Advertisement
ಸುಂದರ ಕಾಡಿನ ರೋಚಕ ಕಥೆಗಳು-೮: ರೂಪಾ ರವೀಂದ್ರ ಜೋಶಿ ಸರಣಿ

ಸುಂದರ ಕಾಡಿನ ರೋಚಕ ಕಥೆಗಳು-೮: ರೂಪಾ ರವೀಂದ್ರ ಜೋಶಿ ಸರಣಿ

ಜೇನು ತುಂಬಿದ ರಟ್ಟಿನ ಜೊತೆಗೆ ಇರುವ ಜೇನು ನೊಣಗಳ ಮೊಟ್ಟೆ ಮರಿ ತುಂಬಿದ್ದ ರಟ್ಟನ್ನು ನಿರ್ದಯವಾಗಿ ಬಿಸಾಡಲಾಗುತ್ತಿತ್ತು. ಈ ಹೊಗೆಯ ತಾಪಕ್ಕೆ ನೂರಾರು ಜೇನು ನೊಣಗಳು ಸಾಯುತ್ತಿದ್ದವು. ಒಂದಿಷ್ಟು ದಿಕ್ಕೆಟ್ಟು ಹಾರಿ ಹೋಗುತ್ತಿದ್ದವು. ಇದನ್ನೆಲ್ಲಾ ಈಗ ನೆನೆದರೆ, ‘ಛೆ… ನಾವು ಮನುಷ್ಯರು ಎಷ್ಟು ಸ್ವಾರ್ಥಿಗಳು. ಪಾಪದ ನೊಣಗಳು ಊರೂರು ಸುತ್ತಿ ಮಕರಂದ ಸಂಗ್ರಹಿಸಿ ತಮಗಾಗಿ ತಯಾರಿಸಿಕೊಂಡಿದ್ದ ಊಟವನ್ನು ಮೋಸದಿಂದ ಅಪಹರಿಸುವುದಲ್ಲದೇ ಅವರ ಪ್ರಾಣಕ್ಕೂ ಹಾನಿಯುಂಟು ಮಾಡುತ್ತೇವಲ್ಲಾ.. ಈ ಪಾಪಕ್ಕೆ ಪ್ರಾಯಶ್ಚಿತವಿದೆಯೆ?’ ಎಂದೆಲ್ಲ ವಿಚಾರ ಬರುತ್ತದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೇಳನೆಯ ಕಂತು

        ಬಂಗಾರ ಎಂದೊಡನೆ ನಮ್ಮ ಕಣ್ಣೆದುರು ಬರುವುದು, ಮನಮೋಹಕ ಹಳದಿ ಬಣ್ಣದ ಮೆರಗಿನ ಅಮೂಲ್ಯ ಲೋಹ. ಆದರೆ, ನಾನು ಇಲ್ಲಿ ನಿಮಗೆ  ಹಸಿರು ಹೊನ್ನಿನ ಕುರಿತು ಹೇಳಬೇಕೆಂದಿರುವೆ.

ಪ್ರಾಕೃತಿಕ ಸಂಪತ್ತಿನೆದುರು ಎಲ್ಲವೂ ಗೌಣವೇ. ಅರಣ್ಯ ಉತ್ಪನ್ನಗಳು ಬಹಳ ಉತ್ಕೃಷ್ಟವಾದವುಗಳು. ನಾವು ಯಾವುದನ್ನು ಕಾಡು ಗಿಡಗಳೆಂದು ಅಸಡ್ಡೆ ಮಾಡುತ್ತೇವೋ ಅವುಗಳಲ್ಲಿ ಬಹುತೇಕ ಗಿಡಗಳು “ಸಸ್ಯ ಸಂಜೀವಿನಿ” ಎಂದು ಕರೆಸಿಕೊಳ್ಳುವಂಥವು ಆಗಿರುತ್ತವೆ ಎಂಬುದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಅನೇಕ ಸಂಬಾರ ಪದಾರ್ಥಗಳು, ಅಂಟು, ರಾಳ, ಸಿಹಿ ಜೇನು, ಇತ್ಯಾದಿ ಇತ್ಯಾದಿಗಳೆಲ್ಲ ದೊರೆಯುವುದು ಅರಣ್ಯವೆಂಬ ಅನರ್ಘ್ಯ ಗಣಿಯಲ್ಲೇ.

ನಾನು ಇಲ್ಲಿ ನಮ್ಮ ಕಾಡಲ್ಲಿ ದೊರೆಯುತ್ತಿದ್ದ ಕೆಲವು ಅಮೂಲ್ಯ ವಸ್ತುಗಳನ್ನು ಪರಿಚಯಿಸಲು ಪ್ರಯತ್ನಿಸುವೆ. ನಮ್ಮ ಕಾಡಲ್ಲಿ ಅತಿ ಹೇರಳವಾಗಿ ದೊರೆಯುತ್ತಿದ್ದುದೆಂದರೆ, ಕರಿ ಬೇವು. ಎಲ್ಲೆಂದರಲ್ಲಿ ಚಿಗುರಿ, ಗಮ ಗಮಿಸುವ ಕರಿಬೇವು ನಮ್ಮ ಅಡುಗೆಗೆ ಸದಾ ಕಾಲ ತಾಜಾತನ ಒದಗಿಸುತ್ತಿತ್ತು.  ಕ್ರಮೇಣ ಪಟ್ಟಣ ವಾಸಿಯಾದ ಮೇಲೆ, ಪ್ರತಿ ಸಾರಿ ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟು ಅದನ್ನು ಕೊಳ್ಳುವಾಗಲೂ ಏನೋ ಕಳೆದುಕೊಂಡ ಭಾವ ನನ್ನನ್ನಾವರಿಸುವುದು ಸುಳ್ಳಲ್ಲ. ಹಾಗೇ ನಮ್ಮ ಕಾಡಲ್ಲಿ ದಾಲ್ಚಿನ್ನಿ ಗಿಡ ಕೂಡಾ ಇತ್ತು. ಪಲಾವು ಮಾಡುವಾಗಲೆಲ್ಲ ತಾಜಾ ಎಲೆ, ಚಕ್ಕೆ ತಂದೇ ನಾವು ಮಾಡುತ್ತಿದ್ದುದು.

ನಮ್ಮ ಕಾಡಲ್ಲಿ ಹೇರಳವಾಗಿ ದೊರೆಯುತ್ತಿದ್ದ ಇನ್ನೊಂದು ವಸ್ತುವೆಂದರೆ, ಸೀಗೆ ಕಾಯಿ. ಇದು ಬಳ್ಳಿಯ ಜಾತಿಗೆ ಸೇರಿದ ಸಸ್ಯ. ಯಾವುದೋ ಒಂದು ಬಲವಾದ ಮರವನ್ನು ತಬ್ಬಿ, ಮೆಲ್ಲ ಮೆಲ್ಲಗೆ ಮೇಲೇರುತ್ತ, ಒಂದು ಎತ್ತರದ ಪೊದೆಯಂತೇ ಬೆಳೆದು ನಿಲ್ಲುವ ಇದಕ್ಕೆ ಮೈ ತುಂಬ ಮುಳ್ಳು. ಅಬ್ಬಾ! ಅದರ ಪೊದೆ (ಮಟ್ಟಿ) ಯ ಕೆಳಗಡೆ ಬೀಳುವ ಸೀಗೇಕಾಯಿ ಆರಿಸಲು ಹೋದಾಗಲೆಲ್ಲ ಅದರ ಮುಳ್ಳು ಚುಂಯಿಕ್ ಅಂತ ಅಂಗಾಲಿಗೆ ಅದೆಷ್ಟು ಸಲ ಚುಚ್ಚಿಸಿಕೊಂಡಿದ್ದೇನೋ ಲೆಕ್ಕವೇ ಇಲ್ಲ. ನಮ್ಮ ಗದ್ದೆಯ ಆವರಣದ ಬೇಲಿಯಾಚೆ, ಒಂದು ಸೀಗೇಮಟ್ಟಿ ಇತ್ತು. ಬೇಸಿಗೆಯ ರಜೆಯಲ್ಲಿ ದಿನಾ ನಮಗೆ ಸೀಗೇ ಕಾಯಿ ಆರಿಸೋ ಕೆಲಸ. ತಿಂಗಳೊಳಗೆ ದೊಡ್ಡ ಗೋಣೀ ಚೀಲ ತುಂಬಿಸುವಷ್ಟು ಸಂಗ್ರಹಿಸುತ್ತಿದ್ದೆವು. ಸೀಗೇ ಮಟ್ಟಿ (ಪೊದೆ) ಗೆ ಮಂಗಗಳು ಬಂದವೆಂದರೆ, ಅವತ್ತು ನಮಗೆ ಖುಶಿಯೋ ಖುಶಿ. ಕೆಳಗಡೆ ಕಾಯಿಗಳು ಹಾಸಿದಂತೆ ಬಿದ್ದಿರುತ್ತಿದ್ದವು. ಈ ಸೀಗೆಕಾಯಿ, ದನಗಳಿಗೂ ತುಂಬ ಪ್ರೀತಿ. ಹಾಗಾಗಿ, ಬೆಳಗ್ಗೆ ಕೊಟ್ಟಿಗೆಯಿಂದ ದನ ಬಿಡುವುದರೊಳಗಾಗಿ ನಾವು ಸೀಗೇ ಕಾಯಿ ಆರಿಸಿಕೊಳ್ಳಲು ಧಾವಿಸುತ್ತಿದ್ದೆವು.

ಹಾಗೇ ನಮ್ಮ ಮನೆಯ ಹಿಂದಿರುವ ಕಾಡಲ್ಲಿ ಅಂಟವಾಳ ಕಾಯಿ ಮರ ಕೂಡಾ ಇತ್ತು. ಅಂಟವಾಳ ಮಧ್ಯಮ ಗಾತ್ರದ ಮರವಾಗಿ ಬೆಳೆಯುತ್ತದೆ. ಈ ಅಂಟವಾಳ ಕಾಯಿ ನೋಡಲು ಒಂಥರಾ ಚೆಂದ. ಹಸಿರಾದ ಮೂರು ಪುಟ್ಟ ಗೋಲಗಳನ್ನು ಜೋಡಿಸಿ, ಅದರ ತಲೆಯ ಮೇಲೊಂದು ದಂಟು ಇಟ್ಟರೆ ಹೇಗೆ ಕಾಣುತ್ತದೆ ಹೇಳಿ, ಹಾಗೇ ಅಂಟವಾಳ ಕಾಯಿ ಇರುತ್ತದೆ. ಇದರ ಒಳಗೆ ಕರ್ರನೆಯ ಗುಂಡನೆಯ ದೊಡ್ಡ ಬೀಜ. ಇದನ್ನೂ ಕೂಡಾ ನಾವು ಆರಿಸುತ್ತಿದ್ದೆವು. ಆದರೆ, ಈ ಮರ ಸುಲಭವಾಗಿ ಏರಲು ಸಾಧ್ಯವಾಗುತ್ತಿದ್ದರಿಂದ, ನಮ್ಮನೆ ಆಳು ಮರಹತ್ತಿ ಕೊಯ್ದುಕೊಡುತ್ತಿದ್ದ. ಇದನ್ನು ಮನೆಯ ಹಿತ್ತಲಿನಲ್ಲಿ ಕೂಡಾ ಬೆಳೆಸಿಕೊಳ್ಳಬಹುದು. ಸೀಗೆ ತುಂಬಾ ಮುಳ್ಳು ಉಳ್ಳದ್ದಾದ್ದರಿಂದ ಇದನ್ನು ಮನೆಯ ಆವರಣದಲ್ಲಿ ಬೆಳೆಸುವುದು ತೀರ ವಿರಳ.

