Advertisement
ನೀರ ಮೇಲಣ ಗುಳ್ಳೆ-ಡಾಟರ್ ಆಫ್ ಪರ್ಷಿಯ: ದೇವಿಕಾ ನಾಗೇಶ್ ಬರಹ

ನೀರ ಮೇಲಣ ಗುಳ್ಳೆ-ಡಾಟರ್ ಆಫ್ ಪರ್ಷಿಯ: ದೇವಿಕಾ ನಾಗೇಶ್ ಬರಹ

ಈಕೆ ತನ್ನ ನೆಲದ ಸ್ಥಿತಿವಂತರು ಇಲ್ಲದವರ ಜೀವನ ಮಟ್ಟ ಸುಧಾರಣೆಗೆ ಕೈಜೋಡಿಸಿದರೆ ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ  ಬದಲಾವಣೆಗಳನ್ನು ತರಲು ಸಾಧ್ಯವಿದೆ… ಎನ್ನುವ ನಂಬಿಕೆ ಇದ್ದವರಾಗಿದ್ದಳು. ಈ ಹಿನ್ನೆಲೆಯಲ್ಲಿ ಅದ್ಭುತ ಯೋಜನೆಗಳನ್ನು ಹಾಕಿಕೊಂಡಿದ್ದಳು.. ಆಗ ಸ್ಪಂದಿಸಿದ ಹಲವರು ಈ ಸಾಧ್ಯತೆಯ ಪರಿಧಿಗಳನ್ನು ವಿಸ್ತರಿಸಿಕೊಂಡು ಆ ದೆಸೆಯಲ್ಲಿ ಸಕ್ರಿಯವಾದರು… ಇವಳ ಯೋಜನೆಗೆ ಕೈಜೋಡಿಸಿದರು.
ಸಟ್ಟರೆಹ್ ಫಾರ್ಮನ್ ಫರ್ಮ ಆತ್ಮಕಥೆ “ಡಾಟರ್ ಆಫ್ ಪರ್ಷಿಯಾ” ಕುರಿತು ದೇವಿಕಾ ನಾಗೇಶ್‌ ಬರಹ

ಅನುಭವವು ಅನುಭಾವವಾದಾಗ ಜ್ವಲಿಸುವ ಪ್ರೀತಿ ಸರಳತೆ ನೀಡುವ  ಜೀವನ ದರ್ಶನವೇ ಅಧ್ಯಾತ್ಮ. ಇದು ಅಡುಗೆ ಮನೆಯಲ್ಲಿ, ಯುದ್ಧ ಭೂಮಿ ಯಲ್ಲಿ ಸಂತೆಯಲ್ಲಿ ಹೀಗೆ ಎಲ್ಲಿ ಬೇಕಾದರೂ ಸಂಭವಿಸಬಹುದು. ಕೆಲವು ಆತ್ಮಕಥನಗಳಿಗೆ ಈ ಶಕ್ತಿ ಇದೆ.‌ ಸಟ್ಟರೆಹ್ ಫಾರ್ಮನ್ ಫರ್ಮ ಅವರ “ಡಾಟರ್ ಆಫ್ ಪರ್ಷಿಯಾ” ಇಂತಹದೊಂದು ಅನುಭವದ ಅಗ್ನಿಕುಂಡದಲ್ಲಿ ಅರಳಿದ ಕುಸುಮ. ಅಧಿಕಾರಕ್ಕಾಗಿ ಸತತ ಯುದ್ದ ಜಿದ್ದುಗಳ ಸಂಘರ್ಷಮಯ ವಾತಾವರಣವಿದ್ದ ರಾಜ ಮನೆತನದಲ್ಲಿ ಹುಟ್ಟಿದ ಮಗಳು ಸಟ್ಟರೆಹ್. ಧರ್ಮ ರಾಜಕಾರಣ, ವರ್ಗ ರಾಜಕಾರಣಗಳ ಒಳ ಸುಳಿಗಳ ನಡುವೆಯೂ ತನ್ನ ದೇಶದ ನಾಳೆಗಳ ಬಗ್ಗೆ ಕನಸು ಕಂಡವಳು. ಆ ಕನಸಿನ ಸಾಕಾರಕ್ಕಾಗಿ ತನ್ನದೇ ರೀತಿಯಲ್ಲಿ   ಪ್ರಯತ್ನಿಸಿ, ಜಯಿಸಿದವಳು…. ರಾಜ ಮನೆತನವೆಂದರೆ ಸಹಜವಾಗಿ ಜನಸಾಮಾನ್ಯರಲ್ಲಿ ಒಂದು ಕಲ್ಪನೆ ಇರುತ್ತದೆ… ಆದರೆ ಅಲ್ಲಿರುವ ಕಟ್ಟುಪಾಡುಗಳು ವಿಧಿ ನಿಯಮಗಳು ಉಸಿರು ಕಟ್ಟಿಸುವಂತೆ ಇರುತ್ತದೆ. ಹೆಂಗಸರಿಗೆ ಹೆಣ್ಣು ಮಕ್ಕಳಿಗೆ ಸಂಪ್ರದಾಯ ಹೇರಲ್ಪಡುವ ನೂರು ಕಟ್ಟುಪಾಡುಗಳ ನಡುವೆ ರಾಜ ಮನೆತನದವರು ಎಂಬ ಹಮ್ಮು ಬಿಮ್ಮುಗಳು ಜನ ಸಾಮಾನ್ಯ ಜೊತೆ ಬೆರೆಯದಂತೆ ಅಘೋಷಿತ ಬೇಲಿಯಾಗಿ ಸದಾ ಕಾಡುತ್ತಿರುತ್ತವೆ. ಅದು ಮಹಿಳೆಯರು ಹಾಗೂ ಮಕ್ಕಳನ್ನು ಜಗತ್ತಿನ ಬಿಡಿ, ತಮ್ಮದೇ ದೇಶ ಕಾಲಗಳ ವಾಸ್ತವಕ್ಕೆ ತೆರೆದುಕೊಳ್ಳಲು ಯಾವ ಅವಕಾಶವನ್ನೂ ನೀಡದೇ ವಂಚಿಸುತ್ತವೆ. ಅವರನ್ನು ತಳಕು ಬಳಕಿನ ಭ್ರಮಾ ಲೋಕದಲ್ಲಿ ಒಂದು ರೀತಿ ಕೂಪ ಮಂಡೂಕಗಳಂತೆ ಬದುಕುವಂತೆ ಮಾಡುತ್ತವೆ. ಬಹುಪತ್ನಿತ್ವ, ಬಹುಪತಿತ್ವ ಜಾರಿಯಲ್ಲಿದ್ದ ಮಹಾಭಾರತವನ್ನು ಮಹಾಕಾವ್ಯವಾಗಿ ನಾವು ಕಂಡಿದ್ದೇವೆ. ಆಯಾ ಕಾಲದ ರಾಜಕೀಯ ಸಾಮಾಜಿಕ ಪರಿಸ್ಥಿತಿಗೆ ಹೊಂದಿಕೊಂಡಂತೆ ರಾಜಮನೆತನಗಳಲ್ಲಿ ಇಂತಹ ವಿವಾಹಗಳು ಸರ್ವೇಸಾಮಾನ್ಯವಾಗಿತ್ತು.

ಬಹುಪತ್ನಿತ್ವ ಜಾರಿಯಲ್ಲಿದ್ದ ಇರಾನಿನ ಕಜಾರ ರಾಜಮನೆತನದ ಮಗಳು ಸಟ್ಟರೆಹ್ ಫಾರ್ಮನ್ ಫರ್ಮ. ಇವಳ ತಂದೆ ಅಬ್ದುಲ್ ಹೊಸ್ಸೇನ್ ಮಿರ್ಜಾ ಫಾರ್ಮನ್ ಫರ್ಮ. ಈತನ  ಎಂಟು ಪತ್ನಿಯರಲ್ಲಿ ಮೂರನೆಯವಳಾದ ಮಸುಮೆಹ್‌ನ ಮಗಳು ಸಟ್ಟರೆಹ್. ತಂದೆಯ ಅಷ್ಟೂ ಪತ್ನಿಯರ ಮೂವತ್ತಾರು ಒಡಹುಟ್ಟಿದವರಲ್ಲಿ  ಈಕೆ ಹದಿನೈದನೆಯವಳು. ತನ್ನ ಜನ ಹಾಗೂ ಕುಟುಂಬದ ಭವಿಷ್ಯದ ಬಗ್ಗೆ ಅಪಾರ ಕಾಳಜಿ ಇದ್ದ  ತಂದೆಯ ಬಗ್ಗೆ ಸಟ್ಟರೆಹ್ ಅಪಾರ ಗೌರವ ಇರಿಸಿಕೊಂಡಿದ್ದಳು. ವಾರಾಂತ್ಯದ ತಂದೆ ಭೇಟಿಯಲ್ಲಿ ಮುಖಾಮುಖಿಯಾಗುವ ಜಗತ್ತಿನ ಹೊರತಾಗಿ ಬೇರೆ ಜಗತ್ತಿನ ಕಲ್ಪನೆಯೂ ಇರದ ಅಮಾಯಕ ಹುಡುಗಿಯಾದ ಆಕೆಗೆ ತನ್ನ ಮಲಸೋದರ, ಸೋದರಿಯರನ್ನು ಮಲತಾಯಿಯಂದಿರನ್ನು ತಮ್ಮ ಕೂಡು ಕುಟುಂಬದ ಸದಸ್ಯರು ಎನ್ನುವ ನೆಲೆಯಲ್ಲಿ ಪ್ರೀತಿಸಲು ಇವಳಿಗೆ ಸಾಧ್ಯವಾದದ್ದು ಇವಳ ಹೆತ್ತವರು ನೀಡಿದ ಉತ್ತಮ ಸಂಸ್ಕಾರದಿಂದ… ಈ ಕುಟುಂಬ ಆಳು ಮಕ್ಕಳನ್ನು ಸಮಾನ ಗೌರವದಿಂದ ನಡೆಸಿಕೊಂಡಿತ್ತು. ಸಟ್ಟರೆಹಳ ತಾಯಿ ಮಸುಮೆಹ. ಇವಳ  ತಾಯಿ  ರಾಜ ಕುಟುಂಬಕ್ಕೆ ಬಟ್ಟೆ ಹೊಲಿದು ಕೊಡುವವಳು. ತಂದೆ ಅರಮನೆಯ ಪಾರುಪತ್ತೆಗಾರ. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ಮಸುಮೆಹ ತನ್ನ 12 ವರ್ಷ ಪ್ರಾಯಕ್ಕೆ ಮದುವೆಯಾಗಿ ಪುಟ್ಟ ಪುಟ್ಟ ತನ್ನ ಒಡಹುಟ್ಟಿದವರನ್ನು ಸಾಕಿ ಸಲಹಿದವಳು.  ಈಕೆಯನ್ನು ಅಬ್ದುಲ್ ಹುಸ್ಸೇನ್ ಗೆ ಮೂರನೇ ಪತ್ನಿಯಾಗಿ ಬರುವಂತೆ ವ್ಯವಸ್ಥೆ ಮಾಡಿದವಳು ಅಬ್ದುಲ್ ನ ಮೊದಲ ಪತ್ನಿ. ರಾಜ ಮನೆತನದ ಹೆಣ್ಣು ಮಗಳಾಗಿದ್ದ ಈಕೆ ಗಂಡನ ಅಗತ್ಯಗಳನ್ನು ಪೂರೈಸಲು ತನಗಿರುವ ಅನಾರೋಗ್ಯದಿಂದ ತೊಡಕಾಗುತ್ತಿದೆ ಎಂದು  ಭಾವಿಸಿದ ಆ ಹೆಣ್ಣು ಮಗಳು ಮುಸಮೆಹ ಳಿಂದ ತನಗೆ ತನ್ನ ಕುಟುಂಬಕ್ಕೆ ಯಾವುದೇ ಅಪಾಯ ಇಲ್ಲ ಎನ್ನುವುದನ್ನು ಮನಗಂಡು ಈ ತೀರ್ಮಾನ ತೆಗೆದುಕೊಂಡಿದ್ದಳು. ಸಟ್ಟರೆಹ್ ಳ ತಂದೆಯ ದೂರದೃಷ್ಟಿಯ ಕಾರಣದಿಂದ ಇರಾನಿನ ಸಾಹಿತ್ಯ ಸಂಗೀತ ಕಲೆ ಸಂಸ್ಕೃತಿಯ ಸಾರ ಸರ್ವಸ್ವವನ್ನು ಸವಿಯುವ ಅಭಿರುಚಿ ಬೆಳೆಸಿ ಈತನ ಮಕ್ಕಳೆಲ್ಲ ಉನ್ನತ ಶಿಕ್ಷಣವನ್ನೂ ಪಡೆದರು.

ಸಟ್ಟರೆಹ ತನ್ನ ತಂದೆಗೆ 60ರ ಇಳಿ ವಯಸ್ಸಿನಲ್ಲಿ ಹುಟ್ಟಿದವಳು. ಈಕೆ ಬಾಲ್ಯ ದಲ್ಲಿ ಒಮ್ಮೆ ಅಮ್ಮನ ಜೊತೆ ಮಾರುಕಟ್ಟೆಗೆ ಹೋಗಿದ್ದಾಗ  ಒಮ್ಮೆ  ಭಿಕ್ಷುಕಿಯರನ್ನು ಕಂಡಿದ್ದಳು.  ಚಿಂದಿ ಬಟ್ಟೆಯಲ್ಲಿದ್ದ  ಅವಳಿಗೆ ಅಮ್ಮ ಮನೆಯಿಂದ ಉಡುಪು ತಂದು ಕೊಟ್ಟರು. ಭಿಕ್ಷುಕಿ ಆ ಉಡುಗೆ  ಮಾರಿ ಮರುದಿನ ಅದೇ ಸ್ಥಿತಿಯಲ್ಲಿ ಬೇರೆಯವರ ಎದುರು ಭಿಕ್ಷೆ ಬೇಡುತ್ತಿರುವುದನ್ನು ಬಾಲ್ಯದಲ್ಲಿ ಅವರು  ಕಂಡು ದಂಗಾದರು. ತನ್ನ  ದೈನ್ಯ ಸ್ಥಿತಿಯನ್ನು ಬಂಡವಾಳ ಮಾಡಿಕೊಂಡು  ಭಿಕ್ಷೆ ಬೇಡುತ್ತಿರುವುದು ಬಾಲ್ಯ ದಲ್ಲಿ ಕಂಡ ಸಟ್ಟರೆಹ್ ಳ ಮನಸ್ಸಿನಲ್ಲಿ ಈ ಘಟನೆ ಅಚ್ಚಳಿಯದೇ ಉಳಿದಿತ್ತು.  ಇರಾನಿನ ಬಡತನ, ಅನಕ್ಷರತೆ ಮಹಿಳೆಯರ ಸ್ಥಿತಿಗತಿಗಳನ್ನು ತಾನು ಪ್ರೆಸ್ಬುಟೇರಿಯಾದಲ್ಲಿ ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲಿ  ಪಠ್ಯದ ಭಾಗವಾಗಿ ಆಕೆ ಸ್ಥಳ ಭೇಟಿ ಮಾಡಿ ಸ್ವತಃ ಕಂಡಳು. ಇರಾನಿನಲ್ಲಿ ಬಡತನ ನಿರ್ಮೂಲನೆಗಾಗಿ ಸಮಾಜ ಸೇವೆಯಲ್ಲಿ ನಿರತವಾಗಿದ್ದ ಅಮೇರಿಕ ಮೂಲದ ಸಂಸ್ಥೆಯದು. ಅಲ್ಲಿ ಸೇವಾ ನಿರತ ಅಮೇರಿಕಾ ಮೂಲದ ಕಾರ್ಯಕರ್ತರನ್ನು ನೋಡಿ… ತನ್ನ ದೇಶದಲ್ಲಿ ಸಮಾಜ ಸೇವೆ ಮಾಡುವ ಕನಸು ಈಕೆಯಲ್ಲಿ ಮೊಳಕೆಯೊಡೆದಿತ್ತು. ಆಕೆಯ ಈ ಸಂದರ್ಭದ ಕ್ಷೇತ್ರ ಭೇಟಿ ಇರಾನಿನ ತಾನು ಆವರೆಗೆ ಕಾಣದ ತನ್ನದೇ ದೇಶದ ಚಿತ್ರಣವನ್ನು ಕಣ್ಣೆದುರಿಗೆ  ತೆರೆದಿಟ್ಟಿತ್ತು. ತನ್ನ ನೆಲದ  ಬಡತನ, ಆರೋಗ್ಯ ವ್ಯವಸ್ಥೆ, ಜೀವನಮಟ್ಟ ಸುಧಾರಣೆಗೆ ಅನುಸರಿಸಬೇಕಾಗಿರುವ ಮಾರ್ಗ ಸೂತ್ರಗಳ ಬಗ್ಗೆ  ಯೋಚಿಸುವಂತೆ ಮಾಡಿತ್ತು. ಈ ಹಿನ್ನೆಲೆಯ ಶಿಕ್ಷಣ ಪಡೆಯಲು ಆಕೆ ವಿದೇಶಕ್ಕೆ ಹೋಗಬೇಕಾಗಿತ್ತು. ಪದವಿಯ ನಂತರ  ಆಕೆ ಪಡೆಯಬೇಕು ಎಂದು ಬಯಸಿದ ಶಿಕ್ಷಣ ಅವಳ ದೇಶದಲ್ಲಿ ಪಡೆಯುವ ಅವಕಾಶ ಇರಲಿಲ್ಲ. ಆಗ ವಿದೇಶಿ ನೆಲದಲ್ಲಿ ಉನ್ನತ ಶಿಕ್ಷಣ ಇರಾನಿನ  ಹೆಣ್ಣುಮಗಳು ಪಡೆಯುವುದು ಅವಳ ಸಮಾಜದಲ್ಲಿ ಒಪ್ಪಿತವಿರಲಿಲ್ಲ. ಅಮ್ಮನೂ ಹೆಣ್ಣು ಮಗಳನ್ನು ವಿದೇಶ ಕ್ಕೆ ಕಳುಹಿಸಲು ಆಗ ಸಟ್ಟರೆಹಳ ಅಣ್ಣ  ದಾದಶ್  ವಿದೇಶದಲ್ಲಿ ಶಿಕ್ಷಣ ಪಡೆದು ಡಾಕ್ಟರ್ ಆಗಿ ತನ್ನ ದೇಶದಲ್ಲಿ ವೃತ್ತಿ ನಿರತನಾಗಿದ್ದ. ತಂಗಿಯ ಆಕಾಂಕ್ಷೆಯಂತೆ ಆಕೆ ಬಯಸಿದ  ಶಿಕ್ಷಣ ಪಡೆಯಲು ಆಕೆಯ ಬೆಂಬಲಕ್ಕೆ ನಿಂತ.

