ಸಿಸ್ಟರ್ ಲಾರೆನ್ಸಿಯ ಅವರಿಗೆ ಗಾರ್ಡೆನಿಂಗ್ ಅಂದರೂ ಇವರಿಗೆ ಬಹಳ ಇಷ್ಟವಿತ್ತು. ನಮ್ಮ ತರಗತಿಯ ಮುಂದೆ ಇದ್ದ ಹೂತೋಟದಲ್ಲಿ ಚಂದದ ಗಿಡಗಳನ್ನು ಬೆಳೆಸಿದ್ದರು. ಅದರಲ್ಲಿ ದಾಳಿಂಬೆ ಬಣ್ಣದ ಪಾಪಿ ಹೂಗಳು ಅರಳುತ್ತಿದ್ದುದನ್ನು ಅದರ ನಯವಾದ ಎಸಳುಗಳನ್ನು ಇವತ್ತಿಗೂ ಮರೆಯಲಾಗುತ್ತಿಲ್ಲ. ತಮ್ಮ ತಲೆಯ ವಸ್ತ್ರವನ್ನು ಸರಿ ಮಾಡಿಕೊಂಡು ಬಗ್ಗಿ ಕೆಲಸ ಮಾಡುತ್ತಿದ್ದರು. “ಮುಂದೆ ಮಿಡ್ಲ್ ಸ್ಕೂಲಿಗೆ ಹೋಗುತ್ತೀರ ಚಂದ ಕಲಿತು ಹೋಗಬೇಕು” ಎಂದು ಪದೇ ಪದೇ ಹೇಳುತ್ತಿದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ನಾಲ್ಕನೆಯ ಬರಹ

ಮಳೆಗಾಲ ಪ್ರಾರಂಭ ಅಂದರೆ ಕೃಷಿ ಕೆಲಸ ಪ್ರಾರಂಭ ಎಂದು ಪ್ರತ್ಯೇಕ ಹೇಳಬೇಕಿಲ್ಲ! ಅದರ ನಡುವೆ ಬರುವ ‘ಆಟಿ ಅಥವಾ ಆಷಾಢ ಮಾಸದ’ ಆಚರಣೆ ಪ್ರಾದೇಶಿಕ ಭಿನ್ನತೆಯನ್ನು ಹೊಂದಿರುವಂಥದ್ದು. ಈ ಬಾರಿ ಕೊಡಗಿನ ವಿಶೇಷ ಆಚರಣೆಯ ಬಗ್ಗೆ ಹೇಳುವುದಿತ್ತು. ಆದರೆ ಅದಕ್ಕೂ ಮೊದಲು ಶಾಲೆಯಲ್ಲಿ ನಮ್ಮ ಬರವಣಿಗೆಯನ್ನು ಅಂದಗಾಣಿಸಲು ಶ್ರಮಿಸಿದ ಸಿಸ್ಟರ್ ಕುರಿತು ಮೊದಲು ಹೇಳಿಬಿಡುವೆ.

ಎತ್ತರ ನಿಲುವಿನ ಗಂಭೀರ ಮಾತುಗಳ ಮಾತೃ ಹೃದಯದ ಸಿಸ್ಟರ್ ಲಾರೆನ್ಸಿಯಾ.. ಬಲಗೈಯಲ್ಲಿ ಕೊಡೆ ಎಡಗೈಯಲ್ಲಿ ಒಂದು ಡೈರಿ ಜೊತೆಗೆ ಪೆನ್ಸಿಲ್ ಪೌಚ್ ಹಿಡಿದು ಬಾಗಿ ಬಾಗಿ ಬರುತ್ತಿದ್ದ ಸಿಸ್ಟರ್ ಲಾರೆನ್ಸಿಯ ನಡಿಗೆ ಇನ್ನೂ ನನ್ನ ಕಣ್ಣ ಮುಂದೆ ಸಾಗುತ್ತಿದೆ. ಮಕ್ಕಳು ಅವರನ್ನು ನೋಡಬೇಕಾದರೆ ಕತ್ತನ್ನು ಆದಷ್ಟು ಚಾಚಿ ನೋಡಬೇಕಿತ್ತು. ಶಾಲಾ ಕೊಠಡಿಯ ಕುರ್ಚಿಯಲ್ಲಿ ಕುಳಿತರೂ ಕಾಲು ಚಾಚಿ ಕುಳಿತುಕೊಳ್ಳುತ್ತಿದ್ದರು. ಬೋರ್ಡಿನಲ್ಲಿ ಉದ್ದ ಸ್ಕೇಲಿನಿಂದ ಇಂಗ್ಲಿಷ್ ಕಾಪಿ ಪುಸ್ತಕದಲ್ಲಿರುವಂತಹ ನಾಲ್ಕು ಗೆರೆಗಳನ್ನು ಎಳೆದು ಇಂಗ್ಲಿಷ್ ಅಕ್ಷರಗಳನ್ನು ಸರಿಯಾಗಿ ಬರೆಯುವುದನ್ನು ಹೇಳಿಕೊಟ್ಟವರು ಇವರು. ಮೊದಲಿಗೆ ಕ್ಯಾಪಿಟಲ್ ಲೆಟರ್ ನಂತರ ಸ್ಮಾಲ್ ಲೆಟರ್ ಮತ್ತೆ ಕ್ಯಾಪಿಟಲ್ ಸ್ಮಾಲ್ ಅಕ್ಷರಗಳನ್ನು ಜೊತೆ ಜೊತೆಯಾಗಿ ಬರೆಯುತ್ತಿದ್ದರು. ನಾಲ್ಕನೆ ತರಗತಿ ಅದೂ ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಅನ್ನುವ ಕಾರಣಕ್ಕೆ ಇಂಗ್ಲಿಷ್ ಅಕ್ಷರಗಳನ್ನು ಕೂಡಿಸಿ ಬರೆಯುವ ರೀತಿಯನ್ನು ಶಿಸ್ತಾಗಿ ಹೇಳಿಕೊಟ್ಟ ಮೊದಲಿಗರಿವರು.

ಅವರ ಕೈಯಲ್ಲಿ ಇರುತ್ತಿದ್ದ ನಾಗರ ಬೆತ್ತ ದೂರದಿಂದ ನಮಗೆಲ್ಲಾ ಚಿಕ್ಕದು ಅನ್ನಿಸುತ್ತಿತ್ತು. ಸರದಿ ಪ್ರಕಾರ ಬರೆದ ಅಕ್ಷರಗಳನ್ನು ತೋರಿಸ ಹೋದಾಗ ದುತ್ತನೆ ದೊಡ್ಡದಾಗಿ ಕಾಣಿಸುತ್ತಿತ್ತು. ತಪ್ಪಾಗಿದ್ದರೆ ಎಡಗೈಯಲ್ಲಿ ಸ್ಕರ್ಟ್ ಹಿಡಿದು ಬಾರಿಸುತ್ತಿದ್ದರು. ಅದೇ ತಕ್ಷಣ ಅವರ ಮುಖ ನೋಡಿದರೆ “ಅಯ್ಯೋ! ಹೊಡೆಯಬಾರದಾಗಿತ್ತು ಪೆಟ್ಟಾಯಿತೆ” ಎಂದು ಮೌನವಾಗಿಯೇ ಕೇಳುತ್ತಿದ್ದಾರೇನೋ ಅನ್ನಿಸುತ್ತಿತ್ತು. ಕೆಲ ದಿನಗಳ ನಂತರ ಅಕ್ಷರ ಕಲಿತು ಪದಗಳನ್ನು ನೋಡದೆ ಬರೆದು ತೋರಿಸಿ “GOOD” ಎಂದು ಹಾಕಿಸಿಕೊಳ್ಳುವ ದಿನಗಳು ಬಂದೇ ಬಿಟ್ಟವು. ನನಗೂ ನನ್ನ ಹೆಸರನ್ನು ಇಂಗ್ಲಿಷಿನಲ್ಲಿ ಬರೆದುಕೊಳ್ಳಬೇಕು ಅನ್ನಿಸಿ ಹೊಸ ರಫ್ ನೋಟ್ ಮಾಡಿ ಅದಕ್ಕೊಂದು ರ್ಯಾಪರ್ ಹಾಕಿ ‘SOMA’ ಎಂದು ಬರೆದುಕೊಂಡು ಅದನ್ನು ಕರೆಕ್ಷನ್‌ಗೆ ಕೊಟ್ಟೇ ಬಿಟ್ಟೆ. ಕರೆಕ್ಷನ್ ಮಾಡುವಾಗ ಹೆಸರನ್ನು ನೋಡಿ “ಯಾರದು ಸೋಮ” ಎಂದರು. ಕ್ಷಣ ಕಾಲ ಎಲ್ಲರೂ ಮುಖ ಮುಖ ನೋಡಿಕೊಂಡರು. ಯಾರೂ ಎದ್ದೇಳಲಿಲ್ಲ. ಆಗ ಸಿಸ್ಟರ್ ನಿನ್ನದೆ ನೋಟ್ಸ್ ಬಾ “ಎಂದು ಕರೆದು “ಸೋ…….ಮ… ಅಲ್ಲ!” Suma, 4th standard, ‘A’ Section, St.Joseph’s School, Madikeri. ಎಂದು ಬರೆದುಕೊಟ್ಟು “ನಾಳೆ ಇಷ್ಟನ್ನು ನೋಡದೆ ಬರೆಯಲು ಕಲಿತುಕೊಂಡು ಬರಬೇಕು” ಎಂದರು. ಅದನ್ನು ನನ್ನ ಸಹಪಾಟಿಗಳೆಲ್ಲ ಇಣುಕಿ ಇಣುಕಿ ನೋಡುತ್ತಿದ್ದರು. ನಮ್ಮ ನೋಟ್ಸಿನಲ್ಲಿ ಅವರಿಂದ ಬರೆಸಿಕೊಳ್ಳಬೇಕು ಅನ್ನುವ ಆಸೆ ಕಾರಣ ಅವರು ಬಳಸುತ್ತಿದ್ದ ಕೆಂಪು ಇಂಕಿನ ಬಣ್ಣ ಅಷ್ಟು ಚಂದ ಇತ್ತು. ಅವರು ಇಂಕ್ ಹಾಕಿಕೊಳ್ಳಬೇಕಾದರೆ ಡಸ್ಟರ್ ಮೇಲೆ ಪೆನ್ನಿಟ್ಟು ಇಂಕ್ ಹಾಕಿಕೊಳ್ಳುತ್ತಿದ್ದರು. ಕೆಂಪು ನೀಲಿ ಇಂಕಿನ ಬಣ್ಣ ಚಾಕ್ ಪೀಸಿನ ಕಲರ್ ಕೊಲಾಜ್ ಆಗಿ ತುಂಬಾ ಚಂದ ಅನ್ನಿಸುತ್ತಿತ್ತು. ಅಸಲಿಗೆ ಇಂಕ್ ಪೆನ್ನಿನಲ್ಲಿ ಬರೆಯಲು ಅಭ್ಯಾಸ ಮಾಡಿಸಿದ್ದೂ ಸಹ ಅವರೆ. ನಮ್ಮ ಬರವಣಿಗೆ ಚೆನ್ನಾಗಿ ಆಗಬೇಕು ಅನ್ನುವ ಕಾರಣಕ್ಕೆ ಖಾಲಿ ಹಾಳೆಯ ಹಿಂಬದಿಯಲ್ಲಿ ಅಡ್ಡ ಗೆರೆಗಳಿರುವ ಆಯತಾಕರದ ಗಟ್ಟಿ ಹಾಳೆಯನ್ನು ಇರಿಸಿ ಬರೆಸುತ್ತಿದ್ದರು. ಖಾಲಿ ಹಾಳೆಯಲ್ಲೂ ನೇರವಾಗಿ ಬರೆಯುವುದನ್ನು ಕಲಿಸಬೇಕೆಂದು ಅವರ ಆಸೆ. ಹಾಗೆ ಖಾಲಿ ಹಾಳೆಯಲ್ಲಿ ನಮಗೆ ಬರೆಯ ಹೇಳಿದರೆ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಬೆಟ್ಟ ಹತ್ತುತ್ತಿದ್ದೆವು. ನಾನು ಡಿಗ್ರಿಗೆ ಬಂದಮೇಲೂ ಅವರು ಹೇಳಿಕೊಟ್ಟ ರೀತಿಯಲ್ಲೆ ಬರೆಯುತ್ತಿದ್ದೆ.

ಬಲಗೈಯಲ್ಲಿ ಕೊಡೆ ಎಡಗೈಯಲ್ಲಿ ಒಂದು ಡೈರಿ ಜೊತೆಗೆ ಪೆನ್ಸಿಲ್ ಪೌಚ್ ಹಿಡಿದು ಬಾಗಿ ಬಾಗಿ ಬರುತ್ತಿದ್ದ ಸಿಸ್ಟರ್ ಲಾರೆನ್ಸಿಯ ನಡಿಗೆ ಇನ್ನೂ ನನ್ನ ಕಣ್ಣ ಮುಂದೆ ಸಾಗುತ್ತಿದೆ. ಮಕ್ಕಳು ಅವರನ್ನು ನೋಡಬೇಕಾದರೆ ಕತ್ತನ್ನು ಆದಷ್ಟು ಚಾಚಿ ನೋಡಬೇಕಿತ್ತು. ಶಾಲಾ ಕೊಠಡಿಯ ಕುರ್ಚಿಯಲ್ಲಿ ಕುಳಿತರೂ ಕಾಲು ಚಾಚಿ ಕುಳಿತುಕೊಳ್ಳುತ್ತಿದ್ದರು.

ಇಂದಿಗೂ ನಾವು ಬರೆಯುವ ಅಕ್ಷರಗಳು ನೆಟ್ಟಗೋ? ಸೊಟ್ಟಗೋ? ಗೊತ್ತಿಲ್ಲ! ಆದರೆ ಅದನ್ನು ಹೇಳಿಕೊಟ್ಟ ಸಿಸ್ಟರ್ ಇನ್ನಿಲ್ಲ ಎಂದು ಗೊತ್ತಾದಾಗ ಎರಡು ಮೂರು ದಿನ ಖಾಲಿ ಖಾಲಿ ಅನ್ನಿಸಿತ್ತು. 23-6-2023 ಅವರಿಗೆ ಅಂತಿಮ ನಮನಗಳನ್ನು ಹೇಳಿದ ದಿನ. ನಮ್ಮ ಶಾಲೆಯಲ್ಲಿ ಯಾರೇ ತೀರಿಕೊಂಡರೂ “ಓ ಕರ್ತರೆ ಮೃತರಿಗೆ ನಿತ್ಯ ವಿಶ್ರಾಂತಿಯ ದಯಪಾಲಿಸಿರಿ…” ಎನ್ನುವ ಗೀತೆಯನ್ನು ಹಾಡುತ್ತಿದ್ದೆವು. ಆ ಗೀತೆಯನ್ನು ಮೊದಲಿಗೆ ಹೇಳಿಕೊಟ್ಟವರು ಸಿಸ್ಟರ್ ಲಾರೆನ್ಸಿಯ. ಗಾರ್ಡೆನಿಂಗ್ ಅಂದರೂ ಇವರಿಗೆ ಬಹಳ ಇಷ್ಟವಿತ್ತು. ನಮ್ಮ ತರಗತಿಯ ಮುಂದೆ ಇದ್ದ ಹೂತೋಟದಲ್ಲಿ ಚಂದದ ಗಿಡಗಳನ್ನು ಬೆಳೆಸಿದ್ದರು. ಅದರಲ್ಲಿ ದಾಳಿಂಬೆ ಬಣ್ಣದ ಪಾಪಿ ಹೂಗಳು ಅರಳುತ್ತಿದ್ದುದನ್ನು ಅದರ ನಯವಾದ ಎಸಳುಗಳನ್ನು ಇವತ್ತಿಗೂ ಮರೆಯಲಾಗುತ್ತಿಲ್ಲ. ಪೇಪರ್ ಫ್ಲವರ್, ಜೀನಿಯಾ, ಚೆಂಡು, ಗ್ಲಾಡಿಯೋಲಸ್ ಇತರ ಹೂಗಳು ಅಲ್ಲಿದ್ದವು. ತಮ್ಮ ತಲೆಯ ವಸ್ತ್ರವನ್ನು ಸರಿ ಮಾಡಿಕೊಂಡು ಬಗ್ಗಿ ಕೆಲಸ ಮಾಡುತ್ತಿದ್ದರು. ಅವರು ತರಗತಿಗೆ ಬರುವ ಸ್ಟೈಲೇ ಭಿನ್ನ. ಸ್ವಲ್ಪ ಎತ್ತರದಲ್ಲಿದ್ದ ನಮ್ಮ ತರಗತಿಗೆ ಮೆಟ್ಟಿಲನ್ನು ಹತ್ತಿ ಬರಬೇಕಿತ್ತು. ಬರುವಾಗಲೆ ಆಕಡೆ ಈಕಡೆ ಕತ್ತು ಹೊರಳಿಸಿ ಯಾರು ಬೊಬ್ಬೆ ಹೊಡೆಯುತ್ತಿರುವುದು ಎಂಬುದನ್ನು ಗ್ರಹಿಸಿ ಅವರ ಹೆಸರನ್ನು ಹೇಳಿಕೊಂಡೇ ಬರುತ್ತಿದ್ದರು. “ಮುಂದೆ ಮಿಡ್ಲ್ ಸ್ಕೂಲಿಗೆ ಹೋಗುತ್ತೀರ ಚಂದ ಕಲಿತು ಹೋಗಬೇಕು” ಎಂದು ಪದೇ ಪದೇ ಹೇಳುತ್ತಿದ್ದರು. ಮಗ್ಗಿ, ಕಾಗುಣಿತ ಹೇಳಿಸಲು ಬೇರೆ ಬೇರೆ ಲೀಡರ್‌ಗಳನ್ನು ಮಾಡಿದ್ದರು. ಆದರೆ ಅವರಿಬ್ಬರೂ ಕ್ಲೋಸ್ ಫ್ರೆಂಡ್ಸ್. ಅವರಿಗಿಂತ ಚೆನ್ನಾಗಿ ಓದುವವರನ್ನು ನಿಲ್ಲಿಸಬೇಕು ಅನ್ನುವುದು ಅವರ ಹಠ. ಹಾಗಾಗಿ ಒಬ್ಬ ಮಧ್ಯ ಮಧ್ಯ ಮಗ್ಗಿ ಕೇಳಿ, ತಪ್ಪು ಹೇಳಿದಾಗ ನಿಲ್ಲಿಸಿ ಮಜಾ ತೆಗೆದುಕೊಳ್ಳುತ್ತಿದ್ದರು. ಮತ್ತೆ ಇನ್ನೊಬ್ಬ ಕಾಗುಣಿತ ಹೇಳಿಸುತ್ತ, ಲ, ಲಾ, ಲಿ, ಲೀ… ಹೇಳಿಸಿ ನಾವು ‘ಲೌ’ ಅನ್ನುವುದನ್ನು ಕೇಳಿಸಿಕೊಳ್ಳಬೇಕು ಅನ್ನುವ ಕಾತುರದಿಂದ ಕಾಯುತ್ತಿದ್ದ. ಆದರೆ ಇದರ ಸೂಕ್ಷ್ಮವನ್ನು ನಮ್ಮ ನೋಟ್ಸ್‌ಗಳನ್ನು ಕರೆಕ್ಷನ್ ಮಾಡುತ್ತಲೇ ಗಮನಿಸುತ್ತಿದ್ದ ಸಿಸ್ಟರ್ ಅವರಿಗೆ ಬರೆ ಬರುವವರೆಗೆ ಬಾರಿಸಿದ್ದು ಇತರರು ಅದರ ಮಜಾ ತೆಗೆದುಕೊಂಡ ನೆನಪೂ ಹಸಿರಾಗಿದೆ. ಮಳೆಯಲ್ಲಿ ಚಂಡಿಯಾಗಿ ಹೋಗುತ್ತಿದ್ದ ಮಕ್ಕಳನ್ನು ಸ್ಲಿಪ್ಪರ್ ತೆಗೆಸಿ ಸ್ಕರ್ಟ್ ಹಿಂಡಿಕೊಟ್ಟದ್ದನ್ನು ನೋಡಿದ್ದೇನೆ.

“ಹುಟ್ಟಿದ ಮನುಷ್ಯ ಸಾಯಲೇ ಬೇಕು” ಅನ್ನುವುದು ಪ್ರಕೃತಿಯ ನಿಯಮವೆ ಇರಬಹುದು. ಆದರೆ ಇಂಥ ವ್ಯಕ್ತಿಗಳು ದೂರವಾದಾಗ ಸಾವರಿಸಿಕೊಳ್ಳಲು ಸ್ವಲ್ಪ ಹೆಚ್ಚೇ ಸಮಯ ಬೇಕು. ಸಿಸ್ಟರ್ ಲಾರೆನ್ಸಿಯ ಇನ್ನಿಲ್ಲ ಎನ್ನುವ ಸುದ್ದಿ ನನಗೆ ತಿಳಿದದ್ದು ನನ್ನ ಒಂದನೆ ತರಗತಿಯಲ್ಲಿ ಕಲಿಸಿದ ಫಿಲೋಮಿನಾ ಟೀಚರ್ ಅವರಿಂದ. ಈ ಶುಕ್ರವಾರಗಳೆ ಸರಿಯಿಲ್ಲ ಅನ್ನಿಸುತ್ತದೆ! ಅದೇ ನಾಲ್ಕನೆಯ ತರಗತಿಯಲ್ಲಿ ಇರುವಾಗ ನಮ್ಮೊಂದಿಗೆ ಸೇರಿಕೊಂಡವಳು ಬಿ.ಡಿ. ಜಯಶ್ರೀ ಆಕೆಯೂ ತೀರಿಕೊಂಡಿದ್ದು ಶುಕ್ರವಾರವೆ. ಛೇ…. ಅನ್ನಿಸಿತು. ಏನಾದರೂ ಸರಿ ಇವೆಲ್ಲ ಬೇಡವಾಗಿತ್ತು ಅನ್ನಿಸುತ್ತದೆ. ಈ ಬರೆಹ ಬರೆಯುವಲ್ಲಿಯವರೆಗೆ ನನ್ನ ಟೀಚರ್ಗೆ ಕರೆ ಮಾಡಿಲ್ಲ, ಮತ್ತದೆ ನೋವನ್ನು ಹೇಳಿಕೊಂಡು ಅವರಿಗೂ ತೊಂದರೆ ಕೊಡಬೇಕಲ್ಲ ಎಂದು. ನನ್ನ ಗೆಳತಿ ಜಯಶ್ರೀಗೆ ಹಾಡು-ಡಾನ್ಸ್‌ಗಳಲ್ಲಿ ತುಂಬಾ ಆಸಕ್ತಿ. ಅವಳು ಕೊರವಂಜಿ ವೇಷ ಹಾಕಿ ಬಂದು ಸಿಸ್ಟರ್ ಬಳಿ ಹೇರ್ ಸ್ಟೈಲ್ ಸರಿಮಾಡಿಸಿಕೊಂಡಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಹೊರಗೆ ತುಂಬು ಮೋಡ ಆವರಿಸಿಕೊಂಡ ಮಬ್ಬಿನ ಬೆಳಕು, ಭಯಂಕರ ಚಳಿ ತರಿಸುತ್ತಿದ್ದ ಕರೆಂಟ್ ಇಲ್ಲದೆ ಇರುವಾಗ ನೀತಿ ಬೋಧೆಯ ತರಗತಿಯಲ್ಲಿ ತಾಯಿಯ ಪ್ರೋತ್ಸಾಹದಿಂದ ಕಳ್ಳತನ ಕಲಿತ ಮಗ ಶಿಕ್ಷೆಗೆ ಒಳಗಾಗಬೇಕಾದಾಗ, ತಾಯಿಯ ಕಿವಿಯನ್ನು ಕಚ್ಚಿದ ಕಥೆಯನ್ನು ಕೇಳಿದ್ದೂ ಇನ್ನೂ ನೆನಪಿದೆ. ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿದವರು ಇವರು. ಯಾರಾದರೂ ಕೊಡೆ ತಾರದೆ ಇದ್ದರೆ ಅದೇ ಬದಿ ಹೋಗುವ ಕೊಡೆ ಇರುವವರನ್ನು ಜೊತೆ ಮಾಡಿಕೊಡುತ್ತಿದ್ದರು. “ಮಳೆ ಬರುವುದಿಲ್ಲ” ಎಂದು ಅವರೆ ಕೊಡೆ ಮರೆತು ಬಂದ ದಿನಗಳಲ್ಲಿ ಮಳೆ ಬಂದಾಗ ವಿದ್ಯಾರ್ಥಿಗಳ ಕೊಡೆಯಲ್ಲಿಯೇ ಅವರೂ ಆಶ್ರಮದವರೆಗೆ ಡ್ರಾಪ್ ತೆಗೆದುಕೊಳ್ಳುತ್ತಿದ್ದರು.

ಅವರು ಪುತ್ತೂರಿನ ಪತ್ರಾವ್ ಹಾಸ್ಪಿಟಲ್‌ನಲ್ಲಿ ಕಡೆಯ ದಿನಗಳನ್ನು ಎಣಿಸುತ್ತಿದ್ದಾರೆ ಎನ್ನುವ ಸುದ್ದಿ ಇತ್ತು, ಆದರೆ ಹೋಗಲಾಗಲಿಲ್ಲ. ಇಷ್ಟಾದರೂ ನೆನಪಾಗುವುದು ಮಳೆಗಾಲದ ಮೊದಲ ದಿನಗಳು, ತರಗತಿಯ ಮೊದಲ ದಿನಗಳು, ಮೊದಲ ಪಾಠದ ನೋಟ್ಸನ್ನು ಬರೆಯುವಾಗ ಮೊದಲ ಪುಟಗಳು ಹೇಗಿರಬೇಕು ಎಂದು ಅವರು ಹೇಳಿಕೊಡುತ್ತಿದ್ದ ರೀತಿ ಹಂಸ ಪಕ್ಷಿಯ ಮೂತಿ ಹೊರಚಾಚಿದಂತೆ ಅವರು ರೈಟ್ ಹಾಕುತ್ತಿದ್ದದ್ದು, ತಪ್ಪು ಅಕ್ಷರಗಳ ಅಡಿ ಅವರು ಎಳೆಯುತ್ತಿದ್ದ ಜಿಗ್ ಜ್ಯಾಗ್ ಲೈನ್‌ಗಳು ಅದೇ ಸೂಪರ್ ಡಾರ್ಕ್ ರೆಡ್ ಇಂಕಿನಲ್ಲಿ. ಇದರ ಜೊತೆಗೆ ಮತ್ತೆ ನೆನಪಾಗುತ್ತಿರುವುದು ಹಿಂದಿ ಅಕ್ಷರ ಕಲಿಸಿದ ಶಾರದ ಟೀಚರ್, ಮ್ಯಾಥ್ಸ್ ಹೇಳಿಕೊಡುತ್ತಿದ್ದ ಮೇರಿಟೀಚರ್, ಸಿಸಿಲಿಯಾ ಟೀಚರ್… ಇವರ್ಯಾರೂ ಇಲ್ಲ!!! ಈಗ ಈ ಬರವಣಿಗೆಯನ್ನು ಮುಂದುವರೆಸುವುದು ಬೇಡ ಅನ್ನಿಸುತ್ತಿದೆ, ವಿದ್ಯೆ ಜೊತೆಗೆ ವಿನಯ ಅತಿ ಮುಖ್ಯ ಎಂದು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಬೆಳೆಸಿದ, ಬರವಣಿಗೆಯ ಶಿಸ್ತನ್ನು ಕಲಿಸಿದ ಸಿಸ್ಟರ್ ಲಾರೆನ್ಸಿಯಾ ಅಂತಿಮ ನಮನಗಳು ನಿಮಗೆ……. ಹೋಗಿ ಬನ್ನಿ…