”ಕಾದಂಬರಿಗೆ ಇರುವ ಮ್ಯೂಸಿಯಮ್ ಗುಣ ಆಲೋಚನೆಗೆ ಪ್ರಚೋದನೆ ಒದಗಿಸುವುದಕ್ಕೆ ಸಂಬಂಧಿಸಿದ್ದಲ್ಲ,ಮರೆವನ್ನು ಪ್ರತಿರೋಧಿಸುತ್ತ ಬದುಕಿನ ವಿವರಗಳನ್ನು ಪೊರೆಯುವ,ಸಂಗೋಪಿಸುವ ಕಾರ್ಯಕ್ಕೆ ಸಂಬಂಧಿಸಿದ್ದು.ಮ್ಯೂಸಿಯಮ್ಮಿನಲ್ಲಿ ತಮ್ಮ ಗತಕಾಲಕ್ಕೆ ಸಂಬಂಧಿಸಿದ್ದು ಏನೋ ಕಾದಿಡಲಾಗಿದೆ ಅನ್ನುವ ಭಾವನೆಯಿಂದ ಕುಟುಂಬದ ಮಂದಿ ಒಟ್ಟಾಗಿ ಅಲ್ಲಿಗೆ ಹೋಗುತ್ತಾರೆ.ಓದುಗರು ಕೂಡ ತಮ್ಮ ವಾಸ್ತವ ಬದುಕಿನ ಹಲವು ಮುಖಗಳನ್ನು ಕಾದಂಬರಿ ಒಳಗೊಂಡಿದೆ ಅನ್ನುವ ಕಾರಣಕ್ಕೇ ಓದುತ್ತಾರೆ.”
ಓ.ಎಲ್.ನಾಗಭೂಷಣಸ್ವಾಮಿ ಕನ್ನಡಕ್ಕೆ ಅನುವಾದಿಸಿರುವ ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿಯ ಕಾದಂಬರಿಕಾರ ಒರ್ಹಾನ್ ಪಾಮುಕ್ ಭಾಷಣ ಮಾಲಿಕೆಯ ಆರನೆಯ ಕಂತು.

ಬಹಳ ಕಾಲದಿಂದಲೂ ಇಸ್ತಾಂಬುಲ್ ನಲ್ಲಿ ಮ್ಯೂಸಿಯಮ್ ನಿರ್ಮಿಸುವ ಪ್ರಯತ್ನದಲ್ಲಿದ್ದೇನೆ. ಹತ್ತು ವರ್ಷದ ಹಿಂದೆ ಚುಕುರ್ಕುಮ ಪ್ರದೇಶದಲ್ಲಿ, ಈಗ ನನ್ನೆಲ್ಲ ಬರವಣಿಗೆಯನ್ನು ಮಾಡುವ ಸ್ಟುಡಿಯೋಕ್ಕೆ ಹತ್ತಿರದಲ್ಲೇ, ಹಾಳುಬಿದ್ದ ಕಟ್ಟಡವೊಂದನ್ನು ಖರೀದಿಮಾಡಿದೆ. ಅದು 1897ರಲ್ಲಿ ಕಟ್ಟಿದ್ದ ಕಟ್ಟಡ. ನನ್ನ ವಾಸ್ತುತಜ್ಞ ಮಿತ್ರರ ನೆರವಿನಿಂದ ಅದನ್ನು ನಿಧಾನವಾಗಿ ನನ್ನ ಅಭಿರುಚಿಗೆ ತಕ್ಕ ಹಾಗೆ, ಆಧುನಿಕ ಮ್ಯೂಸಿಯಮ್ ರೂಪಕ್ಕೆ ಬದಲಾಯಿಸಿದೆ. ಅದೇ ಹೊತ್ತಿನಲ್ಲಿ ಕಾದಂಬರಿ ಬರೆಯುತ್ತಿದ್ದೆ, ಸೆಕೆಂಡ್ ಹ್ಯಾಂಡ್ ಅಂಗಡಿ, ಚೋರ್ ಬಜಾರು, ಮತ್ತೆ ಹಳೆಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸವಿರುವ ಮನೆಗಳಿಂದ ಯಾವ ಯಾವ ವಸ್ತು ಖರೀದಿಸಬಹುದು ಎಂದು ಒಂದು ಕಣ್ಣು ಇಟ್ಟೇ ಇದ್ದೆ.

ಆ ಹಳೆಯ ಮನೆಯಲ್ಲಿ 1975-1984ರ ಅವಧಿಯಲ್ಲಿ ಬದುಕಿದ್ದ ಕಾಲ್ಪನಿಕ ಕುಟುಂಬವೊಂದು ಬಳಸಿದ್ದಿರಬಹುದಾದಂಥ ವಸ್ತುಗಳನ್ನು ಹುಡುಕುತಿದ್ದೆ. ಆ ಕಾಲ್ಪನಿಕ ಕುಟುಂಬವೇ ನನ್ನ ಕಾದಂಬರಿಯ ಫೋಕಸ್ಸು. ನನ್ನ ಸ್ಟುಡಿಯೋದಲ್ಲಿ ಔಷಧ ಬಾಟಲಿ, ಅಂಗಿಯ ಗುಂಡಿಗಳ ಚೀಲ, ನ್ಯಾಶನಲ್ ಲಾಟರಿಯ ಟಿಕೀಟು, ಇಸ್ಪೀಟು ಕಾರ್ಡು, ಬಟ್ಟೆ, ಅಡುಗೆ ಮನೆಯ ಪಾತ್ರೆಗಳೆಲ್ಲ ನಿಧಾನವಾಗಿ ಶೇಖರಗೊಂಡವು. ಅವನ್ನೆಲ್ಲ ಕಾದಂಬರಿಯಲ್ಲಿ ಬಳಸುವ ಉದ್ದೇಶವಿತ್ತು. ಆಯಾ ಕ್ಷಣದ ಸ್ಫೂರ್ತಿಯಲ್ಲಿ ಕೊಂಡ ಈ ವಸ್ತುಗಳ ಬಳಕೆಗೆ ಸೂಕ್ತವಾದ ಸನ್ನಿವೇಶ, ದೃಶ್ಯಗಳನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಸೆಕೆಂಡ್ ಹ್ಯಾಂಡ್ ಅಂಗಡಿಯೊಂದರಲ್ಲಿ ಹೀಗೇ ನೋಡುತ್ತಿದ್ದಾಗ ಹಸಿರು ಎಲೆ ಮತ್ತು ಕಿತ್ತಳೆ ಬಣ್ಣದ ಗುಲಾಬಿಯ ಪ್ರಿಂಟು ಇರುವ ಉಜ್ವಲ ವರ್ಣದ ಡ್ರೆಸ್ಸು ಕಂಡಿತು. ‘ಮುಗ್ಧತೆಯ ಮ್ಯೂಸಿಯಮ್’ ಎಂಬ ಹೆಸರಿನ ನನ್ನ ಕಾದಂಬರಿಯ ನಾಯಕಿ ಫ್ಯೂಸನ್ ಆ ಉಡುಪನ್ನು ತೊಟ್ಟು ಡ್ರೈವಿಂಗ್ ಕಲಿಯಲು ಹೊರಟ ಸನ್ನಿವೇಶದ ವಿವರಗಳನ್ನು ಬರೆದೆ. ಮತ್ತೊಮ್ಮೆ, ಇಸ್ತಾಂಬುಲ್ ನ ಹಳೆಯ ಪುಸ್ತಕದಂಗಡಿಯಲ್ಲಿ 1930ರ ದಶಕದ ಕಪ್ಪು-ಬಿಳುಪಿನ ಫೋಟೋ ನೋಡಿದೆ. ನನ್ನ ಕಾದಂಬರಿಯ ಪಾತ್ರವೊಂದರ ಆರಂಭ ಕಾಲದ ಬದುಕನ್ನು ಕಲ್ಪಿಸಿಕೊಂಡು ಅದಕ್ಕೆ ಸಂಬಂಧಿಸಿದ ವಸ್ತುಗಳ ವರ್ಣನೆಯಲ್ಲಿ ಈ ಫ್ರೇಮನ್ನೂ, ಅದರೊಳಗಿನ ಫೋಟೋದ ವಿವರಣೆಯನ್ನೂ ಸೇರಿಸಿ ಆ ಮೂಲಕ ನನ್ನ ಕಥೆಯನ್ನು ಮುನ್ನಡೆಸಲು ತೀರ್ಮಾನಿಸಿದೆ. ಅಲ್ಲದೆ ನನ್ನ ಎಷ್ಟೋ ಕಾದಂಬರಿಗಳ ಪಾತ್ರಗಳಿಗೆ ನನ್ನ, ಅಥವಾ ನಮ್ಮಮ್ಮ, ಅಪ್ಪ, ಸಂಬಂಧಿಕರ ಗುಣಗಳನ್ನು ಆರೋಪಿಸಿ, ನನ್ನ ಕುಟುಂಬದ ಸದಸ್ಯರು ಬಳಸುತಿದ್ದಂಥ, ನನಗೆ ಪ್ರಿಯವಾವ ನೆನಪುಗಳಿರುವ ವಸ್ತುಗಳನ್ನು ಪಾತ್ರಗಳೂ ಬಳಸುವಂತೆ ಮಾಡುತ್ತಿದ್ದೆ. ಇದರಿಂದ ವಸ್ತು ವಿವರಗಳು ನನ್ನ ಕಾದಂಬರಿಯ ಭಾಗಗಳೇ ಆಗುತ್ತಿದ್ದವು.

ಕೆಲವು ಬಾರಿ ಇದಕ್ಕೆ ವಿರುದ್ಧವಾದ ಕೆಲಸವನ್ನೂ ಮಾಡುತ್ತಿದ್ದೆ. ಕಾದಂಬರಿಗೆ ಅಗತ್ಯವಾಗಿ ಬೇಕಾದ ವಸ್ತುಗಳಿಗಾಗಿ ಅಂಗಡಿ ಅಂಗಡಿಯಲ್ಲಿ ಗಾಳ ಹಾಕುತ್ತ, ಕೆಲವು ಬಾರಿ ಕುಶಲಕರ್ಮಿಗಳಿಂದ ಅಂಥದ್ದನ್ನು ಮಾಡಿಸುತ್ತಲೂ ಇದ್ದೆ. ‘ಮುಗ್ಧತೆಯ ಮ್ಯೂಸಿಯಮ್’ 2008ರಲ್ಲಿ ಮುಗಿಸುವ ಹೊತ್ತಿಗೆ ನನ್ನ ಸ್ಟುಡಿಯೋ ಮತ್ತೆ ಮನೆ ಎರಡೂ ವಿವಿಧ ವಸ್ತುಗಳಿಂದ ಕಿಕ್ಕಿರಿದಿದ್ದವು. ಕಾದಂಬರಿಯಲ್ಲಿ ವಿವರಿಸಿದ್ದ ಮುಗ್ಧತೆಯ ಮ್ಯೂಸಿಯಮ್ಮಿನ ನಿಜ ಬದುಕಿನನ ಆವೃತ್ತಿಯನ್ನು ಸ್ಥಾಪಿಸಲು ನಿರ್ಧಾರ ಮಾಡಿದೆ. ಚಿತ್ರ, ಫೋಟೋ, ಬಟ್ಟೆ ಇಂಥ ನಿಜ ವಸ್ತುಗಳ ಭಾವಕೋಶವನ್ನು ಕಾದಂಬರಿಯಲ್ಲಿ ಬಳಸುವುದಕ್ಕೆ ಇರುವ ಕಾರಣಗಳನ್ನು ನಾನೀಗ ವಿವರಿಸಬೇಕಾಗಿದೆ.

ಕಥೆಯಲ್ಲಿ ಮುಂದೆ ಸಾಗಿದ ಹಾಗೆ ನಾವು ವಿವರಗಳ, ಘಟನೆಯ ಅರಣ್ಯದಲ್ಲಿ ಸಂತೋಷದಿಂದಲೇ ಕಳೆದುಹೋಗುತ್ತೇವೆ. ನಿಜ ಬದುಕಿಗಿಂತ ಕಾದಂಬರಿಯ ಲೋಕ ಹೆಚ್ಚು ಸಮೃದ್ಧ, ಶ್ರೀಮಂತವಾಗಿ ಕಾಣುತ್ತದೆ. ಹೀಗಾಗುವುದಕ್ಕೆ ಇರುವ ಒಂದು ಕಾರಣ-ಕಾದಂಬರಿಯ ಗುಪ್ತ ಕೇಂದ್ರಕ್ಕೂ ಬದುಕಿನ ಮೂಲ ಅಂಶಗಳಿಗೂ ಇರುವ ಸಂಬಂಧ. ಈ ಸಂಬಂಧವೇ ಕಾದಂಬರಿಯು ಬದುಕಿಗಿಂತ ಹೆಚ್ಚು ಅಥೆಂಟಿಕ್ ಅನ್ನುವ ಭಾವವನ್ನು ಮೂಡಿಸುತ್ತದೆ. ಕಾದಂಬರಿಯು ದಿನ ನಿತ್ಯದ, ವಿಶ್ವಾತ್ಮಕವಾದ, ಮನುಷ್ಯ ಸಂವೇದನೆಗಳಿಂದ ನಿರ್ಮಿತವಾದದ್ದು ಅನ್ನುವುದು ಇನ್ನೊಂದು ಕಾರಣ. ಕಾದಂಬರಿಗಳಲ್ಲಿ ನಮಗೆ ದೊರೆಯುವಂಥ ಸಂವೇದನೆ ಮತ್ತು ಅನುಭವಗಳು ನಮ್ಮದೇ ನಿಜ ಬದುಕಿನಲ್ಲಿ ದೊರೆಯುವುದಿಲ್ಲ ಅನ್ನುವುದು ಮೂರನೆಯ ಕಾರಣ. ಈ ಕೊನೆಯ ಅಂಶ ಪತ್ತೇದಾರಿ, ಪ್ರಣಯ, ವಿಜ್ಞಾನ, ಶೃಂಗಾರ ಕಾದಂಬರಿಗಳ ಮಟ್ಟಿಗೂ ನಿಜ.

ಕಾರಣ ಯಾವುದೇ ಇರಲಿ, ಕಾದಂಬರಿಯ ಲೋಕದಲ್ಲಿ ನಮಗೆದುರಾಗುವ ಬಿಂಬ, ವಾಸನೆ, ಶಬ್ದಗಳು ಬದುಕಿನಲ್ಲಿ ನಮಗೆ ದೊರೆಯದಂಥ ಅಧಿಕೃತತೆಯ ಭಾವವನ್ನು ತರುತ್ತವೆ. ಹಾಗೆಯೇ ನಾವು ಮುಟ್ಟಬಹುದಾದ, ಮೂಸಬಹುದಾದ, ಕೇಳಬಹುದಾದ, ರುಚಿನೋಡಬಹುದಾದ ಒಂದೇ ಒಂದು ವಸ್ತುವನ್ನೂ ಕಾದಂಬರಿ ನಮ್ಮೆದುರು ತಂದಿರಿಸುವುದಿಲ್ಲ. ಒಳ್ಳೆಯ ಕಾದಂಬರಿ ಓದುತ್ತಿರುವಾಗ ನಮ್ಮ ಮನಸ್ಸಿನ ಒಂದು ಭಾಗ ಕಾದಂಬರಿಯ ವಾಸ್ತವದಲ್ಲಿ ಮುಳುಗಿ ಮಗ್ನವಾಗಿ, ‘ವಾಸ್ತವದ ಗಹನತೆ ನಮ್ಮ ಅನುಭವಕ್ಕೆ ಬಂದಿತು, ಬದುಕು ಅನ್ನುವುದು ನಿಜವಾಗಿ ಇರುವುದೇ’ ಹೀಗೆ ಅನ್ನುತ್ತಿರುವಾಗ, ‘ಓದುತ್ತಿರುವುದೆಲ್ಲ ನಿಜ’ವಾಗಿ ಆಗುತ್ತಿಲ್ಲ’ ಅನ್ನುವ ವರದಿಯನ್ನು ನಮ್ಮ ಇಂದ್ರಿಯಗಳು ಒಪ್ಪಿಸುತ್ತಲೇ ಇರುತ್ತವೆ. ಈ ವಿರೋಧಾಭಾಸವೇ ನಮ್ಮಲ್ಲಿ ಅತೃಪ್ತಿಯನ್ನು ಮೂಡಿಸುತ್ತದೆ. ನಾವು ಓದುತ್ತಿರುವ ಕಾದಂಬರಿ ಶಕ್ತಿಯುತವಾಗಿದ್ದಷ್ಟೂ, ನಮ್ಮ ಮನಸ್ಸನ್ನು ಮರುಳು ಮಾಡುವಂತಿರುವಷ್ಟೂ ಈ ಅತೃಪ್ತಿಯ ಭಾವನೆ ಹೆಚ್ಚು ನೋವು ತರುತ್ತದೆ. ನಮ್ಮ ಮನಸ್ಸಿನ ಮುಗ್ಧವಾಗಿರುವ ಭಾಗ ಕಾದಂಬರಿಯನ್ನು ಒಪ್ಪಿ ಶರಣಾಗಿದ್ದಷ್ಟೂ ಈ ನಿರಾಸೆ, ಅತೃಪ್ತಿಗಳು ತೀವ್ರವಾಗಿ ಕಾಡುತ್ತವೆ: ಕಾದಂಬರಿ ವರ್ಣಿಸುತ್ತಿರುವ ಲೋಕ ಕೇವಲ ಕಲ್ಪನೆಯದ್ದು ಅನ್ನುವ ನೋವು ಕಾಡುತ್ತದೆ. ಈ ಚಡಪಡಿಕೆಯಿಂದ ಪಾರಾಗುವುದಕ್ಕೆಂದೇ ಕಾದಂಬರಿಯ ಓದುಗರು ತಾವು ಓದುತ್ತಿರುವುದು ಕೃತಿಕಾರನ ಕಲ್ಪನೆಯಲ್ಲಿ ಹುಟ್ಟಿದ ಸಂಗತಿ ಅನ್ನುವುದು ಗೊತ್ತಿದ್ದರೂ ತಮ್ಮ ಇಂದ್ರಿಯ ಭಾವನೆಗಳ ಮೂಲಕ ಆ ಕಲ್ಪಿತ ಲೋಕದ ಬೆಲೆ ಕಟ್ಟಲು ತೊಡಗುತ್ತಾರೆ ಸಾಹಿತ್ಯ ಸಿದ್ಧಾಂತ, ಕಾದಂಬರಿಯ ಸ್ವರೂಪ ಇವನ್ನೆಲ್ಲ ಅರಿತಿದ್ದರೂ ನಾನು ನನ್ನ ಕಾದಂಬರಿಯ ನಾಯಕ ಕೆಮಾಲ್ ಅಲ್ಲ ಅನ್ನುವುದನ್ನು ಮರೆತಿದ್ದ ಪ್ರೊಫೆಸರನ ಹಾಗೆ ಇರುತ್ತಾರೆ ಓದುಗರು.

ನನ್ನ ಮೂವತ್ತನೆಯ ವಯಸಿನಲ್ಲಿ ಮೊದಲು ಪ್ಯಾರಿಸ್ ಗೆ ಹೋದಾಗ ಎಲ್ಲ ಪ್ರಮುಖ ಫ್ರೆಂಚ್ ಕಾದಂಬರಿಗಳನ್ನೂ ಓದಿದ್ದೆ. ಕಾದಂಬರಿ ಪುಟಗಳಲ್ಲಿ ಕಂಡಿದ್ದ ಜಾಗಗಳಿಗೆಲ್ಲ ಧಾವಿಸಿ ಹೋದೆ; ಬಾಲ್ಜಾಕ್ ನ ನಾಯಕ ರಾಸ್ಟಿನಾಕ್ ಎತ್ತರದಲ್ಲಿ ನಿಂತು ಪ್ಯಾರಿಸ್ ನಗರ ಕಾಣುತ್ತಾನಲ್ಲ, ಅಂಥ ಜಾಗಗಳಿಗೆ. ಅವೆಲ್ಲ ತೀರ ತೀರ ಸಾಮಾನ್ಯವೆಂದು ಕಂಡು ನಿರಾಸೆಯಾಯಿತು. ಆದರೂ ನನ್ನ ಮೊದಲ ಕಾದಂಬರಿ ‘ಸೆವ್ದೆತ್ ಬಾಯ್ ಅಂಡ್ ಸನ್ಸ್’ ದ ನಾಯಕನನ್ನು ರಾಸ್ಟಿನಾಕ್ ನ ಮಾದರಿಯಲ್ಲೇ ಚಿತ್ರಿಸಿದ್ದೆ. ಕಾದಂಬರಿ ಕಲೆಯ ರಂಗಸ್ಥಳವಾಗಿರುವ ಯೂರೋಪಿನ ಪ್ರಮುಖ ನಗರಗಳು ಇಪ್ಪತ್ತನೆಯ ಶತಮಾನದಲ್ಲಿ ಪಶ್ಚಿಮದವರಲ್ಲದ ಲೇಖಕರಲ್ಲಿ ಪ್ರೇರಣೆ, ಹುಮ್ಮಸ್ಸು ತುಂಬಿವೆ. ಪಶ್ಚಿಮದವರಲ್ಲದ ಈ ಎಲ್ಲ ಲೇಖಕರು ಕಾದಂಬರಿ ಮಾಧ್ಯಮದ ಮೂಲಕವೇ ಪಶ್ಚಿಮವನ್ನು ಕಂಡಿದ್ದಾರೆ, ತಾವು ಕಂಡಿದ್ದು ಕಲ್ಪನೆಯ ಒಂದು ತುಣುಕು ಮಾತ್ರ ಅಲ್ಲ, ಅದು ನಿಜ ಎಂದು ನಂಬಲು ಬಯಸಿದ್ದಾರೆ. ಸೆವಾರ್ಂಟೆಯ ‘ಡಾನ್ ಕ್ವಿಕ್ಸಾಟ್’ ಕಾದಂಬರಿಯನ್ನು ಹಿಡಿದು ಸ್ಪೇನ್ ಪ್ರವಾಸ ಮಾಡುವ ಓದುಗರು ಇಂದಿಗೂ ಇದ್ದಾರೆ. ಸ್ವಾರಸ್ಯವೆಂದರೆ ಸೆವಾರ್ಂಟೆಯ ನಾಯಕನೇ ಸ್ವತಃ ಸಾಹಿತ್ಯ ಮತ್ತು ವಾಸ್ತವಗಳ ವ್ಯತ್ಯಾಸ ಮರೆತು ಗೊಂದಲದಲ್ಲಿರುವವನು. ಕಲ್ಪಕತೆ ಮತ್ತು ವಾಸ್ತವಗಳ ಇಬ್ಬಂದಿಯಲ್ಲಿ ಸಿಲುಕಿದ ಅಸಾಮಾನ್ಯ ಬುದ್ಧಿವಂತನ ಉದಾಹರಣೆ ವ್ಲಾಡಿಮಿರ್ ನಬಕೋವ್ ನದ್ದು. ಕಾದಂಬರಿಗಳೆಲ್ಲ ಕಾಲ್ಪನಿಕ ಕಿನ್ನರ ಕಥೆಗಳು ಎಂದು ಹೇಳಿದ ನಬಕೋವ್ ‘ಅನ್ನಾ ಕರೆನೀನಾ’ ಕಾದಂಬರಿಯ ವಾಸ್ತವಾಂಶಗಳನ್ನೆಲ್ಲ ಗುರುತಿಸಿ ತೋರಿಸಿ ವ್ಯಾಖ್ಯಾನಿಸುವ ಕೆಲಸಕ್ಕೆ ಕೈ ಇಕ್ಕಿದ್ದ. ಈ ಯೋಜನೆಯನ್ನು ಅವನು ಮುಗಿಸದಿದ್ದರೂ ಸಾಕಷ್ಟು ಮಾಹಿತಿ ಕಲೆ ಹಾಕಿದ್ದ. ಮಾಸ್ಕೋದಿಂದ ಪೀಟರ್ಸ್ ಬರ್ಗ್ ಗೆ ಅನ್ನಾ ಪ್ರಯಾಣ ಮಾಡಿದ ರೈಲ್ವೆ ಬೋಗಿಯ ವಿನ್ಯಾಸವನ್ನು ಶೋಧಿಸಿದ. ಮಹಿಳೆಯರಿಗಾಗಿ ಮೀಸಲಾಗಿದ್ದ ಕಂಪಾರ್ಟ್ ಮೆಂಟು ಎಷ್ಟು ಸರಳವಾಗಿತ್ತು, ಬಡ ಪ್ರಯಾಣಿಕರಿಗೆ ಕೊಡುತ್ತಿದ್ದ ಸೀಟು ಎಂಥವು, ರೈಲ್ವೆ ಬೋಗಿಯಲ್ಲಿ ಶಾಖವಿರಲೆಂದು ಸ್ಟವ್ ಎಲ್ಲಿ ಇರಿಸುತಿದ್ದರು, ಕಿಟಕಿ ಹೇಗೆ ಕಾಣುತಿದ್ದವು, ಮಾಸ್ಕೋದಿಂದ ಪೀಟರ್ಸ್ ಬರ್ಗ್ ಗೆ ಎಷ್ಟು ಮೈಲು ಎಂಬಂಥ ವಿವರಗಳನ್ನೆಲ್ಲ ಕಲೆ ಹಾಕಿದ್ದ. ಅಂದರೆ ಟಾಲ್ಸ್ ಟಾಯ್ ಕಾದಂಬರಿ ಒಳಗೊಳ್ಳದೆ ಇದ್ದ ಮಾಹಿತಿಯನ್ನೆಲ್ಲ ಸಂಗ್ರಹಿಸಿದ. ಆದರೆ ಇಂಥ ವಿವರಗಳ ಸಮೃದ್ಧಿಯ ಮೂಲಕ ಕಾದಂಬರಿಯ ಅರ್ಥವಂತಿಕೆಯಾಗಲೀ ಅನ್ನಾಳ ಆಲೋಚನೆಯಾಗಲೀ ಕಾದಂಬರಿ ಓದುತ್ತ ನಾವು ಅನುಭವಿಸುವ ಖುಷಿಯಾಗಲೀ ಹೆಚ್ಚುವುದಿಲ್ಲ. ಹೆಚ್ಚೆಂದರೆ ಅನ್ನಾಳ ಕಥೆ ನಿಜ ಅನ್ನಿಸಬಹುದು, ಅವಳನ್ನು ಹೆಚ್ಚು ನಂಬಬಹುದು ಮತ್ತೆ ಒಂದು ಕ್ಷಣದ ಮಟ್ಟಿಗೆ ಓದಿನ ಸುಖದಿಂದ ಹುಟ್ಟುವ ನಮ್ಮ ಅತೃಪ್ತಿಯನ್ನು ಮರೆಯಬಹುದು.

ತನ್ನ ಮ್ಯೂಸಿಯಮ್ಮಿನಲ್ಲಿ ಲೇಖಕ ಪಾಮುಕ್

ಓದುಗರಾಗಿ ನಾವು ಪಡುವ ಪ್ರಯತ್ನದಲ್ಲಿ ಹೆಮ್ಮೆಯ ಅಂಶಗಳೂ ಸೇರಿರುತ್ತವೆ. ಚಿತ್ರವನ್ನು ನೋಡುವಾಗ ನಿಜ ಚಿತ್ರವನ್ನು ಕಣ್ಣೆದುರು ಕಾಣುವಂತೆ ಕಾದಂಬರಿ ಓದುವಾಗ ನಾವು ನಿಜವಾದ ಏನನ್ನೂ ಕಾಣುವುದಿಲ್ಲ; ನಾವು ಓದುವ ಪದಗಳನ್ನು ಮನಸ್ಸಿನ ಚಿತ್ರಬಿಂಬಗಳಾಗಿ ಪರಿವರ್ತಿಸಿ ಕಾದಂಬರಿ ಲೋಕವನ್ನು ನಮ್ಮ ಕಲ್ಪನೆಯಲ್ಲಿ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಪ್ರತಿಯೊಬ್ಬ ಓದುಗನೂ ತನ್ನದೇ ರೀತಿಯಲ್ಲಿ ವಿಶಿಷ್ಟ ಬಿಂಬಗಳ ಮೂಲಕ ಕಾದಂಬರಿಯನ್ನು ನೆನಪಿಟ್ಟುಕೊಂಡಿರುತ್ತಾನೆ. ಕಲ್ಪನೆಯ ವಿಷಯಕ್ಕೆ ಬಂದಾಗ ಕೆಲವು ಓದುಗರು ಸೋಮಾರಿಗಳು, ಇನ್ನು ಕೆಲವರು ಚುರುಕು. ಆಲಸೀ ಕಲ್ಪನೆಯ ಓದುಗರನ್ನು ಉದ್ದೇಶಿಸಿ ಬರೆಯುವ ಲೇಖಕನು ಓದುಗರು ಯಾವ ಆಲೋಚನೆ, ಯಾವ ಭಾವ, ಬಿಂಬಗಳನ್ನು ಮನಸ್ಸಿಗೆ ತಂದುಕೊಳ್ಳಬೇಕು ಅನ್ನುವುದನ್ನು ಸುಸ್ಪಷ್ಟವಾಗಿ ಹೇಳುತ್ತಾನೆ. ಓದುಗರ ಕಲ್ಪನಾಶಕ್ತಿಯಲ್ಲಿ ವಿಶ್ವಾಸವಿರುವ ಲೇಖಕ ಆಲೋಚನೆ ಮತ್ತು ಭಾವನೆಗಳನ್ನು ಓದುಗರೇ ಕಟ್ಟಿಕೊಳ್ಳಲಿ ಎಂದು ಬಿಟ್ಟುಬಿಡುತ್ತಾನೆ. ನಾವು ಓದುತ್ತಿರುವುದಕ್ಕೆ ಸಂವಾದಿಯದ ಭಾವನೆಯನ್ನು ಕಲ್ಪಿಸಿಕೊಳ್ಳಲು ಎಷ್ಟೋ ಬಾರಿ ವಿಫಲರಾಗುತ್ತೇವೆ; ‘ಕಾದಂಬರಿ ಅರ್ಥವಾಗಲಿಲ್ಲ’ ಎನ್ನುತ್ತೇವೆ. ನಮ್ಮ ಕಲ್ಪನೆಗೆ ಜೀವ ಬರಿಸಲು ಕಷ್ಟಪಟ್ಟಿರುತ್ತೇವೆ, ಲೇಖಕ ಸೂಚಿಸುವ ಚಿತ್ರಗಳನ್ನು ಕಣ್ಣೆದುರು ತಂದುಕೊಳ್ಳಲು ಪ್ರಯತ್ನಪಟ್ಟಿರುತ್ತೇವೆ. ಇಂಥ ಪ್ರಯತ್ನದ ಫಲವಾಗಿಯೇ ಕಾದಂಬರಿಯ ಬಗ್ಗೆ ಒಡೆತನದ ಭಾವವೊಂದು ಸಾವಕಾಶವಾಗಿ ನಮ್ಮಲ್ಲಿ ಮೂಡುತ್ತದೆ. ಈ ಕಾದಂಬರಿ ನನಗಾಗಿಯೇ ಬರೆದದ್ದು, ನನಗೆ ಮಾತ್ರ ಇದು ಸರಿಯಾಗಿ ಅರ್ಥವಾಗಿದೆ ಅನ್ನುವ ಹೆಮ್ಮೆ ಮೂಡುತ್ತದೆ.

ಕಾರಣ ಯಾವುದೇ ಇರಲಿ, ಕಾದಂಬರಿಯ ಲೋಕದಲ್ಲಿ ನಮಗೆದುರಾಗುವ ಬಿಂಬ, ವಾಸನೆ, ಶಬ್ದಗಳು ಬದುಕಿನಲ್ಲಿ ನಮಗೆ ದೊರೆಯದಂಥ ಅಧಿಕೃತತೆಯ ಭಾವವನ್ನು ತರುತ್ತವೆ. ಹಾಗೆಯೇ ನಾವು ಮುಟ್ಟಬಹುದಾದ, ಮೂಸಬಹುದಾದ, ಕೇಳಬಹುದಾದ, ರುಚಿನೋಡಬಹುದಾದ ಒಂದೇ ಒಂದು ವಸ್ತುವನ್ನೂ ಕಾದಂಬರಿ ನಮ್ಮೆದುರು ತಂದಿರಿಸುವುದಿಲ್ಲ.

ಈ ಒಡೆತನದ ಹೆಮ್ಮೆಯ ಭಾವಕ್ಕೆ ಕಾರಣವೂ ಇದೆ. ಓದುಗರಾಗಿ ನಾವೇ ಕಾದಂಬರಿಯನ್ನು ಕಲ್ಪನೆಯಲ್ಲಿ ಕಾಣುತ್ತ ಅದಕ್ಕೆ ಜೀವ ತುಂಬಿರುತ್ತೇವೆ. ಸೂಕ್ಷ್ಮ, ಸಂವೇದನಾಶೀಲರಾದ ‘ನಮ್ಮಂಥ’ ಓದುಗರು ಇದ್ದರೆ ಮಾತ್ರ ಲೇಖಕನ ಕಾದಂಬರಿ ‘ಕೃತಿ’ಗೊಳ್ಳುತ್ತದೆ. ನಾವು ಇಂಥ ವಿಶೇಷ ಓದುಗರು ಅನ್ನುವುದನ್ನು ಸಾಧಿಸುವ ಸಲುವಾಗಿಯೇ ಕಾದಂಬರಿಯು ಕಲ್ಪನೆಯ ಸೃಷ್ಟಿ ಅನ್ನುವುದನ್ನು ಮರೆಯುವ ನಾಟಕವಾಡುತ್ತೇವೆ. ಕಾದಂಬರಿಯ ಘಟನೆಗಳು ನಡೆಯುವ ಊರು, ಬೀದಿ, ಮನೆಗಳನ್ನು ಹೋಗಿ ನೋಡಲು ಬಯಸುತ್ತೇವೆ. ಕಾದಂಬರಿಯ ಲೋಕವನ್ನು ಇನ್ನೂ ಚೆನ್ನಾಗಿ ಅರಿಯಬೇಕು ಅನ್ನುವ ಆಸೆ ಲೋಕ ‘ನಾನು ಕಲ್ಪಿಸಿಕೊಂಡ ಹಾಗೆಯೇ ಇದೆ’ ಎಂದು ನಮ್ಮನ್ನು ನಂಬಿಸಿಕೊಳ್ಳುವ ಆಸೆ ಎರಡೂ ಇಂಥ ಬಯಕೆಯ ಹಿಂದೆ ಇರುತ್ತವೆ. ‘ಸಮರ್ಪಕ ಪದ’ದ ಮೂಲಕ ನಮ್ಮ ಮನಸ್ಸಿನಲ್ಲಿ ‘ಸಮರ್ಪಕ ಚಿತ್ರ’ವಾಗಿ ಮೂಡುವ ಬೀದಿ, ಮನೆ, ವಸ್ತುಗಳೆಲ್ಲ ನಿಜವಾಗಲೂ ಹಾಗೇ ಇವೆಯೇ ಎಂದು ಪರಿಶೀಲಿಸಿಕೊಳ್ಳುವ ಆಸೆ ಹುಟ್ಟುತ್ತದೆ. ಇದರಿಂದ ನಮ್ಮ ಮನಸ್ಸಿನ ಅತೃಪ್ತಿಯಿಂದ ಬಿಡುಗಡೆಯೂ ಓದುಗರಾಗಿ ವಿವರಗಳನ್ನೆಲ್ಲ ಸರಿಯಾಗಿ ಕಲ್ಪಿಸಿಕೊಂಡಿದ್ದೇವೆ ಎಂಬ ಹೆಮ್ಮೆಯೂ ನಮಗೆ ದೊರೆಯುತ್ತವೆ.

ಈ ಹೆಮ್ಮೆಯ ಭಾವದ ವಿವಿಧ ಛಾಯೆಗಳೇ ಕಾದಂಬರಿ ಮತ್ತು ಮ್ಯೂಸಿಯಮ್ ಅಥವಾ ಕಾದಂಬರಿ ಓದುಗರು ಮತ್ತು ಮ್ಯೂಸಿಯಮ್ ವೀಕ್ಷಕರ ನಡುವೆ ಸಂಬಂಧ ಕಲ್ಪಿಸುತ್ತವೆ. ನಮ್ಮ ಚರ್ಚೆಯ ವಿಷಯ ಕಾದಂಬರಿಯೇ ಹೊರತು ಮ್ಯೂಸಿಯಮ್ ಅಲ್ಲ. ಆದರೂ ಕಾದಂಬರಿ ಓದುವಾಗ ನಮ್ಮ ಕಲ್ಪನೆಯ ಕಿಡಿಯನ್ನು ಹೊತ್ತಿಸುವ ಉದ್ದೇಶಗಳನ್ನು ತೋರಿಸುವ ಸಲುವಾಗಿ ಹೆಮ್ಮೆ ಮತ್ತು ಮ್ಯೂಸಿಯಮ್ ಎಂಬ ಈ ಉದಾಹರಣೆಯನ್ನು ಮುಂದುವರೆಸುತ್ತೇನೆ. ಚೆಸ್ ಆಟಗಾರರು ಎದುರಾಳಿಯ ಮುಂದಿನ ನಡೆಯನ್ನು ಊಹಿಸಿ ಆಡುತ್ತಾರೆ. ಹಾಗೆಯೇ ಕಾದಂಬರಿಕಾರನು ಓದುಗರನ ಕಲ್ಪನೆ, ಆಸೆಗಳನ್ನು, ಅವನ್ನು ಉದ್ದೀಪಿಸುವ ಉದ್ದೇಶಗಳನ್ನು ಊಹಿಸುತ್ತಾನೆ. ಓದುಗರ ಮನಸ್ಸು ಹೇಗೆ ಸ್ಪಂದಿಸಬಹುದು ಅನ್ನುವ ಸಂಗತಿ ಕಾದಂಬರಿಕಾರನಿಗೆ ಮುಖ್ಯವಾಗುತ್ತದೆ.
ಮ್ಯೂಸಿಯಮ್ಮು ಮತ್ತು ಕಾದಂಬರಿಯ ಈ ಸಂಕೀರ್ಣವಾದ ವಿಷಯವನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಂಡರೆ ಸ್ವಲ್ಪ ಸುಲಭವಾಗುತ್ತದೆ. ಆದರೆ, ಈ ಮೂರೂ ವಿಷಯಗಳು ಪರಸ್ಪರ ಸಂಬಂಧಿಗಳು, ಹೆಮ್ಮೆ ಅನ್ನುವುದು ಈ ಮೂರಕ್ಕೂ ಸಮಾನವಾದದ್ದು ಅನ್ನುವುದನ್ನು ನೆನಪಿಟ್ಟುಕೊಳ್ಳೋಣ.

ಆತ್ಮ ಪ್ರತ್ಯಯ

ಆಧುನಿಕ ಮ್ಯೂಸಿಯಮ್ ನ ಹುಟ್ಟು ಹದಿನೇಳನೆಯ ಶತಮಾನದ ಆರಂಭ ಭಾಗದಲ್ಲಿ ಶ್ರೀಮಂತರು, ಅಧಿಕಾರಸ್ಥರು ಹೊಂದಿದ್ದ ‘ಕುತೂಹಲಕರ ವಸ್ತುಗಳ ಪೆಟ್ಟಿಗೆ’ಗಳಲ್ಲಿ, ಸಂಪತ್ತಿನ ಪ್ರದರ್ಶನದಲ್ಲಿ ಅಡಗಿದೆ. ಬಗೆಬಗೆಯ ಕಪ್ಪೆ ಚಿಪ್ಪು, ಲೋಹದ ಅದಿರಿನ ಮಾದರಿ, ಗಿಡ, ದಂತ, ಪ್ರಾಣಿ ಮಾದರಿ, ದೂರ ದೂರದ ಮತ್ತು ಅಸಾಮಾನ್ಯ ಮೂಲಗಳಿಂದ ಸಂಗ್ರಹಿಸಿದ ಚಿತ್ರ ಇವೆಲ್ಲವೂ ಸಂಪತ್ತು ಪ್ರದರ್ಶನವೇ ಆಗಿದ್ದವು. ಈ ಅರ್ಥದಲ್ಲಿ ಯೂರೋಪಿನ ರಾಜರ ಅರಮನೆಗಳ ಗ್ರಾಂಡ್ ರೂಮು, ಹಾಲ್ ಗಳೇ ಮೊದಲ ಮ್ಯೂಸಿಯಮ್ ಗಳು. ರಾಜರ ದರ್ಬಾರ್ ಹಾಲ್ ಗಳಲ್ಲಿದ್ದ ವಸ್ತು ಸಂಗ್ರಹ ಮತ್ತು ಚಿತ್ರ ಸಂಗ್ರಹ ಅವರ ಅಧಿಕಾರ, ಅಭಿರುಚಿ, ಸೂಕ್ಷ್ಮಜ್ಞತೆಗಳನ್ನು ತೋರುತ್ತಿದ್ದವು. ಆಳುವ ವರ್ಗ ಅಧಿಕಾರ ಕಳೆದುಕೊಂಡಾಗಲೂ ಈ ಸಾಂಕೇತಿಕತೆ ಹಾಗೇ ಉಳಿಯಿತು. ಫ್ರಾನ್ಸ್ ನ ಲೂವ್ ಅರಮನೆಯಂಥವು ಸಾರ್ವಜನಿಕ ಮ್ಯೂಸಿಯಮ್ ಗಳಾಗಿ ಬದಲಾದವು. ಲೂವ್ ಅರಮನೆ ಫ್ರೆಂಚ್ ರಾಜರ ಸಂಪತ್ತಿಗಿಂತ ಮಿಗಿಲಾಗಿ ಫ್ರೆಂಚ್ ಜನರ ಶಕ್ತಿ, ಸಂಸ್ಕೃತಿ ಮತ್ತು ಅಭಿರುಚಿಯ ಪ್ರತಿನಿಧಿಯಾಯಿತು. ಅಲ್ಲಿದ್ದ ತೀರ ಅಪರೂಪದ ಚಿತ್ರಗಳು, ವಸ್ತುಗಳು ಸಾಮಾನ್ಯ ಜನರ ನೋಟಕ್ಕೂ ದಕ್ಕಿದವು. ಮ್ಯೂಸಿಯಮ್ ಗಳ ಬೆಳವಣಿಗೆ ಮತ್ತು ಸಾಹಿತ್ಯ ಪ್ರಕಾರಗಳ ಪರಿವರ್ತನೆಗಳ ನಡುವೆ ಸಡಿಲವಾದ ಸಂಬಂಧವನ್ನು ಕಲ್ಪಿಸಲು ಸಾಧ್ಯವಿದೆ. ಅರಮನೆಗಳು ಸಾರ್ವಜನಿಕ ಮ್ಯೂಸಿಯಮ್ ಗಳಾದಂತೆ ರಾಜರ, ವೀರರ ಸಾಹಸಗಳನ್ನು ಹೇಳುತಿದ್ದ ಮಹಾಕಾವ್ಯ, ರೊಮಾನ್ಸ್ ಗಳು ಕ್ರಮೇಣ ಮಧ್ಯಮವರ್ಗದ ಜನರ ಬದುಕನ್ನು ಚಿತ್ರಿಸುವ ಕಾದಂಬರಿಗಳಿಗೆ ಜಾಗಮಾಡಿಕೊಟ್ಟವು. ಮ್ಯೂಸಿಯಮ್ ಮತ್ತು ಕಾದಂಬರಿಯ ಸಾಂಕೇತಿಕ ಮತ್ತು ಪ್ರತಿನಿಧಿತ್ವಗುಣಗಳ ವಿವರಣೆ ನನ್ನ ಉದ್ದೇಶವಲ್ಲ. ಅವಕ್ಕೆ ಇರುವ ‘ವಸ್ತು ಸಂಗ್ರಹ ಗುಣ’ ನಮ್ಮ ಉದ್ದೇಶಕ್ಕೆ ಮುಖ್ಯವಾದದ್ದು.

ನಮ್ಮ ದಿನ ನಿತ್ಯದ ಅನುಭವ, ಸಂವೇದನೆ, ಮತ್ತು ಬದುಕಿನ ಮೂಲ ಅಂಶಗಳನ್ನು ಬಳಸಿಕೊಳ್ಳುವ ಮೂಲಕವೇ ಕಾದಂಬರಿ ಸಶಕ್ತವಾಗುತ್ತದೆ. ಕಾದಂಬರಿಯು ಸಾಮಾನ್ಯವಾದ ಮನುಷ್ಯಾನುಭವ, ಸಾಮಾನ್ಯ ವಸ್ತುಗಳನ್ನು ಕುರಿತ ನಮ್ಮ ಗ್ರಹಿಕೆ, ನಮ್ಮ ಅಂಗಭಂಗಿ, ಉಕ್ತಿ ರೀತಿ, ಧೋರಣೆಗಳ ಅತ್ಯಂತ ಶ್ರೀಮಂತ, ಸಂಗ್ರಹಾಲಯವೂ ಹೌದು. ಬಗೆಬಗೆಯ ಸದ್ದು, ಪದ, ನುಡಿಬಳಕೆ, ವಾಸನೆ, ಚಿತ್ರ, ರುಚಿ, ವಸ್ತು ಮತ್ತು ಬಣ್ಣಗಳನ್ನು ಕಾದಂಬರಿಕಾರರು ಹುಷಾರಾಗಿ ಗಮನಿಸಿ ತಮ್ಮ ಬರವಣಿಗೆಯಲ್ಲಿ ಬಳಸಿದ್ದಾರೆ ಅನ್ನುವ ಕಾರಣಕ್ಕೇ ಅವೆಲ್ಲ ನಮ್ಮ ನೆನಪಿನಲ್ಲಿ ಉಳಿಯುತ್ತವೆ. ಮ್ಯೂಸಿಯಮ್ಮಿನಲ್ಲಿ ಚಿತ್ರವೊಂದರ ಮುಂದೆ ನಿಂತಿರುವಾಗ ಕ್ಯಾಟಲಾಗಿನ ನೆರವಿನಿಂದ ಆ ಚಿತ್ರವು ಅದು ರಚನೆಗೊಂಡ ಕಾಲದ ಜನರ ಬದುಕು, ಕಥೆ, ಲೋಕದೃಷ್ಟಿಗಳೊಂದಿಗೆ ಹೇಗೆ ಹೊಂದಿಕೊಂಡಿತ್ತು ಅನ್ನುವುದನ್ನು ಊಹಿಸಬಹುದು ಅಷ್ಟೆ. ಕಾದಂಬರಿ ಓದುವಾಗ ಚಿತ್ರ, ವಸ್ತು, ಸಂಭಾಷಣೆ, ವಾಸನೆ, ಕಥೆ, ನಂಬಿಕೆ, ಸಂವೇದನೆಗಳು ಕಾದಂಬರಿ ಲೋಕದ ದಿನ ನಿತ್ಯದ ಬದುಕಿನ ಅಖಂಡ ಭಾಗವಾಗಿ ಸಂಯೋಜಿತಗೊಳ್ಳುತ್ತವೆ.

ವಿಶೇಷವಾಗಿ ದಿನನಿತ್ಯದ ಸಾಮಾನ್ಯ ಮಾತುಕಥೆಗಳನ್ನು ದಾಖಲಿಸಿಡುವ ವಿಚಾರದಲ್ಲಿ ಕಾದಂಬರಿಗೆ ‘ವಸ್ತುಸಂಗ್ರಹ’ ಗುಣ ಇರುತ್ತದೆ. ಅದು ಸಂಪ್ರದಾಯ, ಧೋರಣೆ, ಬದುಕಿನ ದಾರಿಗಳನ್ನು ಸಂರಕ್ಷಿಸಿಡುವ ಸಾಮರ್ಥ್ಯವನ್ನು ಕಾದಂಬರಿಗೆ ತಂದುಕೊಡುತ್ತದೆ.. ಹತ್ತೊಂಬತ್ತನೆಯ ಶತಮಾನದಲ್ಲಿ ಫೋನೋಗ್ರಾಫ್ ಅನ್ವೇಷಣೆಯಾಗುವುದಕ್ಕೂ ಹಿಂದಿನ ತಲೆಮಾರಿನ ದನಿಗಳು, ಸಾವಿರಾರು ವರ್ಷಗಳ ಇತಿಹಾಸದಲ್ಲಿ ಮಿಲಿಯಗಟ್ಟಲೆ ಜನರ ದನಿಗಳು ಮತ್ತೆ ದೊರೆಯಲಾಗದಂತೆ ಮರೆಯಾಗಿವೆ; ಅದೇ ರೀತಿಯಲ್ಲಿ ಹತ್ತೊಂಬತ್ತನೆಯ ಶತಮಾನದ ಮಹಾನ್ ಕಾದಂಬರಿಕಾರರು, ನಾಟಕಕಾರರು ತಮ್ಮ ಕೃತಿಗಳಲ್ಲಿ ದಾಖಲಿಸುವವರೆಗೆ ಆ ಕಾಲದ ಜನರ ದಿನ ನಿತ್ಯದ ಮಾತುಕಥೆ, ಆ ಮಾತುಕಥೆಯ ಸ್ವಚ್ಛಂದತೆ, ಸಡಿಲ ತರ್ಕ, ಸಂಕೀರ್ಣತೆಗಳನ್ನು ಕಾಪಿಡುವವರು ಯಾರೂ ಇರಲಿಲ್ಲ. ಬದುಕಿನಿಂದ ನೇರವಾಗಿ ಎತ್ತಿಕೊಂಡ, ಶಿಷ್ಟ ಶೈಲಿಗೆ ಅನುಗುಣವಾಗಿ ತಿದ್ದಲ್ಪಡದ ಮಾತುಗಳನ್ನು ಹಾಗೆ ಹಾಗೇ ದಾಖಲಿಸುವ ಹೊಣೆ ಕಾದಂಬರಿಗೆ ಇದೆ ಎಂದು ಮಾರ್ಗರೆಟ್ ಯೂರ್ಸೆನಾರ್ ಹೇಳುತ್ತಾಳೆ.

ದಿನನಿತ್ಯವೂ ಗಮನಕ್ಕೆ ಬರುವ ಸಂಗತಿಗಳನ್ನು ಎತ್ತಿ ಹೇಳುವುದು, ಅವನ್ನು ಕಲ್ಪನೆಯ ಮಾಧ್ಯಮದಲ್ಲಿ ಮರು ಸಂಯೋಜಿಸಿ ಬದುಕಿನ ಗಹನ ಅರ್ಥಗಳನ್ನು ಸೂಚಿಸುವುದು—ಇದು ಕಾದಂಬರಿಯ ವಿಶಿಷ್ಟ ಗುಣ ಅನ್ನುವುದು ನಿಜವಾಗಿದ್ದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಮಾತ್ರವೇ ನಮಗೆ ಇಂದು ಪರಿಚಿತವಾಗಿರುವ ರೂಪದ ಕಾದಂಬರಿ ರೂಪುಗೊಂಡಿತು ಅನ್ನಬೇಕು. ದಿನ ನಿತ್ಯದ ಮಾತಿಗೆ ಇರುವ ಮರುಳು ಮಾಡುವ ಗುಣ ಮತ್ತು ಶಕ್ತಿಗಳನ್ನು ಬಳಸಿಕೊಳ್ಳದ ಕಾದಂಬರಿಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ದಿನ ನಿತ್ಯದ ಮಾತುಕತೆ ಎಂಬ ಕಾಲುವೆಯ ಮೂಲಕವೇ ಕಾದಂಬರಿಯ ಜಗತ್ತಿನ ತಳಹದಿಯಾಗಿರುವ ಮಾಮೂಲೀ ಗಳಿಗೆಗಳೂ ಯಾದೃಚ್ಛಿಕ ಸಂವೇದನೆಗಳೂ ಓದುಗರತ್ತ ಸಾಗಿಬರುತ್ತವೆ. ಹಾಗೆಂದು ಇಂಥ ಮಾತು ಕಥೆಯೇ ಕಾದಂಬರಿಯ ಲ್ಯಾಂಡ್ ಸ್ಕೇಪನ್ನು ಆಳುವುದಕ್ಕೂ ಬಿಡಬಾರದು. ಪ್ರೌಸ್ಟ್ವ ನಿಂದ ನಾವು ಕಲಿಯಬಹುದಾದ ಮುಖ್ಯ ಪಾಠಗಳಲ್ಲಿ ಇದೂ ಒಂದು.

ಮ್ಯೂಸಿಯಮ್ಮುಗಳು ವಸ್ತುಗಳನ್ನು ಸಂರಕ್ಷಿಸುವ ಹಾಗೆಯೇ ಕಾದಂಬರಿಗಳು ಜನರ ಮಾಮೂಲಿ ಯೋಚನೆಗಳ ಏರು, ಇಳಿತ, ದನಿ, ಬಣ್ಣ, ಬನಿ, ಒಂದು ವಿಷಯದಿಂದ ಮತ್ತೊಂದಕ್ಕೆ ಹೇಗೆ ಹೇಗೋ ಕುಪ್ಪಳಿಸುವ ರೀತಿ ಇವನ್ನೆಲ್ಲ ಅವರದೇ ಮಾತುಗಳಲ್ಲಿ ಹಿಡಿದಿಡುತ್ತವೆ. ಗಾದೆ, ಪಡಿನುಡಿ, ಸೂತ್ರ ರೂಪದ ಮಾತು ಇವನ್ನಷ್ಟೇ ಅಲ್ಲ, ಅವೆಲ್ಲ ನಿತ್ಯದ ಬದುಕಿನ ಮಾತಿನ ವಿನಿಮಯದಲ್ಲಿ ಹೇಗೆ ಬಳಕೆಯಾಗುತ್ತವೆ ಅನ್ನುವುದನ್ನೂ ಕಾದಂಬರಿ ಹಿಡಿದಿಡುತ್ತದೆ. ಮಾತು ಕಲಿಯುತ್ತಿರುವ ಮಗು ಭಾಷಿಕ ಅನ್ವೇಷಣೆಗಳನ್ನು ಮಾಡುವುದನ್ನು ಕಂಡು ಎಷ್ಟು ಖುಷಿಪಡುತ್ತೇವೋ ಅಂಥದೇ ಖುಷಿಯನ್ನು ಜೇಮ್ಸ್ ಜಾಯ್ಸ್ ನ ಕಾದಂಬರಿ ಓದುವಾಗ ಕಂಡುಕೊಳ್ಳುತ್ತೇವೆ. ಜಾಯ್ಸ್ ನ ನಂತರ ಫಾಕ್ನರ್ ನಿಂದ ವರ್ಜೀನಿಯ ವೂಲ್ಫ್ ವರೆಗೆ, ಬ್ರೋಚ್ ನಿಂದ ಗಾರ್ಸಿಯ ಮಾಕ್ರ್ವಿಸ್ ವರೆಗೆ ಅನೇಕ ಮಹಾನ್ ಕಾದಂಬರಿಕಾರರು ಅಂತರಂಗದ ಮಾತಿನ ರೀತಿಯ ವೈವಿಧ್ಯವನ್ನು ಸೆರೆಹಿಡಿದರು. ಈ ಲೇಖಕರೆಲ್ಲ ಹೆಚ್ಚು ಮನರಂಜಿಸಿದರೂ, ಮಾತಿನ ಚೆಲುವು ಮತ್ತು ಮಾತು ನಮ್ಮ ಬದುಕನ್ನು ಪರಿಣಾಮಿಸುವ ರೀತಿಯನ್ನು ವ್ಯಕ್ತಪಡಿಸಿದರೂ ನಮ್ಮ ಮನಸ್ಸು ಕೆಲಸ ಮಾಡುವ ರೀತಿಯನ್ನು ಜಾಯ್ಸ್ ನಷ್ಟು ಸಮರ್ಥವಾಗಿ ಗ್ರಹಿಸಲಿಲ್ಲ.

ಮ್ಯೂಸಿಯಮ್ಮುಗಳು ವಸ್ತುಗಳನ್ನು ಸಂರಕ್ಷಿಸುವ ಹಾಗೆಯೇ ಕಾದಂಬರಿಗಳು ಜನರ ಮಾಮೂಲಿ ಯೋಚನೆಗಳ ಏರು, ಇಳಿತ, ದನಿ, ಬಣ್ಣ, ಬನಿ, ಒಂದು ವಿಷಯದಿಂದ ಮತ್ತೊಂದಕ್ಕೆ ಹೇಗೆ ಹೇಗೋ ಕುಪ್ಪಳಿಸುವ ರೀತಿ ಇವನ್ನೆಲ್ಲ ಅವರದೇ ಮಾತುಗಳಲ್ಲಿ ಹಿಡಿದಿಡುತ್ತವೆ. ಗಾದೆ, ಪಡಿನುಡಿ, ಸೂತ್ರ ರೂಪದ ಮಾತು ಇವನ್ನಷ್ಟೇ ಅಲ್ಲ, ಅವೆಲ್ಲ ನಿತ್ಯದ ಬದುಕಿನ ಮಾತಿನ ವಿನಿಮಯದಲ್ಲಿ ಹೇಗೆ ಬಳಕೆಯಾಗುತ್ತವೆ ಅನ್ನುವುದನ್ನೂ ಕಾದಂಬರಿ ಹಿಡಿದಿಡುತ್ತದೆ.

ಗದ್ಯದಲ್ಲಿ ಬರೆದ ಕಾದಂಬರಿಯ ಮುಖ್ಯ ಲಕ್ಷಣವೆಂದರೆ ದಿನನಿತ್ಯದ ಭಾಷೆಯ ಬಳಕೆ. ಈ ಅಂಶದ ಮಟ್ಟಿಗೆ ಮೊದಲ ಟರ್ಕಿಶ್ ಕಾದಂಬರಿ (ಯಾವುದೇ ಸಂಸ್ಕೃತಿಯಲ್ಲಿ ‘ಮೊದಲ’ ಕಾದಂಬರಿಯನ್ನು ಗುರುತಿಸುವುದು ತೀವ್ರ ವಾಗ್ವಾದಕ್ಕೆ ಎಡೆ ಮಾಡಿಕೊಡುವ ಕೆಲಸ) ಮಹಮದ್ ಎಕ್ರೆಮ್ ಬರೆದ ‘ಎ ಕ್ಯಾರೇಜ್ ಅಫೇರ್’ ಪ್ರಕಟವಾದದ್ದು 1896ರಲ್ಲಿ. ಈ ಕಾದಂಬರಿ ಪಾಶ್ಚಾತ್ಯೀಕರಣ, ಪಾಶ್ಚಾತ್ಯದ ಆರಾಧನೆ, ಪಾಶ್ಚಾತ್ಯಪರ ಬುದ್ಧಿಜೀವಿಗಳ ಬಡಿವಾರ ಇಂಥ ವಿಷಯಗಳನ್ನು ಕುರಿತದ್ದು. ಆಟ್ಟೊಮನ್ ಟರ್ಕಿಶ್ ಸೃಷ್ಟಿಯಾದ, ‘ಪೂರ್ವ-ಪಶ್ಚಿಮ ಕಾದಂಬರಿ’ ಎಂದೇ ಪ್ರಸಿದ್ಧವಾಗಿರುವ ಪ್ರಕಾರಕ್ಕೆ ಸೇರಿದ ಕೃತಿ ಇದು. ಈ ಪ್ರಕಾರ ಇಂದೂ ಬಳಕೆಯಲ್ಲಿದೆ. (ನನ್ನ ‘ವೈಟ್ ಕ್ಯಾಸಲ್’ ಈ ಕಾದಂಬರಿ ಪ್ರಕಾರಕ್ಕೆ ಪುಟ್ಟದೊಂದು ಕೊಡುಗೆ.) ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದ ಆಟ್ಟೊಮನ್ ಬುದ್ಧಿಜೀವಿಗಳ ಚಿತ್ರಣದಲ್ಲಿ ‘ಎ ಕ್ಯಾರೇಜ್ ಅಫೇರ್’ ಕಾದಂಬರಿ ಹಾಸ್ಯಮಯವಾಗಿದೆ, ಪ್ರಖರವಾಗಿದೆ. ಪಶ್ಚಿಮವನ್ನು ಅನುಕರಿಸಬೇಕೆಂಬ ಅವರ ಬಯಕೆಯೇ ‘ಹಾಸ್ಯಮಯ ದುರಂತ ಗೊಂದಲ’ಕ್ಕೆ ಕಾರಣವಾಗುವುದನ್ನು ಟರ್ಕಿಶ್ ಮತ್ತು ಫ್ರೆಂಚ್ ಭಾಷೆಗಳ ಮಿಶ್ರಣದ ಮೂಲಕ ಚಿತ್ರಿಸಲಾಗಿದೆ. ಇಂಥದೇ ಕೃತಕತೆ ಟಾಲ್ಸ್ ಟಾಯ್ ನ ‘ಯುದ್ಧ ಮತ್ತು ಶಾಂತಿ’ಯಲ್ಲೂ ಇದೆ. ಅದರಲ್ಲಿನ ಶ್ರೀಮಂತರ ವರ್ಗ ನೆಪೋಲಿಯನ್ನನ ವಿರುದ್ಧ ಯುದ್ಧ ಹೂಡಿರುವಾಗಲೇ ದಿನ ನಿತ್ಯದ ವ್ಯವಹಾರದಲ್ಲಿ ಫ್ರೆಂಚ್ ಭಾಷೆ ಬಳಸುತ್ತಿರುತ್ತಾರೆ. ಆದರೆ ‘ಯುದ್ಧ ಮತ್ತು ಶಾಂತಿಯ’ಯ ಮಹತ್ವಾಕಾಂಕ್ಷೆಯ ವಿನ್ಯಾಸವಾಗಲೀ ಗಹನತೆಯಾಗಲೀ ‘ಎ ಕ್ಯಾರೇಜ್ ಅಫೇರ್’ ಕೃತಿಗೆ ಇಲ್ಲ. ಅದು ಕೇವಲ ವಾಸ್ತವವಾದೀ ವಿಡಂಬನೆ. ಟಾಲ್ಸ್ ಟಾಯ್, ಜಾರ್ಜ್ ಎಲಿಯಟ್, ಥಾಮಸ್ ಮನ್ ಅಥವ ಕಳೆದ ಕೆಲವು ದಶಕಗಳ ವಿ.ಎಸ್. ನೈಪಾಲ್, ಮಿಲನ್ ಕುಂದೇರ, ಜೆ.ಎಂ. ಕೋಟ್ಸೀ, ಪೀಟರ್ ಹಾಂಡ್ಕೀ ಇಂಥ ಲೇಖಕರನ್ನು ಓದುವಾಗ ನಮ್ಮ ಮನಸ್ಸು ಕಾದಂಬರಿಯ ಗುಪ್ತ ಕೇಂದ್ರದ ಅನ್ವೇಷಣೆಯಲ್ಲಿ ಸದಾ ತೊಡಗಿರುತ್ತದೆ. ಎಕ್ರೆಮ್ ನ ಕಾದಂಬರಿ ಓದುವಾಗ ಹಾಗಾಗುವುದಿಲ್ಲ. ಈ ವಿಚಿತ್ರ, ವಿಶಿಷ್ಟ ಕಾದಂಬರಿಯನ್ನು ನಾನು ಮೊದಲು ಓದಿದಾಗ ಸ್ವತಃ ನಾನೇ ಆಟ್ಟೊಮನ್ ಬುದ್ಧಿಜೀವಿಯ ಮನಸ್ಸನ್ನು ಪ್ರವೇಶಮಾಡಿದ ಹಾಗಿತ್ತು, ಇಸ್ತಾಂಬುಲ್ ನ 1890ರ ದಿನಬಳಕೆಯ ಮಾತಿನಲ್ಲಿ ಮುಳುಗಿದ ಹಾಗಿತ್ತು. ಭಾಷೆಯ ಇಂಥ ಜೀವಂತ, ಸೃಜನಶೀಲ ಬಳಕೆ ಅನುವಾದದಲ್ಲಿ ಕಳೆದು ಹೋಗುವುದು ವಿಷಾದನೀಯ.

ಕಾದಂಬರಿ ಪ್ರಕಾರ ರೂಪುಗೊಳ್ಳುವ ಮೊದಲು ದಿನನಿತ್ಯದ ಮಾತಿನ ರೂಪಗಳು ದಾಖಲೆಗೊಂಡಿರಲಿಲ್ಲ. ಈ ಸಂಗತಿ ‘ಚಾರಿತ್ರಿಕ ಕಾದಂಬರಿ’ ಎಂದು ಕರೆಯಲಾಗುವ ಕಾದಂಬರಿಯ ಬಗೆ ಎಷ್ಟು ಅಸಂಗತ, ಅಸಂಬದ್ಧ ಅನ್ನುವುದನ್ನು ನಮ್ಮ ಮನಸ್ಸಿಗೆ ತರಬೇಕು. ಚಾರಿತ್ರಿಕ ಕಾದಂಬರಿ ಅನ್ನುವುದು ಕ್ಷುಲ್ಲಕತೆಯ ವಿಧಿಯನ್ನು ಹೊತ್ತೇ ಹುಟ್ಟಿದೆ ಅನ್ನುತ್ತಾನೆ ಹೆನ್ರಿ ಜೇಮ್ಸ್. ಓದುಗರ ಮುಗ್ಧತೆಯನ್ನು ಮಾತ್ರವಲ್ಲ ಬೇರೊಂದು ಕಾಲದ ಮನುಷ್ಯ ಪ್ರಜ್ಞೆಯನ್ನು ಭಾಷೆಯಲ್ಲಿ ಹಿಡಿದಿಡುವ ಕಷ್ಟವನ್ನೂ ಅವನು ಹೇಳುತ್ತಾನೆ. ‘ಮೈ ನೇಮ್ ಈಸ್ ರೆಡ್’ ಕಾದಂಬರಿಯನ್ನು ಬರೆಯುವಾಗ ನಾನು ಆಟ್ಟೊಮನ್ ಕಾಲದ ನ್ಯಾಯಾಲಯ ದಾಖಲೆಗಳನ್ನು, ವ್ಯಾಪಾರ ವಾಣಿಜ್ಯದ ಕಡತಗಳನ್ನು, ದಿನ ನಿತ್ಯದ ಬದುಕಿನ ವಿವರಗಳನ್ನು ನೀಡುವ ಸಾರ್ವಜನಿಕ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೂ ಆ ಕಾಲದ ನಿತ್ಯದ ಬದುಕಿನ ವಿವರಗಳನ್ನು ಗ್ರಹಿಸುವುದು ಎಷ್ಟು ಕಷ್ಟವೆಂದು ಗೊತ್ತಾಯಿತು. ಕಥನದ ಕಲ್ಪಿತ ಸಂಗತಿಗಳನ್ನು ಉತ್ಪ್ರೇಕ್ಷಿಸುವ ತೀರ್ಮಾನ ಮಾಡಿದೆ. ಆ ಮೂಲಕ ಹದಿನಾರನೆಯ ಶತಮಾನದ ಇಸ್ತಾಂಬುಲ್ ನ ಸಂಭಾಷಣೆಯ ತಪ್ಪು ಒಕ್ಕಣೆ ನೀಡುವ ಅಗತ್ಯ ಬರಲಿಲ್ಲ. ನನಗೆ ಆ ಕಾಲದ ಸಹಜ ಸಂಭಾಷಣೆಯ ಗ್ರಹಿಕೆ ಸಾಧ್ಯವೂ ಇರಲಿಲ್ಲ. ಹಾಗಾಗಿ ನನ್ನ ಕೃತಿಯ ಮುಖ್ಯ ಪಾತ್ರಗಳು ಆಗಾಗ ಓದುಗರೊಡನೆ ನೇರವಾಗಿ ಮಾತಿಗಿಳಿಯುತ್ತವೆ, ನನ್ನ ಕಾದಂಬರಿಯಲ್ಲಿ ಬರುವ ಕೆಲವು ವಸ್ತು, ವರ್ಣಚಿತ್ರಗಳೂ ಮಾತಾಡುತ್ತವೆ. ಜೊತೆಗೆ ನನ್ನ ಸಮಕಾಲೀನ ಜಗತ್ತಿನ ಅಸಂಖ್ಯ ಸೂಚನೆಗಳನ್ನೂ ನೀಡಿದೆ—ಯಾಕೆಂದರೆ ಕಾದಂಬರಿಯಲ್ಲಿ ಬರುವ ಕುಟುಂಬದ ದಿನ ನಿತ್ಯದ ಬದುಕು ನಾನು ನನ್ನ ತಾಯಿ, ಅಣ್ಣಂದಿರ ಜೊತೆಯಲ್ಲಿ ಬದುಕಿದ್ದರ ಆಧಾರದ ಮೇಲೇ ರೂಪುಗೊಂಡಿದೆ.
ಸುಮಾರಾಗಿ 1980ರ ದಶಕದಿಂದ ಆಧುನಿಕೋತ್ತರ ಎಂದು ಕರೆಯಲಾಗುವ ಅನ್ವೇಷಣೆಗಳು ಕಾದಂಬರೀ ಲೋಕದಲ್ಲಿ ಕಾಣಿಸಿಕೊಂಡವು. ಜಾರ್ಜ್ ಲೂಯಿ ಬೋರೆಸ್, ಇಟಾಲೊ ಕಾಲ್ವಿನೋ ಇಂಥ ಲೇಖಕರು ‘ಕಲ್ಪಕತೆ/ಕಾಲ್ಪನಿಕತೆ’ಯ ಆಯಾಮವನ್ನು ಅನ್ವೇಷಿಸಿದವರೇ ಹೊರತು ಸೀಮಿತ ಅರ್ಥದ ಕಾದಂಬರಿಕಾರರಲ್ಲ. ಅವರ ಕೃತಿಗಳು ಕಾದಂಬರಿ ಮಾಧ್ಯಮದ ಮೂಲಕ ಆಲೋಚಿಸುವ ಪರಂಪರೆಯನ್ನು ಹುಟ್ಟು ಹಾಕಿದವು.

