ಆಮೂರರು ಮೊದಲ ಬರವಣಿಗೆ ಗುರುತಿಸಲ್ಪಟ್ಟದ್ದು ಇಂಗ್ಲೀಷ್ ನಿಬಂಧದ ಮೂಲಕವೇ. ಕುವೆಂಪು ಆದಿಯಾಗಿ ಆ ಕಾಲದ ಸೃಜನಶೀಲರಿಗೆ ಈ ವಸಾಹತುಶಾಹಿ ಭಾಷೆಯ ಆಕರ್ಷಣೆ ಉಂಟಾಗಲು ಹಲವು ಕಾರಣಗಳಿವೆ. ಆದರೆ ಆಮೂರರ ಸಾಹಿತ್ಯ ಸಂವೇದನೆ ಬೆಳೆದದ್ದು ಚಿಕ್ಕಂದಿನಲ್ಲಿ ಸಂಸ್ಕೃತದ ಶಾಸ್ತ್ರೀಯ ಕಾವ್ಯಗಳನ್ನು ಓದುವ ಮೂಲಕ. ಬದುಕಿನ ಉತ್ತರಾರ್ಧದಲ್ಲಿ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದು ವಿಮರ್ಶಕರಾಗಿ. ಮುಂದೆ ಆಮೂರರು ವಿಮರ್ಶೆಯ ಮಾರ್ಗವನ್ನೇ ರೂಪಿಸಿದ್ದು ಈಗ ಇತಿಹಾಸ. ಶ್ರೀರಂಗ, ಬೇಂದ್ರೆ, ಕಾರಂತ, ಅನಕೃ ಮುಂತಾದವರ ಕುರಿತು ಆರಂಭದಲ್ಲಿ ಅವರು ಬರೆಯುತ್ತಾರೆ. ಆದರೆ ನವೋದಯದ ಲೇಖಕರು ವಿಮರ್ಶೆಗೆ ನಿರ್ಲಿಪ್ತರಾಗಿದ್ದರು.
ಇತ್ತೀಚೆಗೆ ತೀರಿಕೊಂಡ ವಿಮರ್ಶಕ ಡಾ. ಜಿ.ಎಸ್. ಆಮೂರರ ಕುರಿತು ಡಾ. ಗೀತಾ ವಸಂತ ಬರೆದ ಲೇಖನ

 

ಡಾ. ಗುರುರಾಜ ಶಾಮಾಚಾರ್ಯ ಆಮೂರ ಎಂಬ ಸಾರಸ್ವತ ಲೋಕದ ಘನ ವ್ಯಕ್ತಿತ್ವವೊಂದು ಕಣ್ಮರೆಯಾಯಿತು. ಧಾರವಾಡದ ಮಣ್ಣ ಕಸುವಿನ ಬಲವಾದ ಕೊಂಡಿಯೊಂದು ಕಳಚಿಬಿತ್ತು. ಬದುಕು ನೀರ ಮೇಲಣ ಗುಳ್ಳೆ ಎಂಬ ಅರಿವಿನಲ್ಲೂ ಇಟ್ಟ ಹೆಜ್ಜೆಗಳನ್ನು ಆಳವಾಗಿ ಅಷ್ಟೇ ದೃಢವಾಗಿ ಊರಬೇಕೆಂಬುದನ್ನು ಪರೋಕ್ಷವಾಗಿ ಕಲಿಸಿದ ಗುರು ಅವರು. ಅವರ ಆತ್ಮಕಥನ ‘ನೀರ ಮೇಲಣ ಗುಳ್ಳೆ’ ಯೂ ಇದನ್ನೇ ಪ್ರತಿಪಾದಿಸುತ್ತದೆ.

ನೀರು ನಿಜ. ಗುಳ್ಳೆಯೂ ಇದ್ದಷ್ಟು ಕಾಲ ನಿಜವೇ ಎನ್ನುವ ಆಮೂರರು ಅಪ್ಪಟ ವಾಸ್ತವವಾದಿ. ಪುರಂದರದಾಸರ ಈ ರೂಪಕವನ್ನು ಅವರು ಗ್ರಹಿಸುವ ಬಗೆಯೇ ಬೇರೆ. ಗುಳ್ಳೆ ನಿಜವಲ್ಲ ಎನ್ನುವುದಕ್ಕಿಂತ ಸ್ಥಿರವಲ್ಲ ಎಂಬುದು ಹೆಚ್ಚುಸರಿ ಎಂಬ ನಿಲುವು ಅವರದು. ಈ ರೂಪಕಗಳ ಜಗತ್ತಿನಾಚೆಗೆ ಬರವಣಿಗೆಯ ಮೂಲಕ ತಮ್ಮ ಸ್ಥಿರವಾದ ಬಿಂಬವೊಂದನ್ನುಅವರು ಬಿಟ್ಟುಹೋಗಿದ್ದಾರೆ. ಅವರ ಅಧ್ಯಯನದ ವ್ಯಾಪ್ತಿ, ಪಾಂಡಿತ್ಯದ ಆಳ ಹಾಗೂ ವಿಮರ್ಶೆಯ ಮೊನಚು ಕನ್ನಡ ಸಾಹಿತ್ಯಲೋಕಕ್ಕೆ ಲಭ್ಯವಾದ ಭಾಗ್ಯಗಳಲ್ಲಿ ಒಂದು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷಾ ಪರಂಪರೆ ಹಾಗೂ ಬೌದ್ಧಿಕ ವಿನ್ಯಾಸಗಳನ್ನು ತಮ್ಮೊಳಗೆ ಮುಪ್ಪುರಿಗೊಳಿಸಿಕೊಂಡ ಅವರ ಬಗೆಯೇ ಅನನ್ಯ. ವೈಯಕ್ತಿಕವಾಗಿ ಭಾವುಕರೂ ವಿಚಾರಗಳ ವಿಷಯದಲ್ಲಿ ನಿಷ್ಠುರರೂ ಆದ ಆಮೂರರು ತಮಗನಿಸಿದ್ದನ್ನು ಮುಲಾಜಿಲ್ಲದೇ ಹೇಳಬಲ್ಲ ವಿಮರ್ಶಕರಾಗಿದ್ದವರು. ಕನ್ನಡಕ್ಕೆ ಅವರು ಲಭ್ಯವಾದದ್ದೇ ತುಂಬ ತಡವಾಗಿ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಅವರು ಕುಮಟಾ, ಗದಗಗಳ ಕಾಲೇಜುಗಳಲ್ಲೂ, ಕೆಲಕಾಲ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲೂ, ಕೊನೆಯಲ್ಲಿ ಔರಂಗಾಬಾದಿನ ಮರಾಠವಾಡಾ ವಿಶ್ವವಿದ್ಯಾಲಯದಲ್ಲೂ ಸೇವೆ ಸಲ್ಲಿಸಿ ನಿವೃತ್ತರಾದ ಮೇಲೆ ಮತ್ತೆ ಕನ್ನಡಕ್ಕೆ ದಕ್ಕಿದರು.

ಆಮೂರರ ಬರವಣಿಗೆಯೆಂದರೆ ಶಿಸ್ತು, ಅಧ್ಯಯನಶೀಲತೆಯಿಂದ ಸಂಪನ್ನವಾಗಿರುತ್ತಿತ್ತು. ಎಲ್ಲೂ ಭಾವುಕವಾಗದೇ ತನ್ನ ಕೇಂದ್ರವನ್ನು ಕಳೆದುಕೊಳ್ಳದೇ ಖಚಿತವಾದ ಬೌದ್ಧಿಕ ವಿನ್ಯಾಸವೊಂದನ್ನು ರೂಪಿಸುವ ಬಗೆಯಲ್ಲಿ ವಿಸ್ತರಿಸಿಕೊಳ್ಳುವುದು ಅದರ ಗುಣ. ಅಪಾರವಾದ ಓದು ಹಾಗೂ ಪರಂಪರೆಯೊಡನೆ ಇರುವ ಸಾತತ್ಯ ಅವರನ್ನು ಭಿನ್ನ ವಿದ್ವಾಂಸರನ್ನಾಗಿ ರೂಪಿಸಿವೆ. ತಮಗೆ ದತ್ತವಾದ ಪಾತ್ರಗಳನ್ನು ಗಂಭೀರವಾಗಿ ನಿಭಾಯಿಸುವ ಅವರ ಗುಣ ಅವರನ್ನು ಅತ್ಯತ್ತಮ ಪ್ರಾಧ್ಯಾಪಕರನ್ನಾಗಿ ರೂಪಿಸಿತು.

ಮರಾಠಾವಾಡಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ವಿಭಾಗವನ್ನು ಕಟ್ಟಿದ ಕ್ರಮವೂ ಇದಕ್ಕೆ ಉದಾಹರಣೆ. ಒಬ್ಬ ಶ್ರೇಷ್ಠ ಶಿಕ್ಷಣತಜ್ಞರಾಗಿಯೂ ಆಮೂರರು ನಮ್ಮ ಮುಂದೆ ಮಾದರಿಯೊಂದನ್ನು ಬಿಟ್ಟು ಹೋಗಿದ್ದಾರೆ. ಜ್ಞಾನ ನಿರ್ಮಾಣದೆಡೆಗಿನ ಅವರ ಆಸ್ಥೆಯನ್ನು ಅಲ್ಲಿ ಮುಖ್ಯವಾಗಿ ಕಾಣುತ್ತೇವೆ. ಪಾಶ್ಚಾತ್ಯ ಹಾಗೂ ಪೌರಾತ್ಯ ಸಾಹಿತ್ಯ ಹಾಗೂ ತತ್ವಜ್ಞಾನಗಳಲ್ಲಿ ಅವರಿಗಿದ್ದ ಜಿಜ್ಞಾಸೆ ಅವರನ್ನು ಕನ್ನಡ ಮಾತ್ರವಲ್ಲ ವಿಶ್ವಮಾನ್ಯ ವಿದ್ವಾಂಸರ ನೆಲೆಯಲ್ಲಿ ತಂದು ನಿಲ್ಲಿಸುವಂತಹುದು.

ಭಾರತೀಯ ಮೂಲದ ಇಂಗ್ಲಿಷ್ ಲೇಖಕರನ್ನು ಅವರು ತಮ್ಮ ವಿಮರ್ಶಾತ್ಮಕ ಒಳನೋಟಗಳಲ್ಲಿ ಕಂಡರಿಸಿದರು. ಆರ್.ಕೆ. ನಾರಾಯಣ, ರಾಜಾರಾವ್, ಮುಲ್ಕರಾಜ್ ಆನಂದ್, ನೈಪಾಲ್, ಸಲ್ಮಾನ್ ರಶ್ದಿ ಮುಂತಾದವರ ಕುರಿತ ಅವರ ಬರಹಗಳು ಗಮನಾರ್ಹವಾದುದು. ಇಂಗ್ಲೀಷಿನ ಮೂಲಕ ಅವರಿಗೆ ಇತರ ಭಾರತೀಯ ಭಾಷೆಗಳ ಬರಹಗಳನ್ನೂ ಅನುಸಂಧಾನ ಮಾಡಲು ಸಾಧ್ಯವಾಯಿತು. ಅವರು ಬದುಕಿದ ಬಹುಭಾಷಿಕ ಪರಿಸರ ಅವರ ಸಂವೇದನೆಯನ್ನು ವಿಸ್ತರಿಸತು. ಫುಲ್ ಬ್ರೈಟ್ ಫೆಲೋಶಿಪ್ ಪಡೆದು ಅಮೆರಿಕೆಯ ಕೆಲಿಫೋರ್ನಿಯಾ ಹಾಗೂ ಯೇಲ್ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿದ ಆಮೂರರು ಬ್ರಿಟಿಷ್ ಕೌನ್ಸಿಲ್ ಸಹಾಯದಿಂದ ಇಂಗ್ಲೆಂಡಿನಲ್ಲೂ ಸಂಶೋಧನೆಯಲ್ಲಿ ತೊಡಗಿದ್ದರು. ಆ ಕಾರಣಕ್ಕಾಗಿ ಯೂರೋಪ್ ಹಾಗೂ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ಸಂಶೋಧನೆಗಳ ಸ್ವರೂಪವನ್ನು ತುಲನಾತ್ಮಕವಾಗಿ ನೋಡುವುದು ಅವರಿಗೆ ಸಾಧ್ಯವಾಯಿತು. ಆದರೆ ವಿದ್ವತ್ ಚರ್ಚೆಗಳ ಬದಲು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ರಾಜಕೀಯಗಳ ಕುರಿತು ಸಹಜವಾಗಿಯೇ ಅವರಿಗೆ ಸಾತ್ವಿಕವಾದ ಸಿಟ್ಟಿತ್ತು. ಆದರೆ ಆಮೂರದು ಸ್ವಯಂ ಸಂಘಟಿತ ವ್ಯಕ್ತಿತ್ವ. ಎಂಥ ಪ್ರತಿಕೂಲ ಪರಿಸ್ಥಿತಿಗೂ ಜಗ್ಗದೇ ತಾವು ಅಂದುಕೊಂಡಿದ್ದನ್ನು ಸಾಧಿಸುವ ಅವರ ಜಿಗುಟುತನ ಅವರನ್ನು ಯಶಸ್ವೀ ಅಧ್ಯಾಪಕ, ಶಿಕ್ಷಣತಜ್ಞ ಹಾಗೂ ಲೇಖಕರನ್ನಾಗಿ ಬೆಳೆಸಿತು.

(ಡಾ. ಜಿ.ಎಸ್. ಆಮೂರರ ಕುಟುಂಬ)

ಅವರಲ್ಲೊಬ್ಬ ವಾಗ್ಮಿ ಹಾಗೂ ವಿಮರ್ಶಕ ಬೆಳೆದ ಬಗೆಯನ್ನು ಅವರು ಸವಿಸ್ತಾರವಾಗಿ ಹೇಳಿಕೊಂಡಿದ್ದಾರೆ. ಅವರ ಪ್ರಯೋಗಶೀಲತೆ ಹಾಗೂ ಅಪ್ಡೇಟ್ ಆಗುತ್ತಲೇ ಇರುವ ಜ್ಞಾನ ದಾಹ ಅವರನ್ನು ಸದಾ ಯುವಕರನ್ನಾಗಿರಿಸಿತು. ತಮ್ಮ ಎಂಭತ್ತು-ತೊಂಭತ್ತರ ವಯಸ್ಸಿನಲ್ಲೂ ಅವರು ಯುವ ಲೇಖಕರೊಂದಿಗೆ ಬೆರೆಯುತ್ತಿದ್ದ ರೀತಿ ಹಾಗೂ ಅವರನ್ನು ಪ್ರೋತ್ಸಾಹಿಸುತ್ತಿದ್ದ ರೀತಿಯೇ ಅದಕ್ಕೆ ನಿದರ್ಶನ. ಅವರು ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೆ ಆರಂಭಿಸಿದ್ದ ಭಾಷಣಮಾಲೆ ಬೇರೆ ಬೇರೆ ಜ್ಞಾನ ಶಾಖೆಗಳಲ್ಲಿ ನಡೆಯುತ್ತಿದ್ದ ಸಂಶೋಧನೆಗಳ ಸಾರವನ್ನು ತಾಂತ್ರಿಕ ಪರಿಭಾಷೆಗಳ ತೊಡಕಿಲ್ಲದೇ ಹಂಚಿಕೊಳ್ಳುವ ತರಬೇತಿಯಾಗಿತ್ತು. ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಮೇಲೂ ಇಂಥ ಕ್ರಿಯಾಶೀಲತೆಯನ್ನು ಸ್ವಲ್ಪವೂ ಮುಕ್ಕಾಗದಂತೆ ಉಳಿಸಿಕೊಂಡಿದ್ದರು.

ಜ್ಞಾನವನ್ನು ಕ್ಲಾಸ್ ರೂಮ್ ಬೋಧನೆಗೆ ಸೀಮಿತಗೊಳಿಸದೇ ವಿಕಾಸಗೊಳಿಸುವ ಹಲವು ಕಾರ್ಯಯೋಜನೆಗಳನ್ನು ಅವರು ಪ್ರಾಯೋಗಿಕವಾಗಿ ಸಫಲಗೊಳಿಸಿದರು. ಉದಾಹರಣೆಗೆ ರೂಢಿಗತ ಕೊಲೋನಿಯಲ್ ಪಠ್ಯಕ್ರಮದಲ್ಲಿ ಬದಲಾವಣೆ ತಂದು ಇಂಗ್ಲಿಷ್ ಬೋಧನೆಯ ವಿನ್ಯಾಸವನ್ನು ಬದಲಿಸಿದ ಪ್ರೊ.ಸಿ.ಡಿ.ಎನ್. ರಂಥವರೊಂದಿಗೆ ಕೈ ಜೋಡಿಸಿದ್ದನ್ನು ಗಮನಿಸಬಹುದು. ಆಗ ಇಂಗ್ಲಿಷ್ ಅಭ್ಯಾಸ ಕ್ರಮದಲ್ಲಿ ಸಾಹಿತ್ಯದ ಕೇಂದ್ರ ಸ್ಥಾನದಲ್ಲಿ ಭಾಷೆಯನ್ನು ಸ್ಥಾಪಿಸಲು ತೊಡಗಿದ್ದರು. ತೃತೀಯ ಜಗತ್ತಿನ ದೇಶಗಳಿಗೆ ಬೇಕಾಗಿರುವುದು ಭಾಷೆಯೇ ಹೊರತೂ ಇಂಗ್ಲಿಷ್ ಸಾಹಿತ್ಯವಲ್ಲ, ಅದು ಕಲೋನಿಯಲ್ ಗುಲಾಮಗಿರಿಯ ಮುಂದುವರಿಕೆ ಎಂಬ ವಾದ ಅದಾಗಿತ್ತು. ಈಗ ಭಾಷೆಯ ಮೂಲಕ ಇನ್ನೊಂದು ಬಗೆಯ ವಸಾಹತುವಾದ ಆರಂಭವಾಯಿತು. ಇದು ಕರಿನಾಯಿಯನ್ನು ಬಿಳಿನಾಯಿಯನ್ನಾಗಿ ಮಾಡುವ ಅವಾಂತರವಾಗಿಯೇ ಅವರಿಗೆ ತೋರಿತು.

