“ನೀವು ಇಲ್ಲಿ ಸಂಘರ್ಷವನ್ನು ಗಮನಿಸುವುದಿಲ್ಲ, ಆದರೆ ಇಲ್ಲಿ ಬೇರೆ ಏನೋ ಇದೆ – ಅದು ಪ್ರೀತಿ. ಈ ಕಾವ್ಯ ಯಾವ ವರ್ಗಕ್ಕೆ ಸೇರಿದ ಕಾವ್ಯ? ಪ್ರೀತಿಯು ಹಕ್ಕಿಯ ಗರಿಯಹಾಗೆ, ಅದನ್ನು ಕಾವ್ಯದ ಬಗ್ಗೆ ಮಾತನಾಡುವಾಗ ಈ ಅಧ್ಯಯನದ ಭಾಗವಾಗಿ ವ್ಯಾಖ್ಯಾನಿಸಬೇಕು.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ಆ್ಯನಾ ಆವ್ಜಿನ್ಯಾ
(Anna Auziņa) ಅವರ ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

ಸಮಕಾಲೀನ ಲ್ಯಾಟ್ವಿಯನ್ ಕಾವ್ಯಲೋಕದ ಹೊಳೆಯುವ ತಾರೆಗಳಲ್ಲಿ ಒಬ್ಬರಾದ ಆ್ಯನಾ ಆವ್ಜಿನ್ಯಾ, ಕಳೆದ ಎರಡು ದಶಕದ ಬಾಲ್ಟಿಕ್ ಕಾವ್ಯದಲ್ಲಿ ಒಂದು ದೃಢವಾದ ಹಾಗೂ ಮಾರ್ದನಿಸುವ ಶಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಒಬ್ಬ ಚಿತ್ರಕಾರರಾಗಿ ಸಾಂಪ್ರದಾಯಿಕ ತರಬೇತಿ ಪಡೆದ ಆವ್ಜಿನ್ಯಾ ಕಲಾವಿದರಾಗಿಯೂ ಹೆಸರು ಪಡೆದಿದ್ದಾರೆ. ಅವರ ಕಾವ್ಯವು ಅವರ ಚಿತ್ರಕಲೆಯ ವೈಯಕ್ತಿಕ ಪಯಣದ ಕಾವ್ಯಾತ್ಮಕ ಭಾಷೆಯೊಂದಿಗೆ ದೃಢವಾದ ಸಂಬಂಧವನ್ನು ಸಾಧಿಸುತ್ತದೆ. ಎರಡೂ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರಾಗಿರುವ ಇವರ ಕಾವ್ಯದಲ್ಲಿ ಕಂಡುಬರುವ ರೂಪಕಗಳು ಮತ್ತು ಧ್ವನಿಯಲ್ಲಿ ಈ ಸೃಜನಶೀಲ ಚುರುಕುತನವನ್ನು ನೋಡಬಹುದು.

