ಅಮೇರಿಕಾದ ಕವಯಿತ್ರಿ ಎಮಿಲಿಗೆ ಕಾವ್ಯವೆಂದರೆ ಮಹತ್ವವಾದದ್ದನ್ನೇನೋ ಹೇಳುವುದು, ಗಾಢವಾದ ಭಾವನೆಗಳನ್ನ, ನಂಬಿಕೆಗಳನ್ನ ವರ್ಗಾಯಿಸುವುದು. ದೀರ್ಘವಾಗಿ ಏನನ್ನೂ ಹೇಳದೇ, ಚಿಕ್ಕದಾಗಿ ಮತ್ತು ತೀವ್ರವಾಗಿ ಬದುಕಿನ ಸಂಗತಿಗಳನ್ನು ಸೂಕ್ಷ್ಮವಾಗಿ ಬರೆದವಳು. ಬದುಕಿದ್ದಾಗ ಪ್ರಕಟವಾದ ಕವಿತೆಗಳು ತೀರಾ ಕಡಿಮೆ. ಮರಣಾನಂತರ ಅವಳ ಕವಿತೆಗಳು ಬೆಳಕು ಕಂಡವು.

ನಾನು ಯಾರು ಅಲ್ಲ ನೀವ್ಯಾರು?
ನೀವು ಕೂಡ ಯಾರು ಅಲ್ವಾ?
ಹಾಗಿದ್ರೆ ಸರಿ ನಾವಿಬ್ರೂ ಭಲೇ ಜೋಡಿ
ಶ್! ಯಾರಿಗೂ ಹೇಳಬೇಡಿ
ಸುಮ್ಮನೆ ಡಂಗೂರ ಸಾರಿ ಬಿಟ್ಟಾರು ನೋಡಿ

ಯಾರೋ ಆಗಿರುವುದೆಂದರೆ
ಮಹಾನ್ ಬೋರ್ ಅಲ್ವಾ!
ಇಡೀ ಮಳೆಗಾಲ ಜವುಗು ನೆಲಕ್ಕೆ
ತಮ್ಮದೇ ಬಡಾಯಿ ಕೊಚ್ಚಿಕೊಳ್ಳುವ
ಊರ ಮುಂದಿನ ಕೆರೆಯ
ವಂಡರಗಪ್ಪೆಯ ಹಾಗೆ

***

ಈ ಹೃದಯ ಬಯಸುತ್ತೆ
ಮೊಟ್ಟ ಮೊದಲಿಗೆ ಸುಖವನ್ನ
ಆ ಮೇಲೆ
ನೋವಿನಿಂದ ಮಾಫಿಯನ್ನ
ಆ ಮೇಲೆ ನೋವು
ಮರಗಟ್ಟಿಸೋ
ಆ ಸಣ್ಣ ಗುಳಿಗೆಯನ್ನ

ಆ ಮೇಲೆ
ನಿದ್ರೆಗೆ ಜಾರುವುದನ್ನ
ಅನಂತರ ಮಾತ್ರ
ದಂಡಾಧಿಪತಿಯ ಅನುಮತಿ ಸಿಕ್ಕರೆ
ಸಾಯುವ ಅನುಮತಿಯನ್ನು

****

ಓ ಮನಸೇ!
ಈ ರಾತ್ರಿ
ನಾವಿಬ್ಬರೂ ಕೂಡಿ
ಅವನನ್ನ ಮರೆಯೋಣ
ನೀನು ಅವನು ನೀಡಿದ ಬಿಸುಪನ್ನ
ಮತ್ತು ನಾನು ಅವನು ದಾಟಿಸಿದ ಬೆಳಕನ್ನ

ನಿನ್ನದಾದ ನಂತರ
ದಯವಿಟ್ಟು ನನಗೆ ಹೇಳು
ನಾನೂ ಸುರು ಮಾಡುವೆ
ಅವಸರಿಸು ನೀನೇನಾದರೂ ನಿಧಾನಿಸಿದರೆ
ನಾನು ಮತ್ತೆ ಅವನನ್ನ ನೆನೆಯುವೆ!

*****

ಅಕ್ಕ ಒಬ್ಬಾಕಿ ಮನಿಯೊಳಗ
ಬೇಲಿ ಆಚೆಯ ಆ ಬದಿಗೆ ಮತ್ತಿನ್ನೊಬ್ಬಾಕಿ
ಒಡಹುಟ್ಟಿದವಳು ಒಬ್ಬಳೇ ಆದರೂ
ಇಬ್ಬರೂ ನನ್ನವರೇ

ಇಕಿ ಒಂದೇ ಹೊಟ್ಟೆಯಲ್ಲಿ ಹುಟ್ಟಿ
ನನ್ನ ಬೆನ್ನಿಗೆ ಬಿದ್ದವಳು, ನನ್ನ ಅಂಗಿಗಳನ್ನೇ ತೊಟ್ಟಳು
ಆಕಿ ನಮ್ಮ ಗೂಡೊಳಗೆ ಬದುಕು ಕಟ್ಟಿಕೊಂಡವಳು, ನಮ್ಮೆದೆಯ ತೆನೆಗೆ ಅಂಟಿಕೊಂಡವಳು

ಧಾಟಿ ಬೇರೆ ಅವಳ ಹಾಡಿನದು
ಹಾಡಲಿಲ್ಲ ಅವಳು ನಮ್ಮಂತೆ
ಅವಳಷ್ಟಕ್ಕೆ ಅವಳು ಗುನುಗಿದಳು
ಗ್ರೀಷ್ಮ ಋತುವಿನ ಹೆಜ್ಜೇನಿನಂತೆ

ಬಾಲ್ಯದಿಂದ ಬಂದಿದ್ದೇವೆ ಬಹು ದೂರ
ಎಲ್ಲ ಏಳುಬೀಳುಗಳಲ್ಲೂ
ಹಿಡಿದಿದ್ದೇನೆ ಅವಳ ಕೈ ಅನವರತ
ದೂರದಾರಿ ಹೀಗೇ ಸವೆದಿದೆ ಅನಾಯಾಸ

ಇಷ್ಟು ಕಾಲವಾದರೂ
ಚಿಟ್ಟೆಗಳ ದಾರಿ ತಪ್ಪಿಸಿದೆ ಅವಳ ಗುನುಗು
ಅವಳ ಕಣ್ಣ ಗೊಂಬಿಯಲಿ
ಕಾಣುವ ಕೆನ್ನೀಲಿ ಹೂಗಳು ಸುಳ್ಳು ಹೇಳಿವೆ
ಅವಳಲಿ ಇಷ್ಟೂ ವಸಂತಗಳು ಕರಗಿ ಹೋಗಿವೆ

ಮಂಜಿನಂಥ ಮಬ್ಬು ಹರಿದು
ಈಗ ಈ ಬೆಳಗು ನನ್ನದು
ಇರುಳ ಅಗಲ ಕಪ್ಪು ಚಾದರದಿಂದ
ಈ ಒಂಟಿ ನಕ್ಷತ್ರ ಆರಿಸಿಕೊಂಡೆ
ಸೂಮಿ – ನನ್ನವಳೆಂದೆಂದಿಗೂ

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು.
ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ ಸಂದಿದೆ).
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ..