ನಾನು ದೊಡ್ಡಣ್ಣ ಅವರನ್ನು ಗುರುತಿಸಿದ ಕೊಡಲೇ ಅವರಿಗೆ ನಾನು ಕನ್ನಡಿಗ ಅಂತ ಗೊತ್ತಾಗಿ ಹೋಯ್ತು.. ಅವರು ನನ್ನ ಕೈ ಹಿಡಿದುಕೊಂಡು ನೀವು ಕನ್ನಡದವರ? ಬನ್ನಿ ಬನ್ನಿ ಅಂತ ಅಲ್ಲಿಯೇ ಹತ್ತಿರದಲ್ಲಿದ್ದ ಬೆಂಚ್ ಮೇಲೆ ಕೂತು ನನ್ನನ್ನೂ ಜೊತೆಯಲ್ಲಿ ಕೂಡಿಸಿಕೊಂಡರು. ಇದೆಲ್ಲವನ್ನೂ ನೋಡುತ್ತಿದ್ದ ನನ್ನ ಅಣ್ಣ ಇದ್ಯಾವುದರ ಪರಿವೆಯೇ ಇಲ್ಲದಂತೆ ನಿಂತಿದ್ದ. ಎಷ್ಟೋ ವರ್ಷಗಳ ಹಿಂದೆಯೇ ಅಮೆರಿಕೆಗೆ ಬಂದಿದ್ದ ಅವನಿಗೆ ದೊಡ್ಡಣ್ಣ ಅವರ ಪರಿಚಯ ಇದ್ದೀತು ಎಂಬ ನಂಬಿಕೆ ನನಗಿರಲಿಲ್ಲ. ನಾನಂತೂ ಅವರನ್ನು ಭೇಟಿಯಾದ ಈ ಅಪೂರ್ವ ಗಳಿಗೆಯ ಪೂರ್ತಿ ಸುಖವನ್ನು ಅನುಭವಿಸುತ್ತಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತಾರನೆಯ ಬರಹ

ನಯಾಗರದ ಉದ್ಯಾನವನದ ಕಾಲುದಾರಿಯಲ್ಲಿ ಎದುರಿಗೆ ಸಿಕ್ಕ ದೈತ್ಯಾಕಾರದ ವ್ಯಕ್ತಿಯನ್ನು ನೋಡಿ ಆಶ್ಚರ್ಯಚಕಿತನಾಗಿ ನನ್ನ ಕಣ್ಣನ್ನೇ ನಂಬದಂತೆ ನಿಂತೆ! ಅದೇ ಚಿರಪರಿಚಿತ ಮುಖ, ನಿಷ್ಕಲ್ಮಶ ನಗು.. ಆದರೂ ಒಂದು ಸಣ್ಣ ಸಂಶಯ. ಪಕ್ಕದಲ್ಲಿದ್ದ ಆಶಾಳ ಕಡೆಗೂ ನೋಡಿದೆ. ಅವಳಿಗೆ ನನ್ನ ದ್ವಂದ್ವ ಅರ್ಥವಾಗಿ ಹೌದು ಅವರು ದೊಡ್ಡಣ್ಣನೇ ಅಂದಳು! ಕನ್ನಡ ಚಿತ್ರರಂಗದ ಹಿರಿಯ ಕಲಾವಿದರೂ ಹಾಗೂ ಸಜ್ಜನರೂ ಆದ ದೊಡ್ಡಣ್ಣ ಅವರು ಹೋಗಿ ಹೋಗಿ ಅಮೆರಿಕೆಯಲ್ಲಿ ಹೀಗೆ ಎದುರಿಗೆ ಸಿಕ್ಕಾಗ ನನ್ನ ಪರಿಸ್ಥಿತಿ ಏನಾಗಬೇಡ!

ಅವರನ್ನು ಕಂಡಿದ್ದ ಖುಷಿ, ನಯಾಗರ ಜಲಪಾತ ಕೊಟ್ಟ ಖುಷಿಗಿಂತ ಮಿಗಿಲಾಗಿತ್ತು. ಅವರ ಜೊತೆಗೆ ರಾಕ್‌ಲೈನ್ ವೆಂಕಟೇಶ್ ಕೂಡ ಇದ್ದರು. ನಾನು ದೊಡ್ಡಣ್ಣ ಅವರನ್ನು ಗುರುತಿಸಿದ ಕೊಡಲೇ ಅವರಿಗೆ ನಾನು ಕನ್ನಡಿಗ ಅಂತ ಗೊತ್ತಾಗಿ ಹೋಯ್ತು.. ಅವರು ನನ್ನ ಕೈ ಹಿಡಿದುಕೊಂಡು ನೀವು ಕನ್ನಡದವರ? ಬನ್ನಿ ಬನ್ನಿ ಅಂತ ಅಲ್ಲಿಯೇ ಹತ್ತಿರದಲ್ಲಿದ್ದ ಬೆಂಚ್ ಮೇಲೆ ಕೂತು ನನ್ನನ್ನೂ ಜೊತೆಯಲ್ಲಿ ಕೂಡಿಸಿಕೊಂಡರು. ಇದೆಲ್ಲವನ್ನೂ ನೋಡುತ್ತಿದ್ದ ನನ್ನ ಅಣ್ಣ ಇದ್ಯಾವುದರ ಪರಿವೆಯೇ ಇಲ್ಲದಂತೆ ನಿಂತಿದ್ದ. ಎಷ್ಟೋ ವರ್ಷಗಳ ಹಿಂದೆಯೇ ಅಮೆರಿಕೆಗೆ ಬಂದಿದ್ದ ಅವನಿಗೆ ದೊಡ್ಡಣ್ಣ ಅವರ ಪರಿಚಯ ಇದ್ದೀತು ಎಂಬ ನಂಬಿಕೆ ನನಗಿರಲಿಲ್ಲ. ನಾನಂತೂ ಅವರನ್ನು ಭೇಟಿಯಾದ ಈ ಅಪೂರ್ವ ಗಳಿಗೆಯ ಪೂರ್ತಿ ಸುಖವನ್ನು ಅನುಭವಿಸುತ್ತಿದ್ದೆ.

(ರಾಕ್‌ಲೈನ್‌ ವೆಂಕಟೇಶ್‌ ಹಾಗೂ ದೊಡ್ಡಣ್ಣನವರೊಂದಿಗೆ ನಾನು)

ಯಾವಾಗ ಬಂದ್ರಿ ಸರ್ ಇಲ್ಲಿಗೆ? ಯಾವುದಾದ್ರೂ ಶೂಟಿಂಗ್ ಇತ್ತಾ ಅಂತ ಕೇಳಿದೆ…

ಅಕ್ಕ ಸಮ್ಮೇಳನಕ್ಕೆ ಬಂದಿದ್ದೆವು. ಹಾಗೆಯೇ ಈ ಜಲಪಾತ ನೋಡೋಣ ಅಂತ ಬಂದ್ವಿ ಅಂತ ವೆಂಕಟೇಶ್ ಹೇಳಿದರು.

ಅಕ್ಕ (AKKA – Association of Kannada Kootas of America) ಎಂಬುದು ಅಲ್ಲಿನ ಕನ್ನಡಿಗರ ಒಂದು ಒಕ್ಕೂಟ. ಅಮೆರಿಕೆಯಲ್ಲಿ ಆಗಾಗ ನಡೆಯುವ ಅವರ ಸಮ್ಮೇಳನಗಳಿಗೆ ಕನ್ನಡದ ಪ್ರಸಿದ್ಧ ಕಲಾವಿದರನ್ನು ಹಾಗೂ ಸಾಹಿತಿಗಳನ್ನು ಕರೆಸುತ್ತಿರುತ್ತಾರೆ. ಅನಿವಾಸಿ ಭಾರತೀಯರಿಗೆ ದಕ್ಕುವ ಹಲವಾರು ಸವಲತ್ತುಗಳಲ್ಲಿ ಇದೂ ಒಂದು. ಎಷ್ಟೋ ತಾರೆಯರನ್ನು ಕಣ್ಣಾರೆ ಕಾಣುವ ಹಾಗೂ ಅವರ ಜೊತೆಗೆ ಒಡನಾಡುವ ಭಾಗ್ಯ ಅವರಿಗೆ ಪದೆ ಪದೆ ಸಿಗುತ್ತದೆ. ನಾನು ಅಲ್ಲಿದ್ದ ಒಂದೂವರೆ ವರ್ಷದಲ್ಲೇ ಬಿ ಆರ್ ಛಾಯಾ ಅಕ್ಕ ಅವರನ್ನು ಭೇಟಿಯಾಗಿದ್ದೆ, ಇನ್ನೂ ಒಂದ್ಸಲ ವಿಮಾನದಲ್ಲಿ ಕೆರೆಮನೆ ಶಿವಾನಂದ ಹೆಗಡೆ ಹಾಗೂ ಅವರ ಯಕ್ಷಗಾನದ ಪೂರ್ತಿ ತಂಡ ನನ್ನ ಪಕ್ಕದಲ್ಲೇ ಕೂತಿದ್ದರು! ಅವತ್ತು ದೊಡ್ಡಣ್ಣ ಹಾಗೂ ರಾಕ್ಲೈನ್! ಕನ್ನಡಿಗನೊಬ್ಬನನ್ನು ಪರದೇಶದಲ್ಲಿ ಕಂಡಾಗ ಅವರಿಗೂ ನನ್ನಷ್ಟೇ ಖುಷಿ ಆಗಿತ್ತು ಅಂತ ಅವರ ಹಾವಭಾವದಲ್ಲೇ ಗೊತ್ತಾಗಿತ್ತು.

ಹೊರದೇಶಕ್ಕೆ ಹೊಸದಾಗಿ ಹೋದಾಗ ನನಗೂ ಹಾಗೆ ಅನಿಸುತ್ತಿತ್ತು. ಎಲ್ಲೋ ಅಂಗಡಿ, ಮಾಲ್‌ಗಳಂತಹ ಸ್ಥಳಗಳಿಗೆ ಹೋದಾಗ ಯಾರೋ ಕನ್ನಡದಲ್ಲಿ ಮಾತಾಡುತ್ತಾರೆ ಅಂತ ಗೊತ್ತಾದರೆ ಪುಳಕಗೊಳ್ಳುತ್ತಿದ್ದೆ. ಅವರ ಜೊತೆಗೆ ಮಾತನಾಡಿ ನಾನೂ ಕನ್ನಡದವನು ಅಂತ ಹೇಳುತ್ತಿದ್ದೆ. ಕೆಲವರು ಮಾತಾಡೋರು. ಆದರೆ ಬಹಳಷ್ಟು ಜನರು so what ಅನ್ನೋ ಹಾಗೆ ಮುಖ ತಿರುಗಿಸೋರು. ಅಥವಾ ಆಂಗ್ಲ ಭಾಷೆಯಲ್ಲಿಯೇ ಮಾತಾಡೋರು. ಕನ್ನಡದಲ್ಲಿ ಮಾತಾಡಿದರೆ ಮರ್ಯಾದೆ ಹೋಗುತ್ತೆ ಅನ್ನೋ ತರಹ! ಹೀಗಾಗಿ ನಾನು ಹಾಗೆ ಕೇಳೋದನ್ನ ಕ್ರಮೇಣ ನಿಲ್ಲಿಸಿದೆ. ಆದರೆ ಹೀಗೆ ಹೊಸದಾಗಿ ಬಂದವರು ಅಥವಾ ಪ್ರವಾಸಕ್ಕೆ ಅಂತ ಬಂದವರು ಖುಷಿಯಾಗಿ ಮಾತಾಡೋರು. ನಮ್ಮ ಕನ್ನಡಿಗರ ಸಮಸ್ಯೆ ಏನು ಅಂತ ನನಗೆ ಇನ್ನೂ ಅರ್ಥವಾಗಿಲ್ಲ. ಬೆಂಗಳೂರಿನಲ್ಲಿ ಕೂಡ ಎಷ್ಟೋ ಸಲ ನನಗೆ ಅಂತಹ ಅನುಭವಗಳು ಆಗಿವೆ. ನಾನು ಕನ್ನಡದಲ್ಲಿ ಮಾತಾಡಲು ಶುರು ಮಾಡಿದ ಕೂಡಲೇ ಬಹಳಷ್ಟು ಜನ ಆಂಗ್ಲ ಭಾಷೆಯಲ್ಲಿಯೇ ಉತ್ತರಿಸುತ್ತಾರೆ. ನಮ್ಮವರಿಗೆ ಕನ್ನಡ ಮಾತಾಡಲು ಕೀಳರಿಮೆಯೇ? ಅಥವಾ ಕನ್ನಡದಲ್ಲಿ ಮಾತಾಡುವವರು ಗವಾರರು ಅಂತ ಅಂದುಕೊಳ್ಳುತ್ತಾರೋ ಏನೋ!?

ಅಂತೂ ರಾಕ್ಲೈನ್ ಹಾಗೂ ದೊಡ್ಡಣ್ಣ ಇಬ್ಬರ ಜೊತೆಗೆ ಕುಳಿತುಕೊಂಡು ಫೋಟೋ ತೆಗೆಸಿಕೊಂಡೆವು. ಅವರ ಬಗ್ಗೆ ಎಳ್ಳಷ್ಟೂ ಗೊತ್ತಿರದ ನನ್ನಣ್ಣ, ನೀನು ಹೋಗಿ ಕೂತುಕೋ, ನಾನು ಫೋಟೋ ತೆಗೆಯುತ್ತೇನೆ ಅಂತ ಅಂದ. ಕೊನೆಗೂ ನಯಾಗರ ಪ್ರವಾಸದಲ್ಲಿ ಒಂದು ಖುಷಿ ಸಿಕ್ಕಿತ್ತು! ಅಲ್ಲೊಂದಿಷ್ಟು ಅಯಸ್ಕಾಂತದ ಸ್ಮರಣಿಕೆಗಳನ್ನು ಕೂಡ ಕೊಂಡೆವು. ವಾಪಸ್ಸು ಮತ್ತೆ ಮೂರು ಗಂಟೆಗಳ ಡ್ರೈವ್ ಇತ್ತು. ಅಣ್ಣನ ಕಾಲುಗಳು ಮಾತಾಡಲು ತೊಡಗಿದ್ದು ಅವನ ಮುಖದಲ್ಲಿ ಸ್ಪಷ್ಟವಾಗಿ ತೋರುತ್ತಿತ್ತು. ಈಗಾಗಲೇ ಕಾರ್ ಓಡಿಸಿ, ಅಡ್ಡಾಡಿ ಅವನ ಮೊಳಕಾಲ ನೋವು ಇನ್ನಷ್ಟು ಉಲ್ಪಣಿಸಿತ್ತು ಅಂತ ಕಾಣುತ್ತೆ. ಈ ಸಲ ನಾನೇ ಕಾರ್ ಓಡಿಸುತ್ತೇನೆ ಅಂತ ಸ್ವಲ್ಪ ಬಲವಂತವಾಗಿಯೇ ಹೇಳಿ ಅವನ ಕೈಯಿಂದ ಕೀಲಿಕೈ ತೆಗೆದುಕೊಂಡೆ. ಅಲ್ಲಿಂದ ಕ್ಲಿವ್‌ಲ್ಯಾಂಡ್‌ವರೆಗೆ ನಾನೆ ಕಾರ್ ಓಡಿಸಿಕೊಂಡು ಹೊರಟೆ. ನಾನು ಸಹಜವಾಗಿ ಕಾರ್ ಚಲಾಯಿಸುವುದನ್ನು ನೋಡಿ ಅವನಿಗೆ ಆಶ್ಚರ್ಯ ಆಯಿತು.

ಏ ಚ್ಹೋಲೋ ಹೊಡೀತಿ ಬಿಡು.. I didn’t know you could drive so well.. ಅಂತ ಹಲವು ಬಾರಿ ನನ್ನನ್ನು ಹೊಗಳಿದ. ಅರೆ ಬೆಂಗಳೂರಿನಲ್ಲಿ ಕಾರ್ ಓಡಿಸಿದ ನನಗೆ ಅಮೆರಿಕೆ ಯಾವ ಲೆಕ್ಕ?! ಅಲ್ಲಿ ಕಾರ್ ಓಡಿಸುವುದು ತುಂಬಾ ಸುಲಭ. ಗೇರ್ ಇಲ್ಲ, ಕ್ಲಚ್ ಇಲ್ಲ, ಒಂದೇ ಸಮನಾದ ರಸ್ತೆಗಳು.. ಅದೇನು ಮಹಾ ಅನ್ನುತ್ತಲೇ ಓಡಿಸುತ್ತಾ ಇದ್ದೆ. ಅಷ್ಟೊತ್ತಿಗೆ ಕತ್ತಲು ಆಯ್ತು. ಅಲ್ಲಿ ಹೈ ಬೀಮ್ ಹೆಡ್ಲೈಟ್ ಹಾಕುವುದು ನಿಷಿದ್ಧ. ಬೆಂಗಳೂರಿನಲ್ಲಿ ಹೈ ಬೀಮ್ (ಕಣ್ಣಿಗೆ ರಾಚುವಂತೆ ಬಹು ದೂರದವರೆಗೆ ಬೀಳುವ ಲೈಟು) ಹಾಕಿಯೇ ಓಡಿಸುವ ಭೂಪರು ಸಾಕಷ್ಟಿದ್ದಾರೆ. ಆದರೆ ಅಲ್ಲಿ ಹಾಗೆ ಮಾಡಿದರೆ ದಂಡ ಬೀಳುತ್ತೆ. ಆದರೆ ನಾವು ಹೊರಟಿದ್ದ ದಾರಿ ಸ್ವಲ್ಪ ತಿರುವು ಮುರುವು ಇದ್ದ ಕಾರಣ ಮುಂದಿನ ದಾರಿ ಕಾಣಬೇಕು ಅಂದರೆ ಕೆಲವು ಕಡೆಯಲ್ಲಿ ಹೈ ಬೀಮ್ ಹಾಕಬಹುದು ಅಂತ ಅಣ್ಣ ಹೇಳಿದ. ಅಂತೂ ಸುರಕ್ಷಿತವಾಗಿ ಮನೆ ಮುಟ್ಟಿದೆವು. ನನ್ನ ಡ್ರೈವಿಂಗ್ ಕೌಶಲ್ಯದ ಬಗ್ಗೆ ಅತ್ತಿಗೆ ಎದುರು ಮತ್ತೊಮ್ಮೆ ಹೊಗಳಿದ ಅಣ್ಣ. ಅವನ ಮನೆಯಲ್ಲಿದ್ದ basement (ಕೆಳಕೋಣೆ) ನಲ್ಲಿ ಬೆಚ್ಚಗೆ ಮಲಗಿದೆವು. ತನ್ನನ್ನು ತಾನೇ ಜಗತ್ತಿನ ದೊಡ್ಡಣ್ಣ ಅಂತ ಕರೆದುಕೊಳ್ಳುವ ಅಮೆರಿಕದಲ್ಲಿ ನಮ್ಮ ಪ್ರೀತಿಯ ದೊಡ್ಡಣ್ಣ ಅವರ ಭೇಟಿ ಖುಷಿ ಕೊಟ್ಟಿತ್ತು.

*****

ಮುಂದೆ ಇನ್ನೊಂದೆರಡು ಮೂರು ದಿನ ಅಲ್ಲಿಯೇ ಸುತ್ತಲಿನ ಸ್ಥಳಗಳ ವೀಕ್ಷಣೆ ಮಾಡಿದೆವು. ಅದರಲ್ಲಿ ಒಂದು ಬ್ರಾಂಡಿ ವೈನ್ ಎಂಬ ನದಿ. ಅದರ ಹೆಸರಿನಲ್ಲಿ ಬ್ರಾಂಡಿನೂ ಇದೆ ವೈನ್ ಕೂಡ ಇದೆ. ನಮ್ಮ ಕಡೆ ಯಾರಾದರೂ ಯಾವುದೋ ಒಂದು ಖುಷಿಗೆ ಬೇರೆಯವರಿಗೆ ಪಾರ್ಟಿ ಕೊಡಬೇಕು ಅನಿಸಿದರೆ “ಹೊಳಿ ಅಲ್ಲ ಹೆಂಡಾ ಹರಸ್ತೀನಿ” ಅಂತಾರೆ. ಅಂದರೆ ಹೆಂಡದ ಹೊಳೆಯನ್ನೇ ಹರಿಸುತ್ತೇನೆ, ಎಷ್ಟು ಬೇಕಾದರೂ ಕುಡಿಯಿರಿ ಎಂಬುದು ಅದರ ಅರ್ಥ. ಈ ನದಿಯ ಹೆಸರು ಕೇಳಿ ಇದೂ ಅಂತಹ ನದಿಯೇ ಇರಬೇಕು ಅಂತ ತಮಾಷೆ ಮಾಡಿದೆ. ಆದರೆ ಅಲ್ಲಿ ಬರೀ ನೀರು ಹರಿಯುತ್ತಿತ್ತು! ಅದು ಕೈಹೊಗ ನದಿಯ ಉಪನದಿ. ಆ ನದಿಯ ಹರಿವನ್ನು ನೋಡಲು ಹೋಗುವ ದಾರಿಯಲ್ಲಿ ಕಟ್ಟಿಗೆಗಳಿಂದ ಕೂಡಿದ ಮೆಟ್ಟಿಲುಗಳನ್ನು ಮಾಡಿದ್ದರು. ಅದು ಕಲ್ಲು ಬಂಡೆಗಳಿಂದ ಕೂಡಿದ ಏರಿಳಿತದ ದಾರಿ ಆಗಿದ್ದರಿಂದ ಅಂತಹ ಒಂದು ವ್ಯವಸ್ಥೆ ಎಲ್ಲರಿಗೂ ಅಡ್ಡಾಡಲು ಅನುಕೂಲ ಮಾಡಿಕೊಟ್ಟಿತ್ತು. ಅಮೆರಿಕನ್ನರು ಹಾಗೆಯೇ, ಎಲ್ಲವನ್ನೂ ಸುಲಭ ಹಾಗೂ ಆರಾಮದಾಯಕ ಮಾಡಿಕೊಳ್ಳುತ್ತಾರೆ. ಅವರ ಡಬ್ಬಗಳು, ಬಾಟಲಿಗಳು ಹೀಗೆ ಯಾವುದೇ ಸಾಧನಗಳೇ ಇದ್ದರೂ ಅವುಗಳನ್ನು ತೆರೆಯಲು ತುಂಬಾ ಗುದ್ದಾಟ ಮಾಡುವ ಪ್ರಶ್ನೆಯೇ ಇಲ್ಲ.

ಅಲ್ಲಿಯೇ ಹತ್ತಿರದಲ್ಲಿ ಒಂದು ದೊಡ್ಡ ವಸ್ತು ಸಂಗ್ರಹಾಲಯ ಕೂಡ ಇತ್ತು. ಅದರ ಹೆಸರು ಕ್ಲೀವ್‌ಲ್ಯಾಂಡ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ. ಅಲ್ಲಿ ಎಷ್ಟೋ ಜೀವಿಗಳ ಪಳಿಯುಳಿಕೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಅನೇಕ ಹಿಂದೂ ದೇವತೆಗಳ ವಿಗ್ರಹಗಳನ್ನು ಕೂಡ ಅಲ್ಲಿ ನೋಡಿದೆವು. ಅವು ಹೇಗೆ ಅಲ್ಲಿಗೆ ಬಂದವು ಎಂಬುದೇ ಒಂದು ವಿಚಿತ್ರ.

ಅಲ್ಲೂ ಕೂಡ ಚಳಿಗಾಲದಲ್ಲಿ ವಿಪರೀತ ಹಿಮ ಬೀಳುತ್ತಂತೆ. ಹೀಗಾಗಿ ಆ ಸಮಯದಲ್ಲಿ ವಲಸೆ ಹಕ್ಕಿಯ ತರಹ ನನ್ನ ಅಣ್ಣ ಭಾರತಕ್ಕೆ ಬಂದುಬಿಡುತ್ತಾನೆ! ಅಲ್ಲಿ ಕಳೆದ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅವರೆಲ್ಲರಿಗೂ ವಿದಾಯ ಹೇಳಿ ಓಮಾಹಕ್ಕೆ ವಾಪಸ್ಸು ಬಂದೆವು. ಅಷ್ಟೊತ್ತಿಗೆ ನನ್ನ ಕಂಪೆನಿಯಲ್ಲಿ ನನಗೊಬ್ಬ ಹೊಸ ಬಾಸ್ ಬಂದಿದ್ದ. ಅವನ ಹೆಸರು ರಾನ್ ಡೆಕಾರ್ಡ್…

(ಮುಂದುವರಿಯುವುದು…)
(ಹಿಂದಿನ ಕಂತು:ದೂರದೂರಲ್ಲಿ ಸಿಕ್ಕನು ಅಣ್ಣ)