ಅವರ ವಿಷಯಾಧಾರಿತ ಆಯ್ಕೆಗಳ ಹೊರತಾಗಿಯೂ, ಅವರ ಕವಿತೆಗಳ ಭಾಷೆ ಸೊಗಸಾದ ಮತ್ತು ಬಹುತೇಕ ಹರ್ಷದಿಂದ ಕೂಡಿರುತ್ತದೆ. ಅವರ ಕವಿತೆಗಳು ಸಾಮಾನ್ಯವಾಗಿ ವಿನೋದಸ್ವಭಾವದಿಂದ ಕೂಡಿರುತ್ತೆ ಹಾಗೂ ಆಕರ್ಷಕವಾದ ವಿರೋಧಾಭಾಸದ ರೂಪಕಗಳ ಬಳಕೆಯನ್ನು ಪ್ರದರ್ಶಿಸುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಡೆನ್ಮಾರ್ಕ್ ದೇಶದ ಕವಿ ಹೆನ್ರಿಕ್ ನೊರ್ಡ್‌ಬ್ರಾಂಡ್ಟ್-ರ (Henrik Nordbrandt, 1945 – 2023) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಡೇನಿಶ್ ಸಾಹಿತ್ಯದಲ್ಲಿ ಹೆನ್ರಿಕ್ ನೊರ್ಡ್‌ಬ್ರಾಂಡ್ಟ್ ಅವರ ಸ್ಥಾನ ಅನನ್ಯವಾಗಿದೆ. ತಮ್ಮ ಮೊದಲ ಸಂಗ್ರಹವಾದ ಡಿಗ್ಟೆ -ಯನ್ನು (Digte) 1966-ರಲ್ಲಿ, ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ, ಪ್ರಕಟಿಸಿದರು. ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಸುಲಭವಾಗಿ ಅರ್ಥವಾಗುವ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಕವಿತೆಗಳನ್ನು ಬರೆಯುವ ಪ್ರವೃತ್ತಿಗೆ ಎಂದೂ ಸೇರಲಿಲ್ಲವಾದರೂ, ಅವರು 1970-ರ ದಶಕದಿಂದಲೂ ತಮ್ಮ ಪೀಳಿಗೆಯ ಪ್ರಮುಖ ಕವಿಯಾಗಿದ್ದಾರೆ.

ಹೆನ್ರಿಕ್ ನೊರ್ಡ್‌ಬ್ರಾಂಡ್ಟ್ 1945-ರಲ್ಲಿ ಕೋಪನ್‌ಹೇಗನ್ ಉಪನಗರವಾದ ಫ್ರೆಡೆರಿಕ್ಸ್‌ಬರ್ಗ್‌-ನಲ್ಲಿ ಜನಿಸಿದರು. ಅವರು ಕೋಪನ್‌ಹೇಗನ್ ವಿಶ್ವವಿದ್ಯಾನಿಲಯದಲ್ಲಿ ಚೈನೀಸ್, ಟರ್ಕಿಶ್ ಮತ್ತು ಆ್ಯರಬಿಕ್ ಭಾಷೆಗಳನ್ನು ಕಲಿತರು, ಆದರೆ 1966-ರಲ್ಲಿ ತಮ್ಮ ಮೊದಲ ಕವನ ಸಂಕಲನ ಪ್ರಕಟವಾದಾಗಿನಿಂದ ಅವರು ಬರಹಗಾರರಾಗಿಯೇ ಜೀವನ ನಡೆಸಿದರು. ಅನೇಕ ವರ್ಷಗಳಿಂದ ಅವರು ಮೆಡಿಟರೇನಿಯನ್ ದೇಶಗಳಾದ ಗ್ರೀಸ್ ಮತ್ತು ಟರ್ಕಿಯಲ್ಲಿ ವಾಸಿಸಿ, ಕೊನೆಯಲ್ಲಿ ಸ್ಪೇಯ್ನ್ ದೇಶದಲ್ಲಿ ಕೂಡ ವಾಸವಾಗಿದ್ದರು. ಆದ್ದರಿಂದ ಅವರ ಕಾವ್ಯವು ಮೆಡಿಟರೇನಿಯನ್ ಪ್ರದೇಶದ ಪಟ್ಟಣಗಳು, ಭೂದೃಶ್ಯಗಳು ಮತ್ತು ಹವಾಮಾನಗಳಿಂದ ತುಂಬಿದೆ; ಮೆಡಿಟರೇನಿಯನ್ ಬಣ್ಣಗಳು, ಬೆಳಕುಗಳು ಮತ್ತು ಛಾಯೆಗಳಿಂದ ತೊಯ್ದಿದೆ ಅವರ ಕಾವ್ಯ. ಇಷ್ಟೊಂದು ದೇಶಗಳ ಮಧ್ಯೆ ಸುತ್ತಾಡುವುದರಿಂದ, ವಾಸಿಸುವುದರಿಂದ ಅವರ ಕಾವ್ಯವು ಸಹಜವಾಗಿಯೇ ಪ್ರಯಾಣದ ಬಗ್ಗೆ ಮಾತಾಡುತ್ತದೆ; ಆದರೆ ಮುಖ್ಯವಾಗಿ ಅವರ ಕಾವ್ಯ ನಿರ್ಗಮನಗಳು ಮತ್ತು ಆಗಮನಗಳೊಂದಿಗೆ, ಹಾಗೂ ಇವು ಅನಿವಾರ್ಯವಾಗಿ ಹೊಸ ನಿರ್ಗಮನಗಳು ಮತ್ತು ಆಗಮನಗಳಿಗೆ ಕಾರಣವಾಗುತ್ತವೆ. ಇವರ ಕಾವ್ಯ ಪ್ರೀತಿ, ತೊರೆಯುವಿಕೆ, ಶೂನ್ಯತೆ, ‘ಇಲ್ಲದಿರುವಿಕೆ’ಗಳನ್ನಲ್ಲದೆ, ಎಲ್ಲವನ್ನೂ ಪರಿಹರಿಸುವ ಮರಣವನ್ನು ಸಹ ಪರಿಶೀಲಿಸುತ್ತದೆ. ಆದರೂ, ಸಾವು ತನ್ನ ಪ್ರಿಯತಮೆಯನ್ನು ಕಸಿದುಕೊಂಡಾಗ ಅವರು ಅನುಭವಿಸಿದ್ದು ಒಂದು ತರಹದ ಕೊರತೆ ಮತ್ತು ನಷ್ಟ ಮಾತ್ರ.

ಅವರ ವಿಷಯಾಧಾರಿತ ಆಯ್ಕೆಗಳ ಹೊರತಾಗಿಯೂ, ಅವರ ಕವಿತೆಗಳ ಭಾಷೆ ಸೊಗಸಾದ ಮತ್ತು ಬಹುತೇಕ ಹರ್ಷದಿಂದ ಕೂಡಿರುತ್ತದೆ. ಅವರ ಕವಿತೆಗಳು ಸಾಮಾನ್ಯವಾಗಿ ವಿನೋದಸ್ವಭಾವದಿಂದ ಕೂಡಿರುತ್ತೆ ಹಾಗೂ ಆಕರ್ಷಕವಾದ ವಿರೋಧಾಭಾಸದ ರೂಪಕಗಳ ಬಳಕೆಯನ್ನು ಪ್ರದರ್ಶಿಸುತ್ತವೆ. ವಾಸ್ತವವಾಗಿ, ಭಾಷೆ ಮತ್ತು ಆ ಭಾಷೆಯು ಜಗತ್ತನ್ನು ನಿರ್ಮಿಸುವ ವಿಧಾನಗಳನ್ನು ಪರಿಗಣಿಸುವಲ್ಲಿ, ಅವರ ಕಾವ್ಯವು ಹೆಚ್ಚಾಗಿ ಸ್ವಯಂಗೆ ಮತ್ತೆ ಹಿಂದಿರುಗುತ್ತದೆ. ಅವರ ಕವಿತೆಗಳು ಪ್ರಾಸಬದ್ಧವಾಗಿಲ್ಲ ಹಾಗೂ ಉದ್ದವಾದ, ಅಲೆದಾಡುವ ವಾಕ್ಯಗಳಿಂದ ಅಥವಾ ಚಿಕ್ಕದಾದ ನಿಖರವಾದ ಹೇಳಿಕೆಗಳಿಂದ ರಚಿಸಲ್ಪಟ್ಟಿವೆ, ಉದಾಹರಣೆಗೆ, ಹುಲ್ಲುಗಾವಲು ಮತ್ತು ಅಡವಿಯ ಅಂಚನ್ನು ಮಾತ್ರ ತಿಳಿದಿರುವ ಧ್ಯಾನಿಸುವ ಒಂಟೆಯ ಬಗ್ಗೆ ಅವರ ಕವಿತೆಯಲ್ಲಿ ಇದನ್ನು ಕಾಣಬಹುದು. ಅವರ ಕಾವ್ಯದ ವಿನೋದಮಯ ರೂಪಗಳು ಮತ್ತು ಪದಗಳ ಅಡಿಯಲ್ಲಿ ಒಂದು ತರಹದ ಗಂಭೀರತೆ ಮತ್ತು ವಿಷಣ್ಣತೆಯ ಅಂತರ್ಭಾವವನ್ನು ಓದುಗ ಗ್ರಹಿಸುತ್ತಾನೆ. ನೊರ್ಡ್‌ಬ್ರಾಂಡ್ಟ್-ರು ತಮ್ಮ ಕವನಗಳನ್ನು ಸಭೆಗಳಲ್ಲಿ ಓದುವಾಗ ಇದು ಸ್ಪಷ್ಟವಾಗಿ ಕಂಡುಬರುತ್ತದೆ.

ಡೆನ್ಮಾರ್ಕಿನ ಎಲ್ಲಾ ಸಂಭಾವ್ಯ ಸಾಹಿತ್ಯ ಪ್ರಶಸ್ತಿಗಳನ್ನು ನೊರ್ಡ್‌ಬ್ರಾಂಡ್ಟ್ ಗೆದ್ದಿದ್ದಾರೆ. ಈ ಪ್ರಶಸ್ತಿಗಳಲ್ಲಿ ಅತ್ಯಂತ ಪ್ರಮುಖವಾದದ್ದು, 2000-ರಲ್ಲಿ ಅವರು ತಮ್ಮ ಕವನ ಸಂಕಲನ Drømmebroer -ಕ್ಕಾಗಿ (Dream Bridges) ಪಡೆದ ‘ನಾರ್ಡಿಕ್ ಕೌನ್ಸಿಲ್‌’-ನ ಸಾಹಿತ್ಯ ಪ್ರಶಸ್ತಿ, ಹಲವಾರು ಕವನ ಸಂಗ್ರಹಗಳ ಜೊತೆಗೆ, ಅವರು ಒಂದು ಪತ್ತೇದಾರಿ ಕಾದಂಬರಿ, ಮಕ್ಕಳ ಪುಸ್ತಕಗಳು ಮತ್ತು ಒಂದು ಟರ್ಕಿಶ್ ಪಾಕಶಾಸ್ತ್ರ ಪುಸ್ತಕವನ್ನು ಸಹ ಬರೆದಿದ್ದಾರೆ, ಟರ್ಕಿಶ್ ಕಾವ್ಯವನ್ನು ಡೇನಿಶ್ ಭಾಷೆಗೆ ಅನುವಾದಿಸಿದ್ದಾರೆ.

ಅಗಣಿತ ದೇಶಸಂಚಾರಗಳಿಂದ ಸ್ಫೂರ್ತಿ ಮತ್ತು ಪೋಷಣೆ ಪಡೆದ ಅವರ ಕಾವ್ಯದಲ್ಲಿ, ನೊರ್ಡ್‌ಬ್ರಾಂಡ್ಟ್-ರು ಶೂನ್ಯದ ಒಂದು ಹೊಸ ಮೆಟಾಫಿಸಿಕ್ಸ್-ಅನ್ನು ರಚಿಸಿದ್ದಾರೆ. ಅಸಾಧಾರಣ ರೂಪಕಗಳಲ್ಲಿ, ರಸಾತಿರೇಕದ, ‘ಗಾಥಿಕ್’ ಪ್ರತಿಮೆಗಳಲ್ಲಿ, ಗೊತ್ತುಗುರಿಯಲ್ಲದೆ ಅಡ್ಡಾಡುವ ಅಂತ್ಯವಿಲ್ಲದ ವಾಕ್ಯಗಳಲ್ಲಿ, ನಷ್ಟ ಮತ್ತು ನೆರವೇರಿಕೆ ಏಕಕಾಲದಲ್ಲಿ ಸಂಭವಿಸುವ ಜಗತ್ತನ್ನು ಅವರು ಕಲ್ಪಿಸುತ್ತಾರೆ. ಇರುವಿಕೆ, ಆಗಮನ ಮತ್ತು ಸ್ವಾಧೀನ – ಇವೆಲ್ಲವೂ ಇಲ್ಲದಿರುವಿಕೆ, ನಿರ್ಗಮನ ಮತ್ತು ನಷ್ಟವನ್ನು ಅಳಿಸಲು ಸಾಧ್ಯವಿಲ್ಲ. ಮನುಷ್ಯ ಎಲ್ಲಿಗೆ ಹೋದರೂ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಓಡಾಡುತ್ತಿರುತ್ತಾನೆ. ಪ್ರೀತಿಯಲ್ಲೂ ಯಾವುದೇ ಖಚಿತತೆ ಇಲ್ಲ, ಅದು ಇವರ ಕಾವ್ಯದಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಅವರ ಕಾವ್ಯ ಓದುಗರನ್ನು ಆಶ್ಚರ್ಯಪಡಿಸುತ್ತದೆ; ಪ್ರೀತಿಯಂತಹ, ಕನಸುಗಳಂತಹ ಕ್ಷಣಿಕ ವಸ್ತುಗಳ, ಅವು ಇವೆ ಎಂದು ನಾವು ಅರಿತುಕೊಳ್ಳುವ ಕ್ಷಣದಲ್ಲೇ ಕಣ್ಮರೆಯಾಗುವ ಅವುಗಳ ನಾಜೂಕು ಸೌಂದರ್ಯದ ಬಗ್ಗೆ ನಿಷ್ಕೃಷ್ಟವಾದ ಭಾವನೆಯುಳ್ಳ ಕವಿ ಅವರು.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ಹೆನ್ರಿಕ್ ನೊರ್ಡ್‌ಬ್ರಾಂಡ್ಟ್-ರ ಏಳು ಕವನಗಳಲ್ಲಿ ಮೊದಲ ಮೂರು ಕವನಗಳನ್ನು ಟಾಮ್ ಸ್ಯಾಟರ್ಲೀ (Thom Satterlee), ನಂತರದ ಎರಡು ಕವನಗಳನ್ನು ಪ್ಯಾಟ್ರಿಕ್ ಫಿಲಿಪ್ಸ್ (Patrick Phillips), ಆರನೆಯ ಕವನವನ್ನು ಟಾಮಸ್ ಇ, ಕೆನಡಿ (Thomas E. Kennedy), ಹಾಗೂ ಏಳನೆಯ ಕವನವನ್ನು ರಾಬಿನ್ ಫುಲ್ಟನ್ (Robin Fulton) ಅವರುಗಳು ಮೂಲ ಡೇನಿಶ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.

1
ತಡ ಮಾರ್ಚಿನ ದಿನಗಳು
ಮೂಲ: Days in Late March

ದಿನಗಳು ಚಲಿಸುತ್ತವೆ ಒಂದು ದಿಕ್ಕಿನಲ್ಲಿ
ಮುಖಗಳು ಅದರ ವಿರುದ್ಧ ದಿಕ್ಕಿನಲಿ.
ಯಾವ ಅಡ್ಡಿಯಿಲ್ಲದೆ ಒಂದಿನ್ನೊಂದರ
ಬೆಳಕನ್ನ ಕಡಕೊಳ್ಳುತ್ತವೆ.

ವರುಷಗಳ ನಂತರ ಇದು ತೀರ್ಮಾನಿಸಲು
ಕಷ್ಟವಾಗುತ್ತದೆ ದಿನಗಳು ಯಾವುವು
ಮುಖಗಳು ಯಾವುವು ಎಂದು …

ಮತ್ತೆ ಅವುಗಳ ಮಧ್ಯೆ ಇರುವ ಅಂತರ
ಮತ್ತೂ ಅಪ್ರಾಪ್ಯ ಎಂದನಿಸುತದೆ
ದಿನದಿಂದ ದಿನಕ್ಕೆ ಮುಖದಿಂದ ಮುಖಕ್ಕೆ.

ಇದನ್ನೆ ನಾನು ನಿನ್ನ ಮುಖದಲ್ಲಿ ಕಾಣುವೆ
ಈ ತಡ ಮಾರ್ಚಿನ ಬೆಳಗುವ ದಿನಗಳಲ್ಲಿ.

2
ನದಿಯ ರಹಸ್ಯ
ಮೂಲ: The River’s Secret

ಈ ನಿಸರ್ಗಚಿತ್ರ ಒಂದು ರಹಸ್ಯದ ಹಾಗೆ
ಕಾಣಿಸುತ್ತಿದೆ
ಏಕೆಂದರೆ ನಾನು ನಿಂತಿರುವ ತಾಣದಿಂದ
ಆ ನದಿ ಕಾಣಿಸುತ್ತಿಲ್ಲ.
ಆದ್ದರಿಂದ ಈ ನಿಸರ್ಗಚಿತ್ರವನ್ನು ನಾನು
ಬಲು ಸುಲಭವಾಗಿ
ನಾನು ಇಲ್ಲದಂತೆ ಚಿತ್ರಿಸಬಲ್ಲೆ.
ಈ ಹಸಿರು ಗುಡ್ಡಗಳು ಮತ್ತು ನೀಲಿ ಬೆಟ್ಟಗಳ
ಮಧ್ಯೆ ನನ್ನ ಇರುವಿಕೆ ಬಹುಪಾಲು
ಒಂದು ಅಪಮಾನದಂತೆ ಅನಿಸುತ್ತೆ.
ಆದರೂ ನನ್ನ ಇರುವಿಕೆ ಅಗತ್ಯ: ಏಕೆಂದರೆ
ನದಿಯನ್ನು ಕತ್ತಲು ಅಡಗಿಸಿದಾಗ
ಮಿಂಚುಹುಳಗಳು ಹೇಗೆ ನದಿಯನ್ನು ಬೆಳಗಿಸುತ್ತವೆ
ಎಂದು ನನಗೆ ಗೊತ್ತು ಮತ್ತೆ ಈಗ ಇದ್ದ ಹಾಗೆ ಅಲ್ಲ,
ಆ ಗುಡ್ಡಗಳು, ಅವುಗಳ ವಿಮುಖವಾದ ಇಳಿಜಾರು,
ನೀರಿನ ಆಕಾಶನೀಲಿ ಬಣ್ಣ, ಹಾಗೂ
ಸಮುದ್ರದೆಡೆಗೆ ತೇಲಿ ಹೋಗುತ್ತಿರುವ ಮರದ ದಿಮ್ಮಿಗಳು,
ಇವೆಲ್ಲವೂ ನನ್ನನ್ನು ನದಿಯ ರಹಸ್ಯವಾಗಿಸುತ್ತವೆ.

3
ಹೀಗೆ ಜೀವನ
ಮೂಲ: A Life

ನೀನೊಂದು ಬೆಂಕಿಕಡ್ಡಿಯ ಗೀರಿದೆ,
ಅದರ ಜ್ವಾಲೆ ನಿನ್ನ ಕಣ್ಣುಕತ್ತಲಾಗಿಸುತ್ತೆ,
ನೀನು ಹುಡುಕಲು ಬಂದದ್ದು
ಕತ್ತಲೆಯಲ್ಲಿ ನಿನಗೆ ಸಿಗುವುದಿಲ್ಲ
ಆ ಕಡ್ಡಿ ನಿನ್ನ ಬೆರಳುಗಳ ನಡುವೆ
ಸುಟ್ಟು ಹೋಗುವ ಮುನ್ನ,
ಸುಡುವ ನೋವು ನೀನು ಹುಡುಕಲು
ಬಂದುದನ್ನು ಮರೆಯುವಂತೆ ಮಾಡುತ್ತೆ.

4
ಜಹನ್ನುಮ್ ಹಾಗೂ ಜನ್ನತ್
ಮೂಲ: Cehennem ve Cennet

ಬ್ರಹ್ಮಾಂಡದಿಂದ ಏನೋ ಒಂದು ಕೆಳಕ್ಕೆ ಬಿದ್ದು
ಈ ವಿಶಾಲವಾದ, ಆಳವಾದ ಹೊಂಡವನ್ನು ಮಾಡಿತ್ತು,
ಆದರೆ ಹೊಂಡದ ಒಳಗೆ ಆಳದಲ್ಲಿ
ಏನೂ ಇರಲಿಲ್ಲ.
— ಹಾಗೆಯೇ, ಈಗ ಪ್ರತಿ ಆದಿತ್ಯವಾರ ಜನರೆಲ್ಲ
ಆ ಹೊಂಡದ ಸುತ್ತ ನಿಂತು
ಬಿರುಗಣ್ಣು ಬಿಟ್ಟು ಒಳಗೆ ನೋಡುತ್ತಾರೆ
ಮತ್ತೆ ಈ ಕಾರಣಕ್ಕಾಗಿ ಅದನ್ನು
ಜಹನ್ನುಮ್ ಎಂದು ಕರೆಯುತ್ತಾರೆ.

ಅದರ ಪಕ್ಕದಲ್ಲಿ ಇನ್ನೊಂದು ಹೊಂಡವಿದೆ
ಅದರ ಒಳಗೆ, ಆಳದಲ್ಲಿ
ಒಂದು ಪುಟ್ಟ ಚರ್ಚ್ ಇದೆ,
ಮೆಟ್ಟಿಲು ಇಳಿದು ಅಲ್ಲಿಗೆ ಹೋಗಬಹುದು,
ಅಲ್ಲಿ ಕೆಳಗೆ ನಿಂತು
ಮೇಲೆ ಹೊಂಡದ ಹೊರಗೆ ನೋಡಬಹುದು.
— ಆ ಹೊಂಡವನ್ನು ಅವರು
ಜನ್ನತ್ ಎಂದು ಕರೆಯುತ್ತಾರೆ.

(ಒಂದು ಟಿಪ್ಪಣಿ: ಹಿಂದೂಯಿಸಮ್-ನಲ್ಲಿ ‘ಸ್ವರ್ಗ’ ಹಾಗೂ ‘ನರಕ’ ಎನ್ನುತ್ತಾರೆ; ಇಸ್ಲಾಮ್-ನಲ್ಲಿ ‘ಜನ್ನತ್’ ಹಾಗೂ ‘ಜಹನ್ನುಮ್’ ಎನ್ನುತ್ತಾರೆ; ಕ್ರಿಶ್ಚಿಯಾನಿಟಿಯಲ್ಲಿ ‘ಪ್ಯಾರಡೈಸ್’ ಮತ್ತು ‘ಹೆಲ್’ ಎನ್ನುತ್ತಾರೆ. ಇವೆಲ್ಲಾ ಆಯಾ ರಿಲಿಜನ್ನಿನ, ಮತ-ಧರ್ಮದ ಅನುಸಾರವಾಗಿ ಬೇರೆ ಬೇರೆ, ಇವುಗಳ ಪರಿಕಲ್ಪನೆಗಳು ಬೇರೆ ಬೇರೆ. ಅನುಕೂಲಕ್ಕೆ, ಸುಲಭವಾಗಿ ಅರ್ಥಮಾಡಿಸುವುದಕ್ಕೆ ‘ಪ್ಯಾರಡೈಸ್’ನ್ನು ಕ್ರಿಶ್ಚಿಯನ್ನರ ‘ಸ್ವರ್ಗ’ ಅಂತ ಹೇಳಬಹುದು, ಅಷ್ಟೇ. ಡೆನ್ಮಾರ್ಕ್ ದೇಶದ ಕವಿ ಹೆನ್ರಿಕ್ ನೊರ್ಡ್‌ಬ್ರಾಂಡ್ಟ್-ರ ಈ ಕವನ ಓದಿದಾಗ, ಮುಖ್ಯವಾಗಿ ಕವನದ ಶೀರ್ಷಿಕೆ ಓದಿದಾಗ ಇದೆಲ್ಲಾ ತಲೆಯಲ್ಲಿ ಸುತ್ತಲಾರಂಭಿಸಿತು. ಕವನದ ಇಂಗ್ಲಿಷ್ ಅನುವಾದದ ಶೀರ್ಷಿಕೆ ಯಾಕೆ ಬೇರೆ ಯಾವುದೋ ಭಾಷೆಯಲ್ಲಿ ಇರುವ ಹಾಗೆ ಇದೆ ಅಂತ ಅನಿಸಿತು. ಕವನವನ್ನು ಓದಿದಾಗ ಅದರಲ್ಲಿ Hell ಮತ್ತು Paradise ಪದಗಳು ಇವೆ; ಮತ್ತೆ ಶೀರ್ಷಿಕೆಯ ಕಡೆ ಗಮನ ಹರಿಸಿದೆ. ಇದು ಡೇನಿಶ್ ಭಾಷೆಯಂತೂ ಅಲ್ಲ; ಆ್ಯರಬಿಕ್ ಭಾಷೆ ಇರಬಹುದು ಅಂತನಿಸಿತು. ಮತ್ತೂ ಹಾಗೇ ದಿಟ್ಟಿಸಿ ನೋಡಿದೆ, ಆಗ ಹೊಳೆಯಿತು. ಉರ್ದು ಭಾಷೆಯ ಘಜ಼ಲ್-ಗಳಲ್ಲಿ, ಹಿಂದಿ ಸಿನೆಮಾ ಹಾಡುಗಳಲ್ಲಿ, ಡಯಲಾಗ್-ಗಳಲ್ಲಿ ಕೇಳಿಬರುತ್ತೆ … ‘ಜಹನ್ನುಮ್’ ಹಾಗೂ ‘ಜನ್ನತ್’ … ಹೌದು. ಒಂದಕ್ಕೊಂದು ಸೇರಿಸಿದಾಗ ಸ್ಪಷ್ಟವಾಯಿತು. ಶೀರ್ಷಿಕೆಯ ಭಾಷೆ ಯಾವುದು ಅಂತ ಇನ್ನೂ ಸೋಜಿಗ. ಆ್ಯರಬಿಕ್ ಅಂತೂ ಅಲ್ಲ ಅಂತ ಎಲ್ಲೋ ಅನಿಸಿತು, ಆದರೆ ಆ್ಯರಬಿಕ್-ನ ಹಾಗೇಯೇ ಇದೆ ಅಂತ ಕೂಡ ಅನಿಸಿತು. ಇಷ್ಟು ತಲೆಕೆಡಿಸಿಕೊಳ್ಳುವುದು ಯಾಕೆ ಅಂತ ಗೂಗಲ್-ನಲ್ಲಿ ಹಾಕಿ ನೋಡಿದಾಗ ಇದು ಟರ್ಕಿಶ್ ಭಾಷೆಯೆಂದು ಗೊತ್ತಾಯಿತು. ಒಬ್ಬ ಡೆನ್ಮಾರ್ಕ್ ದೇಶದ ಕವಿ, ತನ್ನ ಡೇನಿಶ್ ಭಾಷಯಲ್ಲಿ ಬರೆದ ಕವನಕ್ಕೆ ಟರ್ಕಿಶ್ ಭಾಷೆಯ ಶೀರ್ಷಿಕೆ ಕೊಟ್ಟನಲ್ಲ ಅಂತ ಈಗ ಸೋಜಿಗವಾಯಿತು. ಕವಿಯ ಬಗ್ಗೆ ಸ್ವಲ್ಪ ಓದಿದಾಗ ಅವರು ಕೋಪನ್‌ಹೇಗನ್ ಯೂನಿವರ್ಸಿಟಿಯಲ್ಲಿ ಆ್ಯರಬಿಕ್, ಚೈನೀಸ್, ಮತ್ತು ಟರ್ಕಿಶ್ ಭಾಷೆಗಳನ್ನು ಕಲಿತರು, ಹಾಗೂ ಸುಮಾರು ವರ್ಷಗಳ ಕಾಲ ಗ್ರೀಸ್ ಮತ್ತು ಟರ್ಕಿ ದೇಶಗಳಲ್ಲಿ ವಾಸವಾಗಿದ್ದರೆಂದು ತಿಳಿದು ಬಂತು. ಟರ್ಕಿಶ್ ಭಾಷೆ ಮತ್ತು ಸಂಸ್ಕೃತಿಯ ನಾಡಿನಲ್ಲಿದ್ದ ಕಾರಣ ಅವುಗಳ ಪ್ರಭಾವ ಕವಿಯ ಬರಹಗಳಲ್ಲಿ ಅಲ್ಲಿ ಇಲ್ಲಿ ಕಾಣುವುದು ಸಹಜವೇ ಅಂತ ಅಂದುಕೊಂಡೆ. ಆದರೆ, ಈ ಕವನದ ಇಂಗ್ಲಿಷ್ ಅನುವಾದಕ್ಕೆ ಕೂಡ ಮೂಲ ಕವನದ ಶೀರ್ಷಿಕೆಯನ್ನು ಅನುವಾದಕ ಪ್ಯಾಟ್ರಿಕ್ ಫಿಲಿಪ್ಸ ಬದಲಿಸದೇ ಹಾಗೇ ಉಳಿಸಿಕೊಂಡಿದ್ದಾನೆಂಬುದು ಇನ್ನೊಂದು ವಿಶೇಷ. ‘ಜನ್ನತ್’ ಮತ್ತು ‘ಜಹನ್ನುಮ್’ ಇಲ್ಲಿ ನಮಗೂ ಸ್ವಲ್ಪ ಪರಿಚಿತವಾದ ಪದಗಳು ಅಂತ ನಾನೂ ಕೂಡ ಅದೇ ಪದಗಳನ್ನು ಕನ್ನಡ ಅನುವಾದದಲ್ಲಿ ಉಳಿಸಿಕೊಂಡಿರುವೆ.)

5
ಬಿಳಿ ಹೂದಾನಿ
ಮೂಲ: The White Vase

ಬೇಸಿಗೆ ಹೋಗಿಲ್ಲ ಇನ್ನೂ
ನೀನೂ ಕೂಡ ಹೋಗಿಲ್ಲ ಇನ್ನೂ
ನಾನೂ ಕೂಡ ಹೋಗಿಲ್ಲ ಇನ್ನೂ.

ಆ ಬಾಗಿಲು ಮುಚ್ಚಿದೆ,
ಮಧ್ಯಾಹ್ನದ ಸೂರ್ಯ ಕಿಟಕಿ
ಗಾಜುಗಳನ್ನು ಬೆಚ್ಚಗಾಗಿಸುತ್ತದೆ,
ಮತ್ತೆ ಬರ್ಚ್ ಮರಗಳ ನೆರಳುಗಳು

ಆ ಬಿಳಿ ಹೂದಾನಿ ಇರುವ ಕಪ್ಪು ಮೇಜಿನ
ಮೇಲಿರುವ ಧೂಳನ್ನು ಕಪ್ಪಗಾಗಿಸುತ್ತವೆ.
ಮತ್ತೆ ಆ ಧೂಳು ಹಾಗೇ ಅಲ್ಲಿ ಬಿದ್ದಿರುತ್ತೆ.

6
ಮೂರು ಟಿಪ್ಪಣಿಗಳು
ಮೂಲ: Three Notations

1
“ಆತ್ಮ”

ಪ್ರತಿಯೊಂದು ಆತ್ಮವು ತಾನು ದ್ವೇಷಿಸುವ,
ಆದರೆ ತನ್ನನ್ನು ತಾನು ಮಾರಿಕೊಂಡ ದೇಹಕ್ಕಾಗಿ
ಮಾತ್ರವೇ ಉಸಿರಾಡುತ್ತದೆ,
ಸಾಯಲಿಕ್ಕೆಂದು.

2
“ಅವನು”

ಇದ ಹೇಳು ನನಗೆ,
ನಾವು ‘ಇದ’ಕ್ಕಾಗಿ ಜನ್ಮತಾಳಿದೆವೆ?
ತನ್ನ ಮೇಲೆಯೇ ತನ್ನ ಹೇವರಿಕೆಗಾಗಿ
ನಮ್ಮನ್ನು ಶಿಕ್ಷಿಸಲು
ಕುಪಿತ ದೇವರೊಬ್ಬ ತನ್ನದೇ ರೂಪದಲ್ಲಿ
ನಮ್ಮನ್ನು ಸೃಷ್ಟಿಸಿದನೆಂದು ನಂಬುವುದಕ್ಕಾಗೇನು?

3
“ಸಮುದ್ರ”

ನಾನು ಸಮುದ್ರಕ್ಕೆ ಹಿಂದಿರುಗುವಾಗ
ನಾನಿಲ್ಲದೇ ಇರುತ್ತೆ ಆ ಹಿಂದಿರುಗುವಿಕೆ

7
ಪರದೆ
ಮೂಲ: Curtain

ಈ ಜಗತ್ತು ಮತ್ತು ನನ್ನ ಕನಸಿನ ನಡುವೆ
ಒಂದು ನವಿರಾದ ಪರದೆಯ ನಸುನೋಟ ಕಂಡೆ,
ನಾನು ಜಗತ್ತಿನ ಹತ್ತಿರ ಹತ್ತಿರ ಹೋಗುತ್ತಿದ್ದಂತೆ
ಪರದೆ ಕಪ್ಪಾಗುತ್ತಾ ಹೋಯಿತು,
ಆದರೆ ತಿಳಿಯಾಗುತ್ತಿತ್ತು ಕನಸು ಮೂಡುತ್ತ ಹತ್ತಿರವಾದಂತೆ.

ಹೇಗೆ ದೇಹಯಾತನೆ ಬೆಳಕನ್ನು ತುಂಬಿತ್ತೋ
ಹಾಗೇ ಅನಿರ್ವಚನೀಯ ದುಃಖ ಕತ್ತಲನ್ನು ತುಂಬಿತ್ತು,
ಒಂದು ಇನ್ನೊಂದರ ಕಡೆಗೆ ಚಲಿಸುವ ಅಂತರದಲ್ಲಿ
ನನ್ನ ನೆನಪುಗಳೆಲ್ಲ ಮಾಯವಾದವು.

ಎಚ್ಚರವಾಗಿರುವಾಗ, ನೀನು ಹೇಗಿರುವಿಯೆಂದು
ಕಲ್ಪಿಸಿಕೊಳ್ಳಲಾಗುತ್ತಿಲ್ಲ,
ನಿನ್ನ ಮುಖ ಈಗ ನೆನಪಿಗೆ ಬರುತ್ತಲೇ ಇಲ್ಲ.
ನನ್ನ ಕನಸುಗಳಲ್ಲಿ ನೀನು ಎಷ್ಟು
ಜೀವಂತವಾಗಿರುವಿಯೆಂದರೆ
ನಾನು ನಿನ್ನನ್ನು ಮುಟ್ಟಬಲ್ಲೆಯೆಂದನಿಸುತದೆ.

ಆದರೆ ಒಂದೇ ಒಂದು ಕ್ಷಣಮಾತ್ರಕ್ಕೆ ಕೂಡ
ನೀನು ಸತ್ತಿರುವಿಯೆಂದು ಮರೆಯಲು
ನನಗೆ ಅನುಮತಿ ಇಲ್ಲ.