ಬೆಳಿಗ್ಗೆ ಆರರ ಹೊತ್ತಿಗೆ ಈ ಘಟ್ಟದ ಮಾರ್ಗದಲ್ಲಿ ಸಾಗುತ್ತಿದ್ದರೆ ಯಾರೋ ಹಿಂಬದಿಯಿಂದ ನಮ್ಮನ್ನು ಗಮನಿಸುತ್ತ ಅನುಸರಿಸುತ್ತ ಬಂದ ಹಾಗೆ ಅನಿಸುತ್ತದೆ. ಪಡ್ಡೆ ಹುಡುಗರ ಹಾಗೆ ಸೀಟಿ ಹಾಕುತ್ತ ನಮ್ಮ ಬೆನ್ನ ಹಿಂದೆಯೇ ಯಾರೋ ಬಂದಂತೆ ಅನಿಸಿ, ತಿರುಗಿ ನೋಡಿದರೆ ಯಾರೂ ಕಾಣುವುದಿಲ್ಲ.  ಇದ್ದಕ್ಕಿದ್ದಂತೆ ಸೀಟಿಯ ಸದ್ದು ನಿಲ್ಲುತ್ತದೆ. ಹೀಗೆ ಕಾಡುವ ಪಡ್ಡೆ ಹುಡುಗನ ಹೆಸರು ‘ನೀಲಿ ಸಿಳ್ಳಾರ’.  ಈ ವಿಶಿಷ್ಟ ಹಕ್ಕಿರಾಯ ಕಾಡಿನ ಸೊಬಗು ಹೆಚ್ಚಿಸುವವ.
ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಕಾಡಿನ ವಿಸ್ಮಯಗಳ ವಿವರ. 

 

ಕಾರವಾರದಿಂದ ಬೆಳಗಾವಿಗೆ ತೆರಳುವ ಮಾರ್ಗದಲ್ಲಿ ಸಾಗಿದರೆ ಕಾಳಿ ತೀರದ ಸುಂದರ ದೃಶ್ಯಗಳು ನಮ್ಮ ಮನಸ್ಸನ್ನು ಖುಷಿಯಾಗಿಸುತ್ತವೆ. ಅಷ್ಟೇ ಅಲ್ಲ ಕಣ್ಣನ್ನು ತಣಿಸುತ್ತವೆ. ಇದರ ನಡುವೆ ಸಿಗುವ ಕದ್ರಾ ಅಣಶಿ ಘಟ್ಟ ಪ್ರವಾಸಿಗರನ್ನು ಕೈ ಬೀಸಿ ಕರೆದು ಹರಸುವ ಹಸಿರು. ಸದಾ ಹಸಿರಿನಿಂದ ಕಂಗೊಳಿಸುತ್ತ ಮೂರು ಕಾಲದಲ್ಲಿಯೂ ಬಗೆ ಬಗೆಯಾಗಿ ಅರಳಿ ಮನದಾಳದಲ್ಲಿ ನಿಂತು‌ ಬಿಡುತ್ತದೆ. ಕದ್ರಾದಿಂದ ಅಣಶಿ ವರೆಗಿನ ಹದಿನೈದು ಕಿ.ಮಿ ರಸ್ತೆಯಲ್ಲಿ ಸಾಗಿದರೆ ಎದುರಾಗುವುದು ತಿರುವುಗಳ ರಸ್ತೆ. ಹೀಗಾಗಿ ಸಾವಧಾನದ, ಸಮಾಧಾನದ ಪ್ರಯಾಣ. ಈ ಪ್ರಯಾಣದ‌ ಸುಖ ಒಬ್ಬೊಬ್ಬರಿಗೆ ಒಂದೊಂದು ನಮೂನೆ.  ರಸ್ತೆ ತಿರುವು ಮುರುವು ಆಗಿರುವ ಕಾರಣ,  ವಾಂತಿ ಸಮಸ್ಯೆ ಇರುವವರಿಗೆ ಬೇಗ ಹಾದಿ ಮುಗಿದರೆ ಸಾಕು ಎಂದೆನಿಸಿದರೆ, ನಿದ್ದೆಗೂಳಿಗಳಿಗೆ ತಂಪಾದ ಹವೆ, ತಿಳಿಗಾಳಿ ಮುಖ ಮೈಗೆಲ್ಲ ತಾಗಿ ಚಂದದನಿದ್ದೆ ಪ್ರಯಾಣವನ್ನು ಸುಲಭವಾಗಿಸುತ್ತದೆ. ಹಲವರ ಕಣ್ಣಿಗೆ ಕಾಣಿಸಿಕೊಳ್ಳದ ಅಪಾರ ಸೌಂದರ್ಯ ಈ ದಾರಿಯಲ್ಲಿ ಕಾಣುವುದು ಪರಿಸರ ಪ್ರೀತಿಸುವ ಪ್ರೇಮಿಗಳಿಗೆ ಮಾತ್ರ.

ಅಣಶಿ ಘಟ್ಟದ ಹಾದಿಯಲ್ಲಿ ಸಾಗುವಾಗ ಹಠಾತ್ತನೆ ತಿರುವಿನಲ್ಲಿ ಚಿರತೆ, ನರಿ, ಹಂದಿ, ಕಡವೆ, ಮುಳ್ಳು ಹಂದಿ, ಶೆಡ್ಡೂಕ (ಉದ್ದ ಬಾಲದ ಅಳಿಲು) ಹೀಗೆ ಹಲವಾರು ಪ್ರಾಣಿಗಳು ನಿಮಗೆ ಸಿಕ್ಕು ‘ಹಾಯ್’ ಹೇಳಬಹುದು ಅಥವಾ ನೀಲಿಸಿಳ್ಳಾರ, ಮುಂಗಟ್ಟೆ, ಗಿಣಿ, ಮೈನಾ ಎಂಡಾಕೌಳೋ ಎಂದು ಅಣಶಿಯ ಜನ ಗುರ್ತಿಸುವ ಪಕ್ಷಿಗಳು ನಿಮ್ಮನ್ನು ಭೇಟಿಯಾಗಬಹುದು. ಅವು ಸಿಗದಿದ್ದರೆ ನಾಜೂಕಿನ ತಿರುವಿನಲ್ಲಿ ಹಾರ್ನ್ ಹಾಕದೆ ಗುಕ್ ಎಂದು ಭಯ ಬೀಳಿಸುವ ವಾಹನ ಆಗಾಗ ನಿಮ್ಮ ಎದುರು ಬಂದು ನಿಲ್ಲಬಹುದು. ಹೀಗಾಗಿ ತಿರುವಿನ ದಾರಿ ರೋಚಕ ಅಷ್ಟೇ ಅಲ್ಲ; ಅಪಾಯವೂ ಕೂಡ. ಸ್ವಲ್ಪ ಎಚ್ಚರ ತಪ್ಪಿದರೂ ಕಣಿವೆಯ ಪಾದ ಮುಟ್ಟುವ ಅಪಾಯಗಳ ಅರಿವಿದ್ದರೆ, ನಿಧಾನ ಸಾಗಿದರೆ ಹಾದಿ ಸುಲಭ.

ಕದ್ರಾ ದಾಟಿದ ಕೂಡಲೆ ರಸ್ತೆಯ ಎರಡೂ ಬದಿಗಳಲ್ಲಿ ನಿಂತ ಎತ್ತರೆತ್ತರ ಮರಗಳು ಕೊರಳು ಕೊಂಕಿಸಿ ತಮ್ಮನ್ನು ನೋಡಲು ನಮ್ಮನ್ನು ಸಿದ್ದಗೊಳಿಸುತ್ತವೆ. ವರ್ಷದ ಎಲ್ಲ ಕಾಲದಲ್ಲಿಯು ಹಸಿರಾಗಿರುವುದರಿಂದ ಒಂದೂ ಒಣ ಮರವನ್ನು ಎಲ್ಲಿಯೂ ನೋಡಲಾಗದು. ಪ್ರತಿಯೊಂದು ಮರವೂ ಒಂದೊಂದು ರೀತಿ. ಹಲವು ಜಾತಿಯ ವೃಕ್ಷ ಸಮೂಹವನ್ನು ಹೊಂದಿದ್ದ ಅಣಶಿಯ ಕಣಿವೆ ಸದಾ ಹಸಿರಾಗಿ, ಕೆಲವೊಮ್ಮೆ ನೀಲಿಯಾಗಿ ಮೋಡ ಆವರಿಸಿದಾಗ ಬಿಳಿಯಾಗಿ, ಮಳೆ ಮೋಡ ಬಂದಾಗ ಕರಿಯಾಗಿ ಹಲವು ಬಣ್ಣಗಳ ದರ್ಶನ ನೀಡುತ್ತದೆ. ಕಾಡು ಬಣ್ಣ ಬದಲಾಯಿಸುವುದು ಎಂದರೆ ಇದೇ ಇರಬೇಕು. ಈ ಕಣಿವೆಯ ಮಾರ್ಗದಲ್ಲಿ ಸಾಗುತ್ತ ಹೋದರೆ , ಸೂಕ್ಷ್ಮವಾಗಿ ಗಮನಿಸಿದರೆ ಗಿಡಗಂಟಿಗಳ ಎಲೆ ಚಿಗುರುಗಳು ಹಲವು ಆಕಾರ ಪಡೆದು ಬೀಗುತ್ತವೆ. ಬೆಳಿಗ್ಗೆ ಮತ್ತು ಸಂಜೆ ಆ ದಾರಿಗುಂಟ ಸಾಗಿದರೆ ಸಾಕು, ಮರಗಳು ತಮ್ಮ ಎಲೆ ಉದುರಿಸಿ ಎಲೆ ಮಳೆಗರೆದು ನಮ್ಮನ್ನು ಸ್ವಾಗತಿಸುತ್ತವೆ. ಆಯಾ ಕಾಲದಲ್ಲಿ ಆಯಾ ವೃಕ್ಷಗಳು ಚಿಗುರಿ ಹೊಸ ಬಗೆಯಾಗಿ ಕಣಿವೆಯ ರಸ್ತೆ ಕಾಣುತ್ತದೆ.

ಡಿಸೆಂಬರ್ ತಿಂಗಳಲ್ಲಿ ಕಣಿವೆಯ ರಸ್ತೆ ಒಂದು ರೀತಿಯ ಸುಗಂಧವನ್ನು ಕೆಲವಡೆ ಸೂಸುತ್ತಿರುತ್ತದೆ. ವರ್ಷದ ಎಲ್ಲಾ ಕಾಲದಲ್ಲಿಯೂ ಇದೇ ದಾರಿಯಲ್ಲಿ ಶಾಲೆಗೆ ಸಾಗುವುದು ಎಂದರೆ ಖುಷಿ. ಎಲ್ಲ ಆಯಾಸವನ್ನು ಮರೆಸುವ ಶಕ್ತಿ ಪ್ರಕೃತಿಗೆ ಇರುವುದರಿಂದ ಆ ಆಯಾಸವೆಲ್ಲ ಪರಿಹಾರ ಮಾಡುವ ದಾರಿಯಾಗಿ, ಅಣಶಿ ಎಂದರೆ ಪ್ರೀತಿ. ಕಾಡಿನ ಬದಲಾವಣೆಯನ್ನು, ಅಲ್ಲಿನ ಗಿಡ ಮರಗಳು ಹೂ ಚಿಗುರುವುದನ್ನು, ಅಲ್ಲಿನ ವೃಕ್ಷಗಳು ಕಾಯಿ ಬಿಡುವುದನ್ನು ನೋಡುತ್ತಿದ್ದರೆ ಖುಷಿ. ಹೆಸರು ಗೊತ್ತಿರದ ಅದೆಷ್ಟೊ ಮರಗಳ ಕುರಿತಾದ ಸಂಗತಿಗಳನ್ನು ವಿದ್ಯಾರ್ಥಿಗಳೊಟ್ಟಿಗೆ ಹೇಳಿಕೊಂಡರೆ ಏನೋ ಸಂತಸ.

ತಿರುವಿನ ದಾರಿ ರೋಚಕ ಅಷ್ಟೇ ಅಲ್ಲ; ಅಪಾಯವೂ ಕೂಡ. ಸ್ವಲ್ಪ ಎಚ್ಚರ ತಪ್ಪಿದರೂ ಕಣಿವೆಯ ಪಾದ ಮುಟ್ಟುವ ಅಪಾಯಗಳ ಅರಿವಿದ್ದರೆ, ನಿಧಾನ ಸಾಗಿದರೆ ಹಾದಿ ಸುಲಭ.

