ರಾತ್ರಿ ಕಾಣಿಸುವ ಬೆಳ್ಳಿ ನಕ್ಷತ್ರದ ದಾರಿ ಹಿಡಿದು ಅಲ್ಲಿಂದ ಮತ್ತೊಂದೆಡೆಗಿನ ಮಾರುಕಟ್ಟೆಗೆ ತೆರಳುತ್ತಿದ್ದರು. ಒಮ್ಮೆ ಒಂದೇ ಬಾರಿ ೫೦೦೦ ಕ್ಕೂ ಹೆಚ್ಚು ದನ ಬೀಡುಬಿಟ್ಟಿದ್ದು ಇಲ್ಲಿ ದಾಖಲಾಗಿದೆಯೆಂದರೆ ಇಲ್ಲಿನ ಮೇವಿನ ಸಮೃದ್ಧಿಯನ್ನು ಗಮನಿಸಬೇಕು. ೧೮೦೦ ಇಸವಿಯಿಂದ ೧೮೮೦ ರವರೆಗೂ ಇಲ್ಲಿ ದನದ ದೊಡ್ಡ ಮಾರುಕಟ್ಟೆಯಿತ್ತು. ಇದರ ಇತಿಹಾಸವನ್ನು ನೆನಪಿಸಲು ಫ್ರಿಸ್ಕೋನಲ್ಲಿ ಕೆಲವು ಸಣ್ಣ ಕೊಳದ ಸುತ್ತ ಬಫೆಲೋಳ ಪ್ರತಿಮೆಗಳನ್ನು ಮರುಸ್ರುಷ್ಟಿಸಿ ಒಂದು ಸ್ಥಂಭವನ್ನು ಸ್ಥಾಪಿಸಿ ಅಲ್ಲಿನ ದನದವ್ಯಾಪಾರದ ವಿವರವನ್ನು ಆ ನಾಯಕರ ಹೆಸರನ್ನು ದಾಖಲಿಸಿದ್ದಾರೆ.
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಹದಿಮೂರನೆಯ ಕಂತು.
ಮೇವಿದ್ದೆಡೆ ಮೈ ಅನ್ನೋ ಹಾಗೆ ಅಮೇರಿಕಾದ ಡಾಲಸ್ ನ ವಿಸ್ತಾರವನ್ನು ನೋಡಿದಾಗ ಅಲ್ಲಿ ಬೆಳೆಯುವ ಜೋಳದ ಹೊಲಗಳನ್ನು ಗಮನಿಸಿದಾಗ ಇದು ಹುಲ್ಲುಗಾವಲಿರಬಹುದೇ ಅನ್ನಿಸಿತು. ಇದು ಸಣ್ಣ ಏರಿಳಿತಗಳಿರುವ ಭೂಪ್ರದೇಶ. ಇಲ್ಲಿಯ ಮಳೆನೀರು ನದಿಗಳಿಗೆ ಹರಿದುಹೋಗುವುದಲ್ಲದೆ ಇಲ್ಲಿ ಒಂದು ದೊಡ್ಡ ಸರೋವರವೇ ಇರುವುದರಿಂದ ನೀರಿಗೆ ತೊಂದರೆಯಿಲ್ಲ. ಆದರೆ ಇಲ್ಲಿಯ ಬಿಸಿಲು ತೀಕ್ಷ್ಣವಾಗಿರುತ್ತದೆ.
ಸಿವಿಲ್ ವಾರ್ಗೆ ಮುನ್ನ ಇಂಥ ಹುಲ್ಲುಗಾವಲನ್ನು ನೋಡಿಕೊಂಡು ಬಂದಿಳಿಯುತ್ತಿದ್ದ ಹೊರನಾಡಿನ ಗೌಳಿಗರು ಅಂದರೆ ಇಂಗ್ಲೀಶ್ ಹಾಗೂ ಸ್ಪಾನಿಶ್ ಜನರು ಪೂರ್ವದಿಂದ ದಕ್ಷಿಣದ ಈ ‘ಫೋರ್ಟ್ವರ್ತ್’ ನ ನೀರಿನ ಸೆಲೆಯಿದ್ದ ಈ ಜಾಗಕ್ಕೆ ಬಂದಿಳಿಯುತ್ತಿದ್ದರು. ಇಂಗ್ಲೀಶ್ ಹಾಗೂ ಸ್ಪಾನಿಷ್ ದನಗಳು ಇಲ್ಲಿಯ ದನಗಳನ್ನು ಕೂಡಿ ಹೊಸ ಮಿಶ್ರ ತಳಿಯೊಂದು ಸೃಷ್ಟಿಯಾಗಿ ಅಮೇರಿಕಾದ ಟೆಕ್ಸಾಸ್ ರಾಜ್ಯದ ಪಶು ಸಂಗೋಪನೆ ಹಾಗೂ ವಾಣಿಜ್ಯ ಕೇಂದ್ರವೊಂದು ಇಲ್ಲಿ ರೂಪುಗೊಂಡಿತು.
ಇಲ್ಲಿನ ನೆಲ ಬೆಳೆ ಬೆಳೆಯಲು ಅನುಕೂಲಕರವಾಗಿಲ್ಲದಿದ್ದರೂ ಹುಲ್ಲಿನ ಸಮೃದ್ಧಿಯಿಂದ ದನದ ಮಾರುಕಟ್ಟೆಯಾಗಿ ರೂಪುಗೊಂಡಿತು. ಹಾಗೆಯೇ ಈ ಪ್ರದೇಶ ಎರಡು ನದಿಗಳನ್ನು ಹಾದು ಬರುವ ಹಾದಿಯಾಗಿ… ಹೊರದೇಶದ ಜನರನ್ನು ಸೆಳೆದು ವ್ಯಾಪಾರಕ್ಕೆ ಕರೆತರುವ ದನದ ಚರ್ಮವನ್ನು ಮೆಕ್ಸಿಕೋ, ಇನ್ನಿತರ ದೇಶಗಳಿಗೆ ಕಳಿಸುವ ನದಿ ಸಾಗಾಣಿಕೆಯ ದಾರಿಯಾಗಿ, ರೈಲು ದಾರಿಯ ಅನ್ವೇಷಣೆಯಾಗಿ ಅದು ರಫ್ತು ಮಾಡುವ ವಾಣಿಜ್ಯೋದ್ಯಮಕ್ಕೆ ದಾರಿಯಾಯಿತು.
ಇಲ್ಲಿಗೆ ದನದ ಹಿಂಡನ್ನು ದಿನಕ್ಕೆ ಆರರಿಂದ ಏಳು ಮೈಲಿ ನಡೆಸಿಕೊಂಡು ಹೊಡೆದುಕೊಡು ಬರುವ ಜನರು ರಾತ್ರಿ ವೇಳೆಯಲ್ಲಿ ಇಲ್ಲಿ ಬಂದು ನಿಲ್ಲುತ್ತಿದ್ದರು. ದನಗಳಿಗೆ ಬೇಕಾದ ಹಸಿರು ಹುಲ್ಲು, ನೀರ ತನುವಿನ ಈ ಜಾಗದಲ್ಲಿ ಜಾನುವಾರಗಳು ಬೀಡು ಬಿಡುತ್ತಿದ್ದವು. ಒಂದೂವರೆ ಸಾವಿರದಿಂದ ಎರಡು ಸಾವಿರ ದನಬೀಡಿಗೆ ಒಂದು ಸಾಮಾನು ಹೇರಿಕೊಂಡ ಬಂಡಿ, ಒಬ್ಬ ನಾಯಕ, ಹತ್ತುಮಂದಿ ಕುದುರೇಯೇರಿ ದನಗಳನ್ನು ಕಾಯುವ ಯುವ ಗೌಳಿಗರಾದ ಕೌ ಬಾಯ್ ಗಳು, ಒಬ್ಬ ಅಡುಗೆಯವನು, ಕುದುರೆಗಳನ್ನು ಸಾಕುವವನೊಬ್ಬ, ತಮ್ಮ ದನಗಳೊಂದಿಗೆ ಇಲ್ಲಿ ಬೀಡು ಬಿಡುತ್ತಿದ್ದರು.
ರಾತ್ರಿ ಕಾಣಿಸುವ ಬೆಳ್ಳಿ ನಕ್ಷತ್ರದ ದಾರಿ ಹಿಡಿದು ಅಲ್ಲಿಂದ ಮತ್ತೊಂದೆಡೆಗಿನ ಮಾರುಕಟ್ಟೆಗೆ ತೆರಳುತ್ತಿದ್ದರು. ಒಮ್ಮೆ ಒಂದೇ ಬಾರಿ ೫೦೦೦ ಕ್ಕೂ ಹೆಚ್ಚು ದನ ಬೀಡುಬಿಟ್ಟಿದ್ದು ಇಲ್ಲಿ ದಾಖಲಾಗಿದೆಯೆಂದರೆ ಇಲ್ಲಿನ ಮೇವಿನ ಸಮೃದ್ಧಿಯನ್ನು ಗಮನಿಸಬೇಕು. ೧೮೦೦ ಇಸವಿಯಿಂದ ೧೮೮೦ ರವರೆಗೂ ಇಲ್ಲಿ ದನದ ದೊಡ್ಡ ಮಾರುಕಟ್ಟೆಯಿತ್ತು. ಇದರ ಇತಿಹಾಸವನ್ನು ನೆನಪಿಸಲು ಫ್ರಿಸ್ಕೋನಲ್ಲಿ ಕೆಲವು ಸಣ್ಣ ಕೊಳದ ಸುತ್ತ ಬಫೆಲೋಳ ಪ್ರತಿಮೆಗಳನ್ನು ಮರುಸ್ರುಷ್ಟಿಸಿ ಒಂದು ಸ್ಥಂಭವನ್ನು ಸ್ಥಾಪಿಸಿ ಅಲ್ಲಿನ ದನದವ್ಯಾಪಾರದ ವಿವರವನ್ನು ಆ ನಾಯಕರ ಹೆಸರನ್ನು ದಾಖಲಿಸಿದ್ದಾರೆ.
ಕೌಬಾಯ್ ಶೋ….
ಈಗಲೂ ಇದರ ಪಳೆಯುಳಿಕೆಯೆಂಬಂತೆ ಪಕ್ಕದ ಫ್ರಿಸ್ಕೋನಲ್ಲಿರುವ ಸ್ಟಾಕ್ ಯಾರ್ಡಿನಲ್ಲಿ ಹಳೆಯ ಮಾರುಕಟ್ಟೆಯನ್ನು ಹಾಗೇ ಜನರ ವೀಕ್ಷಣೆಗೆ ಉಳಿಸಿಕೊಳ್ಳಲಾಗಿದೆ. ಹಳೆಯ ನೆನಪಿಗಾಗಿ ಅಲ್ಲಿ ಈ ಮಿಶ್ರ ತಳಿಯ ಹತ್ತಾರು ದನಗಳನ್ನು ಇಂದಿಗೂ ಸಾಕುತ್ತಾ, ಅಲ್ಲಿನ ಕೊಟ್ಟಿಗೆ ಹುಲ್ಲು ಮಾಡುಗಳೊಂದಿಗೆ ಜನರ ಕಣ್ಣಿಗೆ ತೆರೆದಿಟ್ಟಿದ್ದಾರೆ. ದಿನವೂ ಕೌಬಾಯ್ ಗಳು ಸವಾರಿ ಮಾಡುತ್ತಾ ಮೆರವಣಿಗೆಯೆಂಬಂತೆ ಸಾಗುತ್ತಾರೆ. ದನಗಳ ಜೊತೆಗೆ ಕುದುರೆ ಸವಾರಿಯ ಕೌಬಾಯ್ ಇರುತ್ತಾನೆ. ಮಕ್ಕಳನ್ನು ಕರೆತಂದ ಪ್ರೇಕ್ಷಕರನ್ನು ಆ ದನಗಳ ಮೇಲೆ ಕೂರಿಸಿ ಕ್ಲಿಕ್ ಎನ್ನಿಸಿ ಅಂದಿನ ಬದುಕೊಂದು ಇಂದು ಫೋಟೋ ಚೌಕಟ್ಟಿನ ಚಿತ್ರವಾಗಿ ದಾಖಲಾಗುತ್ತಿದೆ. ಈಗ ಅಲ್ಲಿ ಉಳಿದಿರುವ ‘ಬ್ರಾಹ್ಮಿನ್’ ತಳಿಗಳು ಬಾರಿ ಸೈಜಿನ ದನಗಳಾಗಿವೆ. ಇವು ಏಷಿಯಾ ಹಾಗೂ ಸ್ಥಳೀಯ ದನಗಳ ಮಿಶ್ರ ತಳಿಗಳಾಗಿವೆ.
ಒಂದೂವರೆ ಸಾವಿರದಿಂದ ಎರಡು ಸಾವಿರ ದನಬೀಡಿಗೆ ಒಂದು ಸಾಮಾನು ಹೇರಿಕೊಂಡ ಬಂಡಿ, ಒಬ್ಬ ನಾಯಕ, ಹತ್ತುಮಂದಿ ಕುದುರೇಯೇರಿ ದನಗಳನ್ನು ಕಾಯುವ ಯುವ ಗೌಳಿಗರಾದ ಕೌ ಬಾಯ್ ಗಳು, ಒಬ್ಬ ಅಡುಗೆಯವನು, ಕುದುರೆಗಳನ್ನು ಸಾಕುವವನೊಬ್ಬ, ತಮ್ಮ ದನಗಳೊಂದಿಗೆ ಇಲ್ಲಿ ಬೀಡು ಬಿಡುತ್ತಿದ್ದರು.
ಈಗ ಡಾಲಸ್ ಹಾಗೂ ಫ್ರಿಸ್ಕೋ ಒಂದು ವಿಸ್ತಾರವಾದ ಮೇಲ್ವರ್ಗದ ಜನನೆಲೆಯಾಗಿದೆ. ಎಲ್ಲ ವಾಣಿಜ್ಯ ಕೇಂದ್ರಗಳು ಈಗ ಅಲ್ಲಿ ನೆಲೆಯೂಡಲು ಬಂಡವಾಳ ಹೂಡಲು ರಹದಾರಿಯಾಗುತ್ತಿದೆ. ಅಲ್ಲದೆ ‘bangalore to buffolo’ ಎನ್ನುವುದು ಅಮೆರಿಕದವರ ಮನದಾಳದ ಆಶಯವೂ ಆಗಿದೆ. ಅಂದರೆ ಬೆಂಗಳೂರಿನ I.T. ಕಂಪೆನಿಗಳು ಇಲ್ಲಿಗೆ ಮತ್ತೆ ಮರಳಿ ಬರಲಿ ಎಂದು. ವಾಣಿಜ್ಯ ವ್ಯಾಪಾರಗಳು ಕಾಲಕಾಲದಲ್ಲಿ ಜಗತ್ತನ್ನು ಹೇಗೆ ಚಲನೆಯಲ್ಲಿಡುತ್ತವಲ್ಲ! ಅನ್ನಿಸಿತು.
ಇದನ್ನೆಲ್ಲ ಅಮೇರಿಕಾದಲ್ಲಿ ನೋಡುವಾಗ ನಮ್ಮೂರಿನ ಒಂದೆರಡು ಹಳೆ ನೆನಪು ಬಂದಿತೆಂದರೆ ಅತಿಶಯೋಕ್ತಿಯೇನಲ್ಲ.
೧
ನಮ್ಮ ಬೆಂಗಳೂರಿನ ಒಬ್ಬ ಹಿರಿಯ ಸ್ನೇಹಿತರು ಹೆಣ್ಣುಮಕ್ಕಳನ್ನು ಉತ್ತಮವಾಗಿ ವಿಧ್ಯಾಭ್ಯಾಸ ಮಾಡಿಸಿದ್ದರು. ಅವರ ಮಗಳು ಒಬ್ಬ ಕ್ರಿಶ್ಚಿಯನ್ ಹುಡುಗನನ್ನು ಒಪ್ಪಿಕೊಂಡು ಮದುವೆ ಗೊತ್ತಾಯಿತು. ಆಗ ಅವರು ಗೋಡೆ ಮೇಲಿನ ಒಂದು ಫೋಟೋ ನೋಡಿ ಹೇಳಿದ್ದು ಅಥವಾ ಅವರ ಮನಸನ್ನು ಅವರೇ ಸಮಾಧಾನ ಪಡಿಸಿಕೊಂಡಿದ್ದು ಹೀಗೆ;
‘ನೋಡಿ, ನಾವು ಕುರುಬಗೌಡರು. ನಮ್ಮ ಏಸುಕ್ರಿಸ್ತನೂ ಅಗೊಳ್ಳಿ ಅಲ್ಲಿ… ನೋಡಿ ಆ ಫೋಟೋನ. ಕುರಿ ಕಾಯ್ತಾವನೆ. ಕುರಿ ರೊಪ್ಪದಲ್ಲೇ ಹುಟ್ಟಿದ ಅಂದಮೇಲೆ ಅವನೂ ಕುರುಬನೇ ಅಲ್ಲವಾ….’ ಒಬ್ಬ ತಂದೆಯ ಒಳಗನ್ನು ಬಗೆದ ಮಾತು ಇಡೀ ಮನುಕುಲದ ಪ್ರಾಣಿ ಜೊತೆಗಿನ ಸಂಬಂಧವನ್ನೂ ಹಾಗೇ ಪಶು ಸಂಗೋಪನೆಯ ಆದಿ ಪುರಾಣದ ಕಾಲವನ್ನೂ ಹಾಗೆಯೇ ಜನಜೀವನದ ಜೊತೆಗೆ ಇಂದಿಗೂ ಸಲ್ಲುವ ಕುರಿ ದನ ಕಾಯುವ ಹಾಗೂ ವ್ಯಾಪಾರದ ದೂರದೃಷ್ಟಿಯನ್ನು ಕಟ್ಟಿಕೊಟ್ಟಂತೆ ಕಾಣಿಸಿತು.
ಕುರಿ ಕಾಯುವ ಕೆಲಸವೆಂದರೆ ಅಂದಿನಿಂದ ಇಂದಿನವರೆಗೂ ಜನಜೀವನದ ಅವಿಭಾಜ್ಯ ಅಂಗವೇ ಆಗಿದೆಯೆಂಬುದು ಹಗುರವಲ್ಲ. ನಮ್ಮನ್ನು ಕಾಯುವನು ಮೇಲೊಬ್ಬನಿದ್ದಾನಲ್ಲ!
೨
ಒಂದು ದಿನ ಮೈಸೂರಿನ ‘ಕಾವಾ’ ಚಿತ್ರಕಲಾ ಕಾಲೇಜಿಗೆ ಹೋಗುವ ಸಂದರ್ಭ ಬಂದಿತ್ತು. ನನಗೆ ಅಲ್ಲೇ ಮರದ ನೆರಳಿನಲ್ಲಿ ತಣ್ಣಗೆ ಕೂರುವ ಮನಸ್ಸಾಯಿತು. ಹೋಗಿ ಕೂತೆ. ಹತ್ತಾರು ಕುರಿಗಳು ಮೇಯುತ್ತಿದ್ದವು. ಕುರಿ ಕಾಯುತ್ತಿದ್ದವರು ಅರವತ್ತು ಮೀರಿದವರಾಗಿದ್ದರು. ಅಲ್ಲೇ ಮರದ ಕಟ್ಟೆಯ ಮೇಲೆ ಕುಳಿತು ಕುರಿಗಳನ್ನು ಕಾಲೇಜಿನ ಕಡೆ ಸುಳಿಯದಂತೆ ಅಟ್ಟಿಕೊಳ್ಳುತ್ತ ವಾಚ್ ಮನ್ ಜೊತೆ ಹರಟುತ್ತಿದ್ದರು. ಪುಟಪುಟನೆ ಮೇಯುತ್ತ ಇತ್ತ ಇತ್ತ ಬರುತ್ತಿದ್ದ ಒಂದು ಕುರಿಗೆ ‘ಅತ್ಲಾಗ್ ನಡಿ ಅಂದ್ರೆ ಇತ್ತಗೆ ಮುಖ ತಿರುಕ್ಕೊಂಡು ಮೇಯ್ಕ ಬತ್ತೀಯ… ತಡಿ ನಿನ್ನ, ಮುಂದ್ಲ ತಿಂಗಳು ಕೂದು ಹಾಕ್ತಿನಿ. ನಿನ್ನ ತಡಿಯಕ್ಕೆ ಆಗವಲ್ದು’ ಅಂದ್ರು.
ನಾನು ನಗ್ತಾ ಕೇಳ್ದೆ. ‘ಏನು? ಮನೇಲಿ ದೇವ್ರ ಹಬ್ಬನಾ?’
‘ಇಲ್ಲಕವ್ವ, ಮಗನ ಮದ್ವೆ ಗೊತ್ತಾಗದೆ. ಬೀಗ್ಗಳು ಊಟಕ್ಕೆ ಇವೆರಡು ಮರಿ ಬಿಟ್ಟೀವ್ನಿ’ ಅಂದರು.
ಅವರ ಉಭಯಕುಶಲೋಪರಿಯಲ್ಲಿ ನನಗೆ ತಿಳಿದಿದ್ದು, ಅವರು ಅಲ್ಲೇ ಹತ್ತಿರದ ವರುಣಾ ಊರಿನವರು. ಇವರು ಯಾವುದೋ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದ್ದರು. ಪಿಂಚಣಿ ೧೨೦೦೦ ಬರುತ್ತಿದೆ. ಸ್ವಂತ ಮನೆಯನ್ನು ಅಲ್ಲೇ ಹತ್ತಿರದಲ್ಲೇ ಮಾಡಿಕೊಂಡಿದ್ದಾರೆ. ಇದನ್ನು ಕೇಳಿ ನಾನು ಹುಬ್ಬೇರಿಸಿದೆ.
‘ನೋಡಿ, ನಾವು ಕುರುಬಗೌಡರು. ನಮ್ಮ ಏಸುಕ್ರಿಸ್ತನೂ ಅಗೊಳ್ಳಿ ಅಲ್ಲಿ… ನೋಡಿ ಆ ಫೋಟೋನ. ಕುರಿ ಕಾಯ್ತಾವನೆ. ಕುರಿ ರೊಪ್ಪದಲ್ಲೇ ಹುಟ್ಟಿದ ಅಂದಮೇಲೆ ಅವನೂ ಕುರುಬನೇ ಅಲ್ಲವಾ….’
ಮತ್ತೆ ತಮ್ಮ ಕುಲಕಸುಬು ಮೂರು ವರ್ಷದ ಹಿಂದೆ ಅವರಿಗೆ ಅಂಟಿಕೊಂಡದ್ದನ್ನ ಅವರು ನನ್ನೊಡನೆ ಹಂಚಿಕೊಂಡರು. ‘ನನಗೆ ಇಬ್ರು ಗಂಡು ಮಕ್ಕಳು. ಮೊದಲನೇ ಮಗನ ಮದುವೇ ಟೈಮ್ನಾಗೆ ರಿಟೈರ್ಡ್ ಆಗಿತ್ತು. ಬಿಡುವಾಗಿದ್ನಲ್ಲ! ಎರಡು ಮರಿ ಸಾಕ್ಬಿಡನ ಅಂತ ತಂದೆ. ಆಮೇಲೆ ಹಳೆ ವಾಸ್ನೆ ಹೋಗ್ದೆನೆ ಹೋಯ್ತು. ಈಗ ಹನ್ನೆರಡು ಆಗವೆ. ವರ್ಷಕ್ಕೆರಡು ಕಿತ ಮರಿ ಹಾಕತವಲ್ಲ. ಪ್ರತಿ ವರ್ಷಲೂ ಒಂದಾರು ಮಾರ್ಬುಡ್ತಿನಿ. ಕೈಗೆ ಲಕ್ಷಕ್ಕೂ ಹೆಚ್ಚುಗೆ ಕಾಸು ಕೈಗೆ ಬತ್ತದೆ ಅನ್ನಿ. ಮನ್ಲಿ ಕುಂತ್ರೆ ಮೈ ನೋವು. ಬೆಳಿಗ್ಗೆ ನಾಷ್ಟಾ ಮಾಡ್ಕಂಡು ಹನ್ನೊಂದು ಗಂಟೆಗೆ ಬುತ್ತಿ ತಗಬಂದ್ರೆ ಸಂಜೆ ಮಕೆ ಮನಿಗೋಗದು. ಮನೆ ಪಕ್ಕದಾಗೆ ವಸಿ ಜಾಗ ಅದೆ. ಕೊನೆ ಮನೆ ನಮ್ದು. ತಂತಿ ಬುಡ್ಸಿದ್ದೀನಿ. ಹೋಗಿ ಕೂಡಾಕ್ತಿನಿ.
ಈ ವರ್ಷ ನೋಡಿ… ಈ ಎಲ್ಡು ಕುರಿನ ಕೂದಾಕ್ತೀನಿ. ನೆಂಟ್ರು ಮಕ್ಳು ತಿನ್ನಕನ್ಲಿ. ದೊಡ್ಡೋನಿಗೆ ಬೀಗ್ಗಳು ಮಾಡದಂಗೆ ಚಿಕ್ಕ ಮಗಂದೂ ಮಾಡ್ಬೇಕಲ್ಲ….. ದೊಡ್ಡ ಮಗ ಇಂಜಿಣಿಯರ್ರು. ಸೊಸೆನೂ ಇಂಜಿನಿಯರ್ರು. ಮೊಮ್ಮಗ ಅದೆ. ಬ್ಯಾರೆ ಊರಲ್ಲವ್ರೆ. ಚಿಕ್ಕ ಮಗಂದುವೆ ಮದ್ವೆ ಗೊತ್ತಾಗದೆ. ಮನ್ಲಿದ್ರೆ ಹೆಂಡ್ತಿ ಅವ್ರ ಮನೆಲಿ ಅದು ಚೆಂದಾಗದೆ, ಇದು ಚೆಂದಾಗದೆ ಅಂತ ಕಣಿ ಹಾಡ್ತಾಳಾ ಧಾರಾವಾಹಿ ನೋಡ್ಕಂದು? ನಾನು ನನ್ ಪಾಡಿಗೆ ಇತ್ತಮಕೆ ಬಂದ್ರೆ ಸಂಜಿಗೆ ಹೋಗದು. ಅವ್ಳುಗೂ ಆರಾಮು. ನನಗೂ ಆರಾಮು’
ಮಕ್ಳು ಈ ಸಿಟೀಲಿ ಹೀಗೆ ಕುರಿ ಸಾಕಿದ್ರೆ ಇಷ್ಟಪಡ್ತಾರಾ? ಅಂದ್ರೆ ….
“ಅಯ್ಯೋ ಬನ್ನಿ ಅವ್ರಿಗೆ ಚಿಕ್ಕಾಸೂ ಖ್ಹರ್ಚಿಲ್ಲ. ಅವ್ರ ದುಡ್ಡು ನಾ ಕೇಳದಿಲ್ಲ. ಮನೇ ಎಲ್ಲ ನಾನೇ ನೋಡ್ಕತೀನಿ. ಮೊಮ್ಮಕ್ಳ ಹೆಸ್ರಿಗೆ ವರುಷ ವರುಷಕ್ಕೂ ಬ್ಯಾಂಕಿಗೆ ಕಾಸು ಮಡಗಿದ್ರೆ ಬ್ಯಾಡ ಅಂದಾರೇಳಿ” ಅವ್ರು ಮಾತನ್ನಾಡುವಾಗ ಕುರುಬನನ್ನ ಕುರಿಯದೆ ಕುರಿಗಳು ನೆಲಕ್ಕೆ ಗುಂಪಲ್ಲಿ ಮೂತಿ ಇಳಿಬಿಟ್ಟು ಕೂತಿದ್ದವು.
‘ಯಾಕೆ ಹೀಗೆ?’ ಅಂದರೆ “ಕುರಿ ಚಾಲೇ ಹಂಗೆ” ಅಂದರು.೩
ಹೊರಟು ರಸ್ತೆಗೆ ಬಂದಾಗ ಆ ಕಡೆಯಿಂದ ರಸ್ತೆ ಬದಿಯಲ್ಲಿ ಒಬ್ಬ ಹಳ್ಳಿ ಹೆಂಗಸು ಒಂದು ಆಡು ಮರಿಯನ್ನ ಸೊಪ್ಪು ತೋರಿಸುತ್ತ ಎಳೆದೊಯ್ಯುತ್ತಿದ್ದಳು. ಅದು ಕುಣುಕುಣನೆ ಎಲೆಯನ್ನು ಹರಿಯುತ್ತ ಅವಳ ಹಿಂದೆ ನೆಗೆಯುತ್ತ ಸಾಗುತಿತ್ತು. ಆದು ಇವಳನ್ನು ಸಾಕುತ್ತದೋ? ಆ ಹೆಂಗಸು ಇದನ್ನು ಸಾಕುತ್ತಿದ್ದಾಳೋ? ಪ್ರಶ್ನೆಯೊಂದು ಬಗೆ ಹರಿಯದೆ ಅವಳ ಕಂಕುಳಲ್ಲಿ ಇರುಕಿಕೊಂಡ ಸೊಪ್ಪಿನಂತೆ ಕುಳಿತಿತ್ತು. ಚಿತ್ರ ಮರೆಯಾಗಿತ್ತು. ಪ್ರಶ್ನೆ ಹಾಗೇ ಉಳಿದಿತ್ತು. ದೇಶ ಕಾಲಗಳೆಲ್ಲ ನನ್ನ ಮುಂದೆ ಒಂದೇ ಆಗಿದ್ದವು.
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ ‘ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.