ಈ ಶೀರ್ಷಿಕೆಯ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳಬೇಡಿ. ಇದರಲ್ಲಿ ಅಂತಹ ತತ್ವದ್ದೋ, ಸತ್ವದ್ದೋ ಬದನೆಕಾಯೇನಿಲ್ಲ. ನಿಜ ಹೇಳಬೇಕೆಂದರೆ ಇದಕ್ಕೆ, ‘ಮಯಸ್ತೇನಿಯಾ ಗ್ರೇವಿಸ್‍ನಿಂದ ಕೆಂಡಸಂಪಿಗೆಗೆ ಸೈದ್ಧಾಂತಿಕ ಲಂಘನ’ ಅಂತ ಇಷ್ಟುದ್ದದ ಹೆಸರು ಕೊಟ್ಟು ನಾನೇ ಕನ್‍ಫ್ಯೂಸಾಗಿದ್ದೆ. A transtextual reading between Medulla Oblongata and Kendasampige ಅಂತ ನನಗೆ ಹೆಚ್ಚು ತೋಚುವ ಸುಡುಗಾಡು ಇಂಗ್ಲಿಷಿನಲ್ಲಿ ಸುರು ಹಚ್ಚಿ ಮತ್ತೇನೋ ಕೊರೆಯಬೇಕೆಂತಲೂ ಇದ್ದೆ. ಏನು ಮಾಡುವುದು ಹೇಳಿ? ಈ ಕೆಂಡಸಂಪಿಗೆಗಿರಲಿ, ನೀವು ನಂಬಿರುವ ಸಾಹಿತ್ಯಕ್ಕೂ ನಾನು ಹಿತ್ತಲು ಬೇಲಿ ನುಸುಳಿ ಬಂದವನು. ಯಾವುದೇ ‘ಸಾಕ್ಷಿ’ಯಲ್ಲಿ ಅಡಿಗರನ್ನು ಓದಿಕೊಂಡು ಬರೆಯಲಿಕ್ಕಿಳಿದವನಲ್ಲ. ವರ್ತಮಾನವನ್ನು ಕಟ್ಟೆಚ್ಚರದ ತೀಕ್ಷ್ಣ ಕಣ್ಣುಗಳಿಂದ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯದ ಕಾಳಜಿಗಳ ಪಟ್ಟು ಹಿಡಿದು ನಿಮ್ಮೆದುರು ನಿಂತವನಲ್ಲ. ಹೋದ ಸಲ ಐನೂರು ಚದರಗಳ ಮನೆ ಕಟ್ಟಿದವರು ಅದರ ಮೇಲೆ ನೂರೈವತ್ತು ಕೋಟಿ ದುಡ್ಡು ಅಳೆಯದೆ ಸುರಿದರೆಂದು ಹೇಳಿದ್ದು ಯಾವುದೇ ಸಮಾಜನಿಷ್ಠ ಜವಾಬ್ದಾರಿಯಿಂದಲ್ಲ. ಅಲ್ಲದೆ ಸರತಿ ನಿಂತು, ಸಾಹಿತ್ಯಿಕ-ಬಡ್ತಿಯ ಚಪಲದಿಂದ ಇಲ್ಲಿ ಸಂಪಾದನೆಗೆ ನಿಂತವನಲ್ಲ. ಬಂದಿದ್ದು, ಈಗಿಲ್ಲಿ ಮೆಡ್ಯುಲಾ ಆಬ್ಲಾಂಗೇಟದಿಂದ ‘ಕೆಂಡಸಂಪಿಗೇಯ’ ಅಂತೇನೋ ನುಣುಚಿಕೊಳ್ಳುತ್ತಿಲ್ಲವೆ- ಥೇಟು ಹಾಗೇ… ಅಷ್ಟೇ ease ಆಗಿ, ಸಲೀಸಾಗಿ.

ನನಗೆ ನೆನಪಿದೆ. ಆಗ ಒಂಭತ್ತನೇ ಕ್ಲಾಸಿನಲ್ಲಿದ್ದಿರಬೇಕು. ಅವತ್ತು ಮುಂಜಾನೆ, ಅಣ್ಣ ಅಂದರೆ ತಂದೆ ಅವತ್ತು ಕ್ಷೌರದ ಪೆಟ್ಟಿಗೆಯನ್ನು ಬಿಚ್ಚಿ ಕೂತಿದ್ದರು. ಅವರು ಕನ್ನಡಿಯಲ್ಲಿ ಮೋರೆಯಿಟ್ಟು ಕೆನ್ನೆ, ಗದ್ದ ಹೆರೆದುಕೊಳ್ಳುವವರೆಗೆ ನನ್ನ ತಂಗಿ ಗಟ್ಟಿಯಾಗಿ ತನ್ನ ಓದೊಪ್ಪಿಸುವುದು ಎಂದಿನ ವಾಡಿಕೆ. ಅಂದು ಲೈಫ್‍ಸೈನ್ಸ್ ನಲ್ಲಿ ಮಿದುಳು ಕುರಿತ ಏನೋ ಅಧ್ಯಾಯ. ಅವಳು ಓದಿ ಮುಗಿಸಿದ್ದೇ ತಡ ಅಣ್ಣ ಕೇಳಿದರು- ‘ಮೆಡ್ಯುಲಾ ಒಬ್ಲಾಂಗೇಟ ಎಲ್ಲಿದೆ?’ ತಂಗಿ ಕಕ್ಕಾವಿಕ್ಕಿ. ಇವಳೋ ಯಾವತ್ತೂ ಓದಿನಲ್ಲಿ ಅಷ್ಟಕ್ಕಷ್ಟೆ. ಅಣ್ಣನೆದುರು ಅರ್ಧ ತಾಸು ಏನನ್ನೋದಿ ಬಡಬಡಿಸಿದ್ದಳೋ, ದೇವರಿಗೇ ಪ್ರೀತಿ. ಅದಕ್ಕೆ ಉತ್ತರಿಸಲಿಲ್ಲವೆಂದರೆ ಮುಂದೇನು ಅಂತಲೂ ಗೊತ್ತಿದ್ದ ಕಾರಣ ಹಾಗೇ- ಮೆಡುಲಾ ಆಬ್ಲಾಂಗೇಟಾ ಮೆಡುಲಾ ಒಬ್ಲಾಂಗೇಟ್…. ಅಂತ ತಡವರಿಸಿದಳು. ಆ ಮುಂದಿನದನ್ನು ಊಹಿಸಿಕೊಂಡೇ ನಾಲಗೆ ತೊಡರಿರಬೇಕು! ಅಣ್ಣ ಅಂತಹ ದೂರ್ವಾಸಮೂರ್ತಿ ಬಿಡಿ! ಮೆಲ್ಲಗೆ ನನ್ನತ್ತ ಮುಖ ಮಾಡಿ ಕಣ್ಣಿನಲ್ಲೇ ಅಂಗಲಾಚಿದಳು. ನಾನು ಕೀಟಲೆ ಮಾಡುವ ಹಾಗೆ ಅವಳ ಕಿವಿಗೆ ಕ್ಲೂ-ಉಸುರಿದೆ. ನಾನು ಹೇಳಿದ್ದೇನೋ, ಅವಳು ಕೇಳಿಸಿಕೊಂಡಿದ್ದೇನೋ- ಒಟ್ಟಾರೆ ಒಂದು ಅಖಂಡ ವಿಶ್ವಾಸದಿಂದ ‘ಮೆಡುಲಾ ಆಬ್ಲಾಂಗೇಟಾ ಮೆಡ್ರಾಸ್‍ನಲ್ಲಿದೆ, ಅಣ್ಣಾ….’ ಅಂತ ಏಕ್‍ದಮ್ ಒದರಿದಳು. ಬೀಸುವ ದೊಣ್ಣೆ ತಪ್ಪಿಸಿದ ಆ ಕ್ಷಣದ ನಿರಾಳ, ನಿರುಮ್ಮಳವನ್ನು ಅನುಭೂತಿಸಿದಳೋ ಇಲ್ಲವೋ, ಆಗಲೆ ದೊಣ್ಣೆ ಬೀಸಿಯೇತೀರಿತ್ತು!!

ಈ ಘಟನೆ ಅವಳಿಗೆ ನೆನಪಿನಲ್ಲಿದೆಯೋ ಇಲ್ಲವೋ, ಯಾರಿಗೆ ಗೊತ್ತು? ಇವತ್ತು ಮಧ್ಯಾಹ್ನ ನಾನು ಕ್ಲಯಂಟೆದುರು ಕುಳಿತಿರುವಾಗ ಮೊಬೈಲಿಗೆ ಕರೆದು ಹೆಲೋ, ಏನು ಎತ್ತ… ಏನೊಂದೂ ಕೇಳದೆ ಒಂದೇ ಉಸಿರಿನಲ್ಲಿ- ‘ಮೆಡುಲಾ ಒಬ್ಲಾಂಗೇಟಾ’ ಅಂದರೇನು ಅಂತ ಕೇಳಿದಳು. ಮಗನಿಗೆ ಹೋಂವರ್ಕ್ ಮಾಡಿಸುವಾಗಲೆಲ್ಲ ಅವಳಿಗೆ ಸುಲಭವಾಗಿ ಸಿಗುವ ರೆಕನರ್ ನಾನು. ‘ಲೇ… ನಾನೊಂದು ಮೀಟಿಂಗ್‍ನಲ್ಲಿದ್ದೀನೀ….’ ನಾನು ಪಿಸುಗುಡುವ ಮೊದಲೇ ಪ್ರಶ್ನೆಯ ಎರಡು ಆವರ್ತನೆಯಾಗಿತ್ತು. ಅವಳ ಅವಾಂತರವನ್ನು ನೋಡಿ ನಗು ತಡೆಯಲಾಗಲಿಲ್ಲ. ‘ಆಮೇಲೆ ಫೋನು ಮಾಡುತೀನೇ…’ ಅಂದು ಫೋನು ಕಡಿದೆ. ಅವಳು ಹೀಗೆ ಆಗಾಗ್ಗೆ ಕರೆಯುವಾಗಲೆಲ್ಲ ಕುಶಲೋಪರಿಗಿಂತ ಇಂತಹ ಪ್ರಶ್ನೋಪರಿಗಳೇ ಹೆಚ್ಚು. ಇಂಟಿಜರ್ಸ್ ಅಂದರೇನು? ಪ್ರೈಮ್ ನಂಬರಿಗೂ ಇಂಟಿಜರಿಗೂ ಇರುವ ವ್ಯತ್ಯಾಸವೇನು? ಫಾದರ್ ಆಫ್ ಎವೊಲ್ಯೂಷನ್ ಯಾರು? ಡೀಎನ್‍ಏ ಎಕ್ಸ್‍ಪ್ಯಾನ್ಷನ್ ಏನು? ಐಸಾಸೆಲೆಸ್ ಟ್ರಯಾಂಗಲ್ ಅಂದರೆ…? Pluto is not a planet… ಸರೀನೋ ತಪ್ಪೋ…? ಈ ಇತ್ಯಾದಿಗಳ ಮಗನ ಮನೆಗೆಲಸವನ್ನು ನನ್ನ ಮೀಟಿಂಗುಗಳ ಮೇರುಘಳಿಗೆಗಳಲ್ಲೋ, ಜಡಿಮಳೆಗೂ ಜಗ್ಗದೆ ಜಡಿದುಕೊಂಡ ಟ್ರಾಫಿಕ್ ಬಗ್ಗಡದ ಪ್ರಶಸ್ತ ಲಗ್ನದಲ್ಲೋ ಇರುವಾಗ ಕರೆದು ಕೇಳಿ ಬರೆಸುತ್ತಾಳೆ. ಇನ್ನು ಪುರುಸೊತ್ತಿದೆಯೆಂದು ಏನಾದರೂ ಕುಶಲಕ್ಕಿಳಿದರೆ ‘ಇಲ್ಲಿ ಆನ್ಸರ್ ಟು ದ ಪಾಯಿಂಟ್ ಅಂತ ಬರೆದಿದೆ ಅಂತ ಹೇಳಮ್ಮಾ… ಮಾವಂಗೆ!’ ಅಂತ ಸೋದರಳಿಯನ ಹುಕುಮೂ ಆಗಿ, ಮಾತು ಮುಂದುವರೆಯುವುದೇ ಇಲ್ಲ.

ತನ್ನೆದುರಿಗಿನ ಈ ಪೇಚಾಟವನ್ನು ನೋಡಿ ಕ್ಲಯಂಟು ಏನಾಯಿತೆಂದು ಕೇಳಿದ. ಆ ಕುರಿತು ಸಂಕ್ಷಿಪ್ತವಾಗಿ ಹೇಳಿದೆ. ಇಬ್ಬರೂ ನಕ್ಕು ಹಗುರಾಗಿ ಮತ್ತೆ ಪ್ರಾಜೆಕ್ಟಿನ ಹರಟೆಯಲ್ಲಿ ತೊಡಗಿದೆವು. ನನ್ನ ನಕಾಶೆಗಳನ್ನು ಮಡಿಚಿ, ಕವರಿಗೆ ತುರುಕಿಕೊಳ್ಳುವಾಗ, Incidentally what’s Medulla Oblongata, Vastarey? -ಅಂತ ಕುತೂಹಲಿಸಿದ. ಕೈಕುಲುಕುತ್ತಾ, ಕಮಾನ್ ಯೂ ನೋ ದಟ್ ಎಂದು ನಕ್ಕೆ. ಕೇಬಿನಿನಿಂದ ಬೀಳ್ಕೊಂಡು ಹೊರಬರುವಾಗ, ಮೊಬೈಲನ್ನು ನಾನು ಕೂತಲ್ಲಿನ ಬದಿಯ ಕುರ್ಚಿಯಲ್ಲಿ ಮರೆತಿದ್ದು ನೆನಪಾಗಿ ಮತ್ತೆ ಒಳಹೊಕ್ಕರೆ ಅವನ ಇಪ್ಪತ್ತೊಂದಿಂಚಿನ ಡೆಸ್ಕ್ ಟಾಪಿನಲ್ಲಿ ಮೆಡುಲಾ ಆಬ್ಲಾಂಗೇಟದ ‘ವಿಕಿಪೀಡಿಯಾ’ ಪುಟ ದೊಡ್ಡದಾಗಿ ಹರವಿಕೊಂಡಿತ್ತು!

ಈ ಘಟನೆಯನ್ನು ಇಲ್ಲಿ- ಹೀಗೆ ಹಂಚಿಕೊಂಡಿದ್ದಕ್ಕೆ ಬಲವಾದ ಕಾರಣವೇನಿಲ್ಲ. ಯಾವತ್ತಿಗೂ ತಾನು, ತನ್ನದೊಂದಿಷ್ಟು ಉಸಾಬರಿ ಅಂತ ತನ್ನಷ್ಟಕ್ಕೆ ಇದ್ದುಬಿಡುವ ಈ ನನ್ನ ತಂಗಿಯನ್ನು ಯಾವ ವಿಚಾರವೂ ಕಾಡುವುದೇ ಇಲ್ಲವೇನೋ. ಯಾರದೋ ಮದುವೆ, ಇನ್ನಾರದೋ ಡಿವೋರ್ಸು, ಇನ್ನೆಲ್ಲೋ ಮುರಿದ ಸಂಬಂಧ… ಇಂತಹ ಸ್ತ್ರೀಸಹಜ, ಮನುಷ್ಯಸಹಜ ಗುಸುಗುಸುಗಳಲ್ಲೂ ಅವಳು ತೊಡಗಿಕೊಳ್ಳುವುದಿಲ್ಲ. ಇನ್ನು ನನ್ನೊಟ್ಟಿಗೆ ಆಗೊಮ್ಮೆ ಈಗೊಮ್ಮೆ ಜರುಗುವ ಮಾತುಗಳೂ ಈ ಮೆಡುಲಾ ಆಬ್ಲಾಂಗೇಟಾ ತರಹದವೇ. ಅದೂ ತನ್ನ ಮಗನ ಸಲುವಾಗಿ. ಮನೆಗೆಲಸ ಮುಗಿಯುತ್ತಲೇ ತನ್ನಷ್ಟಕ್ಕೆ ಒಂದಿಷ್ಟು ಧ್ಯಾನ, ಜಪ, ತಪ ಅಂತ ಏಕಾಂತ ಸವೆಯುತ್ತಾಳೆ. ತಾನು ಮಾಡುತ್ತಿರುವುದನ್ನು ಉಳಿದ ಇನ್ನೆಲ್ಲವೂ ಲೌಕಿಕ ಅಂತ ಬದಿಗಿರಿಸುತ್ತಾಳೆ. ನಾನು ಬರೆಯೋದೇನಾದರೂ ಓದಬಾರದೇನೇ? -ಅಂದರೆ ಅದೆಲ್ಲ ‘ಅನ್‍ನೆಸೆಸರಿ ಡಿಸ್ಟ್ರ್ಯಾಕ್ಷನ್’ ಅಂತ ಮೊಟುಕಿ, ಪುಟ ಕೂಡ ಮಗುಚದೆ ಮೂಲೆಗೆಸೆಯುತ್ತಾಳೆ. ‘ನೀನು ಹೀಗೇ ಮುಂದುವರೆದರೆ ಒಂದು ದಿನ ಜ್ಞಾನೋದಯವಾಗಿ, ಅರ್ಧನಿಮೀಲಿತ ಕಣ್ಣುಗಳಿಂದ ಬೋಧನೆಗೆ ಕೂತುಬಿಟ್ಟರೆ ನನ್ನ, ನನ್ನ ಮಗನ ಗತಿಯೇನೂ…?’ ಅವಳ ಗಂಡ ನಾಟಕೀಯವಾಗಿ ಕೇಳುತ್ತಾನೆ. ‘ಜ್ಞಾನೋದಯ ದೂರದ ಮಾತು. ಒಂದು ಜನ್ಮದಲ್ಲಿ ಸಿಗೋಂಥದ್ದಲ್ಲ ಬಿಡಿ…’ ಎಂದು ಅದನ್ನೇ ನಂಬಿಕೊಂಡಿರುವಂತೆ, ಸಾಕ್ಷಾತ್ಕಾರವೇ ತನ್ನ ಜೀವಿತದ ಧ್ಯೇಯವಾಗಿದೆಯೆಂಬಂತೆ ಹೇಳುತ್ತಾಳೆ. ಅವಳ ಮಟ್ಟಿಗೆ ನಾನು ಮಾಡುತ್ತಿರುವುದೆಲ್ಲ ಪರಮ ಲೌಕಿಕದ ವಾಮಾಚಾರವೇ ಹೌದು. ಅವಳಿಗೆ ಒಲ್ಲದ್ದು ಮತ್ತು ಒಗ್ಗದ್ದು. ಒಮ್ಮೊಮ್ಮೆ ಭಾವುಕಳಾಗಿ, ಅದೇನೋ ಬರೀತಿಯಲ್ಲ ಅದರಲ್ಲಿ ಆಧ್ಯಾತ್ಮಿಕ ಆಯಾಮ ಯಾಕಿರಬಾರದು? -ಎಂದು ಕೇಳಿದ್ದಿದೆ. ಸುಮ್ಮನೆ ಟೆನ್ಷನ್ ಮಾಡಿಕೊಂಡು ಬದುಕುತೀಯಲ್ಲ- ದೇವರನ್ನು ನಂಬು! ಒಳ್ಳೇದಾಗುತ್ತೋ ಇಲ್ಲವೋ ನಿನಗೇ ಗೊತ್ತಾಗುತ್ತೆ!! -ಹೀಗೆಲ್ಲ ಉಪದೇಶಿಸುವುದೂ ಇದೆ. ಆಗೆಲ್ಲ ನಿನ್ನ ನಂಬುಗೆ ನಿನ್ನದು, ನನ್ನದು ಇನ್ನೊಂದು ಎಂದು ಸುಮ್ಮನಾಗುತ್ತೇನೆ.

ಫ್ರ್ಯಾಂಕ್ ಗೇಹ್ರಿ (Frank Gehry) ಎಂದೊಬ್ಬ ಆರ್ಕಿಟೆಕ್ಚರಿನಲ್ಲಿ ಉದ್ದಾಮನಿದ್ದಾನೆ. ವಯಸು ಎಪ್ಪತ್ತು ಮೀರಿದ್ದೀತು. ಆರ್ಕಿಟೆಕ್ಚರನ್ನು ಕಲಿತು, ಪ್ರಯೋಗಿಸುತ್ತಿರುವ ಸದ್ಯದ ಯುವೋತ್ಸಾಹಗಳಿಗೆ ಅವನ ಪರೋಕ್ಷ ಕುಮ್ಮಕ್ಕು ಇದ್ದೇ ಇದೆ. ದೇಶ, ದೇಶಾಂತರದ ಡಿಸೈನ್ ಶಾಲೆಗಳಲ್ಲಿ ಅವನ ಹೆಸರನ್ನು ಹುಡುಗರು ಪಿಟಿಪಿಟಿಸುವುದಿದೆ. ಅವನು ಕಟ್ಟುವ ವಿನ್ಯಾಸಗಳು ‘ಔಟ್ ಆಫ್ ದಿ ಬಾಕ್ಸ್’ ಅನ್ನುತ್ತಾರಲ್ಲ- ಅಂತಹವು. ಅವನು ಪೈಥಗೊರಸ್ ಥೀರಮನ್ನು ಖಂಡಿಸುತ್ತಾನೆ. ಯೂಕ್ಲಿಡನ ಜ್ಯಾಮಿತಿಗೆ ಸವಾಲೊಡ್ಡುತ್ತಾನೆ. ಅವನ ಕಟ್ಟಡಗಳಲ್ಲಿ ಎರಡು ಗೋಡೆಗಳು ಲಂಭಕೋನದಲ್ಲಿ ಪರಸ್ಪರ ಸೇರುವುದಿಲ್ಲ. ಅಂದರೆ ಕೋಣೆಯೊಳಗಿನ ಮೂಲೆಗೆ ತೊಂಭತ್ತು ಡಿಗ್ರಿಯ ಅಳತೆಯಿರುವುದಿಲ್ಲ. ಅವನ ನಕಾಶೆಗಳಲ್ಲಿ ಚೌಕ, ಆಯತಗಳಿರುವುದಿಲ್ಲ. ಥರಾವರೀ ಸ್ಟ್ರೋಕುಗಳ ‘ಅಬ್ಸ್‍ಟ್ರ್ಯಾಕ್ಟ್’ ಇರಬಹುದೆ ಎಂದು ಸೋಜಿಗವಾಗುವ ಹಾಗೆ ಅಮೂರ್ತವಿರುತ್ತದೆ ವಿನ್ಯಾಸ. ಅವನನ್ನು ಒಮ್ಮೆ ಯಾರೋ ಕೇಳಿದರಂತೆ- ನೀವು ಚೌಕವನ್ನು ಧಿಕ್ಕರಿಸುವುದೇಕೆ? ಅದಕ್ಕೆ ಅವನ ಉತ್ತರ- `I have invested my lifetime to understand what not a square is! Still have to understand that!!’ -ಎಂದಿತ್ತಂತೆ!! ಅಂದರೆ ಚೌಕವನ್ನು ಅರ್ಥಯಿಸಲಿಕ್ಕೆ ಅದಲ್ಲದ್ದನ್ನು ಅರ್ಥಯಿಸಿಕೊಳ್ಳಬೇಕು. ನಾನು ಒಮ್ಮೊಮ್ಮೆ ನನ್ನ ವಿದ್ಯಾರ್ಥಿಗಳಿಗೆ ಇದನ್ನೇ ಹೇಳುತ್ತೇನೆ. `Explore… Exploration has many possibilities. Prefixing a form deletes the possibility of design as to what it can be otherwise at its very inception! ನಾವು ಕೆಮಿಸ್ಟ್ರಿ ತರಗತಿಗಳಲ್ಲಿ ಕ್ವಾಲಿಟೆಟಿವ್ ಅನಾಲಿಸಿಸ್ ಮಾಡಿರುತ್ತೇವಲ್ಲ- ಆಗ ನಮಗೆ ಕೊಟ್ಟಿರುವ ಒಂದು ಚಿಟಿಕೆ ಉಪ್ಪನ್ನು ಅದು ಸೋಡಿಯಮ್ ಕ್ಲೊರ್‍ಐಡೇ ಅನ್ನಲಿಕ್ಕೆ ಎಷ್ಟೆಲ್ಲ ಪ್ರಯೋಗಗಳನ್ನು ಮಾಡುತ್ತೇವೆ ಮತ್ತು ಆ ಪ್ರಯೋಗಗಳಾದ ಮೇಲೆ ಇದು ಇನ್ನಾವುದೇ ಉಪ್ಪಲ್ಲ, ಸೋಡಿಯಮ್ ಕ್ಲೋರೈಡ್ ಎಂದು ದಾಖಲಿಸುತ್ತೇವೆ. ಹೀಗೆ ಅಲ್ಲಗಳೆದ ಮೇಲಷ್ಟೇ ಅದು ಯಾವುದೆಂದು ದೃಢಗೊಳ್ಳುವುದು? ನಮ್ಮೆದುರಿನ ಇವತ್ತಿನ ಸತ್ಯವೂ ಅಂಥದೇ. ಒಂದು ಸತ್ಯ ಅನಿಸಬೇಕಾದರೆ, ಸತ್ಯವಲ್ಲದ್ದು ನಮಗೆ ಗೊತ್ತಿರಬೇಕು…’ -ಹೀಗೆಲ್ಲ ನಂಬಿದ್ದನ್ನು ಬುರುಡೆ ಬಿಟ್ಟಾಗ ಎದುರಿನ ಹುಡುಗರು ಏನೋ ದಕ್ಕಿಸಿಕೊಂಡಂತೆ ಪುಳಕಗೊಳ್ಳುತ್ತಾರೆ. ಕಣ್ಣುಗಳು ಮಿಂಚುತ್ತವೆ. ಆದರೆ ಅವೆಲ್ಲ ನನ್ನ ಮಟ್ಟಿಗೆ ಸುಳ್ಳೇ ಹೌದು. ವಾಸ್ತವದಲ್ಲಿ ಆಗುವ ಪುಳಕ ಈ ಒಬ್ಬೊಬ್ಬನೂ ತನ್ನ ಊಹೆಯ ಮೊನೆಯಿಂದ ವಿನ್ಯಾಸವನ್ನು ಕಟೆದು ತಳೆಸಿದಾಗ!

ಹೀಗಾಗಿಯೇ ನನ್ನೀ ತಂಗಿ ಹೇಳುವುದನ್ನು ಸಲೀಸಾಗಿ ನಂಬಲಾಗುವುದಿಲ್ಲ. ಹಾಗೆ ನಂಬುವುದೂ ಸಲ್ಲ. ಏಕೆಂದರೆ ಅದು ಅವಳ ಅನುಭವ. ಅದು ತನ್ನ ಅನುಭವಕ್ಕೆ ಅವಳು ಕೊಟ್ಟುಕೊಂಡ ಬರೇ ಮಾತು. ಅದನ್ನು ನಂಬುವುದಾದರೆ ಅವಳ ಅನುಭವವನ್ನು ನಾನೂ ಅನುಭವಿಸಿ ಕಂಡುಕೊಂಡಿರಬೇಕಷ್ಟೆ? ನನ್ನ ಮಟ್ಟಿಗೆ ಎಲ್ಲೂ, ಎಂದೂ ಕಂಡಿರದ ಫ್ರ್ಯಾಂಕ್ ಗೇಹ್ರಿ ಅರ್ಥದಲ್ಲಿ ಹತ್ತಿರವಿರುವಷ್ಟೇ- ಒಡಹುಟ್ಟಿದ ತಂಗಿ ಹತ್ತಿರವಿದ್ದೂ ದೂರ ನಿಲ್ಲುತ್ತಾಳೆ. ಏಕೆಂದರೆ ಈ ‘ಗೇಹ್ರಿ’ಯನ್ನು ನನಗೆ ಅನುಭವಿಸಿಯೂ ಗೊತ್ತು. ಹಾಗಾಗಿ ಅವನು ನನ್ನ ಮಟ್ಟಿಗೆ ತಂಗಿಗಿಂತ ಹೆಚ್ಚು ಅರ್ಥವಾಗುತ್ತಾನೆ.

ಇದೇ ನಿಟ್ಟಿನಲ್ಲಿ ನಾನು ಅಶೋಕ ಹೆಗಡೆಯ -To understand poetry is a meaningless exercise ಎನ್ನುವುದನ್ನು ಒಪ್ಪುತ್ತೇನೆ. ‘ಪದ್ಯದ ತಳಪಾಯವಿರುವುದೇ ಅರ್ಥವಿಮೋಚನೆಯಲ್ಲಿ. ಕಾವ್ಯವನ್ನು ಅನುಭವಿಸಬೇಕು’ -ಅಶೋಕರ ಈ ಮಾತನ್ನು ನಾನು ಎಲ್ಲ ಸೃಜನಕ್ರಿಯೆಗಳಿಗೂ ವಿಸ್ತರಿಸಿಕೊಂಡು ಮತ್ತು ಅವನ್ನು ಒಳಗೊಂಡು ಓದುತ್ತೇನೆ. ಮಣಿಕಟ್ಟಿನ ‘ಟೈಟಾನ್’ ಇರಲಿ, ಕಣ್ಣು ತಂಪಾಗಿಸುವ ‘ರೇಬ್ಯಾನ್’ ಇರಲಿ, ಕಾಲು ತಳೆಯುವ ‘ರೀಬಾಕ್’ ಇರಲಿ- ಅವೆಲ್ಲ ‘ಅರ್ಥ’ವಾಗುವುದು ಅನುಭವದ ನಿಟ್ಟಿನಲ್ಲಿ ಮಾತ್ರ. ‘ಆಪಲ್’ ಕೃಪಾಪೋಷಿತ ಐಫೋನು ಹೆಚ್ಚು ಸುಲಲಿತವೆನಿಸುವುದು ಅಂಗೈಯಲ್ಲಿ ಅದನ್ನು ತಾಳಿ, ಕರತಲಾಮಲಕ ಮಾಡಿಕೊಂಡಾಗಲೇ. ಅದನ್ನು ಸ್ಕ್ರಾಲಿಸಿ, ಜಾಲಿಸಿದಾಗ ಮಾತ್ರವೇ! ಪದ್ಯವನ್ನು ಕುರಿತು ಕಾವ್ಯಾಸ್ವಾದನೆಯೆಂದರೆ ಅದರ ಸಾರ ತಗ್ಗಿಸಿದ ಅರ್ಥವೇ ಸರಿ. ಏಕೆಂದರೆ ಅನುಭವವೆನ್ನುವುದು ಆಸ್ವಾದವನ್ನು ಒಳಗೊಂಡೂ ಮೀರಿರುವ ಅನುಭೂತಿ. ಅದರ ಲೆವೆಲ್ಲೇ ಬೇರೆ, ಬಿಡಿ! ಜೈಸಲ್ಮೇರಿನಲ್ಲಿ, ಶುಚೀಂದ್ರಮ್‍ನಂತಹ ಊರುಗಳಲ್ಲಿ ಅಡ್ಡಾಡುವಾಗ ನನ್ನಂಥವರಿಗೆ ದಕ್ಕುವ ಅನುಭವವನ್ನು ಹೇಳಿಕೊಳ್ಳಲು ಮಾತು ಸಾಲವು. ಹಾಗೆ ಹೇಳಿದರೂ ಅದು ಬರೇ ಮಾತು ಅಷ್ಟೆ. ಈ ಪದ್ಯದ ಜಾಯಮಾನವೂ ಇಂಥದ್ದೇ. ಬರೇ ಹೇಳಿಕೆಗಳಿಂದ ಅದರ ‘ಪರಮಾರ್ಥ’ ದುರ್ಲಭವೇ ಉಳಿಯುತ್ತದೆ.

ನನಗೆ ಸೋಜಿಗವೆನಿಸುವುದು ಸಾಹಿತ್ಯದ ಮೇಲೆ ದೊಡ್ಡ ದೊಡ್ಡ ಮಾತು ಆಡುವ ಮಹಾನುಭಾವರು ಆರ್ಕಿಟೆಕ್ಚರಿಂತಹ ಅಷ್ಟೇ ಕ್ರಿಯಾಶೀಲ ಕ್ಷೇತ್ರದ ಬಗ್ಗೆ ಸಲ್ಲದ ಧೋರಣೆಗಳನ್ನಿಟ್ಟುಕೊಂಡಿರುವುದು. ಮನೆಯೆನ್ನುವುದರ ವಿನ್ಯಾಸ ಒಂದು ಪದ್ಯದಷ್ಟೇ, ಒಳ್ಳೆಯದೊಂದು ಕತೆ ಕೊಡುವ ಉನ್ಮಾದದಷ್ಟೇ ಸಾಟಿಯ ಅನುಭವವೆನ್ನುವುದನ್ನು ಅವರು ನಂಬುವುದಿಲ್ಲ. ಅವರ ಮಟ್ಟಿಗೆ ಎಲ್ಲರೂ ಅಂದುಕೊಳ್ಳುವ ಹಾಗೆ ಮನೆ ಬರೇ ಕಲ್ಲು, ಮಣ್ಣು, ಗಾರೆ, ಇಟ್ಟಿಗೆಗಳಿಂದಾದ ಬಳಕೆ, ಬಾಳಿಕೆಗಳಿಗಿರುವ ಕಟ್ಟಡ ಮಾತ್ರ! ಒಂದು ಪದ್ಯವಾಗುವುದಕ್ಕೆ ಧ್ಯಾನವಿರಬೇಕು ಅಂತ ಹುಕುಮು ಮಾಡುವ ಮಂದಿಗೆ ಅದೇ ಪದ್ಯಕ್ಕೆ ಸಮ ಸಮ ನಿಲ್ಲಬಲ್ಲ ಇನ್ನೊಂದು ಸ್ವೋಪಜ್ಞಕ್ರಿಯೆಗೂ ಬೇಕಾಗುವ ಧ್ಯಾನದ ಕಿಂಚಿತ್ತು ಪರಿವೆಯಿದ್ದಂತಿಲ್ಲ. ನಿಮ್ಮ ನೋಕಿಯಾದ ರಿಂಗ್‍ಟೋನುಗಳನ್ನು ಸಂಯೋಜಿಸಿದ ಮನಸ್ಸೂ ಇಂಥದೇ ಒಂದು ಧ್ಯಾನಸ್ಥ ಸ್ಥಿತಿಯಿಂದಲೇ ತಾನೆ? ಇದನ್ನೇ ನಾನು Creative Orgasm ಅನ್ನುತ್ತೇನೆ. ಈ ಆರ್ಗ್ಯಾಸ್ಮಿಕ್ ಅನುಭೂತಿಯೇ ಜಗತ್ತಿನ ಎಲ್ಲ ಸೃಷ್ಟಿಗಳ ಹಿಂದಿನ ಚೋದಕವಷ್ಟೆ? ಹಾಗಾಗಿಯೇ ಉದ್ದನೆ ಕೂದಲಿನ ಗುಂಗುರನ್ನು ನೇರಗೊಳಿಸಿಕೊಂಡು, ಹೆಗಲು ಬಗುಲಿಗೆ ಹಚ್ಚೆ ಹೊಯಿಸಿಕೊಂಡು, ಮೂಗಿಗೆ ಹುಬ್ಬಿಗೆ ನತ್ತಿಟ್ಟುಕೊಂಡು ಸದಾ ಟ್ರಾನ್ಸ್‍ನಲ್ಲಿರುವ ಹಾಗೆ ಮತ್ತೇರಿದಂತೆ ತೋರುತ್ತ ನನ್ನೆದುರು ಕೂರುವ ಡಿಸೈನರ್ ಪಡ್ಡೆಗಳು ನನಗೆ ಅಸಹಜವೆನಿಸುವುದಿಲ್ಲ. ಅವರು ಒಳಗೇ ಕಲೆಹಾಕಿಕೊಂಡಿರುವ ಎನರ್ಜಿಯಿದೆಯಲ್ಲ- ಒಂದು ಕ್ರಿಯಾಶೀಲ ಚೈತನ್ಯ, ಅದು ಹಾಳೆಯ ಮೇಲೊಂದು ಚಿತ್ತಾರವಾಗಿ ಸ್ಫುರಣಗೊಳ್ಳಲಿ ಅಂತ ಸದಾ ಹಾತೊರೆಯುತ್ತೇನೆ. ಪದ್ಯವನ್ನು ಹುಟ್ಟಿಸುವ ಉತ್ಕಟ ಮನಸ್ಥಿತಿಯೂ ಇದೇ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಈ ಸೃಜನ-ಚೈತನ್ಯವನ್ನು ನೀವಂದುಕೊಂಡಿರುವ ‘ಸಾಹಿತ್ಯ’ವೆನ್ನುವುದನ್ನು ಮೀರಿ ಕಣ್ಣು ಹಾಯಿಸಿ ಕಂಡುಕೊಳ್ಳಿರೆಂದು ಆಶಿಸುತ್ತೇನೆ.

ನಿಮ್ಮ ಮೆಡ್ಯುಲಾ ಆಬ್ಲಾಂಗೇಟಗಳು ಹುರಿಗೊಳ್ಳಲಿ. ಹೃದಯ ಹಗುರವಾಗಲಿ.

ನಮಸ್ಕಾರ.

ನಾಗರಾಜ ವಸ್ತಾರೆ , ಅತಿಥಿ ಸಂಪಾದಕ