇ ಕಡಿಮೆ ಪ್ರಮಾಣದಲ್ಲಿರಲಿ, ಸೀಸದಿಂದ ನಮ್ಮ ದೇಹಕ್ಕೆ ಯಾವುದೇ ಒಳಿತಿಲ್ಲ. (ಈ ಸೀಸದ ಇನ್ನೊಂದು ಕತೆಯನ್ನು ತಿಳಿಯುವ ಕುತೂಹಲವಿದ್ದರೆ, ಹಳದಿ ಬಣ್ಣದ ಕತೆ ಹೇಳುವ ಲೇಖನವನ್ನು ಓದಿ)

ಇಂತಹ ಸೀಸ ಎಲ್ಲೆಡೆ ಕಾಣಬರುತ್ತಿರುವುದು ಪ್ಯಾಟರ್ಸನ್‌ಗೆ ಆಶ್ಚರ್ಯ ಉಂಟುಮಾಡಿತು. ಇದು ಜಗತ್ತಿನ ಆದಿಯಿಂದ ಬಂದ ನೈಸರ್ಗಿಕ ವಿದ್ಯಮಾನವೋ ಅಥವಾ ಇತ್ತೀಚಿನ ಮಾನವ ಪ್ರಣೀತ ಅನಾಹುತವೋ?! ಈ ಮಹಾ ವಿಷಕಾರಿ ಸೀಸ ಹೀಗೆ ಎಲ್ಲೆಲ್ಲೂ ಮೆರೆದಾಡುತ್ತಿದ್ದರೂ, ಕೋಟ್ಯಾಂತರ ವರ್ಷಗಳಿಂದ ಜೀವರಾಶಿ ವಿಕಸನ ಹೊಂದುತ್ತಿರುವುದಾದರೂ ಹೇಗೆ?!! ಇಂತಹ ಪ್ರಶ್ನೆಗಳು ಅವನನ್ನು ಕಾಡಲಾರಂಭಿಸಿದವು.

ತನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಅವನು ಭೂಮಿಯ ವಿವಿಧ ಭಾಗಗಳಿಂದ ಮಣ್ಣು, ಕಲ್ಲು, ನೀರನ್ನು ಸಂಗ್ರಹಿಸಿ, ಅದರಲ್ಲಿ ಸೀಸದ ಅಂಶ ಎಷ್ಟಿದೆ ಎಂಬುದನ್ನು ಪರಿಶೀಲಿಸತೊಡಗಿದ. ಒಂದು ವಿಷಯ ಖಾತ್ರಿಯಾಯಿತು. ಭೂಮಿಯ ಮೇಲ್ಮೈಯಲ್ಲಿ ಸಂಗ್ರಹಿಸಿದ ಸ್ಯಾಂಪಲ್ಲುಗಳಲ್ಲಿ ಸೀಸದ ಅಂಶ ಹೆಚ್ಚಿದ್ದರೆ, ಆಳದಲ್ಲಿ ಸಂಗ್ರಹಿಸಿದ ಸ್ಯಾಂಪಲ್ಲುಗಳಲ್ಲಿ ಅದರ ಪ್ರಮಾಣ ಗಮನಾರ್ಹವಾಗಿ ಕಡಿಮೆ ಇತ್ತು. ಅಂದರೆ, ಈ ಸೀಸದ ಮಾಲಿನ್ಯ ಒಂದು ಹೊಸ ವಿದ್ಯಮಾನ!

ಈ ಸೀಸ ಹೆಚ್ಚುತ್ತಿರುವ ಸಂಗತಿ ಹೊಸದೇನೋ ಸರಿ. ಆದರೆ ಎಷ್ಟು ಹೊಸದು?! ಅದನ್ನು ತಿಳಿಯುವುದು ಹೇಗೆ?!!

