ಆಸ್ಟ್ರೇಲಿಯಾದ ಉತ್ತರ ಭಾಗದ ೧೯೨೦ರ ದಶಕದ ಕತೆಯುಳ್ಳ ‘ಸ್ವೀಟ್ ಕಂಟ್ರಿ’ ಪಾಶ್ಚಾತ್ಯ ಚಿತ್ರಶೈಲಿಯಿಂದ ಪ್ರೇರಿತವಾದ ಚಿತ್ರ. ಹಾಗೆಂದು ಚಿತ್ರದಲ್ಲಿ ಬಳಸಲ್ಪಟ್ಟ ಬಣ್ಣ ನೋಡುಗರನ್ನು ಸದಾ ನೆನಪಿಸುತ್ತಿರುತ್ತದೆ. ಆಸ್ಟ್ರೇಲಿಯಾದ ಕೆಂಪು ಮಣ್ಣು ವಾತಾವರಣದಲ್ಲಿ ದಟ್ಟವಾಗಿದ್ದು ಚಿತ್ರದ ಬಣ್ಣವಿನ್ಯಾಸಕ್ಕೆ ಒಂದು ಕೊಡುಗೆಯೂ ಆಗಿ ಪರಿಣಮಿಸಿದೆ. ಅಮೇರಿಕದ ಪಾಶ್ಚಾತ್ಯ ಶೈಲಿಯ ಚಿತ್ರದ ನೆರಳಲ್ಲೂ ಇದು ಪಕ್ಕಾ ಆಸ್ಟ್ರೇಲಿಯನ್ ಚಿತ್ರ ಎಂಬುದರಲ್ಲಿ ಸಂಶಯವಿಲ್ಲ. ವಾರ್ವಿಕ್ ನಿರ್ದೇಶನದ ವಿಶಿಷ್ಟ ಚಿತ್ರವೊಂದರ ಕುರಿತು ಅನಿವಾಸಿ ಸುದರ್ಶನ್ ಬರೆದ ಈ ವಾರದ ಸಿನೆಮಾ ಲೇಖನ.

 

ಆಸ್ಟ್ರೇಲಿಯಾಕ್ಕೆ ತನ್ನ ಮೂಲನಿವಾಸಿಯಾದ ಅಬಾರಜಿನಿಗಳ ಜತೆಗಿನ ಸಂಬಂಧ ಈ ಮುನ್ನ ಅತ್ಯಂತ ಕ್ರೌರ್ಯದಿಂದ ಕೂಡಿದ್ದು, ಈಗ ಅ ಸಂಬಂಧ ಕಸಿವಿಸಿಯದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆಸ್ಟ್ರೇಲಿಯಾಕ್ಕೆ ಬಿಳಿಯರು ಬಂದು ಇಳಿದ ಹದಿನೆಂಟನೇ ಶತಮಾನದ ಕೊನೆಯ ಭಾಗದಿಂದಲೇ ಅಬಾರಜಿನಿಗಳನ್ನು ಅವರ ವಾಸ್ತವ್ಯಗಳಿಂದ ತೆರವುಗೊಳಿಸಿ, ಅವರ ನಡುವಿನ ಸಂಬಂಧ ಹಾಗು ಒಡನಾಟಗಳನ್ನು ಒಡೆಯುವ ಕೆಲಸ ನಡೆಯುತ್ತಲೇ ಬಂದಿದೆ. ಅವರಿಗೆ ಸಂಸ್ಕೃತಿಯಿಲ್ಲ, ಮನುಷ್ಯತ್ವವಿಲ್ಲ ಎಂದೆ ಪರಿಗಣಿಸಿ ಅವರನ್ನು ಹೀನಾಯವಾಗಿ ನಡೆಸಿಕೊಂಡದ್ದು ಈಗ ಇತಿಹಾಸ. ಅಬಾರಜಿನಿಗಳನ್ನು ಮೊದಲ ಬಾರಿಗೆ ಮನುಷ್ಯರು ಎಂದು ಲೆಕ್ಕ ಹಾಕಿದ್ದೇ ಇಪ್ಪತ್ತನೇ ಶತಮಾನದ ಅರವತ್ತರ ದಶಕದಲ್ಲಿ ಎಂದರೆ ಹಲವರಿಗೆ ಆಶ್ಚರ್ಯವಾಗಬಹುದು.

ಈ ಹಿಂದೆ ಮೊದಲ ಹಾಗು ಎರಡನೇ ಮಹಾಯುದ್ಧಗಳಲ್ಲಿ ಆಸ್ಟ್ರೇಲಿಯಾದ ಸೈನ್ಯದಲ್ಲಿ ಅಬಾರಿಜಿನಲ್ ಗಂಡಸರು ಭಾಗಿಯಾಗಿದ್ದು, ಜೀವ ಕೊಟ್ಟಿದ್ದು ನಿಜವಾಗಿದ್ದರೂ ಕೂಡ ಸಂವಿಧಾನಿಕವಾಗಿ ಹಾಗು ಸಾಮಾಜಿಕವಾಗಿ ಅವರು ಹೊರಗೇ ಉಳಿದಿದ್ದರು. ಯುದ್ಧಭೂಮಿಯಲ್ಲಿ ಭುಜಕ್ಕೆ ಭುಜಕೊಟ್ಟು ಹೋರಾಡಿದ್ದರೂ, ಆಸ್ಟ್ರೇಲಿಯಾಕ್ಕೆ ಮರಳಿದ ಮೇಲೆ ಪಬ್ಬಿನಲ್ಲಿ ಬಿಳಿಯರ ಜತೆ ಕೂತು ಬೀರು ಹೀರುವಂತಿರಲಿಲ್ಲ. ಅರವತ್ತರ ದಶಕದ ನಂತರ ಸಾಂವಿಧಾನಿಕವಾಗಿ ಸರಿಹೋದರೂ, ಸರ್ಕಾರದ ಹಲವು ಪಾಲಿಸಿಯ ನಿಲುವುಗಳ ನಡುವೆಯೂ ಸಾಮಾಜಿಕವಾಗಿ ಅವರು ಹೊರಗೆ ಉಳಿದಿರುವುದು ಶೋಚನೀಯ. ದಿನಗಳೆದಂತೆ, ಆ ಕಹಿ ಅನುಭವಗಳ ವಾಸನೆ ದಟ್ಟವಾಗಿ ಹರಡಿಕೊಂಡು ಮತ್ತೆಂದೂ ಈ ಸಂಬಂಧ ತಿಳಿಯಾಗುವುದೇ ಇಲ್ಲವೇನೋ ಎಂಬಂತ ಪರಿಸ್ಥಿತಿಗೆ ಬಂದು ನಿಂತಿದ್ದೇವೆ.

(‘ಸ್ವೀಟ್ ಕಂಟ್ರಿ’ ಚಿತ್ರದ ದೃಶ್ಯ)

ಆ ಕ್ರೌರ್ಯ ಹಾಗು ಈ ಕಸಿವಿಸಿ ಹಲವಾರು ಪುಸ್ತಕ, ಸಂಶೋಧನೆ ಹಾಗು ಚಲನಚಿತ್ರಗಳಿಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾದ ನೆಲದಲ್ಲಿ ನಡೆದ ಹಲವಾರು ಹತ್ಯಾಕಾಂಡಗಳು ಐತಿಹಾಸಿಕ ಸಂಶೋಧನೆಗೆ ಒಳಗಾಗಿ ಹೊಸ ಸಂಗತಿಗಳು ಹೊರಬೀಳುತ್ತಿವೆ. ಸಂಸ್ಕೃತಿಹೀನರೆಂದು ಅವರನ್ನು “ಕಾಪಾಡುವ” ದೃಷ್ಠಿಯಿಂದ ಚರ್ಚುಗಳು ಅವರ ಮಕ್ಕಳನ್ನು ಕುಟುಂಬಗಳಿಂದ ಬೇರ್ಪಡಿಸಿ ಒಂದು “ಕಳುವಾದ ತಲೆಮಾರ”ನ್ನೇ ನಿರ್ಮಾಣವಾಗಿಬಿಟ್ಟಿದೆ. ಇಪ್ಪತ್ತೊಂದನೇ ಶತಮಾನದ ಹೊಸ್ತಿಲಲ್ಲಿ ಅಂತಹ ಮಕ್ಕಳ ಅನುಭವದ ಬಗ್ಗೆ ರಾಯಲ್ ಕಮಿಷನ್ ಕೂಡ ಏರ್ಪಡಿಸಿ ಅವರ ಕತೆಗಳು ಎಲ್ಲರಿಗೂ ತಿಳಿಯುವಂತಾಯಿತು. ಈ ಎಲ್ಲ ಕಾರಣದಿಂದ ಇತ್ತೀಚಿನ ಕೆಲವು ಚಿತ್ರಗಳು ಆ ಸಂಬಂಧವನ್ನು ಸಾಧ್ಯವಾದಷ್ಟು ವಾಸ್ತವಿಕ ನೆಲೆಯಲ್ಲಿ ಅನಾವರಣಗೊಳಿಸಲು ಪ್ರಯತ್ನಿಸಿವೆ. ತುಂಬಾ ಜನಪ್ರಿಯವಾದ ‘The rabbit proof fence’, ‘The Tractor’ ಚಲನಚಿತ್ರಗಳು ಅಂತಹ ಪ್ರಯತ್ನಗಳಲ್ಲಿ ವಿಶಿಷ್ಟವಾದವು.

