ಅವರು ದೂರ ಹೋಗುತ್ತಾ ಕಣ್ಮರೆಯಾಗುತ್ತಿದ್ದ ಹಾಗೆ ನನ್ನ ಕುಚುಕು ಗೆಳತಿಯರು ಒಗ್ಗಟ್ಟಿನಿಂದ ನನಗಿಂತಲೂ ಎತ್ತರದಲ್ಲಿದ್ದ ಬಾಗಿಲು ಹತ್ತಲು ಸಹಕರಿದ್ದರು. ಅದೇನಾಯಿತೋ ಏನೋ ಅಷ್ಟರಲ್ಲೇ ಹೋದ ತಾತ ಮಗ ಗಿರಿಯಣ್ಣನ ಜೊತೆ tvs ಲೂನಾದಲ್ಲಿ ಬರುವುದನ್ನು ಕಂಡ ನನ್ನ ಮಿತ್ರದ್ರೋಹಿಗಳು ನನ್ನನ್ನೊಬ್ಬಳನ್ನೇ ಬಿಟ್ಟು ಓಡಿ ಹೋಗಿ ಪಕ್ಕದಲ್ಲೇ ಇದ್ದ ತೃಪ್ತಿ ಕ್ಯಾಂಟೀನ್ ಕಟ್ಟಡದ ಮಹಡಿ ಹತ್ತಿ ಅವಿತುಕೊಂಡು ಬಿಟ್ಟರು. ಯಾರ ಸಹಾಯವು ಇಲ್ಲದೇ ಒಳಗಿಂದ ಹತ್ತಿ ಆಚೆ ನೆಗೆಯಲು ಬಾರದೆ ಪರದಾಡುತ್ತಿದ್ದ ನನ್ನನ್ನ ತಾತ ಒಂದೇ ಹಿಡಿತದಲ್ಲಿ ಎತ್ತಿ ಆಚೆ ಹಾಕಿದ್ದರು.
ಮಾಲತಿ ಶಶಿಧರ್ ಬರೆಯುವ “ಹೊಳೆವ ನದಿ” ಅಂಕಣದಲ್ಲಿ ಬಾಲ್ಯಕಾಲದ ನೆನಪಿನ ಕುರಿತ ಬರಹ

ಸುಮಾರು 25 ವರ್ಷಗಳ ಹಿಂದೆ ಚಾಮರಾಜನಗರದ ಆಗ ತಾನೇ ಅಲ್ಲೊಂದು ಇಲ್ಲೊಂದು ಬೆರಳೆಣಿಕೆಯಷ್ಟು ಮನೆಗಳಿದ್ದ ಕಾನ್ವೆಂಟ್ ಆಸ್ಪತ್ರೆ ರಸ್ತೆ ಎಂದೇ ಖ್ಯಾತಿ ಹೊಂದಿದ್ದ ಸಿದ್ಧಾರ್ಥ ಬಡಾವಣೆಯಲ್ಲಿ ಮನೆಯನ್ನು ಕಟ್ಟಿಕೊಂಡು ಯರಗನಹಳ್ಳಿಯಿಂದ ಇಲ್ಲಿಗೆ ಬಂದು ನೆಲೆಸಿದ್ದೆವು. ಜೋಡಿ ರಸ್ತೆಯಲ್ಲಿ ಜೆಎಸ್ಎಸ್ ಕಾಲೇಜಿಗಿಂತ ಸ್ವಲ್ಪ ಮುಂದೆ ಬಂದು ಬಲಕ್ಕೆ ತಿರುಗಿದರೆ ಸಿದ್ಧಾರ್ಥ ನಗರದ ಮುಖ್ಯ ರಸ್ತೆ ಸುಮಾರು ಅರ್ಧ ಕಿ.ಮೀ ವರೆಗೂ ಇದೆ. ರಸ್ತೆಯ ಬಲಭಾಗದಲ್ಲಿ ನಮ್ಮ ಮನೆಯನ್ನು ಸೇರಿ ಒಟ್ಟು ಏಳು ಮನೆಗಳಿದ್ದವು. ಇನ್ನು ಎಡ ಭಾಗದಲ್ಲಿ ಐದಾರು ನಿವೇಶನಗಳ ಬಿಟ್ಟು ಮುಂದಕ್ಕೆ ಆ ತುದಿಯವರೆಗೂ ಸಂತ ಜೋಸೆಫರ ಆಸ್ಪತ್ರೆ, ಬೋರ್ಡಿಂಗ್, ಶಾಲೆ ಹೀಗೆ ಎಲ್ಲವೂ ಐದಾರು ಎಕರೆ ಜಾಗದಲ್ಲಿ ಒಂದೇ ಕಾಂಪೌಂಡ್ ಒಳಗಿದ್ದವು. ಈಗಲೂ ಇವೆ ಆದರೆ ಕಾಲಕ್ಕೆ ತಕ್ಕಂತೆ ತನ್ನ ರೂಪು ರೇಷೆ ಬದಲಿಸಿಕೊಂಡು, ಮಹಡಿಗಳನ್ನು ಹೆಚ್ಚಿಸಿಕೊಂಡು.

ಅಲ್ಲಿನ ಜೋಡಿರಸ್ತೆಗೆ ಸೇರಿದಂತೆ ಇದ್ದ ಕಾರ್ನರ್ ನಿವೇಶನದಲ್ಲಿ ಕಂಡರೂ ಕಾಣದಂತೆ, ಹುಡುಕಿಕೊಂಡು ಹೋದರಷ್ಟೇ ಕಣ್ಣಿಗೆ ಬೀಳುವ ಒಂದು ಪೆಟ್ಟಿಗೆ ಅಂಗಡಿ ಇತ್ತು. ನಾವೆಲ್ಲರೂ ಅದನ್ನು ಪ್ರೀತಿಯಿಂದ ಪೆಟ್ಟಿ ಅಂಗಡಿ ಎಂದು ಕರೆಯುತ್ತಿದದ್ದೂ, ಇಡಿ ಸಿದ್ಧಾರ್ಥನಗರಕ್ಕೆ ಒಬ್ಬನೇ ಮಗನಂತೆ ಮನೆಗೆ ಬೇಕಾದ ಅವಶ್ಯಕ ದಿನನಿತ್ಯ ಬಳಸುವ ಚಿಕ್ಕಪುಟ್ಟ ವಸ್ತುಗಳು, ಯುವಪೀಳಿಗೆಗೆಂದು ಸಿಗರೇಟು ಬೀಡಿಗಳು, ಮಕ್ಕಳಿಗೆಂದು ಪೆಪ್ಪರ್‌ಮೆಂಟ್ ಹಾಲ್ಕೋವಗಳು ಇವೆಲ್ಲವನ್ನೂ ಜವಾಬ್ದಾರಿಯಿಂದ ಎಲ್ಲರಿಗೂ ಒದಗಿಸುತ್ತಿತ್ತು. ನಮ್ಮ ಬಡಾವಣೆಯ ಬಡವ-ಬಲ್ಲಿದ, ಆಸ್ಪತ್ರೆಯ ರೋಗಿಗಳು, ಶಾಲೆಗೆ ಬರುವ ಪುಟ್ಟ ಮಕ್ಕಳು ಎಲ್ಲರಿಗೂ ಈ ಪೆಟ್ಟಿ ಅಂಗಡಿಯೇ ದಿಕ್ಕು. ಇದನ್ನು ಬಿಟ್ಟರೆ ನಾಲ್ಕಾರು ಕಿಲೋಮೀಟರ್ ದೂರದಲ್ಲೇ ಮತ್ತೆ ಅಂಗಡಿಗಳಿದ್ದದ್ದು.

ಹಳ್ಳಿಯಿಂದ ನಗರಕ್ಕೆ ಬಂದು ನೆಲೆಸಿದ ನಮ್ಮ ಮನೆಯಲ್ಲಿ ಒಂದು ವಾರದವರೆಗೆ ಅದಿದ್ದರೆ ಇದಿಲ್ಲ ಇದಿದ್ದರೆ ಅದಿಲ್ಲ. ದಿನಕ್ಕೆ ಆರರಿಂದ ಎಂಟು ಬಾರಿಯಾದರೂ ಅಮ್ಮ ನನ್ನನ್ನು ಅಂಗಡಿಗೆ ಅಟ್ಟುತ್ತಲೇ ಇದ್ದಳು. ಅಂಗಡಿಯ ಮುಂದೆ ಸಿಗರೇಟು ಸೇದುತ್ತ ನಿಲ್ಲುತ್ತಿದ್ದ ಒಂದು ಹಿಂಡು ದಾಂಡಿಗರ ನಡುವೆ ಹೊಗೆಯ ಸುರುಳಿಗಳ ಮಧ್ಯೆ ನಿಂತು ಎಡಗೈಲಿ ಮೂಗನ್ನು ಭದ್ರವಾಗಿ ಹಿಡಿದು ನಾನೇನೋ ಕೇಳಿದರೆ ಅಂಗಡಿಯೊಳಗೆ ಕುಳಿತುಕೊಳ್ಳುತ್ತಿದ್ದ ತಾತನಿಗೆ ಇನ್ನೇನೋ ಕೇಳಿ ಕೆರಳಿ “ಸರಿಯಾಗಿ ಹೇಳೇ ಮೂದೇವಿ” ಎಂದು ಬೈದಾಗ ವಿಧಿಯಿಲ್ಲದೇ ಮೂಗು ಮುಚ್ಚಿದ್ದ ಕೈ ತೆಗೆದು ಸಿಗರೇಟಿನ ಘಮಲು ತೆಗೆದುಕೊಳ್ಳುತ್ತಲೆ ಅದೇನು ಬೇಕೋ ಹೇಳಿ ತೆಗೆದುಕೊಂಡು ಬರುತ್ತಿದ್ದೆ. ಹಾಗಾಗಿ ಕ್ರಮೇಣ ನಾನೇ ಸಿಗರೇಟಿನ ವಾಸನೆಗೆ ಹೊಂದಿಕೊಂಡಿದ್ದೆ.

ಒಮ್ಮೆ ನನ್ನ ವಾನರಸೇನೆಯೊಂದಿಗೆ ತಾತನ ಅಂಗಡಿ ಹೋಗಿದ್ದೆ. ಅಲ್ಲಿಯತನಕ ಅಮ್ಮ ಹೇಳಿದ್ದನ್ನಷ್ಟೇ ತರುತ್ತಿದ್ದ ನನಗೆ ದೇವತೆಗಳಂಥ ನನ್ನ ದೋಸ್ತ್‌ಗಳು ಆ ಪೆಟ್ಟಿ ಅಂಗಡಿಯಲ್ಲಿ ಮಾರುತ್ತಿದ್ದ ಅಮೃತದಂತ ಒಂದು ರೂಪಾಯಿಗೆ ಸಿಗುತ್ತಿದ್ದ ಬನ್ನು ಗುಲ್ಕನ್ನಿನ ರುಚಿ ತೋರಿಸಿದ್ದರು. ಆಗಿಂದ ನನಗೆ ಪ್ರತಿದಿನವೂ ಅದೇ ಕೆಲಸ. ತಾತನ ಅಂಗಡಿಗೆ ಹೋಗುವುದು ಬನ್ನು ಗುಲ್ಕನ್ ಮೆಲ್ಲುವುದು. ತಾತ ತನ್ನ ಕನ್ನಡಕದೊಳಗಿಂದ ಗುರಿ ಇಟ್ಟು ಬನ್ನನ್ನು ಮಧ್ಯಕ್ಕೆ ಕತ್ತರಿಸಿ ಅದರ ನಡುವಲ್ಲಿ ಗುಲಾಬಿ ದಳಗಳಿಂದ ತಯಾರಿಸಿದ ಗಾಜಿನ ಜಾರಿನಲ್ಲಿ ತುಂಬಿಟ್ಟ ಗುಲ್ಕನ್ ಅನ್ನು ಸವರಿ ನಮ್ಮ ಕೈಗಿಡುವ ಹೊತ್ತಿಗೆ ಬಾಯ ತುಂಬೆಲ್ಲ ಜೊಲ್ಲು ತುಂಬಿರುತ್ತಿತ್ತು. ತಾತ ಕೊಟ್ಟ ಬನ್ನು ಗುಲ್ಕನನ್ನು ಪೆಟ್ಟಿ ಅಂಗಡಿ ಇದ್ದ ನಿವೇಶನದ ಒಂದು ಮೂಲೆಯಲ್ಲಿ ಸೇರಿಕೊಂಡು ನಾವೆಲ್ಲ ಚಪ್ಪರಿಸುತ್ತಿದ್ದೆವು.

ಪ್ರತಿದಿನವೂ ಎಲ್ಲರ ಬಳಿ ಒಂದು ರೂಪಾಯಿ ಇರುತ್ತಿಲ್ಲವಾದ್ದರಿಂದ ಇಬ್ಬರಿಂದ ಒಂದರಂತೆ ನಾವು ಆರು ಜನ ಮೂರು ಬನ್ನು ಗುಲ್ಕನ್‌ಗಳನ್ನು ಕೊಂಡು ಹಂಚಿಕೊಂಡು ತಿನ್ನುತ್ತಿದ್ದೆವು. ಹಂಚಿಕೊಂಡು ಅಂದ ಮಾತ್ರಕ್ಕೆ ಕಾಗೆ ಇರುವೆಗಳಂತೆ ಅಂದೆಲ್ಲಾ ತಿಳಿದುಕೊಳ್ಳಬೇಡಿ. ಒಂದು ರೊಟ್ಟಿ ತುಂಡಿಗೆ ಕಿತ್ತಾಡುವ ನಾಯಿಗಳಂತೆ ಜೊತೆಗೊಂದು ಒಪ್ಪಂದದೊಂದಿಗೆ. ಇಂದು ಅವಳು ಕೊಡಿಸಿದರೆ ನಾಳೆ ನಾನು, ನಾಳೆ ನಾನು ಕೊಡಿಸಿದರೆ ನಾಳಿದ್ದು ಅವಳು ಹೀಗೆ ಇಬ್ಬಿಬ್ಬರ ನಡುವೆ ಅಗ್ರಿಮೆಂಟ್ ಒಂದಿತ್ತು. ಅದಿರಲಿ ಹಂಚಿಕೊಳ್ಳುವಾಗ ಒಂದಿಂಚು ಹೆಚ್ಚಿಗೆ ಸಿಕ್ಕಿಬಿಟ್ಟರು ಮತ್ತೆಲ್ಲಿ ಸಮಪಾಲು ಮಾಡಬೇಕಾಗುತ್ತದೆಯೋ ಎಂದು ಗಬಕ್ಕನೆ ಬಾಯಲ್ಲಿಟ್ಟು ಎಂಜಲು ಮಾಡಿಬಿಡುತ್ತಿದ್ದೆವು.

ಈ ಎಲ್ಲಾ ಕಪಿಚೇಷ್ಟೆ ಮಾಡುವಾಗ ಸಿಗರೇಟು ಸೇದಲು ಬರುತ್ತಿದ್ದ ಪೋಲಿ ಹುಡುಗರ ಗುಂಪಿನ ಪೋಲಿ ಮಾತುಗಳನ್ನೂ, ಅವರ ಪ್ರೀತಿ ಪ್ರೇಮ ಪ್ರಣಯದ ಮಾತುಗಳನ್ನೂ ಕೂಡ ಕದ್ದು ಭಕ್ತಿಯಿಂದ ಕೇಳಿಕೊಳ್ಳುತ್ತಿದ್ದೆವು.

ಒಮ್ಮೆ ನನ್ನ ವಾನರಸೇನೆಯೊಂದಿಗೆ ತಾತನ ಅಂಗಡಿ ಹೋಗಿದ್ದೆ. ಅಲ್ಲಿಯತನಕ ಅಮ್ಮ ಹೇಳಿದ್ದನ್ನಷ್ಟೇ ತರುತ್ತಿದ್ದ ನನಗೆ ದೇವತೆಗಳಂಥ ನನ್ನ ದೋಸ್ತ್‌ಗಳು ಆ ಪೆಟ್ಟಿ ಅಂಗಡಿಯಲ್ಲಿ ಮಾರುತ್ತಿದ್ದ ಅಮೃತದಂತ ಒಂದು ರೂಪಾಯಿಗೆ ಸಿಗುತ್ತಿದ್ದ ಬನ್ನು ಗುಲ್ಕನ್ನಿನ ರುಚಿ ತೋರಿಸಿದ್ದರು. ಆಗಿಂದ ನನಗೆ ಪ್ರತಿದಿನವೂ ಅದೇ ಕೆಲಸ. ತಾತನ ಅಂಗಡಿಗೆ ಹೋಗುವುದು ಬನ್ನು ಗುಲ್ಕನ್ ಮೆಲ್ಲುವುದು.

ನಮಗೆಲ್ಲಾ ಇನ್ನೂ ನೆನಪಿದೆ; ಒಮ್ಮೆ ಸಿಗರೇಟು ಸೇದಲು ಬಂದಿದ್ದ ಕಾಲೇಜು ಹುಡುಗರ ಗುಂಪಿನಲ್ಲೊಬ್ಬ ಸಣ್ಣಗೆ ಬಿಕ್ಕುತ್ತಿದ್ದದ್ದನ್ನು ಕಂಡು ನಾವೆಲ್ಲ ಅವನ ಕಷ್ಟಕ್ಕೆ ಕಿವಿಯಾದಂತೆ ಮೆಲ್ಲಗೆ ಅತ್ತ ಕಿವಿಯಿಟ್ಟೆವು.

ಆ ಪೆಟ್ಟಿಗೆ ಅಂಗಡಿಯ ಹಿಂದೆ ಒಂದು ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಇತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬಳು ಸುಂದರಿಯ ಮೇಲೆ ಈ ಬಿಕ್ಕುತ್ತಿದ್ದ ಹುಡುಗನಿಗೆ ಪ್ರೀತಿಯಾಗಿ, ಅವಳು ಕೆಲಸಕ್ಕೆ ಹೋಗುವಾಗ ತಿರುಗಿ ಬರುವಾಗ ಈ ಅಂಗಡಿಯ ಬಳಿ ನಿಂತು ಕಾಯುತ್ತಿದ್ದನಂತೆ. ನೋಡಿ ನೋಡಿ ಪ್ರೀತಿ ಅತಿಯಾಗಿ ಒಮ್ಮೆ ಹಾಸ್ಟೆಲ್ ವಿಳಾಸಕ್ಕೆ ಆ ಹುಡುಗಿಗೊಂದು ಪತ್ರ ಬರೆದು ಅಲ್ಲಿಂದಲೂ ಉತ್ತರ ಬರಲು ಶುರುವಾಗಿ ಅದು ಹಾಗೆ ಒಂದಷ್ಟು ತಿಂಗಳು ಮುಂದುವರೆದಿತ್ತಂತೆ. ರಸ್ತೆಯಲ್ಲಿ ಸಿಕ್ಕಾಗ ಮಾತನಾಡಲು ಧೈರ್ಯ ಇಲ್ಲದೇ ಪ್ರೀತಿ ಪ್ರೇಮವಾಗಿ ಪ್ರೇಮ ಬೆಚ್ಚನೇ ಸನಿಹ ಬಯಸಿದಾಗ ಅವಳಿಗೊಂದು ಪತ್ರ ಬರೆದು ಭೇಟಿಯಾಗಲು ಜಾಗ ಮತ್ತು ಸಮಯ ತಿಳಿಸಿದ್ದನಂತೆ. ಅದರಂತೆ ಆ ಜಾಗದಲ್ಲಿ ಚಂದವಾಗಿ ರೆಡಿ ಆಗಿ ಬಂದಿದ್ದ ಆ ಹುಡುಗನನ್ನು ಭೇಟಿಯಾಗಲು ಆ ಹುಡುಗಿ ಬದಲು ಹಾಸ್ಟೆಲ್ ಧಡೂತಿ ವಾರ್ಡನ್ ಬಂದಿದ್ದೂ, ಅವನಿಗೆ ಹಿಡಿದಿದ್ದ ಭೂತ ಬಿಡುಗಡೆ ಮಾಡಿಸಿ ಅಲ್ಲಿಂದ ಹೊರಟಿದ್ದಳಂತೆ. ಆ ಹುಡುಗ ಸ್ನೇಹಿತರೊಂದಿಗೆ ಇದನ್ನೆಲ್ಲಾ ವಿವರಿಸುವಾಗ ನಗು ತಡೆಯಲಾರದ ನಾವು ಜೋರಾಗಿ ನಕ್ಕು ಅವರೆಲ್ಲರೂ ನಮ್ಮನ್ನೆಲ್ಲಾ ಕಲ್ಲಲ್ಲಿ ಹೊಡೆಯಲು ಬಂದು ನಾವೆಲ್ಲ ಅಲ್ಲಿಂದ ಉಸಿರು ಬಿಗಿ ಹಿಡಿದು ಓಟ ಕಿತ್ತಿದ್ದೆವು.

ಆಗಿಂದಲೂ ನನಗೊಂದು ಆಸೆ. ನನ್ನೆತ್ತರಕ್ಕಿರುವ ಪೆಟ್ಟಿ ಅಂಗಡಿಗಳ ಕಂಡರೆ ಸಾಕು ಒಮ್ಮೆ ಒಳಗೆ ಕೂತು ಅಂಗಡಿಯ ವ್ಯಾಪಾರಿಯಂತೆ ದರ್ಪ ಮಾಡಬೇಕೆಂದು. ಆ ಆಸೆ ನಗರದ ಫುಟ್ಪಾತ್ ಮೇಲೆ ಎಲ್ಲೊ ಅಲ್ಲೊಂದು ಇಲ್ಲೊಂದು ಇರುವ ಪೆಟ್ಟಿ ಅಂಗಡಿ ನೋಡಿದರೆ ಇಂದಿಗೂ ಒಳಗೆ ಕುಳಿತುಕೊಳ್ಳಬೇಕು ಅನಿಸುವುದು ಸುಳ್ಳಲ್ಲ.

ಒಮ್ಮೆ ಆ ತಾತ ಅಂಗಡಿಯ ಪಕ್ಕದಲ್ಲಿ ಆಡುತ್ತಿದ್ದ ನಮ್ಮನ್ನು ಕರೆದು ನಾನು ಇಲ್ಲೇ ಮನೆಗೆ ಹೋಗಿ ಬರುವುದಾಗಿ ಮತ್ತು ನಮ್ಮನ್ನು ಅಂಗಡಿ ನೋಡಿಕೊಳ್ಳಬೇಕೆಂದು ಹೇಳಿದರು. ಹೋಗುವ ಮುನ್ನ ಯಾವ ಬಾಟಲಿಯಲ್ಲಿ ಎಷ್ಟೆಷ್ಟು ಪೆಪ್ಪರ್ಮೆಂಟುಗಳಿವೆ ಲೆಕ್ಕ ಗೊತ್ತಿದೆ ಅದರಲ್ಲಿ ಒಂದು ಖಾಲಿಯಾದರೂ ನಿಮ್ಮನ್ನೆಲ್ಲ ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಸಿಯೇ ಹೋಗಿದ್ದರು. ಅವರು ದೂರ ದೂರ ಹೋಗುತ್ತಾ ಕಣ್ಮರೆಯಾಗುತ್ತಿದ್ದ ಹಾಗೆ ನನ್ನ ಮನದಿಂಗಿತ ತಿಳಿದಿದ್ದ ನನ್ನ ಕುಚುಕು ಗೆಳತಿಯರು ಒಗ್ಗಟ್ಟಿನಿಂದ ನನಗಿಂತಲೂ ಎತ್ತರದಲ್ಲಿದ್ದ ಬಾಗಿಲು ಹತ್ತಲು ಸಹಕರಿದ್ದರು. ಅಲ್ಲೇ ಮುಂದೆ ಇಟ್ಟಿದ್ದ ಸಿಗರೇಟಿನ ಪ್ಯಾಕೆಟ್‌ಗಳೆಲ್ಲ ಒಳಗೆ ಬೀಳಿಸಿಕೊಂಡೆ ನಾನೂ ಒಳಗಿಳಿದಿದ್ದೆ. ಮನೆಗೆ ಹೋದ ತಾತ ಮತ್ತೆ ತಿರುಗಿ ಬರಲು ಮೂವತ್ತು ನಿಮಿಷಗಳಾದರು ಬೇಕು ಅಷ್ಟರಲ್ಲಿ ಎಲ್ಲರೂ ಒಮ್ಮೊಮ್ಮೆ ಒಳಗಿಳಿದು ತಾತನ ಕುರ್ಚಿ ಮೇಲೆ ಕುಳಿತುಕೊಳ್ಳಬೇಕೆಂದು ಮಾತನಾಡಿಕೊಂಡಿದ್ದೆವು. ಅದೇನಾಯಿತೋ ಏನೋ ಅಷ್ಟರಲ್ಲೇ ಹೋದ ತಾತ ಮಗ ಗಿರಿಯಣ್ಣನ ಜೊತೆ tvs ಲೂನಾದಲ್ಲಿ ಬರುವುದನ್ನು ಕಂಡ ನನ್ನ ಮಿತ್ರದ್ರೋಹಿಗಳು ನನ್ನನ್ನೊಬ್ಬಳನ್ನೇ ಬಿಟ್ಟು ಓಡಿ ಹೋಗಿ ಪಕ್ಕದಲ್ಲೇ ಇದ್ದ ತೃಪ್ತಿ ಕ್ಯಾಂಟೀನ್ ಕಟ್ಟಡದ ಮಹಡಿ ಹತ್ತಿ ಅವಿತುಕೊಂಡು ಬಿಟ್ಟರು. ಯಾರ ಸಹಾಯವು ಇಲ್ಲದೇ ಒಳಗಿಂದ ಹತ್ತಿ ಆಚೆ ನೆಗೆಯಲು ಬಾರದೆ ಪರದಾಡುತ್ತಿದ್ದ ನನ್ನನ್ನ ತಾತ ಒಂದೇ ಹಿಡಿತದಲ್ಲಿ ಎತ್ತಿ ಆಚೆ ಹಾಕಿದ್ದರು. ಆಚೆ ಹಾಕುವಾಗ ನನ್ನ ಲಂಗದೊಂದಿಗೆ ಶುಂಠಿ ಪೆಪ್ಪರ್ಮೆಂಟಿದ್ದ ಬಾಟಲಿ ಆಚೆ ಬಿದ್ದು ಹೊಡೆದು ಹೋಗಿ ಅದನ್ನು ಆರಿಸುತ್ತ ತಾತ ಶಾಪ ಹಾಕುತ್ತಿದ್ದರೆ, ಮಗ ಗಿರಿಯಣ್ಣ ಒಂದೂ ಮಾತಾಡದೆ ನನ್ನನ್ನೇ ನುಂಗುವ ಹಾಗೆ ನೋಡುತ್ತಿದ್ದರು. ಕೈಕೊಟ್ಟು ಮಹಡಿ ಸೇರಿಕೊಂಡು ಅಲ್ಲಿಂದಲೇ ಇದನ್ನೆಲ್ಲಾ ನೋಡುತ್ತಾ ಕಿಸಿ ಕಿಸಿ ನಗುತ್ತಿದ್ದ ನನ್ನ ಸ್ನೇಹಿತರು ನನ್ನ ಕಣ್ಣಿಗೆ ಕಡು ವೈರಿಗಳಂತೆ ಕಂಡಿದ್ದು ಒಂದು ವಾರ ಅವರೊಂದಿಗೆ ಟೂ ಬಿಟ್ಟಿದ್ದೆ.

ಈ ಎಲ್ಲಾ ಸವಿ ನೆನಪುಗಳು ಆ ಪೆಟ್ಟಿಗೆ ಅಂಗಡಿಯೊಳಗೆ ಈಗಲೂ ಭದ್ರವಾಗಿವೆ ಅನಿಸುತ್ತದೆ. ಆದರೆ ಈಗ ಆ ನಿವೇಶನದಲ್ಲಿ ಒಂದು ಕಾಂಪ್ಲೆಕ್ಸ್ ನಿರ್ಮಾಣವಾಗಿದ್ದು ಅಲ್ಲಿ ಎಲ್ಲಾ ಬಗೆಯ ಅಂಗಡಿಗಳಿದ್ದರೂ, ಅನುಕೂಲಗಳಿದ್ದರೂ ಇಂತಹ ಸಿಹಿ ನೆನಪುಗಳನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಮನುಷ್ಯ ಮುಂದುವರೆದಷ್ಟು ತಾನೂ ಯಂತ್ರದಂತಾಗುತ್ತಿದ್ದಾನೆ. ಭಾವನೆಗಳಿಲ್ಲ, ನೆನಪುಗಳಿಲ್ಲ ಮುಖ್ಯವಾಗಿ ಹಣಕ್ಕಷ್ಟೇ ಮಹತ್ವ ಕೊಡುತ್ತಿರುವ ಈಗಿನ ಜಗತ್ತಲ್ಲಿ ಇವುಗಳಿಗೆ ಸಮಯವೂ ಇಲ್ಲ.ಆ ಅಂಗಡಿಯ ತಾತನ ಹಾಗೂ ಅವರ ಮಗ ಗಿರಿಯಣ್ಣ ಈಗ ನಮ್ಮೊಂದಿಗಿಲ್ಲ.. ಈ ಲೇಖನ ಸ್ವರ್ಗದಲ್ಲಿರುವ ಅವರಿಬ್ಬರ ನೆನಪಿಗಾಗಿ..