*****

ಪ್ರತಿ ವರ್ಷ ಚಳಿಗಾಲದಲ್ಲಿ ಹಿಮ ಬೀಳುವುದು ಗೊತ್ತಿರುವ ವಿಷಯ. ಧೃವ ಪ್ರದೇಶಗಳಲ್ಲಿ ಮತ್ತು ಅತಿ-ಚಳಿ ಪ್ರದೇಶಗಳಲ್ಲಿ ಬೀಳುವ ಹಿಮ ಪೂರ್ತಿಯಾಗಿ ಕರಗುವುದೇ ಇಲ್ಲ. ಪ್ರತಿ ವರ್ಷದ ಹಿಮ ಸ್ತರ-ಸ್ತರಗಳಾಗಿ (Layers) ಹಾಗೆಯೇ ಉಳಿದಿರುತ್ತದೆ. ಒಂದು ಹಿಮ ಸ್ತರವನ್ನು ಪರಿಶೀಲಿಸಿದರೆ, ಆ ಹಿಮದಲ್ಲಿ, ಆ ವರ್ಷ ಗಾಳಿಯಲ್ಲಿದ್ದ ಧೂಳಿನ ಕಣಗಳು, ಮಾಲಿನ್ಯ ಇತ್ಯಾದಿಗಳು ಸಂಗ್ರಹವಾಗಿರುವುದನ್ನೂ ಗಮನಿಸಬಹುದು.
ಪ್ಯಾಟರ್ಸನ್, ಹೀಗೆ ಸಂಗ್ರಹವಾದ ಹಲವು ಹಿಮ ಸ್ತರಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನೋಡಿದ. ಒಂದು ಸೋಜಿಗದ ಸಂಗತಿ ಹೊರಬಿತ್ತು. 192೦ರ ದಶಕಕ್ಕಿಂತ ಮುಂಚೆ ಬಿದ್ದ ಹಿಮದಲ್ಲಿ, ಸೀಸದ ಅಂಶ ಅಷ್ಟಾಗಿ ಇರಲಿಲ್ಲ. ಆದರೆ, ಮುಂದಿನ ವರ್ಷಗಳಲ್ಲಿ, ಪ್ರತಿ ವರ್ಷವೂ ಅದು ಹೆಚ್ಚುತ್ತಲೇ ಇತ್ತು. ಹಾಗಾದರೆ, 1920ರ ದಶಕದಲ್ಲಿ ಏನಾಯಿತು? ಇದ್ದಕ್ಕಿದ್ದಂತೆ, ಸೀಸದ ಅಂಶ ಆ ದಶಕದಿಂದಾಚೆಗೆ ಹೆಚ್ಚಾಗುತ್ತಾ ಬರಲು ಕಾರಣವಾದರೂ ಏನು?!

*****

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು, ಇಂದು ನಾವೇನೂ ಕಷ್ಟ ಪಡಬೇಕಿಲ್ಲ. ೧೯೨೧ರಲ್ಲಿ, ಥಾಮಸ್ ಮಿಡ್ಜ್‌ಲೀ, ಇಪ್ಪತ್ತನೆಯ ಶತಮಾನದ ದಿಕ್ಕನ್ನೇ ಬದಲಿಸಿದ ಮಹಾ ಶೋಧನೆ ಮಾಡಿದ. ಅಲ್ಲಿಂದಾಚೆಗೆ, ಮಿಡ್ಜ್‌ಲೀಯ ರಸಾಯನವನ್ನು (“ಟೆಟ್ರಾ ಇಥೈಲ್ ಲೆಡ್”) ಪೆಟ್ರೋಲಿಗೆ ಬೆರೆಸುವುದು ಎಗ್ಗಾ-ಮಗ್ಗಾ ಪ್ರಾರಂಭವಾಯಿತು. ಕಾರ್ ಎಂಜಿನ್ ಎಫಿಸಿಯೆನ್ಸಿ ಉತ್ತಮಗೊಂಡಿತು. ಕಾರುಗಳ ಬಳಕೆಯೂ ಜಾಸ್ತಿಯಾಯಿತು. ಸೀಸ-ಯುಕ್ತ ಹೊಗೆ ವಾತಾವರಣವನ್ನು ಸೇರುವುದೂ ಶುರುವಾಯಿತು. ಅದು ಪ್ರತಿ ವರ್ಷ ಬಿದ್ದ ಹಿಮದೊಂದಿಗೆ ಸ್ತರ ಸ್ತರಗಳಲ್ಲಿ ಉಳಿಯುತ್ತಲೂ ಬಂದಿತು.