ಮುಂದುವರೆದು, ಈಗ ಆಸ್ಟ್ರೇಲಿಯಾದ ಹೊಸ ತಲೆಮಾರಿನ ಹಲವು ಅಬಾರಿಜನಲ್ ಮಂದಿ ತಾವೇ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅಬಾರಿಜನಲ್ ನಿರ್ದೇಶಕರೇ ಆ ಸಂಬಂಧದ ಕಹಿ, ಸಿಹಿ ಹಾಗು ಆಳವನ್ನು ಶೋಧಿಸಲು ತೊಡಗಿದ್ದಾರೆ. ಅವರಿಗೆ ಸರ್ಕಾರದ ಕಡೆಯಿಂದ ಹಲವು ಸವಲತ್ತು ಹಾಗು ಉತ್ತೇಜನವೂ ದಕ್ಕುತ್ತಿರುವುದು ಸ್ವಾಗತಾರ್ಹ ಸಂಗತಿ. ಹಾಗಾಗಿ ಅದೇ ಸಂಬಂಧವನ್ನು ಬೇರೊಂದು ಬಗೆಯಲ್ಲಿ, ಬೇರೊಂದು ನಿಲುವಿನಲ್ಲಿ ನೋಡಲು ಸಹಾಯ ಮಾಡಿವೆ ಎಂಬುದು ಆಹ್ಲಾದಕರ ವಿಷಯ. ರೇಚಲ್ ಪರ್ಕಿನ್ಸ್, ಐವನ್ ಸೆನ್ ಅಲ್ಲದೆ ವಾರ್ವಿಕ್ ಥಾರ್ನ್-ಟನ್ ಅಂತಹ ಕತೆಗಳನ್ನು ಹೇಳುವುದರಲ್ಲಿ ತೊಡಗಿರುವ ಅಬಾರಿಜನಲ್ ನಿರ್ದೇಶಕರಲ್ಲಿ ಕೆಲವರು.

ಅರವತ್ತರ ದಶಕದ ನಂತರ ಸಾಂವಿಧಾನಿಕವಾಗಿ ಸರಿಹೋದರೂ, ಸರ್ಕಾರದ ಹಲವು ಪಾಲಿಸಿಯ ನಿಲುವುಗಳ ನಡುವೆಯೂ ಸಾಮಾಜಿಕವಾಗಿ ಅವರು ಹೊರಗೆ ಉಳಿದಿರುವುದು ಶೋಚನೀಯ. ದಿನಗಳೆದಂತೆ, ಆ ಕಹಿ ಅನುಭವಗಳ ವಾಸನೆ ದಟ್ಟವಾಗಿ ಹರಡಿಕೊಂಡು ಮತ್ತೆಂದೂ ಈ ಸಂಬಂಧ ತಿಳಿಯಾಗುವುದೇ ಇಲ್ಲವೇನೋ ಎಂಬಂತ ಪರಿಸ್ಥಿತಿಗೆ ಬಂದು ನಿಂತಿದ್ದೇವೆ.

