ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ.
‘ಕಾವ್ಯಾ ಓದಿದ ಹೊತ್ತಿಗೆ’ ಅಂಕಣದಲ್ಲಿ ಫ್ಯದೊರ್ ದಾಸ್ತಯೇವ್ಸ್ಕಿಯ ಪ್ರಸಿದ್ಧ ಕಾದಂಬರಿ “ಕ್ರೈಂ ಅಂಡ್ ಪನಿಷ್ಮೆಂಟ್” ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ
ಜಗತ್ತಿಗೆಲ್ಲ ರಾಸ್ಕೋಲ್ನಿಕೋವ್ ಒಬ್ಬ ದುರಂತ ನಾಯಕ. ಇಪ್ಪತ್ಮೂರೇ ವರ್ಷದ ಈ ಬಿಸಿ ರಕ್ತದ ತರುಣ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಗರದ ಇಕ್ಕಟ್ಟಾದ ತನ್ನ ಕೊಳಕು ಕೋಣೆಯ ಸೋಫಾದ ಮೇಲೆ ಸುಡುತ್ತ ಮಲಗಿಯೇ ಇಡೀ ಜಗತ್ತಿನ ಸ್ವಾಸ್ಥ್ಯದ ಬಗ್ಗೆ ಯೋಚಿಸಿದವನು. ಹಣದ ಅಭಾವದಿಂದ ಕಾನೂನು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದ್ದಾನೆ. ಇತರರ ಮಕ್ಕಳಿಗೆ ಟ್ಯೂಷನ್ ಹೇಳಿಕೊಟ್ಟು ಬರುತ್ತಿದ್ದ ಚಿಲ್ಲರೆ ಕಾಸನ್ನೂ ಆತ್ಮಾಭಿಮಾನಕ್ಕಾಗಿ ತ್ಯಜಿಸಿದ್ದಾನೆ.
ಶ್ರೀಮಂತ ಪಾನ್ ಬ್ರೋಕರ್ ಅಲ್ಯೊನಾ ಇವನೊವ್ನಾಳ ಬಳಿ ಇವನು ಗಿರವಿಗೆ ಇಟ್ಟಿರುವ ಕೆಲವೇ ವಸ್ತುಗಳಲ್ಲಿ, ತೀರಿ ಹೋದ ಅವನ ತಂದೆಯ ಏಕಮಾತ್ರ ನೆನಪಾಗಿ ಉಳಿದ ಒಂದು ಬೆಳ್ಳಿಯ ಗಡಿಯಾರವೂ ಸೇರಿದೆ. ಸರಿಯಾಗಿ ಬಾಡಿಗೆ ಕೊಡುತ್ತಿಲ್ಲವೆಂದು ಮನೆಯೊಡತಿ ಇವನಿಗೆ ಊಟ ಕೊಡುವುದನ್ನೂ ತಪ್ಪಿಸುತ್ತಿದ್ದಾಳೆ. ಕೆಲಸಗಾರ್ತಿಯಾದ ನಸ್ತಾಸ್ಯಾ ಅಂತಃಕರಣದಿಂದ ಕದ್ದು ಮುಚ್ಚಿ ಊಟ ತಂದರೆ ಆ ದಿನ ಅವನ ಹೊಟ್ಟೆಗುಂಟು, ಇಲ್ಲದಿದ್ದರೆ ಇಲ್ಲ. ಇದೆಲ್ಲವನ್ನೂ ಮೀರಿ ಪೀಟರ್ಸ್‌ಬರ್ಗ್ ನಗರದ ಬಣ ಬಣ ಬಿಸಿಲಿಗೆ ಅವನ ಚೈತನ್ಯ ಒಳಗಿನಿಂದಲೂ ಹೊರಗಿನಿಂದಲೂ ಮುರುಟಿ ಹೋಗುತ್ತಿದೆ.
ಅಪರಾಧವೆಂದರೇನು? ಅದಕ್ಕೆ ತಕ್ಕ ಶಿಕ್ಷೆ ಅಂದರೇನು? ಸಮಾಜ ಕೊಡುವ ಶಿಕ್ಷೆ ಅಂತರಾತ್ಮ ಕೊಡುವ ಶಿಕ್ಷೆಗಿಂಥ ಕಠಿಣವಾಗಿರಲು ಸಾಧ್ಯವೇ? ಬಹುಜನರ ಹಿತಕ್ಕಾಗಿ ಒಬ್ಬ ದುಷ್ಟನನ್ನು (ಈ ಕಾದಂಬರಿಯ ಸಂದರ್ಭದಲ್ಲಿ ದುಷ್ಟೆಯನ್ನು) ಕೊಲ್ಲಬಹುದೇ? ಹಾಗಿದ್ದರೆ ಆ ದುಷ್ಟತನಕ್ಕೆ ಮಾಪನ ಯಾವುದು? ಯಾರ ನಿರ್ಣಾಮವಾಗಬೇಕು, ಯಾರು ಉಳಿಯಬೇಕು ಎಂದು ನಿರ್ಣಯಿಸುವವರು ಯಾರು? ಒಬ್ಬ ನಿರ್ದಯಿಯನ್ನು ಕೊಂದುಬಿಟ್ಟರೆ ಜಗತ್ತಿನ ಉಗ್ರತೆಯೆಲ್ಲ ನಾಶವಾಗಿ ಬಿಡುವುದೇ? ಹಾಗಿದ್ದರೆ ಒಬ್ಬರನ್ನೊಬ್ಬರು ಹಿಂಸಿಸುವ ಕಠೋರತೆ ಹುಟ್ಟುವುದೆಲ್ಲಿಂದ? ಅದನ್ನು ಹೊಡೆದು ಹಾಕಲು ಸಾಧ್ಯವೇ? ಆ ದಾರಿಯಲ್ಲಿ ಎಷ್ಟು ಜನರ ಬಲಿಯಾಗಬೇಕು? ಬುದ್ಧಿಜೀವಿಯಾದವನಿಗೆ ಸಮಾಜದ ನೈತಿಕತೆಯನ್ನು ಕಾಪಾಡುವಲ್ಲಿ ಇತರರಿಗಿಂಥ ಹೆಚ್ಚಿನ ಅಧಿಕಾರವಿರುತ್ತದೆಯೇ? ಅಂಥ ಭಾರವನ್ನು ಹೋರಲು ಒಬ್ಬ ವ್ಯಕ್ತಿ ಸಮರ್ಥನೇ?
ಮನುಷ್ಯನೊಳಗೆ ಆತ್ಮಸಾಕ್ಷಿ (conscience) ಎನ್ನುವುದು ಎಂದಿನಿಂದ ಹುಟ್ಟಿಕೊಂಡಿತೋ ಅಂದಿನಿಂದ ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕಿಕೊಳ್ಳಲು ಎಲ್ಲ ಕಾಲಘಟ್ಟಗಳಲ್ಲೂ ಪ್ರಯತ್ನಿಸುತ್ತಲೇ ಇದ್ದೇವೆ. ಅಷ್ಟು ಸುಲಭಕ್ಕೆ ಉತ್ತರಿಸಲಾಗದ ಈ ಪ್ರಶ್ನೆಗಳಿಗೆ 1866ರಲ್ಲಿ ಕಂತುಗಳಲ್ಲಿ ಬಿಡುಗಡೆಯಾಗಿ ನಂತರ ವಿಶ್ವಪ್ರಸಿದ್ಧಿ ಪಡೆದ ತಮ್ಮ ‘ಕ್ರೈಮ್ ಅಂಡ್ ಪನಿಷ್ಮಂಟ್’ ಕಾದಂಬರಿಯಲ್ಲಿ ಮುಖಾಮುಖಿಯಾಗಿದ್ದಾರೆ ರಷ್ಯಾದ ಕಾದಂಬರಿಕಾರ ಫ್ಯದೊರ್ ದಾಸ್ತಯೇವ್ಸ್ಕಿ. ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿಯವರು ಈ ಕೃತಿಯನ್ನು ಕನ್ನಡ ಭಾಷೆಯ ಆತ್ಮದಲ್ಲಿ ಹಿಡಿದು ‘ಅಪರಾಧ ಮತ್ತು ಶಿಕ್ಷೆ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಆ ಅನುವಾದದ ಕೆಲವು ಕಂತುಗಳನ್ನೂ ಕೆಂಡಸಂಪಿಗೆಯ ಈ ಲಿಂಕ್‍ನಲ್ಲಿ (provide link) ಓದಬಹುದು.
ರಾಸ್ಕೋಲ್ನಿಕೋವ್ ಅಲ್ಯೊನಾ ಇವನೊವ್ನಾಳನ್ನು ಆ ಕ್ಷಣದ ಆವೇಶದಲ್ಲಿ ಕೊಲ್ಲಲು ಹೊರಟಿಲ್ಲ. ಆ ನಿರ್ಧಾರವನ್ನು ಅವನು ಕೈಗೊಳ್ಳುವ ದಾರಿಯಲ್ಲಿ ನಡೆದ ಹಲವಾರು ಘಟನೆಗಳು ಆತನನ್ನು ಈ ವಿಧಿಯತ್ತ ನೂಕಿವೆ. ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ… ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ. ತನ್ನ ಹಾಗೆಯೇ ಯೋಚಿಸುವ ತಂಗಿ ದುನ್ಯಾಳ ಮನಸ್ಸನ್ನು ಆತ ಬಲ್ಲ. ಅಣ್ಣನಿಗಾಗಿ ತನ್ನ ಬದುಕನ್ನೇ ಬಲಿಕೊಟ್ಟು ಆ ತ್ಯಾಗದಲ್ಲೇ ತನ್ನ ಬದುಕಿನ ಅರ್ಥ ಕಾಣಲು ಹೊರಟಿರುವ ದುನ್ಯಾ ಮತ್ತು ಮಗನಿಗಾಗಿ ಮಗಳ ಜೀವನವನ್ನು ಸರ್ವನಾಶ ಮಾಡಲು ಹೊರಟಿರುವ ತಾಯಿ ಪುಲ್ಚೇರಿಯಾ ಅಲೆಕ್ಸಾಡ್ರೋವ್ನಾ ಅವನನ್ನು ಇನ್ನಷ್ಟು ಕೆರಳಿಸಿದ್ದಾರೆ.
ಕೆಲಸಗಾರ್ತಿಯಾದ ನಸ್ತಾಸ್ಯಾ ಅಂತಃಕರಣದಿಂದ ಕದ್ದು ಮುಚ್ಚಿ ಊಟ ತಂದರೆ ಆ ದಿನ ಅವನ ಹೊಟ್ಟೆಗುಂಟು, ಇಲ್ಲದಿದ್ದರೆ ಇಲ್ಲ. ಇದೆಲ್ಲವನ್ನೂ ಮೀರಿ ಪೀಟರ್ಸ್‌ಬರ್ಗ್ ನಗರದ ಬಣ ಬಣ ಬಿಸಿಲಿಗೆ ಅವನ ಚೈತನ್ಯ ಒಳಗಿನಿಂದಲೂ ಹೊರಗಿನಿಂದಲೂ ಮುರುಟಿ ಹೋಗುತ್ತಿದೆ.
ಕ್ರೂರ ಗಿರವಿದಾರಳಾದ ಅಲ್ಯೊನಾ ಇವನೊವ್ನಾ ಬದುಕುಳಿಯಲು ಯಾಕೆ ಯೋಗ್ಯಳಲ್ಲ ಎಂಬ ಬಗ್ಗೆ ಪಾನಗೃಹವೊಂದರಲ್ಲಿ ಕುಳಿತಾಗ ಪಕ್ಕದ ಟೇಬಲ್ಲಿನವನ ವಾದ ರಾಸ್ಕೋಲ್ನಿಕೋವ್‍ನ ಕಿವಿಯ ಮೇಲೆ ಬೀಳುತ್ತದೆ. ಅಲ್ಯೊನಾ ಇವನೋವ್ನಾಳ ಏಕಮಾತ್ರ ಸಂಗಾತಿಯಾದ ಆಕೆಯ ತಂಗಿ ಲುಝವೆತ್ತ ಮರುದಿನ ಇಂತಿಷ್ಟು ಹೊತ್ತಿಗೆ ಮನೆಯಲ್ಲಿರುವುದಿಲ್ಲ ಎಂಬುದೂ ಅವನಿಗೆ ಆಕಸ್ಮಿಕವಾಗಿ ತಿಳಿಯುತ್ತದೆ. ಈ ಎಲ್ಲ ಸಂಗತಿಗಳು ಆಕಸ್ಮಿಕವಾಗಿ ಘಟಿಸಿದ್ದೋ ಇಲ್ಲಾ ತಲೆಯಲ್ಲೆದ್ದ ಯೋಚನೆಯ ಸುಳಿವು ಹಿಡಿದುಹೋಗಿದ್ದಕ್ಕೆ ರಾಸ್ಕೋಲ್ನಿಕೋವ್‍ನಿಗೆ ಇವೆಲ್ಲ ಅನಾಯಾಸವಾಗಿ ದೊರೆತದ್ದೋ ಎಂಬ ಪ್ರಶ್ನೆ ಉಳಿದು ಹೋಗುತ್ತದೆ.
ಕಾದಂಬರಿಯ ಇನ್ನೊಂದು ಮುಖ್ಯಪಾತ್ರವಾದ ದುನ್ಯಾ ತನ್ನಣ್ಣ ರಾಸ್ಕೋಲ್ನಿಕೋವ್‍ನಂತೆಯೇ ವಿಚಾರವಂತಳು. ಆದರೆ ಅವನಿಗಿಂತಲೂ ಸಂಯಮಶೀಲಳು. ಇವರಿಬ್ಬರ ತಾಯಿಯ ಪ್ರಕಾರ ಅಣ್ಣ- ತಂಗಿ ಕಾಣಲೂ ಒಂದೇ ರೀತಿ ಇರುವವರು. ತನ್ನನ್ನು ಬಲಾತ್ಕರಿಸಲು ಬಂದ ಸ್ವಡ್ರಿಗೈಲಾಫ್‍ನತ್ತ ಆಕೆ ಹೊಡೆದ ಗುಂಡು ಆತನಿಗೆ ತಾಕಿದ್ದರೆ ಈಕೆಯೂ ಅಣ್ಣನದೇ ವಿಧಿಯನ್ನು ಪುನರಾವರ್ತಿಸಬೇಕಿತ್ತೇನೋ. ಆದರೆ ಆಕೆಯ ಅದೃಷ್ಟಕ್ಕೆ ಆ ಗುಂಡು ಪಕ್ಕದ ಗೋಡೆಗೆ ತಾಕಿ ಆಕೆಯನ್ನು ಸಂಕಟದಿಂದ ಪಾರು ಮಾಡಿದೆ. ಅಥವಾ ಆಕೆ ಬೇಕೆಂದೇ ತನ್ನ ಗುರಿ ಸಡಲಿಸಿದಳೇ? ಆ ಪಿಸ್ತೂಲಿನ ಪ್ರಕರಣವಾಗದೇ ಇದ್ದರೆ ಸ್ವಿಡ್ರಿಗೈಲಾಫ್ ಆಕೆಯನ್ನು ಹೋಗಗೊಡುತ್ತಿರಲಿಲ್ಲ ಎಂಬುದು ವಿಧಿತವಾಗಿದೆ. ಹಾಗಿದ್ದರೆ ದುನ್ಯಾ ತನ್ನಣ್ಣ ರಾಸ್ಕೋಲ್ನಿಕೋವ್‍ನಿಗಿಂಥ ಸ್ಥಿತಪ್ರಜ್ಞಳೇ? ಲೋಕವೇ ಹೆಣ್ಣಿಗೆ ಕಲಿಸಿದ “ಬುಸ್ ಅನ್ನಬೇಕು, ಆದರೆ ಕಚ್ಚಬಾರದು” ಎಂಬ ನೀತಿ ಅಂದು ದುನ್ಯಾಳನ್ನು ಕಾಪಾಡಿದಂತಿದೆ.
ವೇಶ್ಯಾವೃತ್ತಿ ನಡೆಸುತ್ತ ಬೈಬಲ್ ಓದುವ ಸೋನ್ಯಾ ನಮ್ಮ ವಚನ ಚಳುವಳಿಯ ಸಂಕವ್ವೆ, ರೇಚವ್ವೆ, ಕಾಳವ್ವೆಯರನ್ನು ನೆನಪಿಸುತ್ತಾಳೆ. “ಇಂಥ ಸತ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಗೆ ಬದುಕುತ್ತೀ?” ಎಂದು ರಾಸ್ಕೋಲ್ನಿಕೋವ್‍ನನ್ನು ಕೇಳುವ ಈಕೆ ಇಡೀ ಜಗತ್ತನ್ನು ಆವರಿಸಿಕೊಂಡಿರುವ ವೇದನೆಗೊಂದು ಮೂರ್ತರೂಪದ ಹಾಗಿದ್ದಾಳೆ. ಜೊತೆಗೆ ದುನ್ಯಾಳನ್ನು ಒಲಿಸಿಕೊಳ್ಳಲು ಸಾಧ್ಯವಾಗದೇ ಪ್ರಾಣ ತ್ಯಾಗ ಮಾಡುವ ಸ್ವಿಡ್ರಿಗೈಲಾಫ್, ಅಕಾರಣವಾಗಿ ಕ್ರೌರ್ಯ- ಸಣ್ಣತನ ತೋರಿಸುವ ಲೂಷನ್, ಗುಟ್ಟು ಬಿಟ್ಟು ಕೊಡದಂತೆ ವಾದ ಹೂಡುವ ಪೊರ್ಫಿರಿ ಪೆಟ್ರೊವಿಚ್, ಮಗನ ಸ್ಥಿತಿಯನ್ನು ಮಾತುಗಳ ಸಹಾಯವೇ ಇಲ್ಲದೇ ಅರ್ಥ ಮಾಡಿಕೊಳ್ಳಬಲ್ಲ ಪುಲ್ಚೇರಿಯಾ ಅಲೆಕ್ಸಾಡ್ರೋವ್ನಾ, ತನ್ನ ವಾದ ಸಮರ್ಥಿಸಿಕೊಳ್ಳುವ ಸಲುವಾಗಿ ಮಕ್ಕಳನ್ನು ರಸ್ತೆಯಲ್ಲಿ ಕುಣಿಸಲೂ ಹಿಂಜರಿಯದ ಕ್ಯಾಥರಿನಾ ಅವನೊವ್ನಾ, ದುನ್ಯಾಳನ್ನು ಪ್ರೇಮದ ಸಾಕ್ಷಾತ್ಕಾರದಲ್ಲಿ ತೊಯ್ಯಿಸುವ ರಸುಮಿಕನ್… ಮುಂತಾದ ಇತರ ಪಾತ್ರಗಳು ಮೀಟುವ ತಂತಿಗಳು ನೆನಪಿನಲ್ಲುಳಿಯುತ್ತವೆ.
ಕಡೆಯಲ್ಲಿ ತಪ್ಪೊಪ್ಪಿಕೊಳ್ಳುವಾಗ ರಾಸ್ಕೋಲ್ನಿಕೋವ್ “ಕಳ್ಳತನವೇ ನನ್ನ ಉದ್ದೇಶವಾಗಿತ್ತು” ಎಂಬ ಕಾರಣವನ್ನೇ ಕೊಡಬೇಕಾಗುತ್ತದೆ. ಅವನ ಮನೋಕ್ಷೇಶವನ್ನೆಲ್ಲ ವಿವರಿಸಲು ಕಾನೂನಿನಲ್ಲಿ ಭಾಷೆಯಿಲ್ಲ. ಅದಕ್ಕೆ ಗೊತ್ತಿರುವುದೇನಿದ್ದರೂ ಸರಿ- ತಪ್ಪುಗಳ ಭಾಷೆ, ಆ ಎರಡು ಧ್ರುವಗಳ ನಡುವಿರುವ ನೂರಾರು ಛಾಯೆಗಳಗೆ ಕಾನೂನಿನಲ್ಲಿ ಸ್ಥಾನವಿಲ್ಲ.
ಆ ದಿನ ರಾಸ್ಕೋಲ್ನಿಕೋವ್ ಅಲ್ಯೊನಾ ಇವನೊವ್ನಾಳ ಜೊತೆಗೆ ಎಲ್ಲ ವಿಷಯದಲ್ಲೂ ಹಸುವಿನಂತಿರುವ, ನಿರಪರಾಧಿಯಾದ ಲಿಝವೆತ್ತಳನ್ನು ಆವೇಶದಲ್ಲಿ ಕೊಂದಿರದಿದ್ದರೆ ಅವನ ಮನೋಗತಿ ಈಗಿನದಕ್ಕಿಂಥ ಬೇರೆಯಾಗಿರುತ್ತಿತ್ತೇ? ಈ ಇಬ್ಬರಿಗೂ ಗೆಳತಿಯಾದ ಸೋನ್ಯಾಳ ಬಳಿ ಲಿಝವೆತ್ತಳಿಗೆ ಸೇರಿದ ಪುಟ್ಟ ಶಿಲುಬೆ (ಕ್ರಾಸ್) ಇದೆ. ಸೋನ್ಯಾ ತನ್ನ ಕುತ್ತಿಗೆಯಲ್ಲಿದ್ದ ಶಿಲುಬೆಯ ಪದಕವನ್ನು ರಾಸ್ಕೋಲ್ನಿಕೋವ್‍ನಿಗೆ ಕೊಟ್ಟು ತಾನು ಲಿಝವೆತ್ತಳ ಕ್ರಾಸನ್ನು ಧರಿಸುವುದಾಗಿ ಹೇಳುತ್ತಾಳೆ. ಸಂದರ್ಭದ ನಾಟಕೀಯತೆಗಾಗಿಯೂ ಲೇಖಕರು ಲಿಝವೆತ್ತಳ ಶಿಲುಬೆಯನ್ನು ರಾಸ್ಕೋಲ್ನಿಕೋವ್‍ನಿಗೆ ಕೊಡಿಸುವುದಿಲ್ಲ. ಆತನಿಗೆ ಮುಕ್ತಿ ಸಿಗುವುದು ಲಿಝವೆತ್ತಳಿಂದಲ್ಲ, ಸೋನ್ಯಾಳಿಂದ ಎಂಬುದನ್ನು ಕಾದಂಬರಿಕಾರರಾದ ದಾಸ್ತಯೇವ್ಸ್ಕಿ ಈ ಮೂಲಕ ಕಾಣಿಸಲು ಪ್ರಯತ್ನಿಸಿರಬಹುದೇನೋ.
ಆದರೆ ಸೋನ್ಯಾಳ ಕ್ರಾಸನ್ನೂ ರಾಸ್ಕೋಲ್ನಿಕೋವ್‍ನಿಗೆ ಮುಟ್ಟಲು ಆಗುವುದಿಲ್ಲ. ನಂತರ, ಬಹಳ ನಂತರ ಪಡೆಯುವುದು ಅವನು ಆಕೆಯ ಬಳಿ ಶಿಲುಬೆಯನ್ನು, ತನ್ನ ಮನಸ್ಸಿನ ಗೊಂದಲಗಳನ್ನೆಲ್ಲ ತನ್ನೊಳಗೇ ಪರಿಹರಿಸಿಕೊಂಡ ಮೇಲೆ. ಶುದ್ಧವಾದ ಪ್ರೇಮಕ್ಕೆ ಮಾತ್ರ ಮನುಷ್ಯರನ್ನು ಬದುಕೆಂಬ ಕೊಳಚೆಯಿಂದ ಎತ್ತಲು ಸಾಧ್ಯವಿದೆ ಎಂಬ ದೀಕ್ಷೆಯನ್ನು ರಸ್ಕೋಲ್ನಿಕೋವ್ ಹೊಟ್ಟೆಪಾಡಿಗಾಗಿ ವೇಶ್ಯಾ ವೃತ್ತಿ ನಡೆಸುವ ಸೋನ್ಯಾಳಿಂದ ಪಡೆದುಕೊಳ್ಳುತ್ತಾನೆ.
ಆದರೆ ಅವನ ಈ ಶಿಲುಬೆಯನ್ನು ಅವನೇ ಎತ್ತಿ ನಡೆಯಬೇಕಾಗಿದ್ದು. ಸೋನ್ಯಾ ಜೊತೆಯಲ್ಲಿರಬಹುದೇ ವಿನಃ ಆಕೆಯದನ್ನು ಹೊರಲಾರಳು.
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸು ತೊಟ್ಟ ದೇವರು (ಕವನ ಸಂಕಲನಗಳು) ಪುನರಪಿ (ಕಾದಂಬರಿ) ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು (ನಾಟಕಗಳು) ದೂರ ದೇಶವೆಂಬ ಪಕ್ಕದ ಮನೆ (ಪ್ರಬಂಧಗಳು.) ಮಾಕೋನ ಏಕಾಂತ (ಕಥಾ ಸಂಕಲನ) ಇವರ ಪ್ರಕಟಿತ ಕೃತಿಗಳು.