ಸೀಸದ ಅಪಾಯ ಮಿಡ್ಜ್‌ಲೀಗೆ ಗೊತ್ತಿಲ್ಲದೇ ಏನೂ ಇರಲಿಲ್ಲ. ಅದರೊಂದಿಗೆ ಪ್ರಯೋಗ ಮಾಡುತ್ತಿದ್ದಾಗ, ಅವನು, ತಾನೇ ಸ್ವತಃ ಹಲವಾರು ಬೇನೆಗಳಿಂದ ತಿಂಗಳುಗಟ್ಟಲೆ ಹಾಸಿಗೆ ಹಿಡಿಯ ಬೇಕಾಯಿತು. ಸೀಸದ ಅಪಾಯದ ಬಗೆಗೆ ಅರಿವಿದ್ದ ಜೆರ್ಮನ್ ವಿಜ್ಞಾನಿಯೊಬ್ಬ, ಅದರ ಕುರಿತು ಮಿಡ್ಜ್‌ಲೀಗೆ ಪತ್ರವೊಂದನ್ನು ಸಹ ಬರೆದಿದ್ದ. ಟೆಟ್ರಾ ಇಥೈಲ್ ಲೆಡ್ ತಯಾರಿಸಲು ನ್ಯೂ ಜರ್ಸಿ ರಾಜ್ಯದಲ್ಲಿ ಸ್ಟಾಂಡರ್ಡ್ ಆಯಿಲ್ ಕಂಪೆನಿ ಸ್ಥಾಪಿಸಿದ್ದ ಕಾರ್ಖಾನೆಯಲ್ಲಿ ಹಲವಾರು ಕಾರ್ಮಿಕರ ಸಾವೂ ಸಂಭವಿಸಿತ್ತು. ಆದರೆ, ಇಷ್ಟೆಲ್ಲಾ ಆಗಿದ್ದರೂ, ಮಿಡ್ಜ್‌ಲೀ, ಜೆನೆರಲ್ ಮೋಟಾರ್ ಕಂಪೆನಿ, ಸ್ಟಾಂಡರ್ಡ್ ಆಯಿಲ್ ಕಂಪೆನಿ, ಪೆಟ್ರೋಲಿಗೆ ಟೆಟ್ರಾ ಇಥೈಲ್ ಲೆಡ್ ಬೆರೆಸುವ ಲಾಭದಾಯಕ ವಹಿವಾಟನ್ನು ಬಿಡಲೇ ಇಲ್ಲ.
ಲಾಭ! ಉಪಯೋಗಗಳು!!

*****

1956ರಲ್ಲಿ ಭೂಮಿಯ ವಯಸ್ಸನ್ನು ನಿರ್ಧರಿಸಿದ ನಂತರ, ಕ್ಲೇರ್ ಪ್ಯಾಟರ್ಸನ್, “ಟೆಟ್ರಾ ಇಥೈಲ್ ಲೆಡ್” ಅನ್ನು ನಿಷೇಧಿಸುವುದನ್ನೇ ತನ್ನ ಜೀವನದ ಗುರಿಯಾಗಿಸಿಕೊಂಡ. ಅರವತ್ತರ ದಶಕದಲ್ಲಿ ಇದರ ಬಗೆಗೆ ಒಂದು ಚಳುವಳಿಯನ್ನೇ ಹುಟ್ಟುಹಾಕಿದ. ಕೊನೆಗೂ ಅಮೆರಿಕ ಸರ್ಕಾರ 1975ರಲ್ಲಿ “ಕ್ಲೀನ್ ಏರ್ ಆಕ್ಟ್” ಮೂಲಕ ಸೀಸ ಯುಕ್ತ ಪೆಟ್ರೋಲನ್ನು ನಿಷೇಧಿಸಿತು. ಆದರೆ, ಪೆಟ್ರೋಲ್ ಉತ್ಪಾದಕರ, ಕಾರು ತಯಾಕರ ಬಲಯುತ ಲಾBiಯಿಂದಾಗಿ, ಈ ನಿಷೇಧ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲು ಇನ್ನೂ ಇಪ್ಪತ್ತು ವರ್ಷ ಬೇಕಾಯಿತು. ಭಾರತದಲ್ಲಿ ಇದು 2000ದಲ್ಲಿ ಜಾರಿಗೆ ಬಂತು. ಇಂದು ಹೆಚ್ಚು ಕಡಿಮೆ ಜಗತ್ತಿನಾದ್ಯಂತ ಸೀಸ-ಯುಕ್ತ ಪೆಟ್ರೋಲ್ ನಿಷೇಧವಾಗಿದೆ.