ಪ್ರಸ್ತುತ ‘ಸ್ವೀಟ್ ಕಂಟ್ರಿ’ (Sweet Country- 2017, Warwick Thornton) ವಾರ್ವಿಕ್ ನಿರ್ದೇಶನದ ವಿಶಿಷ್ಟ ಚಿತ್ರ. ಹಲವಾರು ಡಾಕ್ಯುಮೆಂಟರಿ, ಕಿರುಚಿತ್ರದ ನಿರ್ದೇಶನ ಮಾಡಿರುವ ಈತ ಕ್ಯಾಮರಾಮೆನ್ ಕೂಡ ಹೌದು. ಈ ಹಿಂದೆ ‘ಸ್ಯಾಮ್ಸನ್ ಮತ್ತು ಡೆಲಿಲಾಹ್ (Samson and Delilah) ಚಿತ್ರದಲ್ಲಿ ಇಬ್ಬರು ಎಳೆಯ ಅಬಾರಿಜಿನ್ ಮಕ್ಕಳ ಕತೆಯನ್ನು ಮನೋಜ್ಞವಾಗಿ ಸೆರೆ ಹಿಡಿದಿದ್ದು ಕ್ಯಾನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. ಅತ್ಯಂತ ಸೂಕ್ಷ್ಮ ಹಾಗು ದಿಟ್ಟ ನಿರ್ದೇಶನವನ್ನು ವಾರ್ವಿಕ್ ಥಾರ್ನಟನ್ ಮೈಗೂಡಿಸಿಕೊಂಡಿದ್ದಾನೆ ಎಂದರೆ ತಪ್ಪಾಗಲಾರದು.

ಆಸ್ಟ್ರೇಲಿಯಾದ ಉತ್ತರ ಭಾಗದ 1920ರ ದಶಕದ ಕತೆಯುಳ್ಳ ‘ಸ್ವೀಟ್ ಕಂಟ್ರಿ’ ಪಾಶ್ಚಾತ್ಯ ಚಿತ್ರಶೈಲಿಯಿಂದ ಪ್ರೇರಿತವಾದ ಚಿತ್ರ. ಹಾಗೆಂದು ಚಿತ್ರದಲ್ಲಿ ಬಳಸಲ್ಪಟ್ಟ ಬಣ್ಣ ನೋಡುಗರನ್ನು ಸದಾ ನೆನಪಿಸುತ್ತಿರುತ್ತದೆ. ಆಸ್ಟ್ರೇಲಿಯಾದ ಕೆಂಪು ಮಣ್ಣು ವಾತಾವರಣದಲ್ಲಿ ದಟ್ಟವಾಗಿದ್ದು ಚಿತ್ರದ ಬಣ್ಣವಿನ್ಯಾಸಕ್ಕೆ ಒಂದು ಕೊಡುಗೆಯೂ ಆಗಿ ಪರಿಣಮಿಸಿದೆ. ಅಮೇರಿಕದ ಪಾಶ್ಚಾತ್ಯ ಶೈಲಿಯ ಚಿತ್ರದ ನೆರಳಲ್ಲೂ ಆಸ್ಟ್ರೇಲಿಯಾದ ಆವರಣ, ಬಣ್ಣ ಉಳಿಸಿಕೊಳ್ಳುವುದು ಒಂದು ಸವಾಲೆಂದೇ ಹೇಳಬೇಕು. ಆದಾಗ್ಯೂ ಆ ಪ್ರೇರಣೆ ಸೆಟ್ಟಿಂಗ್ ಹಾಗು ಡಿಸೈನಿನಲ್ಲಿ ಮಾತ್ರ ಎದ್ದು ಕಾಣುತ್ತದೆ ಎಂಬುದನ್ನು ಮರೆಯುವಂತಿಲ್ಲ. ಇನ್ನುಳಿದಂತೆ ಇದು ಪಕ್ಕಾ ಆಸ್ಟ್ರೇಲಿಯನ್ ಚಿತ್ರ ಎಂಬುದರಲ್ಲಿ ಸಂಶಯವಿಲ್ಲ.

(‘The rabbit proof fence’ ಚಿತ್ರದ ದೃಶ್ಯ)

ನಿರ್ಜನ ಪ್ರದೇಶವೊಂದರಲ್ಲಿ ಪಾದ್ರಿಯೊಬ್ಬನಿಗೆ ಸಹಾಯ ಮಾಡಿಕೊಂಡಿರುವ ಅಬಾರಿಜಿನಿ ಸ್ಯಾಮ್ ತನ್ನ ಹೆಂಡತಿ ಹಾಗು ಕುಟುಂಬದ ಇನ್ನೊಬ್ಬ ಹುಡುಗಿಯನ್ನು ಸಾಕಿಕೊಂಡಿದ್ದಾನೆ. ಆ ಪಾದ್ರಿ ಅವನನ್ನು ಕರುಣೆಯಿಂದ, ಸಹವರ್ತಿ ಎಂಬಂತೆ ನಡೆಸಿಕೊಂಡಿರುತ್ತಾನೆ. ಬಿಳಿಯ ಸೆಟ್ಲರುಗಳು ಹೊಸ ಜಾಗ ಹುಡುಕಿಕೊಂಡು ಬರುತ್ತಿರುವ ಪ್ರದೇಶವದು. ಅಲ್ಲಿಗೆ ಮೊದಲ ಮಹಾಯುದ್ಧದಿಂದ ಹಿಂದಿರುಗಿದ ಸೈನಿಕನೊಬ್ಬ ನೆಲೆಸಲು ಬರುತ್ತಾನೆ. ಯುದ್ಧದ ಭೀಕರ ಅನುಭವ, ನಂತರದ ಏಕಾಂಗಿತನ ಹಾಗು ಎಡೆಬಿಡದ ಕುಡಿತ ಅವನನ್ನು ಕ್ರೂರಿಯನ್ನಾಗಿಸಿದೆ. ಒಂದಷ್ಟು ದೂರದಲ್ಲಿ ನೆಲೆಯೂರಲು ಅವನಿಗೆ ಸಹಾಯ ಮಾಡಲು ಸ್ಯಾಮನನ್ನು ಪಾದ್ರಿ ಅವನ ಜತೆ ಕಳಿಸುತ್ತಾನೆ. ಆ ಸೈನಿಕ ಸ್ಯಾಮನ ಜತೆ ಕಠೋರವಾಗಿ ನಡೆದುಕೊಳ್ಳುವದಷ್ಟೇ ಅಲ್ಲದೆ ಅವನ ಹೆಂಡತಿಯ ಮೇಲೆ ಬಲಾತ್ಕಾರ ಕೂಡ ಮಾಡುತ್ತಾನೆ. ಒಂದು ದುಷ್ಟ ಗಳಿಗೆಯಲ್ಲಿ ಬಂದೂಕು ಹಿಡಿದು ಎದುರಾದಾಗ ಸ್ಯಾಮ್ ತನ್ನ ಬಂದೂಕಿನಿಂದ ಅವನನ್ನು ಕೊಂದು ಬಿಡುತ್ತಾನೆ. ಬಿಳಿಯರ ಆಡಳಿತದಡಿ ತನಗೆ ನ್ಯಾಯ ದೊರಕುವುದು ಅಸಂಭವ ಎಂದು ಅರಿತ ಸ್ಯಾಮ್ ಹೆಂಡತಿಯೊಂದಿಗೆ ತಲೆಮರಿಸಿಕೊಳ್ಳುತ್ತಾನೆ. ಬಿಳಿಯರ ಪೋಲೀಸ್ ತಂಡವೊಂದು ಮತ್ತೊಬ್ಬ ಅಬಾರಿಜಿನಿಯ ಸಹಾಯದಿಂದ ಅವನನ್ನು ಹಿಡಿಯಲು ಹೊರಡುತ್ತಾರೆ. ಮತ್ತೊಬ್ಬ ಅಬಾರಿಜಿನಿ ಅವರ ಹೆಜ್ಜೆ ಗುರುತು, ಬೆಂಕಿ ಹಚ್ಚಿದ ಜಾಗ, ಮರದ ರೆಂಬೆಗಳಲ್ಲಿ ಸಿಕ್ಕ ಸುಳಿವನ್ನು ಹಿಡಿದು ಅವರ ಬೆನ್ನತ್ತುತ್ತಾರೆ. ಕಡೆಗೂ ಸಿಗದೆ ಹತಾಶರಾಗಿ ಹಿಂದಿರುಗುತ್ತಾರೆ. ಸ್ಯಾಮನಿಗೆ ಅತ್ತ ತನ್ನ ಹೆಂಡತಿಯನ್ನು ಕಾಡಿನ ಅಬಾರಿಜಿನಿಗಳಿಂದ ಕಾಪಾಡಿಕೊಂಡು ಇರುವುದೇ ದುಸ್ತರವಾಗ ತೊಡಗುತ್ತದೆ. ಕಡೆಗೆ ಆತನೆ ಬಂದು ಶರಣಾಗುತ್ತಾನೆ. ಬಿಳಿಯನ ಕೊಲೆಯ ಕೇಸನ್ನು ಇತ್ಯರ್ಥ ಮಾಡಲು ಅಲ್ಲಿಗೆ ಒಬ್ಬ ಜಡ್ಜ್ ಬರುತ್ತಾನೆ. ಕೇಸು ನಡೆದು ಸ್ಯಾಮ್ ಆತ್ಮರಕ್ಷಣೆಗಾಗಿ ಕೊಂದದ್ದು ಎಂದು ತೀರ್ಮಾನಿಸಿ ಜಡ್ಜ್ ಅವನನ್ನು ಬಿಡುಗಡೆ ಮಾಡುತ್ತಾನೆ. ಇಷ್ಟಕ್ಕೆ ಸಂತೋಷದಿಂದ ಕೊನೆಗೊಳ್ಳಬಹುದಾಗಿದ್ದ ಚಿತ್ರ ಕಡೆಗೆ ಮತ್ತೂ ಒಂದು ತಿರುವಿನಿಂದ ನಮ್ಮನ್ನು ಗಾಢವಾಗಿ ಆವರಿಸಿಕೊಂಡು ಚಿಂತೆಗೆ, ವಿಷಾದಕ್ಕೆ ತಳ್ಳುತ್ತದೆ. ಸಮಾಜದ ನಡವಳಿಕೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತುತ್ತದೆ.

ಸ್ಯಾಮನ್ನು ಹುಡುಕಲು ಬರುವ ಪೋಲೀಸರು ಹಾಗು ಕಾಡಿನ ಅಬಾರಿಜಿನಗಳ ನಡುವೆ ನಡೆಯುವ ಚಕಮಕಿಯಲ್ಲಿ ಪೋಲೀಸಿನವ ಸಾಯುವುದು, ಪಾದ್ರಿ ಹಾಗು ಪೋಲೀಸ್ ಸಾರ್ಜೆಂಟನ ನಡುವೆ ಬಿರುಕು ಕಾಣಿಸಿಕೊಳುವುದು ಕತೆಯು ನೇರವಾಗಿ ಚಲಿಸದೆ ಹಲವು ಒಳ ತಿರುವುಗಳೊಂದಿಗೆ ಬಿಚ್ಚಿಕೊಳ್ಳುತ್ತದೆ. ಸ್ಯಾಮ್ ಪೋಲೀಸರಿಂದ ತಪ್ಪಿಸಿಕೊಳುವುದಷ್ಟೆ ಅಲ್ಲದೆ ಕಾಡಿನ ಅಬಾರಿಜಿನಿಗಳ ಬಗ್ಗೆಯೂ ಎಚ್ಚರವಹಿಸಬೇಕಾದ್ದರಿಂದ ಪರಿಸ್ಥಿತಿ ಸಂಕೀರ್ಣವಾಗುತ್ತದೆ. ಫಿಲೊಮ್ಯಾಕ್ ಎಂಬ ಹದಿಹರೆಯದ ಅಬಾರಿಜಿನಲ್ ಹುಡುಗಾಟದ ಹುಡುಗ ಸತ್ತು ಬಿದ್ದಿರುವ ಕ್ರೂರ ಸೈನಿಕನ ಜೇಬಿನಿಂದ ಗಡಿಯಾರವನ್ನು ಆಸೆಯಿಂದ ಕದಿಯುವುದು ನೀಚವಾಗಿ ಕಾಣುತ್ತದೆ. ಆದರೆ ಕಡೆಯಲ್ಲಿ ನಡೆದ ಎಲ್ಲಾ ವಿದ್ಯಾಮಾನಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಅದನ್ನು ನೀರಿನಲ್ಲಿ ಬಿಸಾಡುವ ಮೂಲಕ ಧುತ್ತೆಂದು ಬೆಳೆದುಬಿಡುತ್ತಾನೆ.

