ಅವರಿಗೆ ಯಾರಾದರೂ ಎದುರಾಡಿದರೆ ಅವರ ಮದುವೆ ಮಾಡುವ ಬದಲು ತಿಥಿ ಮಾಡಿಬಿಡುತ್ತಿದ್ದ. ಏನಾದರೂ ಒಂದು ನವ ಹೇಳಿ ಯಾವ ಹೆಣ್ಣು ಹತ್ತದಂತೆ ಮಾಡಿ… ಮದುವೆ ಬದಲಿಗೆ ತಿಥಿ ಮಾಡಿ ಬಿಡುತ್ತಿದ್ದ. ಹಾಗಾಗಿ ಗಂಗಯ್ಯನನ್ನು ಎದುರು ಹಾಕಿಕೊಳ್ಳಲು ಊರಲ್ಲಿ ಯಾರಾದರೂ ಹೆದರುತ್ತಿದ್ದರು. ಈವಯ್ಯನ ಸುದ್ದಿ ಬೇಡ ಎಂದು ಸುಮ್ಮನಾಗುತ್ತಿದ್ದರು. ಮದುವೆಯಾಗದ ಅದೆಷ್ಟೋ ಹೆಣ್ಣು ಗಂಡಗಳನ್ನು ಗಂಟು ಹಾಕಿ ಶಾದಿಭಾಗ್ಯ ಕರುಣಿಸಿದ ರೂವಾರಿ ನಮ್ಮ ಗಂಗಯ್ಯ.
ಮಂಜಯ್ಯ ದೇವರಮನಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

“ಗೋಧಿಹುಗ್ಗಿ ಉಂಡ್ರೆ ಬಣ್ಣ ಬರಬೇಕು” ಎನ್ನುವ ನಮ್ಮ ದೊಡ್ಡಯ್ಯ ನಮ್ಮೂರಿನ ವಿಚಿತ್ರ ಮತ್ತು ವಿಭಿನ್ನ ವ್ಯಕ್ತಿ. ಯಾವುದೇ ಕಾರ್ಯಕ್ರಮವಿರಲಿ ‘ಊಟದ ತಟ್ಟೆಯಲ್ಲಿ ಗೋಧಿಹುಗ್ಗಿ ಇಲ್ಲಾಂದ್ರೆ ಅದೊಂದು ಫಂಕ್ಷನ್ನ; ಯಾತಕ್ಕೆ ಮಾಡಬೇಕು’ ಎಂದು ತನ್ನ ವಾದವನ್ನು ಮುಂದಿಡುತ್ತ, ಇತ್ತೀಚಿಗೆ ಮಾಡುವ ಲಾಡು, ಖೀರು ಇವುಗಳೆಲ್ಲವನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಡುತ್ತಿದ್ದರು. “ಏನಿದ್ದರೇನಂತೆ ಗೋಧಿ ಹುಗ್ಗಿ ಉಣ್ಣದ ಜಲ್ಮ ಒಂದು ಜಲ್ಮವೇ?” ಎಂದು ತಮ್ಮ ಜನ್ಮ ಪಾವನವಾಗಬೇಕಾದರೆ ಗೋಧಿಹುಗ್ಗಿಯೇ ಮಹಾ ಪ್ರಸಾದವೆಂದು ನಂಬಿದ್ದವರು. ದೇವರ ಪರವು, ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಸ್ವತಃ ತಾವೇ ಸೌಟು ಕೈಯಲ್ಲಿ ಹಿಡಿದರೆ ತಾಸೋತ್ತಿಗೆ ಘಮಾಡುವ ಗೋಧಿಹುಗ್ಗಿ ಸಿದ್ಧವಾಗಿ, ಅದರ ವಾಸನೆ ಊರು ತುಂಬುತ್ತಿತ್ತು.

ತಾವೇ ಬೆಳೆದ ಜಲನವಾದ ಗೋಧಿಯನ್ನು ಒಳಕಲ್ಲಿನಲ್ಲಿ ಕುಮ್ಮಿ ತರಿ ತೆಗೆದು ಬಿಸೇಕಲ್ಲಿನಲ್ಲಿ ತಿರುವಿ ನುಚ್ಚು ಮಾಡಿ ಕುದಿಯಲು ಹಾಕುತ್ತಿದ್ದರು. ತುಮ್ಮಿನಕಟ್ಟಿಯ ಶಟ್ರು ಅಂಗಡಿಯ ಬೆಲ್ಲ ಇಲ್ಲವೇ ಮಲೆನಾಡಿನ ಹಾರ್ನಳ್ಳಿಯ ಪುಟ್ಟ ಸತ್ರಾಲನ ಆಲೆಮನೆಯಿಂದ ತಂದ ಬೆಲ್ಲವನ್ನು ಅದಕ್ಕೆ ಸರಿಯಾಗಿ ಹಾಕಿ, ಮೇಲೊಂದಿಷ್ಟು ಯಾಲಕ್ಕಿ ಜಜ್ಜಿ ಹಾಕಿ, ಒಲೆ ಉರಿ ಮುಂದೆಮಾಡಿ ಎರಡು ಮಳ್ಳು ಮಳ್ಳು ಹೊತ್ತಿಗೆ ಒಮ್ಮೆ ಸೌಟಿನಲ್ಲಿ ಲೀಲಾಜಾಲವಾಗಿ ತಿರುಗಿ ಬೆಲ್ಲ ಬೆರಕೆಯಾಗಿದೆಯೋ ಇಲ್ಲವೋ… ಗೋಧಿ ಬೆಂದಿದಿಯೋ ಇಲ್ಲವೋ… ಎಂದು ನಾಲಿಗೆ ರುಚಿ ನೋಡಿ ನಿಕ್ಕಿ ಮಾಡಿಕೊಂಡು, ಸೌಟ್ ಅನ್ನು ಒಮ್ಮೆ ಜೋರಾಗಿ ಕಡಾಯಿ ಕಂಟಕ್ಕೆ ಟಿನ್ ಟಿನ್ ಎಂದು ಬಾರಿಸಿ… ಉಸ್ಸಪ್ಪ ಎಂದು ನಿಂತರೆ ಗೋಧಿ ಹುಗ್ಗಿ ಸಿದ್ಧವಾದಂತೆಯೇ!… ಅದೆಷ್ಟು ಸೇರಿನ, ಇಲ್ಲವೇ ಅದೆಷ್ಟು ಗಿದ್ನದ ಹುಗ್ಗಿಯಾಗಿದ್ದರೂ ಸೈ ನಾಲಿಗೆ ಕಚ್ಚಿಕೊಳ್ಳುವಂತೆ ಹದ ಇಳಿಸುವ ಚಾತಿ ಗಂಗಯ್ಯನಿಗೆ ಕರಗತವಾಗಿತ್ತು.

ಯಾರ ಯಾರ ಮದುವೆಗೆ ಎಷ್ಟು ಸೇರು, ಗಿದ್ನ ಗೋಧಿ ಬೇಕಿತ್ತು ಎಂಬುದನ್ನ ಅವರ ನೆಡಪತಿ ಮೇಲೆ ಅಂದಾಜಿಸಿ ಹೇಳಿಬಿಡುತ್ತಿದ್ದ. ದೊಡ್ಡಯ್ಯ ಜನ ಬಾಳ ಬಂದ್ರೆ ಹುಗ್ಗಿ ಕಡಿಮೆ ಅಕ್ಕೇತಿ ಅಂದ್ರೆ “ಮುಚ್ಕೊಂಡ್ ಕುಂದುರ್ಲೆ… ಅವನ ಹೆಣ ಎತ್ತ… ನಾಕ್ ಮಂದಿಗೆ ಬೇಕಾಗಬೇಕಲೇ… ಇಲ್ಲಾಂದ್ರೆ ತಿಥಿಗೂ ಒಂದು ಹುಳಾನೂ ಬರಲ್ಲ, ಮಾಡಿದ ಹುಗ್ಗಿಯಲ್ಲಾ ವ್ಯರ್ಥ” ಎಂದು ಬೈದೋ, ಬುದ್ಧಿ ಹೇಳಿಯೋ ಸೌಟಿಗೆ ಕೈ ಹಾಕುತ್ತಿದ್ದರು.

ಅವರಿಗೆ ಯಾರೂ ಎದುರು ಮಾತನಾಡುವಂತಿರಲಿಲ್ಲ “ಸುಮ್ಕೆರಿ ದೊಡ್ಡಯ್ಯ ಆವ್ ಮೊದಲೇ ಜಿಪುಣಶೆಟ್ಟಿ” ಎಂದ್ರೆ “ಲೇ ನಾ ಕಂಡಿಲ್ವಾ ಮುಚ್ಕೊಂಡು ಇರ್ಲೇ ಇವರಪ್ಪನ ತಿಥಿಗೆ ಮುಳುನಾಯಿ ಸತ ಬರಲಿಲ್ಲ. ನಾನೆ ಊರಲ್ಲಿ ಮನೆ ಮನೆಗೆ ಹೋಗಿ ಜನ ಕರ್ಕೊಂಡು ಬಂದು ಹುಗ್ಗಿ ಉಣ್ಣಿಸಿ ಕೈ ತೊಳ್ಸಿನಿ, ನಂಗೆ ಬುದ್ಧಿ ಹೇಳ್ತಿಯ ಬೋ…” ಎಂದು ಸೌಟು ಬಿಸಾಕಿ ಹೋಗಿ ಬಿಡುತ್ತಿದ್ದರು. ಆಮೇಲೆ ಹುಗ್ಗಿ ಕೆಟ್ಟುಹೊಕ್ಕೇತಿ ಅಂತಾ ದುಂಬಾಲು ಬಿದ್ದು ಮನವೊಲಿಸಿ ಕರೆದುಕೊಂಡು ಬರಬೇಕಿತ್ತು.

ಜೀವನವಿಡಿ ಹೊಲಮನಿ, ಕಪನಿ ಬಾವಿ, ಎತ್ತು, ಎಮ್ಮಿ, ಎರೆಹೊಲ, ಬಿಳಿ ಜೋಳ ಎಂದು ಜೀವನ ಕಳೆದ ಗಂಗಯ್ಯ ಶಿವರಾತ್ರಿ ಹಬ್ಬ ಶಿವಪೂಜೆ, ಕೂಸಿನ ನಾಮಕರಣ, ತೊಟ್ಟಿಲಕಾರ್ಯ, ತಿಥಿ, ಮದುವೆ, ದೇವರಕಾರ್ಯವೆಂದರೆ ಬಿಳಿ ಪಂಚೆ, ಅಂಗಿ ತೊಟ್ಟು ಕುದುರೆ ಕುಣಿತ ಆರಂಭಿಸಿ ಬಿಡುತ್ತಿದ್ದ. ಈ ಸಂದರ್ಭದಲ್ಲಿ ಮುಂಗಾಲು ಪುಟಗಿ ಜಾಸ್ತಿ ಅಂದ್ರೆ ತಪ್ಪಿಲ್ಲ. ನಾನು ದೊಡ್ಡಪ್ಪನ ಜೊತೆ ಹಲವಾರು ಜಾತ್ರೆ ಜಮಂಡಿ ಕಂಡಿರುವೆ. ನಮ್ಮ ದೊಡ್ಡಪ್ಪನಿಗೆ ಉಕ್ಕಡದ ಅಜ್ಜಯ್ಯನ ಜಾತ್ರೆ, ನಂದಿಗುಡಿ ಬಸವಣ್ಣನ ತೇರು, ಕೊಕ್ಕನೂರು ಆಂಜನೇಯನ ಪಲ್ಲಕ್ಕಿ, ಜಿಗಳಿ ರಂಗನಾಥಸ್ವಾಮಿ ಪಡ್ಲಿಗೆಯ ಪಾಕ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ನಂದಿಗುಡಿಯ ಪೂಜ್ಯ ಗುರುಗಳೊಮ್ಮೆ ಗೋಧಿ ಹುಗ್ಗಿ ಉಣ್ಣುತ್ತಾ ಉಣ್ಣುತ್ತಾ… ಮೈ ಮರೆತು ಶ್ರೀಮಠದಲ್ಲಿ ಈ ರೀತಿಯ ಗೋಧಿ ಹುಗ್ಗಿಯನ್ನು ನಾನು ಯಾವತ್ತೂ ಉಂಡಿಲ್ಲ… ಏನಿದರ ಮಹಿಮೆ ಎಂದ ಕೇಳಿದಾಗ ಮಠದ ಪ್ರಧಾನ ಅರ್ಚಕರು “ಇದು ಸಂಗಾಪುರದ ಗೋಧಿ ಹುಗ್ಗಿ ಗಂಗಯ್ಯನವರು ಮಾಡಿದ ಹುಗ್ಗಿ… ಹೊಳೆ ಸಾಲು ಹಳ್ಳಿಗಳಲ್ಲಾ ಉಂಡು ತೇಗಿವೆ ಬುದ್ದಿ. ನಿಮಗೆ ಮಾತ್ರ ಈ ಭಾಗ್ಯ ಸಿಕ್ಕಿರಲಿಲ್ಲ” ಎಂದು ಹೇಳಲಾಗಿ ಪೂಜ್ಯರು ಹುಬ್ಬೆರಿಸಿ ಎರಡು ಗಂಗಾಳ ಹುಗ್ಗಿಯನ್ನು ತಮ್ಮ ಉದರದೇವನಿಗೆ ನೈವೇದ್ಯ ಮಾಡಿದ್ದರು. ಹುಗ್ಗಿಯ ದೆಸೆಯಿಂದ ಜಾತ್ರೆ ಸಂಪನ್ನವಾಗಿತ್ತು. ಗೋಧಿಹುಗ್ಗಿ ಗಂಗಯ್ಯನ ಖ್ಯಾತಿಯನ್ನು ಹೊಳೆಮಠ ಕೊಂಡಾಡಿತ್ತು.

ವಾರದಲ್ಲಿ ಒಮ್ಮೆಯಾದರೂ ಗೋಧಿಹುಗ್ಗಿ ಉಣ್ಣದಿದ್ದರೆ ಗಂಗಯ್ಯನ ಜಲ್ಮ ಚುರುಗುಟ್ಟುತ್ತಿತ್ತು. ಕರೆಯಲಿ… ಬಿಡಲಿ… ಕಾರ್ಯಕ್ರಮಕ್ಕೆ ಹೋಗಿಯಾದರು ಹುಗ್ಗಿ ಉಂಡು ಬರುತ್ತಿದ್ದರು. ಹುಗ್ಗಿ ಮಾಡಿ ಕರೆಯದವರನ್ನು ಕಂಡರೆ ಮುಗಿಯಿತು “ಥುತ್ ಇವರ ಮಖಕ್ಕೆ ಬಿಸಿನೀರ್ ಉಗ್ಗಾ… ಹುಗ್ಗಿ ಮಾಡಿ ಉಣ್ಣೋಕೆ ಕರೆಯದ ಇವರ ಆಸ್ತಿಯನ್ನು ಮೂಡುಗಡಿಗೆ ಬೆಂಕಿಯಿಕ್ಕ” ಎಂದು ಅವಮಾನ ಮತ್ತು ಬಹುಮಾನ ಕೊಟ್ಟುಬಿಡುತ್ತಿದ್ದರು.

ದೊಡ್ಡಯ್ಯ ಜನ ಬಾಳ ಬಂದ್ರೆ ಹುಗ್ಗಿ ಕಡಿಮೆ ಅಕ್ಕೇತಿ ಅಂದ್ರೆ “ಮುಚ್ಕೊಂಡ್ ಕುಂದುರ್ಲೆ… ಅವನ ಹೆಣ ಎತ್ತ… ನಾಕ್ ಮಂದಿಗೆ ಬೇಕಾಗಬೇಕಲೇ… ಇಲ್ಲಾಂದ್ರೆ ತಿಥಿಗೂ ಒಂದು ಹುಳಾನೂ ಬರಲ್ಲ, ಮಾಡಿದ ಹುಗ್ಗಿಯಲ್ಲಾ ವ್ಯರ್ಥ” ಎಂದು ಬೈದೋ, ಬುದ್ಧಿ ಹೇಳಿಯೋ ಸೌಟಿಗೆ ಕೈ ಹಾಕುತ್ತಿದ್ದರು.

ಮಠಕ್ಕೆ ಹೋಗಲಿ ಮನೆಗೆ ಹೋಗಲಿ ತಮ್ಮದೇ ನಡೆಯಬೇಕು ಎಂಬ ಚಾತಿ ಇವರದಾಗಿತ್ತು. ದೊಡ್ಡವ್ವನಂತು “ಈವಯ್ಯನನ್ನು ಕಟ್ಟಿಕೊಂಡು ಕೂಳು ಬೇಯಿಸಿ ಹಾಕಿ ಹಾಕಿ ನಾನೇ ಒಲೆ ಮುಂದೆ ಸುಟ್ಟು ಹೋಗಿನಿ ನೋಡು” ಎಂದು ರೋಧಿಸುತ್ತಿದ್ದಳು. ಒಂದೊತ್ತಿಗೆ ಆರು ಮುದ್ದೆ, ನಾಕು ಸುಟ್ಟ ಹಪ್ಪಳ, ಚಟಗಿ ಮಳ್ಳಂಬರ ಇರಲೇಬೇಕು. ಮೇಲೊಂದಿಷ್ಟು ಹುಳಿಮಜ್ಜಿಗೆ ಇದ್ರೇನೆ ಊಟ ಆದಂತೆ. ಒಂಚೂರು ಕಡಿಮೆಯಾದರೂ ರಂಪಾಟ ಕಟ್ಟಿಟ್ಟ ಬುತ್ತಿ. ಹೊಲಕ್ಕೆ ಬುತ್ತಿ ಗಂಟು ಕಟ್ಟಬೇಕಾದರೆ ಒಂದು ಚಟಿಗಿ ಹುಳಿಯಂಬಲಿ ಇರ್ಲೇಬೇಕು, ಗೋಧಿ ಹುಗ್ಗಿಯಷ್ಟೇ ಪ್ರೀತಿ ಹುಳಿಯಂಬಲಿ ಮೇಲಿತ್ತು.

ಹೋದ ಬಂದ ಕಡೆಯಲ್ಲೆಲ್ಲ ಇವರಿಗೆ ಸಿಹಿ ಆತಿಥ್ಯ ನೀಡದೆ, ಚಹಾ ಉಪಚಾರದಲ್ಲೇ ಮುಗಿಸಿ ಕಳಿಸಿದರೆ “ಅದೇನು ದೊಡ್ಡ ರೋಗ ಮೆಟ್ಟಿಕಂಡಿದೆ ನಿಮ್ಮ ಮನೆ ಬಾಗಿಲಿಗೆ, ಒಂದೊತ್ತು ಕೂಳು ಹಾಕೋಕೆ ಆಗಲ್ಲ ಅಂದ್ರೆ ನಿಮಗೆ ಬೀಗರು ಬಿಜ್ಜರು ಇದ್ದು ಸತ್ತಂಗೆ. ನೀವು ಯಾರಿಗೂ ನಾಕು ತುತ್ತು ಕೂಳು ಹಾಕಲ್ಲ ಬಿಡು. ನಿಮ್ಮದು ಊರು ಮುಂದಿನ ದೇವಸ್ಥಾನದಾಗ ಪ್ರಸಾದಕ್ಕೆ ಕಾಯ್ಕೊಂಡು ಕುಂತ ವಂಶ” ಎಂದು ಮುಖ ಮುಸಡಿ ನೋಡದೆ ಜನ್ಮ ಜಾಲಾಡಿ ನೀರಿಳಿಸಿಬಿಡುತ್ತಿದ್ದರು.

ಮಳೆಬಿದ್ದು ಹೊಲ ಬಿತ್ತಿಗಿ ಕೆಲಸವಿದ್ದಾಗ ಮೈ ಮೇಣವಾಗಿರುತ್ತಿದ್ದ ದೊಡ್ಡಯ್ಯ ಯಾವುದಾದರೂ ಕಾರ್ಯಕ್ರಮವೆಂದರೆ ಮೈಸೂರು ಮಹಾರಾಜನಂತೆ ಸಿದ್ಧವಾಗುತ್ತಿದ್ದ. ಕುಪ್ಪಿ ಬಣ್ಣದಲ್ಲಿ ಅದ್ದಿದ ಅಂಗಿ, ದೊಡ್ಡ ದಟ್ಟಿಯ ಕಚ್ಚಿಪಂಚಿ, ಬೊಕ್ಕು ತೆಲೆ ಮುಚ್ಚಲು ಕಾದಿಬಣ್ಣದ ಶಲ್ಯವು, ಮುಳ್ಳಜ್ಜನ ಕಡೆ ತಾನೆ ಹೇಳಿ ಮಾಡಿಸಿಕೊಂಡ ಕಾಲ್ಮರಿ ಗಂಗಯ್ಯನ ಸಿಗ್ನೇಚೆರ್ ಮಾರ್ಕ್. ಹಣೆಯಲ್ಲಿನ ವಿಭೂತಿ ಕಂಬಿಗಳು ಉದರದೇವನ ಪೂಜೆಯನ್ನು ಸಾರುತ್ತಿದ್ದವು. ಮದುವೆಗೆ ಹೆಣ್ಣು ಗಂಡು ಮಾಡುವ ಕೆಲಸವನ್ನು ಮಾಡುತ್ತಿದ್ದರಿಂದ ಬಹುಜನ ಪ್ರಿಯನಾಗಿದ್ದ. “ಏನು ಅಯ್ಯಾ ಒಳ್ಳೆ ಮದ್ವೆ ಹುಡುಗ ಆಗಿದೀಯಾ” ಎಂದು ತಮಾಷೆ ಮಾಡಿದರೆ “ಮುಚ್ಚಿಕೊಂಡು ಕುಂದ್ರಲೇ… ಗಡ್ಡ ಬೆಳ್ಳಗಾದವು ಮೊದಲು ನೀನು ಮದುವಿಯಾಗು… ಇಲ್ಲಾಂದ್ರೆ ಲಿಂಗ ಕಟ್ಟಿಕೊಂಡು ಕಂತಿ ಭಿಕ್ಷೆ ಎತ್ತಬೇಕಾದಿತು” ಎಂದು ಮದುವೆಯಾಗದ ಪಡ್ಡೆ ಹುಡುಗರನ್ನು ಕೊಡವಿ ಬಿಡುತ್ತಿದ್ದರು. ಅವರಿಗೆ ಯಾರಾದರೂ ಎದುರಾಡಿದರೆ ಅವರ ಮದುವೆ ಮಾಡುವ ಬದಲು ತಿಥಿ ಮಾಡಿಬಿಡುತ್ತಿದ್ದ. ಏನಾದರೂ ಒಂದು ನವ ಹೇಳಿ ಯಾವ ಹೆಣ್ಣು ಹತ್ತದಂತೆ ಮಾಡಿ… ಮದುವೆ ಬದಲಿಗೆ ತಿಥಿ ಮಾಡಿ ಬಿಡುತ್ತಿದ್ದ. ಹಾಗಾಗಿ ಗಂಗಯ್ಯನನ್ನು ಎದುರು ಹಾಕಿಕೊಳ್ಳಲು ಊರಲ್ಲಿ ಯಾರಾದರೂ ಹೆದರುತ್ತಿದ್ದರು. ಈವಯ್ಯನ ಸುದ್ದಿ ಬೇಡ ಎಂದು ಸುಮ್ಮನಾಗುತ್ತಿದ್ದರು. ಮದುವೆಯಾಗದ ಅದೆಷ್ಟೋ ಹೆಣ್ಣು ಗಂಡಗಳನ್ನು ಗಂಟು ಹಾಕಿ ಶಾದಿಭಾಗ್ಯ ಕರುಣಿಸಿದ ರೂವಾರಿ ನಮ್ಮ ಗಂಗಯ್ಯ.

ಗಂಗಯ್ಯನಿಗೆ ಊರಲ್ಲಿ ಜಮೀನು ಜಾಸ್ತಿ. ಅದರಲ್ಲೂ ಎರೆ ಜಮೀನು ಇತರರಿಗಿಂತ ಅಧಿಕ. “ಎರೆಹೊಲ ಇದ್ರೆ ದೊರೆಯಿದ್ದಂಗೆ” ಎಂಬ ಅಹಂ ತುಂಬಿತ್ತು. ಚಂದ್ರಣ್ಣನ ಹೋಟೆಲ್ಲಿನ ಮಿರ್ಚಿ ಗಂಗಯ್ಯನ ಗುಡಾಣದಂತ ಹಗೇವಿಗೆ ನಾಕು ಸೇರು ಜೋಳ ಸುರುವಿದಂತೆ ಏನಕ್ಕೂ ಅಲ್ಲ. ಆದರೂ ಬಾಯಿ ಚಪಲವೋ, ಮಾತಿನ ಚಟವೋ, ನಾಕು ಮಂದಿಗೆ ಬೈಯುವ ಸಾಂಕ್ರಾಮಿಕವೋ ಗೊತ್ತಿಲ್ಲ ಸಂಜೆಯಾಗುತ್ತಲೇ ಹೋಟೆಲ್ ಮುಂದೆ ಹಾಜರಾಗುತ್ತಿದ್ದ. ಗಂಗಾಳ ಗಟ್ಟಲೆ ಗೋಧಿಹುಗ್ಗಿ ಉಣ್ಣುವ… ಒಂದು ಹೊತ್ತಿಗೆ ಹತ್ತಾರು ಮುದ್ದಿ ನುಂಗುವ… ತುಮ್ಮಿನಕಟ್ಟೆ ಸಂತೆಯಲ್ಲಿ ಬೆಲ್ಲ ಕೊಳ್ಳುವ ನೆಪದಲ್ಲಿ ಅರ್ಧಕೆಜಿ ಬೆಲ್ಲ ತಿನ್ನುವ… ಎರೆಹೂಲದಲ್ಲಿ ಕೆಲಸ ಮಾಡುವಾಗ ಬಿಸಲ್ಗುದುರೆ ಜಳದಲ್ಲಿ ಚಟಗಿ ಹುಳಿಯಂಬಲಿ ಕುಡಿಯುವ… ಗಂಗಯ್ಯನಿಗೆ ಚಂದ್ರಣ್ಣ ಕೊಡುವ ನಾಕು ಅರೆಬೆಂದ ಮಿರ್ಚಿಗಳು ಯಾವ ಮೂಲೆಗೂ ಆಗುತ್ತಿದ್ದಿಲ್ಲ. “ಲೇ ಚಂದ್ರ ನೀ ಮಾಡೋ ಮಿರ್ಚಿ ಆಡೋ ಹುಡ್ರು ಕಡ್ಲೆ ಬೀಜ ಆಗಿದಾವು. ಅಂಗಡಿ ಮಾಡಿ ಅರಮನೆ ಕಟ್ಟಬೇಕು ಅಂದ್ಕೊಂಡಿದೀಯೋ ಏನು?” ಎಂದು ಅಲ್ಲೂ ತಮ್ಮ ಬೈಗುಳ ಜಾತ್ರೆ ಸುರುವಚ್ಚತ್ತಿದ್ದರು. “ಕೊಡೋದು ಮೂರು ಕಾಸು ಮಾತಾಡೋದು ಮುಗಿಲ ದೋಸೆ” ಎಂದು ಚಂದ್ರಣ್ಣ ಗೊಣಗುತ್ತಿದ್ದ. ಸಿಟ್ಟು ಬಂದರೂ ಕಂ ಕಿಮಕ್ ಅನ್ನುವಂತಿರಲಿಲ್ಲ. ಯಾಕೆಂದರೆ ಮದುವೆಯಾಗದೆ ಇದ್ದ ಮಗಳಿಗೆ ಒಳ್ಳೆಕಡೆ ನೋಡಿ ಲಗ್ನ ಮಾಡಿದ್ದು ಇದೆ ಗಂಗಯ್ಯ. ಆ ಕಿರೇವು ಚಂದ್ರಣ್ಣನ ಮೇಲಿತ್ತು. “ಗಂಗಣ್ಣ ಕಡಾಯಿಗಟ್ಟಲೆ ಹುಗ್ಗಿ ಉಣ್ಣೋ ನಿನ್ನ ಹೊಟ್ಟಿಗೆ ಈ ಕಡ್ಲೆ ಬೀಜ ಏನು ಅಲ್ಲ ಬಿಡು” ಎಂದು ಚಾವಡಿ ರಂಗಣ್ಣ ಹೇಳಿದ್ದಕ್ಕೆ “ಲೇ ರಂಗ ಉಂಡ್ರೆ ಹೊಟ್ಟೆ ತುಂಬಬೇಕು; ನೀಡಿದ್ರೆ ಜೋಳಗಿ ತುಂಬಬೇಕು. ನೀನಗೆಲ್ಲಿ ಐತಿ ಯೋಗ್ಯತೆ, ಕಲ್ಲು ಹೊಲದಾಗ ನಾಕು ಕಾಳು ಉರುಳಿ ಬಿತ್ತಿ ಕೋಳಿ ಕೆದರಿದಂಗೆ ದರಗಬರಗ ಹಲಬಿ ಕೆದರಿ ಒಕ್ಕಲು ಮಾಡ್ತಿಯಾ… ಹದವಾಗಿ ಬಿತ್ತಲಿಲ್ಲ ಮೆದೆ ಕಟ್ಟಿ ಹೊಟ್ಟಲಿಲ್ಲ… ನಾ ಕಂಡಿಲ್ವಾ ನಿನ್ನ ಮೋಟುರಂಟೆ… ಸುಮ್ಕೆ ಕುಂದ್ರಲೇ…” ಎಂದು ತಮ್ಮ ಪ್ರತಾಪ ತೋರಿಸಿಬಿಡುತ್ತಿದ್ದರು. ಗಂಗಯ್ಯ ಕೆಲಸಕ್ಕೆ ನಿಂತರೆ ಅಡ್ಡ ಪೀಸಗಿ ಮಾಡುತ್ತಿರಲಿಲ್ಲ. ಒಂದು ಹೊಡೆತ ಎರಡು ತುಂಡು ಮಾಡಿದಂತೆ. ದುಡಿಯದಿದ್ದರೆ ಯಾರಿಗೂ ಬಿಟ್ಟಿಕೂಳು ನೀಡುತ್ತಿರಲಿಲ್ಲ. ಆದ್ದರಿಂದ ಅವನ ಹೊಲಕ್ಕೆ ಕೂಲಿ ಹೋಗಲು ಆಳುಗಳು ಹಿಂದೇಟು ಹಾಕುತ್ತಿದ್ದರು.

ಗಂಗಯ್ಯ ತಮ್ಮ ಮದುವೆ ಸಮಯದಲ್ಲಿ ದೊಡ್ಡ ರಂಪಾಟ ಮಾಡಿದ್ದನ್ನು ಅಪ್ಪ ಆಗಾಗ ಹೇಳುತ್ತಿರುತ್ತಾರೆ. ನಾನು ತುಂಬಾ ಆಶ್ಚರ್ಯಪಟ್ಟಿದ್ದೆ. ಅದೇನೆಂದರೆ…. ಮದುವೆ ದಿನ ಮದಲಿಂಗನಾದ ದೊಡ್ಡಯ್ಯ ದೇವರಮನಿಗೆ ಹೋಗುವುದರ ಬದಲಿಗೆ ಸೀದಾ ಅಡುಗೆಮನೆಗೆ ಹೋಗಿ ಊಟದ ಮೆನುವಿನಲ್ಲಿ ಗೋಧಿಹುಗ್ಗಿ ಇದೆಯೋ ಇಲ್ಲವೋ ಎಂದು ಪರೀಕ್ಷೆ ಮಾಡಲಾಗಿ… ಗೋಧಿಹುಗ್ಗಿ ಜಾಗದಲ್ಲಿ ಆಗತಾನೆ ನವ ಸಂಸ್ಕೃತಿಯಂತೆ ರಾರಾಜಿಸುತ್ತಿದ್ದ ಬೊಂದೆ (ಲಾಡು) ಕಂಡು ‘ಗಂಗಯ್ಯನ ಮದುವೆಗೆ… ಅದರಲ್ಲೂ ಗೋಧಿಹುಗ್ಗಿ ಪ್ರಿಯ ಗಂಗಯ್ಯನ ಮದುವೆಗೆ… ಗೋಧಿಹುಗ್ಗಿ ಮಾಡಿಸಿಲ್ಲ ಅಂದ್ರೆ ಏನು? ನನಗೆ ಈ ಮದುವೆನೇ ಬೇಡ..! ‘ ಎಂದು ಪಟ್ಟುಹಿಡಿದು ಕುಂತು ಬಿಟ್ಟಿದ್ದರಂತೆ. ಇದೊಳ್ಳೆ ಪಜೀತಿಯಾಯಿತಲ್ಲ ಎಂದ ಬೀಗರು ಏನು ಮಾಡೋದು ಎಂದು ಚಿಂತೆಗೆ ಬೀಳಲು, ವಯಸ್ಸಾದ ಮುದುಕನೊಬ್ಬ “ಗಂಗಯ್ಯ ಯಾರು ಮಾತು ಕೇಳಲ್ಲ ಭಾರಿ ಹಠಮಾರಿ ಹನುಮನಿದ್ದಾನೆ… ನೀವು ಗೋಧಿಹುಗ್ಗಿ ಮಾಡಿಸದಿದ್ದರೆ ನಾಳೆ ಅವನು ನಿಮ್ಮ ಹುಡುಗಿಗೆ ತಾಳಿನೇ ಕಟ್ಟೋದಿಲ್ಲ ನೋಡ್ರಿ ಮತ್ತೆ” ಎಂದು ಬುದ್ದಿವಾದ ಹೇಳಿದ್ದರಿಂದ ಅಷ್ಟಾಗಿ ಗೋಧಿ ಬೆಳೆಯದ ಕೇವಲ ಭತ್ತ ಬೆಳೆಯೋ ಮಾದಾಪುರದಲ್ಲಿ ಯಾರ ಮನೆಯಲ್ಲಿ ಸಿಗುತ್ತಾವೇ ಎಂದು ತಬ್ಬಿಬ್ಬಾದ ಬೀಗರು ಬೆಳಗಾಗದ್ರೊಳಗೆ ಅವರಿವರ ಮನೆ ಯಡತಾಕಿ ನಾಕು ಸೇರು ಗೋಧಿ ತಂದು ಹುಗ್ಗಿ ಮಾಡಿ ನೀಡಿದ್ದರಂತೆ. ಹಿಂದೆ ಮದುವೆಗಳು ಛತ್ರದಲ್ಲಿ ನಡೆಯುತ್ತಿರಲಿಲ್ಲ, ಮನೆ ಮುಂದೆ ಚಪ್ಪರಹಾಕಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಿದ್ದವು. ಬೆಳಗ್ಗೆ ತಿಂಡಿಗೆ ಬದಲಾಗಿ ಗೋಧಿಹುಗ್ಗಿಯನ್ನೇ ಸುರಿದುಕೊಂಡ ಗಂಗಯ್ಯ ತಾಳಿ ಕಟ್ಟಿದ್ದರು.