ಆಗೆಲ್ಲ ನಮ್ಮನೇಲಿ ಸಾಬೂನು ತರುವ ಪದ್ಧತಿಯೇ ಇರಲಿಲ್ಲ. ಅಂಟವಾಳ ಕಾಯಿ ಮತ್ತೂ ಸೀಗೇ ಕಾಯಿಗಳೇ ಆ ಸ್ಥಾನವನ್ನು ತುಂಬಿದ್ದವು. ಹಸಿ ಅಂಟವಾಳಕಾಯಿ ಜಜ್ಜಿ ಬಟ್ಟೆಗೆ ತಿಕ್ಕಿ ಒಗೆದರೆ, ಎಂಥ ಕೊಳೆ ಬಟ್ಟೆಯೂ ಶುಭ್ರ. ಇದನ್ನು ಒಣಗಿಸಿ ಒನಕೆಯಲ್ಲಿ ಕುಟ್ಟಿ ಪುಡಿಮಾಡಿ ಡಬ್ಬಿ ತುಂಬಿಸಿ ಇಟ್ಟರೆ, ವರ್ಷಾವಧಿ ಬಟ್ಟೆ ತೊಳೆಯಲು ಸಾಕಾಗುತ್ತಿತ್ತು. ಇದು ತುಂಬಾ ಉಷ್ಣವಾದ ಕಾರಣ, ತಲೆಗೆ ನೇರವಾಗಿ ಇದರ ಪುಡಿ ಬಳಸುತ್ತಿರಲಿಲ್ಲ. ಸೀಗೇಪುಡಿಯ ಜೊತೆ ಸ್ವಲ್ಪ ಪ್ರಮಾಣದಲ್ಲಿ ಇದರ ಪುಡಿ ಸೇರಿಸಿ, ಬೇರೆ ಡಬ್ಬಿಯಲ್ಲಿ ತುಂಬಿಸಿ ಇಡುತ್ತಿದ್ದರು. ಮೈ ತಿಕ್ಕಲು, ತಲೆ ತಿಕ್ಕಲು ಈ ಸೀಗೇಪುಡಿಯೇ ಉಪಯೋಗವಾಗಿತ್ತು. ನಮ್ಮನೇಲಿ ನಾವು ನಾಲ್ವರು ಹೆಣ್ಣು ಮಕ್ಕಳು. ರವಿವಾರ ದಿನ ಈ ತಲೆ ಸ್ನಾನದ್ದೇ ದೊಡ್ಡ ಪ್ರಕರಣ. ಆಯಿಗೆ ಅರ್ಧ ದಿನ ಇದೇ ಕೆಲಸವಾಗುತ್ತಿತ್ತು. ಬೆಳಗ್ಗೆ ಮನೆಯ ಅಂಗಳದ ಬೇಲಿಗೆ ಇದ್ದ ಮಗ್ಗೆ ದಾಸವಾಳದ ಎಳೆಯ ಎಲೆ ಕೊಯ್ದಿಡುವ ಕೆಲಸ ನಮ್ಮದು. ಆಯಿ, ಆ ಎಲೆಗಳನ್ನು ತಂಬಿಗೆಯಲ್ಲಿ ಹಾಕಿ ಹಿಸುಕಿ, ನೀರು ಹಾಕಿ ದಪ್ಪನೆಯ ಬಂಪು (ಲೋಳೆ) ಮಾಡಿ, ಸೀಗೆ ಪುಡಿಯ ಜೊತೆ ಇದನ್ನು ಸೇರಿಸಿ ತಲೆ ಉಜ್ಜುತ್ತಿದ್ದಳು. ಈ ದಾಸವಾಳದ ಲೋಳೆಯೆದುರು ಇವತ್ತಿನ ಯಾವ ಶಾಂಪೂವಾಗಲಿ, ಕಂಡೀಶನರ್ ಆಗಲಿ ನಿಲ್ಲುವುದು ಅಸಾಧ್ಯ. ಅಷ್ಟು ಚಂದ ಮೃದು ಮಧುರವಾದ ಕೂದಲು ನಮ್ಮದಾಗುತ್ತಿತ್ತು. ಆದರೆ, ದುರದೃಷ್ಟವೆಂದರೆ, ಇವತ್ತು ಹಳ್ಳಿಗಳಲ್ಲೂ ಈ ಶಾಂಪೂ ಬಳಕೆಯಾಗುತ್ತಿದೆ. ಈ ಸೀಗೇಕಾಯಿಯೇ ನೇಪಥ್ಯಕ್ಕೆ ಸರಿದಿದೆ ಎಂದಮೇಲೆ, ಈ  ದಾಸವಾಳದ ಎಲೆಯನ್ನು ಮಾತನಾಡಿಸುವವರಾರು?