ಈಗ ಆಸ್ಟ್ರೇಲಿಯಾದ ಹೊಸ ತಲೆಮಾರಿನ ಹಲವು ಅಬಾರಿಜನಲ್ ಮಂದಿ ತಾವೇ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅಬಾರಿಜನಲ್ ನಿರ್ದೇಶಕರೇ ಆ ಸಂಬಂಧದ ಕಹಿ, ಸಿಹಿ ಹಾಗು ಆಳವನ್ನು ಶೋಧಿಸಲು ತೊಡಗಿದ್ದಾರೆ. ಅವರಿಗೆ ಸರ್ಕಾರದ ಕಡೆಯಿಂದ ಹಲವು ಸವಲತ್ತು ಹಾಗು ಉತ್ತೇಜನವೂ ದಕ್ಕುತ್ತಿರುವುದು ಸ್ವಾಗತಾರ್ಹ ಸಂಗತಿ. ಹಾಗಾಗಿ ಅದೇ ಸಂಬಂಧವನ್ನು ಬೇರೊಂದು ಬಗೆಯಲ್ಲಿ, ಬೇರೊಂದು ನಿಲುವಿನಲ್ಲಿ ನೋಡಲು ಸಹಾಯ ಮಾಡಿವೆ ಎಂಬುದು ಆಹ್ಲಾದಕರ ವಿಷಯ.

ಬಿಳಿಯರ ಕ್ರೂರ ನಡೆವಳಿಕೆಗೆ ತಮ್ಮದೇ ಬಗೆಯಲ್ಲಿ ಪ್ರತಿಕ್ರಿಯಿಸುವ ಹಾಗು ಸೇಡು ತೀರಿಸಿಕೊಳ್ಳುವ ಹಲವು ಪಾತ್ರಗಳು ಈ ಚಿತ್ರದಲ್ಲಿರುವುದು ಮತ್ತೊಂದು ವೈಶಿಷ್ಟ್ಯ. ಗಂಡಸರಲ್ಲಿ ಕೆಲವರು ತಗ್ಗಿಬಗ್ಗಿಯೂ, ಕೆಲವರು ಸೆಟೆದು ನಿಂತೂ, ಸೂಕ್ಷ್ಮವರಿತು ತಪ್ಪಿಸಿಕೊಳ್ಳುವ ಹೆಣ್ಣುಮಕ್ಕಳೂ, ಕೈಗೆ ಸಿಕ್ಕಿದ್ದನ್ನು ಬಾಚಿಕೊಳ್ಳುವ ಮೂಲಕ ಸೇಡು ತೀರಿಸಿಕೊಳ್ಳುವ ಹುಡುಗನೂ ಇಲ್ಲಿ ಕಾಣುತ್ತಾರೆ.

ಅಲ್ಲಲ್ಲಿ ಬರುವ ಫ್ಲಾಶ್ ಬ್ಯಾಕ್ ತಂತ್ರ ಕತೆಗೆ ಸಾಂದ್ರತೆಯನ್ನು ತರಲು ಸಹಾಯಮಾಡಿವೆ. ಆದರೆ ಅದಕ್ಕಿಂತ ಮಿಗಿಲಾಗಿ ಅಲ್ಲಲ್ಲಿ ಮಿಂಚಿನಂತೆ ಬರುವ ಫ್ಲಾಶ್ ಫಾರ್ವರ್ಡ್ ನಿರೂಪಣೆಗೆ ಎಪಿಕ್ ಗುಣವನ್ನು ಕೊಡುವುದಲ್ಲದೆ, ಕೆಲವು ದಾರುಣ ಘಟನೆಗಳ ಬಗ್ಗೆ ನಮ್ಮ ಪ್ರತಿಕ್ರಿಯೆಯನ್ನು ಹತೋಟಿಯಲ್ಲಿಡುತ್ತದೆ. ನಮ್ಮ ಮನಸ್ಸನ್ನು ಚಿತ್ರ ನೋಡುವಾಗ ಹಿಂದಕ್ಕೂ ಮುಂದಕ್ಕೂ ಹೊಯ್ದಾಡುವಂತೆ ಮಾಡುವುದಲ್ಲದೆ ಇಡೀ ಕತೆಗೆ ಪೌರಾಣಿಕ ರೂಪ ಬಂದೊದಗುತ್ತದೆ.

ಇಲ್ಲಿ ಮೂರು ಗುಂಪಿನ ಪಾತ್ರಗಳು ಕಾಣುತ್ತವೆ. ಬಿಳಿಯರು ಒಂದು ಗುಂಪಾದರೆ, ಬಿಳಿಯರೊಡನೆ ಸಹಜೀವನದಲ್ಲಿರುವ ಅಬಾರಿಜಿನಿಗಳು ಮತ್ತೊಂದು ಹಾಗು ಕಾಡಿನಲ್ಲಿ ವಾಸವಿರುವ ಅಬಾರಿಜಿನಗಳು ಇನ್ನೊಂದು ಗುಂಪು. ಅಲ್ಲದೆ ಬಿಳಿಯರಲ್ಲೇ ಅಬಾರಿಜಿನಗಳ ಬಗ್ಗೆ ಕರುಣೆಯಿರುವವರು, ಕ್ರೂರಿಗಳಾಗಿರುವವರು ಹಾಗು ತಟಸ್ತವಾಗಿರುವವರು – ಹೀಗೆ ಮೂರು ಬಗೆಯ ಪಾತ್ರಗಳು. ಈ ಏಲ್ಲಾ ವೈವಿಧ್ಯಮಯ ಪಾತ್ರಗಳು ಚಿತ್ರಕ್ಕೆ ಹಲವು ಸ್ತರ ಹಾಗು ಹರಹನ್ನು ನೀಡುತ್ತದೆ ಹಾಗು ಯಾವುದೇ ಪರಿಸ್ಥಿತಿಯೂ ಏಕಮುಖವಾಗದಂತೆ ನೋಡಿಕೊಳುತ್ತದೆ. ಜನಾಂಗಗಳ ನಡುವಿನ ತಿಕ್ಕಾಟ ಹಾಗು ಜನಾಂಗದೊಳಗಿನ ತಿಕ್ಕಾಟ ಇಕ್ಕೆಲದಲ್ಲೂ ನಡೆಯುವುದು ಕತೆಗೆ ತೀಕ್ಷ್ಣ ವಾಸ್ತವಿಕತೆ ಹಾಗು ನಿರೂಪಣೆಗೆ ನಿರಪೇಕ್ಷತೆಯನ್ನು ಕೊಡಮಾಡುತ್ತದೆ. ಬಹುಶಃ ಆಸ್ಟ್ರೇಲಿಯಾದ ಅಬಾರಿಜಿನಿಗಳ ಕುರಿತ ಚಿತ್ರಗಳಲ್ಲೇ ಇದು ಹೊಸತು ಎಂದರೆ ತಪ್ಪಾಗಲಾರದು.

ಈ ಎಲ್ಲ ಮಜಲುಗಳನ್ನೂ ನಿರ್ದೇಶಕ ಸಮರ್ಥವಾಗಿ ಸೆರೆಹಿಡಿದಿರುವುದು ಅಬಾರಿಜನಲ್ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಮಹತ್ವಾಕಾಂಕ್ಷಿಗಳಾಗುತ್ತರುವುದಕ್ಕೆ ಸ್ವೀಟ್ ಕಂಟ್ರಿ ಒಂದು ಉತ್ತಮ ನಿದರ್ಶನ.