ನೋಡಿ ಇದು ಸಣ್ಣ ವಿಷಯವೇ ಇರಬಹುದು. ಆದರೆ ಮಕ್ಕಳ ಮನೋ ಲೋಕವನ್ನ ಚಿತ್ರಿಸುವ ಸೂಕ್ಷ್ಮ ವಿಚಾರ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯೇ ಪೋಷಕರಿಗೆ ಹೆದರಿ ಟೀಚರ್‌ಗೆ ಯಾಮಾರಿಸಿ ಮೋಸ ಮಾಡುತ್ತಾನೆ ಎಂದರೆ ಶಿಕ್ಷೆಗೆ ಎಷ್ಟು ಭಯವಿರುತ್ತದೆ. ಇದನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಶಿಕ್ಷೆಯೇ ಎಲ್ಲದಕ್ಕೂ ಪರಿಹಾರವಲ್ಲ. ಇದನ್ನು ಮನಗಂಡಿರುವುದರಿಂದಲೇ ಶಿಕ್ಷಣ ಇಲಾಖೆ ಶಿಕ್ಷೆ ರಹಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು. ಶಿಶು ಸ್ನೇಹಿ ಶಿಕ್ಷಣವನ್ನು ಬೆಂಬಲಿಸಿ ಭಯಮುಕ್ತ ವಾತಾವರಣದಲ್ಲಿ ಮಕ್ಕಳ ಮನಸ್ಸು ಹೂವಂತೆ ಪ್ರಫುಲ್ಲವಾಗಿ ಅರಳಲು ಬಯಸುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಅಂದು ಪೋಷಕರ ಸಭೆ ಕರೆಯಲಾಗಿತ್ತು. ಆಗ ತಾನೆ ಮುಗಿದ ಸಂಕಲನಾತ್ಮಕ ಮೌಲ್ಯಮಾಪನ ಒಂದರ ಪತ್ರಿಕೆಗಳನ್ನು ಪೋಷಕರ ಮುಂದಿಟ್ಟು ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸುವ ಅಜೆಂಡಾ‌ದೊಂದಿಗೆ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಪೋಷಕರು ಮತ್ತು ಎಸ್ ಡಿ ಎಂ ಸಿ ಸಭೆ ಏರ್ಪಾಡಾಗಿತ್ತು.

ತರಗತಿ ಶಿಕ್ಷಕರೆಲ್ಲಾ ತಮ್ಮ ತರಗತಿಯ ವಿದ್ಯಾರ್ಥಿಗಳ ಕೃತಿ ಸಂಪುಟಗಳೊಂದಿಗೆ ಹಾಜರಿದ್ದರು. ಪೋಷಕರಿಗೆ ತಮ್ಮ ಮಕ್ಕಳ ಶೈಕ್ಷಣಿಕ ಸಾಧನೆಗಳನ್ನು ಶಿಕ್ಷಕರ ಬಾಯಿಂದಲೇ ಕೇಳಿ ತಿಳಿಯುವ ಉತ್ಸಾಹ ಮತ್ತು ಖುಷಿ ಒಂದೆಡೆಯಾದರೆ, ತಮ್ಮ ಮಕ್ಕಳು ಸರಿಯಾಗಿ ಓದಿ ಪರೀಕ್ಷೆ ಬರೆದಿದ್ದಾರೋ ಇಲ್ಲವೋ? ಎಂಬ ಆತಂಕ ಮತ್ತೊಂದು ಕಡೆ ಎಲ್ಲರ ಮುಖದಲ್ಲೂ ಎದ್ದು ಕಾಣುತ್ತಿತ್ತು.

ಶಿಕ್ಷಕರಿಗೆ ತಮ್ಮ ತರಗತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳದೆ ಚಿಂತೆ. ಅವರನ್ನು ಹೇಗಾದರೂ ಮಾಡಿ ವಿನೂತನ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿ ಕಲಿಕೆಯಲ್ಲಿ ಮುಂದೆ ತರಬೇಕು ಎಂದು ಆಲೋಚಿಸುತ್ತಿದ್ದರು. ಅದಕ್ಕಾಗಿ ರೂಪಿಸಬೇಕಾದ ಚಟುವಟಿಕೆಗಳು, ಅವುಗಳ ಅನುಷ್ಠಾನಕ್ಕಾಗಿ ಪೋಷಕರ ಸಹಕಾರ ಪಡೆಯುವ ಬಗೆ ಮುಂತಾದ ಯೋಜನೆಗಳು ಸಿದ್ಧಗೊಂಡಿದ್ದವು.

ಅಂದು ‘ಸಮುದಾಯದತ್ತ ಶಾಲಾ’ ಕಾರ್ಯಕ್ರಮ ಇತ್ತು. ಶಾಲೆ ನವ ವಧುವಿನಂತೆ ಸಿಂಗಾರಗೊಂಡಿತ್ತು. ಬಾಗಿಲ ಮುಂದೆ ಕಟ್ಟಲಾಗಿದ್ದ ಸಮುದಾಯದತ್ತಾ ಶಾಲೆಯ ಬ್ಯಾನರ್ ಪೋಷಕರಿಗೆ ಸ್ವಾಗತ ಕೋರುತ್ತಿತ್ತು. ಎಲ್ಲರ ಮನಸ್ಸು ಹೂವಂತೆ ಪ್ರಫುಲ್ಲವಾಗಿ ಅರಳಿ ನಳನಳಿಸುತ್ತಿದ್ದವು. ಅಡುಗೆ ಕೋಣೆಯಲ್ಲಿ ಬಿಸಿ ಬಿಸಿ ಬಜ್ಜಿ ಹಾಗೂ ಪಾಯಸ ತಮ್ಮ ಸುವಾಸನೆಯ ಕರಾಮತ್ತು ತೋರಿ ಇಡೀ ಶಾಲಾ ವಾತಾವರಣವನ್ನ ಘಮಿಸುವಂತೆ ಮಾಡಿದ್ದವು. ಶಾಲಾ ಅಂಗಳದಲ್ಲಿ ಅರಳಿ ನಿಂತಿದ್ದ ಹೂಗಳು ಶಾಲೆಯ ಸೊಬಗನ್ನು ದುಪ್ಪಟ್ಟು ಮಾಡಿದ್ದವು. ಶುಭ್ರ ಆಕಾಶದಲ್ಲಿ ಮಿನುಗುವ ತಾರೆಗಳಂತೆ ಶಾಲಾ ಆವರಣದ ತುಂಬಾ ವಿದ್ಯಾರ್ಥಿಗಳು ತೆಳು ನೀಲಿ ಮತ್ತು ಗಾಢ ನೀಲಿ ಬಣ್ಣಗಳ ಸಮ್ಮಿಲನದ ಸಮವಸ್ತ್ರದಲ್ಲಿ ಶಿಸ್ತಿನಿಂದ ಹಾಜರಾಗಿದ್ದರು.

ತರಗತಿ ಕೋಣೆ ಪ್ರವೇಶಿಸುತ್ತಿದ್ದಂತೆ ಪೋಷಕರು ಮತ್ತು ಮಕ್ಕಳ ಗುಸು-ಗುಸು ಪಿಸು ಮಾತುಗಳು ಕಿವಿಯ ಮೇಲೆ ಬೀಳುತ್ತಿದ್ದವು. ಎಲ್ಲಾ ಮಕ್ಕಳಿಗೂ ಹಿಂದಿನ ದಿನವೇ ಉತ್ತರ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪೋಷಕರಿಗೆ ತೋರಿಸಲು ನೀಡಿದ್ದೆನು. ಅಲ್ಲಿ ಅವರಿಗೆಲ್ಲ ಮಕ್ಕಳ ಕೃತಿ ಸಂಪುಟಗಳನ್ನು ಒದಗಿಸಲಾಗಿತ್ತು. ಉಳಿದ ಉತ್ತರ ಪತ್ರಿಕೆಗಳನ್ನು ನೋಡುತ್ತಾ ಮಕ್ಕಳನ್ನು ಯಾಕೆ ತಪ್ಪು ಬರೆದಿರುವೆ? ಇದಕ್ಕೆ ಯಾಕೆ ಉತ್ತರಿಸಿಲ್ಲ? ಇದರಲ್ಲಿ ಏನು ಕಷ್ಟ ಇದೆ? ಓದುವ ಆಸಕ್ತಿ ತುಂಬಾ ಕಡಿಮೆಯಾಗಿದೆಯಾ? ಯಾಕೆ ನಿನಗೆ ಪಾಠ ಅರ್ಥವಾಗುವುದಿಲ್ಲವೇ? ಬೀದಿ ಸುತ್ತುವುದನ್ನು ಬಿಡು, ಪಾಠದ ಕಡೆ ಗಮನ ಕೊಟ್ಟು ಕೇಳಲಾಗುವುದಿಲ್ಲವೇ? ಮುಂತಾದ ಹತ್ತು ಹಲವು ಪ್ರಶ್ನೆಗಳ ಬಾಣಗಳು ಪೋಷಕರ ಬಾಯಿಯಿಂದ ತಮ್ಮ ಮಕ್ಕಳ ಕಡೆಗೆ ಸಿಡಿಯುತ್ತಿದ್ದವು.

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು. ತಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರದು ಎಂಬ ಅಭಿಲಾಷೆ. ವಿದ್ಯಾವಂತರಾಗಿ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಲಿ ಎಂಬ ಪ್ರೀತಿಯು ಎದ್ದು ಕಾಣುತ್ತಿತ್ತು. ಜೊತೆಗೆ ಆತಂಕವು, ಸರಿಯಾಗಿ ಓದುತ್ತಿಲ್ಲವೆಂಬ ಕೋಪವೂ ಕಾಣುತ್ತಿತ್ತು.

ಆದರೆ ಇಂದಿನ ಮಕ್ಕಳು ಬಹಳ ಸೂಕ್ಷ್ಮ ಮನಸ್ಥಿತಿಯವರಾಗಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೂ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ. ಸರಿ ತಪ್ಪು ಒಳಿತು ಕೆಡಕುಗಳ ಪರಾಮರ್ಶೆ ಕಡಿಮೆಯಾಗಿದೆ. ಹಾಗಾಗಿ ಅಂತಹ ಮಕ್ಕಳನ್ನು ತಿದ್ದುವಲ್ಲಿ ಪೋಷಕರಾಗಲಿ ಶಿಕ್ಷಕರಾಗಲಿ ತುಂಬಾ ಜಾಗ್ರತೆ ವಹಿಸುವುದು ಅತಿ ಅಗತ್ಯವಾಗಿದೆ. ಮಕ್ಕಳ ಮನಸ್ಸನ್ನು ಅರಿತು ಅವರದೇ ಮನಸ್ಥಿತಿಗೆ ಹೊಂದಿಕೊಂಡು ಮಕ್ಕಳಿಗೆ ಎಲ್ಲೂ ಬೇಸರವಾಗದಂತೆ ವಸ್ತು ಸ್ಥಿತಿಯನ್ನು ಅರ್ಥ ಮಾಡಿಸಿ ಓದಲು ಪ್ರೇರೇಪಿಸುವುದು ಬಹಳ ಮುಖ್ಯವಾಗಿದೆ.

ಪೋಷಕರು ತಮ್ಮ ಮಕ್ಕಳ ಅಂಕಗಳನ್ನು ನೋಡಿ ಸುಮ್ಮನಾಗದೆ ಅಕ್ಕಪಕ್ಕದ ಇತರ ಮಕ್ಕಳ ಅಂಕಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರಿವರ ಅಂಕಗಳನ್ನು ಹೋಲಿಸಿ ತಮ್ಮ ಮಕ್ಕಳನ್ನು ಬೈಯ್ಯುತ್ತಿದ್ದರು. ಇದಂತು ಇತ್ತೀಚಿನ ದಿನಗಳಲ್ಲಿ ಪಾರ್ಥೇನಿಯಂ ಥರ ಬೆಳೆಯುತ್ತಿದೆ. ತಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಕಾರಣಗಳನ್ನು ತಿಳಿದು ಪರಿಹರಿಸುವುದು ಯಾರಿಗೂ ಬೇಕಾಗಿಲ್ಲ. ಅದೇನೇ ಆಗಲಿ ಅವರ ಮಕ್ಕಳು ಮಾತ್ರ ಫಸ್ಟ್ ಬರಬೇಕು ಎಂಬ ಮನೋ ಧೋರಣೆ ಅದು. ಜೊತೆಗೆ ಎಲ್ಲಾ ಮಕ್ಕಳು ಒಂದೇ ಸಮನಾಗಿ ಓದಲು ಸಾಧ್ಯವಿಲ್ಲ. ಅವರ ಬುದ್ಧಿಮತ್ತೆಗನುಗುಣವಾಗಿ ಅವು ಓದುತ್ತಾರೆ ಎಂಬ ಅರಿವು ಕೂಡ ಪೋಷಕರಿಗೆ ಇರುವುದು ಅತಿ ಅಗತ್ಯ.

ನಾನು ಒಬ್ಬೊಬ್ಬರೇ ಪೋಷಕರನ್ನು ಕರೆದು ಅವರ ಮಕ್ಕಳ ಪ್ರಗತಿ ಕುರಿತು ಸಮಾಲೋಚನೆ ನಡೆಸುತ್ತಿದ್ದೆನು. ನಂತರ ಬಂದ ವಿದ್ಯಾರ್ಥಿ ಆ ತರಗತಿಯ ಪ್ರಥಮ ಸ್ಥಾನದಲ್ಲಿದ್ದ ವಿದ್ಯಾರ್ಥಿ. ಅವನೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಯಾವುದೇ ವಿಷಯದಲ್ಲಾದರೂ ಓದುವುದು ಅವನಿಗೆ ನೀರು ಕುಡಿದಷ್ಟು ಸರಳ ಸಲೀಸು. ಬುದ್ಧಿವಂತಿಕೆಗೆ ಕಾರಣ ಓದಿನ ಬಗ್ಗೆ ಅವನಿಗೆ ಇದ್ದ ಶ್ರದ್ಧೆ ಆಸಕ್ತಿ ಎನ್ನಬಹುದು.

ಅವನ ಪೋಷಕರು ಎದ್ದು ಬಂದು ಮಗನ ಗಣಿತ ಪೇಪರ್ ನನ್ನ ಕೈಗಿತ್ತು ಇವನು ಏನು ತಪ್ಪು ಮಾಡಿದ್ದಾನೆ? ಒಮ್ಮೆ ನೋಡಿ ಹೇಳಿ ಮೇಡಂ ಎಂದರು. ನಾನು ಅವರ ಪತ್ರಿಕೆಯನ್ನು ಪೂರ್ಣ ಚೆಕ್ ಮಾಡಿದೆ ಎಲ್ಲಿಯೂ ತಪ್ಪು ಕಾಣಲಿಲ್ಲ. ಎಲ್ಲವೂ ಸರಿ ಇದೆ ಆದರೂ ನಾನು ಅವನಿಗೆ ಒಂದು ಅಂಕ ಹಿಡಿದಿದ್ದೇನೆ. ಎಲ್ಲವೂ ಸರಿಯಾಗಿದೆ. ನಾನೇ ಮೌಲ್ಯಮಾಪನದಲ್ಲಿ ಎಡವಿರುವೆ ಎಂದು ಆ ಕ್ಷಣಕ್ಕೆ ಅನಿಸಿಬಿಟ್ಟಿತು.

ಆಗ ಒಂದೆರಡು ನಿಮಿಷ ನಾನು ಮೌನಕ್ಕೆ ಜಾರಿದೆ ಅವನ ಪೇಪರ್ ವ್ಯಾಲ್ಯುವೇಷನ್ ಮಾಡಿದ ಸಂದರ್ಭವನ್ನ ಒಮ್ಮೆ ಸ್ಮೃತಿ ಪಟಲದ ಮೇಲೆ ಆವಾಹಿಸಿಕೊಂಡೆ. ನನಗಾಗ ಸ್ಪಷ್ಟ ಚಿತ್ರಣ ದೊರೆಯಿತು. ಏನೋ ಹೊಳೆದಂತಾಗಿ ಅವನ ಉತ್ತರ ಪತ್ರಿಕೆಯನ್ನು ಆ ವಿದ್ಯಾರ್ಥಿ ಮತ್ತು ಪೋಷಕರಿಗೆ ತೋರಿಸುತ್ತಾ, ನೋಡಿ ನಿಮ್ಮ ಮಗ ತುಂಬಾ ಬುದ್ಧಿವಂತ, ವಯಸ್ಸು ಮೀರಿದ ಪ್ರತಿಭೆ ಇದು ತುಂಬಾ ಖುಷಿಯ ವಿಷಯ. ಆದರೆ ಪರೀಕ್ಷೆಯಲ್ಲಿ ಅವನು ಲೆಕ್ಕ ಮಾಡುವಾಗ ಒಂದು ಹಂತವನ್ನು ದಾಟಿ ಮುಂದೆ ಹೋಗಿದ್ದಾನೆ. ಹಾಗಾಗಿ ನಾನು ಒಂದು ಅಂಕ ಹಿಡಿದಿರುವೆ. ನಿಮ್ಮ ಮಗನಿಗೆ ಅದು ಬರುವುದಿಲ್ಲ ಎಂದಲ್ಲ ತರಗತಿಯಲ್ಲಿ ಕಪ್ಪುಹಲಗೆಯ ಮೇಲೆ ಮಾಡುವಾಗ ತುಂಬಾ ಚೆನ್ನಾಗಿ ಮಾಡುತ್ತಾನೆ. ಆದರೆ ಪರೀಕ್ಷೆಯ ಗಾಬರಿಯಲ್ಲಿ ಮಿಸ್ ಮಾಡಿದ್ದಾನೆ ಎಂದೆ. ಆಗ ಆ ಹುಡುಗ “ಇಲ್ಲ ಮಿಸ್ ನಾನು ಯಾವುದನ್ನು ಮಿಸ್ ಮಾಡಿಲ್ಲ. ನೋಡಿ ಎಲ್ಲ ಸ್ಟೆಪ್‌ಅನ್ನೂ ಮಾಡಿದ್ದೇನೆ” ಎಂದು ಗಣಿತ ನೋಟ್ಸ್ ತಂದು ಮುಂದಿಟ್ಟ.

ಅದು ಹೀಗಾಗಿತ್ತು; ಆ ಮಗು ಲೆಕ್ಕಗಳನ್ನು ಮಾಡುವಾಗ ಒಂದು ಸ್ಟೆಪ್ ಬಿಟ್ಟು ಹೋಗಿದೆ. ಆಗ ಒಂದು ಲೈನ್ ಬಿಟ್ಟು ಕೆಳಗಿನ ಲೈನ್‌ನ ಉತ್ತರ ಇಟ್ಟಿದ್ದಾನೆ. ಉತ್ತರ ಪತ್ರಿಕೆ ಅವರ ಕೈಗೆ ಸಿಕ್ಕಾಗ ಅವನಿಗೆ ತಕ್ಷಣ ಅದು ಅರಿವಾಗಿದೆ. ನಾನು ಸರ್ಕಲ್ ಸುತ್ತಿರುವ ಜಾಗದಲ್ಲಿ ಬಿಟ್ಟಿದ್ದ ಒಂದು ಸಾಲನ್ನು ತುಂಬಿಸಿಕೊಂಡುಬಿಟ್ಟಿದ್ದಾನೆ.

ಮನೆಯಲ್ಲಿ ಹೋಗಿ ಅವರ ಅಮ್ಮನಿಗೆ “ನೋಡಮ್ಮ, ನಾನು ತಪ್ಪು ಬರೆದಿಲ್ಲ, ಆದರೂ ಅಂಕ ಹಿಡಿದಿದ್ದಾರೆ” ಎಂದಿದ್ದಾನೆ. ಒಂದೇ ಗಾತ್ರದಲ್ಲಿ ಇದೆ. ಒಂದೇ ಪೆನ್ನಿನಿಂದ ಬರೆದಿರುವೆ ಎಂದಿದ್ದಾನೆ.

ನೋಡಿ ಮಿಸ್ ನಾನು ಸರಿಯಾಗಿಯೇ ಬರೆದಿರುವೆ ಎಂದು ತಪ್ಪು ಬರೆದಿಲ್ಲ ನೀವೇ ನೋಡಿ ಬೇಕಿದ್ರೆ ಎಂದು ತೋರಿಸಿದ. ಹೌದು ಅದು ತಿದ್ದಿದ ಕುರುಹಾಗಲಿ ತಿಳಿಯಲಿಲ್ಲ. ಕಾರಣ ಖಾಲಿ ಜಾಗವಿದ್ದಲ್ಲಿ ಬಿಟ್ಟಿದ್ದ ಸ್ಟೆಪನ್ನು ಬರೆದಿದ್ದನು.

ನಾನು ಇವನ ಪತ್ರಿಕೆ ಮೌಲ್ಯಮಾಪನ ಮಾಡುವಾಗ ನನ್ನ ಪಕ್ಕದ ಟೇಬಲ್ ಇದ್ದ ಟೀಚರ್‌ಗೆ ತೋರಿಸಿದ್ದೆ. ಎಷ್ಟು ಜಾಣ ಹುಡುಗ; ಗೊತ್ತಿದ್ದು ಅಜಾಗರೂಕತೆಯಿಂದ ಲೆಕ್ಕದ ಒಂದು ಸಾಲನ್ನು ಬಿಟ್ಟಿದ್ದಾನೆ ನೋಡಿ ಎಂದು ಚರ್ಚಿಸಿದ್ದು ನೆನಪಾಯಿತು.

ಆಗ ನಾನು ಮಗುವಿನ ಮುಖವನ್ನೇ ನೋಡುತ್ತಾ “ನಿಜ ಹೇಳು ಕಂದ, ನಾನೇನು ನಿನಗೆ ಶಿಕ್ಷೆ ನೀಡುವುದಿಲ್ಲ. ನಾನು ಮೌಲ್ಯಮಾಪನ ಮಾಡಿದಾಗ ನಾನು ಸರ್ಕಲ್ ಸುತ್ತಿದ್ದೆ, ಮುಂದೆ ಪ್ರಶ್ನಾರ್ಥಕ ಚಿನ್ಹೆ ಹಾಕಿದ್ದೆ. ನೀನು ಅಲ್ಲಿ ಉತ್ತರವನ್ನು ತುಂಬಿಸಿಕೊಂಡು ಈಗ ಸುಳ್ಳು ಹೇಳುತ್ತಿರುವೆಯಾ? ನೀನು ತುಂಬಾ ಒಳ್ಳೆಯ ಹುಡುಗ. ನನ್ನ ಮುಖ ನೋಡಿ ಹೇಳು, ಮಿಸ್ ಮುಖ ನೋಡಿ ನೀನು ಸುಳ್ಳು ಹೇಳುವುದಿಲ್ಲ ಅನ್ನುವ ನಂಬಿಕೆ ನನಗಿದೆ” ಎಂದೆನು. ಹೌದು ಮಿಸ್ ನಾನು ಆಮೇಲೆ ಬರೆದೆ ಎಂದು ಒಪ್ಪಿಕೊಂಡ.

ನಾನಾಗ ಹೀಗೇಕೆ ಮಾಡಿದೆ? ಒಂದು ಅಂಕ ತಾನೇ ಹೋದರೆ ಹೋಯಿತು. ನಿನಗಿನ್ನೂ ಎಷ್ಟೋ ಅಂಕಗಳನ್ನು ಪಡೆಯಲು ಅವಕಾಶವಿದೆ. ಕೇವಲ ಒಂದು ಅಂಕಕ್ಕೆ ಟೀಚರ್‌ಗೆ ಮೋಸ ಮಾಡುವುದೇ? ನಿಮ್ಮ ಅಮ್ಮನಿಗೆ ಸುಳ್ಳು ಹೇಳುವುದು ಸರಿಯಾ? ಎಂದೆ. ಆಗ ಆ ಹುಡುಗ ಸಾರಿ ಮಿಸ್, ಕಮ್ಮೀ ಅಂಕ ಬಂದ್ರೆ ಮನೆಯಲ್ಲಿ ಅಮ್ಮ ಚೆನ್ನಾಗಿ ಹೊಡಿತಾರೆ. ಅದಕ್ಕೆ ಭಯದಿಂದ ಹೀಗೆ ಸುಳ್ಳು ಹೇಳಿದೆ ಎಂದನು.

ನೋಡಿ ಇದು ಸಣ್ಣ ವಿಷಯವೇ ಇರಬಹುದು. ಆದರೆ ಮಕ್ಕಳ ಮನೋ ಲೋಕವನ್ನ ಚಿತ್ರಿಸುವ ಸೂಕ್ಷ್ಮ ವಿಚಾರ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯೇ ಪೋಷಕರಿಗೆ ಹೆದರಿ ಟೀಚರ್‌ಗೆ ಯಾಮಾರಿಸಿ ಮೋಸ ಮಾಡುತ್ತಾನೆ ಎಂದರೆ ಶಿಕ್ಷೆಗೆ ಎಷ್ಟು ಭಯವಿರುತ್ತದೆ. ಇದನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಶಿಕ್ಷೆಯೇ ಎಲ್ಲದಕ್ಕೂ ಪರಿಹಾರವಲ್ಲ. ಇದನ್ನು ಮನಗಂಡಿರುವುದರಿಂದಲೇ ಶಿಕ್ಷಣ ಇಲಾಖೆ ಶಿಕ್ಷೆ ರಹಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು. ಶಿಶು ಸ್ನೇಹಿ ಶಿಕ್ಷಣವನ್ನು ಬೆಂಬಲಿಸಿ ಭಯಮುಕ್ತ ವಾತಾವರಣದಲ್ಲಿ ಮಕ್ಕಳ ಮನಸ್ಸು ಹೂವಂತೆ ಪ್ರಫುಲ್ಲವಾಗಿ ಅರಳಲು ಬಯಸುತ್ತದೆ. ಇದನ್ನೆಲ್ಲಾ ನಾನು ಪೋಷಕರಿಗೆ ಅರ್ಥ ಮಾಡಿಸಿದೆ. ಇಲ್ಲ ಮಿಸ್ ಇನ್ಮುಂದೆ ಹೀಗೆ ಮಾಡುವುದಿಲ್ಲ ಎಂದರು.

ಇಂತಹುದೆ ಮತ್ತೊಂದು ಘಟನೆಯನ್ನು ನಿಮ್ಮ ಮುಂದಿಡುತ್ತೇನೆ.

ಮತ್ತೊಮ್ಮೆ ಗಣಿತ ಪೇಪರ್ ಮೌಲ್ಯಮಾಪನ ಮಾಡುವಾಗ ನಾಗಮ್ಮ ಎಂಬ ವಿದ್ಯಾರ್ಥಿ ಕೂಡುವ ಲೆಕ್ಕ ತಪ್ಪು ಮಾಡಿದ್ದಳು. ಕಿರಿಯ ತರಗತಿಯ ಅವಳಿಗೆ ಅದೆಷ್ಟು ಬಾರಿ ಹೇಳಿಕೊಟ್ಟರೂ ಮರೆತು ಬಿಡುತ್ತಿದ್ದಳು. ಪರೀಕ್ಷೆಯಲ್ಲೂ ತಪ್ಪು ಮಾಡಿದ್ದಳು. ನಾನು ಅವಳಿಗೆ ಸಂಕಲನವನ್ನು ಮತ್ತಷ್ಟು ಅರ್ಥ ಮಾಡಿಸಲು ಹೆಚ್ಚು ಹೆಚ್ಚು ಚಟುವಟಿಕೆಗಳನ್ನ ರೂಪಿಸಿದ್ದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ತಾಳ್ಮೆಯ ಮಿತಿಯು ಮೀರಿತ್ತು ಅನ್ನಿಸುತ್ತದೆ. ಉತ್ತರ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಅದೇ ಲೆಕ್ಕವನ್ನು ಕಪ್ಪುಹಲಗೆ ಮೇಲೆ ಹಾಕಿ ಕಲ್ಲು ತಗೊಂಡ್ ಬಾ ಎಂದೆ. ಸರಿ ಟೀಚರ್ ಎಂದವಳೇ ಶಾಲೆಯ ಹೊರಗೆ ಓಡಿದಳು. ನಾನು ಇದ್ಯಾಕೆ ತರಗತಿ ಒಳಗೆ ಕಲ್ಲುಗಳಿರುವಾಗ ಹೊರಗೆ ಏಕೆ ಹೋದಳೆಂದು ಬಾಗಿಲಿನಿಂದ ಆಚೆ ನೋಡುತ್ತಿದ್ದೆ. ಶಾಲಾ ಕಾಂಪೌಂಡಿನೊಳಗಿದ್ದ ಒಂದು ಸೈಜ್ ಕಲ್ಲನ್ನ ಎತ್ತಿಕೊಂಡು ಬಂದೇ ಬಿಟ್ಟಳು. ನನಗಾಗಲೇ ತಲೆ ಕೆಟ್ಟು ಹೋಗಿತ್ತು. ಅವಳು “ಇದನ್ನು ಎಲ್ಲಿ ಇಡಲಿ ಮಿಸ್” ಅಂದಾಗ ಮೈಯೆಲ್ಲಾ ಕೆಂಡದ ಉಂಡೆಯಂತೆ ಭಾಸವಾಯಿತು. ಅದನ್ನು ಕೆಳಗೆ ಎಲ್ಲೂ ಇಡಬೇಡ ನಿನ್ನಂತ ದಡ್ಡಿಗೆ ಟೀಚರ್ ಆದ ಕಾರಣಕ್ಕೆ ತಂದು ನನ್ನ ತಲೆ ಮೇಲೆ ಕುಕ್ಕು ಎಂದು ಕಿರುಚಿದೆ. ಅವಳಿಗೆ ನನ್ನ ಕೋಪದ ಕಾರಣವಾಗಲಿ ನನ್ನ ಅಸಮಾಧಾನದ ಮಾತಾಗಲಿ ಅರ್ಥವೇ ಆಗಲಿಲ್ಲ. ತಕ್ಷಣ ನನ್ನ ತಲೆ ಮೇಲೆ ಕುಕ್ಕಲು ಬಂದೆ ಬಿಟ್ಟಳು. ಇನ್ನೇನು ನನ್ನ ತಲೆ ಮೇಲೆ ಕಲ್ಲು ಇಡಬೇಕು, ಅದನ್ನು ನೋಡಿದ ಬೇರೆ ಹುಡುಗರು ಓಡಿ ಬಂದು ಕಲ್ಲನ್ನು ಕಿತ್ತುಕೊಂಡು ಅಯ್ಯೋ ನಿನಗೇನು ಬುದ್ಧಿ ಇಲ್ಲವಾ? ಮಿಸ್ ತಲೆ ಮೇಲೆ ಕುಕ್ಕಿದರೆ ರಕ್ತ ಬರುತ್ತೆ . ಇಲ್ಲೆಲ್ಲ ರಕ್ತ ಚೆಲ್ಲುತ್ತೆ ಎಂದರು. ನನಗೆ ಅಯ್ಯೋ ನನ್ನ ಮಕ್ಕಳಿಗೆ ನನ್ನ ಮೇಲೆ ಇಷ್ಟೊಂದು ಪ್ರೀತಿ ಎಂದು ಸಮಾಧಾನವಾಯಿತು. ಮಾತು ಮುಂದುವರೆಸಿದ ಮಕ್ಕಳು ಮಿಸ್ ಇಲ್ಲೆಲ್ಲ ರಕ್ತ ಸೋರುದ್ರೆ ಶಾಲೆಯೆಲ್ಲಾ ರಕ್ತ ಆಗುತ್ತೆ ಮಿಸ್, ನಾಳೆ ಬಂದು ನಾವೇ ಕ್ಲೀನ್ ಮಾಡಬೇಕು ಎಂದಾಗ ಅಳಬೇಕೋ ನಗಬೇಕೋ ಒಂದೂ ತಿಳಿಯದಂತಾಯ್ತು.

ನಾನಂದುಕೊಂಡಿದ್ದೆ, ಈ ಮಕ್ಕಳು ನನ್ನ ಮೇಲಿನ ಕಾಳಜಿಯಿಂದ ಹೇಳುತ್ತಿದ್ದಾರೆ ಎಂದು. ಆದರೆ ಅವರ ಉದ್ದೇಶ ಶಾಲಾ ಕೊಠಡಿ ಗಲೀಜ್ ಆಗುತ್ತೆ ಅನ್ನೋದಾಗಿತ್ತು. ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ನಾವು ಹಿಂದೆ ಬೀಳುತ್ತಿದ್ದೇವಾ? ಒಂದು ನೋವಿಗೆ ಸ್ಪಂದಿಸುವ ಗುಣವಾಗಲಿ ಇವತ್ತಿನ ಮಕ್ಕಳಲ್ಲಿ ಕಾಣೆಯಾಗುತ್ತಿರುವ ಬಗ್ಗೆ ನಿಜಕ್ಕೂ ಆತಂಕ ಪಡುವಂತಾಯಿತು. ಇಂದಿನ ಮಕ್ಕಳು ಪ್ರತಿಯೊಂದು ವಿಷಯವನ್ನು ಯಾಂತ್ರಿಕವಾಗಿ ನೋಡುತ್ತಾರೆ ಎನಿಸಿತು. ಇದರಲ್ಲಿ ಮಕ್ಕಳ ತಪ್ಪಾದರೂ ಏನಿದೆ? ನಾವೆಲ್ಲ ಇಂದು ತಾಂತ್ರಿಕ ಬದುಕಿನ ಖೈದಿಗಳಾಗಿದ್ದೇವೆ. ಪ್ರೀತಿ ಕಾಳಜಿ ಮಕ್ಕಳಿಂದ ದೂರ ಸರಿಯುತ್ತಿದೆ. ಮಾನವೀಯತೆಗಿಂತ ಅಂಕಗಳೆ ಪ್ರಮುಖವಾಗಿ ಪುಸ್ತಕದ ಹುಳು ಮಾಡುತ್ತಿದ್ದೇವೆ. ಆಲೋಚನಾ ಕ್ರಮ ಕುಂದುತ್ತಿದೆ. ಸೀಮಿತವಾದ ದೃಷ್ಟಿಕೋನ ಅವರನ್ನು ಆವರಿಸಿಬಿಡುತ್ತಿದೆ. ಮಾನವೀಯ ಶಿಕ್ಷಣ ಇಂದಿನ ಅತಿ ತುರ್ತಾಗಿದೆ. ಆ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಹೆಚ್ಚು ಹೆಚ್ಚು ಒಳಗೊಳ್ಳುತ್ತಿದೆ.

ಈ ಘಟನೆಯಿಂದ ನನಗೆ ಎರಡು ಅಂಶಗಳು ಸ್ಪಷ್ಟವಾದವು. ಒಂದು ಶಿಕ್ಷಕರು ಎಂತಹುದೇ ಸಂದರ್ಭದಲ್ಲಿಯೂ ಸಂಯಮ ಕಳೆದುಕೊಳ್ಳಬಾರದು. ಕೋಪದಲ್ಲಿ ಅರ್ಥಹೀನ ಮಾತುಗಳನ್ನ ಆಡಬಾರದು. ಮಕ್ಕಳಿಗೆ ಮಾನವಿಯತೆಯ ಮೌಲ್ಯಗಳನ್ನ ಕಲಿಸಬೇಕು ಎಂದು.

ಆಗ ನಾನು “ಯಾಕಮ್ಮ, ನೀನು ಹೋಗಿ ಸೈಜ್ ಕಲ್ಲ್ ತಂದೆ” ಎಂದೆ. “ನೀವೇ ಕಲ್ಲ್ ತಾ ಎಂದು ಹೇಳಿದ್ರಲ್ಲ ಮಿಸ್” ಎಂದಳು. ನಾನು ಹೇಳಿದ್ದು ಲೆಕ್ಕ ಮಾಡಲು ಬಾಕ್ಸ್‌ನಲ್ಲಿ ಇಟ್ಟಿರುವ ಸಣ್ಣ ಸಣ್ಣ ಕಲ್ಲುಗಳನ್ನು ತರಲು ಎಂದಾಗ ಅವಳಿಗೆ ನಗು ತಡೆಯಲಾಗಲಿಲ್ಲ. ಬಹುಶಃ ಟೀಚರ್ ತಲೆ ಮೇಲೆ ಕುಕ್ಕಿದ್ದರೆ ಆಗುತ್ತಿದ್ದ ದೃಶ್ಯ ಅವಳ ಕಣ್ಣು ಮುಂದೆ ಸುಳಿದು ಹೋಗಿರಬೇಕು.

ಅದು ನಾಲ್ಕನೇ ತರಗತಿಯ ಕನ್ನಡ ಪೇಪರ್ ಮೌಲ್ಯಮಾಪನ ಮಾಡುವ ವಿಚಾರ. ಸುಷ್ಮಾ ಎಂಬ ಹುಡುಗಿ ತುಂಬಾ ಬುದ್ಧಿವಂತೆ. ನಾನು ನರಿ ಮತ್ತು ಮೇಕೆ ಕಥೆ ಪಾಠ ಮಾಡಿದ್ದೆ. ಆ ದಿನ ಅನಾರೋಗ್ಯ ನಿಮಿತ್ತ ಅವಳು ಶಾಲೆಗೆ ಬಂದಿರಲಿಲ್ಲ. ಆ ಪಾಠದ ಪ್ರಶ್ನೋತ್ತರಗಳನ್ನೆಲ್ಲ ಓದಿದ್ದಳು. ನಾನಂದು ಅಭ್ಯಾಸದ ಪ್ರಶ್ನೆಗಳ ಜೊತೆಗೆ ಪಠ್ಯಪುಸ್ತಕದ ಮಧ್ಯದಿಂದ ಪ್ರಶ್ನೆ ಹೆಕ್ಕಿ ತೆಗೆದ ಪ್ರಶ್ನೆಯೊಂದನ್ನು ನೀಡಿದ್ದೇನು. ಅದೊಂದು ಪ್ರಶ್ನೆ ಬಿಟ್ಟು ಉಳಿದೆಲ್ಲ ಉತ್ತರಗಳನ್ನು ಬರೆದಿದ್ದಾಳೆ. ನಂತರ ಏಳನೇ ತರಗತಿ ಮಕ್ಕಳು ವಾಶ್ ರೂಮ್ ಕಡೆ ಹೋಗುವುದನ್ನು ನೋಡಿದ್ದಾಳೆ. ಮಿಸ್ ವಾಶ್ ರೂಮ್ ಎಂದಳು. ನಾನು ಸರಿ ಎಂದು ಹೋಗಮ್ಮ ಎಂದೆನು. ಅವಳು ಮೂತ್ರ ವಿಸರ್ಜನೆಗೆ ಹೋಗಿದ್ದಾಳೆ ಎಂಬುದು ನನ್ನ ಭಾವನೆಯಾಗಿತ್ತು. ಆದರೆ ಅದು ಸುಳ್ಳು. ಹಿರಿಯ ತರಗತಿಯ ವಿದ್ಯಾರ್ಥಿಗಳಿಂದ ತನಗೆ ಗೊತ್ತಿಲ್ಲದ ಪ್ರಶ್ನೆಗೆ ಉತ್ತರ ಪಡೆಯಲು ಹೋಗಿದ್ದಾಳೆ. ಆದರೆ ಅವರಿಗೂ ಉತ್ತರ ಗೊತ್ತಿರಲಿಲ್ಲ. ಕಥೆ ಗೊತ್ತಾ ಅಂದಿದ್ದಾಳೆ. ಅವರು ಆ ಕಥೆ ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡು ಬಂದು ಆ ಪ್ರಶ್ನೆಗೆ ಸಂಬಂಧಿಸಿದ ಉತ್ತರವನ್ನು ಆಲೋಚಿಸಿ, ಆ ಕಥೆಯಲ್ಲಿ ಬರುವ ಪದಗಳನ್ನು ಚಿಂತಿಸಿ ಸರಿಯಾದ ಉತ್ತರವನ್ನು ಹುಡುಕಿ ಬರೆದಿದ್ದಾಳೆ. ಇಂದಿನ ಮಕ್ಕಳು ಅದೆಷ್ಟು ಜಾಣ್ಮೆ ತೋರುತ್ತಾರೆ ಎಂದು ಅಚ್ಚರಿಯಾಯಿತು. ಆದರೇ ಇಲ್ಲಿ ಆತಂಕವು ಇದೆ. ಇಂತಹ ಬುದ್ಧಿವಂತಿಕೆಯನ್ನು ಮಕ್ಕಳು ಸಕಾರಾತ್ಮಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಅದರ ಹೊರತಾಗಿ ಬುದ್ಧಿವಂತಿಕೆ ನಕಾರಾತ್ಮಕವಾದ ಬಳಕೆಯಾದರೆ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಅನಾಹುತಗಳು ಸಂಭವಿಸುತ್ತವೆ.

ಇವಿಷ್ಟೇ ಅಲ್ಲಾ ಇಂತಹ ಹತ್ತು ಹಲವು ಅನುಭವಗಳು ಪ್ರತಿ ಮೌಲ್ಯಮಾಪನದಲ್ಲೂ ಶಿಕ್ಷಕರಿಗೆ ಎದುರಾಗುತ್ತಿರುತ್ತವೆ.