“ರಾತ್ರಿ ನೋಡಿದ ಮೆರವಣಿಗೆಯ ಚಂದ ಇನ್ನೂ ಮನದಲ್ಲಿ ಹಾಗೇ ಉಳಿದು ಹೋಗಿದೆ. ಆ ಪಂಜುಗಳ ವಿನ್ಯಾಸದ ಚಂದ, ರಸ್ತೆಯ ಗೂಡು ದೀಪಗಳ ಸಾಲು, ಪೆಟ್ರೋಮ್ಯಾಕ್ಸ್ ದೀಪದ ನೆರಳು ಬೆಳಕಲ್ಲಿ…. ರಸ್ತೆ ದೀಪಾಲಂಕಾರಗಳಲ್ಲಿ ಮೆರವಣಿಗೆಯ ಗಾಂಭೀರ್ಯದ ನಿಧಾನ ನಡಿಗೆ, ಪ್ರಾಣಿಗಳ ಶಿಸ್ತು, ಅಂಬಾರಿಯ ಎತ್ತರ, ಚಿತ್ತಾರದಿಂದ ಅಲಂಕಾರಗೊಂಡ ಸಾಕು ಪ್ರಾಣಿಗಳ ನಡಿಗೆ ಇವತ್ತಿಗೂ ಕನಸಿನ ಚಿತ್ರಗಳಾಗಿ ಹಾಗೆ ಉಳಿದು ಹೋಗಿವೆ. ಇಂದಿನ ದಸರಾ ಅಂದಿನ ಪಳೆಯುಳಿಕೆಯಂತಿದೆ” ಎಂದರು
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಐದನೆಯ ಕಂತು.
ದಸರಾ ಮೆರವಣಿಗೆಯಲ್ಲಿ ಗಾಡಿಗಳ ಮೇಲೆ ಹತ್ತಿ ಕುಳಿತು ಘನಗಂಭೀರವಾಗಿ ನುಡಿಸುವ ವಾದ್ಯ ಮೇಳಗಳನ್ನು ಹೊತ್ತ ಆನೆ ಸಾರೋಟು, ಕುದುರೆ ಸಾರೋಟುಗಳು ಮುಂದೆ ಹೋದರೆ ಹಿಂದೆ ಹಿಂದೆ ಉದ್ದ ಸಾಲುಗಳಲ್ಲಿ, ಬರಿಗಾಲುಗಳಲ್ಲಿ ಮರಗಾಲುಗಳಲ್ಲಿ ತಮ್ಮ ಚಮತ್ಕಾರಗಳನ್ನು, ಕೊಂಬು ಕಹಳೆಗಳನ್ನು, ತಮಟೆ ವಾದ್ಯ ನಗಾರಿಗಳನ್ನು ಹೊತ್ತು, ಬಿಸಿಲಲ್ಲಿ ಕಾದು ನಿಂತು, ತೆನೆಕಟ್ಟಿದ ಕಾಳುಗಳಂತೆ ಅಂಬಾರಿಯ ಹಿಂದೆ ನಾವೂ ಇದ್ದೇವೆ ಎಂದು ದಿನವಿಡೀ ದಣಿವೇ ಕಾಣದೆ ಹುಚ್ಚು ಹಿಡಿದವರಂತೆ ಕುಣಿಕುಣಿವ ಹೆಜ್ಜೆ ಹಾಕುತ್ತ ಸೋಲಿಲ್ಲದ ಕಲಾವಿದರ ಜೀವಗಳ ನಡೆಯೇ ಬೆರಗನ್ನು ಹುಟ್ಟಿಸುತ್ತದೆ.
ದಸರಾ ಹಬ್ಬ ಬಂತು ಎಂದು ಖುಷಿಪಟ್ಟು ಬೀದಿಯಲ್ಲಿ ನಿಂತು ನಾಕು ಕಾಸು ಮಾಡಿಕೊಳ್ಳುತ್ತಿದ್ದವರು ಇವರು. ಇವರ ದೇವರ ವೇಷಗಳು, ಕಲಾವಿದರ ಬಣ್ಣದ ವಸ್ತ್ರಗಳು, ಆಂಗಿಕ ಅಭಿನಯ ಅಪ್ಪಟ ಚಿನ್ನ ಹಾಗೂ ಬಿಸಿಲು ಮಳೆಗೆ ಇಂಗಿ ಹೋಗದ ಉತ್ಸಾಹ ಹಾಗೂ ಶಕ್ತಿಯೇ ಅವರ ಹೆಗ್ಗಳಿಕೆ. ನಿಜವಾಗಿ ನೆಲಗುದ್ದಿ ನೀರು ತರಬಲ್ಲ ಜನರಿವರು. ಕುಳಿತಿದ್ದರೂ ಬೆವೆತು ನೀರಾಗುತ್ತಿರುವ ನೋಡುಗರು ಹುಬ್ಬೇರಿಸುವಂತೆ ಅವರ ಪ್ರದರ್ಶನಗಳಿರುತ್ತವೆ.
ಚಿಮ್ಮುವ ತನ್ಮಯತೆ ಹಾಗೂ ದಣಿವಾಗದ ಮೈಯ್ಯೇ ನಮ್ಮ ಜಾನಪದ ಕಲಾವಿದರ ಆಸ್ತಿ. ಯಾವುದೇ ತಾಲೀಮಿಲ್ಲದೆ, ಪಳಗಿಹೋದ ಕಂಠಸಿರಿ. ಲಯಕ್ಕೆ ಜೊತೆಯಾಗುವ ಹೆಜ್ಜೆ, ಸರಳ ಊಟ, ಬಿಸಿಲಿಗೆ ಒಡ್ಡಿದ ಮೈ, ಅನಾವಶ್ಯಕ ಯೋಚನೆಯಿಲ್ಲದ, ಅಂದಿನ ದುಡಿಮೆ ಅಂದಿಗೇ ಮುಗಿದು ಹಣದ ಹೊರೆಗಳಿಲ್ಲದ ಇವರು ಹಕ್ಕಿಯಷ್ಟು ಸರಳವಾಗಿ ರೆಕ್ಕೆ ಬಿಚ್ಚಬಲ್ಲರು. ಮೈ ಕೊಡವಿ ಆಕಾಶದಲ್ಲಿ ಪಲ್ಟಿ ಹೊಡೆಯಬಲ್ಲರು. ಪ್ರಾಣಿ ಸಹಜ ಗುಣದ ಒರಟುತನದಲ್ಲಿ ಮನುಷ್ಯನ ಸೂಕ್ಷ್ಮ ಎಳೆಗಳನ್ನು ತಮ್ಮ ಕಲೆಯಲ್ಲಿ ಹಿಡಿದು ತರಬಲ್ಲರು. ಕಲ್ಲು ನೆಲದಲ್ಲಿ ಬೇರಿಟ್ಟು ಅರಳುವ ಹಸಿರು ಮರದ ಹಾಗೆ…ಇದ್ದಲ್ಲೇ ಮನೆ ಹೂಡುವ ಚಮತ್ಕಾರ ಇವರ ಕೈಚಳಕದಲ್ಲಿರುತ್ತದೆ.
ಇಂಥವರು ಈಗ ನಾಡಿನಾದ್ಯಂತ ಹೆಸರಾದ ದಸರಾ ನಾಡ ಹಬ್ಬದ ಮುಖ್ಯ ವೇದಿಕೆಯಲ್ಲಿ ಕೊಂಬು ಕಹಳೆ ನಗಾರಿಗಳನ್ನು ನುಡಿಸಿದೊಡನೆ ಉಳಿದೆಲ್ಲ ಕಲೆಗಳು ಮಂಕಾದಂತೆ ಕಂಡವು. ತನ್ನ ಜನರು ವೇದಿಕೆಯ ಮೇಲೇರಿದ್ದನ್ನು ಕಂಡು, ತಾಯಿ ಚಾಮುಂಡಿಯ ಮನಕ್ಕೆ ಇಂದು ಸಂಪ್ರೀತಿ ಆಗಿರಬಹುದೇನೋ….
ಯಾವುದೇ ಚಮಕ್ ಗಿಮಕ್ ಇಲ್ಲದ ಕೆಲವು ಬುಡಕಟ್ಟು ಜನಾಂಗದ ಕುಣಿತಗಳನ್ನು ನೋಡಿದಾಗ ಅವರ ಹೆಜ್ಜೆಗಳಿಗೆ ಒಂದು ಕುಂಬಾರನ ಕೈ ಚಳಕದಷ್ಟು ನಯಗಾರಿಕೆ, ತಿರುಗುವ ತಿಗರಿ ಬುಗುರಿಯಷ್ಟು ತನ್ಮಯತೆ ಕಂಡಂತಾಯಿತು. ಲಯ ಸ್ವರಗಳು ತೀರಾ ಸಹಜವಾಗಿ ಅವರ ಕಲೆಯಲ್ಲಿ ಕೂಡಿರುತ್ತವೆ. ಅವರ ವೇಷ ಭೂಷಣಗಳು ಹಸಿರು ಮಡಿಲಲ್ಲಿ ಅರಳಿದ ಹೂವಿನಂತೆ ವಿಶೇಷವಾಗಿದ್ದವು.
ಅವರದ್ದು ಸಮೂಹದ ಕುಣಿತವೇ ಹೊರತು ಅವೆಂದಿಗೂ ಒಬ್ಬನ ಮೆರವಣಿಗೆ ಆಗಿರುವುದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಗುಂಪಿನಲ್ಲಿ ನೋವು ನಲಿವುಗಳನ್ನು ಹಂಚಿಕೊಳ್ಳುವ ಕಲೆಯೇ ಅವರ ಒಳತೋಟಿಗಳನ್ನು ನಿಯಂತ್ರಿಸುತ್ತಿರುತ್ತದೆ. ಅವರ ಸುಖದುಖಃಗಳನ್ನು ಹಗುರಾಗಿಸುತ್ತದೆ.
ಇಂದು ದಸರಾ ಹಬ್ಬದಲ್ಲಿ ಈ ಕಲೆಗಳನ್ನು ನೋಡುಗರು ಸಂತಸದಿಂದ ಕುಣಿಯುತ್ತ ನೋಡಿದರು ಅನ್ನುವುದು ಒಂದಾದರೆ ಜನಪದ ಕಲಾವಿದರಿಗೂ ತಮ್ಮೊಳಗಿನ ಕಲೆಯೂ ದೊಡ್ಡದು ಎಂಬ ಭಾವನೆ ಮೂಡುತ್ತಿರುವುದು ಈ ಕಾಲದ ವಿಶೇಷ. ಎಲ್ಲ ಕಲೆಗಳು ಉಳಿದು ಬೆಳೆಯಲಿ.
ನಶಿಸಿ ಹೋಗುತ್ತಿರುವ ಇಂದಿನ ಹಳ್ಳಿಗಳಲ್ಲಿ ಉಳಿದಿರುವ ತಂತಮ್ಮ ದೇವರ ಸುತ್ತ, ಆ ಆ ಊರಿನ ಪರಿಸರದ ಸುತ್ತ ಜನರು ಕಟ್ಟಿಕೊಂಡ ಕಲೆಗಳು ಜನರಾಸಕ್ತಿ ಇರುವ ಕಡೆಗೆ ಬಂದು, ಹೀಗೆ ಉಳಿದು ಬೆಳೆಯಲಿ. ಕೆಲವು ಸಮೂಹದಲ್ಲಿ ಕಲೆಯೆಂಬುದು ಜಾನಪದರ ಬದುಕೂ ಕೂಡ ಆಗಿದೆ. ಇದನ್ನು ನಾವು ಮರೆಯುವಂತಿಲ್ಲ. ಭಕ್ತಿ ನೆಲೆಯ ಕಲೆ ಹಾಗೂ ಬದುಕ ನೆಲೆಯ ಕಲೆಗಳಿಗೆ ಬೇರೆ ಬೇರೆ ಆಯಾಮಗಳಿವೆ, ವ್ಯತ್ಯಾಸಗಳಿವೆ.
“ಅರಮನೆಯ ವೇದಿಕೆಯಲ್ಲಿ ಇಂದು ಇತಿಹಾಸ ಸೃಷ್ಠಿಸಿದ ಜನಪದ ಕಲಾವಿದರು”
ಮೂಲತಃ ಜನಪದದ ಪ್ರಗತಿಪರ ಕಲಾವಿದ ಹಾಗೂ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದು ಈಗ ಸಂಘಟಕಾರರಾಗಿರುವ ಪಿಚ್ಚಳ್ಳಿ ಶ್ರೀನಿವಾಸ್ ಹಂಚಿಕೊಂಡ ಮಾಹಿತಿ ಹೀಗಿದೆ.
ನೂರಾರು ವರ್ಷಗಳ ಇತಿಹಾಸದ “ಮೈಸೂರು ದಸರಾ” ದಲ್ಲಿ ನಡೆದ ಸಾಂಸ್ಕೃತಿಕ ಸಂಭ್ರಮದಲ್ಲಿ “ಜನಪದ” ಕಲೆಯು ಮುಖ್ಯ ವೇದಿಕೆಯನ್ನೇರಿತು, ನಮ್ಮ ಕಲಾವಿದರಿಗೆ ಏನಿದ್ದರೂ ಅರಮನೆ ಆಚೆ ಅಲ್ಲೆಲೊ ಬೀದಿ ಬದಿಯಲ್ಲಿ, ಬಸ್ಟ್ಯಾಂಡ್ ಮೂಲೆಯಲ್ಲಿ… ಹೀಗೆ ಅಲ್ಲಲ್ಲಿ ಹಾಡಿ, ಕುಣಿದು ಪುಡಿಗಾಸು ತಕ್ಕೊಂಡು ಹೋಗುತ್ತಿದ್ದ ಕನ್ನಡ ನಾಡಿನ ಜನಪದರಿಗೆ ಈ ಬಾರಿ “ದಸರಾ 2018” ಸಂಭ್ರಮವೋ ಸಂಭ್ರಮ.
ಚಿಮ್ಮುವ ತನ್ಮಯತೆ ಹಾಗೂ ದಣಿವಾಗದ ಮೈಯ್ಯೇ ನಮ್ಮ ಜಾನಪದ ಕಲಾವಿದರ ಆಸ್ತಿ. ಯಾವುದೇ ತಾಲೀಮಿಲ್ಲದೆ, ಪಳಗಿಹೋದ ಕಂಠಸಿರಿ. ಲಯಕ್ಕೆ ಜೊತೆಯಾಗುವ ಹೆಜ್ಜೆ, ಸರಳ ಊಟ, ಬಿಸಿಲಿಗೆ ಒಡ್ಡಿದ ಮೈ, ಅನಾವಶ್ಯಕ ಯೋಚನೆಯಿಲ್ಲದ, ಅಂದಿನ ದುಡಿಮೆ ಅಂದಿಗೇ ಮುಗಿದು ಹಣದ ಹೊರೆಗಳಿಲ್ಲದ ಇವರು ಹಕ್ಕಿಯಷ್ಟು ಸರಳವಾಗಿ ರೆಕ್ಕೆ ಬಿಚ್ಚಬಲ್ಲರು.
ಅರಮನೆ ಆವರಣದ ಮುಖ್ಯ ವೇದಿಕೆಯಲ್ಲಿ ನನಗೆ ನೆನಪಿರುವ ಹಾಗೆ 1991 ರಲ್ಲಿ ಮೊದಲು ಅನಿಸುತ್ತೆ. ಆ ಕಾರ್ಯಕ್ರಮದಲ್ಲಿ ಬನ್ನೂರು ಕೆಂಪಮ್ಮ, ಪಿ.ಕೆ.ರಾಜಶೇಖರ್, ಬಸವಲಿಂಗಯ್ಯ ಹೀರೆಮಠ ಹಾಗೂ ನಾನೂ ಜನಪದ ಗೀತೆಗಳನ್ನು ಹಾಡಿದೆವು. ಅದಾದಮೇಲೆ ಹಲವಾರು ಬಾರಿ ಅರಮನೆ ಮುಖ್ಯ ವೇದಿಕೆಯಲ್ಲಿ ಹಾಡಿದ್ದೇವೆ. ಸಿ.ಅಶ್ವಥ್ ಜತೆ ಹಾಡಿದ್ದು ಮರೆಯಲಾರದ ಒಂದು ನೆನಪು.
ಆದರೆ ಪ್ರದರ್ಶನ ಕಲೆಗಳನ್ನು ಮಾತ್ರ ಮುಖ್ಯ ವೇದಿಕೆಯಿಂದ ದೂರವೆ ಇಟ್ಟಿದ್ದರು. ಅಲ್ಲೇನಿದ್ದರೂ ಕ್ಲಾಸಿಕ್ ನವರಿಗೆ ಮೊದಲ ಆದ್ಯತೆ. ಈ ಬಾರಿ ಸಾಂಸ್ಕೃತಿಕ ಉಪಸಮಿತಿಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳಾದ ಎನ್. ಆರ್. ವಿಶುಕುಮಾರ್ “ಜನಪದ ಜಾತ್ರೆ” ಮೂಲಕ ಉದ್ಘಾಟನೆ ಮಾಡಿಸುವ ಮಾತನ್ನು ಪ್ರಸ್ತಾಪಿಸಿದಾಗ ತಾಯಿ ಚಾಮುಂಡಿ ಎಸ್ ಅಂದಿದ್ದಳು! ಸರಿ, ರಾಜ್ಯದ 28 ಜಿಲ್ಲೆ, 32 ಕಲಾ ಪ್ರಕಾರಗಳು, 472 ಕಲಾವಿದರನ್ನು ಎರಡು ದಿನ ಸಜ್ಜುಗೊಳಿಸಿ ದಸರಾ ಉಧ್ಘಾಟನೆಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉಧ್ಘಾಟನೆಯಲ್ಲಿ…. ಅದ್ಭುತ ಕಾರ್ಯಕ್ರಮವೊಂದಾಗಿ ನಡೆದ ಜಾನಪದ ಜಾತ್ರೆ, ಈ ವೇದಿಕೆಯಲ್ಲಿ ತಮ್ಮ ಜೀವಮಾನದ ಆಸೆಯೊಂದು ಈಡೇರಿತೇನೊ ಅನ್ನೊಹಾಗೆ ಹಾಡಿ, ಕುಣಿದು ಕುಪ್ಪಳಿಸಿತು.
ಜನಪ್ರಿಯತೆಯ ಧಾವಂತದ ದಸರಾ ವೇದಿಕೆಗಳು
ದಸರಾ ಹಬ್ಬದಲ್ಲಿ ಹತ್ತಾರು ವೇದಿಕೆಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನಡೆಸಲು ಭಾರತದ ಎಲ್ಲೆಡೆಯಿಂದ ಕಲಾವಿದರ ಗುಂಪು ಬರುತ್ತದೆ. ಹತ್ತಾರು ಹೊರ ರಾಜ್ಯದ ಅಂತರ್ ರಾಜ್ಯದ ಕಾರ್ಯಕ್ರಮಗಳೂ ಇಲ್ಲಿ ಜರುಗುತ್ತವೆ. ಜನಪ್ರಿಯ, ಪೌರಾಣಿಕ, ಹವ್ಯಾಸಿ ತಂಡದ ನಾಟಕಗಳೂ ವೇದಿಕೆಯನ್ನೇರುತ್ತವೆ. ಆದರೆ ಧಾವಂತ ಹಾಗೂ ಜನಪ್ರಿಯತೆಯ ದಟ್ಟ ಪ್ರಭಾವ ಇಂದು ಪ್ರಧಾನವಾಗಿ ಎದ್ದು ಕಾಣುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ.
ಇನ್ನು ಒಂಭತ್ತು ದಿನಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅರಮನೆ ವೇದಿಕೆಯಲ್ಲಿ ನೂರಾರು ಜನರ ಹಾಡು, ನೃತ್ಯಗಳಾದವು. ನೂರಾರು ಪ್ರದರ್ಶನಗಳು ಹತ್ತಾರು ಕಡೆಗಳಲ್ಲಿ ನಡೆದವು. ಸಾವಿರಾರು ಕಲಾವಿದರು ಭಾಗವಹಿಸಿ ಹೋದರು. ಹತ್ತಾರು ವೇದಿಕೆಗಳಲ್ಲಿ ಕಾವ್ಯ ವಾಚನ, ಸನ್ಮಾನ, ಸಮಾರಂಭಗಳು ನಡೆದವು. ಇವರೆಲ್ಲ ತಮ್ಮ ಹೆಸರಿನ ಮುಂದೆ ದಸರಾ ಹಬ್ಬದಲ್ಲಿ ಭಾಗವಹಿಸಿದ ಹೆಮ್ಮೆಯನ್ನು ಹೊತ್ತು ಹೋದರು. ಅದನ್ನು ನೋಡಿದ ಜನ ಮೆಚ್ಚಿ ಅಹುದಹುದು ಎಂಬ ಉದ್ಘಾರ, ಶಿಳ್ಳೆಯೊಂದಿಗೆ ಭಾಗವಹಿಸುತ್ತಿದ್ದುದು, ಯುವ ದಸರಾದ ಯುವಪಡೆ ಹಾಡು ಕುಣಿತಕ್ಕೆ ಹುಚ್ಚೆದ್ದು ದೊಂಬಿಯೆಬ್ಬಿಸುತ್ತಿದ್ದುದನ್ನು ನೋಡಿ ಹಿರಿಯರು ತಲೆ ಚಚ್ಚಿಕೊಂಡು ತಮ್ಮ ಕಾಲದ ಆರ್ಭಟವಿಲ್ಲದ ಕಾರ್ಯಕ್ರಮಗಳನ್ನು ನೆನೆಯುತ್ತಿದ್ದುದು ನಿಜವಾಗಿತ್ತು.
ನಾವು ಮೂವತ್ತೈದು ವರುಷಗಳಿಂದ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಹಿಂದೆ, ಅರಮನೆಯ ಆನೆ ದ್ವಾರದ ಮೇಲಿನ ದರ್ಬಾರ ಹಾಲಿನ ಇಕ್ಕೆಲದಲ್ಲಿ ಸಂಗೀತ ವೇದಿಕೆಯಿರುತಿತ್ತು. ಒಂದೆಡೆ ಸಂಗೀತಗಾರರು, ಮೇಳದವರು ಕೂತು ಹಾಡುತ್ತಿದ್ದರೆ ಇನ್ನೊಂದೆಡೆ ಅವರ ಎದುರು ಆಸಕ್ತರು ತನ್ಮಯರಾಗಿ ಕೂತು ಗಂಟೆಗಟ್ಟಳೆ ಕೇಳುತ್ತಿದ್ದರು. ವಾದ್ಯಗಳ ಅಬ್ಬರವಿಲ್ಲದ ವರುಷಾನುಗಟ್ಟಳೆ ಸಾವಧಾನವಾಗಿ ನುರಿತ ತಾಲೀಮಿನ ಎಳೆಎಳೆಯನ್ನು ಹಿಡಿದು ತಂದು, ನೆರೆದ ಜನರ ಮುಂದೆ ಕಲಾವಿದರು ತಮ್ಮನ್ನು ಹಗುರವಾಗಿ ಬಿಡಿಸಿಕೊಳ್ಳುತ್ತಿದ್ದ ಕಾಲವದು. ಹೊರಗೆ ಅರಮನೆಯ ಮುಂದೆ ಕೂಡ ಜನಸ್ತೋಮ ಸಾವಧಾನವಾಗಿ ಕುಳಿತು ನಿಂತು ಕೇಳುತ್ತಿದ್ದ ಕಾಲವೂ ಆಗಿತ್ತದು.
ನಾನು ಇಂಥ ವೇದಿಕೆಯಲ್ಲಿ ಮೊದಲನೇ ಬಾರಿ ಕೇಳಿದ್ದು ಮುಗ್ಧ ನಗೆಯ ಬಿಸ್ಮಿಲ್ಲಾ ಖಾನರ ಶಹನಾಯಿ. ಆ ಸಣ್ಣ ವಯಸ್ಸಿನಲ್ಲೂ, ಸಂಗೀತ ತಿಳಿದಿರದ ನನ್ನೊಳಗೆ ಅದರ ಏರಿಳಿತಗಳು ಹುಚ್ಚು ಹತ್ತಿಸಿದ್ದವು. ಅಲ್ಲಿಂದ ಸಂಗೀತ ಕೇಳುವ ಹುಚ್ಚು…. ಬಾಲಮುರುಳಿ ಕೃಷ್ಣ, ದೊಡ್ಡ ಕುಂಕುಮವನ್ನಿಡುತ್ತಿದ್ದ ಕನ್ನಕುಡಿ ವೈದ್ಯನಾಥನ್, ಗಂಗೂಬಾಯಿ ಹಾನಗಲ್, ಜೇಸುದಾಸ್, ಪಂಡಿತ ವೆಂಕಟೇಶ್ ಕುಮಾರ್, ಪಂಡಿತ್ ರಾಜೀವ್ ತಾರಾನಾಥ್, ಪಂಡಿತ್ ರವಿಶಂಕರ್, ಹರಿಪ್ರಸಾದ ಚೌರಾಸಿಯಾ…. ಹೀಗೆ ಹಲವಾರು ಜೀವಗಳು ಮಾಗಿ ಬಾಗಿ ಮುದುಕರಾಗುವವರೆಗೂ ಅವರ ಸಂಗೀತ ಕಛೇರಿಗಳಿಗೆ ಮತ್ತೆ ಮತ್ತೆ ಹೋಗಿ ಮೆಚ್ಚಿಕೊಳ್ಳುತ್ತ, ಇತ್ತೀಚಿನ ಟಿ. ಕೃಷ್ಣರಂಥರವರ ಪ್ರಗತಿಪರ ಕಚೇರಿಗಳನ್ನು ಬಿಡದೆ ಹೋಗಿ ನೋಡುವತನಕ ಹಲವಾರು ದಿಗ್ಗಜರ ಸಂಗೀತವನ್ನು ಕರಾರುವಕ್ಕಾಗಿ ಗುರುತಿಸುವ ತನಕ ಈ ವೇದಿಕೆ ನನ್ನನ್ನು ಮಾಗಿಸಿದೆ.
