ಬಳ್ಳಾರಿಯಿಂದ ಸಂಡೂರಿಗೆ ಹೋಗುವ ಬಸ್ಸಿನಲ್ಲಿ ಸೀಟ್ ಹಿಡಿಯುವುದೆಂದರೆ, ಅದೂ ಬಸ್ಸಿನ ಮೇಲಲ್ಲ- ಒಳಗೆ, ಕಡಿಮೆ ಸಾಹಸದ್ದಲ್ಲ. ಕೇವಲ ಅರವತ್ತು ಸೀಟುಳ್ಳ ಬಡಪಾಯಿ ಬಸ್ಸಿಗೆ ಒಂದಿನ್ನೂರು ಜನ ದಾಳಿ ನಡೆಸಿದಾಗ, ಅವರ ಮಧ್ಯೆ ವೀರಾವೇಶದಿಂದ ಹೋರಾಡಿ ಕಿಟಕಿಯಲ್ಲಿ ತೂರಿ ಸೀಟಿನ ಮೇಲೆ ಟವಲ್ ಅಥವಾ ಕೈ ಚೀಲ ಅಥವಾ ಚಪ್ಪಲಿ ಅಥವಾ ಕೈಯಲ್ಲಿನ ಕೂಸನ್ನು ಹಾಕುವದೆಂದರೆ ಸಾಮಾನ್ಯರಿಂದ ಸಾಧ್ಯವಾಗುವ ಕಾರ್ಯವಲ್ಲ. ಆದ್ದರಿಂದಲೆ ಕಮಲಕ್ಕಗೆ ತನ್ನ ಮಗ ವಾಜಿ ಸೀಟ್ ಹಿಡಿದಾಗ `ಮಗ ಕೈಗೆ ಬಂದ’ ಅಂತ ಅನ್ನಿಸಿ ಹೃದಯ ತುಂಬಿ ಬಂತು. ಕಾಯಿಪಲ್ಯ ತುಂಬಿಸಿದ ಗೋಣೀಚೀಲವನ್ನು ತನ್ನ ತಲೆಯ ಮೇಲಿಟ್ಟುಕೊಂಡ ವಾಜಿ, ಥೇಟ್ ಕೂಲಿಯವರಂತೆ ಸರಸರನೆ ಬಸ್ಸಿನ ಮೇಲಕ್ಕೆ ಹತ್ತಿ ಚೀಲವನ್ನಿಟ್ಟು ಬಂದ. ಹಿಂದಕ್ಕೆ ಎಷ್ಟೋ ಸಲ ಕಮಲಕ್ಕ ಕೂಲಿಯವರಿಗೆ ಇದೇ ಕೆಲಸಕ್ಕಾಗಿ ನಾಲ್ಕೈದು ರೂಪಾಯಿ ಕೊಟ್ಟಿದ್ದಾಳೆ.
ಕಿಟಕಿಯ ಬಳಿ ಕುಳಿತ ಕಮಲಕ್ಕ, ಶ್ಯಾವಿಗೆ ಸಜ್ಜಿಗೆಯ ಗಂಟನ್ನು ತೊಡೆಯ ಮೇಲಿಟ್ಟುಕೊಂಡಳು. ಮಲ್ಲಿಗೆಯ ಮೊಗ್ಗಿನ ಗಂಟನ್ನು ವಾಜಿ ಸಾಮಾನುಗಳನ್ನಿಡುವ ಹಲಗೆಯ ಮೇಲಿಟ್ಟ. ಶ್ಯಾವಿಗೆ ಸಜ್ಜಿಗೆಯನ್ನು ಹೂವಿನ ಪಕ್ಕ ಇಡುವಂತಿಲ್ಲ. ಅದು ಸೂಕ್ಷ್ಮವಾದ ಪದಾರ್ಥ. ಮಲ್ಲಿಗೆಯ ವಾಸನೆ ಬಡಿಯಿತೆಂದರೆ, ಜಪ್ಪಯ್ಯ ಎಂದರೂ ಶ್ಯಾವಿಗೆ ಮಾಡಲಾಗುವದಿಲ್ಲ. ಎಳೆ ಹರಿದು ಹರಿದುಹೋಗುತ್ತದೆ.
ವಾರದ ಹಿಂದೆ ಗೋಪಣ್ಣ ಧೋತ್ರ, ಶ್ಯಾಟಿ ಖರೀದಿಸಲು ಬಂದಾಗ `ಕಮ್ಲಿ, ಊರಿಗೆ ಬರ್ತಾ ಎರಡು ಸೇರು ಶ್ಯಾವಿಗೆ ಸಜ್ಜಿಗೆ, ಎರಡು ಸೇರು ಹೂವು, ಕಾಯಿಪಲ್ಯ ತೊಗೊಂಡು ಬಾ. ಸೌತೆಕಾಯಿ ಮರೀಬೇಡ’ ಅಂತ ಹೇಳಿದ್ದ. ಗೋಪಣ್ಣ ಅದನ್ನು ಹೇಳುವುದೂ ಬೇಕಿರಲಿಲ್ಲ. ಪ್ರತೀ ವರ್ಷವೂ ರಾಯರ ಆರಾಧನೆಗೆ ತಪ್ಪದೇ ಅಣ್ಣನ ಮನೆಗೆ ಕಮಲಕ್ಕ ಹೋಗಿದ್ದಾಳೆ. ಹೋಗುವಾಗ ಶ್ಯಾವಿಗೆ ಸಜ್ಜಿಗೆ, ಹೂವು ಹಾಗೂ ಕಾಯಿಪಲ್ಯ ತಪ್ಪದೇ ಒಯ್ದಿದ್ದಾಳೆ.
ರಥಬೀದಿಯ ಗಲ್ಲಿಯಲ್ಲಿರುವ ಕಾಸಿಂಸಾಬರ ಮನೆಗೆ ಹೋಗಿ ಎರಡು ಸೇರು ಶ್ಯಾವಿಗೆ ಸಜ್ಜಿಗೆಯನ್ನು ನಿನ್ನೆಯೇ ಕೊಂಡಿದ್ದಳು. ಹೋದ ವರ್ಷ ಹದಿನೈದು ರೂಪಾಯಿಗೆ ಸೇರಿನಂತೆ ಕೊಟ್ಟಿದ್ದ ಸಾಬಿ, ಈ ಸಲ ಇಪ್ಪತ್ತು ರೂಪಾಯಿ ತೆಗೆದುಕೊಂಡ. `ಏನ್ ಮಾಡಾದು ಕಮಲಕ್ಕ, ಗೋದಿ ಬೆಲೆ ಜಾಸ್ತಿ ಆಗ್ಯದೆ. ಬೇರೆಯವರಿಗೆ ಇಪ್ಪತ್ತೆರಡು ರೂಪಾಯಿಗೆ ಸೇರಿನಂತೆ ಮಾರ್ತೀನಿ. ಆದ್ರೆ ನೀವು ದೇವರ ಕಾರ್ಯಕ್ಕೆ ತೊಗಳ್ತೀರಂತ ಗೊತ್ತು. ಅದಕ್ಕೆ ಎರಡು ರೂಪಾಯಿ ಕಮ್ಮಿ ಮಾಡೀನಿ’ ಅಂತ ಪಕ್ಕಾ ವ್ಯವಹಾರದ ಮಾತನಾಡಿದ್ದ. ಕಮಲಕ್ಕ `ಭಾರೀ ದುಬಾರಿಯಾಯ್ತು’ ಅಂತ ಎರಡೆರಡು ಸಲ ಅಂದಳಾದರೂ, ಎರಡು ಸೇರು ಸಜ್ಜಿಗೆ ಖರೀದಿಸಿದ್ದಳು. ಮತ್ತೇನು ತಾನೆ ಮಾಡಲು ಸಾಧ್ಯ? ಇಡೀ ಬಳ್ಳಾರಿ ಜಿಲ್ಲೆಗೆ ಒಳ್ಳೆಯ ಶ್ಯಾವಿಗೆ ಸಜ್ಜಿಗೆ ಸಿಗುವುದು ಕಾಸಿಂಸಾಬರ ಬಳಿ ಮಾತ್ರ.
ನಂತರ ಹೂವಿನ ಬಜಾರಕ್ಕೆ ಹೋಗಿ, ನರಸಕ್ಕನ ಬಳಿ ಸ್ವಲ್ಪ ಕಷ್ಟ-ಸುಖ ಮಾತಾಡಿಕೊಂಡು, ಎರಡು ಸೇರು ಮೊಗ್ಗನ್ನು ಖರೀದಿಸಿದ್ದಳು. `ಘಂ’ ಎನ್ನುವ ಹಡಗಲಿಯ ಸಣ್ಣಮೊಗ್ಗು! ಹೂವು ಬಾಡದಿರಲು ವದ್ದಿ ಮಾಡಿದ ಸಣ್ಣಂಗೊಸ್ತ್ರದಲ್ಲಿ ಗಂಟು ಕಟ್ಟಿ ತಂದಿದ್ದಳು. ಬಳ್ಳಾರಿ ಬಿಸಿಲಿಗೆ ಆ ಸಣ್ಣಂಗೊಸ್ತ್ರವು ಅರ್ಧ ಗಂಟೆಗೊಮ್ಮೆ ಒಣಗಿಹೋಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಅದಕ್ಕೆ ನೀರು ಸಿಂಪಡಿಸುತ್ತಿದ್ದಳು.
ಇರುವೆಯೂ ನುಸಳದಂತೆ ಬಸ್ಸು ತುಂಬಿಹೋಗಿತ್ತು. ಯಾವುದೋ ಸಣ್ಣ ಮಗುವೊಂದು `ಯವ್ವಾ, ಉಚ್ಚಿ ಬಂದೈತಬೇ…’ ಎಂದು ಅಳುತ್ತಿತ್ತು. ಆದರೆ ಆ ಗಲಾಟೆಯಲ್ಲಿ ಮಗುವನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತೆ ಒಳ ನುಗ್ಗುವುದೆಂದರೆ ಅಸಾಧ್ಯವಾದದ್ದು. `ಗದ್ದಲದಾಗೆ ಎಲ್ಲಂತ ಕರ್ಕೊಂಡ್ಹೋಗ್ಲೋ ಶಿವನ. ಸುಮ್ಕೆ ಕುಕ್ಕರಬಡಿ. ಸಂಡೂರಿಗೋದ್ಮೇಲೆ ಏಟು ಬೇಕೋ ಆಟು ಉಚ್ಛಿ ಹೊಯ್ವಂತಿ’ ಅಂತ ಅವರಮ್ಮ ಗದರಿಸಿದಳು. ಬಿಸಿಲಿನ ಧಗೆಗೆ ಒಳಗೆ ಕುಳಿತವರೆಲ್ಲಾ ಬೆಂದು ಹೋಗಿದ್ದರು. ಕೈಯಲ್ಲಿದ್ದ ದಿನ ಪತ್ರಿಕೆಯಿಂದಲೋ, ಸೀರೆ ಸೆರಗಿನಿಂದಲೊ, ಧೋತ್ರದ ತುದಿಯಿಂದಲೋ ಗಾಳಿ ಬೀಸಿಕೊಳ್ಳುತ್ತ `ಉಸ್’ ಎಂದು ನಿಟ್ಟುಸಿರು ಬಿಡುತ್ತಿದ್ದರು. ಯಾರೋ ಮುದುಕರು ಅಸಹನೆಯಿಂದ `ಎಲ್ಲಿ ಸುಡುಗಾಡಿಗೆ ಹೋಗ್ಯಾನಪ್ಪಾ ಡ್ರೈವರು’ ಅಂತ ಕೂಗಿದರು. `ಕಾಫಿ ಕುಡೀಲಿಕ್ಕೆ ಹೋಟ್ಲಿಗೆ ಹೋಗ್ಯಾನಪ್ಪಾ. ಒಂದು ರವಷ್ಟು ತಡ್ಕಾ. ಇನ್ಹತ್ತು ಮಿನಿಟಿನಾಗೆ ಬರ್ತಾನೆ’ ಮತ್ಯಾವುದೋ ಮೂಲೆಯಲ್ಲಿದ್ದ ವ್ಯಕ್ತಿ ಉತ್ತರಿಸಿದ. `ಕಾಫಿ ಲೋಟದಾಗೆ ಕುಡೀಲಿಕ್ಹತ್ತಾನ, ಇಲ್ಲಾ ಕೊಡದಾಗ ಕುಡೀಲಿಕ್ಹತ್ತಾನ? ಅರ್ಧ ಗಂಟೆ ಆಯ್ತು, ಸುದ್ದಿಲ್ಲ’ ಅಂತ ಮುದುಕರು ಮತ್ತೆ ಗೊಣಗಿದರು.
ಕಮಲಕ್ಕಗೆ ಈ ಬಾಹ್ಯದ ಗಲಾಟೆಗಳ ಕಡೆಗೆ ಗಮನವಿರಲಿಲ್ಲ. ಮನಸ್ಸಿನಲ್ಲಿ ಮತ್ತೆ ಮತ್ತೆ `ನಾನು ಹರಪನಹಳ್ಳಿ ಹೆಣ್ಣು, ಯಾರಿಗೂ ಜಗ್ಗಂಗಿಲ್ಲ. ಈ ಸಲ ವಾಜಿ ಕೈಲಿ ಮಡಿ ಅಡಿಗಿ ಮಾಡೇ ಮಾಡಿಸ್ತೀನಿ. ಅಲಂಕಾರದ ಬ್ರಾಹ್ಮಣರಿಗೂ ಬಡಸ್ಲಿ’ ಅಂತ ನಿರ್ಧಾರ ಮಾಡಿಕೊಳ್ಳುತ್ತಿದ್ದಳು. ಹೀಗೆ ನಿರ್ಧಾರ ಮಾಡಿಕೊಂಡ ಸ್ವಲ್ಪ ಹೊತ್ತು ಮನಸ್ಸಿಗೆ ನೆಮ್ಮದಿಯೆನಿಸುತ್ತದೆ. ಆದರೆ ಕೆಲವೇ ನಿಮಿಷಗಳಲ್ಲಿ ಮತ್ಯಾರದೋ ಮುಖ ಜ್ಞಾಪಕಕ್ಕೆ ಬಂದು, ಅವರು ಕಮಲಕ್ಕನ ಜೊತೆ ಜಗಳಕ್ಕೆ ನಿಂತು `ತೊನ್ನು ಮೈಯ ಹುಡುಗನ ಕೈಲಿ ಮಡಿ ಅಡಿಗಿ ಹೆಂಗವ್ವಾ ಮಾಡಿಸ್ತಿ? ಧರ್ಮ ಕರ್ಮ ನಡೀ ಬೇಕೋ ಬ್ಯಾಡ್ವೋ ಊರಾಗೆ’ ಅಂತ ಗದರಿಸಿದಂತಾಗಿ, ಸ್ವಲ್ಪ ಹೊತ್ತಿನ ಕೆಳಗೆ ಮೂಡಿದ್ದ ನೆಮ್ಮದಿ ಬುಡ ಸಮೇತ ಕುಸಿದು ಬೀಳುತ್ತದೆ. ಹೀಗೆ ಜಗಳಕ್ಕೆ ನಿಂತ ವ್ಯಕ್ತಿ ಯಾರಾದರೂ ಆಗಿರಬಹುದು. ಮೂಲೆ ಮನೆ ವೆಂಕಣ್ಣ, ಪುರೋಹಿತರಾದ ಕೃಷ್ಣಾಚಾರ್ ಅಥವಾ ಗುಡೇಕೋಟಿ ಗೋವಿಂದಾಚಾರ್. ಒಮ್ಮೊಮ್ಮೆ ಗೋಪಣ್ಣನ ಹೆಂಡತಿ ರಾಧಕ್ಕನೇ ಆ ಪಾತ್ರ ವಹಿಸಬಹುದು. ಕಮಲಕ್ಕ ಕಿಟಕಿಯಿಂದ ಕತ್ತನ್ನು ಹೊರಳಿಸಿ ವಾಜಿಯ ಕಡೆ ನೋಡಿದಳು. ಬಲಗೆನ್ನೆಯ ಮೇಲೆ, ಕಿವಿಗೆ ಹತ್ತಿರ ಎರಡು ಬಿಳಿಯ ಮಚ್ಚೆಗಳು ಶೂಲದಂತೆ ಅವಳ ಹೃದಯವನ್ನು ಇರಿಯುವಂತಾಯ್ತು. ಒಂದು ನಿಂಬೆ ಹಣ್ಣಿನ ಗಾತ್ರದ್ದು, ಮತ್ತೊಂದು ಹುಣಸೇ ಬೀಜದ ಗಾತ್ರದ್ದು.
ಈ ಸಮಸ್ಯೆ ಪ್ರಾರಂಭವಾಗಿದ್ದು ಕೇವಲ ಎರಡು ವರ್ಷಗಳ ಹಿಂದೆ, ಪುರಂದರದಾಸರ ಪುಣ್ಯ ತಿಥಿಯಂದು. ನಾಲ್ಕು ತಿಂಗಳ ಹಿಂದಷ್ಟೇ ಕಮಲಕ್ಕ ವಾಜಿಯ ಮುಂಜಿ ಮಾಡಿದ್ದಳು. ವಾಜಿ ಮೂರು ಹೊತ್ತೂ ತಪ್ಪದೆ ಸಂಧ್ಯಾವಂದನೆ ಮಾಡುವಂತೆ ನೋಡಿಕೊಳ್ಳುತ್ತಿದ್ದಳು. ದಾಸರ ಪುಣ್ಯತಿಥಿಯ ಕಾರಣ ಕಮಲಕ್ಕ ಸಂಡೂರಿಗೆ ಬಂದಿದ್ದಳು. ಬೆಳಿಗ್ಗೆ ಸ್ನಾನ ಮಾಡಿದ ನಂತರ ವಾಜಿ ಯಥಾಪ್ರಕಾರ ಸಂಧ್ಯಾವಂದನೆಗೆ ಕುಳಿತಿದ್ದ. ಅಲ್ಲೇ ಹತ್ತಿರದಲ್ಲಿ ರಾಧಕ್ಕ ಕಾಯಿಪಲ್ಯ ಹೆಚ್ಚುತ್ತಿದ್ದಳು. ಕಮಲಕ್ಕ ರಾತ್ರಿ ಭಜನೆಗೆಂದು ಭೀಮಕ್ಕವ್ವನ ಹಾಡಿನ ಪುಸ್ತಕ ಹುಡುಕುತ್ತಿದ್ದಳು. ಇದ್ದಕ್ಕಿದ್ದಂತೆಯೇ ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ಈಳಿಗೆಯನ್ನು ಮಡಿಸಲೂ ಮರೆತು, ರಾಧಕ್ಕ ವಾಜಿಯ ಬಳಿ ಹೋಗಿ ಅವನ ಬಲಗೆನ್ನೆಯನ್ನು ಪರೀಕ್ಷಿಸಲಾರಂಭಿಸಿದಳು.
`ಕಮಲಕ್ಕ, ಸ್ವಲ್ಪ ಇಲ್ಲಿ ಬಾ’ ಕಮಲಕ್ಕ ಎದ್ದು ವಾಜಿಯ ಬಳಿ ಹೋಗಿದ್ದಳು. `ಕಿವಿ ಹತ್ತಿರ ಏನೋ ಬೆಳ್ಳಗೆ ಕಾಣ್ತದ್ನೋಡು. ಚಿಕ್ಕ ಬೊಕ್ಕೆ’. ಕಮಲಕ್ಕಗೂ ರಾಧಕ್ಕನ ಮಾತು ಸರಿಯೆನ್ನಿಸಿತು. ಹೌದೋ ಅಲ್ಲವೋ ಎನ್ನುವಂತೆ ಇತ್ತೀಚಿನ ಥಳಕು ಬಳಕು ಹುಡುಗಿಯರು ಹಣೆಯ ಮೇಲಿಡುವ ತಿಲಕದ ಗಾತ್ರದಷ್ಟು ಬಿಳಿಯ ಕಲೆ! ಆದರೆ ಮನಸ್ಸು ಅದನ್ನು ತೊನ್ನೆಂದು ಒಪ್ಪಲು ಸಿದ್ಧವಿರಲಿಲ್ಲ. `ಗೋಪೀಚಂದನದ ಕಲೆ ಇರ್ಬೇಕು’ ಎಂದ ಕಮಲಕ್ಕ ಉಗುರಿನಿಂದ ಆ ಕಲೆಯನ್ನು ಕೆರೆಯತೊಡಗಿದಳು. `ಮಡೀಲಿದ್ದೀನಿ, ಮುಟ್ಟಿಬಿಟ್ಟಿಯಲ್ಲೇ…’ ಅಂತ ವಾಜಿ ಕೂಗಿದ್ದ. ಕಮಲಕ್ಕ ಎಷ್ಟೇ ಕೆರೆದರೂ ಆ ಕಲೆ ಹೋಗಲಿಲ್ಲ. ಅಷ್ಟಕ್ಕೇ ಸಮಾಧಾನವಾಗದೆ ವಾಜಿಯನ್ನು ಬೆಳಕಿದ್ದ ಕಡೆಗೆ ಕರೆದುಕೊಂಡು ಹೋಗಿ, ಕೊಂಚ ನೀರನ್ನು ಹಾಕಿ, ಉಗುರಿನಿಂದ ಕೆರೆದು ಪರೀಕ್ಷಿಸಿದಳು. ಆ ಬಿಳಿಯ ಕಲೆಯ ಮೇಲೆ ಕೆರೆದದ್ದರಿಂದ, ಆ ಭಾಗ ಕೆಂಪಾಗಿ ಹೋಗಿ ಉರಿಯಲಾರಂಭಿಸಿತ್ತು.
ಆ ದಿನದಿಂದ ಕಮಲಕ್ಕ ವಾಜಿಯ ಮುಖವನ್ನು ಯಾವಾಗ ನೋಡಿದರೂ ಕಣ್ಣು ತಾನೇ ತಾನಾಗಿಯೇ ಬಲಗೆನ್ನೆಯ ಕಿವಿಯ ಬಳಿ ನಿಲ್ಲುತ್ತಿತ್ತು. ಯಾವುದೋ ಒಂದು ಶುಭದಿನ ಅದು ತಾನೇ ತಾನಾಗಿ ಮಾಯವಾಗುತ್ತದೆಂದು ದೃಢವಾಗಿ ನಂಬಿದ್ದಳು. ಆದರೆ ಕಮಲಕ್ಕನ ಅದೃಷ್ಟ ತುಂಬಾ ಕೆಟ್ಟದ್ದು! ಆ ಬಿಳಿಯ ಬೊಕ್ಕೆ ಮಾಯವಾಗುವದಿರಲಿ, ದಿನ ದಿನಕ್ಕೆ ವಾಮನನಂತೆ ಬೆಳೆಯಲಾರಂಭಿಸಿತು. ಅಷ್ಟೇ ಸಾಲದೆಂಬಂತೆ, ಮತ್ತೊಂದು ಮರಿಯನ್ನೂ ಹಾಕಿ ಕಮಲಕ್ಕಗೆ ದಿಕ್ಕು ತೋಚದಂತೆ ಮಾಡಿತ್ತು. ಬರೀ ಚಿಕ್ಕ ಬೊಕ್ಕೆಯಾಗಿದ್ದರೆ, ಗೋಪೀಚಂದನದ ಮುದ್ರೆಯನ್ನು ಆ ಭಾಗಕ್ಕೆ ಒತ್ತಿ ಮಾಯ ಮಾಡಬಹುದು. ಹೇಗೂ ವಾಜಿ ದಿನಕ್ಕೆ ಮೂರು ಹೊತ್ತು ಶ್ರದ್ಧೆಯಿಂದ ಸಂಧ್ಯಾವಂದನೆ ಮಾಡುತ್ತಾನೆ. ಆದರೆ ತ್ರಿವಿಕ್ರಮನಂತೆ ಬೆಳೆದು, ರಕ್ತ ಬೀಜಾಸುರನಂತೆ ಮರಿಹಾಕುವ ತೊನ್ನನ್ನು ಬಚ್ಚಿಡುವುದಾದರೂ ಹೇಗೆ?
ಕಮಲಕ್ಕ ಧೃತಿಗೆಟ್ಟಿದ್ದಳು. `ಇದ್ದೊಂದು ಅಗಳು ಗಂಜಿಯಾಯ್ತಲ್ಲ ದೇವರೆ’ ಅಂತ ದಿನನಿತ್ಯ ಕೊರಗಲಾರಂಭಿಸಿದಳು. ರಾಯರ ಗುಡಿಯಲ್ಲಿ ಹೆಜ್ಜೆ ನಮಸ್ಕಾರ ಹಾಕಿದರೂ ಯಾಕೋ ದೇವರು ಕಣ್ತೆರೆಯಲಿಲ್ಲ. ಆಯುರ್ವೇದಿಕ್, ಅಲೋಪತಿಕ್ ಹಾಗೂ ಹೋಮಿಯೋಪತಿ ವೈದ್ಯರನ್ನು ಕಂಡು ಬಂದರೂ ಬಿಳಿಯ ಕಲೆ ಕುಗ್ಗಲಿಲ್ಲ. ಅದರ ಬದಲು ಆರ್ಥಿಕ ಮುಗ್ಗಟ್ಟಿನಿಂದ ಕಮಲಕ್ಕ ಕುಗ್ಗಿದ್ದಳು!
`ಕಮಲಕ್ಕ, ಇದೆಲ್ಲಾ ಮನುಷ್ಯರ ಕೈಲೆ ಸರಿ ಮಾಡುವಂಥದ್ದಲ್ಲ. ಸ್ವಾದಿಗೆ ಹೋಗಿ ಭೂತರಾಯರ ಸೇವೆ ಮಾಡ್ಸು. ಎಲ್ಲಾ ಸರಿಹೋಗ್ತದೆ’ ಅಂತ ಹಿತೈಷಿಗಳ್ಯಾರೋ ಹೇಳಿದ್ದರು. ಕಮಲಕ್ಕಗೂ ಅದು ಹೌದೆನ್ನಿಸಿತ್ತು. ಆದರೆ ಭೂತರಾಯರು ಕಮಲಕ್ಕಗೆ ಎಟಕುವಷ್ಟು ಹತ್ತಿರದಲ್ಲಿರಲಿಲ್ಲ, ದೂರದ ಸ್ವಾದಿಯಲ್ಲಿ! ಎಷ್ಟೇ ಕೈ ಬಿಗಿ ಹಿಡಿದರೂ, ನೂರಿನ್ನೂರು ರೂಪಾಯಿಯಾದರೂ ಬೇಕು. ಹಪ್ಪಳ ಮಾರಿ ಬದುಕು ಸಾಗಿಸುವ ಕಮಲಕ್ಕಗೆ ಅದು ದೊಡ್ಡ ಮೊತ್ತವೇ ಸರಿ. ಮತ್ತೆ ಮತ್ತೆ ಗೋಪಣ್ಣನನ್ನು ಕೇಳಲು ಮನಸ್ಸು ಒಪ್ಪಲಿಲ್ಲ. ಆದರೂ ಭೂತರಾಯರಿಗೆ ಸೇವೆ ಮಾಡಿದರೆ ಖಂಡಿತಾ ಬಿಳಿಯ ಕಲೆಗಳು ಮಾಯವಾಗುತ್ತದೆಂಬ ನಂಬಿಕೆ ಬಲವಾಗುತ್ತಾ ಹೋಯ್ತು. ಕೊನೆಗೆ ಮನೆಯಲ್ಲಿದ್ದ ಒಂದೇ ಒಂದು ಬಂಗಾರದ ವಸ್ತು, ಕಮಲಕ್ಕಗೆ ಮದುವೆಯಲ್ಲಿ ಗೋಪಣ್ಣ ಕೊಟ್ಟಿದ್ದು, ತುರುಬಿನ ಹೂವನ್ನು ಒತ್ತೆ ಇಟ್ಟಿದ್ದಳು. ಅದನ್ನು ವಾಜಿಯ ಹೆಂಡತಿಯಾಗುವವಳಿಗೆ ಅಂತ ಅಂದುಕೊಂಡಿದ್ದಳಾದ ಕಾರಣ, ಒತ್ತೆ ಇಟ್ಟು ಬಂದ ನಂತರ ಗೋಳೋ ಎಂದು ಅತ್ತಿದ್ದಳು.
ಸ್ವಾದಿಯಲ್ಲಿ ವಾಜಿಯ ಸೊಂಟಕ್ಕೆ ತೆಂಗಿನಕಾಯಿಯನ್ನು ಕಟ್ಟಿ, ಪುಷ್ಕರಣಿಯಲ್ಲಿ ಪ್ರತೀ ಪ್ರದಕ್ಷಿಣಿಗೊಮ್ಮೆ ಮುಳುಗು ಹಾಕಿ ಏಳು ದಿನ ತಪ್ಪದೆ ಸೇವೆ ಮಾಡಿಸಿದಳು. ಬೆಳಿಗ್ಗೆ ವಾಜಿ ಕಣ್ಣು ತೆರೆದ ತಕ್ಷಣ `ಕನಸು ಗಿನಸು ಬಿತ್ತೇನೋ?’ ಅಂತ ಆತುರದಿಂದ ಕೇಳುತ್ತಿದ್ದಳು. ಆದರೆ ವಾಜಿಗೆ ರಾತ್ರಿ ಉಂಡು ಮಲಗಿದ್ದೊಂದೇ ನೆನಪಿರುತ್ತಿತ್ತೇ ವಿನಾಃ ಮತ್ತೇನೂ ಜ್ಞಾಪಕಕ್ಕೆ ಬರುತ್ತಿರಲಿಲ್ಲ. ಅವನ ವಯಸ್ಸಾದರೂ ಎಷ್ಟು? ಕಮಲಕ್ಕಗೆ ಕಸಿವಿಸಿಯಾಗಲಾರಂಭಿಸಿತು. ಇಷ್ಟು ಸೇವೆ ಮಾಡಿದ್ರೂ ಭೂತರಾಯರಿಗೆ ಪ್ರೀತಿ ಆಗ್ಲಿಲ್ಲಲ್ಲಾ ಅಂತ ಯೋಚನೆಗಿಟ್ಟುಕೊಂಡಿತು. ಆದರೆ ಏಳನೆಯ ದಿನ ಬೆಳಿಗ್ಗೆ ಯಥಾಪ್ರಕಾರ ವಾಜಿ ಎದ್ದಾಗ, `ಕನಸು ಬಿದ್ದಿತ್ತೇನೋ?’ ಎಂದು ಕೇಳಿದ್ದಕ್ಕೆ ವಾಜಿ `ಹೂಂ’ ಎಂದಿದ್ದ. `ಇಷ್ಟು ದಿನದ ಮೇಲೆ ಭೂತರಾಯ ಕಣ್ಣು ತೆರೆದನಲ್ಲ’ ಅಂತ ಕಮಲಕ್ಕ ಕುಳಿತಲ್ಲಿಂದಲೇ ಕೈ ಮುಗಿದಿದ್ದಳು.
`ಏನಂತ ಕನಸು ಬಿತ್ತೋ?’ ಅಂತ ಆತುರದಿಂದ ಕೇಳಿದ್ದಳು. ವಾಜಿ ತಬ್ಬಿಬ್ಬಾದ. ಆ ಕನಸು ಹೇಳ್ಬೇಕೋ ಹೇಳ್ಬಾರದೋ ಎಂದು ಅನುಮಾನಿಸಲಾರಂಭಿಸಿದ. `ವಾಜಿ ಏನಂತ ಕನಸು ಬಿತ್ತಪ್ಪಾ? ಭೂತರಾಜರು ಬಂದಿದ್ರಾ ಇಲ್ಲಾ ವಾದಿರಾಜರು ಬಂದಿದ್ರಾ?’ ಮತ್ತೊಮ್ಮೆ ಕಮಲಕ್ಕ ಬಲವಂತ ಮಾಡಿದ್ದಕ್ಕೆ ವಾಜಿ ಬಾಯಿ ತೆರೆದ. `ಅಂಥಾದ್ದೇನೂ ಇಲ್ಲಮ್ಮ. ಭಾರತ-ಪಾಕಿಸ್ತಾನದ ಜೋಡಿ ಕ್ರಿಕೆಟ್ ಆಟ ಆದಂಗಿತ್ತು. ಕಪಿಲ್ ದೇವ್ ಸಿಕ್ಸರ್ ಬಾರಿಸಿದ್ದ’ ಅಂದ. ‘ಕಪಿಲ್ ದೇವ್ನಂತೆ’, ಅಷ್ಟೇ ಜೋರಾಗಿ, ಕಮಲಕ್ಕ ವಾಜಿಯ ಕೆನ್ನೆಗೆ ಬೀಸಿದ್ದಳು. `ಪುಣ್ಯಕ್ಷೇತ್ರಕ್ಕೆ ಬಂದಾಗಲೂ ಆ ಹಾಳು ಕ್ರಿಕೆಟ್ ಆಟದ ಬಗ್ಗೆ ಯೋಚ್ನೀ ಮಾಡ್ತೀಯಲ್ಲೋ…’ ಎಂದು ಕೋಪದಿಂದ ಕಿರುಚಿದ್ದಳು. ವಾಜಿಯ ಕೆನ್ನೆಯ ಮೇಲೆ ಕಮಲಕ್ಕನ ಕೈ ಬೆರಳ ಗುರುತುಗಳು ಕೆಂಪಗೆ ಮೂಡಿದ್ದವು. ತಾನೇನೂ ತಪ್ಪು ಮಾಡದಿದ್ದರೂ ಅಮ್ಮ ಹೀಗೆ ಹೊಡದಿದ್ದಕ್ಕೆ ವಾಜಿಗೆ ಕೋಪ ಹಾಗೂ ಅಳು ಬಂದಿತ್ತು. `ಇವತ್ತು ನಾನು ಸೇವೆ ಮಾಡಂಗಿಲ್ಲ ಹೋಗು’ ಅಂತ ಕೂಗಿ ಹೊರಗೆ ಹೋದ.
ಸ್ವಲ್ಪ ಸಮಯದ ನಂತರ ಕಮಲಕ್ಕಗೆ ಏನೋ ಹೊಳೆದಂತಾಯ್ತು. ಮೈಯಲ್ಲಿ ಭೂತ ಸಂಚಾರವಾದರೇನೇ ಸಿಕ್ಸರ್ ಬಾರಿಸಲಿಕ್ಕೆ ಸಾಧ್ಯ. ಅಂದರೆ ಭೂತರಾಯರು ಕಪಿಲ್ ದೇವ್ ರೂಪದಲ್ಲಿ ಬಂದಿದ್ರಾ? ಸಿಕ್ಸರ್ ಬಾರಿಸೋದು ಅಂದ್ರೆ ಆಟದಲ್ಲಿ ಗೆಲ್ಲೋ ಲಕ್ಷಣ. ಜೊತೆಗೆ ಪಾಕಿಸ್ತಾನಿಗಳು ನಮ್ಮ ವೈರಿಗಳು- ಅಂದ್ರೆ ತೊನ್ನು ಇದ್ದಂಗೆ. ಅವರ ಮೇಲೆ ಗೆಲುವನ್ನು ಸಾಧಿಸೋದು ಅಂದ್ರೆ, ವಾಜಿಯ ಬಿಳಿಯ ಕಲೆಗಳು ಮಾಯವಾಗುತ್ತವೆ ಎಂದೇ ಅರ್ಥ ಅಲ್ಲವಾ? ಈ ವಿವರಣೆ ಸ್ವಲ್ಪ ಸಮಾಧಾನ ನೀಡಿತಾದರೂ, ಸಂಪೂರ್ಣ ತೃಪ್ತಿಯನ್ನು ಕೊಡಲಿಲ್ಲ.
ಮರುದಿನ ವಾಜಿಯ ಪರವಾಗಿ ಕಮಲಕ್ಕನೇ ಸೇವೆಯನ್ನು ಪ್ರಾರಂಭಿಸಿದಳು. `ಭೂತರಾಯ, ನನ್ನ ಮಗ ಸಣ್ಣೋನು. ಇನ್ನೂ ತಿಳುವಳಿಕೆ ಬಂದಿಲ್ಲ. ಅವನು ಸಿಟ್ಟು ಮಾಡ್ಕೊಂಡ್ರೆ ಹೊಟ್ಟಾಗೆ ಹಾಕ್ಕೋ. ಅವನ ಬದಲಿ ನನ್ನ ಸೇವಾ ಸ್ವೀಕಾರ ಮಾಡು. ಈ ಸೇವೆಯ ಫಲವೆಲ್ಲಾ ಅವನಿಗೇ ಸೇರಲಿ. ತಾಯಿ ಹಾಗೂ ಮಗನಲ್ಲಿ ಯಾರು ಸೇವೆ ಮಾಡಿದ್ರೂ ಒಂದೆ ಅಲ್ಲೇನು?’ ಎಂದು ಪ್ರಾರ್ಥಿಸಿ ಸೇವೆಯನ್ನು ಮೊದಲಿಟ್ಟಳು.
