ಇನ್ನು ಉಳಿದಿದ್ದು ಸಣ್ಣಜ್ಜಿ. ಬಹಳ ಗಟ್ಟಿಗಿತ್ತಿ. ಬದುಕನ್ನು ಧೈರ್ಯದಿಂದ ಎದುರಿಸಿದ್ದಳು. ರಾತ್ರಿಯ ಸಮಯದಲ್ಲಿ ಅಂಗಳದಲ್ಲಿ ಮಲಗಿಕೊಂಡಿದ್ದಾಗ ಅನೇಕ ಕತೆಗಳನ್ನು ಹೇಳುತ್ತಿದ್ದಳು. ಅವೆಲ್ಲವೂ ರಾಜರ ಕತೆಗಳಾಗಿರುತ್ತಿದ್ದವು. ನನಗೀಗಲೂ ಆ ಕತೆಗಳು ನೆನಪಿವೆ. ಸಣ್ಣಜ್ಜಿಯೊಂದಿಗೆ ಒಡನಾಟ ಕಮ್ಮಿಯಾದರೂ ಅನೇಕ ನೆನಪುಗಳಿವೆ. ಸುಮಾರು ನಾಲ್ಕು ಸಾವಿರದಷ್ಟು ಹಾಡುಗಳನ್ನು ಗುಣಸಾಗರಿ ಜನಪದ ಮಹಿಳೆ ಕುರಿತು ಹಾಡುತ್ತಿದ್ದಳು ಎನ್ನುತ್ತಿದ್ದರು. ನಮಗೆ ಬುದ್ದಿ ಬರುವ ಕಾಲಕ್ಕೆ ಅದನ್ನೆಲ್ಲ ಬಿಟ್ಟಿದ್ದಳು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಬಾಲ್ಯದ ನೆನಪುಗಳು ನೆನೆದಷ್ಟು ಸಿಹಿ… ಅದು ಮರಳ ದಂಡೆಯ ಮೇಲೆ ತೋಡಿದ ಚಿಲುಮೆಯಲ್ಲಿ ಒರೆಯುವ ತಿಳಿನೀರಿನಂತೆ. ಅದನ್ನು ಬೊಗಸೆ ತುಂಬಾ ಮೊಗೆಮೊಗೆದು ಕುಡಿದಷ್ಟು ದೇಹ ಮನಸ್ಸಿಗೆ ಸಂತಸ. ಅದು ಪ್ರತಿಯೊಬ್ಬನನ್ನು ಮತ್ತೆಮತ್ತೆ ಕಾಡುತ್ತಲೆ ಇರುತ್ತದೆ. ಅದರ ಪರಿಧಿಯಲ್ಲಿ ಬಂದುಹೋದವರೆಲ್ಲ ನಮ್ಮನ್ನು ಆಗಾಗ ಎಡತಾಕುತ್ತ ನೆನಪುಗಳ ತುಣುಕೊಂದನ್ನು ಎದೆಯ ತುಂಬಾ ಚಿಮ್ಮುತ್ತ ಮರೆಯಾಗುತ್ತಾರೆ. ಆದರೆ ನೆನಪು ಮೈಮನಗಳ ತುಂಬಾ ಸುರುಳಿಸುರುಳಿಯಾಗಿ ಉರುಳುತ್ತಾ ಅಲ್ಲೊಂದು ಸಂಕಟಕ್ಕೂ ಸಂತಸಕ್ಕೂ ಕಾರಣವಾಗುತ್ತದೆ.
ಅಂತಹ ಸಂಭ್ರಮ ಮತ್ತು ಸಂಕಟಕ್ಕೆ ಕಾರಣರಾದವರಲ್ಲಿ ನನ್ನ ಇಬ್ಬರು ಅಜ್ಜಿಯಂದಿರು ಪ್ರಮುಖರು. ಒಬ್ಬರು ಹಸಿವಿನ ಜೊತೆಯಲ್ಲಿದ್ದವರು. ಇನ್ನೊಬ್ಬರು ಸುಧಾರಿತ ಬದುಕಿನ ಭಾಗವಾಗಿ ನಮ್ಮೊಂದಿಗೆ ಬಹುಕಾಲ ಇದ್ದವರು. ನಾನು ನನ್ನಜ್ಜನನ್ನು ನೋಡಿಲ್ಲ. ಅವರು ನಮ್ಮಪ್ಪ ಚಿಕ್ಕವಯಸ್ಸಿನವರಾಗಿರುವಾಗಲೆ ತೀರಿಕೊಂಡಿದ್ದರು. ಅವರ ಗುರುತಾಗಿ ಒಂದು ಫೋಟೊ ಸಹ ಇಲ್ಲದ್ದು ಬಹಳಷ್ಟು ಬೇಸರವೆ. ಆದರೆ ಅಂದು ಅವರಿಗೆ ಅದು ಸಾಧ್ಯವೂ ಇರಲಿಲ್ಲ. ಸ್ವಾತಂತ್ರ್ಯ ಪೂರ್ವ ಸ್ವಾತಂತ್ರ್ಯ ನಂತರದ ಕಾಲದಲ್ಲಿ ಕೆಲವೆ ವರ್ಷ ಬದುಕಿದ್ದರು ಎಂದು ಆಗಾಗ ಅಜ್ಜಿ ಹೇಳುತ್ತಿದ್ದಳು. ನನ್ನಜ್ಜ ಎರಡು ಮದುವೆಯಾದ್ದರಿಂದ ಭಾಗವಾದಾಗ ನಮ್ಮ ಭಾಗಕ್ಕೆ ಹಿರಿಯಜ್ಜಿ ನಮ್ಮ ಚಿಕ್ಕಪ್ಪನ ಭಾಗಕ್ಕೆ ಸಣ್ಣಜ್ಜಿ ಎಂದು ಹಂಚಿಕೊಂಡಿದ್ದರು. ಒಂದೆ ಅಂಗಳದಲ್ಲಿ ಎರಡೂ ಮನೆಗಳಿದ್ದುದರಿಂದ ಅವರಿಗಿಷ್ಟ ಬಂದ ಮಕ್ಕಳ ಜೊತೆಗೆ ಇದ್ದರು.
ನಮ್ಮ ಹಿರಿಯಜ್ಜಿ ಬದುಕಿದ್ದಷ್ಟೂ ದಿನವು ಬಡತನ ಮನೆಯಲ್ಲಿ ಹಾಸಿ ಹೊದ್ದು ಮಲಗಿತ್ತು. ಇದ್ದುದರಲ್ಲಿಯೆ ಸ್ವಾಭಿಮಾನದಿಂದ ಬದುಕು ನಡೆಯುತ್ತಿತ್ತು. ಆದರೆ ಅಜ್ಜಿ ಎಲ್ಲವನ್ನು ಸಮಾಧಾನದಿಂದಲೆ ಸ್ವೀಕರಿಸುತ್ತಿತ್ತು. ಒಮ್ಮೊಮ್ಮೆ ನಮ್ಮೊಂದಿಗೆ ಹರಟುವಾಗ ನಿಮ್ಮಜ್ಜ ಇರುವಾಗ ನಮ್ಮ ಬದುಕು ಚೆಂದವಾಗಿತ್ತು ಆದರೆ ಕ್ರಮೇಣ ಬಡತನದ ಹೆಬ್ಬಾವು ನಮ್ಮನ್ನು ಈ ಸ್ಥಿತಿಗೆ ತಂದಿದೆ. ನಿಮ್ಮಜ್ಜನ ಸಾವಿನ ನಂತರ ಅದು ಇನ್ನೂ ಹೆಚ್ಚಾಯಿತು ಎಂದು ಚುಟುಕಾಗಿ ಹೇಳಿ ಸುಮ್ಮನಾಗುತ್ತಿದ್ದಳು. ನಾನು ನನ್ನ ಶಾಲೆಗೆ ಹೋಗುವಾಗ ಬೆಳಗಿನ ಊಟ ಮಾಡುತ್ತಿದ್ದದ್ದೇ ಕಡಿಮೆ. ಏಕೆಂದರೆ ಮನೆಯಲ್ಲಿ ಅಡಿಗೆ ಆಗುತ್ತಿರಲಿಲ್ಲ. ನಾನು ಅಕ್ಕ ಶಾಲೆಗೆ ಉಪವಾಸವೇ ಹೋಗುತ್ತಿದ್ದೆವು. ನನ್ನಜ್ಜಿ ಮನೆಯಲ್ಲಿ ಅಡಿಗೆಯಾದಾಗ ಶಾಲೆಯ ಹತ್ತಿರ ಬಂದು ಮೇಷ್ಟ್ರೇ ನಮ್ ಹುಡುಗ್ರು ಊಟ ಮಾಡಿಲ್ಲ ಊಟ ಮಾಡಿ ಬರ್ತಾರೆ ಕಳಿಸಿ ಎಂದು ಕೇಳಿ ನಮ್ಮನ್ನು ಕರೆದುಕೊಂಡು ಬಂದು ಊಟ ಬಡಿಸುತ್ತಿದ್ದಳು. ಅವಾಗಲೆಲ್ಲ ಆಕೆಯ ಮುಖ ಅರಳುತ್ತಿತ್ತು. ಮೊಮ್ಮಕ್ಕಳು ಊಟ ಮಾಡಿದರೆಂಬ ಸಂತೃಪ್ತ ಭಾವ ಇರಬೇಕು. ಇದು ನಿತ್ಯವೂ ನಡೆಯುತ್ತಿತ್ತು. ಅಜ್ಜಿ ನೀನು ಬರ್ಬೇಡ ನೀನು ಬಂದು ಕರೆದರೆ ಶಾಲೆಯಲ್ಲಿ ಎಲ್ರೂ ನಮ್ಮನ್ನೆ ನೋಡುತ್ತಾರೆ ಎಂದು ಎಷ್ಟೋ ಬಾರಿ ಹೇಳಿದ್ದೆವು. ಆದರೆ ಮನೆಯಲ್ಲಿ ಎಂದೂದ ಸರಿಯಾದ ಸಮಯಕ್ಕೆ ಅಡಿಗೆ ಆಗಲಿಲ್ಲ… ಅಜ್ಜಿ ಕರೆಯುವುದು ಬಿಡಲಿಲ್ಲ… ಶಾಲೆಯಲ್ಲಿ ಎಲ್ಲರೂ ನಮ್ಮನ್ನು ನೋಡುವುದನ್ನು ಬಿಡಲಿಲ್ಲ… ಮೇಷ್ಟ್ರೆಲ್ಲ ಅಷ್ಟೊಂದು ದೂರ ಬರುವಾಗಲೇ ಕೂಗಿಕೊಂಡು ಬರುತ್ತಿದ್ದ ಅಜ್ಜಿಯ ಧ್ವನಿಯ ಕೇಳಿ ಹೋಗ್ರಪ್ಪ ನಿಮ್ಮಜ್ಜಿ ಬಂದಳು ಎನ್ನುತ್ತಿದ್ದರು. ಕೊನೆಗೊಂದು ದಿನ ಅಜ್ಜಿ ನಮ್ಮನ್ನೆಲ್ಲ ಬಿಟ್ಟು ಕೊನೆಯುಸಿರೆಳೆದಳು. ಅಂದು ಅಪ್ಪನ ಕಣ್ಣಲ್ಲಿ ಕಂಡು ಕಾಣದಂತೆ ಕಣ್ಣಲ್ಲಿ ನೀರು ಜಿನುಗಿತ್ತು.
