‘ನೀನು ಏನು ಬೇಕಾದರೂ ಮಾಡು, ಆದರೆ ನಿನ್ನ ಅವೆರೆಡನ್ನು ಮಾತ್ರ ಸಾರ್ವಜನಿಕವಾಗಿ ತೋರಿಸಬೇಡ ಎಂದು ಎಷ್ಟೇ ಬೇಡಿಕೊಂಡರೂ ಸಾಕುಂತಲೆ ರೊಚ್ಚಿಗೆದ್ದಾಗಲೆಲ್ಲಾ ಬೇಕಂತಲೇ ಅವುಗಳನ್ನು ದೊಡ್ಡದಾಗಿ ತೋರಿಸಿ ನನ್ನನ್ನು ಬೆಂಕಿಯ ಬಾಣಲೆಯಲ್ಲಿ ಹುರಿಯುತ್ತಿದ್ದಳು. ಅವಳಿಗೆ ನಿಜವಾಗಿಯೂ ಸಿಟ್ಟು ಬಂದಿತ್ತು. ಆಕೆಗೆ ನಾನು ಅಂದರೆ ಬಹಳ ದೊಡ್ಡ ಎಡವಟ್ಟುಗಳ ಒಂದು ದೊಡ್ಡ ಮೊತ್ತ. ಒಂದು ಎಡವಟ್ಟಿನ ನಂತರ ಇನ್ನೊಂದು ಅದರ ನಂತರ ಮತ್ತೊಂದು ಮಗದೊಂದು ನೂರಾ ಒಂದು…. ನಾನು ಈ ಸಾಕುಂತಲೆಯನ್ನು ಮದುವೆಯಾಗಿದ್ದೂ ಅಂತಹ ದೊಡ್ಡ ಎಡವಟ್ಟೊಂದರ ಆರಂಭವಾಗಿತ್ತು.
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಒಂಟಿ ಪಿಶಾಚಿ” ನಿಮ್ಮ ಓದಿಗೆ

ಶರದೃತುವಿನ ಆರಂಭ ಕಾಲ. ಬಾದ್ರಪದ ಕಳೆದು ಅಶ್ವಯುಜ ನಗರಕ್ಕೆ ಕಾಲಿಡುವ ಹೊತ್ತು.

“ಮಳೆಗಾಲವು ಕಳೆದು, ಕಪ್ಪಗಿನ ಮೋಡಗಳು ಬಿಳುಪಾಗಿ, ಹಗಲು ಆಗಸದಲ್ಲಿ ದಿನಮಣಿ ಸೂರ್ಯನ ಬೆಳಕು ಬೆಳಗಿ , ಇರುಳ ಆಗಸದಲ್ಲಿ ಚಂದಿರನ ಹೊಳಪು ಮಿನುಗಿ, ಉಕ್ಕಿದ್ದ ನದಿಗಳು ಶಾಂತವಾಗಿ, ಆಕಾಶ ಮಾರ್ಗದಲ್ಲಿ ಹಂಸಗಳು ಹಾರಿ ಬಂದು, ಕೊಳದಲ್ಲಿ ತಾವರೆಗಳು ಅರಳಿ, ತಲೆಯ ಮೇಲೆ ಅರಳೆ ಹತ್ತಿಗಳಂತಹ ತೆಳು ಮೋಡಗಳು ತೇಲಿ, ಮೈಸೂರಿನ ಮಹಾರಾಜರು ಯುದ್ಧಕ್ಕೆ ಹೋಗಿದ್ದವರು ಶಹರಿಗೆ ಮರಳಿ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ದರಾಗುತ್ತಿದ್ದ ಕಾಲ.”

ಹೈಸ್ಕೂಲಿನ ಟೀಚರ್ ಸೌಭಾಗ್ಯಲಕ್ಷ್ಮಿ ಮೇಡಂ ಇತಿಹಾಸವನ್ನೂ, ಕುಮಾರವ್ಯಾಸನನ್ನೂ ಮಿಕ್ಷಿಯಲ್ಲಿ ತಿರುಗಿಸಿದ ಹಾಗೆ ಅರೆದು ತಮ್ಮ ವರ್ಣನೆಗೆ ತಾವೇ ಖುಶಿಯಾಗಿ ಕ್ಲಾಸಲ್ಲೇ ಕರಗಿ ನೀರಾಗುತ್ತಿದ್ದರು. ಅವರ ನಾಚಿಕೆಯ ಕಾರಣ ಅರಿತು ನಾನೂ ಕುಳಿತಲ್ಲೇ ನಾಚಿಕೊಂಡು ಚಡಪಡಿಸುತ್ತಿದ್ದೆ. ನವರಾತ್ರಿಯ ಸಮಯದಲ್ಲೇ ಅದೆಲ್ಲಿಂದಲೋ ಅವತರಿಸುತ್ತಿದ್ದ ಕಂಸಾಳೆಯ ಮೇಷ್ಟ್ರು ದಸರಾ ಮುಗಿಸಿಕೊಂಡು ವಾಪಸಾಗುತ್ತಿದ್ದರು. ಇರುವಷ್ಟು ದಿನವೂ ಸೌಭಾಗ್ಯಲಕ್ಷ್ಮಿ ಮೇಡಂ ಮನೆಯ ಮೇಲುಪ್ಪರಿಗೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಅಲ್ಲಿಂದಲೇ ನವರಾತ್ರಿಯ ಕಂಸಾಳೆ ಕುಣಿತದ ತಾಲೀಮಿಗೆ ಬರುತ್ತಿದ್ದರು. ಅಷ್ಟೂ ದಿನಗಳು ನನ್ನ ಸೈಕಲಿನ ಎದುರಿನ ರಾಡಲ್ಲಿ ನಾನು ಕೂರಬೇಕಿತ್ತು. ಅವರು ನನ್ನ ಸೈಕಲನ್ನು ಹೊಡೆದುಕೊಂಡು ಶಾಲೆಗೆ ಬರುತ್ತಿದ್ದರು. ಹಾಗೆ ಬರುವಾಗ ಅವರ ಮೈಯಿಂದ ಬರುತ್ತಿರುವ ಮೇಡಂ ಬಳಸುವ ಪರಿಮಳ. ನನಗೆ ಸಂಕಟವಾಗುತ್ತಿತ್ತು. ಸಂಜೆ ತಾಲೀಮು ಮುಗಿಸಿ ಹೋಗುವಾಗ ಅವರಿಬ್ಬರೇ ನಡೆದು ಹೋಗುತ್ತಿದ್ದರು. ನಾನು ಸೈಕಲ್ಲಿನಲ್ಲಿ ಕದ್ದು ಮುಚ್ಚಿ ಅವರನ್ನು ಹಿಂಬಾಲಿಸುತ್ತಿದ್ದೆ. ಅಗ್ರಹಾರದ ಮಾರುಕಟ್ಟೆ ಹೊಕ್ಕು ಮಲ್ಲಿಗೆ ಮುಡಿದು, ಇಂದ್ರಭವನದಲ್ಲಿ ಕಾಫಿ ಕುಡಿದು, ಅಲ್ಲೇ ರಾತ್ರಿಯ ಸಿನೆಮಾ ಮುಗಿಸಿ ಅವರು ಗಂಡ ಹೆಂಡತಿಯ ಹಾಗೆ ಕತ್ತಲಲ್ಲಿ ಕೈಹಿಡಿದು ನಡೆಯುತ್ತಾ ಮನೆ ತಲುಪುತ್ತಿದ್ದರು. ಸೈಕಲನ್ನು ಒರಗಿಸಿ ನಿಲ್ಲಿಸಿ ಕದ್ದು ನೋಡುತ್ತಿದ್ದ ನನಗೆ ಸಂಕಟವಾಗುತ್ತಿತ್ತು.

“ಮಳೆಗಾಲವು ಕಳೆದು, ಕಪ್ಪಗಿನ ಮೋಡಗಳು ಬಿಳುಪಾಗಿ, ಹಗಲು ಆಗಸದಲ್ಲಿ ದಿನಮಣಿ ಸೂರ್ಯನ ಬೆಳಕು ಬೆಳಗಿ, ಇರುಳ ಆಗಸದಲ್ಲಿ ಚಂದಿರನ ಹೊಳಪು ಮಿನುಗಿ, ಉಕ್ಕಿದ್ದ ನದಿಗಳು ಶಾಂತವಾಗಿ, ಆಕಾಶ ಮಾರ್ಗದಲ್ಲಿ ಹಂಸಗಳು ಹಾರಿ ಬಂದು, ಕೊಳದಲ್ಲಿ ತಾವರೆಗಳು ಅರಳಿ, ತಲೆಯ ಮೇಲೆ ಅರಳೆ ಹತ್ತಿಗಳಂತಹ ತೆಳು ಮೋಡಗಳು ತೇಲಿ, ಮೈಸೂರಿನ ಮಹಾರಾಜರು ಯುದ್ಧಕ್ಕೆ ಹೋಗಿದ್ದವರು ಶಹರಿಗೆ ಮರಳಿ ವಿಜಯೋತ್ಸವನ್ನು ವಿಜೃಂಬಣೆಯಿಂದ ಆಚರಿಸಲು ಸಿದ್ದರಾಗುತ್ತಿದ್ದ ಕಾಲ”

ನನ್ನ ಹಳೆಯ ಡೀಸೆಲ್ ಬುಲ್ಲೆಟ್ಟಿನ ಮೇಲೇರಿ, ಮೂಗಿನ ತುದಿಯಲ್ಲೇ ಮತ್ತೆ ಈ ಸಾಲುಗಳನ್ನು ಇಟ್ಟುಕೊಂಡು ಮಿದುಳೊಳಗೆ ಗುಣಗುಣಿಸಿಕೊಂಡು ರಚ್ಚೆಮಳೆಯಲ್ಲಿ ಸಾಗುತ್ತಿರುವೆ. ಸೋನೆಮಳೆ ಸುರಿಯುತ್ತಿರುವ ಹೆಲ್ಲ್ಮೆಟ್ಟಿನ ಗಾಜಿನ ಮುಂದೆಯೇ ಸೌಭಾಗ್ಯಲಕ್ಷ್ಮಿ ಮೇಡಂ ಮತ್ತು ಕಂಸಾಳೆಯ ಮೇಷ್ಟರೂ ಸ್ವಲ್ಪ ಹೊತ್ತು ನೃತ್ಯವಾಡಿದರು. ಕೋಣೆಯೊಳಗೆ ಕತ್ತಲೆಯ ಇರುಳು. ಬೀದಿಯಿಂದ ಒಳ ಇಣುಕುತ್ತಿರುವ ನವರಾತ್ರಿಯ ದೀಪಮಾಲೆಗಳ ಬೆಳಕು. ಆ ಬೆಳಕಲ್ಲಿ ಸೌಭಾಗ್ಯಲಕ್ಷ್ಮಿ ಮೇಡಂ ಕಂಸಾಳೆ ಮೇಷ್ಟರ ಹೊಟ್ಟೆಯ ಮೇಲೆ ಕುಳಿತು ಎದೆತೋರಿಸಿಕೊಂಡು ಓಲಾಡುತ್ತಿದ್ದರು. ಕಿಟಕಿಯ ಜಾಲರಿಯಿಂದ ನೋಡಬಾರದ್ದನ್ನು ನೋಡಿದ ನನಗೆ ಸೌಭಾಗ್ಯಲಕ್ಷ್ಮಿ ಮೇಡಂ ಶಪಿಸಿದ್ದರು.
‘ಸಾಯುವ ಕಾಲಕ್ಕೆ ನೀನು ಒಂಟಿ ಪಿಶಾಚಿಯಾಗಿ ಸಾಯುತ್ತೀಯಾ’ ಎಂದು ಕಣ್ಣೀರು ಹಾಕಿದ್ದರು.
ಕಂಸಾಳೆಯ ಮೇಷ್ಟರು ವಿಷಣ್ಣರಾಗಿ ನಕ್ಕಿದ್ದರು.

‘ಬೇಕಾದರೆ ನೀನೂ ಒಂದು ಸಲ ಅನುಭವಿಸು. ಆದರೆ ಯಾರಿಗಾದರೂ ಹೇಳಿ ಮಾನ ಕಳೆಯಬೇಡವೋ ರಾಜಕುಮಾರಾ..ʼ ಕಂಸಾಳೆಯ ಮೇಷ್ಟರು ಗೋಗರೆದಿದ್ದರು.

ಆಮೇಲೆ ಅತ್ತಿದ್ದರು.

ಅದೇ ನಮ್ಮ ಕೊನೆಯ ಕಂಸಾಳೆ ತಾಲೀಮು. ಸೌಭಾಗ್ಯಲಕ್ಷ್ಮಿ ಮೇಡಂ ಎಲ್ಲೋ ದೂರಕ್ಕೆ ವರ್ಗಾವಣೆ ತೆಗೆದುಕೊಂಡು ಹೋಗಿದ್ದರು.

*****

‘ಒಂಟಿ ಪಿಶಾಚಿಯೇ ಸಾಗು ಮುಂದೆ ಸಾಗು’ ಜಿಟಿಜಿಟಿ ಮಳೆಯಲ್ಲಿ ನಿಧಾನಕ್ಕೆ ಬೈಕಿನ ವೇಗ ಹೆಚ್ಚಿಸಿ ಕಣ್ಣುಮುಚ್ಚಿಕೊಂಡೆ. ಇನ್ನು ಈ ಬೈಕೇ ನನ್ನನ್ನು ಕರೆದುಕೊಂಡು ಹೋಗುವ ಬೃಹನ್ನಳೆ. ಅದರ ಕೈಗೆ ನನ್ನನ್ನು ಒಪ್ಪಿಸಿಕೊಂಡೆ.

ಬಹುಶಃ ಜಗತ್ತಿನಲ್ಲೇ ನಿದ್ದೆಯಲ್ಲೇ ಬೈಕು ಓಡಿಸುವ ಏಕೈಕ ಫೋಟೋಗ್ರಾಫರನಾಗಿರಬೇಕು ನಾನು. ಆದರೆ ಪುಣ್ಯಕ್ಕೆ ಯಾರಿಗೂ ಈ ವಿಷಯ ಗೊತ್ತಿಲ್ಲ. ಈ ನಗರದ ಮೆರವಣಿಗೆಗಳು, ಧರಣಿಗಳು, ಸಮ್ಮೇಳನಗಳು, ಪ್ರವಾಹಗಳು, ದರೋಡೆಗಳು, ಸಿನೆಮಾ ಶೂಟಿಂಗುಗಳು ಎಲ್ಲ ಕಡೆಯಲ್ಲೂ ನಿದ್ದೆಗಣ್ಣಲ್ಲಿ ಬೈಕು ಓಡಿಸುತ್ತಾ ಫೋಟೋ ಕ್ಲಿಕ್ಕಿಸುತ್ತೇನೆ. ನಗಾರಿ, ಕಂಸಾಳೆ, ಪೋಲೀಸು ಬ್ಯಾಂಡು, ಅಶ್ವದಳ, ಅಂಬಾರಿ, ತಾಯಿ ಭುವನೇಶ್ವರಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಮೇಯರ್, ಒಂದೊಂದು ಚಿತ್ರಕ್ಕೂ ಒಂದೊಂದು ತಲೆಬರಹ ತಲೆಯೊಳಗೇ ಬರೆದುಕೊಂಡು ಕ್ಲಿಕ್ಕಿಸುತ್ತಾ ನಡೆಯುತ್ತೇನೆ.

******

ಒಂದೇ ಒಂದು ಸಲ ಕಾವೇರಿ ಗಲಾಟೆಯ ಸಮಯದಲ್ಲಿ ನಿದ್ದೆಯಲ್ಲೇ ಓಡಿಸುತ್ತಾ ಸಿದ್ದಲಿಂಗಪುರದ ಬಳಿ ಗಾಳಿ ಮರವೊಂದಕ್ಕೆ ಡಿಕ್ಕಿ ಹೊಡೆದದ್ದು ಬಿಟ್ಟರೆ ಒಂದು ಸಲವೂ ನನ್ನ ಈ ಪುರಾತನ ಡೀಸೆಲ್ ಬೈಕ್ ನನಗೆ ಕೈಕೊಟ್ಟಿಲ್ಲ. ಹಾಗೆ ಒಂದು ಸಲ ಕೈಕೊಟ್ಟಾಗ ಹದಿನೈದು ದಿನ ದೊಡ್ಡಾಸ್ಪತ್ರೆಯ ಕಲ್ಲು ಬಿಲ್ಡಿಂಗಿನಲ್ಲಿ ಕಾಲಿಗೆ ರಾಡು ಹಾಕಿಸಿಕೊಂಡು ಮಲಗಿದ್ದೆ. ಹೆಂಡತಿ ಸಾಕುಂತಲೆ ತನ್ನ ಸೆರಗಿನಿಂದ ಜೋರಾಗಿ ಗಾಳಿ ಬೀಸುತ್ತಾ ಅಷ್ಟೇ ದೊಡ್ಡದಾಗಿ ಬಾಯಿ ತೆರೆದು ನನ್ನ ಗುಣಗಾನ ಮಾಡುತ್ತಾ ರಂಪ ತೆಗೆದಿದ್ದಳು.

“ಮಳೆಗಾಲವು ಕಳೆದು, ಕಪ್ಪಗಿನ ಮೋಡಗಳು ಬಿಳುಪಾಗಿ, ಹಗಲು ಆಗಸದಲ್ಲಿ ದಿನಮಣಿ ಸೂರ್ಯನ ಬೆಳಕು ಬೆಳಗಿ , ಇರುಳ ಆಗಸದಲ್ಲಿ ಚಂದಿರನ ಹೊಳಪು ಮಿನುಗಿ, ಉಕ್ಕಿದ್ದ ನದಿಗಳು ಶಾಂತವಾಗಿ, ಆಕಾಶ ಮಾರ್ಗದಲ್ಲಿ ಹಂಸಗಳು ಹಾರಿ ಬಂದು, ಕೊಳದಲ್ಲಿ ತಾವರೆಗಳು ಅರಳಿ, ತಲೆಯ ಮೇಲೆ ಅರಳೆ ಹತ್ತಿಗಳಂತಹ ತೆಳು ಮೋಡಗಳು ತೇಲಿ, ಮೈಸೂರಿನ ಮಹಾರಾಜರು ಯುದ್ಧಕ್ಕೆ ಹೋಗಿದ್ದವರು ಶಹರಿಗೆ ಮರಳಿ ವಿಜಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲು ಸಿದ್ದರಾಗುತ್ತಿದ್ದ ಕಾಲ”

ಸೌಭಾಗ್ಯಲಕ್ಷ್ಮಿ ಮೇಡಂ ಮುಖವನ್ನು ಕಣ್ಣಿಗೆ ತಂದುಕೊಂಡು ಅವರ ಸಾಲುಗಳನ್ನು ಮೂಗಿನ ತುದಿಯಲ್ಲಿಟ್ಟುಕೊಂಡು ನಿದ್ದೆಗೆ ಜಾರಿದ್ದವನು ಎದ್ದಾಗ ದೊಡ್ಡಾಸ್ಪತ್ರೆಯ ಕಲ್ಲು ಬಿಲ್ಡಿಂಗಿನಲ್ಲಿದ್ದೆ.

ಬಳ್ಳೆ ಆನೆಕ್ಯಾಂಪಿನ ಜೇನು ಕುರುಬರ ಅಣ್ಣಯ್ಯ ಅಷ್ಟು ಮೇಲಕ್ಕೆ ಸೆರಗು ಎತ್ತಿ ಅಷ್ಟೇ ದೊಡ್ಡ ಬಾಯಲ್ಲಿ ನನ್ನ ಗುಣಗಾನ ಪಾಡುತ್ತಿದ್ದ ಹೆಂಡತಿ ಸಾಕುಂತಲೆಯ ಅಷ್ಟು ದೊಡ್ಡ ಮೊಲೆಗಳನ್ನು ಪುಟ್ಟ ಮಗುವಿನಂತೆ ಕಕ್ಕಾವಿಕ್ಕಿಯಾಗಿ ನೋಡುತ್ತಿದ್ದ. ಅದನ್ನು ನೋಡಲಾಗದೆ ಚಡಪಡಿಸುತ್ತಿದ್ದ ಟೀ ಮಾರುವ ಮಲಯಾಳೀ ಮಾದೇವಣ್ಣ ಕೆಮ್ಮಿ ಕ್ಯಾಕರಿಸಿ ಆಸ್ಪತ್ರೆಯ ಕಿಟಕಿಯಿಂದ ಹೊರಕ್ಕೆ ಉಗಿದು ಕೈಗೆ ಟೀ ಕೆಟಲು ಎತ್ತಿಕೊಂಡು ಹೆಂಗಸರ ವಾರ್ಡಿಗೆ ‘ಟೀ ಟೀ ಚಾಯ ಚಾಯ’ ಎಂದು ತನ್ನ ಮಲಯಾಳೀ ಕನ್ನಡದಲ್ಲಿ ಕೂಗುತ್ತಾ ಮರೆಯಾಗಿದ್ದ.

‘ನಾನು ಬರುತ್ತೀನಿ ಸಾಹುಕಾರರೇ. ರಸ್ತೆಯಲ್ಲೇ ನಿಂಬೆಹಣ್ಣು ಗುಡ್ಡೆ ಸುರಿದಿಟ್ಟು ಬಂದಿದೀನಿ. ಏನಾಗಿದೆಯೋ ಕಾಣಿ’ ಮಲಯಾಳಿ ಮಾದೇವಣ್ಣನ ಮಡದಿ ಸೋಲಿಗರ ಶಿವಮ್ಮ ತಾನೂ ಎದ್ದು ಹೊರಟಿದ್ದಳು. ಬ್ಯಾಂಡೇಜು ಕಟ್ಟಿಕೊಂಡು ಮಲಗಿದಲ್ಲಿಂದಲೇ ಅವಳನ್ನು ನೋಡಿದ್ದೆ. ಬಿಮ್ಮನಸಿ ಆಗಿದ್ದಳು. ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಲಯಾಳಿ ಮಾದೇವಣ್ಣನ ಎರಡನೆಯ ಕೂಸು. ಈಗಲಾದರೂ ಅವಳನ್ನು ರಿಜಿಸ್ಟಾರರ ಖಚೇರಿಯಲ್ಲಿ ಮದುವೆ ಮಾಡಿಸಿಕೋ ಮಾದೇವಣ್ಣ ಎಂದು ಬೇಡಿಕೊಂಡಿದ್ದೆ.

‘ಅದೆಲ್ಲ ಆಗುವ ಮಾತಲ್ಲ. ನನ್ನಲ್ಲಿ ಏನೂ ದಾಖಲೆಗಳಿಲ್ಲ. ಸಾಯಲು ಹೊರಟಿದ್ದವನು ಸಾಯುವ ಮೊದಲು ಅವನ್ನೆಲ್ಲ ನದಿಗೆ ಬಿಸಾಕಿ ಬಂದಿರುವೆ. ಈಗ ಹೊಸತಾಗಿ ಏನೂ ಮಾಡಲು ಆಗುವುದಿಲ್ಲ. ಅವಳಿಗೆ ಬೇಕಾದರೆ ಇರಬಹುದು. ಇಲ್ಲವಾದರೆ ವಾಪಾಶು ಕಾಡಿಗೆ ಹೋಗಬಹುದು’

ಎಂದು ಖಡಕ್ಕಾಗಿ ಅಂದಿದ್ದ. ತಾನು ಹೃದಯ ರೋಗಿಯಾಗಿರುವುದರಿಂದ ಯಾವಾಗ ಬೇಕಾದರೂ ಸಾಯುವುದು ತನ್ನ ಆಜನ್ಮಸಿದ್ದ ಹಕ್ಕು ಅಂದುಕೊಂಡಿದ್ದ ಮಾದೇವಣ್ಣ ಆ ಅನಿಶ್ಚಿತತೆಯನ್ನು ತಾನು ಮಾತ್ರ ಅನುಭವಿಸದೆ ಸುತ್ತಮುತ್ತಲಿನ ಎಲ್ಲರಲ್ಲೂ ಹೇರುತ್ತಿದ್ದ. ತಾನು ಯಾವಾಗ ಬೇಕಾದರೂ ಸಾಯಬಹುದು ಹಾಗಾಗಿ ಆಸ್ಪತ್ರೆಯ ಸುತ್ತಮುತ್ತಲ ಸುತ್ತಳತೆಯಲ್ಲೇ ಟೀ ಮಾರುತ್ತಿದ್ದ. ಉಳಿದ ಟೀಯನ್ನು ದೊಡ್ಡಾಸ್ಪತ್ರೆಯ ಕಲ್ಲು ಬಿಲ್ಡಿಂಗಿನಲ್ಲಿರುವ ರೋಗಿಗಳಿಗೆ ಉಚಿತವಾಗಿ ಹಂಚುತ್ತಿದ್ದ. ಹಾಗೆ ಹಂಚುವುದರ ನಡುವಲ್ಲಿ ಅಲ್ಲಿರುವ ಡಾಕ್ಟರುಗಳ ಬಳಿಯಲ್ಲಿ ತನ್ನ ಎದೆಯೊಡ್ಡಿ ತಾನಿನ್ನು ಎಷ್ಟು ದಿನಗಳು ಬದುಕಬಹುದು ಎಂದು ಕೇಳುತ್ತಿದ್ದ.

ಹಾಗೆ ಟೀ ಹಂಚುತ್ತಾ ಕಲ್ಲು ಬಿಲ್ದಿಂಗಿನ ಒಳಗೆ ಬಂದಾಗಲೇ ಮಾದೇವಣ್ಣನಿಗೆ ನಾನು ಕಂಡಿದ್ದು. ನಿದ್ದೆ ಮಾಡುತ್ತಾ ಬೈಕು ಓಡಿಸಿದ ತಪ್ಪಿಗೆ ಬೇರೆ ಯಾರೂ ಶಿಕ್ಷೆ ಅನುಭವಿಸುವುದು ಬೇಡ ಹೆಂಡತಿ ಸಾಕುಂತಲೆಗೂ ಹೇಳಿ ಅವಳಿಂದ ಬಯ್ಯಿಸಿಕೊಳ್ಳುವುದು ಬೇಡ ಎಂದು ಒಂಟಿ ಪಿಶಾಚಿಯಂತೆ ನೋವು ಉಣ್ಣುತ್ತಾ ಮಲಗಿದ್ದವನನ್ನು ನೋಡಿದ ಮಾದೇವಣ್ಣ ಸ್ಟುಡಿಯೋಗೆ ಹೋಗಿ ಸಾಕುಂತಲೆಗೆ ಹೇಳಿದ್ದ. ಅರಮನೆ ಒಳಗಿನ ಆನೆಕ್ಯಾಂಪಿಗೆ ಹೋಗಿ ಅಣ್ಣಯ್ಯನನ್ನೂ ಕರಕೊಂಡು ಮಾರ್ಕೆಟ್ಟಿನ ಎದುರು ನಿಂಬೆ ಹಣ್ಣು ಸುರುವಿಕೊಂಡು ಎಣಿಸುತ್ತಿದ್ದ ಬಿಮ್ಮನಸಿ ಶಿವಮ್ಮಳನ್ನೂ ಎಳೆದುಕೊಂಡು ಬಂದಿದ್ದ.

ಅವರು ಬರುವಷ್ಟರಲ್ಲಿ ಅದಾಗಲೇ ತನ್ನ ಸ್ಕೂಟಿ ಏರಿ ಬಂದು ತಲುಪಿದ್ದ ನನ್ನ ಮಡದಿ ಸಾಕುಂತಲೆ ತನ್ನ ಮಾಮೂಲು ಶೈಲಿಯಲ್ಲಿ ಗುಣಗಾನ ಮಾಡಲು ಶುರುಮಾಡಿದ್ದಳು.

‘ಅಯ್ಯೋ ಬದುಕಿದ್ದೀಯಾ ಮೂದೇವಿ. ಸತ್ತೇ ಹೋದೆ ಅಂತ ಹೆದರಿಕೊಂಡು ಓಡಿ ಬಂದೆನಲ್ಲಾ ಮೂದೇವಿ. ದಾರಿಯಲ್ಲಿ ನಾನೇನಾದರೂ ಆಕ್ಸಿಡೆಂಟಾಗಿ ಸತ್ತೇ ಹೋಗಿದ್ದರೆ ಈಗ ನಿನ್ನನ್ನ ನೋಡಿಕೊಳ್ಳಲು ಯಾರು ಬದುಕಿರುತ್ತಿದ್ದರು ಮೂದೇವಿ ’ ಸಾಕುಂತಲೆ ಸೋಬಾನೆಯ ಶೈಲಿಯಲ್ಲಿ ತನ್ನ ಎರಡೂ ಕೈಗಳನ್ನು ಎತ್ತಿಕೊಂಡು ಸೆರಗಿನಿಂದ ಗಾಳಿ ಬೀಸುತ್ತಿದ್ದರೆ ವಾರ್ಡಿನ ಎಲ್ಲರೂ ಆಕೆಯನ್ನು ಕಕ್ಕಾವಿಕ್ಕಿಯಾಗಿ ನೋಡುತ್ತಿದ್ದರು.

‘ನೀನು ಏನು ಬೇಕಾದರೂ ಮಾಡು, ಆದರೆ ನಿನ್ನ ಅವೆರೆಡನ್ನು ಮಾತ್ರ ಸಾರ್ವಜನಿಕವಾಗಿ ತೋರಿಸಬೇಡ ಎಂದು ಎಷ್ಟೇ ಬೇಡಿಕೊಂಡರೂ ಸಾಕುಂತಲೆ ರೊಚ್ಚಿಗೆದ್ದಾಗಲೆಲ್ಲಾ ಬೇಕಂತಲೇ ಅವುಗಳನ್ನು ದೊಡ್ಡದಾಗಿ ತೋರಿಸಿ ನನ್ನನ್ನು ಬೆಂಕಿಯ ಬಾಣಲೆಯಲ್ಲಿ ಹುರಿಯುತ್ತಿದ್ದಳು. ಅವಳಿಗೆ ನಿಜವಾಗಿಯೂ ಸಿಟ್ಟು ಬಂದಿತ್ತು. ಆಕೆಗೆ ನಾನು ಅಂದರೆ ಬಹಳ ದೊಡ್ಡ ಎಡವಟ್ಟುಗಳ ಒಂದು ದೊಡ್ಡ ಮೊತ್ತ.

ಒಂದು ಎಡವಟ್ಟಿನ ನಂತರ ಇನ್ನೊಂದು ಅದರ ನಂತರ ಮತ್ತೊಂದು ಮಗದೊಂದು ನೂರಾ ಒಂದು….

ನಾನು ಈ ಸಾಕುಂತಲೆಯನ್ನು ಮದುವೆಯಾಗಿದ್ದೂ ಅಂತಹ ದೊಡ್ಡ ಎಡವಟ್ಟೊಂದರ ಆರಂಭವಾಗಿತ್ತು.

ಈ ಮರಿ ಸಾಕುಂತಲೆ ಬೇಲೂರ ಆ ಶಿಲಾಬಾಲಿಕೆ ಶಾಕುಂತಲೆಗಿಂತ ಚಂದವಿದ್ದಾಳೆ ಎಂದುಕೊಂಡು ಕಾಡಿಬೇಡಿ ಮದುವೆಯಾಗಿದ್ದೆ. ಸರಗೂರಿನಿಂದ ಕಾಲೇಜಿಗೆ ಓಡಾಡಲು ಬಸ್ಸು ಪಾಸಿಗೆ ಪಾಸ್ ಪೋರ್ಟ್ ಸೈಜಿನ ಫೋಟೋ ತೆಗೆಸಿಕೊಳ್ಳಲು ಬಂದವಳು ಅಷ್ಟು ಅಗಲ ಬಾಯಿ ತೆರೆದುಕೊಂಡು ಕಣ್ಣಿನಲ್ಲೇ ಕೊಲ್ಲುವಂತೆ ನೋಡಿದಾಗ ಇರಲಿ ಸುಮ್ಮನೆ ಎಂದು ಆ ಕೊಲ್ಲುವ ಕಣ್ಣುಗಳನ್ನು ಕ್ಲಿಕ್ಕಿಸಿದ್ದೆ. ಆಮೇಲೆ ಅವಳ ಅಗಲವಾದ ಬಾಯನ್ನು ಮುಚ್ಚಲು ಹೇಳಿ, ಕಣ್ಣು ಅಷ್ಟು ಬಿಡಬೇಡಮ್ಮಾ ಎಂದು ಸರಿಮಾಡಿ ಸರಿಯಾದ ಇನ್ನೊಂದನ್ನು ಕ್ಲಿಕ್ಕಿಸಿದ್ದೆ. ವರುಷ ಕಳೆದು ಹೊಸ ಪಾಸಿಗೆ ಮತ್ತೆ ಅದನ್ನೇ ಪ್ರಿಂಟು ಮಾಡಿಕೊಡಿ ಎಂದು ಕೇಳಿಕೊಂಡು ಬಂದಿದ್ದಳು ಜಿಪುಣಿ. ‘ಹಳೆಯದು ಬೇಡ ಮರೀ ಈಗ ನೀನು ಇನ್ನೂ ಬೇರೆ ಕಾಣುತ್ತಿರುವೆ’ ಎಂದು ಕಾಸು ಇಸಕೊಳ್ಳದೇ ಹೊಸತಾಗಿ ತೆಗೆದು ಪ್ರಿಂಟು ಕೊಟ್ಟು ಕಳಿಸಿದ್ದೆ. ಡಿಗ್ರಿ ಮುಗಿಸಿದವಳು, ‘ಅಂಕಲ್ ನನಗೂ ಫೋಟೋ ಹಿಡಿಯುವುದು ಹೇಳಿಕೊಡುತ್ತೀರಾ’ ಎಂದು ದೊಡ್ಡ ಕಣ್ಣು ಮಾಡಿ ಕೇಳಿದ್ದಳು.

ನಾನು ಅವಳ ಅಷ್ಟು ದೊಡ್ಡ ಎದೆಯೊಳಗೆ ಕಳೆದುಹೋಗಿದ್ದೆ.

ಫೋಟೋ ಹಿಡಿಯಲು ಹೇಳಿಕೊಟ್ಟಿದ್ದೆ.

ಶಾಲೆಯಲ್ಲಿ ಹೆಸರು ಬರೆಸುವಾಗ ಅಪ್ಪ, ‘ಶಾಕುಂತಲೆ ಬೇಡಾ ಸಾ. ಸಾಕುಂತಲೆ ಅಂತಲೇ ಬರೆಯಿರಿʼ ಎಂದು ಹಾಗೇ ಬರೆಸಿದ್ದರಂತೆ. ಹಾಗಾಗಿ ಸಾಲು ಸಾಲು ಹೆಣ್ಣುಮಕ್ಕಳಲ್ಲಿ ಇವಳೇ ಕೊನೆಯವಳು. ಬೆರಳು ಕೊಟ್ಟರೆ ಹಸ್ತವನ್ನೇ ನುಂಗುವ ಸಾಕುಂತಲೆ ಎರಡೇ ವರ್ಷದಲ್ಲಿ ಎಲ್ಲವನ್ನೂ ಕಲಿತುಕೊಂಡು ಕಣ್ಣು ಅಗಲಿಸಿ ರೋಪು ಹಾಕಿ ನನ್ನನ್ನೇ ಮದುವೆ ಮಾಡಿಸಿಕೊಂಡು ಸ್ಟುಡಿಯೋದ ಗಲ್ಲಾದಲ್ಲಿ ಸ್ಥಾಪಿತಳಾಗಿದ್ದಳು. ಒಂಟಿ ಪಿಶಾಚಿಯಾಗಿದ್ದ ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಸಂಸಾರಿಯಾಗಿದ್ದೆ. ಸಂಸಾರ ಏನೆಂದು ಅರಿವಾಗುವ ಮೊದಲೇ ಒಂಟಿ ಪಿಶಾಚಿಯಂತೆ ಈ ಹಳೆಯ ಡೀಸೆಲ್ ಬುಲ್ಲೆಟ್ ಏರಿ ಪತ್ರಿಕಾ ಫೋಟೋಗ್ರಾಫರನಾಗಿದ್ದೆ. ಸಾಕುಂತಲೆ ನನ್ನ ಸ್ಟುಡಿಯೋದ ಮಾಲಿಕಳಾಗಿದ್ದಳು. ಹೋದಲ್ಲಿ ಬಂದಲ್ಲಿ ನನ್ನ ಮಾನ ಕಳೆಯುವ ಒಂದು ಹವ್ಯಾಸ ಬಿಟ್ಟರೆ ಮತ್ತು ಆಗಾಗ ನನ್ನ ಮುಸುಡಿಗೆ ಬಾರಿಸುವ ಚಟ ಬಿಟ್ಟರೆ ಬೇರೆಲ್ಲದರಲ್ಲೂ ಆಕೆ ದೇವತೆಯೇ ಆಗಿದ್ದಳು.

‘ಅದು ಎಂತ ನೋಡ್ತೀಯಾ ಮೂದೇವಿ. ಅದು ಮಗುವಿಗೆ ಹಾಲು ಕೊಡೋದು. ಮೊದಲು ಮಗು ಮಾಡು’ ಎಂದು ದಬಾಯಿಸುತ್ತಿದ್ದಳು.

ಸೇರಲು ಬಿಟ್ಟರೆ ತಾನೇ ಮಕ್ಕಳಾಗುವುದು.

ಅದು ಗೊತ್ತಿದ್ದೂ ಹಿಗ್ಗಾಮುಗ್ಗ ಮುಸುಡಿಗೆ ಬಾರಿಸುತ್ತಿದ್ದಳು.
ನೀನು ಗಂಡಸಾ ಎಂದು ಮೂದಲಿಸುತ್ತಿದ್ದಳು.

ಹೀಗೆ ಆದಾಗಲೇ ನಾನು ನಿದ್ದೆಯಲ್ಲಿ ಬೈಕು ಏರಿ ನಡು ಇರುಳಲ್ಲೂ ಓಡಿಸಲು ಶುರುವಾಗಿದ್ದು.

******

ಬೈಕು ಆಣತಿ ಪಡೆದುಕೊಂಡಂತೆ ಎಲ್ಲಿಗೆ ತಲುಪಬೇಕೋ ಆ ದಾರಿಯಲ್ಲಿ ಸಾಗುತ್ತಿತ್ತು. ಅಗ್ರಹಾರ ಕಳೆದು ಅರಮನೆ ಮುಗಿದು ಬಸ್ಸು ನಿಲ್ದಾಣ ತಲುಪಿ ಬನ್ನಿ ಮಂಟಪ ತಲುಪಿದಂತೆ ಹಿತಕರವಾದ, ಆತ್ಮೀಯವಾದ, ಐತಿಹಾಸಿಕವಾದ, ಚಿರಪರಿಚಿತ ಆನೆಲದ್ದಿಯ ಪರಿಮಳ ಮೂಗಿಗೆ ಬಡಿದಾಗ ನನಗೆ ಎಚ್ಚರವಾಯಿತು. ತಾಲೀಮು ಮುಗಿಸಿ ವಾಪಾಸಾಗುತ್ತಿರುವ ದರಬಾರು ಆನೆಗಳು ವಯಸ್ಸಾದ ಸ್ಥೂಲ ಕಾಯದ ಗೌರವಾನ್ವಿತ ಮಹಿಳೆಯರಂತೆ ರಾಜ ಗಾಂಭೀರ್ಯದಲ್ಲಿ ವಾಪಾಸು ಹೋಗುತ್ತಿದ್ದವು. ಗಜಪಡೆಯ ಹಿಂದೆ ಸಾಗುತ್ತಿಉವ ಅರಣ್ಯ ಇಲಾಖೆಯ ಅದೇ ಹಳೆಯ ಜೀಪಿನ ಮುಂದೆ ಲದ್ದಿ ಸಂಗ್ರಹಿಸುತ್ತ ಸಾಗುತ್ತಿರುವ ಬಳ್ಳೆ ಕಾಡಿನ ಜೇನುಕುರುಬರ ಅಣ್ಣಯ್ಯ. ‘ ಸಾ… ನಮಸ್ಕಾರ’ ಗವಸಿನ ಮೇಲೆ ಮೆತ್ತಿಕೊಂಡಿರುವ ಲದ್ದಿಯ ಸಮೇತ ಕೈಯ್ಯೆತ್ತಿ ತನ್ನ ವಸಡಿನ ಜೊತೆ ಅಷ್ಟೂ ಹುಳುಕು ಹಲ್ಲುಗಳನ್ನು ಪ್ರದರ್ಶಿಸಿ ಕೈ ಮುಗಿದ.

ಬಳ್ಳೆ ಕಾಡಿನ ಹುತ್ತಜೇನಿನ ತಜ್ಞ ಅಣ್ಣಯ್ಯ ಅರಣ್ಯ ಇಲಾಖೆಯ ಅರೆಕಾಲಿಕ ಸ್ಪೆಷಲ್ ಕಾವಡಿ. ಕಾಡಿನಲ್ಲಿರುವಾಗ ಮುಗಿಲಿಗೆ ಗೋಣೆತ್ತಿ ಗಾಳಿಯಲಿ ತೇಲಿ ಬರುವ ಜೇನಿನ ಪರಿಮಳ ನಾಸಿಕದಿಂದ ಆಘ್ರಾಣಿಸುತ್ತಾ ಕಣ್ಮುಚ್ಚಿಕೊಂಡು ಹುತ್ತದಿಂದ ಹುತ್ತಕ್ಕೆ ಜೇನು ಹುಟ್ಟು ಹುಡುಕುತ್ತಾ ಸಾಗುವ ಯೋಗಿ ಈತ. ವರ್ಷದ ಎರಡು ತಿಂಗಳು ಈ ನಗರದ ರಾಜಬೀದಿಯಲ್ಲಿ ತಾನು ಸಾಕಿದ ಆನೆಗಳ ಹಿಂದೆ ಕಕ್ಕ ಮಾಡುವ ಮಕ್ಕಳ ಹಿಂದೆ ಮಮತೆಯಿಂದ ಸಾಗುವ ತಾಯಿಯ ಹಾಗೆ ಸಾಗುತ್ತಿರುತ್ತಾನೆ. ದಸರಾ ಕೊನೆಯ ದಿನದ ಜಂಬೂ ಸವಾರಿಯಲ್ಲೂ ಈತ ಹೀಗೆ ರಾಜ ಮರ್ಯಾದೆಯ ಗೌನು ತೊಟ್ಟು ಆದರೂ ಮೂಗಿನಲ್ಲಿ ಏನೋ ಒಂದು ಪರಿಮಳ ಹಿಡಿದುಕೊಂಡು ತನ್ನ ಹೆಣ್ಣಾನೆಯ ಹಿಂದೆ ನಡೆಯುತ್ತಿರುತ್ತಾನೆ. ‘ಏನು ಸಾರ್ ಬಳ್ಳೆಗೆ ಬಂದ್ರೆ ನೀವೂ ಕಾಡು ಮನುಷ್ಯ ನಾನೂ ಕಾಡು ಮನುಷ್ಯ. ಇಲ್ಲಿ ನಾನೂ ರಾಜಾ ನೀವೂ ರಾಜಾ’ ಎಂದು ಕಣ್ಣು ಮಿಟುಕಿಸುತ್ತಾನೆ. ಸುಮ್ಮನೆ ಇರಲಿ ಎಂದು ನಾನು ಅವನು ಕಣ್ಣು ಮಿಟುಕಿಸುವ ಇನ್ನೊಂದು ಫೋಟೋ ತೆಗೆಯುತ್ತೇನೆ.

‘ಏನು ಸಾ ನೀವೊಂದು ಎಷ್ಟು ಫೋಟೋ ಹೊಡೀತೀರಾ’ ಎಂದು ಆತ ನಾಚುತ್ತಾನೆ.

‘ಜಂಬೂ ಸವಾರಿಯಲ್ಲಿ ರಾಜಯೋಗಿ ಅಣ್ಣಯ್ಯ’ ಮನಸಿನಲ್ಲೇ ಈ ಫೋಟೋದ ಶೀರ್ಷಿಕೆ ಮಾಡಿಟ್ಟುಕೊಂಡು ಮತ್ತೆ ಮುಂದಕ್ಕೆ ಸಾಗುತ್ತೇನೆ.

ಮಹಾನುಭಾವರಾದ ಸಂಪಾದಕ ಮಹಾಶಯರುಗಳು ಹಾಳಾದ ಮಂತ್ರಿ ಮಹೋದಯರುಗಳ ಫೋಟೋಗಳನ್ನಷ್ಟೇ ಮಾರನೆಯ ದಿನ ದೊಡ್ಡದಾಗಿ ಅಚ್ಚು ಮಾಡಿರುತ್ತಾರೆ.

‘ಎಲ್ಲಿ ಸಾ ನನ್ನ ಫೋಟೋ ಬಂದೇ ಇಲ್ಲ’

ಅಣ್ಣಯ್ಯ ಪ್ರತಿ ಸಲವೂ ತಲೆ ಕೆರೆದುಕೊಳ್ಳುತ್ತಾ ಗೊಣಗುತ್ತಾನೆ.

‘ನಿನ್ನ ಪೇಪರಲ್ಲಿ ಸ್ಪೆಷಲ್ ಕಾವಡಿ ಅಣ್ಣಯ್ಯನ ಫೋಟೋ ಬಂದ ದಿನ ರೈಲಿನಡಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಚಾ ಮಾರುವ ಮಲಯಾಳಿ ಮಾದೇವಣ್ಣ ಸವಾಲು ಹಾಕಿದವರು ಮೇಲಕ್ಕೆ ಹೋಗಿ ಇಪ್ಪತ್ತು ದಿನದಲ್ಲಿ ಎರಡನೆಯ ದಸರಾ ಕೂಡಾ ಮುಗಿದು ಹೋಗುತ್ತದೆ.

ಇದೀಗ ಅಣ್ಣಯ್ಯ ಮತ್ತೆ ಅದೇ ಪ್ರಶ್ನೆ ಕೇಳುತ್ತಾನೆ.

‘ಸಾ ಮಾದೇವಣ್ಣ ಬಂದ್ರಾ ಸಾ?ʼ

ಅಂದುಕೊಂಡಂತೆ ಅಣ್ಣಯ್ಯ ಅದೇ ಪ್ರಶ್ನೆ ಕೇಳಿದ. ಆದರೆ ತಿರುಗಾ ಮುರುಗಾ.

‘ಸಾ ಮಾದೇವಣ್ಣ ಹೋಗೇ ಬಿಟ್ರಾ ಸಾ’

‘ಹೋಗಿರಲಿಕ್ಕಿಲ್ಲ. ಬರಬಹುದು ಅಣ್ಣಯ್ಯ ’ ನಾನು ಸುಳ್ಳು ಹೇಳುತ್ತೇನೆ.

‘ಇಲ್ಲಾ ಸಾರ್ ಅವರು ಬರೋದು ಡೌಟು’ ಅಣ್ಣಯ್ಯ ಆಕಾಶಕ್ಕೆ ತಲೆ ಎತ್ತಿ ಏನೋ ಪರಿಮಳ ಹಿಡಿದುಕೊಂಡು ಹೇಳುತ್ತಾನೆ.

‘ಸಾ ಅವರು ಮೇಲೆ ಹೋಗಿರಬಹುದು. ಅವರ ಬಾಡಿ ಆಸ್ಪತ್ರೆಗೆ ಕೊಟ್ಟೂಆಗಿರಬಹುದು’ ಆನೆಯ ಲದ್ದಿ ಕೈಯ್ಯಲ್ಲಿ ಹಿಡಿದುಕೊಂಡೇ ಕಾಲಜ್ಞಾನಿಯಂತೆ ಅಣ್ಣಯ್ಯ ನುಡಿಯುತ್ತಾನೆ.

‘ಅದೂ ಆಗಿರಬಹುದು. ಇಲ್ಲದೆಯೂ ಇರಬಹುದು’ ನಾನು ಅರ್ಧ ಸತ್ಯ ಅರ್ಧ ಸುಳ್ಳು ಹೇಳುತ್ತೇನೆ.

‘ಸಾ ಹಾಗಾದರೆ ಕಾಡಿನಲ್ಲಿ ನಮಗೆ ಮನೆ’ ಅಣ್ಣಯ್ಯ ಕಣ್ಣಿನಲ್ಲಿ ಆಸೆ ತುಂಬಿಕೊಂಡು ಕೇಳುತ್ತಾನೆ.

‘ಇರು ನೋಡಣ’ ನಾನು ತಲೆಯ ಮೇಲೆ ಹೆಲ್ಮೆಟ್ಟು ಎಳೆದುಕೊಂಡು ಮುಂದಕ್ಕೆ ಹೋಗುತ್ತೇನೆ.

ಮತ್ತೆ ಅದೇ ರಾಡಿ ಮಳೆ ಪಟ್ಟದಾನೆಗಳ ಲದ್ದಿಯ ಅನೂಹ್ಯ ಪರಿಮಳ.

ಮಳೆಗಾಲವು ಕಳೆದು, ಕಪ್ಪಗಿನ ಮೋಡಗಳು ಬಿಳುಪಾಗಿ, ಹಗಲು ಆಗಸದಲ್ಲಿ ದಿನಮಣಿ ಸೂರ್ಯನ ಬೆಳಕು ಬೆಳಗಿ , ಇರುಳ ಆಗಸದಲ್ಲಿ ಚಂದಿರನ ಹೊಳಪು ಮಿನುಗಿ, ಉಕ್ಕಿದ್ದ ನದಿಗಳು ಶಾಂತವಾಗಿ, ಆಕಾಶ ಮಾರ್ಗದಲ್ಲಿ ಹಂಸಗಳು ಹಾರಿ ಬಂದು, ಕೊಳದಲ್ಲಿ ತಾವರೆಗಳು ಅರಳಿ, ತಲೆಯ ಮೇಲೆ ಅರಳೆಹತ್ತಿಗಳಂತಹ ತೆಳು ಮೋಡಗಳು ತೇಲಿ, ಮೈಸೂರಿನ ಮಹಾರಾಜರು ಯುದ್ಧಕ್ಕೆ ಹೋಗಿದ್ದವರು ಶಹರಿಗೆ ಮರಳಿ ವಿಜಯೋತ್ಸವನ್ನು ವಿಜೃಂಬಣೆಯಿಂದ ಆಚರಿಸಲು ಸಿದ್ದರಾಗುತ್ತಿದ್ದ ಕಾಲ.

ಸೌಭಾಗ್ಯಲಕ್ಷ್ಮಿ ಮೇಡಂ ಷಟ್ಪದಿ ಸಾಲುಗಳು ಮತ್ತೆ ಬಂದು ಮೂಗಿನ ತುದಿಯಲ್ಲಿ ಕುಳಿತುಕೊಂಡು ಗುನುಗತೊಡಗಿದವು.

******

ಸರಿ ಸುಮಾರು ಕಾಲು ಶತಮಾನದ ಹಿಂದೆ ಇರಬೇಕು. ಚಾ ಮಾರುವ ಮಲಯಾಳಿ ಮಾದೇವಣ್ಣನನ್ನು ನಾನು ನೋಡಿದ್ದು. ದೇವರಾಜ ಮಾರುಕಟ್ಟೆಯ ಹಿಂದೆ ಚಾಕಣ ಮಾರುವ ಮಾಪಿಳ್ಳೆ ಹೋಟೆಲಿನ ಮುಂದೆ ಝಗಮಗಿಸುವ ಗ್ಯಾಸ್ ಲೈಟಿನ ಬೆಳಕಲ್ಲಿ ಸೀಮೆಣ್ಣೆ ಸ್ಟೌ ಹೊತ್ತಿಸಿಕೊಂಡು ಬಿಳಿ ದಿರಿಸಿನ ಮಹಾನುಭಾವನ ಹಾಗೆ ಮಲಯಾಳಿ ಮಾದೇವಣ್ಣ ನಿಂತಿದ್ದರು. ಆಗ ಅವರ ಹೆಸರು ಮಾದೇವಣ್ಣ ಆಗಿರಲಿಲ್ಲ. ಮಾಧವನ್ ನಾಯರ್. ಬೆಂಗಳೂರಲ್ಲಿ ಸಾಯಬೇಕೆಂದು ಪುಟಪರ್ತಿಯಿಂದ ರೇಲು ಹಿಡಿದುಕೊಂಡು ಬಂದವರು ಬೆಂಗಳೂರಲ್ಲಿ ಸಾಯುವುದು ಬೇಡವೆಂದು ಮೈಸೂರಿಗೆ ಬರುವ ಟೀಪೂ ಎಕ್ಸ್‌ಪ್ರೆಸ್ ಹತ್ತಿದ್ದರು. ಟೀಪೂ ಎಕ್ಸ್ ಪ್ರೆಸ್ಸಿನಲ್ಲಿ ಪರಕಾಲಮಠದ ಮರಿಸ್ವಾಮಿಗಳೊಬ್ಬರು ಕುಳಿತಿದ್ದರಂತೆ. ನದಿಯ ಮೇಲೆ ರೇಲು ಹೋಗುತ್ತಿದ್ದಾಗಲೆಲ್ಲ ನೀರಿಗೆ ಹಾರಲಾಗದೆ ವಾಪಾಸು ಬಂದು ಕುಳಿತುಕೊಳ್ಳುತ್ತಿದ್ದ ಮಾಧವನ್ ನಾಯರ್‌ರನ್ನು ಹತ್ತಿರ ಕುಳ್ಳಿರಿಸಿ ಆತ್ಮಹತ್ಯೆಯು ತಪ್ಪು ಏಕೆಂದರೆ ಪ್ರತಿ ಆತ್ಮದಲ್ಲೂ ದೈವತ್ವ ಅಡಗಿರುತ್ತದೆ ಮತ್ತು ಆತ್ಮವನ್ನು ಕೊಲ್ಲುವುದು ದೈವದ್ರೋಹದಂತೆ ಎಂದು ಅವರನ್ನು ಒಲಿಸಿ ಮೈಸೂರು ರೈಲು ನಿಲ್ದಾಣದಲ್ಲಿ ಇಳಿಸಿ ತಾವೂ ಇಳಿದು ಮಾಯವಾದರಂತೆ.

ಮಾಧವನ್ ನಾಯರ್ ಅವರನ್ನು ನಾನು ಮೊದಲು ನೋಡಿದಾಗ ಅವರು ಮಾದೇವಣ್ಣ ಆಗಿರಲಿಲ್ಲ. ಬೆಳ್ಳಗಿನ ಶರಟು ಮುಂಡು ದರಿಸಿ, ಹಣೆಗೆ ಚಂದನವಿಟ್ಟು.ತಮ್ಮ ಉದ್ದದ ಗುಂಗುರು ತಲೆಕೂದಲಿಗೆ ನಾರೀಕೇಳದ ತೈಲ ಹಚ್ಚಿಕೊಂಡು ಗ್ಯಾಸ್ ಲೈಟಿನ ಬೆಳಕಲ್ಲಿ ಝಗಝಗ ಹೊಳೆಯುತ್ತಿದ್ದರು.
‘ಸರಿ ನೀವು ಸಾಯಲು ಯಾಕೆ ಹೊರಟಿದ್ದಿರಿ?ʼ ಎಂದು ಒಂದು ಇರುಳು ಕೇಳಿದ್ದೆ. ಅವರು ಆ ಕಥೆಯನ್ನು ಹೇಳಿದ್ದರು.

ಹಾಗೆ ನೋಡಿದರೆ ಕಾಲು ಶತಮಾನದ ಹಿಂದೆ ನದಿಗೆ ಹಾರಿ ಸಾಯಲು ತೀರ್ಮಾನಿಸಿದ್ದ ಈ ಮಾಧವನ್ ನಾಯರ್ ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಸುಬಾಶ್ ಚಂದ್ರ ಬೋಸರ ಕಠೋರವಾದ ಅಭಿಮಾನಿ. ಈ ಲೋಕದಲ್ಲಿ ಸ್ವಾರ್ಥವಿಲ್ಲದೆ ಒಬ್ಬಾತ ಬದುಕಿದ್ದರೆ ಅದು ಸುಬಾಶ್ ಚಂದ್ರ ಬೋಸರು ಮಾತ್ರ ಎಂಬುದು ಅವರು ಕಂಡುಕೊಂಡ ಸತ್ಯ. ಕೇರಳದ ಆ ಪಟ್ಟಣದಲ್ಲಿ ಬೋಸರ ಹೆಸರಿನ ಕೂಲಿ ಕಾರ್ಮಿಕರ ಹೆಸರಿನ ಸಂಘವೊಂದನ್ನು ಮಾಡಿಕೊಂಡು ಬಡವರಿಗೆ ನೆರವಾಗುವುದು, ಅವರಿಗಾಗಿ ಮುಷ್ಕರಗಳನ್ನೂ ಜಾಥಾಗಳನ್ನೂ ನಡೆಸುವುದು, ಪೋಲೀಸು ಠಾಣೆಗಳ ಎದುರು ಧರಣಿ ಕೂರುವುದು ಇತ್ಯಾದಿಗಳನ್ನು ನಡೆಸುತ್ತಿದ್ದ ಈ ಮಾಧವನ್ ನಾಯರ್ ಆ ಊರಿನ ಬಡವರಾದ ಕೂಲಿಕಾರ್ಮಿಕರ ನಡುವೆ ಜನಪ್ರಿಯರೂ ಆಗಿದ್ದರು. .

ಹಾಗೆ ತುಡಿಯುತ್ತಿದ್ದ ಮಾಧವನ್ ನಾಯರ್ ಹೃದಯದ ಕವಾಟ ಮುಚ್ಚಿದೆ ಎಂದು ತಿರುವನಂತಪುರ ಮೆಡಿಕಲ್ ಕಾಲೇಜಿನ ವೈದ್ಯರು ಹೇಳಿದ್ದರು. ಅವರು ಬಡವರೂ ಬೇಡ ತಾಯಿ ಹೆಂಡತಿ ಮಕ್ಕಳು ಯಾರೂ ಬೇಡವೇ ಬೇಡ ಎಂದು ತಮ್ಮ ಪುಟ್ಟದೊಂದು ಮನೆಯನ್ನು ನಲವತ್ತು ಸಾವಿರಕ್ಕೆ ಮಾರಿ ಆ ಹಣವನ್ನು ಆಪರೇಷನ್ನಿನ ಖರ್ಚಿಗಾಗಿ ಕೈಯಲ್ಲಿ ಹಿಡಕೊಂಡು ಬೆಂಗಳೂರಿನ ರೈಲು ಹತ್ತಿದ್ದರು. ಅಲ್ಲಿಂದ ಪುಟ್ಟಪರ್ತಿಗೆ ತಲುಪಿದಾಗ ಅಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ದೊಡ್ಡ ಕ್ಯೂ ಇರುವುದನ್ನು ಕಂಡು ಇನ್ನು ಬದುಕುವುದು ಬೇಡ ಎಂದು ಬೆಂಗಳೂರಿಗೆ ಹಿಂತಿರುಗಿ ಹೇಗೆ ಸಾಯುವುದೆಂದು ಯೋಚಿಸುತ್ತ ಅಲ್ಲಿನ ರೈಲು ನಿಲ್ದಾಣದಲ್ಲಿ ಕುಳಿತಿದ್ದರು.

ಮಾಧವನ್ ನಾಯರ್ ‘ಇಕೋ ಇಲ್ಲಿ ನೋಡಿ’ ಎಂದು ತಮ್ಮ ಶರಟಿನ ತೋಳು ಏರಿಸಿ ತೋಳಲ್ಲಿ ಬರೆದಿದ್ದ ಹಚ್ಚೆಯನ್ನು ತೋರಿಸಿದ್ದರು.

ನನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ ಎಂದು ಅಲ್ಲಿ ಆಂಗ್ಲ ಭಾಷೆಯಲ್ಲಿ ಬರೆಯಲಾಗಿತ್ತು.

‘ನಾನು ಕನ್ನಡ ನಾಡಲ್ಲೇ ಸಾಯುವುದು ಎಂದು ಮೊದಲೇ ಗೊತ್ತಿದ್ದರೆ ನಿಮ್ಮ ಕನ್ನಡದಲ್ಲೇ ಹಚ್ಚೆ ಬರೆಸಿಕೊಳ್ಳುತ್ತಿದ್ದೆ ಎಂದು ಅವರು ಒಮ್ಮೆ ಹೇಳಿದ್ದರು. ಅಷ್ಟು ಹೊತ್ತಿಗೆ ಅವರ ಹೆಸರು ಮಲಯಾಳಿ ಮಾದೇವಣ್ಣ ಎಂದು ಬದಲಾಗಿತ್ತು.

ಮಾಧವನ್ ನಾಯರ್ ಮಲಯಾಳಿ ಮಾದೇವಣ್ಣ ಎಂಬುದಾಗಿ ಬದಲಾಗುವ ಹೊತ್ತಿಗೆ ಅವರಿಗೆ ಸೋಲಿಗರ ಶಿವಮ್ಮಳ ಜೊತೆ ಕೂಡಾಣಿಕೆಯೂ ಆಗಿತ್ತು. ಈ ಕೂಡಾಣಿಕೆಗೆ ಕಾರಣ ಇದೇ ಜೇನುಕುರುಬರ ಬಳ್ಳೆ ಅಣ್ಣಯ್ಯ. ದೇವರಾಜ ಮಾರ್ಕೆಟ್ಟಿನ ಮುಂಭಾಗದಲ್ಲಿ ರಾಜರಸ್ತೆಯಲ್ಲಿ ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಕಿತ್ತಳೆ, ಕೆಲವೊಮ್ಮೆ ಚಕ್ಕೋತ ಮಾರುತ್ತಿದ್ದ ಶಿವಮ್ಮ ಶಿವರಾತ್ರಿಯ ಹೊತ್ತಲ್ಲಿ ಕಾಡಲ್ಲಿ ಸಿಗುವ ಬಿಲ್ವಪತ್ರೆ, ಮುತ್ತುಗದ ಹೂ, ಪಾರಿಜಾತ, ಅಗಸೆ, ಸೀತಾಳೆ ಹೂಗಳನ್ನು ಚಿಕ್ಕಗಡಿಯಾರದ ಬಳಿ ಎದೆಮಟ್ಟಕ್ಕೆ ಹರಡಿಕೊಂಡು ಕೂತಿರುತ್ತಿದ್ದಳು. ಬಳ್ಳೆ ಅಣ್ಣಯ್ಯನೂ ಅವಳ ಬಳಿ ತನಗೂ ಅವಳಿಗೂ ಏನೂ ಆಗಬೇಕಾಗಿಯೇ ಇಲ್ಲವೆಂಬಂತೆ ಮುಗುಮ್ಮಾಗಿ ಕೂತಿರುತ್ತಿದ್ದ.

ಬಡವರ ಪಕ್ಷ, ಬೀದಿಬದಿ ವ್ಯಾಪಾರಿಗಳ ಸಂಘ. ಆದಿವಾಸಿಗಳ ಹಿತರಕ್ಷಣಾ ಸಮಿತಿ, ರೈತರ ಪಕ್ಷ, ಕನ್ನಡ ಹೋರಾಟಗಾರರ ಕೇಂದ್ರ ಹೀಗೆ ಎಲ್ಲ ಕಡೆಯೂ ಮೈಸೂರಿನಲ್ಲಿ ಮಲಯಾಳಿ ಮಾದೇವಣ್ಣನ ಹವಾ ನಡೆಯುತ್ತಿದ್ದ ಕಾಲ. ಎಲ್ಲಿ ಬೇಕಾದರೂ ದರಣಿ ಮುಷ್ಕರ ಕೂರಲು ರೆಡಿಯಾಗುತ್ತಿದ್ದ ಮಾದೇವಣ್ಣ ಎರಡು ಮೂರು ಬಾರಿ ಜೇಲಿಗೂ ಹೋಗಿ ಬಂದಿದ್ದರು. ಬಳ್ಳೆ ಅಣ್ಣಯ್ಯನಿಗೂ ಸೋಲಿಗರ ಶಿವಮ್ಮನಿಗೂ ಏಕಪ್ರಕಾರವಾಗಿ ಹತ್ತಿರವಾಗಿದ್ದರು. ಅಣ್ಣಯ್ಯನೇ ಮುಂದೆ ನಿಂತು ಅವರಿಬ್ಬರ ಕೂಡಾಣಿಕೆಗೆ ಸಹಕರಿಸಿದ್ದ. ಬರಿಯ ಕೂಡಾಣಿಕೆ ಸಾಲದು ರಿಜಿಸ್ಟ್ರಿ ಆಗಬೇಕು ಎಂದು ಶಿವಮ್ಮ ದಬಾಯಿಸಿದರೂ ಮಾದೇವಣ್ಣ ತಪ್ಪಿಸಿಕೊಳ್ಳುತ್ತಿದ್ದರು. ರಿಜಿಸ್ಟರ್ ಮದುವೆ ಮಾಡಿಸಿಕೊಳ್ಳುವ ಸಲುವಾಗಿ ನಾನು ತೆಗೆದ ಫೋಟೋದಲ್ಲಿ ಎರಡನೆಯ ಮಗ ಶಿವಮ್ಮನ ಹೊಟ್ಟೆಯೊಳಗೆ ಇರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಮೊದಲ ಮಗ ತಾಯಿಯ ಕೈಹಿಡಿದುಕೊಂಡು ನಿಂತಿದ್ದ. ಇತ್ತೀಚಿನವರೆಗೂ ಆ ಫೋಟೋದ ಒಂದೇ ಒಂದು ಪ್ರಿಂಟು ನನ್ನ ಬಳಿ ಅನಾಥವಾಗಿ ಬಿದ್ದುಕೊಂಡಿತ್ತು.

ಬಹುಶಃ ಮಾದೇವಣ್ಣ ಮತ್ತು ಶಿವಮ್ಮ ನಗುತ್ತಿದ್ದ ಒಂದೇ ಒಂದು ಫೋಟೋ ಅದು. ಉಳಿದೆಲ್ಲವೂ ಗಂಟು ಮುಖದವುಗಳೇ. ಅಷ್ಟೊಂದು ಕಾದಾಡುತ್ತಿದ್ದರು ಮತ್ತು ಒಂದುಗೂಡುತ್ತಿದ್ದರು. ಮಲಯಾಳಿ ಮಾದೇವಣ್ಣನಿಗೆ ಮೂವರು ಮಕ್ಕಳಲ್ಲಿ ಒಬ್ಬ ಸ್ವಾಮಿ ವಿವೇಕಾನಂದರ ಹಾಗೆ ಆಗಬೇಕೆಂದು ಹಠ. ಹಾಗೆ ಅವರು ಅಂದುಕೊಂಡ ಹಾಗೆ ಆಗಿದ್ದರೆ ನಡುವಿನವನು ಸುಬಾಷ್ ಚಂದ್ರ ಬೋಸ್ ಕೊನೆಯವನು ಅಬ್ದುಲ್ ಕಲಾಂ ಆಗಬೇಕಿತ್ತು. ದೊಡ್ಡ ಮಗನನ್ನು ಅದ್ಯಾರದೋ ಕಾಲು ಹಿಡಿದು ರಾಮಕೃಷ್ಣ ಆಶ್ರಮಕ್ಕೆ ಸೇರಿಸಿದ್ದರು. ಅವನು ಆಶ್ರಮ ಶಾಲೆ ಸೇರಿದವನು ಅಲ್ಲಿಯ ಹವಾ ಸರಿಯಾಗದೆ ಅಪ್ಪನ ಜೊತೆ ಟೀ ಮಾರಲು ಸೇರಿಕೊಂಡಿದ್ದ. ಆಮೇಲೆ ಅಪ್ಪನ ಟೀ ಲೆಕ್ಕಾಚಾರ ಕಲಿಯಲಾಗದೆ ಬಳ್ಳೆ ಕಾಡಲ್ಲಿ ಸೋದರ ಮಾವನ ಹೊಲದಲ್ಲಿ ತಂಬಾಕು ಬೆಳೆಯಲು ಹೋಗಿದ್ದ. ಎರಡನೆಯ ಮಗನಿಗೆ ಸೈನಿಕ ಶಾಲೆಯಲ್ಲಿ ಎದೆಯ ಸುತ್ತಳತೆ ಸರಿ ಇಲ್ಲ ಎಂಬ ಕಾರಣಕ್ಕೆ ಸೀಟು ಸಿಗಲಿಲ್ಲ. ಆತ ಮನೆಯಿಂದ ಓಡಿಹೋಗಿ ಯಾವುದೋ ಪಂಕ್ಚರ್ ಸಾಹೇಬರ ಸೈಕಲ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಯಾವಾಗಲಾದರೂ ಅಪ್ಪ ಮನೆಯಲ್ಲಿ ಇಲ್ಲದಿರುವಾಗ ಅಮ್ಮ ಶಿವಮ್ಮಳನ್ನು ನೋಡಿ ಹೋಗುತ್ತಿದ್ದ.

ಕೊನೆಯ ಮಗ ಅಪ್ಪನ ಮಾತನ್ನು ಅನುಸರಿಸಿ ವಿಜ್ಞಾನಿಯಾಗಲು ಶತಪ್ರಯತ್ನ ಮಾಡುತ್ತಿದ್ದ.
ಆದರೆ ಇಂಗ್ಲಿಷ್ ವಿಷಯದಲ್ಲಿ ಮತ್ತೆ ಮತ್ತೆ ಅನುತ್ತೀರ್ಣನಾಗಿ ಅಮ್ಮನ ಜೊತೆ ಸಯ್ಯಾಜಿರಾವ್ ರಸ್ತೆಯಲ್ಲಿ ತಾನೂ ನಿಂಬೆಕಾಯಿಗಳನ್ನು ಗುಡ್ಡೆ ಹಾಕಿಕೊಂಡು ಮಾರಲು ಕೂತಿದ್ದ.

‘ಏನು ಮಾಡಿದರೂ ಈ ಕರ್ನಾಟಕದಲ್ಲಿ ಕ್ರಾಂತಿ ಆಗುವುದಿಲ್ಲ’ ಎಂದು ಮಲಯಾಳಿ ಮಾದೇವಣ್ಣ ಕೊನೆಯ ಬಾರಿ ಸಿಕ್ಕಿದಾಗ ಅಂದಿದ್ದರು.

ಆಗ ಅವರಿಗೆ ಹೃದಯದ ತೊಂದರೆ ಬೇರೆ ಮತ್ತೆ ಶುರುವಾಗಿತ್ತು.

‘ನನ್ನ ದೇಹದ ಆವಯವಗಳು ಇಲ್ಲಿ ಯಾರಿಗೂ ಸರಿ ಹೋಗುವುದಿಲ್ಲ, ಸ್ವಂತ ಮಕ್ಕಳಿಗೇ ನನ್ನ ಬೆಲೆ ಗೊತ್ತಿಲ್ಲ. ಅಲ್ಲೇ ತಿರುವನಂತಪುರ ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನ ಕೊಡಬೇಕು’ ಎಂದು ನೊಂದು ನುಡಿದಿದ್ದರು.
ಶಿವಮ್ಮನಿಗೂ ಅವರ ಕುರಿತು ಬಹಳ ದೂರುಗಳಿದ್ದವು.

ಅಣ್ಣಯ್ಯನಿಗೂ ಬೇಸರವಾಗಿತ್ತು. ಎಲ್ಲವೂ ಸರಿ ಹೋದರೆ ಮಕ್ಕಳು ಬೆಳೆದು ದೊಡ್ಡವರಾದರೆ ಹಾಡಿಯಲ್ಲಿ ಆತನಿಗೆ ಒಂದು ತಾರಸಿಯ ಮನೆ ಕಟ್ಟಿಕೊಟ್ಟು ಅದರ ಪಕ್ಕದಲ್ಲೇ ತಾವೂ ಒಂದು ಮನೆಕಟ್ಟಿಕೊಂಡು ಅವರ ಜೊತೆಯಲ್ಲೇ ವನವಾಸಿಯಾಗಿ ಬದುಕುತ್ತೇನೆ ಎಂದಿದ್ದ ಮಲಯಾಳಿ ಮಾದೇವಣ್ಣ ಆತನಿಗೂ ಕೈಕೊಟ್ಟು ಹೋಗಿದ್ದರು.

‘ನಾನು ನಿಜವಾಗಿಯೂ ಹೋಗುತ್ತಿರುವುದು ಯಾಕೆ ಎಂದು ಗೊತ್ತಾ?’ ಎಂದು ಅವರು ಕಾಣೆಯಾಗುವ ಮೊದಲು ಕೇಳಿದ್ದರು.

ಕಿವಿಯ ಹತ್ತಿರ ಬಂದು, ‘ಗಂಡಸರು ಸಾಮಾನಿನ ಕೆಲಸ ನಿಂತು ಹೋದ ಮೇಲೆ ಬದುಕಿ ಇರಬಾರದು’ ಎಂದಿದ್ದರು.
ನಾನು ಇದೇನು ಸಾಮಾನು ಎಂಬಂತೆ ಅವರ ಮುಖ ನೋಡಿದ್ದೆ.

ಅವರು ಕೈಭಾಷೆಯಲ್ಲಿ ಅದನ್ನು ತೋರಿಸಿದ್ದರು.

ಮೂರು ಮಕ್ಕಳ ತಂದೆಯ ದುಃಖ!

ನಗು ಬಂದಿತ್ತು.

ನನ್ನ ಸಾಕುಂತಲೆ ಅವಳನ್ನು ಮುಟ್ಟಲೂ ಬಿಡುತ್ತಿರಲಿಲ್ಲ.

ಆದರೆ ‘ಮಕ್ಕಳನ್ನು ಕೊಡು ಮೂದೇವಿ’ ಎಂದು ಹಂಗಿಸುತ್ತಿದ್ದಳು.

‘ಆನೆಗೆ ಆನೆಯ ಕಷ್ಟ, ಇರುವೆಗೆ ಇರುವೆಯ ಕಷ್ಟ’ ಮನಸಿನಲ್ಲಿಯೇ ಗೊಣಗಿದ್ದೆ.

******

ಎಷ್ಟೋ ಕಾಲದ ನಂತರ ಯಾವುದೋ ನಂಬರಿನಿಂದ ಮಾದೇವಣ್ಣ ಫೋನ್ ಮಾಡಿದ್ದರು.

‘ನಾನು ಮಾಧವನ್ ನಾಯರ್ ಮಾತನಾಡುತ್ತಿರುವುದು’ ಅಂದಿದ್ದರು.
ಬಹುಶಃ ಅವರು ಕುಡಿದಿದ್ದರು.

‘ಯಾಕೋ ನಾನು ಬೇಗ ಸಾಯುತ್ತಿಲ್ಲ. ಅಲ್ಲಿಯವರೆಗೆ ಮೆಡಿಕಲ್ ಕಾಲೇಜಿನ ಪಕ್ಕದಲ್ಲೇ ಬಾಡಿಗೆಗೆ ಪಡೆದುಕೊಂಡಿರುವ ಕೋಣೆಯ ಬಾಡಿಗೆ ಕಟ್ಟಲು ಕಾಸಿಲ್ಲ’ ಅಂದಿದ್ದರು.

ಇನ್ನೊಮ್ಮೆ ಫೋನ್ ಮಾಡಿದಾಗ ಬಹಳ ಖುಷಿಯಲ್ಲಿ ಇದ್ದರು.
ಕೇರಳ ರಾಜ್ಯ ಲಾಟರಿ ಟಿಕೆಟ್ಟುಗಳನ್ನು ಮಾರುತ್ತಿದ್ದೇನೆ ಅಂದಿದ್ದರು.
ತಿರು ಓಣಂ ಬಂಪರ್ ಲಾಟರಿ ಮೊದಲ ಬಹುಮಾನ ಇಪ್ಪತ್ತೈದು ಕೋಟಿ.
ಮಾರದೇ ಉಳಿದ ಟಿಕೆಟ್ಟುಗಳನ್ನು ಅವರೇ ಕೊಂಡುಕೊಳ್ಳುತ್ತಿದ್ದರು.

‘ನಿಮಗೆ ಫೋನ್ ಮಾಡಿದ್ದು ಒಂದು ವಿಷಯ ಕೇಳಲು’ ಕೊನೆಯ ಬಾರಿ ಅವರು ಅಂದಿದ್ದರು.

‘ನಿಮಗೆ ದೇಶದ ರಾಷ್ಟ್ರಪತಿಗಳ ಹತ್ತಿರದವರು ಯಾರಾದರೂ ಗೊತ್ತಾ’ ಕೇಳಿದ್ದರು.

‘ಈ ಸಲದ ತಿರು ಓಣಂ ಬಂಪರ್ ಲಾಟರಿ ಮೊದಲ ಬಹುಮಾನ ಇಪ್ಪತ್ತೈದು ಕೋಟಿ ನನಗೇ ಹೊಡೆಯುತ್ತದೆ. ಜೊತೆಗೆ ಮಾರಾಟಗಾರನ ಕಮಿಷನ್ನೂ ನನಗೇ ಸಿಗುತ್ತದೆ. ಬಳ್ಳೆ ಹಾಡಿಯಲ್ಲಿ ಒಂದು ಸಮತಟ್ಟಾದ ಜಾಗ ನೋಡಿಟ್ಟಿರಿ. ಆದಿವಾಸಿಗಳಿಗೆ ಒಂದು ನೂರು ಮನೆಗಳಾದರೂ ಕಟ್ಟಬೇಕುʼ.

‘ಅದರ ಉದ್ಘಾಟನೆಗೆ ದೇಶದ ಮಾನ್ಯ ರಾಷ್ಟ್ರಪತಿಗಳನ್ನುಆಹ್ವಾನಿಸಬೇಕು’
ಮಲಯಾಳಿ ಮಾದೇವಣ್ಣ ಮಾತನಾಡುತ್ತಲೇ ಇದ್ದರು.

‘ಆದಿವಾಸಿಗಳ ಮನೆಗಳ ನಡುವೆ ಒಂದು ಆಶ್ರಮ. ಅದರ ಒಳಗೆ ಸ್ವಾಮಿ ನಾರಾಯಣ ಗುರುಗಳ ದೇವಸ್ಥಾನʼ.

‘ಆದರೆ ನಾನು ಮಾತ್ರ ಅಲ್ಲಿ ಬರುವುದಿಲ್ಲ. ನನ್ನ ದೇಹವೂ ಬರುವುದಿಲ್ಲʼ.

‘ಅದನ್ನು ಇಲ್ಲಿ ತಿರುವನಂತಪುರದ ಮೆಡಿಕಲ್ ಕಾಲೇಜಿಗೆ ಬರೆದುಕೊಟ್ಟಿರುವೆ’
ಅದೇ ಅವರ ಕೊನೆಯ ಮಾತು

*****

ಬೈಕು ನಿಲ್ಲಿಸಿ ಮನೆಯೊಳಗೆ ಬಂದೆ.
ಷೂ ಬಿಚ್ಚಲು ಮರೆತಿದ್ದೆ.

‘ಮೂದೇವಿ ಮುಂಡೇದೇ ಮೊದಲು ಷೂ ಬಿಚ್ಚು’
ಸಾಕುಂತಲೆ ಕೂಗಿದಳು.

ಹಿಂತಿರುಗಿ ಹೋಗಿ ಷೂ ಬಿಚ್ಚಿ ಮತ್ತೆ ಮನೆಯೊಳಗೆ ಬಂದೆ.
‘ಹೆಲ್ಮೆಟ್ ತೆಗ್ಯೋ ಮುಂಡೇದೇ’
ಅವಳು ಮತ್ತೆ ಅರಚಿದಳು.

ಮಳೆಗಾಲವು ಕಳೆದು, ಕಪ್ಪಗಿನ ಮೋಡಗಳು ಬಿಳುಪಾಗಿ, ಹಗಲು ಆಗಸದಲ್ಲಿ ದಿನಮಣಿ ಸೂರ್ಯನ ಬೆಳಕು ಬೆಳಗಿ, ಇರುಳ ಆಗಸದಲ್ಲಿ ಚಂದಿರನ ಹೊಳಪು ಮಿನುಗಿ, ಉಕ್ಕಿದ್ದ ನದಿಗಳು ಶಾಂತವಾಗಿ, ಆಕಾಶ ಮಾರ್ಗದಲ್ಲಿ ಹಂಸಗಳು ಹಾರಿ ಬಂದು, ಕೊಳದಲ್ಲಿ ತಾವರೆಗಳು ಅರಳಿ, ತಲೆಯ ಮೇಲೆ ಅರಳೆಹತ್ತಿಗಳಂತಹ ತೆಳು ಮೋಡಗಳು ತೇಲಿ, ಮೈಸೂರಿನ ಮಹಾರಾಜರು ಯುದ್ಧಕ್ಕೆ ಹೋಗಿದ್ದವರು ಶಹರಿಗೆ ಮರಳಿ ವಿಜಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲು ಸಿದ್ದರಾಗುತ್ತಿದ್ದ ಕಾಲ.

ಹೈಸ್ಕೂಲಿನ ಟೀಚರ್ ಸೌಭಾಗ್ಯಲಕ್ಷ್ಮಿ ಮೇಡಂ ಷಟ್ಪದಿ ಸಾಲುಗಳು ಮೂಗಿನ ತುದಿಯಲ್ಲಿ.

ಕಳಚಿದ್ದ ಷೂಗಳನ್ನು ಮತ್ತೆ ಹಾಕಿಕೊಂಡು ಅದೇ ಹಳೆಯ ಡೀಸೆಲ್ ಬುಲ್ಲೆಟ್ ಬೈಕು ಹತ್ತಿ ನಗರ ಸಂಚಾರಕ್ಕೆ ಹೊರಟೆ.

******

‘ಬಾರೋ ರಾಜಕುಮಾರ. ಅನುಭವಿಸು ಶೂರಾ …..’

ಕಂಸಾಳೆಯ ಮೇಷ್ಟರು ಜಾಲರಿಯ ಕಿಟಕಿಗಳಿಗೆ ಹಲ್ಲಿಯಂತೆ ಅಂಟಿಹೋಗಿದ್ದ ನನ್ನನ್ನು ಎರಡೂ ಕೈಗಳಿಂದ ಕಿತ್ತು ಬಿಡಿಸಿ ಒಳಗೆ ಕರೆದೊಯ್ದಿದ್ದರು. ಕಮಟು ಪರಿಮಳದ ಮಂಚದಲ್ಲಿ ಮೇಡಂ ಪಕ್ಕದಲ್ಲಿ ಕುಳ್ಳಿರಿಸಿ ಕಂದನನ್ನು ಮಜ್ಜನಕ್ಕೆ ಸಿದ್ದಗೊಳಿಸುವ ತಂದೆಯಂತೆ ನನ್ನ ಅಂಗಿ ಚಣ್ಣಗಳನ್ನು ಬಿಚ್ಚಿ ಬಿಸುಟಿದ್ದರು.

‘ಅನುಭವಿಸು ಕಂದಾ ಆದರೆ ಯಾರಿಗಾದರೂ ಹೇಳಿ ಮಾನ ಕಳೆಯಬೇಡವೋ ರಾಜಕುಮಾರಾ’ ಎಂದು ಕೈಮುಗಿದಿದ್ದರು.

ಅಂಗಿ ಚಡ್ಡಿ ತೊಟ್ಟು ಹೊರಟವನಿಗೆ ಸೌಭಾಗ್ಯಲಕ್ಷ್ಮಿ ಮೇಡಂ ನೀನು ಸಾಯುವ ತನಕ ಒಂಟಿ ಪಿಶಾಚಿಯಾಗಿ ನೂರು ವರ್ಷ ಬದುಕಿರುತ್ತೀಯಾ ಎಂದು ಶಪಿಸಿದ್ದರು.

ಹಗಲು ನಿದ್ದೆಯಲ್ಲೇ ಸುಮ್ಮನೇ ಬೈಕು ಓಡಿಸುತ್ತಿದ್ದೆ. ಬಹುಶಃ ಪರಿಚಿತ ಗಲ್ಲಿಯೇ ಇರಬೇಕು. ಸುರಿಯುತ್ತಿರುವ ಮಳೆ.

ಸಾಲುಸಾಲಾಗಿ ಎದುರಿಂದ ಶಾಲಾಮಕ್ಕಳು ಮಳೆಯಲ್ಲಿ ಕೇಕೆಹಾಕುತ್ತಾ ನಡೆದು ಹೋಗುತ್ತಿದ್ದರು.

(ಕೃಪೆ: ಮಯೂರ ಮಾಸಪತ್ರಿಕೆ)