ಒಮ್ಮೊಮ್ಮೆ ಕನಸ್ಸಿನಲ್ಲಿ ಬೆಚ್ಚಿಬೀಳ್ತಾ ಇದ್ದ. ನಾರಾಣಿ ಅತ್ತಂತೆ ಕನಸ್ಸು ಬೀಳ್ತಾಇತ್ತು ತಾನು ಅತ್ತಂತಾಗುತ್ತಿತ್ತು. ಲಕ್ಷ್ಮಕ್ಕ ಬಂದು ಕತ್ತಿಸಿಕಿದಂತೆ ಕೆನ್ನೆಗೆ ಹೊಡೆದಂತೆ ಭಾಸವಾಗ್ತಾ ಇತ್ತು. ಅವಾಗೆಲ್ಲಾ ವಿಪರೀತ ಖಿನ್ನನಾಗ್ತಾ ಇದ್ದ. ಮಾದನನ್ನು ನೆನೆದಾಗಲೆಲ್ಲಾ ಚಿಕ್ಕಮಕ್ಕಳಂತೆ ಅತ್ತುಬಿಡುತ್ತಿದ್ದ. ಕರ್ಮಗಳೆಲ್ಲಾ ಹೀಗೆ ಕನಸುಗಳಲ್ಲಿ ಬಂದು ಕಾಡ್ತಾ ಇರ್ತವೆ ನಮ್ಮ ಪಾಪಕರ್ಮಗಳು ಕನಸುಗಳಲ್ಲಿ ಜೀವಂತವಾಗಿರುತ್ತವೆ ಅದಕ್ಕಾಗಿಯೇ. ಅವು ನಮ್ಮನ್ನು ಕಾಡುತ್ತವೆ ಕಾಡಿಸುತ್ತವೆ ನಮ್ಮನ್ನು ಶುಭ್ರಗೊಳಿಸುತ್ತವೆ. ಅದಕ್ಕಾಗಿ ನಾವೇಕೆ ಬೆಚ್ಚಬೇಕು. ಅಚ್ಚಹಸಿರಾಗಬೇಕು ಮನಸು ತಿಳಿಯಾಗಬೇಕು. ಕನಸು ಬೀಳುತ್ತಲೆ ಇರಬೇಕು ಬದುಕಿನ ಕನಸುಗಳನ್ನು ಕಾಣುತ್ತಲೆ ಇರಬೇಕು. ಮುಕ್ತಿಗೆ ಪ್ರಾಯಶ್ಚಿತ್ತವೊಂದೆ ದಾರಿ.
ಮಾರುತಿ ಗೋಪಿಕುಂಟೆ ಬರೆದ ಈ ಭಾನುವಾರದ ಕತೆ “ಭಾವ ಬಿತ್ತಿದ ಬೀಜ” ನಿಮ್ಮ ಓದಿಗೆ
‘ಹೆಣ’ ಆ ಹೆಸರೆ ಇಡಿ ಊರನ್ನೆಲ್ಲಾ ಬೆಚ್ಚಿ ಬೀಳಿಸಿತ್ತು. ಏನು ಕೆಟ್ಟಾಪತ್ತು ಬಂದಿದೆಯಪ್ಪಾ ಊರಿಗೆ ಎಂದು ಊರಿಗೆ ಊರೆ ದಡಬಡಿಸಿ ಎದ್ದು ಮಖ್ಖೆ ನೀರು ಹಾಕ್ಯಳ್ಳದೆ ಊರ ಜಗತಿಕಟ್ಟೆಗೆ ಸೇರಿದ್ದರು. ಗುಂಪಿನಲ್ಲಿ ಮೈ ಕೈ ತುಂಬಿಕೊಂಡು ಮಟ್ಟಸವಾಗಿ ಕಾಣುತ್ತಿದ್ದ ಮಾದ ಕೈಬಾಯಿ ಒಂದೆ ಸಮನೆ ಆಡಿಸುತ್ತ ಬಡಬಡಿಸುತ್ತಿದ್ದ ಅಲ್ಲಿ… ಆ ಹೆಣ ಯಪ್ಪಾ ನೋಡ್ಬೇಕು…. ಅನ್ನುತ್ತಿದ್ದ ಏದುಸಿರು ಬಿಡುತ್ತಿದ್ದ ಗುಂಪಿನಲ್ಲಿದ್ದವರು “ಏನೋ ಮಾದ ಏನಾಯ್ತು ಹೇಳೋದಾದ್ರು ಸ್ಪಷ್ಟವಾಗಿ ಹೇಳಿ ಸಾಯಿ” ಎಂದದ್ದು ಕೇಳಿಸದೆ ಮತ್ತದೆ ವಾಕ್ಯಗಳು ಪುನರಾವರ್ತಿತವಾದವು. ಅಲ್ಲಿ ನೆರೆದಿದ್ದವರ್ಯಾರಿಗೂ ಅದು ಏನೆಂದು ಅರ್ಥವಾಗದೆ ಇದ್ದಾಗ ಗುಂಪಿನಲ್ಲಿದ್ದ ಕೆಂಪ “ಲೇ.. ಮಾದ ಎಲ್ಲೊ ಯಾವ ಹೆಣ ಏನ್ ನೋಡ್ದೊ, ಕನಸೇನರಾ ಬಿತ್ತೇನೊ ಬಡ್ಡಿಮಗನೆ… ಸರಿಯಾಗಿ ಬೊಗಳು” ಎಂದಾಗ ಗಾಬರಿಯಾದವನಂತೆ ಅದೆ ಅದೆ ಆ ಊರಿಂದ್ಲ ಬಾವ್ಯಾಗೆ ಹೆಣ ಕಂಡಂಗಾಯ್ತು ನನ್ಗೆ ಭಯ್ವಾಗಿ ಓಡ್ಬಂದೆ ಅಂದಾಗ ನಾಲ್ಕೈದು ಜನ ತಡಿ ನಾವ್ ನೋಡ್ತೀವಿ ಅಂದು ಹೋದ್ರು.
ಮಾದ ದಿಕ್ಕು ದೆಸೆಯಿಲ್ಲದೆ ಇದ್ದ ಊರನ್ನು ಬಿಟ್ಟು ಬಂದವನು ಇದೆ ಊರಲ್ಲಿ ಬದುಕನ್ನು ಕಂಡುಕೊಂಡಿದ್ದ ಬದ್ಕು ಮಾಡೋದ್ರಲ್ಲಿ ಆತ ನಿಸ್ಸೀಮ ಆತನ ಚುರುಕುತನ ಉಳಿದ ಕೆಲಸಗಾರರಿಗೆ ಅಚ್ಚರಿ ಮೂಡುವಂತಿತ್ತು. ಆತನ ಚಾಣಾಕ್ಷತನಕ್ಕೆ ಮರುಳಾಗಿ ಸ್ವಾರೇಗೌಡ ಕೆಲಸಕ್ಕೊಂದು ಆಳು ಸಿಕ್ಕಿತಲ್ಲಾ ಎಂದು ತನ್ನ ಕಣದ ಮೂಲೆಯಲ್ಲೊಂದಿಷ್ಟು ಜಾಗ ಕೊಟ್ಟು ತನ್ನದೆ ತೆಂಗಿನ ತೋಟದ ಗರಿಗಳಿಂದ ವಾಸಕ್ಕಿಷ್ಟು ಯೋಗ್ಯವಾದ ಜೋಪಡಿ ಮಾಡ್ಕೊಟ್ಟ ಪ್ರತಿದಿನ ತೋಟದ ಕೆಲಸ ಮಾಡೋದು ಸಂಜೆ ಮೈಚೆಲ್ಲಿ ಮಲಗೋದು ಊಟ್ವೆಲ್ಲಾ ಗೌಡ್ರ ಮನೆಯಲ್ಲೆ ಮುಗೀತಿತ್ತು. ಇದ್ಕಿಂತ ಸುಖ ಎಂಥದಿದ್ದಾತು ಅಂದ್ಕೊಳ್ತಿದ್ದ. ಎಲುಬಿನ ಗೂಡಿನಂತಿದ್ದವನು ಒಂದು ಸಣ್ಣ ಗೂಳಿಯಂತೆ ಮೈ ತುಂಬ್ಕೊಂಡಿದ್ದ. ಅವನ ನಿತ್ಯದ ಕೆಲ್ಸವೇನು ಕಮ್ಮಿ ಇರ್ಲಿಲ್ಲ. ಬೆಳಿಗ್ಗೆ ಐದ್ಗಂಟೆ ಏಳ್ಬೇಕಿತ್ತು. ನೀರ್ಕಡಿಕೆ ಹೋಗಿ ಬಂದು ಗೌಡ್ರು ಮನೇಲಿ ಕಾಫಿ ಕುಡ್ದು ಗೌಡ್ರ ಎಮ್ಮೆಗಳಿಗೆ ಹುಲ್ಲು ತರ್ಬೇಕು. ಅವುಗಳ ಗಂಜಲ ಬಾಸಿ ಕೊಟ್ಟಿಗೆ ಸ್ವಚ್ಛ ಮಾಡ್ಬೇಕಿತ್ತು. ತಂದಿದ್ದ ಹುಲ್ಲನ್ನೆಲ್ಲ ಅವುಗಳ ಮೇವ್ಗೆ ಹಾಕಿ ಕೈಕಾಲು ಮಖ ತೊಳ್ದು ಉಂಡು ಮತ್ತೆ ಅಡ್ಕೆ ತೋಟದ್ಕೆಲಸಕ್ಕೆ ಹೋಗ್ಬೇಕಿತ್ತು. ಇದ್ಯಾವುದನ್ನು ಬೇಸ್ರ ಪಡ್ಕೊಳ್ಳದೆ ಮಾಡ್ತಾಇದ್ದ. ನಾಲ್ಕೈದು ವರ್ಷಗಳಲ್ಲಿ ಊರಿನವನೆ ಆಗಿಬಿಟ್ಟ ತೋಟದಲ್ಲಿ ಬಹಳ ಚುರುಕಿನಿಂದ ಕೆಲಸ ಮಾಡುತ್ತಿದ್ದ ಇವನನ್ನು ಬಂದ ಹೆಣ್ಣಾಳುಗಳು ಬೆರಗಿನಿಂದ್ಲೆ ನೋಡ್ತಿದ್ರು. ಆಗಾಗ್ಗೆ ಅವನು ಹೇಳುವ ಹಾಸ್ಯ ಚಟಾಕಿಗಳು ಕೆಲವರ ಮನಸ್ಸನ್ನು ಕದ್ದಿದ್ದವು. ಅದೆ ಊರಿನ ಹಟ್ಟಿಯ ಓಬಣ್ಣನ ಮಗಳು ಕೆಂಪಿಯು ಇವನ ಮಾತ್ಗೆ ತುಸು ಹೆಚ್ಚೆ ನಗುತ್ತಿದ್ಲು. ‘ಯಾವ ಹೂವು ಯಾರ ಮುಡಿಗೊ’ ಎಂಬ ಸಿನಿಮಾ ಗೀತೆಯನ್ನು ಬಹುಚಂದವಾಗಿಯೆ ಆತ ಹಾಡುತ್ತಿದ್ದ. ಭಗವಂತ ಈ ಹೂವನ್ನು ನನ್ನ ಮಡ್ಲಿಗೆ ಹಾಕಪ್ಪ ಅಮ್ತ ಮನಿಸ್ನಾಗೆ ಅಂದ್ಕಮ್ತಿದ್ದ. ಅವಳನ್ನು ಮುಟ್ಟುವ ಸಾಹಸಕ್ಕೆ ಹೋಗಿರ್ಲಿಲ್ಲ. ಇದು ಹೇಗೊ ಗೌಡ್ರು ಕಿವಿಗೂ ಬಿತ್ತು. ಓಬಣ್ಣನನ್ನು ಕರ್ಸಿ ಕೇಳಿದ್ದಾಯಿತು. ಊರು ಉದ್ಮಾನ ಗೊತ್ತಿಲ್ದನಿಗೆ ಯಂಗೊಡ್ಲಿ ಸ್ವಾಮೇರ ಅಂದಾಗ ಗುಣ ನಡತೆಯಿಂದ ವ್ಯಕ್ತಿ ಗುರ್ತಿಸ್ಬೇಕೆ ಹೊರ್ತು ಊರು ಉದ್ಮಾನದಿಂದಲ್ಲ ಗೊತ್ತು ಗುರಿ ಊರು ಉದ್ಮಾನ ಗೊತ್ತಿರವೆ ದಾರಿ ತಪ್ಪಿವೆ ಅಮ್ತ ದೊಡ್ಡ ಪಾಠಾನೆ ಮಾಡಿದ ಗೌಡ್ರು ಏನ್ ಕಮ್ಮಿಯಾಗೈತಿ ನಮ್ಮ ಮಾದನಿಗೆ ಅಂದಿದ್ರು. ಮರುಮಾತಾಡ್ದೆ ಏನೊ ದೊಡ್ಡೋರು ಹೇಳ್ದಂಗೆ ಗೌಡ್ರೆ ಅಂದು ಸುಮ್ಮನಾಗಿದ್ದ ತಿಂಗಳೊಪ್ಪತ್ತಿನಲ್ಲಿಯೆ ಮದ್ವೆ ನಡೆದು ಮಾದ ಕುಟುಂಬಸ್ಥನಾಗಿದ್ದ. ಆದರೆ ತನ್ನ ಹಿಂದಿನ ಬದ್ಕನ್ನು ನೆನೆದಾಗಲೆಲ್ಲಾ ಇಂಥದೊಂದು ಬದ್ಕು ನನಗು ಸಿಕ್ಕೈತ್ತಲ್ಲ ಅಮ್ತ ಖುಷಿ ಪಡ್ತಿದ್ದ. ಹುಟ್ಸಿದ್ದೇವ್ರು ಹುಲ್ಲು ಮೇಯ್ಸೊದಿಲ್ಲ ಅನ್ನೊ ಮಾತು ಯಾರ್ಪಾಲಿಗೆ ಸುಳ್ಳಾಗಿತ್ತೊ ಇವನ ಪಾಲ್ಗೆ ನಿಜ್ವಾಗಿತ್ತು. ಮೂರ್ಹೊತ್ತು ಗೌಡ್ರುಮನೆ ಮುದ್ದೆ ಹೊಟ್ಟೆ ತುಂಬ್ತಿತ್ತು. ಆದ್ರೆ ತನ್ನ ಹುಟ್ಟಿನ ಬಗ್ಗೆ ನೆನ್ದಾಗೆಲ್ಲಾ ಮಖ ಸಣ್ಗಾಗ್ತಿತ್ತು. ಆಕಾಶ ನೋಡ್ತಾ ಕುಂತ್ಬಿಡ್ತಿದ್ದ. ತಾಯಿ ನೆನಪಾಗ್ತಿದ್ಳು.
ತಾಯಿ ಲಕ್ಷ್ಮಕ್ಕ ಹೆಸರಿಗಷ್ಟೆ ಲಕ್ಷ್ಮಿ; ಎಂದೂ ನೂರರ ನೋಟನ್ನು ನೋಡ್ಲಿಲ್ಲ. ಜೀವನದುದ್ದಕ್ಕೂ ಕೂಲಿ ಮಾಡೀನೆ ಬದುಕಿದ್ಲು. ಬೆಳಿಗ್ಗೆಯಿಂದ ಸಂಜೆಯವರೆಗೂ ಒಂದೆ ಸಮನೆ ಕೇಮೆ ಮಾಡಿದ್ರು ಕೂಲಿ ಸಿಕ್ತಿದ್ದು ಐವತ್ತ್ರೂಪಾಯಿಯಷ್ಟೆ. ಅದರಲ್ಲೆ ಇಡಿ ಸಂಸಾರ ನಡ್ಸ್ಬೇಕಾಗಿತ್ತು. ನೆಪಕಷ್ಟೆ ಗಂಡ ನಾರಾಣಿ ಮೂರ್ಹೊತ್ತು ಹೆಂಡದಂಗಡಿಯಲ್ಲಿಯೆ ಅವನ ವಾಸ್ತವ್ಯ ಎಂದೊ ವಾರಕ್ಕೊಮ್ಮೆ ಕೂಲಿ ಹೋಗ್ತಿದ್ದ ಅದು ಹೆಂಡದಂಗಡೀಗೆ ಸರಿಹೋಗ್ತಿತ್ತು. ಆಗಾಗ ಮೊಲ್ವೊ ಉರ್ತೆನೊ ಕೌಜನ್ನ ಹಿಡ್ಕೊಂಡು ಬರ್ತಿದ್ದ. ಅದ್ಕೆ ಒಂದೊಂದ್ಸಾರಿ ಉಪ್ಪುಕಾರವು ಇರ್ತಿರ್ಲಿಲ್ಲ. ಅದ್ಕೆ ಜಗ್ಳಾ ಮಾಡ್ತಿದ್ದ. “ಮೀಸೆ ಹೊತ್ತ ಗಂಡ್ಸು ಮನ್ಯಾಗ್ ಬೇಕಾಗಿದ್ನೆಲ್ಲ ತಂದುಕೊಟ್ರೆ ನಾನೇನ್ ಮಾಡಿಕ್ಕಲ್ಲ ಅಂತೀನೆ… ಪುಗ್ಸಟ್ಟೆ ಸಿಕ್ತೈತೆ ಅಮ್ತ ದಿನ್ನೆಗಿರೊ ಪ್ರಾಣಿಪಕ್ಷಿನೆಲ್ಲಾ ಹಿಡ್ಕಂಡ್ಬದ್ರೆ ನಾನೇನ್ ರಕ್ತ ಬಸ್ದು ಬೇಯ್ಸ್ಲ! ಸ್ವಲ್ಪನಾದ್ರು ಮಾನಮರ್ವಾದೆ ಇರ್ಬೇಕು” ಅಂದಾಗಲೆಲ್ಲಾ “ಬೋಸುಡಿ ನನ್ಗೆ ಎದ್ರು ಮಾತಾಡ್ತೀಯಾ ಸಿಗುದ್ ತೋರ್ಣ ಕಟ್ಬೀಡ್ತೀನಿ” ಅಮ್ತಿದ್ದ. “ಹೂಂ ಕಟ್ತೀಯಾ ಕಟ್ತೀಯಾ… ಮೊದ್ಲು ನನ್ನ ಹೊಟ್ಯಾಗೊಂದು ಗರ್ಭ ಕಟ್ಟು; ಆಮೇಲೆ ನಂಬ್ತೀನಿ ನಿನ್ನ ಗಂಡಸ್ತಾನ್ವ” ಅಂದಾಗ ಉರ್ಸೂಳೆ ನನ್ನ ಬುಡ್ಕೆ ಬತ್ತೀಯಾ ಎಂದು ಜುಟ್ಟಿಡ್ದು ಬೆನ್ನಿಗೆ ದಬದಬ ಗುದ್ದಿದಾಗ್ಲೆ ಇಬ್ಬರು ಜಗ್ಳ ಮುಗೀತಾ ಇತ್ತು. ಇರೋ ನಾಲ್ಕೈದು ಕೂದ್ಲುನ್ನೆ ಸುತ್ಸುತ್ತಿ ಕಟ್ತಾ ಮೂಗ್ನಿಂದ ಬರೊ ಸಿಮ್ಲಾ ಹೊರ್ಸಿಕೊಳ್ತಾ ಊರಾಡಿ ಅಲ್ಲಿಷ್ಟು ಇಲ್ಲಿಷ್ಟು ಹೊಂಚ್ಕೊಂಡು ಬಂದು ಸಾರ್ ಮಾಡಿ ಇಕ್ತಿದ್ಲು. ಘಮಘಮ ವಾಸ್ನೆ ಮೂಗ್ಗೆ ಅಡ್ರಿದ್ಮೇಲೆ ಇನ್ನೊಂದಿಷ್ಟು ಹೆಂಡ ಇಳ್ಸಿ ಘಡದ್ದಾಗಿ ತಿಂದು ಮಲ್ಗುತ್ತಿದ್ದ.
ಇಷ್ಟೆಲ್ಲಾ ರಾಮಾಯಣ ಆದ್ರು ರಾತ್ರಿಗೆ ಇಬ್ರು ಗಟ್ಟಿಯಾಗೆ ತಬ್ಕೊಂಡೆ ಮಲಗ್ತಿದ್ರು. ಇಬ್ಬರ ಉಸಿರು ದೇಹದ ಮಿಲನಕ್ಕೆ ಹಾಸಿದ ಚಾಪೆ ನೆಂದು ತೊಪ್ಪೆಯಾಗ್ತಿತ್ತು. ಪ್ರತಿಬಾರಿ ಹೀಗಾದಾಗಲೆಲ್ಲಾ ಲಕ್ಷ್ಮಕ್ಕನ ಮನದ ಮೂಲೆಯಲ್ಲೊಂದು ಚಿಗುರಿನ ಕನಸು ಗರಿಗೆದರುತ್ತಿತ್ತು. ಅದು ಸುಳ್ಳಾದಾಗಲೆಲ್ಲಾ ಲಕ್ಷ್ಮಕ್ಕ ವ್ಯಗ್ರಳಾಗ್ತಾ ಇದ್ಲು. ಮೌನಕ್ಕೆ ಶರಣಾಗ್ತಾ ಇದ್ಲು. ನಾರಾಣಿ ಹೆಂಡದಂಗಡಿಗೆ ಶರಣಾಗ್ತಾ ಇದ್ದ.