ಇಂಗ್ಲಿಷ್ ವಿಷಯದಲ್ಲಿದ್ದ ಸಂಶೋಧನಾ ಶಿಸ್ತು ಹಾಗೂ ಬರವಣಿಗೆಯ ಕ್ರಮವನ್ನು ರೂಢಿಸಿಕೊಂಡಿದ್ದ ಆಮೂರರು ಅದನ್ನು ತಮ್ಮ ವಿದ್ಯಾರ್ಥಿಗಳಿಗೂ ರೂಢಿಸಿದರು. ಇಷ್ಟೆಲ್ಲ ಸಾಧನೆಯ ನಂತರವೂ ಅವರಿಗೆ ಬರವಣಿಗೆಯ ತೃಪ್ತಿ ಕೊಟ್ಟಿದ್ದು ಕನ್ನಡದಲ್ಲಿ ಮಾಡಿದ ಬರವಣಿಗೆಯೇ ಎನ್ನುತ್ತಾರೆ ಅವರು. ತಾವು ಬದುಕುವ ಪರಿಸರ ಹಾಗೂ ಸಾಹಿತ್ಯಕ್ಕೆ ಇರುವ ಸಾವಯವ ಸಂಬಂಧವು ಕೊಟ್ಟ ತೃಪ್ತಿಯಿದು. ವಿದೇಶಿ ಸಾಹಿತ್ಯವನ್ನು ಬೋಧಿಸುವ ಶಿಕ್ಷಕರಿಗುಂಟಾಗುವ ಪರಕೀಯತೆಯನ್ನು ಅವ್ಯಕ್ತವಾಗಿ ಅನುಭವಿಸುತ್ತಿದ್ದ ಅವರು ನಿವೃತ್ತಿಯ ನಂತರ ಧಾರವಾಡದಲ್ಲಿ ನೆಲೆಸುವ ಮೂಲಕ ಕನ್ನಡ ಸಾಹಿತ್ಯದ ತೆಕ್ಕೆಗೆ ಬರುತ್ತಾರೆ. ಅದು ಬದುಕಿನ ಮಹತ್ವದ ತಿರುವು.

ಆಮೂರರು ಮೊದಲ ಬರವಣಿಗೆ ಗುರುತಿಸಲ್ಪಟ್ಟದ್ದು ಇಂಗ್ಲೀಷ್  ನಿಬಂಧದ ಮೂಲಕವೇ. ಕುವೆಂಪು ಆದಿಯಾಗಿ ಆ ಕಾಲದ ಸೃಜನಶೀಲರಿಗೆ ಈ ವಸಾಹತುಶಾಹಿ ಭಾಷೆಯ ಆಕರ್ಷಣೆ ಉಂಟಾಗಲು ಹಲವು ಕಾರಣಗಳಿವೆ. ಆದರೆ ಆಮೂರರ ಸಾಹಿತ್ಯ ಸಂವೇದನೆ ಬೆಳೆದದ್ದು ಚಿಕ್ಕಂದಿನಲ್ಲಿ ಸಂಸ್ಕೃತದ ಶಾಸ್ತ್ರೀಯ ಕಾವ್ಯಗಳನ್ನು ಓದುವ ಮೂಲಕ. ಬದುಕಿನ ಉತ್ತರಾರ್ಧದಲ್ಲಿ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದು ವಿಮರ್ಶಕರಾಗಿ. ಮುಂದೆ ಆಮೂರರು ವಿಮರ್ಶೆಯ ಮಾರ್ಗವನ್ನೇ ರೂಪಿಸಿದ್ದು ಈಗ ಇತಿಹಾಸ. ಶ್ರೀರಂಗ, ಬೇಂದ್ರೆ, ಕಾರಂತ, ಅನಕೃ ಮುಂತಾದವರ ಕುರಿತು ಆರಂಭದಲ್ಲಿ ಅವರು ಬರೆಯುತ್ತಾರೆ. ಆದರೆ ನವೋದಯದ ಲೇಖಕರು ವಿಮರ್ಶೆಗೆ ನಿರ್ಲಿಪ್ತರಾಗಿದ್ದರು. ಅವರಿಗೆ ತಮ್ಮ ಸೃಜನಶೀಲತೆಯ ಕುರಿತು ಅಪಾರ ಆತ್ಮವಿಶ್ವಾಸ. ಆದರೆ ನವ್ಯದ ಲಕ್ಷಣವೇ ಸಂದೇಹ. ಸೃಜನಶೀಲತೆಯ ಕುರಿತು ಸದಾ ಆತಂಕ. ಇಲ್ಲಿ ವಿಮರ್ಶೆ ಕೆಲಸ ಮಾಡುತ್ತದೆ. ಅಂತೆಯೇ ದೇವನೂರು ಮಹದೇವ ಅವರ ‘ದ್ಯಾವನೂರು’ ಸಂಕಲನಕ್ಕೆ, ಡಿ.ಆರ್.ನಾಗರಾಜರ ಶಕ್ತಿಶಾರದೆಯ ಮೇಳಕ್ಕೆ ಮೊದಲ ವಿಮರ್ಶೆ ಆಮೂರರದು. ಸದಾ ಹೊಸತರ ಚೈತನ್ಯವನ್ನು ಪೂರ್ವಗ್ರಹವಿಲ್ಲದೇ ಗ್ರಹಿಸುವ ಅವರ ಶಕ್ತಿಯೇ ಅವರನ್ನು ಕನ್ನಡದ ಒಬ್ಬಶ್ರೇಷ್ಠ ವಿಮರ್ಶಕರನ್ನಾಗಿ ಬೆಳೆಸಿತು.