ಇಂತಹದ್ದೆ ಒಂದು ಸಂತಸಕಂಡುಕೊಂಡದ್ದು ಡಿಸೆಂಬರ್ ಹೊತ್ತಲ್ಲಿ . ಶಾಲೆ ಮುಗಿಸಿಬರುವ ದಾರಿಯಲ್ಲಿ ಇದ್ದಕ್ಕಿದ್ದಲ್ಲೆ ಇಡೀ ಕಣಿವೆಯ ಹಾದಿಗೆ ಮುತ್ತಿಕ್ಕಿದ್ದಂತೆ ಸುವಾಸನೆಯೊಂದು ಮೂಗರಸಿ ಬಂದಿತ್ತು. ಯಾವ ಹೂವಿನದು ಎಂದು ಸ್ವಲ್ಪ ಹೊತ್ತು ಹುಡುಕಿದರೂ ಕೊನೆಗೂ ಕಣಿವೆ ತನ್ನ ಗುಟ್ಟು ಬಿಟ್ಟುಕೊಡಲಿಲ್ಲ. ಪ್ರತಿ ವರ್ಷ ಈ ತಿಂಗಳಲ್ಲಿ ಕಣಿವೆಯಲ್ಲಿ ಸಾಗಿದರೆ ಕಣಿವೆ ತನಗೆ ತಾನೇ  ಅತ್ತರು ಬಡಿದುಕೊಂಡ ಸುವಾಸನೆಯ ನೆನಪು ಅಚ್ಚಳಿಯದೆ ಉಳಿಯುತ್ತದೆ. ರಾಮಪತ್ರೆ ಹೆಚ್ಚಾಗಿರುವ ಈ ಕಣಿವೆಯ ಹಾದಿಯಲ್ಲಿ ಅಪರೂಪಕ್ಕೆ ಕರಡಿಗಳ ದರ್ಶನವೂ ಆಗುತ್ತದೆ. ಹಲಸಿನ ಮರಗಳು ಅಲ್ಲಲ್ಲೆ ಇದ್ದರೂ, ಯಾರೂ ಹಣ್ಣು ಕೊಯ್ಯುವ ಹಾಗಿಲ್ಲ. ಈ ಹಾದಿಯ ಒಂದು ಎಲೆಯನ್ನು ಕೂಡ ಯಾರೂ ಅಲುಗಾಡಿಸುವಂತಿಲ್ಲ. ಹುಲಿ ಸಂರಕ್ಷಿತ, ಹಾರ್ನಬಿಲ್ ಸಂರಕ್ಷಿತ ಕಾಡು ಇದಾದ ಕಾರಣ ಕಠಿಣ ಅರಣ್ಯ ಕಾನೂನು ಪಾಲನೆ ಇಲ್ಲಿದೆ. ಹೀಗಾಗಿ ಹಲಸಿನ ಹಣ್ಣು ರಾಶಿ ರಾಶಿಯಾಗಿ ಮರದಲ್ಲೆ ಹಣ್ಣಾಗಿ ಬೀಳಲು ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾಡಿನ ದಾರಿಯಲ್ಲಿ ಸಾಗಿದರೆ ಕರಡಿ ಮಾತಾಡಿಸುವ ಸಾಧ್ಯತೆ ಕೂಡ ಇದೆ.

ಇನ್ನು ಮೊದಲ ಬಾರಿಗೆ ಅಣಶಿ ಕಣಿವೆಯಲ್ಲಿ ಸಾಗಿದವರಿಗೆ ಒಂದು ರೀತಿಯ ನೀರವ ಮೌನ ಎದ್ದು ಕಾಣುತ್ತದೆ. ಕಾಡಿನ ಮೌನ ಕೆಲವರಿಗೆ ಭಯ ಹುಟ್ಟಿಸುತ್ತದೆ. ಮನುಷ್ಯ ಸಂಚಾರ ಅಷ್ಟಾಗಿ ಇರದ ಈ ಕಣಿವೆಯ ದಾರಿಯಲ್ಲಿ ವಾಹನಗಳ‌ ಓಡಾಟವೂ ತೀರಾ ಕಡಿಮೆ. ಸಂಜೆ ನಾಲ್ಕಾಗುತ್ತಿದ್ದಂತೆ ಕತ್ತಲು ಕವಿದು ಬೆಳಕು ಮಂದವಾಗಿ, ಜೀರುಂಡೆಗಳ ಸದ್ದು ಕಿವಿಗೆ ತಾಗಲು ತೊಡಗಿದಾಗ ಕಾಡು ನೋಡದವರಿಗೆ ಕಾಡು ಹೊಸ ಬಗೆಯಾಗಿ ಕಾಡುತ್ತದೆ. ಮಳೆ ಬರುವ ಒಂದೆರಡು ತಿಂಗಳ ಮುನ್ನವೇ ಜೀರುಂಡೆಗಳ ಸದ್ದು ವಿಪರೀತವಾಗಿರುತ್ತದೆ. ಆಗ ಅಲ್ಲಲ್ಲೇ ಅಡಗಿಕೊಳ್ಳುವ ಉದ್ದ ಬಾಲದ ಅಳಿಲಿನ ಓಡಾಟದ ಸದ್ದು ಗೌಣವಾಗಿ ಬಿಡುತ್ತದೆ. ಜೀರುಂಡೆಗಳು ಮಾಯವಾದಾಗ ಈ ಅಳಿಲಿನದ್ದೇ ಕಾರುಬಾರು. ಮರದಿಂದ ಮರ ಏರುತ್ತ , ತಮ್ಮ ಉದ್ದ ಬಾಲವನ್ನು ಮುಂದೆ ಹಿಂದೆ ತಿರುಗಿಸುತ್ತ, ಕಣಿವೆ ಸಂಚಾರಿಗಳನ್ನು ತಮ್ಮ ಮೋಹಕ ಸೌಂದರ್ಯದಿಂದ ಸೆಳೆಯುತ್ತವೆ. ಅಣಶಿ ಕದ್ರಾ ಘಟ್ಟದ ಭಾಗದಲ್ಲಿ ಮರಗಳ ಶೋಭೆ ಹೆಚ್ಚಲುಈ ಉದ್ದ ಬಾಲದ ಅಳಿಲು ಸಹ ಒಂದು ಕಾರಣ.

ಇನ್ನು ಬೆಳಿಗ್ಗೆ ಆರರ ಹೊತ್ತಿಗೆ ಈ ಕಣಿವೆ ಮಾರ್ಗದಲ್ಲಿ ಸಾಗುತ್ತಿದ್ದರೆ ಯಾರೋ ಹಿಂಬದಿಯಿಂದ ನಮ್ಮನ್ನು ಗಮನಿಸುತ್ತ ಅನುಸರಿಸುತ್ತ ಬಂದ ಹಾಗೆ ಅನಿಸುತ್ತದೆ. ಪಡ್ಡೆ ಹುಡುಗರ ಹಾಗೆ ಸೀಟಿ ಹಾಕುತ್ತ ನಮ್ಮ ಬೆನ್ನ ಹಿಂದೆಯೇ ಬಂದಂತೆ ಅನಿಸಿ, ತಿರುಗಿ ನೋಡಿದರೆ ಯಾರೂ ಕಾಣದೆ , ಇದ್ದಕ್ಕಿದ್ದಲ್ಲೆ ಸೀಟಿಯ ಸದ್ದು ನಿಲ್ಲಿಸಿಬಿಡುವ ಪಡ್ಡೆ ಹುಡುಗ ನೀಲಿ ಸಿಳ್ಳಾರ ಎಂಬ ವಿಶಿಷ್ಟ ಹಕ್ಕಿ.

ಈ ಹಕ್ಕಿ ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳೆಯಲ್ಲಿ ಕೂಗುತ್ತಿದ್ದರೆ ಕಣಿವೆಯಲ್ಲಿ ಒಂದು ರೀತಿಯ ಚೈತನ್ಯ ತುಂಬುತ್ತದೆ.‌ ಮನುಷ್ಯರು ಸೀಟಿ ಹಾಕಿದಂತೆ ಕೂಗುವ ಇದರ ದನಿಗೆ ಮಾರುಹೋಗದವರಿಲ್ಲ. ಹಾಗಂತ ಈ ಹಕ್ಕಿ ಯ ಜಾಡು ಹಿಡಿದು ಹುಡುಕುತ್ತ ಹೋದರೆ ಅದು ಕಾಣಿಸದು. ಎಲೆಗಳ ಮರೆಯಲ್ಲಿ ನಮಗೆ ಗೊತ್ತಾಗದಂತೆ ಕುಳಿತು ಇರುವಿನ ಅರಿವು ಮೂಡಿಸುತ್ತದೆ ಅಷ್ಟೇ. ನೋಡಲು ನೀಲಿಯಾಗಿ ಅಷ್ಟೇನೂ ಚಂದ ಕಾಣದ ಈ ಹಕ್ಕಿಯ ಕೂಗಿಗೆ ಮನಸೋಲದವರು ಯಾರೂ ಇಲ್ಲ. ಅಷ್ಟೊಂದು ಹಿತ. ಕಣಿವೆಯ ದಾರಿಯಲ್ಲಿ ನೀಲಿ ಸಿಳ್ಳಾರ ಕಾಣದಿದ್ದರೆ ಬೇಸರವೆನಿಸಿ, ನಿರುಪಾಯವಾಗಿ ಅಂದಿನ ದಿನ ದೂಡಬೇಕಾಗುತ್ತದೆ.

ಅಣಶಿ ಘಟ್ಟದ ರಸ್ತೆಯಲ್ಲಿ ಸಿಕ್ಕ‌ಅಣಶಿಯ ಫಾರೆಸ್ಟರ್ ಸಿ.‌ಆರ್ .ನಾಯ್ಕರಿಗೂ ಈ ಹಕ್ಕಿ ಮೇಲೆ ಎಲ್ಲಿಲ್ಲದ ಅಕ್ಕರೆ. ಅಣಶಿ ಕಣಿವೆಯ ಮರಗಳ ಬಗ್ಗೆ, ಔಷಧೀಯ ಸಸ್ಯಗಳ ಬಗ್ಗೆ, ಪ್ರಾಣಿಗಳ ಬಗ್ಗೆ ಅವರಿಗೆ ಬಹಳ ಮಾಹಿತಿ ಗೊತ್ತಿದೆ. ಕಾಡಿನ ಆಗುಹೋಗುಗಳ , ಜೀವಸಂಕುಲದ ಇಂದಿನ ವಿಷಯಗಳೆಲ್ಲ ಅವರಿಗೆ ಗೊತ್ತು. ಹೀಗಾಗಿ ಆಗೊಮ್ಮೆ ಈಗೊಮ್ಮೆ ಅವರು ದಾರಿಯಲ್ಲಿ ಸಿಕ್ಕರೆ , ಆ ಕ್ಷಣದಲ್ಲಿ ಹಲವು ಮಾಹಿತಿ ಒದಗಿಸುವ ಬೆಸ್ಟ್ ಫಾರೆಸ್ಟರ್ ಅವರು. ಸಿ.ಆರ್. ನಾಯ್ಕರ ಬಳಿ ಕಾಡಿನ ಕಥೆ ಕೇಳಬೇಕು. ಹುಲಿಯ ಮರಿಗಳ ಬಗ್ಗೆ , ಚಿರತೆ ಬಗ್ಗೆ , ಅದರಲ್ಲೂ ಮುಖ್ಯವಾಗಿ ಕಾಳಿಂಗ ಸರ್ಪದ ಬಗ್ಗೆ ಅವರಿಗೆ ಅಪಾರ ಜ್ಞಾನವಿದೆ. ಅಣಶಿ ಕದ್ರಾ ಸುತ್ತಮುತ್ತಲು ಜನವಸತಿಯಲ್ಲಿ ಎಲ್ಲೆ ಕಾಳಿಂಗ ಬಂದರೂ  ಅವರು ಪ್ರತ್ಯಕ್ಷ. ನಿಧಾನವಾಗಿ ಹಾವಿಗೆ ಚೂರೂ ನೋವಾಗದಂತೆ ಒಯ್ದು ಮತ್ತೆ ಕಾಡಿಗೆ ಬಿಡುವ ಅಧಿಕಾರಿ ಇವರು.

ವಿಶಿಷ್ಟ ರೀತಿಯ ಕಪ್ಪೆಯ ಪ್ರಬೇಧ ಒಂದನ್ನು ಕಂಡುಹಿಡಿದು ಗಿನ್ನೀಸ್ ದಾಖಲೆ ಮಾಡಿದ ಅಪರೂಪದ ಅಧಿಕಾರಿ. ಸದಾ ಕೆಲಸದಲ್ಲಿ ತೊಡಗಿಕೊಂಡ ಇವರು ಕಾಣಸಿಗುವುದೇ ಅಪರೂಪ. ಇಂತಹ ಒಬ್ಬ ಕಾಡಿನ ಸಮಗ್ರ ಮಾಹಿತಿಯುಳ್ಳ ಅಧಿಕಾರಿ ಅಣಶಿ ಕದ್ರಾ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಖುಷಿ. ಏಕೆಂದರೆ ಕಾಡು ಇಂತಹ ಅಧಿಕಾರಿಗಳನ್ನೇ ಬಯಸುತ್ತದೆ. ಘಟ್ಟದ ಹಾದಿಯಲ್ಲಿ ಒಮ್ಮೆ ಸಿಕ್ಕಾಗ ನನ್ನ ಬ್ಯಾಗಿನಲ್ಲಿರುವ ಪುಸ್ತಕಗಳನ್ನು ಅವರಿಗೆ ನೀಡಿದ್ದೆ. ಹೀಗಾಗಿ ಕಣಿವೆಯ ಈ ಹಾದಿ ಇಂತಹ ಪುಟ್ಟ ಪುಟ್ಟ ಘಟನೆಗಳ ನೆನಪುಳಿಸುತ್ತದೆ.

ಕಾಡಿನ ಈ ದಾರಿಯಲ್ಲಿ ಮುಂದೆ ಸಾಗುತ್ತಿದ್ದಂತೆ ಕಾಣುವುದು ಕಲ್ಲರಳಿ ಮರ. ವಿಶಾಲವಾಗಿ ಕಲ್ಲ ಮೇಲೆ ಹುಟ್ಟಿ ಹರಡಿಕೊಂಡಿರುವ ಈ ವೃಕ್ಷಗಳು ಕಲ್ಲೆದೆಯಲ್ಲಿಯೂ ಹೂ ಅರಳಿಸಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿವೆ. ದೊಡ್ಡ ದೊಡ್ಡ ಬಂಡೆಗಲ್ಲಿನ ಕಣಿವೆಯ ರಸ್ತೆಯಲ್ಲಿ ಕಲ್ಲ ಬಾಳೆಯ ತೋಟ ಕೂಡ ಸಿಗುತ್ತದೆ. ಪ್ರಕೃತಿಯೇ ಈ ತೋಟದ ಮಾಲೀಕ. ಬಂಡೆಗಲ್ಲಿಗೆ ಅಂಟಿಕೊಂಡ ಇವನ್ನು ನೋಡುವುದೇ ಒಂದು ಹಬ್ಬ. ಕಣಿವೆ ದಾರಿಯಲ್ಲಿ ಬಂದವರು ಈ ಕಲ್ಲ ಬಾಳೆಯ ನೋಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗಣೇಶ ಚತುರ್ಥಿಯ ಸಮಯದಲ್ಲಿ ಕೆಲವರು ಈ ಬಾಳೆ ಎಲೆಯ ತುದಿಯನ್ನು ಕೊಯ್ದು ಗಣಪನಿಗೆ ನೈವೇದ್ಯ ಸಲ್ಲಿಸುವ ಪದ್ದತಿ ಇಲ್ಲಿ ಇಲ್ಲಿದೆ. ಮಳೆಗಾಲದ ಮಳೆಗೆ ಒದ್ದೆಯಾದ ಬಂಡೆಗಲ್ಲನ್ನು ಏರಿ ಬಾಳೆ ಎಲೆ ಕೊಯ್ಯುವ ಸಾಹಸ ಅಪರೂಪಕ್ಕೆ ನಾವಿಲ್ಲಿ ನೋಡಬಹುದು.

ಕಾಡೇ ವಿಸ್ಮಯ. ಕಾಡಿನ ಹಾದಿ ಇನ್ನಷ್ಟು ರೋಚಕ.