ಕೆಲವರು ಈ ದಾಸವಾಳದ ಎಲೆಯ ಬದಲು, ಮತ್ತಿಸೊಪ್ಪನ್ನೂ ಬಳಸುತ್ತಿದ್ದರು. ಹಾಗೆ ಇದೇ ಮಾದರಿಯ ಇನ್ನೊಂದು ಸೊಪ್ಪೆಂದರೆ, ಬೆಳ್ಳಟ್ಟೆ ಸೊಪ್ಪು. ಇದರ ಎಲೆ ಎಳೆಯದರಲ್ಲಿ ಬೆಳ್ಳಗಿರುವುದರಿಂದ ಈ ಹೆಸರು ಬಂದಿರಬೇಕು. ಇದು ಕಾಡಲ್ಲಿ ದೊರೆಯುವ ಸೊಪ್ಪೇ. ಇದರ ಲೋಳೆ ಕೂಡಾ ತಲೆಗೆ  ತಂಪು, ಕೂದಲಿಗೆ ಸೊಂಪು.

ಆ ಕಾಲದಲ್ಲಿ ಜೇನು ಕೂಡಾ ನಮ್ಮ ಕಾಡಲ್ಲಿ ಹೇರಳವಾಗಿದ್ದವು. ಈ ಜೇನಿನಲ್ಲೂ ಅನೇಕ ಪ್ರಕಾರಗಳಿವೆ. ತುಡುವಿ, ಮಿಸ್ರಿ, ಹೆಜ್ಜೇನು ಈ ಮೂರು ವಿಧದ ಜೇನು ನಮ್ಮಲ್ಲಿ ದೊರೆಯುತ್ತಿತ್ತು.   ಹೆಜ್ಜೇನು ನೊಣಕ್ಕೆ ಹೋಲಿಸಿದರೆ, ತುಡುವಿ ಚಿಕ್ಕದು. ಹಾಗೇ ಪೊದೆಯಲ್ಲೋ, ಚಿಕ್ಕ ಗಿಡದ ಟೊಂಗೆಗೋ ಈ ಜೇನು ಗೂಡು ಕಟ್ಟುತ್ತದೆ. ಹೆಜ್ಜೇನು ತುಂಬ ಎತ್ತರದ ಮರಕ್ಕೆ ಮಾತ್ರ ಬಲು ದೊಡ್ಡಗಾತ್ರದ ಗೂಡು ಕಟ್ಟುತ್ತದೆ. ಇನ್ನು ಮಿಸ್ರಿ ನೊಣ ತುಂಬ ಚಿಕ್ಕದು. ನೊರಜಿಗಿಂತ ಸ್ವಲ್ಪ ದೊಡ್ಡ ಹಾಗೆ ಕಪ್ಪು ಬಣ್ಣ. ಇದರ ರಟ್ಟು ಕೂಡಾ ಕಪ್ಪು. ಮರದ ಪೊಟರೆಯೊಳಗೆ ಹೆಚ್ಚಾಗಿ ಇವು ಗೂಡು ಕಟ್ಟುತ್ತವೆ.  ತುಪ್ಪ ರುಚಿಯಾಗಿರುತ್ತದೆ.