1975 ರಲ್ಲಿ ರೀಗಾ ನಗರದಲ್ಲಿ, ಬರಹಗಾರರ ಕುಟುಂಬದಲ್ಲಿ ಜನಿಸಿದ ಆ್ಯನಾ ಆವ್ಜಿನ್ಯಾ, 1990 ರಿಂದಲೆ ಕವನಗಳನ್ನು ಪ್ರಕಟಿಸಲು ಶುರುಮಾಡಿದರು. ಆವ್ಜಿನ್ಯಾರವರು ಚಿತ್ರಕಲೆಯಲ್ಲಿ ಪದವಿ ಪಡೆದಿದ್ದಾರೆ ಹಾಗೂ 1994-ರಿಂದ ತಮ್ಮ ವರ್ಣಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ; ಬಹಳಷ್ಟು ಏಕವ್ಯಕ್ತಿ ಪ್ರದರ್ಶನಗಳನ್ನೂ ಮಾಡಿದ್ದಾರೆ. ಆವ್ಜಿನ್ಯಾರು ಕಾಪಿರೈಟರ್ ಆಗಿಯೂ ಕೆಲಕಾಲ ಕೆಲಸ ಮಾಡಿದ್ದಾರೆ. ಸಾಹಿತ್ಯಿಕ ಸಂಶೋಧನೆಯಲ್ಲದೆ ಆವ್ಜಿನ್ಯಾರು ಕವನ, ನಾಟಕಗಳ ವಿಮರ್ಶೆಗಳನ್ನು ಬರೆಯುತ್ತಾರೆ ಹಾಗೂ ಕಲಾ ಪ್ರಪಂಚ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 20-ನೆಯ ಶತಮಾನದ ಲ್ಯಾಟ್ವಿಯನ್ ಕಾವ್ಯದ ಮೂರು ಪ್ರಮುಖ ಮಹಿಳಾ ಕವಿಗಳ ಕಾವ್ಯವನ್ನು ಪರಿಶೀಲಿಸಿ, ಸಂಶೋಧಿಸಿ ಬರೆದ ಮಹಾಪ್ರಬಂಧಕ್ಕಾಗಿ (Woman’s Experience and Language: The Poetry of Vizma Belševica, Ārija Elksne and Monta Kroma in the Context of Their Time) ಆವ್ಜಿನ್ಯಾರವರು 2019 ರಲ್ಲಿ ಪಿಎಚ್‌.ಡಿ. ಪದವಿ ಪಡೆದರು. ನಾಲ್ಕು ಉತ್ತಮ ಬಹುಮಾನ ವಿಜೇತ ಕವನ ಸಂಕಲನಗಳನ್ನು ಈವರೆಗೆ ಪ್ರಕಟಿಸಿದ್ದಾರೆ – Atšķirtie dārzi (Isolated Gardens, 1995; ‘ಐಸೊಲೇಟೆಡ್ ಗಾರ್ಡನ್ಸ್’), Slēpotāji bučojas sniegā (Skiers Kissing in the Snow, 2001; ‘ಸ್ಕೀಯರ್ಸ್ ಕಿಸ್ಸಿಂಗ್ ಇನ್ ದಿ ಸ್ನೋ’), Es izskatījos laimīga (I Looked Happy, 2010; ‘ಐ ಲುಕ್ಡ್ ಹ್ಯಾಪಿ’) ಮತ್ತು Annas pūra govs (Anna’s Dowry Cow, 2017; ‘ಆ್ಯನ್ನಾಸ್ ಡೌರಿ ಕೌ’). ಕವನಗಳಲ್ಲದೆ, ಆವ್ಜಿನ್ಯಾ-ರು “ದಿ ಡ್ವೆಲಿಂಗ್. ಟೆರೇಸಾಸ್ ಡಯರಿ” (The Dwelling. Teresa’s Diary, 2021) ಎಂಬ ಹೆಸರಿನ ಕಾದಂಬರಿಯನ್ನು ಸಹ ಬರೆದಿದ್ದಾರೆ. ಇದು ಒಂದು ಯುವತಿಯ ಬೆಳವಣಿಗೆಯ ಕಥೆಯಾಗಿದೆ.

ಲ್ಯಾಟ್ವಿಯಾದ ಸಾಹಿತ್ಯಕ್ಷೇತ್ರದಲ್ಲಿ ಪ್ರಥಮ ಕವನ ಸಂಕಲನಕ್ಕಾಗಿ ಕೊಡಲಾಗುವ ಪ್ರತಿಷ್ಠಿತ ‘ಕ್ಲಾವ್ಸ್ ಎಲ್ಸ್‌ಬರ್ಗ್ಸ್’ (Klāvs Elsbergs) ಪ್ರಶಸ್ತಿಯನ್ನು ಆ್ಯನಾ ಆವ್ಜಿನ್ಯಾರವರು 1994-ರಲ್ಲಿ ತಮ್ಮ ಮೊದಲ ಕವನ ಸಂಕಲನದ ಹಸ್ತಪ್ರತಿಗಾಗಿ ಪಡೆದರು. ಈ ಸಂಕಲನವನ್ನು ‘ಐಸೊಲೇಟೆಡ್ ಗಾರ್ಡನ್ಸ್’ (Isolated Gardens) ಎಂಬ ಹೆಸರಿನಿಂದ 1995-ರಲ್ಲಿ ಪ್ರಕಟಿಸಲಾಯಿತು. ಈ ಸಂಕಲನವನ್ನು 90-ರ ದಶಕದ ಕಾವ್ಯದಲ್ಲಿ ಸ್ತ್ರೀಪರ ಬರವಣಿಗೆಯ ಒಂದು ಹೊಸ ತರಹದ ಪ್ರಯತ್ನ ಎಂದು ಪರಿಗಣಿಸಲಾಗಿದೆ. ಆವ್ಜಿನ್ಯಾರು ಪ್ರಾರಂಭಿಸಿದ ಕಾವ್ಯ ಸಂಪ್ರದಾಯವನ್ನು ಖ್ಯಾತ ಲ್ಯಾಟ್ವಿಯನ್ ಕವಿ ಯಾನಿಸ್ ಎಲ್ಸ್‌ಬರ್ಗ್ಸ್-ರವರು ಹೀಗೆ ವಿವರಿಸುತ್ತಾರೆ: “ಚಿತ್ರವತ್ತಾದ ಮೂರ್ತ ರೂಪಕಗಳ ದಟ್ಟವಾದ ಹರಿವಿನಲ್ಲಿ ಭಾವನಾತ್ಮಕ ನಿರ್ಲಿಪ್ತತೆ ಹಾಗೂ ನೇರತೆ; ತೀಕ್ಷ್ಣವಾದ ದೈನಂದಿನ ವಾಸ್ತವದ ಕಟು ವಿವರಗಳ ಜತೆಗೆ ಪ್ರಬಲವಾದ ವಿಷಯಾಸಕ್ತಿಯ ಸೌಹಾರ್ದತೆ; ಮತ್ತು ಅತಿ ಸೂಕ್ಷ್ಮ ಮತ್ತು ನಾಜೂಕಾದ ಪ್ರತಿಮೆಗಳು ಹಾಗೂ ಮೂಡ್-ಗಳು.” ಈ ಸಂಕಲನದಲ್ಲಿ ಆವ್ಜಿನ್ಯಾರವರು ಒಂದು ಹರೆಯದ ಹುಡುಗಿಯ ಅನುಭವಗಳನ್ನು ದೀಕ್ಷಾ ವಿಧಿಗಳ ಸಂಕೇತಗಳೊಂದಿಗೆ ಜೋಡಿಸಿ ವ್ಯಕ್ತಪಡಿಸುತ್ತಾರೆ, ಹಾಗೂ ಆವ್ಜಿನ್ಯಾ-ರ ಈ ಕಾವ್ಯಶೈಲಿಯನ್ನು “ಪೌರಾಣಿಕ ಸಾಂಕೇತಿಕತೆ” (mythical symbolism) ಎಂದು ಕರೆಯಬಹುದು ಎಂದು ವಿಮರ್ಶಕಿ ಆ್ಯಂಡಾ ಕುಬುಲಿನಾ-ರವರು ಅಭಿಪ್ರಾಯಪಟ್ಟಿದ್ದಾರೆ.

2001-ರಲ್ಲಿ ಆವ್ಜಿನ್ಯಾರವರ ಎರಡನೆಯ ಕವನ ಸಂಕಲನದ ಹಸ್ತಪ್ರತಿಗೆ ‘ಒರಿಜಿನಲ್’ ಲ್ಯಾಟ್ವಿಯನ್ ಸಾಹಿತ್ಯ ಸ್ಪರ್ಧೆಯ ಬಹುಮಾನ ದೊರಕಿತು ಹಾಗೂ ಅದೇ ವರ್ಷ ‘ಸ್ಕೀಯರ್ಸ್ ಕಿಸ್ಸಿಂಗ್ ಇನ್ ದಿ ಸ್ನೋ’ (Skiers Kissing in the Snow, 2001) ಎಂಬ ಹೆಸರಿನಿಂದ ಪ್ರಕಟಿಸಲಾಯಿತು. ಲ್ಯಾಟ್ವಿಯಾದ ಹೆಸರಾಂತ ಸಾಹಿತ್ಯ ವಿಮರ್ಶಕಿ, ಇಂಟಾ ಚಾಕ್ಲಾ, ಈ ಸಂಕಲನದ ಬಗ್ಗೆ ಹೀಗೆ ಬರೆದಿದ್ದರು: “ಆ್ಯನಾ ಆವ್ಜಿನ್ಯಾ ಅವರ ಎರಡನೇ ಕವನ ಸಂಕಲನವು ಎಲ್ಲಕ್ಕಿಂತ ಮೊದಲಾಗಿ, ಅದರಲ್ಲಿರುವ (ನಮ್ಮ ಕಾವ್ಯದಲ್ಲಿ ವಿರಳವಾಗಿರುವ) ‘ಬೇಸಿಕ್ ಮೂಡ್’-ನಿಂದಾಗಿ ನಮ್ಮನ್ನು ಆಕರ್ಷಿಸುತ್ತದೆ. ಇಲ್ಲಿರುವ ಕವನಗಳು ಜೀವನದಲ್ಲಿ ಆನಂದವನ್ನು ಬಯಸುವ ತೀವ್ರವಾದ ಬೇಡಿಕೆಯಂತಹ ಕವನಗಳು: ಜೀವನದ ಅರ್ಥ ಒಂದು ಪರಮಾನಂದದಂತೆ, ದೇವರು ಕೊಟ್ಟ ಉಡುಗೊರೆಯ ಹಾಗೆ – ಎಂದು ಸಾರುವ ಕವನಗಳು.” ಕವಿ ಕಾರ್ಲಿಸ್ ವರ್ಡಿನ್ಸ್‌ರ ಪ್ರಕಾರ ಈ ಸಂಗ್ರಹವು, “ಜಗತ್ತಿನಲ್ಲಿ ಬಹುಕಾಲದಿಂದಿರುವ ನೋವು ಮತ್ತು ಸೌಂದರ್ಯಗಳ ಜತೆ ಒಂದು ಒಪ್ಪಂದದ ತರಹ.”

ಆ್ಯನಾ ಆವ್ಜಿನ್ಯಾರ ಮೂರನೇಯ ಕವನ ಸಂಕಲನ ‘ಐ ಲುಕ್ಡ್ ಹ್ಯಾಪಿ’ (I Looked Happy) ಸುಮಾರು ಎಂಟು ವರ್ಷಗಳ ನಂತರ 2010-ರಲ್ಲಿ ಪ್ರಕಟವಾಯಿತು. 2008 ರಲ್ಲಿ, ಈ ಸಂಕಲನದ ಮೊದಲ ಕವನ, “I have a book inside me”, ಒಲಿವೆರೆಟ್ಟೊ (Oliveretto) ಕಾವ್ಯ ಪ್ರಶಸ್ತಿಯನ್ನು ಗೆದ್ದಿತು. 2010-ರ ಕೊನೆಯಲ್ಲಿ ಹೊರಬಂದ ಈ ಸಂಕಲನ ಆ ವರ್ಷದ ಅತ್ಯುತ್ತಮ ‘ಒರಿಜಿನಲ್’ ಸಾಹಿತ್ಯ ಪುಸ್ತಕಗಳಲ್ಲಿ ಒಂದಾಗಿ ವರ್ಷದ ಸಾಹಿತ್ಯ ಪ್ರಶಸ್ತಿಗೆ ನಾಮಕರಣಗೊಂಡಿತು. ಈ ಸಂಕಲನದಲ್ಲಿ ಆವ್ಜಿನ್ಯಾ-ರು ಕಾವ್ಯವನ್ನು ಜೀವನದ ಸಹಜ ಭಾಗವೆಂದು ಹಾಗೂ ಪ್ರತಿಯಾಗಿ, ದೈನಂದಿನ ಜೀವನವನ್ನು ಕಾವ್ಯವೆಂದು ಗುರುತಿಸುತ್ತಾರೆ. ಈ ಸಂಕಲನದಲ್ಲಿ ಬರುವ ”I have a book inside me” ಕವನವು ಕವಿಯ ಜೀವನವನ್ನು ಒಟ್ಟುಸೇರಿಸುವ ಕಾವ್ಯರೂಪದ ಉಜ್ವಲ ಉದಾಹರಣೆಯಾಗಿದೆ. ಇಲ್ಲಿರುವ ಕವನಗಳು ಹೆಚ್ಚಾಗಿ ವೈಯಕ್ತಿಕ ವಿಷಯಗಳನ್ನೊಳಗೊಂಡಿವೆ, ಆದರೆ ವಸ್ತುನಿಷ್ಠ ವಾಸ್ತವತೆಯ ವಿವರವಾದ ಉಲ್ಲೇಖಗಳಲ್ಲಿ ಹಾಗೂ ಒಬ್ಬ ಮಗು, ಒಬ್ಬಳು ಹೆಂಗಸು ಮತ್ತು ಒಬ್ಬಳು ಮನುಷ್ಯಳಾಗಿ ಅವರ ಅನುಭವಗಳ ನೆನಪುಗಳಲ್ಲಿ ಆಳವಾಗಿ ನೆಲೆಗೊಂಡಿವೆ.

ಕವಿ ಐವಾರ್ಸ್ ಎಯ್ಪುರ್ಸ್‌ರವರು ಈ ಸಂಕಲನದಲ್ಲಿ ಕಂಡುಬರುವ ಆವ್ಜಿನ್ಯಾರ ಭಾವನಾತ್ಮಕತೆಯನ್ನು ಒತ್ತಿಹೇಳುತ್ತಾರೆ: “ನೀವು ಇಲ್ಲಿ ಸಂಘರ್ಷವನ್ನು ಗಮನಿಸುವುದಿಲ್ಲ, ಆದರೆ ಇಲ್ಲಿ ಬೇರೆ ಏನೋ ಇದೆ – ಅದು ಪ್ರೀತಿ. ಈ ಕಾವ್ಯ ಯಾವ ವರ್ಗಕ್ಕೆ ಸೇರಿದ ಕಾವ್ಯ? ಪ್ರೀತಿಯು ಹಕ್ಕಿಯ ಗರಿಯಹಾಗೆ, ಅದನ್ನು ಕಾವ್ಯದ ಬಗ್ಗೆ ಮಾತನಾಡುವಾಗ ಈ ಅಧ್ಯಯನದ ಭಾಗವಾಗಿ ವ್ಯಾಖ್ಯಾನಿಸಬೇಕು.”

2017 ರಲ್ಲಿ, ಆವ್ಜಿನ್ಯಾರ ನಾಲ್ಕನೇ ಸಂಗ್ರಹ ‘ಆ್ಯನ್ನಾಸ್ ಡೌರಿ ಕೌ’ (Anna’s Dowry Cow) ಪ್ರಕಟವಾಯಿತು. ಈ ಸಂಕಲನದಲ್ಲಿ ಬರುವ “ಐಡೆಂಟಿಟಿ” Identity ಎಂಬ ಕವನ 2014-ರಲ್ಲಿ “ಲ್ಯಾಟ್ವ್ಯು ಟೆಕ್ಸ್ಟಿ” (Latvju Teksti) ಪತ್ರಿಕೆಯ ಕವನ ಸ್ಪರ್ಧೆಯ ಬಹುಮಾನ ಪಡೆದಿತ್ತು. ಈ ಸಂಕಲನದಲ್ಲಿ ಉಲ್ಲೇಖಗಳು ಮತ್ತು ವೈಯಕ್ತಿಕ ಟಿಪ್ಪಣಿಗಳನ್ನೊಳಗೊಂಡ 12 ಭಾಗಗಳಲ್ಲಿ ವ್ಯವಸ್ಥಿತವಾಗಿ ರಚಿಸಲ್ಪಟ್ಟ ಪರಿಕಲ್ಪನಾ ಕವನ “ಕಾನ್ಶಸ್ನೆಸ್” “Consciousness” ಸಹ ಸೇರಿದೆ. ಈ ಕವನದ ರಚನೆಯ ಬಗ್ಗೆ ಆವ್ಜಿನ್ಯಾರು ಹೇಳುತ್ತಾರೆ: “ಈ ಕವನದಲ್ಲಿ ಖಾಸಗಿ, ವೈಯಕ್ತಿಕ ಮತ್ತು ಸಾಮೂಹಿಕ ಪ್ರಜ್ಞೆಗಳ ತುಣುಕುಗಳಿವೆ. ಇಲ್ಲಿ ಪತ್ರಗಳು ಅಥವಾ ನನ್ನ ಸ್ವಂತ ಉಲ್ಲೇಖಗಳು ಮಾತ್ರವಲ್ಲ, ಇಂಟರ್ನೆಟ್ ಸರ್ಚ್ ಎಂಜಿನ್‌ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಸ್ನೇಹಿತರ ಪೋಸ್ಟ್‌ಗಳಿಂದ ನಾನು ತೆಗೆದುಕೊಂಡ ಉಲ್ಲೇಖಗಳು ಕೂಡ ಇವೆ. ಇದರಲ್ಲಿ ನನ್ನ ಸ್ವಂತ ರಚನೆಯ ಉಲ್ಲೇಖಗಳ ಪ್ರಮಾಣ ಎಷ್ಟು; ಬೇರೆಯವರ ಉಲ್ಲೇಖಗಳ ಪ್ರಮಾಣ ಎಷ್ಟು, ಲ್ಯಾಟ್ವಿಯನ್ ಸಾಹಿತ್ಯದ ಇತಿಹಾಸದಿಂದ ತೆಗೆದುಕೊಂಡವು ಎಷ್ಟು, ಎಂದು ಈಗ ಹೇಳುವುದು ಕಷ್ಟ. ಎಂದರೆ ಈ ಕವನದ ಸ್ವರೂಪ ಒಂದು ಚೌಕಟ್ಟಿನ ಹಾಗೆ. ಈ ಮಹಾಕಾವ್ಯ ಘಟನೆಗಳ ಬಗ್ಗೆ ಅಲ್ಲ, ಭಾಷೆ ಅಥವಾ ಪ್ರಜ್ಞೆಯಲ್ಲಿ ಏನಾಗುತ್ತಿರುತ್ತದೆ ಎಂಬುದರ ಬಗ್ಗೆಯಾಗಿದೆ.”

ಆ್ಯನಾ ಆವ್ಜಿನ್ಯಾ ಅವರ ಕವನಗಳನ್ನು ರಷ್ಯನ್, ಇಂಗ್ಲಿಷ್, ಲಿಥುವೇನಿಯನ್, ಜರ್ಮನ್, ಫ್ರೆಂಚ್, ಸ್ವೀಡಿಷ್, ಫಿನ್ನಿಶ್, ಮತ್ತು ಹಲವಾರು ಇತರ ಭಾಷೆಗಳಿಗೆ ಅನುವಾದಿಸಲಾಗಿದೆ.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ಆ್ಯನಾ ಆವ್ಜಿನ್ಯಾರ ಐದು ಕವನಗಳಲ್ಲಿ ಮೊದಲ ಕವನವನ್ನು ಕ್ಯಾರಲಿನ್ ಬ್ರೌನ್ (Caroline Brown) ಹಾಗೂ ಉಳಿದ ನಾಲ್ಕು ಕವನಗಳನ್ನು ಇಯೆವಾ ಲೆಸಿನ್ಸ್ಕಾ (Ieva Lešinska) ಮೂಲ ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

1
ನಮ್ಮ ಅಮ್ಮಂದಿರು
ಮೂಲ: Our mothers

ನಮ್ಮ ಅಮ್ಮಂದಿರು ಜೋಡಿ ಕೊರವಂಜಿಯರು
ರಸ್ತೆಯ ಬದಿಯಲ್ಲಿ
ಕಾಲಗಲಿಸಿ ಕುಳಿತುಕೊಂಡಿರುವರು
ಬೀಡಿ ಸೇದುತ್ತಾ

ನಮ್ಮ ಅಮ್ಮಂದಿರು
ಹಳ್ಳಿಹುಡುಗಿಯರು ಕೂಡ
ರಸಭರಿತ ಮಾವಿನಹಣ್ಣು ತಿನ್ನುವರು
ದನಗಳಿಗಾಗಿ ಹುಲ್ಲು ಕಲೆಹಾಕುವರು

ನಮ್ಮ ಅಮ್ಮಂದಿರು ಮಾಟಗಾತಿಯರು
ಕತ್ತಲು ಅಡುಕಳಗಳಲ್ಲಿ ಬೆಂಕಿಗೆ
ಉರವಲು ಹಾಕಿ ಊದುವರು
ನರಕದಲ್ಲಿರುವರೋ ಎಂಬಂತೆ
ತಮ್ಮ ಕಷಾಯ ಕುದಿಸುವರು

ಅವರು ಸಿಂಗರಿಸಿಕೊಂಡ
ನಾಯಕಸಾನಿಯರು ಕೂಡ
ಕಾಡಿಗೆಹಚ್ಚಿದ ಕಣ್ಣುಗಳು
ಬೀಡಾಸವಿದ-ಕೆಂಪು ತುಟಿಗಳು

ನಮ್ಮ ಅಮ್ಮಂದಿರು ಹುಚ್ಚಿಯರು ಕೂಡ
ಉದ್ದನೆಯ ಬಿಳಿ ನಿಲುವಂಗಿಯ ಧರಿಸುವರು
ಗುಹೆಯಾಳದ ಕಣ್ಣುಗಳು, ಹಲ್ಲಿಲ್ಲದ ಬಾಯಿ
ಅದಿರುತ್ತಿರುವ ಮೂಳೆ-ಸಣಕಲು ಬೆರಳುಗಳು

ಮತ್ತೆ, ನಮ್ಮ ಅಮ್ಮಂದಿರು ಮಕ್ಕಳೂ ಹೌದು
ಅವರು ಅತ್ತೂ ಅತ್ತೂ ಅಂತೂ ನಿದ್ದೆ ಹೋದಾಗ
ಅವರ ದುಂಡು ಕೆನ್ನೆಗಳ ಮೇಲೆ
ಒದ್ದೆಯಾದ ಕೂದಲೆಳೆಗಳು

2
ನಾನು ಒಂಟಿಯಾಗಿ ಇರಲು ಬಯಸುವೆ
ಮೂಲ: I would like to be alone

ನಾನು ಒಂಟಿಯಾಗಿ ಇರಲು ಬಯಸುವೆ
ಒಂದು ವಿಶಾಲವಾದ ಪುರಾತನ ಮನೆಯಲ್ಲಿ
ಸುತ್ತಮುತ್ತಾ ಯಾರೂ ಇರದ ಹಾಗೆ
ಹೇರಳವಾಗಿ ವಸ್ತುಗಳು ಮಾತ್ರ ಇರಬೇಕು
ಬಿರುಕುಗಳಲ್ಲಿ ಹತ್ತಿಯ ತುರುಕುವೆ
ಅತಿಥಿಗಳು ಬರುವರು ಒಮ್ಮೆ ಒಬ್ಬರಾಗಿ
ಬಾಗಿಲು ತೆರೆದಿರುವುದು
ಎಲ್ಲವೂ ಮಲಗಿರುವುದು ಹಾಗೆಯೇ ಬಿಟ್ಟುಬಿಟ್ಟಂತೆ
ಹಳೆಯದಾಗಿ ಹಿತವಾಗಿ ಹದವಾಗಿ
ಬಿಸಿಲು ಗಾಳಿ ನನ್ನತ್ತ ಬರುವುದು ಜನ್ನಲುಗಳಿಂದ
ನೋಡಿಕೊಳ್ಳಲು ಇರಬಹುದು ಒಂದು ಕೂಸು ಯಾ ಸಾಕುಪ್ರಾಣಿ
ಹಾರುವ ಕೀಟದಂತೆ ಝೇಂಕರಿಸುತ್ತಾ ಹಾರುವೆ
ಈ ಪುರಾತನ ವಿಶಾಲ ಮನೆಯೊಳಗೆಲ್ಲಾ
ನನ್ನ ಆತ್ಮವೂ ಹೀಗಿರಬೇಕೆಂದು ಆಶಿಸುವೆ
ಮತ್ತೆ
ಅತಿಥಿಗಳು ಅಪರೂಪಕ್ಕೆ ಬರಬೇಕು ಒಮ್ಮೆ ಒಬ್ಬರಾಗಿ

3
ಶರತ್ಕಾಲ ಬರುತ್ತದೆ
ಮೂಲ: Autumn comes

ಶರತ್ಕಾಲ ಬರುತ್ತದೆ
ನನ್ನ ಕುಪ್ಪಿಯೊಳಗೆ ಕಾಮನಬಿಲ್ಲನ್ನು ಸುರಿಯಲು ತಯಾರಾಗಿ
ನಾನು ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡಿಲ್ಲ ಅಂತನಿಸುತ್ತದೆ
ಸೂರ್ಯಬೆಳಗಿದ ಪಾರ್ಕಿನಲ್ಲಿ ಕೂರುವುದು ನನಗಿಷ್ಟ
ನನ್ನ ಮಗಳು ಹಾಡುತ್ತಿರಲು ಅಲ್ಲಿ
ನಾನೊಂದು ಪುಸ್ತಕವ ಓದುವೆ
ಇದೇ ವಸಂತದಲ್ಲಿ ನಿನ್ನಿಂದ ಕಡಕೊಂಡ ಪುಸ್ತಕ

ಎಲ್ಲವೂ ಚೆನ್ನಾಗಿ ಸಾಗುತ್ತಿದೆ
ನನ್ನ ಹೊತ್ತು ಮೀರುತ್ತಿದೆ
ಕಾಮನಬಿಲ್ಲು ಬಾಯೊಳಗೆ ಇಳಿಯುತ್ತಿದೆ
ಪಾರ್ಕಿನಲ್ಲಿ ಓದುವುದು ನನಗಿಷ್ಟ
ನನ್ನ ಮಗಳು ಹಾಡುತ್ತಿರಲು ಅಲ್ಲಿ
ಆದರೆ ನಿನ್ನ ಮುಖ ಯಾಕೊ ನನ್ನನ್ನು ನೋಯಿಸುತ್ತಿದೆ ಈ ಮಾಸದಲ್ಲಿ

ನಿನ್ನ ಪಿಯಾನೊ-ನುಡಿಸುವ ಬೆರಳುಗಳು ಚುರುಗುಟ್ಟುತ್ತಿವೆ
ನಿನ್ನ ಕಣ್ಣಡಿಯ ಬಾವು ನನ್ನ ಕಣ್ಣಡಿಯಲ್ಲಿ ಕಪ್ಪುಗಟ್ಟುತ್ತಿವೆ
ನಿನ್ನ ಗಲ್ಲದ ಮೊನೆ ಮರೆಯಾಗುತ್ತಿದೆ
ಎಲ್ಲಾ ಮರಗಳಲ್ಲೂ ನೀನು ಕಂಪಿಸುತ್ತಿರುವೆ
ನನ್ನ ಎಲ್ಲಾ ಪುಟಗಳಲ್ಲೂ ನೀನು ತೆರೆದುಬಿದ್ದಿರುವೆ

ಅವಳು ಬರುವಳು, ನಂತರ ನಾವು
ಕಾರಂಜಿಯನ್ನು ನೋಡಲು ಹೋಗುವೆವು
ನಾನು ನಗುತ್ತಾ ಮುಚ್ಚುವೆ
ಪುಸ್ತಕವ
ಇದೇ ವಸಂತದಲ್ಲಿ ನಿನ್ನಿಂದ

ಪಾರ್ಕಿನಲ್ಲಿ ಓದುವುದು ನನಗಿಷ್ಟ
ನನ್ನ ಮಗಳು ಹಾಡುತ್ತಿರಲು ಅಲ್ಲಿ

4
ರೆಂಬೆಯ ಮೇಲೆ ಕೂತಿರುವ
ಮೂಲ: I can draw the dead thrush

ರೆಂಬೆಯ ಮೇಲೆ ಕೂತಿರುವ ಸತ್ತ ಕೋಗಿಲೆಯ
ಚಿತ್ರವನ್ನು ನಾನು ಮತ್ತೊಮ್ಮೆ ಬಿಡಿಸಬಲ್ಲೆ,
ನಾನು ನಡೆಸಲು ಇಷ್ಟಪಡುತ್ತಿದ್ದ
ನನ್ನ ಮೊದಲ ನಾಯಿಯನ್ನು ಬಿಡಿಸಬಲ್ಲೆ,
ನಾನು ಬಾಲ್ಯಕಳೆದ ಬೀದಿಯಲ್ಲಿನ
ಗುಲಾಬಿ ಬಣ್ಣದ ಕೋಣೆಯನ್ನು ಬಿಡಿಸಬಲ್ಲೆ,
ನನಗೇನು ಇಷ್ಟವೋ ನಾನದನ್ನು ಬಿಡಿಸಬಲ್ಲೆ.

ಅಪ್ಪನನ್ನು ತರುಣನಂತೆ ಬಿಡಿಸಬಲ್ಲೆ.
ಅಜ್ಜಿಯನ್ನು ಬದುಕಿರುವಂತೆ ಬಿಡಿಸಬಲ್ಲೆ.
ಕಾಯಿಲೆಬಿದ್ದವರನ್ನು ಆರೋಗ್ಯವಂತರಂತೆ ಬಿಡಿಸಬಲ್ಲೆ.
ನಾನು ಯಾವುದನ್ನು ಬೇಕಾದರೂ ಬಿಡಿಸಬಲ್ಲೆ
ಯಾರಿಂದಲೂ ನನ್ನನ್ನು ತಡೆಯಲಿಕ್ಕಾಗಲ್ಲ.

ನಾನು ದೇವದೂತರ ಚಿತ್ರಗಳನ್ನು ಬಿಡಿಸಬಲ್ಲೆ,
ನಾನು ದೆವ್ವಗಳ ಚಿತ್ರಗಳನ್ನು ಬಿಡಿಸಬಲ್ಲೆ
ನಾನು ಯಾರನ್ನೆಲ್ಲಾ ಪ್ರೀತಿಸುತ್ತೇನೋ
ಅವರೆಲ್ಲರ ಚಿತ್ರಗಳನ್ನು ಬಿಡಿಸಬಲ್ಲೆ,
ಮತ್ತೆ ದೂರ ಹೋದವರ ಚಿತ್ರಗಳನ್ನು ಕೂಡ,
ಮತ್ತೆ ನನ್ನನ್ನು ಪ್ರೀತಿಸದವರು
ಅವರಿಂದ ವಾದಿಸಲಾಗದು.

5
ಮೋಡಗಳಲ್ಲಿ ಪ್ರಾತೋಪಹಾರ
ಮೂಲ: Breakfast in the Clouds

ಕೆಲವೊಮ್ಮೆ ಎಷ್ಟು ಖುಷಿ ಅನಿಸುತ್ತದೆಂದರೆ
ನಾವು ಇನ್ನೂ ಹೆಚ್ಚು ಮಕ್ಕಳನ್ನು ಹುಟ್ಟಿಸಬಹುದು.
ನಾಯಿಗಳು, ಬೆಕ್ಕುಗಳು, ಇಲಿಗಳು,
ಸಾಕುಮೀನುಗಳು, ಅರೆಮರುಳು ಮುತ್ತಜ್ಜಿಯರು,
ಎರಡೋ ಮೂರೊ ಟೆಂಟುಗಳು,
ಹಿಮಹಾವುಗೆಗಳು, ಒಂದು ಕಂಪ್ಯೂಟರ್,
ಹಲವು ಮಾನಿಟರ್-ಗಳು,
ಎಲ್ಲವನ್ನೂ ಹೇರಿಕೊಂಡು ಜತೆಗೊಯ್ಯೋಣ.

ಹುಲ್ಲಿನ ಮೇಲೆ ಪ್ರಾತೋಪಹಾರ ಮಾಡೋಣ,
ಮೋಡಗಳ ಮಧ್ಯೆ ಎಂದರೆ ಮತ್ತೂ ಒಳ್ಳೆಯದು.
ಪಿಕ್ನಿಕ್-ಗೆ ಬೇಕಾದ ಉಪಕರಣಗಳನ್ನು ಕೊಳ್ಳೋಣ,

ಜತೆಗೆ ಗಟ್ಟಿಯಾದ ಕೊಕ್ಕೆಗಳು ಕೊಳ್ಳೋಣ,
ಹಗ್ಗ ನಮ್ಮನ್ನು ಎತ್ತಬೇಕಲ್ಲ
ಮೇಲೆ ಆಕಾಶಕ್ಕೆ ಭದ್ರವಾಗಿ.
ಮೋಡಗಳಲ್ಲಿ ನಾವು ಸಾಸೇಜುಗಳನ್ನು ಕರೆಯೋಣ
ಎಂದಿನಂತೆ.
ಮತ್ತೆ
ಆಕಾಶದಲ್ಲಿ ನನ್ನ ನಗ್ನ ಚಿತ್ರ
ತೆಗೆಯುವೆ ನೀನು
ಅವರೆಲ್ಲರೂ ಮೋಡಗಳಲ್ಲಿ ನಿದ್ದೆಹೋದ ಮೇಲೆ

ಮಕ್ಕಳು,
ನಾಯಿಗಳು, ಬೆಕ್ಕುಗಳು, ಇಲಿಗಳು,
ಸಾಕುಮೀನುಗಳು, ಅರೆಮರುಳು ಮುತ್ತಜ್ಜಿಯರು.