ಇನ್ನು ಉಳಿದಿದ್ದು ಸಣ್ಣಜ್ಜಿ. ಬಹಳ ಗಟ್ಟಿಗಿತ್ತಿ. ಬದುಕನ್ನು ಧೈರ್ಯದಿಂದ ಎದುರಿಸಿದ್ದಳು. ರಾತ್ರಿಯ ಸಮಯದಲ್ಲಿ ಅಂಗಳದಲ್ಲಿ ಮಲಗಿಕೊಂಡಿದ್ದಾಗ ಅನೇಕ ಕತೆಗಳನ್ನು ಹೇಳುತ್ತಿದ್ದಳು. ಅವೆಲ್ಲವೂ ರಾಜರ ಕತೆಗಳಾಗಿರುತ್ತಿದ್ದವು. ನನಗೀಗಲೂ ಆ ಕತೆಗಳು ನೆನಪಿವೆ. ಸಣ್ಣಜ್ಜಿಯೊಂದಿಗೆ ಒಡನಾಟ ಕಮ್ಮಿಯಾದರೂ ಅನೇಕ ನೆನಪುಗಳಿವೆ. ಸುಮಾರು ನಾಲ್ಕು ಸಾವಿರದಷ್ಟು ಹಾಡುಗಳನ್ನು ಗುಣಸಾಗರಿ ಜನಪದ ಮಹಿಳೆ ಕುರಿತು ಹಾಡುತ್ತಿದ್ದಳು ಎನ್ನುತ್ತಿದ್ದರು. ನಮಗೆ ಬುದ್ದಿ ಬರುವ ಕಾಲಕ್ಕೆ ಅದನ್ನೆಲ್ಲ ಬಿಟ್ಟಿದ್ದಳು. ಸುಮಾರು ತೊಂಭತ್ತೈದಕ್ಕೂ ಹೆಚ್ಚು ವರ್ಷ ಬದುಕಿದ ಆಕೆ ಕೊನೆಯ ನಾಲ್ಕೈದು ವರ್ಷಗಳು ಮನೆಯಲ್ಲಿ ಕುಳಿತಿದ್ದನ್ನು ಬಿಟ್ಟರೆ ಉಳಿದ ದಿನಗಳಲ್ಲಿ ಒಬ್ಬಳೆ ಹೊಲಕ್ಕೆ ಹೋಗುತ್ತಿದ್ದಳು. ನಮ್ಮದು ಸರ್ಕಾರವೆ ಮಂಜೂರು ಮಾಡಿದ ಐದೆಕರೆ ಜಮೀನಿತ್ತು. ಅದು ಮಳೆಯಾಧಾರಿತ ಜಮೀನು. ಅದು ಊರಿನ ಕೈವಾಡಿಕೆಯ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಬ್ರಿಟಿಷರ ಕಾಲಾವಧಿಯಲ್ಲಿಯೆ ಮಂಜೂರಾಗಿತ್ತು. ಅದನ್ನು ಹಾಗೆಯೆ ಕಾಪಾಡಿಕೊಂಡು ಬಂದಿದ್ದಳು ನಮ್ಮಜ್ಜಿ. ನಮ್ಮಜ್ಜ ತೀರಿಕೊಂಡ ಮೇಲೆ ಊರಿನ ಜಮೀನ್ದಾರನೊಬ್ಬನನ್ನು ನಮ್ಮಜ್ಜ ಸಾಕಿದ್ದ ಅನ್ನೋ ಕಾರಣಕ್ಕೆ ಅದು ನಮ್ಮಜ್ಜಿಯಿಂದ ಯಾರಾದರೂ ಕಿತ್ತುಕೊಂಡಾರೆಂದು ಆ ಜಮೀನ್ದಾರನ ಹೆಸರಿಗೆ ಬರೆಯಿಸಿದ್ದರು. ಆದರೆ ಆತ ದೊಡ್ಡಗುಣದ ದೊಡ್ಡಮನುಷ್ಯ ಬಹಳಷ್ಟು ವರ್ಷಗಳ ನಂತರ ನಮ್ಮಪ್ಪ ಮತ್ತು ಚಿಕ್ಕಪ್ಪನ ಹೆಸರಿಗೆ ಮಾಡಿಸಿದ್ದನು. ಅದು ನಾವೆಲ್ಲರೂ ನೆನೆಯುವಂತದ್ದು.