*****

ಕಾರ್ ಎಂಜಿನ್ ಎಫಿಸಿಯೆನ್ಸಿಯನ್ನು ಗಮನಾರ್ಹವಾಗಿ ಹೆಚ್ಚಿಸಿದ ಥಾಮಸ್ ಮಿಡ್ಜ್‌ಲೀ ಯ ಅನ್ವೇಷಣೆ, ಆ ಕಾಲದಲ್ಲಿ “ಅತಿ ಉಪಯುಕ್ತ” ಎಂಬ ಮನ್ನಣೆಗೆ ಪಾತ್ರವಾಯಿತು. ಅವನೂ ಸೇರಿದಂತೆ, ಹಲವಾರು ಕಂಪೆನಿಗಳು ಲಕ್ಷಾಂತರ ಡಾಲರ್ ಲಾಭ ಪಡೆದರು.

ಆದರೆ, 1920ರಿಂದ 2000ದ ವರೆಗೆ, ಈ “ಅತಿ ಉಪಯುಕ್ತ” ಅನ್ವೇಷಣೆ ಲಕ್ಷಾಂತರ ಜನರ ಆರೋಗ್ಯವನ್ನು ಹಾಳು ಮಾಡಿತು. ಎಷ್ಟೋ ಮಕ್ಕಳ ಭವಿಷ್ಯವನ್ನೇ ಪೂರ್ತಿ ನಾಶ ಮಾಡಿತು. ಹಲವಾರು ವಿಜ್ಞಾನಿಗಳ ಪ್ರಕಾರ, ಜಗತ್ತಿನ ಇತಿಹಾಸದಲ್ಲಿ, ಪರಿಸರ ಹಾಳುಗೆಡವಿದವರಲ್ಲಿ ಥಾಮಸ್ ಮಿಡ್ಜ್‌ಲೀಗೆ ಸಮನಾದವರು ಯಾರೂ ಇಲ್ಲ.

ಕ್ಲೇರ್ ಪ್ಯಾಟರ್ಸನ್ನನ “ಭೂಮಿಗೆ ವಯಸ್ಸೆಷ್ಟು?” ಎಂಬ “ಅನುಪಯುಕ್ತ” ಕುತೂಹಲ, ಸದ್ದಿಲ್ಲದೆ ಬಂದೆರಗಿದ್ದ ಅನಾಹುತ ಒಂದನ್ನು ಬಯಲು ಮಾಡಿತು.

*****

1995ರ ಡಿಸೆಂಬರಿನಲ್ಲಿ, ಕ್ಲೇರ್ ಪ್ಯಾಟರ್ಸನ್ ತನ್ನ 73ನೆಯ ವಯಸ್ಸಿನಲ್ಲಿ ನಿಧನನಾದ. ಅಷ್ಟು ಹೊತ್ತಿಗೆ ಅವನ “ಅನ್-ಲೆಡೆಡ್ ಪೆಟ್ರೋಲ್” ಚಳುವಳಿ ಯಶಸ್ವಿಯಾಗಿತ್ತು.

ಥಾಮಸ್ ಮಿಡ್ಜ್‌ಲೀ ಸತ್ತಾಗ ಅವನಿಗೆ ಕೇವಲ ಐವತ್ತೈದು ವರ್ಷ ವಯಸ್ಸು. ತನ್ನ ಜೀವನದ ಕೊನೆಯ ಕೆಲವು ವರ್ಷಗಳಲ್ಲಿ ಹಾಸಿಗೆಯಿಂದ ಏಳಲೂ ಆಗದಷ್ಟು ಅವನು ನಿಶ್ಶಕ್ತನಾಗಿದ್ದ. ಆದರೆ, ಅವನೊಬ್ಬ ಎಂಜಿನಿಯರ್, ತಂತ್ರಜ್ಞಾನದ ಉಪಯುಕ್ತತೆಯ ಮೇಲಿನ ವ್ಯಾಮೋಹ, ಹಾಸಿಗೆ ಹಿಡಿದ ಮೇಲೂ ಅವನಿಗೆ ಹೋಗಿರಲಿಲ್ಲ. ಹಾಸಿಗೆಯಿಂದ ಎದ್ದೇಳೆಲು ಸಹಾಯಕವಾಗುವ ಮೋಟಾರ್-ಹಗ್ಗ-ರಾಟೆ ಒಳಗೊಂಡ ಯಂತ್ರವನ್ನು ಅವನು ತಾನೇ ವಿನ್ಯಾಸ ಮಾಡಿಕೊಂಡಿದ್ದ.

