ಈಗಿನಂತೆ ಬೀದಿ ದೀಪಗಳು, ಕೈಯಲ್ಲೊಂದು, ಜೇಬಲ್ಲೊಂದು ಟಾರ್ಚು ಇಲ್ಲದ ದಿನಗಳವು. ಅಣ್ಣ ನನ್ನ ಕೈಯನ್ನು ಹಿಡಿದುಕೊಂಡೆ ಮೆಲ್ಲಗೆ ಸಾಗತೊಡಗಿದ. ನನಗೆ ಇದ್ದ ಅತಿ ಮುಖ್ಯ ಭಯವೆಂದರೆ ಹಾವಿನದ್ದು. ಒಂದೆರಡು ದಿನಗಳ ಹಿಂದೆ ಎಮ್ಮೆ ಕಾಯಲು ಹೋದಾಗ ಹನುಮಪ್ಪನ ನಾಲಿನಲ್ಲಿ ನನ್ನ ಕಾಲಿನ ನಡುವೆ ಸರ ಸರನೆ ಹಾದು ಹೋಗಿ ಹೆಡೆ ಎತ್ತಿ ಆಡಿದ್ದ “ನಾಗರಾಜ”ನನ್ನು ನೆನೆದು ನಾನು ಇನ್ನಷ್ಟು ಭಯಭೀತನಾಗಿದ್ದೆ, ಮತ್ತು ಈಗ ಹೆಚ್ಚೇ ಎನ್ನುವಷ್ಟು ಜೋರಾಗಿ ಅಳತೊಡಗಿದೆ. ನನ್ನನ್ನು ಸುಮ್ಮನಾಗಿಸಲು ಹರ ಸಾಹಸ ಪಟ್ಟ ಅಣ್ಣ, ನನ್ನ ಅಳುವಿಗೆ ನೈಜ ಕಾರಣ ತಿಳಿದುಕೊಂಡ.
ಅಪ್ಪನಂತೆ ಅಕ್ಕರೆಯಿಟ್ಟು ಕಾಯುವ ಅಣ್ಣನ ಕುರಿತು ಬರೆದಿದ್ದಾರೆ ಸಾವನ್ ಕೆ ಸಿಂಧನೂರು
“ಎಷ್ಟ್ ಓಡ್ತಿರ್ರೀ, ಓಡ್ರಲೇ ನಾನೂ ನೋಡ್ತೀನಿ, ನಿಂದ್ರಲೇ ನಿಮ್ಮೌನ” ಅಪ್ಪ ಹಿಂದಿನಿಂದ ಮಣ್ಣಿನ ಹೆಂಟೆ ಒಂದನ್ನು ಹಿಡಿದು ಜೋರಾಗಿ ಎಸೆಯುತ್ತಿದ್ದರೆ ನಾನು ಅಣ್ಣ ದಿಕ್ಕಾಪಾಲೇ ಆಗ್ತಿದ್ವಿ. ಪ್ರತಿ ಬಾರಿಯೂ ಎಲ್ಲೋ ಕೆಲಸಕ್ಕೆ ಹೋಗಿ ದುಡಿದು, ದಣಿದು ಬರುತ್ತಿದ್ದ ಅಪ್ಪನ ಕಣ್ಣಿಗೆ ಮನೆಯಲ್ಲಿ ಯಾರೂ ಖಾಲಿ ಕುಳಿತಿರಬಾರದಾಗಿತ್ತು. ಮೊದಮೊದಲು ಇದರ ಅರಿವಿರದ ನಾನು, ಅಣ್ಣ ಅದೊಂದು ದಿನ ಸಾಹುಕಾರ ಈರೇಶಪ್ಪನ ಮನೆಗೆ ಟಿ ವಿ ನೋಡೋಕೆ ಹೋಗಿದ್ವಿ. ಹೊಲದಿಂದ ಬಂದ ಅಪ್ಪ ಮನೆಯಲ್ಲಿ ನಾವು ಇಲ್ಲದಿರುವುದನ್ನೂ, ನೀರು ಕುಡಿಸದೇ ಇರುವುದರಿಂದ ಬಾಯಿ ತುಂಬಾ ಬುರುಗು ಮಾಡಿಕೊಂಡು “ಅಂಬಾ” ಎಂದು ಕೂಗುತ್ತಿದ್ದ ಎಮ್ಮೆಯನ್ನೂ ಒಟ್ಟಿಗೇ ನೋಡಿದಾಗ, ಒಡಲೊಳಗಿನ ಸಿಟ್ಟು ನೆತ್ತಿಗೆ ಏರಿ ಈ ಮೇಲಿನ ಪರಿಸ್ಥಿತಿ ಉಂಟಾಗಿತ್ತು. ನೀರು ಕುಡಿಸುವ ಜವಾಬ್ದಾರಿಯನ್ನು ನನಗೆ ನೀಡಿದ್ದು ನನ್ನನ್ನು ಇನ್ನಷ್ಟು ಅಧೀರನನ್ನಾಗಿಸಿತ್ತು. ಮೇವು ಹಾಕಿ ಹೆಂಡಿ ಕಸ ಬಳಿಯೋ ತನ್ನ ಪಾಲಿನ ಕೆಲಸವನ್ನು ಅಣ್ಣಾ ಅಚ್ಚುಕಟ್ಟಾಗಿ ನಿಭಾಯಿಸಿದ್ದರಿಂದ ಅವನಿಗೆ ಒಂಚೂರು ಕಡಿಮೆ ಅಳುಕಿತ್ತು. ನನ್ನ ಮುಂದಿನ ಪರಿಸ್ಥಿತಿಯನ್ನು ನೆನೆದು ನಾನು ಅಳತೊಡಗಿದೆ. ಅಪ್ಪನ ಹೊಡೆತದ ಅರಿವಿದ್ದ ಅಣ್ಣ “ಇರ್ಲಿ ಸುಮ್ನಿರು ಅಪ್ಪಿ, ಅಮ್ಮ ಬಂದ್ ಮ್ಯಾಲೆ ಹೋಗಾಮು, ನೀನು ಎಮ್ಮಿಗಿ ನೀರ್ ಕುಡಿಸಿದ್ದಿ ಇಲ್ಲ ಅದು ಮೊದಲು ಹೇಳು” ಅಂದ. ಅಂದು ಉದಯ ಟಿ ವಿ ಯಲ್ಲಿ ಬರುತ್ತಿದ್ದ ಸಿನಿಮಾದ ಹುಚ್ಚಿನಲ್ಲಿ ಮುಳುಗಿ ಹೋಗಿದ್ದ ನಾನು ಅದೆಲ್ಲವನ್ನು ಮರೆತು ಬಿಟ್ಟಿದ್ದೆ. “ಕುಡಿಸಿಲ್ಲ” ಅನ್ನೋ ಕ್ಲುಪ್ತ ಉತ್ತರದೊಂದಿಗೆ ಇನ್ನಷ್ಟು ಜೋರಾಗಿ ಅಳಲು ಶುರು ಇಟ್ಟುಕೊಂಡೆ.
ನೂರಾರು ಎಕರೆಯಷ್ಟು ವಿಶಾಲವಾದ ಮೈದಾನದಲ್ಲಿ ಆ ವರ್ಷ “ಜೂಟ್”(ಸೆಣಬು) ಅನ್ನೋ ಒಂದು ವಿಶೇಷ ಬೆಳೆಯನ್ನು ಬೆಳೆದಿದ್ದರು. ನಮ್ಮ ಕ್ಯಾಂಪ್‌ನ ಮಣ್ಣಿನ ಫಲವತ್ತತೆಗೆ ಅದು ಅಮಿತಾಬ್ ಬಚ್ಚನ್ ಲೆವೆಲ್‌ಗೆ ಎರಡೆರಡು ಆಳು ಕಾಣದಷ್ಟು ಎತ್ತರಕ್ಕೆ ಬೆಳೆದಿತ್ತು. ಮನೆ ಮುಂದಿನ ಇಂತಹ ವಿಶಾಲವಾದ ಹೊಲವೊಂದಕ್ಕೆ ನುಗ್ಗಿದ ನಾವು ಹೊತ್ತು ಮುಳುಗುವುದನ್ನೇ ಕಾಯುತ್ತಿದ್ದೆವು. ಸಿನಿಮಾ ನೋಡುವಾಗ ಬೆಳಿಗ್ಗೆ ತಿಂದ ರೊಟ್ಟಿ ಮೇಲೆ ಇದ್ದ ನಮಗೆ ಹಸಿವಾಗದಿದ್ದದು, ಮತ್ತೀಗ ಸತ್ತೇ ಹೋಗುವಷ್ಟು ಹಸಿವಿನ ಅನುಭವ ಆಗುತ್ತಿರುವುದರ ಸಾಪೇಕ್ಷ ಪರಿಣಾಮದ ಚರ್ಚೆ ಮಾಡುವ ಸಮಯ ನಮ್ಮಲ್ಲಿ ಇಲ್ಲದ್ದರಿಂದ ಅನಿವಾರ್ಯವಾಗಿ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತಾ ಕುಳಿತುಕೊಂಡೆವು. ಅಷ್ಟರಲ್ಲಿ ಅಣ್ಣ ಅದೇ ಹೊಲದಲ್ಲಿ ಬೆಳೆದಿದ್ದ ಬುಡುಮೆಕಾಯಿಯನ್ನು ತಂದು ಕೊಟ್ಟು “ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಹೊಯ್ದಂತೆ” ಮಾಡಿ ಒಂಚೂರು ಹಸಿವು ನೀಗಿಸಿದ್ದ.
ಹೊತ್ತು ಮುಳುಗುತ್ತಿದ್ದಂತೆ ಈ “ಜೂಟ್” ಬೆಳೆಗೆ ಬೀಳುತ್ತಿದ್ದ ದ್ವಾಮಿ ನಮ್ಮನ್ನು ಆಕ್ರಮಿಸಿಕೊಳ್ಳತೊಡಗಿದವು. ಅಲ್ಲಿವರೆಗೂ ದುಃಖವನ್ನು ಅದುಮಿಟ್ಟುಕೊಂಡಿದ್ದ ನಾನು ಮತ್ತೆ ಮುಸಿ ಮುಸಿ ಅಳತೊಡಗಿದೆ. ಅಣ್ಣನಿಗೆ ನನ್ನ ಕಷ್ಟದ ಅರಿವಾಗಿ “ಅಳಬ್ಯಾಡ ಸುಮ್ನಿರು ಅಪ್ಪಿ, ಏನಾರ್ ಮಾಡ್ತೀನಿ” ಅಂದವನೆ, ಅದೇ ಹೊಲದಲ್ಲಿ ಬೆಳೆದಿದ್ದ “ಕಾಡಿಗ್ಗೆರ” ಗಿಡವೊಂದನ್ನು ಬೇರು ಸಮೇತ ಕಿತ್ತುಕೊಂಡು ಬಂದು ಅದರ ಎಲೆಗಳನ್ನು ಕೈಯಲ್ಲಿ ಹಾಕಿ ಉಜ್ಜಿ ಅದರ ರಸವನ್ನು ದ್ವಾಮಿ ಕಚ್ಚಿದ ಜಾಗಕ್ಕೆಲ್ಲ ಸವರತೊಡಗಿದ. ನನ್ನಂತದ್ದೇ ವಿಷಮ ಪರಿಸ್ಥಿಯಲ್ಲಿ ಅವನಿದ್ದರೂ ಅವನೊಳಗಿನ “ಅಗ್ರಜ” ಭಾವ ಜಾಗೃತವಾಗಿತ್ತು ಅನ್ನಿಸುತ್ತೆ.
ಇನ್ನೇನು ಸಂಪೂರ್ಣ ಕತ್ತಲು ಅವರಿಸಿದಂತೆ ನಮಗಿಬ್ಬರಿಗೂ ದಿಗಿಲಾಗಲು ಶುರುವಾಯಿತು. ಸರಿ ಸುಮಾರು ಒಂದು 30 ಎಕರೆಗಿಂತಲೂ ಹೆಚ್ಚು ಬಿತ್ತನೆ ಆಗಿದ್ದ ಆ ಹೊಲದಿಂದ ಹೊರ ಬರುವುದೇ ಕಷ್ಟವಾಗತೊಡಗಿತು. ಈಗಿನಂತೆ ಬೀದಿ ದೀಪಗಳು, ಕೈಯಲ್ಲೊಂದು, ಜೇಬಲ್ಲೊಂದು ಟಾರ್ಚು ಇಲ್ಲದ ದಿನಗಳವು. ಅಣ್ಣ ನನ್ನ ಕೈಯನ್ನು ಹಿಡಿದುಕೊಂಡೆ ಮೆಲ್ಲಗೆ ಸಾಗತೊಡಗಿದ. ನನಗೆ ಇದ್ದ ಅತಿ ಮುಖ್ಯ ಭಯವೆಂದರೆ ಹಾವಿನದ್ದು. ಒಂದೆರಡು ದಿನಗಳ ಹಿಂದೆ ಎಮ್ಮೆ ಕಾಯಲು ಹೋದಾಗ ಹನುಮಪ್ಪನ ನಾಲಿನಲ್ಲಿ ನನ್ನ ಕಾಲಿನ ನಡುವೆ ಸರ ಸರನೆ ಹಾದು ಹೋಗಿ ಹೆಡೆ ಎತ್ತಿ ಆಡಿದ್ದ “ನಾಗರಾಜ”ನನ್ನು ನೆನೆದು ನಾನು ಇನ್ನಷ್ಟು ಭಯಭೀತನಾಗಿದ್ದೆ, ಮತ್ತು “ನಾನು ವಲ್ಲ್ಯಾ, ನಾನು ವಲ್ಲ್ಯಾ” ಎನ್ನುತ್ತಾ ಈಗ ಹೆಚ್ಚೇ ಎನ್ನುವಷ್ಟು ಜೋರಾಗಿ ಅಳತೊಡಗಿದೆ. ನನ್ನನ್ನು ಸುಮ್ಮನಾಗಿಸಲು ಹರ ಸಾಹಸ ಪಟ್ಟ ಅಣ್ಣ, ನನ್ನ ಅಳುವಿಗೆ ನೈಜ ಕಾರಣ ತಿಳಿದುಕೊಂಡ. ಇನ್ನೇನು ಮಾಡುವಂತಿರಲಿಲ್ಲ ಅಲ್ಲಿಂದ ಹೊರಗೆ ಬರಲೇಬೇಕಿತ್ತು. ಹಸಿವು, ನೀರಡಿಕೆ, ಭಯ, ಅಪ್ಪನ ಹೊಡೆತ ಎಲ್ಲವೂ ಒಟ್ಟಿಗೆ ಸೇರಿ ನಮ್ಮನ್ನು ಅಸಹಾಯಕರನ್ನಾಗಿ ಮಾಡಿದ್ದವು.
ಸಿನಿಮಾ ನೋಡುವಾಗ ಬೆಳಿಗ್ಗೆ ತಿಂದ ರೊಟ್ಟಿ ಮೇಲೆ ಇದ್ದ ನಮಗೆ ಹಸಿವಾಗದಿದ್ದದು, ಮತ್ತೀಗ ಸತ್ತೇ ಹೋಗುವಷ್ಟು ಹಸಿವಿನ ಅನುಭವ ಆಗುತ್ತಿರುವುದರ ಸಾಪೇಕ್ಷ ಪರಿಣಾಮದ ಚರ್ಚೆ ಮಾಡುವ ಸಮಯ ನಮ್ಮಲ್ಲಿ ಇಲ್ಲದ್ದರಿಂದ ಅನಿವಾರ್ಯವಾಗಿ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತಾ ಕುಳಿತುಕೊಂಡೆವು. ಅಷ್ಟರಲ್ಲಿ ಅಣ್ಣ ಅದೇ ಹೊಲದಲ್ಲಿ ಬೆಳೆದಿದ್ದ ಬುಡುಮೆಕಾಯಿಯನ್ನು ತಂದು ಕೊಟ್ಟು “ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಹೊಯ್ದಂತೆ” ಮಾಡಿ ಒಂಚೂರು ಹಸಿವು ನೀಗಿಸಿದ್ದ.
ಇಲ್ಲಿಯೇ ಅಣ್ಣ ನನ್ನನ್ನು ಕುರುಮಟಗಿ ಮಾಡಿಕೊಂಡು ಹೊರಕ್ಕೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದು. ಒಂದೇ ವರುಷದ ಅಂತರವಿದ್ದ ನಮ್ಮಿಬ್ಬರಲ್ಲಿ ದೈಹಿಕ ಬೆಳವಣಿಗೆಯಲ್ಲಿ ಅಷ್ಟೇನೂ ವ್ಯತ್ಯಾಸವಿರಲಿಲ್ಲ. ಹುಟ್ಟುತ್ತಲೇ ದಷ್ಟಪುಷ್ಟವಾಗಿದ್ದ ಅಣ್ಣ ತದ ನಂತರ ತೆಳ್ಳಗೆ ಕೋಲಿನಂತೆ ಆಗಿರುವುದಕ್ಕೂ, ಹುಟ್ಟುತ್ತಲೇ ಕೋಲಿನಂತೆ ಹುಟ್ಟಿ ಈಗಲೂ ಕೋಲಿನಂತೆ ಇರುವ ನನಗೂ ಅಷ್ಟೇನೂ ಅಂತರವಿರಲಿಲ್ಲ. ಅವನು ನನ್ನನ್ನು ಎತ್ತಿಕೊಂಡರು, ನಾನು ಅವನನ್ನು ಎತ್ತಿಕೊಂಡಿದ್ದರೂ ಅವೆರಡರಲ್ಲಿ ಅಂತಹ ದೊಡ್ಡ ವ್ಯತ್ಯಾಸವನ್ನು ಗುರುತಿಸುವಂತಿರಲಿಲ್ಲ ಎಂದರೆ ನಿಮಗೆ ವಸ್ತು ಸ್ಥಿತಿ ಅರ್ಥವಾಗಿರಲೇಬೇಕು. ಆದರೂ ಅಣ್ಣಾ ಒಂಚೂರು ‘ಜಿಗುಟು’ ಮನುಷ್ಯ ಅನ್ನೋದು ನಂಗವತ್ತು ಗೊತ್ತಾಯ್ತು.(ಈಗ್ಲೂ ಅವನು “ಜಿಗುಟೇ” ನಿರ್ಧಾರದಲ್ಲೂ, ಎಲ್ಲದರಲ್ಲೂ) ನನ್ನನ್ನು ಬೇತಾಳದಂತೆ ಹೆಗಲಿಗೆ ಏರಿಸಿಕೊಂಡು ನಿಧಾನವಾಗಿ ಹೆಜ್ಜೆ ಹಾಕತೊಡಗಿದ. ಹೊಲದ ಒಂದು ಮಡಿಯಿಂದ ಇನ್ನೊಂದಕ್ಕೆ ದಾಟುವ ಸಮಯದಲ್ಲಿ ನೀರು ಬಿಟ್ಟಿದ್ದ ಕೆನಾಲ್ ಒಂದರಲ್ಲಿ ಅವನು ಪಚಕ್ ಎಂದು ಕಾಲು ಇಡುವುದಕ್ಕೂ, ಅಲ್ಲಿಯೇ ಇದ್ದ ಮುಳ್ಳು ಒಂದು ಜೋರಾಗಿ ಚುಚ್ಚಿಕೊಳ್ಳುವುದಕ್ಕೂ ಸರಿ ಹೋಯಿತು. “ಅಮ್ಮ” ಎಂದು ಜೋರಾಗಿ ಕಿರುಚುತ್ತಾ ನನ್ನನ್ನು ಆಚೆ ದಡಕ್ಕೆ ನೂಕಿ ಕಾಲನ್ನು ಎತ್ತಿಕೊಂಡು ಕುಂಟುತ್ತಲೇ ಹೊರಬಂದ. ಅದಾಗಲೇ ಹಾವಿನ ಭಯದಲ್ಲೇ ಇದ್ದ ನನಗೆ ಹಾವೇ ಅವನಿಗೆ ಕಚ್ಚಿರಬಹುದೇ ಎನ್ನುವ ಭಯ ಬಂದು ಇನ್ನಷ್ಟೂ ಜೋರಾಗಿ ಅಳತೊಡಗಿದೆ. ಆದರೆ ಕಾಲಿನಿಂದ ಮುಳ್ಳನ್ನು ಕಿತ್ತಲು ಪ್ರಯತ್ನಿಸುತ್ತಿದ್ದ ಅಣ್ಣ “ಅಪ್ಪಿ, ಸುಮ್ಕಿರು ಏನೂ ಆಗಿಲ್ಲ” ಎನ್ನುತ್ತಾ ಕಾಲಿಗೆ ಚುಚ್ಚಿದ್ದ ಮುಳ್ಳನ್ನು ಹೊರ ತೆಗೆದ. ಹೀಗೆ ತೆಗೆಯುವ ಪ್ರಯತ್ನದಲ್ಲಿ ಮಳ್ಳೊಂದು ಅವನ ಕಾಲಲ್ಲೇ ಝಂಢ ಊರಿಬಿಟ್ಟಿತ್ತು. ಈ ಹಿಂದೆ ಅಪ್ಪನ ಏಟಿನ ಭಯಕ್ಕೆ ದಿಕ್ಕಾಪಾಲಾಗಿ ಓಡಿದ್ದ ನಮಗೆ ಆಗ ಯಾವುದೇ ಮುಳ್ಳು ಚುಚ್ಚಿಕೊಳ್ಳದೇ ಇರುವುದು ಕಾಕತಾಳೀಯವಾದರೂ ಸತ್ಯವಾಗಿತ್ತು.
ಹಾಗೂ ಹೀಗೂ ಸುಧಾರಿಸಿಕೊಂಡು ಹೊರ ಬಂದ ನಮಗಿನ್ನು ಅಪ್ಪನ ಹೊಡೆತದ ಭಯವಿತ್ತು. ಕುಂಟುತ್ತಲೇ ಮನೆ ಸೇರಿದ ಅಣ್ಣ “ನೀ ಸುಮ್ಮ್ ಇರು, ಅಮ್ಮ ಬಂದಿರ್ತಾಳ ಏನೂ ಆಗಂಗಿಲ್ಲ, ತಿಳಿತಿಲ್ಲ” ಎಂದು ನನಗೆ ಧೈರ್ಯ ತುಂಬುತ್ತಿದ್ದ. (ಸತ್ಯ ಏನಪ್ಪಾ ಅಂದ್ರೆ ಅವಾಂ ನನಗಿಂತಲೂ ಪುಕ್ಕಲ.. ಈಗ್ಲೂ) ಒಂಚೂರು ಪಾಕೀಟ್ ಹಾಕಿದ್ದ ಅಪ್ಪ ಊಟಕ್ಕೆ ಕುಳಿತಿದ್ದ. ಅಕ್ಕ ಕಪಾಟಿನಲ್ಲಿ(ಅಂಗಡಿ) ಕುಳಿತು ಅದೇನೋ ಓದುತ್ತಿದ್ದವಳೇ, ನಮ್ಮಿಬ್ಬರನ್ನು ನೋಡುತ್ತಲೇ ಚಂಗನೆ ಹಾರಿ “ಬಾವಾ ಈಗ ಬಂದಾರ ನೋಡು, ಈ ರಾಜ ಮೈ ತುಂಬಾ ರಾಡಿ ಮಾಡಿಕೊಂಡ ಬಂದಾನ್ ನೋಡು. ಕಾಲು ತುಂಬಾ ರಕ್ತ ನೋಡಿಲ್ಲಿ” ಎನ್ನುತ್ತಲೇ ಸಂಪೂರ್ಣ ವರದಿಯನ್ನು ಒಪ್ಪಿಸಿದಳು. ಗುಡಿಸಿಲಿನ ಹೊರಗೆ ನಿಂತು ಹಣಿಕಿ ಹಾಕಿ ನೋಡುತ್ತಿದ್ದ ನಮ್ಮನ್ನು ಅಮ್ಮ ಕೈ ಸನ್ನೆ ಮಾಡುತ್ತಾ ಆಮೇಲೆ ಬರ್ರಿ ಎನ್ನುವಂತೆ ಸೂಚನೆ ಕೊಟ್ಟಳು, ಅಕ್ಕನಿಗೆ ಕಣ್ಣಿನಲ್ಲೇ ಬೆದರಿಸಿ ಸುಮ್ಮನಾಗಿಸಿದಳು. ಯಾವುದೋ ಭಜನಿ ಪದವೊಂದನ್ನು ಗುನುಗುತ್ತಾ ಊಟ ಮಾಡಿದ ಅಪ್ಪ ಹೊರ ಬರಲು ಅಣಿಯಾಗುತ್ತಿದ್ದಂತೆ, ನಾವಿಬ್ಬರೂ ಕಪಾಟಿನ ಕತ್ತಲಿನ ಮರೆಗೆ ಸರಿದುಕೊಂಡು ಅಲ್ಲೇ ಒಂದಿಷ್ಟು ಹೊತ್ತು ಕಳೆದೆವು. ಈ ‘ಸುಗ್ರೀವಾಜ್ಞೆ’ ಸಂದರ್ಭದಲ್ಲಿ ನಮ್ಮಿಬ್ಬರ ಎದೆ ಬಡಿತ ಇಬ್ಬರಿಗೂ ಕೇಳುವಷ್ಟು ಬಡೆದುಕೊಳ್ಳುತ್ತಿದ್ದದ್ದು ಮಾತ್ರ ಸತ್ಯ. ಅಪ್ಪನಿಗೆ ಹೊರಗೆ ಹಾಸಿಗೆ ಹಾಸಿ ಕೊಟ್ಟ ನಂತರ ಮೆಲ್ಲಗೆ ಒಳ ನುಗ್ಗಿದ ನಾವು ಮೊದಲ ಮಾಡಿದ ಕೆಲಸವೆಂದರೆ ಬಚ್ಚಲಿಗೆ ಹೋಗಿ ಕೈ ಕಾಲನ್ನು ಸಂಪೂರ್ಣವಾಗಿ ತೊಳೆದುಕೊಂಡಿದ್ದು. ಅಮ್ಮ ಕೊಟ್ಟ ಅನ್ನ ಸಾಂಬರ್ ಊಟ ಮಾಡಿ ಮುಳ್ಳು ಮುರಿದ ಕಾಲಿಗೆ ಚಿಮಣಿ ಎಣ್ಣಿ ಹಾಕಿಕೊಳ್ಳಬೇಕು ಅನ್ನೋ ಟೈಮಿಗೂ, ಬೀಡಿ ಸೇದಲು ಕಡ್ಡಿ ಪೆಟ್ಟಿಗೆ ಬಿಟ್ಟು ಹೋಗಿದ್ದ ಅಪ್ಪ ಅದನ್ನು ತೆಗೆದುಕೊಳ್ಳಲು ಒಳ ಬರುವುದಕ್ಕೂ ಸರಿ ಹೋಯಿತು. ಓಡಿ ಹೋಗುವ ಯಾವುದೇ ದಾರಿ ಇಲ್ಲದ್ದರಿಂದ ಇಬ್ಬರೂ ಉಗುಳು ನುಂಗತೊಡಗಿದೆವು. “ಈಗ ಬಂದ್ರನು ಈ ಸೂ.. ಮಕ್ಳು” ಎನ್ನುತ್ತಾ ಅಪ್ಪ ಇಬ್ಬರಿಗೂ ಬಾರಿಸತೊಡಗಿದ. “ಎಮ್ಮಿಗಿ ನೀರ್ ಯಾಕ್ ಕುಡಿಸಿಲ್ಲ, ಮುಂಜಾಲೆದ್ದು ಅದರ ಹೆಂಡಿ ತಿನ್ರಿ” ಎನ್ನುತ್ತಾ ಬೆನ್ನಿಗೆ ಹೊಡೆಯತೊಡಗಿದ.