ಆ ಜಮೀನು ಮಳೆ ಆಶ್ರಯವಾಗಿತ್ತು. ಶೇಂಗಾವನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಅದು ಕಟಾವು ಆಗುವವರೆಗೂ ಅಜ್ಜಿ ಪ್ರತಿದಿನ ಹೋಗುತ್ತಿದ್ದಳು. ನಾನು ಚಿಕ್ಕ ಹುಡುಗನಾದ್ದರಿಂದ ಅಮ್ಮ ಕಷ್ಟಪಟ್ಟು ಕುರಿಯೊಂದನ್ನು ಕೊಡಿಸಿದ್ದಳು. ಶಾಲೆ ಬಿಟ್ಟ ಮೇಲೆ ಅದನ್ನು ಮೇಯಿಸುವುದಕ್ಕಾಗಿ ನಾನು ಪ್ರತಿದಿನ ಹೊಲಕ್ಕೆ ಹೋಗುತ್ತಿದ್ದೆ. ಅವಾಗೆಲ್ಲಾ ಅಜ್ಜಿ ತನ್ನ ಬದುಕಿನ ಕತೆಗಳನ್ನು ಹೇಳುತ್ತಿದ್ದಳು. ನಮ್ಮ ಹೊಲದ ಆಗ್ನೇಯ ದಿಕ್ಕಿಗೆ ಒಂದು ಬೃಹತ್ತಾದ ಹಿಪ್ಪೆಮರವೊಂದಿತ್ತು. ಅದು ಎಷ್ಟು ದೊಡ್ಡದಿತ್ತು ಎಂದರೆ ಎಂಟು ಜನರು ತಬ್ಬಿಹಿಡಿಯುವಷ್ಟು ಅಗಲವಾದ ಬೊಡ್ಡೆ ಇದ್ದ ಕುತ್ತಿಗೆ ಮುರಿಯುವಷ್ಟು ತಲೆಯನ್ನು ಹಿಂದಕ್ಕೆ ಚಾಚಿ ನೋಡಬೇಕಿತ್ತು. ಅದು ನನಗೆ ಕುತೂಹಲದ ಮರವಾಗಿತ್ತು. ನಮ್ಮ ಸುತ್ತಮುತ್ತ ಎಲ್ಲೂ ಇಲ್ಲದೆ ಇರುವ ಇಂತಹ ಮರ ಇಲ್ಲಿ ಹೇಗೆ ಬೆಳೆಯಿತು. ಹಲವಾರು ಬಾರಿ ಕೇಳಿದರೂ ಅಜ್ಜಿಯ ಹತ್ತಿರ ಉತ್ತರವಿರಲಿಲ್ಲ. ಅದರ ಹಣ್ಣುಗಳನ್ನು ತಿಂದದ್ದು ನೆನಪಿದೆ ಅದರ ಸಿಪ್ಪೆಯನ್ನು ನನ್ನ ಕೈಬೆರಳಿಗೆ ಹಾಕಿಕೊಂಡು ಸಂಭ್ರಮಿಸಿದ್ದು ನೆನಪಿದೆ. ಅವಾಗೆಲ್ಲಾ ಅಜ್ಜಿ ನಮ್ಮ ಹೊಲವನ್ನು ನೀರಾವರಿ ಮಾಡಬಹುದಲ್ಲ ಎಂದರೆ ನಮಗೆ ಅಂತಹ ಶಕ್ತಿ ಎಲ್ಲಿದೆ ಅದಕ್ಕೆ ಹಣ ಜಾಸ್ತಿ ಖರ್ಚಾಗುತ್ತದೆ. ನಮ್ಮಿಂದ ಸಾಧ್ಯವಿಲ್ಲ ಅನ್ನುತ್ತಿದ್ದಳು. ನಾನೂ ಕೇಳಿ ಸುಮ್ಮನಾಗುತ್ತಿದ್ದೆ. ಪದೆ ಪದೆ ನನ್ನಿಂದ ಪ್ರಶ್ನೆ ಕೇಳುತ್ತಲೆ ಇದ್ದಳು. ನನ್ನ ಸಮಾಧಾನಕ್ಕೆ ಅನೇಕ ಕತೆಗಳನ್ನು ಹೇಳುತ್ತಿದ್ದಳು.