ನವೆಂಬರ್ 2, 1944ರಂದು ಅವನೇ ನಿರ್ಮಿಸಿದ್ದ ಈ ಯಂತ್ರದಲ್ಲಿ ಅವನ ಕುತ್ತಿಗೆ ಸಿಕ್ಕಿಕೊಂಡು ಅವನು ಜೀವನ್ಮುಕ್ತನಾದ.

(ಈ ಲೇಖನದ ಸಂಕ್ಷಿಪ್ತ ರೂಪ, ಆಂದೋಲನ ದಿನಪತ್ರಿಕೆಯಲ್ಲಿ ಹಿಂದೊಮ್ಮೆ ಪ್ರಕಟವಾಗಿತ್ತು)

ಮರೆತ ಮಾತು, ಕುತೂಹಲಿಗಳಿಗೆ:
೧. “ಕೃತಕ ನ್ಯೂರಲ್ ನೆಟ್‌ಗಳು ಶೇಕ್ಸ್‌ಪಿಯರ್ ಶೈಲಿಯ ಸಾನೆಟ್‌ಗಳನ್ನು ರಚಿಸಬಲ್ಲವೇ?”
ನಮ್ಮ ಸೆಂಟರ್ ಫಾರ್ ಕಾಗ್ನಿಟಿವ್ ಕಾಂಪ್ಯೂಟಿಂಗ್‌ನ ರೀಸರ್ಚರ್ಸ್ ಕೆಲವು ವರ್ಷಗಳ ಹಿಂದೆಯೇ ಇಂತಹದೊಂದು ಕೃತಕ ಬುದ್ಧಿಮತ್ತೆಯನ್ನು ನಿರ್ಮಿಸಿದ್ದಾರೆ. ಆ ಬುದ್ಧಿಮತ್ತೆ ರಚಿಸಿದ ಸಾನೆಟ್‌ಗಳನ್ನು, ಶೇಕ್ಸ್‌ಪಿಯರ್ ರಚಿಸಿದ ಸಾನೆಟ್‌ಗಳ ಗುಂಪಿನಲ್ಲಿ ಸೇರಿಸಿ, ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯದ ಅಭ್ಯಾಸ ಮಾಡುತ್ತಿರುವವರಿಗೆ ನೀಡಿದಾಗ, ಬಹುಮಟ್ಟಿನವರಿಗೆ, ಯಾವುದು ಶೇಕ್ಸ್‌ಪಿಯರ್‌ನ ಸಾನೆಟ್, ಯಾವುದು ಕೃತಕ ಬುದ್ಧಿಮತ್ತೆಯೊಂದು ರಚಿಸಿದ ಸಾನೆಟ್ ಎಂದು ಖಚಿತವಾಗಿ ಹೇಳಲು ಸಾಧ್ಯವಾಗಲಿಲ್ಲ.

೨. “ಕೃತಕ ಬುದ್ಧಿಮತ್ತೆಗೆ ಭಾರತೀಯ ವೇದಾಂತದ ವಿಚಾರಗಳನ್ನು ಕಲಿಸಿದರೆ, ಅದು ನಮ್ಮ ಆಳವೆನ್ನಿಸುವ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದೇ?”
ಇದು ಚರ್ಚಾಸ್ಪದ ವಿಚಾರ. “ಭಾರತೀಯ ವೇದಾಂತ” ಎಂದರೆ ಏನು? “ಆಳವಾದ ಪ್ರಶ್ನೆಗಳು” ಎಂದರೆ ಯಾವುವು? ಇಂತಹ ವಿಷಯಗಳಲ್ಲಿ, ಕೃತಕ ಬುದ್ಧಿಮತ್ತೆಯೊಂದು ಹೊರ ಹಾಕುವ ವಾಕ್ಯ ಸರಣಿಗಳನ್ನು ನಾವು “ಉತ್ತರ”ಗಳೆಂದು ಪರಿಗಣಿಸಬಹುದೇ? ಹೀಗೆ, ಹಲವಾರು ಪ್ರಶ್ನೆಗಳು ಸಾಲು ಸಾಲಾಗಿ ಏಳುತ್ತವೆ. ಆದರೂ, ಮುಂದೊಮ್ಮೆ ಖಂಡಿತವಾಗಿ ಸೃಷ್ಟಿಯಾಗುವ “ಆರ್ಟಿಫಿಷಿಯಲ್ ಇಂಟೆಲಿಜೆಂಟ್ ಗುರು”ವಿನ ಝಲಕ್ ಇಲ್ಲಿದೆ: