ಅನ್ಯಾಭಾಷಾ ಸಂಸರ್ಗದಿಂದ ಕನ್ನಡ ಲಾಗಾಯಿತ್ತಿನಿಂದಲೂ ಅನೇಕ ಶಬ್ದಗಳನ್ನು ಕೊಳ್ಳುತ್ತಲೇ ಬಂದಿದೆ. ಆರ್ಯರು, ಗ್ರೀಕರು, ರೋಮನ್ನರು, ಪಾರಸಿಕರು, ಯವನ, ಪೋರ್ಚುಗಿಸರು, ಫ್ರೆಂಚರು, ಇಂಗ್ಲಿಷರು ಮೊದಲಾದವರ ಸಂಪರ್ಕ ಕನ್ನಡಿಗರಿಗಿತ್ತು. ಜೊತೆಗೆ ಅಕ್ಕಪಕ್ಕದ ದ್ರಾವಿಡ ಭಾಷೆಗಳು ಮತ್ತು ಮರಾಠಿ ಮೊದಲಾದ ಭಾಷೆಗಳು ವ್ಯಾಪಾರ ಸಂಬಂಧಗಳ ಮೂಲಕ ಕನ್ನಡದ ಮೇಲೆ ಪ್ರಭಾವ ಬೀರಿದ ಕಾರಣ ಕನ್ನಡ ಅನೇಕ ಪದಗಳನ್ನು ಅನಾಯಾಸವಾಗಿ ಸ್ವೀಕರಿಸಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎಂಟನೆಯ ಬರಹ

ಕಳೆದ ವಾರ ರೈಲಿನ ಪ್ರಯಾಣ ಮಾಡುವ ಯೋಗ ಕೂಡಿ ಬಂದಿತ್ತು. ಚಿಕ್ಕ ಕುಟುಂಬದ ಚಿಕ್ಕ ಪ್ರಯಾಣ. ಆದರೆ ದಾರಿ ಕಿರಿದಾಗಿರಲಿಲ್ಲ ಸಾವಿರ ಕಿಲೋಮೀಟರುಗಳ ಹಾದಿ. ಯಶವಂತಪುರದಲ್ಲಿ ನಮ್ಮ ರೈಲು ರಾತ್ರಿ ಎಂಟರಿಂದ ಬಂಬತ್ತರವರೆಗೆ ವಿಶ್ರಾಂತಿ ಪಡೆಯಲು ನಿಂತಿತ್ತು. ಆಗ ಬಿಸಿ-ಗರಮ್ ಪಲಾವ್, ಪಾನಿ-ನೀರು, ವಾಟರ್- ಪಾನಿ ವಾಟರ್- ಪಾನಿ ಪಾನಿ……. ಗರಂ ಹೈ ಬಿಸಿಹೈ ಎಂದು ತಿಂಡಿ ಮಾರುವವರ ಕೂಗು ಮಾರ್ಧನಿಸುತ್ತಿತ್ತು. ಹೀಗೆ ಮನಸ್ಸಿನಲ್ಲಿ ‘ಬಿಸಿ’, ‘ಗರಮ್ ‘ಒಂದೇ ಅಲ್ವೇ! ‘ನೀರು’ ‘ಪಾನಿ’, ‘ವಾಟರ್’ ಒಂದೇ ಅರ್ಥಕೊಡುತ್ತದೆಯಲ್ಲವೇ ಎನ್ನುತ್ತಾ ಅದರ ಬಗ್ಗೆಯೇ ಮನ್ ಕೀ ಬಾತ್ ಆರಂಭಿಸಿದೆ.

ರೈಲಿನಲ್ಲಿ ಬಿಸಿಬಾತ್, ವಾಟರ್- ನೀರು ಪಾನಿ-ವಾಟರ್ ಪಾನಿ -ವಾಟರ್ ಎನ್ನುತ್ತಾ ಬರುತ್ತಿದ್ದರೆ ನಮ್ಮ ಸೀಟಿನ ಸುತ್ತ ಮುತ್ತ ಇದ್ದವರು ತೆಗೆದುಕೊಳ್ಳುತ್ತಿದ್ದರು. ಏಕೋ ಕುತೂಹಲವಾಗಿ “ಏನ್ ತಗೊಂಡ್ರಿ…?” ಎಂದೆ “ಏನಿಲ್ಲ ಒಂದು ಬಾತ್ ವಾಟರ್ ಬಾಟಲ್” ಎಂದರು “ಅವನು ಏನೋ ನೀರು ವಾಟರ್” ಎಂದರಲ್ಲ ಎನ್ನುವಾಗ ನಗುತ್ತಾ ಸುಮ್ಮನಾದರು. ರೈಲಿನಲ್ಲಿ ಹಿಂದಿ ಭಾಷಿಕರು ಜೊತೆಗೆ ಕನ್ನಡ ಭಾಷಿಕರನ್ನು ಬಿಟ್ಟು ಅನ್ಯ ಭಾಷಿಕರಿಗೆ ಅರ್ಥವಾಗಲೆಂದು ಈ ರೀತಿ ಮಾತನಾಡುತ್ತಾರೆ ಎಂದುಕೊಳ್ಳುವಾಗಲೆ “ಗರಂ ಬಿಸಿ ಚಾಯ್….. ಗರಂ ಬಿಸಿ ಚಾಯ್……” ಎನ್ನುತ್ತಾ ಮತ್ತೊಬ್ಬನು ಸರ್ರನೆ ಸರಿದು ಹೋದ… ಅವರುಗಳೆಲ್ಲಾ ಹೇಳಿದ್ದು ದ್ವಿರುಕ್ತಿ ಅಂದರೆ ಹೇಳಿದ್ದನ್ನ ಮತ್ತೆ ಮತ್ತೆ ಹೇಳುವುದು. ಎರಡೂ ಪದ ಒಂದೇ ಅರ್ಥ ಕೊಡುವುದಾದರೂ ಬೇರೆ ಬೇರೆ ಭಾಷೆಯಿಂದ ಬಂದಿರುತ್ತವೆ. ಇನ್ನೊಂದೆಡೆ ಗಿಡಮೂಲಿಕೆಗಳನ್ನು ಮಾರುತ್ತಿದ್ದವನು ನಿಮ್ಮ ದೇಹದಲ್ಲಿ ಸಾಲ್ಟ್ ಉಪ್ಪು ಜಾಸ್ತಿಯಾದರೆ ಈ ಸೊಪ್ಪನ್ನು ಬಳಸಿ ಎನ್ನುತ್ತಿದ್ದ ಅವನು ಬಳಸಿದ ಸಾಲ್ಟ್ ಉಪ್ಪು ಕೂಡ ದ್ವಿರುಕ್ತಿಯೇ. ವಿವಿಧತೆಯಲ್ಲಿ ಏಕತೆ ಎನ್ನುವ ನಮ್ಮ ಭಾರತೀಯ ಭಾಷಾ ಪರಿವಾರಕ್ಕೆ ಇಂಥ ದ್ವಿರುಕ್ತಿಗಳು ಸೊಬಗನ್ನು ನೀಡುತ್ತವೆ ಎನ್ನಬಹುದು.

ಇಂಥ ದ್ವಿರುಕ್ತಿಗಳನ್ನು ಅನುಸಂಧಾನಿಸಲು ಪ್ರಸಂಗವನ್ನು ತೆಗೆದುಕೊಳ್ಳೋಣ! ಅದರಲ್ಲಿ ಒಮ್ಮೆ ಶಾಲೆಗೆ ತಡವಾಗಿ ಬಂದು ಕಾಂಪೌಂಡ್ ಹಾರಿ ತರಗತಿ ನುಗ್ಗುವವರನ್ನು ಪಿ.ಟಿ. ಟೀಚರ್ ಹೀಗೆ….. ಎಲ್ಲಿಂದ ಬಂದಿರಿ? ಎಂದು ಪ್ರಶ್ನಿಸಲು “ಹುಡುಗರು ಗೇಟ್ ಬಾಗಿಲು ಹಾಕಿತ್ತು ಕಾಂಪೌಂಡ್ ಗೋಡೆ ಹಾರಿ ಬಂದ್ವಿ. ನಮ್ಮೂರಿಗೆ ಕೆಲವೆ ಲಿಮಿಟ್ ಬಸ್ ಹಾಗಾಗಿ ಬಂದ ಬಸ್ಸಿನ ಟಾಪ್ ಮೇಲೆ ಕುಳಿತು ಬಂದೆವು. ನೀವು ರೂಲ್ ದೊಣ್ಣೆ ಹಿಡಿದು ನಿಂತಿದ್ದಿರಿ..” ಎನ್ನುತ್ತಿದ್ದಂತೆ ಪಿ.,ಟಿ ಟೀಚರ್ “ಉಸಿರು ಮುಚ್ಚಿ…. ಮುಚ್ಚಿ” ಎಂದು ಹೊಡೆದರು. ಉಸಿರು ಮುಚ್ಚುವುದಕ್ಕೆ ಆಗುತ್ತಾ… ಅಷ್ಟೂ ಹುಡುಗರು ಉಸಿರು ಮುಚ್ಚಿದರೆ ಅವರ ಪಾಲಕರು ಬಿಡುತ್ತಾರೆಯೇ? ಧ್ವನಿ ಆಚೆ ಬರಬಾರದು! ಸ್ವರ ಕೇಳಬಾರದು! ಎಂದು ಹೊಡೆಯಬೇಕಿತ್ತು. ಹೊಡೆದುಕೊಂಡೇ ಆಟಕ್ಕೆ ಕರೆದುಕೊಂಡು ಹೋಗಿ ಕ್ರಿಕೆಟ್ ಆಡಿಸುತ್ತಾ ಚೆಂಡನ್ನು ಕ್ಯಾಚ್ ಹಿಡಿ…. ಕಡೆ ಲಾಸ್ಟ್ ನಲ್ಲಿರೋ ಹುಡುಗರೆ ಎಂದು ಅಷ್ಟು ಬಾಯಿಬಡಿದರೂ ಅವರುಗಳು ಕ್ಯಾಚ್ ಹಿಡಿಯಲಿಲ್ಲ ಎನ್ನುವ ಕಾರಣಕ್ಕೆ “ಯಾಕೆ ಡ್ರಾಪ್ ಬಿಟ್ಟೆ” ಎನ್ನುತ್ತಾ ಪ್ರಶ್ನೆ ಹಾಕತೊಡಗಿದರು. ಗೇಟ್ ಬಾಗಿಲು, ಕಾಂಪೌಂಡ್ ಗೋಡೆ, ಟಾಪ್ ಮೇಲೆ, ಕ್ಯಾಚ್ ಹಿಡಿ, ಡ್ರಾಪ್ ಬಿಡು, ಕಡೆ ಲಾಸ್ಟ್, ಇಲ್ಲೆಲ್ಲಾ ಮೊದಲು ಇಂಗ್ಲಿಷಿನ ಪದಗಳನ್ನು ಹೊಂದಿದ್ದು ಅದೇ ಅರ್ಥವುಳ್ಳ ಕನ್ನಡ ಪದಗಳು ನಂತರ ಬರುತ್ತವೆ. ಹೆರಿಯೋ ಮೆಂಡರ್ ಅಳಸೋ ರಬ್ಬರ್, ಅಂಟಿಸುವ ಗಮ್ಮು ಮುಂತಾದ ಪದಗಳು ಬಳಕೆಯಲ್ಲಿವೆ. ಇಲ್ಲಿ ಕನ್ನಡ ಪದಗಳು ಮೊದಲು ಬಂದು ಇಂಗ್ಲಿಷಿನ ಪದಗಳು ನಂತರ ಬರುತ್ತವೆ.

 

ಇನ್ನೊಂದು ವಾಕ್ಯವನ್ನು ಗಮನಿಸೋಣ! ಅದು ಹೀಗಿದೆ… “ಅಧಿಕವರ್ಷಧಾರೆಯಿಂದ ಬೇಜಾರಾಗಿದ್ದವರು ಮಳೆ ನಿಂತ ನಂತರ ಆಕಳಗೋಮೂತ್ರದಿಂದ ಮನೆ ಶುದ್ಧೀಕರಿಸಿಕೊಂಡು, ವಿಷ್ಣುವಿನಾಲಯದ ದ್ವಾರಬಾಗಿಲು ತೆಗೆಯುವ ಸಮಯಕ್ಕೆ ಹಳದಿಪೀತಾಂಬರ ಉಟ್ಟು ಹಣ್ಣು ಹಂಪಲಿನೊಂದಿಗೆ ತೆರಳಿದರು ಎನ್ನುವಲ್ಲಿ ‘ಅಧಿಕವರ್ಷಧಾರೆ’, ‘ಆಕಳಗೋಮೂತ್ರ’, ‘ದ್ವಾರಬಾಗಲು’, ‘ಹಳದಿಪೀತಾಂಬರ’, ‘ಹಣ್ಣು-ಹಂಪಲು’ ಸಂಸ್ಕೃತ ಮತ್ತು ಕನ್ನಡ ಪದಗಳು ಬಂದಿರುವುದನ್ನು ಕಾಣಬಹುದು. ‘ಸಂತೆಬಝಾರ್’, ‘ಸೋಪ್ ಸಾಬೂನು’, ‘ನಾಷ್ತತಿಂಡಿ’ ಇವುಗಳು ಹಿಂದಿ ಮತ್ತು ಕನ್ನಡ ಪದಗಳನ್ನೊಳಗೊಂಡಿವೆ. ಇವೆಲ್ಲಾ ಏಕಾರ್ಥವನ್ನು ಹೊಂದಿರುವ ದ್ವಿಪದಗಳು ಎನ್ನಬಹುದು.

ಬಹಳ ಸುಂದರ ಎಂದರೆ ದ್ವಿಮುಖಿ ಪದಗಳು ಕಡೆದಿಂದ ಬಲಕ್ಕೆ ಬಲಕ್ಕೆ ಓದಿದರೂ ಒಂದೇ ಆಗುತ್ತವೆ. ಕಟಕ, ಕನಕ, ಗದಗ, ಚಮಚ, ಜಲಜ, ನಮನ, ನಯನ, ಸರಸ, ನವೀನ, ಕುಟುಕು, ಗುಡುಗು, ಗುನುಗು, ಪಂಪ, ಕುಡುಕು, ಜಡಜ, ನರ್ತನ, ಕಾರ್ತೀಕಾ, ನಮ್ಮನ, ಸದಾದಾಸ, ನವಜೀವನ, ವಿಕಟಕವಿ, ಪರಿಹರಿಪ, ಚುರುಕಿದ್ರೆ ಕಿರುಚು ಕನ್ನಡಕ್ಕೆ ಉದಾಹರಣೆಯಾದರೆ ಅನ್ಯಭಾಷೆಯ ಪದಗಳಿಗೆ ಮುಲಾಮು, ರಿಪೇರಿ, ಸಮೋಸ, ಟೊಮ್ಯಾಟೊ, ರುಮಾಲುಮಾರು, ರೋಬೋಟ್ ಮಾರೋ, ಶಭಾಶ್ ಭಾಶ, ನವಾಜರ ಜವಾನ, ರೋಡಿನಲ್ಲೋ ನಡಿರೋ, ಕೋಕೋ, ಮಲಯಾಲಮ್ ಪದಗಳನ್ನು ಉದಾಹರಿಸಬಹುದು. ಇವುಗಳು ಅರ್ಥವ್ಯತ್ಯಾಸವಾಗುವುದಿಲ್ಲ.

ಅನ್ಯಾಭಾಷಾ ಸಂಸರ್ಗದಿಂದ ಕನ್ನಡ ಲಾಗಾಯಿತ್ತಿನಿಂದಲೂ ಅನೇಕ ಶಬ್ದಗಳನ್ನು ಕೊಳ್ಳುತ್ತಲೇ ಬಂದಿದೆ. ಆರ್ಯರು, ಗ್ರೀಕರು, ರೋಮನ್ನರು, ಪಾರಸಿಕರು, ಯವನ, ಪೋರ್ಚುಗಿಸರು, ಫ್ರೆಂಚರು, ಇಂಗ್ಲಿಷರು ಮೊದಲಾದವರ ಸಂಪರ್ಕ ಕನ್ನಡಿಗರಿಗಿತ್ತು. ಜೊತೆಗೆ ಅಕ್ಕಪಕ್ಕದ ದ್ರಾವಿಡ ಭಾಷೆಗಳು ಮತ್ತು ಮರಾಠಿ ಮೊದಲಾದ ಭಾಷೆಗಳು ವ್ಯಾಪಾರ ಸಂಬಂಧಗಳ ಮೂಲಕ ಕನ್ನಡದ ಮೇಲೆ ಪ್ರಭಾವ ಬೀರಿದ ಕಾರಣ ಕನ್ನಡ ಅನೇಕ ಪದಗಳನ್ನು ಅನಾಯಾಸವಾಗಿ ಸ್ವೀಕರಿಸಿದೆ.

ಸಂಸ್ಕೃತದಿಂದ: ಸ್ವರ್ಗ, ಧರ್ಮ, ಸೂರ್ಯ, ಚಂದ್ರ
ಪ್ರಾಕೃತದಿಂದ: ನೇಹ, ಪಕ್ಕ, ಸದ್ದು, ಸಕ್ಕರೆ
ಹಿಂದೂಸ್ತಾನಿಯಿಂದ: ಕರಾರು, ಗಿರಾಕಿ, ತರಕಾರಿ, ದರ್ಬಾರಿ
ಪೋರ್ಚುಗೀಸರು: ಪಗಾರ, ಪಾದರಿ, ಅಲ್ಮಾರು, ಇಸ್ತ್ರಿ
ಇಂಗ್ಲಿಷ್: ಕೋರ್ಟು, ಕೇಸು, ಪೋಲಿಸು, ಬಸ್ಸು

ಅರಾಬಿಕ್: ಅನಾಮತ್ತು, ಅಸಾಮಿ, ಅರ್ಜಿ, ಕಾಯಿದೆ, ಖರೀದಿ ಇತ್ಯಾದಿ ಕೆಲವೇ ಪದಗಳನ್ನು ಉದಾಹರಿಸಬಹುದು.
ನಮ್ಮ ಕನ್ನಡದ ಕವಿಗಳೂ ಸಂದರ್ಭಾನುಸಾರಿಯಾಗಿ ಕನ್ನಡ ಕಾವ್ಯಗಳಲ್ಲಿ ಅನ್ಯಭಾಷಾ ಸೊಬಗನ್ನು ತಂದಿದ್ದರು ಎಂಬುದಕ್ಕೆ “ಅಯ್ಯಯ್ಯಾ ಚನ್ನಾದುದೆನೆ ಕನ್ನಡಿಗರು, ರಯ್ಯಾ ಮಂಚಿದಿಯೆನೆ ತೆಲುಗಾ ಅಯ್ಯಯ್ಯಾ ಎಂಚ ಪೊರ್ಲಾಂಡೆಂದು ತುಳುವರು ಮೈಯ್ಯುಬ್ಬಿ ಕೇಳಬೇಕಣ್ಣಾ” ಎಂಬ ರತ್ನಾಕರವರ್ಣಿಯ ಸಾಲುಗಳನ್ನು ಉಲ್ಲೇಖಿಸಬಹುದು. ಮುದ್ದಣನೂ ಕರ್ಮಣಿಸರದೊಳ್ ಚೆಂಬವಳಂ ಕೋದಂತಿರೆ ಎಂದು ನಮ್ಮ ಭಾಷೆಯ ಜೊತೆಗೆ ಅನ್ಯಭಾಷೆಯ ಪದಗಳಿದ್ದರೆ ಸೊಗಸಾಗಿರುತ್ತದೆ ಎಂದಿದ್ದಾನೆ.

ಕನ್ನಡ ಭಾಷೆಯು ಸಂಪರ್ಕ ಹೊಂದಿದೆಲ್ಲಾ ಭಾಷೆಗಳಿಂದ ಹಲವು ಪದಗಳನ್ನು ಸ್ವೀಕರಿಸಿದೆ. ಅದರಲ್ಲೂ ಇಂಗ್ಲಿಷಿನಿಂದ ಅತಿ ಹೆಚ್ಚು ಶಬ್ದಗಳನ್ನು ಸ್ವೀಕರಿಸಿದೆ ಹಾಗೆ ಸ್ವೀಕರಿಸಿದಾಗ ಅರ್ಥವ್ಯತ್ಯಾಸಗಳು, ಗೊಂದಲಗಳು ಆಗುತ್ತವೆ ಅಂಥ ಪ್ರಸಂಗಗಳನ್ನು ಇಲ್ಲಿ ಹೇಳುವೆ. ಶಾಲೆಯಲ್ಲಿ ಮಕ್ಕಳಿಗೆ ಹೋಂವರ್ಕ್ ಮಾಡಿಕೊಂಡು ಬರಲು ಹೇಳುವುದು ಸಹಜ ತಾನೆ! ಕನ್ನಡದಲ್ಲಿ ಹೋಂವರ್ಕಿಗೆ ಮನೆಗೆಲಸ ಎನ್ನುವರು. ಒಮ್ಮೆ ಶಾಲೆಯಿಂದ ನಾನು ಬೇಗ ಬಂದು ಮನೆಗೆಲಸ ಇದೆ ಮನೆಗೆಲಸ ತುಂಬಾ ಇದೆ ಎಂದು ಹೇಳುತ್ತಿದ್ದೆ. ಅಜ್ಜಿ ಬಹಳ ಸಂತೋಷದಿಂದ ಹೌದಾ! ಮನೆ ಎಂದ ಮೇಲೆ ಕೆಲಸ ಇದ್ದದ್ದೆ ಅಲ್ವೆ! ಗುಡಿಸೋ ಕೆಲಸ, ಒರೆಸೊ ಕೆಲಸ, ಪಾತ್ರೆತೊಳೆಯೋ ಕೆಲಸ…… ನಿನಗೆಷ್ಟು ಸಾಧ್ಯವೋ ಅಷ್ಟು ಮಾಡು ಎಂದು ಸಾವಕಾಶ ಹೇಳುತ್ತಿದ್ದರೆ ನನಗೆ ಸಿಟ್ಟು ಬಂದು “ಅಜ್ಜಿ……. ಹೋಂ ವರ್ಕ್ ಅಂದ್ರೆ ಗುಡಿಸು ಒರೆಸು, ಅಲ್ಲ ಬರಿ…… ಓದು…… ಅಂತ” ಎಂದು ಕೊಸರಿದೆ. ಅಜ್ಜಿ ಅರ್ಥ ಮಾಡಿಕೊಂಡು ಸುಮ್ಮನಾದರು.

ಇತ್ತೀಚೆಗೆ ಓರ್ವ ಯುವತಿ ನೃತ್ಯಪಟುವಾಗಬೇಕೆಂದು ಬಹಳ ಸಾಹಸ ಪಡುತ್ತಿದ್ದಳು. ಅವಳನ್ನು ಕಂಡ ಹಿರಿಯರೊಬ್ಬರು ಮಾತಿಗಿರಲಿ ಎಂದು “ಏನು ವಿಶೇಷ ಇಷ್ಟು ಚನ್ನಾಗಿ ಕಾಣುತ್ತಿರುವೆ” ಎಂದಾಗ “ನಾನು ಜೀರೋ ವೇಸ್ಟ್ ಮೇನ್ಟೇನ್ ಮಾಡ್ತಾ ಇದ್ದೀನಿ” ಎಂದಳಂತೆ. ಕೇಳಿಸಿಕೊಂಡವರು “ಜೀರೋ ವೇಸ್ಟ್ ಅದು ಹೇಗೆ ಇವರ ಮನೆಯಲ್ಲಿ ಕಸವೇ ಉತ್ಪತ್ತಿಯಾಗುವುದಿಲ್ಲವೇ! ಒಂದು ವೇಳೆ ಉತ್ಪತ್ತಿಯಾದ ಕಸವನ್ನು ಇನ್ಯಾವುದೋ ರೂಪದಲ್ಲಿ ಬಳಸಿದರೆ ಹೀಗೆ ಚಂದ ಆಗಬಹುದಾ?” ಎಂದುಕೊಳ್ಳುತ್ತಿರುವಂತೆ ಅವರಿಗೆ ಹೊಳೆದಿದ್ದು “ಓಹೋ ಇದು ಶೂನ್ಯ ತ್ಯಾಜ್ಯದ ಕಲ್ಪನೆಯಲ್ಲ ಝೀರೋ ಫಿಗರ್ ನಿರ್ವಹಣೆ” ಎಂದು ಇರೋ ಅಂದನಾ ಹಾಳುಮಾಡಿಕೊಂಡು ಕೆನ್ನೆಕುಳಿ ಬರೆಸಿಕೊಂಡು ಮಂಗನಮೂತಿ ಹಾಗೆ ಕಾಣುವುದರ ಬದಲು ಹಾಲು, ಮೊಸರು, ಬೆಣ್ಣೆ, ತುಪ್ಪ ತಿಂದು ದುಂಡು ದುಂಡಗೆ ಇರಬಾರದೆ ಎಂಥ ಕಾಲವಿದು ಎಂದು ಹಣೆಹಣೆ ಚಚ್ಚಿಕೊಂಡರು.

ಇನ್ನು ಕನ್ನಡದ ಪದಗಳ ಪರಿಚಯವೆ ಕೆಲವರಿಗಿಲ್ಲ ಅವು ಹೆಸರುಗಳೋ, ಸರ್ವನಾಮಗಳೋ ಎಂಬ ಗೊಂದಲದಲ್ಲಿ ಸಿಕ್ಕು ನರಳುತ್ತಾರೆ. ಅಂಥದ್ದೊಂದು ಸಂದರ್ಭ ಹೇಳುವುದಾದರೆ ತಾಯಿಯೊಬ್ಬಳು ಮಗಳನ್ನು ಅಂಗಡಿಗೆ ಕಳುಹಿಸಿ “ಅವನಿಗೆ ಹೇಳಿದ್ದೆ ತರಕಾರಿ ತರಲು ಇನ್ನೂ ಬಂದಿಲ್ಲ. ಅವನಿಗೆ ಗೊತ್ತಾಗಲ್ಲ, ಅವನಿಗೆ ಟೈಂ ಸೆನ್ಸ್ ಇಲ್ಲ” ಎಂದು ಚಡಪಡಿಸುತ್ತಿದ್ದರೆ ಮನೆಗೆ ಬಂದ ಅತಿಥಿಗಳು ಈ ಅವನಿಗೆ ಎಂದರೆ ಯಾರಿರಬಹುದು ಎಂದು ನಿರೀಕ್ಷೆ ಕಂಗಳಿಂದ ನೋಡುತ್ತಿದ್ದರು ಅಷ್ಟರಲ್ಲಿ ಮಾತಿನ ನಡುವೆ ಅವರಿಗೆ ಅರ್ಥ ವಾದದ್ದು ಅವನಿ ಎಂದರೆ ಅವರ ಮಗಳ ಹೆಸರು. ಅವನಿ ಎಂದರೆ ಭೂಮಿ ಎನ್ನುವ ಅರ್ಥವಿದೆ ಎಂದು.

ಕೆಲವು ಹೆಣ್ಣು ಮಕ್ಕಳ ಹೆಸರು ಇಂಗ್ಲಿಷಿನಲ್ಲಿ ಬರೆದಾಗ ಗಂಡು ಮಕ್ಕಳ ಹೆಸರೆ ಆಗಿಬಿಡುತ್ತವೆ. ಉದಾಹರಣೆಗೆ Kala, Rama, Mala ಇತ್ಯಾದಿ ಕಲಾ>ಕಾಳ, ರಮಾ>ರಾಮ ಎಂದು ಹಾಜರಿ ಕರೆಯುವಾಗ ವ್ಯತ್ಯಾಸಗಳಾದಾಗ ಮುಜುಗರದ ಸನ್ನಿವೇಶಗಳು ಎದುರಾಗಿರುತ್ತವೆ. ಮಾಲ ಎನ್ನುವ ಹೆಸರನ್ನು ಅಧ್ಯಾಪಕರು ಮಲ ಎಂದುಬಿಟ್ಟಿದ್ದರು.. ಆಗಂತೂ ಆ ಹುಡುಗಿಯ ಪಾಡು ಹೇಗಾಗಿರಬೇಡ ಒಮ್ಮೆ ಯೋಚಿಸಿ. ಇನ್ನು ಕನ್ನಡದ ಅಮ್ಮ>ಮಮ ಆಗಿದೆ. ಅದನ್ನೆ ಇಂಗ್ಲಿಷಿನಲ್ಲಿ ಬರೆದರೆ Mama ಆಗುತ್ತದೆ ಅಲ್ಲಿ ಅಮ್ಮನೋ ಮಾಮನೋ ತಿಳಿಯುವುದಿಲ್ಲ. ಇನ್ನು ಅಪ್ಪ ಎಂದು ಕರೆಯುವುದು ಬಿಟ್ಟು ಡ್ಯಾಡಿ ಎಂದು ಕರೆದಿದ್ದು ಮುಗಿದು DADA ಎಂದು ಕರೆಯುವುದು ಫ್ಯಾಷನ್ ಆಗಿದೆ. ಡ… ಡ… ಎಂದೋದುವ ಬದಲು ದಡ್ಡ ಎಂದೋದಿದರೆ ಅಪ್ಪನಿಗೆ ಹೇಗಾಗಬೇಡ ನೀವೇ ಯೋಚಿಸಿ. ಬರಬರುತ್ತಾ ಕೆಲವು ಹೆಸರುಗಳು ಇಂಗ್ಲಿಷಿನದ್ದ ಕನ್ನಡದ್ದ ಎಂದು ತಿಳಿಯುವುದಿಲ್ಲ. ಕನ್ನಡದ ಹೆಸರುಗಳು ಇಂಗ್ಲೀಷಿಕರಣಗೊಂಡು ಅಭಿರಾಮ್>ಅಬ್ರಹಾಂ, ಕೃಷ್ಣ >ಕ್ರಿಸ್, ಜಾನಕಿರಾಮ> ಜಾನಿ, ಹರಿ>ಹ್ಯಾರಿ, ಲಕ್ಷ್ಮಿ>ಲಕ್ಕಿ, ಸೀತಾಲಕ್ಷ್ಮಿ>ಸಿಲ್ಲಿ, ಲೀಲಾವತಿ>ಲಿಲ್ಲಿ, ಕನ್ನಡ>ಕೆನಡಾ ಆಗಿವೆ. ಭಾಷೆಗಳು ಪರಸ್ಪರ ಸಂಸರ್ಗಕ್ಕೆ ಬಂದಂತೆ ಕೊಡುಕೊಳ್ಳುವಿಕೆಯಾದ ಪದಗಳು ತಮ್ಮ ಜಾಯಮಾನವನ್ನು ಬಿಟ್ಟು ಅನ್ಯಭಾಷೆಗೆ ಹೊಂದಿಕೊಳ್ಳುವಾಗ ವ್ಯತ್ಯಾಸಗಳು ಆಗುತ್ತವೆ ಕೆಲವು ಹೀನಾರ್ಥ ಹೊಂದಿದ್ದವು ಉತ್ತಮಾರ್ಥವನ್ನು, ಉತ್ತಮಾರ್ಥ ಹೊಂದಿದ್ದವು ಹೀನಾರ್ಥವಾಗಿ ಸಂಕುಚಿತ ಅರ್ಥಗಳಾಗಿ, ವಿಶಾಲಾರ್ಥಗಳಾಗಿ ಮಾರ್ಪಡುತ್ತವೆ. ಇಂಥ ಹಲವು ಉದಾಹರಣೆಗಳು ಮುಂದಿನ ಭಾಗದಲ್ಲಿ.