ಮದ್ವೆಗೆ ಮುಂಚೇನು ಲಕ್ಷ್ಮಕ್ಕ ಬಡತನವಿದ್ದರೂ ಬೊಲ್ ಚೆಂದಾಗೆ ಇದ್ಲು. ಮೈಕೈ ತುಂಬ್ಕೊಂಡು ಅವ್ಳು ಓಡಾಡ್ತಾ ಇದ್ರೆ ಆ ಕೇರಿಯವರೆಲ್ಲಾ ಅವ್ಳ್ನೆ ನೋಡುವಷ್ಟು ಸುಂದರಿ. ಅವ್ರ ಸೋದ್ರಮಾವ ಮಾರ ಅವಾಗವಾಗ ಮನೇಗೆ ಬತ್ತಾಇದ್ದ ಇವಳ್ನ ನೋಡ್ದಾಗೆಲ್ಲಾ ಮನಸ್ನ್ಯಾಗಿ ಮಂಡ್ಗೆ ತಿನ್ತಾಇದ್ದ. ಲಕ್ಷ್ಮಕ್ಕನ ತಂದೇನು ಇವ್ನು ಸೇರಿ ಕುರಿ ವ್ಯಾಪಾರ ಮಾಡ್ತಾಇದ್ರು. ಆತ ಮನೇಗೆ ಬಂದಾಗೆಲ್ಲಾ ಅವರ್ಗೆ ನೀರು ನಿಡಿ ಕೊಡೋದು ಇವಳೆ ಆಗಿದ್ಲು. ಮಾರಂದು ಮದ್ವೆ ಆಗಿರ್ಲಿಲ್ಲ. ಆದ್ರೆ ಸ್ವಲ್ಪ ವಯಸ್ಸಾಗಿತ್ತು. ಮದ್ವೆ ವಿಚಾರ ಬಂದಾಗೆಲ್ಲಾ ಲಕ್ಷ್ಮಕ್ಕನ ತಂದೆ ಇರೋಳು ಒಬ್ಳು, ಯಾರ್ಗಾದ್ರು ಒಳ್ಳೇವರ್ಗೆ ಕೊಟ್ಟು ಮದ್ವೆ ಮಾಡ್ಬೇಕು ಅನ್ತಿದ್ದ ನನಗೆ ಕೊಡ್ರಿ ಅಮ್ತ ಕೇಳೊ ಧೈರ್ಯ ಮಾರ ಮಾಡ್ಲೆ ಇಲ್ಲ. ಹೀಗಿರ್ಬೇಕಾದ್ರೆ ಪಕ್ಕದ ಊರಿನ ನೆಂಟಸ್ತಿಕೆಯಾಗಿ ನಾರಾಣಿ ಸಿಕ್ಕಿದ್ದ. ಅವನ ರೂಪ ನಡತೆ ಬಗ್ಗೆ ಎಲ್ಲೂ ಸರ್ಯಾಗಿ ವಿಚಾರುಸ್ದೆ ತನಗೆ ಇದ್ದ ಗೂರ್ಲು ಕೆಮ್ಮು ಉಸಿರಾಟದ ತೊಂದ್ರೆಯಿಂದ ನಾನೆಲ್ಲಿ ಮಗಳ್ನ ಮದ್ವೆ ಮಾಡ್ದೆ ಸಾಯ್ತೀನೊ ಅಮ್ತ ತರಾತುರಿಯಲ್ಲಿ ಲಕ್ಷ್ಮಕ್ಕನ ತಂದೆ ಮದ್ವೆ ಮಾಡ್ದ. ಯಾವ ಮಾತಾಡದೆ ನಾರಾಣಿಯ ಮನೆ ಮತ್ತು ಮನಸ್ಸನ್ನು ತುಂಬಿದ್ದಳು ಲಕ್ಷ್ಮಕ್ಕ.
ಮದ್ವೆಯಾಗಿ ತಿಂಗಳೊಪ್ಪತ್ತಿನಲ್ಲಿಯೆ ತಂದೆ ತೀರಿಕೊಂಡಿದ್ದ. ಆತನ ಕೊರಗಿನಲ್ಲಿಯೆ ಆಕೆಯ ತಾಯಿಯು ಸಾವನ್ನಪ್ಪಿದ್ದಳು. ಲಕ್ಷ್ಮಕ್ಕನಿಗೆ ಆಸರೆ ಇಲ್ಲದಾಯಿತು. ಆದ್ರೆ ಬದುಕ್ಬೇಕು ಅನ್ನೋ ಛಲ ಮಾತ್ರ ಅವಳನ್ನು ಕಾಡುತ್ತಿತ್ತು. ಮದ್ವೆಯಾದಮೇಲೆ ನಾರಾಣಿಯ ನಾನಾ ರೂಪಗಳು ಬೆಳಕಿಗೆ ಬಂದರೂ ಕೂಲಿ ಮಾಡಿಯೇ ಬದುಕನ್ನು ನಡೆಸುತ್ತಿದ್ದಳು. ಮಾರ ಒಳಗೊಳಗೆ ಕುದ್ದು ಹೋಗಿದ್ದ ಅವಕಾಶಕ್ಕಾಗಿ ಕಾಯುತ್ತಿದ್ದ.
ಆಗಾಗ ವ್ಯಾಪಾರದ ನೆಪವಿಟ್ಟುಕೊಂಡು ಲಕ್ಷ್ಮಕ್ಕನ ಊರಿಗೆ ಬರುತ್ತಿದ್ದ ಸಂಬಂಧದ ಕಕ್ಕುಲಾತಿಯಿಂದ ಅವಳ ಮನೆಗೂ ಬರುತ್ತಿದ್ದ. ಆದ್ರೆ ಎಂದೂ ಅವಳ ನಡತೆ ತಪ್ಪಿದ್ದಿಲ್ಲ. ಆದ್ರೆ ನಡೆದದ್ದೆ ಬೇರೆ. ಹಾಗು ಹೀಗೂ ಇದು ನಾರಾಣಿಯ ಕಿವಿ ಮುಟ್ಟಿತು. ಹೆಂಡದ ಕುಡಿತವೂ ಅತಿಯಾಯಿತು. ಜಗ್ಳ ಆದಾಗೆಲ್ಲಾ ಅದು ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಲಕ್ಷ್ಮಕ್ಕ ಕಕ್ಕುಲಾತಿಗೆ ಬೈಯುತ್ತಾನೆ ಅಂದುಕೊಂಡಿದ್ದಳು. ಅದೊಂದು ದಿನ ಜಗ್ಳದ ಮಧ್ಯೆ ವಿಷ್ಯವು ಹೊರಬಿತ್ತು. ಮಾತಿಗೆ ಮಾತು ಬೆಳೆದು “ಊನೆ ನಿನಗೆ ಮಿಂಡಗಾರ ಇದಾನಲ್ಲ.. ಊರೂರು ಸುತ್ತಿ ಕುರಿ ವ್ಯಾಪಾರ ಮಾಡ್ತಾನಲ್ಲ… ವ್ಯಾಪಾರಿ ಮಾರ ನಿನ್ನ ಸೋದ್ರಮಾವ… ನಾನ್ಯಾಕೆ ಬೇಕು! ಯಾವಾಗ್ಲೂ ಗಂಡಸ್ತನ ಅಮ್ತೀಯಾ. ಅವನ್ನ ಗಂಡಸ್ತನ ನೆಟ್ಕೈತೊ” ಅಂದ. ಲಕ್ಷ್ಮಕ್ಕನಿಗೆ ದಿಕ್ಕೆ ತೋಚದಾಯಿತು. ಕುಸಿದು ಕುಳಿತಳು. ಕಾಲಿಡಿದು ಬೇಡಿದಳು.. ನನಗೆ ಅಂತ ಪಟ್ಟ ಕಟ್ಬೇಡಿ ನಾನೆಂದು ಹಾಗೆ ನಡ್ಕೊಂಡಿಲ್ಲ ಅಂದ್ರು ನಾರಾಣಿ ಕುಡಿದ ಅಮಲಿನಲ್ಲಿ ಬಡಬಡಿಸುತ್ತಲೆ ಇದ್ದ. ಲಕ್ಷ್ಮಕ್ಕನಿಗೆ ಆಕಾಶವೆ ಕಳಚಿ ಬಿದ್ದಂತಾಯಿತು. ಈ ವಿಷ್ಯ ಕೇಳಿ ಮಾರನಿಗೆ ಏನೂ ಅನಿಸಲಿಲ್ಲ. ಅವನು ಎಣಿಸಿದ ಅವಕಾಶವೊಂದು ಹತ್ತಿರದಲ್ಲೇ ಇದೆ ಅಂದ್ಕೊಂಡನು.

ಹೆಂಡಕ್ಕೆ ದಾಸನಾಗಿದ್ದ ನಾರಾಣಿಯ ಸ್ನೇಹವನ್ನು ಮಾರ ಸಂಪಾದಿಸಿದ. ನನ್ನಿಂದ ಯಾವ ತಪ್ಪು ಆಗಿಲ್ಲ ಎಂದು ಅವನಿಗೆ ಮನವರಿಕೆ ಮಾಡಿದ. ಊರಿನ ವಿಷ್ಯವನ್ನು ಬಿಡು ಊರಿಗೆ ನೂರಾರು ಬಾಯಿ ಅದಕ್ಕೆ ನಾಲಿಗೆಯೆ ಬೇಕಿಲ್ಲ. ಗಾಳಿಯೊಂದು ಸಾಕು ಅದು ಊರಿನ ಕೊನೆ ಮುಟ್ಟೊವೊತ್ತಿಗೆ ಸುಂಟರಗಾಳಿಯಾಗಿರುತ್ತದೆ. ಅದರ ಸುಳಿಯಲ್ಲಿ ಸಿಕ್ಕವರು ತರಗೆಲೆಯಿಂದ ಕಳೆದುಹೋಗಬೇಕಾಗುತ್ತದೆ ಎಂದ. ಸರಿತಪ್ಪುಗಳ ಲೆಕ್ಕಹಾಕುವ ಮನಸ್ಥಿತಿಯೂ ನಾರಾಣಿಗಿರಲಿಲ್ಲ. ಆತನಿಗೆ ಹೆಂಡಕ್ಕೆ ಹಣವಷ್ಟೆ ಮುಖ್ಯವಾಗಿತ್ತು. ಅದು ಮಾರನಿಂದ ದೊರೆಯುತ್ತಿತ್ತು. ಆತನಿಗೆ ಬೇಕಾದಾಗೆಲ್ಲ ಹಣಕೊಡುತ್ತ ಬಂದ ಹೆಂಡದ ಅಮಲಿನಲ್ಲಿ ಹೆಂಡತಿಯನ್ನು ಮರೆತ. ಎಷ್ಟೊ ಬಾರಿ ಲಕ್ಷ್ಮಕ್ಕ ತಿಳಿ ಹೇಳಿದಳು. ಆತನ ಜೊತೆಯಲ್ಲಿ ಸೇರಬೇಡ ಎಂದರೂ ಕೇಳಲಿಲ್ಲ. ಹೆಂಡದ ಬಾಯಿಗೆ ಆಗಾಗ ಮಾಂಸದ ರುಚಿ ಬೇಕಿತ್ತು. ಅದೊಂದು ದಿನ ಮೊಲವೊಂದನ್ನು ತಂದು ಇವತ್ತು ರುಚಿಯಾಗಿ ಮಾಡು ಎಂದ. ಲಕ್ಷ್ಮಕ್ಕ ಅದರಂತೆ ತಯಾರು ಮಾಡಿದಳು. ಅಷ್ಟರಲ್ಲಿ ಮಾರ ಪ್ರತ್ಯಕ್ಷವಾದ ಲಕ್ಷ್ಮಕ್ಕ ನಡುಗಿದಳು. ಇನ್ನೇನು ಅನಾಹುತ ನಡೆಯುವುದೊ ಅಂದ್ಕೊಂಡ್ಲು. ಆಕೆಯ ಮಾತನ್ನು ನಾರಾಣಿ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇನ್ನೊಂದು ಪಾನಗೋಷ್ಟಿ ನಡೆಯಿತು. ನಿಲ್ಲಲು ಆಗದೆ ಕುಡಿದ ಅರೆಬರೆ ಉಂಡ ನಾರಾಣಿ ಕುಳಿತಲ್ಲೆ ನಿದ್ದೆ ಹೋದನು. ಇನ್ನೊಂದು ಬದಿಯಲ್ಲಿ ಮಾರ ಮಲಗಿಕೊಂಡ. ಆಕೆಯೂ ತಾನಿಷ್ಟು ಉಂಡು ಪಾತ್ರೆಪಗಡೆಗಳನ್ನೆಲ್ಲ ತೊಳೆದು ಒಪ್ಪಓರಣವಾಗಿ ಇಟ್ಟು ಒಳಮನೆಯಲ್ಲಿ ಸಾಕಷ್ಟು ಬೇಗುದಿಯಲ್ಲಿಟ್ಟುಕೊಂಡು ಮೈಚಾಚಿದಳು.
ಒಂದೆರಡು ಬಾರಿ ತನ್ನ ಗಂಡನನ್ನು ಹಾಗೂ ಮಾರನನ್ನು ನೋಡಿದಳು. ಇಬ್ಬರೂ ನಿದ್ದೆಯಲ್ಲಿದ್ದಾರೆ ಎನಿಸಿತು. ಯೋಚನೆಯಲ್ಲಿ ಮಗ್ನಳಾದವಳಿಗೆ ನಿದ್ದೆಹತ್ತಿದ್ದು ತಿಳಿಯಲಿಲ್ಲ. ಏನೇನೊ ಕನಸುಗಳು ಹುಲಿಯೊಂದು ಬಂದು ಮೈಮೇಲೆ ಎರಗಿದಂತೆ ನಾರಾಣಿಯನ್ನು ಕಚ್ಚಿಕೊಂಡು ಎಳೆದೊಯ್ದಂತೆ ಮಾರ ಮೂಲೆಯಲ್ಲಿ ಏನೂ ಗೊತ್ತಿಲ್ಲದವನಂತೆ ನಿಂತಂತೆ ಇಬ್ಬರೂ ಸಹಾಯಕ್ಕೆ ಕೈ ಚಾಚಿದರೂ ಗಹಗಹಿಸಿ ನಕ್ಕಂತಾಗಿ ಬೆಚ್ಚಿಬಿದ್ದಳು. ಬೆವರಿದಳು… ದಡಕ್ಕನೆದ್ದು ಕುಳಿತಳು… ಕತ್ತಲಲ್ಲಿ ನೀರಿನ ಲೋಟಕ್ಕೆ ತಡಕಾಡಿದಳು. ತಲೆದಿಂಬಿನ ಹತ್ತಿರವಿದ್ದ ಲೋಟ ಕೈಗೆ ಎಟುಕಿದಂತಾಯಿತು. ಘಟಘಟನೆ ನೀರನ್ನು ಕುಡಿದಳು. ಸಾವರಿಸಿಕೊಂಡು ನಿಧಾನವಾಗಿ ಬಾಗಿಲು ತೆರೆದು ಹಟ್ಟಿ ಅಂಗಳದ ಕಡೆ ನೋಡಿದಳು. ಇಬ್ಬರೂ ನಿದ್ದೆ ಹೋಗಿರುವುದು ಖಾತ್ರಿಯಾಯಿತು. ಬಾಗಿಲು ತೆರೆದಿದ್ದರಿಂದ ಹೊರಗಿನ ಗಾಳಿ ಒಳಹೊಕ್ಕಿತು ಎದೆಯನ್ನೂ ಹೊಕ್ಕಿತು. ಮನಸ್ಸಿಗೆ ಸ್ವಲ್ಪ ನಿರಾಳವಾಯಿತು. ಹಾಗೆಯೆ ಮಲಗಿಕೊಂಡಳು. ಬಾಗಿಲು ಹಾಕುವುದನ್ನು ಮರೆತಳು. ಸ್ವಲ್ಪ ಸಮಯಕ್ಕೆ ನಿದ್ದೆಬಂದಿತು. ಮತ್ತೆ ಕನಸು ನಾರಾಣಿ ರಾಜಕುಮಾರನಂತೆ ಕಂಡ. ಹತ್ತಿರ ಬಂದ. ಮಗ್ಗುಲಲ್ಲಿ ಮಲಗಿಕೊಂಡ ಅವನ ಕೈ ಎದೆಯ ಮೇಲೆ ಹರಿದಾಡಿತು. ಇದೇನೊ ಹೊಸತು ಅನಿಸಿತು. ಬಹಳ ದಿನಗಳಿಂದ ಅದುಮಿಟ್ಟ ಬಯಕೆಯೊಂದು ಒಮ್ಮೆಲೆ ರೂಪ ಪಡೆದಂತೆ ಕೂಡಿಟ್ಟ ಕನಸುಗಳ ಕಟ್ಟೆಯೊಂದು ಒಮ್ಮೆಲೆ ಮೈಮನಗಳ ತುಂಬಾ ಹರಿದಾಡಿದಂತೆ ನಿಂತಕಟ್ಟೆಯ ನೀರು ಹೊಡೆದು ಬೀತುಬಿಟ್ಟ ನೆಲವನ್ನೆಲ್ಲಾ ತಂಪಾಗಿಸಿದಂತೆ ಮೈಯೆಲ್ಲಾ ಒಮ್ಮೆಲೆ ತಣ್ಣಗಾದಂತೆ ಹೊಸ ಚಿಗುರೊಂದು ಆವಿರ್ಭವಿಸುವಂತೆ ಹೊಸತೊಂದು ಅನುಭವ ಅವಳನ್ನು ಬೇರೆಯದೆ ಲೋಕಕ್ಕೆ ಕೊಂಡೊಯ್ದಂತಾಗಿ ಉರುಳಾಡಿದಳು… ನಕ್ಕಳು… ಅನುಭವಿಸಿದಳು.. ಹಾಗೆಯೆ ನಿದ್ದೆಹೋದಳು. ಬೆಳಗ್ಗೆ ಎಚ್ಚರವಾದಾಗ ಮಾರ ಮಾತ್ರ ಕಾಣಿಸಲಿಲ್ಲ. ನಾರಾಣಿ ಎದ್ದು ಕುಳಿತಿದ್ದನು. ಅವನನ್ನು ನೋಡಿದ ಲಕ್ಷ್ಮಕ್ಕನಿಗೆ ಹೊಸದಾಗಿ ಕಂಡನು.
ಇದಾಗಿ ಕೆಲ ದಿನಕಳೆದಿವೆ. ಲಕ್ಷ್ಮಕ್ಕನ ಮುಖದಲ್ಲಿ ಲವಲವಿಕೆ ಕಾಣಿಸತೊಡಗಿತು. ದಿನಕಳೆದಂತೆ ಮೈ ತುಂಬಿಕೊಂಡಳು. ನಾರಾಣಿ ಅವಳನ್ನು ನೋಡಿದಾಗಲೆಲ್ಲಾ ಚಿಂತೆಗೆ ಬೀಳುತ್ತಿದ್ದ. ಬರುವ ತಿಂಗಳು ಆಕೆ ಮುಟ್ಟಾಗಲಿಲ್ಲ. ಆಕೆಯ ಖುಷಿಗೆ ಪಾರವೆ ಇರಲಿಲ್ಲ. ಖುಷಿಯಿಂದಲೆ ಗಂಡನಿಗೆ ವಿಷಯ ಮುಟ್ಟಿಸಿದಳು. ಆತ ಮೌನವಾಗಿದ್ದ. ಆತನ ಸ್ವಭಾವವೆ ಹೀಗೆ ಅಂದ್ಕೊಂಡ್ಲು. ದಿನೆ ದಿನೆ ಆತನ ಹೆಂಡದ ಸಹವಾಸ ವಿಪರೀತವಾಯಿತು. ಆತ ಒಂದೂ ಮಾತಾಡಲಿಲ್ಲ ಆಗಾಗ ತನ್ನ ಹೊಟ್ಟೆಯನ್ನು ಮುಟ್ಟಿ ಸಾಂತ್ವನ ಹೇಳಿಕೊಳ್ಳುತ್ತಿದ್ದಳು. ನಾರಾಣಿ ಮಾತ್ರ ಚಿಂತೆಯಲ್ಲಿ ಖಿನ್ನನಾದ. ದಿನಕಳೆಯುವುದರಲ್ಲೆ ಒಂಭತ್ತು ತಿಂಗಳಾಯಿತು. ಮಗ ಮಾದ ಹುಟ್ಟಿದನು. ಐದಾರು ವರ್ಷಗಳು ಕಳೆಯುವುದರಲ್ಲಿಯೆ ಹೆಂಡದ ಅಮಲಿನಲ್ಲಿ ಊರ ಹಿಂದಿನ ಬಾವಿಗೆ ಬಿದ್ದು ನಾರಾಣಿ ಹೆಣವಾದನು. ಮಾದ ಆರು ವರ್ಷದ ಬಾಲಕನಾದರೂ ಅಪ್ಪನ ಹೆಣವನ್ನು ನೋಡಿ ಬೆಚ್ಚಿದ್ದನು. ಸೋದ್ರ ಮಾವನೆ ಎಲ್ಲಾ ಕಾರ್ಯವನ್ನು ಮಾಡಿ ಮುಗಿಸಿದ ಮೂರ್ನಾಲ್ಕು ವರ್ಷಗಳು ಹೀಗೆ ಕಳೆದವು. ಅದೊಂದು ದಿನ ಇದ್ದಕ್ಕಿದ್ದಂತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಕ್ಕನ ಹೃದಯದ ಬಡಿತವು ಸ್ತಬ್ಧಗೊಂಡಿತು. ಹತ್ತು ವರ್ಷಕ್ಕೆ ತಂದೆ ತಾಯಿ ಕಳೆದುಕೊಂಡ ಮಾದ ಅನಾಥವಾದನು. ಅವನನ್ನು ಸಾಕುವ ಜವಾಬ್ದಾರಿಯು ಸೋದ್ರಮಾವ ಮಾರನ ಹೆಗಲೇರಿತು. ಆತನ ಆರೈಕೆಯಲ್ಲಿ ಬೆಳೆದ ಮಾದ ಸಣ್ಣ ಪುಟ್ಟ ಕೆಲಸ ಮಾಡುವುದು ಕಲಿತುಕೊಂಡ.