ಮೊದಲನೆಯ ದಿನವೇ ಕಮಲಕ್ಕಗೆ ಕನಸು ಬಿತ್ತು. ಅದೂ ಬೆಳಗಿನ ಜಾವದಲ್ಲಿ! ಕಮಲಕ್ಕ ಪುಷ್ಕರಣಿಯ ಕಡೆಯ ಮೆಟ್ಟಿಲ ಬಳಿ ನಿಂತಂತೆ, ವಾಜಿ ಅವಳ ಪಕ್ಕದಲ್ಲಿ ಇದ್ದಂತೆ. ಅಲ್ಲೇ ಹತ್ತಿರದಲ್ಲಿ ಒಬ್ಬ ಅಜಾನುಬಾಹು ವ್ಯಕ್ತಿ ನಿಂತಿದ್ದಾನೆ. ಅವನ ಪಕ್ಕದಲ್ಲಿ ಕಸಬರಿಗೆಯೊಂದಿದೆ. ಅವನಿಗಿಂತಲೂ ಮೇಲೆ, ಕೆಲವೇ ಮೆಟ್ಟಿಲುಗಳ ಅಂತರದಲ್ಲಿ, ಸುಂದರನಾದ ಒಬ್ಬ ಬ್ರಾಹ್ಮಣ ಕುಳಿತಿದ್ದಾನೆ. ಬ್ರಾಹ್ಮಣನ ಹತ್ತಿರದಲ್ಲೇ ಬಿಳಿಯ ಕುದುರೆಯೊಂದು ಓಡಾಡುತ್ತಿದೆ. ಆ ಕುದುರೆಯ ಬಿಳುಪು ಕಣ್ಣಿಗೆ ಕುಕ್ಕುವಷ್ಟು ಶೋಭಾಯಮಾನವಾಗಿದೆ. ಆ ಅಜಾನುಬಾಹು ವ್ಯಕ್ತಿ ಕಮಲಕ್ಕನನ್ನು ಉದ್ದೇಶಿಸಿ ಮಾತನಾಡಲಾರಂಭಿಸಿದ. `ಕಮಲಕ್ಕಾ ಹೆದರಬೇಡ, ನಿನ್ನ ಮಗ ವಾಜಿಗೆ ಏನೂ ಆಗಿಲ್ಲ. ಅದು ತೊನ್ನೇ ಅಲ್ಲ. ಅವನು ಎಲ್ಲಾ ದೇವರ ಕಾರ್ಯದಾಗೂ ಇರಬಹುದು. ನೀ ಪುಣ್ಯ ಮಾಡಿದ್ದಿ. ನಿನ್ನ ಮಗ ಮುಂದೆ ದೊಡ್ಡ ಮನುಷ್ಯ ಆಗ್ತಾನೆ’. ಅಜಾನುಬಾಹುವಿನ ಮಾತಿಗೆ ಹೌದೆನ್ನುವಂತೆ ಬ್ರಾಹ್ಮಣನೂ ತಲೆಯಾಡಿಸಿದ. ಅವನ ಹತ್ತಿರದಲ್ಲೇ ಇದ್ದ ಕುದುರೆ ಕೇಂಕರಿಸಿತು. ಬ್ರಾಹ್ಮಣ ಕಮಲಕ್ಕನ ಕಡೆ ನೋಡಿ `ಇಲ್ಲಿ ಬಾ’ ಅಂತ ಕಣ್ಣಿಂದಲೇ ಆಜ್ಞೆ ಮಾಡಿದಂತಾಯ್ತು. ಕಮಲಕ್ಕಗೆ ಮಡಿ ಹೆಂಗಸು ಬ್ರಾಹ್ಮಣನ ಬಳಿ ಹೋಗ್ಬೇಕೋ, ಬೇಡವೋ ಅಂತ ಅನುಮಾನವಾಯ್ತು. ಅದಕ್ಕಾಗಿ ವಾಜಿಯನ್ನು ಆ ಬ್ರಾಹ್ಮಣನ ಹತ್ತಿರ ಕಳುಹಿಸಿದಳು. ಆ ಬ್ರಾಹ್ಮಣ `ಕೈ ಹಿಡಿಯೋ’ ಅಂತ ಆಜ್ಞೆ ಮಾಡಿದ. ವಾಜಿ ಕೈ ಒಡ್ಡಿದ. ಬ್ರಾಹ್ಮಣ ತನ್ನ ಮುಷ್ಟಿಯಲ್ಲಿದ್ದ ಫಲ ಮಂತ್ರಾಕ್ಷತೆಯನ್ನು ವಾಜಿಯ ಕೈಗೆ ಹಾಕಿದ್ದ.
ತಕ್ಷಣ ಕಮಲಕ್ಕಗೆ ಎಚ್ಚರವಾಯ್ತು. ಎಚ್ಚರವಾದ ನಂತರವೂ ಸ್ವಲ್ಪ ಹೊತ್ತು ಆ ಕನಸಿನ ಪ್ರಪಂಚದಲ್ಲೇ ಇದ್ದಂತಿತ್ತು. ಕೆಲವು ನಿಮಿಷಗಳ ನಂತರ ಕಮಲಕ್ಕಗೆ ಎಲ್ಲಾ ಸ್ಪಷ್ಟವಾಯ್ತು. ಕನಸಿನ ಅರ್ಥ ಸಂಪೂರ್ಣವಾಗಿ ಹೊಳೆದುಬಿಟ್ಟಿತ್ತು. ಆ ಅಜಾನುಬಾಹು ವ್ಯಕ್ತಿ ಬೇರ್ಯಾರೂ ಅಲ್ಲ, ಸಾಕ್ಷಾತ್ ಭೂತರಾಜರು. ಅದಕ್ಕೇ ಅವರ ಹತ್ತಿರದಲ್ಲಿ ಕಸಬರಿಗೆಯೂ ಇದೆ. ಇನ್ನು ಆ ಬ್ರಾಹ್ಮಣನ ದಿವ್ಯ ತೇಜಸ್ಸಿನಿಂದಲೇ ಗೊತ್ತಾಗುತ್ತೆ, ಅವರು ಸಾಕ್ಷಾತ್ ವಾದಿರಾಜರು ಅಂತ. ಸ್ವಾದಿಯಲ್ಲಿ ದಿವ್ಯ ತೇಜಸ್ಸಿನ ಬ್ರಾಹ್ಮಣ ಬೇರೆ ಯಾರು ತಾನೆ ಆಗಿರಲಿಕ್ಕೆ ಸಾಧ್ಯ? ಸಾಕ್ಷಿಯಾಗಿ ಹಯವೂ ಬಳಿಯಲ್ಲಿ ನಿಂತಿದೆ. ವಾದಿರಾಜರ ಬಳಿ ಕುದುರೆ ನಿಂತಿದೆಯೆಂದ ಮೇಲೆ ಅದು ದೇವರಲ್ಲದೆ ಮತ್ತಿನ್ಯಾರು? `ದೇವರೇ, ಅಂತೂ ಬಡ ರಂಡೆಯ ಮೇಲೆ ಕಣ್ತೆರೆದೆಯಲ್ಲಪ್ಪಾ’ ಎಂದು ಮನಸಾ ವಂದಿಸಿ ಬಳ್ಳಾರಿಗೆ ವಾಪಾಸಾದಳು.
ಸಾಕ್ಷಾತ್ ವಾದಿರಾಜರೇ ವಾಜಿಯ ಬಿಳಿಯ ಕಲೆಗಳನ್ನು ತೊನ್ನಲ್ಲವೆಂದು ದೃಢೀಕರಿಸಿದರೂ, ಸಮಾಜ ಎಳ್ಳಷ್ಟೂ ಇದರಲ್ಲಿ ನಂಬಿಕೆ ತೋರಲಿಲ್ಲ. ಬಳ್ಳಾರಿಗೆ ಬಂದ ನಂತರ ಕಮಲಕ್ಕ ತನ್ನನ್ನು ಕಾಣಲು ಬಂದವರಿಗೆ ಹಾಗೂ ತಾನೇ ಕಾಣಲು ಹೋದಾಗ ಸ್ವಾದಿ ಯಾತ್ರೆ ಹಾಗೂ ಕನಸನ್ನು ವರ್ಣರಂಜಿತವಾಗಿ ವಿವರಿಸಿದಳು. ಭೂತರಾಯರು `ಅದು ತೊನ್ನೇ ಅಲ್ಲ’ ಅಂತ ಅಂದ ಮಾತನ್ನು ಎರಡೆರಡು ಬಾರಿ ಹೇಳಿದಳು.
ಗುಡಿ ಬೀದಿಯ ರುಕ್ಮಿಣಮ್ಮ ಕಮಲಕ್ಕನ ಯಾತ್ರೆ ಹಾಗೂ ಕನಸನ್ನು ಸವಿಸ್ತಾರವಾಗಿ ಕೇಳಿ `ಏನ್ ಪುಣ್ಯಾ ಮಾಡಿ ಕಮಲಕ್ಕಾ, ವಾದಿರಾಜರಿಂದ ಫಲಮಂತ್ರಾಕ್ಷತೆ ಪಡೆಯೋದಂದರೆ ಸಾಮಾನ್ಯ ಆತೇನು?’ ಎಂದಳು. ಆದರೆ ಮನೆಗೆ ಹಿಂತಿರುಗುವಾಗ, ಅಲ್ಲೇ ಕುಳಿತಿದ್ದ ವಾಜಿಯನ್ನು ನೋಡಿ `ಏನಪ್ಪಾ ವಾಜಿ, ಸೊಂಟಕ್ಕೆ ಕಾಯಿ ಕಟ್ಟಿಕೊಂಡು ಸೇವಾ ಮಾಡ್ದೇನು?’ ಎಂದಳು. ರುಕ್ಮಿಣಮ್ಮ ವಾಜಿಯನ್ನು `ವಾಜಿ’ ಎಂದು ಸಂಬೋಧಿಸಿದ್ದನ್ನು ಕಂಡು ಕಮಲಕ್ಕಗೆ ಹೊಟ್ಟೆಯಲ್ಲಿ ಬೆಂಕಿ ಇಟ್ಟಂತಾಯ್ತು!
`ಯಾಕವ್ವಾ ರುಕ್ಮಿಣಿ, ಇಷ್ಟು ದಿನ `ಅಳಿಯ’, `ಅಳಿಯ’ ಅಂತಿದ್ದಾಕಿ ಈವೊತ್ತು `ವಾಜಿ’ ಅಂತೀಯಲ್ಲ? ನನ್ನ ಮಗ ಅಳಿಯ ಆಗೋದು ಇಷ್ಟ ಆಗಂಗಿಲ್ಲೇನು?’
`ಹಂಗಲ್ಲೆ ಕಮಲಕ್ಕ. ಈಗ ಕಾಲ ಬದಲಾಗ್ತ ಅದೆ. ಈಗಿನ ಕಾಲದ ಹುಡುಗರು ತಮ್ಮ ಮನಸ್ಸಿಗೆ ಬಂದ ಹಾಗೆ ನಡ್ಕೊಳ್ಳಿಕ್ಹತ್ತಾರೆ. ಅಂಥಾದ್ರಾಗೆ ಸುಮ್ ಸುಮ್ನೆ ಈಗ್ಲಿಂದ್ಲೇ ನಾವ್ಯಾಕೆ ಹೆಸರು ಹಚ್ಚಬೇಕೇಳು?’ ರುಕ್ಮಿಣಮ್ಮ ತಿಪ್ಪೆ ಸಾರಿಸಿದಳು.
`ಒಮ್ಮಿಂದೊಮ್ಮೆಲೆ ಈವೊತ್ತೇ ನಿಂಗೆ ಹಿಂಗನಿಸ್ಲಿಕ್ಹತ್ತದಲ್ಲಾ? ಇಲ್ಲೀತನಕ ನಿಂಗೆ ಕಾಲ ಬದಲಾಗ್ಯದೆ ಅಂತ ಅನಿಸ್ಲೇ ಇಲ್ಲೇನು?’
ರುಕ್ಮಿಣಮ್ಮ ಹೆಚ್ಚು ಮಾತನಾಡದೆ ಹೊರಟು ಹೋಗಿಬಿಟ್ಟಿದ್ದಳು. ಇನ್ನೊಂದು ದಿನ ಗಾಂಧಿಬಜಾರದಲ್ಲಿರುವ ಹನುಮಂತಾಚಾರ್ ಕಮಲಕ್ಕನ ಮನೆಗೆ ಬಂದು, ಆಕೆಯ ಯಾತ್ರೆ ಮತ್ತು ಕನಸನ್ನು ಸವಿಸ್ತಾರವಾಗಿ ಕೇಳಿದ ನಂತರ `ನಾಳೆ ನಮ್ಮನ್ಯಾಗೆ ನನ್ನ ಮಗನ ಮುಂಜಿ ಅದೆ. ಮಡೀ ಅಡಿಗೀಯೆಲ್ಲಾ ನಿಂದೇ ನೋಡು ಕಮಲಕ್ಕಾ. ಐವತ್ತು ಎಲಿ ಆಗ್ತದೆ’ ಅಂದ. `ಹಂಗೇ ಆಗ್ಲೇಳು ಹನುಮ್ಯಾ. ಆದ್ರೆ ನಂಗೂ ವಯಸ್ಸಾಯ್ತು ನೋಡು. ಒಬ್ಬಾಕಿ ಕೈಯಿಂದ್ಲೇ ಎಲ್ಲಾ ಬಗೆ ಹರಿಯಂಗಿಲ್ಲ. ವಾಜೀನ್ನೂ ಕರ್ಕೊಂಬರ್ತೀನಿ. ಹೂರ್ಣನಾದ್ರೂ ರುಬ್ಬಿ ಕೊಡ್ತಾನೆ’ ಅಂತ ಅವನನ್ನು ಸಂದಿಗ್ಧಕ್ಕೆ ಸಿಕ್ಕಿಸಿದಳು.
ಕಮಲಕ್ಕ ಐವತ್ತು ಜನಕ್ಕಲ್ಲ, ನೂರು ಜನಕ್ಕಾದರೂ ಯಾರ ಸಹಾಯವಿಲ್ಲದೆ ಅಡಿಗಿ ಮಾಡಬಲ್ಲಳು ಎನ್ನುವುದು ಹನುಮಂತಾಚಾರ್ ಗೂ ಗೊತ್ತು, ಕಮಲಕ್ಕಗೂ ಗೊತ್ತು. ತೊನ್ನಿನ ಹುಡುಗನ ಕೈಲೆ ಅಡಿಗಿ ಮಾಡಿಸ್ಲಿಕ್ಕೆ ಹುನ್ನಾರ ಮಾಡ್ಯಾಳೆ ಅಂತ ಹನುಮಂತಾಚಾರ್ ಗೆ ಸಿಟ್ಟು ಬಂತು. ಹಾಗಂತ ಮಾತಿನಲ್ಲಿ ಖಾರ ತುಂಬುವುದು ಅವನ ಜಾಯಮಾನವಲ್ಲ. ಒಂದೆರಡು ನಿಮಿಷ ಸುಮ್ಮನಿದ್ದು ಅನಂತರ ಕೆಮ್ಮಿ ಹೊರಗೆ ಹೋಗಿ ಕಾಲುವೆಯಲ್ಲಿ ಕಫ ಉಗುಳಿ ಬಂದು `ನೋಡವ್ವಾ ಕಮಲಕ್ಕಾ…’ ಅಂತಂದು ಒಂದಷ್ಟು ಹೊತ್ತು ಸುಮ್ಮನಾದ.
`ವಾದಿರಾಜರೇ ಅದು ತೊನ್ನಲ್ಲ ಅಂತ ಹೇಳ್ಯಾರಂದ್ಮೇಲೆ `ಹೌದು’ ಅನ್ಲಿಕ್ಕೆ ನಾನೆಷ್ಟರವನಾಗ್ತೀನಿ? ಅಷ್ಟಕ್ಕೂ ಎಷ್ಟಾದ್ರೂ ವಾಜಿ ನಮ್ಮ ಹುಡುಗ. ನನ್ನ ಕಡಿಂದ ಏನೂ ತಕರಾರಿಲ್ಲ ನೋಡು.’
`ಖರೇ ಮಾತಂತಿ ನೋಡು. ವಾದಿರಾಜರಿಗೆ ಎದುರು ಮಾತಾಡ್ಲಿಕ್ಕೆ ನಾನೂ-ನೀನೂ ಎಷ್ಟರವರ್ಹೇಳು? ಅವರು ಕಾಲಿಂದ ಅಪ್ಪಣೆ ಮಾಡಿದ್ದನ್ನು ನಾವು ತಲೆಯಿಂದ ಮಾಡಬೇಕು.’
`ಆದರೆ ಎಲ್ಲಾ ಮಂದೀನೂ ನಮ್ಮ ಥರಾನೇ ಇರ್ತಾರೆ ಅಂತ ಹೆಂಗೆ ಹೇಳಾದು ಕಮಲಕ್ಕ? ಅದರಾಗೆ ಗುಡೇಕೋಟಿ ಗೋವಿಂದಾಚಾರ್ ಬರ್ತಿದ್ದಾನೆ. ಮಡಿ, ಮಡಿ ಅಂತ ಹೆಗರಿ ಹೆಗರಿ ಕುಣೀತಾನೆ. ನಿಂಗೊತ್ತದಲ್ಲಾ? ಅಂಥಾತ ಸುಮ್ನಿರ್ತಾನೇನವ್ವಾ? ಅಷ್ಟೇ ಅಲ್ಲ, ಸ್ಮಾರ್ತ ಮಂದೀನೂ ಬರ್ತದೆ. ಅವರಿಗೆ ವಾದಿರಾಜರಂದ್ರೆ ನಂಬಿಕೀನೂ ಇರಂಗಿಲ್ಲ. ಅದ್ಕೇ, ಸುಮ್ನೆ ನೀನೊಬ್ಬಾಕೀನೇ ಅಡಿಗಿ ಮಾಡು ಕಮಲಕ್ಕ. ಹೂರ್ಣ ರುಬ್ಬಲಿಕ್ಕೆ ಬೇಕಂದ್ರೆ ನನ್ಹೆಣ್ತಿಗೇಳ್ತೀನಿ.’
ಒಳ್ಳೆ ಮಾತಾಡಿ ಕುಂಡಿ ಚಿವುಟ್ತಾನೆ ರಂಡೆಗಂಡ. ಇರ್ಲಿ, ಬಳ್ಳಾರಿನಾಗೆ ಹುಟ್ಟಿದವ್ನೆ ಇಷ್ಟು ಚಾಲಾಕಿನ ಮಾತಾಡಿದ್ರೆ, ನಾನು ಹರಪನಹಳ್ಳಿಯಾಕಿ, ಸುಮ್ನೆ ಇರಂಗಿಲ್ಲ.
`ನಿನ್ನಿಷ್ಟ ನೋಡು ಹನುಮ್ಯಾ, ನಾನು ಅಡಿಗಿ ಮಾಡಿದ್ರೆ ವಾಜಿನ್ನೂ ಕರ್ಕೊಂಬರಾಕಿ. ವಾದಿರಾಜರ ಮಾತಿಗೆ ದ್ರೋಹ ಮಾಡಿ ಪಾಪ ಕಟ್ಗೊಳ್ಳಿಕ್ಕೆ ನಾನಂತೂ ತಯಾರಿಲ್ಲ.’
ಹನುಮಂತಾಚಾರ್ ಮತ್ತೆ ಮಾತಾಡಲಿಲ್ಲ. ಹಾಗೇ ಎದ್ದು ಹೋಗಿದ್ದ. ಕಮಲಕ್ಕಗೆ ಏನೋ ವಿಜಯ ಸಾಧಿಸಿದಂತಾದರೂ, ಸುಮ್ ಸುಮ್ನೆ ನೂರು ರೂಪಾಯಿ ಆದಾಯ ಕಳ್ಕೊಂಡ್ನಲ್ಲಾ ಅಂತ ಮನಸ್ಸಿಗೆ ಚುರ್ ಅನ್ನಿಸ್ತು. ಅಲ್ಲೇ ಕುಳಿತಿದ್ದ ವಾಜಿಯನ್ನು ನೋಡಿದ್ದೇ ಕಮಲಕ್ಕಗೆ ಸಿಟ್ಟು ಬಂದು `ದೊಡ್ಡವರ ಮಾತು ಕೇಳ್ಕೊಂತಾ ಕೂತಿಯಲ್ಲೋ ಹುಚ್ಚ, ಪುಸ್ತಕ ಓದಿ ಉದ್ಧಾರ ಮಾಡು ಹೋಗು’ ಅಂತ ಬೈಯ್ದುಬಿಟ್ಟಳು.
ಇತ್ತೀಚೆಗೆ ಕೆಲವೊಮ್ಮೆ ಅನವಶ್ಯಕವಾಗಿ ಕಮಲಕ್ಕ ವಾಜಿಯ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾಳೆ. ಎಷ್ಟೋ ವೇಳೆ ಮಡಿಯಲ್ಲಿದ್ದೇನೆಂಬ ಅರಿವಿಲ್ಲದೆ ಅವನನ್ನು ಹೊಡೆದು ನಂತರ ಮತ್ತೊಮ್ಮೆ ಬಾವಿಗೆ ಹೋಗಿ ಎರಡು ಬಿಂದಿಗೆ ನೀರು ಸುರುವಿಕೊಂಡು ಬರ್ತಾಳೆ. ಹೊಡಿಸಿಕೊಂಡು ವಾಜಿ ಮೂಲೆಯಲ್ಲಿ ಅಳುತ್ತಾ ಕುಳಿತಾಗ `ನಂಗೇನು ಹೋಗೋ ರೋಗ ಬಂದಿತ್ತು ಅಂತೀನಿ. ಸುಮ್ ಸುಮ್ನೆ ಕೂಸಿನ್ನ ಹೊಡದ್ನಲ್ಲಾ’ ಅಂತ ಪಶ್ಚಾತ್ತಾಪವಾಗಿ ಸಮಾಧಾನ ಮಾಡುತ್ತಾಳೆ. ರಾತ್ರಿ ಮಲಗಿದಾಗ ನಿದ್ದೆ ಬರದ ಹೊತ್ತಿನಲ್ಲಿ `ವಾಜಿ ಅಪ್ಪಂಗೇನಾದ್ರೂ ತೊನ್ನಿತ್ತಾ?’ ಅಂತ ಯೋಚಿಸುತ್ತಾಳೆ. `ಇರ್ಲೇ ಇಲ್ಲ’ ಅಂತ ಖಡಾಖಂಡಿತವಾಗಿ ಹೇಳೋದಕ್ಕೆ ಕಷ್ಟವೆನ್ನಿಸುತ್ತದೆ. ಆತನ ಪೂರ್ತಿ ಮೈ ಬೆಳಕಿನಲ್ಲಿ ಎಂದಾದರೂ ನೋಡಿದ್ದೇನೆಯೆ? ರಾತ್ರಿ ಕತ್ತಲಾದ ಮೇಲೆ, ಎಲ್ಲರೂ ಮಲಗಿಯಾಯ್ತೆಂದು ಎರಡೆರಡು ಬಾರಿ ಗೊರಕೆಯ ಸದ್ದನ್ನು ಆಲಿಸಿ ದೃಢೀಕರಿಸಿಕೊಂಡು, ದೀಪವಾರಿಸಿದ ಮೇಲೆಯೆ ಅವರ ಮೈ ಮುಟ್ಟಲು ಧೈರ್ಯವಾಗುತ್ತಿತ್ತು. ಅದೂ ತಾನ್ಯಾವುದೋ ಕೊಲೆಯಂತಹ ಅಪರಾಧ ಮಾಡುತ್ತಿದ್ದಂತೆ, ಬೇರೆ ಯಾರಾದರೂ ನೋಡಿಬಿಟ್ಟರೆ ಸಿಕ್ಕು ಬೀಳುತ್ತೇನೆಂಬ ಭಯದಲ್ಲಿ ಭಾಗವಹಿಸುತ್ತಿದ್ದೆ. ಅವರ ಮೈಯ ಗುಪ್ತ ಭಾಗಗಳ ಸ್ಪರ್ಶ ಜ್ಞಾನವಿತ್ತೇ ಹೊರತು ಕಣ್ಣಿಂದ ನೋಡಿದ್ದಿಲ್ಲ. ನನ್ನಲ್ಲಿ ಸುಖದ ಸೂರೆ ಹೊಡೆಯಬೇಕೆಂಬ ಬಯಕೆ, ಧೈರ್ಯ ಮೂಡುವ ವೇಳೆಗೆ ಹಜಾಮರವನ ಮುಂದೆ ತಲೆಯೊಡ್ಡಿಯಾಗಿತ್ತು!
ಬೋಳು ತಲೆಯ ಮೇಲೆ ಕೆಂಪು ಸೀರೆಯನ್ನೆಳೆದುಕೊಂಡ ಎರಡನೆಯ ದಿನವೇ ವಾಂತಿ ಶುರುವಾಗಿತ್ತು. ಅಳಿಯ ಸತ್ತಾಗಲೂ ದುಃಖ ನುಂಗಿಕೊಂಡಿದ್ದ ಅಪ್ಪ, ನಾನು ಬಸಿರೆಂದು ತಿಳಿದಾಗ `ಎಂಥಾ ದುರಾದೃಷ್ಟನೇ ಕಮ್ಲೀ ನಿಂದು’ ಎಂದು ಹೋ ಎಂದು ಅತ್ತಿದ್ದ. ಹದಿನೈದು ವರ್ಷವಾಯ್ತು! ಹಪ್ಪಳ ಮಾರಿ ಜೀವನ ಸಾಗಿಸುವ ಮಗಳನ್ನು ನೋಡಿ ಹೊಟ್ಟೆ ತಂಪು ಮಾಡಿಕೊಳ್ಳಲು ಅಪ್ಪ-ಅಮ್ಮನೂ ಇಲ್ಲ, ಮಗನನ್ನು ನುಂಗಿ ನೀರು ಕುಡಿದ ಸೊಸೆ ಮಂದಿ ಮನೆಗೆ ಮಡಿ ಅಡಿಗಿ ಮಾಡುವದನ್ನು ನೋಡಲು ಅತ್ತೆ-ಮಾವಂದಿರೂ ಇಲ್ಲ. ಬೆನ್ನಿಗೆ ಬಿದ್ದ ಅಣ್ಣನೊಬ್ಬನಿದ್ದಾನೆ. `ನೀನೇನೂ ಯೋಚ್ನೆ ಮಾಡ್ಬೇಡಪ್ಪಾ, ಕಮ್ಲೀ ನಂಗೆ ಭಾರ ಆಗ್ತಾಳೇನು?’ ಅಂತಂದ ಅಣ್ಣನ ಮಾತನ್ನು ಕೇಳಿ ಅಪ್ಪ ನೆಮ್ಮದಿಯಿಂದ ಕಣ್ಣು ಮುಚ್ಚಿದ್ದ. ಗೋಪಣ್ಣ ಆಡಿದ ಮಾತಿನಂತೆ ನಡೆದುಕೊಳ್ಳುವವನಾದ್ರೂ, ರಾಧಕ್ಕನನ್ನು ಎದುರಿಸಿ ನಿಲ್ಲಬಲ್ಲ ಗಂಡೆದೆಯವನಲ್ಲ. ಅವನಾದ್ರೂ ಏನು ಮಾಡಿಯಾನು, ಕಮ್ಲೀ ಅದೃಷ್ಟಾನೇ ಕೆಟ್ಟದ್ದು. ಬರೀ ಹೂ ಬತ್ತಿ ಹೊಸೆದು, ಮಂದಿ ಮನಿ ನೀರು ಅಡಿಗಿ ಮಾಡಿ, ಹಪ್ಪಳ ಮಾರಿ ಬದುಕುವುದೇ ನನ್ನ ಹಣೆಯಲ್ಲಿ ಬರೆದಿದೆ.
ಆದರೆ ಇದ್ಯಾವುದಕ್ಕೂ ಹೆದರುವ ಹೆಣ್ಣು ಕಮಲಕ್ಕನಲ್ಲ. ಗಂಡಿನಂತೆ ದುಡಿಯುವ ಶಕ್ತಿಯಿದೆ, ಧೈರ್ಯವಿದೆ, ಜಗಳವಾಡುವ ಗಯ್ಯಾಳಿತನವೂ ಇದೆ. ಆದರೆ ಈ ಬಿಳಿಯ ಕಲೆಗಳು ಮಾತ್ರ ಆಕೆಯ ಜಂಘಾಬಲವನ್ನೇ ಉಡುಗಿಸಿಬಿಟ್ಟಿವೆ. ವಾಜಿ ಮುಂದೆ ದೊಡ್ಡವನಾದ ಮೇಲೆ ಹೆಣ್ಣು ಕೊಡುವವರೂ ದಿಕ್ಕಿಲ್ಲದಂತೆ ತಬ್ಬಲಿಯಾದಂತೆ ಭಾಸವಾಗಿ ಬಾಯಿ ಕಟ್ಟಿಬಿಡುತ್ತದೆ. ಇಲ್ಲದಿದ್ದರೆ ಆ ದಿನ ಸ್ವಾಮಿಗಳು `ತಳ್ರೋ ಈ ಚಾಂಡಾಲನ್ನ ಹೊರಗೆ, ತಳ್ರೋ’ ಅಂತ ಕೂಗಿದಾಗ ಒಂದೂ ಮಾತನಾಡದೆ, ಎದುರು ಜವಾಬೂ ಕೊಡದೆ ಸುಮ್ಮನಿರುತ್ತಿದ್ದಳೆ?
`ವಾಜೀಗೂ ಮುದ್ರಾಧಾರಣ ಆಗ್ಲಿ’ ಅಂತ ಅಂದ್ಕೊಂಡು, ಅವನು ಶಾಲೆಗೆ ಹೋಗುವದನ್ನು ತಪ್ಪಿಸಿ, ಮಠಕ್ಕೆ ಕರೆದುಕೊಂಡು ಹೋಗಿದ್ದಳು. ನಿಗಿ ನಿಗಿ ಕೆಂಡದಲ್ಲಿ ಕಾದ ಬೆಳ್ಳಿಯ ಶಂಖು, ಚಕ್ರದ ಮುದ್ರೆಗಳು ಕೆಂಪಗೆ ಕಾಣುತ್ತಿದ್ದವು. ವಾಜಿ ಅವನ್ನು ನೋಡಿ ಹೆದರಿ ಅಳಲಾರಂಭಿಸಿದಾಗ ಕಮಲಕ್ಕ ಸಮಾಧಾನ ಮಾಡಿದ್ದಳು. `ಹಂಗೆಲ್ಲಾ ಅಳಬಾರ್ದೋ ರಾಜ, ಮೈಮೇಲೆ ಮುದ್ರೆ ಹಾಕಿಸ್ಕೊಂಡ್ರೆ ಒಂಚೂರೂ ಸುಡಂಗಿಲ್ಲ, ತಣ್ಣಗಿರ್ತದೆ’ ಅಂತ ಸುಳ್ಳನ್ನೂ ಹೇಳಿದ್ದಳು. ಹೆದರುತ್ತಲೇ ವಾಜಿ ಬೆತ್ತಲೆ ಎದೆಯನ್ನು ಸ್ವಾಮಿಗಳ ಮುಂದೆ ಚಾಚಿದಾಗ, ಸ್ವಾಮಿಗಳು ಅವನ ಕೆನ್ನೆಯನ್ನು ನೋಡಿದ್ದೇ `ತಳ್ರೋ ಈ ಚಾಂಡಾಲನ್ನ ಹೊರಗೆ, ತಳ್ರೋ’ ಅಂತ ಕೂಗಿಬಿಟ್ಟಿದ್ದರು. ಶಿಷ್ಯರೊಂದಿಬ್ಬರು ವಾಜಿಯ ರಟ್ಟೆಯನ್ನು ಹಿಡಿದು ದರದರನೆ ಹೊರಗೆ ಎಳೆದುಕೊಂಡು ಹೋಗಿಬಿಟ್ಟಿದ್ದರು. ಮತ್ತೊಂದಿಬ್ಬರು `ಬುದ್ಧೀ ಶಾಂತ ಆಗ್ರಿ. ನಾವು ಎಷ್ಟು ಹೇಳಿದ್ರೂ ಈ ಹೆಣ್ಮಗಳು ನಮ್ಮ ಮಾತು ಕೇಳ್ಲಿಲ್ಲ’ ಅಂತ ಕಮಲಕ್ಕನನ್ನು ತೋರಿಸಿದ್ದರು. ಸ್ವಾಮಿಗಳು ರುದ್ರಾವತಾರವನ್ನೇ ತಾಳಿ `ಹುಚ್ಚು ರಂಡೆ, ಮೂಲ ರಾಮದೇವರನ್ನು ಪೂಜೆ ಮಾಡಿದ ಕೈಲೆ ತೊನ್ನು ಮೈಯವನಿಗೆ ಮುದ್ರೆ ಹಾಕಿಸಿ ನರಕಕ್ಕೆ ಕಳಿಸಬೇಕಂತ ಮಾಡೀಯೇನು?’ ಎಂದು ಗುಡುಗಿದ್ದರು. ಕಮಲಕ್ಕನ ಬಾಯಿ ಕಟ್ಟಿ ಹೋಗಿತ್ತು. ಒಂದೂ ಮಾತಾಡದೆ ಮನೆಗೆ ಬಂದು ಬಿಟ್ಟಿದ್ದಳು. `ಕೂಡ್ಲಿಗಿ ಸೂಳೇರ ಪಕ್ಕ ಮಲ್ಕೊಂಡು ಬರೋ ಗುಡೇಕೋಟಿ ಗೋವಿಂದಾಚಾರ್ ಗೆ ಮುದ್ರೆ ಹಾಕ್ತೀರಿ ಬುದ್ಧಿ. ನನ್ನ ಕೂಸು ಮಾಡಿರೋ ತಪ್ಪಾದ್ರೂ ಏನು?’ ಅಂತ ತಾನ್ಯಾಕೆ ಕೇಳಲಿಲ್ಲ ಅಂತ ಮನೆಗೆ ಬಂದ ಮೇಲೆ ಆಶ್ಚರ್ಯವಾಗಿತ್ತು.
ಆದರೆ ಇಂದಿನ ಪರಿಸ್ಥಿತಿಯೇ ಬೇರೆ. `ವಾದಿರಾಜರೇ ಅದು ತೊನ್ನಲ್ಲ ಅಂತ ಹೇಳ್ಯಾರೆ. ಅವರನ್ನೇ ತಪ್ಪು ಅಂತೀರಾ ಬುದ್ಧಿ’ ಅಂತ ಸವಾಲೆಸೆಯುವಷ್ಟು ಧೈರ್ಯ ಬಂದಿದೆ. ಅಷ್ಟಕ್ಕೂ ಸಂಡೂರಲ್ಲಿ ನನ್ನ ಮಾತಿನ ಹೊಡೆತಕ್ಕೆ ನಿಲ್ಲೋ ಗಂಡಸು ಯಾರಿದ್ದಾರೆ? ನಾನೂ ನೋಡೇ ಬಿಡ್ತೀನಿ. ಈ ಸಲ ವಾಜಿ ಮಡಿ ಅಡಿಗಿಯಲ್ಲಿ ಸೇರ್ಕೊಂಡೇ ಸೇರ್ಕೊಳ್ತಾನೆ, ಅಲಂಕಾರದ ಬ್ರಾಹ್ಮಣರಿಗೂ ಬಡಿಸ್ತಾನೆ. ಹೀಗಂತ ಕಮಲಕ್ಕ ನಿರ್ಧಾರಕ್ಕೆ ಬರುವುದಕ್ಕೆ ಸರಿಯಾಗಿ ಡ್ರೈವರ್ ಬಸ್ ಹತ್ತಿ ಒಮ್ಮಿಂದೊಮ್ಮೆಲೆ ಸ್ಟಾರ್ಟ್ ಮಾಡಿದ್ದರಿಂದ ಸೀಟಿನಿಂದ ನೂಕಿದಂತಾಗಿ, ಕಮಲಕ್ಕನ ಕೆಂಪು ಸೀರೆಯ ಸೆರಗು ತಲೆಯ ಮೇಲಿಂದ ಜಾರಿ ಬಿದ್ದು, ತುಂಡು ತುಂಡೇ ಕಪ್ಪು-ಬಿಳುಪು ಕೂದಲು ತುಂಬಿದ್ದ ಬೋಡು ತಲೆ ಪ್ರದರ್ಶನಗೊಂಡಿತ್ತು. ಸೆರಗು ತಲೆಯಿಂದ ಜಾರಿದ ವಿಷಯ ಮನಸ್ಸಿಗೆ ಗೊತ್ತಾಗುವದಕ್ಕೆ ಮುಂಚೆಯೇ ದೇಹ ಪ್ರತಿಕ್ರಿಯಿಸಿ, ಕೈ ಮತ್ತೆ ಸೆರಗನ್ನು ತಲೆಯ ಮೇಲೆ ಹೊದ್ದಿಸಿಬಿಟ್ಟಿತ್ತು. ನಿದ್ದೆ ಮಾಡುವ ಮನುಷ್ಯನನ್ನು ಸೊಳ್ಳೆ ಕಚ್ಚಿದಾಗ ಕೈ ತಾನೇ ತಾನಾಗಿಯೇ `ಫಟ್’ ಎಂದು ಹೊಡೆದು ಆ ಸೊಳ್ಳೆಯನ್ನು ಕೊಲ್ಲುವಂತೆ!
ಬಸ್ಸು ಸಂಡೂರನ್ನು ತಲುಪಿದಾಗ ಸಂಜೆಯಾಗಿತ್ತು. ಮೈನ್ಸ್ ಲಾರಿಗಳ ಓಡಾಟದಿಂದ ಎದ್ದ ಧೂಳು (ಗೋಧೂಳಿಯಲ್ಲ, ಲಾರಿಧೂಳಿ) ಕ್ರಮೇಣವಾಗಿ ಭೂಮಿಗೆ ಸೇರಿಕೊಂಡು ವಾತಾವರಣ ಸ್ವಚ್ಛವಾಗುತ್ತಿತ್ತು. ಮನೆಗೆ ಬಂದಾಗ ಕಮಲಕ್ಕನನ್ನು ಮೊದಲು ನೋಡಿದ್ದು ರಾಧಕ್ಕ. ಅಂಗಳಕ್ಕೆ ನೀರು ಹಾಕುತ್ತಿದ್ದಳು.
`ಬಾ ಕಮಲಕ್ಕ. ಮಧ್ಯಾಹ್ನದಿಂದ ಹಾದಿ ಕಾಯ್ಲಿಕ್ಹತ್ತೀವಿ. ಈಗ ಬರ್ತಾಳೆ, ಇನ್ನು ಸ್ವಲ್ಪ ಹೊತ್ತಿಗೆ ಬರ್ತಾಳೆ ಅಂತ. ಬಸ್ಸಿನಾಗೆ ಸೀಟ್ ಸಿಕ್ಕಿತ್ತೇನು?’
`ವಾಜಿ ಇದ್ನಲ್ಲ ವೈನಿ, ಹೊಡದಾಡಿ ಸೀಟ್ ಹಿಡಿದ’. ಕಮಲಕ್ಕಗೆ ವಾಜಿಯ ಮೇಲೆ ಅಭಿಮಾನ. ರಾಧಕ್ಕ ಅಲ್ಲಿಯವರೆಗೆ ವಾಜಿಯನ್ನು ಗಮನಿಸಿರಲಿಲ್ಲ. ತರಕಾರಿ ಚೀಲವನ್ನು ಹೊತ್ತು ನಿಂತ ಅವನನ್ನು ನೋಡಿದ ತಕ್ಷಣ ಕಮಲಕ್ಕನ ಸಂಚು ಅರ್ಥವಾಯ್ತು.
`ಏನಪ್ಪಾ ವಾಜಿ, ಸಾಲಿ ಚಕ್ಕರ್ರಾ?’ ಅಂತ ಹಂಗಿಸಿದಳು. ವಾಜಿ ನಾಚಿ ನೀರಾದ. `ಇಲ್ಲ ವೈನಿ, ನಾನು ಬರಂಗಿಲ್ಲ ಅಂದೆ. ಆದ್ರೆ ಅಮ್ಮ ಬೈದು ಕರ್ಕೊಂಬಂದ್ಲು’ ಕಮಲಕ್ಕಗೆ ಇಂತಹ ಏಟು-ಪೋಟು ಮಾತುಗಳು ಅರ್ಥವಾಗುವದಿಲ್ಲವೆ?
`ಯಾಕವ್ವಾ ವೈನಿ, ಅವನೂ ಚೂರು ಪಾರು ಸೇವಾ ಮಾಡೋದು ಬ್ಯಾಡ ಅಂತೀ ಏನು?’
`ನಾನೆಲ್ಲಿ ಹಂಗದ್ನೆ ಕಮಲಕ್ಕ. ಅವ್ನೂ ಮಾಡ್ಲೇಳು. ರಾಯರ ಆರಾಧನೆಗೆ ಗಂಡು ಹುಡುಗರಲ್ದೆ ನಾವು ಹೆಂಗಸರು ಕೆಲ್ಸ ಮಾಡ್ಲಿಕ್ಕಾಗ್ತದೇನು? ಈಗ ಮೊದಲು ಒಳಗೆ ನಡಿ. ಇವ್ರು ಆವಾಗ್ಲಿಂದ ನಿನ್ನ ಹಾದಿ ನೋಡ್ಲಿಕ್ಹತ್ತಾರೆ.’
ಗೋಪಣ್ಣ ಒಳ ಮನೆಯಲ್ಲಿ ತೆಂಗಿನಕಾಯಿ ಸುಲಿಯುತ್ತಿದ್ದ. ಕಮಲಕ್ಕನನ್ನು ಕಂಡೊಡನೆ ಅವನಿಗೆ ಖುಷಿಯಾಗಿದ್ದು ಅವನ ಮುಖದಲ್ಲಿ ಅರಳಿದ ನಗುವಿನಿಂದಲೇ ಗೊತ್ತಾಗುತ್ತಿತ್ತು. ತಲೆಯ ಮೇಲಿನ ಜುಟ್ಟನ್ನು ತುರುಬಿನಂತೆ ಸುತ್ತಿಕೊಳ್ಳುತ್ತಾ ಮಾತಾಡಿದ. `ಬಾ ಕಮ್ಲಿ. ಆವಾಗ್ಲಿಂದ ನಿನ್ನ ಹಾದೀನೇ ಕಾಯ್ತಾ ಇದ್ದೀನಿ ನೋಡು. ಮೊದ್ಲು ಬಾವಿ ಮೇಲೆ ಸ್ನಾನ ಮಾಡೇಳು. ಸ್ವಲ್ಪ ಹಾಯ್ ಅನಿಸ್ತದೆ. ಚುಕ್ಕಿ ಬಾಳೇಹಣ್ಣು ತಂದೀನಿ. ಮಡಿ ಉಟ್ಗೊಂಡು ತಿನ್ವಂತಿ. ಮತ್ತೆ ನಾಳೆ ಎಷ್ಟು ಹೊತ್ತಿಗೆ ಊಟಾನೋ ಏನ್ ಕತೀನೋ. ಅಲಂಕಾರದ ಬ್ರಾಹ್ಮಣರು ಊಟ ಆಗೋ ತನ್ಕಾ ಉಪಾಸ ಇರ್ಬೇಕು.’
ಕಮಲಕ್ಕ ಬಾವಿಯ ಮೇಲೆ ಸ್ನಾನ ಮಾಡುವಾಗ ಹಂದಿಯೊಂದು ಹಿತ್ತಲಿಗೆ ಬಂತು. ಮುಟ್ಟಿದರೆ ಮೈಲಿಗೆಯಾದೀತೆಂದು ಕಮಲಕ್ಕ `ಹಚಾ’ ಎಂದಳು. ಕಮಲಕ್ಕನ ಧ್ವನಿ ಅಡಿಗಿ ಮನೆಯಲ್ಲಿದ್ದ ರಾಧಕ್ಕನಿಗೆ ಕೇಳಿಸಿಬಿಟ್ಟಿತು. ಆಕೆ ಅನಾಹುತವಾದಂತೆ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಹಿತ್ತಲಿಗೆ ಓಡಿ ಬಂದಳು. ಹಂದಿಯನ್ನು ನೋಡಿದ್ದೇ `ರ್ರೀ, ಬರ್ರೀ ಹಂದಿ ಬಂದದೆ’ ಎಂದು ಕಿರುಚಲಾರಂಭಿಸಿದಳು. ರಾಧಕ್ಕನ ಧ್ವನಿ ಕೇಳಿದ್ದೆ ಗೋಪಣ್ಣ ಕೂಡಾ ಹಿತ್ತಲಿಗೆ ಓಡಿ ಬಂದು `ಹಚಾ’ ಎಂದು ಹಂದಿಯನ್ನು ಓಡಿಸಲಾರಂಭಿಸಿದ. ಅಷ್ಟೇ ಅಲ್ಲದೆ ಅಕ್ಕ-ಪಕ್ಕದ ಮನೆಯ ಹುಡುಗರೂ ಬಂದು ಅದಕ್ಕೆ ಕಲ್ಲಿಂದ ಹೊಡೆಯಲಾರಂಭಿಸಿದರು. ಅಷ್ಟು ಜನರನ್ನು ಕಂಡಿದ್ದೇ ಹಂದಿಗೆ ದಿಕ್ಕು ತೋಚದಂತಾಗಿ ಭಯದಿಂದ ಕಿರುಚಲಾರಂಭಿಸಿತು. ಗೇಟಿನಿಂದ ಹೊರಗೆ ಹೋಗಲೂ ಅದಕ್ಕೆ ತಿಳಿಯದಂತಾಯ್ತು. ಅಷ್ಟರಲ್ಲಿ ವಾಜಿಯೂ ಹಿತ್ತಲಿಗೆ ನುಗ್ಗಿದ್ದ. ಸಂಡೂರಿನ ಬಸ್ಸಲ್ಲಿ ಸೀಟನ್ನು ಹಿಡಿದು ಪರಾಕ್ರಮವನ್ನು ಮೆರೆದಿದ್ದ ವಾಜಿ ಇಲ್ಲಿ ಸುಮ್ಮನಿದ್ದಾನೆಯೆ? ಸ್ವಲ್ಪ ದೊಡ್ಡ ಕಲ್ಲನ್ನೇ ತೆಗೆದುಕೊಂಡು ಇದ್ದ ಬದ್ದ ಶಕ್ತಿಯನ್ನೆಲ್ಲಾ ಸೇರಿಸಿ ಹಂದಿಗೆ ಬೀಸಿದ್ದ. ಗುರಿ ತಪ್ಪಲೇ ಇಲ್ಲ. ಕಮಲಕ್ಕ `ಅದನ್ಯಾಕೆ ಹೊಡಿತೀಯೋ…’ ಅಂತ ಕೂಗಿದ್ದು ಅವನಿಗೆ ಕೇಳಿಸಲಿಲ್ಲ. ಕಲ್ಲು ಸ್ವಲ್ಪ ಚೂಪಾಗಿದ್ದರಿಂದ ಅದು ಹಂದಿಯ ದಪ್ಪ ಚರ್ಮವನ್ನು ಭೇದಿಸಿ ರಕ್ತವನ್ನು ಚಿಮ್ಮಿಸಿಬಿಟ್ಟಿತು. ಕಪ್ಪು ಚರ್ಮದ ಹಂದಿಯ ಮೈಯಲ್ಲಿ ಕೆಂಪು ರಕ್ತವಿತ್ತು. ಹಂದಿ ನೋವಿನಿಂದ, ಎಂಥ ಕಾಠಿಣ್ಯರ ಹೃದಯದಲ್ಲೂ ಕರುಣಾರಸ ಸ್ರವಿಸುವಂತೆ, ಆರ್ತನಾದ ಗೈಯುತ್ತಾ ಗೇಟಿನಿಂದ ಓಡಿಹೋಯ್ತು. ತಕ್ಷಣ ರಾಧಕ್ಕ ಗೇಟನ್ನು ಹಾಕಿ `ಊರಾಗಿನ ಹಂದಿಗಳೆಲ್ಲಾ ಬ್ರಾಹ್ಮಣರ ಕೇರ್ಯಾಗೆ ಬಂದು ಸಾಯ್ತವೆ. ಕೊಂದು ತಿನ್ನೋ ರಂಡೆಗಂಡರು ಹಾಯಾಗಿ ಅವರ ಮನ್ಯಾಗೆ ಮಲ್ಕೊಂಡಾರೆ. ಏನೇನೆಲ್ಲ ದರಿದ್ರಗಳನ್ನು ನಾವು ಅನುಭವಿಸಬೇಕೋ…’ ಎಂದು ವಟಗುಟ್ಟಿದಳು.
ಕಮಲಕ್ಕಗೆ ಈ ದೃಶ್ಯ ತೀರಾ ವಿಚಿತ್ರವೆನ್ನಿಸಿತು. ಸಂಡೂರಿನ ಓಣಿಗಳಲ್ಲಿ, ಹಿತ್ತಲಲ್ಲಿ ಹಂದಿಗಳು ಓಡ್ಯಾಡುವುದು ಸರ್ವೇ ಸಾಮಾನ್ಯ. ಗೋಪಣ್ಣನ ಹಿತ್ತಲಿಗೂ ಬರುತ್ತಲೇ ಇರುತ್ತವೆ. ಆದರೆ ಎಂದೂ ರಾಧಕ್ಕನಾಗಲಿ, ಗೋಪಣ್ಣನಾಗಲಿ ಈ ತರಹ ಹಂದಿಯನ್ನು ಹೊರ ಗೋಡಿಸಲು ಪ್ರಯತ್ನಪಟ್ಟಿದ್ದಿಲ್ಲ. ಈವೊತ್ತೇನಪಾ ಹೊಸದು?
`ಗೋಪಣ್ಣ, ಹಂದಿನ್ಯಾಕೆ ಅಂಥಾ ಪರಿ ಹೊಡ್ದು ಓಡಿಸ್ತೀರೋ. ಏನೋ ಪಾಪ ಹಿತ್ತಲಾಗಿನ ಎಂಜಲೆಲಿ ಆಸಿಗೆ ಬಂದಿರಬೇಕು.’
ಕಮಲಕ್ಕನ ಮಾತಿಗೆ ಉತ್ತರಿಸಿದ್ದು ರಾಧಕ್ಕ. `ನೋಡ್ಲಿಲ್ವಾ ಕಮಲಕ್ಕಾ, ಆ ಹಂದಿ ಬಸುರಾಗ್ಯದೆ.’
`ಅದು ಬಸುರಾದ್ರೆ ಏನಾಯ್ತು ವೈನಿ?’
`ಅದಕ್ಕೆ ದಿನಾ ತುಂಬ್ಯಾವೆ. ಹಡೀಲಿಕ್ಕೆ ಜಾಗ ಹುಡುಕ್ಲಿಕ್ಹತ್ತದೆ. ನಮ್ಮ ಮನಿ ಹಿತ್ತಲು ಬೆಚ್ಚಗದ್ನೋಡು, ಅದ್ಕೇ ಹೊಂಚು ಹಾಕಿ ಆ ಜಾಗದಾಗೆ ಹಡೀಲಿಕ್ಕೆ ಪ್ರಯತ್ನ ಮಾಡ್ಲಿಕ್ಹತ್ತದೆ. ಹತ್ತು ಹತ್ತು ಮರಿ ಅದು ಹಡದ್ರೆ, ಅದರ ಸಂಸಾರೆಲ್ಲಾ ನಮ್ಮನಿ ಹಿತ್ಲಾಗೆ ಆಗ್ತದೆ. ಆಮೇಲಕ್ಕೆ `ಜಪ್ಪಯ್ಯ’ ಅಂದ್ರೂ ಅದು ಕದಲಂಗಿಲ್ಲ. ಓಡಿಸ್ಲಿಕ್ಹೋದ್ರೆ ನಮ್ಮ ಮೈಮ್ಯಾಲೆ ಜಗಳಕ್ಕೆ ಬರ್ತದೆ. ಮರಿ ಹಾಕಿದ್ಮೇಲೆ ಹಂದೀಗೆ ಎರಡರಷ್ಟು ಶಕ್ತಿ ಬರ್ತದೆ. ಏನ್ ಮಾಡ್ಲಿಕ್ಕೂ ಹೇಸಂಗಿಲ್ಲ.’
`ಅಯ್ಯೋ ಪಾಪ, ಬಸುರಾದರೇನು? ಅಲ್ಲ ವೈನಿ, ನಾವು ಹಿಂಗೆ ಓಡಿಸಿದ್ರೆ ಅದು ಎಲ್ಲಿ ಹೋಗಿ ಹಡೀಬೇಕಂತೀನಿ? ಅದೇನು ಕಾಡ್ನಾಗಿರೋ ಪ್ರಾಣಿ ಏನು- ಊರು ಬಿಟ್ಟು ಹೋಗು ಅನ್ಲಿಕ್ಕೆ? ಬ್ರಾಹ್ಮಣರ ಕೇರ್ಯಾಗೆ ಸುತ್ತಿಗೊಂಡಿರ್ತವೆ.’
`ನಮ್ಮನಿ ಹಿತ್ತಲೇ ಆಗಬೇಕಂದರೆ ಹೆಂಗ್ಹೇಳು ಕಮಲಕ್ಕ? ಊರಾಗೆ ಬೇರೆ ಜಾಗಿಲ್ಲೇನು ಅವಕ್ಕೆ? ತಿಪ್ಯಾಗೆ ಕೂತು ಹಡೀಬೇಕವ್ವ.’
ಕಮಲಕ್ಕ ಮತ್ತೆ ಮಾತಾಡಲಿಲ್ಲ. ಆದರೆ ತಿಪ್ಪೆಯಲ್ಲಿ ನಾಯಿ ಕಾಟ ಜಾಸ್ತಿ ಅಂತ ಅನ್ನಿಸ್ತು. ಸ್ನಾನ ಮಾಡುವಾಗ ಹೇಳಿ ಕೊಳ್ಳುತ್ತಿದ್ದ `ಗಂಗೇಚ, ಯಮುನೇಚ…’ ಮಂತ್ರವೂ ಮರೆತುಹೋಗಿ `ಹಂದಿ ಎಲ್ಲಿ ಹಡೀತದೋ ಏನೋ…’ ಎಂದು ಅದರ ಬಗ್ಗೆಯೇ ಯೋಚಿಸಲಾರಂಭಿಸಿದಳು.
ಆ ರಾತ್ರಿ ರಾಧಕ್ಕ ಉಂಡ ಎಂಜಲೆಲೆಯನ್ನು ಬಿಸಾಡಲು ತಿಪ್ಪೆಯ ಕಡೆಗೆ ಹೋದಾಗ, ಅದೇ ಸಮಯವನ್ನು ಕಾಯುತ್ತಿದ್ದಂತೆ ಕಮಲಕ್ಕ `ಗೋಪಣ್ಣ’ ಅಂತ ಮೆತ್ತಗೆ ಅಣ್ಣನನ್ನು ಕರೆದಳು.
`ಏನವ್ವಾ ಕಮ್ಲಿ?’
`ನಾಳೆ ಮಡೀ ಅಡಿಗಿನಾಗೆ ವಾಜಿ ಕೂಡಾ ಇರ್ಲೋ… ವಾದಿರಾಜರೇ ಅಪ್ಪಣೆ ಕೊಡಿಸ್ಯಾರೆ.’
ಗೋಪಣ್ಣ ಬೀಸಿಕೊಳ್ಳುತ್ತಿದ್ದ ಬೀಸಣಿಗೆಯನ್ನು ನಿಲ್ಲಿಸಿದ.
`ಕಮ್ಲಿ, ಆಚಾರ್ ಮಂದಿ ಒಪ್ಗೊಳ್ಳಂಗಿಲ್ಲ. ತೊನ್ನು ಇದ್ದವರು ಮಡೀಗೆ ಬರಂಗಿಲ್ಲ ಅಂತಾರೆ.’
`ಅದು ತೊನ್ನೇ ಅಲ್ಲ ಅಂತ ವಾದಿರಾಜರೇ ಹೇಳ್ಯಾರಲ್ಲೋ, ಇನ್ನು ಇವರದೆಲ್ಲ ಮಾತು ಯಾಕೆ ಕೇಳ್ಬೇಕಂತೀನಿ.’
`ನಿನ್ನ ಕನಸಿನಾಗೆ ಹೇಳಿದ್ದು ಅವರಿಗ್ಹೆಂಗವ್ವಾ ಗೊತ್ತಾಗ್ತದೆ?’