ಝಣ ಝಣ ಕಾಂಚಾಣ ಎನ್ನುವಂತೆ ಇರಾನಿನ ತೈಲ ನಿಕ್ಷೇಪಗಳು ಜಗತ್ತಿನ ದೊಡ್ಡಣ್ಣಗಳನ್ನು ಇನ್ನಿಲ್ಲದಂತೆ ಸೆಳೆಯುತ್ತಿದ್ದ ಕಾಲಮಾನವದು. ಅಮೇರಿಕಾ, ಇಂಗ್ಲೇಂಡ್… ಮೊದಲಾದ ದೇಶಗಳು ಇರಾನಿನ ತೈಲ ಉದ್ಯಮದಲ್ಲಿ ಏಕ ಸ್ವಾಮಿತ್ವ ಸ್ಥಾಪಿಸಲು ಪೈಪೋಟಿಗಿಳಿದಿದ್ದವು. ಆಡಳಿತದಲ್ಲಿದ್ದ ಅಧಿಕಾರ ಶಾಹಿಯನ್ನು ಕೈಗೊಂಬೆಯಾಗಿಸಿಕೊಂಡು ಲಾಭ ಬಾಚಿಕೊಳ್ಳಲು ಅವಕಾಶಕ್ಕೆ ಹೊಂಚು ಹಾಕುತ್ತಿದ್ದ  ವಿದೇಶಿ ಕಾರ್ಪೋರೇಟ್‌ಗಳ ಹಿತಾಸಕ್ತಿಗಳಿಗೆ ಇರಾನಿನ ಒಳ ಜಗಳಗಳು   ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದ್ದಂತಿತ್ತು. ಯುದ್ಧ ಅನಿಶ್ಚಿತತೆ ಬದುಕಿನ ನಿತ್ಯದ  ಕಥೆಯಾಗಿರುವಾಗ ಜನಸಾಮಾನ್ಯರ  ಸ್ಥಿತಿಗತಿಗಳ ಬಗ್ಗೆ ಯೋಚಿಸುವ ವ್ಯವಧಾನವಾದರೂ ಯಾರಿಗಿರುತ್ತದೆ ಅಲ್ಲವೇ…?

