ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರವಾದ ‘ವಚನ ಸಾಹಿತ್ಯ’ ಕವಯತ್ರಿಯಮೇಲೆ ಗಾಢ ಪ್ರಭಾವವನ್ನು ಬೀರಿವೆ ಎನ್ನುವುದು ಕೆಲ ಕವಿತೆಗಳಿಂದಲೇ ತಿಳಿಯುತ್ತದೆ. ಅಲ್ಲಮ, ಬಸವಾದಿ ಶರಣರ ನೆರಳಿನ ಛಾಯೆಯಿದೆ. ಅದರಲ್ಲೂ ಅಕ್ಕಮಹಾದೇವಿಯವರ ವಚನಗಳು ಹೆಚ್ಚು ಪ್ರಭಾವಿಸಿವೆ. ಸ್ತ್ರೀವಾದಿ ನೆಲೆಯಲ್ಲಿ ವಿಶ್ಲೇಷಿಸಬಹುದಾದ ಅನೇಕ ಸಂಗತಿಗಳು ಇವರ ಕವಿತೆಗಳಲ್ಲಿವೆ. ಕಾರ್ಪೋರೆಟ್ ಜಗತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಅನೇಕ ಕವಿತೆಗಳಲ್ಲಿ ಅಲ್ಲಿನ ಪಾರಿಭಾಷಿಕ ಪದಗಳೂ ಬಳಕೆಯಾಗಿವೆ. ‘ಸಾಫ್ಟ್ ಸಂತೆಯೊಳಗಿನ ಧ್ಯಾನ’ ಕವಿತೆಯಲ್ಲಿ ಇಂಥ ಮಾದರಿಗಳನ್ನು ಕಾಣಬಹುದಾಗಿದೆ.
ಅಭಿಷೇಕ್‌ ವೈ.ಎಸ್. ಬರೆಯುವ ಹೊಸ ಅಂಕಣ “ಕಾವ್ಯದ ಹೊಸ ಕಾಲ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

ಗಂಡು ಹೆಣ್ಣಿನ ಸಂಬಂಧದ ವಿಶಿಷ್ಟ ವ್ಯಾಖ್ಯಾನ ‘ಪೆಟ್ರಿಕೋರ್’

ಮೊನ್ನೆ ಹೀಗೆಯೇ ಗಂಗೋತ್ರಿಯ ರೌಂಡ್ ಕ್ಯಾಂಟೀನಿನಲ್ಲಿ ಚಹಾ ಹೀರುತ್ತಾ ಆಧುನಿಕ ಕನ್ನಡ ಸಾಹಿತ್ಯದ ಕುರಿತು ಗೆಳೆಯನೊಡನೆ ಹರಟುತ್ತಿದ್ದೆ. ಅದು ಸಾಹಿತ್ಯದ ನೇರ ವಿದ್ಯಾರ್ಥಿಗಳಲ್ಲದವರು ಸಾಹಿತ್ಯದ ಗಂಭೀರ ಪ್ರಕಾರಗಳನ್ನು ಬರಹದ ಮಾಧ್ಯಮವನ್ನಾಗಿಸಿಕೊಂಡು ಹೆಸರಾಗುತ್ತಿದ್ದಾರೆ ಎಂಬುದನ್ನು ಕುರಿತದ್ದಾಗಿತ್ತು. ಕಾವ್ಯದ ವಿಷಯಕ್ಕೆ ಬರುವುದಾದರೆ ಕಳೆದ ಶತಮಾನದ ಕಾವ್ಯಕ್ಕೂ ಈ ಶತಮಾನದ ಕಾವ್ಯಕ್ಕೂ ನಡುವೆ ಭಾರಿ ಅಂತರವೇ ಇದೆ. ಕಾವ್ಯ ನಿರಂತರ ಬದಲಾವಣೆಗೆ ತೆರೆದುಕೊಳ್ಳುತ್ತಲೇ ತನ್ನ ಸ್ವರೂಪದಲ್ಲಿ ಮಾರ್ಪಾಡುಗಳನ್ನೂ ಮಾಡಿಕೊಳ್ಳುತ್ತಿದೆ.

ಚೈತ್ರಾ ಶಿವಯೋಗಿಮಠ ಹೆಸರು ಕೇಳಿದೊಡನೆಯೇ ಥಟ್ ಎಂದು ನೆನಪಾಗುವುದು ಯಾವುದೋ ಕವಿಯೊಬ್ಬರ ಕವಿತೆಯನ್ನು ಬ್ಯಾಗ್ರೌಂಡಿನ ಸಂಗೀತದೊಂದಿಗೆ ಓದುವ ಪರಿಯಿಂದ, ಅಂತೆಯೇ ಅವರ ಮಧುರ ಧ್ವನಿಯಿಂದ. ತನ್ಮಯತೆಯಿಂದ ಕವಿತೆಯ ಸಾಲುಗಳನ್ನು ಓದುತ್ತಿದ್ದ ಅವರ ಧ್ವನಿಯನ್ನು ಅಷ್ಟೇ ತನ್ಮಯತೆಯಿಂದಲೇ ಆಲಿಸುತ್ತಿದ್ದೆ. ಚೈತ್ರ ಅವರ ಪ್ರಥಮ ಕವನಸಂಕಲನ ‘ಪೆಟ್ರಿಕೋರ್’. ಕವನಸಂಕಲನದ ಶೀರ್ಷಿಕೆಯಿಂದಲೇ ಗಮನಸೆಳೆಯುವ ಇವರ ಕೃತಿ ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಆಧುನಿಕ ಕನ್ನಡ ಕಾವ್ಯವೂ ವಿಭಿನ್ನ, ವಿಶಿಷ್ಟ ಶೀರ್ಷಿಕೆಯಿಂದಲೇ ಆಸಕ್ತಿಯನ್ನು ಹುಟ್ಟಿಸುತ್ತವೆ. ಇಂಥದ್ದೊಂದು ಸಂಗತಿ ಕೆಲವೊಮ್ಮೆ ಓದುವ ಸಂಸ್ಕೃತಿಯನ್ನೂ ಪ್ರಚೋದಿಸುತ್ತದೆ. ಸಂಕಲನದಲ್ಲಿ ಒಟ್ಟು 43 ಕವಿತೆಗಳಿವೆ. ಒಂದೇ ಬಾರಿಗೆ ಓದಿ ಮುಗಿಸಿದರೂ ಮತ್ತೊಂದು ಓದಿಗೆ ಕೂರುವುದು ಅನಿವಾರ್ಯವೂ ಕಾವ್ಯದ ಧರ್ಮವೂ ಆಗಿತ್ತು. ಕಾವ್ಯವನ್ನು ಓದುವುದಕ್ಕೂ, ಧ್ಯಾನಿಸುವುದಕ್ಕೂ ವ್ಯತ್ಯಾಸಗಳಿವೆ. ಓದುವ ಕಾವ್ಯ ಓದಿಗಷ್ಟೇ ಸೀಮಿತ. ಧ್ಯಾನಿಸುವ ಕಾವ್ಯ ಬದುಕಿಗೂ ದಿಕ್ಸೂಚಿಯಂತೆ.

(ಚೈತ್ರಾ ಶಿವಯೋಗಿಮಠ)

ಹೀಗೇ ಈ ಕವಿತೆಗಳನ್ನು ಓದುವಾಗ ಅವು ಆಧುನಿಕ ವಚನಗಳಂತೆ ಎನಿಸಿತು. ಅನುಭಾವದ ಕಿಡಿಗಳಂಥ ಸಾಲುಗಳು ಹೊಸದೊಂದು ಲೋಕಕ್ಕೆ ಆಹ್ವಾನಿಸುತ್ತವೆ. ಕಾವ್ಯ ಬರೆಯುತ್ತಿರುವ ನಾಯಕಿ ಮತ್ತು ಅಜ್ಞಾತ ದನಿಯೊಂದಿಗಿನ ಸಂಭಾಷಣೆ ರೂಪದ ಕವಿತೆಗಳು ಇವರ ಕಾವ್ಯವನ್ನು ಅಗೆಯುತ್ತಾ ಹೋಗುವಾಗ ಸಿಕ್ಕಿದವು. ಅಜ್ಞಾತ ದನಿಯ ಲಿಂಗತ್ವದ ಮೂಲವನ್ನು ಹುಡುಕುವುದು ವ್ಯರ್ಥ ಪ್ರಯತ್ನವೆನಿಸಿಬಿಡುತ್ತದೆ. ಗಂಡೂ ಅಲ್ಲದ ಹೆಣ್ಣೂ ಅಲ್ಲದ ದನಿಯೆಂದು ಗ್ರಹಿಸುವುದೂ ತಪ್ಪಾಗುತ್ತದೆ. ಮೊದಲ ಕವಿತೆ ‘ಅದೃಷ್ಟರೇಖೆ’ಯೊಂದರಿಂದಲೇ ಕುತೂಹಲವೂ, ಆಶ್ಚರ್ಯವೂ ಉಂಟಾಯಿತು.

“ಅವರು ನಮ್ಮಿಬ್ಬರ ನಡುವೆ
ಗೆರೆ
ಕೊರೆದರು

ನಮ್ಮ
ಅಗಲಿಕೆಯನು
ನಿರೀಕ್ಷಿಸಿದರು

ನಮ್ಮ
ಕಂಪನದ ತೀವ್ರತೆಗೆ
ಮಾಪಕ ಹಿಡಿದು ನಿಂತರು

ನಾವು
ಕೋನವಾಗಿ
ನೆಲೆ ನಿಂತೆವು”

ಎರಡು ದೇಹ ಒಂದೇ ಜೀವವೆನ್ನುವವರನ್ನು ಅಗಲಿಸಲು ಪ್ರಯತ್ನಿಸಿದವರ ಜಪ್ತಿಗೂ ಸಿಗದಂತೆ ಸ್ವತಂತ್ರ್ಯರಾಗುವ ಈ ಕವಿತೆ ದಿಟ್ಟತನವನ್ನು ತೆರೆದಿಡುತ್ತದೆ. ‘ಆತ್ಮಸಖ’ ಕವಿತೆಯಲ್ಲಿ ಬಳಸಿರುವ ರೂಪಕಗಳು ಆಶ್ಚರ್ಯವನ್ನೂ, ಬೆರಗನ್ನೂ ಉಂಟುಮಾಡುತ್ತದೆ. ಲೌಕಿಕತೆಯನ್ನು ಮೀರುವ ಪ್ರೀತಿ ಅಲೌಕಿಕತೆಯನ್ನು ಹಂಬಲಿಸುವ ಸಂಗತಿಯಾಗಿ ಕವಯತ್ರಿಗೆ ತೋರುತ್ತದೆ. ಇಲ್ಲಿ ಬಳಸಿರುವ ‘ಹುಣಸೆಯಂಥ ಪ್ರೀತಿ’ ಎಂಬ ಸಾಲುಗಳನ್ನು ಓದುತ್ತಿದ್ದ ಹಾಗೆಯೇ ‘ಹುಳಿʼಯ ಅನುಭವ ಓದುಗನನ್ನು ಅನೂಹ್ಯ ಲೋಕಕ್ಕೆ ಕರೆದೊಯ್ದು ಬಿಡುತ್ತದೆ. ಹುಣಸೆ ಹಳೆಯದ್ದಾದರೂ ಅದರ ಮೂಲಗುಣವನ್ನು ಬಿಡಲಾದರಂತೆಯೇ ಪ್ರೀತಿಯೂ ವರ್ಷಗಳು ಸವೆದರೂ ಅದರ ಪಾವಿತ್ರ್ಯತೆಯನ್ನು ಕಳೆದುಕೊಳ್ಳುವುದಿಲ್ಲವೆಂಬುದು ಲೋಕಸತ್ಯ. ಪ್ರಾಂಪಂಚಿಕ ಸುಖಗಳೆಲ್ಲವನ್ನೂ ಮೀರುವ ಮೂಲಕ ಪ್ರೇಮದ ಗಮ್ಯಕ್ಕೆ ತಲುಪುವುದಷ್ಟೆ ಕವಯತ್ರಿ ಬಯಸಿದಂತೆ ತೋರುತ್ತದೆ. ಇಲ್ಲಿನ ಸದಾಕಾಲ ಸೋನೆಗೆ ಕಾಯುವ ಹಚ್ಚ ಹಸುರಾಗಿಯೇ ಇರಲು ಹವಣಿಸುವ ಈ ಭೂಮಿ! ಎನ್ನುವಲ್ಲಿ ಹೆಣ್ತನದ ಪ್ರಕೃತಿದತ್ತ ಸಹಜ ಆಕಾಂಕ್ಷೆ ಎಂದೂ ವ್ಯಾಖ್ಯಾನಿಸಲು ಸಾಧ್ಯವಿದೆ.

ಹಕ್ಕಿಯಂಥ ಪ್ರೇಮಿಯೊಬ್ಬಳ ಒಡಲ ದನಿ ‘ಬಯಲ ಹಕ್ಕಿ’ ಕವಿತೆಯಲ್ಲಿ ದಾಖಲಾಗಿದೆ. ಇಲ್ಲಿ ಕಾಲ, ಹೆಣ್ಣು, ಆಕೆಯ ಸಂಗಾತಿ ಇತ್ಯಾದಿಗಳು ವಿಷಯಗಳಾಗಿವೆ. ಇಲ್ಲಿ ಸಂವಾದರೂಪದ ಮಾತುಗಳಿವೆ. ಸ್ವಮರುಕದ ಸ್ವಗತಗೀತೆಯಾದರೂ ಚೌಕಟ್ಟುಳೀಚೆಗೆ ಸಾಧ್ಯತೆಗಳ ಬಾಹುಗಳನ್ನು ಚಾಚಿದೆ.

‘ಬೆಳಕ ರಾಶಿ’ ಕವಿತೆಯೂ ಪ್ರೇಮದ ವಿಷಯವನ್ನೇ ಪ್ರಸ್ತಾಪಿಸಿದೆ. ಪ್ರೇಮಿಯನ್ನು ವಿಭಿನ್ನ ರೀತಿಯಲ್ಲಿ ಪ್ರೀತಿಸಲು ಪ್ರಯತ್ನಿಸುವ ಅಮರ ಪ್ರೇಮಿಯೊಬ್ಬಳ ಕಲ್ಪನಾ ರೂಪಕಗಳು ಕಾಡುತ್ತವೆ. ‘ಪ್ರೇಮವೆನ್ನುವುದು ಬೆಳಕು, ಬೆಳಕೂ ಪ್ರೇಮವೇ’ ಎಂಬ ಅರಿವು ಕವಯತ್ರಿಗಿದೆ.

‘ಹನಿ ಮಳೆ’ ಕೆಲವು ಸಾಲುಗಳ ಪುಟ್ಟ ಕವಿತೆಯೇ. ಬೆಳೆಯುವ ಕವಿತೆಯನ್ನು ಕಟ್ಟಿಹಾಕಲಾಗಿದೆಯೇನೋ ಎನಿಸುತ್ತದೆ. ಪ್ರೇಮಿಯೊಬ್ಬಳ ಮಾನಸಿಕ ತೊಯ್ದಾಟದ ಸ್ಥಿತಿ ಇಲ್ಲಿ ದಾಖಲಾಗಿದೆ. ‘ಬೆಳದಿಂಗಳ ಬಯಕೆ’ ಕವಿತೆಯೂ ಪ್ರೇಮದ ಸುತ್ತವೇ ಗಿರಕಿಹೊಡೆದರೂ ಗಮನಸೆಳೆಯುವುದು
“ಹಸಿದ ಗೂಡಿನಮುಂದೆ ತೂಗಿಬಿಟ್ಟ
ಒಂಟಿ ನೂರುವ್ಯಾಟಿನ ಜೋತಿರ್ವರ್ಷ
ಅಲ್ಲಲ್ಲಿ ಸದ್ದುಗದ್ದಲದ ಹೊಗೆ ಧೂಳ ಸರಣಿ
ಹಾಲ್ಬೆಳಗ ಸುರಿಸುವ ಕಲೆ ತುಂಬಿಕೊಂಡ ಚೆಲುವ” ಎನ್ನುವ ಸಾಲುಗಳಿಂದ. ನಗರದ ಗೌಜು ಗದ್ದಲದ ನಡುವಿನ ಚೆಲುವನ್ನು ಈ ಕವಿತೆ ದಾಖಲಿಸುತ್ತದೆ. ‘ಸಖ’ನನ್ನೇ ಧ್ಯಾನಿಸಿದೆ ಈ ಕವಿತೆ.

‘ನೀನಲ್ಲದೇ ಮತ್ತಾರಿಲ್ಲವಯ್ಯ’ ಕವಿತೆ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿಸುತ್ತದೆ. ಇಲ್ಲಿ ದೇವ ಪ್ರೇಮಿಯಾಗಿರಬಹುದು ಅಥವಾ ಪ್ರೇಮಿಯೂ ದೇವರಾಗಿರಬಹುದು. ಏನೇ ಇರಲಿ ಅದಕ್ಕೆ ಶರಣಾಗುವ ಮೂಲಕ ಬದುಕೂ ನಿನಗರ್ಪಿತ ಎಂದು ಮಂಡಿಯೂರಿಬಿಡುತ್ತಾರೆ ಕವಯತ್ರಿ. ಜಗತ್ತಿನ ಸಂಬಂಧದ ಕೈಗಳೆಲ್ಲ ತನ್ನ ಕೈಬಿಟ್ಟರೂ ನನಗೆ ನೀನೇ ಎನ್ನುವ ಇವರ ಕವಿತೆ ಬಹುಕಾಲ ಕಾಡುತ್ತದೆ. ‘ಸಾಮೀಪ್ಯ’ ಕವಿತೆಯೂ ಸಮಯದ ಪ್ರಸ್ತುತತೆ, ಪ್ರಭು/ ಪ್ರೇಮಿ ಮತ್ತು ಭಕ್ತಳಾದವಳ ನಡುವೆ ನಡೆಯುವ ಚಿಕ್ಕ ಸಂವಾದವೇ ಕವಿತೆ.

‘ಈ ಮರ್ತ್ಯದೊಳಗೆ ಕವಿತೆ’ ಲೋಕದ ಜಂಜಡಗಳಿಂದ ಮುಕ್ತಳನ್ನಾಗಿಸು ಎಂದು ಪ್ರಭುವಿಗೆ ಮೊರೆಯಿಡುವ ಕವಿತೆ. ‘ಎರಡು ಒಂದಾಗುವ ಅನನ್ಯ ರೂಪಕ’ ಬಳಕೆಯಾಗಿದೆ. ಪ್ರಭುವಿನಲ್ಲಿ ಲೀನವಾಗಿ ಸುಖವನ್ನು ಕಾಣುವ ಹೆಣ್ಣೊಬ್ಬಳ ಕೋರಿಕೆ ವಿಶೇಷವೆನಿಸುತ್ತದೆ.

‘ನಮ್ಮಿಬ್ಬರ ಹೂವು’ ಹಲವಾರು ಆಯಾಮಗಳಿಂದ ವಿಶ್ಲೇಷಿಸಲು ಸಾಧ್ಯವಿರುವ ಕವಿತೆ. ಗತದ ಕಷ್ಟಕಾರ್ಪಣ್ಯಗಳನ್ನು ನೆನಪಿಸಿಕೊಳ್ಳುವುದಾದರೂ ಎಷ್ಟುದಿನ? ಬದುಕು ವಿಸ್ತಾರವಾಗಿದೆ. ಹಳತನ್ನೆಲ್ಲಾ ಮರೆತು ಹೊಸದಕ್ಕೆ ತೆರೆದುಕೊಳ್ಳಬೇಕು ಎಂದು ಗಟ್ಟಿಯಾಗಿ ಹೇಳುವ ಕವಿತೆ.

“ಈಗೀಗ ಮೀನಖಂಡಗಳಿಂದ
ಇಂಚಿಂಚಾಗಿ ಮೇಲೆ ಸರಿದು ಕೆಳಗೆ ಇಳಿದು
ನಡುವೆ ಅರಳುವ ಹೂವ ಪಕಳೆಯನ್ನ
ನವಿರಾಗಿ ಸುಡುವ ನಿನ್ನ ಬೆರಳು
ಇಲ್ಲ ನಿನ್ನ ನೆರಳು!

ನಮ್ಮಿಬ್ಬರ ನಡುವಿನ
ಎದೆಯ ಹೂವು ಅರಳಲಿ
ಮತ್ತು ಹೌದು ನಮ್ಮಿಬ್ಬರ ನಡುವೆ
ಇರುವುದು ಇದಿಷ್ಟೇ ಪರಮಸತ್ಯ”

ಗಂಡು ಹೆಣ್ಣಿನ ಸೂಕ್ಷ್ಮ ಸಂಬಂಧವನ್ನು ಅಷ್ಟೇ ಸೂಕ್ಷ್ಮವಾಗಿ ಇಂಥ ಸಾಲುಗಳಲ್ಲಿ ಹೆಣೆದಿರುವುದು ವಿಶೇಷವೆನಿಸುತ್ತದೆ. ಸೃಷ್ಠಿಗೆ ಕಾರಣವಾಗುವ ‘ಯೋನಿ’ಯ ಕುರಿತಾಗಿ ಬಳಸಿರುವ ರೂಪಕಗಳು ಇವರ ಕಾವ್ಯದ ಮಹತ್ವವನ್ನು ಹೆಚ್ಚಿಸಿವೆ. ಸಂಬಂಧಗಳು ಶಿಥಿಲವಾಗುತ್ತಿರುವ ಈಗಿನ ದುರಿತಕಾಲದಲ್ಲಿ ತಮ್ಮಿಬ್ಬರ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳುವ ದಿಟ್ಟತನ ಬೆರಗುಹುಟ್ಟಿಸುತ್ತದೆ. ಸಾಂಗತ್ಯ, ಸಂಬಂಧ, ಪ್ರೇಮ, ಕಾಮಗಳು ಒಂದನ್ನು ಬಿಟ್ಟು ಮತ್ತೊಂದು ಇರಲಾರವು ಎನ್ನುವುದನ್ನು ಕವಿತೆಯಲ್ಲಿ ಸಶಕ್ತವಾಗಿ ಕಟ್ಟಿಕೊಡಲಾಗಿದೆ.

ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರವಾದ ‘ವಚನ ಸಾಹಿತ್ಯ’ ಕವಯತ್ರಿಯಮೇಲೆ ಗಾಢ ಪ್ರಭಾವವನ್ನು ಬೀರಿವೆ ಎನ್ನುವುದನ್ನು ಕೆಲ ಕವಿತೆಗಳಿಂದಲೇ ತಿಳಿಯುತ್ತದೆ. ಅಲ್ಲಮ, ಬಸವಾದಿ ಶರಣರ ನೆರಳಿನ ಛಾಯೆಯಿದೆ. ಅದರಲ್ಲೂ ಅಕ್ಕಮಹಾದೇವಿಯವರ ವಚನಗಳು ಹೆಚ್ಚು ಪ್ರಭಾವಿಸಿವೆ. ಸ್ತ್ರೀವಾದಿ ನೆಲೆಯಲ್ಲಿ ವಿಶ್ಲೇಷಿಸಬಹುದಾದ ಅನೇಕ ಸಂಗತಿಗಳು ಇವರ ಕವಿತೆಗಳಲ್ಲಿವೆ. ಕಾರ್ಪೋರೆಟ್ ಜಗತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಅನೇಕ ಕವಿತೆಗಳಲ್ಲಿ ಅಲ್ಲಿನ ಪಾರಿಭಾಷಿಕ ಪದಗಳೂ ಬಳಕೆಯಾಗಿವೆ. ‘ಸಾಫ್ಟ್ ಸಂತೆಯೊಳಗಿನ ಧ್ಯಾನ’ ಕವಿತೆಯಲ್ಲಿ ಇಂಥ ಮಾದರಿಗಳನ್ನು ಕಾಣಬಹುದಾಗಿದೆ. ‘ಮಾಲ್ವೇರು’, ‘ರಾನ್ಸಮೇರು’ಗಳು, ‘ವರ್ಕ್ ಫ್ರಂ ಹೋಮ್’ ಇತ್ಯಾದಿ ಪದಗಳು ಈ ಗುಂಪಿಗೆ ಸೇರುತ್ತವೆ. ಕನ್ನಡದ ಕವಿತೆಯಲ್ಲಿ ಅನ್ಯಭಾಷೆಯ ಪದಗಳು ಕವಿತೆಯ ಸೊಬಗನ್ನು ಕಸಿಯುತ್ತವೆ ಎಂದು ವಾದಿಸುವ ಬಣಗಳು ಈಗಾಗಲೇ ಅಲ್ಲಲ್ಲಿ ತಮ್ಮ ಕ್ಯಾತೆಗಳನ್ನು ತೆಗೆದರೂ ಕನ್ನಡದ ಕಾವ್ಯಕ್ಕೆ ಇಂಥ ಬದಲಾವಣೆಗಳು ಧಕ್ಕೆ ಉಂಟುಮಾಡಲಾರವು ಎನಿಸುತ್ತದೆ. ಅವರವರ ಔದ್ಯೋಗಿಕ ಕ್ಷೇತ್ರದ ಇಲ್ಲವೇ ಭೌಗೋಳಿಕ ಪರಿಸರದ ಪ್ರಭಾವಗಳ ಪಾರಿಭಾಷಿಕ ಪದಗಳು ಬಳಕೆಯಾದಷ್ಟೂ ಕವಿತೆಯ ಸಾಧ್ಯತೆಗಳು ವಿಸ್ತಾರವಾಗುತ್ತಾ ಹೋಗುತ್ತವೆ. ಕವನಸಂಕಲನದ ಶೀರ್ಷಿಕೆಗಳಲ್ಲೂ ಆಂಗ್ಲಭಾಷೆಯ ಪದಗಳೇ ರಾರಾಜಿಸುತ್ತಿರುವುದನ್ನು ಇತ್ತೀಚೆಗೆ ಕಾಣಬಹುದಾಗಿದೆ.

ಅನುಭಾವದ ಕಿಡಿಗಳಂಥ ಸಾಲುಗಳು ಹೊಸದೊಂದು ಲೋಕಕ್ಕೆ ಆಹ್ವಾನಿಸುತ್ತವೆ. ಕಾವ್ಯ ಬರೆಯುತ್ತಿರುವ ನಾಯಕಿ ಮತ್ತು ಅಜ್ಞಾತ ದನಿಯೊಂದಿಗಿನ ಸಂಭಾಷಣೆ ರೂಪದ ಕವಿತೆಗಳು ಇವರ ಕಾವ್ಯವನ್ನು ಅಗೆಯುತ್ತಾ ಹೋಗುವಾಗ ಸಿಕ್ಕಿದವು. ಅಜ್ಞಾತ ದನಿಯ ಲಿಂಗತ್ವದ ಮೂಲವನ್ನು ಹುಡುಕುವುದು ವ್ಯರ್ಥ ಪ್ರಯತ್ನವೆನಿಸಿಬಿಡುತ್ತದೆ. 

‘ಪೆಟ್ರಿಕೋರ್’ ಎಂಬ ಪದದ ಪರಿಚಯವೇ ಇಲ್ಲದ ನಾನೂ ಇವರ ಕವಿತೆಯ ಕೆಳಗೆ ಕೊಟ್ಟ ಅಡಿ ಟಿಪ್ಪಣಿಯಿಂದಲೇ ಇದರ ಅರ್ಥ ತಿಳಿದುಕೊಳ್ಳಬೇಕಾಯಿತು. ‘ಪೆಟ್ರಿಕೋರ್’ ಎನ್ನುವುದು ‘ಮೊದಲ ಮಳೆ, ಒಣಮಣ್ಣ ಮೇಲೆ ಬಿದ್ದ ಮಣ್ಣಿನ ಘಮಲು’ ಎಂದು ಕವಿತೆಯ ಕೆಳಗೆ ವಿವರಣೆ ಕೊಡಲಾಗಿದೆ. ಮೊದಲ ಮಳೆ ಬಿದ್ದಾಗ ಹೂವಿನಂತೆ ಅರಳಿಕೊಳ್ಳುವ ಕವಯತ್ರಿಗೆ ಲೋಕದ ಹಂಗು ಬೇಡವಾಗಿದೆ. ಸಾಕಾಗಿಯೂ ಇದೆ. ಕವಿತೆಯ ಆರಂಭದಲ್ಲಿ ಕವಿತೆಗೆ ‘ಬ್ಯಾವರ್ಸಿ’ ಎಂದು ಬೈಯುವಿಕೆಯಲ್ಲೂ ಒಂದು ಪ್ರೀತಿ ಇದೆ. ಆ ಪ್ರೀತಿ ಕವಿತೆಯ ಕೊನೆಯವರೆಗೂ ಕಾಪಿಡಲಾಗಿದೆ. ಮಳೆ ಬಿದ್ದು ಉಂಟಾಗುವ ಮಣ್ಣಿನ ಘಮಲು ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಭಾವನೆಗಳ ಕಟ್ಟೆ ಒಡೆದಾಗ ಸ್ವತಂತ್ರ್ಯವಾಗಿ, ಸ್ವಚ್ಛಂದವಾಗಿ ಎಲ್ಲ ಮೇರೆಗಳನ್ನೂ ಮೀರಿ ಕುಣಿದಾಡುವ ಕವಯತ್ರಿಗೆ ಜನರಾಡುವ ಮಾಗಳು, ಕಟ್ಟುವ ಕಥೆಗಳಿಗೆ ಕಿವಿಕೊಡುವುದು ಬೇಕಾಗಿಲ್ಲ. ಈ ಕ್ಷಣಗಳನ್ನು ಅನುಭವಿಸುವ ಏಕಾಂಗಿತನವಷ್ಟೆ ಬೇಕಾಗಿದೆ. ಚಿಕ್ಕಚಿಕ್ಕಸಂಗತಿಗಳೂ ಬದುಕನ್ನು ಎಷ್ಟು ಶ್ರೀಮಂತಗೊಳಿಸಬಹುದು ಎನ್ನುವುದಕ್ಕೆ ಪುಟ್ಟ ಉದಾಹಣೆ ಈ ಕವಿತೆ. ಮಳೆ ಬಂದಾಗ ಹೆಣ್ಣೊಬ್ಬಳು ಸ್ಚಚ್ಛಂದವಾಗಿ ನೆನೆದರೂ ಒದ್ದೆ ದೇಹವನ್ನಷ್ಟೆ ನೋಡಿ ಉದ್ರೇಕಗೊಳ್ಳುವ ಕಣ್ಣುಗಳು ಹೆಣ್ಣಿನ ಮನಸ್ಸಿನೊಳಗೆ ನಡೆಯುವ ತುಮುಲ, ತಲ್ಲಣಗಳನ್ನೂ ಏಕೆ ಕಾಣಲಾರವೆಂಬ ವಿಷಾದವೂ ಈ ಕವಿತೆಯಲ್ಲಿದೆ.

“ಈ ಘಮಲು
ಕೆಲವರಿಗೆ ಆಗಂತುಕ
ಮತ್ತು
ಕ್ಷಣಿಕ ಮಾತ್ರ; ನನ್ನಂಥವಳಿಗೆ
ಒಂದು ಶಾಶ್ವತ ಅಮಲು”!
ಎಂದು ಕವಿತೆ ಮುಕ್ತಾಯವಾಗುತ್ತದೆ.

‘ಖಾಲಿದರ್ಪಣ’ ಒಂಟಿತನದಿಂದ ಬೇಸತ್ತು ರಾತ್ರಿಯ ಕನವರಿಕೆಯಲ್ಲೂ ಬದುಕಿನ ಅಸಹಾಯಕತೆಯನ್ನು ಕಂಡು ವಿಲವಿಲನೆ ಒದ್ದಾಡುವ ಮನಸ್ಸಿನ ಕುರಿತ ಕವಿತೆ. ನಿದ್ದೆಯನ್ನೂ ಕಸಿಯುವ ಪ್ರೇತದಂಥ ನೆನಪುಗಳು ಕವಯತ್ರಿಯ ಪಾಲಿಗೆ ಕರಾಳವಾಗಿವೆ.

“ಒಮ್ಮೆ ಕೇಳಿ ನೋಡಿ ತಲೆದಿಂಬನ್ನೇ
ಅದೆಷ್ಟು ಗುಪ್ತನದಿಗಳನ್ನು
ತನ್ನ ಉದರಕ್ಕಿಳಿಸೊಂಡಿದೆಯೆಂದು”
ಎನ್ನುವಂಥ ಸಾಲುಗಳು ಹೊಸ ರೀತಿಯ ರೂಪಕಗಳನ್ನು ಕಟ್ಟಿಕೊಡುತ್ತವೆ. ಖಾಲಿದರ್ಪಣದೊಂದಿಗೆ ತನ್ನ ದುಃಖವನ್ನು ಹೋಲಿಸಿಕೊಳ್ಳುವ ಕವಯತ್ರಿ ಆ ಖಾಲಿತನ ಎಂದು ತುಂಬುವುದೋ ಎಂಬ ನಿರೀಕ್ಷೆಯಲ್ಲಿದ್ದಾರೆ. ಇಂಥ ನಿರೀಕ್ಷೆಗಳು ಭರವಸೆಯನ್ನು ಹುಟ್ಟಿಸುತ್ತವೆ. ‘ಗುರುತ್ವ’ ಎಂಬ ಹೆಸರಿನ ಕವಿತೆಯು ಇಬ್ಬರ ನಡುವಿನ ಸಂಬಂಧದ ಕುರಿತೇ ಮಾತನಾಡಿದಂತೆ ತೋರುತ್ತದೆ. ಒಂದಕ್ಕೊಂದರ ಜೊತೆ ಇರುವ ಅವಿನಾಭಾವ ಸಂಬಂಧಗಳ ರೀತಿಯೇ ನನ್ನ ನಿನ್ನ ಸಂಬಂಧವೂ ಎಂದು ಹೇಳುವ ಕವಯಿತ್ರಿ ಇಂಥ ಸಂಬಂಧ ಅನಾದಿಕಾಲದಿಂದಲೂ ಇವೆ ಮತ್ತು ಇರುತ್ತವೆ ಎಂದು ಕವಿತೆ ಮುಗಿಸುತ್ತಾರೆ. ‘ನಿರಂತರತೆಯ ತತ್ವ’ವನ್ನು ಹಲವು ಕವಿತೆಗಳಲ್ಲಿ ಪ್ರತಿಪಾದಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಕವಿತೆಗಳು ಸಂಕಲನದಲ್ಲಿ ತೀರಾ ವಿರಳವೆಂದರೂ ಅಲ್ಲಲ್ಲಿ ಅನುಭವದ ಮಾತುಗಳು ಇಂಥ ಕೊರತೆಯನ್ನು ನೀಗಿಸಿವೆ. ‘ಪ್ರತಿಫಲನ’ ಕವಿತೆಯಲ್ಲಿಯೂ ಇಂಥ ಕಾಳಜಿಗಳನ್ನು ಗಮನಿಸಬಹುದು.

“ಉರಿಯುವ ಸೂರ್ಯನಿಗೂ
ಆಗಾಗ ಆತ್ಮಹತ್ಯೆ ಮಾಡಿಕೊಳ್ಳುವ ತವಕ”
ಎಂಬಂಥ ಸಾಲುಗಳು ಕವಿತೆಯನ್ನು ವಿಭಿನ್ನವಾಗಿ ನೋಡಲು ಸಾಧ್ಯತೆಗಳನ್ನೊದಗಿಸುತ್ತವೆ.

“ಸಂತೆಯ ಭರಾಟೆಯಲ್ಲಿ
ಪುಟ್ಟ ಮರಿಗಳ ದನಿಯಾಗಬೇಕು
ಪ್ರತಿಫಲಗಳ ಮರೆತು ಫಲವಾಗಬೇಕು” ಎನ್ನುವ ಕವಯತ್ರಿಗೆ ಲೋಕದ ಕಾಳಜಿ ತುಸು ಗಾಢವಾಗಿಯೇ ಇದೆಯೆಂದು ಇಂಥ ಸಾಲುಗಳಿಂದ ತಿಳಿಯುತ್ತದೆ. ‘ಒಂಟಿಗಣ್ಣಿನ ಮಾಯಾವಿ’ಯಲ್ಲಿ ಪಾಪದ ಹುಡುಗನೊಬ್ಬನ ಪೋಲಿತನದ ಕುರಿತು ಕವಯತ್ರಿಗೆ ‘ಸಮ್ಮತಿ’ಯೊಂದಿಗೆ ‘ಮರುಕ’ವಿದೆ. ‘ಆ ಕಣ್ಣುಗಳು’ ಕವಿತೆಯಲ್ಲೂ ‘ಗುರುತ್ವ’ದ ಪ್ರಸ್ತಾಪ ಬರುತ್ತದೆ. ಅಲ್ಲಿನ

“ಭಾವುಕರ ಭಾಷೆ ಜಾಣರಿಗೆ ಅರ್ಥವಾಗುವುದಿಲ್ಲ
ಅರ್ಥವಾದರೂ ಅವರು
ಆಡಬೇಕಾದ ಮಾತನ್ನು
ಆಡದೆ ಕೂಡಿಡುವರಲ್ಲ” ಎಂಬ ಸಾಲುಗಳು ಕಾಡುತ್ತವೆ.

‘ಮೂಕ ಹಕ್ಕಿಯ ಹಾಡೂ’ ಚತುರ ಗೆಳೆಯನ ಕುರಿತೇ ಪ್ರಸ್ತಾಪಿಸುವ ಕವಿತೆ. ಗೆಳೆಯನೊಂದಿಗಿನ ಸಂಬಂಧವನ್ನು ಲೋಕಕ್ಕೆ ಯಾವ ಭಯವೂ ಇಲ್ಲದೇ ಸಾರಿ ಹೇಳುವ ಧೈರ್ಯ ತೋರಿದ್ದಾರೆ. ‘ಕಾಡಿಗೆ ಹಾಗೆ ಕಾಡಬೇಡ’ ಎನ್ನುವ ರೂಪಕ ಇಷ್ಟವಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ಕವಿತೆಯ ಕೊನೆಯಲ್ಲಿ ‘ಅಪರಿಚಿತರಾಗುವ ಕ್ರಿಯೆ’ ಮತ್ತಷ್ಟು ಹತ್ತಿರಕ್ಕೇ ತಂದು ನಿಲ್ಲಿಸಿಬಿಡುತ್ತದೆ. ‘ಎದೆಮುಗಿಲ ಸೂರ್ಯ’ ಕವಿತೆ ಕಾಯುವಿಕೆಯಲ್ಲೇ ಅಂತ್ಯವಾಗುತ್ತದೆ. ಕಾಯುವಿಕೆ ಎನ್ನುವುದು ತಪಸ್ಸು, ಕಾಯುವಿಕೆಯಲ್ಲೂ ಹಿತವಾದ ಸುಖವಿದೆ ಎಂಬುದನ್ನು ಕೆಲವು ಕವಿತೆಗಳಲ್ಲಿ ದಾಖಲಿಸಿದ್ದಾರೆ.

‘ನಕ್ಷತ್ರ ಮತ್ತು ವೀಣೆ’ ಕವಿತೆಯೂ ಇಬ್ಬರ ಸಂಬಂಧದ ಕುರಿತೇ ಇದೆ. ಕಲ್ಪನೆಯ ಜಾಡು ಹಿಡಿದೇ ಕವಯತ್ರಿ ಸಾಗಿದಂತಿದೆ. ‘ನಿರ್ದಯಿ ಗರುಡ’ದ ಬಗ್ಗೆ ಕವಯತ್ರಿಗೆ ವಿಷಾದಕ್ಕಿಂತಲೂ ಸಾರ್ಥಕತೆಯೇ ಇದ್ದಂತೆ ತೋರುತ್ತದೆ. ‘ಒಲವಿನ ಹುಡಿ’ ಹೆಣ್ಣೊಬ್ಬಳ ಬದುಕಿನ ಏದುಸಿರನ್ನು ಕುರಿತು ವಿಶಿಷ್ಟವಾಗಿ ದಾಖಲಿಸಲು ಪ್ರಯತ್ನಿಸುತ್ತದೆ. ‘ದ್ಯುತಿ ಆರ್ಟ್ ಕೆಫೆ’ ಕವಿತೆ ಒಂಟಿಯಾಗಿ ಬಂದ ತ್ಯಕ್ತ ಹೆಣ್ಣೊಬ್ಬಳನ್ನು ಕೆಫೆಯೊಳಗಿನ ಜನರು ನೋಡುವ ಪರಿಯನ್ನು ಮತ್ತು ಅವನ ಕಣ್ಣ ಸನ್ನೆಗೆ ತಾನು ಹೇಗೆ ಕಾಣುವೆ ಎಂದು ಕುರಿತು ಚಿಂತಿಸುತ್ತದೆ. ‘ಎದೆಯಕುಂಡದ ಮಲ್ಲಿಗೆ’ಯೂ ಕಾಯುವಿಕೆಯನ್ನೇ ಕುರಿತು ಪ್ರಸ್ತಾಪಿಸಿದೆ. ‘ಬಣ್ಣʼ ವಿಶಿಷ್ಟ ಕವಿತೆ. ಎಲ್ಲ ಬಣ್ಣಗಳ ಬಟ್ಟೆಯನ್ನು ಬಿಚ್ಚಿ ಬಯಲಾದರೂ ಜನರ ಬುದ್ದಿ ಬದಲಾಗುವುದಿಲ್ಲವೆಂಬ ವಿಷಾದ ವ್ಯಕ್ತಪಡಿಸುತ್ತಾರೆ. ಸಂಕಲನದ ಕೊನೆಯಲ್ಲಿ ‘ಪ್ರೀತಿ ಪ್ರೇಮ ಪ್ರಣಯ’ ಮತ್ತು ‘ಗೆಳೆಯನ ಸಿಹಿಮುತ್ತು’ ಹೆಸರಿನ ಕೆಲವು ಪುಟ್ಟ ಕವಿತೆಗಳಿವೆ. ಅವು ದೀರ್ಘ ಸಾಲುಗಳ ಕವಿತೆಯಾಗುವ ಎಲ್ಲ ಲಕ್ಷಣಗಳಿದ್ದರೂ ಕವಯತ್ರಿ ಕಟ್ಟಿಹಾಕಿದ್ದಾರೆ ಎನಿಸುತ್ತದೆ. ಪ್ರಸ್ತಾಪಿಸದ ಕೆಲವು ಕವಿತೆಗಳಿದ್ದರೂ ಅವುಗಳ ವಿಷಯ ವಸ್ತುಗಳು ಒಂದೇ ಆದ ಕಾರಣ ಅವು ಮುಖ್ಯವೆನಿಸಲಿಲ್ಲ. ಸಂಕಲನದ ಭಾಷೆ ಸರಳವಾಗಿಲ್ಲ, ಆದರೂ ಓದಿಸಿಕೊಂಡು ಹೋಗುತ್ತದೆ. ಒಂದು ಓದಿಗೆ ದಕ್ಕದ ಕವಿತೆಗಳು ಮತ್ತೊಂದು ಓದಿಗೆ ಹಿಡಿತಕ್ಕೆ ಸಿಕ್ಕಿಬಿಡುತ್ತವೆ.

ಅನುಭಾವದ ಕುರಿತ ಹಲವು ಪಾರಿಭಾಷಿಕ ಪದಗಳು ಪುನರಾವರ್ತನೆಯಾಗಿವೆ. ಪುನರಾವರ್ತಿತ ವಿಷಯಗಳ ಕವಿತೆಗಳಲ್ಲೂ ವಿಭಿನ್ನ ರೂಪಕಗಳು ಬಳಕೆಯಾಗಿರುವುದು ವಿಶೇಷವೆನಿಸುತ್ತದೆ. ಗಂಡು ಹೆಣ್ಣಿನ ಸಂಬಂಧಗಳ ಕುರಿತು ವಿಶಿಷ್ಟ ವ್ಯಾಖ್ಯಾನಕ್ಕೆ ಹಲವು ಕವಿತೆಗಳು ಸಾಕ್ಷಿಯಾಗಿರುವುದು ವಿಶೇಷವೆನಿಸುತ್ತದೆ. ಮೊದಲ ಮಳೆಯಂತೆಯೇ ಇವರ ಮೊದಲ ಸಂಕಲನವೂ ‘ಪೆಟ್ರಿಕೋರ್’ನಂತೆ ಆವರಿಸಿಬಿಡುತ್ತದೆ. ಇವರ ಮುಂದಿನ ಬರವಣಿಗೆಗಳು ನನಗಂತೂ ನಿರೀಕ್ಷೆಯನ್ನು ಹುಟ್ಟಿಸಿವೆ.

(ಕೃತಿ: ಪೆಟ್ರಿಕೋರ್‌ (ಕವನ ಸಂಕಲನ), ಲೇಖಕರು: ಚೈತ್ರ ಶಿವಯೋಗಿಮಠ, ಪ್ರಕಾಶಕರು: ಆತ್ಮಿಕಾ ಪುಸ್ತಕ, ಬೆಲೆ:120/-)