`ಹಂಗಂತ ವಾದಿರಾಜರು ಪ್ರತ್ಯಕ್ಷ ಬರ್ಲಾಕ್ಕಾಗ್ತದೇನೂ ಗೋಪಣ್ಣ?’
`ಕಮ್ಲಿ, ಯಾಕೆ ಹಿಂಗೆ ಹಟ ಮಾಡ್ತಿ? ಬರೀ ಮಡಿ ಅಡಿಗಿ ಮಾಡಿದ್ರೇನೇ ರಾಯರ ಸೇವಾ ಅಂತಾರೇನು? ಮೈಲಿಗಿ ಕೆಲಸ ರಾಶಿ ರಾಶಿ ಇರ್ತದೆ. ಅದೆಲ್ಲಾ ಮಾಡ್ಲೇಳು.’
ಒಮ್ಮಿಂದೊಮ್ಮೆಲೆ ಕಮಲಕ್ಕ ಬಿಕ್ಕಳಿಸಲಾರಂಭಿಸಿದಳು. `ಬೆನ್ನಿಲೆ ಬಿದ್ದ ನೀನೆ ವಾಜಿನ್ನ ದೂರ ಇಟ್ರೆ ಮಂದಿ ಸುಮ್ನಿರ್ತಾರೇನೋ? ಮಂದಿ ಎಲ್ಲಾ ವಾಜಿನ್ನ ಹೊಲೆ ಮಾದಿಗನಂತೆ ದೊಬ್ಬಿದ್ರೆ ನಾ ಹೆಂಗೆ ಬದುಕಿರ್ಲೋ?’
ಗೋಪಣ್ಣಗೆ ಕಮಲಕ್ಕ ಅಳುವದನ್ನು ನೋಡಿ ಸಂಕಟವಾಯ್ತು. ಎಷ್ಟಾದರೂ ಸ್ವಂತ ತಂಗಿ, ಕಷ್ಟ ಪಡುತ್ತಿರುವ ಜೀವ. `ಅಳ್ಬೇಡ ತೆಗಿ ಕಮ್ಲಿ. ರಾತ್ರಿ ಹೊತ್ನಾಗ್ಯಾಕೆ ಕಣ್ಣೀರು ಹಾಕ್ತಿ. ಆಯ್ತೇಳು, ಮಂದಿ ನಿನ್ನ ನಂಬದಿದ್ರೂ ನಾನು ನಿನ್ನ ನಂಬ್ತೀನಿ. ವಾಜಿ ಅಲಂಕಾರದ ಬ್ರಾಹ್ಮಣರಿಗೆ ಬಡಸಲೇಳು. ಯಾರಾದ್ರೂ ಏನಾದ್ರೂ ಅಂದ್ರೆ ಸ್ವಲ್ಪ ಗಟ್ಟಿ ಮಾತಾಡಿ ಬಾಯಿ ಮುಚ್ಚಿಸಿದ್ರಾಯ್ತು. ಒಂದೈವತ್ತು ರೂಪಾಯಿ ದುಡ್ಡು ಕೊಟ್ರಾಯ್ತು, ಸುಮ್ನಾಗ್ತಾರೆ. ಆದ್ರೆ ವಾಜಿ ಇನ್ನೂ ಸಣ್ಣ ಹುಡುಗ. ಅಡಿಗಿ ಮಾಡ್ಲಿಕ್ಕೆ ಗೊತ್ತಾಗಂಗಿಲ್ಲ. ಅದ್ಕೇ, ಬಡಸ್ಲಿ ಅಂದಿದ್ದು. ಯಾವ್ದಾದ್ರೂ ಒಂದೇ ನೋಡು. ಒಟ್ಟಾರೆ ಮಡಿಯೊಳಗೆ ಸೇರಿಸ್ಕೊಂಡ್ರಾಯ್ತು.’ ಗೋಪಣ್ಣನ ಮಾತು ಕಮಲಕ್ಕಗೆ ಸಮಾಧಾನವನ್ನು ನೀಡಿತು. `ನೀ ಹೇಳ್ದಂಗಾಗ್ಲೇಳು ಗೋಪಣ್ಣ’ ಎಂದು, ತನ್ನ ಸೊಂಟದಲ್ಲಿ ಕಟ್ಟಿದ ಬಾಳೇಕಾಯಿ ಗಂಟಿನಿಂದ ಐವತ್ತರ ಐದು ನೋಟುಗಳನ್ನು ತೆಗೆದು ಗೋಪಣ್ಣನ ಮುಂದಿಟ್ಟು `ದಕ್ಷಿಣೀಗೆ’ ಎಂದು ಹೇಳಿದಳು.
ಎಲೆ ಬಿಸಾಡಿ ರಾಧಕ್ಕ ಮನೆಯೊಳಗೆ ಬಂದಾಕ್ಷಣ ಕಮಲಕ್ಕ-ಗೋಪಣ್ಣ ಸುಮ್ಮನಾಗಿಬಿಟ್ಟರು. ರಾಧಕ್ಕನಿಗೆ ಇದು ಅರ್ಥವಾಗದಿರುತ್ತದೆಯೆ? `ಏನ್ರಿ, ಕಮಲಕ್ಕ ಏನಾಂತಾಳೆ?’
`ಏನೂ ಇಲ್ಲೇಳು. ಹಿಂಗೇ ಸುಮ್ನೆ ಕಷ್ಟ-ಸುಖ ಮಾತಾಡ್ಕೊಳ್ತಿದ್ವಿ’ ಗೋಪಣ್ಣ ಮರೆಮಾಚಿದ. ರಾಧಕ್ಕ ಧಡ ಧಡ ಹೆಜ್ಜೆಗಳನ್ನಿಡುತ್ತಾ ಅಡಿಗೆ ಮನೆಗೆ ಹೋದಳು.
ಮರುದಿನ ಬೆಳಿಗ್ಗೆ ಎರಡು ಗಂಟೆಯಿಂದಲೇ ಗಡಿಬಿಡಿ ಪ್ರಾರಂಭವಾಯ್ತು. ಗಂಡಸರಾಗಲೇ ಗಣೇಶನನ್ನು ಸ್ಮರಿಸಿ ಒಲೆ ಹಚ್ಚಿದ್ದರು. ಒಲೆಯ ಪಕ್ಕದಲ್ಲಿಯೇ ಮತ್ತೊಬ್ಬರು ಶ್ಯಾವಿಗೆ ಮಾಡುತ್ತಿದ್ದರು. ಬರೀ ಗಂಡಸರೇ ಅಡಿಗಿ ಮಾಡಬೇಕು. ಹೆಂಗಸರು ಕೈ ಹಚ್ಚುವಂತಿಲ್ಲ. ಸನ್ಯಾಸಿಗಳಿಗೆ ಹೆಂಗಸರು ಮಾಡಿದ ಅಡಿಗೆ ನಿಷಿದ್ಧ. ಕಮಲಕ್ಕ ಅಡಿಗೆ ಮಾಡುತ್ತಿದ್ದವರಿಗೆ `ಮೈಸೂರು ಪಾಕ ಇನ್ನೂ ಚೂರು ಹದಕ್ಕೆ ಬರ್ಲಿ’, ‘ಶ್ಯಾವಿಗಿ ಎಳಿ ಇನ್ನೂ ಸ್ವಲ್ಪ ತೆಳ್ಳಗಾಗ್ಲಿ’ ಅಂತ ನಿರ್ದೇಶನವನ್ನು ಕೊಡುತ್ತಿದ್ದಳು. ಅವರಿಗೆ ಅಡಿಗೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ತಾನೇ ಉತ್ಸಾಹದಿಂದ ಒದಗಿಸುತ್ತಿದ್ದಳು. ರಾಧಕ್ಕ ಅಕ್ಕಪಕ್ಕದ ಹೆಂಗಸರೊಡನೆ ಸೇರಿ ಹೂ ಕಟ್ಟುತ್ತಿದ್ದಳು. ಇಂತಹ ಸಂದರ್ಭದಲ್ಲಿ ಜನ ಎಷ್ಟಿದ್ದರೂ ಕಮ್ಮಿ. ಹತ್ತು ಕೈ ಸೇರಿದರೆ ಇನ್ನಿಪ್ಪತ್ತು ಕೆಲಸ ಹುಟ್ಗೊಳ್ತವೆ.
ಹುಡುಗರೆಲ್ಲಾ ಏಳುವ ವೇಳೆಗೆ ರಾಧಕ್ಕ ಉಪ್ಪಿಟ್ಟು ಮಾಡಲಾರಂಭಿಸಿದಳು- ಮಕ್ಕಳು ಮತ್ತು ಹೆಂಗಸರಿಗಾಗಿ. ಊಟ ಆಗುವುದು ಮಧ್ಯಾಹ್ನ ಎರಡು ಅಥವಾ ಮೂರು ಗಂಟೆಗೆ- ಅಲ್ಲಿಯವರೆಗೆ ಹಸಿವೆ ತಡೆಯಲು ಏನಾದರೂ ಬೇಕಲ್ಲ? ಮಡಿಯಲ್ಲಿರುವ ಗಂಡಸರಿಗೆ ಉಪ್ಪಿಟ್ಟಿಲ್ಲ, ಕೇವಲ ಬಿಸಿ ಹಾಲು ಕುಡಿಯಬಹುದು- ಅಷ್ಟೇ! ಕಮಲಕ್ಕ ಹಾಗೂ ಗೋಪಣ್ಣ `ಅಪ್ಪನ ಕಾಲಕ್ಕೆ ಹಾಲೂ ಕುಡೀತಿದ್ದಿಲ್ಲ. ಈಗ ಕಾಲ ಬದಲಾಗ್ಯದೆ’ ಎನ್ನುತ್ತಾರೆ.
ಮಠದಲ್ಲಿ ಅಷ್ಟೋತ್ತರ ಮುಗಿಸಿಕೊಂಡು ಬಂದ ಗೋಪಣ್ಣ `ಕಮ್ಲೀ’ ಅಂತ ಕೂಗಿದ. ಕಮಲಕ್ಕ ಕೋಣೆಯಿಂದ ಹೊರಬಂದಳು.
`ಹೆಂಗೋ ಏನೋ, ವಾಜಿ ಮಡೀಲೆ ಬಡಿಸ್ಲಿಕ್ಕಿರ್ತಾನೆ ಅಂತ ಗುಡೇಕೋಟಿ ಗೋವಿಂದಾಚಾರ್ಯರಿಗೆ ಗೊತ್ತಾಗ್ಯದೆ. ಆಗ್ಲೇ ಗುಸುಗುಸು, ಪಿಸಪಿಸ ನಡಿಸ್ಯಾನೆ. ಆದರೆ ನಾನೇ ಎಲ್ಲಾರ ಮುಂದೆ ಕಮಲಕ್ಕ ಐವತ್ತು ರೂಪಾಯಿ ದಕ್ಷಿಣಿ ಕೊಡ್ತಾಳೆ ಅಂತ ಹೇಳಿ ಬಂದೀನಿ’ ಅಂದ.
`ಎಲ್ಲಾ ಸುಮ್ನಾಗ್ತಾರೇಳು ಗೋಪಣ್ಣ. ಯಾರಾದ್ರೂ ಕಿಮಕ್-ಕುಮಕ್ ಅಂದ್ರೆ ನಾನು ಮಾತಾಡ್ತೀನಿ, ನೀನು ಯೋಚ್ನಿ ಮಾಡ್ಬೇಡ’ ಎಂದು ಆತ್ಮವಿಶ್ವಾಸದ ಮಾತನಾಡಿ ಮತ್ತೆ ಕಮಲಕ್ಕ ಅಡಿಗಿ ಮಾಡುವವರಿಗೆ ನಿರ್ದೇಶನ ಕೊಡಲಾರಂಭಿಸಿದಳು.
ಯಾವುದೋ ವಸ್ತು ಬೇಕೆಂದು ಅಡಿಗೆಯವರು ಕೇಳಿದಾಗ, ಕಮಲಕ್ಕ ಕೋಣೆಗೆ ಬಂದವಳೆ ಹೌಹಾರಿಬಿಟ್ಟಳು. ರಾಧಕ್ಕ ಒಂದು ತಟ್ಟೆಗೆ ಉಪ್ಪಿಟ್ಟನ್ನು ಹಾಕಿ ವಾಜಿಗೆ ಕೊಡುತ್ತಿದ್ದಳು! ಕಮಲಕ್ಕ ವಾಜಿಯ ಕಡೆ ಧಾವಿಸಿ, ಅವನ ತಟ್ಟೆಯನ್ನು ಕಿತ್ತುಕೊಂಡಳಲ್ಲದೆ ಕೆನ್ನೆಗೆ ಎರಡೇಟು ಬಿಗಿದಳು.
`ಹುಚ್ಚು ರಂಡೆಗಂಡ, ನೀನು ಮಡೀಲೆ ಬಡಿಸ್ಬೇಕು ಅಂತ ನನ್ನ ಜೀವ ತೇಯ್ತಾ ಇದ್ದೀನಿ. ನೀನಿಲ್ಲಿ ಉಪ್ಪಿಟ್ಟು ತಿನ್ಲಿಕ್ಕೆ ತಯಾರಾಗಿಯೇನೋ?’ ಎಂದು ಸಂಕಟದಿಂದ ಮತ್ತೆರಡು ಏಟನ್ನು ಕೆನ್ನೆಗೆ ಬಿಗಿದಳು. ಕಮಲಕ್ಕಗೆ ಸಿಟ್ಟು ನೆತ್ತಿಗೇರಿತ್ತು. ರಾಧಕ್ಕನನ್ನು ನೋಡಿ-
`ವೈನಿ, ಅವ್ನು ಮಡೀಲೆ ಬಡಿಸ್ಬೇಕು ಅಂತ ಗೊತ್ತಿಲ್ಲೇನು? ಅವನಿಗ್ಯಾಕೆ ಉಪ್ಪಿಟ್ಟು ಕೊಡ್ತಿದ್ದಿ?’ ಅಂತ ದಬಾಯಿಸಿದಳು. ರಾಧಕ್ಕ ತಪ್ಪು ಮಾಡಿ ಸಿಕ್ಕಿ ಬಿದ್ದವರಂತಾಗಿದ್ದಳು.
`ಸಣ್ಣ ಹುಡುಗ, ಉಪ್ಪಿಟ್ಟು ತಿನ್ತೀನಿ ಅಂದ್ರೆ ಬ್ಯಾಡ ಅನ್ಲೇನು? ಅವ್ನೇ ಕೇಳ್ದ, ಅದ್ಕೇ ಕೊಟ್ಟೆ.’
`ಹೆಂಗಾರ ಮಾಡಿ ಅವ್ನ ಮೈಲಿಗಿ ಮಾಡ್ಸಿ, ಮಡೀಲೆ ಬರದಂಗೆ ಮಾಡಾದೆ ನಿನ್ನ ಉದ್ದೇಶ ಅಲ್ಲಾ ವೈನಿ?’
ರಾಧಕ್ಕ ಈಗ ಅಳಲಾರಂಭಿಸಿದಳು. ಕಣ್ಣಲ್ಲಿ ನೀರು ತರಿಸುವದರಲ್ಲಿ ಮಹಾಚತುರೆ.
`ನಂದೇ ತಪ್ಪಾದಂಗೆ ಆಡ್ತೀ ಅಲ್ಲಾ ಕಮಲಕ್ಕ. ಮಕ್ಕಳಿಗೆ ತಿನ್ಲಿಕ್ಕೆ ಕೊಟ್ರೂ ತಪ್ಪಾಗಿ ಬಿಡ್ತದೇನವ್ವಾ? ನಮ್ಮ ಮನ್ಯಾಗೆ ನಾನೇ ಪರದೇಶಿ ಆದ್ನೋಡು.’
ಗೋಪಣ್ಣ ಅಲ್ಲಿಗೆ ಬಂದ. ಹೆಂಡತಿಯ ಮಾತಿನಿಂದಲೇ ನಡೆದ ಘಟನೆ ಅರ್ಥವಾಯ್ತು. ಆದರೆ ರಾಧಕ್ಕಗೆ ಎದುರು ಮಾತನಾಡಲಾರ. ಸುಮ್ಮನೆ ಹಿಂತಿರುಗಿ ಅಡುಗೆಯ ಮನೆಯಲ್ಲಿ ಕೆಲಸದಲ್ಲಿ ಮಗ್ನನಾದ. ಕಮಲಕ್ಕ ಅನಂತರ ವಾಜಿಯ ಮೇಲೆ ಒಂದು ಕಣ್ಣನ್ನಿಟ್ಟಳು. ಅವನು ಹಾಲು ಮಾತ್ರ ಕುಡಿಯಬಹುದಿತ್ತು, ಬೇರೇನೂ ತಿನ್ನುವಂತಿರಲಿಲ್ಲ.
ಆರಾಧನೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕಳೆದ ವರ್ಷಕ್ಕಿಂತ ಹೆಚ್ಚು ಜನ ಸೇರಿತ್ತು. ಮಕ್ಕಳ ಅಳು-ನಗು, ಹೆಂಗಸರ ಹರಟೆ, ಮೈಕಾಸುರನ ಹಾವಳಿ ಏಕಕಾಲಕ್ಕೆ ಸಮ್ಮಿಶ್ರಣಗೊಂಡು ಒಂದು ಆಹ್ಲಾದಕರ ಗಲಾಟೆಯನ್ನು ಸೃಷ್ಟಿಸಿದ್ದವು. ರಾಯರಂತೂ ಹೂವಿನ ಹಾರದಲ್ಲಿ ಮುಳುಗಿ ಹೋಗಿದ್ದರು. ಹೊದಿಸಿದ ರೇಶ್ಮೆ ಶಲ್ಯ ಮಿರಮಿರನೆ ಮಿಂಚುತ್ತಿತ್ತು. ಅಡುಗೆ ಸಾಲೆಯಿಂದ ಭಟ್ಟರ ಬೂದುಗುಂಬಳಕಾಯಿಯ ಹುಳಿಯ ವಾಸನೆ ಘಮ್ಮೆಂದು ಮೂಗಿಗೆ ಬಡಿದಾಗ, `ಇನ್ನೂ ಊಟ ಎಷ್ಟು ತಡಾನೋ ಏನೋ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
ವಾಜಿಯ ಮಡಿ ಸ್ನಾನಕ್ಕೆ ಗೋಪಣ್ಣನೇ ಬಾವಿಯಿಂದ ನೀರು ಸೇದಿ ಹಾಕಿದ. ಕಮಲಕ್ಕ ಬಾವಿಯ ಕಟ್ಟೆಯಮೇಲೆ ನಿಂತು, ವಾಜಿಯ ಬೆನ್ನು ಸರಿಯಾಗಿ ತೊಯ್ದಿದೆಯೋ ಇಲ್ಲವೋ ಅಂತ ಪರೀಕ್ಷಿಸಿದಳು. ಮೈಯ ಪ್ರತಿಯೊಂದು ಭಾಗವೂ ನೀರಿನಿಂದ ತೊಯ್ದಾಗಲೇ ಮಡಿ, ಇಲ್ಲದಿದ್ದರೆ ಮೈಲಿಗೆ. ತನ್ನಂತಹ ಹತ್ತು ಜನರು ಸೇರಿ ಉಡಬಹುದಾದಂತಹ ಬಿಳಿಯ ಧೋತ್ರವನ್ನು ಎರಡು ಮಡತೆ ಮಡಿಸಿ, ವಾಜಿ ಕಚ್ಚಿ ಹಾಕಿ ಉಟ್ಟುಕೊಂಡ. ನಂತರ ಕೈಯಲ್ಲಿ ಮಡಿನೀರಿನ ತಂಬಿಗೆ ಹಿಡಿದುಕೊಂಡು, ಮಠಕ್ಕೆ ಹೋಗುವ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ನೀರನ್ನು ಹಾಕುತ್ತಾ, ನೀರು ಹಾಕಿದ ಜಾಗದಲ್ಲೇ ಕಾಲನ್ನೂರುತ್ತಾ ವಾಜಿ ನಡೆಯುವದನ್ನು ಕಂಡು ಹೃದಯ ತುಂಬಿ ಬಂತು. ಅವನ ಹಿಂದೆಯೇ ಅವಳೂ ನಡೆದಳು.