“ನಿಂಗರ ಗೊತ್ತಾಗಲ್ಲ, ಅವ್ನರ ಸಣ್ಣೋನು” ಎನ್ನುತ್ತಾ ಅಣ್ಣನಿಗೆ ಒಂಚೂರು ಜಾಸ್ತಿ ಎನ್ನುವಷ್ಟು ಬಡಿಯತೊಡಗಿದಾಗ, “ಎಮ್ಮಿ ನೀರ್ ಕೂಡಿಸೋ ಪಾಳಿ ನಂದ್ ಇತ್ತು ಬಾವಾ, ರಾಜಗ ಹೊಡೀಬ್ಯಾಡಾ” ಎನ್ನುತ್ತಾ ನಾನು ಜೋರಾಗಿ ಅಳತೊಡಗಿದೆ. ಹೊಡೆತದ ತೀವ್ರತೆ ನನ್ನತ್ತ ತಿರುಗುವುದಕ್ಕೂ ಅಮ್ಮ ಬಂದು “ಸಾಯಿಸಬೇಕ ಅಂತ್ ಮಾಡಿ ಏನ್ ಹುಡುಗರನ್ನ” ಎಂದು ಬರಸೆಳೆದು ನಮ್ಮಿಬ್ಬರನ್ನು ತಬ್ಬಿಕೊಂಡು ರಕ್ಷಿಸುವುದಕ್ಕೂ ಸರಿ ಹೋಗಿತ್ತು. ಕೊನೆಗೆ ಮುಳ್ಳು ತುಳಿದ ನೋವಿನೊಂದಿಗೆ ಹೆಚ್ಚಿನ ಹೊಡೆತವನ್ನು ಅಣ್ಣನೇ ಪಡೆದುಕೊಂಡದ್ದು ನನಗೆ ತುಂಬಾ ಕೆಟ್ಟ ಅನ್ನಿಸಿತ್ತು. ಆದರೆ ಏನೂ ಮಾಡೋಕಾಗೋದಿಲ್ಲ ಅವನ ಟೈಮ್ ಚೆನ್ನಾಗಿಲ್ಲ ಅಷ್ಟೇ ಎಂದು ಸಮಾಧಾನ ಮಾಡಿಕೊಂಡೆ!!
ಹೊಡೆತ ತಿಂದು ಬಂದ ನಂತರ ಇಬ್ಬರೂ ಅಂದು ನೋಡಿದ್ದ ಸಿನಿಮಾದ ಫೈಟಿಂಗ್ ಸೀನ್ ಬಗ್ಗೆ ಮಾತಾಡುತ್ತಾ, ನಾಳೆ ಮತ್ತೆ ನೋಡಬಹುದಾದ “ಉದಯ ವಾರ್ತೆಗಳ” ಬಗ್ಗೆ ಚರ್ಚಿಸುತ್ತಾ ನಿದ್ದೆ ಹೋದೆವು.
ಬೆಳಿಗ್ಗೆ ಅಣ್ಣನ ಕಾಲು ಬಾತಿತ್ತು. ನೋವನ್ನು ತೋರಿಸದೆ ಅವನು ಮತ್ತೆ ಮೇವು ತರಲು ಹೊರಟ. “ರಾಜಾ ನಾನು ಬರ್ತೀನಿ ತಡಿ” (ನಾನೆಂದೂ ಜೀವನದಲ್ಲೇ ಅವನನ್ನು ‘ಅಣ್ಣ’ ಎಂದು ಕರೆದದ್ದೇ ಇಲ್ಲ! ಸುಮಾರು ಸಾರಿ, ಸುಮಾರು ಜನ, ಸುಮಾರು ರೀತಿಯಲ್ಲಿ ಪ್ರಯತ್ನಿಸಿದ್ದರೂ ನಾನು ಅವನನ್ನು ಇಂದಿಗೂ ‘ರಾಜಾ’ ಎಂದೇ ಕರೆಯೋದು) ಎನ್ನುತ್ತಾ ನಾನು ಅವನನ್ನೇ ಹಿಂಬಾಲಿಸತೊಡಗಿದೆ. ಥೇಟು ‘ಎಮ್ಮೆಯನ್ನು ಹಿಂಬಾಲಿಸುವ ಕರುವಿನಂತೆ’
ಮೈ ಬೆಸ್ಟ್ ಫ್ರೆಂಡ್ ಮೈ ಬ್ರದರ್!!
ಸಾವನ್ ಕೆ ಸಿಂಧನೂರು ಅವರು ಸಿಂಧನೂರು ತಾಲೂಕಿನ ಸಿ ಎಸ್ ಎಫ್-1 ಎನ್ನುವ ಪುಟ್ಟ ಕ್ಯಾಂಪ್‌ನವರು. ವೃತ್ತಿಯಿಂದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಸಂಯೋಜಕರಾಗಿ ಬಿಇಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗಜಲ್ ರಚನೆಯಲ್ಲಿ ಅಪಾರ ಒಲವು ಹೊಂದಿದ್ದಾರೆ. “ಮಗರೀಬ್ ಗಜಲ್‌ಗಳು”, “ಉಸಿರ ಮರೆತ ಕೊಳಲು” ಇವರ ಪ್ರಕಟಿತ ಗಜಲ್ ಸಂಕಲನಗಳು.
ನಿಮ್ಮ ಲೇಖನ ಓದಿ ತುಂಬಾ ಸಂತೋಷವಾಯಿತು. ತಿಳಿ ಹಾಸ್ಯದ ಜೊತೆಗೆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ಓದುಗರಿಗೆ ತಮ್ಮ ಬಾಲ್ಯದ ದಿನಗಳನ್ನು ಅಣ್ಣತಮ್ಮಂದಿರ ಒಡನಾಟವನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದೀರಾ. ಅಂದಿನ ದಿನಗಳಲ್ಲಿ ಎಮ್ಮೆಗೆ ನಿರುಣಿಸುವ ಹುಲ್ಲು ಹಾಕುವ ಕಾಯಕದಲ್ಲಿ ಅಪ್ಪನ ಹತ್ತಿರ ಏಟು ತಿಂದ ನೀವು ಇಂದು ಬೆಳೆದು ಅಧಿಕಾರಿಗಳು ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಬಂದಿದ್ದಾರೆ ಎಂದು ನೆನೆದರೆ ನಿಮ್ಮ ತಂದೆಯವರಿಗೆ ಮೀಸೆ ತಿರುವುವಷ್ಟು ಹೆಮ್ಮೆಯ ವಿಚಾರವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಸದಾ ಬ್ಯುಸಿಯಾಗಿರುವ ತಾವು ಆಗಾಗ ಇಂತಿಂತ ಲೇಖನಗಳೆಲ್ಲ ಬರೆಯುತ್ತಾರೆ ಎಂದು ತಿಳಿದು ಒಮ್ಮೊಮ್ಮೆ ಸೋಜಿಗ ಒಮ್ಮೊಮ್ಮೆ ಗೌರವ ಮೂಡುತ್ತದೆ ನನಗೆ. ನಿಮ್ಮ ಸಾಹಿತ್ಯ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಬಯಸುತ್ತೇನೆ. ಅಣ್ಣ ತಮ್ಮಂದಿರ ಅನುಬಂಧ ಸದಾ ಹಸಿರಾಗಿರಲಿ. 💐💐👍👌🏻❤❤
ರಂಗಸ್ವಾಮಿ
ಧನ್ಯವಾದಗಳು ರಂಗಸ್ವಾಮಿ ಅವರೇ..
ಜೀವನ ಪ್ರೇರಕ ಶಕ್ತಿ ಅಂದರೆ ಅದು ಅಣ್ಣ. ನಿಮ್ಮ ಅಣ್ಣನ ಬಗ್ಗೆ ಸೊಗಸಾಗಿ ಬರೆದಿದ್ದೀರಿ. ಮತ್ತೆ ನಮ್ಮನ್ನು ನಮ್ಮ ಬಾಲ್ಯಕ್ಕೆ ಕರೆದೋಯ್ಯಿತು. ನೀವು ಅನುಭವ ಕಥನ ಚೆನ್ನಾಗಿ ಬರೆಯುತ್ತಿರಿ. ಪ್ರಯತ್ನಿಸಿ. ಧನ್ಯವಾದಗಳು
ಮಂಜಯ್ಯ ದೇವರಮನಿ
ಥ್ಯಾಂಕ್ಯೂ ಮಂಜಯ್ಯ ಸರ್