ಇಂತಹ ವಿಷಮ ಪರಿಸ್ಥಿತಿಯಲ್ಲಿ ಬೆಳೆದ ಪರ್ಷಿಯಾದ ಮಗಳು ಸಟ್ಟರೆಹ್. ಸಮಾಜ ಸೇವೆಯನ್ನು ಜೀವನ ಕ್ರಮವಾಗಿಸುವುದರ ಹಿನ್ನೆಲೆಯ ಕನಸು ಕಂಡು 1944  ರಲ್ಲಿ ಉನ್ನತ ಶಿಕ್ಷಣಕ್ಕಾಗಿ  ಅಮೇರಿಕಾ ಸೇರಿದ ಇರಾನಿನ ಮೊದಲ ಹೆಣ್ಣು ಮಗಳು ಸಟ್ಟರೆಹ್.   ಶಿಕ್ಷಣ ಮುಗಿಸಿ ಅಲ್ಲೇ ಉದ್ಯೋಗವು ದೊರಕಿದ ಸಟ್ಟರೆಹ್ ಅಲ್ಲಿ ವಾಸ್ತವ ಹೂಡಿದಳು. ಈ ಮಧ್ಯೆ  ಸಿನಿಮಾಟೋಗ್ರಾಫಿ ಓದುತ್ತಿದ್ದ ಅರುಣ ಭಾರತೀಯ ಮೂಲದ ತರುಣನ ಜೊತೆ ಸ್ನೇಹವಾಗಿ ವಿವಾಹವಾದಳು. ಈ ದಾಂಪತ್ಯದ ಫಲ ಮಿತ್ರ ಇವರ ಮಗಳಾಗಿ ಜನಿಸಿದಳು. ಆದರೆ ತುಸು ವರ್ಷಗಳಲ್ಲಿ ಅರುಣ ಭಾರತಕ್ಕೆ ಹಿಂತಿರುಗಿದ.  ಮಗಳೊಂದಿಗೆ ನೆಲೆಸಿದ ಸಟ್ಟರೆಹ್‌ಗೆ ವಿದೇಶದಲ್ಲಿ ವಿವಿಧ ಸಂಸ್ಥೆಗಳಲ್ಲಿ ಸುಮಾರು ಹದಿನಾಲ್ಕು ವರ್ಷಗಳಲ್ಲಿ ಸೇವೆ ನೀಡಿದಳು. ಸಮಾಜ ಸೇವೆಯ ವಿಭಿನ್ನ ಮುಖಗಳ ಪರಿಚಯದ ನಂತರ ತನ್ನ ದೇಶಕ್ಕಾಗಿ ತಾನು ಏನಾದರೂ ಮಾಡಬೇಕು ಎನ್ನುವ ಆಶಯ ಹೊತ್ತು ಇರಾನಿಗೆ ಹಿಂತಿರುಗಿದಳು.

ಟೆಹರಾನ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಸಂಸ್ಥೆಯನ್ನು ಸಟ್ಟರೆಹ್ ಪ್ರಾರಂಭಿಸಿದರು. “ಮಾನವ ಜೀವದ ಅಸ್ತಿತ್ವ ಇರುವುದೇ ಅದರ ಒಟ್ಟು ಪರಿಣಾಮದಲ್ಲಿ… ಅದರ ಒಂದು ಭಾಗಕ್ಕೆ ತೊಂದರೆಯಾಗಿ ನೋವಿನಲ್ಲಿ ನರಳುತ್ತಿದ್ದರೆ ಇತರ ಭಾಗ ಶಾಂತಿ ಮತ್ತು ಸಮಾಧಾನದಿಂದ ಇರಲು ಸಾಧ್ಯವಿಲ್ಲ”  ಎನ್ನುವ ಘೋಷವಾಕ್ಯ ಈ  ಸಂಸ್ಥೆಯದು. ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ ಜಗತ್ತು ಗುರುತಿಸುವ ಸಟ್ಟರೆಹ್ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಮಾದರಿಯಲ್ಲಿ  ಸಮಾಜ ಸೇವೆಯ  ಮನೋಭಾವವನ್ನು ಇರಾನಿನಲ್ಲಿ ಬಿತ್ತಿ ಬೆಳೆಸಿದವಳು. ಈಕೆ ತನ್ನ ನೆಲದ ಸ್ಥಿತಿವಂತರು  ಇಲ್ಲದವರ ಜೀವನ ಮಟ್ಟ ಸುಧಾರಣೆಗೆ ಕೈಜೋಡಿಸಿದರೆ ಸಾಮಾಜಿಕ, ರಾಜಕೀಯ, ಆಡಳಿತಾತ್ಮಕ  ಬದಲಾವಣೆಗಳನ್ನು ತರಲು ಸಾಧ್ಯವಿದೆ… ಎನ್ನುವ ನಂಬಿಕೆ ಇದ್ದವರಾಗಿದ್ದಳು. ಈ ಹಿನ್ನೆಲೆಯಲ್ಲಿ ಅದ್ಭುತ ಯೋಜನೆಗಳನ್ನು ಹಾಕಿಕೊಂಡಿದ್ದಳು.. ಆಗ ಸ್ಪಂದಿಸಿದ ಹಲವರು ಈ ಸಾಧ್ಯತೆಯ ಪರಿಧಿಗಳನ್ನು ವಿಸ್ತರಿಸಿಕೊಂಡು ಆ ದೆಸೆಯಲ್ಲಿ ಸಕ್ರಿಯವಾದರು… ಇವಳ ಯೋಜನೆಗೆ ಕೈಜೋಡಿಸಿದರು.

ಬದುಕು ಕಟ್ಟುವ ಕ್ರಿಯೆಗೆ ಕೊನೆಯಿಲ್ಲ… ಒಳಿತಿಗೆ ಮಾರ್ಗಗಳು ತನ್ನಿಂತಾನೇ ತೆರೆದುಕೊಳ್ಳುತ್ತವೆ ಎನ್ನುವ ನಿರೀಕ್ಷೆ ಯಿಂದ ಪ್ರಾರಂಭವಾದ  ಸಂಸ್ಥೆ ಆರೋಗ್ಯ, ಮೂಲಭೂತ ಸೌಕರ್ಯ ಶಿಕ್ಷಣ ಮುಖ್ಯ ಧ್ಯೇಯವಾಗಿಸಿಕೊಂಡಿತು. ಸಟ್ಟರೆಹಳಿಗೆ ಆಮೂಲಕ ತನ್ನ ದೇಶ ಇರಾನಿನ ಜನಸಾಮಾನ್ಯ ಸ್ಥಿತಿಗತಿ, ಬಡತನ, ಅನಕ್ಷರತೆಯನ್ನು ಹೋಗಲಾಡಿಸಿ ಮಹಿಳೆಯರ ಮಕ್ಕಳ   ಬದುಕನ್ನು ಉನ್ನತೀಕರಿಸುವ ಉದ್ದೇಶವುಳ್ಳ ಒಂದು ತಂಡವನ್ನು ಕಟ್ಟಲು  ಸಾಧ್ಯವಾಯಿತು.

ಪ್ರಭುತ್ವದ ಒಳ ಜಗಳಗಳಿಂದ ಬೇಸತ್ತ ಜನಸಾಮಾನ್ಯರನ್ನು ದಾರಿ ತಪ್ಪಿಸುವ   ವಿದ್ಯಮಾನಗಳು ಜಗತ್ತಿನ ಉಳಿದೆಡೆಗಳಂತೆ ಇರಾನಿನಲ್ಲೂ ದೇಶದ ಉದ್ದಗಲ ಅಲ್ಲಲ್ಲಿ  ನಡೆಯುತ್ತಿತ್ತು. ಧಾರ್ಮಿಕತೆಯ ಹೆಸರಿನ ಈ ಮುಖವಾಡವನ್ನು ಕಳಚಲು ಪ್ರಜ್ಞಾವಂತ ನಾಗರಿಕರಿಗೆ ಸಾಧ್ಯವಾಗದೇ ಹೋದದ್ದು ಒಂದು ದುರಂತ. ಕಾಮಾಲೆ ಕಣ್ಣಿಗೆ ಊರೆಲ್ಲ ಹಳದಿ ಎನ್ನುವಂತೆ ಮಹಿಳೆಯರ ಆರೋಗ್ಯದಲ್ಲಿ ಕೌಟುಂಬಿಕ ಸ್ಥಿತಿಗತಿಯಲ್ಲಿ  ಅದ್ಭುತ ಬದಲಾವಣೆ ತರಬಹುದಾದ ಕುಟುಂಬ ಯೋಜನೆಯು ಇರಾನಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ಕೊಡುಗೆಯಾಗಿತ್ತು.  ಇದು ತಮ್ಮ ಧರ್ಮಕ್ಕೆ ವಿರೋಧವಾದದ್ದು ಎನ್ನುವುದನ್ನು ಶಿಕ್ಷಣಕ್ಕೆ ತೆರೆದುಕೊಂಡ ಮನಸ್ಸುಗಳೇ ಒಪ್ಪುತ್ತದೆ; ಆದರೆ ಇದು ವಿಷಾದದ ಸಂಗತಿ.

ಇರಾನಿನ 1979ರ ಧಾರ್ಮಿಕ ಕ್ರಾಂತಿಯ ನಂತರ ಅಧಿಕಾರಕ್ಕೆ ಬಂದ  ಆಯೇತುಲ್ಲು ರೆಹುಲ್ಲ ಖೋಮೆನಿ ಆಡಳಿತದ ಬೆಂಬಲ ಪಡೆದು  ಸಟ್ಟರೆಹ್‌ಳ ವಿದ್ಯಾರ್ಥಿಗಳೇ  ಆಕೆಯನ್ನು  ಬಂಧನದಲ್ಲಿಡಲು ಸಂಚು ರೂಪಿಸುತ್ತಾರೆ. ಕ್ರಾಂತಿಯಲ್ಲಿ ಒಳ್ಳೆಯದೂ ನಡೆಯುತ್ತದೆ ಕೆಟ್ಟದೂ ನಡೆಯುತ್ತದೆ ಎನ್ನುವುದಕ್ಕೆ ಉದಾಹರಣೆಯಾದ ಈ ಘಟನೆ ಸಟ್ಟರೆಹ್‌ಗೆ ನೀಡಿದ ಆಘಾತ ಅಂತಿಂಥದ್ದಲ್ಲ… ಆದರೂ ಸಾರ್ವಜನಿಕರ ಆಸ್ತಿಪಾಸ್ತಿಗಳ ನಷ್ಟ, ದೊಂಬಿ, ಗಲಭೆ ದೇಶದ ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗುವುದನ್ನು  ಕ್ರಾಂತಿಯ ಬಗ್ಗೆ  ತನ್ನ ನಿಲುವನ್ನು  ಸಟ್ಟರೆಹ್ ತನ್ನ ವಿಚಾರಣೆಗೆ ಬಂದ ಖೋಮೆನಿ ಸಹಚರರಿಗೆ  ತಿಳಿಸುತ್ತಾಳೆ. ಅವಳ ವಿರುದ್ಧ ದಂಗೆ ಎದ್ದ ಅವಳದೇ ವಿದ್ಯಾರ್ಥಿಗಳಿಂದ ಆಕೆಗೆ ಇರಾನಿನಲ್ಲಿ ಉಳಿಗಾಲವಿಲ್ಲ ದೇಶ ಬಿಟ್ಟು ಹೋಗೋದು ವೈಯಕ್ತಿಕವಾಗಿ ಆಕೆಗೆ ಹಿತ ತರುತ್ತದೆ ಎನ್ನುವ  ಸ್ಪಷ್ಟ ಸೂಚನೆಯೂ ಖೋಮೆನಿಯ ಸಹಚರರಿಂದ ಸಟ್ಟರೆಹಳಿಗೆ ದೊರೆಯುತ್ತದೆ.  ಇರಾನ್‌ನಲ್ಲಿ ಸ್ಕೂಲ್  ಆಫ್ ಸೋಶಿಯಲ್  ವರ್ಕ್‌ನ  ತಾಯಿ  ಎಂದು ಆಗಲೇ  ಪ್ರಸಿದ್ಧ ರಾಗಿದ್ದ  ಈ ಮಹಿಳೆ ತನ್ನ ನಡುವಯಸ್ಸಿನಲ್ಲಿ ತಾನು ಕಟ್ಟಿದ ಸಾಮ್ರಾಜ್ಯವನ್ನು ಇದ್ದ ಹಾಗೆ ಬಿಟ್ಟು ತಕ್ಷಣ ದೇಶ ಬಿಟ್ಟು ತೆರಳುವ ಸ್ಥಿತಿ ಎಂತಹಶೋಚನಿಯಅಲ್ಲವೇ? ಈ ಬರಿಗೈ ಪಯಣದಲ್ಲಿ ಆಕೆಯ ಕುಟುಂಬ ಅವಳ ಬೆನ್ನಿಗೆ ನಿಂತಿತ್ತು. ಆದರೆ ಅವಳ ಖಾಲಿತನವನ್ನು ತುಂಬುವಲ್ಲಿ ಇವರಾರೂ ಶಕ್ತರಿರಲಿಲ್ಲ. ಕೊನೆಗೆ ಅಮೇರಿಕಾದಲ್ಲಿ ತನ್ನ ಹಳೆಯ ಸ್ನೇಹಿತರ ಸಹಾಯದಿಂದ ಸಮಾಜ ಸೇವಕಿಯಾಗಿ  ಸಟ್ಟರೆಹ್ ಬದುಕನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸಿದಳು. ಒಡಹುಟ್ಟಿದವರು, ಮಗಳು ಮಿತ್ರ ಮತ್ತು ಅಳಿಯ, ಮೊಮ್ಮಕ್ಕಳು  ಅವಳ ಜೀವನ ಸುಗಮಗೊಳಿಸಲು ಸಾಥ್ ನೀಡಿದರು.

ತಾನು ತನ್ನ ನೆಲದಲ್ಲಿ ಬಿತ್ತಿದ ಬೀಜ ಹುಸಿ  ಹೋಗಲಿಲ್ಲ. ಸಮಾಜ ಸೇವೆಯ ಇರಾನಿನ ಅಭಿವೃದ್ಧಿಯ ಕನಸು ಹೊತ್ತ ಒಂದಷ್ಟು ವಿದ್ಯಾರ್ಥಿಗಳು ಸ್ನೇಹಿತರು ಅಲ್ಲಿ ಇದ್ದಾರೆ. ಒಂದಲ್ಲ ಒಂದು ದಿನ ತಾನು ಇರಾನಿನ ನೆಲದಲ್ಲಿ ಕಂಡ ಕನಸನ್ನು ಅವರು ನೆನಸಾಗಿಸುತ್ತಾರೆ ಎನ್ನುವ ಭರವಸೆಯ ಮಾತುಗಳು ಸಟ್ಟರೆಹಳ ಸ್ನೇಹಿತರಿಂದ ಆಕೆಗೆ ಆಗಾಗ್ಗೆ ತಲುಪುತ್ತಿತ್ತು. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎನ್ನುವ ಮಾದರಿಯಲ್ಲಿ ಸಾಗಿದ ತನ್ನ ಸಂಘರ್ಷಮಯ ಬದುಕಿನ ಹಾದಿಯ ಬಗ್ಗೆ  ಸಟ್ಟರೆಹ್‌ಗೆ ಯಾವುದೇ ಖೇದಕ್ಕೆ ಕಾರಣವಿಲ್ಲ ಎನ್ನುವ ನೆಮ್ಮದಿ ಮೂಡಿಸಿದ ಸಂಗತಿ ಇದಾಗಿತ್ತು.

ಒಟ್ಟಾರೆಯಾಗಿ  ಸಟ್ಟರೆಹ್‌ಳ ಆತ್ಮಕಥನವು ಕೇವಲ ಆಕೆಯ ಸಾಹಸಮಯ ಕಥೆಯಾಗದೆ ಪರ್ಷಿಯಾದ ವೈವಿದ್ಯಮಯ ಸಂಸ್ಕೃತಿಯ ಜನಜೀವನದ ಕಥನ ಆಗಿಯೂ ಮುಖ್ಯ ಅನ್ನಿಸುತ್ತದೆ. ಧರ್ಮದ ತಳಕು ಹೊದ್ದಿರುವ ಸಂಪ್ರದಾಯದ ಕಪಿಮುಷ್ಟಿಯಲ್ಲಿ ಒದ್ದಾಡುವ ಯಾವುದೇ ಪರಿಸರದಲ್ಲಿ ಮಹಿಳೆಗೆ ಮನೆಯಂಗಳದಿಂದ ಜಗತ್ತಿನ ಅಂಗಣದ ಈ ಜಿಗಿತ  ಸುಲಭ  ಸಾಧ್ಯವಾಗುವುದಿಲ್ಲ. ಸಟ್ಟರೆಹ್‌ಳಂತಹ ಹೆಣ್ಣುಮಕ್ಕಳು ತೆರೆದ ಈ ದಾರಿ  ಇರಾನಿನ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಜಗತ್ತಿನ ಅದೆಷ್ಟೋ ಹೆಣ್ಣುಮಕ್ಕಳಿಗೆ ಹೆದ್ದಾರಿಯಾಗಿದೆ… ಡೋನ ಮುನ್ಕರ್ ಸಹಲೇಖಕಿಯಾಗಿ ದುಡಿದಿರುವದು ಈ ಕೃತಿ ಮೌಲ್ಯ ಹೆಚ್ಚಿಸಿದೆ. ಎಂತಹ ಸಂಘರ್ಷ ಮಯ  ಪರಿಸ್ಥಿತಿಯಲ್ಲೂ ಫೀನಿಕ್ಸ್ ಪಕ್ಷಿಯಂತೆ ಮರುಹುಟ್ಟು  ಪಡೆಯುವ  ಸಾಮರ್ಥ್ಯ  ಮಹಿಳೆಯರಿಗಿದೆ ಎನ್ನುವುದನ್ನು ಈ  ಕೃತಿ ಯ  ಓದು ನೀಡುತ್ತದೆ.

About The Author

ದೇವಿಕಾ ನಾಗೇಶ್

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ  ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ  ಹವ್ಯಾಸಗಳು.  

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