ಮಠದಲ್ಲಿ ಅಲಂಕಾರದ ಊಟ ಸ್ವಲ್ಪ ತಡವಾಗಿಯೇ ಪ್ರಾರಂಭವಾಯ್ತು. ಮಠದಲ್ಲಿ ನಡೆದ ಒಂದು ಚಿಕ್ಕ ಜಗಳವೇ ಇದಕ್ಕೆಲ್ಲಾ ಕಾರಣ. ಅರ್ಚಕರು ತೆಂಗಿನಕಾಯನ್ನು ಒಡೆದ ನಂತರ ಮೇಲಿನ ಬಟ್ಟಲನ್ನು ತಾವಿಟ್ಟುಕೊಂಡು, ಕೆಳಗಿನ ಜುಟ್ಟಿರುವ ಬಟ್ಟಲನ್ನು ಮಾತ್ರ ಭಕ್ತಾದಿಗಳಿಗೆ ಕೊಡುತ್ತಿದ್ದರು. ಅಷ್ಟೇ ಅಲ್ಲದೆ, ಬಹು ಚಾಕಚಕ್ಯತೆಯಿಂದ ಮೇಲಿನ ಬಟ್ಟಲು ದೊಡ್ಡದಾಗುವಂತೆಯೂ, ಜುಟ್ಟು ಇರುವ ಕೆಲಭಾಗದ ಬಟ್ಟಲು ಚಿಕ್ಕದಾಗುವಂತೆಯೂ ಕಾಯನ್ನು ಒಡೆಯುತ್ತಿದ್ದರು. ಅಲ್ಲದೆ ಈ ರೀತಿ ಸಂಗ್ರಹಿಸಿದ ಎಲ್ಲಾ ಕೊಬ್ಬರಿ ಬಟ್ಟಲುಗಳನ್ನು ಊರಿನ `ಹರಿಪ್ರಸಾದ್’ ಹೋಟಲ್ಲಿಗೆ ಮಾರಿಕೊಳ್ಳುತ್ತಿದ್ದರು. ಇದನ್ನು ಯಾರೋ ಕಿಡಿಗೇಡಿ ಭಕ್ತಾದಿಗಳು ಪ್ರತಿಭಟಿಸಿದ್ದೇ ಜಗಳ ಪ್ರಾರಂಭವಾಗಿಬಿಟ್ಟಿತ್ತು. ಹೀಗೆ ಪ್ರಾರಂಭವಾದ ಜಗಳ ಯಾವು ಯಾವುದೋ ತಿರುವುಗಳನ್ನು ಪಡೆದುಕೊಂಡು ಕೊನೆಗೆ ಕೆಲವೊಂದು ಜನ ಸ್ಮಾರ್ತ-ವೈಷ್ಣವರ ಜಗಳಕ್ಕೂ, ಮತ್ತೂ ಕೆಲವು ಜನರು ಉತ್ತರಾದಿ ಮಠ- ರಾಯರ ಮಠದ ಜಗಳಕ್ಕೂ, ಮತ್ತೂ ಕೆಲವೊಂದು ಜನ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಯಾವುದೋ ತಮ್ಮ ಮನೆಯ ಆಸ್ತಿಯ ವಿಚಾರವಾಗಿ ಜಗಳವಾಡುವದಕ್ಕೂ ನಾಂದಿಯಾಗಿಬಿಟ್ಟಿತ್ತು. ಹಾಗೇ ಸುಮ್ಮನಿದ್ದರೆ ಜಗಳ ಸಂಜೆಯವರೆಗೆ ಮುಂದುವರೆಯುವಷ್ಟು ಶಕ್ತಿಯುತವಾಗಿತ್ತು. ಆದರೆ ಯಾರೋ ಬುದ್ಧಿವಂತರು ರಾಯರಿಗೆ ಮಂಗಳಾರತಿ ಮಾಡಿ, ಹತ್ತಾರು ಹುಡುಗರ ಕೈಲೆ ಜಾಗಟೆಯನ್ನು ಏಕಪ್ರಕಾರವಾಗಿ ಹತ್ತು ಹದಿನೈದು ನಿಮಿಷ ಬಾರಿಸಿಸಿದರು. ಜಾಗಟೆಯಿಂದ ಮೂಡಿದ ಶಬ್ದದಿಂದಾಗಿ ಜನರು ಸುಮ್ಮನಾದರು. ಭಕ್ತಾದಿಗಳು ತಮ್ಮ ಜಗಳ ನಿಲ್ಲಿಸಿ, ಕೈಗಳನ್ನು ಜೋಡಿಸಿಕೊಂಡು, ಮಂಗಳಾರತಿ ಮಾಡುವಾಗ ರಾಯರ ಮುಖ ಕಣ್ಣಿಗೆ ಬಿದ್ದರೆ ಸಾಕೆಂದು ಕತ್ತನ್ನು ಗುಂಪಿನಲ್ಲಿ ತೂರಿಸುವ ಸಾಹಸ ಮಾಡಲಾರಂಭಿಸಿದರು. ಅಂತೂ ರಾಯರಿಗೆ ನೈವೇದ್ಯವಾಗಿ, ಅಲಂಕಾರದ ಬ್ರಾಹ್ಮಣರಿಗೆ ಎಲೆ ಹಾಕುವ ವೇಳೆಗೆ ಮಧ್ಯಾಹ್ನ ಎರಡು ಗಂಟೆಯಾಗಿತ್ತು.
ಐದು ಜನ ಬ್ರಾಹ್ಮಣರಿಗೆ, ಪ್ರತಿಯೊಬ್ಬರಿಗೂ ಐದೈದು ಎಲೆಗಳನ್ನು ಜೋಡಿಸಿ ದೊಡ್ಡ ಎಲೆಯನ್ನು ಮಾಡಲಾಗಿತ್ತು. ಎಲೆಯ ಮುಂದೆ ಬಣ್ಣದ ರಂಗೋಲಿಯಿಂದ ಚಿತ್ತಾರವನ್ನು ಬಿಡಿಸಿದ್ದರು. ಸುವಾಸನೆ ಭರಿತ ಊದಿನ ಕಡ್ಡಿಗಳನ್ನು ಪ್ರತಿಯೊಂದು ಎಲೆಯ ಪಕ್ಕದಲ್ಲೂ ಅಕ್ಕಿ ತುಂಬಿದ ಲೋಟದಲ್ಲಿ ಚುಚ್ಚಿಡಲಾಗಿತ್ತು. ಐದು ಎಲೆ ಹಾಕಿದ ಹಿಂಭಾಗದಲ್ಲಿದ್ದ ಗೋಡೆಯ ಮೇಲೆ ಪ್ರದ್ಯುಮ್ನ, ಅನಿರುದ್ಧ, ಅಧೋಕ್ಷಜ, ನಾರಾಯಣ ಹಾಗೂ ವಾಸುದೇವ ಎಂದು ಕೆಂಪು ಬಣ್ಣದಿಂದ ಬರೆಯಲಾಗಿತ್ತು. ಎಲ್ಲಕ್ಕೂ ಮುಖ್ಯವಾಗಿ, ಕಮಲಕ್ಕನ ಐವತ್ತು ರೂಪಾಯಿ ನೋಟುಗಳು ಕಣ್ಣು ಕೋರೈಸುವಂತೆ ತಾಂಬೂಲದಲ್ಲಿದ್ದವು.
ಇನ್ನೇನು ಬಡಿಸಲು ಪ್ರಾರಂಭಿಸಬೇಕು ಎನ್ನುವಾಗ, ರಾಧಕ್ಕನ ಪಕ್ಕದ ಮನೆಯ ಚಿಕ್ಕ ಹುಡುಗಿಯೊಬ್ಬಳು ಬಣ್ಣ ಬಣ್ಣದ ರೇಶ್ಮೆ ಲಂಗ ಉಟ್ಟುಕೊಂಡು `ಅಜ್ಜಿ, ಇಕೋ ತುಪ್ಪ’ ಅಂತ ತುಪ್ಪದ ಬಟ್ಟಲನ್ನು ತಂದು ರಾಧಕ್ಕನ ಮುಂದೆ ಹಿಡಿದಳು. ಹಿಂದೆ ಮುಂದೆ ನೋಡದೆ ಓಡಿ ಬಂದಿದ್ದ ಹುಡುಗಿ, ಅಲ್ಲೇ ನಿಂತಿದ್ದ ವಾಜಿಯ ತೀರಾ ಹತ್ತಿರದಿಂದ ನುಗ್ಗಿಬಿಟ್ಟಿದ್ದಳು. ಅದನ್ನು ನೋಡಿದ್ದೇ ಗುಡೇಕೋಟಿ ಗೋವಿಂದಾಚಾರ್ `ಅಯ್ಯೋ ವಾಜಿನ್ನ ಮುಟ್ಟಿಬಿಟ್ಟಿಯಲ್ಲೇ ಹುಡುಗಿ. ವಾಜಿ, ನಿಂಗೆ ಮೈಲಿಗಿಯಾಯ್ತಪ್ಪ. ಹೊರಗೆ ಹೋಗು’ ಎಂದುಬಿಟ್ಟ. ಅವರು ಆ ಮಾತಂದಿದ್ದೇ ತಡ ರಾಧಕ್ಕನೂ `ಹೌದ್ಹೌದು. ಪರಕ್ಯಾರ ತಾಕ್ತು. ನಾನೂ ನೋಡೀನಿ’ ಎಂದು, ಅತ್ಯಂತ ಪ್ರೀತಿಯಿಂದೆಂಬಂತೆ ವಾಜಿಯ ತಲೆ ಸವರಿಬಿಟ್ಟಳು. ಹುಡುಗಿಯ ಪರಕ್ಯಾರ ವಾಜಿಗೆ ತಾಕಿತ್ತೋ ಇಲ್ಲವೋ, ಈಗಂತೂ ರಾಧಕ್ಕ ವಾಜಿಯ ತಲೆಯ ಮೇಲೆ ಕೈ ಸವರಿದ್ದರಿಂದ ಖಂಡಿತವಾಗಿಯೂ ಮೈಲಿಗೆಯಾಗಿಬಿಟ್ಟಿದ್ದ. ಕಮಲಕ್ಕಗೆ ಒಂದು ಕ್ಷಣ ಏನಾಯ್ತೆಂದು ಅರ್ಥವಾಗಲಿಲ್ಲ. ನಂತರ ಗುಡೇಕೋಟಿ ಗೋವಿಂದಾಚಾರ್ಯರ ಹುನ್ನಾರ ತಿಳಿದುಹೋಯ್ತು.
`ಸುಮ್ ಸುಮ್ನೆ ಮೈಲಿಗಿ ಆಯ್ತಂತ ಅಂತೀರಲ್ರೀ ಗೋವಿಂದಾಚಾರ್ರೇ. ಆ ಹುಡುಗಿ ಪರಕ್ಯಾರ ತಾಕ್ಲೇ ಇಲ್ಲ, ನಾನೂ ನೋಡೀನಿ’ ಅಂತ ದಬಾಯಿಸಿದಳು.
`ನಾನ್ಯಾಕೆ ಸುಳ್ಳು ಹೇಳ್ಲಿ ಕಮಲಕ್ಕ. ಬೇಕಂದ್ರೆ ಕೃಷ್ಣಾಚಾರ್ಯನ್ನ ಕೇಳು. ಏನಪ್ಪಾ ಕಿಟ್ಟಣ್ಣ, ನೀನೇನಂತಿ?’
ಗಲಿಬಿಲಿಗೊಂಡ ಕೃಷ್ಣಾಚಾರ್ಯರು, ಕನ್ನಡಕವನ್ನು ಕಣ್ಣಿಗೇರಿಸಿ `ಹೌದ್ಹೌದು, ಪರಕ್ಯಾರ ತಾಕ್ತು. ನಾನೂ ನೋಡೀನಿ. ಆಷ್ಟಕ್ಕೂ ರಾಧಕ್ಕ ಕೂಡಾ ವಾಜಿ ತಲಿ ಸವರಿಬಿಟ್ಳಲ್ಲ? ಈಗ ವಾಜಿ ಬಾವಿ ಮೇಲೆ ಒಂದು ಮುಳುಗು ಹಾಕ್ಲೇ ಬೇಕು’ ಎಂದು ಹೂಂಗುಟ್ಟಿದ.
ಕಮಲಕ್ಕ ಎಷ್ಟೇ ಗಯ್ಯಾಳಿಯಾದರೂ, ಮೈಲಿಗೆಯಾದ ಹುಡುಗನಿಂದ ಅಲಂಕಾರದ ಬ್ರಾಹ್ಮಣರಿಗೆ ಬಡಿಸಿ ನರಕಕ್ಕೆ ಹೋಗಲು ತಯಾರಾಗಿರಲಿಲ್ಲ. ಆದರೂ ಇವರೆಲ್ಲರ ಕುತಂತ್ರದಿಂದ ದಿಕ್ಕು ತೋಚದಂತಾಗಿತ್ತು.
`ಗೋಪಣ್ಣ, ನೀನಾರ ಹೇಳು. ಆ ಹುಡುಗಿ ಪರಕ್ಯಾರ ತಾಕ್ತೇನು?’
ಗೋಪಣ್ಣಗೆ ಯಾರ ಪರ ವಹಿಸಬೇಕೆಂದು ತಿಳಿಯಲಿಲ್ಲ. `ಕಮ್ಲಿ, ನಾನು ಆ ಕಡಿ ನೋಡ್ಲೇ ಇಲ್ಲ. ಮತ್ತೆ ಹೆಂಗೇಳ್ಲಿ? ಈಗಂತೂ ವಾಜಿ ಮೈಲಿಗೆ ಆಗ್ಯಾನಲ್ಲ, ಹೋಗಿ ಒಂದು ಕೊಡ ನೀರು ಸುರುವಿಕೊಂಡು ಬರ್ಲಿ. ಬಾವಿ ಹತ್ತಿರದಾಗೇ ಅದಲ್ಲ?’
ಕಮಲಕ್ಕಗೆ ಬರೀ ವಾದ ಮಾಡಿ ಪ್ರಯೋಜನವಿಲ್ಲವೆನ್ನಿಸಿತು. ವಾಜಿಯ ಕೈ ಹಿಡಿದುಕೊಂಡು ಹೊರಗೆಳೆದುಕೊಂಡು ಬಂದಳು. ಅಲ್ಲಿಯೇ ಹತ್ತಿರದಲ್ಲಿ ವಾಜಿಯನ್ನು ಮೈಲಿಗೆ ಮಾಡಿದ ಹುಡುಗಿ ಗಾಬರಿಯಾಗಿ ನಿಂತಿತ್ತು. ಅದರ ತಲೆಗೊಂದು ಮುಷ್ಟಿಯಿಂದ ಮೊಟುಕಿದ ಕಮಲಕ್ಕ `ಹುಚ್ಚು ರಂಡೆ, ಮೈ ಮೇಲೆ ಅರಿವಿಲ್ಲದಂಗೆ ನುಗ್ಗಿ ಬಂದ್ಯಲ್ಲೇ’ ಅಂತ ಬೈಯ್ದುಬಿಟ್ಟಳು. ಅನಿರೀಕ್ಷಿತ ಆಕ್ರಮಣದಿಂದ ಕಂಗೆಟ್ಟ ಹುಡುಗಿ `ಹೋ’ ಎಂದು ಅಳಲಾರಂಭಿಸಿದಳು.
ಮಠದ ಬಳಿಯಲ್ಲೇ ಇದ್ದ ಬಾವಿಯ ಬಳಿ ವಾಜಿಯನ್ನು ಕರೆದುಕೊಂಡು ಬಂದಾಗ ಅಲ್ಲಿ ಆಗಲೇ ಹತ್ತಾರು ಬ್ರಾಹ್ಮಣ ವಟುಗಳು ಸ್ನಾನ ಮಾಡಲು ಸಿದ್ಧರಾಗಿದ್ದರು.
`ನಮ್ಮ ವಾಜಿಗೊಂದಿಷ್ಟು ನೀರು ಸೇದಿ ಹಾಕ್ರಪ್ಪ, ಅಲಂಕಾರದ ಬ್ರಾಹ್ಮಣರಿಗೆ ಬಡಿಸ್ಬೇಕು’ ಎಂದು ಅಲ್ಲಿದ್ದವರನ್ನು ಕೇಳಿದಳು.
ಆ ಬ್ರಾಹ್ಮಣ ವಟುಗಳೇನು ಸಾಮಾನ್ಯರೆ? ಅವರಿಗೆ ಕಮಲಕ್ಕನ ಸಂಚು ಗೊತ್ತಿಲ್ಲವೆ? ತೊನ್ನು ಮೈಯ ಹುಡುಗನಿಂದ ಬ್ರಾಹ್ಮಣರಿಗೆ ಬಡಿಸಲು ತಯಾರಾಗಿರುವ ಕಮಲಕ್ಕಗೆ ಸಹಾಯ ಮಾಡಿ, ಬ್ರಾಹ್ಮಣಿಕೆಯನ್ನೇ ನಾಶಮಾಡಲು ಸಾಧ್ಯವಿರಲಿಲ್ಲ.
`ಆಗಂಗಿಲ್ಲ ಕಮಲಕ್ಕ, ನಮ್ದೆಲ್ಲಾ ಸ್ನಾನ ಆಗೋತನ್ಕಾ ಕಾಯ್ಬೇಕ್ನೋಡು. ಆಗ್ಲೇ ಹೊತ್ತಾಗ್ಯದೆ. ನಾವೂ ತಾಸೊತ್ತಿಂದ ಕಾಯ್ಕೊಂಡೀವಿ.’