ಒಂದು ಕತೆಯಂತೂ ನನಗೆ ತೀವ್ರ ಕುತೂಹಲ ಮತ್ತು ಆಶ್ಚರ್ಯ ತರುವಂತಹದ್ದು. ಸಾಮಾನ್ಯವಾಗಿ ಬಿತ್ತನೆ ಕಾಲದಲ್ಲಿ ಆ ಭಾಗದ ಜನರೆಲ್ಲಾ ಮುಂಗಾರಿನ ಭಿತ್ತನೆಯ ಕಾಲದಲ್ಲಿ ನೆಲ ಉಳುಮೆ ಪ್ರಾರಂಭಿಸುವ ಮುನ್ನ ನಮ್ಮ ಹೊಲದ ಮೇಲ್ಬಾಗದಲ್ಲಿ ಇದ್ದ ತೋಪ್ಗುಂಡಯ್ಯ ಎಂದು ಕರೆಯುತ್ತಿದ್ದ ಬೃಹತ್ ಬಂಡೆಗೆ ಪೂಜಿಸಿ ಬಿತ್ತನೆಯ ಕಾರ್ಯವನ್ನು ಪ್ರಾರಂಭಿಸುತ್ತಾರೆ. ಯಾವುದೆ ತೊಂದರೆಯಾಗದೆ ತೋಪ್ಗುಂಡಯ್ಯ ಬೆಳೆಗಳನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಜನಪರದ್ದು. ಬರಗೂರಿನಲ್ಲಿ ನೆಲೆಸಿರುವ ಆಂಜನೇಯನು ಉದ್ಭವವಾದ ಶ್ರೇಷ್ಟ ಬಂಡೆ ಇದು ಅಲ್ಲಿ ಉದ್ಬವಿಸಿದ ಆಂಜನೇಯ ಪೂರ್ವಾಭಿಮುಖವಾಗಿ ನಿಂತು ಒಮ್ಮೆ ಸೂರ್ಯ ದೇವನಿಗೆ ನಮಿಸಿ ಬರಗೂರಿನಲ್ಲಿ ನೆಲೆಗೊಳ್ಳುವ ಸಲುವಾಗಿ ತನ್ನ ಪ್ರಥಮ ಹೆಜ್ಜೆಯನ್ನು ಬರಗೂರು ಗೋಪಿಕುಂಟೆ ರಸ್ತೆಯ ಮಧ್ಯೆ ಬರುವ ಸಿದ್ಧಲಿಂಗೇಶ್ವರನ ಗುಡಿಗೋಪುರದ ಮೇಲೆ ಇಟ್ಟು ತನ್ನ ಎರಡನೆ ಹೆಜ್ಜೆಯನ್ನು ಬರಗೂರಿನಲ್ಲಿ ನೆಲೆಗೊಂಡಿರುವ ಈಗಿನ ಸ್ಥಳದಲ್ಲಿಟ್ಟು ಪಶ್ಚಿಮಾಭಿಮುಖನಾಗಿ ನಿಂತನು ಎಂಬ ಪ್ರತೀತಿ ಇದೆ.
ಮೊದಲ ಹೆಜ್ಜೆ ಇಟ್ಟ ಸಿದ್ದಲಿಂಗೇಶ್ವರನ ಗೋಪುರ ಒಂಚೂರೂ ವಾಲಿತ್ತು ಅದನ್ನು ಮತ್ತೆ ಮತ್ತೆ ಕೆಡವಿ ಕಟ್ಟಿದರು ವಾಲುತ್ತಿತ್ತು ಎಂಬ ದಂತಕಥೆ ಇದೆ. ಇದನ್ನು ಆಗಾಗ ಹೇಳುತ್ತಿದ್ದಳು. ಅದಕ್ಕಾಗಿಯೇ ಬರಗೂರಿನ ಆಂಜನೇಯ ಪಶ್ಚಿಮಾಭಿಮುಖನಾಗಿ ನೆಲೆಗೊಂಡಿದ್ದಾನೆ ಎಂದಾಗ ಅರೆ ನಿಜವೆ ಅನ್ನಿಸಿದ್ದಿದೆ. ಬರಗೂರಿಗೆ ಹೋಗುವಾಗೆಲ್ಲ ಸಿದ್ಧಲಿಂಗೇಶ್ವರನ ಗೋಪುರ ವಾಲಿದ್ದು ನೋಡಿದ್ದೇವೆ. ಇವನ್ನೆಲ್ಲಾ ನಾನು ಬಾಲ್ಯ ಸಹಜ ಕುತೂಹಲದಿಂದ ಕೇಳುತ್ತಿದ್ದೆ.
ಒಂದು ದಿನ ಅಜ್ಜಿ ನೋಡ್ಮಗ ನೀನು ದೊಡ್ಡೋನಾದ್ಮೇಲೆ ನಮ್ಮ ಹೊಲದ ಮೂಲೆಯಲ್ಲೊಂದು ದೊಡ್ಡ ಹುತ್ತ ಇದೆಯೆಲ್ಲಾ ಅದರ ಕೆಳಗೆ ಆಳದಲ್ಲಿ ಒಳ್ಳೆಯ ನೀರಿದೆ. ನೀನು ಮುಂದೆ ಕೊಳವೆ ಬಾವಿ ಹಾಕ್ಸಿ ವ್ಯವಸಾಯ ಮಾಡು. ನಮ್ಮದು ನೀರಾವರಿ ಜಮೀನಾಗ್ತದೆ. ಇದು ನಾನೇಳಿದ್ದಲ್ಲ ನಿಮ್ಮಜ್ಜ ಸಾಯುವುದಕ್ಕೂ ಮುಂಚೆ ನನ್ನನ್ನು ಇಲ್ಲಿಗೆ ಕರ್ಕೊಂಡು ಬಂದು “ನೋಡು ನಾನು ಎಷ್ಟು ದಿನ ಇರ್ತಿನೊ ಗೊತ್ತಿಲ್ಲ. ನಾನು ನನ್ನ ಮಕ್ಕಳಿಗೆ ಏನೂ ಮಾಡ್ಲಿಲ್ಲ. ನಾನು ಸತ್ತ್ಮೇಲೆ ಅವರ್ನ ಯಂಗ್ ಸಾಕ್ತಿಯೋ ಗೊತ್ತಿಲ್ಲ. ಇಲ್ಲೊಂದು ಕೊಳವೆ ಬಾವಿ ತೆಗ್ಸೊಕೇಳು ಬದಿಕೆಮ್ತವೆ” ಅಂದಿದ್ದ. ನೀನಾದ್ರು ಹಾಕ್ಸು ನೀರಾವರಿ ಮಾಡು ಅಂದಿದ್ದಳು ಅಜ್ಜಿ. ನಮ್ಮಜ್ಜ ಅಂಗೇಳಿರ್ತಾನ? ಅಜ್ಜಿ ಯಾಕಂಗೇಳಿದ್ಲು… ನಾನು ಪದೆ ಪದೆ ನಮ್ಮ ಹೊಲ ನೀರಾವರಿ ಜಮೀನು ಯಾವಾಗಾಗುತ್ತೆ ಅನ್ನೊ ಪ್ರಶ್ನೆಗೆ ಅಜ್ಜೀನೆ ಆ ರೀತಿ ಹೇಳಿದ್ಲಾ ಎಂದು ಆಗಾಗ ಯೋಚಿಸಿದ್ದಿದೆ. ಕೊನೆಗೊಂದು ದಿನ ಅಜ್ಜಿ ಇರುವಾಗಲೇ ಆ ಹುತ್ತದ ಸ್ವಲ್ಪ ದೂರದಲ್ಲಿ ಕೊಳವೆ ಬಾವಿ ಹಾಕಿಸಿದ್ದಾಯಿತು. ಅದರಲ್ಲಿ ನೀರನ್ನು ಕಂಡಿದ್ದಾಯಿತು. ಲಾಭವೊ ನಷ್ಟವೊ ಮಳೆಯಾಶ್ರಿತ ಭೂಮಿ ನೀರಾವರಿ ಜಮೀನಂತೂ ಆಗಿತ್ತು. ಈಗ ಕುತೂಹಲಕ್ಕೆ ಕಾರಣವಾಗಿದ್ದ ಹಿಪ್ಪೆಮರವೂ ಇಲ್ಲ ನನ್ನಜ್ಜಿಯೂ ಇಲ್ಲ. ಹಾಕಿಸಿದ್ದ ಕೊಳವೆ ಬಾವಿ ಒಣಗಿ ಹೋಗಿದೆ. ತೋಪ್ಗುಂಡಯ್ಯ ಹಾಗೆ ನಿಂತಿದ್ದಾನೆ. ಒಮ್ಮೆ ಹಿಂತಿರುಗಿ ನೋಡಿದರೆ ಹಿರಿಯಜ್ಜಿ ಸಣ್ಣಜ್ಜಿ ಎಲ್ಲಾ ನೆನಪಾಗುತ್ತಾರೆ. ಬದುಕು ಮಗ್ಗಲು ಬದಲಿಸುತ್ತಲೆ ಇದೆ. ಅದು ನಿರಂತರ ನೆನಪಿನಂತೆ….