ಬೇಸಿಗೆಯಲ್ಲಿ ಅಂದರೆ, ಛಳಿಗಾಲ ಮುಗಿದು ಗಿಡ ಚಿಗಿತು ಹೂ ಬಿಡುವ ಸಮಯದಲ್ಲೇ ಹೆಚ್ಚಾಗಿ ಈ ಜೇನು ಗೂಡು ಕಟ್ಟಿ ತುಪ್ಪ ಮಾಡುತ್ತದೆ. ಮೊದಲೆಲ್ಲಾ ಅಪ್ಪಯ್ಯನೇ ಜೇನು ತೆಗೆಯುತ್ತಿದ್ದರು. ಆ ಮೇಲೆ ನಮ್ಮಣ್ಣ ಶುರುಹಚ್ಚಿಕೊಂಡ. ಆಗೆಲ್ಲ ನಮ್ಮಣ್ಣನ ಜೊತೆ ನಾವು ಜೇನು ತೆಗೆಯಲು ಹೊರಡುತ್ತಿದ್ದೆವು. ಅವನು ಮುಂದುವರಿದು ಜೇನು ತೆಗೆದರೆ, ನಾವು ದೂರದಲ್ಲಿ ನಿಂತು ನೋಡುತ್ತಿದ್ದೆವು. ಆಮೇಲೆ ನಾವೇ ತೆಗೆದವರಂತೆ  ಜಂಬದಿಂದ ಜೇನಿನ ಪಾತ್ರೆ ಹಿಡಿದು ಬರುತ್ತಿದ್ದೆವು. ನಮಗೆ ಬೇಸಿಗೆಯಿಡೀ ದೋಸೆಯ ಜೊತೆಗೆ ಜೇನುತುಪ್ಪ ತಿನ್ನಲು ಸಿಗುತ್ತಿತ್ತು.

ಆದರೆ, ಈ ಜೇನು ತೆಗೆಯುವ ಸಂದರ್ಭ ಈಗ ನೆನೆದರೆ ನನಗೆ ತುಂಬ ವಿಷಾದವೆನ್ನಿಸುತ್ತದೆ. ಸಂಜೆಯ ಹೊತ್ತು  ಜೇನುಗೂಡಿಗೆ ಹೊಗೆ ಹಾಯಿಸಿ ಅವುಗಳ ದಿಕ್ಕು ತಪ್ಪಿಸಿ, ಜೇನುಭರಿತ ರಟ್ಟನ್ನು ಕಿತ್ತುಕೊಂಡು ಬರಲಾಗುತ್ತಿತ್ತು. ಜೇನು ತುಂಬಿದ ರಟ್ಟಿನ ಜೊತೆಗೆ ಇರುವ ಜೇನು ನೊಣಗಳ ಮೊಟ್ಟೆ ಮರಿ ತುಂಬಿದ್ದ ರಟ್ಟನ್ನು ನಿರ್ದಯವಾಗಿ ಬಿಸಾಡಲಾಗುತ್ತಿತ್ತು. ಈ ಹೊಗೆಯ ತಾಪಕ್ಕೆ ನೂರಾರು ಜೇನು ನೊಣಗಳು ಸಾಯುತ್ತಿದ್ದವು. ಒಂದಿಷ್ಟು ದಿಕ್ಕೆಟ್ಟು ಹಾರಿ ಹೋಗುತ್ತಿದ್ದವು. ಇದನ್ನೆಲ್ಲಾ ಈಗ ನೆನೆದರೆ, ‘ಛೆ… ನಾವು ಮನುಷ್ಯರು ಎಷ್ಟು ಸ್ವಾರ್ಥಿಗಳು. ಪಾಪದ ನೊಣಗಳು ಊರೂರು ಸುತ್ತಿ ಮಕರಂದ ಸಂಗ್ರಹಿಸಿ ತಮಗಾಗಿ ತಯಾರಿಸಿಕೊಂಡಿದ್ದ ಊಟವನ್ನು ಮೋಸದಿಂದ ಅಪಹರಿಸುವುದಲ್ಲದೇ ಅವರ ಪ್ರಾಣಕ್ಕೂ ಹಾನಿಯುಂಟು ಮಾಡುತ್ತೇವಲ್ಲಾ.. ಈ ಪಾಪಕ್ಕೆ ಪ್ರಾಯಶ್ಚಿತವಿದೆಯೆ?’ ಎಂದೆಲ್ಲ ವಿಚಾರ ಬರುತ್ತದೆ. ಬಾಲ್ಯದ ಇದೊಂದು ವಿಷಯ ಮಾತ್ರ ನನ್ನನ್ನು ಬಹಳ ಕಾಡುತ್ತದೆ.

 ಮುಂದುವರಿಯುವುದು…

About The Author

ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