ಕಾದಂಬರಿಗೆ ಇರುವ ಮ್ಯೂಸಿಯಮ್ ಗುಣ ಆಲೋಚನೆಗೆ ಪ್ರಚೋದನೆ ಒದಗಿಸುವುದಕ್ಕೆ ಸಂಬಂಧಿಸಿದ್ದಲ್ಲ, ಮರೆವನ್ನು ಪ್ರತಿರೋಧಿಸುತ್ತ ಬದುಕಿನ ವಿವರಗಳನ್ನು ಪೊರೆಯುವ, ಸಂಗೋಪಿಸುವ ಕಾರ್ಯಕ್ಕೆ ಸಂಬಂಧಿಸಿದ್ದು. ಮ್ಯೂಸಿಯಮ್ಮಿನಲ್ಲಿ ತಮ್ಮ ಗತಕಾಲಕ್ಕೆ ಸಂಬಂಧಿಸಿದ್ದು ಏನೋ ಕಾದಿಡಲಾಗಿದೆ ಅನ್ನುವ ಭಾವನೆಯಿಂದ ಕುಟುಂಬದ ಮಂದಿ ಒಟ್ಟಾಗಿ ಅಲ್ಲಿಗೆ ಹೋಗುತ್ತಾರೆ. ಈ ಯೋಚನೆಯೇ ಸಂತೋಷ ನೀಡುತ್ತದೆ. ಓದುಗರು ಕೂಡ ತಮ್ಮ ವಾಸ್ತವ ಬದುಕಿನ ಹಲವು ಮುಖಗಳನ್ನು ಕಾದಂಬರಿ ಒಳಗೊಂಡಿದೆ ಅನ್ನುವ ಕಾರಣಕ್ಕೇ ಓದುತ್ತಾರೆ: ಈ ವಿವರಗಳು— ಅವರ ಮನೆ ಇರುವ ಬೀದಿಯ ತುದಿಯ ಬಸ್ ಸ್ಟಾಪು ಇರಬಹುದು, ಓದುವ ದಿನಪತ್ರಿಕೆ, ಇಷ್ಟವಾದ ಸಿನಿಮಾ, ತಮ್ಮ ಮನೆಯ ಕಿಟಕಿಯಿಂದ ಕಾಣುವ ದೃಶ್ಯ, ಕುಡಿಯುವ ಟೀ, ಕಣ್ಣಿಗೆ ಬೀಳುವ ಜಾಹಿರಾತು, ಪೋಸ್ಟರು, ಓಣಿ, ಸಾಲುಮರ, ನಡೆದಾಡುವ ಸರ್ಕಲು, ಇಂಥವು ಏನಾದರೂ ಇರಬಹುದು. ಈ ಸಂಗತಿ ಮ್ಯೂಸಿಯಮ್ ಗಳಲ್ಲಿ ನಾವು ಅನುಭವಿಸುವ ಭ್ರಮೆ ಮತ್ತು ಹೆಮ್ಮೆಗೆ ಸಮಾನಾಂತರವಾದದ್ದು. ಇದೆಲ್ಲ ನಮಗೆ ಗೊತ್ತು, ನಮಗೆ ಸಂಬಂಧಿಸಿದ್ದು ಅನ್ನುವ ಭಾವ ಇದು. ಚರಿತ್ರೆ ಅರ್ಥಹೀನವಾದದ್ದು, ಪೊಳ್ಳಾದದ್ದು ಅಲ್ಲ, ನಮ್ಮ ಬದುಕಿನ ಯಾವುದೋ ಭಾಗ ದಾಖಲುಗೊಂಡು ಜೀವಂತವಾಗಿರುತ್ತದೆ ಅನ್ನುವ ಸಮಾಧಾನ ಇದು.


ಕಾದಂಬರಿ ಮತ್ತು ಕಾವ್ಯದ ಅಮರತ್ವವನ್ನು ಕುರಿತ ಜನಪ್ರಿಯವಾದ ಆದರೆ ತಿರುಳಿಲ್ಲದ ಖಾಲಿ ನಂಬಿಕೆಯೇ ಈ ಸಮಾಧಾನವನ್ನು, ಹೆಮ್ಮೆಯನ್ನು ಬಲಗೊಳಿಸಿ ಪೋಷಿಸಿ ಕಾಪಾಡುತ್ತದೆ. ಒಂದು ವ್ಯತ್ಯಾಸವಿದೆ. ಮ್ಯೂಸಿಯಮ್ ವಸ್ತುಗಳನ್ನು ಮಾತ್ರ ಸಂಗ್ರಹಿಸಿ ಇಡುತ್ತದೆ, ಕಾದಂಬರಿಯು ವಸ್ತುಗಳೊಡನೆ ನಮ್ಮ ಮುಖಾಮುಖಿಯನ್ನು, ಅಂದರೆ ವಸ್ತುಗಳನ್ನು ಕುರಿತ ನಮ್ಮ ಗ್ರಹಿಕೆ, ಭಾವಗಳನ್ನು ಸಂಗ್ರಹಿಸಿ ಇಡುತ್ತದೆ. ‘ನಾನು ನೋಡಿದ್ದನ್ನೇ, ಅನುಭವಿಸಿದ್ದನ್ನೇ ನೀವು ಬರೆದಿದ್ದೀರಿ. ನೀವು ನನ್ನ ಬದುಕನ್ನೇ ಬರೆದಿದ್ದೀರಿ’ ಎಂಬ ಮಾತನ್ನು ಇತರ ಕಾದಂಬರಿಕಾರರ ಹಾಗೆ ನಾನೂ ಕೇಳಿದ್ದೇನೆ. ಈ ಮಾತಿನಿಂದ ಸಂತೋಷಪಡಬೇಕೋ ಬೇಸರಗೊಳ್ಳಬೇಕೋ ಇನ್ನೂ ತಿಳಿದೇ ಇಲ್ಲ. ಇಂಥ ಮಾತು ಕೇಳಿದಾಗ ನಾನು ಕಲ್ಪನೆಯ ಮೂಲಕ ಕಥೆಗಳನ್ನು ಸೃಷ್ಟಿಸುವ ಕಲೆಗಾರನಲ್ಲ, ಕೇವಲ ಸಮುದಾಯದ ಬದುಕಿನ ಕ್ರಮ, ನುಡಿ, ಪ್ರತಿಮೆ, ವಸ್ತುಗಳನ್ನು ದಾಖಲಿಸುವ ಗುಮಾಸ್ತ ಅನ್ನಿಸಿಬಿಡುತ್ತದೆ. ಸಮುದಾಯಗಳು, ಪ್ರತಿಮೆಗಳು, ವಸ್ತುಗಳು ಬದಲಾಗುತ್ತವೆ, ಕಾಲಕ್ರಮದಲ್ಲಿ, ಇತಿಹಾಸದ ನಡಿಗೆಯಲ್ಲಿ ಮರೆಯಾಗಿಬಿಡುತ್ತವೆ, ಕಾದಂಬರಿಗಳೂ ಮರವೆಗೆ ಸಲ್ಲುತ್ತವೆ ಅನ್ನುವುದನ್ನೂ ಹಾಗೆಯೇ ಈ ಮಾತು ನೆನಪಿಸುತ್ತದೆ. ಸಾಮಾನ್ಯವಾಗಿ ಆಗುವುದೇ ಹೀಗೆ. ಕಾದಂಬರಿಗಳ ಅಮರತ್ವ, ಲೇಖಕನ ಚಿರಂಜೀವಿತನ ಇವು ಮನುಷ್ಯನ ಒಣ ಅಹಂಕಾರದ ತೃಪ್ತಿಗಾಗಿ ಹುಟ್ಟಿಕೊಂಡಿರುವ ಕಲ್ಪನೆಗಳು.

(ಈ ಅಧ್ಯಾಯದ ಮುಂದಿನ ಭಾಗ ಬರುವ ಮಂಗಳವಾರ)