ಕ್ರಮೇಣ ದರ್ಬಾರ್ ಹಾಲಿನಿಂದ ನಿಧಾನವಾಗಿ ಆನೆ ಬಾಗಿಲಿಗೆ ಇಳಿದಿದ್ದ ಅರಮನೆ ವೇದಿಕೆ ಅದರ ಇಕ್ಕೆಲದಲ್ಲಿ ಕೂರುತ್ತಿದ್ದ ಜನರನ್ನು ಎಬ್ಬಿಸಿ ನಿಧಾನಕ್ಕೆ ಅರಮನೆ ಮುಂದಕ್ಕೆ ದಾಟಿಸಿತು. ಈ ಸಲವಂತೂ ಪೂರಾ ಐವತ್ತು ಅಡಿ ಅಂತರದಲ್ಲಿ ಅರಮನೆಯ ಒಂದು ಪಕ್ಕಕ್ಕೆ ಬಂದು ಕುಳಿತಿರುವ ವೇದಿಕೆ ಜನಸಾಮಾನ್ಯರೆಡೆಗೆ ನಡೆದು ಬಂದಂತೆ ಕಾಣಿಸುತಿತ್ತು. ಆದರೆ, ಕಾರ್ಯಕ್ರಮಗಳು ಪೂರ್ಣ ಪ್ರಮಾಣವಾಗಿರದೆ ಇತ್ತೀಚೆಗೆ ಚಿತ್ರಾನ್ನದ ಥರ ಹುಡಿಯೇಳುತ್ತಿವೆ. ಇದರಿಂದ ಬಹಳಷ್ಟು ಜನಕ್ಕೆ ಅವಕಾಶ ಸಿಗುವುದೇನೋ ಹೌದು. ಆದರೆ… ಕಲಾವಿದರು ತಾಲೀಮಿಗೆ ಶ್ರುತಿ ಹೊಂದಿಸಿಕೊಳ್ಳುವ ವೇಳೆಗೆ ಸಾಕು ನಿಲ್ಲಿಸಿ ಎಂದು ನಿರ್ವಾಹಕರ ಬೆರಳುಗಳು ಅವರಿಗೆ ಕೈ ತೋರುತ್ತವೆ. ಅದೇ ಆತುರದಲ್ಲಿ ದಸರಾ ಹಬ್ಬದ ಹೆಗ್ಗಳಿಕೆಯನ್ನು ಹೊರಲು ಮಾಗದಂಥ ಕಾರ್ಯಕ್ರಮಗಳಲ್ಲಿ ಟ್ರಾಕ್ ಮೇಲೆ ಹಾಡಿ ಹೋಗುವ ಹಾಡುಗಳನ್ನು ಸಭಿಕರು ಕೇಳುವಂತಾಯಿತು. ಎಲ್ಲರೂ ಮೂಗು ತೂರಿಸಿ ಇಂದು ಅಧ್ವಾನವಾಗುತ್ತಿರುವ ವೇದಿಕೆಗಳು ಶ್ರದ್ಧೆ ಶಿಸ್ತಿನ ಕಡೆ ಗಮನಹರಿಸುವಂತಾಗಲಿ. ಬದಲಾವಣೆಯ ನಡೆ ಇದ್ದದ್ದೇ…
ಇರಲಿ, ಅದು ಆತುರವಿಲ್ಲದ ತಾಳುವ ಬಾಳುವ ಕಡೆಗಿದ್ದರೆ ಚಂದವಲ್ಲವೇ….. ?
ಸಾವಧಾನದ ನಡಿಗೆಯ ಅಂದಿನ ದಸರಾ
ದಸರಾ ಹಬ್ಬ ಪಲ್ಲಟಗೊಂಡು ವಿಜಯನಗರ ಅರಸರಿಂದ ಶ್ರೀರಂಗ ಪಟ್ಟಣಕ್ಕೆ ತಲುಪಿ ಅಲ್ಲಿಂದ ಮೈಸೂರರಸರ ಅರಮನೆ ತಲುಪಿ, ಈಗ ರಾಜರ ಕಡೆಯಿಂದ ಪ್ರಜಾಪ್ರಭುತ್ವದ ಕಾಲಕ್ಕೆ ಜನಸಾಮಾನ್ಯರ ಪಥಚಲನಕ್ಕೆ ತನ್ನ ಪ್ರಯಾಣ ಬೆಳೆಸಿದೆಯೆಂದು ಇತಿಹಾಸ ಹೇಳುತ್ತದೆ. ಇತಿಹಾಸ ಏನೇ ಹೇಳಲಿ…. ಜನಮಾನಸದಲ್ಲೊಂದು ನೆನಪಿನ ಬುತ್ತಿ ಕಂಡ ದಾಖಲೆಯೊಂದಿರುತ್ತದೆ.
ವಿಜಯಲಕ್ಷ್ಮಿಯ ಆಯುಧ ಪೂಜಾ, ಸರಸ್ವತಿಯ ವಿದ್ಯಾ ಪೂಜಾ, ದುರ್ಗಾ ಪೂಜಾ ಹೀಗೆ ಇಂದಿಗೂ ನವರಾತ್ರಿಯ ಪೂಜೆಗಳು, ಗೊಂಬೆ ಕೂರಿಸುವ ಪೂಜೆಗಳು, ಹೀಗೆ, ನಿತ್ಯ ಸಡಗರ ಮಾಡುವ ಮೈಸೂರಿನ ಜನ ಸಾಂಪ್ರದಾಯಿಕ ಅಡುಗೆ, ಅಲಂಕಾರ, ಜನರಾತಿಥ್ಯ, ತಾರಿಸಿ ರಂಗೋಲಿ ಹಾಕಿದ, ತಳಿರು ತೋರಣಗಳಿಂದ ಅಂಗಳ ಬೀದಿಗಳನ್ನು ಅಲಂಕರಿಸಿ, ದಸರಾ ತೇರನ್ನು ಬಂದವರೊಂದಿಗೆ ಸಂಭ್ರಮದಿಂದ ಎಳೆಯುತ್ತಿದ್ದರು.
ಬೆಟ್ಟದ ಚಾಮುಂಡಿಯ ಪೂಜೆಯಿಂದ ಶುರುವಾದ ದಸರಾ ಹಬ್ಬ ತಾಯಿಯ ತೇರು, ತೆಪ್ಪೋತ್ಸವದೊಂದಿಗೆ ಕೊನೆಗೊಳ್ಳುತ್ತದೆ. ಅದರ ನಡುವೆ ಬೆಟ್ಟದ ಕೆಳಗೆ ಮೈಸೂರಿನ ಜನತೆ ನೂರಾರು ವರುಷದಿಂದ ಮೈಸೂರಿಗೆ ಬಂದ ಜನರನ್ನು ಸಲುಹುತ್ತ, ಸಂಭ್ರಮಿಸುತ್ತಾರೆ. ಅಂದಿನಿಂದ ಇಂದಿನವರೆಗೂ ಮೈಸೂರು ನಯ ನಾಜೂಕಿನ ಊರೆಂದು ಹೆಸರಾಗಿದೆ.
ಹೀಗೆ ಹಲವಾರು ಜೀವಗಳು ಮಾಗಿ ಬಾಗಿ ಮುದುಕರಾಗುವವರೆಗೂ ಅವರ ಸಂಗೀತ ಕಛೇರಿಗಳಿಗೆ ಮತ್ತೆ ಮತ್ತೆ ಹೋಗಿ ಮೆಚ್ಚಿಕೊಳ್ಳುತ್ತ, ಇತ್ತೀಚಿನ ಟಿ. ಕೃಷ್ಣರಂಥರವರ ಪ್ರಗತಿಪರ ಕಚೇರಿಗಳನ್ನು ಬಿಡದೆ ಹೋಗಿ ನೋಡುವತನಕ ಹಲವಾರು ದಿಗ್ಗಜರ ಸಂಗೀತವನ್ನು ಕರಾರುವಕ್ಕಾಗಿ ಗುರುತಿಸುವ ತನಕ ಈ ವೇದಿಕೆ ನನ್ನನ್ನು ಮಾಗಿಸಿದೆ.
ಅಂದು ಕೂಡ ಸುತ್ತ ಮುತ್ತ ಹಳ್ಳಿಯಿಂದ ಜನರು ಕಾಲ್ನಡಿಗೆಯಲ್ಲಿ, ಅಲಂಕಾರದ ಎತ್ತಿನ ಬಂಡಿಗಳಲ್ಲಿ, ಕಳೆಕಳೆಯಾಗಿ ಬಂದು ಅರಮನೆಯಲಂಕಾರಗಳನ್ನು, ಮೈಸೂರಿನ ಆನೆ ಲಾಯಗಳನ್ನು, ಕುದುರೆ ಲಾಯಗಳನ್ನು ಕಂಡು ದಸರೆಯ ಪೂಜೆಯ ವೇಳೆಗೆ ಅಲಂಕಾರವಾಗುತ್ತಿದ್ದ ಅರಮನೆಯನ್ನು ಅವರ ಆಯುಧಗಳನ್ನು, ಬಂಡಿ ಭಾಜಂತ್ರಿಗಳನ್ನು, ವಸ್ತ್ರಾಭರಣಗಳನ್ನು ಕಣ್ತುಂಬಿಕೊಂಡು, ರಾಜಬೀದಿಗಳನ್ನು ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುತ್ತ ಆನೆ ಬಂಡಿ, ಕುದುರೆ ಬಂಡಿ, ಪಟ್ಟದ ದನಗಳನ್ನು, ಅರಮನೆಯ ಪರಿಚಾರಿಕೆಯರ ನಡುವೆ ಕಂಡೂ ಕಾಣದ ಹಾಗೇ ನಡೆದು ಹೋಗುವ ರಾಜ ರಾಣಿಯರನ್ನು ತಮ್ಮ ಮನದುಂಬಿಸಿಕೊಳ್ಳುತ್ತಿದ್ದರು.
ಇನ್ನು ಅಂದಿನ ದಸರಾ ನೋಡಿದ ನಮ್ಮನೆಯ ಹಿರಿಯರೊಬ್ಬರ ಮಾತು ಹೀಗಿದೆ.
“ಜಯಚಾಮರಾಜೇಂದ್ರರು ಆಗ ಅಂಬಾರಿಯಲ್ಲಿ ತಮ್ಮ ಮಗನೊಡನೆ ಕೂರುತ್ತಿದ್ದರು. ಇಡೀ ಅರಮನೆಯಲ್ಲಿ ಸಮವಸ್ತ್ರದ ಪೋಷಾಕಿಲ್ಲದ ಒಬ್ಬರೂ ಕಂಡು ಬರುತ್ತಿರಲಿಲ್ಲ. ಅರಮನೆಯಲ್ಲಿ ಎಲ್ಲ ಕಾರ್ಯಗಳು ಶಾಸ್ತ್ರಬದ್ಧವಾಗಿ ನಡೆದರೂ ಶಿಸ್ತು ಅತಿಮುಖ್ಯವಾಗಿ ಕಾಣುತಿತ್ತು. ವಿವಿಧ ಬಗೆಯ ವೇಷಭೂಷಣಗಳು, ಬ್ರಿಟೀಷರ ಬಳುವಳಿಯಾದ ಬ್ಯಾಂಡುಗಳು ನಮ್ಮ ಶಾಸ್ತ್ರೀಯ ಸಂಗೀತದ ಜೊತೆಜೊತೆಗೆ ಹೆಜ್ಜೆ ಹಾಕುತ್ತಿದ್ದವು.
ಅರಮನೆಯ ವಿಧವಿಧ ಕಲಾತ್ಮಕ ಗಾಡಿಗಳು, ಮೇನೆಗಳು, ಅಂಬಾರಿಗಳು, ಮಿರಿ ಮಿರಿ ಮಿಂಚುವ ಕುದುರೆಗಳು, ಎತ್ತುಗಳು, ದಂಡು ದಂಡಾಗಿ ನಡೆಯುವ ಅರಮನೆಯ ಮುಖ್ಯಸ್ಥರು, ವಾದ್ಯಗಾರರು, ಸಂಗೀತಗಾರರು, ನೃತ್ಯದವರು, ಹೀಗೆ ಮೈಲುಗಟ್ಟಳೆ ಮೆರವಣಿಗೆ ಸಾಗುತಿತ್ತು. ಕೊನೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ರವರು ಅಂಬಾರಿಯಲ್ಲಿ ಮಗ ಶ್ರೀಕಂಠದತ್ತ ಒಡೆಯರೊಂದಿಗೆ ಕುಳಿತು ಕೈ ಸೋಲೇ ಇರದೆ ನಮಗೆಲ್ಲ ಕೈ ಮುಗಿದು ಮುಂದೆ ಸಾಗುತ್ತಿದ್ದರು. ಅವರು ಬನ್ನಿ ಮಂಟಪ ತಲುಪುವ ವೇಳೆಗೆ ಇಳಿಸಂಜೆಯಾಗಿರುತಿತ್ತು.
ಅಲ್ಲಿ ಬನ್ನಿ ಕಡಿದು ಪೂಜೆ ಮುಗಿಸಿದ ನಂತರ ಪಂಜಿನ ಕವಾಯಿತು ನಡೆಯುತಿತ್ತು. ಅದರ ಚಂದ ಕಣ್ತುಂಬಿಕೊಂಡು ಮತ್ತೆ ತಿರುಗಿ ಮೆರವಣಿಗೆ ಅರಮನೆಗೆ ಮೊದಲಿನಂತೆ ನಿಧಾನವಾಗಿ ವಾಪಾಸ್ ಸಾಗಿ ಬರುತಿತ್ತು. ಅರಮನೆಗೆ ತಲುಪುವ ವೇಳೆಗೆ ಬೆಳಗಿನ ಒಂದನೆ ಜಾವದ ಸಮಯವಾಗಿರುತಿತ್ತು.
ಆ ರಾತ್ರಿಯ ಮೆರವಣಿಗೆ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಮಹಾರಾಜರು ಅರಮನೆಯಿಂದ ಹೊರಟಾಗ ಇದ್ದಂತೆಯೇ ಬರುವಾಗಲೂ ಇರುತ್ತಿದ್ದರು. ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲದ ರಸ್ತೆಗಳಲ್ಲಿ, ಬೀದಿಯಲ್ಲಿ ಕಾದು ಕುಳಿತು, ರಸ್ತೆ ಪಕ್ಕದಲ್ಲಿ ಮೆರವಣಿಗೆ ನೋಡಲೆಂದೆ ಮಾಡಿದ ಕಲ್ಲು ಮೆಟ್ಟಿಗೆಯ ಮೇಲೆ ಕುಳಿತು, ಜನ ರಸ್ತೆ ಅಕ್ಕಪಕ್ಕದ ಮನೆಗಳ ಮೇಲೆ ನಿಂತು, ಲಾರಿಗಳ ಮೇಲೆ ಬಂದು ನಿಂತು, ಗಾಡಿಗಳ ಮೇಲೆ ನಿಂತು, ಮರಗಳ ಮೇಲೆ ಹತ್ತಿ ಕುಳಿತು ಕಣ್ತುಂಬಿಕೊಳ್ಳುತ್ತಿದ್ದರು. ಅವರನ್ನು ಸ್ಥಳೀಯರು ಆಸ್ಥೆಯಿಂದ ಉಪಚರಿಸುತ್ತಿದ್ದರು.
ರಾತ್ರಿ ನೋಡಿದ ಮೆರವಣಿಗೆಯ ಚಂದ ಇನ್ನೂ ಮನದಲ್ಲಿ ಹಾಗೇ ಉಳಿದು ಹೋಗಿದೆ. ಆ ಪಂಜುಗಳ ವಿನ್ಯಾಸದ ಚಂದ, ರಸ್ತೆಯ ಗೂಡು ದೀಪಗಳ ಸಾಲು, ಪೆಟ್ರೋಮ್ಯಾಕ್ಸ್ ದೀಪದ ನೆರಳು ಬೆಳಕಲ್ಲಿ…. ರಸ್ತೆ ದೀಪಾಲಂಕಾರಗಳಲ್ಲಿ ಮೆರವಣಿಗೆಯ ಗಾಂಭೀರ್ಯದ ನಿಧಾನ ನಡಿಗೆ, ಪ್ರಾಣಿಗಳ ಶಿಸ್ತು, ಅಂಬಾರಿಯ ಎತ್ತರ, ಚಿತ್ತಾರದಿಂದ ಅಲಂಕಾರಗೊಂಡ ಸಾಕು ಪ್ರಾಣಿಗಳ ನಡಿಗೆ ಇವತ್ತಿಗೂ ಕನಸಿನ ಚಿತ್ರಗಳಾಗಿ ಹಾಗೆ ಉಳಿದು ಹೋಗಿವೆ. ಇಂದಿನ ದಸರಾ ಅಂದಿನ ಪಳೆಯುಳಿಕೆಯಂತಿದೆ ಎಂದರು.
ಇದಕ್ಕೆ ಸಾಕ್ಷಿಯಾಗಿ ಈ ವರುಷ ಇತ್ತಲಿಂದ ಚಿತ್ತಾರದ ಬಟ್ಟೆ ಹೊದ್ದು ನಡೆವ ಗಜಗಾಂಭೀರ್ಯದ ಆನೆಗಳ ಜೊತೆಯಲ್ಲಿ ಅರ್ಜುನನ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತು ಹೋದ ಚಾಮುಂಡಿ…. ಬನ್ನಿ ಮಂಟಪದ ಬಾಗಿಲಲ್ಲಿ ಅತ್ತ ಕಡೆಯಿಂದ ಬರುವಾಗ ನಮಗೆ ಸಿಕ್ಕಳು.
ಆನೆಗಳು ಬಿಡುಬೀಸಾಗಿ ಹೊದ್ದ ರೇಷಿಮೆ ವಸ್ತ್ರಗಳನ್ನು ಕಳಚಿ ಎಸೆದು, ಬಿಡಿಸಿದ ಬಣ್ಣದ ಚಿತ್ರಗಳನ್ನು ದಸರಾ ಸಾಕ್ಷಿಯಾಗಿ ತಮ್ಮ ಒರಟು ಮೈ ಮೇಲೆ ಉಳಿಸಿಕೊಂಡು ಮೋಟು ಬಾಲ ಅಲ್ಲಾಡಿಸಿ ತೋರಿಸುತ್ತ ನಡೆದಿದ್ದವು. ತಕ್ಷಣ ಒಂದು ಸಾಮಾನು ಹೊರುವ ಟ್ರಕ್ ಮೇಲೆ ಕಳಸವೇನೋ ಕಣ್ಣಿಗೆ ಕಂಡಂತಾಯಿತು. ತಿರುಗಿ ನೋಡಿದರೆ ಅಷ್ಟೆತ್ತರದ ಅಂಬಾರಿ ಕುಬ್ಜವಾಗಿ ಮದುವೆ ಮನೆಗಳಲ್ಲಿಡುವ ಸಾಧಾರಣ ಮಂಟಪದಂತೆ ತೋರಿತು.
ಮನೆ ಖಾಲಿ ಮಾಡುವಾಗ ಹೋಗುವ ಮನೆಯ ಸಾಮಾನಿನಂತೆ ಅದು ಅಲ್ಲಿ ಕುಳಿತಿತ್ತು. ಆನೆಯ ವಾಲಾಟಕ್ಕೆ ತೂಗುವ ಆ ಹೂವಿನ ಕುಚ್ಚುಗಳು, ಚಿನ್ನದ ಕುಚ್ಚುಗಳು ಕಂಡಂತಾಗಲಿಲ್ಲ. ಒಂದು ವಸ್ತುವಿನ ಬೆಲೆ ಅದು ಯಾವ ಸ್ಥಾನದಲ್ಲಿ ಕುಳಿತಿರುತ್ತದೆ ಎಂಬುದರ ಮೇಲಿದೆಯೇ? ಯಾಕೋ? ಏನೋ? ಪ್ರಜಾಪ್ರಭುತ್ವದ ಸಮಕ್ಕೆ ಬಂದು ಕೂತ ಚಿನ್ನದ ಅಂಬಾರಿ ಅರಮನೆಯ ಪಳೆಯುಳಿಕೆಯಂತೆಯೇ ಕಂಡಿತು.
“ಕಳ್ಳೆ ತಿಂದು ಕೈ ತೊಳೆದ ಹಾಗೆ” ಅನ್ನುವ ಗಾದೆಯೊಂದು ನೆನಪಾಯಿತು. ಅದನ್ನು ಅರಮನೆಗೆ ತಲುಪಿಸಲು ಅದರ ಹಿಂದೆ ಬೆಳಿಗ್ಗಿಂದ ದಣಿದಿದ್ದ ಅಧಿಕಾರಿಗಳು ಜನಜಂಗುಳಿಯ ಟ್ರಾಫಿಕ್ಕಿನಲ್ಲಿ ವಾಹನಗಳೊಂದಿಗೆ ಹೊರಟಿದ್ದರು. ಹಿಂದೆ ಬಿಡದೆ ಹಾರ್ನ್ ಮಾಡುತ್ತಲೇ ಇದ್ದ ಎಸ್ಕಾರ್ಟಿನ ಗಾಡಿಗೆ ನಾವೂ ದಾರಿ ಮಾಡಿಕೊಟ್ಟೆವು.
ಜಾತ್ರೆಗಳನ್ನು ಅದರ ತೇರನ್ನು ಎಳೆಯಲು ಇಂದೂ ಜನರೇ ಬೇಕಲ್ಲವೇ? ಅಂದುಕೊಂಡೆ. ತಕ್ಷಣ ಮನದಲ್ಲಿ ಮೈಸೂರು ಪಕ್ಕದಲ್ಲೇ ಇರುವ ಊರಿನಲ್ಲಿರುವ ನನ್ನ ಮಾವ ಭಾವುಕರಾಗಿ ಎಂದೋ ಒಂದು ದಿನ ನನ್ನೊಂದಿಗೆ ಹಂಚಿಕೊಂಡ ಅವರ ಒಂದು ನೆನಪು ಇಂದು ನನ್ನ ನೆನಪಿಗೆ ಬಂತು. ಅದು ಹೀಗಿದೆ.
“ಮೊನ್ನೆ ಮೊನ್ನೆ ವರ್ಷದಲ್ಲಿ ಕಣವ್ವ …. ಒಂದ್ಸಲ ಯುವರಾಜರು ಅದೇ ಮೈಸೂರು ಮಹಾರಾಜರು ನಮ್ಮೂರಿಗೆ ಬಂದೇ ಬಿಟ್ಟಿದ್ರು. ಜನರಿಗೆ ವೋಟು ಹಾಕಿ ಅಂತ ಕೇಳಕ್ಕೆ. ಪಾಪಾ ಎಲೆಕ್ಷನ್ಗೆ ನಿಂತು ಬಿಟ್ಟಿದ್ರಲ್ಲ. ಇನ್ನೇನು ಮಾಡಾರು? ನಮ್ಮೂರಿನ ಸ್ಕೂಲು ಮನೇಲಿ ಬಂದು ಕೂತಿದ್ರು.” ಹೇಳ್ತಾ ದುಖಃ ಒತ್ತರಿಸಿ ಬಿಕ್ಕಿ ಕಣ್ಣೀರು ಒರೆಸಿಕೊಂಡಿದ್ದರು.
ಹಾಗೆ ನಮ್ಮೂರಿಗೆ ಅಂದರೆ ನನ್ನ ಗಂಡನ ಊರಾದ ನಗುವನಹಳ್ಳಿಗೆ ಭೇಟಿಯಿತ್ತವರು ಶ್ರೀಕಂಠದತ್ತ ಒಡೆಯರಾಗಿದ್ದರು. ಇಂದಿನ ಮೈಸೂರಿನಲ್ಲಿ ಸ್ಕೂಟರ್ ನಲ್ಲಿ ಓಡಾಡುತ್ತಿದ್ದ ನಮ್ಮ ಮಾವ ಮಾನಸಿಕವಾಗಿ ರಾಜ ಗದ್ದುಗೆಯ ಅಂದಿನ ಭಕ್ತಿಯನ್ನು ಉಳಿಸಿಕೊಂಡವರೇ ಆಗಿದ್ದರು.
ಅರಸೊತ್ತಿಗೆಯ ಮೇಲಿನ ಭಕ್ತಿಯೆಂಬುದು ಅಂದು ದೈವ ಭಕ್ತಿಯಂತೆ ಜನ ಮಾನಸದಲ್ಲಿ ಅಚ್ಚೊತ್ತಿತ್ತು.
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ ‘ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.