`ಒಂದೆರಡು ಕೊಡ ನೀರು ಸೇದಿ ಹಾಕಿದ್ರೆ ನಿಮ್ಮ ಕೈಯೇನೂ ಸೇದಿ ಹೋಗಲ್ಲ. ಹಂಗ್ಯಾಕೆ ಇಲ್ಲ ಅಂತೀರೋ?’ ಕಮಲಕ್ಕನ ಅಸಹಾಯಕ ಮಾತು.
`ಆಗಂಗಿಲ್ಲ ಅಂದ್ರೆ ಆಗಂಗಿಲ್ಲ. ನೀ ಏನ್ ಮಾಡ್ತೀಯೋ ಮಾಡ್ಕೋ’ ಎಂದುಬಿಟ್ಟರು. ಕಮಲಕ್ಕಗೆ ಆ ಸಂದರ್ಭದಲ್ಲಿ ಜಗಳವಾಡಲು ಸಮಯವಿರಲಿಲ್ಲ. ವಾಜಿಯನ್ನು ಓಡು ನಡಿಗೆಯಲ್ಲಿ ಮನೆಗೆ ಕರೆದುಕೊಂಡು ಬಂದಳು. ತಮ್ಮ ಮನೆಯ ಬಾವಿಯಲ್ಲಿ ತನ್ನನ್ನು ತಡೆಯುವರ್ಯಾರು?
ತಾನೇ ಬಾವಿಯ ಗಾಲಿಗೆ ಹಗ್ಗ ಹಾಕಿ, ಒಂದು ಚೂರೂ ನೀರಿರದಂತೆ ಒರೆಸಿದ ತಾಮ್ರದ ಕೊಡಕ್ಕೆ ಕುಣಿಕೆಯನ್ನು ಕಟ್ಟಿ, `ಬಡ ಬಡ ಸೇದಿ ಮೂರು ಕೊಡ ನೀರು ಹಾಕ್ಕೋ, ಅಲ್ಲಾಗ್ಲೇ ಹೊತ್ತಾಗಿ ಹೋಗ್ಯದೆ’ ಎಂದು ಅವಸರಿಸಿದಳು. ವಾಜಿ ಸಲೀಸಾಗಿ ಬಾವಿಯ ತಳದತನಕ ಕೊಡವನ್ನು ಬಿಟ್ಟು ತುಂಬಿಸಿದ. ಆದರೆ ತುಂಬಿದ ಕೊಡವನ್ನು ಎಳೆಯಲು ಪ್ರಯತ್ನಿಸಿದಾಗಲೇ ಅದು ಹೆಣ ಭಾರವಾಗಿದೆ ಎಂದು ಗೊತ್ತಾದದ್ದು. ಎಷ್ಟೇ ತಿಣುಕಿದರೂ ಆ ತುಂಬಿದ ಕೊಡವನ್ನು ಮೇಲೆತ್ತಲಾಗಲಿಲ್ಲ.
`ಅಮ್ಮಾ, ಬಾಳ ಭಾರ ಅದೆ. ಎಳೀಲಿಕ್ಕಾಗ್ತಾ ಇಲ್ಲ’ ಎಂದು ಗೋಗರೆದ. ಕಮಲಕ್ಕ ಇದನ್ನು ನಿರೀಕ್ಷಿಸಿರಲಿಲ್ಲ. ಅವಸರದಲ್ಲಿ ಕೈಗೆ ಸಿಕ್ಕ ಕೊಡವನ್ನೇ ಕುಣಿಕೆಗೆ ಕಟ್ಟಿ ಬಿಟ್ಟಿದ್ದಳು. ಈಗ ಮಾಡುವದಾದರೂ ಏನು? ಹೆಂಗಸಾದ ತಾನು ಅವನಿಗೆ ಮಡಿ ನೀರು ಸೇದಿ ಸ್ನಾನ ಮಾಡಿಸುವಂತಿಲ್ಲ. ರಾಯರ ಸೇವೆಗೆ ಹೆಂಗಸರ ಮಡಿ ಸಲ್ಲುವುದಿಲ್ಲ. ಮನೆಯಲ್ಲಿ ಬೇರೆ ಗಂಡಸರ್ಯಾರೂ ಇಲ್ಲ, ಎಲ್ಲರೂ ಮಠಕ್ಕೆ ಹೋಗಿದ್ದಾರೆ.
`ಹಂಗೆ ಒಂಚೂರು ಶಕ್ತಿ ಹಾಕಿ ಎಳಿಯಪ್ಪಾ, ಬರ್ತದೆ’ ಎಂದು ಹುರಿದುಂಬಿಸಿದಳು. ವಾಜಿ ಪ್ರಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಈಗಾಗಲೇ ಕೊಡ ತುಂಬಿರುವದರಿಂದ ಅದರಲ್ಲಿನ ನೀರನ್ನು ಚೆಲ್ಲುವಂತೆಯೂ ಇಲ್ಲ. ಕಮಲಕ್ಕಗೆ ಬೇರೆ ದಾರಿಯಿಲ್ಲದೆ ತಾನೇ ಹಗ್ಗಕ್ಕೆ ಕೈ ಹಾಕಿ ಕೊಡವನ್ನು ಮೇಲೆ ತಂದಳು.
ಮತ್ತೆ ಮನೆಯೆಲ್ಲಾ ಹುಡುಕಾಡಿದರೂ ತಾಮ್ರದ ಬಿಂದಿಗೆಯಿರಲಿಲ್ಲ. ಬರೀ ದೊಡ್ಡ ದೊಡ್ಡ ಕೊಡಗಳಿದ್ದವೇ ಹೊರತು, ಚಿಕ್ಕ ಬಿಂದಿಗೆ ಇರಲಿಲ್ಲ. ಇದ್ದ ಒಂದು ಸಣ್ಣ ಬಿಂದಿಗೆಯನ್ನು ಮಠಕ್ಕೆ ಒಯ್ದು ಬಿಟ್ಟಿದ್ದರು. ಕಮಲಕ್ಕ ಕೈಗೆ ಸಿಕ್ಕ ತಾಮ್ರದ ತಂಬಿಗೆಯನ್ನೇ ವಾಜಿಗೆ ಕೊಟ್ಟಳು. ವಾಜಿ ತಂಬಿಗೆಯನ್ನು ಬಾವಿಗೆ ಬಿಟ್ಟು ಸೇದಿದನಾದರೂ, ಒಂದು ತಂಬಿಗೆಯ ನೀರು ತುಂಬಾ ಸ್ವಲ್ಪವಾಯ್ತು. ಪೂರ್ತಿ ಮೈಯೆಲ್ಲಾ ತೊಯ್ಯಲು ಕನಿಷ್ಟ ಹದಿನೈದು ಬಾರಿಯಾದರೂ ತಂಬಿಗೆಯನ್ನು ಬಾವಿಯಿಂದ ಎಳೆಯಬೇಕಾಯ್ತು. ಕಡೆ ಕಡೆಗಂತೂ ಅವನ ಕೈ ಸೋತು ಹೋಗಿ, ಹಗ್ಗವನ್ನು ಎಳೆದದ್ದರಿಂದ ಅಂಗೈ ಕೆಂಪಗಾಗಿ ಉರಿಯಲಾರಂಭಿಸಿತ್ತು. ಅದಾಗಲೇ ಹೊತ್ತು ಮೀರಲಾರಂಭಿಸಿದ ಕಾರಣ ಕಮಲಕ್ಕ ಚಡಪಡಿಸಲಾರಂಭಿಸಿದಳು. ಅಲಂಕಾರ ಬ್ರಾಹ್ಮಣರ ಊಟ ಮುಗಿದೇ ಹೋಗಿರುತ್ತೋ ಏನೋ ಎಂಬ ಅನುಮಾನ ಪ್ರಾರಂಭವಾಯ್ತು. ಕಡೆಯ ಪಕ್ಷ ವಾಜಿ ಮೊಸರನ್ನವನ್ನಾದರೂ ಬಡಿಸಿದರೂ ಸಾಕು ಎಂದುಕೊಂಡಳು.
ಮಧ್ಯಾಹ್ನದ ರಣ ರಣ ಬಿಸಿಲಿನಲ್ಲಿ, ಕಾವಲಿಯಂತೆ ಕಾದ ನೆಲದ ಮೇಲೆ ವಾಜಿಯನ್ನು ಬರಿಗಾಲಿನಿಂದ ಮಠಕ್ಕೆ ಕರೆದುಕೊಂಡು ಬರುವ ವೇಳೆಗೆ ಕಮಲಕ್ಕನ ಅನುಮಾನ ನಿಜವಾಗಿಹೋಯ್ತು. ಆಗಲೇ ಸಾರ್ವಜನಿಕರ ಊಟಕ್ಕೆ ಪ್ರಾರಂಭವೆಂಬಂತೆ `ವೆಂಕಟರಮಣ ಗೋವಿಂದ, ಗೋವಿಂದ…’ ಎಂದು ಕಿರುಚಿದ್ದು ಕಿವಿಗಪ್ಪಳಿಸಿತು. ಅಲಂಕಾರ ಬ್ರಾಹ್ಮಣರು ತಿನ್ನದೇ ಚೆಲ್ಲಿದ್ದ ಮಂಡಿಗೆ, ಚಕ್ಕುಲಿ, ಪೇಣಿ, ರವೆ ಉಂಡೆ, ಮೈಸೂರು ಪಾಕು, ಬೇಸನ್ನು ಮುಂತಾದವುಗಳನ್ನು ಅವರ ಹೆಂಡಂದಿರು ತೆಗೆದುಕೊಳ್ಳುತ್ತಿದ್ದರು. ಅವುಗಳನ್ನು ರಾಯರ ಪ್ರಸಾದವೆಂದು ಸ್ವೀಕರಿಸಲು ಹೊರಗಡೆ ಎಷ್ಟೋ ಭಕ್ತಾದಿಗಳು ಕಾಯುತ್ತಿದ್ದರು. ಕೆಲವೊಂದು ಹೆಂಗಸರು ತಮ್ಮ ಎಳೆಯ ಕಂದಮ್ಮಗಳ ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ, ಅಲಂಕಾರ ಬ್ರಾಹ್ಮಣರ ಎಂಜಲೆಲೆಯಲ್ಲಿ ಹೊರಳಾಡಿಸಿ ಮುಂದೆ ಎಂದೆಂದೂ ಆ ಕಂದಮ್ಮಗಳಿಗೆ ಚರ್ಮ ವ್ಯಾಧಿ ಬರದಂತೆ ರಾಯರ ಅನುಗ್ರಹ ಪಡೆಯಲು ಸಿದ್ಧರಾಗಿದ್ದರು.
ಕಮಲಕ್ಕ ಮಡಿಯಲ್ಲಿದ್ದ ವಾಜಿಯನ್ನು ತಬ್ಬಿಕೊಂಡು, ಅವನನ್ನು ಮೈಲಿಗೆ ಮಾಡಿ `ಮೋಸ ಮಾಡಿದ್ರಲ್ಲೋ ವಾಜಿ’ ಅಂತ ಅತ್ತುಬಿಟ್ಟಳು. ಗೋಪಣ್ಣಗೆ ಆ ದೃಶ್ಯವನ್ನು ನೋಡಲಾಗಲಿಲ್ಲ. ರಾಧಕ್ಕಗೂ ಹೊಟ್ಟೆಯಲ್ಲಿ ಸಂಕಟವಾಯ್ತು.
`ಕಮ್ಲಿ, ಯಾಕೆ ಅಸಮಾಧಾನ ಆಗ್ತಿ ಬಿಡು. ಹೆಂಗೂ ಮುಂದಿನ ವರ್ಷ ಆರಾಧನೆ ಬಂದೇ ಬರ್ತದಲ್ಲ, ಆಗ ವಾಜಿ ಕೈಲಿ ಸೇವಾ ಮಾಡಿಸೋಣಂತೇಳು’ ಎಂದು ಗೋಪಣ್ಣ ಹೇಳಿದ.
`ಕಮಲಕ್ಕಾ, ಸಮಾಧಾನ ಮಾಡ್ಕೋ. ಆದಿದ್ದಾಯ್ತು, ಈಗೇನು ಮಾಡ್ಲಿಕ್ಕದೆ? ನಡಿ, ಊಟ ಮಾಡ್ವಂತಿ. ಕೂಸು ವಾಜಿ ಕೂಡಾ ಹಸ್ಗೊಂಡದೆ. ಆಗ್ಲೇ ಮೂರು ಗಂಟ್ಯಾಯ್ತು’ ಅಂತ ರಾಧಕ್ಕನೂ ಸಮಾಧಾನದ ಮಾತುಗಳನ್ನಾಡಿದಳು.
ಆದರೆ ಕಮಲಕ್ಕ ಸಮಾಧಾನದ ನುಡಿಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಕಣ್ಣುಗಳನ್ನು ಒರೆಸಿಕೊಂಡು, ನಿರ್ಧಾರದ ಧ್ವನಿಯಲ್ಲಿ, ವಾಜಿಯ ಕೈ ಹಿಡಿದು `ನಡಿಯೋ ಹೋಗಾಣ’ ಅಂತ ಎಳೆದುಕೊಂಡು ಹೊರಟೇಬಿಟ್ಟಳು. `ಎಲ್ಲಿಗ್ಹೊಂಟಿ ಕಮ್ಲೀ’ ಅಂತ ಗೋಪಣ್ಣ ಕೂಗಿದರೂ ಓಗೊಡಲಿಲ್ಲ. ಕಮಲಕ್ಕನನ್ನು ಕೈ ಹಿಡಿದು ನಿಲ್ಲಿಸಬೇಕೆಂದರೂ, ತಾನು ಮಡಿಯಲ್ಲಿದ್ದುದು ನೆನಪಾಗಿ ಗೋಪಣ್ಣ ಸುಮ್ಮನಾಗಿಬಿಟ್ಟ.
ವಾಜಿಯನ್ನು ದರದರನೆ ಎಳೆದುಕೊಂಡು ಮನೆಗೆ ಬಂದ ಕಮಲಕ್ಕ ತನ್ನ ಹಾಗೂ ವಾಜಿಯ ಬಟ್ಟೆಗಳನ್ನು ಗಂಟು ಕಟ್ಟಿಕೊಂಡಳು.
`ವಾಜಿ, ಬಳ್ಳಾರಿಗ್ಹೋಗೋಣ. ಇಲ್ಲಿ ಬ್ಯಾಡ’ ಎಂದಳು.
`ಹಸಿವಾಗ್ಲಿಕ್ಹತ್ತದೆ. ಊಟ ಮಾಡಿ ಹೋಗಾಣ’ ವಾಜಿ ಹೆದರಿಕೆಯ ಧ್ವನಿಯಲ್ಲಿ ಹೇಳಿದ.
`ಇಲ್ಲಿ ಬ್ಯಾಡ. ಬಳ್ಳಾರಿಗ್ಹೋಗಿ ಅಡಿಗಿ ಮಾಡ್ಕೊಂಡು ಊಟ ಮಾಡಾಣ. ಈವೊತ್ತು ಏಕಾದಶಿ ಅಂದ್ಕೊ’ ಎಂದುಬಿಟ್ಟಳು.
ಸರಿಯಾಗಿ ಅದೇ ಸಮಯಕ್ಕೆ ಹಿತ್ತಲಿನಲ್ಲಿ ಸದ್ದಾಯ್ತು. ಯಾರೋ ಹಿತ್ತಲಿನ ಬೇಲಿಯ ಬಾಗಿಲನ್ನು ತೆರೆಯುತ್ತಿರುವಂತೆ ಭಾಸವಾಯ್ತು. ಕಮಲಕ್ಕ ಹಿತ್ತಲಿಗೆ ಹೋದಳು. ವಾಜಿಯೂ ಹಿಂಬಾಲಿಸಿದ. ಅಲ್ಲಿ ಬೆಳಿಗ್ಗೆ ವಾಜಿಯಿಂದ ಕಲ್ಲಿನೇಟು ತಿಂದ ಹಂದಿ ಗೇಟನ್ನು ನೂಕುತ್ತಿತ್ತು. ಕಮಲಕ್ಕಗೆ ಅದೇನನ್ನಿಸಿತೋ ಏನೋ, ಸೀದಾ ಹೋಗಿ ಗೇಟನ್ನು ತೆರೆದುಬಿಟ್ಟಳು. ಹಂದಿ ಒಳ ನುಗ್ಗಿ ಮಲ್ಲಿಗೆಯ ಹಂದರದ ಕೆಳಗೆ ಸ್ವಲ್ಪ ಮಣ್ಣು ಕೆದರಿ ಕುಳಿತುಕೊಂಡುಬಿಟ್ಟಿತು. ಕಮಲಕ್ಕ ಆ ಹಂದಿಯನ್ನು ನೋಡಿ `ರಾಯರೆ, ಹಂದಿ ಹಡವಣಿಗಿ ಸುಸೂತ್ರ ಆಗ್ಲಪ್ಪ’ ಅಂತ ಮನಸ್ಸಿನಲ್ಲೇ ಪ್ರಾರ್ಥಿಸಿ ವಾಜಿಯ ಕೈ ಹಿಡಿದುಕೊಂಡು ಬಸ್ ನಿಲ್ದಾಣದ ಕಡೆ ಹೊರಟುಬಿಟ್ಟಳು. ಆದರೆ ಹಸಿವು ಮತ್ತು ಅವಮಾನಗಳಿಂದ ಕಂಗಾಲಾದ ವಾಜಿ ಈಗ ಬಸ್ಸಿನಲ್ಲಿ ಸೀಟನ್ನು ಹಿಡಿಯುತ್ತಾನೆಂಬುದು ಸಂಶಯದ ವಿಷಯ.
(ಚಿತ್ರ: ರೂಪಶ್ರೀ ಕಲ್ಲಿಗನೂರ್)
ವಸುಧೇಂದ್ರ ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಸುಧೇಂದ್ರರು ಸಧ್ಯ ಬರವಣಿಗೆಯಲ್ಲಿ ಹಾಗೂ ತಮ್ಮ ಛಂದ ಪುಸ್ತಕ ಪ್ರಕಾಶನದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ಪ್ರೆಸ್, ಮೋಹನಸ್ವಾಮಿ, ವಿಷಮ ಭಿನ್ನರಾಶಿ, ಕೋತಿಗಲು, ನಮ್ಮಮ್ಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ವರ್ಣಮಯ, ಐದು ಪೈಸೆ ವರದಕ್ಷಿಣೆ, ಹರಿಚಿತ ಸತ್ಯ, ಮಿಥುನ, ತೇಜೋ ತುಂಗಭದ್ರಾ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ.