ಹೆಣ್ಣು ಮಕ್ಕಳ ಸಂಭ್ರಮಕ್ಕೆ ಯಾವ ಕೊರತೆಯೂ ಇರಲಿಲ್ಲ. ಊರ ಹೊರಗಿನ ಹುಣಸೆ ಮರ, ಕೆಂಕೆಸ್ರು ಮರ ‘ಆಲದ ಮರಕ್ಕೆ, ಹಗ್ಗ ಕಟ್ಟಿ ಜೋಕಾಲಿ ಆಡುವುದನ್ನು ನೋಡುತ್ತಿದ್ದೆವು. ಬಿದ್ದಾರು ಎಂಬ ಕಾರಣಕ್ಕೆ ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಬುಗುರಿ ಚಿನ್ನಿದಾಂಡು ಇಂತಹವುಗಳಲ್ಲಿ ನಾವು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತಿದ್ದೆವು. ಮಾರನೆಯ ದಿನ ಕರಿಯ ಸಂಭ್ರಮದಲ್ಲಿ ಮಿಂದೆದ್ದ ನಾವು ಚಂದ್ರನನ್ನು ನೋಡಿ ಹಿರಿಯರ ಆಶೀರ್ವಾದ ಪಡೆದು ಚಂದ್ರ ಹೇಗೆ ಕಾಣುತ್ತಾನೆ ಅನ್ನುವುದರ ಮೇಲೆ ಭವಿಷ್ಯವನ್ನು ವಿಶ್ಲೇಷಣೆ ಮಾಡುವ ಅಜ್ಜಿಯ ಮಾತುಗಳನ್ನು ಕೇಳುವುದೆ ಒಂದು ಖುಷಿ ಸಂಗತಿ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ತೊಂದನೆಯ ಕಂತು ನಿಮ್ಮ ಓದಿಗೆ

ಯುಗಾದಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ ಪ್ರಕೃತಿಯು ಬರಿದಾದ ತನ್ನೊಡಲ ತುಂಬ ಹಸಿರು ಹೊದ್ದು ಬೇಸಿಗೆಯ ಉರಿಬಿಸಿಲಿಗೆ ದಣಿದ ಜೀವಕ್ಕೆ ತಂಗಾಳಿಯ ಸೂಸಿ ಮನವ ತಣಿಸುವ ಈ ಸಂಭ್ರಮಕ್ಕೆ ನಾವೆಲ್ಲರೂ ಅಣಿಗೊಳ್ಳುತ್ತಿದ್ದ ದಿನಗಳನ್ನು ನೆನೆದರೆ ಮನಸ್ಸು ಹಿಡಿ ಹಿಡಿಯಾಗಿ ಖುಷಿಗೊಳ್ಳುತಿದ್ದ ಸಂಭ್ರಮಕ್ಕೆ ಏನು ಹೇಳುವುದು. ಆದರೆ ಅದರ ಹಿಂದಿನ ಪಾಡು ಹೇಳತೀರದು.

ಹೇಳಿ ಕೇಳಿ ಈ ಹಬ್ಬ ಬರುವುದು ಸಾಮಾನ್ಯವಾಗಿ ಬಿರುಬೇಸಿಗೆಯ ದಿನಗಳಲ್ಲಿ. ಭಾರತ ಹಳ್ಳಿಗಳ ದೇಶ ತರಗತಿಗಳಲ್ಲಿ ಸಮಾಜದ ಪಾಠ ಶುರುವಾಗುತ್ತಿದ್ದದ್ದೆ ಈ ವಾಕ್ಯದಿಂದಲೇ ಇರಬೇಕು. ನಾವೆಲ್ಲ ಅದನ್ನು ಮುಗ್ಧತೆಯಿಂದ ಕೇಳುತ್ತಿದ್ದೆವು. ಕೂಲಿ ಮಾಡಿ ಬದುಕು ಸಾಗಿಸುವ ಕುಟುಂಬಗಳೆ ಅಧಿಕವಾಗಿದ್ದವು. ಆದರೂ ಹಬ್ಬ ಬಂತೆಂದರೆ ಸಾಕು. ಅಪ್ಪನ ಎದೆಯಲ್ಲಿ ನಡುಕ ಬಟ್ಟೆತರಬೇಕು ಹಬ್ಬಕ್ಕೆಂದೆ ವಿಶೇಷವಾದ ಊಟೋಪಚಾರಕ್ಕೆ ಅಗತ್ಯವಾದ ಅಂಗಡಿ ಸಾಮಾನು ತರಬೇಕು ಎಂಬುದು ಆತನ ಚಿಂತೆಯಾಗುತ್ತಿತ್ತು. ಪ್ರತಿದಿನವೂ ಅವುಗಳ ಬಗ್ಗೆಯೆ ಯೋಚಿಸಿ ಲೆಕ್ಕ ಬರೆದು ಬಸವಳಿಯುತ್ತಿದ್ದ. ಇದ್ಯಾವುದರ ಪರಿವೆಯೆ ಇಲ್ಲದೆ ನಮ್ಮ ಆಟದಲ್ಲಿ ನಾವು ತೊಡಗುತ್ತಿದ್ದೆವು. ಹಬ್ಬಕ್ಕೆ ಒಂದು ವಾರ ಇರುವಂತೆಯೆ ಸ್ನೇಹಿತರೆಲ್ಲಾ ಒಂದೆಡೆ ಸೇರಿ ನಾವು ಈ ಬಾರಿ ಹಬ್ಬಕ್ಕೆ ಇಷ್ಟು ಮುಖಬೆಲೆಯ ಬಟ್ಟೆಗಳನ್ನು ತರಿಸಿಕೊಳ್ಳುತ್ತೇವೆ ಆ ಅಂಗಡಿಯಲ್ಲಿ ಬಟ್ಟೆ ಚೆನ್ನಾಗಿರುತ್ತೆ ನಾವು ರೆಡಿಮೇಡ್ ಬಟ್ಟೆಗಳನ್ನು ತರಿಸಿಕೊಳ್ಳುತ್ತೇವೆ ಹೀಗೆ ಮಾತಾಡಿ ಕೊಳ್ಳುತಿದ್ದೆವು. ಬಟ್ಟೆಗಳ ಬಗ್ಗೆಯೆ ಅಷ್ಟೊಂದು ಚರ್ಚೆ ಮಾಡುತಿದ್ದನ್ನು ನೆನಸಿ ಕೊಂಡರೆ ಯಾಕೆ ಅದು ಚರ್ಚೆಯ ವಿಷಯವಾಗಿತ್ತು ಅನಿಸುತ್ತದೆ. ವರ್ಷಕ್ಕೆರಡು ಬಾರಿ ಮಾತ್ರ ಹೊಸ ಬಟ್ಟೆಗಳು ನಮ್ಮ ಮೈ ಅಲಂಕರಿಸುತ್ತಿದ್ದವು. ಅದೇ ಕಾರಣಕ್ಕೆ ಚರ್ಚೆಯ ವಿಷಯವಾಗಿರಬಹುದ ಗೊತ್ತಿಲ್ಲ ಆ ಕಾಲಕ್ಕೆ ಯೋಚಿಸುವಂತ ವಯಸ್ಸು ಮನಸ್ಸು ಎರಡು ನಮ್ಮದಲ್ಲ ಎಂದೆ ನನ್ನ ಭಾವನೆ.

ಅಪ್ಪ ಹೇಗೊ ದುಡ್ಡು ಹೊಂದಿಸುತ್ತಿದ್ದ ಆಗಾಗ ಚಿಂತಿತನಾಗುತ್ತಿದ್ದ ಈ ಹಬ್ಬಗಳು ಯಾಕೆ ಬರ್ತವೋ ನನ್ನ ಜೀವ ತಿನ್ನಕ್ಕೆ ಎಂದು ಆಗಾಗ ಗೊಣಗುತ್ತಿದ್ದ. ಅದು ಆತನ ಕಷ್ಟ ಜೀವನದ ಅಸಹಾಯಕತೆ ಇರಬಹುದು. ಇದು ನಮಗೆಲ್ಲ ಹೇಗೆ ಗೊತ್ತಾಗಬೇಕು. ಹಬ್ಬದ ಸಂಭ್ರಮವಷ್ಟೆ ನಮ್ಮದು. ಹಬ್ಬದ ಸಂಭ್ರಮವೆಂದರೆ ಈಗಿನಂತಲ್ಲ ಹಬ್ಬದ ಹಿಂದಿನ ದಿನ ಸಂತೆಗೆ ಹೋಗಲೆಬೇಕು ಎಲ್ಲಕ್ಕಿಂತ ಮುಖ್ಯವಾಗಿ ಸೊಂಟಕ್ಕೊಂದು ಉಡುದಾರ ತಗೊಳ್ಳಬೇಕು ಇಲ್ಲವಾದರೆ ಹಬ್ಬವೇ ಅಪೂರ್ಣ ಎಂಬ ಭಾವನೆ ನಮ್ಮಲ್ಲಿತ್ತು “ಉಡ್ದಾರ ಇಲ್ದೋನು ಮುಡ್ದಾರ” ಎಂಬ ಹೀಯಾಳಿಕೆಯ ಮಾತನ್ನು ಕೇಳಬೇಕಾಗಿತ್ತು.ಹಾಗಾಗಿ ದಾರ ಕೊಂಡುಕೊಳ್ಳುವುದು ಖಾಯಂ. ಹಬ್ಬದ ಹಿಂದಿನ ರಾತ್ರಿಯಂತು ಮಲಗುತ್ತಿರಲಿಲ್ಲ ರಾತ್ರಿಯೆಲ್ಲಾ ಆಟವಾಡುತ್ತಿದ್ದೆವು. ಬೆಳಿಗ್ಗೆ ಹೋಳಿಗೆ ಮಾಡ್ಬೇಕು ಅನ್ನೊ ಕಾರಣಕ್ಕೆ ಮನೆಮಂದಿಯೆಲ್ಲಾ ಎದ್ದು ಕೂರ್ತಿದ್ವಿ ಹಾಡುಗಳನ್ನು ಹೇಳ್ಕೊಂಡು ತಮಾಷೆ ಮಾಡ್ಕೊಂಡು ಎಲ್ಲಾ ಕೆಲಸವನ್ನು ಮುಗಿಸಿಯೆ ಮಲಗುತ್ತಿದ್ದರು.ಇಂತಹ ನೂರಾರು ನೆನಪುಗಳ ಬುತ್ತಿ ಪ್ರತಿ ಯುಗಾದಿಗೂ ಬಿಚ್ಚಿಕೊಳ್ಳುತ್ತದೆ. ಪ್ರತಿ ಮನೆಯಲ್ಲಿಯೂ ಇಂತಹುದೆ ಸಂಭ್ರಮ. ಮುಂಜಾನೆಗೆ ಎದ್ದು ಮಾವಿನ ಸೊಪ್ಪು ತರಲು ಊರ ಹೊರಗಿನ ಮಾವಿನ ತೋಪಿಗೆ ಹೋಗುತ್ತಿದ್ದೆವು ಇಡೀ ಊರಿಗೆ ಅದೊಂದೆ ತೋಟದಲ್ಲಿ ತೋರಣದ ಎಲೆಗಳು ಸಿಗುತ್ತಿದ್ದವು. ಸಮಯವಾದರೆ ಎಲ್ಲಿ ಎಲೆಗಳು ಸಿಗುವುದಿಲ್ಲವೊ ಎಂದು ಮುಂಜಾನೆ ಕತ್ತಲಿಗೆ ಹೋಗಿ ಕಾಯುತ್ತಿದ್ದೆವು. ಮಾವಿನ ಮರವು ಹೀಗಾಗಲೆ ಸಣ್ಣ ಸಣ್ಣ ಪೀಚು ಕಾಯಿಗಳನ್ನು ತನ್ನೊಡಲೊಳಗಿಟ್ಟುಕೊಂಡು ಮಾಲೀಕನಿಗೆ ವ್ಯಾಪಾರದ ಆಸೆ ಮೂಡುವಂತೆ ಮಾಡಿರುತ್ತಿತ್ತು. ಇಂತಹ ಮರಗಳಲ್ಲಿ ಎಲೆಗಳನ್ನು ಕಿತ್ತರೆ ಹಣ್ಣು ಸರಿಯಾಗಿ ಬಲಿಯುವುದಿಲ್ಲ ಎಂಬ ಕಾರಣಕ್ಕೊ ಕಾಯಿಗಳೆಲ್ಲ ಉದುರಿ ಹೋಗುತ್ತವೆ ಎನ್ನುವ ಕಾರಣಕ್ಕೊ ಕಾವಲುಗಾರ ಮುಂಚೆಯೇ ತೋಟಕ್ಕೆ ಹಾಜರಾಗುತಿದ್ದ ಅಂತಹ ಸಂದರ್ಭದಲ್ಲಿ ಮಾವಿನೆಲೆಗಾಗಿ ಮರ ಮರ ಅಲೆಯಬೇಕಾಗಿತ್ತು. ತಂದು ತೋರಣ ಕಟ್ಟಿದರೆ ಮನೆತುಂಬ ಸಂಭ್ರಮ.. ನಂತರದ್ದೆ ಎಣ್ಣೆ ಹಚ್ಚಿ ಸ್ನಾನ ಮಾಡುವ ಕಾರ್ಯಕ್ರಮ ಮೈತುಂಬ ಎಣ್ಣೆ ಹಚ್ಚಿಕೊಂಡು ಊರ ತುಂಬ ಓಡಾಡುತ್ತಿದ್ದೆವು. ಚೆನ್ನಾಗಿ ಒಣಗಿದ ಮೇಲೆ ಸೀಗೆಕಾಯಿ ಹಾಕಿಕೊಂಡು ಮಜ್ಜನದ ಕಾರ್ಯ ಮುಗಿಸುತ್ತಿದ್ದೆವು. ನಂತರ ಸ್ನೇಹಿತರೆಲ್ಲಾ ಒಂದೆಡೆ ಬಟ್ಟೆಯ ಬಗ್ಗೆ ಮನೆಯಲ್ಲಿ ಮಾಡಿದ ತಿನಿಸುಗಳ ಬಗ್ಗೆ ಚರ್ಚೆಯಾಗುತ್ತಿತ್ತು ಯುಗಾದಿಯ ಆಟದ ಬಗ್ಗೆ ನಾವು ಹುಡುಗರಾದ್ದರಿಂದ ಏನು ಗೊತ್ತಾಗುತ್ತಿರಲಿಲ್ಲ ಸುಮ್ಮನೆ ನೋಡ್ತಾಇದ್ವಿ ಅವನು ಬಾಜಿಯಲ್ಲಿ ಅಷ್ಟು ಗೆದ್ದ ಇವನು ಇಷ್ಟು ಗೆದ್ದ ಅಂದ್ಕೊಂಡು ಸುಮ್ನಾಗಿತಿದ್ವಿ ನಂತರದ ಬರಗಾಲದ ದಿನಗಳಲ್ಲಿ ಇಂತಹ ಆಟಗಳು ಕಡಿಮೆ ಆಗುತ್ತಾ ಬಂದವು. ಹಬ್ಬ ಮಾಡಿದರೆ ಸಾಕು ಅಂತಾಗಿತ್ತು.

ಹೆಣ್ಣು ಮಕ್ಕಳ ಸಂಭ್ರಮಕ್ಕೆ ಯಾವ ಕೊರತೆಯೂ ಇರಲಿಲ್ಲ. ಊರ ಹೊರಗಿನ ಹುಣಸೆ ಮರ, ಕೆಂಕೆಸ್ರು ಮರ ‘ಆಲದ ಮರಕ್ಕೆ, ಹಗ್ಗ ಕಟ್ಟಿ ಜೋಕಾಲಿ ಆಡುವುದನ್ನು ನೋಡುತ್ತಿದ್ದೆವು. ಬಿದ್ದಾರು ಎಂಬ ಕಾರಣಕ್ಕೆ ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಬುಗುರಿ ಚಿನ್ನಿದಾಂಡು ಇಂತಹವುಗಳಲ್ಲಿ ನಾವು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತಿದ್ದೆವು. ಮಾರನೆಯ ದಿನ ಕರಿಯ ಸಂಭ್ರಮದಲ್ಲಿ ಮಿಂದೆದ್ದ ನಾವು ಚಂದ್ರನನ್ನು ನೋಡಿ ಹಿರಿಯರ ಆಶೀರ್ವಾದ ಪಡೆದು ಚಂದ್ರ ಹೇಗೆ ಕಾಣುತ್ತಾನೆ ಅನ್ನುವುದರ ಮೇಲೆ ಭವಿಷ್ಯವನ್ನು ವಿಶ್ಲೇಷಣೆ ಮಾಡುವ ಅಜ್ಜಿಯ ಮಾತುಗಳನ್ನು ಕೇಳುವುದೆ ಒಂದು ಖುಷಿ ಸಂಗತಿ. ದೊಡ್ಡವರಾದಂತೆಲ್ಲ ಇಂತಹ ಸಂಭ್ರಮದ ದಿನಗಳನ್ನೆಲ್ಲಾ ಕಳೆದುಕೊಂಡೆವಲ್ಲ ಅನಿಸಿಬಿಡುತ್ತದೆ. ಇನ್ನೊಂದು ಪ್ರಸಂಗವನ್ನು ಹೇಳಲೇಬೇಕು ಅದು ಯುಗಾದಿ ಎರಡ್ಮೂರು ದಿನ ಇರುವಾಗ ನಡೆದದ್ದು ನಮ್ಮ ಮನೆಯ ಮುಂದಿನ ಅಂಗಳ ವಿಶಾಲವಾಗಿತ್ತು. ಅದಕ್ಕೆ ವರ್ಷಕ್ಕೊಮ್ಮೆಯಾದರೂ ಶೆಟ್ಮಣ್ಣನ್ನು ಅಂಗಳದಲ್ಲಿ ಹರಡಿ ಅದನ್ನು ತೆಂಗಿನಮಟ್ಟೆಗಳಿಂದ ಬಡಿದು ಮಟ್ಟಸ ಮಾಡಿ ಆನಂತರ ಅದಕ್ಕೆ ಸಗಣಿ ಬಳಿದು ರಾತ್ರಿ ಹೊತ್ತು ಬೇಸಿಗೆಯಲ್ಲಿ ಮಲಗುವುದಕ್ಕೆ ಅಥವಾ ಸಂಜೆ ಹೊತ್ತು ಕೂತು ಮಾತನಾಡುವುದಕ್ಕೆ ಅನುಕೂಲವಾಗುವಂತೆ ಅಂಗಳವನ್ನು ಸ್ವಚ್ಛಗೊಳಿಸುವುದು ಸಾಮಾನ್ಯವಾಗಿತ್ತು. ಬೇಸಿಗೆಯಲ್ಲಿ ರಾತ್ರಿಯ ಊಟ ಈ ಹಟ್ಟಿಯ ಅಂಗಳದಲ್ಲಿಯೆ ನಡೆಯುತ್ತಿತ್ತು. ಈ ರೀತಿ ಸಿದ್ದತೆಯಾದ ಅಂಗಳ ಮಳೆ ಬಂದಂತೆಲ್ಲಾ ಮೇಲಿನ ಸಮತಟ್ಟಾದ ಮಣ್ಣು ಕೊಚ್ಚಿಹೋಗಿ ಅಲ್ಲಲ್ಲಿ ಶೆಟ್ಕಲ್ಲುಗಳು ಕಾಣಿಸುತ್ತಿದ್ದವು. ಅವುಗಳನ್ನು ಆಗಾಗ ಕುಟ್ಟಿ ಸಮತಟ್ಟು ಮಾಡಿದರೂ ಕೆಲವೊಮ್ಮೆ ನಮ್ಮ ಕಣ್ತಪ್ಪಿನಿಂದ ಉಳಿದುಬಿಡುತ್ತಿದ್ದವು. ಹೀಗೆಯೆ ಉಳಿದ ಒಂದು ಕಲ್ಲಿನಿಂದ ನನ್ನ ಕೈಗೆ ಅನಾಹುತವೊಂದು ನಡೆದುಬಿಟ್ಟಿತು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮನೆಯಲ್ಲಿರುತ್ತಿದ್ದದ್ದೆ ಕಡಿಮೆ ಯಾವಾಗಲೂ ಯಾವುದಾದರೂ ಒಂದು ಆಟದಲ್ಲಿ ತೊಡಗಿರುತ್ತಿದ್ದದ್ದೆ ಹೆಚ್ಚು. ಹೀಗಿರುವಾಗ ಒಂದು ದಿನ ನಾನು ನನ್ನ ತಮ್ಮನೊಂದಿಗೆ ಗೋಲಿ ಆಟ ಆಡುವಾಗ ಗೋಲಿಯ ವಿಚಾರದಲ್ಲಿ ಇಬ್ಬರಿಗೂ ಒಂದು ಸಣ್ಣ ಜಗಳವಾಯಿತು. ಆತ ನನ್ನ ಹತ್ತಿರ ಇದ್ದ ಗೋಲಿಗಳನ್ನು ಕಿತ್ತುಕೊಳ್ಳಲು ಬಂದ ನಾನು ಅವನಿಂದ ತಪ್ಪಿಸಿಕೊಂಡು ಓಡುತ್ತಲೆ ಇದ್ದೆ ನಮ್ಮ ಮನೆಯ ತುಸುದೂರದಲ್ಲಿರುವ ಹಳ್ಳಿಜಗಲಿಕಟ್ಟೆಯಿಂದ ಜಿಗಿದು ಓಡಿ ಬರುತ್ತಲೆ ಇದ್ದೆ. ನನ್ನ ತಮ್ಮನು ಬೆನ್ನಟ್ಟಿಯೆ ಬರುತ್ತಿದ್ದ ಅತ್ಯಂತ ವೇಗದಲ್ಲಿ ಬರುತ್ತಿದ್ದ ನಾನು ಅಂಗಳದಲ್ಲಿದ್ದ ಕಲ್ಲೊಂದನ್ನು ಯಡ್ವಿ ಬಿದ್ದು ಬಿಟ್ಟೆ ಅಷ್ಟೆ ಮೇಲೆದ್ದು ನೋಡುವಷ್ಟರಲ್ಲಿ ನನ್ನ ಎಡಗೈ ತಿರುವಿದೆ. ಅದನ್ನು ನೋಡಿಯೆ ನಾನು ದಿಗ್ಭ್ರಾಂತನಾಗಿದ್ದೆ. ಅಷ್ಟರಲ್ಲಿಯೆ ಅಯ್ಯೋ ಹುಡ್ಗುಂದು ಕೈ ಹೋಗೆಬಿಡ್ತು ಅನ್ನುತ್ತಲೆ ಒಳಗಿನಿಂದ ಬಂದ ಅಮ್ಮ ಅದನ್ನು ಮುಟ್ಟಿ ಅದನ್ನು ಏನು ಮಾಡಬೇಕೆಂದು ತಿಳಿಯದೆ ಅವಿದ್ಯಾವಂತೆಯಾದರೂ ಸಮಯಪ್ರಜ್ಞೆಯಿಂದ ತಿರುವಿಕೊಂಡಿದ್ದ ಕೈಯನ್ನು ಒಮ್ಮೆ ಯಥಾಸ್ಥಿತಿಗೆ ತಂದು ಅದನ್ನು ಒಂದೆರಡು ಬಾರಿ ನೀವಿದಳು. ಅಲ್ಲಿ ನೆರೆದವರು ಆಸ್ಪತ್ರೆಗೆ ಹೋಗಿ ಬೇಗ ಇಲ್ಲಾಂದ್ರೆ ಅದು ಮರ್ಗಟ್ಟಿ ಕೈ ಹಾಗೆಯೆ ಇರುತ್ತದೆ ಅಂದ್ರು ಪಕ್ಕದ ಊರಿನ ಆಸ್ಪತ್ರೆಗೆ ಹೋಗಿ ಒಂದು ಬ್ಯಾಂಡೇಜ್ ಹಾಕಿ ಆ ಕೈಯನ್ನು ಆಡಿಸದಂತೆ ಸೂಚನೆಕೊಟ್ಟರು. ನಂತರ ತಾಲ್ಲೂಕು ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅದಕ್ಕೆ ಔಷದೋಪಚಾರ ಮಾಡಿಸಲಾಯಿತು. ಯುಗಾದಿ ಹಬ್ಬದಲ್ಲಿ ಕೈ ಪಟ್ಟು ಹಾಕಿಕೊಂಡೆ ಹಬ್ಬ ಮಾಡಿದ್ದು ನೆನಪಿನಲ್ಲಿದೆ.

ಇವೆಲ್ಲವನ್ನೂ ನೆನಪಿಸಿಕೊಂಡಾಗಲೆಲ್ಲಾ ಮತ್ತೆ ಮಗುವಾದರೆ ಎಷ್ಟು ಚಂದ ಅಲ್ಲವೆ ಅನಿಸುತ್ತದೆ. ಅದು ಹರಿಯುವ ನೀರಿದ್ದಂತೆ ಯಾವುದಕ್ಕೂ ಜಗ್ಗದೆ ಮುಂದೆ ಸಾಗುತ್ತಿರುತ್ತದೆ. ಆದರೆ ಅದು ಹರಿದ ಹೆಜ್ಜೆಯ ಗುರುತುಗಳು ಉಳಿದುಬಿಡುತ್ತವೆ. ಹಾಗೆಯೆ ಬಾಲ್ಯ ಕಟ್ಟಿಕೊಟ್ಟ ಬದುಕು ನಮ್ಮನ್ನು ಸದಾ ಚೈತನ್ಯದಾಯಕವಾಗುವಂತೆ ಮಾಡಿದೆ ಪ್ರತಿ ಯುಗಾದಿಗೂ ಅದರ ನೆನಪು ನನ್ನ ಮನದಲ್ಲಿ ಹಚ್ಚ ಹಸಿರು ಬಾಗಿಲಿಗೆ ಕಟ್ಟಿದ ಹಸಿರೆಲೆಯ ತೋರಣದಂತೆ ಹಸಿರಾಗಿ ಉಳಿದಿದೆ.