ಬ್ಯಾಂಡ್ ಹೊಂದಿರುವ ಸಂಗೀತ ವಾದ್ಯಗಳ ವೈವಿಧ್ಯತೆ, ತಬಲಾ ಬಾರಿಸುವ ನಿಪುಣತೆ, ಕೊಳಲು ಊದುವ ಮಾಧುರ್ಯ, ವಯಲಿನ್ ನುಡಿಸುವ ತನ್ಮಯತೆ, ಕೀಬೋರ್ಡ್ ಮೇಲೆ ನಲಿದಾಡುವ ಬೆರಳುಗಳ ಚಾಕಚಕ್ಯತೆ, ಎಲ್ಲವೂ ಚೊಕ್ಕವಾಗಿ ಚೆಂದೆನಿಸಿತ್ತು. ನಾನು ಇದೆ ಮೊದಲ ಬಾರಿ ಎಲೆಕ್ಟ್ರಿಕ್ ತಬಲಾ ನೋಡಿದ್ದು, ಬೆರಗಾಗಿದ್ದು. ಅದನ್ನು ಬಾರಿಸುತ್ತಿದ್ದ ಯುವಕ ಕಾರ್ಯಕ್ರಮವನ್ನು ನಿರ್ದೇಶಿಸುತ್ತಿದ್ದ ಕೂಡ. ಅವಲ್ಲದೆ, ಇನ್ನಿಬ್ಬರು ಎರಡು ಶಾಸ್ತ್ರೀಯ ತಬಲಾಗಳನ್ನೂ ಬಾರಿಸುತ್ತಿದ್ದರು. ಇಷ್ಟಲ್ಲದೆ, ಆಸ್ಟ್ರೇಲಿಯಾದ ಕೆಲವೇ ಮಂದಿ ಗಿಟಾರ್ ಬೇಸ್ ತಜ್ಞರಲ್ಲಿ ಒಬ್ಬ ಯುವಕ ಈ ಬ್ಯಾಂಡ್‌ನಲ್ಲಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ಈ ವಸಂತಮಾಸದಲ್ಲಿ ಆಸ್ಟ್ರೇಲಿಯಾ ಪೂರ್ತಿ ಭರಭರ ಕಾರ್ಯಕ್ರಮಗಳು ಜರುಗುತ್ತಿವೆ. ಅವನ್ನೆಲ್ಲಾ ಒಮ್ಮೆ ಅವಲೋಕಿಸಿದರೆ ಯಾಕೊ ಫ್ಯಾಷನ್ ಪೆರೇಡ್ ರೂಪಕ ಮನಸ್ಸಿಗೆ ಬರುತ್ತದೆ. ನಾನೆಂದೂ ಪ್ರತ್ಯಕ್ಷವಾಗಿ ಫ್ಯಾಷನ್ ಪೆರೇಡ್ ನೋಡಿದವಳಲ್ಲ. ಟೀವಿಯಲ್ಲೊ ಇಲ್ಲಾ ಚಲನಚಿತ್ರಗಳಲ್ಲೊ ಕಾಣುವ ಫ್ಯಾಷನ್ ಪೆರೇಡ್‌ನಲ್ಲಿ ಒಬ್ಬರ ನಂತರ ಇನ್ನೊಬ್ಬ ರೂಪದರ್ಶಿ ಹೆಜ್ಜೆಹಾಕುತ್ತಾ ವಿಧವಿಧ ಹೊಸ ಉಡುಪು ಡಿಸೈನ್ ಪ್ರದರ್ಶಿಸಿ ಸರಿದು ಹೋಗುತ್ತಾರೆ. ಹಾಗೆಯೇ, ಈ ದೇಶದಲ್ಲಿ ಸೆಪ್ಟೆಂಬರ್‌ನಿಂದ ಕ್ರಿಸ್ಮಸ್ ತನಕ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನೂರಾರು ವಿಧದ ಕಾರ್ಯಕ್ರಮಗಳು ಕಣ್‌ಸೆಳೆದು ಸರಸರನೆ ನಡೆದುಹೋಗುತ್ತವೆ.

ಉದಾಹರಣೆಗೆ ನೋಡಿ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಹಬ್ಬಗಳು, ಸಮುದಾಯ-ಪ್ರೇರಿತ ಕಾರ್ಯಕ್ರಮಗಳು, ಶಾಲೆಗಳಲ್ಲಿ ವಾರ್ಷಿಕ ಆಚರಣೆಗಳು, ಫೇರ್‌ವೆಲ್ ಪಾರ್ಟಿ, ಮಲ್ಟಿಕಲ್ಚರಲ್ ಫೆಸ್ಟಿವಲ್, Writers ಫೆಸ್ಟಿವಲ್, ಫಿಲಂ ಫೆಸ್ಟಿವಲ್, ಕಾಮಿಡಿ ಫೆಸ್ಟಿವಲ್ ಎಂಬಂತೆ ಏನೇನೇನೊ ನಡೆಯುತ್ತಿವೆ. ಪ್ರತಿ ವಾರಾಂತ್ಯದಲ್ಲೂ ಹೀಗೇನೋ ಕಾರ್ಯಕ್ರಮ ಇದ್ದೇ ಇರುತ್ತದೆ. ಡಿಸೆಂಬರ್ ಬಂತು ಎಂದರೆ ಅನೇಕರು ತವರನ್ನು ನೋಡಲೆಂದೊ, ಪ್ರವಾಸಕ್ಕೆಂದೊ ಹೊರದೇಶಗಳಿಗೆ ಪ್ರಯಾಣ ಹೊರಡುತ್ತಾರೆ. ಹಾಗಾಗಿ ಕಾರ್ಯಕ್ರಮಗಳೆಲ್ಲಾ ಚಕಚಕನೆ ನಡೆದು ಮುಗಿಯಬೇಕು.

ನಮ್ಮ ಕನ್ನಡ ಸಂಘವನ್ನೆ ತೆಗೆದುಕೊಂಡರೆ ದೇಶಪೂರ್ತಿ ಇರುವ ಸಂಘಗಳು ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಗಣೇಶ ಹಬ್ಬ, ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತವೆ. ವರ್ಷವರ್ಷಕ್ಕೂ ಬೇರೆಬೇರೆ ಭಾರತೀಯ ಭಾಷೆಗಳ ಸಂಘಗಳು ಏರ್ಪಡಿಸುವ ಕಾರ್ಯಕ್ರಮಗಳ ಪಟ್ಟಿ ಉದ್ದವಾಗುತ್ತಿದೆ. ಇತ್ತೀಚೆಗೆ ಬರುಬರುತ್ತಾ ದೀಪಾವಳಿಯಂತೂ ಅಬ್ಬರದ ಪ್ರದರ್ಶನವಾಗುತ್ತಿದೆ. ನಮ್ಮ ಬ್ರಿಸ್ಬೇನಿನಲ್ಲಂತೂ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬರಲಿರುವ ದೀಪಾವಳಿ ಹಬ್ಬದಾಚರಣೆ ಈ ವಾರಾಂತ್ಯವೆ ಶುರುವಾಗಿದೆ. ಸಾಲದಕ್ಕೆ, ಮೂರ್ನಾಲ್ಕು ಸ್ಥಳಗಳಲ್ಲಿ ಏರ್ಪಾಡಾಗಿದೆ. ಜನರು ಬಂದು ಹರ್ಷಿಸಲು jumping castle, ಹೆನ್ನಾ ಕಲೆ, ಬಾಲಿವುಡ್ ಹಾಡು-ನೃತ್ಯಗಳು, ಆಹಾರಮಳಿಗೆಗಳು ಇವೆ ಎಂದು ಅವರವರ ಫೇಸ್ಬುಕ್ ಪೇಜ್‌ಗಳು ಹೇಳಿವೆ.

(ಶಾರುಜನ್ ಮಹೇಂದ್ರರಾಜ್)

ಈ ರೀತಿ ಹಬ್ಬದ ನಿಜವಾದ ದಿನಾಂಕಕ್ಕೂ ಬಲು ಮುಂಚೆ ದೀಪಾವಳಿ ಕಾರ್ಯಕ್ರಮಗಳು ಏರ್ಪಾಡಾಗಿರುವುದಕ್ಕೆ ರಾಜಕೀಯ ಕಾರಣಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇದೇ ವಾರ ನಮ್ಮ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ಚುನಾವಣೆ ಆರಂಭವಾಗಿದೆ. ಆಳುತ್ತಿರುವ ಪಕ್ಷವನ್ನು ಸೋಲಿಸಿ ರಾಜ್ಯಸರ್ಕಾರದ ಆಡಳಿತ ಚುಕ್ಕಾಣಿ ಹಿಡಿಯಲು ವಿರೋಧಪಕ್ಷವು ಇನ್ನಿಲ್ಲದಂತೆ ಪ್ರಚಾರ ಮಾಡುತ್ತಿದೆ. ಆಳುವ ಪಕ್ಷವೇನೂ ಸುಮ್ಮನೆ ಕೂತಿಲ್ಲ ಆದರೂ ಸ್ವಲ್ಪ ಸಪ್ಪೆಯಾಗಿದೆ. ವಿರೋಧಪಕ್ಷವು ತಾವು ಚುನಾಯಿತರಾಗಿ ಬಂದು ಸರ್ಕಾರ ಕಟ್ಟಿದರೆ ಇಂತಿಂಥವನ್ನು ಜಾರಿಗೆ ತರುತ್ತೀವಿ ಎಂದು ಹೇಳಿಕೊಂಡಿರುವ ಕೆಲ ಮಾತುಗಳು ವಲಸೆಗಾರರಿಗೆ ಮತ್ತು ಆಸ್ಟ್ರೇಲಿಯನ್ ಮೂಲನಿವಾಸಿಗಳಿಗೆ ಆತಂಕ ತಂದಿವೆ. ಚುನಾವಣಾ ಫಲಿತಾಂಶ ಏನಾಗುತ್ತದೋ ಎನ್ನುವ ಪ್ರಶ್ನೆ ಕಾಡುತ್ತಿದೆ.

ಅಂದಹಾಗೆ ಆಸ್ಟ್ರೇಲಿಯನ್ ಕಾನೂನಿನ ಪ್ರಕಾರ ಕಡ್ಡಾಯವಾಗಿ ಹದಿನೆಂಟು ವರ್ಷ ವಯಸ್ಸು ಮತ್ತು ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯೂ ಮತವನ್ನು ಚಲಾಯಿಸಬೇಕು. ಇಲ್ಲವೆಂದರೆ ಅವರಿಗೆ ಇಪ್ಪತ್ತು ಡಾಲರ್ ಫೈನ್ ಹಾಕುತ್ತಾರೆ. ಚುನಾವಣೆ ನಡೆಯುವುದು ಶನಿವಾರದಂದು. ಆಸ್ಟ್ರೇಲಿಯನ್ ಎಲೆಕ್ಟೊರಲ್ ಕಮಿಷನ್ ಅಥವಾ ರಾಜ್ಯ ಮಟ್ಟದ ಕಮಿಷನ್ ಸಿಬ್ಬಂದಿ ಆ ದಿನಾಂಕ ಬರುವ ಮುಂಚೆ ನಮಗೆ ಅಂಚೆ ಮೂಲಕ ವೋಟಿಂಗ್ ಐಡೆಂಟಿಫಿಕೇಷನ್ ಕಾರ್ಡ್ ಕಳಿಸುತ್ತಾರೆ. ಇದನ್ನು ತೆಗೆದುಕೊಂಡು ನಾವು ಮತಚಲಾವಣಾ ಕೇಂದ್ರಕ್ಕೆ ಹೋಗಿ Ballot ಪೇಪರ್ ಪಡೆಯಬೇಕು. ಅದರಲ್ಲಿ ಸ್ಪರ್ಧಿಗಳ ಹೆಸರು, ಅದರ ಪಕ್ಕದಲ್ಲಿ ಒಂದು ಚಿಕ್ಕ ಖಾಲಿ ಚೌಕವಿರುತ್ತದೆ. ಪೆನ್ಸಿಲಿನಿಂದ ಈ ಚೌಕಗಳಲ್ಲಿ ನಾವು ನಮ್ಮ ಆಯ್ಕೆಯ ಅಂಕಿಗಳನ್ನು ಅಂದರೆ ಒಂದರಿಂದ ಮೂರು, ನಾಲ್ಕು, ಹೀಗೆ ಬರೆಯಬೇಕು. ನಂತರ ಅದನ್ನು ಮಡಚಿ ಪೆಟ್ಟಿಗೆಗೆ ಹಾಕಬೇಕು. ಅಲ್ಲಿಗೆ ನಮ್ಮ ಮತ ಚಲಾವಣೆ ಮುಗಿಯಿತು. ಸಾಲಿನಲ್ಲಿ ನಿಲ್ಲಬೇಕು, ಸರತಿ ಬಂದಾಗ ಅವರ ಬಳಿ ಹೋಗಿ ನಮ್ಮ ಗುರುತುಪತ್ರ ತೋರಿಸಿ, ಮತ ಚಲಾಯಿಸಿ ಹೊರ ನಡೆಯಬೇಕು. ಹೆಚ್ಚಿನ ಮಾತಿಲ್ಲ, ಕತೆಯಿಲ್ಲ. ಸಡಗರವಿಲ್ಲ, ಅಬ್ಬರವಿಲ್ಲ, ನಗುವಿಲ್ಲ, ನೋಟವಿಲ್ಲ. ಒಂದೆರೆಡು ಹೆಚ್ಚಿನ ಕ್ಷಣ ನಿಲ್ಲುವಂತೆಯೂ ಇಲ್ಲ. ಅಲ್ಲಿ ಬಿಗು ಮೌನವೇ ಹೆಚ್ಚು ಎನ್ನಬೇಕು. ನನ್ನಂಥ ಕಂದು-ಕಪ್ಪು ಮೈಚರ್ಮದವರನ್ನು ನೋಡಿದರಂತೂ ಅವರ ಮುಖ ಇನ್ನೂ ಸ್ವಲ್ಪ ಜಾಸ್ತಿನೇ ಬಿಗಿದುಕೊಳ್ಳುತ್ತದೆ. ಕುರಿಗಳು ಸಾರ್ ಕುರಿಗಳು! ಉತ್ಸಾಹದ ವಿಷಯವೆಂದರೆ ಚುನಾವಣಾ ಕಣಕ್ಕೆ ಬಹುಸಂಸ್ಕೃತಿ ಹಿನ್ನೆಲೆಯ ಸ್ಪರ್ಧಿಗಳು ಬರುತ್ತಿದ್ದಾರೆ. ಇವರುಗಳ ಸಂಖ್ಯೆ ಹೆಚ್ಚಾಗಲಿ ಎಂದು ನನ್ನ ಆಶೆ.

ಇರಲಿ, ಈಗ ಸ್ವಲ್ಪ ವಿಷಯ ಬದಲಾವಣೆ ಮಾಡುತ್ತೀನಿ. ಹೋದವಾರ ನವರಾತ್ರಿ/ದಸರೆಯ ಮೂಡ್‌ನಲ್ಲಿದ್ದೆ. ಪ್ರತಿಬಾರಿ ದಸರಾ ಸಮಯದಲ್ಲಿ ನಾನು ಚಿಕ್ಕಂದಿನ ಮನೆಮನೆ ಗೊಂಬೆ ಹಬ್ಬ ಮತ್ತು ಮೈಸೂರಿನಲ್ಲಿದ್ದಾಗ ಅಲ್ಲಿನ ದಸರಾ ಅನುಭವಗಳನ್ನು ನೆನೆಸಿಕೊಳ್ಳುತ್ತೀನಿ. ಹಾಗೇ ಆ ಮನಃಸ್ಥಿತಿಯಲ್ಲಿದ್ದಾಗ ಫೇಸ್ಬುಕ್‌ನಲ್ಲಿ ಒಬ್ಬರು ಹಾಕಿದ್ದ ಮೈಸೂರು ದಸರಾ-ಇಳೆಯರಾಜ ಅವರ ಸಂಗೀತ ಸಂಜೆ ಪೋಸ್ಟ್ ನೋಡಿದೆ. ಅವರು ಹಾಕಿದ್ದ ವಿಡಿಯೋದಲ್ಲಿ ಇಳೆಯರಾಜ ಅವರು ‘ಕೇಳದೆ ನಿಮಗೀಗ… ದೂರದಲ್ಲಿ ಯಾರೋ…’ ಹಾಡು ಹುಟ್ಟಿದ ಕತೆ ಹೇಳಿದ್ದರು. ಅದನ್ನು ಕೇಳಿ ಇನ್ನಷ್ಟು ‘ಐ ಆಮ್ ಮಿಸ್ಸಿಂಗ್ ದಸರಾ ಸೋ ಮಚ್’ ಭಾವನೆ ಹೆಚ್ಚಾಯಿತು. ಹೋದ ಶನಿವಾರ ಬೆಳಗ್ಗೆ ಫೇಸ್ಬುಕ್ ಮೂಲಕ ಮರುದಿನ ಭಾನುವಾರ ಸಂಜೆ ಬ್ರಿಸ್ಬೇನ್ ನಗರದ ದಕ್ಷಿಣದಲ್ಲಿ ‘ಇಳೆಯರಾಜ ಸಂಗೀತ ಸಂಭ್ರಮ – ಹಿಟ್ಸ್ ಆಫ್ ಇಳೆಯರಾಜ’ ಕಾರ್ಯಕ್ರಮ ಇರುವುದು ಗೊತ್ತಾಯ್ತು. ನಡೆಸಿಕೊಡುತ್ತಿದ್ದದ್ದು BrisRaga ಎನ್ನುವ ಒಂದು ಸ್ಥಳೀಯರ ಬ್ಯಾಂಡ್. ಅದರ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಹಿಟ್ಸ್ ಆಫ್ ಇಳೆಯರಾಜ ಹಾಡುಗಳೆಂದರೆ ನಮ್ಮ ಕನ್ನಡದ ಹಾಡುಗಳಿರುತ್ತವೆ ಎಂದುಕೊಂಡು ಕೊಟ್ಟಿದ್ದ ನಂಬರಿಗೆ ಫೋನ್ ಮಾಡಿ ಎರಡು ಟಿಕೆಟ್ ಸಿಕ್ಕತ್ತಾ ಎಂದು ಕೇಳಿದೆ. ಸಿಗತ್ತೆ ಎಂದು ಅವರು ಆನ್ಲೈನ್ ಲಿಂಕ್ ಕಳಿಸಿದರು. ನಾನೇನೂ ತಲೆಕೆಡಿಸಿಕೊಳ್ಳದೆ, ಹೆಚ್ಚಿನದಾಗಿ ವಿಚಾರಿಸದೆ ಟಿಕೆಟ್ ಕೊಂಡಿದ್ದೂ ಆಯ್ತು. ೨೦೨೩ರಲ್ಲೂ ‘ಇಳೆಯರಾಜ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಸಿ ಅದು houseful ಆಗಿ ಈಗ ಮತ್ತೆ ೨೦೨೪ರಲ್ಲಿ ‘ಹಿಟ್ಸ್ ಆಫ್ ಇಳೆಯರಾಜ’ ನಡೆಯಲಿತ್ತು. ಈ ಬಾರಿಯೂ ಹೌಸ್ ಫುಲ್ ಆಯ್ತು ಎಂದು ಗೊತ್ತಾಯ್ತು. ಅಂದ ಹಾಗೆ ಈ ತಂಡ ಆಸ್ಟ್ರೇಲಿಯಾದ ಮುಖ್ಯ ನಗರಗಳಲ್ಲಿ ಸಂಗೀತ ಸಂಜೆ ನಡೆಸುತ್ತಾರಂತೆ.

ಮರುದಿನ ಒಂದು ಗಂಟೆ ಕಾರು ಪ್ರಯಾಣದ ನಂತರ ನಾವಿಬ್ಬರೂ ಕಾರ್ಯಕ್ರಮದ ಸ್ಥಳವನ್ನು ತಲುಪಿದಾಗ ಒಂದು ಕಡೆ ಗುಜರಾತಿ ಅಸೋಸಿಯೇಷನ್ ಬ್ಯಾನರ್ ಹಾರಾಡುತ್ತಿತ್ತು. ಇದೇನಿದು, ಸ್ಥಳ ತಪ್ಪಾಯ್ತಾ ಎಂದು ಮತ್ತೆ ಫೇಸ್ಬುಕ್ ಪೇಜ್ ನೋಡಿ ಸರಿಯಾದ ಸ್ಥಳಕ್ಕೆ ಬಂದಿದ್ದೀವಿ ಅಂತ ಖಾತ್ರಿಪಡಿಸಿಕೊಳ್ಳುತ್ತಿದ್ದಾಗ ಪಕ್ಕದಲ್ಲಿ ಕೆಲವರು ತಮಿಳು ಮಾತನಾಡುತ್ತಾ ಸರಿದು ಹೋದರು. ಇನ್ನೂ ಅರ್ಧಂಬರ್ಧ ತಮಿಳು ಭಾಷಾಜ್ಞಾನ ಉಳಿದುಕೊಂಡಿರುವ ನನ್ನ ಪುಣ್ಯಕ್ಕೆ ಅವರು ಇಳೆಯರಾಜ ಹಿಟ್ಸ್ ಪ್ರೋಗ್ರಾಮಿಗೆ ಹೋಗುತ್ತಿದ್ದದ್ದು ಎಂದು ಅರ್ಥವಾಗಿ ಅವರನ್ನು ಹಿಂಬಾಲಿಸಿದೆವು. ಹೋಗಿ ನೋಡಿದರೆ ಎಲ್ಲರೂ ಬಾಗಿಲ ಬಳಿ ಕಾಯುತ್ತಾ ನಿಂತು ತಮಿಳಿನಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆಲ್ಲಾ ಪರಸ್ಪರ ಪರಿಚಯವಿದ್ದಂತೆ ಕಂಡಿತು. ಕೆಲವರು ನನ್ನತ್ತ, ನನ್ನ ಬ್ರಿಟಿಷ್ ಗಂಡನತ್ತ ನೋಟ ಬೀರಿದಾಗ ಧುತ್ತನೆ ಅರಿವಾಯ್ತು- ಈ ಕಾರ್ಯಕ್ರಮ ಪೂರ್ತಿ ತಮಿಳಿನಲ್ಲಿ ನಡೆಯುವುದು. ನಾನೊಬ್ಬಳೇ ಏಕಾಕಿ ಕನ್ನಡಿಗಳು, ನನ್ನ ಗಂಡನೊಬ್ಬರೇ ಏಕಾಂಗಿ ಬಿಳಿಯ ಪರಕೀಯ. ‘ಅಯ್ಯೋ, ಇವರು ಕನ್ನಡದ ಹಾಡುಗಳನ್ನು ಹಾಡುವುದಿಲ್ಲ, ನಾನು ತಮಿಳು ಹಾಡುಗಳನ್ನು ಕೇಳಿ ಯುಗಗಳಾಗಿವೆ, ಸರಿಯಾಗಿ ವಿಚಾರಿಸದೆ ಬಂದೆನೆಲ್ಲಾ, ಅಯ್ಯೋ,’ ಎಂದು ನಾನು ಮಿಡುಕಲಾರಂಭಿಸಿದೆ. ‘ಸಂಗೀತಕ್ಕೇನೂ ಭಾಷಾಜ್ಞಾನ ಬೇಕಿಲ್ಲ, ನಾನೇನೋ ಉತ್ಸಾಹದಿಂದ ಇದ್ದೀನಿ’ ಎಂದು ಗಂಡ ಹೇಳಿದಾಗ ಒಂದಷ್ಟು ಸಿಡುಕಿ ಸುಮ್ಮನಾಗಿ ಬಂದದ್ದಾಯ್ತು, ಕೇಳೋಣ ಎಂದು ಕೂತೆ. ಬಂದದ್ದೂ ಕೂತದ್ದೂ ಸರಿಯಾಯ್ತು. ಕೇಳಿದ್ದೂ ಒಪ್ಪಿತ್ತು. ಮಿಡುಕಾಡಿದ್ದಕ್ಕೆ, ಸಿಡುಕಿದ್ದಕ್ಕೆ ನನ್ನನ್ನು ನಾನೇ ಬೈದುಕೊಂಡೆ.

ಯಾಕೆಂದರೆ BrisRaga ಬ್ಯಾಂಡ್ ಅಷ್ಟು ಒಪ್ಪವಾದ ಮನಮೋಹಕ ಸಂಗೀತ ಸಂಜೆ ನಡೆಸಿಕೊಟ್ಟರು. ಹೆಚ್ಚುಕಡಿಮೆ ಯುವಕ-ಯುವತಿಯರಿದ್ದ ಅವರ ತಂಡದ ಪರಸ್ಪರ ಬೆಂಬಲ, ಸಂಗೀತವನ್ನು ಅವರು ಪ್ರೀತಿಸುತ್ತಾ ಪ್ರೇಕ್ಷಕರಿಗೆ ರಸಾಸ್ವಾದನೆ ಉಣಿಸಿದ ಬಗೆ ಎಲ್ಲವೂ ನಮ್ಮಿಬ್ಬರ ಮನ ಸೆಳೆಯಿತು. ಬ್ಯಾಂಡ್ ಹೊಂದಿರುವ ಸಂಗೀತ ವಾದ್ಯಗಳ ವೈವಿಧ್ಯತೆ, ತಬಲಾ ಬಾರಿಸುವ ನಿಪುಣತೆ, ಕೊಳಲು ಊದುವ ಮಾಧುರ್ಯ, ವಯಲಿನ್ ನುಡಿಸುವ ತನ್ಮಯತೆ, ಕೀಬೋರ್ಡ್ ಮೇಲೆ ನಲಿದಾಡುವ ಬೆರಳುಗಳ ಚಾಕಚಕ್ಯತೆ, ಎಲ್ಲವೂ ಚೊಕ್ಕವಾಗಿ ಚೆಂದೆನಿಸಿತ್ತು. ನಾನು ಇದೆ ಮೊದಲ ಬಾರಿ ಎಲೆಕ್ಟ್ರಿಕ್ ತಬಲಾ ನೋಡಿದ್ದು, ಬೆರಗಾಗಿದ್ದು. ಅದನ್ನು ಬಾರಿಸುತ್ತಿದ್ದ ಯುವಕ ಕಾರ್ಯಕ್ರಮವನ್ನು ನಿರ್ದೇಶಿಸುತ್ತಿದ್ದ ಕೂಡ. ಅವಲ್ಲದೆ, ಇನ್ನಿಬ್ಬರು ಎರಡು ಶಾಸ್ತ್ರೀಯ ತಬಲಾಗಳನ್ನೂ ಬಾರಿಸುತ್ತಿದ್ದರು. ಇಷ್ಟಲ್ಲದೆ, ಆಸ್ಟ್ರೇಲಿಯಾದ ಕೆಲವೇ ಮಂದಿ ಗಿಟಾರ್ ಬೇಸ್ ತಜ್ಞರಲ್ಲಿ ಒಬ್ಬ ಯುವಕ ಈ ಬ್ಯಾಂಡ್‌ನಲ್ಲಿದ್ದಾರೆ. ಈತ ಕೀಬೋರ್ಡ್ ಪರಿಣಿತ ಕೂಡ! ಮಧ್ಯೆಮಧ್ಯೆ ಬ್ಯಾಂಡ್ ಸದಸ್ಯರನ್ನು ಪರಿಚಯಿಸಿ ಅವರ ಪರಿಣಿತಿಗಳ ಬಗ್ಗೆ ಹೇಳುತ್ತಿದ್ದರು. ನನಗೆ ತುಂಬಾ ಹಿಡಿಸಿದ್ದೆಂದರೆ ಈತನೂ ಸೇರಿದಂತೆ ಎಲ್ಲರೂ ಅದೆಷ್ಟು ನಗುಮೊಗದಿಂದ, ನಸುನಗುತ್ತಾ ಇಡೀ ಸಂಗೀತ ಸಂಜೆಗೆ ಒಂದು ವಿಶೇಷವಾದ ಅಪ್ಯಾಯಮಾನ ಭಾವನೆ ಕೊಟ್ಟರು. ಪ್ರಪಂಚಪೂರ್ತಿ ಈ ಹಿತ ತರುವ ನಗುಭಾವ ಹೆಚ್ಚಲಿ. ಭೇಷ್!

BrisRaga ಬ್ಯಾಂಡ್ ಈ ಸಂಗೀತ ಕಚೇರಿಯ ನಿರ್ದೇಶಕ ಶಾರುಜನ್ ಮಹೇಂದ್ರರಾಜ್ ಎಂಬ ಯುವಕ. ನಗುಮೊಗದ ಈತನನ್ನು ನಾನು ಎರಡು ನಿಮಿಷ ಮಾತನಾಡಿಸಿ congratulations ಹೇಳಿ ಒಂದೆರೆಡು ಫೋಟೋ ಕ್ಲಿಕ್ಕಿಸಿದೆ. ಅವರಲ್ಲಿ ಹಲವರು ಶಾಸ್ತ್ರೀಯ ಸಂಗೀತ ತರಬೇತಿ ಪಡೆದ ಹಾಡುಗಾರರೂ ಆಗಿ, ಒಟ್ಟಾರೆ ಅವರು ಮತ್ತು ಮತ್ತಿತರ ಹಾಡುಗಾರರು ಹಾಡಿದ ಹಾಡುಗಳ ಇಂಪು ಅದ್ಭುತವಾಗಿತ್ತು. ನಾನು ಭಾರತದಲ್ಲಿದ್ದಾಗ ಕೇಳಿಬರುತ್ತಿದ್ದ ಕೆಲ ಇಳೆಯರಾಜ ಹಾಡುಗಳನ್ನು ಈ ಸಂಜೆ ತಕ್ಕಮಟ್ಟಿನ ಗುಣಮಟ್ಟದಲ್ಲಿ ಕೇಳಿದ್ದು ನನಗಂತೂ ಬಹಳ ಸಂತೋಷವಾಗಿತ್ತು. ಸುಮಾರು ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ ಗೀತೆಗಳು, ಕೆಲವು ಯೇಸುದಾಸ್ ಹಾಡಿದ್ದು ಇದ್ದವು. ಬ್ಯಾಂಡ್ ಹಾಡುಗಾರರಾದ ಗಿರಿ ಮತ್ತು ಅಹಲ್ಯಾ (ಈಕೆ ವಯಲಿನ್ ನಿಪುಣೆ ಕೂಡ) ಹಾಡಿದ ರಜನಿಕಾಂತ್-ಗೌತಮಿ ಅಭಿನಯದ ‘ಸಂಧೈಕು ವಂದಾ ಕಿಳಿ’ ಹಾಡನ್ನು ಮರೆಯಲು ಸಾಧ್ಯವೇ?! ಅದಲ್ಲದೆ, ‘ಚೆಂದೂರ ಪೂವೆ’, ‘ಇಳಮೈ ಎನ್ನುಂ’ ಹಾಡುಗಳು. ಕಡೆಯಲ್ಲಿ ಎಲ್ಲಾ ಹಾಡುಗಾರರೂ ಜೊತೆಯಾಗಿ ಮೆಡ್ಲಿ ನಡೆಸಿದಾಗ ‘ರಾಜಾ ಕೈವೆಚ್ಚಾ’ ಹಾಡನ್ನು ನಾನೂ ಸ್ವಲ್ಪ ಗುಣುಗಿದೆ.

ಇಬ್ಬರು ಯುವತಿಯರು ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ದೇವಿಸ್ತುತಿ ಮಾಡುವ ಹಾಡೊಂದನ್ನು ಜೋಡಿಯಾಗಿ ತಾಳಬದ್ಧವಾಗಿ ಹಾಡಿದರು. ನನ್ನ ಗಂಡ ತನಗೆ goosebumps ಬಂತು ಎಂದು ಸಂತೋಷಿಸಿ ಹೊಗಳಿದಾಗ ನಾನು ಪುಳಕಗೊಂಡಿದ್ದೆ. ಇದು ಕಾರ್ಯಕ್ರಮದ ಹೈಲೈಟ್!

ಭಾರತದಲ್ಲೇ ಇದ್ದು ಪುನಃಪುನಃ ಸಂಗೀತ ಕಚೇರಿಗಳನ್ನು ಕೇಳುತ್ತಿದ್ದರೆ ನಮಗೆ ಅವುಗಳ ಮಹತ್ವ, ಬೆಲೆ ಮರೆತುಹೋಗುತ್ತದೆ. ಯಾಕೆಂದರೆ ನಾವು ಅದೇ ಸಾಮಾಜಿಕ-ಸಾಂಸ್ಕೃತಿಕ ಪರಿಸರದಲ್ಲಿದ್ದು ಅದೇನೂ ಅಷ್ಟೊಂದು ಭಾರಿ ಹೊಗಳುವ ಮಹತ್ವದ ವಿಷಯವಾಗುವುದಿಲ್ಲ. ನಮ್ಮ ಜೀವನದ ಭಾಗವಾಗುತ್ತದೆ. ಆದರೆ ನಾವು ಹೊರದೇಶದಲ್ಲಿ, ಸಂಪೂರ್ಣ ಬೇರೆಯದೇ ಆದ, ನಮ್ಮದಲ್ಲದ ಸಾಮಾಜಿಕ-ಸಾಂಸ್ಕೃತಿಕ ಪರಿಸರದಲ್ಲಿದ್ದಾಗ ನಮ್ಮ ಭಾರತೀಯ ಪರಂಪರೆ ಮಾನಸಿಕವಾಗಿ ಅದೆಷ್ಟೋ ಹಿತ ತರುತ್ತದೆ. ಬಹುಶಃ ಈ ಕಾರಣಕ್ಕಾಗಿಯೇ ನಾವು ಭಾರತವನ್ನು ಬಿಟ್ಟರೂ ನಮ್ಮೊಳಗಿನ ಭಾರತೀಯತೆ ನಮ್ಮನ್ನು ಬಿಡುವುದಿಲ್ಲ.