ಆಮೂರರು ಬೇಂದ್ರೆ ಕಾವ್ಯದ ಕುರಿತು ಬರೆದ ‘ಭುವನದ ಭಾಗ್ಯ’ ಹಾಗೂ ಕುವೆಂಪು ಅವರ ಕುರಿತು ಬರೆದ ‘ಯುಗದ ಕವಿ’ ಇವೆರಡೂ ಇದಕ್ಕೆ ನಿದರ್ಶನಗಳು. “ಬ್ರಾಹ್ಮಣ ಶೂದ್ರ ಸಮಸ್ಯೆ ರಂಗಮಧ್ಯಕ್ಕೆ ಬಂದ ನಮ್ಮ ಯುಗದಲ್ಲಿ ಈ ಇಬ್ಬರು ಕವಿಗಳನ್ನು ಎರಡು ಧ್ರುವಗಳಂತೆ ನೋಡುವ ಒಂದು ಪರಿಪಾಠವೇ ಬೆಳೆದು ಬಂದಿದೆ. ನವೋದಯದ ಆಶಯಗಳು ಈ ಇಬ್ಬರೂ ಕವಿಗಳಿಗೆ ವಸ್ತುವನ್ನೊದಗಿಸಿವೆ. ಇಬ್ಬರೂ ರವೀಂದ್ರನಾಥ ಠಾಕೂರರ ಹಾಗೂ ಮಹರ್ಷಿ ಅರವಿಂದರ ಗಾಢವಾದ ಪ್ರಭಾವಕ್ಕೆ ಒಳಗಾದವರು. ಭಾರತೀಯ ಸಂಸ್ಕೃತಿಯ ಮೂಲ ಆಧಾರಗಳಾದ ವೇದೋಪನಿಷತ್ತುಗಳಲ್ಲಿ ಇಬ್ಬರಿಗೂ ನಂಬಿಕೆಯಿತ್ತು. ಕುವೆಂಪು ಭೂಮದ ಆರಾಧಕರಾಗಿದ್ದರೆ, ಬೇಂದ್ರೆಯವರು ಉದ್ಭವದ ಪ್ರವಾದಿಗಳಾಗಿದ್ದರು. ವಿಶ್ವಮಾನವನ ಆದರ್ಶಗಳನ್ನು ಇಬ್ಬರಲ್ಲಿಯೂ ಕಾಣಬಹುದು…” ಹೀಗೆ ಆಮೂರರ ಗ್ರಹಿಕೆಗಳು ಸಿದ್ಧಾಂತಗಳ ತತ್ಕಾಲಿಕ ಚೌಕಟ್ಟುಗಳನ್ನು ಮೀರಿ ಸಂವೇದನೆಯ ಮೂಲಸ್ವರೂಪವನ್ನು ಗುರುತಿಸುವ ಬಗೆಯದು. ಅದು ವಿಭಜಿಸದೇ ಕಟ್ಟುವ ಆದರ್ಶವನ್ನು ಒಳಗೊಂಡದ್ದು. ಕುವೆಂಪು ಕೇವಲ ಕವಿಯಾಗಿರದೇ ಸಮುದಾಯದ ಐಕಾನ್ ಕೂಡ ಆಗಿರುವುದರಿಂದ ಈ ತೊಡಕು ರಾಜಕೀಯ ಸ್ವರೂಪ ಪಡೆಯುತ್ತದೆ. ತಮ್ಮ ವಿಮರ್ಶೆಯ ವಿನಯದ ಮೂಲಕವೇ ಇಂಥದನ್ನು ಆಮೂರರು ದಾಟುತ್ತಾರೆ.

ಅವರು ಬದುಕಿದ ಬಹುಭಾಷಿಕ ಪರಿಸರ ಅವರ ಸಂವೇದನೆಯನ್ನು ವಿಸ್ತರಿಸತು. ಫುಲ್ ಬ್ರೈಟ್ ಫೆಲೋಶಿಪ್ ಪಡೆದು ಅಮೆರಿಕೆಯ ಕೆಲಿಫೋರ್ನಿಯಾ ಹಾಗೂ ಯೇಲ್ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿದ ಆಮೂರರು ಬ್ರಿಟಿಷ್ ಕೌನ್ಸಿಲ್ ಸಹಾಯದಿಂದ ಇಂಗ್ಲೆಂಡಿನಲ್ಲೂ ಸಂಶೋಧನೆಯಲ್ಲಿ ತೊಡಗಿದ್ದರು. ಆ ಕಾರಣಕ್ಕಾಗಿ ಯೂರೋಪ್ ಹಾಗೂ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ಸಂಶೋಧನೆಗಳ ಸ್ವರೂಪವನ್ನು ತುಲನಾತ್ಮಕವಾಗಿ ನೋಡುವುದು ಅವರಿಗೆ ಸಾಧ್ಯವಾಯಿತು.

ಆಮೂರರ ಬರವಣಿಗೆಯ ಹರಹು ಎಂಥವರನ್ನೂ ಚಕಿತಗೊಳಿಸುತ್ತದೆ. ಅವರ ಶಿಸ್ತು, ಏಕಾಗ್ರತೆ, ತಪಸ್ಸಿನಂಥ ತಾಳ್ಮೆಗಳೇ ಇಂದು ನಮಗೆ ಬಹುಮೂಲ್ಯ ಆಕರ ಗ್ರಂಥಗಳನ್ನು ಕೊಟ್ಟಿವೆ. ಮಾದರಿಗಳಿಲ್ಲದ ಜಾಡಿನಲ್ಲಿ ಸ್ವಯಂ ಮಾದರಿಯಾಗಿ ನಿಂತಿದೆ. ಕುರ್ತಕೋಟಿಯವರ ಸೃಜನಶೀಲ ಮಾದರಿ ಹಾಗೂ ಆಮೂರರ ಅಕಾಡೆಮಿಕ್ ಶಿಸ್ತಿನ ಮಾದರಿಗಳೆರಡೂ ನಮಗೆ ಮುಖ್ಯವೇ. ಮಹಾಕವಿ ಮಿಲ್ಟನ್, ಕೃತಿಪರೀಕ್ಷೆ, ಭುವನದ ಭಾಗ್ಯ, ಕನ್ನಡ ಕಾದಂಬರಿಯ ಬೆಳವಣಿಗೆ, ಕನ್ನಡಕಥನ ಸಾಹಿತ್ಯ:ಕಾದಂಬರಿ, ಸಾತ್ವಿಕಪಥ, ವಿರಾಟ ಪುರುಷ, ಕಥನಶಾಸ್ತ್ರ, ಕಾದಂಬರಿ ಸ್ವರೂಪ, ಕೊರಳು-ಕೊಳಲು, ಬೇಂದ್ರೆಕಾವ್ಯದ ಪ್ರತಿಮಾಲೋಕ, ಒಮ್ಮುಖ, ಆತ್ಮಕಥನ ನೀರಮೇಲಣ ಗುಳ್ಳೆ.. ಹೀಗೆ ಪಟ್ಟಿ ಬೆಳೆಯುತ್ತದೆ. ಈ ಎಲ್ಲ ಕೃತಿಗಳು ಕನ್ನಡ ಸಾಹಿತ್ಯ ಪರಂಪರೆಯ ಅಭ್ಯಾಸಿಗಳಿಗೆ ಕೈಮರದಂತಿವೆ.

ಕೇಂದ್ರ ಸಾಹಿತ್ಯ ಅಕಾದೆಮಿಗಾಗಿ ಅವರು ಬರೆದ ಪುಸ್ತಕಗಳು, ಅವರ ಸಂಪಾದನಾ ಕೃತಿಗಳು ಕೂಡ ವೈವಿಧ್ಯಮಯವಾಗಿದೆ. ಕಥನಕುತೂಹಲಿಯಾದ ಅವರು ಸಂಪಾದಿಸಿದ ‘ಅವಳ ಕತೆಗಳು’ ತರಹದ ಸಂಪಾದನೆಯಲ್ಲಿ ಅವರ ಆಯ್ಕೆಯ ಸೂಕ್ಷ್ಮತೆ ವ್ಯಕ್ತವಾಗಿದೆ. ಅವರ ವಿಮರ್ಶೆಗೆ ವಾಗ್ವಾದಕ್ಕೆಆಹ್ವಾನಿಸುವ ಗುಣವಿದೆ. ಅದು ವಿಮರ್ಶೆಯನ್ನು ಜಡಗೊಳಿಸದೇ ಜೀವಂತವಾಗಿರಿಸುವ ಸಂಗತಿ.

ಅನಂತಮೂರ್ತಿಯವರು ಆಮೂರರ ಕಥನ ಸಾಹಿತ್ಯದ ಕುರಿತ ಅಧ್ಯನಪೂರ್ಣ ವಿಮರ್ಶೆಯನ್ನು ಕುರಿತು “ಡಾ. ಆಮೂರರದು ವಿಸ್ತಾರವಾದ ಪಾಂಡಿತ್ಯ. ಪ್ರಪಂಚದ ಅತ್ಯುತ್ತಮ ಕೃತಿಗಳನ್ನು ಓದಿ ಸಾರಮಾಡಿ ಬೆಳೆದ ಮನಸ್ಸೊಂದು ಇಲ್ಲಿ ಕನ್ನಡದ ಬಗ್ಗೆ ಕೆಲಸಮಾಡಿದೆ.”ಎನ್ನುತ್ತಾರೆ. ತಮ್ಮ ಕೊನೆಯ ದಿನಗಳಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಮರು ಓದಿನಲ್ಲಿ ಅವರು ತೊಡಗಿದ್ದರು. ಅವುಗಳೊಳಗೆ ಹಲವು ಸಂಕಥನಗಳನ್ನು ಅವರು ಗುರುತಿಸಿದ್ದರು. ಭಗವದ್ಗೀತೆಯ ಬಗೆಗೆ ಹುಟ್ಟಿಕೊಂಡ ವಿವಾದದ ಬಗೆಗೂ ಅವರು ವಿಚಲಿತರಾಗಿದ್ದರು. ಸಾಂಖ್ಯದಿಂದ ವೇದಾಂತದ ವರೆಗಿನ ಹಲವಾರು ದರ್ಶನಗಳನ್ನೊಳಗೊಂಡಿರುವ ಈ ಗ್ರಂಥದ ಸೆಲೆಕ್ಟಿವ್ ಓದಿನ ಅಪಾಯವನ್ನು ಅವರು ಬಲ್ಲವರಾಗಿದ್ದರು.

ಪಾಶ್ಚಾತ್ಯ ಜ್ಞಾನಶಾಖೆಗಳಿಂದ ನಮ್ಮ ಮಹಾನ್ ಗ್ರಂಥಗಳನ್ನು ಅರಿಯುವ ಅಪಾಯವನ್ನು ಹಾಗೂ ಅದರಿಂದ ನಾವು ಕಳೆದುಕೊಳ್ಳಬಹುದಾದ ಜ್ಞಾನವನ್ನು ಅವರು ಬಲ್ಲವರಾಗಿದ್ದರು. ಸ್ಯಾಫ್ರನ್, ಸೆಕ್ಯುಲರ್ ಎಂಬ ಲೇಬಲ್ಲುಗಳ ಆಚೆಗೆ ದೃಷ್ಟಿ ಹರಿಸುವ ಅಗತ್ಯವನ್ನು ಅವರು ತಮ್ಮ ಆತ್ಮಕಥನದಲ್ಲಿ ಪ್ರತಿಪಾದಿಸಿದ್ದಾರೆ. ವೈಯಕ್ತಿಕವಾಗಿ ಜಾತ್ಯಾತೀತರಾದ, ಶಿಷ್ಯವತ್ಸಲರಾದ ಆಮೂರರು ಅರ್ಥಪೂರ್ಣವಾದದ್ದನ್ನು ಎಲ್ಲೆಡೆಯಿಂದ ಗ್ರಹಿಸುವ ಧಾರಣಶಕ್ತಿಯುಳ್ಳವರು. ಅವರ ಆತ್ಮಚರಿತ್ರೆ ನೀರಮೇಲಣ ಗುಳ್ಳೆ, ಅವರ ವ್ಯಕ್ತಿತ್ವವನ್ನು ಅದರೆಲ್ಲ ಉದಾತ್ತತೆ ಹಾಗೂ ಮನುಷ್ಯ ಸಹಜ ಸಂಕೀರ್ಣತೆಗಳೊಟ್ಟಿಗೆ ಪ್ರಕಟಿಸಿದೆ. ತಮ್ಮ ಕೊನೆಗಾಲದವರೆಗೂ ಓದುಬರಹಗಳ ತಪವನ್ನು ಕಾಪಿಟ್ಟುಕೊಂಡ ಋಷಿಯೊಬ್ಬನಂತೆ ಅವರು ಭಾಸವಾಗಿದ್ದು ಸುಳ್ಳಲ್ಲ.

(ಪತ್ನಿ ಶ್ರೀಮತಿ ಶಾಂತಾ ಅವರೊಂದಿಗೆ ಡಾ. ಜಿ.ಎಸ್. ಆಮೂರರು…)

ಆಯ್ಕೆ ಮನುಷ್ಯನ ಚಾರಿತ್ರ್ಯವನ್ನು ನಿರ್ಮಿಸುತ್ತದೆ ಎಂದು ಅರಿಸ್ಟಾಟಲ್ ಹೇಳಿದ. ಆದರೆ ಎಷ್ಟೋ ಸಲ ನಮ್ಮ ಆಯ್ಕೆಗಳು ಒಂದು ದಾರಿಗೆ ಪ್ರಚೋದಿಸಿದಾಗ ಅದೃಷ್ಟ ಬೇರೆಯದೇ ದಾರಿಯನ್ನುತೆರೆದು ನಡೆಯಲು ಹಚ್ಚುವ ಸಂಭವವಿದೆಯೆಂದು ಆಮೂರರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಳ್ಳುತ್ತಾರೆ. ಈ ತರ್ಕವು ಸಾಮಾನ್ಯರಿಗೂ ಒಂದಿಲ್ಲೊಂದು ಸಲ ಅನುಭವಕ್ಕೆ ಬಂದಿರುತ್ತದೆ. ಅವರ ಬದುಕು ಅನಿರೀಕ್ಷಿತವಾಗಿ ಅವರನ್ನು ಹಲವು ಹುದ್ದೆಗಳಿಗೆ ಹಲವು ಊರುಗಳಿಗೆ ಕೊಂಡೊಯ್ದಿತು. ಅನೇಕ ಕಹಿ ಅನುಭವಗಳನ್ನೂ ಅವರ ಜೋಳಿಗೆಯಲ್ಲಿ ತುಂಬಿತು. ಇದನ್ನೆಲ್ಲ ಒಪ್ಪಿಕೊಂಡು ಪರಿಸ್ಥಿತಿಯೊಂದಿಗೆ ಸೆಣಸುತ್ತಲೇ ಅವರು ಹೆಜ್ಜೆ ಹಾಕಿದರು. ಅವರ ಕೌಟುಂಬಿಕ ಬದುಕನ್ನು ಸಹ್ಯವಾಗಿ ಮಾಡಿದ ಸಹಧರ್ಮಿಣಿ ಶಾಂತಾ ಅವರ ಪಾತ್ರವೂ ಇದರಲ್ಲಿ ಪ್ರಮುಖವಾದುದು. ಸಂಜೆಗಣ್ಣಿನ ಹಿನ್ನೋಟದಿಂದ ಬರೆದ ಅವರ ಆತ್ಮಕಥನ ‘ನೀರಮೇಲಣ ಗುಳ್ಳೆ’ ಇದನ್ನೆಲ್ಲ ಆಪ್ತವಾಗಿ ದಾಖಲಿಸಿದೆ.

ನಾಗರೀಕತೆಯ ಅಂಚನ್ನೂ ಕಾಣದ ಹಾನಗಲ್ ಸಮೀಪದ ಬೊಮ್ಮನಹಳ್ಳಿಯ ಬಾಲಕ ನಡೆದ ನಡೆ, ತಲುಪಿದ ಗಮ್ಯಗಳು ಅವರಿಗೇ ಅಸಂಗತವಾಗಿ ಕಾಣುತ್ತವೆ. ಮನುಷ್ಯನ ಜೀವನವನ್ನು ಮಹಾಭಾರತ ‘ಲೋಕಯಾತ್ರೆ’ ಎಂದು ವರ್ಣಿಸಿದೆ. ಒಂದೇ ಬದುಕಿನಲ್ಲಿ ನಾವು ಹಲವು ಲೋಕಗಳಲ್ಲಿ ಬದುಕುತ್ತಿರುತ್ತೇವೆ. ನಮ್ಮ ಪ್ರಜ್ಞೆಯನ್ನು ಸಂಘಟಿಸುವ ಅನೇಕ ಸ್ಮೃತಿಗಳು ಇಲ್ಲಿ ಬೆಸೆದಿರುತ್ತವೆ. ಆಮೂರರ ಭಾವಲೋಕವನ್ನು ಸಂಘಟಿಸಿದವರು ಸ್ತ್ರೀಯರೇ ಆಗಿರುವುದು ವಿಶೇಷ. “ಈ ಸಂಬಂಧರಕ್ತಸಂಬಂಧಗಳನ್ನು ದಾಟಿದ ಸಂಬಂಧ. ಈ ಭಾಗದಲ್ಲಿ ನನ್ನ ತಾಯಿ ಗಂಗಾಬಾಯಿ, ಪತ್ನಿ ಶಾಂತಾ ಹಾಗೂ ಎಲೋವೀಜ್ ಎಂಬ ಮೂವರು ಮಹಿಳೆಯರೊಡನೆ ಬೆಳೆದ ನನ್ನ ಸಂಬಂಧದ ಎಳೆಗಳನ್ನು ಬಿಡಿಸಲು ಯತ್ನಿಸಿದ್ದೇನೆ.” ಎನ್ನುವಲ್ಲಿ ಭಾವದ ನೆಲೆಗಳನ್ನು ಕಟ್ಟುತ್ತಿರುವ ಸ್ತ್ರೀಚೈತನ್ಯವನ್ನು ನೆನೆಯುವ ಬೇಂದ್ರೆಯವರ ಮಾತು ನೆನಪಾಗುತ್ತದೆ. ತಾಯಿಯ ಸಾವು ಹಾಗೂ ಪತ್ನಿಯ ಸಾವು ಅವರನ್ನು ಗಾಢವಾಗಿ ಕಲಕಿದ ಎರಡು ಸಂಗತಿಗಳು. ಕಾಲರಾದಿಂದ ಸಾವಿನಂಚಿಗೆ ತಲುಪಿದ್ದ ತಾಯಿ ಮಗನನ್ನುಕಂಡಕೂಡಲೇ ಮಾತಾಡತೊಡಗಿದ್ದು ಹಾಗೂ ಅವನನ್ನು ಕಂಡ ನಂತರವೇ ಕಣ್ಮುಚ್ಚಿದ್ದು ಸಂಬಂಧಗಳ ಅವ್ಯಕ್ತ ಶಕ್ತಿಯನ್ನು ಅವರಿಗೆ ಅನುಭವಕ್ಕೆ ಬರುವಂತೆ ಮಾಡುತ್ತದೆ.

ಹೇಗೋ ಸುದ್ದಿ ತಿಳಿದು ಮನೆಗೋಡಿ
ಬಂದಾಗ ನೀನಿನ್ನೂ ಜೀವ ಹಿಡಿದಿದ್ದೆ
ನನಗಾಗಿ ಕೇವಲ ನನಗಾಗಿ. ತರ್ಕ
ವ್ಯವಹಾರಗಳಾಚೆಗೂ ಒಂದು ವಿಶಾಲ
ವಿಶ್ವವಿದೆ, ಪ್ರೀತಿಯೇ ಅದರ ನೀತಿ
ನೀ ನೀಡಿದ ತಿಳಿವಿದು ನನ್ನ ಬಾಳಿಗೆ ಬೆಳಕು.

ತಾಯಿ ಪತ್ನಿಯರ ಕುರಿತು ಮಾತಾಡುವಾಗಲೆಲ್ಲ ಆಮೂರರ ನಿಜ ವ್ಯಕ್ತಿತ್ವ ಹೊಳೆಯುತ್ತದೆ ಎನಿಸುತ್ತದೆ. ಕಠಿಣ ಶಿಸ್ತಿನ ಮನುಷ್ಯನೊಳಗೆ ಮಾತೃತ್ವದ ಸೆಲೆಯೊಂದು ಛಿಲ್ಲೆನ್ನುತ್ತದೆ. ಅದಕ್ಕಾಗಿಯೇ ಅವರ ಅಭಿವ್ಯಕ್ತಿ ಕಾವ್ಯಾತ್ಮಕವಾಗುತ್ತದೆ. ಸದಾ ಅವರ ಬದುಕಿನ ಬೆನ್ನೆಲುಬಾಗಿ ನಿಂತ ಪತ್ನಿಯ ಬಗೆಗೂ ಇದೇ ಆಪ್ತ ಸಖಭಾವ ಅವರದು. ಅವರು ನಿಜ ಅರ್ಥದಲ್ಲಿ ಜೀವಸಖಿ. ವಿಧಿತಂದ ವಧು. ಅಷ್ಟು ಸುಂದರಳಾದ, ಸುಶಿಕ್ಷಿತಳಾದ, ಪ್ರತಿಷ್ಟಿತ ಮನೆತನದ ಅವಳು ತನ್ನನ್ನು ಹೇಗೆ ಒಪ್ಪಿದಳು ಎಂಬುದೇ ಅವರಿಗೆ ಮೊದಲು ಸೋಜಿಗವೆನಿಸಿತ್ತು. ಅವರು ಗುಳೆ ಹೊರಟೆಲ್ಲ ಊರುಗಳಲ್ಲೂ ತನ್ನ ಧೈರ್ಯ, ಸಹನೆಗಳಿಂದ ಬದುಕನ್ನು ಕಟ್ಟುವ ಆಕೆಯ ಕಲೆ ಅವರಿಗೆ ಮತ್ತಷ್ಟು ಸೋಜಿಗವೆನಿಸುತ್ತದೆ. ತನ್ನೆಲ್ಲ ಹಿತಾಸಕ್ತಿಗಳನ್ನೇ ಮರೆತು ಪತಿಯ ಏಳಿಗೆ ಸಂತೋಷಗಳಲ್ಲೇ ಸುಖ ಕಾಣುತ್ತಹೋದ ಬಗೆ ಅವರಿಗೆ ಪತ್ನಿಯ ಕುರಿತು ಆಳವಾದ ಗೌರವವನ್ನು ಮೂಡಿಸಿತು. ಮಕ್ಕಳು ಮೊಮ್ಮಕ್ಕಳನ್ನು ಕಂಡ ಈ ಸುದೀರ್ಘ ದಾಂಪತ್ಯದಲ್ಲಿ ಆಕೆ ತೃಪ್ತಳು. ಸಂಸಾರ ಮಗ್ನತೆ ಅವಳಿಗೆಂದೂ ಲೋಪವಾಗಿ ಕಾಣಿಸದಿರುವುದನ್ನು ಆಮೂರರು ಗುರುತಿಸುತ್ತಾರೆ. ಪತ್ನಿ ಶಾಂತಾ ಅವರಿಗೆ ಎಂಭತ್ತು ತುಂಬಿದಾಗ ಆಮೂರರು ಹೀಗೆ ಬರೆಯುತ್ತಾರೆ:

ಅವಳೊಂದು ಸಮುದ್ರವೆನ್ನಲೇ
ಅದರ ಆರ್ಭಟ ಆಕ್ರಮಣ ಅವಳದಲ್ಲ
ಅಥವಾ ಒಂದು ನದಿಯೆಂದು ಕರೆಯಲೇ
ಭೂಮಿಯಂತೆ ಸ್ಥಿರೆ ಅವಳು ಚಂಚಲೆಯಲ್ಲ
ಬಳ್ಳಿಯಂತೂ ಅಲ್ಲವೇಅಲ್ಲ
ನಿರಾಧಾರೆ ಅವಳು ಆಶ್ರಯದಾತೆ…

ಹೀಗೆ ಕವಿತೆ ಸಾಗುತ್ತದೆ. ಕವಿತೆ ಓದದ ಅವಳೇ ಒಂದು ಕವಿತೆ. ಐವತ್ತು ವರ್ಷಗಳ ಓದಿನಲ್ಲಿ ಅದರ ವಾಚ್ಯಾರ್ಥ ಮಾತ್ರ ತನಗೆ ದಕ್ಕಿದೆ. ಎನ್ನುವಲ್ಲಿ ತನ್ನನ್ನೂ ಮೀರಿ ವಿಕಸಿಸಿದ ಅವಳ ರೀತಿಯ ಬಗ್ಗೆ ಕೃತಜ್ಞತೆಯಿದೆ. ಅಂಥವಳು ಸತ್ತಾಗ ಅವಳ ಉರಿವ ಚಿತೆಯನ್ನು ನೋಡಿದ ಮೇಲೂ ಅವಳ ಅಸ್ತಿತ್ವ ಬದುಕಲ್ಲಿ ಗಾಢವಾಗಿ ಉಳಿಯುವ ಬಗ್ಗೆ ಅವರು ಅಂತರ್ಮುಖಿಯಾಗಿ ಚಿಂತಿಸುತ್ತಾರೆ.

ನಿನಗಿಲ್ಲ ಇನ್ನು ಉರಿಬಿಸಿಲ ಶಾಖದ ತಾಪ
ಚಳಿಗಾಳಿ ಮಳೆ ತಟ್ಟಲಾರವು ನಿನ್ನನೀಗ
ಮರ್ತ್ಯದ ಋಣ ತೀರಿಸಿರುವೆ ಅಮರಳು
ನೀನು, ಮುಕ್ತಳು, ರಿಕ್ತಳು, ವಿರಕ್ತಳು

ಈ ಒಂಟಿದನಿಯ ಹಾಡಿಗಂಟಿದ ಮಾರ್ದವತೆಯ ಪಸೆ ನಮ್ಮನ್ನೂ ಆವರಿಸಿಕೊಳ್ಳುವಂತೆ ತೊಂಭತ್ತರ ಆಮೂರರು ಬರೆಯುತ್ತಾರೆ. ಶೇಕ್ಸಪಿಯರನ ಸಿಂಬೆಲೀನ್ ನಾಟಕದಲ್ಲಿ ಬರುವ ಶೋಕಗೀತೆಯ ಛಾಯೆ ಇದಕ್ಕಿದೆಯೆಂದು ಅವರೇ ಹೇಳಿಕೊಂಡಿದ್ದಾರೆ. ಇಂದು ಅವರು ಮರ್ತ್ಯದ ಋಣತೀರಿಸಿ ನಮ್ಮನ್ನು ಹಾಗೆಯೇ ಅಗಲಿಹೋಗಿದ್ದಾರೆ. ಆಮೂರರು ಅಮರರಾಗಿದ್ದಾರೆ.