ಸೋದ್ರಮಾವ ಮಾರನು ವಯಸ್ಸಾದಂತೆಲ್ಲ ಖಿನ್ನನಾದ. ಕುಳಿತಲ್ಲೆ ಕುಳಿತಿರುತ್ತಿದ್ದ. ಏನೇನೊ ಬಡಬಡಿಸುತ್ತಿದ್ದ. ಅದರಲ್ಲಿ ನಾನು ತಪ್ಪು ಮಾಡಬಾರದಿತ್ತು ಅನ್ನುವ ಅಂಶವೆ ಇರುತ್ತಿತ್ತು. ಅದನ್ನು ಕೇಳಿದಾಗಲೆಲ್ಲಾ ಮಾದನಿಗೆ ಊರಿನ ಜನ ಹಂಗಿಸುತ್ತಿದ್ದದ್ದು ನೆನಪಾಗುತ್ತಿತ್ತು. ಊರಿನ ಜನ ನೀನು ನೋಡಲು ಮಾರನಂತೆ ಇದ್ದೀಯಲ್ಲೊ ಅಂದಾಗ ಆತನಿಗೆ ಏನು ತಿಳಿಯುತ್ತಿರಲಿಲ್ಲ. ಒಂದುದಿನ ಇದ್ದಕ್ಕಿದ್ದಂತೆ ಮಾರ ಕಾಣದಾದ. ಮಾದನು ಆತನನ್ನು ಎಲ್ಲೆಲ್ಲಿಯೊ ಹುಡುಕಿದರೂ ಸಿಗಲಿಲ್ಲ. ದಿನೆ ದಿನೆ ಆ ಊರಿನಲ್ಲಿ ನೆನಪುಗಳು ಹಿಡಿದು ಕಾಡಲಾರಂಭಿಸಿದವು. ತಂದೆ ನಾರಾಣಿಯ ಪಟ ನೋಡಿದಾಗಲೆಲ್ಲಾ ಅಯ್ಯೋ ಪಾಪ ಅನಿಸುತ್ತಿತ್ತು. ತನ್ನ ತಾಯಿ ಮಖ ಆಗಾಗ ಕನಸ್ಸಿನಲ್ಲಿ ಬಂದು ಕಾಡುತ್ತಿತ್ತು. ಕಾಣೆಯಾದ ನಾರಾಣಿ ಭೂತದಂತೆ ಪ್ರಶ್ನೆಯಾಗಿ ವರ್ತಮಾನದಲ್ಲಿ ಕಾಡತೊಡಗಿದನು. ಇವೆಲ್ಲದರಿಂದ ಬಿಡುಗಡೆಯಾಗಬೇಕೆಂದರೆ ನಾನು ಈ ಜಾಗ ತೊರೆಯಲೇಬೇಕೆಂದು ನಿರ್ಧರಿಸಿದ. ಇದ್ದೊಂದು ಮನೆಯನ್ನು ಬಿಟ್ಟು ಈಗ ಬದುಕನ್ನು ಕಟ್ಟಿಕೊಂಡ ಜಾಜೂರಿಗೆ ಬಂದು ನೆಲೆಸಿದ. ಬಾವಿಯಲ್ಲಿ ಹೆಣ ನೋಡಿದವನಿಗೆ ಇದೆಲ್ಲಾ ನೆನಪಾಗಿತ್ತು.
*****
ಇತ್ತ ಖಿನ್ನತೆಗೆ ಒಳಗಾದ ಮಾದ ಊರನ್ನೆ ಬಿಟ್ಟ ಊರೂರು ಅಲೆದ ಕೂಳಿಲ್ಲದೆ ನೀರಿಲ್ಲದೆ ದಿಕ್ಕು ದೆಸೆಯಿಲ್ಲದೆ ತಿರುಗಾಡಿದ ಎಷ್ಟು ದಿನ ತಿರುಗುವುದು. ಕೊನೆಗೊಂದು ದಿನ ಮುಕ್ತಿಗೆ ಮಾರ್ಗವಾಗಿ ಉಚಿತವಾಗಿ ದಿನನಿತ್ಯ ದಾಸೋಹ ನೀಡುವ ಮಠವೊಂದನ್ನು ಸೇರಿದ ಪ್ರತಿದಿನ ಆ ಮಠದ ಆವರಣವನ್ನು ಸ್ವಚ್ಛ ಮಾಡೋದು ಬೆಳಗ್ಗೆ ಪೂಜೆ ಸಿದ್ಧತೆ ಮಾಡೋದು ಅವನ ಕೆಲಸವಾಯಿತು. ಅದೇನು ಬೃಹತ್ ಮಠವಲ್ಲ ಅನಾಥ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ಬದುಕಲಿಕ್ಕೆ ಅಗತ್ಯವಾದ ತರಬೇತಿ ನೀಡುವ ಸುಮಾರು ನೂರರಿಂದ ನೂರೈವತ್ತು ಮಂದಿಯಷ್ಟೆ ಇರುವ ಮಠ. ಅದಲ್ಲದೆ ಹತ್ತಾರು ಎಕರೆಗಳಲ್ಲಿ ಕಾಡಿನ ಮಧ್ಯೆ ಇರುವ ಪ್ರಶಾಂತವಾದ ವಾತಾವರಣವಿರುವ ಆ ಮಠ ಆತನಿಗೆ ಹಿಡಿಸಿತು. ದಿನನಿತ್ಯ ದೇವರ ನಾಮಸ್ಮರಣೆಯಲ್ಲಿ ತನ್ನ ತಪ್ಪನ್ನು ತಾನು ಮರೆಯೋದಕ್ಕೆ ಪ್ರಯತ್ನಿಸಿದ. ಒಮ್ಮೊಮ್ಮೆ ಕನಸ್ಸಿನಲ್ಲಿ ಬೆಚ್ಚಿಬೀಳ್ತಾ ಇದ್ದ. ನಾರಾಣಿ ಅತ್ತಂತೆ ಕನಸ್ಸು ಬೀಳ್ತಾಇತ್ತು ತಾನು ಅತ್ತಂತಾಗುತ್ತಿತ್ತು. ಲಕ್ಷ್ಮಕ್ಕ ಬಂದು ಕತ್ತಿಸಿಕಿದಂತೆ ಕೆನ್ನೆಗೆ ಹೊಡೆದಂತೆ ಭಾಸವಾಗ್ತಾ ಇತ್ತು. ಅವಾಗೆಲ್ಲಾ ವಿಪರೀತ ಖಿನ್ನನಾಗ್ತಾ ಇದ್ದ. ಮಾದನನ್ನು ನೆನೆದಾಗಲೆಲ್ಲಾ ಚಿಕ್ಕಮಕ್ಕಳಂತೆ ಅತ್ತುಬಿಡುತ್ತಿದ್ದ. ಕರ್ಮಗಳೆಲ್ಲಾ ಹೀಗೆ ಕನಸುಗಳಲ್ಲಿ ಬಂದು ಕಾಡ್ತಾ ಇರ್ತವೆ ನಮ್ಮ ಪಾಪಕರ್ಮಗಳು ಕನಸುಗಳಲ್ಲಿ ಜೀವಂತವಾಗಿರುತ್ತವೆ ಅದಕ್ಕಾಗಿಯೇ. ಅವು ನಮ್ಮನ್ನು ಕಾಡುತ್ತವೆ ಕಾಡಿಸುತ್ತವೆ ನಮ್ಮನ್ನು ಶುಭ್ರಗೊಳಿಸುತ್ತವೆ. ಅದಕ್ಕಾಗಿ ನಾವೇಕೆ ಬೆಚ್ಚಬೇಕು. ಅಚ್ಚಹಸಿರಾಗಬೇಕು ಮನಸು ತಿಳಿಯಾಗಬೇಕು. ಕನಸು ಬೀಳುತ್ತಲೆ ಇರಬೇಕು ಬದುಕಿನ ಕನಸುಗಳನ್ನು ಕಾಣುತ್ತಲೆ ಇರಬೇಕು. ಮುಕ್ತಿಗೆ ಪ್ರಾಯಶ್ಚಿತ್ತವೊಂದೆ ದಾರಿ. ಎಂಬ ಪ್ರವಚನದ ಮಾತುಗಳು ಮನಸ್ಸನ್ನು ತಕ್ಕಮಟ್ಟಿಗೆ ನಿರಾಳ ಮಾಡಿದವು. ನಾಲ್ಕೈದು ವರ್ಷಗಳಲ್ಲಿ ಒಮ್ಮೆಯೂ ನೋಡದ ಮಾದನನ್ನು ಇದ್ದಕ್ಕಿದ್ದಂತೆ ನೋಡಬೇಕೆನಿಸಿತು. ಆತನ ವಿಷಯವನ್ನು ಹೇಗೊ ಸಂಪಾದಿಸಿದ ಒಂದು ದಿನ ಇದ್ದಕ್ಕಿದ್ದಂತೆ ನೂರು ಕಿಲೋ ಮೀಟರ್ ದೂರದ ಜಾಜೂರಿಗೆ ನಡೆದುಕೊಂಡೆ ಹೊರಟಿದ್ದನು. ಇನ್ನೇನು ಜಾಜೂರಿಗೆ ಪ್ರವೇಶಿಸಬೇಕು ಎನ್ನುವಾಗಲೆ ವಿಪರೀತವಾದ ಕತ್ತಲೆಯಲ್ಲಿ ನೆಲವೆಂದುಕೊಂಡು ಇಟ್ಟ ಹೆಜ್ಜೆ ತುಂಬಿದ ಬಾವಿಯ ತಳ ಮುಟ್ಟಿತ್ತು.

ಬಾವಿಯ ಹತ್ತಿರ ನೋಡಲು ಹೋದವರು ತಡಬಡಾಯಿಸುತ್ತಲೆ ಓಡಿಬಂದ್ರು. ಇಷ್ಟರಲ್ಲಾಗಲೇ ಇನ್ನಷ್ಟು ಜನ ಸೇರಿದ್ದರು. ಹೌದು ಹೆಣವೊಂದು ತೇಲಿದಂತೆ ಕಾಣುತ್ತಿದೆ. ಆದ್ರೆ ಗುರ್ತು ಸಿಕ್ತಾಇಲ್ಲ ಅಂದ್ರು. ಅದು ತುಂಬಾ ಹಳೆಯ ಬಾವಿಯಾದ್ದರಿಂದ ಮುಳ್ಳುಕಂಟಿಯೆಲ್ಲಾ ಬೆಳೆದು ಗುಂಪು ಗುಂಪಾಗಿತ್ತು. ಬಹಳ ವರ್ಷಗಳಿಂದ ಮಳೆ ಇರ್ಲಿಲ್ಲ. ಅದರಲ್ಲಿ ನೀರೂ ಇರ್ಲಿಲ್ಲ. ಆದ್ರೆ ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದ ಒಣಗಿದ ಹಳೆಯ ಬಾವಿಗಳಲ್ಲೂ ನೀರು ತುಂಬಿತ್ತು. ಅದರಿಂದ ಆ ಹೆಣವನ್ನು ತೆಗೆಯುವುದಾದರೂ ಹೇಗೆ? ಕೊನೆಗೆ ಊರಿನ ನಾಲ್ಕಾರು ಯುವಕರು ದೊಡ್ಡದೊಡ್ಡ ಕಟ್ಟಿಗೆಗಳಿಂದ ಮುಳ್ಳುಕಂಟಿಯನ್ನೆಲ್ಲಾ ಅರಗು ಮಾಡಿ ಹೇಗೊ ಸಾಹಸ ಮಾಡಿ ಹೊರತೆಗೆದರು. ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು ಮಾದನು ಸೂಕ್ಷ್ಮವಾಗಿ ನೋಡಿದನು. ಅಪ್ಪನಂತಿದ್ದ ಮಾರನ ಗುರುತು ನಾಲ್ಕಾರು ವರ್ಷಗಳಾದರೂ ಮರೆಯುವಂಥದ್ದಲ್ಲ ಆತನ ಮುಖವನ್ನು ನೋಡುತ್ತಲೆ ಭಾವಬಂಧಗಳೆಲ್ಲಾ ಮೈತುಂಬಾ ಆವರಿಸಿ ಅಪ್ಪಾ….!? ಎಂಬ ದುಃಖದ ಉದ್ಗಾರ ಊರತುಂಬಾ ಪ್ರತಿಧ್ವನಿಯಾಗಿ ಕೇಳಿಸುತ್ತಿತ್ತು. ಭಾವ ಭಿತ್ತಿದ ಬೀಜವೊಂದು ಅಳುವಿನ ರೂಪ ಪಡೆದು ಮೊಳೆಯುತ್ತಿತ್ತು. ಕೆಂಪಿಯೂ ಸೇರಿದಂತೆ ಇಡಿ ಊರೆ ಮೂಕಸ್ತಬ್ಧವಾಗಿ ನೋಡುತ್ತಿತ್ತು.

